ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, February 23, 2019

ವಾರಾಣಸಿಯ ಮುಂಜಾನೆಯ ಗಂಗಾಯಾನ

ಭವ್ಯ ಯಮುನೆಯ ಸಂಗ
ದಿವ್ಯ ಸರಸೆಯ ಸಾಂಗ
ಕಾವ್ಯ ಸಂಗಮ ಮಿಲನ
ಧನ್ಯ  ಗಂಗಾ ಸಂಚಲನ

ಹಿಂದೆದ್ದೂ ಇದ್ದ ಮುಂದೆಂದೂ ಇರುವ ನಿತ್ಯ ಗಂಗೆ
ಇದ್ದ ಇರುವ ನಡುವೆ  ಹರಿವ ಲೋಕ ಪಾವನ ಗಂಗೆ
ಪರಮಪ್ರಶಾಂತ ಗಂಗೆ

ಮೆಲಮೆಲ್ಲ ಮೆಲಮೆಲ್ಲ ಮೇಲೇಳುವ ದಿನಕರ....

ಹರಿವನ್ನು ನೇವರಿಸಿ
ಪರಮಪಾವನಗೊಳಿಸಿ
ನದಿಯುದ್ದ ದಿವ್ಯಕ್ಕೆ
ಸನಾತನವ ಲೇಪಿಸಿ
ವಿಶ್ವನಾಥನ ಚರಣಕ್ಕೆ ನಮಿಸಿ

ಇನಿತು ಇನಿತೇ  ಎದ್ದರಾಯಿತು
ಇಷ್ಟು ದೈನಿಕಕ್ಕೆ ಅವಸರ ಅಪಶ್ರುತಿ
ದಿನಕರನಿಗಂತೂ ಚಡಪಡಿಕೆಯಿಲ್ಲ
ಮಹಾಕಾಲ ನಾಥನೇ ಕಾದಿಹನಲ್ಲ

ಶಾಂತ ಪ್ರಶಾಂತ ಎಲ್ಲವೂ ನಿಧಾನ....

ಮಕ್ಕಳಾಟಕ್ಕಲ್ಲವೆ ಮಾತೆಯ ಮಡಿಲು
ಹಾರುವ ಏರುವ ಹಕ್ಕಿಗಳ ಕಲರವ
ಹುಟ್ಟನ್ನು ತಳ್ಳುತ್ತ ತೇಲುತ್ತ ಸಾಗುತ್ತ
ಕಾಲದರ್ಶನ ತಾಣ ಸ್ನಾನತೀರ
ಕಾಲಗರ್ಭದ ಯಾನ ಮನವು ಮಂದಾರ

ಚುಂಬಿಸುವ ಬೆಳಕಿನಲಿ ಏಳುತ್ತ ಅರಳುತ್ತಾ
ಎಲ್ಲವು ಎಲ್ಲೆಡೆಯು ಚಿನ್ನವೇ ನೋಡು
ನದಿಯ ಹರಿವಿಗೆ ಮನದ ಶ್ರುತಿಯದೆ ಸೇರಿ
ಎಲ್ಲವು ಎಲ್ಲೆಡೆಯು ನಿರಂತರವೆ ನೋಡು       

ಸದ್ಯವಾಗುವ  ನಿತ್ಯ ನಿತ್ಯವಾಗುವ ಸದ್ಯ
ನಿತ್ಯ-ಸದ್ಯಗಳು ಇಲ್ಲಿ ಒಂದೇ ವಂದ್ಯ
ವಾರಾಣಸಿಯಿದು ನೋಡು ಭವ್ಯ
ವಾರಾಣಸಿಯಿದು ನೋಡು ದಿವ್ಯ  

       

ಕಚ ಮತ್ತು ದೇವಯಾನಿ

ಕೃತಯುಗದ ಆದಿಕಾಲದಲ್ಲಿ ಮೂರುಲೋಕಗಳ ಒಡೆತನಕ್ಕಾಗಿ ದೇವಾಸುರರ ಮಧ್ಯೆ ಆಗಾಗ್ಗೆ ಭೀಕರ ಯುದ್ಧವಾಗುತ್ತಿತ್ತು. ದೇವತೆಗಳ ಕುಲಗುರುಗಳು ಬೃಹಸ್ಪತಿಗಳು. ರಾಕ್ಷಸರ ಕುಲಗುರು ಶುಕ್ರಾಚಾರ್ಯರು. ಬೃಹಸ್ಪತಿಗಳು ಘೋರ ಅಂಗೀರಸ  ಮಹರ್ಷಿಗಳ ಪುತ್ರರಾಗಿದ್ದರೆ ಶುಕ್ರಾಚಾರ್ಯರು ಅದೇ ಅಂಗೀರಸರ ಅಚ್ಚುಮೆಚ್ಚಿನ ಶಿಷ್ಯ.  ಬೃಹಸ್ಪತ್ಯಾಚಾರರ ಸಲಹೆ ಶುಕ್ರಾಚಾರ್ಯರ ರಕ್ಷಣೆಯಿಂದ ಇಬ್ಬರ ಬಲ ಸಮವಾಗಿತ್ತು. ಬೃಹಸ್ಪತಿಗಳು ಇಂದ್ರನ ಜೊತೆ ಅವನ ರಾಜಧಾನಿಯಾದ ಅಮರಾವತಿಯಲ್ಲಿದ್ದರೆ ಶುಕ್ರಾಚಾರ್ಯರು ರಾಕ್ಷಸ ರಾಜನಾದ ವೃಷಪರ್ವನ ರಾಜಧಾನಿಯಲ್ಲಿದ್ದರು.

ಇಷ್ಟಿದ್ದರೂ, ಇವರಿಬ್ಬರ ನಡುವೆ ಕೇವಲ ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಒಂದು ವಿದ್ಯೆಯಿತ್ತು - ಅದೇ ಮೃತಸಂಜೀವಿನಿ ವಿದ್ಯೆ. ಇದರಿಂದ ಶುಕ್ರಾಚಾರ್ಯರು ಸತ್ತವರನ್ನು ಬದುಕಿಸಬಲ್ಲವರಾಗಿದ್ದರು. ವೃಷಪರ್ವನಿಗೆ ಅದೊಂದು ಧೈರ್ಯ "ಶುಕ್ರಾಚಾರ್ಯರಿರುವವರಿಗೆ ನಮ್ಮ ಸಂಖ್ಯೆ ಕ್ಷೀಣಿಸುವುದಿಲ್ಲವೆಂದು". ದೇವತೆಗಳು ಶೌರ್ಯದಿಂದ ವಧಿಸಿದ ರಾಕ್ಷಸರೆಲ್ಲರೂ ಮತ್ತೊಂದು ಯುದ್ಧದಲ್ಲಿ ಮತ್ತೆ ಹಾಜರಾಗುತ್ತಿದ್ದರು. ದೇವತೆಗಳು ಇದರಿಂದ ಕ್ರುದ್ಧರಾದರು. ದಾರಿತಿಳಿಯದಾಗಿ ಕಡೆಗೆ ಬೃಹಸ್ಪತಿಗಳ ಮಗನಾದ ಕಚನ ಬಳಿಗೆ ಬಂದರು. "ಕಚ, ಶುಕ್ರಾಚಾರ್ಯರ ಮೃತಸಂಜೀವಿನಿ ವಿದ್ಯೆಯಿಂದ ಮೃತ ರಾಕ್ಷಸರು ಮತ್ತೆ ಜೀವಂತರಾಗುತ್ತಿದ್ದಾರೆ. ನಮ್ಮ ಬಳಿ ಆ ವಿದ್ಯೆಯಿಲ್ಲ. ದಯವಿಟ್ಟು ಶುಕ್ರಾಚಾರ್ಯರಿಂದ ಆ ವಿದ್ಯೆಯನ್ನು ಕಲಿತು ಬಾ. ಹಾಗಿದ್ದರೆ ಮಾತ್ರ ನಾವು ರಾಕ್ಷಸರನ್ನು ಹೆಡೆಮುರಿಗಟ್ಟಲು ಸಾಧ್ಯ" ಎಂದು ನುಡಿದರು.

ಕಚ ಮಹಾಧಾರ್ಮಿಕನು, ವಿಧೇಯನೂ, ಕರ್ತವ್ಯಪಾರನು ಆದ ಯುವಕ. ದೇವತೆಗಳ ಮಾತಿಗೆ ಒಪ್ಪಿ ತಕ್ಷಣವೇ ಶುಕ್ರಾಚಾರ್ಯರ ಬಳಿಗೆ ತೆರಳಿದನು. ಆದರೆ "ಅಲ್ಲೇನು ಕಾದಿದೆಯೋ" ಎಂದು ಆತಂಕದಿಂದ ಮನಸ್ಸಿನಲ್ಲಿ ತಲ್ಲಣಗೊಂಡಿದ್ದನು. ಶುಕ್ರಾಚಾರ್ಯರನ್ನು ಭೇಟಿಯಾಗಿ "ಆಚಾರ್ಯರೇ, ನಾನು ಕಚ. ಬೃಹಸ್ಪತಿಗಳ ಮಗ. ನಿಮ್ಮ ಬಳಿ ಶಿಷ್ಯವೃತ್ತಿಯನ್ನು ಬಯಸಿ ಬಂದಿದ್ದೇನೆ. ದಯವಿಟ್ಟು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ. ವಿಧೇಯನಾಗಿ ನಿಮ್ಮ ಸೇವೆ ಮಾಡುತ್ತೇನೆ" ಎಂದನು. ಶುಕ್ರಾಚಾರ್ಯರು ಸಂಪ್ರೀತರಾದರು. "ಕಚನೇ, ಬೃಹಸ್ಪತಿಗಳ ಮಗನಾದ ಮೇಲೆ ನೀನು ನನ್ನ ಶಿಷ್ಯನಾಗುವುದಕ್ಕೆ ಅರ್ಹನಾಗಿದ್ದೀಯೆ. ನಿನ್ನನ್ನು ಸಂತೋಷದಿಂದ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ" ಎಂದರು ಶುಕ್ರಾಚಾರ್ಯರು.

ಶುಕ್ರಾಚಾರ್ಯರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ದೇವಯಾನಿ. ಮಗಳ ಮೇಲೆ ಶುಕ್ರಾಚಾರ್ಯರು ಪ್ರಾಣವನ್ನೇ  ಇಟ್ಟಿದ್ದರು. ಶುಕ್ರಾಚಾರ್ಯರು ಇನ್ನೇನನ್ನಾದರೂ ಸಹಿಸಬಲ್ಲರು ಆದರೆ ದೇವಯಾನಿ ನೊಂದುಕೊಂಡರೆ ಅವರು ಸಹಿಸುತ್ತಿರಲಿಲ್ಲ. "ದೇವಯಾನಿ, ನೋಡು ಬಾ. ಶ್ರೇಷ್ಠನಾದ ಕಚ ನನ್ನ ಬಳಿ ಶಿಷ್ಯನಾಗಿ ಬಂದಿದ್ದಾನೆ. ಅವನ ವಿದ್ಯೆ ಮುಗಿಯುವವರಿಗೆ ಅವನು ನಮ್ಮಲಿಯೇ ಇರುತ್ತಾನೆ" ಎಂದು ಪರಿಚಯಿಸಿದರು. ತನ್ನ ಮಾತಿನಂತೆಯೇ ಕಚ ಶುಕ್ರಾಚಾರ್ಯರ ಸೇವೆಯನ್ನು ಭಕ್ತಿ, ಶ್ರದ್ಧೆಗಳಿಂದ ಮಾಡಿದ. ಆದರೆ ಶುಕ್ರಾಚಾರ್ಯರು ಹೆಚ್ಚಿನ ಹೊತ್ತು ವೃಷಪರ್ವ ರಾಜನ ಆಸ್ಥಾನದಲ್ಲಿ ಕಳೆಯುತ್ತಿದ್ದರು. ಇಲ್ಲವಾದರೆ ಧ್ಯಾನ, ತಪಸ್ಸುಗಳಲ್ಲಿ ತಲ್ಲೀನರಾಗುತ್ತಿದ್ದರು. ನಿರ್ವಾಹವಿಲ್ಲದೆ ಕಚ ಹೆಚ್ಚಿನ ಹೊತ್ತು ದೇವಯಾನಿಯ ಜೊತೆಯಲ್ಲೇ ಕಳೆಯುತ್ತಿದ್ದ.  ಅವಳ ದೈನಿಕ ವ್ಯವಹಾರಗಳಲ್ಲಿ ಸಹಾಯ ಮಾಡುತ್ತಿದ್ದ. ಬಾವಿಯಿಂದ ನೀರು ಸೇದುವುದು, ಗಿಡದಿಂದ ಹೂವು ಬಿಡಿಸುವುದು ಮುಂತಾದ ಕೆಲಸಗಳಲ್ಲಿ ದೇವಯಾನಿಯ ಜೊತೆಯಾಗುತ್ತಿದ್ದ. ಕ್ರಮೇಣ ಇಬ್ಬರ ಪರಿಚಯ ಗಾಢ ಸ್ನೇಹಕ್ಕೆ ತಿರುಗಿತು. ಕಚ ಸಂಗೀತ, ನೃತ್ಯಗಳಲ್ಲಿ ಪರಿಣತನಾಗಿದ್ದರಿಂದ ದೇವಯಾನಿಗೆ ತನ್ನ ಅಭಿರುಚಿಗೆ ತಕ್ಕವನಾದ ಸ್ನೇಹಿತ ಸಿಕ್ಕಂತಾಗಿತ್ತು. ಕಚನ ಸಂಗೀತ, ಅವನ ಮಾತಿನ ಹಿತ, ಅವನ ವ್ಯಕ್ತಿತ್ವದಲ್ಲಿನ ತಾಳ್ಮೆ, ಶಾಂತ ಗುಣ ಇವುಗಳಿಂದ ಆಕರ್ಷಿತಳಾದ ದೇವಯಾನಿ ಅವನನ್ನು ತೀವ್ರವಾಗಿ ಹಚ್ಚಿಕೊಂಡಳು. ಕಚನೇನಾದರೂ ಬರುವುದು ತಡವಾದರೆ ಕೋಪಗೊಳ್ಳುವಳಾದರು ಆ ಕೋಪವನ್ನು ಹೆಚ್ಚಿನ ಹೊತ್ತು ಧರಿಸಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಗುರುಗಳಿಗೆ ಕಚನನ್ನು ನೋಡಬೇಕಾದರೆ ಕರೆದುಕೊಂಡು ಬರುವವಳು ದೇವಯಾನಿಯಾಗಿರುತ್ತಿದ್ದಳು. ಹೀಗೆ ಮನೆಮಗನಾಗಿ ಕಚ ಶುಕ್ರಾಚಾರ್ಯರಲ್ಲಿ ಶಿಷ್ಯವೃತ್ತಿ ನಡೆಸಿದ್ದ. ನಿಧಾನವಾಗಿಯಾದರೂ ಸಧೃಢವಾಗಿ ಕಚನ ಅಧ್ಯಯನ ಮುಂದೆ ಸಾಗಿತ್ತು. 

ಆದರೆ ರಾಕ್ಷಸರಿಗೆ ಕಚನ ಮೇಲೆ ಮೊದಲಿಂದಲೂ ಅನುಮಾನವಿತ್ತು. ದೇವತೆಗಳ ಗುರುವಾದ ಬೃಹಸ್ಪತಿಗಳ ಮಗ ಕಚ. ಶುಕ್ರಾಚಾರ್ಯರಲ್ಲಿ ಅವನೇಕೆ ಶಿಷ್ಯವೃತ್ತಿಯನ್ನು ಯಾಚಿಸಬೇಕು. ಇದರಲ್ಲೇನೋ ಮೋಸವಿದೆ. ಬಹುಶಃ ಮೃತಸಂಜೀವಿನಿ ವಿದ್ಯೆಯ ರಹಸ್ಯವನ್ನರಿಯಲು ಕಚ ಇಲ್ಲಿಗೆ ಬಂದಿರಬೇಕು - ಎನ್ನುವುದು ಅವರ ಲೆಕ್ಕಾಚಾರ. ಇದು ಸಾಧ್ಯವಾಗಲು ಬಿಡಬಾರದು. ಕಚನನ್ನು ಕೊಳ್ಳದೆ ವಿಧಿಯಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಆದರೆ ಅವರಿಗೆ ಶುಕ್ರಾಚಾರ್ಯರ ಭಯ. ರಾಕ್ಷಸರ ಒಟ್ಟು ಜೀವನ ಶುಕ್ರಾಚಾರ್ಯರ ರಕ್ಷಣೆಯ ಮೇಲೆ ನಿಂತಿತ್ತು. ಅಚಾಚಾರ್ಯರಿಗೂ ಕಚನೆಂದರೆ ಮಹಾಪ್ರೀತಿ. ಇನ್ನು ಅವನ ಸಾವಿಗೆ ಅನುಕೂಲಮಾಡಿಕೊಟ್ಟರೋ? ರಾಕ್ಷಸರ ಇಂಗಿತ ತಿಳಿದರೆ ಶಾಪವನ್ನೇ ಕೊಟ್ಟಾರು. ಆದ್ದರಿಂದ ವೃಷಪರ್ವ ಸಾವಧಾನದಿಂದ ಕೆಲಸ ಮಾಡಬೇಕೆಂದು ತೀರ್ಮಾನಿಸಿದ. 

ರಾಕ್ಷಸರು ಸಾಕಷ್ಟು ದಿನ ಕಾದರು. ಅನುಕೂಲವಾದ ಗಳಿಗೆ ಬಂದೆ ಬಂತು. ಕಚ ಒಂದು ದಿನ ದನಕರುಗಳನ್ನು ಕರೆದುಕೊಂಡು ಕಾಡಿಗೆ ಮೇಯಿಸಲು ಹೊರಟಿದ್ದ. ಅವನು ದಟ್ಟ ಕಾಡಿನ ಮಧ್ಯೆ ಬರುವವರಿಗೂ ಕಾದ ರಾಕ್ಷಸರು ಹಠಾತ್ತನೆ ಧಾಳಿ ಮಾಡಿ ಸಾಯಿಸಿದರು. ಅವನ ದೇಹ ಸಿಗಲೇಬಾರದೆಂದು ಅದನ್ನು ನಾಯಿನರಿಗಳಿಗೆ ಹಾಕಿ ವಾಪಸಾದರು. ಇತ್ತ ದೇವಯಾನಿ ಇಷ್ಟು ಹೊತ್ತಾದರೆ ಕಚ ಬಾರದ್ದನ್ನು ನೋಡಿ ಆತಂಕಗೊಂಡಳು.  ಸ್ವಲ್ಪ ಹೊತ್ತಿನಲ್ಲೇ ಅಕಲುಗಳೆಲ್ಲ ಹಿಂದಿರುಗಿದವು ಆದರೆ ಕಚ ಮಾತ್ರ ಬರಲಿಲ್ಲ. ದುಃಖದಿಂದ ತಂದೆಯ ಬಳಿಗೆ ಓಡಿ "ಕಚನಿಗೆ ಏನೋ ಅಪಾಯ ಬಂದಿರುವ ಸಾಧ್ಯತೆಯಿಂದ ದಯವಿಟ್ಟು ಅವನನ್ನು ರಕ್ಷಿಸಿ. ಅವನೇನಾದರೂ ಮೃತನಾಗಿದ್ದರೆ ನಾನೂ ಸಹ ಜೀವಂತವಾಗಿರುವುದಿಲ್ಲ" ಎಂದು ದುಃಖತಪ್ತಳಾದಳು. ಶುಕ್ರಾಚಾರ್ಯರು "ಮಗಳೇ, ದುಃಖ ಪಡದಿರು. ಸಹಸ್ರಾರು ರಾಕ್ಷಸರನ್ನು ಜೀವಂತವಾಗಿಸಿದ ನಿನ್ನ ತಂದೆ, ನಿನಗೋಸ್ಕರ ಅಷ್ಟು ಮಾಡಲಾರನೇ? ನನ್ನ ಶಕ್ತಿಯಿಂದ ಕಚನಿಗೆ ಏನೇ ಅಪಾಯವಾಗಿದ್ದರು ಅವನನ್ನು ಪಾರು ಮಾಡುತ್ತೇನೆ." ಎಂದು ವಚನವಿತ್ತನು. ಅಂತೆಯೇ ಮೃತಸಂಜೀವಿನಿಯಿಂದ ಕಚನನ್ನು ಬದುಕಿಸಿದರು. ದೇವಯಾನಿ ಸಂತುಷ್ಟಳಾದಳು. "ಕಾಚ, ನಿನಗೇನಾಗಿತ್ತು? ಅದೆಲ್ಲಿ ಮಾಯವಾಗಿದ್ದೆ?" ಎಂದು ವಿಚಾರಿಸಿದಳು. "ಅಸುರರು ನನ್ನ ಮೇಲೆ ಕಾಡಿನ ಮಧ್ಯೆ ಧಾಳಿ ಮಾಡಿ ಸಾಯಿಸಿದರು. ಆದರೆ ಇಲ್ಲಿಗೆ ಹೇಗೆ ಬಂದೆನೋ ಕಾಣೆ." ಎಂದನು ಕಚ. ಇದನ್ನು ಇಲ್ಲಿಗೆ ಬಿಟ್ಟರಾಯಿತು ಎಂದು ಆಚಾರ್ಯರು, ದೇವಯಾನಿಯು, ಕಚನು ಸುಮ್ಮನಾದರು.

ಒಂದಿಷ್ಟು ಕಾಲವಾಯಿತು. ಒಂದು ದಿನ ದೇವಯಾನಿ "ಕಚ, ಬಹಳ ಹಿಂದೆ ಕಾಡಿನ ಮಧ್ಯದಲ್ಲಿ ತಂದೆಯ ಜೊತೆ ವಿಹರಿಸುತ್ತಿದ್ದೆ. ಆಗ ಬಹಳ ಸುಂದರವಾದ ಒಂದಿಷ್ಟು ಹೂವುಗಳನ್ನು ಕಂಡೆ. ಅದರ ಪರಿಮಳ ಈಗಲೂ ನನ್ನ ಮನಸ್ಸಿನಲ್ಲಿದೆ. ಅವು ಈ ಋತುವಿನಲ್ಲಿ  ಮಾತ್ರ ಅರಳುತ್ತವೆ. ಅವುಗಳನ್ನು ತಂದುಕೊಡುವೆಯಾ?" ಎಂದು ಕೇಳಿದಳು. ದೇವಯಾನಿಯ ಕೋರಿಕೆಯನ್ನು ತಿರಸ್ಕರಿಸುವುದು ಸಾಧ್ಯವೇ? ಸರಿ ಕಚ ತಕ್ಷಣವೇ ಹೊರಟ. ಇದೆ ಸಮಯಕ್ಕಾಗಿ ಕಾಯುತ್ತಿದ್ದ ಅಸುರರು ಕಾಡಿನ ಮಧ್ಯೆ ಮತ್ತೆ ಧಾಳಿಮಾಡಿ ಕಚನನ್ನು ಮೃತನನ್ನಾಗಿಸಿದರು. ಆದರೆ ಈ ಬಾರಿ ಅವನ ದೇಹವನ್ನು ಅರೆದು ಸಮುದ್ರದಲ್ಲಿ ಕರಗಿಸಿಬಿಟ್ಟರು. ಮತ್ತೆ ಆತಂಕಿತಳಾದ ದೇವಯಾನಿ ತಂದೆಯ ಬಳಿಗೆ ಓಡಿದಳು. ಆದರೆ ಈ ಬಾರಿ ಸ್ವತಃ ಶುಕ್ರಾಚಾರ್ಯರೇ ಆತಂಕಕೊಂಡಿದ್ದರು. "ಇದೇಕೆ ಕಚ ಇಷ್ಟುಹೊತ್ತಾದರೂ ಬರಲಿಲ್ಲ. ಯಾವುದೊ ಕಾರಣಕ್ಕೆ ಅಸುರರು ಅವನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ, ಮತ್ತೆ ಅವರ ಕೈಯಲ್ಲಿ ಹತನಾದನೋ ಹೇಗೆ" ಎಂದು ಎಣಿಕೆ ಮಾಡುತ್ತಿದ್ದರು. ದೇವಯಾನಿ ಬಂದೊಡನೆಯೇ "ಯೋಚನೆ ಮಾಡದಿರು ಮಗಳೇ" ಎಂದು ಸಂತೈಸಿ ಮತ್ತೆ ಮೃತಸಂಜೀವಿನಿಯಿಂದ ಕಚನನ್ನು ಬದುಕಿಸಿದರು.      

