ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, November 05, 2006

ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೧

[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]

ಶಂಕರಮೂರ್ತಿ ಉವಾಚ ಮತ್ತು ಮೊದಲ ಪ್ರತಿಕ್ರಿಯೆಗಳು
ಒಂದು ಬೆಳಿಗ್ಗೆ ವೃತ್ತಪತ್ರಿಕೆಗಳನ್ನು ತೆರೆಯುತ್ತಿದ್ದಂತೆ, ಮಿಕ್ಕ ಸಾಮಾನ್ಯ ವಿಷಯಗಳ ಹೊರತಾಗಿ ಬೆಚ್ಚಿಬೀಳಿಸಿದ್ದು ಶಿಕ್ಷಣ ಸಚಿವರಾದ ಶಂಕರಮೂರ್ತಿಯರ ಹೇಳಿಕೆ. ಅಂದು ಮತ್ತು ಮುಂದೆ ಹೇಳಿದ ಅವರ ಮಾತುಗಳ ತಾತ್ಪರ್ಯವಿಷ್ಟು. ಮೈಸೂರು ಸಂಸ್ಥಾನದಲ್ಲಿ ಹಿಂದೆ ಆಡಳಿತ ಭಾಷೆಯಾಗಿದ್ದ ಕನ್ನಡ ಭಾಷೆಗೆ ಬದಲಾಗಿ ಪರ್ಶಿಯನ್ ಭಾಷೆಯನ್ನು ಬಳಕೆಗೆ ತಂದ ಟೀಪುಗೆ ಕನ್ನಡಾಭಿಮಾನವಿರಲಿಲ್ಲ, ಕನ್ನಡ ವಿರೋಧಿಯಾಗಿದ್ದ ಮತ್ತು ಅವನಿಗೆ ಇತಿಹಾಸದಲ್ಲಿ ಮಹತ್ತರವಾದ ಸ್ಥಾನದ ಅವಶ್ಯಕತೆಯಿಲ್ಲ. ವಿನಾಕಾರಣ ಅಕ್ಬರ್, ಔರಂಗಜ಼ೇಬ್ ಮುಂತಾದವರನ್ನು ವೈಭವೀಕರಿಸುವ ಇತಿಹಾಸ ಭಗತ್ ಸಿಂಘ್, ಆಜ಼ಾದ್ ಮುಂತಾದವರನ್ನು ಉಗ್ರಗಾಮಿಗಳಂತೆ ಚಿತ್ರಿಸಿ ಅಪಚಾರವೆಸಗಿದೆ. ವಿಶ್ವೇಶ್ವರಯ್ಯ ಮತ್ತು ಕೃಷ್ಣರಾಜ ಒಡೆಯರರಿಗೆ ಇತಿಹಾಸದಲ್ಲಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇದನ್ನು ಒಂದೆರಡು ಬಾರಿ ಸಮರ್ಥಿಸಿಕೊಂಡ ನಂತರ ವಿರೋಧಗಳು ಜಾಸ್ತಿಯೆಂದೆನ್ನಿಸಿದ ಮೇಲೆ, ಜಾತ್ಯತೀತ ಜನತಾ ದಳದ ಮುಜುಗರವೂ ಒತ್ತಡವಾಗಿ ಪರಿವರ್ತಿತವಾದಾಗ 'ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಸ್ವಲ್ಪ ಧ್ವನಿಯನ್ನು ಬದಲಿಸಿಕೊಂಡರು. ಇಷ್ಟೆಲ್ಲ ಅವರು ಶಾಲಾ ವಿದ್ಯಾರ್ಥಿಗಳ ಮುಂದೆ ಹೇಳಿದ್ದು ಎನ್ನುವುದನ್ನು ಮರೆಯಲಾಗದು. ಮಾತಾಂತರ ಮುಂತಾದುವುದನ್ನು ಅವರು ಉಲ್ಲೇಖಿಸಿರದಿವುದು ಕೂಡಾ ಗಮನಾರ್ಹವಾದ ಸಂಗತಿಯಾದರೂ ಹೇಳಿಕೆಯ ಉದ್ದಿಶ್ಯ, ಅವರ ಹಿನ್ನೆಲೆ ಇವುಗಳನ್ನು ಕಡೆಗಣಿಸಲಾಗದು.

ಇದನ್ನು ವಿರೋಧಿಸಿ ಯಾರ್ಯಾರು ಏನೇನು ಹೇಳಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನೂ ಅಲ್ಲ. ಕಾರ್ನಾಡ್, ಮರುಳಸಿದ್ದಪ್ಪ, ಗೋವಿಂದರಾವ್ ಮುಂತಾದವರು ಖಂಡಿತವಾಗಿ ಕಣಕ್ಕಿಳಿಯುತ್ತಾರೆ ಎಂದುಕೊಂಡೆ. ಮೊದಲ ಪ್ರತಿಕ್ರಿಯೆ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯಿಂದ - ಶಂಕರಮೂರ್ತಿಯವರ ಹೇಳಿಕೆಯನ್ನು ವಿರೋಧಿಸುತ್ತಾ ಟೀಪು ಕೆಳದಿಯ ಅರಸರಿಗೆ ಬರೆದ ಕನ್ನಡ ಪತ್ರಗಳನ್ನು ಉಲ್ಲೇಖಿಸಿ ಈ ಕುರಿತಾದ ಸಂವಾದಕ್ಕೆ ಆಹ್ವಾನವಿತ್ತಿದ್ದಾರೆ. ಪ್ರತಿಕ್ರಿಯೆಯ ಧ್ವನಿ ನನ್ನನ್ನು ಚಕಿತಗೊಳಿಸಿತಲ್ಲದೇ ಗೌರವ ಮೂಡಿಸಿತು. ತಲಕಾಡು ಚಿಕ್ಕರಂಗೇಗೌಡರೆನ್ನುವವರು ಟೀಪುವಿನ ಇತ್ಯಾತ್ಮಕ ಚಿತ್ರಣವಿರುವ ಲಾವಣಿಗಳನ್ನು ಉಲ್ಲೇಖಿಸಿ, ಗಾಂಧೀಜಿಯವರು ಟೀಪುವನ್ನು 'ಉತ್ತಮ ದೊರೆ' ಎಂದಿರುವುದನ್ನು ನೆನಪಿಸಿದ್ದಾರೆ. ರಾಜಕಾರಣಿಯಾದ ಎಸ್. ಬಂಗಾರಪ್ಪನವರು ಟೀಪುವಿನ ಕಾಲದಲ್ಲಿ ಕನ್ನಡಿಗರು ಉನ್ನತ ಸ್ಥಾನಮಾನದಲ್ಲಿದ್ದರು, ಯುದ್ಧದ ಸಮಯದಲ್ಲಿ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದನು ಎನ್ನುವುದನ್ನೆಲ್ಲೆ ನೆನ್ಪಿಸಿ, ಒಂದು ಹೆಜ್ಜೆ ಮುಂದೆ ಹೋಗಿ ಶಂಕರಮೂರ್ತಿಯವರನ್ನು ಕೈಬಿಡಿ ಎಂದು ಆಗ್ರಹಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದ ಪ್ರೊ|| ಶಿವರಾಮಯ್ಯನವರ ಪತ್ರವಂತೂ ಮತ್ತಷ್ಟು ವಿಶೇಷವಾಗಿತ್ತು. ಟೀಪು ಕನ್ನಡ ರಾಷ್ಟ್ರೀಯತೆಗಾಗಿ ರಣರಂಗದಲ್ಲಿ ಮಡಿದವನು (ಇದಕ್ಕೆ ಪೂರಕವಾಗಿ ಯಾವುದೇ ಐತಿಹಾಸಿಕ ವಿವರಗಳೆಲ್ಲವನ್ನು ಅವರು ಕೊಟ್ಟಿರಲಿಲ್ಲ), ಅವನ ಕಾಲದ ಸುಧಾರಣಾ ಕ್ರಮಗಳು ಅತ್ಯಾಧುನಿಕವೆಂಬಂತಿದ್ದವು (ಇದಕ್ಕೆ ಪೂರಕವಾಗಿ ಅನೇಕ ವಿವರಗಳನ್ನು ಒದಗಿಸಿದ್ದರು - ಬಿಡಿ ಪಾಳೇಗಾರಿಕೆಯ ನಿಯಂತ್ರಣ, ಬ್ರಾಹ್ಮಣ-ಊಳಿಗಮಾನ್ಯ ಪದ್ಧತಿಯ ಹಿಡಿತ ಸಡಿಲ, ದೇಸಿ ಮಾರುಕಟ್ಟೆಯ ವರ್ಧನೆ). ಇದೆಲ್ಲವೂ ಚರ್ಚೆಯನ್ನು ಅನೇಕ ದಿಕ್ಕಿನಲ್ಲಿ ಒಯ್ಯುವಂತಿದ್ದವು.

