ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Friday, January 11, 2019

ತ್ರಿಪುರ ದಹನ, ತ್ರಿಪುರಾಂತಕ ಶಿವ

ದೇವತಾ ಸೇನಾಪತಿಯಾದ ಕಾರ್ತಿಕೇಯನು ತಾರಕಾಸುರನನ್ನು ಸಂಹರಿಸಿದನು. ತಮ್ಮ ನಾಯಕನನ್ನು ಕಳೆದುಕೊಂಡ ಅಸುರರು ಬೆದರಿ ದಿಕ್ಕಾಪಾಲಾಗಿ ಹರಿದು ಹಂಚಿಹೋದರು. ಸ್ವಲ್ಪ ಸಮಯದ ನಂತರ ತಾರಕನ ಮಕ್ಕಳಾದ ತಾರಕಾಕ್ಷ, ವಿದ್ಯುನ್ಮಾಲಿ ಮತ್ತು ಕಮಲಾಕ್ಷ ಘೋರ ತಪಸ್ಸಿಗೆ ಮೊದಲಾದರು. ತಪಸ್ಸಿನಲ್ಲಿ ಅನೇಕ ಋತುಗಳನ್ನು ಕಳೆದರು. ಅವರ ದೇಹ ಎಷ್ಟರಮಟ್ಟಿಗೆ ಕೃಶವಾಯಿತೆಂದರೆ ರಕ್ತನಾಳಗಳೂ ಸಹ ಬರಿಗಣ್ಣಿಗೆ ಕಾಣತೊಡಗಿದವು. ಕಡೆಗೊಮ್ಮೆ ಚತುರ್ಮುಖ ಬ್ರಹ್ಮನಿಗೆ ಅವರಿಗೊಲಿಯದೆ ವಿಧಿಯಿಲ್ಲದಾಯಿತು. ಪ್ರತ್ಯಕ್ಷನಾದ ಬ್ರಹ್ಮದೇವ "ನಿಮ್ಮ ಕಠಿಣ ತಪಸ್ಸಿಗೆ ಮೆಚ್ಚಿದ್ದೇನೆ, ನಿಮ್ಮ ಇಷ್ಟಾರ್ಥವೇನು?" ಎಂದು ವಿಚಾರಿಸಿದನು. "ದೇವದೇವ, ನಮ್ಮ ತಂದೆ ಹತನಾಗಿದ್ದಾನೆ. ನಾವು ರಾಜ್ಯವನ್ನು ಕಳೆದುಕೊಂಡಿದ್ದೇವೆ. ನಮಗೆ ಎನ್ನುವ ಒಂದು ಸ್ಥಳವಿಲ್ಲ. ನಿನ್ನ ದಯೆಯಿಂದ ನಾವು ಒಂದು ನಗರವನ್ನು ನಿರ್ಮಿಸಬೇಕೆಂದಿದ್ದೇವೆ. ಆದರೆ ಇಂತಹ ನಗರವೆಂದರೆ ಅದು ಅಬೇಧ್ಯವಾಗಿರಬೇಕು ಮತ್ತು ಶಾಶ್ವತವಾಗಿರಬೇಕು" ಎಂದರು ಅಸುರರು. ಯಥಾಪ್ರಕಾರ ಬ್ರಹ್ಮನು ನಸುನಕ್ಕನು. "ಅಸುರರೇ, ಯಾವುದೂ ಶಾಶ್ವತವಾಗಿರಲಾರದು" ಎಂದನು.  "ಸರಿ ಹಾಗಿದ್ದ ಪಕ್ಷದಲ್ಲಿ ನಾವು ಮೂರು ನಗರಗಳನ್ನು ನಿರ್ಮಿಸುತ್ತೇವೆ. ಅವು ಮೂರೂ ಒಂದೇ ಒಂದು ಬಾಣ ಪ್ರಯೋಗದಲ್ಲೇ  ನಿರ್ನಾಮವಾಗುವಂತಿರಬೇಕು." ಎಂದರು ಚಾಣಾಕ್ಷ ಅಸುರರು. ಒಂದು ಬಾಣ ಪ್ರಯೋಗಕ್ಕೆ ಎಟುಕದಂತಹ ಮೂರು ನಗರಗಳನ್ನು ನಿರ್ಮಿಸಿದರಾಯಿತು ಎನ್ನುವುದು ಅವರ ಲೆಕ್ಕಾಚಾರ. "ತಥಾಸ್ತು, ಅಸುರ ಶಿಲ್ಪಿಯಾದ ಮಾಯಾಸುರನ ಸಹಾಯದಿಂದ ಅಂತಹ ನಗರವೊಂದನ್ನು ನಿರ್ಮಿಸಿಕೊಳ್ಳಿ" ಎಂದ ಬ್ರಹ್ಮದೇವ ಅಂತರ್ಧಾನನಾದನು. 