ಅಸುರರಿಗೆ ಮತ್ತೆ ಕಚ ಜೀವಂತವಾಗಿ ಮರಳಿದ ವಿಷಯ ತಿಳಿಯಿತು. ಅವರಿಗೆ ಬುದ್ಧಿಯೇ ತಿಳಿಯದಂತಾಯ್ತು. ಹೀಗೆ ಪ್ರತಿ ಬಾರಿಯೂ ಶುಕ್ರಾಚಾರ್ಯರು ಕಚನನ್ನ್ನು ಜೀವಂತವಾಗಿಸಿದರೆ ಕಚನನ್ನು ನಾವು ಮರಣಿಸುವುದೆಂತು? ಬಹಳ ವಿಚಾರ ಮಡಿದ ನಂತರ ಅಸುರರಿಗೊಂದು ಉಪಾಯ ಹೊಳೆಯಿತು. ಮಾರನೆಯ ದಿನ ಕಚ ಹಸುಕರುಗಳನ್ನು ಕಾಡಿನಿಂದ ವಾಪಸ್ಸು ಕರೆತರುತ್ತಿದ್ದ ಸಮಯಕ್ಕೆ ಸರಿಯಾಗಿ ಹೊಂಚು ಹಾಕಿ ಕಾದುಕುಳಿತ್ತಿದ್ದರು. ಕಚನನ್ನು ಹಿಂದಿನಿಂದ ದಾಳಿ ಮಾಡಿ ಹೊಡೆದು ಸಾಯಿಸಿದರು. ಈ ಬಾರಿ ಅವನ ದೇಹವನ್ನು ಸುತ್ತು ಬೂದಿಮಾಡಿದರಲ್ಲದೆ ಅಸ್ಥಿಯನ್ನು ಶುಕ್ರಾಚಾರ್ಯರಿಗೆ ಇಷ್ಟವಾದ ಸುರೆಯಲ್ಲಿ ಕರಗಿಸಿಬಿಟ್ಟರು. ಇದ್ಯಾವುದೂ ಅರಿಯದ ಶುಕ್ರಾಚಾರ್ಯರನ್ನು ಭೇಟಿ ಮಾಡಿ ಅವರನ್ನು ಓಲೈಸುವಂತೆ ಸುರೆಯನ್ನು ಸಮರ್ಪಿಸಿದರು. ಸುರೆಎಂದರೆ ಕರಗಿಹೋಗುತ್ತಿದ್ದ ಶುಕ್ರಾಚಾರ್ಯರು ಅದನ್ನು ಸೇವಿಸಿ ಸಂತೃಪ್ತರಾದರು. ಅಸುರರನ್ನು ಮನದುಂಬಿ ಹೋಗಲಿ ಆಶೀರ್ವದಿಸಿದರು.

ಇತ್ತ ದೇವಯಾನಿ ಕಚನಿಗೋಸ್ಕರ ಕಾದು ಕಾದು ಸುಸ್ತಾದಳು. ಮತ್ತೆ ಅಸುರರು ಕಚನನ್ನು ಮೃತ್ಯುಗೈದರೊ? ಕಚನಿಗೆ ಇನ್ನೆಷ್ಟು ಮರಣಗಳು ಕಾದಿದೆಯೋ ಅಸುರರಿಂದ? ನಿಜಕ್ಕೂ ನನಗೆ ಕಚ ಸಿಗುವನೇ - ಅವನ ಜೊತೆ ಮದುವೆಯಾಗುವ ಭಾಗ್ಯ ನನಗಿದೆಯೇ - ಎಂದು ದೇವಯಾನಿ ಆತಂಕಕೊಂಡಳು. ಮತ್ತೆ ಹಸುಗಳೆಲ್ಲ ವಾಪಸ್ಸು ಬಂದವು. ಕಚ ಮಾತ್ರ ಬರಲಿಲ್ಲ. "ತಂದೆಯೇ, ಕಚನಿಲ್ಲದೆ ನನಗೆ ಬದುಕಿಲ್ಲ. ದಯವಿಟ್ಟು ಅವನನ್ನು ನನಗೆ ಮರಳಿಸಿ" ಎಂದು ವಿಹ್ವಳಿಸಿದಳು. ಶುಕ್ರಾಚಾರ್ಯರು ಮತ್ತೆ ಧ್ಯಾನಮಗ್ನರಾದರು. ಆದರೆ ಈ ಬಾರಿ ಕಣ್ತೆರೆದ ಮೇಲೆ ಅವರ ಮೊಗದಲ್ಲಿ ನಗುವಿರಲಿಲ್ಲ, ಬದಲಿಗೆ ವಿಚಲಿತರಾಗಿದ್ದರು. ಮಗಳನ್ನು ಸಂತೈಸಲು ಪ್ರಯತ್ನಿಸಿದರೂ. "ಮಗಳೇ, ಅಸುರರಿಗೆ ಕಚನನ್ನು ಕಂಡರಾಗುವುದಿಲ್ಲ. ಅವನನ್ನು ನಾನು ಮತ್ತೆ ಬದುಕಿಸಿ ಫಲವೇನು. ಅಸುರರು ಮತ್ತೆ ಕೊಂದೇ ಕೊಳ್ಳುವರು. ನಿನ್ನಂತಹ ಜ್ಞಾನಿ ಹೀಗೆ ಒಬ್ಬನ ಪ್ರೇಮಪಾಶಕ್ಕೆ ಸಿಲುಕಿ ನರಳುವುದು ತರವಲ್ಲ. ನೀನಿನ್ನೂ ಚಿಕ್ಕವಳು ಮತ್ತು ಸುಂದರವಾದ ಜೀವನ ನಿನಗಾಗಿ ಕಾದಿದೆ" ಎಂದು ಸಂತೈಸಲು ಪ್ರಯತ್ನಿಸಿದರು.

ಆದರೆ ಕಚನ ಮೇಲಿನ ದೇವಯಾನಿಯ ಪ್ರೇಮ ಶುಕ್ರಾಚಾರ್ಯರ ವಿಚಾರವಂತಿಕೆಯನ್ನು ಮೀರಿತ್ತು. "ತಂದೆಯೇ, ಕಚ ನಿಮ್ಮ ಅತ್ಯುತ್ತಮ ಶಿಷ್ಯನಾಗಿದ್ದ. ನಿಮ್ಮ ನಿಷ್ಠಾವಂತ ಸೇವಕನಾಗಿದ್ದ. ನಾನು ಅವನನ್ನು ಅತಿಯಾಗಿ ಪ್ರೇಮಿಸುತ್ತೇನೆ - ನನಗೆ ತಿಳಿದಿರುವ ಸತ್ಯ ಇದಿಷ್ಟೇ. ಅವನೇನಾದರೂ ಸತ್ತು ಮರಳಿ ಬಾರದಿದ್ದರೆ ನನಗು ಜೀವಿಸುವ ಆಸೆಯಿಲ್ಲ - ತಿಳಿಯಿರಿ". ಕಡೆಗೆ, ದೇವಯಾನಿಯ ದುಃಖವನ್ನು ನೋಡಿ ಶುಕ್ರಾಚಾರ್ಯರು ತಡೆಯದಾದರು. ಮೃತಸಂಜೀವಿನಿ ಮಂತ್ರವನ್ನು ಪಠಿಸಿದರು. ಹೊಟ್ಟೆಯೊಳಗಿಂದ ಕಚ ಮಾತನಾಡಿದ. "ಆಚಾರ್ಯರೇ, ಅಸುರರು ಯಥಾ ಪ್ರಕಾರ ನನ್ನನ್ನು ಹೊಡೆದುರುಳಿಸಿದರು ಆದರೆ ನಿಮ್ಮೊಡಲೊಳಗೆ ಹೇಗೆ ಬಂದೆನೋ ಕಾಣೆ" ಎಂದನು. ಅವರು ದೇವಯಾನಿಗೆ ಸತ್ಯವನ್ನು ಹೇಳಲೇಬೇಕಾಯಿತು. "ನೋಡು ಮಗು, ನಿನ್ನ ಕಚ ಈಗ ನನ್ನ ಒಡಲಲ್ಲಿದ್ದಾನೆ. ಅಸುರರು ನನಗೆ ಸುರೆಯ ಅಮಿಷ್ಯವೊಡ್ಡಿದಾಗ ನನಗೆ ತಿಳಿಯಲಿಲ್ಲ. ಸುರೆಯ ಜೊತೆಗೆ ಕಚನ ಆಸ್ತಿಯೂ ನನ್ನೊಡಲನ್ನು ಸೇರಿತು. ನನ್ನೀ ಸುರೆಯ ಆಸೆಗೆ ಧಿಕ್ಕಾರವಿರಲಿ. ಇನ್ನು ಮುಂದೆ ಜ್ಞಾನಾಕಾಂಕ್ಷಿಗಳಾದವರಿಗೆ ಸುರೆಯು ಸಂಪೂರ್ಣ ನಿಷಿದ್ಧವಾಗಿರಲಿ" ಎಂದು ಹಂಬಲಿಸಿದರು. "ಮಗಳೇ, ಕಚ ನನ್ನ ಹೊಟ್ಟೆಯಲ್ಲಿರುವವನಾಗಿ ಅವನು ನನ್ನನ್ನು ಕೊಂದೇ ಹೊರಬರಬೇಕು" ಎಂದು ಅಸಹಾಯಕರಾಗಿ ಹೇಳಿದರು. ದೇವಯಾನಿ ಮನಸ್ಸು ಮಾತ್ರ ಸ್ಪಷ್ಟವಾಗಿತ್ತು. "ತಂದೆಯೇ, ನೀವೇನಾದರೂ ಉಪಾಯ ಮಾಡಿ. ನಿಮ್ಮಿಬ್ಬರಲ್ಲಿ ಯಾರು ಇಲ್ಲವಾದರೂ ನಾನು ಜೀವಂತವಾಗಿರಲಾರೆ" ಎಂದು ನಿಶ್ಚಯದಿಂದ ಹೇಳಿದಳು.

ಶುಕ್ರಾಚಾರ್ಯರಿಗೆ ಒಂದು ಉಪಾಯ ಹೊಳೆಯಿತು. ಇದೀಗ ಅವರಿಗೆ ಕಚ ತಮ್ಮ ಬಳಿ ಶಿಷ್ಯವೃತ್ತಿಯನ್ನು ಅರಸಿ ಬಂದ ಕಾರಣ ಹೊಳೆಯಿತು. "ಕಚ, ನೀನು ನನ್ನ ಬಳಿ ಬಂದ ಕಾರಣ ಇದೀಗ ನನಗೆ ಸ್ಪಷ್ಟವಾಯಿತು. ಅದರಲ್ಲೀಗ ನೀನು ಜಯವನ್ನು ಪಡೆಯುತ್ತೀಯೆ. ನೀನು ನನ್ನೊಡಲೊಳಗಿಂದ ಹೊರವರುವ ಉಪಾಯವೊಂದೇ. ನಾನೀಗ ನಿನಗೆ ಮೃತಸಂಜೀವಿನಿ ವಿದ್ಯೆಯನ್ನು ಹೇಳಿಕೊಡುತ್ತೇನೆ. ನೀನು ನನ್ನೊಡಲನ್ನು ಸೀಳಿ ಹೊರಬಂದ ತಕ್ಷಣ ನಾನು ಮರಣಹೊಂದುತ್ತೇನೆ. ನೀನು ನನ್ನನ್ನು ಬದುಕಿಸಬೇಕು." ಎಂದರು.

ಕಚ ಹೊರಬಂದನು. ಮರಣಿಸಿದ್ದ ಶುಕ್ರಾಚಾರ್ಯರನ್ನು ಅವರಿಂದಲೇ ಕಲಿತ ಮೃತಸಂಜೀವಿನಿ ವಿದ್ಯೆಯಿಂದ ಮತ್ತೆ ಜೀವಂತವಾಗಿಸಿದನು. ಶುಕ್ರಾಚಾರ್ಯರು ಶಿಷ್ಯನ ಶ್ರದ್ಧೆ, ಬುದ್ಧಿವಂತಿಕೆ, ಜ್ಞಾನದಿಂದ ಸಂಪ್ರೀತರಾದರು. ಕೋಪಾವಿಷ್ಟರಾಗಿ ತಕ್ಷಣವೇ ಅಸುರರತ್ತ ತೆರಳಿದರು. "ಮಹಾ ಮೂರ್ಖ ಅಸುರರೇ! ನೋಡಿ ನೀವೇನು ಮಾಡಿದ್ದೀರಿ. ನೀವು ಯಾವುದನ್ನು ಕಚ ಅರಿಯಬಾರದು ಎಂದು ಹಪಹಪಿಸಿದಿರೋ ಅದೀಗ ಅವನಿಗೆ ದೊರೆತಾಗಿದೆ. ಸ್ವತಃ ನೀವೇ ಅವನು ಮೃತಸಂಜೀವಿನಿ ವಿದ್ಯೆ ಕಲಿಯುವುದಕ್ಕೆ ಕಾರಣರಾಗಿದ್ದೀರಿ. ಆದರೆ ಹೆದರದಿರಿ. ನನ್ನ ಮಗಳಾದ ದೇವಯಾನಿ ಕಚನನ್ನು ಬಹುವಾಗಿ ಪ್ರೇಮಿಸಿದ್ದಾಳೆ. ಆದ್ದರಿಂದ ಕಚ ನಮ್ಮ ಬಳಿಯೇ ಇರುತ್ತಾನೆ" ಎಂದು ಅಸುರರನ್ನು  ಮೂದಲಿಸಿ ವಾಪಸಾದರು.

ಇತ್ತ ಕಚನ ವಿದ್ಯಾಭ್ಯಾಸ ಮುಗಿಯಿತು. ದೇವಯಾನಿಯ ಮನಸ್ಸಿನ ಅಭಿಲಾಷೆಯನ್ನು ಪೂರ್ತಿಯಾಗಿ ತಿಳಿಯದಿದ್ದರೂ ದೇವಯಾನಿ ತನ್ನ ಮೇಲೆ ಅತಿಯಾದ ಸ್ನೇಹಹೊಂದಿರುವುದನ್ನು ಕಚ ತಿಳಿದಿದ್ದ. ತಾನಿನ್ನು ಮತ್ತೆ ದೇವಲೋಕಕ್ಕೆ ಮರಳುತ್ತಿರುವುದನ್ನು ದೇವಯಾನಿಗೆ ಹೇಳುವುದಾದರೂ ಹೇಗೆ? ಎಂದು ಕಚ ಚಿಂತಿಸುತ್ತಿದ್ದನು. ಕಡೆಗೆ ಆ ದಿನ ಬಂದೆ ಬಂತು. ಕಚ ಶುಕ್ರಾಚಾರ್ಯರಿಗೆ ನಮಸ್ಕರಿಸಿ "ಗುರುಗಳೇ, ನಿಮ್ಮ ದಯೆಯಿಂದ ನನ್ನ ಯೋಗ್ಯತಾನುಸಾರ ನನ್ನ ವಿದ್ಯೆ ಸಂಪೂರ್ಣವಾಗಿದೆ. ನಾನಿನ್ನು ನನ್ನ ಲೋಕಕ್ಕೆ ಮರಳಬೇಕಾಗಿದೆ. ದಯವಿಟ್ಟು ನನಗೆ ಅನುಮತಿಯನ್ನು ಕೊಡಬೇಕು" ಎಂದು ಪ್ರಾರ್ಥಿಸಿದನು. ಶುಕ್ರಾಚಾರ್ಯರಿಗೆ ಪರಮಾಶ್ಚರ್ಯವಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಅನುಮತಿ ಕೊಟ್ಟರು. "ದೇವಯಾನಿಗೆ, ಕಚನ ನಿರ್ಧಾರ ತಿಳಿದಿದೆಯೋ ಇಲ್ಲವೋ" ಎಂದು ಚಿಂತಿಸಿದರು.

ಕಚ ದೇವಯಾನಿಯತ್ತ ತೆರಳಿದನು. ಕಚನು ಜೀವಂತವಾಗಿ ಮರಳಿದ ನಂತರ ದೇವಯಾನಿ ಅತೀವ ಸಂತಸದಲ್ಲಿದ್ದಳು. ಕಚನ ನಿರ್ಧಾರದ ಇನಿತು ಜ್ಞಾನವೂ ಅವಳಿಗಿರಲಿಲ್ಲ. ಕಚ ತನ್ನತ್ತ ಬರುತ್ತಿರುವುದನ್ನು ನೋಡಿದ ದೇವಯಾನಿ "ಇದೀಗ ಅವನ ವಿದ್ಯಾಭ್ಯಾಸ ಮುಗಿದಿದೆ. ಗೃಹಸ್ಥಾಶ್ರಮ ಪ್ರವೇಶಿಸುವುದಕ್ಕೆ ಅವನಿಗೆ ಅನುಮತಿಯಿದೆ. ನನ್ನನ್ನು ಮದುವೆಯಾಗುವುದಕ್ಕೆ ಯಾವ ತಡೆಯು ಇಲ್ಲವಾಗಿದೆ" ಎಂದು ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು. ಆದರೆ ಅವಳ ಕನಸುಗಳು ಕಣ್ಣೀರಾಗುವುದರಲ್ಲಿತ್ತು. "ದೇವಯಾನಿ, ನಾನು ಆಶ್ರಮವನ್ನು ಬಿಡುವ ಸಮಯ ಬಂದಿದೆ. ನೀನು ನನ್ನ ಅತ್ಯುತ್ತಮ ಗೆಳತಿ. ನಾನು ದೇವಲೋಕಕ್ಕೆ ತೆರಳುವುದಕ್ಕೆ ಅನುಮತಿ ಕೊಡು. ನಾನು ನನ್ನ ಜನರನ್ನು ಸೇರಿ ನನ್ನ ಕರ್ತವ್ಯಗಳನ್ನು ಪೂರೈಸುವ ಕಾಲ ಕೂಡಿಬಂದಿದೆ" ಎಂದು ಮುಗ್ಧನಾಗಿ ಹೇಳಿದನು.

ದಿಗ್ಬ್ರಾಂತಲಾದ ದೇವಯಾನಿಯ ಕಣ್ಣೀರಿನ ಕಟ್ಟೆಯೊಡೆಯಿತು. "ಕಚ, ನಾನು ನಿನ್ನನ್ನು ಬಹುವಾಗಿ ಪ್ರೇಮಿಸುತ್ತಿದ್ದೇನೆ. ನೀನು ವಿದ್ಯಾರ್ಥಿಯಾಗಿದ್ದೆಯಾಗಿ ನಾನು ಮುಕ್ತವಾಗಿ ಇದನ್ನು ತಿಳಿಸಲಾಗಲಿಲ್ಲ. ಇದೀಗ ನೀನು ವಿದ್ಯಾಭ್ಯಾಸ ಮುಗಿಸಿದ್ದೀಯೆ. ಗೃಹಸ್ಥಾಶ್ರಮವನ್ನು ಪ್ರವೇಶಿಸಬಹುದಾಗಿದೆ. ನೀನೀಗ ನನ್ನನ್ನು ಪತ್ನಿಯಾಗಿ ಸ್ವೀಕರಿಸಬಹುದಲ್ಲವೇ? ನಾವು ಸಂತಸದಿಂದ ಕಳೆದ ದಿನಗಳನ್ನು ಅಷ್ಟು ಸುಲಭವಾಗಿ ಮರೆಯುವುದು ಸಾಧ್ಯವೇ? ನಾನೇನು ತಪ್ಪು ಮಾಡಿದ್ದೇನೆ?" ಎಂದು ದುಃಖಿಸಿದಳು. ಕಚನ ಮನಸ್ಸು ಸ್ಪಷ್ಟವಾಗಿತ್ತು. ನಿರ್ಧಾರ ಅಚಲವಾಗಿತ್ತು. ಆದರೆ ದೇವಯಾನಿಯ ಕೈಹಿಡಿದು ಮೃದುವಾಗಿ ಹೇಳಿದನು "ದೇವಯಾನಿ, ನಿನ್ನಂತಹ ಸ್ತ್ರೀ ಈ ಪ್ರಪಂಚದಲ್ಲಿ ಮತ್ತೊಬ್ಬಳು ಇರುವುದು ಕಷ್ಟವೇ ಸರಿ. ನಿನಗೆ ಸಾಟಿಯಿಲ್ಲ. ನಾನು ನಿನ್ನ ತಂದೆಯ ಹೊಟ್ಟೆಯಲ್ಲೇ ಮರುಜನ್ಮ ಪಡೆದವನು ಎನ್ನುವುದನ್ನು ಮರೆಯದಿರು. ಈ ಕಾರಣದಿಂದ ನಾನು ನಿನಗೆ ಸಹೋದರ ಸಮಾನ. ಆದ್ದರಿಂದ ನಾನು ನಿನ್ನನ್ನು ಮದುವೆಯಾಗುವುದು ಅಸಾಧ್ಯದ ಮಾತು. ನಾನೊಬ್ಬನೇ ಹಿಂದಿರುಗಬೇಕು" ಎಂದನು.

ಕೆಣಕಿದ ಫಣಿಯಂತೆ ದೇವಯಾನಿ ಕೋಪವಿಷ್ಟಳಾದಳು. "ಕಚ, ನನ್ನ ಪ್ರೇಮವನ್ನು ತಿರಸ್ಕರಿಸಿದ್ದೀಯೆ. ನಿನಗೆ ಕೇವಲ ಮೃತಸಂಜೀವಿನಿ ವಿದ್ಯೆ ಕಲಿಯುವುದು ಮುಖ್ಯವಾಗಿತ್ತು ಅನ್ನಿಸುತ್ತದೆ. ನನ್ನ ಸ್ನೇಹ ಅಷ್ಟು ಮಾತ್ರಕ್ಕೆ ನಿನಗೆ ಬೇಕಾಗಿತ್ತು. ನನ್ನ ಸ್ನೇಹವನ್ನು ದುರುಪಯೋಗಪಡಿಸಿಕೊಂಡಿದ್ದೀಯೆ. ಆದ್ದರಿಂದ ಕಚ - ಇದೋ ನನ್ನ ಶಾಪ. ಯಾವ ಮೃತಸಂಜೀವಿನಿ ವಿದ್ಯೆಯನ್ನು ಕಲಿಯುವುದಕ್ಕೋಸ್ಕರ ನೀನು ಇಲ್ಲಿಗೆ ಬಂದೆಯೋ ಆ ವಿದ್ಯೆಯನ್ನು ನೀನೆಂದು ಸ್ವತಃ ಬಳಸಲಾರದಂತಾಗಲಿ" ಎಂದು ನೊಂದು ಶಪಿಸಿಬಿಟ್ಟಳು.

ಈಗ ದಿಗ್ಭ್ರಅಂತನಾಗುವ ಸರದಿ ಕಚನದ್ದು. ವರ್ಷಗಳ ತನ್ನ ಪರಿಶ್ರಮ ಹೀಗೆ ಒಂದು ಕ್ಷಣದಲ್ಲಿ ನೀರು ಪಾಲಾದ್ದನ್ನು ನೋಡಿ ಬಹುವಾಗಿ ದುಃಖಿಸಿದನು. ದುಃಖ ಕ್ರಮೇಣ ಕೋಪಕ್ಕೆ ತಿರುಗಿತು. "ದೇವಯಾನಿ, ಹಿಂದೂ ಮುಂದು ನೋಡದೆ ವಿಷಯವನ್ನು ಸರಿಯಾಗಿ ಅರಿಯದೆ ದುಡುಕಿನಿಮ್ದ ನನ್ನನ್ನು ಶಪಿಸಿದ್ದೀಯೆ. ಇದು ಸರಿಯಲ್ಲ. ಈ ನಿನ್ನ ಶಾಪಕ್ಕೆ ಇದೋ ನನ್ನ ಪ್ರತಿಶಾಪ. ಋಷಿಪುತ್ರಿಯಾದ ನಿನ್ನ ಯಾವ ಋಷಿಪುತ್ರನು  ಮದುವೆಯಾಗದಿರಲಿ. ನಿನ್ನ ಶಾಪದಿಂದ ನಾನು ಸಂಜೀವಿನಿ ವಿದ್ಯೆಯನ್ನು ಪ್ರಯೋಗಿಸಲಾಗುವುದಿಲ್ಲ. ಆದರೆ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸುವುದು ಇನ್ನು ಮುಂದೆ ನನ್ನ ಜೀವನದ ಗುರಿ" ಎಂದು ಪ್ರತಿಶಾಪವನ್ನು ಕೊಟ್ಟನು. ತಂದೆ, ಮಗಳು ದುಃಖದಿಂದ ಕಚ ದೇವಲೋಕಕ್ಕೆ ಮರಳುವುದನ್ನು ನೋಡಿದರು.

ಕಾಲಕಳೆದಂತೆ ಕ್ರಮೇಣವಾಗಿ ದೇವಯಾನಿ ಕಚನನ್ನು ದುಃಖವನ್ನು ಮರೆತಳು. ಕಡೆಗೆ ಇದೆಲ್ಲವನ್ನು ಸಂಪೂರ್ಣವಾಗಿ ಮನಸ್ಸಿನಿಂದ ಇಲ್ಲವಾಗಿಸಿದಳು.  ಅಸುರ ರಾಜನಾದ ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆಯ ಜೀವದ ಗೆಳತಿಯಾಗಿ, ತಂದೆಯ ಮುದ್ದಿನ ಮಗಳಾಗಿ ಬೆಳೆದಳು. 