ದಿಗ್ಗಜರ ಪ್ರವೇಶ
ದಿಗ್ಗಜರ ಪ್ರವೇಶವಾದದ್ದೇ ಈ ಹಂತದಲ್ಲಿ. ಹಿರಿಯರಾದ ಗಿರೀಶ ಕಾರ್ನಾಡ, ಪ್ರೊ|| ಮರಳುಸಿದ್ದಪ್ಪ, ಪ್ರೊ|| ಬಿ ಕೆ ಚಂದ್ರಶೇಖರ್, ಪ್ರೊ|| ರವಿಕುಮಾರ್ ವರ್ಮ (ಪ್ರಜಾವಾಣಿಯಲ್ಲಿ ವರದಿಯಾದಮ್ತೆ) ಶಂಕರಮೂರ್ತಿಯವರ ಹೇಳಿಕೆಯನ್ನು ಖಂಡಿಸುತ್ತಾ - ಟೀಪು ರಾಷ್ಟ್ರ ಪ್ರೇಮಿ, ಕನ್ನಡ ಪ್ರೇಮಿ ಎನ್ನುವುದು ನಿರ್ವಿವಾದ, ಶಂಕರಮೂರ್ತಿಯವರ ವಿರುದ್ಧ ಚಳವಳಿ ಹಮ್ಮಿಕೊಳ್ಳುತ್ತೇವೆ, ಟೌನ್ ಹಾಲ್-ನಲ್ಲಿ ಧರಣಿ ಸತ್ಯಾಗ್ರಹ ಏರ್ಪಡಿಸುತ್ತೇವೆ ಎನ್ನುವ ಜಂಟಿ ಹೇಳಿಕೆಯನ್ನು ಕೊಟ್ಟರು. ಮತ್ತೊಂದೆಡೆ ಕಾರ್ನಾಡರು ಹೇಳಿದ್ದಾರೆ ಎಂದು ವರದಿಯಾಗಿದ್ದು - ಶಂಕರಮೂರ್ತಿಯವರ ಹೇಳಿಕೆಗಳು ನಿರಾಧಾರ, ಇದೆಲ್ಲಾ ಬಿಜೆಪಿಯ ರಹಸ್ಯ ಕಾರ್ಯಸೂಚಿಯನ್ನೇ ತೋರಿಸುತ್ತದೆ. ತಮ್ಮ ಬಳಿಯಿರುವ ಸಾಕ್ಷಿಗಳೊಂದಿಗೆ ಚರ್ಚೆಗೆ ಬರಲಿ - ಎಂದು. (ಇದಾದ ಬಹಳ ದಿನಗಳ ನಂತರ ಕಾರ್ನಾಡರು ಶಿಕ್ಷಣ ಸಚಿವರ ನಡವಳಿಕೆಯ ಕುರಿತಾದ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದು, ಇತಿಹಾಸದ ಕುರಿತ ಚರ್ಚೆಗಲ್ಲ ಎಂದು ಹೇಳಿದ್ದು ನೋಡಿ ಆಶ್ಚರ್ಯವಾಯಿತು. ತಪ್ಪು ಪತ್ರಿಕೆಗಳದ್ದೋ ಕಾರ್ನಾಡರದ್ದೋ ತಿಳಿಯಲಿಲ್ಲ.)

ಪ್ರೊ|| ಬಿ ಕೆ ಚಂದ್ರಶೇಖರ್ ಅದೇಕೋ ಬುದ್ಧಿಜೀವಿ ರಾಜಕಾರಣಿಗೇ ವಿಶೇಷವಾದ ಧ್ವನಿಯಲ್ಲಿ ಮಾತನಾಡತೊಡಗಿದ್ದರು. (ಎನ್ ಡಿ ಟಿವಿಯಲ್ಲಿ ಇತ್ತೀಚೆಗೆ ಬೆಳಗಾವಿ ಅಧಿವೇಶನದ ಕುರಿತು ಅವರು ಮಾತನಾಡುತ್ತಿದ್ದಾಗ ಅವರ ಧ್ವನಿಯಲ್ಲಿನ ಕೃತಕತೆಯನ್ನು ನೋಡಿ ಮರುಕವುಂಟಾಯಿತು. ಇದಕ್ಕೆ ಪ್ರತಿಯಾಗಿ ಚಿರಂಜೀವಿ ಸಿಂಘ್ ಅದೆಷ್ಟು ಆಪ್ಯಾಯಮಾನವಾಗಿ ಮಾತನಾಡುತ್ತಿದ್ದರು - ಅದಿರಲಿ ಇದು ಇಲ್ಲಿ ಮುಖ್ಯವಲ್ಲ). ಅವರ ವ್ಯಂಗ್ಯ ಅವ್ಯಾಹತವಾಗಿ ಸಾಗಿತ್ತು. ಶಂಕರಮೂರ್ತಿಯವರನ್ನು ಹಂಗಿಸುತ್ತಾ ಟೀಪು ಯಾರೆಂದು ಶ್ರ್‍ಇಂಗೇರಿ ಗುರುಗಳನ್ನು ಕೇಳಿ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಶಂಕರಮೂರ್ತಿಗಳ ವಿರುದ್ಧ ಧರಣಿ ನಡೆಸಬೇಕಾಗುತ್ತದೆ ಎಂದಿದ್ದಾರೆ. ಅದೇನೇ ವ್ಯಂಗ್ಯ-ಪ್ರತಿಷ್ಠೆಗಳಿರಲಿ ಕಡೆಯ ಮಾತು ಮಾತ್ರ ಅನುಮೋದಿಸಬೇಕಾದದ್ದೇ. ಪ್ರೊ|| ಮರುಳಸಿದ್ದಪ್ಪನವರು ಶಂಕರಮೂರ್ತಿಯವರ ಈ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೇ ಚ್ಯುತಿ ತರುವಂತಹದ್ದು ಎನ್ನುವ ಮಾತನಾಡಿದ್ದಾರೆ (ಇದು ಮುಖ್ಯವಾದ ಚರ್ಚೆಯಾಗಬೇಕಾದ ವಿಷಯ). ಇದನ್ನು ಪ್ರತಿಭಟಿಸಿ ಟೌನ್ ಹಾಲ್-ನಲ್ಲಿ ಪ್ರತಿಭಟನೆ ಎನ್ನುವುದನ್ನು ಮರು ಉಚ್ಛರಿಸಿದ್ದಾರೆ. ಪ್ರೊ|| ಎನ್ ವಿ ನರಸಿಂಹಯ್ಯನವರು ಸಚಿವರನ್ನು ಖಂಡಿಸಿ ಅವರನ್ನು ಸಂಪುಟದಿಂದ ಕೈಬಿಡಿ ಎಂದಿದ್ದಾರೆ. ಅನೇಕ ಕನ್ನಡ ಪರ ಸಂಘಟನೆಗಳು ಸಚಿರವನ್ನು ಖಂಡಿಸಿ ಬಿಜೆಪಿಯ ಮತಾಂಧತೆ ಮತ್ತು ಹಿಂದಿ ಹೇರಿಕೆಗಳನ್ನು ನೆನಪಿಸಿ ವಿರೋಧಿಸಿದ್ದಾರೆ.