ಮಹತ್ತರವಾದುದನ್ನು ಸಾಧಿಸಿದ ವಿಜಯೋತ್ಸಾಹದಲ್ಲಿ ಅಸುರರು ವಾಪಸಾದರು. ಮಾಯಾಸುರ ಅವರಿಗೋಸ್ಕರ ಮೂರು ಅಭೇದ್ಯವಾದ ನಗರಗಳನ್ನು ನಿರ್ಮಿಸುವುದಕ್ಕೆ ತೊಡಗಿದ. ಮೂರು ಮಹಡಿಗಳಂತೆ ಮೂರು ನಗರಗಳು ಸಿದ್ಧವಾದವು. ಮೊದಲನೆಯದು ಕಬ್ಬಿಣದ ನಗರ. ಮಧ್ಯದ್ದು ಬೆಳ್ಳಿ ಮತ್ತು ಮೂರನೆಯದು ಚಿನ್ನದ ನಗರಿ. ಮೊದಲನೆಯದ್ದು ಭೂಮಿಯ ಮೇಲಿದ್ದರೆ, ಎರಡನೆಯದು ಆಕಾಶದಲ್ಲಿ ಮತ್ತು ಮೂರನೆಯದ್ದು ಸ್ವರ್ಗಲೋಕಕ್ಕೆ ಚಾಚಿಕೊಂಡಿತ್ತು. ಹೆಮ್ಮೆಯಿಂದ ನಗರಗಳನ್ನು ನೋಡಿದ ಅಸುರಾಧೀಶರು ಅದಕ್ಕೆ ತ್ರಿಪುರ ಎಂದು ನಾಮಕರಣ ಮಾಡಿದರು. ಮೂರು ನಗರಗಳು ಸದಾ ತೇಲುತ್ತಾ, ಚಲಿಸುತ್ತಾ  ಇರುತ್ತವೆ. ಅಷ್ಟಲ್ಲದೇ ಅವು ಒಂದು ನೇರ ರೇಖೆಗೆ ಸಾವಿರ ವರ್ಷಕ್ಕೊಮ್ಮೆ ಮಾತ್ರ ಬರುತ್ತವೆ. ಹಾಗೆ ಬರುವುದು ಪುಷ್ಯ ನಕ್ಷತ್ರ ಚಂದ್ರನನ್ನು ಸೇರಿದಾಗ ಮಾತ್ರ ಎಂದನು ಮಾಯಾಸುರ. "ಹಾಗಿದ್ದರೆ ಸಾವಿರ ವರ್ಷಕ್ಕೊಮ್ಮೆ ಅಪಾಯ ಬರುವ ಸಾಧ್ಯತೆಯಿದೆ ಎಂದಹಾಗಾಯಿತು" ಎಂದರು ರಾಕ್ಷಸರು. "ಹೆದರಬೇಡಿ, ಸಾವಿರವರ್ಷಕ್ಕೊಮ್ಮೆ ನೇರ ರೇಖೆಗೆ ಬಂದರು ಸಹ ಒಂದು ಗಳಿಗೆ ಕಾಲಕ್ಕೂ ಕಡಿಮೆ ಅವು ನೇರ ರೇಖೆಯಲ್ಲಿರುತ್ತವೆ. ಪರಶಿವನಲ್ಲದೆ ಬೇರೆ ಯಾರು ಸಹ ಒಂದು ಬಾಣದಲ್ಲಿ ಅಷ್ಟು ವೇಗವಾಗಿ  ಮೂರು ನಗರಗಳನ್ನು ಧ್ವಂಸ ಮಾಡುವುದು ಸಾಧ್ಯವಿಲ್ಲವೆಂದು" ಬೀಗಿದನು ಮಾಯಾಸುರ. ರಾಕ್ಷಸರು ನಿಟ್ಟುಸಿರಿಟ್ಟರು "ಅಷ್ಟಲ್ಲದೇ, ನಮ್ಮ ಇಷ್ಟದೈವನಾದ ಶಿವನೇ ನಮ್ಮನ್ನು ಏಕಾದರೂ ಕೊಲ್ಲುತ್ತಾನೆ" ಎಂದು ಧೈರ್ಯ ತಂದುಕೊಂಡರು.

