ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, January 29, 2006

ವಸುಧೇಂದ್ರ ಮತ್ತು ಛಂದ ಪ್ರಕಾಶನ



ಲೇಖನದ ತಲೆ ಬರಹವೇ ಈ ಬಾರಿಯ ಬ್ಲಾಗ್-ಬರಹದ ವಸ್ತುವನ್ನು ಬಿಟ್ಟುಕೊಡುತ್ತಿದೆ.

ಎರಡು ದಿನಗಳ ಹಿಂದೆಯೇ ವಸುಧೇಂದ್ರರಿಂದ ಒಂದು ಆಮಂತ್ರಣ ಪತ್ರ ಬಂದಿತ್ತು, ತಮ್ಮ 'ಛಂದ' ಪ್ರಕಾಶನದಿಂದ ಈ ವರ್ಷದ ಪುಸ್ತಕ ಸ್ವಾಗತ ಕಾರ್ಯಕ್ರಮಕ್ಕೆ ಒಂದು ಆಮಂತ್ರಣ ಪತ್ರ. ಇದೇನು ನಾನು ಇಷ್ಟೊಂದು ಫೇಮಸ್ಸೇ?
ವಸುಧೇಂದ್ರರ ಪರಿಚಯವೇ ನನಗಿಲ್ಲವಲ್ಲ? ನಾನು ಸಾಹಿತ್ಯಾಸಕ್ತ ಎನ್ನುವುದು ಪ್ರಪಂಚಕ್ಕೇ ತಿಳಿದುಹೋಗಿದೆಯೇ ಎಂದು ಬೀಗುತ್ತಿದ್ದ ನನ್ನ ಬಲೂನನ್ನು ಠುಸ್ಸೆನ್ನಿಸಿದವರು ಸುದರ್ಶನ್. ಒಬ್ಬ ಪ್ರಕಾಶಕರ ಹತ್ತಿರ ಒಮ್ಮೆ ಸಾಹಿತ್ಯಾಸಕ್ತ ಎಂದು ಗುರುತಿಸಿಕೊಂಡರೆ ಮಿಕ್ಕವರಿಗೆ ಅದು ಗೊತ್ತಾಗಿಯೇ ಆಗುತ್ತೆ ಎಂದು ತಿಳಿದು ಬಲೂನು ಠುಸ್ಸಾದರೂ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಅನ್ನಿಸಿತು. ಬಿಡುಗಡೆ ಸಮಾರಂಭಕ್ಕೆ ಹೋಗುವುದಂತೂ
ನಿಸ್ಸಂಶಯವಾಗಿತ್ತು.

ಕಾರ್ಯಕ್ರಮಕ್ಕೆ ಹೋದವನಿಗೆ ಅದೇ ಪರಿಚಯದ (ಅಂದರೆ ವೈಯಕ್ತಿಕ ಪರಿಚಯವಲ್ಲ ಸಾಂಸ್ಕೃತಿಕ ಪರಿಚಯ) ಮುಖಗಳೇ ಕಾಣಿಸಿದುದರಲ್ಲಿ ಹೆಚ್ಚೇನೂ ವಿಶೇಷವಿಲ್ಲ. ಜಯಂತ್, ವಿವೇಕ್, ಉಮಾ ರಾವ್, ಎಸ್. ದಿವಾಕರ್, ಜಿ.ಎಸ್. ಭಾಸ್ಕರ್ ಮುಂತಾದವರೆಲ್ಲಾ ಇದ್ದರು. ಕಾರ್ಯಕ್ರಮದ ನಿರೂಪಣೆ ಕಳೆದ ಬಾರಿ ಛಂದ ಪ್ರಕಾಶನದಿಂದ ಪುಸ್ತಕ ಬಿಡುಗಡೆಯ ಭಾಗ್ಯ ಪಡೆದುಕೊಂಡಿದ್ದ ಸುಮಂಗಲಾರವರಿಂದ. ಜಯಂತ್, ವಿವೇಕ್, ಸುಮಂಗಲಾ ಮುಂತಾದವರ ಮುಖದಲ್ಲಿನ ಕಾಳಜಿ ನೋಡಿದರೆ ಇದು ತಮ್ಮದೇ ಕಾರ್ಯಕ್ರಮವೇನೋ ಎನ್ನುವಂತಿತ್ತು. ಒಟ್ಟು ಸಾಮಾನ್ಯವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್
ಆಫ಼್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯುವ ಯಾವುದೇ ಕನ್ನಡ ಕಾರ್ಯಕ್ರಮದ ಸ್ನೇಹದ ವಾತಾವರಣ, ತಿಂಡಿ, ಕಾಫ಼ಿ ಇತ್ಯಾದಿಗಳೆಲ್ಲಾ ಇದ್ದವು. ಪರಿಚಯದವರನ್ನು ಮಾತನಾಡಿಸಿ ಒಂದು ಮೂಲೆಯಲ್ಲಿ ನಿಂತಿದ್ದವನನ್ನು
ನೋಡಿ ವಸುಧೇಂದ್ರ ಹತ್ತಿರ ಬಂದು 'ತಿಂಡಿ, ಕಾಫ಼ಿ ಆಯಿತೇ' ಎಂದು ಉಪಚರಿಸಿ 'ತಮ್ಮ ಪರಿಚಯವಾಗಲಿಲ್ಲ' ಎಂದರು. ನಾನು ಪರಿಚಯ ಮಾಡಿಕೊಂಡು, ನಮ್ಮಿಬ್ಬರಿಗೆ ಕೊಂಡಿಯಾಗಲು ಸಾಧ್ಯವಾಗಬಹುದಾದ ಒಂದು ಸಣ್ಣ ಎಳೆಯನ್ನು
ಅವರಿಗೆ ಜ್ಞಾಪಿಸಿದಾಗ 'ಓಹೋ, ಗೊತ್ತಾಯಿತು. ನೀವು ಬಂದಿದ್ದು ಸಂತೋಷ' ಎಂದು ಸ್ನೇಹದಿಂದ ನುಡಿದು ಮತ್ತಿತರನ್ನು ಉಪಚರಿಸಲು ತೆರಳಿದರು. ಮನಸ್ಸಿನಲ್ಲುಳಿದದ್ದು ಅವರ ನಗು ಮುಖ, ಸರಳತನ, ಸಜ್ಜನಿಕೆ, ಸ್ನೇಹ. ನಿಜಕ್ಕೂ ಅವರು ನನ್ನನ್ನು ಉಪಚರಿಸಬೇಕಾದ ಅಗತ್ಯವೇ ಇರಲಿಲ್ಲ.