ಕಣಕ್ಕಿಳಿದ ಭೈರಪ್ಪನವರು
ಇಲ್ಲಿಯವರಿಗಿನ ವಾದ ಹೆಚ್ಚಾಗಿ ವಸ್ತುವಿನ ಕುರಿತಾಗಿಯೇ ಇದ್ದರೆ, ಚರ್ಚೆಗೆ ವೈಯಕ್ತಿಕವಾದ ಆಯಾಮವೊಂದನ್ನು ತಂದಿದ್ದು ಕಾದಂಬರಿಕಾರರಾದ ಭೈರಪ್ಪನವರು. ವಿಜಯಕರ್ನಾಟಕಕ್ಕೆ ಬರೆದ ಸುದೀರ್ಘವಾದ ಪತ್ರವೊಂದರಲ್ಲಿ ಅವರು ಸಾಹಿತಿ-ಕಲಾವಿದರಾಗಿ ಕಾರ್ನಾಡರನ್ನು ಪರಿಗಣಿಸಿ, ಅವರ ತುಘಲಕ್ ನಾಟಕವನ್ನು ರಂಗಕೃತಿಯಾಗಿ ಮೆಚ್ಚುತ್ತಾ, ನಾಟಕದ ಬೆನ್ನುಡಿಯಲ್ಲಿ ಕಾರ್ನಾಡರು ತಮ್ಮ ನಾಟಕ ಐತಿಹಾಸಿಕವಲ್ಲ ಎಂದಿರುವುದನ್ನು ಉಲ್ಲೇಖಿಸುತ್ತಾರೆ. ಇಷ್ಟಾದರೂ ಅವರಿಗೆ ಇತಿಹಾಸದ ತುಘ್ಲಕ್ ಹಿನ್ನೆಲೆಯಲ್ಲಿ ನಾಟಕದ ಒಂದಿಷ್ಟು ವಿವರಗಳನ್ನು ಅನಾವರಣಗೊಳಿಸುವ ತುರ್ತು ಕಂಡಿದೆ. ಈ ನಾಟಕ ಐತಿಹಾಸಿಕ ತುಘಲಕ್-ನ ವೈಭವೀಕರಣವೆಂದು ವಾದಿಸಿ, ಅದೇ ಮಾದರಿಯಲ್ಲಿ ಕಾರ್ನಾಡರ ಟೀಪು ನಾಟಕವನ್ನು ವಿವರಿಸಿ ಟೀಪೂ-ಗೆ ಬಿಳಿಬಣ್ಣ ಬಳೆದು ಧೀರೋದಾತ್ತ ನಾಯಕನಾಗಿ ಚಿತ್ರಿಸಿದ್ದಾರೆ. ಕಾರ್ನಾಡರಿಗಿರಬಹುದಾದ ಇತಿಹಾಸದ ಕುರಿತ ನಿಷ್ಠೆ ಎಷ್ಟರಮಟ್ಟಗಿನದ್ದು ಎಂಬ ಶೋಧನೆಯಾಗಿದೆ ಭೈರಪ್ಪನವರದ್ದು. ಪತ್ರದಲ್ಲಿ ಟೀಪು, ಔರಂಗಜೇಬ್ ಇನ್ನಿತರ ಮುಸಲ್ಮಾನ ದೊರೆಗಳ ಕ್ರೌರ್ಯದ ವಿವರಣೆ ಕೊಟ್ಟಿದ್ದಾರೆ. ಟೀಪುವಿನ ಕಾಲದಲ್ಲಾದ ಪರ್ಶಿಯನ್ ಬದಲಾವಣೆಗಳ ಪಟ್ಟಿ, ಮತಾಂತರದ ಪಟ್ಟಿ ಕೊಡುತ್ತಾ ಟೀಪುವನ್ನು ಮತಾಂಧನೆಂದು ಘೋಶಿಸಿದ್ದಾರೆ. ಇನ್ನಿತರ ರಾಜ್ಯಗಳಿಲ್ಲದಂತೆ ಕರ್ನಾಟಕದ ಮುಸಲ್ಮಾನರು ಉರ್ದು ಮಾತನಾಡುವುದಕ್ಕೆ ಟೀಪುವಲ್ಲದೇ ಮತ್ತಿನ್ಯಾವ ಕಾರಣವಿದೆ ಎಂದು ಪ್ರಶ್ನಿಸಿದ್ದಾರೆ. ಟಿಪುವಿನ ಇತ್ಯಾತ್ಮಕ ಚಿತ್ರಣ ನೀಡುವ ಲಾವಣಿಗಳಿಗೆ ಐತಿಹಾಸಿಕತೆಯಿಲ್ಲವೆಂದು ಅಪ್ಪಣೆ ಕೊಡಿಸಿದ್ದಾರೆ (ಇದಕ್ಕೆ ಬೇಕಾದ ವಿವರಗಳನ್ನು ಒದಗಿಸಿಲ್ಲ). ಇಷ್ಟೆಲ್ಲಾ ಆದ ನಂತರ ಒಂದು ಮುಖ್ಯ ಪ್ರಶ್ನೆಯನ್ನೆತ್ತಿದ್ದಾರೆ - 'ಸಾಹಿತಿಗೆ ಇತಾಹಸವನ್ನು ಬಳಸುವಾಗ ಎಷ್ಟರಮಟ್ಟಿಗಿನ ಸ್ವಾತಂತ್ರ್ಯವಿದೆ?' - ಎನ್ನುವ ಪ್ರಶ್ನೆ. ಕಾರ್ನಾಡರ ಈ ರೀತಿಯ ಚಿತ್ರಣಗಳಿಗೆ ಅವರಿಗಿರಬಹುದಾದ ಮಾರ್ಕ್ಸಿಸ್ಟ್-ಕಮ್ಯುನಿಸ್ಟ್ ಹಿನ್ನೆಲೆಯನ್ನು ಉಲ್ಲೇಖಿಸಿದ್ದಾರೆ (ಇದು ಏಕಕಾಲದಲ್ಲಿ ಕಾರ್ನಾಡರ ಮತ್ತು ಕಮ್ಯುನಿಸ್ಟರ ಕೆಂಗಣ್ಣಿಗೆ ಗುರಿಯಾದೀತು!). ಕಡೆಯಲ್ಲಿ ಒಂದಿಷ್ಟು ದಿಸ್ಕ್ಲೈಮರ್-ಗಳನ್ನು ಕೊಡುತ್ತಾ - ತಾವು ಶಂಕರಮೂರ್ತಿಗಳ ಹೇಳಿಕೆಗೆ ಬೆಂಬಲ ಕೊಡುತ್ತಿಲ್ಲ, ಈಗಿರುವುದ್ದಕ್ಕಿನ ಭಿನ್ನವಾದ ರೀತಿಯಲ್ಲಿ ಮುಸಲ್ಮಾನ ದೊರೆಗಳ ಕಾಲದ ವಾಸ್ತವಾಂಶಗಳ ಚಿತ್ರಣ ಕೊಡಬೇಕು ಎಂದಿದ್ದರೆ.