ಸ್ವಲ್ಪದರಲ್ಲಿ ಸೃಷ್ಟಿಯ ಸಕಲ ರಾಕ್ಷಸರೂ ಎಲ್ಲೆಡೆಯಿಂದ ತ್ರಿಪುರಾನಗರಿಗೆ ಬಂದು ಸೇರಿದರು. ನಗರಿಗಳಲ್ಲಿ ಭೋಗಜೀವನಕ್ಕೆ ಬೇಕಾದ ಸಕಲವೂ ತುಂಬಿ ತುಳುಕುತ್ತಿತ್ತು. ಮನೆಗಳೆಲ್ಲ ಮಹಲುಗಳಂತೆ ಕಂಗೊಳಿಸುತ್ತಿದ್ದವು. ವನಗಳು, ತೋಟಗಳು, ಕೊಳಗಳು, ತೋಪುಗಳು ಎಲ್ಲವು ಸೇರಿ ನಗರಗಳು ಅಪರಿಮಿತ ಸೌಂದರ್ಯದಿಂದ ತುಂಬಿದ್ದವು. ಅಸುರರು ಸದಾ ತೇಲುತ್ತಾ ಸಾಕಲಾಲೋಕಗಳಲ್ಲಿಯೂ ವಿಹರಿಸುತ್ತಿದ್ದರು. ಮಿತಿಯೇ ಇಲ್ಲದ ಸುಖದಲ್ಲಿ ಜೀವಿಸುತ್ತಿದ್ದರು.

ಇದ್ದಕ್ಕಿದ್ದ ಹಾಗೆ ಒಂದು ದಿನ ಮಾಯಾಸುರನಿಗೆ ಒಂದು ಭೀಕರವಾದ ಕನಸು ಬಿತ್ತು. ಅಸುರಾಯಾಧೀಶರನ್ನು ತಕ್ಷಣ ಭೇಟಿ ಮಾಡಿದವನೇ ಕನಸನ್ನು ವಿವರಿಸತೊಡಗಿದನು. " ನಮ್ಮ ತ್ರಿಪುರ ಇದ್ದಕ್ಕಿದ್ದ ಹಾಗೆ ಅಂಧಕಾರದಲ್ಲಿ ಮುಳುಗಿದ ಹಾಗೂ, ನಮ್ಮೆಲ್ಲರ ಮನೆಗಳಿಗೆ ಸಾಗರದ ನೀರು ಉಕ್ಕಿ ಹರಿದ ಹಾಗೂ ಕನಸು ಕಂಡೆನು. ನಾಲ್ಕು ಕಾಲುಗಳುಳ್ಳ ಮನುಷ್ಯನೊಬ್ಬ ಹಣೆಯಲ್ಲಿ ರಕ್ತವರ್ಣದ ಚೂರ್ಣವನ್ನು ಬಳಿದುಕೊಂಡವನೇ ಸ್ತ್ರೀಯೊಬ್ಬಳನ್ನು ಬೆನ್ನಟ್ಟುತ್ತಿದ್ದ. ಇದೆಲ್ಲವನ್ನು ನೋಡಿದರೆ ನಮಗೆ ಕೇಡುಗಾಲ ಬಂದಹಾಗಿದೆ. ತ್ರಿಪುರಾನಗರಿಗೆ ಏನು ಸಂಚಕಾರವಿದೆ." ಎಂದು ಭಯದಿಂದ ಆತಂಕಗೊಂಡನು ಮಾಯಾಸುರ. ಅಭೇದ್ಯವಾದ ನಮ್ಮ ನಗರಿಗೆ ಏನು ಅಪಾಯವಿರಬಹುದು ಎನ್ನುವುದು ಅವರಿಗೆ ಬಗೆಹರಿಯಲಿಲ್ಲ. "ಇನ್ನು ಮುಂದೆ ಧರ್ಮದ ದಾರಿಯಲ್ಲೇ ನಡೆಯೋಣ. ಎಲ್ಲೆಡೆ ಶಾಂತಿ ಮತ್ತು ನೆಮ್ಮದಿಯಿರುವ ಹಾಗೆ ನೋಡಿಕೊಳ್ಳೋಣ. ಹಾಗಿದ್ದಲ್ಲಿ ಬರಲಿರುವ ಅಪಾಯ ನಿವಾರಣೆಯಾಗಬಹುದು" ಎಂದನು ಮಾಯಾಸುರ.

ಅಸುರಾಧೀಶರು ಪರಾಮರ್ಶಿಸಿದರು. "ನಾವಿಲ್ಲಿ ಪೂರ್ತಿ ಕ್ಷೇಮವೆಂದುಕೊಂಡಿದ್ದೆವಲ್ಲ. ಮಾಯಾಸುರನಾದರೋ ಧರ್ಮದಿಂದಿರಿ ಎನ್ನುತ್ತಿದ್ದಾನೆ. ಆದರೆ ಈ ಹಿಂದೆ ನಮ್ಮ ಪೂರ್ವಜರು ಧರ್ಮದಿಂದಿದ್ದರೂ ಅದರಿಂದ ನಮಗೆ ದೊರೆತುದೇನು?" ಎಂದು ಅಹಂಕಾರದಿಂದ ಹ್ಞೂಕರಿಸಿದರು. ಮನದಾಳದ ನೆಮ್ಮದಿ, ತೃಪ್ತಿಗಳು ಕಳೆದುಹೋದವು. ಕ್ಷೋಭೆಗೊಳಗಾದ ಮನಸ್ಸಿನಲ್ಲಿ ಮತ್ತೆ ಹಗೆ, ದ್ವೇಷಗಳು ತುಂಬಿಕೊಂಡವು. "ಈ ದೇವತೆಗಳು, ಋಷಿಗಳು ನಮ್ಮ ಸಾವಿಗೆ ಹೊಂಚು ಹಾಕುತ್ತಿರಬೇಕು. ನಾವು ಅಭಿವೃದ್ಧಿ ಹೊಂದುತ್ತಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಹಲ್ಲುಕಡಿದರು. 

ಇತ್ತ ಮಾಯಾಸುರನು ತಪಸ್ಸಿನಲ್ಲಿ ನಿರತನಾದರೆ, ಮಾನಸಿಕ ಸಂತುಲವನ್ನು ಕಳೆದುಕೊಂಡ ತಾರಕಾಕ್ಷ, ವಿದ್ಯುನ್ಮಾಲಿ ಮತ್ತು ಕಮಲಾಕ್ಷ ಭೂಲೋಕ, ಸ್ವರ್ಗಲೋಕಗಳಲ್ಲಿ ಹಾಹಾಕಾರ ಮೂಡಿಸಿದರು. ಧ್ವಂಸ, ಲೂಟಿ, ಹಿಂಸೆ, ಕೊಲೆ ಮಾಡುತ್ತಾ ಇದ್ದೀಯ ನಗರಳನ್ನು ನಿರ್ನಾಮ ಮಾಡುವುದಕ್ಕೆ ಶುರುಮಾಡಿದರು. ದೇವತೆಗಳು ತಮ್ಮ ನಾಯಕನಾದ ಇಂದ್ರನ ನೇತೃತ್ವದಲ್ಲಿ ಚತುರ್ಮುಖ ಬ್ರಹ್ಮನನ್ನು ನೋಡಿದರು. ಸೋಲಿಲ್ಲದ ತ್ರಿಪುರಾಸುರರು ನಮ್ಮ ಮೇಲೆ ಪದೇ ಪದೇ ಧಾಳಿ ಮಾಡಿ ಧ್ವಂಸಮಾಡುತ್ತಿದ್ದಾರೆ. ನಿನ್ನ ವಾರದಿಂದ ತ್ರಿಪುರಾನಗರಿ ಅಭೇದ್ಯವಾಗಿದೆ." ಎಂದು ಕೊರಗಿದರು. ಬ್ರಹ್ಮನು "ಹೆದರಬೇಡಿ. ತ್ರಿಪುರಾನಗರಿ ಅಭೇದ್ಯವಲ್ಲ. ಒಂದು ಬಾಣಪ್ರಯೋಗದಿಂದ ಮಾತ್ರ ಅದನ್ನು ನಿರ್ನಾಮ ಮಾಡಬಹುದು. ಆದರೆ ಪರಶಿವನಿಂದ ಮಾತ್ರ ಇದು ಸಾಧ್ಯ. ಅವನ ಸಹಾಯ ಬೇಡೋಣ" ಎಂದನು. ತತ್ಕ್ಷಣವೇ ಕೈಲಾಸಕ್ಕೆ ಹೋಗಿ ಶಿವನನ್ನು ಭೇಟಿ ಮಾಡಿದರು. "ರುದ್ರದೇವನೇ, ನಮಸ್ಕಾರ. ದಿತಿ ಯ ಮಗನಾದ ಮಾಯಾಸುರ ನಿರ್ಮಿಸಿರುವ ತ್ರಿಪುರಾನಗರಿಯನ್ನು ನಿನ್ನಿಂದ ಮಾತ್ರ ಧ್ವಂಸ ಮಾಡುವುದಕ್ಕೆ ಸಾಧ್ಯ. ಅದರಲ್ಲಿ ವಾಸವಾಗಿರುವ ತ್ರಿಪುರಾಸುರರು ಮೂರೂ ಲೋಕಗಳಲ್ಲಿ ಭೀಭತ್ಸರಾಗಿದ್ದಾರೆ. ದಯವಿಟ್ಟು ನಮ್ಮನ್ನು ರಕ್ಷಿಸು" ಎಂದು ಶಿವನನ್ನು ಕೇಳಿಕೊಂಡರು. "ಹೆದರಬೇಡಿ ದೇವತೆಗಳೇ, ರಾಕ್ಷಸರು ಹೀಗೆ ನಡೆದುಕೊಂಡರೆ ಅವರನ್ನು ನಾನು ಖಂಡಿತಾ ಸಂಹರಿಸಿ ತ್ರಿಪುರಾನಗರಿಯನ್ನು ಸುತ್ತು ಬೂದಿ ಮಾಡುತ್ತೇನೆ" ಎಂದು ಆಶ್ವಾಸನೆ ಕೊಟ್ಟನು. ಅದರಿಂದ ಚೇತರಿಸಿಕೊಂಡ ದೇವತೆಗಳು ತ್ರಿಪುರಾನಗರಿಗೆ ಧಾಳಿ ಮಾಡಿದರು.       