ಇಂದು ಬಿಡುಗಡೆಯಾಗಿದ್ದು ಅಲಕಾ ತೀರ್ಥಹಳ್ಳಿಯವರ ಕಥಾಸಂಕಲನ 'ಈ ಕತೆಗಳ ಸಹವಾಸವೇ ಸಾಕು'. ಇವರು ಗಂಡಸರು ಎಂದು ಗೊತ್ತಾಗಿ ಚಕಿತರಾದವರಲ್ಲಿ ನಾನೂ ಒಬ್ಬ. ಆದರೆ ಅದೆಲ್ಲಾ ಇಲ್ಲಿ ಸದ್ಯಕ್ಕೆ ಅನವಶ್ಯ. ಇವರು ಇಂಗ್ಲೀಷ್ ಎಂ.ಎ. ಮತ್ತು ಉಪನ್ಯಾಸಕರು, ಮಧ್ಯವಯಸ್ಸನ್ನು ದಾಟಿದವರಂತಿದ್ದರೂ ಇದು ಇವರ ಮೊದಲನೇ ಕಥಾಸಂಕಲನ, 'ಛಂದ' ಪ್ರಕಾಶನ ಆಹ್ವಾನಿಸಿದ್ದ ಯಾವುದೇ ಲೇಖಕರ ಮೊದಲನೇ ಕಥಾಸಂಕಲನ ಸ್ಪರ್ಧೆಯಲ್ಲಿ ಇವರ ಸಂಕಲನ
ಆಯ್ಕೆಗೊಂಡು ಪ್ರಕಾಶನದ ಸ್ವಾಗತ ಅನುಭವಿಸುತ್ತಿದೆ ಎನ್ನುವುದಷ್ಟೇ ಇಲ್ಲಿ ಮುಖ್ಯ. ಎಂ.ಆರ್.ದತ್ತಾತ್ರಿಯವರ
'ಪೂರ್ವ ಪಶ್ಚಿಮ' ಮತ್ತು ದಟ್ಸ್ಕನ್ನಡ.ಕಾಮ್ ಮತ್ತು ಹಾಯ್ ಬೆಂಗಳೂರುಗಳಲ್ಲಿ ಬರುತ್ತಿದ್ದ 'ಜಾನಕಿ ಕಾಲಂ' ಅಂಕಣ ಬರಹಗಳು ಕೂಡಾ ಇವುಗಳ ಜೊತೆ ಬಿಡುಗಡೆಯಾದವು. ಈ ಪುಸ್ತಕಗಳ ಕುರಿತು ಸೊಂಡೂರಿನಿಂದ ಬಂದಿದ್ದ ಕವಿ, ವಿಮರ್ಶಕ ವಿಕ್ರಮ ವಿಸಾಜಿ, ಕಥೆಗಾರ ಅಶೋಕ್ ಹೆಗಡೆ ಮತ್ತು ವಿಮರ್ಶಕ ಡಾ|| ಜಿ.ಬಿ.ಹರೀಶ್ ಮಾತನಾಡಿ ತಮ್ಮ ಅನಿಸಿಕೆಗಳಿಂದ ಪುಸ್ತಕಕ್ಕೆ ಕೆಲವು ಬಗೆಯ ಪ್ರವೇಶಗಳನ್ನು ಕಲ್ಪಿಸಿದರು. ಜಯಂತ್ ಕೂಡಾ ಕಡೆಗೆ ಮಾತನಾಡಿದರು. ಕಡೆಗೆ ವಸುಧೇಂದ್ರ ಮಾತನಾಡಿ ಬರಹ, ಪ್ರಕಾಶನ, ಸ್ಪರ್ಧೆ, ಸಾಹಿತ್ಯಾಸಕ್ತರ ಒಡನಾಟ ಮುಂತಾದುವುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಪ್ರಕಾಶನದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿದರು. ಇಡೀ ಕಾರ್ಯಕ್ರಮದಲ್ಲಿ ವಸುಧೇಂದ್ರ ಅಷ್ಟೊಂದೇನೂ ಆವರಿಸಿಕೊಂಡಂತೆ ಕಾಣಲಿಲ್ಲ. ಸದ್ದಿಲ್ಲದೇ ತಮ್ಮ ಕೆಲಸ
ಮಾಡುತ್ತಿದ್ದರು. ಚೊಕ್ಕವಾಗಿ ಕಾರ್ಯಕ್ರಮ ಮುಗಿಯಿತು, ಪುಸ್ತಕಗಳನ್ನೆಲ್ಲಾ ತೆಗೆದುಕೊಂಡು ಬೀಳ್ಕೊಟ್ಟೆವು.

ಈ ನನ್ನ ಲೇಖನದ ಉದ್ದೇಶ ಕಾರ್ಯಕ್ರಮದ ವರದಿಯಂತೂ ಖಂಡಿತಾ ಅಲ್ಲ. ಒಂದು ಪುಸ್ತಕ ಬಿಡುಗಡೆಯ ಸಮಾರಂಭವನ್ನು ವರದಿ ಮಾಡುವುದು, ಅದರಲ್ಲಿನ ಸ್ವಾರಸ್ಯದ ಅಂಶಗಳನ್ನು ಹೆಕ್ಕುವುದು ಸ್ವಲ್ಪ ಕಷ್ಟದ ವಿಷಯವೇ.
ಈಗಾಗಲೇ ನಾನು ವಿವೇಕ್ ತಂಡದ ದೇಶಕಾಲ ಮತ್ತು ಜಯಂತರ ತೂಫ಼ಾನ್ ಮೈಲ್ ಪುಸ್ತಕಗಳ ಬಿಡುಗಡೆಯ ಕುರಿತು ಬರೆದಿರುವೆನಾದ್ದರಿಂದ ಮತ್ತೆ ಅದೇ ತೆರನಾದುದದನ್ನು ಬರೆಯಲು ಮನಸ್ಸೂ ಇಲ್ಲ. ಆದರೆ, ಈ ಸದ್ಯಕ್ಕೆ ನನ್ನ
ಮನಸ್ಸನ್ನಾವರಿಸಿರುವುದು ಒಂದು ಒಳ್ಳೆಯ ಸಾಂಸ್ಕೃತಿಕ ಮನಸ್ಸು ಮತ್ತು ಅಂತಹ ಮನಸ್ಸಿನ ಕ್ರಿಯಾಶೀಲ ಅಭಿವ್ಯಕ್ತಿ.

ಈ ಮೊದಲೇ ಹೇಳಿದ ಹಾಗೆ ವಸುಧೇಂದ್ರ ನನಗೆ ಪರಿಚಯವೇ ಇಲ್ಲ. ಅವರ ಬಗ್ಗೆ ನನಗೆ ಗೊತ್ತಿರುವುದು ಕೇವಲ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ. ನಮ್ಮಂತೆ ಅವರು ಕೂಡಾ ಒಬ್ಬ ಸ್ನಾತಕೋತ್ತರ ಎಂಜಿನಿಯರ್, ಒಂದು ಸಾಫ಼್ಟ್ವೇರ್ ಕಂಪನಿಯಲ್ಲಿ ಪ್ರೋಜೆಕ್ಟ್ ಮ್ಯಾನೇಜರ್. (ಐ.ಐ.ಎಸ್.ಸಿ-ಯ ಹಿನ್ನೆಲೆಯಿದೆ ಎಂದಕೂಡಲೇ ಅದೇನೋ ಒಂದು ಬಗೆಯ ಮೆಚ್ಚುಗೆ. ಇದೆಲ್ಲಾ ಅಪಾಯಕಾರಿಯಾದರೂ ಮನಸ್ಸಿನಲ್ಲಿರುವ ದೋಷಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡುಬಿಟ್ಟರೆ ಅವುಗಳನ್ನು ಮೀರುವ ಉಪಾಯಗಳನ್ನು ಹುಡುಕಲು ಹೆಚ್ಚು ಸಹಾಯವಾಗುತ್ತದೆ ಎಂದು ನಂಬಿರುವವನು
ನಾನು.)

ಈ ಹಿನ್ನೆಲೆಯಿರುವವರು ಸಾಹಿತ್ಯಾಸಕ್ತರಾಗಿರುವುದನ್ನು ನಾವು ಸ್ವಲ್ಪವಾದರೂ ಕಂಡಿದ್ದೇವೆ. ಅವರಲ್ಲಿ ಅತ್ಯಲ್ಪ ಸಂಖ್ಯೆಯ ಸಾಹಿತಿಗಳನ್ನೂ ನೋಡಿದ್ದೇವೆ. ಆದರೆ, ಅವರಲ್ಲಿ ಯಾರಾದರೂ ಪ್ರಕಾಶನಕ್ಕೆ ಕೈಯಿಟ್ಟವರನ್ನು ನೋಡಿಲ್ಲ. ವಸುಧೇಂದ್ರ ಇಂತಹ ವಿರಳರಲ್ಲಿ ವಿರಳರಾಗಿದ್ದಾರೆ. ನನ್ನ ಕುತೂಹಲ, ಮೆಚ್ಚುಗೆ, ಕೃತಜ್ಞತೆ, ಈರ್ಷ್ಯೆ ಇತ್ಯಾದಿಗಳೆಲ್ಲಾ ಈ ಕಾರಣದಿಂದ. ಯಾವ ಪ್ರೇರಣೆಯಿಂದ ವಸುಧೇಂದ್ರ ಹೀಗೆ ಕ್ರಿಯಾಶೀಲರಾದರು ಎನ್ನುವುದನ್ನು ಅವರನ್ನೇ ಕೇಳಿ ತಿಳಿದುಕೊಳ್ಳುವುದು ಹೆಚ್ಚು ಸರಿ ಮತ್ತು ಸುಲಭವಾದುದು. ಆದರೆ, ಅವುಗಳ ಕುರಿತ ಚಿಂತನೆಯ ನೆಪದಲ್ಲೇ ನನ್ನ ಲಹರಿಯನ್ನು ಒಂದಿಷ್ಟು ಬರೆದುಕೊಳ್ಳುವುದು ಇಲ್ಲಿನ ನನ್ನ ಸ್ವಾರ್ಥ.