ಈ ಪತ್ರವನ್ನೋದಿ ದೀರ್ಘವಾದ ಉಸಿರೊಂದನ್ನೆಳೆದು ಬಿಟ್ಟೆ. ಇನ್ನು ಆಯಿತು, ವಿವಾದ ವಸ್ತುವಿನಿಂದ ದೂರವಾಗಿ ವ್ಯಕ್ತಿಗಳತ್ತಲೇ ಇನ್ನು ಮುಂದೆ ಸುತ್ತುತ್ತದೆ ಎಂದು. ಅಷ್ಟರಲ್ಲೇ ಚಂಪಾರ ಹೇಳಿಕೆ ಬಿಡುಗಡೆಯಾಗಿತ್ತು. ಶಂಕರಮೂರ್ತಿಯವರನ್ನು ಖಂಡಿಸಿದ್ದಲ್ಲದೇ ಅನಂತಮೂರ್ತಿ, ಕಾರ್ನಾಡರನ್ನೂ ಕನ್ನಡದ್ರೋಹಿಗಳೆಂದು ಜರೆಯಲು ಮರೆಯಲಿಲ್ಲ. ಅನಂತಮೂರ್ತಿಯವರಿನ್ನೂ ಮಾತಾಡೇ ಇಲ್ಲವಲ್ಲ ಎಂದು ನೋಡಿದರೆ ಪತ್ರಿಕೆಯಲ್ಲಿ ಅವರ ಹೇಳಿಕೆ ಕೆಳಕಂಡಂತೆ ವರದಿಯಾಗಿತ್ತು - ಇಂತಹ ಸೂಕ್ಷ್ಮವಾದ ವಿಚಾರಗಳ ಕುರಿತು ಎಚ್ಚರದ ಅವಶ್ಯಕತೆಯಿದೆ, ವಸಾಹತುಶಾಹಿ ವಿರುದ್ಧ ಹೋರಾಡಿದ ಹೋರಾಟಗಾರ ಟೀಪು, ಅವನ ಕಾಲದಲ್ಲಿ ಅನೇಕ ಭಾಷೆಗಳ ಬಳಕೆಯಿತ್ತು - ಎಂದು.

ಕಮ್ಯುನಿಸ್ಟ್ ಪಕ್ಷಗಳು ಶಂಕರಮೂರ್ತಿಗಳ ವಜಾಕ್ಕೆ ಆಗ್ರಹಿಸಿವೆ. ವಾಚಕರವಾಣಿಗೆ ಬಂದಿರುವ ಕೆಲ ಪತ್ರಗಳು ಮತ್ತಷ್ಟು ಕೆಲ ಅಂಶಗಳಿಗೆ ಚರ್ಚೆಗೆ ತಂದಿವೆ. ಪತ್ರವೊಂದು ಕರ್ನಾಟಕ ಗೆಜ಼ೆಟಿಯರ್-ಅನ್ನು ಉಲ್ಲೇಖಿಸುತ್ತಾ ಶಂಕರಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿವೆ. ಮತ್ತೊಂದು ಪತ್ರ ಟೀಪುವು ಸಾಮಾನ್ಯರೊಡನೆ ಕನ್ನಡ ಮಾತನಾಡುತ್ತಿದ್ದನ್ನೂ, ಸೈನಿಕರ ಎದೆಯ ಕವಚದ ಮೇಲೆ 'ಟೀಪು ಸುಲ್ತಾನರು' ಎಂದು ಕನ್ನಡದಲ್ಲಿದ್ದನ್ನೂ, ತನ್ನ ನಾಡನ್ನು 'ಕನ್ನಡ ನಾಡು' ಎಂದು ಕರೆಯುತ್ತಿದ್ದನೂ ಉಲ್ಲೆಖಿಸಿದ್ದಾರೆ.