ದೇವತೆಗಳನ್ನೆದುರಿಸಲು ತಾರಕಾಕ್ಷ ತನ್ನ ಚಿನ್ನದ ನಗರಿಯಿಂದ ಹಾರಿದನು ಸೇನೆಯೊಡನೆ ಹೊರಬಂದನು. ಮತ್ತೊಂದೆಡೆ ಶಿವನ ಸೇವಕನಾದ ನಂದಿ ಶಿವಗಣಗಳ ಜೊತೆಯಲ್ಲಿ ವಿದ್ಯುನ್ಮಾಲಿಯನ್ನೆದುರಾದನು. ಭೀಕರ ಯುದ್ಧದಲ್ಲಿ ವಿದ್ಯುನ್ಮಾಲಿ ಹತನಾದನು. ಇದನ್ನು ಗಮನಿಸಿದ ಮಾಯಾಸುರ "ಇದೇಕೋ ನಮಗೆ ವಿಪರೀತವಾಗುತ್ತಿದೆ" ಎಂದವನೇ ಅಸುರೀ ಮಾಯೆಗೆ ತೊಡಗಿದ. ಭೀಕರವಾದ ಅಗ್ನಿಯನ್ನು ಸೃಷ್ಟಿಸಿ ದೇವತೆಗಳನ್ನು ಅಡ್ಡಿಪಡಿಸಿದ. ಅವರ ಮೇಲೆ ಕ್ರೂರಪ್ರಾಣಿಗಳನ್ನು ಆಕಾಶದಿಂದ ಬೀಳಿಸಿದ. ಈ ಧಾಳಿಯಿಂದ ದೇವತೆಗಳು ಹಿಮ್ಮೆಟ್ಟಿದರು. ಅಸುರರೂ ಸಹ ಹಿಂದಿರುಗಿ ತ್ರಿಪುರಾನಗರಿಯನ್ನು ಸೇರಿ ಕೋಟೆಯ ಬಾಗಿಲನ್ನು ಭದ್ರಪಡಿಸಿದರು.