ಈ ಸದ್ಯಕ್ಕೆ ನೋಡಿ. ನಮ್ಮಲ್ಲಿ ಸಾಂಸ್ಕೃತಿಕವಾಗಿ ಮಹತ್ವಪೂರ್ಣ ಎಂದು ನನಗೆನ್ನಿಸುವುದು ಜಯಂತ ಕಾಯ್ಕಿಣಿ. ತಮ್ಮ ಸಾಹಿತ್ಯಕ ಸೃಜನಶೀಲತೆಯಲ್ಲದೆ ತಮ್ಮ ವ್ಯಕ್ತಿತ್ವ ವಿಶೇಷದಿಂದ ಸಾಂಸ್ಕೃತಿಕ ಪರಿಸರದ ವಿಭಿನ್ನ, ವೈವಿಧ್ಯಗಳನ್ನು ಒಳಗೊಂಡವರಂತೆ ನನಗೆ ತೋರುತ್ತಿದ್ದಾರೆ. ಆ ತಲೆಮಾರಿನಲ್ಲಿ ಅವರಷ್ಟು - ಬೇರೆ ಸಾಹಿತಿಗಳ ಜೊತೆಗಿನ ಒಡನಾಟ, ಅವುಗಳ ಸಾಂಸ್ಕೃತಿಕ ಸಾರವನ್ನು ಸಾಮಾಜಿಕರಿಗೆ ಒದಗಿಸುವುದರಲ್ಲಿ ಆಸಕ್ತಿ, ಅದಕ್ಕೆ ಅತ್ಯಗತ್ಯವಾದ ಚಿಂತನಶೀಲತೆ, ಸೃಜನಶೀಲತೆ ಮತ್ತು ಅದಕ್ಕೆ ತಕ್ಕುದಾದ ಸ್ನೇಹಪೂರಿತ ವ್ಯಕ್ತಿತ್ವ - ಮಿಕ್ಕವರಿಗಿಲ್ಲ ಎಂದುಕೊಳ್ಳುತ್ತೇನೆ. ಕೇವಲ ಸಾಹಿತ್ಯದ ಸಾಂಸ್ಕೃತಿಕ ವಾತಾವರಣದ ಪರೋಕ್ಷ್ಯ ಪರಿಚಯ ಮತ್ತು ಮಾಧ್ಯಮಗಳಿಂದ ಸಂಗ್ರಹವಾಗಿರುವ ಮಾಹಿತಿಗಳಿಂದ ಇಂತಹ ದೊಡ್ಡ ನಿಲುವು ತೆಗೆದುಕೊಳ್ಳುವುದು ಸ್ವಲ್ಪ ಪ್ರಮಾದವೇ. ಆದರೂ ಧೈರ್ಯ ಮಾಡಿದ್ದೇನೆ. ಕನಿಷ್ಠ ನನಗೆ ಕಾಣುವಂತೆ ಆ ಒಂದು ತಲೆಮಾರಿನಲ್ಲಿ ಈ ವಿಷಯದಲ್ಲಿ ಜಯಂತ್ ಪ್ರಮುಖರು. ಇವರಲ್ಲದೇ ಬೇರೆಯವರಿಂದ 'ಕುವೆಂಪು, ಕಾರಂತ್, ಬೇಂದ್ರೆ' ಕುರಿತ ಟೀವಿ ಕಾರ್ಯಕ್ರಮಗಳನ್ನು ನನಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಇದೆಲ್ಲಕ್ಕಿಂತಾ ಮುಖ್ಯವಾಗಿ ಅವರೊಬ್ಬ ಅದ್ಭುತ ಕಥೆಗಾರರು ಎನ್ನುವುದನ್ನು ಮರೆಯದೇ ಇದನ್ನು ಹೇಳುತ್ತಿದ್ದೇನೆ. ಅವರ ಹಿಂದೆ ಕೆ.ವಿ.ಸುಬ್ಬಣ್ಣನವರಿದ್ದರು, ಅದಕ್ಕೂ ಹಿಂದೆ ಮಾಸ್ತಿಯವರಿದ್ದರು (ಬದುಕಿದ್ದಿದ್ದರೆ ಸಿನೆಮಾ ರಂಗದಲ್ಲಿ ಶಂಕರ್ ನಾಗ್ ಇಂತಹದ್ದನ್ನು ಸಾಧಿಸುತ್ತಿದ್ದರೇನೋ,
ನೆನೆಸಿದರೆ ದುಃಖವಾಗುತ್ತದೆ). ತಮ್ಮ ಸಾಹಿತ್ಯಕ ಕೆಲಸವಲ್ಲದೇ, ಅದಕ್ಕೆ ಪೂರಕವಾದ ಕ್ರಿಯಾಶೀಲ ಕೆಲಸಗಳಿಂದ ಒಟ್ಟು ನಾಡಿನ ಸಾಂಸ್ಕೃತಿಕ ಪರಿಸರ ಜೀವಂತವಾಗಿರುವಲ್ಲಿ ಇವರ ಪಾತ್ರ ಅಪಾರ. ಜಯಂತರಂತೂ ನನ್ನ ತಲೆಮಾರಿನವರಿಗೆ
ತೀರ ಅಗತ್ಯವಾಗಿಬಿಟ್ಟಿದ್ದಾರೆ, ಬರುವ ದಿನಗಳಲ್ಲಿ ಅವರಿಂದ ಕನ್ನಡ ಸಂಸ್ಕೃತಿ ಬಹಳಷ್ಟನ್ನು ನಿರೀಕ್ಷಿಸುತ್ತದೆ.

ಈ ಮೇಲಿನ ಪೀಠಿಕೆಗೆ ಕಾರಣ ನಾನು ವಸುಧೇಂದ್ರರನ್ನು ಈ ಪರಂಪರೆಯಲ್ಲಿ ನೋಡಲು ಯತ್ನಿಸುತ್ತಿರುವುದು.
ಸಾಹಿತ್ಯಕವಾಗಿ ಅವರ ಸಂವೇದನೆಗಳ ಬಗ್ಗೆ ನಾನಿಲ್ಲಿ ಬರೆಯಲು ಹೋಗುವುದಿಲ್ಲ. ಅದೇ ಪರಂಪರೆಯಲ್ಲಿ ಇರಬಹುದು (ಯಾರು ತಾನೇ ಮಾಸ್ತಿ, ಜಯಂತರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ), ಅಥವಾ ಮತ್ತೇನೋ ಆಗಿರಬಹುದು.
ಆದರೆ ಒಂದು ಒಳ್ಳೆಯ ಸಾಂಸ್ಕೃತಿಕ ಮನಸ್ಸಾಗಿ ವಸುಧೇಂದ್ರ ಅದೇ ಪರಂಪರೆಯಲ್ಲಿದ್ದಾರೆಯೇ ಎನ್ನುವುದು ಈ ಸದ್ಯದ ನನ್ನ ಆಲೋಚನೆ. ಅಥವಾ ಹಾಗಿರುವುದು ನನಗೆ ಬೇಕಾಗಿದೆ. ಹೀಗಲ್ಲದೇ, ನಲವತ್ತಕ್ಕಿಂತಾ ಕಡಿಮೆಯ ವಯಸ್ಸಿನ ವಸುಧೇಂದ್ರ, ಯಾವುದಕ್ಕೂ ಸಮಯ ಮಾಡಿಕೊಳ್ಳುವುದು ಕಷ್ಟವಾಗಿರುವ ವೃತ್ತಿಯಲ್ಲಿದ್ದುಕೊಂಡು ಇಂತಹ ಮಹತ್ವಪೂರ್ಣ ಸಾಹಸಕ್ಕೆ ಕೈಹಾಕುವುದು ಸಾಧ್ಯವಿಲ್ಲ. ಸ್ವತಃ ತಾವೇ ಬರಹಗಾರರಾಗಿದ್ದುಕೊಂಡು, ಮಿಕ್ಕವರಿಗೆ ಈ ಮಟ್ಟದ ಪ್ರೋತ್ಸಾಹ ನೀಡುವುದು, ಅದನ್ನು ಕ್ರಿಯಾರೂಪಕ್ಕಿಳಿಸುವುದು, ಅದನ್ನು ಒಂದು ಗುಣಮಟ್ಟದ ಅಳತೆಗೋಳನ್ನಿಟ್ಟು ನಿಭಾಯಿಸುವುದು, ಸಹೃದಯರನ್ನು ಒಟ್ಟುಗೂಡಿಸುವುದು, ಅವರ ಒಡನಾಟದಲ್ಲಿ ಹರ್ಷಿಸುವುದು, ಈ ವಯಸ್ಸಿಗೆ ಮೇಲೆ ಹೆಸರಿಸಿದ ವ್ಯಕ್ತಿಗಳ ಪರಿಚಯ ಪಡೆದುಕೊಳ್ಳುವುದು, ಮೇಲ್ಮುಖ-ಕೆಳಮುಖ ಸಂವಹನಕ್ಕೆ ತೊಡಗಿರುವುದು - ಇವೆಲ್ಲಾ ಅಂತಹ ಒಂದು ಸರಿಯಾದ ದಿಕ್ಕಿನಲ್ಲಿ ಬೆಳೆಯುತ್ತಿರುವ ಮನಸ್ಸು ಇದು ಎಂದು ಹೇಳುವುದಕ್ಕೆ ಸಕಾರಣವಾಗಿದೆ ಎಂದು ನನಗನ್ನಿಸುತ್ತಿದೆ.