Friday, January 11, 2019

ತ್ರಿಪುರ ದಹನ, ತ್ರಿಪುರಾಂತಕ ಶಿವ

ದೇವತಾ ಸೇನಾಪತಿಯಾದ ಕಾರ್ತಿಕೇಯನು ತಾರಕಾಸುರನನ್ನು ಸಂಹರಿಸಿದನು. ತಮ್ಮ ನಾಯಕನನ್ನು ಕಳೆದುಕೊಂಡ ಅಸುರರು ಬೆದರಿ ದಿಕ್ಕಾಪಾಲಾಗಿ ಹರಿದು ಹಂಚಿಹೋದರು. ಸ್ವಲ್ಪ ಸಮಯದ ನಂತರ ತಾರಕನ ಮಕ್ಕಳಾದ ತಾರಕಾಕ್ಷ, ವಿದ್ಯುನ್ಮಾಲಿ ಮತ್ತು ಕಮಲಾಕ್ಷ ಘೋರ ತಪಸ್ಸಿಗೆ ಮೊದಲಾದರು. ತಪಸ್ಸಿನಲ್ಲಿ ಅನೇಕ ಋತುಗಳನ್ನು ಕಳೆದರು. ಅವರ ದೇಹ ಎಷ್ಟರಮಟ್ಟಿಗೆ ಕೃಶವಾಯಿತೆಂದರೆ ರಕ್ತನಾಳಗಳೂ ಸಹ ಬರಿಗಣ್ಣಿಗೆ ಕಾಣತೊಡಗಿದವು. ಕಡೆಗೊಮ್ಮೆ ಚತುರ್ಮುಖ ಬ್ರಹ್ಮನಿಗೆ ಅವರಿಗೊಲಿಯದೆ ವಿಧಿಯಿಲ್ಲದಾಯಿತು. ಪ್ರತ್ಯಕ್ಷನಾದ ಬ್ರಹ್ಮದೇವ "ನಿಮ್ಮ ಕಠಿಣ ತಪಸ್ಸಿಗೆ ಮೆಚ್ಚಿದ್ದೇನೆ, ನಿಮ್ಮ ಇಷ್ಟಾರ್ಥವೇನು?" ಎಂದು ವಿಚಾರಿಸಿದನು. "ದೇವದೇವ, ನಮ್ಮ ತಂದೆ ಹತನಾಗಿದ್ದಾನೆ. ನಾವು ರಾಜ್ಯವನ್ನು ಕಳೆದುಕೊಂಡಿದ್ದೇವೆ. ನಮಗೆ ಎನ್ನುವ ಒಂದು ಸ್ಥಳವಿಲ್ಲ. ನಿನ್ನ ದಯೆಯಿಂದ ನಾವು ಒಂದು ನಗರವನ್ನು ನಿರ್ಮಿಸಬೇಕೆಂದಿದ್ದೇವೆ. ಆದರೆ ಇಂತಹ ನಗರವೆಂದರೆ ಅದು ಅಬೇಧ್ಯವಾಗಿರಬೇಕು ಮತ್ತು ಶಾಶ್ವತವಾಗಿರಬೇಕು" ಎಂದರು ಅಸುರರು. ಯಥಾಪ್ರಕಾರ ಬ್ರಹ್ಮನು ನಸುನಕ್ಕನು. "ಅಸುರರೇ, ಯಾವುದೂ ಶಾಶ್ವತವಾಗಿರಲಾರದು" ಎಂದನು.  "ಸರಿ ಹಾಗಿದ್ದ ಪಕ್ಷದಲ್ಲಿ ನಾವು ಮೂರು ನಗರಗಳನ್ನು ನಿರ್ಮಿಸುತ್ತೇವೆ. ಅವು ಮೂರೂ ಒಂದೇ ಒಂದು ಬಾಣ ಪ್ರಯೋಗದಲ್ಲೇ  ನಿರ್ನಾಮವಾಗುವಂತಿರಬೇಕು." ಎಂದರು ಚಾಣಾಕ್ಷ ಅಸುರರು. ಒಂದು ಬಾಣ ಪ್ರಯೋಗಕ್ಕೆ ಎಟುಕದಂತಹ ಮೂರು ನಗರಗಳನ್ನು ನಿರ್ಮಿಸಿದರಾಯಿತು ಎನ್ನುವುದು ಅವರ ಲೆಕ್ಕಾಚಾರ. "ತಥಾಸ್ತು, ಅಸುರ ಶಿಲ್ಪಿಯಾದ ಮಾಯಾಸುರನ ಸಹಾಯದಿಂದ ಅಂತಹ ನಗರವೊಂದನ್ನು ನಿರ್ಮಿಸಿಕೊಳ್ಳಿ" ಎಂದ ಬ್ರಹ್ಮದೇವ ಅಂತರ್ಧಾನನಾದನು. 

ಮಹತ್ತರವಾದುದನ್ನು ಸಾಧಿಸಿದ ವಿಜಯೋತ್ಸಾಹದಲ್ಲಿ ಅಸುರರು ವಾಪಸಾದರು. ಮಾಯಾಸುರ ಅವರಿಗೋಸ್ಕರ ಮೂರು ಅಭೇದ್ಯವಾದ ನಗರಗಳನ್ನು ನಿರ್ಮಿಸುವುದಕ್ಕೆ ತೊಡಗಿದ. ಮೂರು ಮಹಡಿಗಳಂತೆ ಮೂರು ನಗರಗಳು ಸಿದ್ಧವಾದವು. ಮೊದಲನೆಯದು ಕಬ್ಬಿಣದ ನಗರ. ಮಧ್ಯದ್ದು ಬೆಳ್ಳಿ ಮತ್ತು ಮೂರನೆಯದು ಚಿನ್ನದ ನಗರಿ. ಮೊದಲನೆಯದ್ದು ಭೂಮಿಯ ಮೇಲಿದ್ದರೆ, ಎರಡನೆಯದು ಆಕಾಶದಲ್ಲಿ ಮತ್ತು ಮೂರನೆಯದ್ದು ಸ್ವರ್ಗಲೋಕಕ್ಕೆ ಚಾಚಿಕೊಂಡಿತ್ತು. ಹೆಮ್ಮೆಯಿಂದ ನಗರಗಳನ್ನು ನೋಡಿದ ಅಸುರಾಧೀಶರು ಅದಕ್ಕೆ ತ್ರಿಪುರ ಎಂದು ನಾಮಕರಣ ಮಾಡಿದರು. ಮೂರು ನಗರಗಳು ಸದಾ ತೇಲುತ್ತಾ, ಚಲಿಸುತ್ತಾ  ಇರುತ್ತವೆ. ಅಷ್ಟಲ್ಲದೇ ಅವು ಒಂದು ನೇರ ರೇಖೆಗೆ ಸಾವಿರ ವರ್ಷಕ್ಕೊಮ್ಮೆ ಮಾತ್ರ ಬರುತ್ತವೆ. ಹಾಗೆ ಬರುವುದು ಪುಷ್ಯ ನಕ್ಷತ್ರ ಚಂದ್ರನನ್ನು ಸೇರಿದಾಗ ಮಾತ್ರ ಎಂದನು ಮಾಯಾಸುರ. "ಹಾಗಿದ್ದರೆ ಸಾವಿರ ವರ್ಷಕ್ಕೊಮ್ಮೆ ಅಪಾಯ ಬರುವ ಸಾಧ್ಯತೆಯಿದೆ ಎಂದಹಾಗಾಯಿತು" ಎಂದರು ರಾಕ್ಷಸರು. "ಹೆದರಬೇಡಿ, ಸಾವಿರವರ್ಷಕ್ಕೊಮ್ಮೆ ನೇರ ರೇಖೆಗೆ ಬಂದರು ಸಹ ಒಂದು ಗಳಿಗೆ ಕಾಲಕ್ಕೂ ಕಡಿಮೆ ಅವು ನೇರ ರೇಖೆಯಲ್ಲಿರುತ್ತವೆ. ಪರಶಿವನಲ್ಲದೆ ಬೇರೆ ಯಾರು ಸಹ ಒಂದು ಬಾಣದಲ್ಲಿ ಅಷ್ಟು ವೇಗವಾಗಿ  ಮೂರು ನಗರಗಳನ್ನು ಧ್ವಂಸ ಮಾಡುವುದು ಸಾಧ್ಯವಿಲ್ಲವೆಂದು" ಬೀಗಿದನು ಮಾಯಾಸುರ. ರಾಕ್ಷಸರು ನಿಟ್ಟುಸಿರಿಟ್ಟರು "ಅಷ್ಟಲ್ಲದೇ, ನಮ್ಮ ಇಷ್ಟದೈವನಾದ ಶಿವನೇ ನಮ್ಮನ್ನು ಏಕಾದರೂ ಕೊಲ್ಲುತ್ತಾನೆ" ಎಂದು ಧೈರ್ಯ ತಂದುಕೊಂಡರು.

ಸ್ವಲ್ಪದರಲ್ಲಿ ಸೃಷ್ಟಿಯ ಸಕಲ ರಾಕ್ಷಸರೂ ಎಲ್ಲೆಡೆಯಿಂದ ತ್ರಿಪುರಾನಗರಿಗೆ ಬಂದು ಸೇರಿದರು. ನಗರಿಗಳಲ್ಲಿ ಭೋಗಜೀವನಕ್ಕೆ ಬೇಕಾದ ಸಕಲವೂ ತುಂಬಿ ತುಳುಕುತ್ತಿತ್ತು. ಮನೆಗಳೆಲ್ಲ ಮಹಲುಗಳಂತೆ ಕಂಗೊಳಿಸುತ್ತಿದ್ದವು. ವನಗಳು, ತೋಟಗಳು, ಕೊಳಗಳು, ತೋಪುಗಳು ಎಲ್ಲವು ಸೇರಿ ನಗರಗಳು ಅಪರಿಮಿತ ಸೌಂದರ್ಯದಿಂದ ತುಂಬಿದ್ದವು. ಅಸುರರು ಸದಾ ತೇಲುತ್ತಾ ಸಾಕಲಾಲೋಕಗಳಲ್ಲಿಯೂ ವಿಹರಿಸುತ್ತಿದ್ದರು. ಮಿತಿಯೇ ಇಲ್ಲದ ಸುಖದಲ್ಲಿ ಜೀವಿಸುತ್ತಿದ್ದರು.

ಇದ್ದಕ್ಕಿದ್ದ ಹಾಗೆ ಒಂದು ದಿನ ಮಾಯಾಸುರನಿಗೆ ಒಂದು ಭೀಕರವಾದ ಕನಸು ಬಿತ್ತು. ಅಸುರಾಯಾಧೀಶರನ್ನು ತಕ್ಷಣ ಭೇಟಿ ಮಾಡಿದವನೇ ಕನಸನ್ನು ವಿವರಿಸತೊಡಗಿದನು. " ನಮ್ಮ ತ್ರಿಪುರ ಇದ್ದಕ್ಕಿದ್ದ ಹಾಗೆ ಅಂಧಕಾರದಲ್ಲಿ ಮುಳುಗಿದ ಹಾಗೂ, ನಮ್ಮೆಲ್ಲರ ಮನೆಗಳಿಗೆ ಸಾಗರದ ನೀರು ಉಕ್ಕಿ ಹರಿದ ಹಾಗೂ ಕನಸು ಕಂಡೆನು. ನಾಲ್ಕು ಕಾಲುಗಳುಳ್ಳ ಮನುಷ್ಯನೊಬ್ಬ ಹಣೆಯಲ್ಲಿ ರಕ್ತವರ್ಣದ ಚೂರ್ಣವನ್ನು ಬಳಿದುಕೊಂಡವನೇ ಸ್ತ್ರೀಯೊಬ್ಬಳನ್ನು ಬೆನ್ನಟ್ಟುತ್ತಿದ್ದ. ಇದೆಲ್ಲವನ್ನು ನೋಡಿದರೆ ನಮಗೆ ಕೇಡುಗಾಲ ಬಂದಹಾಗಿದೆ. ತ್ರಿಪುರಾನಗರಿಗೆ ಏನು ಸಂಚಕಾರವಿದೆ." ಎಂದು ಭಯದಿಂದ ಆತಂಕಗೊಂಡನು ಮಾಯಾಸುರ. ಅಭೇದ್ಯವಾದ ನಮ್ಮ ನಗರಿಗೆ ಏನು ಅಪಾಯವಿರಬಹುದು ಎನ್ನುವುದು ಅವರಿಗೆ ಬಗೆಹರಿಯಲಿಲ್ಲ. "ಇನ್ನು ಮುಂದೆ ಧರ್ಮದ ದಾರಿಯಲ್ಲೇ ನಡೆಯೋಣ. ಎಲ್ಲೆಡೆ ಶಾಂತಿ ಮತ್ತು ನೆಮ್ಮದಿಯಿರುವ ಹಾಗೆ ನೋಡಿಕೊಳ್ಳೋಣ. ಹಾಗಿದ್ದಲ್ಲಿ ಬರಲಿರುವ ಅಪಾಯ ನಿವಾರಣೆಯಾಗಬಹುದು" ಎಂದನು ಮಾಯಾಸುರ.

ಅಸುರಾಧೀಶರು ಪರಾಮರ್ಶಿಸಿದರು. "ನಾವಿಲ್ಲಿ ಪೂರ್ತಿ ಕ್ಷೇಮವೆಂದುಕೊಂಡಿದ್ದೆವಲ್ಲ. ಮಾಯಾಸುರನಾದರೋ ಧರ್ಮದಿಂದಿರಿ ಎನ್ನುತ್ತಿದ್ದಾನೆ. ಆದರೆ ಈ ಹಿಂದೆ ನಮ್ಮ ಪೂರ್ವಜರು ಧರ್ಮದಿಂದಿದ್ದರೂ ಅದರಿಂದ ನಮಗೆ ದೊರೆತುದೇನು?" ಎಂದು ಅಹಂಕಾರದಿಂದ ಹ್ಞೂಕರಿಸಿದರು. ಮನದಾಳದ ನೆಮ್ಮದಿ, ತೃಪ್ತಿಗಳು ಕಳೆದುಹೋದವು. ಕ್ಷೋಭೆಗೊಳಗಾದ ಮನಸ್ಸಿನಲ್ಲಿ ಮತ್ತೆ ಹಗೆ, ದ್ವೇಷಗಳು ತುಂಬಿಕೊಂಡವು. "ಈ ದೇವತೆಗಳು, ಋಷಿಗಳು ನಮ್ಮ ಸಾವಿಗೆ ಹೊಂಚು ಹಾಕುತ್ತಿರಬೇಕು. ನಾವು ಅಭಿವೃದ್ಧಿ ಹೊಂದುತ್ತಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಹಲ್ಲುಕಡಿದರು. 

ಇತ್ತ ಮಾಯಾಸುರನು ತಪಸ್ಸಿನಲ್ಲಿ ನಿರತನಾದರೆ, ಮಾನಸಿಕ ಸಂತುಲವನ್ನು ಕಳೆದುಕೊಂಡ ತಾರಕಾಕ್ಷ, ವಿದ್ಯುನ್ಮಾಲಿ ಮತ್ತು ಕಮಲಾಕ್ಷ ಭೂಲೋಕ, ಸ್ವರ್ಗಲೋಕಗಳಲ್ಲಿ ಹಾಹಾಕಾರ ಮೂಡಿಸಿದರು. ಧ್ವಂಸ, ಲೂಟಿ, ಹಿಂಸೆ, ಕೊಲೆ ಮಾಡುತ್ತಾ ಇದ್ದೀಯ ನಗರಳನ್ನು ನಿರ್ನಾಮ ಮಾಡುವುದಕ್ಕೆ ಶುರುಮಾಡಿದರು. ದೇವತೆಗಳು ತಮ್ಮ ನಾಯಕನಾದ ಇಂದ್ರನ ನೇತೃತ್ವದಲ್ಲಿ ಚತುರ್ಮುಖ ಬ್ರಹ್ಮನನ್ನು ನೋಡಿದರು. ಸೋಲಿಲ್ಲದ ತ್ರಿಪುರಾಸುರರು ನಮ್ಮ ಮೇಲೆ ಪದೇ ಪದೇ ಧಾಳಿ ಮಾಡಿ ಧ್ವಂಸಮಾಡುತ್ತಿದ್ದಾರೆ. ನಿನ್ನ ವಾರದಿಂದ ತ್ರಿಪುರಾನಗರಿ ಅಭೇದ್ಯವಾಗಿದೆ." ಎಂದು ಕೊರಗಿದರು. ಬ್ರಹ್ಮನು "ಹೆದರಬೇಡಿ. ತ್ರಿಪುರಾನಗರಿ ಅಭೇದ್ಯವಲ್ಲ. ಒಂದು ಬಾಣಪ್ರಯೋಗದಿಂದ ಮಾತ್ರ ಅದನ್ನು ನಿರ್ನಾಮ ಮಾಡಬಹುದು. ಆದರೆ ಪರಶಿವನಿಂದ ಮಾತ್ರ ಇದು ಸಾಧ್ಯ. ಅವನ ಸಹಾಯ ಬೇಡೋಣ" ಎಂದನು. ತತ್ಕ್ಷಣವೇ ಕೈಲಾಸಕ್ಕೆ ಹೋಗಿ ಶಿವನನ್ನು ಭೇಟಿ ಮಾಡಿದರು. "ರುದ್ರದೇವನೇ, ನಮಸ್ಕಾರ. ದಿತಿ ಯ ಮಗನಾದ ಮಾಯಾಸುರ ನಿರ್ಮಿಸಿರುವ ತ್ರಿಪುರಾನಗರಿಯನ್ನು ನಿನ್ನಿಂದ ಮಾತ್ರ ಧ್ವಂಸ ಮಾಡುವುದಕ್ಕೆ ಸಾಧ್ಯ. ಅದರಲ್ಲಿ ವಾಸವಾಗಿರುವ ತ್ರಿಪುರಾಸುರರು ಮೂರೂ ಲೋಕಗಳಲ್ಲಿ ಭೀಭತ್ಸರಾಗಿದ್ದಾರೆ. ದಯವಿಟ್ಟು ನಮ್ಮನ್ನು ರಕ್ಷಿಸು" ಎಂದು ಶಿವನನ್ನು ಕೇಳಿಕೊಂಡರು. "ಹೆದರಬೇಡಿ ದೇವತೆಗಳೇ, ರಾಕ್ಷಸರು ಹೀಗೆ ನಡೆದುಕೊಂಡರೆ ಅವರನ್ನು ನಾನು ಖಂಡಿತಾ ಸಂಹರಿಸಿ ತ್ರಿಪುರಾನಗರಿಯನ್ನು ಸುತ್ತು ಬೂದಿ ಮಾಡುತ್ತೇನೆ" ಎಂದು ಆಶ್ವಾಸನೆ ಕೊಟ್ಟನು. ಅದರಿಂದ ಚೇತರಿಸಿಕೊಂಡ ದೇವತೆಗಳು ತ್ರಿಪುರಾನಗರಿಗೆ ಧಾಳಿ ಮಾಡಿದರು.       

ದೇವತೆಗಳನ್ನೆದುರಿಸಲು ತಾರಕಾಕ್ಷ ತನ್ನ ಚಿನ್ನದ ನಗರಿಯಿಂದ ಹಾರಿದನು ಸೇನೆಯೊಡನೆ ಹೊರಬಂದನು. ಮತ್ತೊಂದೆಡೆ ಶಿವನ ಸೇವಕನಾದ ನಂದಿ ಶಿವಗಣಗಳ ಜೊತೆಯಲ್ಲಿ ವಿದ್ಯುನ್ಮಾಲಿಯನ್ನೆದುರಾದನು. ಭೀಕರ ಯುದ್ಧದಲ್ಲಿ ವಿದ್ಯುನ್ಮಾಲಿ ಹತನಾದನು. ಇದನ್ನು ಗಮನಿಸಿದ ಮಾಯಾಸುರ "ಇದೇಕೋ ನಮಗೆ ವಿಪರೀತವಾಗುತ್ತಿದೆ" ಎಂದವನೇ ಅಸುರೀ ಮಾಯೆಗೆ ತೊಡಗಿದ. ಭೀಕರವಾದ ಅಗ್ನಿಯನ್ನು ಸೃಷ್ಟಿಸಿ ದೇವತೆಗಳನ್ನು ಅಡ್ಡಿಪಡಿಸಿದ. ಅವರ ಮೇಲೆ ಕ್ರೂರಪ್ರಾಣಿಗಳನ್ನು ಆಕಾಶದಿಂದ ಬೀಳಿಸಿದ. ಈ ಧಾಳಿಯಿಂದ ದೇವತೆಗಳು ಹಿಮ್ಮೆಟ್ಟಿದರು. ಅಸುರರೂ ಸಹ ಹಿಂದಿರುಗಿ ತ್ರಿಪುರಾನಗರಿಯನ್ನು ಸೇರಿ ಕೋಟೆಯ ಬಾಗಿಲನ್ನು ಭದ್ರಪಡಿಸಿದರು.

ವಿದ್ಯುನ್ಮಾಲಿಯ ಸಾವಿನಿಂದ ತಾರಕಾಕ್ಷ ಬಹಳ ನೊಂದ, ಚಿಂತಿತನಾದ. "ಹೆದರದಿರು ತಾರಕಾಕ್ಷ, ನಾನು ಸೃಷ್ಟಿಸಿರುವ ಆ ಕೊಳದ ನೀರಿನಿಂದ ಸತ್ತವರನ್ನು ಬದುಕಿಸಬಹುದಾಗಿದೆ." ಎಂದನು ಮಾಯಾಸುರ. ತಕ್ಷಣವೇ ವಿದ್ಯುನ್ಮಾಲಿ ಮತ್ತಿತರ ರಾಕ್ಷಸರನ್ನು ಹೊತ್ತು ತಂದು ಬದುಕಿಸಿದರು. "ನಾನೆಲ್ಲಿದ್ದೇನೆ, ಆ ಗೋಲಿಯೆಲ್ಲಿದೆ, ಅದನ್ನು ಈಗಲೇ ಸಂಹರಿಸುತ್ತೇನೆ" ಎಂದು ವಿದ್ಯುನ್ಮಾಲಿ ಅಬ್ಬರಿಸಿದನು. ಪ್ರೀತಿಯ ತಮ್ಮನು ಜೀವಿತನಾದ್ದರಿಂದ ತಾರಕಾಕ್ಷ ಆನಂದ ತುಂದಿಲನಾದನು. "ರಾಕ್ಷಸರೇ, ನಮ್ಮ ಮಾಯಾಸುರ ಮತ್ತು ಈ ಕೊಳ ಇರುವಾತನಕ ನಾವು ಜೀವಭಯ ಪಡಬೇಕಾದ್ದಿಲ್ಲ" ಎಂದು ರಾಕ್ಷಸರನ್ನು ಹುರಿದುಂಬಿಸಿದನು. ಹೊಸಹುರುಪಿನಿಂದ ದೇವತೆಗಳ ಮೇಲೆ ದಾಳಿಗೆ ತಯಾರಾದರು.

ಈ ಬಾರಿ ರಾಕ್ಷಸರ ಧಾಳಿ ಹೇಗಿತ್ತೆಂದರೆ ಭೂಮಿ ತನ್ನ ಆಯತಪ್ಪಿ ಕೆಳಬೀಳತೊಡಗಿತು. ಬ್ರಹ್ಮದೇವನಿಗೆ ಭೂಮಿಯನ್ನು ನಿಯಂತ್ರಿಸುವುದಕ್ಕೆ ಅಸಾಧ್ಯವಾಯಿತು. ಆಗ ಮಹಾವಿಷ್ಣು ಒಂದು ಗೂಳಿಯ ವೇಷಧರಿಸಿ ಭೂಮಿಯನ್ನು ರಕ್ಷಿಸಿ ಯಥಾಸ್ಥಿತಿಗೆ ತಂದನು. ಬ್ರಹ್ಮದೇವ ನಿಟ್ಟುಸಿರುಬಿಟ್ಟನು. ಮತ್ತು ವೇಗವಾಗಿ ಮುನ್ನುಗ್ಗಿದ ಗೂಳಿ ಕೋಟೆಯನ್ನು ಪ್ರವೇಶಿಸಿತು. ರಾಕ್ಷಸರ ರಕ್ಷಣೆಯನ್ನು ಮೀರಿ ಮಾಯಾಸುರ ನಿರ್ಮಿಸಿದ್ದ ಕೊಳದೊಳಗಿಳಿದು ನೀರನ್ನೆಲ್ಲ ಕುಡಿದುಬಿಟ್ಟಿತು. ನಂತರ ರಾಕ್ಷಸರ ಮೇಲೆ ಧಾಳಿ ಮಾಡಿ ಅವರನ್ನು ಚೆಲ್ಲಾಪಿಲ್ಲಿಯಾಗಿಸಿತು. ಈ ಅಂತರದಲ್ಲಿ ದೇವತೆಗಳು ಉಕ್ಕಿನ ನಗರಿಯನ್ನು ಪ್ರವೇಶಿಸಿದರು. ಮತ್ತೆ ಯುದ್ಧ ಭೂಮಿಗಿಳಿದ ತಾರಕಾಕ್ಷ ಭೀಕರವಾಗಿ ಧಾಳಿಮಾಡಿದನು. ದೇವತೆಗಳನ್ನು ಮತ್ತೆ ಹಿಮ್ಮೆಟ್ಟಿಸಿದನು. ಇನ್ನೊಂದೆಡೆ ಮಾಯಾಸುರ ಮತ್ತು ವಿದ್ಯುನ್ಮಾಲಿ ಮಾಯಾಯುದ್ಧದಿಂದ ದೇವತೆಗಳ ಮೇಲೆ ಪ್ರಹಾರ ಮಾಡಿದರು. ದೇವತೆಗಳು ಪೂರ್ತಿಯಾಗಿ ಹಿಂದಿರುಗಿದರು. ರಾತ್ರಿ ರಾಕ್ಷಸರೆಲ್ಲ ಕೋಟೆ ಸೇರಿದರು.

ಇತ್ತ ಮಾಯಾಸುರ ಆತಂಕಗೊಂಡಿದದ್ದನು. ಮಾರನೆಯ ದಿನ ಪುಷ್ಯ ನಕ್ಷತ್ರ ಚಂದ್ರನನ್ನು ಸೇರುವ ದಿನ. ಸಾವಿರ ವರ್ಷಕ್ಕೊಮ್ಮೆ ಬರುವ ಆ ದಿನ ಮೂರು ನಗರಗಳು ಒಂದು ಅರೆಘಳಿಗೆ ಒಂದೇ ರೇಖೆಗೆ ಬರುವ ದಿನ. ಮಾರನೆಯ ದಿನ ಶಿವನೇ ಯುದ್ಧಕ್ಕಿಳಿದರೆ? ಆ ಒಂದು ಘಳಿಗೆಯಲ್ಲಿ ಶಿವನು ಬಾಣವನ್ನು ಬಿಡುವುದು ಅಸಾಧ್ಯವಾದರೆ ಮತ್ತೆ ಸಾವಿರ ವರ್ಷಗಳು ಯಾವುದೇ ಭಯವಿಲ್ಲವೆಂದು ಮಾಯಾಸುರ ಲೆಕ್ಕಾಚಾರವೂ ನಡೆಸಿದ್ದನು. ಎಲ್ಲಾ ರಾಕ್ಷಸರು ರಾತ್ರಿಯಲ್ಲಿ ಮೋಜುಮಾಡುತ್ತಿದ್ದರೂ ಮಾಯಾಸುರ ಮಾತ್ರ ಯಾವುದೇ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದ್ದ. ಮನದಾಳದಲ್ಲಿ ಅಂತ್ಯ ಸನ್ನಿಹಿತವಾಗುತ್ತಿದೆ ಎನ್ನುವ ಭಾವ ಮಾಯಾಸುರನಿಗೆ. ಆದರೆ ಏನಾದರು ಆಗಲಿ ಕಡೆಯವರೆಗೂ ಹೊರಡಲೇಬೇಕು ನಗರವನ್ನುಳಿಸುವ ಪ್ರಯತ್ನ ಮಾಡಲೇಬೇಕು ಎಂದು ಶಪಥಮಾಡಿದನು.

ಮಾರನೆಯ  ದಿನ ಕಟ್ಟಕಡೆಯ ಯುದ್ಧ ಆರಂಭಗೊಂಡಿತು. ಯುದ್ಧ ಭೀಕರವಾಗುತ್ತಿದ್ದ ಹಾಗೆ ಮೂರೂ ನಗರಗಳು ಹತ್ತಿರವಾಗುತ್ತಾ ಒಂದು ರೇಖೆಗೆ ಬರತೊಡಗಿದವು. ಪುಷ್ಯಯೋಗ ಹತ್ತಿರವಾಗುತ್ತಿರುವುದನ್ನು ನೋಡಿದ ಶಿವನೇ ತನ್ನ ರಥದೊಡನೆ ಅಂದು ಯುದ್ಧಕ್ಕಿಳಿದನು. ಧನಸ್ಸನ್ನೊಮ್ಮೆ ಠೇಮ್ಕರಿಸಿದನು. ವಿದ್ಯುನ್ಮಾಲಿ ಶಿವನೊಡನೆ ಯುದ್ಧಕ್ಕೆ ಹೊರತನಾದರೂ ನಂದಿ ಅವನನ್ನು ಅಡ್ಡಿಪಡಿಸಿದನು. ಕುಪಿತನಾದ ವಿದ್ಯುನ್ಮಾಲಿ ಒಂದು ಬಾಣದಿಂದ ನಂದಿಯ ಎದೆಗೆ ಮರ್ಮಾಘಾತ ಮಾಡಿದನು.  ವಿದ್ಯುನ್ಮಾಲಿಯ ಬಾಣಗಳೆಲ್ಲವನ್ನು ಸಹಿಸಿಕೊಂಡ ನಂದಿ ಅವನ ಕಡೆಗೆ ದಾಪುಗಾಲಿಡುತ್ತಾ ಹೋದನು. ನಂದಿಯ ಎದೆಗೆ ಈಟಿಯನ್ನು ಚುಚ್ಚಿದನು. ಅದೇ ಸಮಯಕ್ಕೆ ಶಿವ ಬಾಣದಿಂದ ಸನ್ನದ್ಧನಾದ್ದನ್ನು ನೋಡಿದ ವಿದ್ಯುನ್ಮಾಲಿ ಶಿವನನ್ನು ಅಡ್ಡಿಪಡಿಸುವುದಕ್ಕೆ ಧಾವಿಸಿದನು. ಅದೇ ಸಮಯಕ್ಕೆ ನಂದಿ ಎದೆಗೆ ಚುಚ್ಚಿದ್ದ ಈಟಿಯನ್ನು ಕಿತ್ತಿ ವಿದ್ಯುನ್ಮಾಲಿಯನ್ನು ಸಂಹರಿಸಿಬಿಟ್ಟನು.

ಆ ಸಮಯಕ್ಕೆ ಸಾವಿರ ವರ್ಷಗಳಿಗೆ ಬರುವ ಆ ಅರೆಘಳಿಗೆ ಕೂಡಿಬಂದಿತು. ಮೂರೂ ನಗರಿಗಳೂ ಒಂದು ನೇರರೇಖೆಗೆ ಬಂದವು. ಪರಶಿವನು ಹೆದೆಯೇರಿಸಿ ಬಾಣವನ್ನು ಬಿಟ್ಟೇಬಿಟ್ಟನು. ಆ ಕ್ಷಣಕ್ಕೆ ಶಿವನಿಗೆ ಮಾಯಾಸುರನ ಮೇಲೆ ಒಂದಿಷ್ಟು ಕರುಣೆ ಮೂಡಿತು. "ಎಷ್ಟಿದ್ದರೂ ಮಾಯಾಸುರ ನನ್ನ ಪರಮಭಕ್ತ. ಈ ಸೋದರರಷ್ಟು ಕ್ರೂರಿಯಲ್ಲ. ಅವನು ನನ್ನ ಬಾಣದಿಂದ ಧ್ವಂಸವಾಗುವುದು ಒಳ್ಳೆಯದಲ್ಲ" ಎಂದು ದುಃಖಿಸಿದನು. ಶಿವನ ಮನದಿಂಗಿತವನ್ನು ಅರಿತವನೇ ಮಯನನ್ನು ರಕ್ಷಿಸಬೇಕು ಎಂದು ಸಂಕಲ್ಪ ಮಾಡಿದನು. ಶಿವನ ಬಾಣಕ್ಕಿಂತ ವೇಗವಾಗಿ ಧಾವಿಸಿದವನೇ ಮಾಯಾಸುರನ ಹತ್ತಿರ ಹಾರಿ ಅವನನ್ನು ಎಚ್ಚರಿಸಿದನು. ಶಿವನ ಬಾಣ ಹುಸಿಯಾಗುವುದಿಲ್ಲವೆಂದು ತಿಳಿದಿದ್ದ ಮಾಯಾಸುರ ತ್ರಿಪುರಾನಗರಿಯಿಂದ ಹಾರಿ ತನ್ನನ್ನು ರಕ್ಷಿಸಿಕೊಂಡನು.

ತ್ರಿಪುರಾನಗರಿಗಳು ಒಂದೇ ರೇಖೆಗೆ ಬಂದ ಅದೇ ಘಳಿಗೆಯಲ್ಲಿ ಶಿವನ ಬಾಣ ನಗರಗಳನ್ನು ಭೇದಿಸಿತು. ತ್ರಿಪುರ ನಗರಿಗಳ ಧ್ವಂಸವಾಯಿತು. ಅದರೊಡನೆ ತಾರಕಾಕ್ಷ, ಕಮಲಾಕ್ಷರೊಡನೆ ಸಕಲ ರಾಕ್ಷಸರ ಸಂಹಾರವು ಆಯಿತು. ದೇವತೆಗಳು ನಿಟ್ಟುಸಿರು ಬಿಟ್ಟರು. ಸಕಲ ಲೋಕಗಳಲ್ಲಿ ಶಾಂತಿ ನೆಲೆಸಿತು.  

Friday, January 04, 2019

ಪ್ರದ್ಯುಮ್ನ ಮತ್ತು ಮಾಯಾವತಿ

ತಪೋನಿರತನಾಗಿದ್ದ ಶಿವನನ್ನು ಕಾಮದೇವ ಪುಷ್ಪಬಾಣದಿಂದ ಎಬ್ಬಿಸಿದ ಕಥೆ ಎಲ್ಲರಿಗು ತಿಳಿದೇ ಇದೆ. ಕ್ರೋಧಾವಿಷ್ಟನಾದ ಶಿವ ಇದು ಮದನಕಾಮನ ಕೆಲಸ ಎಂದು ಅರಿತವನೇ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಸುಟ್ಟು ಬೂದಿ ಮಾಡಿದ. ಶೋಕತಪ್ತಳಾದ ರತಿಗೆ ತಿಳಿಯದೆ ಹೋದದ್ದೆಂದರೆ ಕಾಮದೇವ ಭೂಮಿಯಲ್ಲಿ ಪ್ರದ್ಯುಮ್ನನಾಗಿ ಶ್ರೀಕೃಷ್ಣ ಮತ್ತು ರುಕ್ಮಿಣಿಯ ಮಗನಾಗಿ ಜನ್ಮ ತಳೆದದ್ದು. ದ್ವಾರಕೆಯ ಜನತೆ ಹರ್ಷದಿಂದ ಸಂಭ್ರಮಿಸಿದರು. 

ರುಕ್ಮಿಣಿಗೆ ತನ್ನ ಮಗ ತನ್ನ ಆರೈಕೆಯಲ್ಲಿ ತಂದೆಯಂತೆಯೇ ಅತುಲ ಪರಾಕ್ರಮಿಯಾಗಬೇಕೆಂಬ ಬಯಕೆ. ಆದರೆ ಶ್ರೀಕೃಷ್ಣನ ಮಗನೆಂದ ಮೇಲೆ ವಿಧಿಲೀಲೆ ವೈಪರೀತ್ಯಗಳನ್ನು ಎದುರಿಸಲೇಬೇಕಲ್ಲವೇ. ಅದೇ ಕಾಲಕ್ಕೆ ಶಂಬರಾಸುರನೆಂಬ ರಾಕ್ಷಸನಿದ್ದ. ಅವನಿಗೊಂದು ಘೋರವಾದ ಕನಸಾಯಿತು. "ಶಂಬರ ಎಚ್ಚರಿಕೆ, ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನ ನಿನ್ನನ್ನು ಕೊಲ್ಲಲಿದ್ದಾನೆ " ಎಂದು. ಶಂಬರನೇನೂ ವಿಚಲಿತನಾಗಲಿಲ್ಲ. "ಅವನು ಬೆಳೆದು ದೊಡ್ಡವನಾದ ಮೇಲಲ್ಲವೇ ಆ ಮಾತು. ಅದಕ್ಕೂ ಮೊದಲೇ ಅವನನ್ನು ನಿವಾರಿಸಿದರಾಯಿತು" ಎಂದು ನಿರ್ಧರಿಸಿದ. ಅದೃಶ್ಯನಾದವನೇ ಆಕಾಶ ಮಾರ್ಗವಾಗಿ ನೇರ ದ್ವಾರಕೆಯನ್ನು ತಲುಪಿದ. ಅರಮನೆಯನ್ನು ಪ್ರವೇಶಿಸಿ ತೊಟ್ಟಿಲಿನಿಂದ ಮಗುವನ್ನು ಕೈಗೆ ತೆಗೆದುಕೊಂಡವನೇ "ನೀನೆಯೋ ಆ ಮಗು, ಶಂಬರಾಸುರನನ್ನು ಕೊಲ್ಲುವವನು" ಎಂದು ಕೊಂಕು ಮಾತಾಡುತ್ತ ಮರಳಿ ಹಾರಿ ಹೋದ.

ಬೆಳಗಾಗುತ್ತಲೇ ತೊಟ್ಟಿಲನ್ನು ನೋಡಿದ ರುಕ್ಮಿಣಿ ದಿಗ್ಭ್ರಾಮ್ತಳಾದಳು. ಅವಳ ಪ್ರಲಾಪವನ್ನು ಕೇಳಿದ ಅರಮನೆಯ ಸೇವಕಿಯರೆಲ್ಲ ಓಡಿಬಂದರು. ಪ್ರದ್ಯುಮ್ನ ಕಾಣೆಯಾಗಿರುವುದನ್ನು ಮನಗಂಡವರೇ ವಿಹ್ವಲರಾಗಿ ಶ್ರೀಕೃಷ್ಣನಿಗೆ ವಿಷಯ ತಿಳಿಸುವುದಕ್ಕೆ ಓಡಿದರು. "ಚಿಮ್ತಿಸಬೇಡಿ, ಮಗುವನ್ನು ಹುಡುಕುವುದಕ್ಕೆ ಸೇನೆಯ ತುಕಡಿಯನ್ನು ಕಳಿಸೋಣ" ಎಂದು ಶ್ರೀಕೃಷ್ಣ ಸಮಾಧಾನಪಡಿಸಿದನು. ಆದರೆ ಹುಡುಕಲು ಹೊರಟ ಎಲ್ಲಾ ತುಕಡಿಗಳೂ ಸೋತು ವಾಪಸಾಗಿ ತಲೆತಗ್ಗಿಸಿದವು. ಸಕಲವನ್ನೂ ತಿಳಿದಿದ್ದ ಶ್ರೀಕೃಷ್ಣ ಪುತ್ರಶೋಕದಿಂದ ತಪ್ತಳಾಗಿದ್ದ ರುಕ್ಮಿಣಿಯನ್ನು ಸಮಾಧಾನ ಪಡಿಸಿ ಅವಳನ್ನು ವಿಶೇಷವಾಗಿ ನೋಡಿಕೊಂಡನು.

ಇತ್ತ ಶಂಬರಾಸುರ ಮಗುವನ್ನು ಹೊತ್ತವನೇ ದ್ವಾರಕೆಯಿಂದ ಬಹುದೂರ ಸಮುದ್ರದತ್ತ ಹೋದನು. "ಎಲವೋ ನನ್ನನ್ನು ಕೊಲ್ಲುವ ಪ್ರದ್ಯುಮ್ನ ಮಗುವೇ, ನೋಡು ನಿನಗ್ಯಾವ ದುರ್ಗತಿ" ಎಂದವನೇ ಮಗುವನ್ನು ಆಳವಾಗಿರುವ ನಡು ಸಮುದ್ರದಲ್ಲಿ ಚೆಲ್ಲಿ "ಇನ್ನು ನಾನು ನೆಮ್ಮದಿಯಾಗಿ ನಿದ್ರಿಸಬಹುದು" ಎಂದು ವಾಪಸಾದನು.  ಆದರೆ ಸುದೈವದಿಂದ ಪ್ರದ್ಯುಮ್ನ ಸಾಯಲಿಲ್ಲ. ದೊಡ್ಡದಾದ ಮೀನೊಂದು ಪ್ರದ್ಯುಮ್ನನನ್ನು ನುಂಗಿಬಿಟ್ಟಿತು. ಮೀನುಗಾರ ಗುಂಪೊಮ್ದು ಆಳ ಸಮುದ್ರದಲ್ಲಿ ಮೀನು ಹುಡುಕುತ್ತಾ  ಈ ದೊಡ್ಡ ಮೀನನ್ನು ಬಲೆಗೆ ಚೆಲ್ಲಿಕೊಂಡರು. "ಇಂತಹ ದೊಡ್ಡ ಮೀನು ಶಂಬರಾಸುರನಿಗೆ ತಕ್ಕುದು ನಮಗೆ ಒಳ್ಳೆಯ ಬಹುಮಾನ ಕೊಟ್ಟಾನು" ಎಂದು ಮೀನುಗಾರರು ವಿಮರ್ಶಿಸಿದರು. ಮೀನನ್ನು ಅರಮನೆಯ ಅಡುಗೆಮನೆಗೆ ಕಲಿಸಲು ತೀರ್ಮಾನಿಸಿದರು.  

ಇತ್ತ ಪತಿಯನ್ನು ಕಳೆದುಕೊಂಡ ರತಿ ದುಃಖ ತಡೆಯದೆ ಅಗ್ನಿಪ್ರವೇಶಕ್ಕೆ ಮನಸ್ಸು ಮಾಡಿದಳು. ಆಗ ಅಶರೀರ ವಾಣಿಯೊಂದು ಮೊಳಗಿ "ಕಾಮದೇವ ನಿನಗೆ ಮತ್ತೆ ದೊರೆಯುತ್ತಾನೆ ಚಿಮತಿಸದಿರು" ಎಂದು ತಡೆಯಿತು. "ಶಂಬರಾಸುರನ ಆಸ್ಥಾನಕ್ಕೆ ಒಬ್ಬ ಸೇವಕಿಯ ರೂಪದಲ್ಲಿ ಹೋಗಿ ಅವನ ಅಡುಗೆ ಕೊನೆಯಲ್ಲಿ ಕಾರ್ಯನಿರ್ವಹಿಸಿಕೊಂಡಿರು, ನಿನಗೆ ಒಳ್ಳೆಯದಾಗುವುದು" ಎಂದು ಆದೇಶಿಸಿತು. ಅಂತೆಯೇ ರತಿ ಒಬ್ಬ ಸೇವಕಿಯ ವೇಷಧರಿಸಿ ಶಂಬರಾಸುರನ ಅರಮನೆಗೆ ಹಾರಿಹೋದಳು. ತನ್ನನು ಮಾಯಾವತಿ ಎಂದು ಪರಿಚಯಿಸಿಕೊಂಡ ರತಿ ಕೆಲಸ ಬೇಡಿದಳು. ಅದೇ ಕಾಲಕ್ಕೆ ಅಲ್ಲಿನ ಪ್ರಧಾನ ಸೇವಕಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮಾಯಾವತಿಗೆ ಕೆಲಸ ಸಿಕ್ಕಿತು. ತಾಳ್ಮೆಯಿಂದ ರತಿ ಕಾರ್ಯನಿರ್ವಹಿಸುತ್ತಾ ಒಳ್ಳೆಯ ದಿನಕ್ಕಾಗಿ ಕಾದಳು.

ಒಂದು ದಿನ ಅಡುಗೆ ಕೊನೆಗೆ ಆ ದೊಡ್ಡ ಮೀನನ್ನು ಮೀನುಗಾರರು ಹೊತ್ತು ತಂದರು. ಆ ರಾತ್ರಿಗೆ ಇದೆ ವಿಶೇಷ ಅಡುಗೆ ಎಂದು ಪ್ರಧಾನ ಭಟ್ಟನು ಅದನ್ನು ಕೊಯ್ದವನೇ ಒಳಗೆ ಮಗುವನ್ನು ಕಂಡು ಸ್ಥಮಭೀಭೂತನಾದನು. ಇನ್ನೂ ಬದುಕಿದ್ದ ಸುಂದರವಾದ ಆ ಮಗುವನ್ನು ಬೇರೆ ದಾರಿಗಾಣದೆ ಮಾಯಾವತಿಗೆ ಅದನ್ನು ಬೆಳೆಸುವಂತೆ ಕೇಳಿಕೊಂಡನು. ಮಾಯಾವತಿ ಅದನ್ನು ತನ್ನ ಮನೆಗೆ ಕರೆದೊಯ್ದ ದಿನವೇ ಅತ್ತ ನಾರದ ಮಹರ್ಷಿಗಳು ದಯಮಾಡಿಸಿದರು. ನಾರದರು ಇದು ಮತ್ತಾರೂ ಅಲ್ಲದೆ ಅವಳ ಪತಿಯಾದ ಕಾಮದೇವ ಮನ್ಮಥ ಎಂದು ತಿಳಿಸಿದರು. ಗೊಂದಲಕ್ಕೊಳಗಾದ ರತಿಗೆ ನಾರದರು ಶಿವನು ಮದನನ್ನು ಸುಟ್ಟಾಗ ಮದನ ಮುಂದೆ ಶ್ರೀಕೃಷ್ಣನ ಮಗನಾಗಿ ಹುಟ್ಟುವ ಅವಕಾಶವನ್ನು ಬೇಡಿದ್ದನ್ನು ತಿಳಿಸಿದರು. ಮತ್ತು ಮುಂದೆ ನಡೆದದ್ದೆಲ್ಲವನ್ನೂ ತಿಳಿಸಿದರು. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಮಗು ಯುವಕನಾದ ಮೇಲೆ ಅವನಿಗೆ ಸತ್ಯವನ್ನು ತಿಳಿಸಬೇಕಾಗೂ ಆದೇಶಿಸಿದರು.

ನೋಡುವದಕ್ಕೆ ಶ್ರೀಕೃಷ್ಣನಂತೆಯೇ ಇದ್ದ ಪ್ರದ್ಯುಮ್ನ ಅರಮನೆಯ ಅಡುಗೆ ಮನೆಯಲ್ಲಿ ಎಲ್ಲರ ಮುದ್ದಿನ ಮಗುವಾಗಿ ಬೆಳೆದನು. ನೋಡನೋಡುತ್ತಿದ್ದಂತೆಯೇ ಬೆಳೆದು ಸ್ಪುರದ್ರೂಪಿಯಾದ ಯುವಕನಾದನು. ಅಲ್ಲಿನ ಸೇವಕಿಯರೆಲ್ಲರೂ ಅವನ ರೂಪಕ್ಕೆ ಮನಸೋತು ಅವನ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದರು. ಅವನಿಗೋಸ್ಕರ ವಿಶೇಷ ತಿಂಡಿತಿನಿಸು ತರುತ್ತಿದ್ದರು. ಇದೆಲ್ಲವನ್ನು ನೋಡಿದ ಮಾಯಾವತಿಗೆ ಆತಂಕವಾಗುತ್ತಿತ್ತು. ಆದಷ್ಟು ಬೇಗ ಅವನಿಗೆ ಸತ್ಯವನ್ನು ತಿಳಿಸಬೇಕೆಂದು ತುದಿಗಾಲಮೇಲೆ ನಿಂತಿದ್ದಳು. ಒಂದು ದಿನ ಅವನೊಡನೆ ಏಕಾಂತ ಸಮಯ ಸಿಕ್ಕಿತ್ತು. ಆಗ ಮಾಯಾವತಿ ಪ್ರದ್ಯುಮ್ನ ಜನನದ ನಂತರದ ಕಥೆಯನ್ನೆಲ್ಲ ತಿಳಿಸಿದಳು. ಅವನ ನಿಜನಾಮಧೇಯ ಪ್ರದ್ಯುಮ್ನ ಎಂದು ತಿಳಿಸಿದಳು. ಅವನ ತಾಯಿ ರುಕ್ಮಿಣಿ ಈಗಲೂ ಪುತ್ರಶೋಕದಿಂದ ವ್ಯಾಕುಲಳಾಗಿದ್ದಾಳೆ ಎಂದು ಎಚ್ಚರಿಸಿದಳು. ಪ್ರದ್ಯುಮ್ನನಿಗೆ ತಾನು ಶ್ರೀಕೃಷ್ಣರುಕ್ಮಿಣಿಯರ ಮಗನೆಂದು ತಿಳಿದು ಆಶ್ಚರ್ಯ, ಸಂತೋಷಗಳಾದವು. ಆತ್ಮವಿಶ್ವಾಸ ಮೂಡಿತು. ಆದರೆ ಇಷ್ಟು ವರ್ಷ ತನಗೆ ಅವರ ಸಾನ್ನಿಧ್ಯ ತಪ್ಪಿತಲ್ಲ ಎಂದು ಕ್ರುದ್ಧನಾದನು.  ಮಿಗಿಲಾಗಿ ತಾಯಿಯಾದ ರುಕ್ಮಿಣಿಯ ಶೋಕ ಅವನನ್ನು ಕೋಪವನ್ನು ಇಮ್ಮಡಿಗೊಳಿಸಿತು. 'ಹಾಗಿದ್ದರೆ ಇನ್ನೇನು ಈ ತಕ್ಷಣವೇ ಶಂಬರನಿಗೆ ಗತಿಕಾಣಿಸೋಣ" ಎಂದು ಪ್ರದ್ಯುಮ್ನ ಸನ್ನದ್ಧನಾದನು. ಆದರೆ ಮಾಯಾವತಿ ತಾಳ್ಮೆಯನ್ನು ಬೋಧಿಸಿದಳು. ಶಂಬರಾಸುರ ರಾಕ್ಷಸ, ಮಾಯಾವಿದ್ಯೆಯಲ್ಲಿ ನಿಪುಣ. ನಾನು ನಿನಗೆ ಒಂದಿಷ್ಟು ಮಾಯಾವಿದ್ಯೆ ಕಲಿಸುತ್ತೇನೆ ನಂತರ ನೀನು ಶಂಬರನನ್ನು ಎದುರಾಗು ಎಂದು ಸಮಾಧಾನ ಪಡಿಸಿದಳು. ಒಂದಿಷ್ಟು ಕಾಲದ ನಂತರ ಪ್ರದ್ಯುಮ್ನ ಶಂಬರನ್ನು ಎದುರಿಸುವಷ್ಟು ವಿದ್ಯೆಯನ್ನು ಸಿದ್ಧಿಸಿಕೊಂಡನು. ಮಾಯಾವತಿ ತನ್ನ ದೈವೀಕ ಶಕ್ತಿಯಿಂದ ಪ್ರದ್ಯುಮ್ನನಿಗೆ ರಥವನ್ನು ಸಿದ್ಧಪಡಿಸಿದಳು.