ವಿದ್ಯುನ್ಮಾಲಿಯ ಸಾವಿನಿಂದ ತಾರಕಾಕ್ಷ ಬಹಳ ನೊಂದ, ಚಿಂತಿತನಾದ. "ಹೆದರದಿರು ತಾರಕಾಕ್ಷ, ನಾನು ಸೃಷ್ಟಿಸಿರುವ ಆ ಕೊಳದ ನೀರಿನಿಂದ ಸತ್ತವರನ್ನು ಬದುಕಿಸಬಹುದಾಗಿದೆ." ಎಂದನು ಮಾಯಾಸುರ. ತಕ್ಷಣವೇ ವಿದ್ಯುನ್ಮಾಲಿ ಮತ್ತಿತರ ರಾಕ್ಷಸರನ್ನು ಹೊತ್ತು ತಂದು ಬದುಕಿಸಿದರು. "ನಾನೆಲ್ಲಿದ್ದೇನೆ, ಆ ಗೋಲಿಯೆಲ್ಲಿದೆ, ಅದನ್ನು ಈಗಲೇ ಸಂಹರಿಸುತ್ತೇನೆ" ಎಂದು ವಿದ್ಯುನ್ಮಾಲಿ ಅಬ್ಬರಿಸಿದನು. ಪ್ರೀತಿಯ ತಮ್ಮನು ಜೀವಿತನಾದ್ದರಿಂದ ತಾರಕಾಕ್ಷ ಆನಂದ ತುಂದಿಲನಾದನು. "ರಾಕ್ಷಸರೇ, ನಮ್ಮ ಮಾಯಾಸುರ ಮತ್ತು ಈ ಕೊಳ ಇರುವಾತನಕ ನಾವು ಜೀವಭಯ ಪಡಬೇಕಾದ್ದಿಲ್ಲ" ಎಂದು ರಾಕ್ಷಸರನ್ನು ಹುರಿದುಂಬಿಸಿದನು. ಹೊಸಹುರುಪಿನಿಂದ ದೇವತೆಗಳ ಮೇಲೆ ದಾಳಿಗೆ ತಯಾರಾದರು.

ಈ ಬಾರಿ ರಾಕ್ಷಸರ ಧಾಳಿ ಹೇಗಿತ್ತೆಂದರೆ ಭೂಮಿ ತನ್ನ ಆಯತಪ್ಪಿ ಕೆಳಬೀಳತೊಡಗಿತು. ಬ್ರಹ್ಮದೇವನಿಗೆ ಭೂಮಿಯನ್ನು ನಿಯಂತ್ರಿಸುವುದಕ್ಕೆ ಅಸಾಧ್ಯವಾಯಿತು. ಆಗ ಮಹಾವಿಷ್ಣು ಒಂದು ಗೂಳಿಯ ವೇಷಧರಿಸಿ ಭೂಮಿಯನ್ನು ರಕ್ಷಿಸಿ ಯಥಾಸ್ಥಿತಿಗೆ ತಂದನು. ಬ್ರಹ್ಮದೇವ ನಿಟ್ಟುಸಿರುಬಿಟ್ಟನು. ಮತ್ತು ವೇಗವಾಗಿ ಮುನ್ನುಗ್ಗಿದ ಗೂಳಿ ಕೋಟೆಯನ್ನು ಪ್ರವೇಶಿಸಿತು. ರಾಕ್ಷಸರ ರಕ್ಷಣೆಯನ್ನು ಮೀರಿ ಮಾಯಾಸುರ ನಿರ್ಮಿಸಿದ್ದ ಕೊಳದೊಳಗಿಳಿದು ನೀರನ್ನೆಲ್ಲ ಕುಡಿದುಬಿಟ್ಟಿತು. ನಂತರ ರಾಕ್ಷಸರ ಮೇಲೆ ಧಾಳಿ ಮಾಡಿ ಅವರನ್ನು ಚೆಲ್ಲಾಪಿಲ್ಲಿಯಾಗಿಸಿತು. ಈ ಅಂತರದಲ್ಲಿ ದೇವತೆಗಳು ಉಕ್ಕಿನ ನಗರಿಯನ್ನು ಪ್ರವೇಶಿಸಿದರು. ಮತ್ತೆ ಯುದ್ಧ ಭೂಮಿಗಿಳಿದ ತಾರಕಾಕ್ಷ ಭೀಕರವಾಗಿ ಧಾಳಿಮಾಡಿದನು. ದೇವತೆಗಳನ್ನು ಮತ್ತೆ ಹಿಮ್ಮೆಟ್ಟಿಸಿದನು. ಇನ್ನೊಂದೆಡೆ ಮಾಯಾಸುರ ಮತ್ತು ವಿದ್ಯುನ್ಮಾಲಿ ಮಾಯಾಯುದ್ಧದಿಂದ ದೇವತೆಗಳ ಮೇಲೆ ಪ್ರಹಾರ ಮಾಡಿದರು. ದೇವತೆಗಳು ಪೂರ್ತಿಯಾಗಿ ಹಿಂದಿರುಗಿದರು. ರಾತ್ರಿ ರಾಕ್ಷಸರೆಲ್ಲ ಕೋಟೆ ಸೇರಿದರು.