ಈ ನಮ್ಮ ಕಾಲ ನೋಡಿ. ನನ್ನ ಪರಿಸರದಲ್ಲಂತೂ ನನ್ನ ಸಮಾನ ವಯಸ್ಕರಲ್ಲಿ ಕನ್ನಡ ಮತ್ತು ಸಾಹಿತ್ಯದ ಕುರಿತ ಆಸಕ್ತರನ್ನು ಪ್ರಪಂಚದ ಅತಿದೊಡ್ಡ ದುರ್ಬೀನು ತೆಗೆದು ಹುಡುಕಬೇಕು. ಬೆಂಗಳೂರಿನಲ್ಲಿ ಆ ಬಗೆಯ ಆಸಕ್ತರಾಗಿ ನನಗೆ ಪರಿಚಯವಾದವರಲ್ಲಿ ಶೇಕಡ ೯೫ ತಮ್ಮ ಮೊದಲ ೧೭-೧೮ ವರ್ಷಗಳನ್ನು ಬೆಂಗಳೂರಿನಿಂದ ಹೊರಗೆ ಕಳೆದವರೇ. ವಸುಧೇಂದ್ರ ಕೂಡಾ ಹಾಗೇ ಕಾಣುತ್ತಾರೆ. ಅಂಥವರಲ್ಲೂ ಈ ಸಂಖ್ಯೆ ಕಡಿಮೆಯಿದೆ ಅನ್ನಿಸುತ್ತದೆ. ಬೆಂಗಳೂರಿನಲ್ಲೇ
ಹುಟ್ಟಿಬೆಳೆದ ನಾನು ಈ ವಿಷಯದಲ್ಲಿ ಅನುಭವಿಸಿದ ಒಂಟಿತನ ಅಪಾರ. ಆದ್ದರಿಂದ, ಈ ಬಗೆಯ ಮನಸ್ಸುಗಳನ್ನು
ನೋಡಿದಾಗಲೆಲ್ಲಾ ನನಗೆ ತುಂಬ ಮೆಚ್ಚುಗೆಯಾಗುತ್ತದೆ. ಹಾಗೆಯೇ, ಕನ್ನಡ ಮನಸ್ಸುಗಳಿಗೆ ಕ್ರಿಯಾಶೀಲರಾಗಿ
ಬದುಕುವುದು ಅಷ್ಟೇನೂ ಸುಲಭವಾಗಿಲ್ಲದ ಈ ಕಾಲದಲ್ಲಿ ವಸುಧೇಂದ್ರ ತಮ್ಮ ಕ್ರಿಯಾಶೀಲ ಕ್ಷೇತ್ರಗಳನ್ನು ಗುರುತಿಸಿಕೊಂಡು, ಅದಕ್ಕೆ ಬೇಕಾದ ವಾತಾವರಣ ಕಲ್ಪಿಸಿಕೊಂಡು, ಅಂತಹ ಬೇರುಗಳಿಗೆ ನೀರೆರೆಯುತ್ತಾ, ತನ್ಮಯರಾಗಿದ್ದಾರೇನೋ ಎಂದೆಲ್ಲಾ ನನಗನ್ನಿಸುತ್ತಿರುವುದರಿಂಡ - ಒಂದೆಡೆ ಇಂತಹವರಿರುವುದು ಸಮಾಧಾನ, ಇನ್ನೊಂದು ನಮಗಿಂತಹದು ಇನ್ನೂ ಶಕ್ಯವಾಗಿಲ್ಲವಲ್ಲಾ ಎನ್ನುವ ಕೊರಗು, ಈರ್ಷ್ಯೆ ಒಟ್ಟೊಟ್ಟಿಗೆ ಆಗುತ್ತಿದೆ.

ಇದೆಲ್ಲಾ ಅತಿಶಯೋಕ್ತಿಯಿರಬಹುದು. ಆದರೆ, ನಮ್ಮ ಕಾಲದ ಅತ್ಯುತ್ಸಾಹೀ ತರುಣರಲ್ಲಿ ವಸುಧೇಂದ್ರ ನಿಸ್ಸಂಶಯವಾಗಿ ಅಗ್ರಗಣ್ಯರು. ಪುಸ್ತಕ ಬಿಡುಗಡೆ, ಅತ್ಯುತ್ತಮ ಸಿನೆಮಾ, ವಿಚಾರ ಗೋಷ್ಠಿ, ಸಂವಾದ - ಇಂತಹ ಕಡೆಗಳಲ್ಲೆಲ್ಲಾ ನಾನು ವಸುಧೇಂದ್ರರನ್ನು ನೋಡುತ್ತಲೇ ಇದ್ದೇನೆ. ಈ ಪ್ರಪಂಚದಿಂದಲೂ ಹೊರಗಿರುವ ಸಾಂಸ್ಕೃತಿಕ ಪ್ರಪಂಚವಿದೆ ಮತ್ತು ಅದರ ಒಡನಾಟ ಇಲ್ಲದೇ ಹೋಗಿರುವುದರಿಂದ ನಷ್ಟವಾಗಿರುವುದು ನಮಗೇ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ, ಆ ಪ್ರಪಂಚಕ್ಕೂ ಕಾಲಿಡಬಲ್ಲವರೆಂದರೆ ಪ್ರಾಯಶಃ ವಸುಧೇಂದ್ರ.

ಅವರಿಗೆ ಶುಭವಾಗಲಿ ಮತ್ತು ಈ ನಿಟ್ಟಿನಲ್ಲಿ ಅವರು ಬೆಳೆದು ನಮ್ಮಂತಹವರನ್ನೂ ಬೆಳೆಸಲಿ ಎಂದು ಆಶಿಸುವುದಕ್ಕೆ ಅವಕಾಶವಿದೆ.

Friday, January 20, 2006

ಇವತ್ತಿನ ಕನ್ನಡ ನಾಟಕ - ಒಂದು ಪುಟ್ಟ ಟಿಪ್ಪಣಿ



ಈ ಲೇಖನದ ಉದ್ದೇಶ ನಾಟಕ ವಿಮರ್ಶೆಯಲ್ಲ ಎನ್ನುವುದನ್ನು ನಮ್ರತೆಯಿಂದ ಹೇಳುತ್ತಾ ಶುರು ಮಾಡಬಯಸುತ್ತೇನೆ. ನನ್ನ ಓದು, ಅನುಭವ, ಯೋಗ್ಯತೆ ಮೀರಿ ಮಾತುಗಳಿರಬಹುದುಎನ್ನುವ ಭಯವಿದ್ದರೂ, ತೀವ್ರವಾಗಿ ಅನ್ನಿಸುತ್ತಿರುವುದರಿಂದ ಹೇಳದೇ ಇರಲಾರೆ.

ಇತ್ತೀಚೆಗೆ ನೋಡಿದ ಒಂದು ಕನ್ನಡ ರಂಗ್ರಪಸ್ತತಿ ಈ ಲೇಖನದ ತತ್ಕ್ಷಣದ ಪ್ರೇರಣೆಯಾದರೂ ಅದೇ ತೆರನಾದ ಅನೇಕ ಪ್ರಸ್ತುತಿಗಳನ್ನು ನೋಡಿದಾಗ ಅನ್ನಿಸಿದುದು ತತ್ಕ್ಷಣದ ತೀವ್ರತೆಗೂ ಕಾರಣವಾಗಿದೆ.

ಇತ್ತೀಚೆಗೆ ಕನ್ನಡ ನಾಟಕಗಳನ್ನು ನೋಡುವವರು ಹೆಚ್ಚಾಗಿದ್ದಾರೆ ಮತ್ತು ಕನ್ನಡ ರಂಗಭೂಮಿ ಮತ್ತೆ ಜೀವ ಪಡೆಯುವ, ಪ್ರೇಕ್ಷಕರನ್ನು ಒಳಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ ಎನ್ನುವ ಭಾವ ಮೂಡತೊಡಗಿದೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆಯೇ.ಅನುಮಾನವಿಲ್ಲ. ಇವತ್ತಿನ ನಮ್ಮ ನಟರು, ಕೆಲವಾದರೂ ನಿರ್ದೇಶಕರು, ಬಹಳಷ್ಟು ತಂತ್ರಜ್ಞರು ಖಂಡಿತಾ ಪ್ರತಿಭಾವಂತರಾಗಿದ್ದಾರೆ. ಇವರೆಲ್ಲರನ್ನೂ ಪ್ರೋತ್ಸಾಹಿಸಬೇಕಿದೆ,
ಮತ್ತಷ್ಟು ತೀವ್ರವಾಗಿ ಹುರಿದುಂಬಿಸಬೇಕಿದೆ. ಇವುಗಳಲ್ಲಿ ನೀನಾಸಂ, ರಂಗಾಯಣದಂತಃ ರೆಪರ್ಟರಿಗಳಿದ್ದರೆ, ಮಿಕ್ಕವು ಹಾವ್ಯಾಸಿ ರಂಗತಂಡಗಳಾಗಿವೆ.