ಒಂದು ಶುಭದಿನ ಪ್ರದ್ಯುಮ್ನ ಶಂಬರನ್ನು ಯುದ್ಧಕ್ಕೆ ಆಹ್ವಾನಿಸಿದನು. "ಒಂದು ಮಗುವನ್ನು ತಾಯಿಯ ಮಡಿಲಿನಿಂದ ಹೇಡಿಯಂತೆ ಕದ್ದೊಯ್ದ ಶಂಬರಾಸುರನೆ, ನನ್ನೊಡನೆ ಯುದ್ಧಕ್ಕೆ ಬಾ" ಎಂದು ಕೂಗಿ ಕರೆದನು. ಇದನ್ನು ಕೇಳಿದ ಶಂಬರಾಸುರ ನಖಶಿಖಾಂತ ಉರಿದು ಹೋದನು. ಈ ನನ್ನ ರಹಸ್ಯವನ್ನು ಅದಾವನು ತಿಳಿದವನು ಎಂದು ಕೋಪದಿಂದ ದ್ವಂದ್ವ ಯುದ್ಧಕ್ಕೆ ಅಬ್ಬರಿಸಿ ಬಂದನು. ಅವರಿಬ್ಬರ ನಡುವೆ ಭೀಕರವಾದ ಯುದ್ಧವಾಯಿತು. ಮೊದಮೊದಲು ನೇರವಾದ ಯುದ್ಧ ನಡೆಯಿತು. ಆದರೆ ಯಾವಾಗ ತನ್ನ ಕೈ ಸೋಲುತ್ತಿದೆ ಎಂದು ಅನ್ನಿಸಿತೋ ಶಂಬರಾಸುರ ಮಾಯಾಯುದ್ಧಕ್ಕೆ ಶುರುವಿಟ್ಟುಕೊಂಡನು. ಮಾಯಾವತಿಯಿಂದ ಕಲಿತ ವಿದ್ಯೆ ಪ್ರದ್ಯುಮ್ನನ ಸಹಾಯಕ್ಕೆ ಬಂದಿತು. ಶಂಬರನ ಎಲ್ಲ ಮಾಯೆಗಳನ್ನು ಮೀರಿದ ಪ್ರದ್ಯುಮ್ನ ತನ್ನ ಮಾಯೆಯಿಂದಲೇ ಅವನನ್ನು ವಿಚಲಿತಗೊಳಿಸಿದ. ಕಡೆಗೆ ಖಡ್ಗದಿಂದ ಶಂಬರನ ಕತ್ತನ್ನು ಕತ್ತರಿಸಿದ. ಮಯಾವತಿಯ ಬಳಿಗೆ ಓಡಿದ.

ಮಾಯಾವತಿ ತನ್ನ ಹರ್ಷೋದ್ಘಾರದ ನಡುವೆಯೂ ಮುಂದಿನ ಕಾರ್ಯವನ್ನು ಮರೆಯಲಿಲ್ಲ. ತಾಯಿಯಾದ ರುಕ್ಮಿಣಿ ಇನ್ನೊಂದು ಕ್ಷಣವೂ ದುಃಖಿಸಬಾರದು ಎಂದವಳೇ ತಕ್ಷಣ ಪ್ರದ್ಯುಮ್ನನನ್ನು ಕರೆದುಕೊಂಡು ದ್ವಾರಕೆಗೆ ಹಾರಿದಳು. ಅದೇ ಸಮಯಕ್ಕೆ ಕೈಲಾಸದಲ್ಲಿ ಶಿವ ಪಾರ್ವತಿಯನ್ನು ವಿವಾಹವಾದನು. ರತಿಗೆ ಮನ್ಮಥನು ಮತ್ತೆ ದೊರೆಯುವ ಗಳಿಗೆ ಕೂಡಿ ಬಂದಿತ್ತು. ದೇವತೆಗಳೆಲ್ಲರೂ ಶಿವನ ಬಳಿಗೆ ಬಂದು ರತಿಗೆ ಮತ್ತೆ ಮನ್ಮಥನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ಪಾರ್ವತಿಯನ್ನು ಒಮ್ಮೆ ನೋಡಿ ನಸುನಕ್ಕ ಶಿವನು "ನಾನೆ ಈಗ ಕಾಮನ ವಶವಾಗಿರುವುದರಿಂದ ರತಿಗೆ ಖಂಡಿತಾ ಕಾಮನು ದೊರೆಯುತ್ತಾನೆ" ಎಂದನು. 

ಶಿವನು ಈ ಮಾತನ್ನಾಡಿದ ಆ ಕ್ಷಣದಲ್ಲಿ ಪ್ರದ್ಯುಮ್ನ ಮತ್ತು ಮಾಯಾವತಿಯರಿಬ್ಬರರೂ ದ್ವಾರಕೆಯಲ್ಲಿ ಶ್ರೀಕೃಷ್ಣನ ಅರಮನೆಯನ್ನು ಪ್ರವೇಶಿಸಿದರು. ಅರಮನೆಯ ಸೇವಕಿಯರು ದೂರದಿಂದ ಅವನನ್ನು ಶ್ರೀಕೃಷ್ಣನೆಂದು ತಪ್ಪಾಗಿ ಭಾವಿಸಿದರು. ಆದರೆ ಅವನ ಜೊತೆಯಿರುವ ಆ ಸುಂದರ ಯುವತಿ ಯಾರು ಎಂದು ಆಶ್ಚರ್ಯದಿಂದ ಮೂಗಿನ   ಮೇಲೆ  ಬೆರಳಿಟ್ಟರು. ಆದರೆ ರುಕ್ಮಿಣಿಗೆ ಮಾತ್ರ ಅವನು ಶ್ರೀಕೃಷ್ಣನಲ್ಲವೆಂದು ತಿಳಿಯಿತು. ಆದರೂ ಅವನಂತೆಯೇ ಇರುವ ಇವನ್ಯಾರು ಎನ್ನುವುದು ಬಗೆಹರಿಯಲಿಲ್ಲ. ಮನದಾಳದಲ್ಲಿ ಮಾತ್ರ "ನನ್ನ ಮಗನೇನಾದರೂ ಜೀವಿದಿಂದಿದ್ದರೆ ಇವನಂತೆಯೇ ಇರುತ್ತಿದ್ದ, ಇಷ್ಟೇ ವಯಸ್ಕನಾಗಿರುತ್ತಿದ್ದ" ಎಂದು ದುಃಖದ ಛಾಯೆಯೊಂದು ಮೂಡಿತು. ಒಂದೊಂದೇ ಅಡಿಯಿಡುತ್ತ ಹತ್ತಿರ ಬರುತ್ತಿದ್ದ ಅವನನ್ನು ನೋಡಿ, ಅವನ ಒಂದೊಂದು ಲಕ್ಷಣವು ಶ್ರೀಕೃಷ್ಣನಂತೆಯೇ ಇರುವುದನ್ನು ನೋಡಿ "ಇವನಿದ್ದರೂ ನನ್ನ ಮಗನೆ ಇರಬಹುದೇ" ಎಂದು ಆಸೆಯೊಂದು ಮೊಳಕೆಮೂಡಿತು.

ಕಡೆಗೆ ಧೈರ್ಯ ಮಾಡಿ "ಯಾರಪ್ಪಾ ನೀನು? ಈ ಸುಂದರ ಯುವತಿ ಯಾರು" ಎಂದು ಕೇಳಿಯೇ ಬಿಟ್ಟಳು ರುಕ್ಮಿಣಿ. ಆ ತಕ್ಷಣದಲ್ಲಿ ಮಹರ್ಷಿ ನಾರದರು ಸಾಕ್ಷಾತ್ ಶ್ರೀಕೃಷ್ಣನ ಜೊತೆಯಾಗಿ ಪ್ರತ್ಯಕ್ಷರಾದರು. "ರುಕ್ಮಿಣಿ ನಿನ್ನ ದುಃಖ ಇಂದಿಗೆ ಸಂಪೂರ್ಣವಾಯಿತು. ಇವತ್ತಿಗೆ ನಿನ್ನ ತಪಸ್ಸು ಫಲಕೊಟ್ಟಿತು. ಇವನು ಮತ್ತಾರು ಅಲ್ಲ, ವರ್ಷಗಳ ಹಿಂದೆ ಕಳೆದು ಹೋದ ನಿನ್ನ ಸುಪುತ್ರನೇ ಇವನು. ಇವನೇ ಪ್ರದ್ಯುಮ್ನ - ಸಾಕ್ಷಾತ್ ಮನ್ಮಥನೇ ನಿನ್ನ ಮಗನಾಗಿ ಮರುಜನ್ಮವಿತ್ತಿದ್ದಾನೆ. ಶಂಬರಾಸುರನನ್ನು ಕೊಲ್ಲುವುದಕ್ಕೋಸ್ಕರ ಇಷ್ಟು ವರ್ಷ ನಿನ್ನಿಂದ ದೂರವಾಗಿರಬೇಕಾಯಿತು. ಈಕೆ ಸಾಕ್ಷಾತ್ ರತೀದೇವಿ" ಎಂದು ಉದ್ಘೋಷಿಸಿದನು.

ಸ್ವತಃ ಪ್ರದ್ಯುಮ್ನನಿಗೇ ರತಿ-ಮನ್ಮಥರ ಕಥೆಯನ್ನು ಕೇಳಿ ಆಶ್ಚರ್ಯವಾಯಿತು. ಮಾಯಾವತಿಗೆ  "ಇದನ್ನು ನನಗೆ ಹೇಳಲೇ ಇಲ್ಲವಲ್ಲ" ಎಂದು ಮೆದುವಾಗಿ ಆಕ್ಷೇಪಿಸಿದನು. "ನಿನ್ನನ್ನು ರುಕ್ಮಿಣಿಗೆ ಒಪ್ಪಿಸುವ ಮೊದಲು ಈ ಮಾತನ್ನು ತಿಳಿಸುವಂತಿರಲಿಲ್ಲ" ಎಂದಳು ಮಾಯಾವತಿ. ಆ ಕ್ಷಣದಲ್ಲಿ ಅವರನ್ನು ಸತಿಪತಿಯರೆಂದು ಘೋಷಿಸಲಾಯಿತು. ದ್ವಾರಕೆಯ ಜನ ತಮ್ಮ ರಾಜಕುಮಾರ ಮರಳಿ ದೊರೆತದ್ದಕ್ಕೆ ಹಬ್ಬವನ್ನಾಚರಿಸಿದರು.      
     

          

Saturday, December 08, 2018

ರುರು ಮತ್ತು ಪ್ರಮದ್ವರೆ

ಭೃಗು ಮಹರ್ಷಿಗಳಿಗೆ ಚ್ಯವನ ಎಂಬ ಮಗನಿದ್ದನು. ಚ್ಯವನ ಒಬ್ಬ ಹೆಸರಾಂತ ಋಷಿಯಾಗಿದ್ದನು. ಸುಕನ್ಯಳನ್ನು ಮದುವೆಯಾಗಿ ಪ್ರಮತಿ ಎಂಬ ಸಾತ್ವಿಕ ಋಷಿಯನ್ನು ಮಗನಾಗಿ ಪಡೆದನು. ಪ್ರಮತಿ ಒಂದು ಆಶ್ರಮದಲ್ಲಿ ವಿದ್ಯಾದಾನ ಮಾಡುತ್ತಿದ್ದನು. ಪ್ರಮತಿಗೆ ಗೃತಾಚಿ ಎಂಬ ಅಪ್ಸರೆಯಲ್ಲಿ ರುರು ಎಂಬ ಸ್ಪೃರದ್ರೂಪಿಯಾದ ಮಗನಿದ್ದನು.  

ಒಂದು ದಿನ ರುರು ಮತ್ತು ಅವನ ಸ್ನೇಹಿತರು ಅರಣ್ಯದಲ್ಲಿ ವಿಹರಿಸುತ್ತಿದ್ದರು. ಒಂದಿಷ್ಟು ಕಾಲದ ನಂತರ ಬಾಯಾರಿಕೆಯಿಂದ ನೀರನ್ನು ಹುಡುಕುತ್ತ ಆಶ್ರಮವೊಂದನ್ನು ತಲುಪಿದರು . ಬಾಗಿಲ ಬಳಿ ಸ್ವಲ್ಪ  ಏರು ಧ್ವನಿಯಲ್ಲಿ "ನಾನು ಮತ್ತು ನನ್ನ ಸ್ನೇಹಿತರು ಬಾಯಾರಿಕೆಯಿಂದ ಬಳಲುತ್ತಿದ್ದೇವೆ. ಯಾರಾದರೂ ನೀರು ಕೊಡುವಿರಾ" ಎಂದು  ಒಳಗಿರುವವರಿಗೆ ಕೇಳುವ ಹಾಗೆ ಕೇಳಿಕೊಂಡನು. ಒಳಗಿನಿಂದ ಸಿಹಿಯಾದ ಯುವತಿಯ ಧ್ವನಿಯೊಂದು ಹೊರಟಿತು. "ಒಂದು ನಿಮಿಷ ಕಾದು ಕುಳಿತಿರಿ. ಮೂಕಪ್ರಾಣಿಯಾದ ಈ ಗಿಳಿಯನ್ನು ಸ್ವಲ್ಪ ಆರೈಕೆ ಮಾಡಿ ನಂತರ ನೀರು ತರುತ್ತೇನೆ" ಎಂದಿತು ಆ ಧ್ವನಿ.  ಸ್ವಲ್ಪ ಹೊತ್ತಿನ ನಂತರ ಆ ಯುವತಿ ಹೊರಬಂದಳು. ಯುವತಿಯ  ಆರೈಕೆಯಿಂದ ಚೇತರಿಸಿಕೊಂಡ ಒಂದು ಗಿಳಿ ಅದೇ ಸಮಯಕ್ಕೆ ಕಿಟಕಿಯಿಂದ ಹೊರಬಂದು ಹಾರುತ್ತ ಕಾಡಿನೊಳಗೆ ಕಣ್ಮರೆಯಾಯಿತು. ಯುವತಿಯ ಮುಖ ಸಂತೃಪ್ತಿಯ ಸೌಂದರ್ಯದ ಕಾಂತಿಯಿಂದ ತುಂಬಿತ್ತು  .

ರುರು ಆ ಸುಂದರ ಯುವತಿಯ ಮುಖವನ್ನು ದಿಟ್ಟಿಸುತ್ತಾ ತನ್ನನ್ನು ತಾನೇ ಮರೆತನು. "ನೀವು ನೀರು ಕೇಳಿದಿರಲ್ಲವೇ" ಎಂದು ನೆನಪಿಸಿದಳು ಯುವತಿ. ಎಚ್ಚೆತ್ತ ರುರು "ಆಮ್....ಹೌದು" ಎನ್ನುತ್ತಾ ಸ್ನೇಹಿತರೊಡಗೂಡಿ  ನೀರು ಸೇವಿಸಿದನು. ಯುವತಿಯನ್ನುದ್ದೇಶಿಸಿ "ಇಷ್ಟು ಸಿಹಿಯಾದ ನೀರನ್ನು ನಾನು ಹಿಂದೆಂದೂ ಸೇವಿಸಿರಲಿಲ್ಲ" ಎಂದನು. ನಸುನಕ್ಕ ಯುವತಿ "ನಿಮ್ಮ ಬಾಯಾರಿಕೆ ಅಷ್ಟು ಮಿಗಿಲಾದದ್ದು" ಎಂದು ಹೇಳಿ ಕಣ್ಮರೆಯಾದಳು. ಅವಳಿಗೆ ಕೃತಜ್ಞತೆಗಳನ್ನರ್ಪಿಸಿ ಯುವಕರು ಆಶ್ರಮದತ್ತ ವಾಪಸಾದರು.

ರುರುವಿಗೆ ಮಾತ್ರ ಆ ಯುವತಿಯನ್ನು ಮರೆಯಲಾಗಲಿಲ್ಲ. ಇದನ್ನು ಗಮನಿಸಿ ಅರ್ಥಮಾಡಿಕೊಂಡ ಅವನ ಸ್ನೇಹಿತರು ಮಾರ್ಗಮಧ್ಯದಲ್ಲೆ ರುರುವನ್ನು ಒಂದಿಷ್ಟು ಕೀಟಲೆಮಾಡಿದರು. ವಾಪಸಾದ ನಂತ ರುರು ಆಲೋಚಿಸಿದನು. ಆ ಯುವತಿಯನ್ನು ಮದುವೆಯಾಗಬೇಕಾದರೆ ತಂದೆಗೆ ಈ ವಿಚಾರ ತಿಳಿಸಬೇಕು. ನಾನೆ ನೇರವಾಗಿ ತಿಳಿಸುವುದೆಂತು. ಸ್ನೇಹಿತರ ಸಹಾಯ ಪಡೆಯೋಣವೆಂದುಕೊಂಡನು. ತಕ್ಷಣವೇ ಅವರ ಬಳಿ ತೆರಳಿ 'ನನಗೆ ಆ ಯುವತಿಯ ಮುಖವನ್ನು ಮರೆಯಲಾಗುತ್ತಿಲ್ಲ' ಎಂದು ಹಿಂಜರೆಯುತ್ತ ತಿಳಿಸಿದನು. ಒಂದಿಷ್ಟು ಕೀಟಲೆ ಮಾಡಿದ ಸ್ನೇಹಿತರು ನಂತರ ಗುರುವಾದ ಪ್ರಮತಿಗೆ ಇದನ್ನು ತಿಳಿಸುವುದಕ್ಕೆ ಒಪ್ಪಿಕೊಂಡರು.

ಮಾರನೆಯ ಪ್ರಮತಿಯ ಬಳಿಬಂದ  ಅವನ ಸ್ನೇಹಿತರು ಸಕಲವನ್ನೂ ತಿಳಿಸಿದರು. "ನನ್ನ ಮಗ ತನ್ನ ವಧುವನ್ನು ತಾನೇ ಆಯ್ಕೆ ಮಾಡಿಕೊಂಡದ್ದು ಸಂತೋಷವೇ ಸರಿ. ತಕ್ಷಣವೇ ಹೊರಡೋಣ, ಆ ಯುವತಿಯಿರುವ ಆಶ್ರಮವನ್ನು ತೋರಿಸಿ" ಎಂದನು. ಪ್ರಮತಿ, ರುರು ಮತ್ತು ಅವನ ಸ್ನೇಹಿತರು ಮತ್ತೆ ಆ ಯುವತಿಯಿರುವ ಆಶ್ರಮಕ್ಕೆ ಬಂದರು. ಆಶ್ರಮದ ಮುಂದಿನ ಉದ್ಯಾವನವನ್ನು ಉಪಚರಿಸುತ್ತಿದ್ದ ಯುವತಿ ರುರುವನ್ನು ನೋಡಿ ತಕ್ಷಣವೇ ಒಳಗೋಡಿದಳು.

ಯುವತಿಯ ತಂದೆಯಾದ ಸ್ಥೂಲಕೇಶಿಯನ್ನು ನೋಡಿದ ತಕ್ಷಣವೇ ಪ್ರಮತಿ ಹರ್ಷಿಸಿದನು. ಸ್ಥೂಲಕೇಶಿ ಪ್ರಮತಿಯ ಬಹಳ ಕಾಲದ ಸ್ನೇಹಿತ. ಸ್ಥೂಲಕೇಶಿಗೂ ಪ್ರಮತಿಯ ಸಂಬಂಧ, ರುರುವಿನಂತಹ ಅಳಿಯನನ್ನು ಪಡೆಯುತ್ತಿರುವುದಕ್ಕೆ ಹರ್ಷಿಸಿದನು. ಅವನ ಮಗಳಾದ ಆ ಯುವತಿಯ ಹೆಸರು ಪ್ರಮದ್ವರೆ. ಮನದಲ್ಲಿ ಏನನ್ನೋ ನೆನೆದು, ಪ್ರಮತಿಯನ್ನುದ್ದೇಶಿಸಿ ಸ್ಥೂಲಕೇಶಿ ನುಡಿದನು "ಸಂತೋಷದಾಯಕವಾದ ಈ ಸಂದರ್ಭದಲ್ಲಿ ನಾನೊಂದು ವಿಚಾರವನ್ನು ತಿಳಿಸಬೇಕು. ಪ್ರಮದ್ವರೆ ನನಗೆ ಹುಟ್ಟಿದ ಮಗಳಲ್ಲ. ನನ್ನ ಸಾಕುಮಗಳು. ಬಹಳ ವರ್ಷಗಳ ಹಿಂದೆ ನದಿಯ ತೀರವೊಂದರಲ್ಲಿ ವಿಹರಿಸುತ್ತಿದ್ದಾಗ ಪೊದೆಯೊಂದರ ಬಳಿ ಒಂದು ಹೆಣ್ಣುಮಗವನ್ನು ಕಂಡೆ. ಯಾವ ಅಪ್ಸರೆಯೊ ಗಂಧರ್ವರೊ ಹೃದಯಾಶೂನ್ಯರು ಇಲ್ಲಿ ಬಿಟ್ಟಿರಬೇಕೆಂದು ತಿಳಿದು ಮಗುವನ್ನು ಮನೆಗೆ ಕರೆತಂದು ನನ್ನ ಮಗಳಾಗಿ ಸ್ವೀಕರಿಸಿದೆ. ಶಾಸ್ತ್ರಾನುಸಾರ ಸಕಲ ಕರ್ಮಗಳನ್ನು, ಸಂಸ್ಕಾರಗಳನ್ನು ನಡೆಸಿ ಮಗಳಿಗೆ ಪ್ರಮದ್ವರೆ ಎಂದು ಹೆಸರನ್ನಿಟ್ಟೆ. ಮುದ್ದಿನಿಂದ, ಅತಿಸೂಕ್ಷ್ಮದಲ್ಲಿ ಇವಳನ್ನು ಬೆಳೆಸಿದೆ. ಇಂದು ನಾನು ಹೆಮ್ಮೆಪಡುವಂತಹ ಮಗಳಾಗಿ ಬೆಳೆದಿದ್ದಾಳೆ" ಎಂದನು. ಗಮನಿವಿತ್ತು ಕೇಳುತ್ತಿದ್ದ ರುರು "ಋಷಿಗಳೇ, ಅವಳ ಜನ್ಮ ರಹಸ್ಯ ಯಾವುದೇ ಇರಲಿ ನಾನು ಪ್ರಮದ್ವರೆಯನ್ನೇ ಮದುವೆಯಾಗಬಯಸುತ್ತೇನೆ" ಎಂದನು. ಹಿರಿಯರೆಲ್ಲ ಆ ಕ್ಷಣವೇ ಮದುವೆಯನ್ನು ನಿಶ್ಚಯಿಸಿದರು. ಸ್ಥೂಲಕೇಶಿ "ವರ್ಗದೈವತ ನಕ್ಷತ್ರ ಮುಂದಡಿಯಿಡುವ ದಿನ ನಿಮ್ಮಿಬ್ಬರ ಮದುವೆ" ಎಂದು ಮುಹೂರ್ತವನ್ನು ತಿಳಿಸಿದನು. ಆ ದಿನ ರುರು ಮತ್ತು ಪ್ರಮದ್ವರೆಯರು ಸಂತೋಷದಿಂದ ಕಾಡಿನಲ್ಲಿ ವಿಹರಿಸಿದರು. 

ಆದರೆ ವಿಧಿಯ ಸಂಕಲ್ಪವೇ ಬೇರೆಯಿತ್ತು. ಕೆಲ ದಿನಗಳ ನಂತರ ಪ್ರಮದ್ವರೆ ತನ್ನ ಸ್ನೇಹಿತರ ಜೊತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾಡಿನಲ್ಲಿ ಆಟವಾಡುತ್ತಿದ್ದಳು. ಹುಡುಗಾಟದ ಸಂತೋಷದಲ್ಲಿ ಅಪಾಯ ಹತ್ತಿರವೇ ಇದ್ದುದು ಅವರ ಗಮನಕ್ಕೆ ಬರಲಿಲ್ಲ. ಅವರು ಆಟವಾಡುತ್ತಿದ್ದ ಸುತ್ತಮುತ್ತಿನಲ್ಲೇ ಘಟಸರ್ಪವೊಂದಿತ್ತು. ಕಣ್ಣಿಗೆ ಬಟ್ಟೆಯಿತ್ತಾಗಿ ತಿಳಿಯದೆ ಪ್ರಮದ್ವರೆ ಪೊದೆಯ ಬಳಿ ಆ ಸರ್ಪವನ್ನು ತುಳಿದುಬಿಟ್ಟಳು. ಕುಪಿತಗೊಂಡ ಸರ್ಪ ಪ್ರಮದ್ವರೆಯನ್ನು ಕಚ್ಚಿಬಿಟ್ಟಿತು. 'ಹ' ಎಂದು ಕೂಗುತ್ತಾ ಪ್ರಮದ್ವರೆ ನೆಲಕ್ಕುರುಳಿದಳು. ಸ್ನೇಹಿತರು ಮತ್ತು ತಂದೆಯಾದ ಸ್ಥೂಲಕೇಶಿ ಆತಂಕದಿಂದ ಓಡಿ ಬರುವಷ್ಟರಲ್ಲಿ ವಿಷವೇರಿ ಪ್ರಮದ್ವರೆಯ ಪ್ರಾಣ ಹಾರಿಹೋಗಿತ್ತು. ದೇಹ ನಿಶ್ಚಲವಾಗಿತ್ತು. ಆದರೆ ಅವಳ ಮುಖದ ಕಾಂತಿ, ದೈವೀಕ ಸೌಮದರ್ಯಕ್ಕೆ ಮಾತ್ರ ಒಂದಿಷ್ಟೂ  ಚ್ಯುತಿ ಬಂದಿರಲಿಲ್ಲ.