ಇತ್ತ ಮಾಯಾಸುರ ಆತಂಕಗೊಂಡಿದದ್ದನು. ಮಾರನೆಯ ದಿನ ಪುಷ್ಯ ನಕ್ಷತ್ರ ಚಂದ್ರನನ್ನು ಸೇರುವ ದಿನ. ಸಾವಿರ ವರ್ಷಕ್ಕೊಮ್ಮೆ ಬರುವ ಆ ದಿನ ಮೂರು ನಗರಗಳು ಒಂದು ಅರೆಘಳಿಗೆ ಒಂದೇ ರೇಖೆಗೆ ಬರುವ ದಿನ. ಮಾರನೆಯ ದಿನ ಶಿವನೇ ಯುದ್ಧಕ್ಕಿಳಿದರೆ? ಆ ಒಂದು ಘಳಿಗೆಯಲ್ಲಿ ಶಿವನು ಬಾಣವನ್ನು ಬಿಡುವುದು ಅಸಾಧ್ಯವಾದರೆ ಮತ್ತೆ ಸಾವಿರ ವರ್ಷಗಳು ಯಾವುದೇ ಭಯವಿಲ್ಲವೆಂದು ಮಾಯಾಸುರ ಲೆಕ್ಕಾಚಾರವೂ ನಡೆಸಿದ್ದನು. ಎಲ್ಲಾ ರಾಕ್ಷಸರು ರಾತ್ರಿಯಲ್ಲಿ ಮೋಜುಮಾಡುತ್ತಿದ್ದರೂ ಮಾಯಾಸುರ ಮಾತ್ರ ಯಾವುದೇ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದ್ದ. ಮನದಾಳದಲ್ಲಿ ಅಂತ್ಯ ಸನ್ನಿಹಿತವಾಗುತ್ತಿದೆ ಎನ್ನುವ ಭಾವ ಮಾಯಾಸುರನಿಗೆ. ಆದರೆ ಏನಾದರು ಆಗಲಿ ಕಡೆಯವರೆಗೂ ಹೊರಡಲೇಬೇಕು ನಗರವನ್ನುಳಿಸುವ ಪ್ರಯತ್ನ ಮಾಡಲೇಬೇಕು ಎಂದು ಶಪಥಮಾಡಿದನು.

ಮಾರನೆಯ  ದಿನ ಕಟ್ಟಕಡೆಯ ಯುದ್ಧ ಆರಂಭಗೊಂಡಿತು. ಯುದ್ಧ ಭೀಕರವಾಗುತ್ತಿದ್ದ ಹಾಗೆ ಮೂರೂ ನಗರಗಳು ಹತ್ತಿರವಾಗುತ್ತಾ ಒಂದು ರೇಖೆಗೆ ಬರತೊಡಗಿದವು. ಪುಷ್ಯಯೋಗ ಹತ್ತಿರವಾಗುತ್ತಿರುವುದನ್ನು ನೋಡಿದ ಶಿವನೇ ತನ್ನ ರಥದೊಡನೆ ಅಂದು ಯುದ್ಧಕ್ಕಿಳಿದನು. ಧನಸ್ಸನ್ನೊಮ್ಮೆ ಠೇಮ್ಕರಿಸಿದನು. ವಿದ್ಯುನ್ಮಾಲಿ ಶಿವನೊಡನೆ ಯುದ್ಧಕ್ಕೆ ಹೊರತನಾದರೂ ನಂದಿ ಅವನನ್ನು ಅಡ್ಡಿಪಡಿಸಿದನು. ಕುಪಿತನಾದ ವಿದ್ಯುನ್ಮಾಲಿ ಒಂದು ಬಾಣದಿಂದ ನಂದಿಯ ಎದೆಗೆ ಮರ್ಮಾಘಾತ ಮಾಡಿದನು.  ವಿದ್ಯುನ್ಮಾಲಿಯ ಬಾಣಗಳೆಲ್ಲವನ್ನು ಸಹಿಸಿಕೊಂಡ ನಂದಿ ಅವನ ಕಡೆಗೆ ದಾಪುಗಾಲಿಡುತ್ತಾ ಹೋದನು. ನಂದಿಯ ಎದೆಗೆ ಈಟಿಯನ್ನು ಚುಚ್ಚಿದನು. ಅದೇ ಸಮಯಕ್ಕೆ ಶಿವ ಬಾಣದಿಂದ ಸನ್ನದ್ಧನಾದ್ದನ್ನು ನೋಡಿದ ವಿದ್ಯುನ್ಮಾಲಿ ಶಿವನನ್ನು ಅಡ್ಡಿಪಡಿಸುವುದಕ್ಕೆ ಧಾವಿಸಿದನು. ಅದೇ ಸಮಯಕ್ಕೆ ನಂದಿ ಎದೆಗೆ ಚುಚ್ಚಿದ್ದ ಈಟಿಯನ್ನು ಕಿತ್ತಿ ವಿದ್ಯುನ್ಮಾಲಿಯನ್ನು ಸಂಹರಿಸಿಬಿಟ್ಟನು.