ರೆಪರ್ಟರಿಗಳಿಗೊಂದಿಷ್ಟು ಸಾಧ್ಯತೆಗಳಿವೆ, ಹವ್ಯಾಸಿಗಳಿಗಿಲ್ಲದ್ದು. ನಾಟಕದ ಪೂರ್ವಾಭ್ಯಾಸ, ಆಯ್ಕೆ ಕುರಿತಾದ, ಪ್ರಯೋಗಗಳ ಕುರಿತಾದ ಆಳವಾದ ಚಿಂತನೆ ಇತ್ಯಾದಿಗಳು. ಮತ್ತು ಸಮರ್ಥರಾದ ನಿರ್ದೇಶಕರು, ಸಂಘಟಕರು, ಮಾರ್ಗದರ್ಶಕರಿರುವುದರಿಂದ ನೀನಾಸಂ, ರಂಗಾಯಣ, ಸಾಣೇಹಳ್ಳಿ ಶಿವಸಂಚಾರ ತಂಡಗಳು ಪ್ರೇಕ್ಷಕನಿಗೆ ಆಳವಾದ ಅನುಭವದ ಕೊಡುವಂತಃ ಪ್ರಯೋಗಗಳನ್ನು ಮಾಡುವಲ್ಲಿ ಯಶಸ್ವಿಯಾಗಿವೆ.

ಹವ್ಯಾಸಿ ತಂಡಗಳ ಕುರಿತು ಮಾತಿಗೆ ಮೊದಲಾದಾಗ ಇದೇ ಮಾತನ್ನು ಸಾಮಾನ್ಯವಾಗಿ ಹೇಳುವುದು ಕಷ್ಟವಾಗುತ್ತದೆ. ಇವರೆಲ್ಲರೂ ಬೇರೆಡೆ ಉದ್ಯೋಗದಲ್ಲಿರುವವರು. ರಂಗದ ಕುರಿತಾಗಿನ ಅಪರಿಮಿತ ಪ್ರೀತಿ, ವೈಯಕ್ತಿಕ ತುಡಿತ, ಕಳಕಳಿ, ಮಾಧ್ಯಮದ ಸಾಧ್ಯತೆಯ ಕುರಿತ ವಿಶ್ವಾಸ, ಸಾಮಾಜಿಕ, ಕಲಾತ್ಮಕ ಬದ್ಧತೆ ಇತ್ಯಾದಿಗಳಿರುವುದರಿಂದಲೇ ಈ ಜನರು ತಮ್ಮ ಅನೇಕ ಕಷ್ಟಗಳನ್ನು ಮೀರಿ ರಂಗಪ್ರಯೋಗಗಳಿಗೆ ತೊಡಗುತ್ತಾರೆ. ಇವರಲ್ಲಿ ಅನೇಕರು ಬಹಳಷ್ಟು ವರ್ಷಗಳಿಂದ ಸಾಧನೆ ಮಾಡಿದವರಾಗಿ ಪ್ರಯೋಗಗಳ ಕಲಾತ್ಮಕತೆಗೂ ಹೆಸರುವಾಸಿಯಾಗಿದ್ದಾರೆ. ಇವೆಲ್ಲಾ ನಿರ್ವಿವಾದವಾಗಿ ಶ್ಲಾಘನೀಯವಾದ್ದು.

ಆದರೆ ಈ ಸದ್ಯಕ್ಕೆ ನಮ್ಮ ಮುಂದೆ ಒಂದು ಬಿಕ್ಕಟ್ಟಿದೆ. ಹವ್ಯಾಸಿಗಳ ಹೆಚ್ಚಿನ
ಪ್ರಯೋಗಗಳು ೭೦-ರ ದಶಕ ಅಥವ ಅದರ ಹಿಂದೆ ರಚಿತವಾದ ನಾಟಕಗಳಾಗಿವೆ. ಆ ಸಮಯದಲ್ಲಿ ಬರೆದ ನಾಟಕಕಾರನಿಗೆ ತನ್ನ ಕಾಲದ ವೈಯಕ್ತಿಕ ತುರ್ತು ಮತ್ತು ಒಂದು ವಿಶಿಷ್ಟವಾದ ಐತಿಹಾಸಿಕ, ಸಾಂಸ್ಕೃತಿಕ ಸ್ಮೃತಿ - ಇವೆರಡು ವಿಶೇಷವಾದ ರೀತಿಯಲ್ಲಿ ಸಂಗಮವಾಗಿ ಒಂದು ಹೊಸ ನಾಟಕದ ಸೃಷ್ಟಿಗೆ ಕಾರಣವಾಗಿದ್ದವು. ಅದೇ ರೀತಿ ಅಂದಿನ ನಟ, ನಿರ್ದೇಶಕರೂ ಸಹ ೭೦-ರ ದಶಕದ ಒಂದು ವಿಶೇಷವಾದ ಸಾಮಾಜಿಕ ಪರಿಸರದ ಪ್ರಭಾವದಿಂದ ಈ ನಾಟಕಗಳನ್ನು ನಾಟಕಕಾರನ ಆಶಯಕ್ಕೆ ತಕ್ಕುದಾದ ರೀತಿಯಲ್ಲೇ ಬಳಸಿಕೊಂಡು ಅನೇಕ ವರ್ಷಗಳು ಯಾರೂ ಮರೆಯಲಾರದಂತಹ ರಂಗಪ್ರಯೋಗ ಮಾದರಿಗಳನ್ನು ಸೃಷ್ಟಿಸಿದರು. ಆ ಪ್ರಯೋಗಗಳ ಯಶಸ್ಸು ಎಷ್ಟಿತ್ತೆಂದರೆ ಪ್ರಾಯಶಃ ಇವತ್ತು ಅದೇ ಒಂದು ದೊಡ್ಡ ತಡೆಗೋಡೆಯಾಗಿಬಿಟ್ಟಿದೆಯೇನೋ ಇಂದಿನ ಹವ್ಯಾಸಿಗಳ ಬೆಳವಣಿಗೆಗೆ.

ಸುಮಾರು ೩ ದಶಕಗಳ ನಂತರ ಕೂಡಾ ಅದೇ ಮಾದರಿಯನ್ನಿಟ್ಟುಕೊಂಡು (ಕೆಲವು ವೇಳೆ ಹಿಂದಿನ ನಿರ್ದೇಶಕರ ಹೆಸರನ್ನೇ ನಮ್ರತೆಯಿಂದ ಮುಂದುವರೆಸುತ್ತಾ) ಇವತ್ತು ನಡೆಯುತ್ತಿರುವ ರಂಗಪ್ರಯೋಗಗಳ ವಸ್ತುಸ್ಥಿತಿ ಏನು ಎಂದು ಪ್ರಶ್ನಿಸಿಕೊಂಡಾಗಲೆಲ್ಲಾ ಇದೇನು ಹೀಗಾಗುತ್ತಿದೆ ಎನ್ನಿಸುತ್ತಿದೆ. ನಟ/ನಿರ್ದೇಶಕ/ತಂಡಗಳ ಪ್ರಾಮಾಣಿಕತೆಯಂತೂ ನನ್ನ ಮಟ್ಟಿಗೆ ಖಚಿತ. ಅನುಮಾನವಿಲ್ಲ. ಆದರೆ, ಒಂದು ನಾಟಕದ ರಂಗಪ್ರಸ್ತುತಿಗೆ ಪೂರ್ವಭಾವಿಯಾಗಿ ನಡೆಯಬೇಕಾದ ಪ್ರಕ್ರಿಯೆಗಳೇನು, ಅದರಲ್ಲೂ ಪ್ರಯೋಗದ ಯಶಸ್ವೀ ಮಾದರಿಗಳು
ನಮ್ಮ ಮುಂದೆ ದುತ್ತನೆ ಬೃಹಾದಾಕಾರ ತಳೆದು ನಿಂತು ಕಾಡುತ್ತಿರುವಾಗ (ನಮ್ಮ ಸೃಜನಶೀಲತೆಯನ್ನೇ ಪ್ರಶ್ನಿಸುವಂತೆ)? ಒಂದು ನಾಟಕವನ್ನು ನಾವೇಕೆ ರಂಗಪ್ರಸ್ತುತಿ ಪಡಿಸಬೇಕು?
'ಪ್ರಸ್ತುತ' ಪಡಿಸುವುದೆಂದರೇನು? ಹಿಂದಿನ ನಟ/ನಿರ್ದೇಶಕ/ನಾಟಕಕಾರನ ಸ್ಮೃತಿ-ಯ ರೂಪಾಂತರವಿಲ್ಲದೇ ಇವತ್ತಿನ ರಂಗಪ್ರಸ್ತುತಿ ಸಾಧ್ಯವೇ? ಇವತ್ತಿನ ನಟ/ನಿರ್ದೇಶಕರು ಪರಂಪರೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದ ರೀತಿಯೇನು? ಇದಕ್ಕೆಲ್ಲಾ ಎಷ್ಟರಮಟ್ಟಿಗಿನ ಅಧ್ಯಯನದ ಅವಶ್ಯಕತೆಯಿದೆ? - ಇವೇ ಮೊದಲಾದ ಮುಖ್ಯ ಪ್ರಶ್ನೆಗಳನ್ನು ನಮ್ಮ ಹವ್ಯಾಸಿ ತಂಡಗಳು ಕೇಳಿಕೊಳ್ಳುತ್ತಿವೆಯೇ?