ತಜ್ಞರ ದಿಂಡಿಮ
ಚರ್ಚೆ ಮತ್ತೊಂದು ದಿಕ್ಕೆನೆಡೆ ಸರಿದದ್ದು ಇತಿಹಾಸ ತಜ್ಞರು, ಸಂಶೋಧಕರು ಪ್ರತ್ಯಕ್ಷರಾದಾಗ. ಸಂಶೋಧಕರಾದ ಚಿದಾನಂದ ಮೂರ್ತಿಗಳ ಹೇಳಿಕೆಗಳು ಪ್ರಜಾವಾಣಿಯಲ್ಲಿ ಮತ್ತು ವಿಜಯಕರ್ನಾಟಕದಲ್ಲಿ ವರದಿಯಾದದ್ದು - ಎರಡೂ ಸ್ವಲ್ಪ ಭಿನ್ನಧ್ವನಿಗಳನ್ನು ಹೊಂದಿದ್ದು ನೋಡಿ ಯಾರಿಗಾದರೂ ಗಾಬರಿಯಾಗದಿರದು. ಪ್ರಜಾವಾಣಿಯಲ್ಲಿ ಅವರ ಹೇಳಿಕೆ ವರದಿಯಾದಂತೆ - ಟೀಪು ಕನ್ನಡದ ಪರವಾಗಿರಲಿಲ್ಲ, ಪರ್ಷಿಯನ್ ಭಾಷೆಯನ್ನು ಆಡಳಿತಭಾಷೆಯಾಗಿ ಜಾರಿಗೊಳಿಸಿದ, ಎಲ್ಲೆಲ್ಲಿ ಕನ್ನಡ ಬಳಸಿದನೋ ಅದೆಲ್ಲಾ ಭಕ್ತಿ ಅಥವಾ ಅಭಿಮಾನಗಳಿಂದಲ್ಲದೇ ಕೇವಲ ಅನುಕೂಲಕ್ಕಾಗಿ ಬಳಸಿದ, ಅನ್ಯಮತಗಳ ಕುರಿತು ಸೇಡಿನ ಭಾವವನ್ನು ಹೊಂದಿದ್ದ, ಕ್ರೌರ್ಯ ಹೊಂದಿದ್ದ, ತನ್ನ ಮತದ ಕುರಿತು ಅತಿಯಾದ ಅಭಿಮಾನ ಹೊಂದಿದ್ದ - ಎಂದಿದ್ದಾರೆ, ಪೂರಕವಾಗಿ ಇತಿಹಾಸಕಾರ ಹಯವದನರಾವ್-ರನ್ನು ಉಲ್ಲೇಖಿಸಿದ್ದಾರೆ (ಕಾರ್ನಾಡ್ ತಮ್ಮ ಟೀಪು ನಾಟಕದಲ್ಲಿ ಇದನ್ನು ಬ್ರಿಟಿಷರ ಪರವಾಗಿ ಪೂರ್ವಗ್ರಹಪೀಡಿತವಾದ ಪುಸ್ತಕ ಎಂದಿದ್ದಾರೆ). ಅತ್ಯಾಶ್ಚರ್ಯಕರ ರೀತಿಯಲ್ಲಿ ಅವರ ಹೇಳಿಕೆ ಮುಂದುವರೆದು - "ಆದರೆ ಅವನನ್ನು ಕನ್ನಡ ವಿರೋಧಿ ಎಂದು ಕರೆಯಲಾರೆ" ಎಂದಿದ್ದಾರೆ - ಎಂದು ವರದಿಯಾಗಿದೆ. ಆದರೆ ವಿಜಯಕರ್ನಾಟಕದಲ್ಲಿ ಮಾತ್ರ ಚಿಮೂ ಹೇಳಿಕೆ ಮಿಕ್ಕ ಸಾಮಾನ್ಯ ವಿವರಗಳನ್ನು ಬಿಟ್ಟು "ಟೀಪು ಕನ್ನಡವಿರೋಧಿಯಷ್ಟೇ ಅಲ್ಲ, ಉಗ್ರಗಾಮಿ, ಅತಾಂಧ, ಅವನ ಕಾಲದಲ್ಲಿ ಕನ್ನಡದ ಅಭಿವೃದ್ಧಿಯಾಗಿರಲಿಲ್ಲ - ಎಂದು ಚೀಮೂ ದೂರಿದ್ದಾರೆ" ಎಂದು ವರದಿಯಾಗಿದೆ. ಚಿಮೂ ವರದಿಗಳಲ್ಲಿನ ಈ ಭಿನ್ನತೆಗಳನ್ನು ಖಂಡಿಸಿಲ್ಲ ಎನ್ನುವುದು ಕೂಡಾ ದುರ್ದೈವದ ಸಂಗತಿ.

ಇತಿಹಾಸಕಾರರಾದ ಸೂರ್ಯನಾಥ ಕಾಮತ್ - ಭೈರಪ್ಪ ಹೇಳಿಕೆಯಲ್ಲಿ ತಪ್ಪಿಲ್ಲ, ಟೀಪುವನ್ನು ಕನ್ನಡ ದ್ರೋಹಿ ಎಂದು ನಾನು ಹೇಳುವುದಿಲ್ಲ. ಆದರೆ, ೧೭೯೨ರ ನಂತರ ಆತ ಕನ್ನಡ ಪ್ರೇಮಿ ಎನ್ನುವುದಕ್ಕೆ ದಾಖಲೆ ಸಿಗುವುದು ಕಷ್ಟ, ಅವನ ಕಾಲದ ಆಡಳಿತ ಭಾಷೆಯ ಬದಲಾವಣೆಯಿಂದ ಆರ್ಥಿಕ ಆದಾಯ ಕುಸಿಯಿತು ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ದಾಖಲೆಗಳಿವೆ ಎಂದಿದ್ದಾರೆ (ಗೋವಿಂದರಾವ್ ಮುಂತಾದವರು ಸೂರ್ಯನಾಥ ಕಾಮತರು ಇತಿಹಾಸವನ್ನು ತಿರುಚಿ ಗೆಜ಼ೆಟಿಯರನ್ನು ವಿಕೃತಿಗೊಳಿಸಿದ್ದಾರೆ ಎಂದು ದೂರಿದ್ದಾರೆ, ಅದಕ್ಕೆ ಪೂರಕವಾದ ದಾಖಲೆಗಳನ್ನು, ವಿವರಗಳನ್ನು ಒದಗಿಸಿಲ್ಲ). ಪ್ರೊ|| ಶೆಟ್ಟರ್ ಅಪಾರವಾದ ಎಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ. ಟೀಪು ಅನೇಕ ತಪ್ಪುಗಳನ್ನು ಮಾಡಿರಬಹುದು ಅಷ್ಟರಿಂದಲೇ ಅವನ ಸಂಪೂರ್ಣ ವ್ಯಕ್ತಿತ್ವವನ್ನು ಅಳೆಯಲಾಗದು. ಹಿಂದೆ ಯಾರೂ ಮಾಡಿಲ್ಲದ ಒಳ್ಳೆಯ ಕೆಲಸಗಳು ಅವನ ಕಾಲದಲ್ಲಾಗಿದೆ. ತೆಲೆಗು ತಮಿಳುಗಳನ್ನು ಅಪಾರವಾಗಿ ಪ್ರೋತ್ಸಾಹಿಸಿರುವ ಕೃಷ್ಣದೇವರಾಯನನ್ನು ಕನ್ನಡ ದ್ರೋಹಿ ಎಂದು ಕರೆಯಲಾಗುತ್ತದೆಯೇ? ಎಂದಿದ್ದಾರೆ. (ಒಟ್ಟಿಡೀ ವಿವಾದದಲ್ಲಿ ನನಗೆ ಕಂಡ ವಿವೇಕಯುತವಾದ ನಿಲುವು ಶೆಟ್ಟರ್-ರದ್ದೇ). ಕೋ ಚೆನ್ನಬಸಪ್ಪನವರು ಭೈರಪ್ಪನವರ ಹೇಳಿಕೆಗಳು ನಾಗೆಪಾಟಲಿನ ಮಾತುಗಳು, ತಿತಾ ಶರ್ಮರ 'ಮೈಸೂರಿನ ಇತಿಹಾಸದ ಹಳೇಯ ಪುಟಗಳು' ಎಲ್ಲರೂ ತೆಗೆದು ನೋಡಬೇಕು (ಈ ಪುಸ್ತಕ ನನ್ನ ಕೈಗೆ ಸಿಕ್ಕಿಲ್ಲ). ವಾಟಾಳ್ ನಾಗರಾಜರು ತಮ್ಮದೇ ಆದ ಶೈಲಿಯಲ್ಲಿ 'ಶಂಕರಮೂರ್ತಿಗಳನ್ನು ನಾನೇ ಆಸ್ಪತ್ರೆಗೆ ಸೇರಿಸುತ್ತೇನೆ' ಎಂದು ಒಂದಿಷ್ಟು ಮನರಂಜನೆ ಒದಗಿಸಿದ್ದಾರೆ. ಬರಗೂರರೂ ಸಹ 'ಇಂದಿನ ಮಾನದಂಡಗಳಿಂದ ಅಂದಿನ ವಿದ್ಯಮಾನಗಳನ್ನು ಅಳೆಯಬಾರದು' (ಇದನ್ನು ಈ ವಿಷಯವಲ್ಲದೇ ಮಿಕ್ಕ ವಿಷಯಗಳಿಗೆ ಅನ್ವಯಿಸುವುದಕ್ಕೆ ಬರಗೂರು ಸಿದ್ಧರೆ ಎನ್ನುವುದು ನನಗೆ ಮನವರಿಕೆಯಾಗಿಲ್ಲ). - ಸುಮಾರು ತೂಕದ ಮಾತುಗಳನ್ನೇ ಆಡಿದ್ದರೆ. ಆದರೆ 'ಟೀಪು ಕನ್ನಡವನ್ನು ಹತ್ತಿಕ್ಕಲಿಲ್ಲ ಎನ್ನುವುದು ಮುಖ್ಯ' ಎಂದಿದ್ದಾರೆ. (ಆಡಳಿತ ಭಾಷೆಯಾಗಿ ಪರಿಶಿಯನ್ ಭಾಷೆ ಜಾರಿಗೆ ತಂದದ್ದು ಕನ್ನಡವನ್ನು ಹತ್ತಿಕ್ಕಿದಂತಾಗಲಿಲ್ಲವೇ ಎನ್ನುವುದನ್ನು ಅವರು ವಿವರಿಸಿಲ್ಲ). ಪ್ರೊ|| ಶೇಷಗಿರಿರಾಯರು ಮೇಲ್ನೋಟಕ್ಕೆ ಎಚ್ಚರದಿಂದ ಮಾತನಾಡುತ್ತಿದ್ದಾರೆ ಎನ್ನುವಂತಿದ್ದರೂ ಅವರು ಏನನ್ನೋ ಹೇಳುವುದನ್ನು ಮರೆಮಾಚುತ್ತಿದ್ದಾರೆ ಅನ್ನಿಸುತ್ತಿದೆ. ಅವರು 'ಇತಿಹಾಸವನ್ನು ದಾಖಲೆ ಆಧಾರಗಳಿಂದಲ್ಲದೇ ಕೋಪತಾಪಗಳಿಂದ ತೀರ್ಮಾನಿಸಬಾರದು, ವೋಟ್ ಬ್ಯಾಂಕ್ ಜೊತೆ ಸಾಂಬಂಧ ಕಲ್ಪಿಸಬಾರದು, ಯಾವ ಸಮುದಾಯದವರಾದರೂ ತಾವು ಸತ್ಯವನ್ನು ಸ್ವೀಕರಿಸುವುದಕ್ಕೆ ಶಕ್ತರು ಎಂದು ತೋರಿಸಿಕೊಡಬೇಕು' ಎಂದಿದ್ದಾರೆ. ಈ ನಡುವೆ ವಿಶ್ವ ಮುಸ್ಲಿಂ ಪರಿಶತ್ ಎನ್ನುವ ಹೆಸರಿನಡಿಯ ಲೇಖನವೊಂದು ಶಂಕರಮೂರ್ತಿಗಳ ವಿರುದ್ಧ ಮೊಕದ್ದಮೆ ಹೂಡುವ ಮಾತನ್ನಾಡಿದೆ. ಹಿಂದೂ ಪತ್ರಿಕೆಯಲ್ಲಿರುವ ಲೇಖನವೊಂದು ಟೀಪುವಿನ ಕಾಲದಲ್ಲಾದ ಆಧುನಿಕವೆನ್ನಬಹುದಾದ ಬೆಳವಣಿಗೆಗಳು, ಮೇಲ್ವರ್ಗದವರ ಹಿಡಿತದಿಂದ ಹೆಚ್ಚಿನ ಬಿಡುಗಡೆ ಪಡೆದುಕೊಂಡ ಕೆಳವರ್ಗಗಳು ಮತ್ತು ಆ ಪ್ರಕ್ರಿಯೆಗಳನ್ನು ವಿವರಿಸಿದೆ.

ಕಾರ್ನಾಡರ ಎದಿರೇಟಿನ ಪ್ರಯತ್ನ
ಈ ಮೊದಲು ಪತ್ರಿಕಾ ಹೇಳಿಕೆ ಇತ್ಯಾದಿಗಳಿಗೆ ತೊಡಗಿದ್ದ ಕಾರ್ನಾಡರು ಭೈರಪ್ಪನವರ ಪತ್ರಕ್ಕೆ ಪ್ರತಿಕ್ರಿಸಿದ್ದಾರೆ. ನಿರಾಸೆ ಮೂಡಿಸುವಂತಹ ಉತ್ತರವಾದರೂ ಪತ್ರದಿಂದಲೇ ಉತ್ತರಿಸಿದ್ದು ವಿವೇಕಯುತವಾದ್ದಾಗಿತ್ತು. ಪತ್ರದ ಸಾರಾಂಶ ಇಷ್ಟು. ತಮ್ಮ ನಾಟಕಗಳನ್ನೋದಿ ಭೈರಪ್ಪನವರು ದಿಢೀರ್ ಇತಿಹಾಸಜ್ಞರಾಗುವಂತಹ ಪರಿಣಾಮ ಬೀರಿರುವುದನ್ನು ನೋಡಿ ಕಾರ್ನಾಡರು ದಿಗಿಲಾಗಿದ್ದಾರೆ. ತಮಗೆ ಇತಿಹಾಸದ ಮೊಹಮ್ಮದ್-ನಲ್ಲಿ ಆಸಕ್ತಿಯಿಲ್ಲ, ಒಂದು ಮನರಂಜನಾತ್ಮಕ ನಾಟಕ ಬರೆಯುವುದಿತ್ತು, ಸಂಕೀರ್ಣವಾದ ಪಾತ್ರವೊಂದರ ರಚನೆಗೆ ತುಘಲಕ್-ನಲ್ಲಿ ಎಷ್ಟು ಸಾಮಗ್ರಿ ಸಿಕ್ಕಿತೋ ಅಷ್ಟನ್ನು ಬಳಸಿಕೊಂಡಿದ್ದೇನೆ, ನನ್ನ ತುಘಲಕ್ ಒಂದು ಕಾಲ್ಪನಿಕ ಪಾತ್ರ, ಐತಿಹಾಸಿಕವಲ್ಲ ಎಂದಿದ್ದಾರೆ (ಭೈರಪ್ಪನವರು ಇದನ್ನು ಗಮನಿಸಿಯೂ ಕಲಾವಿದನ ಐತಿಹಾಸಿಕ ನಿಷ್ಠೆಯ ಕುರಿತು ಎತ್ತಿರುವ ಪ್ರಶ್ನೆ ಮುಖ್ಯವೇ ಅಲ್ಲವೆಂಬಂತೆ ಸುಮ್ಮನಿದ್ದುಬಿಟ್ಟಿದ್ದಾರೆ). ಮುಂದುವರೆದು, ಭೈರಪ್ಪನವರ ಇತಿಹಾಸದ ಕುರಿತು ಮಾತನಾಡುವ ಧಾರ್ಷ್ಟ್ಯವನ್ನು ಟೀಕಿಸಿದ್ದಾರೆ. ಈ ಅವಕಾಶವನ್ನು ಬಳಸಿ ಭೈರಪ್ಪನವರ ಕಾದಂಬರಿಯಲ್ಲಿರುವ ಹಿಂದೂತ್ವದ ವಿಚಾರಧಾರೆಯ ಅನಾವರಣಗೊಳಿಸಿದ್ದಾರೆ. ಬಾಬರಿ ಮಸೀದಿಯ ಸಮಯದಲ್ಲಿ ಭೈರಪ್ಪನವರಾಡಿದ ಸಂವೇದನಾರಹಿತ ಮಾತನ್ನು ಉಲ್ಲೇಖಿಸಿ, ಹಂಗಿಸಿ, ಇತಿಹಾಸ ಟೀಪು ಕುರಿತು ಮಾತನಾಡುವ ನೈತಿಕ ಅಧಿಕಾರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಕಡೆಯಲ್ಲಿ ತಾವೇ ನಿರ್ದೇಶಿಸಿದ ವಂಶ-ವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರಗಳ ಕುರಿತು ತಮಗಿರುವ ತಾತ್ವಿಕ ಅಸಹನೆಯನ್ನು ಮೊದಲಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ (ಈ ಚಿತ್ರಗಳಲ್ಲಿ ಕಾರ್ನಾಡ್ ಮಾಡಿರುವ ಬದಲಾವಣೆಗಳೇ ನನಗೆ ಹೆಚ್ಚು ಇಷ್ಟ!). ಇಷ್ಟಾಗಿಯೂ ಭೈರಪ್ಪನವರನ್ನು ಸಮರ್ಥ ಕಾದಂಬರಿಕಾರ ಎಂದು ಒಪ್ಪಿಕೊಳ್ಳುವಷ್ಟು ಎಚ್ಚರ ಹೊಂದಿದ್ದಾರೆ ಕಾರ್ನಾಡರು. ಇಷ್ಟೆಲ್ಲ ಪ್ರತಿಕ್ರಿಯೆಗಳು, ಹೇಳಿಕೆಗಳು ಇತ್ಯಾದಿಗಳನ್ನು ಓದುವಾಗ ಕನ್ನಡ ಭಾಷೆಯ ಅತ್ಯುತ್ತಮ ಬಳಕೆ ನನಗೆ ಕಂಡದ್ದು ಕಾರ್ನಾಡರ ಪತ್ರದಲ್ಲೇ! ಇದಕ್ಕೆ ಸಮಯವಲ್ಲವಾದ್ದರಿಂದ ಈ ಕುರಿತು ಮುಂದುವರೆಸುವುದಿಲ್ಲ.

ಮತ್ತೊಂದಿಷ್ಟು ಸಂವಾದಗಳು
ಈ ನಡುವೆ 'ಟೀಪು ಕನ್ನಡ ಪ್ರೇಮಿಯೇ?' ಎನ್ನುವ ಒಂದು ವಿಚಾರ ಸಂಕಿರಣ ನಡೆದಿದೆ. ಚಿಮೂ ತಮ್ಮ ಮೊದಲ ಹೇಳಿಕೆಗಳನ್ನೇ ಮತ್ತೆ ವಿವರಿಸಿ ಟೀಪುವನ್ನು ಕನ್ನಡ ಪ್ರೇಮಿ ಅಥವಾ ದೇಶಪ್ರೇಮಿ ಎಂದು ಕರೆಯಲಾಗದು ಎಂದಿದ್ದಾರೆ. ಪ್ರೊ|| ಶೆಟ್ಟರ್ ಮಾತನಾಡಿ ಟೀಪು ದೇಶದ ಅಗ್ರಗಣ್ಯ ರಾಜ ಎನ್ನುವುದರಲ್ಲಿ ಅನುಮಾನ ಬೇಡ, ಆತನ ಕೆಲ ತಪ್ಪು ತೀರ್ಮಾನಗಳಿಂದ ಇಡಿಯ ವ್ಯಕ್ತಿತ್ವವನ್ನು ಅಳೆಯುವುದು ಬೇಡ, ಕನ್ನಡ ವಿರೋಧಿಯಾದ ಆದೇಶ ಹೊರಡಿಸಿದ ನಿದರ್ಶನಗಳಿಲ್ಲ, ಕಾಲಕ್ಕನುಗುಣವಾಗಿ ನಡೆದಿದ್ದಾನೆ, ಈ ದಾರಿ ಹಿಡಿದರೆ ನಾವು ಕೃಷ್ಣದೇವರಾಯ, ಅಶೋಕರಲ್ಲೂ ತಪ್ಪು ಕಂಡುಹಿಡಿಯುವುದು ಸಾಧ್ಯವಿದೆ ಎಂದಿದ್ದಾರೆ. ಇವೆಲ್ಲಾ ಹೆಚ್ಚು ಕಡಿಮೆ ಈ ಮೊದಲೇ ಅವರು ಕೊಟ್ಟು ಹೇಳಿಕೆಗಳಾಗಿವೆ. ಪ್ರೊ|| ಮಮ್ತಾಜ್ ಅಲಿ ಖಾನ್ ಮಾತನಾಡಿ ಇದೆಲ್ಲಕ್ಕಿಂತ ನಾವು ಎಷ್ಟರಮಟ್ಟಿಗೆ ಕನ್ನಡಾಭಿಮಾನಿಗಳಾಗಿದ್ದೇವೆ ಎನ್ನುವುದು ಮುಖ್ಯವೆಂದಿದ್ದಾರೆ. ಹಾರನಹಳ್ಳಿ ರಾಮಸ್ವಾಮಯ್ಯನವರು ಯಾರನ್ನೂ ಓಲೈಸುವುದಕ್ಕಾಗೇ ಚರಿತ್ರೆ ಬರೆಯುವ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ಎದಿರೇಟು