ವಿಷಯ ಎಲ್ಲೆಡೆ ಹಬ್ಬಿತು. ಕುಶಿಕ, ಭಾರದ್ವಾಜ. ಉದ್ಧಾಲಕ, ಗೌತಮರೇ ಮುಂತಾದ ಎಲ್ಲ ಆಶ್ರಮಗಳ ಋಷಿಗಳು  ಮತ್ತು ನಿವಾಸಿಗಳು  ಸ್ಥೂಲಕೇಶಿಗಳ ಆಶ್ರಮಕ್ಕೆ ಧಾವಿಸಿದರು. ಸ್ಥೂಲಕೇಶಿಗಳ ದುಃಖ ಹೇಳತೀರದ್ದಾಗಿತ್ತು. ಆದರೆ ರುರುವಿನ ದುಃಖ ಅದನ್ನು ಮೀರಿದುದಾಗಿತ್ತು. ಕೋಪ ಮತ್ತು ದುಃಖವನ್ನು ತಡೆಯಲಾರದೆ ರುರು ತಕ್ಷಣ ದಟ್ಟ ಕಾಡಿನ ಮಧ್ಯಕ್ಕೆ ಓಡಿದನು. "ಅಯ್ಯೋ ನನ್ನೀ ಕಣ್ಣುಗಳಿಂದ ಪ್ರಮದ್ವರೆಯ ಪ್ರಾಣವಿಲ್ಲದ ದೇಹವನ್ನು ನೋಡುವಂತಾಯಿತಲ್ಲ? ತನ್ನ ಸುತ್ತಲಿನ ಪ್ರತಿ ಜೀವವನ್ನು ಆರೈಕೆ ಮಾಡುತ್ತಿದ್ದ ಪ್ರಮದ್ವರೆಗೆ ಈಗ ಆರೈಕೆಯೇ ಸಾಧ್ಯವಿಲ್ಲದಂತಾಯ್ತೆ?" ಎಂದು ವಿಹ್ವಲನಾದನು. ಕಡೆಗೊಮ್ಮೆ ದುಃಖ ಮಿತಿಮೀರಿ "ನಾನು ನಿಜಕ್ಕೂ ಧರ್ಮದಿಂದ ನಡೆದುಕೊಂಡಿದ್ದರೆ, ನನ್ನ ತಪಸ್ಸು ನಿಜವಾದುದಾಗಿದ್ದರೆ, ಗುರುಹಿರಿಯನ್ನು ನಾನು ಸದಾಕಾಲ ಗೌರವಿಸದ್ದರೆ - ಈ ತಕ್ಷಣ ನನ್ನ ಪ್ರಾಣಕ್ಕಿಂತಲೂ ಮಿಗಿಲಾದ ಪ್ರಮದ್ವರೆ ಜೀವ ತಳೆದು ಮತ್ತೆ ಬರಲಿ" ಎಂದು ಪ್ರತಿಜ್ಞೆ ಮಾಡಿದನು.

ಆಗ ಒಂದು ಅಶರೀರವಾಣಿ ಮೊಳಗಿತು. "ರುರು, ಒಮ್ಮೆ ಸತ್ತವರು ತಮ್ಮಿಂದ ತಾವೇ ಮತ್ತೆ ಜೀವತಳೆದು ಬರುವುದು ಸಾಧ್ಯವಿಲ್ಲದ ಮಾತು." ನೋಡನೋಡುತ್ತಿದ್ದಂತೆ ದೇವದೂತನೊಬ್ಬ ರುರುವಿನ ಮುಂದೆ ನಿಂತಿದ್ದ. "ಆದರೆ ನಿನಗೋಸ್ಕರ ದೇವತೆಗಳು ಒಂದು ಉಪಾಯವ ತೋರಿಸಿದ್ದಾರೆ. ನೀನು ನಿನ್ನ ಅರ್ಧ ಆಯುಷ್ಯವನ್ನು ಪ್ರಮದ್ವರೆಗೆ ಧರೆ ಎರೆಯುವುದಾದರೆ ಅವಳು ಮತ್ತೆ ಜೀವಂತಳಾಗುತ್ತಾಳೆ" ಎಂದನು ದೇವದೂತ. ರುರು ಹರ್ಷದಿಂದ "ದೇವದೂತನೇ, ಅರ್ಧ ಆಯುಷ್ಯವೇಕೆ? ಪ್ರಮದ್ವರೆಗೆ ಜೀವಬರುವುದಾದರೆ ನನ್ನ ಪುರ್ತಿಜೀವವನ್ನೇ ಧಾರೆಯೆರೆದೆನು" ಎಂದು ಉದ್ಗರಿಸಿದನು.

ಮರುಕ್ಷಣವೇ ಪ್ರಮದ್ವರೆಯ ದೇಹ ಜೀವದಿಂದ ಮಿಸುಕಾಡಿತು. ಸ್ಥೂಲಕೇಶಿಗಳ ಧ್ವನಿಕೇಳಿ ಪ್ರಮದ್ವರೆ ಎದ್ದಳು. ವಿಷಯವೆಲ್ಲವನ್ನು ತಿಳಿದು ಕಾಡಿಗೆ ಓಡಿದಳು. ಒಂದು ಕಡೆಯಿಂದ ರುರು ಮತ್ತೊಂದು ಕಡೆಯಿಂದ ಪ್ರಮದ್ವರೆ ಒಬ್ಬರನ್ನೊಬ್ಬರು ಉದ್ದೇಶಿಸಿ ಕೂಗುತ್ತ ಓಡಿಬಂದರು. ಅವರಿಬ್ಬರ ಮಿಲನಕ್ಕೆ ಸಕಲಲೋಕಗಳು ಸಾಕ್ಷಿಯಾದವು. ನಿಗದಿತವಾದ ಮುಹೂರ್ತದಲ್ಲೇ ರುರು ಮತ್ತು ಪ್ರಮದ್ವರೆಯರ ವಿವಾಹ ಶಾಸ್ತ್ರೋಕ್ತವಾಗಿ ನೆರೆವೇರಿತು. ಸ್ಥೂಲಕೇಶಿ ಮತ್ತು ಪ್ರಮತಿ ನೆಮ್ಮದಿಯ ಉಸಿರಿಟ್ಟರು. 

ಪತಿಪತ್ನಿಯರಾದ ರುರು ಮತ್ತು ಪ್ರಮದ್ವರೆಯ ದಾಂಪತ್ಯಜೀವನ ಸಂತಸದಿಂದ ಕೂಡಿತ್ತು. ಆಶ್ರಮದ ನಿರ್ವಹಣೆಯಲ್ಲಿ, ಗುರುಹಿರಿಯರ ಸೇವೆಯಲ್ಲಿ, ಜೀವಜಂತುಗಳ ಆರೈಕೆಯಲ್ಲಿ ಸಾಗಿತ್ತು. ಆದರೆ ರುರುವಿಗೆ ಮಾತ್ರ ಸರ್ಪಗಳ ಕುಲದ ಮೇಲೆಯೇ ಕ್ರೋಧವುಂಟಾಗಿತ್ತು, ತನ್ನ ಪ್ರಾಣಪ್ರಿಯೆಯಾದ ಪ್ರಮದ್ವರೆಯ ಜೀವಕ್ಕೆ ಘಾತಿ ಮಾಡಿದ್ದ ಸರ್ಪಗಳ ಮೇಲೆ ಕೋಪದಲ್ಲಿ ಕುರುಡನಾಗಿದ್ದ. ಎದುರಿಗೆ ಸಿಕ್ಕ ಯಾವ ಸರ್ಪವನ್ನು ಬಿಡದೆ ತನ್ನ ದಂಡದಿಂದ ಬೀಸಿ ಕೊಲ್ಲುತ್ತಿದ್ದ.  ಹೀಗಿರುತ್ತ, ಒಮ್ಮೆ ವಿಷವಿಲ್ಲದ ಒಂದು ಕೇರೆ ಹಾವು ಎದುರಿಗೆ ಸಿಕ್ಕಿತು. ಅದನ್ನು ಇನ್ನೇನು ಕೊಲ್ಲಬೇಕೆನ್ನುವಷ್ಟರಲ್ಲಿ ಸರ್ಪ "ಮಹರ್ಷಿಯೇ, ನನ್ನಿಂದ ನಿಮಗೆ ಯಾವುದೇ ತೊಂದರೆಯಾಗಿಲ್ಲದಿದ್ದರು ನೀವು ನನ್ನನ್ನು ಕೊಲ್ಲಲು ಉದ್ದೇಶಿಸಿರುವುದು ತರವಲ್ಲ" ಎಂದು ಪ್ರಾಣಭಯದಿಂದ ದೂರಿತು. "ಸರ್ಪವೆ, ನನ್ನ ಪ್ರಿಯ ಪತ್ನಿಯನ್ನು ಸರ್ಪವೊಂದು ಒಮ್ಮೆ ಕೊಂದಿತ್ತು. ಸುದೈವದಿಂದ ಅವಳು ಬದುಕಿ ಉಳಿದಳು. ಆದ್ದರಿಂದ ನಾನು ಯಾವ ಸರ್ಪವನ್ನು ಬಿಡುವುದಿಲ್ಲ. ಪ್ರಾಣತ್ಯಾಗಕ್ಕೆ ಸಿದ್ಧನಾಗು" ಎಂದು ಗರ್ಜಿಸಿದನು. "ಮಹಾಮಹಿಮರೇ, ನಿಮ್ಮ ಪತ್ನಿಯನ್ನು ಕೊಂದದ್ದು ಒಂದು ವಿಷಸರ್ಪವಲ್ಲವೇ? ನಾನಾದರೋ ವಿಷವಿಲ್ಲದ ಒಂದು ಕೇರೆ ಹಾವು. ನನ್ನ ಮೇಲೇಕೆ ಕೋಪ. ಇದು ತರವಲ್ಲ " ಎಂದು ಬೇಡಿಕೊಂಡಿತು. ಅದರ ಮಾತಿನಲ್ಲಿ ತಥ್ಯವಿರುವುದನ್ನು ಮನಗಂಡ ರುರು ತನ್ನ ದಂಡವನ್ನು ಕೆಳಗಿಳಿಸಿದನು. "ಸರ್ಪವೆ ನೀನಾರು? ಮನುಷ್ಯರ ರೀತಿಯಲ್ಲಿ ನನ್ನೊಡನೆ ಮಾತನಾಡುತ್ತಿರುವೆಯಲ್ಲ" ಎಂದು ವಿಚಾರಿಸಿದನು ರುರು.

ಸರ್ಪವು ತನ್ನ ಕಥೆಯನ್ನು ಹೇಳುವುದಕ್ಕೆ ಮೊದಲಾಯಿತು. ಹಿಂದಿನ ಜನ್ಮದಲ್ಲಿ ಸರ್ಪ ಸಹಸ್ರಪಾದನೆಂಬ ಬ್ರಾಹ್ಮಣನಾಗಿತ್ತು. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದನು. ಖಗಮ ಶಾಸ್ತ್ರಧ್ಯಯನದಲ್ಲಿ ನಿಪುಣನಾಗಿದ್ದನು. ಆದರೆ ಸಹಸ್ರಪಾದ ಮೋಜಿನಲ್ಲಿ ನಿರತನಾಗಿದ್ದನು. ಒಂದು ದಿನ ಸಹಸ್ರಪಾದ ಅಭ್ಯಾಸದಲ್ಲಿ ನಿರತನಾಗಿದ್ದ ಖಗಮನ ಕತ್ತಿನ ಮೇಲೆ ಸರ್ಪದಂತೆ ತೋರುವ ಹುಲ್ಲನ್ನು ಹಾಸ್ಯಕ್ಕೊಸ್ಕರ ಎಸೆದಿದ್ದನು. ಅದನ್ನು ಸರ್ಪವೆಂದೇ ತಿಳಿದ ಖಗಮ ಭಯವಿಹ್ವಲನಾದನು. ಕಡೆಗೆ ಸಹಸ್ರಪಾದನ ಹಾಸ್ಯವನ್ನು ಅರಿತು ಕೋಪಾವಿಷ್ಟನಾದನು. ಸ್ನೇಹಿತನೆನ್ನುವುದನ್ನೂ ಮರೆತು ಸಹಸ್ರಪಾದನನ್ನು ಸರ್ಪವಾಗುವಂತೆ ಶಪಿಸಿದನು. ಧರೆಗಿಳಿದ ಸಹಸ್ರಪಾದ ಪಶ್ಚಾತ್ತಾಪ ಪಟ್ಟನು. ಅವನ ನಿಜವಾದ ಪಶ್ಚಾತ್ತಾಪವನ್ನು ಕಂಡ ಖಗಮ ಅವನ ಉದ್ದಿಶ್ಯ ಕೆಟ್ಟದ್ದಾಗಿಲ್ಲದ ಕಾರಣ ವಿಷವಿಲ್ಲದ ಸರ್ಪವಾಗುವಂತೆ ಶಾಪವನ್ನು ಮಾರ್ಪಡಿಸಿದನು. ಅಷ್ಟೇ ಅಲ್ಲದೆ ಮುಂದೆ ಚ್ಯವನ ಮಹರ್ಷಿಗಳ ಕುಲದಲ್ಲಿ ಹುಟ್ಟಿದ ಋಷಿಯಿಂದ ಅವನಿಗೆ ಶಾಪವಿಮೋಚನೆಯಾಗುವುದು ಎಂದು ತಿಳಿಸಿದನು.

ರುರು ನೋಡನೋಡುತ್ತಿದ್ದಂತೆಯೇ ಸಹಸ್ರಪಾದ ಮತ್ತೆ ಮನುಷ್ಯನಾದನು. ರುರುವಿಗೆ ತನ್ನ ಅರ್ಥಹೀನ ಕೋಪಕ್ಕೆ ನಾಚಿಕೆಯಾಯಿತು. ಋಷಿಯಾದವನಿಗೆ ಕೋಪ, ದ್ವೇಷ ತರವಲ್ಲ ಎಂದು ರುರು ಅರಿತನು. ಅವನ ಕೋಪ ಅಲ್ಲಿಗೆ ಅಳಿಯಿತು. ನಂತರ, ಪ್ರಮದ್ವರೆಯ ಜೊತೆಯಲ್ಲಿ ರುರು ಅನೇಕ ವರ್ಷಗಳ ಕಾಲದ ಸುಖೀ ದಾಂಪತ್ಯವನ್ನು ನಡೆಸಿ ರುರು ಮುಕ್ತಿಪಡೆದನು.     



 



 


Friday, November 16, 2018

ವಿನತೆಯ ಮಗ ಪಕ್ಷಿರಾಜ ಗರುಡ

ಕಶ್ಯಪ ಋಷಿ ಚತುರ್ಮುಖ ಬ್ರಹ್ಮನ ಮಗ. ಅವನು ದಕ್ಶ ಪ್ರಜಾಪತಿಯ ಹದಿಮೂರು ಪುತ್ರಿಯರನ್ನು ಮದುವೆಯಾಗಿದ್ದನು. ದಿತಿಯಿಂದ ದೈತ್ಯರು ಅದಿತಿಯಿಂದ ಆದಿತ್ಯರು - ಅಂದರೆ ದೇವತೆಗಳು ಅವನ ಮಕ್ಕಳಾಗಿದ್ದರು. ರಾಕ್ಷಸರು, ದಾನವರು, ಯಕ್ಷ ಗಂಧರ್ವರು, ಪ್ರಾಣಿಗಳು ಹೀಗೆ ಸಕಲ ಜೀವಸಂಪತ್ತು ಅವನ ಮಕ್ಕಳಾಗಿದ್ದರು. ಅವನ ಪತ್ನಿಯರಲ್ಲಿ ಇಬ್ಬರು ಸದಾ ಒಟ್ಟಿಗೆ ಇರುತ್ತಿದ್ದ ಕದ್ರು ಮತ್ತು ವಿನತೆಯರು.

ಒಂದು ದಿನ ಕಶ್ಯಪ ಮಹರ್ಷಿ ಕದ್ರು ವಿನತೆಯರಿಗೆ ವರವೊಂದನ್ನು ದಯಪಾಲಿಸಲು ತೀರ್ಮಾನಿಸಿದನು. 'ಕದ್ರು, ವಿನತೆಯರೇ ನಾನೊಂದು ಯಜ್ಞಕಾರ್ಯಕ್ಕೆ ಮೊದಲಾಗಿದ್ದೇನೆ. ಅದರ ಸತ್ಫಲವಾಗಿ ನಿಮ್ಮಿಬ್ಬರಿಗೆ ಮಕ್ಕಳಾಗುತ್ತಾರೆ' ಎಂದು ಅವರನ್ನು ಕರೆದು ತಿಳಿಸಿದನು. ಕದ್ರು 'ನನಗೆ ಅತಿಶಕ್ತಿಶಾಲಿಗಳಾದ ಸಾವಿರ ಬೃಹತ್ ಸರ್ಪಗಳು ಮಕ್ಕಳಾಗಲಿ' ಎಂದು ಕೇಳಿಕೊಂಡಳು. 'ತಥಾಸ್ತು' ಎಂದ ಕಶ್ಯಪನು ವಿನತೆಯ ಕಡೆಗೆ ನೋಡಿದನು. 'ಪತಿಯೇ. ನನಗಾದರೋ ಇಬ್ಬರು ಮಕ್ಕಳು ಸಾಕು. ಆದರೆ ಅವರು ಈ ಸಾವಿರ ಸರ್ಪಗಳಿಗಿಂತ ಮಿಗಿಲಾದ ಶಕ್ತಿಶಾಲಿಗಳೂ, ಶೂರರೂ ಆಗಿರುವಂತೆ ಕರುಣಿಸು' ಎಂದು ವಿನತೆ ವರವನ್ನು ಬೇಡಿದಳು. ಹೀಗೆ ಅಕ್ಕತಂಗಿಯರಲ್ಲಿ ಸ್ಪರ್ಧೆ ಏರ್ಪಟ್ಟಿತು. 'ತಥಾಸ್ತು' ಎಂದ ಮಹರ್ಷಿ ಯಜ್ಞಕಾರ್ಯದಲ್ಲಿ ವ್ಯಸ್ತನಾದನು.

ದೇವತೆಗಳ ರಾಜನಾದ ಇಂದ್ರ ಕಶ್ಯಪ ಮಹರ್ಷಿಯ ಮಗ. ಅವನು ತಂದೆಯ ಯಜ್ಞಕ್ಕೆ ಹೆಗಲಾಗಿ ನಿಲ್ಲುವುದಕ್ಕೆ ಬಂದನು. ಜೊತೆಗೆ ಮಹಾತಪಸ್ವಿಗಳೂ, ಹೆಬ್ಬೆಟ್ಟಿನಷ್ಟು ಚಿಕ್ಕ ಆಕಾರದವರೂ ಆದ ಅನೇಕ ವಾಲಖಿಲ್ಯ ಮಹರ್ಷಿಗಳನ್ನು ಕರೆತಂದಿದ್ದನು. ಕಷ್ಯಪನಿಗೆ ಸಂತೋಷವಾಯಿತು. ವಾಲಖಿಲ್ಯರನ್ನು ಜೊತೆ ಯಜ್ಞದ ಸಮಿತ್ತಿಗಾಗಿ ಮರಗಳನ್ನು ತೆಗೆದುಕೊಂಡು ಬರುವಂತೆ ಇಂದ್ರನಿಗೆ ಆದೇಶಿಸಿದನು. ಬೃಹತ್ ಆಕಾರದವನೂ, ಮಹಾಶಕ್ತಿಶಾಲಿಯೂ ಆದ ಇಂದ್ರ ಆಕಾಶಮಾರ್ಗವಾಗಿ ಸಂಚರಿಸಬಲ್ಲವನು. ಸುಲಭವಾಗಿ ಬೃಹತ್ ಮರದ ಕಾಂಡವೊಂದನ್ನು ಆಕಾಶದಲ್ಲಿ ಹೊತ್ತು ತರುತ್ತಿದ್ದನು. ಕೆಳಗೆ ಅನೇಕ ವಾಲಖಿಲ್ಯರು ಚಿಕ್ಕದಾದ ಸಮಿತ್ತೊಂದನ್ನು ಕಷ್ಟದಿಂದ ತರುತ್ತಿದ್ದರು. ಕ್ಷಣವೊಂದರಲ್ಲಿ ಇಂದ್ರನು ತನ್ನ ಶಕ್ತಿಯ ಅಹಂಕಾರಕ್ಕೆ ಒಳಗಾದನು. 'ಹೋ' ಎಂದು ಕೂಗುತ್ತಾ ಅವರನ್ನು ಬೀಳಿಸಿ ಒಂದಿಷ್ಟು ಗೋಳುಹೊಯ್ದುಕೊಂಡನು. ವಾಲಖಿಲ್ಯ ಮಹರ್ಷಿಗಳು ಕುಪಿತರಾದರು. ಇಂದ್ರನ ಅಹಂಕಾರವನ್ನು ನಿಗ್ರಹಿಸಿ ಅವನಿಗೆ ಪಾಠಕಲಿಸಬೇಕೆಂದು ತೀರ್ಮಾನಿಸಿದರು.

ಯಜ್ಞ ಮೊದಲಾಯಿತು. ವಾಲಖಿಲ್ಯ ಮಹರ್ಷಿಗಳು ಯಜ್ಞಕ್ಕೆ ಮಂತ್ರಗಳನ್ನು ಹೇಳುತ್ತಾ ಹವಿಸ್ಸನ್ನು ಸಮರ್ಪಿಸುತ್ತಿದ್ದರು. ಆದರೆ ಮೆಲುದನಿಯಲ್ಲಿ 'ಇಂದ್ರನಿಗೆ ಮಿಗಿಲಾದ ಒಬ್ಬನ ಜನನವಾಗಲಿ. ಬ್ರಹ್ಮಾಂಡದಲ್ಲಿ ಎಲ್ಲಿಬೇಕಾದರೂ ಸಂಚರಿಸಬಲ್ಲವನಾಗಲಿ, ಯಾವ ಆಕಾರವನ್ನು ಬೇಕಾದರೂ ಧರಿಸಬಲ್ಲವನಾಗಲಿ, ಎಷ್ಟು ಶಕ್ತಿಯನ್ನಾದರೂ ಸಂಚಯಿಸಬಲ್ಲವನಾಗಲಿ. ಅವನ ಸಂಕಲ್ಪಶಕ್ತಿಗೆ ಮಿತಿಯೇ ಇಲ್ಲವಾಗಲಿ. ಅಂಥವನೊಬ್ಬನ ಜನನವಾಗಲಿ' ಎಂದು ಹವಿಸ್ಸನ್ನು ಸಮರ್ಪಿಸುತ್ತಿದ್ದರು. ತಮ್ಮ ಸಕಲ ತಪಸ್ಸನ್ನು ಅದಕ್ಕೆ ಧಾರೆಯೆರೆಯುತ್ತಿದ್ದರು. ಆದರೆ ಇಂದ್ರನ ಗಮನಕ್ಕೆ ಇದುಬಾರದೇ ಇರಲಿಲ್ಲ. ತಕ್ಷಣವೇ ಪಶ್ಚಾತ್ತಾಪದಿಂದ 'ತಂದೆಯೇ, ಋಷಿಗಳ ಕೋಪದಿಂದ ನೀನೇ ನನ್ನನ್ನು ರಕ್ಷಿಸಬೇಕು' ಎಂದು ದುಃಖದಿಂದ ಕೇಳಿಕೊಂಡನು. ಸಕಲವನ್ನೂ ಕೇಳಿತಿಳಿದ ಕಷ್ಯಪ ವಾಲಖಿಲ್ಯರಲ್ಲಿ ಬೇಡಿಕೊಂಡನು. 'ಮಹಾತ್ಮರೇ, ಇಂದ್ರನು ಬ್ರಹ್ಮನಿಂದಲೇ ನಿಯೋಜಿತನಾದ ದೇವತೆಗಳ ರಾಜ. ಅವನಿಗಿಂತ ಮಿಗಿಲಾದವರೂ ಸ್ವರ್ಗದಲ್ಲಿ ಇರುವಹಾಗಿಲ್ಲ. ನಿಮ್ಮ ತಪಸ್ಸಿನ ಫಲದಿಂದ ಹುಟ್ಟುವ ಧೀರ ಪಕ್ಷಿಗಳ ರಾಜನಾಗಲಿ. ಪಶ್ಚಾತ್ತಾಪದಿಂದ ಬಳಲಿ ಕ್ಷಮೆಬೇಡುತ್ತಿರುವ ಇಂದ್ರನ ಮೇಲೆ ದಯೆತೋರಿ' ಎಂದು ಕೇಳಿಕೊಂಡನು. ದಯಾಪರರಾದ ವಾಲಖಿಲ್ಯರು 'ಹಾಗೆಯೇ ಆಗಲಿ. ನಮ್ಮ ತಪಸ್ಸಿನ ಆ ಶಕ್ತಿಶಾಲಿ ಮಗು ಯಜ್ಞದ ಫಲವಾಗಿ ನಿನ್ನ ಮಗನೇ ಆಗಿ ಜನಿಸುತ್ತಾನೆ' ಎಂದು ಆಶೀರ್ವದಿಸಿ ತೆರಳಿದರು. ಯಜ್ಞದ ನಂತರ ಕಶ್ಯಪ ಕದ್ರು ವಿನತೆಯರ ಅರಮನೆಗೆ ಬಂದನು. ಯಜ್ಞದ ಫಲವಾಗಿ ಅವರಿಗೆ ಅತಿಶೀಘ್ರದಲ್ಲಿ ಪುತ್ರರ ಜನನವಾಗುತ್ತದೆಯೆಂದು ತಿಳಿಸಿದನು. ಮುಂದಿನ ತಪಸ್ಸಿಗಾಗಿ ಕಾಡಿಗೆ ತೆರಳಿದನು.