ಕಂಬಾರ, ಕಾರ್ನಾಡ್, ಜಿ.ಬಿ.ಜೋಶಿ ಮುಂತಾದವರ ದೊಡ್ಡ ಹೆಸರುಗಳೆಂದು ಅವರ ನಾಟಕಗಳನ್ನು ನೋಡಲು ಜನ ಬರುತ್ತಾರ್‍ಎ. ಆದರೆ ಅವುಗಳನ್ನು ಸರಿಯಾಗಿ ಅಧ್ಯಯನ ಮಾಡದೇ ಹೋದರೆ, ಇತಿಹಾಸದ ಜ್ಞಾನವಿಲ್ಲದೇ ಹೋದರೆ ರಂಗಪ್ರಯೋಗಗಳು ಉತ್ಸವಗಾಳಾಗುವ ಸಾಧ್ಯತೆ ಇಂದು ನಮ್ಮ ಕಣ್ಣ ಮುಂದಿದೆ. ಇವತ್ತಿನ ಪ್ರೇಕ್ಷಕರಂತೂ ಒಂದು ಚಿಕ್ಕ 'ಕಾಮಿಡಿ' ಎನ್ನಿಸುವ ಸನ್ನಿವೇಶಕ್ಕೂ ಬೃಹತ್-ನಗೆಗಳನ್ನು ತಯಾರಿಸಿ ರಂಗಮಂದಿರವನ್ನು
ತುಂಬಿಬಿಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ತಲ್ಲಣಗೊಳಿಸಬೇಕಾದ, ಆಲೋಚನೆಗೆ ಪ್ರೇರೇಪಿಸಬೇಕಾದ, ಅನುಭವಗಳ ಪರಾಮರ್ಶೆಗೆ ತೊಡಗಿಸಬೇಕಾದ ನಾಟಕಗಳು 'ಮಜ' ಮಾಡುತ್ತಾ ವಿನಾ ಕಾರಣದ ಸಂಭ್ರಮಕ್ಕೆ ಇಳಿದುಬಿಡಲು ಅವಕಾಶ ನೀಡುತ್ತದೆಯೆಂದರೆ ಅದಕ್ಕಿಂತಾ ದುರಂತ ಮತ್ತೊಂದಿಲ್ಲ. ನಾಟಕಗಳಲ್ಲಿ ಹಾಸ್ಯ, ವಿಜೃಂಭಣೆ ಈ ಅಂಶಗಳು ಸಮೃದ್ಧವಾಗಿದ್ದಷ್ಟೂ ಎಲ್ಲಾ ರೀತಿಯ ಅಪಾಯಗಳು ರಂಗಪ್ರಸ್ತುತಿಯನ್ನು ಪೂರ್ವಪಕ್ಷದಲ್ಲೇ ಆವರಿಸಿಕೊಂಡುಬಿಟ್ಟಿರುತ್ತವೆ. ರಂಗಪ್ರಯೋಗ ಯಶಸ್ವಿ ಎನ್ನಿಸುತ್ತಿದೆ ಎನ್ನುವಂತಾದರಂತೂ ಮತ್ತೂ ಎಚ್ಚರಿಕೆಯ ಅವಶ್ಯಕತೆಯಿದೆ.

ಇದರಲ್ಲೆಲ್ಲಾ ಪ್ರೇಕ್ಷಕ ಮಹಾಶಯನ ಅಜ್ಞಾನವೇ ಹೆಚ್ಚಿನ ಪಾತ್ರ ವಹಿಸಿರಬಹುದು. ಅಂತಲ್ಲಿ ರಂಗತಂಡಗಳ ಜವಾಬ್ದಾರಿ ಮತ್ತೂ ಹೆಚ್ಚಿನದ್ದಾಗುತ್ತದೆ. ಹಳೆಯದನ್ನು ಕಷ್ಟಪಟ್ಟು ಮರು-ಸೃಷ್ಟಿಸಿಕೊಂಡರೆ, ಪ್ರೇಕ್ಷಕನಿಗೂ ಸುಲಭದ ದಾರಿಗಳಿರುವುದಿಲ್ಲ. ಇಲ್ಲವಾದರೆ ಜಡ್ಡುಗಟ್ಟಿದ ರಂಗಪ್ರಯೋಗಗಳು ಸಾಂಸ್ಕೃತಿಕವಾಗಿ ಮತ್ತೇನನ್ನೂ ಮಾಡಲಾರವು. ಹೀಗೆಂದ ಮಾತ್ರಕ್ಕೆ ನಾವೀನ್ಯದ ಹೆಸರಲ್ಲಿ ಬೇಜವಾಬ್ದಾರಿತನದಿಂದ ಏನು ಬೇಕಾದರೂ ಮಾಡಬಹುದು ಎಂದೇನೂ ಅಲ್ಲ. ಪುಣ್ಯವಶಾತ್ ಕನ್ನಡ ರಂಗಭೂಮಿಯಲ್ಲಿ ಅಷ್ಟೊಂದು ಬೇಜವಾಬ್ದಾರಿ ಇಲ್ಲವೆಂದೆನ್ನಿಸುತ್ತದೆ. ಆದರೆ ಹಿರಿಯರು ಮಾಡಿದ್ದನ್ನು ಮೀರದೇ ಹೋಗುವ ಮಡಿವಂತಿಕೆಯೂ ಒಳ್ಳೆಯದಲ್ಲ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಮೂರು ರಂಗಪ್ರಯೋಗಗಳೆಂದರೆ
ನೀನಾಸಂ-ನ 'ಪಾತರಗಿತ್ತಿ ಪಕ್ಕ', ಸಾಣೇಹಳ್ಳಿ ಶಿವಸಂಚಾರದವರ 'ಬೆರಳ್-ಗೆ ಕೊರಳ್' ಮತ್ತು ರಂಗಾಯಣದ 'ಮಾಯಾಸೀತ ಪ್ರಸಂಗ'. ಇವೆಲ್ಲಾ ರೆಪರ್ಟರಿಗಳಿಂದಲೇ ಎನ್ನುವುದು ಕಾಕತಾಳೀಯವಲ್ಲ. ಹವ್ಯಾಸಿ ತಂಡಗಳು ಪ್ರಸ್ತುತಪಡಿಸಿದ್ದರಲ್ಲಿ ಚೆನ್ನಾಗಿದ್ದವೆಂದರೆ ಕೃಷ್ಣಮೂರ್ತಿ ಕವತ್ತಾರ್-ರ ಒಂದು ಮಹಾಭಾರತ ಆಧಾರಿತ ಪ್ರಸಂಗ ಹೆಸರು ನೆನಪಿಗೆ ಬರುತ್ತಿಲ್ಲ. ಪ್ರಮೋದ್ ಶಿಗ್ಗಾಂವ್-ರು ಪ್ರಸ್ತುತಪಡಿಸಿದ ಸಂಸರ ನಾಟಕವೊಂದು ಸಹ ಒಳ್ಳೆಯ ಕಲ್ಪನಾಶಕ್ತಿಯುಳ್ಳದ್ದಾಗಿತ್ತು (ಆ ದಿನ ಕಿ.ರಂ.ನಾಗರಾಜ್ ತಮ್ಮ ಮಾತುಗಳಿಂದ ಪ್ರಸ್ತುತಿಯನ್ನು ಮತ್ತಷ್ಟೆತ್ತರಕ್ಕೇರಿಸಿಬಿಟ್ಟರು). ಸಿದ್ಧ ಮಾದರಿಯ ಪ್ರಸ್ತುತಿಯ ನಾಟಕಗಳ ಕುರಿತು ಹೇಳುವುದಾದರೆ ಒಮ್ಮೆ ಮಾತ್ರ 'ಸತ್ತವರ ನೆರಳು' ಸ್ವಲ್ಪ ಪ್ರಭಾವ ಬೀರಿತು, ಅದೂ ಕೂಡಾ ನಾಟಕದ ಹರಿತವಾದ ಸಂಭಾಷಣೆಯಿಂದ.