ಈಗ ಈ ಚರ್ಚೆ ಒಂದು ವಿಚಿತ್ರ ಸ್ಥಿತಿಯನ್ನು ತಲುಪಿದೆ. ವಿಜಯಕರ್ನಾಟಕದ ಕಾರ್ನಾಡರ ಪತ್ರಕ್ಕೆ ಸುಮತೀಂದ್ರ ನಾಡಿಗರ ಪ್ರತಿಕ್ರಿಯೆ ಅದೇ ಪತ್ರಿಕೆಯಲ್ಲಿ ಬಂದಿದೆ. ಅದರ ಮುಖ್ಯ ಉದ್ದೇಶ ಕಾರ್ನಾಡರ ನಿಲುವುಗಳನ್ನು ಟೀಕಿಸುವುದಾಗಿದೆ. ಭೈರಪ್ಪನವರ ನಿಲುವುಗಳನ್ನು ಸಮರ್ಥಿಸಿದ್ದಾರೋ ಇಲ್ಲವೋ ತಿಳಿಯುವುದಿಲ್ಲವಾದರೂ, ಹಾಗೆ ಇರಬಹುದು ಎಂದು ಹೇಳಬಹುದಾಗಿದೆ. ನೆಹರೂಪ್ರಣೀತ ಎಡಪಂಥೀಯತೆಯನ್ನು ತೀವ್ರವಾಗಿ ಟೀಕಿಸುತ್ತಾ ಆ ಪರಂಪರೆಯಲ್ಲಿ ಕಾರ್ನಾಡರನ್ನು ಗುರುತಿಸಿದ್ದಾರೆ. ಪರಮಹಂಸ, ವಿವೇಕಾನಂದ-ರ ಪರಂಪರೆಯನ್ನು ಅಭ್ಯಸಿಸುವುದು ಆ ಪರಂಪರೆಯಲ್ಲಿ ಮುಂದುವರೆದವರನ್ನು ಗುರುತಿಸುವುದು ಇವರಿಗೆ ಸಾಧ್ಯವಿಲ್ಲವೆನ್ನುವುದು ನಾಡಿಗರ ಅಳಲು. ಭೈರಪ್ಪನವರ ಕುರಿತು ಅಪಮೌಲ್ಯೀಕರಣಾ, ನಿಂದನೆ, ಬೈಗುಳದ ದಾರಿಯನ್ನು ಹಿಡಿದಿರುವ ಕಾರ್ನಾಡರನ್ನು ಟೀಕಿಸಿದ್ದಾರೆ. ಭೈರಪ್ಪನವರ ಕಾದಂಬರಿಗಳ ಕುರಿತಾದ ವಿರೋಧಾಭಾಸಕರ ಗ್ರಹಿಕೆಯನ್ನು ಕಾರ್ನಾಡರ ಪ್ರತಿಕ್ರಿಯೆಯಲ್ಲಿ ಗುರುತಿಸಿದ್ದಾರೆ. ಕಾರ್ನಾಡರನ್ನು ನಮ್ಮ ಸಂಸ್ಕೃತಿಯ ಹೊರಗಿನವರಾಗಿ ಗುರುತಿಸುವಂತಹ ಕಷ್ಟದ ಕೆಲಸಕ್ಕೆ ಇಳಿದಿದ್ದಾರೆ. ಶಂಕರಮೂರ್ತಿಗಳು ಅಂತಹ ಹೇಳಿಕೆಯನ್ನು ಕೊಡುವುದಕ್ಕೆ ಇರಬಹುದಾದ ತಾತ್ವಿಕ, ಬೌದ್ಧಿಕ ಸಮರ್ಥನೆಯನ್ನು ಶೋಧಿಸಿದ್ದಾರೆ. ಒಂದು ಮುಖ್ಯವಾದ ಪ್ರಶ್ನೆಯನ್ನು ಎತ್ತಿ ಬುದ್ಧಿಜೀವಿಗಳೆಲ್ಲಾ ಈ ಕುರಿತು ಚರ್ಚಿಸುವಂತೆ ಶಂಕರಮೂರ್ತಿಗಳು ಮಾಡಿರುವುದು ಒಂದು ಗಮನಾರ್ಹವಾದ ಕೆಲಸ ಎನ್ನುವ ಧ್ವನಿ ಅವರ ಬರಹದಲ್ಲಿದೆ. ಭೈರಪ್ಪನವರು ಸಾಹಿತಿಯ ಐತಿಹಾಸಿಕ ಬದ್ಧತೆ ಮತ್ತು ಸ್ವಾತಂತ್ರ್ಯದ ಕುರಿತು ಎತ್ತಿರುವ ಪ್ರಮುಖವಾದ ಪ್ರಶ್ನೆಯನ್ನು ಕಾರ್ನಾಡರು ಉತ್ತರಿಸಿಲ್ಲದಿರುವುದನ್ನು ಗಮನಿಸಿದ್ದಾರೆ. ಕಾರ್ನಾಡರ 'ಟೀಪು ಕಂಡ ಕನಸುಗಳು' ನಾಟಕಕ್ಕೆ ಸಿ‍ಎನ್‍ಆರ್ ಬರೆದಿರುವ ವಿಮರ್ಶೆಯನ್ನು ಉಲ್ಲೇಖಿಸಿದ್ದಾರೆ. ಭೈರಪ್ಪನವರು ಇತಿಹಾಸದ ಕುರಿತು ಮಾತನಾಡುವ ನೈತಿಕತೆಯನ್ನು ಪ್ರಶ್ನಿಸಿರುವ ಕಾರ್ನಾಡರು ಭೈರಪ್ಪನವರು ಸಾಹಿತಿಯ ಹೊಣೆಗಾರಿಕೆಯನ್ನು ಪ್ರಶ್ನಿಸಿರುವುದನ್ನು ಉತ್ತರಿಸಿಲ್ಲದಿರುವುದನ್ನು ಗಮನಿಸಿದ್ದಾರೆ. ಕಡೆಗೆ ಸಾಂಸ್ಕೃತಿಕ ಲೋಕದ ಗುಂಪುಗಾರಿಕೆ, ಸ್ವಪ್ರತಿಷ್ಠೆಗಳ ಕುರಿತು ವಿಷಾದಿಸಿದ್ದಾರೆ. ಭಾರತದಲ್ಲಿಯೇ ಹುಟ್ಟಿ ಹೊರಗಿನವರಾದ ಕಾರ್ನಾಡರನ್ನೂ ಅಮೇರಿಕದಲ್ಲಿ ಹುಟ್ಟಿ ಭಾರತಕ್ಕೆ ಒಳಗಿನವರಾದ ದೇವಿಡ್ ಫ್ರಾಲಿಯವರನ್ನೂ ಹೋಲಿಸಿ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಇಷ್ಟನ್ನೆಲ್ಲಾ ನಾನು ೨೦೦೬ ಅಕ್ಟೋಬರ್ ೨ - ಗಾಂಧಿ ಜಯಂತಿಯಂದು ಬರೆಯುವುತ್ತಿರುವುದು ಕೇವಲ ಆಕಸ್ಮಿಕ. ಆ ನಂತರವೂ ಸಹ ಶತಾವಧಾನಿ ಗಣೇಶರು ಒಂದು ವಿವರವಾದ ಪತ್ರ ಬರೆದಿದ್ದಾರೆ. ವಿಜಯಕರ್ನಾಟಕದಲ್ಲಂತೂ ಕಾರ್ನಾಡರ ಪತ್ರವನ್ನು ಟೀಕಿಸಿ ಬಂದ ಪತ್ರಗಳು ಎರಡು ದಿನ ಒಂದು ಸಮ್ಪೂರ್ಣ ಪುಟದಷ್ಟು ಬಂದಿವೆ. ಅದೆಲ್ಲವನ್ನೂ ಸಂಗ್ರಹಿಸಲು ನನಗೆ ಸಾಧ್ಯವಾಗಿಲ್ಲ. ಮಹನೀಯರೆಲ್ಲರ ಹೇಳಿಕೆಗಳಲ್ಲಿ ನನಗೆ ಅನೇಕ ಸರಿ, ಕೆಲ ತಪ್ಪುಗಳು ಕಂಡಿವೆ. ಬೌದ್ಧಿಕವಾದದ್ದಲ್ಲದೇ, ನಡವಳಿಕೆ, ಅಭಿವ್ಯಕ್ತಿ ರೂಪಗಳಲ್ಲಿ ತಪ್ಪುಗಳು ನನ್ನಂತಹ ಅನಾಮಧೇಯನಿಗೆ ಸ್ಪಷ್ಟವಾಗಿ ಕಾಣುತ್ತಿರುವುದು ಮಾತ್ರ ದುಃಖದ ವಿಷಯ. ಲೇಖನದ ಮೊದಲಲ್ಲಿ ನಾನುಪ್ರಸ್ತಾಪಿಸಿದ ವಿಷದದ ಈ ಕಾರಣದಿಂದಲೇ.

ಮುಂದುವರೆಯುವುದು...