ಕೆಲವು ತಿಂಗಳುಗಳಲ್ಲಿ ವಿನತೆಗೆ ಎರಡು ಬೃಹದಾಕಾರದ ಮೊಟ್ಟೆಗಳು ಜನಿಸಿದವು. ಕದ್ರುವಿಗೆ ಸಾವಿರ ಚಿಕ್ಕ ಮೊಟ್ಟೆಗಳು ಜನಿಸಿದವು. ಅವುಗಳನ್ನು ಮಡಕೆಗಳಲ್ಲಿ ಬೆಚ್ಚಗೆ ಜೋಪಾನ ಮಾಡಿದರು. ಅನೇಕ ದಿನಗಳ ನಂತರ ಕದ್ರುವಿನ ಮೊಟ್ಟೆಗಳೆಲ್ಲ ಒಡೆದು ಸಾವಿರ ಶಕ್ತಿಶಾಲಿ ಸರ್ಪಗಳು ಹೊರಬಂದವು. ಕದ್ರುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿನತೆಯಾದರೋ ಅವಸರ ಮತ್ತು ಅಸೂಯೆಗೆ ಪಾತ್ರಳಾದಳು. ತಡೆಯಲಾರದೇ ತನ್ನ ಎರಡು ಮೊಟ್ಟೆಗಳಲ್ಲಿ ಒಂದನ್ನು ಕಾಲವಾಗುವ ಮುನ್ನವೇ ಒಡೆದುಬಿಟ್ಟಳು. ಒಡನೆಯೇ ಅದರಿಂದ ಪುತ್ರನೊಬ್ಬನೇನೋ ಹೊರಬಂದ - ಆದರೆ ಅವನ ಕಾಲುಗಳು ಇನ್ನೂ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಆದ್ದರಿಂದ ಅವನ ಸೊಂಟದ ಕೆಳಭಾಗ ಕೇವಲ ಮಾಂಸದ ಮುದ್ದೆಯಾಗಿತ್ತು. ತನ್ನ ತಪ್ಪಿಗಾಗಿ ವಿನತೆ ಅತಿಯಾಗಿ ನೊಂದು ಪಶ್ಚಾತ್ತಾಪ ಪಟ್ಟಳು. ಆದರೆ ಕಾಲ ಮಿಂಚಿಹೋಗಿತ್ತು. ಹೊರಬಂದ ಪುತ್ರನು ಕೋಪಾವಿಷ್ಟನಾದನು. 'ತಾಯಿಯೇ, ತಾಳ್ಮೆ ತಪ್ಪಿ ನೀನು ಅವಸರದಿಂದ ತಪ್ಪು ಮಾಡಿದೆ. ಅದಕ್ಕೆ ನೀನು ಬೆಲೆತೆರಲೇಬೇಕಾಗುತ್ತದೆ. ಶೀಘ್ರದಲ್ಲಿ ನೀನು ಮತ್ತೊಬ್ಬರ ದಾಸಿಯಾಗುವೆ. ಆದರೆ ಭಯಪಡುವಾಗತ್ಯವಿಲ್ಲ. ಮತ್ತೊಂದು ಮೊಟ್ಟೆಯಿಂದ ನನ್ನ ತಮ್ಮ ಹುಟ್ಟುತ್ತಾನೆ. ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತಾನೆ. ಆದರೆ ಅವಸರ ಮಾತ್ರ ಪಡಬೇಡ' ಎಂದು ನುಡಿದನು. ಕ್ಷಣವೊಂದರಲ್ಲಿ ಆಕಾಶಕ್ಕೆ ಹಾರಿದನು. 'ಅರುಣ' ಎನ್ನುವ ಹೆಸರಿನಿಂದ ಸೂರ್ಯನ ಸಾರಥಿಯಾದನು. ವಿನತೆ ಪುತ್ರನ ಅಗಲಿಕೆಯಿಂದ ಶೋಕಕ್ಕೆ ಒಳಗಾದಳು.

ಒಂದಿಷ್ಟು ಕಾಲ ಕಳೆಯಿತು. ಒಂದು ಸಂಜೆ ಕದ್ರು ವಿನತೆಯರು ನದೀವಿಹಾರ ಮಾಡುತ್ತಿದ್ದರು. ಆಗ ಇಂದ್ರನ ಕುದುರೆಯಾದ ಉಚ್ಛ್ಹೈಶ್ರವಸ್ಸು ವೇಗವಾಗಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿತ್ತು. ಒಂದು ಕ್ಷಣ ಮಾತ್ರವೇ ಇಬ್ಬರಿಗೂ ಗೋಚರಿಸಿತು. ಸ್ಪರ್ಧಾಗುಣದಿಂದ ಕದ್ರು 'ವಿನತಾ, ಅದರ ಬಾಲದ ಬಣ್ಣವೇನು ಹೇಳುವೆಯಾ' ಎಂದಳು. ಆತ್ಮವಿಶ್ವಾಸದಿಂದ ವಿನತೆ 'ಅದರ ಇಡಿಯ ದೇಹ ಬಿಳಿಯ ಬಣ್ಣ. ಅದರ ಬಾಲವೂ ಬಿಳಿಯದೇ' ಎಂದಳು. ಮಾತುಮಾತಿಗೆ ಮೊದಲಾಗಿ ಕದ್ರು ಅದರ ಬಾಲ ಕಪ್ಪು ಎಂದೂ, ವಿನತೆ ಬಿಳಿ ಎಂದೂ ಪಟ್ಟುಹಿಡಿದರು. ಸ್ಪರ್ಧೆ ಮಿತಿಮೀರಿತು. ಯಾರ ಮಾತು ಸುಳ್ಳಾಗುವುದೋ ಅವರು ಮತ್ತೊಬ್ಬರ ದಾಸಿಯಾಗುವುದೆಂದು ತೀರ್ಮಾನವಾಯಿತು. ಮರುದಿನ ಪರೀಕ್ಷಿಸುವುದು ಎಂದೂ ತೀರ್ಮಾನವಾಯಿತು. ಆದರೆ ಅರಮನೆಗೆ ಬಂದ ನಂತರ ಕದ್ರುವಿಗೆ ಅನುಮಾನ ಶುರುವಾಯಿತು. ಅದು ಸಂಪೂರ್ಣ ಬಿಳಿಯೇ ಇರಬೇಕೆಂದು ಭಯವಾಯಿತು. ಹೇಗಾದರೂ ಅದನ್ನು ಕಪ್ಪಾಗಿಸಬೇಕೆಂದು ತೀರ್ಮಾನಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆಸಿದಳು. ಕುದುರೆಯ ಬಾಲವನ್ನು ಕಚ್ಚಿ ಕಪ್ಪಾಗಿಸಬೇಕೆಂದು ಆಜ್ಞೆಮಾಡಿದಳು. ಸರ್ಪಗಳಾದರೋ ಇದು ಅಧರ್ಮವೆಂದು ಅಧೀರರಾದರು. ಆದರೂ ತಾಯಿಯ ಶಾಪದ ಭಯದಿಂದ ಒಪ್ಪಿಕೊಂಡರು. ಕುದುರೆಯ ಬಾಲವನ್ನು ವಿಷದಿಂದ ಕಡಿದು ಕೆಲವು ದಿನಗಳ ಮಟ್ಟಿಗೆ ಕಪ್ಪಾಗಿಸಿದರು. ಮರುದಿನ ಸಂಜೆ ವಿಹಾರದಲ್ಲಿ ಕಾದಿದ್ದರು ಕದ್ರುವಿನತೆಯರು. ಒಂದು ಕ್ಷಣಮಾತ್ರ ಗೋಚರಿಸಿದ ಕುದುರೆಯ ಬಾಲ ಕಪ್ಪಾಗಿ ಕಂಡಿತು. ವಿನತೆ ಸಿಡಿಲುಬಡಿದಂತಾದಳು. ಇದರಲ್ಲಿ ಏನೋ ಮರ್ಮವಿದೆ ಎಂದು ವಿನತೆಗೆ ಅನ್ನಿಸಿತು. ಆದರೇನೂ ಮಾಡುವಂತಿರಲಿಲ್ಲ. ಅವಳಿಗೆ ದಾಸಿಯಾಗದೇ ಬೇರೆ ದಾರಿಯಿರಲಿಲ್ಲ.

ವಿನತೆಯ ಅದೃಷ್ಟಕ್ಕೆ ಎರಡನೇಯ ಮೊಟ್ಟೆ ತಾನೇ ಒಡೆಯುವ ಕಾಲ ಸನ್ನಿಹಿತವಾಗಿತ್ತು. ಅವಳಿಗೆ ಪುತ್ರನೊಬ್ಬನ ಜನನವಾಯಿತು. ವಾಲಖಿಲ್ಯರ ವರದಂತೆ ಪುತ್ರನಿಗೆ ಪಕ್ಷಿಗಳಂತೆ ಕೊಕ್ಕು ಮತ್ತು ರೆಕ್ಕೆಗಳಿತ್ತು. ಹುಟ್ಟುತ್ತಲೇ ಬೃಹದಾಕಾರ ತಳೆದನು. ಆಕಾಶಕ್ಕೆ ಹಾರಿ ಇಡಿಯ ಸಮುದ್ರಗಳನ್ನೆಲ್ಲ ಒಂದು ಸುತ್ತು ವಿಹರಿಸಿ ತಾಯ ಬಳಿಗೆ ಬಂದನು. ವಿನತೆಯ ಹರ್ಷಕ್ಕೆ ಪಾರವೇ ಇರಲಿಲ್ಲ. ಆನಂದಬಾಷ್ಪಸುರಿಸಿದಳು. 'ಈ ಮಗನಿಂದ ನನ್ನ ದಾಸ್ಯ ತೊರೆಯುತ್ತದೆ' ಎಂದು ಧೈರ್ಯಧರಿಸಿದಳು. ಹೀಗಿರುವಾಗ ಒಂದು ದಿನ ವಿನತೆಯನ್ನು ನೋಡಲು ಕದ್ರು ಅಲ್ಲಿಗೆ ಬಂದಳು. 'ನಾವು ನಾಗದ್ವೀಪಕ್ಕೆ ವಿಹರಿಸಲು ಹೋಗಬೇಕು. ನಮ್ಮನ್ನು ಹೆಗಲಮೇಲೆ ಕೂರಿಸಿಕೊಂಡು ನಡೆ' ಎಂದು ದಾಸಿಯಾಗಿದ್ದ ವಿನತೆಗೆ ಕದ್ರು ಆಜ್ಞೆ ಮಾಡಿದಳು. ವಿಧಿಯಿಲ್ಲದೇ ಕದ್ರುವನ್ನು ಬೆನ್ನಿನಮೇಲೇರಿಸಿಕೊಂಡಳು ವಿನತೆ. 'ಪುತ್ರನೇ, ಸರ್ಪಗಳನ್ನೆಲ್ಲ ಕೂರಿಸಿಕೊಂಡು ಬಾ' ಎಂದು ವಿನತೆ ಆದೇಶಿಸಿದಳು. 'ನಾವೇನು ಅವರಿಗೆ ದಾಸರೇ' ಎಂದು ಪುತ್ರನು ಆಶ್ಚರ್ಯಚಕಿತನಾದನು. ಆದರೆ ತಾಯಿಯ ಆದೇಶದಂತೆ ನಡೆದುಕೊಂಡನು. ಬೃಹದಾಕಾರ ತಾಳಿ ಸರ್ಪಗಳನ್ನೆಲ್ಲ ಹೇರಿಕೊಂಡನು. ಕೋಪದಿಂದ ಛಂಗನೆ ನೇರವಾಗಿ ಸೂರ್ಯನ ಕಡೆಗೆ ಹಾರಿದನು. ಸ್ವಲ್ಪ ಹೊತ್ತಿಗೆ ಸೂರ್ಯನ ತಾಪ ತಾಳಲಾರದೇ ಸರ್ಪಗಳು ಸಮುದ್ರಕ್ಕೆ ಬೀಳತೊಡಗಿದವು. ಆತಂಕದಿಂದ ಕದ್ರು ಮಕ್ಕಳನ್ನು ಸಂರಕ್ಷಿಸುವಂತೆ ದೇವೇಂದ್ರನಲ್ಲಿ ಬೇಡಿಕೊಂಡಳು. ಇಂದ್ರನು ಮಳೆಯನ್ನು ಸುರಿಸಿ ಸರ್ಪಗಳನ್ನು ಸೂರ್ಯನ ತಾಪದಿಂದ ರಕ್ಷಿಸಿದನು. ಇದನ್ನು ಗಮನಿಸಿದ ಪುತ್ರನು ಇಂದ್ರನಿಗೆ ಎದಿರಾಗುವ ಸಮಯಕ್ಕಾಗಿ ಕಾದನು. ಎಲ್ಲರೂ ನಾಗದ್ವೀಪವನ್ನು ಸೇರಿದರು. ನಂತರ ಪುತ್ರನು ವಿನತೆಯನ್ನು "ನಾವೇಕೆ ಅವರಿಗೆ ದಾಸರಾಗಿದ್ದೇವೆ" ಎಂದು ಕೇಳಿದನು. ವಿನತೆ ಸಕಲ ವೃತ್ತಾಂತವನ್ನೂ ತಿಳಿಸಿದಳು. ವಾಪಸಾದ ನಂತರ ವಿನತೆಯ ಪುತ್ರನು ನೇರವಾಗಿ ಸರ್ಪಗಳ ಬಳಿಗೆ ತೆರಳಿದನು. 'ಹೇಳಿ, ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕೆ ನಾವೇನು ಬೆಲೆ ತೆರಬೇಕು' ಎಂದು ಕೇಳಿದನು. ಸರ್ಪಗಳು ಒಂದು ಕ್ಷಣ ಯೋಚಿಸಿದವು. 'ನಮಗೆ ಅಮೃತವನ್ನು ತಂದುಕೊಡಬೇಕು' ಎಂದು ಧಾರ್ಷ್ಟ್ಯದಿಂದ ನುಡಿದವು. ದೇವತೆಗಳಿಂದ ರಕ್ಷಿತವಾದ ಅಮೃತವನ್ನು ತರುವುದು ಸುಲಭವಲ್ಲ ಎನ್ನುವುದು ಸರ್ಪಗಳಿಗೆ ಗೊತ್ತು. ಆದರೆ ಈ ಶಕ್ತಿಶಾಲಿಯಾದ ವಿನತೆಯ ಪುತ್ರ ಅದನ್ನು ತರಬಹುದು, ತಾವು ಅಮರರಾಗಬಹುದು ಎನ್ನುವುದು ಅವರ ಆಸೆಯಾಗಿತ್ತು.

ವಿನತೆಯ ಪುತ್ರ ವಾಪಸಾಗಿ ತಾಯಿಗೆ ಎಲ್ಲವನ್ನೂ ತಿಳಿಸಿದನು. ವಿನತೆ ಮನದುಂಬಿ 'ಯಶಸ್ವಿಯಾಗಿ ಹಿಂದಿರುಗು' ಎಂದು ಆಶೀರ್ವದಿಸಿದಳು. ಬೃಹದಾಕಾರವಾಗಿ ಬೆಳೆದು ರೆಕ್ಕೆಗಳನ್ನು ಬಿಚ್ಚಿದನು ವಿನತೆಯ ಪುತ್ರ. ಆಕಾಶಕ್ಕೆ ಹಾರಿ ದೇವತೆಗಳ ವಾಸವಾದ ಇಂದ್ರಲೋಕದೆಡೆಗೆ ತೆರಳಿದನು. ಹಿಮಾಲಯಪರ್ವತಗಳ ಮಾರ್ಗವಾಗಿ ತೆರಳುತ್ತಿದ್ದಾಗ ಕೆಳಗೆ ಕಶ್ಯಪ ಮಹರ್ಷಿ ಕಂಡನು. ಪರ್ವತವೊಂದರ ಮೇಲೆ ತಪಸ್ಸಾನಾಚರಿಸುತ್ತಿದ್ದನು. ಪುತ್ರನನ್ನು ನೋಡಿ ಅವನನ್ನೂ, ವಿನತೆಯನ್ನೂ ವಿಚಾರಿಸಿಕೊಂಡನು. ಪುತ್ರನು ಸಕಲವೃತ್ತಾಂತವನ್ನೂ ಅರುಹಿದನು. ದೀರ್ಘಸಂಚಾರಕ್ಕೆ ಶಕ್ತಿಒದಗಿಸಬಲ್ಲ ಆಹಾರವೆಲ್ಲಿ ಸಿಗುವುದು ಎಂದು ಕೇಳಿದನು. ಕಶ್ಯಪನು ಕೆಳಗೆ ಒಂದು ಸರೋವರವನ್ನು ತೋರಿಸಿದನು. "ಅಲ್ಲಿ ಆಮೆಯೊಂದು, ಆನೆಯೊಂದೂ ಪರಸ್ಪರರನ್ನು ಕೊಲ್ಲಲು ಹೋರಾಡುತ್ತಿವೆ. ಅವುಗಳನ್ನು ತಿಂದು ನೀನು ಸಂಚಾರ ಮುಂದುವರೆಸು" ಎಂದು ಆಶೀರ್ವದಿಸಿ ಕಳುಹಿಸಿದನು. ಅದರಂತೆಯೇ ಒಂದು ಕೈಯಲ್ಲಿ ಆಮೆ ಮತ್ತೊಂದು ಕೈಯಲ್ಲಿ ಆನೆಯನ್ನು ಹಿಡಿದುಕೊಂಡು ಹಾರಿದನು ವಿನತೆಯ ಪುತ್ರ. ಮಾರ್ಗಮಧ್ಯದಲ್ಲೊಂದು ದೊಡ್ಡ ಆಲದ ಮರ ಅವನನ್ನು ಆಹ್ವಾನಿಸಿತು. 'ಪಕ್ಷಿರಾಜನೇ, ನನ್ನೀ ಶಕ್ತಿಯುತವಾದ ಮರದಟೊಂಗೆಯ ಮೇಲೆ ಕುಳಿತು ನಿನ್ನ ಆಹಾರವನ್ನು ಸೇವಿಸು' ಎಂದು ಕೇಳಿಕೊಂಡಿತು. ಪಕ್ಷಿರಾಜನೇನೋ ಕುಳಿತ. ಆದರೆ ಅವನ ಬೃಹದಾಕಾರಕ್ಕೆ ಹೆದರಿದ ಮಿಕ್ಕ ಪಕ್ಷಿಗಳೆಲ್ಲ ಹಾರಿಹೋದವು. ಮರದ ಟೊಂಗೆಯೂ ಸಹ ಅವನ ಭಾರತಾಳಲಾರದೇ ಮುರಿದು ಬೀಳಲಾರಂಭಿಸಿತು. ಅದಕ್ಕೂ ಮುಖ್ಯವಾಗಿ ಆ ಮರದ ಟೊಂಗೆಗೆ ನಾಲ್ಕು ಋಷಿಗಳು ತಮ್ಮ ಕಾಲುಗಳನ್ನು ಕಟ್ಟಿಕೊಂಟು ತಲೆಕೆಳಗಾಗಿ ತಪಸ್ಸುಮಾಡುತ್ತಿದ್ದರು. ಟೊಂಗೆ ನೆಲಕ್ಕೆ ಬೀಳುವುದರಲ್ಲಿತ್ತು. ಸ್ವಲ್ಪದರಲ್ಲಿ ತನ್ನ ಕೊಕ್ಕಿನಿಂದ ಅದನ್ನು ರಕ್ಷಿಸಿದ ವಿನತೆಯ ಪುತ್ರ ನಿಟ್ಟುಸಿರು ಬಿಟ್ಟನು. ಹೀಗೆ ಒಂದು ಕೈಯಲ್ಲಿ ಬೃಹತ್ ಆಮೆ, ಮತ್ತೊಂದರಲ್ಲಿ ಶಕ್ತಿಶಾಲಿಯಾದ ಆನೆ, ಕೊಕ್ಕಿನಲ್ಲಿ ಭಾರವಾದ ಮರದ ಕಾಂಡ - ಇವುಗಳೆಲ್ಲದರ ಜೊತೆಗೆ ಲೀಲಾಜಾಲವಾಗಿ ಹಾರುತ್ತಿದ್ದ ಪಕ್ಷಿರಾಜ. ಇದನ್ನು ತಲೆಗೆಳಗಾಗಿ ನೋಡುತ್ತಿದ್ದ ಆ ನಾಲ್ಕು ಋಷಿಗಳು ಅವನ ಶಕ್ತಿಗೆ ಆಶ್ಚರ್ಯಚಕಿತರಾದರು. ಆಕ್ಷಣವೇ ಆ ವಿನತೆಯ ಪುತ್ರನಿಗೆ 'ಗರುಡ' ಎಂದು ನಾಮಕರಣ ಮಾಡಿದರು. ಸಕಲಲೋಕಗಳಲ್ಲಿಯೂ ಇವನ ಕೀರ್ತಿ ಹರಡಲಿ ಎಂದು ಆಶೀರ್ವದಿಸಿದರು.

ಈ ಋಷಿಗಳನ್ನು ಅವರ ತಪಸ್ಸಿಗೆ ತೊಂದರೆಯಾಗದಂತೆ ಎಲ್ಲಿ ಇಳಿಸುವುದು ಎಂದು ಗರುಡ ಆಲೋಚನೆಗೊಳಗಾದನು. ಕಡೆಗೆ ಗಂಧಮಾದನ ಪರ್ವತಗಳು ಕಂಡವು. ಅದೇ ಸರಿಯೆನ್ನುತ್ತಾ ಪರ್ವಗಳ ತುತ್ತತುದಿಗೆ ಬಂದು ಅವರನ್ನು ಇಳಿಸಿದನು. ನಂತರ ಯಾರೂ ಕಾಣದ ಒಂದು ಕಣಿವೆಯಲ್ಲಿ, ಯಾರಿಗೂ ತೊಂದರೆಯಾಗದಂತೆ ಮರದ ಕಾಂಡವನ್ನು ಎಸೆದನು. ಮತ್ತೊಂದು ಪರ್ವತದ ಮೇಲೆ ಇಳಿದು ಆಮೆ ಮತ್ತು ಆನೆಗಳನ್ನು ಸೇವಿಸಿದನು. ದೇಹಕ್ಕೆ ಶಕ್ತಿಸಂಚಯವಾದ ನಂತರ ಮತ್ತೂ ವೇಗದಿಂದ ಇಂದ್ರಲೋಕಕ್ಕೆ ಹಾರಿದನು ಪಕ್ಷಿರಾಜನಾದ ಗರುಡ.           

====================================================================

ಈ ಮಧ್ಯದಲ್ಲಿ ದೇವೇಂದ್ರನ ಸ್ವರ್ಗಲೋಕದಲ್ಲಿ ಹಿಂದೆಂದೂ ಕಾಣದ ಅಪಶಕುನಗಳು ಉಂಟಾಗತೊಡಗಿದವು. ಈ ಹಿಂದಿನ ದೇವಾಸುರರ ಯುದ್ಧದಲ್ಲೂ ಅಂತಹ ಅಪಶಕುನಗಳು ಕಾಣಿಸಿರಲಿಲ್ಲ. ಸಹಜವಾಗೇ ಗಾಬರಿಗೊಳಗಾದ ದೇವೇಂದ್ರ ತನ್ನ ಗುರುವಾದ ಬೃಹಸ್ಪತಿಗಳ ಬಳಿಗೆ ತೆರಳಿದನು. "ನೋಡು ದೇವೇಂದ್ರ - ಕಶ್ಯಪ ಋಷಿ ಮತ್ತು ವಿನತೆಯ ಮಗನಾದ ಗರುಡ ನಿನ್ನಲ್ಲಿರುವ ಅಮೃತವನ್ನು ಹೊತ್ತೊಯ್ಯಲು ಬರುತ್ತಿದ್ದಾನೆ. ಮಹಾಶಕ್ತಿಶಾಲಿಯಾದ ಗರುಡನಿಗೆ ಇದೇನು ದುಸ್ಸಾಸಧ್ಯವಲ್ಲ" ಎಂದು ಎಚ್ಚರಿಸಿದನು. ದೇವೇಂದ್ರನು ಆ ಕ್ಷಣವೇ ಅಮೃತವನ್ನು ರಕ್ಷಿಸುತ್ತಿದ್ದ ದೇವತೆಗಳನ್ನು ಕರೆದನು. "ಅಮೃತವನ್ನು ಕದ್ದೊಯ್ಯುದಕ್ಕೋಸ್ಕರ ಮಹಾಪರಾಕ್ರಮಿ, ಮಹಾಶಕ್ತಿಶಾಲಿಯಾದ ಬೃಹತ್ ಪಕ್ಷಿಯೊಂದು ಬರುತ್ತಿದೆ. ಅದನ್ನು ತಡೆಯುವುದಕ್ಕೆ ತಯಾರಾಗಿ" ಎಂದು ಎಚ್ಚರಿಸಿದನು. ಅಮೃತವನ್ನು ರಕ್ಷಿಸಲು ವಿಶೇಷವಾದ ವ್ಯೂಹವೊಂದನ್ನು ರಚಿಸಿದರು. ಬೃಹತ್ತಾದ ಚಕ್ರವೊಂದರ ಮಧ್ಯೆ ಅಮೃತವನ್ನಿರಿಸಿದ್ದರು. ಅದಕ್ಕೆರಡು ಬೃಹತ್ತಾದ ಮತ್ತು ಭೀಕರವಾದ ಸರ್ಪಗಳು ಕಾವಲಾಗಿದ್ದವು. ಅದರ ಸುತ್ತಲೂ ಅಗ್ನಿಯಿಂದ ರಚಿತವಾದ ಸುಡುಬೆಂಕಿಯ ಕಾವಲು. ನಂತರದಲ್ಲಿ    ಬೃಹತ್ ಸಂಖ್ಯೆಯ, ದಿವ್ಯಾಸ್ತ್ರಗಳಿಂದ ಶೋಭಿತವಾದ  ದೇವತಾ ಸೇನೆ.