ನಮ್ಮೆಲ್ಲಾ ಹವ್ಯಾಸಿ ತಂಡಗಳು ಈ ಕಡೆಗೆ ಗಮನ ಹರಿಸಬೇಕು. ಏನೇ ಆದರೂ ನಾಟಾಕ ನೋಡಿಯೇ ತೀರುತ್ತೇನೆ ಎನ್ನುವುದರಿಂದ ಬರುವಾ ಸಾಂಸ್ಕೃತಿಕ ಧೈರ್ಯ ನನ್ನಿಂದ ಇದನ್ನು ಬರೆಯಿಸಿದೆ. ಇಷ್ಟೆಲ್ಲಾ ಆದರೂ ಅಂತಹುದೇ ಮತ್ತೊಂದು ನಾಟಕದ ಪ್ರಸ್ತುತಿಯಾದರೆ
ನೋಡುವುದಕ್ಕೆ ಹೋಗಿಯೇ ತೀರುತ್ತೇನೆ ಎನ್ನುವುದರಿಂದಲೂ ಈ ಧೈರ್ಯ ಬರುತ್ತದೆ.

Wednesday, January 18, 2006

ಐಐಎಂ ಸೀಮೋಲ್ಲಂಘನ


ಪ್ರಸ್ತುತ ಐ.ಐ.ಎಂ.-ನ ಸಿಂಗಾಪುರ್ ಪ್ರಸಂಗ ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರಗತಿ, ಬೆಳವಣಿಗೆ-ಯ ಆಶೆಯಲ್ಲಿರುವ ಸಂಸ್ಥೆ ಸಾಗರೋಲ್ಲಂಘನ ಮಾಡಿ ಸಿಂಗಾಪುರದಲ್ಲಿ ಮತ್ತೊಂದು ಸಂಸ್ಥೆ ತೆರೆಯಬೇಕೆಂದಿದೆ. ಇದು ಯಾವ ರೀತಿಯ ಸೀಮೋಲ್ಲಂಘನವೋ ಎನ್ನುವುದು ಸದ್ಯಕ್ಕೆ ಸ್ಪಷ್ಟವಿಲ್ಲ.

ಈ ಹೊತ್ತಿನಲ್ಲಿ ಕೆಲ ಪ್ರಶ್ನೆಗಳನ್ನು ಕೇಳಬೇಕೆಂದೆನ್ನಿಸಿದೆ. ಒಂದು ಸಂಸ್ಥೆಯ ಸ್ವಾಯತ್ತತೆಯ ಸೀಮೆಗಳೇನು. ಅವು ಹೊಸದೊಂದು ಕ್ರಾಂತಿಕಾರಿ ವಿಚಾರವನ್ನು ಪ್ರತಿಪಾದಿಸುವಾಗ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗದ ಹಾಗೆ ನಡೆದುಕೊಳ್ಳಬೆಕಾದ ರೀತಿಯಾವುದು. ಸಾರ್ವಜನಿಕರ ಅಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಬಿಡುವುದು ಹಾಗಿರಲಿ, ಒಂದು ಹೊಸವಿಚಾರದ ಚರ್ಚೆ ದೇಶದ ಯಾವ ವೇದಿಕೆಯಡಿ ಮತ್ತು ಯಾರ್ಯಾರ ಸಹಭಾಗಿತ್ವದಲ್ಲಿ ನಡೆಯಬೇಕು. ದೇಶ, ಜನರ ಬಗೆಗಿನ - ಸ್ವಾಯತ್ತೆಯ ಸೀಮೆಯನ್ನು ಮೀರಿದ - ಜವಾಬ್ದಾರಿಗಳು ಸಂಸ್ಥೆಗೆ ಇವೆಯೇ ಮತ್ತು ಅವುಗಳನ್ನು ಸಂಸ್ಥೆ ಹೇಗೆ ನಿಭಾಯಿಸಬೇಕು.ಇದೆಲ್ಲಾ ಯಾರಿಗೆ ಸಾಧಕ ಯಾರಿಗೆ ಬಾಧಕ ಎನ್ನುವುದನ್ನು ಯಾರು ಯಾರಿಗೆ ತಿಳಿಹೇಳಬೇಕು.

ಇವತ್ತಷ್ಟೇ ಅಲ್ಲದೆ ಔದ್ಯೋಗಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಯ ಆರಂಭದ ಕಾಲದಿಂದಲೂ ನಮ್ಮ ಸಂಸ್ಥೆಗಳು ಜನರಿಂದ ರೂಪಿತಗೊಂಡಿದ್ದಲ್ಲ. ಅವುಗಳ ಸೃಷ್ಟಿಯಲ್ಲೇ ಭೀಕರವಾದ ಕೊಲೆಯ ಪಾಪ ಅಡಗಿದೆ. ಸೃಷ್ಟಿಯಾದ ನಂತರದಲ್ಲಾದರೂ ಸಮಾಜದ ಜೊತೆಗಿನ ಸಂಬಂಧ ನಾವು ನಿರೀಕ್ಷಿಸುವ ಜೀವಂತಿಕೆಯಿಂದ ಕೂಡಿಲ್ಲ.

ಜಾಗತೀಕರಣದ ಹಿನ್ನೆಲೆಯಲ್ಲಿ ಇವೆಲ್ಲಾ ಹೆಚ್ಚು ಸ್ಪಷ್ಟವಾಗಿ ಕಾಣುತ್ತಿರುವಂತೆಯೇ ಇಂತಹ ಪ್ರಶ್ನೆಗಳಿಗೆ ಉತ್ತರವೂ ಸುಲಭವಾಗಿ ಕಾಣುವುದಿಲ್ಲ. ಇಂತಹ ಸಾಂಸ್ಕೃತಿಕ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸಿ ನಿಭಾಯಿಸಬಲ್ಲ ಪತ್ರಕರ್ತರು ಕಾಣುತ್ತಿಲ್ಲ.

ಅನುಮಾನ, ವಿಷಾದಗಳಿಗೆ ಕೊನೆಯಿಲ್ಲ.

Tuesday, January 17, 2006

ಬರೆಯುವುದಕ್ಕೆ ತೊಡಗುವ ಮುನ್ನ

ಸ್ವಂತವಾದ ಒಂದು ಬ್ಲಾಗ್ ಶುರುಮಾಡಬೇಕೆನ್ನಿಸಿ ಅನೇಕ ದಿನಗಳಾದರೂ, ಇದು ಏಕೆ ಬೇಕು ಎನ್ನುವುದು ಇತ್ಯರ್ಥ-ಗೊಳ್ಳದೆ ಹಾಗೆಯೇ ಉಳಿದಿತ್ತು. ಈಗಲಾದರೂ ಇದು ಹೇಗೆ ಮುಂದುವರೆಯುತ್ತದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಮನಸ್ಸಿಗೆ ಬಂದದ್ದನ್ನೆಲ್ಲಾ ಹಾಕಿಕೊಳ್ಳುತ್ತಾ ಇದು ಹೇಗೆ ಬೆಳೆಯಬಹುದು ಎಂದು ಆಸಕ್ತಿಕರವಾಗಿ ನೋಡುವುದೇ ಸದ್ಯಕ್ಕೆ ನನ್ನಿಂದ ಸಾಧ್ಯ. ಓದಿದುದರ ಬಗ್ಗೆ, ಕೇಳಿದುದರ ಬಗ್ಗೆ, ಬೇಕೆನ್ನಿಸಿದುದರ ಬಗ್ಗೆ, ಬೇಡವಾದುದರ ಬಗ್ಗೆ, ನಾನೊಬ್ಬನಿದ್ದೇನೆ ಎನ್ನುವ ಅಹಂಕಾರದ ನೆಲೆಯಲ್ಲಿನ ಅನಿಸಿಕೆಗಳು ಇವೇ ಮುಂತಾದ ಅನೇಕವನ್ನು ಈ ತಾಣದಲ್ಲಿ ಹಾಕಿಕೊಳ್ಳೋಣವೆಂದುಕೊಂಡಿದ್ದೇನೆ.