ಆ ಸಮಯಕ್ಕೆ ಸಾವಿರ ವರ್ಷಗಳಿಗೆ ಬರುವ ಆ ಅರೆಘಳಿಗೆ ಕೂಡಿಬಂದಿತು. ಮೂರೂ ನಗರಿಗಳೂ ಒಂದು ನೇರರೇಖೆಗೆ ಬಂದವು. ಪರಶಿವನು ಹೆದೆಯೇರಿಸಿ ಬಾಣವನ್ನು ಬಿಟ್ಟೇಬಿಟ್ಟನು. ಆ ಕ್ಷಣಕ್ಕೆ ಶಿವನಿಗೆ ಮಾಯಾಸುರನ ಮೇಲೆ ಒಂದಿಷ್ಟು ಕರುಣೆ ಮೂಡಿತು. "ಎಷ್ಟಿದ್ದರೂ ಮಾಯಾಸುರ ನನ್ನ ಪರಮಭಕ್ತ. ಈ ಸೋದರರಷ್ಟು ಕ್ರೂರಿಯಲ್ಲ. ಅವನು ನನ್ನ ಬಾಣದಿಂದ ಧ್ವಂಸವಾಗುವುದು ಒಳ್ಳೆಯದಲ್ಲ" ಎಂದು ದುಃಖಿಸಿದನು. ಶಿವನ ಮನದಿಂಗಿತವನ್ನು ಅರಿತವನೇ ಮಯನನ್ನು ರಕ್ಷಿಸಬೇಕು ಎಂದು ಸಂಕಲ್ಪ ಮಾಡಿದನು. ಶಿವನ ಬಾಣಕ್ಕಿಂತ ವೇಗವಾಗಿ ಧಾವಿಸಿದವನೇ ಮಾಯಾಸುರನ ಹತ್ತಿರ ಹಾರಿ ಅವನನ್ನು ಎಚ್ಚರಿಸಿದನು. ಶಿವನ ಬಾಣ ಹುಸಿಯಾಗುವುದಿಲ್ಲವೆಂದು ತಿಳಿದಿದ್ದ ಮಾಯಾಸುರ ತ್ರಿಪುರಾನಗರಿಯಿಂದ ಹಾರಿ ತನ್ನನ್ನು ರಕ್ಷಿಸಿಕೊಂಡನು.

ತ್ರಿಪುರಾನಗರಿಗಳು ಒಂದೇ ರೇಖೆಗೆ ಬಂದ ಅದೇ ಘಳಿಗೆಯಲ್ಲಿ ಶಿವನ ಬಾಣ ನಗರಗಳನ್ನು ಭೇದಿಸಿತು. ತ್ರಿಪುರ ನಗರಿಗಳ ಧ್ವಂಸವಾಯಿತು. ಅದರೊಡನೆ ತಾರಕಾಕ್ಷ, ಕಮಲಾಕ್ಷರೊಡನೆ ಸಕಲ ರಾಕ್ಷಸರ ಸಂಹಾರವು ಆಯಿತು. ದೇವತೆಗಳು ನಿಟ್ಟುಸಿರು ಬಿಟ್ಟರು. ಸಕಲ ಲೋಕಗಳಲ್ಲಿ ಶಾಂತಿ ನೆಲೆಸಿತು.  

0 Comments:

Post a Comment

<< Home