ಇದಕ್ಕೆ ನಾನು ಸೂಚಿಸಿರುವ ಹೆಸರಾದರೂ ತುಂಬಾ ತಿಕ್ಕಲು ಎಂದೆನ್ನಿಸದೇ ಇರದು. ಆದರೂ, ಸ್ವಲ್ಪ ಪ್ರಾಮಾಣಿಕವಾಗೇ ಈ ಹೆಸರನ್ನು ಸೂಚಿಸಿದ್ದೇನೆ. ನಿಜಕ್ಕೂ, ನಾನಿಲ್ಲಿ ಬರೆಯಬಹುದಾದ್ದು ಮೇಲ್ನೋಟಕ್ಕೆ ಅನಿಸಿಕೆಗಳೆಂದೆನ್ನಿಸಿದರೂ, ಅವೆಲ್ಲವೂ ನನ್ನ ಅನುಮಾನಗಳೇ ಆಗಿರುತ್ತವೆ. ಈ ಸದ್ಯದ ಸ್ಥಾಯೀ ಭಾವ ಅನುಮಾನ ಮತ್ತು ವಿಷಾದಗಳೇ ಎನ್ನುವುದು ನನ್ನ ಅನುಮಾನ. ಈ ಇಂತಹ ಅನುಮಾನಗಳ ಬಗ್ಗೆ ನಮ್ಮ ಖಚಿತವಾದ, ಕಾಲದ ಅನುಮೋದನೆ ಇರುವ ಅಭಿಪ್ರಾಯಗಳಷ್ಟೇ ಭರವಸೆ ತಾಳುವುದು ಕೆಲ ಹಿರಿಯರಿಂದ ಸಾಧ್ಯವಾಗಿದೆ. ಅವರಿಗೆ ಈ ನನ್ನ ಬ್ಲಾಗ್ ಸಮರ್ಪಿತವಾಗಿದೆ. ಅಂತಹ ಹಿರಿಯರನ್ನು ನೆನೆಯತ್ತಾ ಈ ಒಂದು ಪದ್ಯ....

ಊರ ಬಸ್ಸ್-ಸ್ಟ್ಯಾಂಡಿನ ಬಳಿ ನಿಂತು
ಸರಿ ಕಂಡವರನ್ನು
'ಬನ್ನಿ, ಬನ್ನಿ
ಈಗ ಬಂದಿರಾ
ಯಾವ ಊರು ಏನು ಎತ್ತ
ಹೇಗೆ ನಿಮ್ಮಲ್ಲಿ ಮಳೆ ಬೆಳೆ
ಊಟವಾಯಿತೆ, ಸೌಕರ್ಯವೇ
ಕೂಡಿ ಮಾತನಾಡೋಣ
ಇದು ನಮ್ಮಲ್ಲಿ ಹೀಗೆ
ನಿಮ್ಮಲ್ಲಿ ಹೇಗೆ?
ಅದೋ ಮುಂದಿನೂರಿಗೆ ದಾರಿ
ಮತ್ತೆ ಬನ್ನಿ ನಮ್ಮೂರಿಗೆ
ಆಗಾಗ ಬರುತ್ತಿರಿ'
ಎಂದು ಇಷ್ಟೆಲ್ಲವನ್ನೂ
ಒಂದು ಮಾತನಾಡದೆಯೇ
ಮೌನದಲ್ಲೇ ಆಡಿದರಲ್ಲಾ!

ಅಲ್ಲೆ ಅಲ್ಲೆ ಇದ್ದರಂತೆ
ಆಗೊಮ್ಮೆ ಈಗೊಮ್ಮೆ ಮಾತ್ರ
ಕಣ್ಣಿಗೆ ಕಂಡರೂ
ಅದ್ಯಾವ ಬಟ್ಟೆ ಉಟ್ಟಿದ್ದರೋ
ಯಾರ ಬಳಿ ಏನೆಂದರೋ
ಏನೋಪ್ಪ ನೆನಪಿಗೇ ಬರುತ್ತಿಲ್ಲ
ಆದರೆ ಸದಾ ಎಲ್ಲೆಡೆ
ಗೋಚರಿಸುತ್ತಲಿದ್ದಿರಲ್ಲಾ

ಮೇಲಿನೇದುಸಿರಂತೆ
ಉಸಿರು ನಿಂತಾಗಲೇ ಗೊತ್ತಾದ್ದು
ಪರವಾಗಿಲ್ಲ ಬಿಡಿ
ಇದ್ದಾಗ ಒಳ ಉಸಿರು ಮಾತ್ರ
ಆಳ ಸರಾಗ
ಇದು ಹಠಯೋಗವಲ್ಲ
ಪ್ರೀತಿ, ಯೋಚನೆ, ಧ್ಯಾನದಿಂದಾದ
ಸಹಜ ಪ್ರಾಣಾಯಾಮ
ಪ್ರತಿ ಉಸಿರಿಗೂ ತಲುಪಿದ್ದು ತಡವಿದ್ದು
ಪ್ರತಿ ಅಣು ಅಣುವನ್ನೂ

ಊರ ಮಣ್ಣಿನಲ್ಲಿ ಗಟ್ಟಿ ಬೇರೂರಿ
ಬೆಳೆದೆ ಅಡಿಕೆ ಮರದ
ವೀಳ್ಯದ ಮೆಲ್ಲುವಿಕೆಯಿಂದ
ಒಳಗಣ್ಣು ಪ್ರಖರ
ನೂರಾರು ವರ್ಷಗಳ ದಿವ್ಯದೃಷ್ಟಿ
ಮಣ್ಣಿನಲಿ ಕಾಲು ಹೂತುಹೋಗದೇ
ಬಿರು-ಸುಂಟರ-ಗಾಳಿಗೂ ಹಾರದೇ
ಸಂಕಲ್ಪಿಸಿದ ಸೃಜಿಸಿದ
ಯಜ್ಞಗಳಂತೂ ವರುಷಾನುಗಟ್ಟಲೆ
ಎಲ್ಲರಿಂದ ಎಲ್ಲರಿಗಾಗಿ ಎಲ್ಲರ ಯಜ್ಞ
ನೆರೆದ ಮುನಿ, ಋಷಿ, ದೇವರು
ದೆವ್ವ, ಭೂತ, ಪಿಷಾಚಿಗಳೂ
ಬಂದದ್ದು ಮಂತ್ರಶಕ್ತಿಯಿಂದಲ್ಲ
ಬೆಳಕಿನೆಡೆ ಮುಖಮಾಡಿ ಪ್ರೀತಿಯಿಂದ
ಕುವೆಂಪು ಮಾಸ್ತಿ ಕಾರಂತ ಬೇಂದ್ರ
ಅಷ್ಟೇ ಅಲ್ಲ
ಯಾರ್ಯಾರನ್ನೋ ನೋಡಲಿಲ್ಲ ಎನ್ನುವ ದುಃಖ
ಸ್ವಲ್ಪವಾದರೂ ಕಡಿಮೆಯಾಯಿತಲ್ಲ

ಮಾತುಬೆಳ್ಳಿ ಮೌನ ಬಂಗಾರ
ಮೌನದಿಂದಲೇ ಹೊರಟು
ಮೌನಕ್ಕೇ ಹಿಂದಿರುಗಿ
ಒಮ್ಮೆಯಾದರೂ ಮೌನವನ್ನು ಹದಗೆಡಿಸದೇ
ಹಿರಣ್ಯಗರ್ಭದ ಮಡಿಲಾಳದಿಂದೆಂಬಂತೆ
ನೀವಾಡಿದ ಮಾತುಗಳು
ನನ್ನನ್ನು ಮೌನಿಯಾಗಿಸಿದೆ
ಮನೋಬುಧ್ಯಹಂಕಾರ ಚಿತ್ತಗಳಷ್ಟೇ ಅಲ್ಲದೆ
ನಾಲಗೆ, ಹೃದಯ, ಕೈ, ಕಾಲು, ಲೇಖನಿಗಳ
ಕೂಡಿಸುವ ಹೊಸದೊಂದು ಬಳ್ಳಿಯನ್ನು ಸೃಷ್ಟಿಸಿದೆ
ಬರಿ ಆಲೋಚನೆಗಳಷ್ಟೇ ಅಲ್ಲ
ನನ್ನ ಅನುಮಾನಗಳ ಕುರಿತೂ
ಭರವಸೆಯಿಡಬಹುದೆನ್ನುವ
ಆಸೆ ಮೂಡಿದೆ

ದೂರದಿಂದಲೇ ಗುರುವಾದ ನೀವು ದ್ರೋಣರಲ್ಲ!
ಅಲ್ಲವೇ ಅಲ್ಲ
ಸೊರಗಿದ ಬೆರಳುಗಳಿಗೂ ಕಸುವುದುಂಬಿದಿರಲ್ಲ!!
ಹತ್ತುಬೆಟ್ಟಿದ್ದಲ್ಲಿ ಮತ್ತೊಂದನ್ನೂ ಕೊಟ್ಟಿರಲ್ಲ!!!