ಇನ್ನೇನು ಎನ್ನುವಷ್ಟರಲ್ಲಿ ಬಿರುಗಾಳಿಯನ್ನೆಬ್ಬಿಸುತ್ತ, ಬೃಹತ್ ರೆಕ್ಕೆಗಳನ್ನು ಅತಿರಭಸದಲ್ಲಿ ಬಡಿಯುತ್ತ ಗರುಡನು ಬಂದೇಬಿಟ್ಟನು. ಆ ಬಿರುಗಾಳಿಯಿಂದೆದ್ದ ಧೂಳಿಗೆ ದೇವತೆಗಳ ಕಣ್ಣೇ ಕಾಣದಂತಾಯಿತು. ದೇವತೆಗಳ ಮನೋಬಲಕ್ಕೆ ಪೆಟ್ಟಾದುದನ್ನರಿತ ದೇವೇಂದ್ರ ಅವರನ್ನು ಹುರಿದುಂಬಿಸಲು ಶುರು ಮಾಡಿದನು. ಇದು ವಿಪರೀತಕ್ಕೆ ಹೋಗುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ ವಾಯುದೇವನನ್ನು ಕರೆದು ಈ ಧೂಳಿನಿಂದ ದೇವತೆಗಳನ್ನು ರಕ್ಷಿಸಲು ಆದೇಶವನ್ನಿತ್ತನು. ವಾಯುದೇವನು ಕೇವಲ ಒಂದೇ ಉಸಿರಿಗೆ ಧೂಳನ್ನು ಊದಿ ಇಲ್ಲವಾಗಿಸಿದನು. ಈಗ ಮಹಾಪಕ್ಷಿಯಾದ ಗರುಡ  ಸ್ಪಷ್ಟವಾಗಿ ಕಂಡನು.

ಈಗ ಭೀಕರವಾದ ಯುದ್ಧ ಶುರುವಾಯಿತು. ದೇವತೆಗಳು ತಮ್ಮೆಲ್ಲ ದಿವ್ಯಾಸ್ತ್ರಗಳಿಂದ ಗರುಡನ ಮೇಲೆ ಪ್ರಹಾರ ಮಾಡಲು ಶುರುಮಾಡಿದರು. ಒಂದಿಷ್ಟು ಹೊತ್ತು ಗರುಡನು ಆಟವಾಡುತ್ತ ಆ ಅಸ್ತ್ರಗಳನ್ನೆಲ್ಲ ತನ್ನ ಮೈಮುಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟನು. ಆ ಅಸ್ತ್ರವಳಾದರೋ ಗರುಡನ ಕೂದಲನ್ನು ಕೊಂಕಿಸಲಿಲ್ಲ. ಇದನ್ನು ನೋಡಿ ದೇವತೆಗಳ ಜಂಘಾಬಲವೇ ಉಡುಗಿಹೋಯಿತು. ಇದೆಂಥ ಪಕ್ಷಿ, ಅದೇನು ಶಕ್ತಿ ಎಂದು ಅಚ್ಚರಿಪಟ್ಟರು. ಇನ್ನು ಆಟ ಸಾಕು ಎಂದವನೇ ಗರುಡ ಒಮ್ಮೆ ಭೀಕರವಾಗಿ ಕೂಗಿದನು. ದೇವತೆಗಳ ಮೇಲೆ ಧಾಳಿ ಮಾಡಿದನು. ಅವನ ಕೊಕ್ಕು, ರೆಕ್ಕೆ, ಕಾಲುಗಳ ಹೊಡೆತಕ್ಕೆ ಸಿಕ್ಕ ದೇವತೆಗಳು ಜರ್ಜರಿತರಾದರು. ದಿಕ್ಕಾಪಾಲಾಗಿ ಎಲ್ಲೆಂದರಲ್ಲಿ  ಓಡಲು ತೊಡಗಿದರು. ಯುದ್ಧ ಭೂಮಿ ರಕ್ತದ ಮಡುವಾಯಿತು.

ದೇವತಾ ಸೇನೆಯನ್ನು ಮೀರಿ ಮುಂದೆ ಗರುಡನಿಗೆ ಅಗ್ನಿಯ ಕಾವಲು ಎದುರಾಯಿತು. "ಇದೇನಿದು - ಸೂರ್ಯನನ್ನೇ ಸುಡಬಹುದಾದಂತಹ ಅಗ್ನಿಯಿದು " ಎಂದು ಅಚ್ಚರಿಪಟ್ಟನು. ತನಗೆ ಬೇಕಾದ ಆಕೃತಿಯನ್ನು ಧರಿಸಬಲ್ಲವನಾದ ಗರುಡ ಸಾವಿರಾರು ತಲೆಗಳುಳ್ಳ ಬೃಹತ್ತಾದ ಆಕಾರ ತಳೆದನು. ಒಂದೊಂದು ಕೊಕ್ಕಿನಲ್ಲೂ ಒಂದು ನದಿಯಷ್ಟು  ನೀರನ್ನು ತುಂಬಿಕೊಂಡನು. ಒಮ್ಮೆಗೆ ಅಷ್ಟೂ ನೀರನ್ನು ಉರಿಯುತ್ತಿದ್ದ ಅಗ್ನಿಯ ಮೇಲೆ ಸುರಿಸಿ ಒಂದೇ ಬಾರಿಗೆ ಅದನ್ನು ನಿವಾರಿಸಿದನು. ಅದರಿಂದ ಉಂಟಾದ ಹೊಗೆಯನ್ನು ಒಂದು ಹಾರಿನಲ್ಲೇ ದಾಟಿದನು. ಸುತ್ತುತ್ತಿದ್ದ ಚಕ್ರದ ಮಧ್ಯೆಯಿದ್ದ ಅಮೃತದ ಬೃಹತ್ ಬಟ್ಟಲು ಈಗ ಸ್ಪಷ್ಟವಾಗಿ ಕಂಡಿತು. ಹಾಗೆ ದಿಟ್ಟಿಸುತ್ತಾ ನೋಡುತ್ತಿದ್ದ ಗರುಡನಿಗೆ ಆ ಎರಡು ಭೀಕರ ಸರ್ಪಗಳೂ ಕಂಡವು.

ಬೃಹತ್ತಾದ ಗರುಡ ಒಂದು ಚೂರೂ ವಿಚಲಿತನಾಗಲಿಲ್ಲ. ತಕ್ಷಣವೇ ಅತಿ ಚಿಕ್ಕದಾದ ಆಕಾರ ತಳೆದನು. ಸುತ್ತುತ್ತಿದ್ದ ಚಕ್ರದ ಕೆಳಗೆ ಸುಲಭವಾಗಿ ನುಸುಳಿದನು. ಮತ್ತೆ ತನ್ನ ಶಕ್ತಿಶಾಲಿಯಾದ ರೆಕ್ಕೆಗಳನ್ನು ಬಡಿಯುತ್ತ ದೊಡ್ಡದಾದ ಧೂಳನ್ನೆಬ್ಬಿಸಿದನು. ಅದರಿಂದ ಕಣ್ಣು ಕಾಣದಂತಾದ ಸರ್ಪಗಳನ್ನು ಸುಲಭವಾಗಿ ಹಿಡಿದು ತನ್ನ ಕೊಕ್ಕುಗಳಿಂದ ಕುಕ್ಕಿ ನಿರ್ನಾಮ ಮಾಡಿದನು. ಚಕ್ರದ ಮಧ್ಯದಲ್ಲಿ ಅಮೃತದಿಂದ ತುಂಬಿದ್ದ ಸುವರ್ಣದ ಬಟ್ಟಲನ್ನು ಕೈಗೆ ತೆಗೆದೆಕೊಂಡನು. ತನ್ನ ಚಿಕ್ಕ ಆಕಾರದಿಂದ ಇದ್ದಕ್ಕಿದ್ದ ಹಾಗೆ ಬೃಹತ್ತಾಗಿ ಬೆಳೆಯುವುದಕ್ಕೆ ಶುರುಮಾಡಿದನು. ಅವನ ಆಕೃತಿ ಚಕ್ರಕ್ಕಿಂತ ಮಿಗಿಲಾಗುತ್ತಿದ್ದಂತೆ ಚಕ್ರ ಒಡೆದು ಚೂರುಚೂರಾಯಿತು. ವಿಜೃಂಭಣೆಯಿಂದ ಕೂಗುತ್ತ ಗರುಡ ಆಕಾಶದಲ್ಲಿ ಎತ್ತರಕ್ಕೆ ಹರಿದನು. ವಿನತೆಯನ್ನು ದಾಸ್ಯದಿಂದ ಬಿಡಿಸುವುದಕ್ಕೆ ವೇಗವಾಗಿ ಸಾಗಿದನು.

ಘನ ಗಾಂಭೀರ್ಯದಲ್ಲಿ ಹಾರುತ್ತ ಸಾಗುತ್ತಿದ್ದ ಪಕ್ಷಿರಾಜನನ್ನು ಮಹಾವಿಷ್ಣು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಿದನು. "ಕೈಯಲ್ಲಿ ಯಾರಿಗೂ ಸಿಗಲಾರದಂತಹ ಅಮೃತವಿದೆ. ಆದರೂ ಒಂದಿಷ್ಟು ವಿಚಲಿತನಾಗದೆ ನಿರ್ಲಿಪ್ತತೆಯಿಂದ ಹಾರುತ್ತಿರುವ ಈ ಗರುಡ ಪಕ್ಷಿ ಮಹಾತ್ಮನೇ ಸರಿ. ಒಂದು ಹನಿಯಷ್ಟು ಅಮೃತಕ್ಕೂ ಅಸೆ ಪಡುತ್ತಿಲ್ಲವಲ್ಲ ಇವನು. ಎದುರಿಗೆ ಅಮೃತವಿದ್ದರೆ, ದೇವತೆಗಳಿಗೂ ಇಂತಹ ನಿರ್ಲಿಪ್ತತೆ ಸಾಧ್ಯವಿಲ್ಲ. ಕೇವಲ ತನ್ನ ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡುವುದೇ ಅವನ ಧ್ಯೇಯವಾಗಿದೆ" ಎಂದು ಬಹುವಾಗಿ ಹೋಗಳಿದನು. ಗರುಡನನ್ನು ಕೂಗಿ ಕರೆದನು. "ಮಹಾಪಕ್ಷಿಯೇ, ನಿನ್ನ ವರ್ತನೆಯಿಂದ ನಾನು ಸಂಪ್ರೀತನಾಗಿದ್ದೇನೆ. ನಿನಗೆ ಎರಡು ವರಗಳನ್ನು ಕೊಡುತ್ತೇನೆ - ಕೇಳಿಕೊ" ಎಂದನು ಮಹಾವಿಷ್ಣು. ಗರುಡನು ವಿನಯದಿಂದ "ಶ್ರೀಹರಿ, ನಿನ್ನ ವರಗಳಿಂದ ನಾನು ಧನ್ಯನಾದೆ. ಒಂದು ವಾರದಲ್ಲಿ ನನಗೆ ಅಮರತ್ವವನ್ನು ಮತ್ತು ರೋಗಗಳಿಂದ ಮುಕ್ತಿಯನ್ನೂ ಕರುಣಿಸು. ಇನ್ನೊಂದು ವರದಲ್ಲಿ ನಾನು ಎಂದಿಗೂ ನಿನಗಿಂತ ಮೇಲಿನ ಸ್ಥಾನವನ್ನು ದಯಪಾಲಿಸು" ಎಂದನು. ಮಹಾವಿಷ್ಣು ಮುಗುಳ್ನಕ್ಕನು.
"ತಥಾಸ್ತು, ನೀನು ನನ್ನೀ ಧ್ವಜಸ್ಥಮ್ಭದ ಮೇಲೆ ಸದಾ ವಿರಾಜಮಾನನಾಗಿರು. ನನ್ನ ಆಸನದಿಂದ ಸದಾ ಮೇಲಿರುವ ಈ ಸ್ಥಮ್ಭಕ್ಕೆ   ಗರುಡಗಂಭ ಎಂದು ಹೆಸರಾಗಲಿ" ಆಶೀರ್ವದಿಸಿದನು. ಧ್ವಜಸ್ತಮಭದ ಮೇಲೆ ಆಸೀನನಾದ ಗರುಡ ಸುಪ್ರೀತನಾದನು. "ಮಹಾಮಹಿಮನವ ವಿಷ್ಣುವೇ, ನಿನ್ನ ವರಗಳಿಂದ ನಾನು ಧನ್ಯನಾದೆ. ಇದಕ್ಕೆ ಪ್ರತಿಯಾಗಿ ನಾನೂ ಸಹ ನಿನಗೊಂದು ವರವನ್ನು ಕೊಡುತ್ತೇನೆ." ಎಂದನು. ತಕ್ಷಣವೇ ವಿಷ್ಣು 'ನನ್ನ ವಾಹನವಾಗಿ ನಾನು ಕರೆದ ತಕ್ಷಣ ಬರಬೇಕು' ಎಂದು ಕೇಳಿಕೊಂಡನು. ಇದಕ್ಕೊಪ್ಪಿದ ಗರುಡನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತಳನ್ನಾಗಿಸಿದ ನಂತರ ಬರುತ್ತೇನೆ ಎಂದು ಬೀಳ್ಕೊಟ್ಟನು.

ಇಷ್ಟರಲ್ಲಿ ಅಮೃತವನ್ನು ಕಳೆದುಕೊಂಡು ದುಃಖತಪ್ತನಾಗಿದ್ದ ಇಂದ್ರ ಆಕಾಶದಲ್ಲಿ ಹಾರುತ್ತಿದ್ದ ಗರುಡನನ್ನು ನೋಡಿದನು. ಕೋಪದಿಂದ ತನ್ನ ವಜ್ರಾಯುಧದಿಂದ ಪ್ರಹಾರ ಮಾಡಿದನು. ಆದರೆ ಅದು ಗರುಡನ ರೆಕ್ಕೆಯ ಒಂದು ಪುಕ್ಕವನ್ನು ಕೊಂಕಿಸಲಿಲ್ಲ. ಇಂದ್ರನು ಸ್ಥಮ್ಭೀಭೂತನಾದನು. ಒಂದು ಘಳಿಗೆಯಲ್ಲಿ ಸುಧಾರಿಸಿಕೊಳ್ಳುತ್ತ "ಪಕ್ಷಿಗಳಲ್ಲಿ ಶ್ರೇಷ್ಠನಾದ ಗರುಡ ಪಕ್ಷಿಯೇ, ನಿನ್ನ ಶಕ್ತಿಯ ಮಿತಿಯನ್ನು ಪರೀಕ್ಷಿಸುವುದಕ್ಕೋಸ್ಕರ ವಜ್ರಾಯುಧವನ್ನು ಪ್ರಯೋಗಿಸಿದೆ. ನಿನ್ನ ಅಪರಿಮಿತ ಶಕ್ತಿಗೆ ಮಿಗಿಲೆ ಇಲ್ಲ. ನನಗೆ ಸದಾ ಕಾಲ ನಿನ್ನ ಸ್ನೇಹವನ್ನು ದಯಪಾಲಿಸು." ಎಂದು ಕೇಳಿಕೊಂಡನು. "ಹಾಗೆ ಆಗಲಿ ಇಂದ್ರನೇ. ನೀನೀಗ ನನ್ನ ಶಕ್ತಿಯನ್ನು ನೋಡಿರುವೆ. ನನ್ನ ಸ್ನೇಹಿತನಾಗಿರುವೆ. ಆದ್ದರಿಂದ ಹೇಳುತ್ತೇನೆ ಕೇಳು. ನನ್ನ ರೆಕ್ಕೆಯ ಪುಕ್ಕವೊಂದು ಪರ್ವತ, ನದಿ, ಸಮುದ್ರ ಸಮೇತವಾದ ಭೂಮಿ ಮತ್ತು  ನಿನ್ನ ಭಾರ - ಎರಡನ್ನು ಒಟ್ಟಿಗೆ ತಾಳಬಲ್ಲದು. ನನ್ನ ಶಕ್ತಿಎಷ್ಟಿದೆಯೆಂದರೆ ಸಕಲ ಲೋಕಗಳನ್ನು ಒಟ್ಟಿಗೆ ಒಂದೇ ಬಾರಿಗೆ ಹೊತ್ತೊಯ್ಯಬಲ್ಲೆನು." ಎಂದನು. ಇಂದ್ರನು "ನನ್ನ ಸ್ನೇಹವನ್ನು ಸ್ವೀಕರಿಸಿದ್ದರಿಂದ ನಾನು ಧನ್ಯನಾದೆ. ಗರುಡ ಪಕ್ಷಿಯೇ ನೀನಾಗಲೇ ವಿಷ್ಣುವಿನ ವರದಿಂದ ಅಮರನಾಗಿರುವೆ. ನಿನಗೆ ಈ ಅಮೃತದಿಂದ ಉಪಯೋಗವಿಲ್ಲ. ಇನ್ನು ನೀನು ಕೊಡಬೇಕೆಂದಿರುವ ಸರ್ಪಗಳ ನಿನ್ನ ಶತ್ರು, ದೇವಲೋಕಕ್ಕೂ ಹನಿ ತರಬಲ್ಲರು. ಆದ್ದರಿಂದ ದಯವಿಟ್ಟು ಅಮೃತವನ್ನು ಹಿಂದಿರುಗಿಸು" ಎಂದು ಕೇಳಿಕೊಂಡನು.  ಆದರೆ ಗರುಡನು ಇದಕ್ಕೊಪ್ಪಲಿಲ್ಲ. ಆದರೆ ಸರ್ಪಗಳಿಂದ ಇದನ್ನು ಕಿತ್ತುಕೊಳ್ಳಲು ಒಂದು ಉಪಾಯವನ್ನು ಹೇಳಿಕೊಟ್ಟನು. ಸುಪ್ರೀತನಾದ ಇಂದ್ರ ವರವೊಂದನ್ನು ಕೇಳಿಕೊಳ್ಳುವಂತೆ ಆದೇಶಿಸಿದನು. "ಸರ್ಪಗಳ ಮೋಸದಿಂದ ತನ್ನ ತಾಯಿ ದಾಸಿಯಾಗಬೇಕಾಯಿತು. ಆದ್ದರಿಂದ ಸರ್ಪಗಳು ಇನ್ನು ಮುಂದೆ ನನ್ನ ಆಹಾರವಾಗುವಂತೆ ವರವನ್ನು ಕೊಡು" ಎಂದು ಕೇಳಿಕೊಂಡನು. "ತಥಾಸ್ತು" ಎಂದ ಇಂದ್ರ ಅಂತರ್ಧಾನನಾದನು.

ಇತ್ತ ವಾಪಸು ಬಂದ ಗರುಡ ಸರ್ಪಗಳಿಗೆ ಅಮೃತವನ್ನು ತೋರಿಸಿದನು. "ನೋಡಿ, ಕುಶದ ಹುಲ್ಲುಹಾಸಿನ ಮೇಲೆ ಇದನ್ನು ಇರಿಸುತ್ತೇನೆ. ನೀವು ಹೋಗಿ ಸ್ನಾನಾದಿ ಕರ್ಮಗಳನ್ನು ಮಾಡಿ ಬನ್ನಿ ನಂತರ ಇದರ ರುಚಿಯನ್ನು ನೋಡಿ" ಎಂದು ಸಲಹೆ ಕೊಟ್ಟನು. "ಈಕ್ಷಣ ನಾನು ಅಮೃತವನ್ನು ಕೊಟ್ಟಿರುವುದರಿಂದ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮುಕ್ತಳನ್ನಾಗಿ ಮಾಡಿ" ಎಂದನು ಗರುಡ. "ಹಾಗೆ ಆಗಲಿ - ಇಕ್ಷಣದಿಂದ ವಿನತೆ ಸ್ವತಂತ್ರಳು" ಎಂದವು ಸರ್ಪಗಳು. ಸ್ನಾನಾದಿ ಅರ್ಘ್ಯ ಕರ್ಮಗಳನ್ನು ಮಾಡುವುದಕ್ಕೆ ತೆರಳಿದವು. ಇದೆ ಸಮಯಕ್ಕೆ ಇಂದ್ರನು ಬಂದು ಅಮೃತದ ಬಟ್ಟಲನ್ನು ಟೆಕೆದುಕೊಂಡು ಸ್ವರ್ಗಲೋಕಕ್ಕೆ ಹಾರಿದನು. ವಿನತೆ ಮುಕ್ತಳಾದಳು. 

     

          

Saturday, November 10, 2018

kardama devahuti

ಕೃತಯುಗದಲ್ಲಿ ಮತ್ಸ್ಯಾವತಾರದ ನಂತರ ಸ್ವಾಯಂಭುವ ಮನು ಮತ್ತು ಅವನ ಪತ್ನಿ ಶತರೂಪಾ ಹೊಸಮನ್ವತಂರದ ಸ್ಥಾಪನೆಯಲ್ಲಿ ನಿರತರಾದರು. ಸ್ವಾಯಂಭುವ ಮನುವಿಗೆ ಮೂರು ಮಕ್ಕಳು - ಪ್ರಿಯವ್ರತ, ಉತ್ತಾನಪಾದ ಮತ್ತು ದೇವಹೂತಿ. ಪ್ರಿಯವ್ರತ ಮತ್ತು ಉತ್ತಾನಪಾದರು ಧರ್ಮಸಂಸ್ಥಾಪಕರಾದ ರಾಜರಾಗಿ ಇಡಿಯ ಭೂಮಂಡಲವನ್ನು ಪರಿಪಾಲಿಸುತ್ತಿದ್ದರು. ಸ್ವಾಯಂಭುವ ಮನುವಿಗೆ ತನ್ನ ಮಗಳಾದ ದೇವಹೂತಿಯ ಮೇಲೆ ವಿಶೇಷ ಮಮಕಾರ. ಅವಳಿಗೆ ಅನುರೂಪನಾದ ವರನನ್ನು ಹುಡುಕುತ್ತಿದ್ದನು. ಮಹಾತ್ಮನಾದ ಕರ್ದಮನೇ ದೇವಹೂತಿಗೆ ತಕ್ಕ ವರ ಎನ್ನುವುದು ಸ್ವಾಯಂಭುವ ಮನುವಿನ ಎಣಿಕೆ. ಚತುರ್ಮುಖ ಬ್ರಹ್ಮನ ಮಗನಾದ ಕರ್ದಮ ಪ್ರಜಾಪತಿಗೆ ತಂದೆಯು ಜಗತ್ತಿನ ಸೃಷ್ಟಿ ಕಾರ್ಯಕೈಗೊಳ್ಳುವಂತೆ ಆಜ್ಞೆ ಮಾಡಿದ್ದನು. ಸೃಷ್ಟಿಕಾರ್ಯ ಕೈಗೊಳ್ಳುವ ಮುಂಚೆ ಸರಸ್ವತೀ ತೀರದಲ್ಲಿ ಕಠಿಣವಾದ ತಪಸ್ಸಿಗೆ ಮೊದಲಾಗಿದ್ದನು ಕರ್ದಮ ಪ್ರಜಾಪತಿ.

ಅನೇಕ ವರ್ಷಗಳ ತಪಸ್ಸಿನ ನಂತರ ಮಹಾವಿಷ್ಣು ಶಬ್ದಬ್ರಹ್ಮದ ಮೂಲಕ ಅವನಿಗೆ ಪ್ರಕಟವಾದನು. ಕರ್ದಮನಿಗೆ ತಪಸ್ಸಿನ ಸಾಕ್ಷಾತ್ಕಾರದ ಸಂತೋಷದಿಂದ ಮತ್ತೇನೂ ಬೇಡವಾಯಿತು. ಆದರೆ ತನಗಿರುವ ಜವಾಬ್ದಾರಿಯಾದ ಸೃಷ್ಟಿಕಾರ್ಯದಿಂದ ಹಿಂದೆ ಸರಿಯುವಂತಿಲ್ಲ. 'ಮಹಾವಿಷ್ಣುವೇ, ಸೃಷ್ಟಿಕಾರ್ಯ ನಡೆಸುವುದಕ್ಕಾಗಿ ನನಗೆ ತಂದೆ ಬ್ರಹ್ಮನ ಆಜ್ಞೆಯಾಗಿದೆ. ಆದರೆ ನಿನ್ನ ಮೇಲಣ ಭಕ್ತಿ ಅದಕ್ಕೆ ಮಿಗಿಲಾಗಿದೆ. ನಾನು ಸಂಸಾರಿಯಾಗಿಯೂ ನಿನ್ನ ಭಕ್ತಿಗೆ ಒಂದಿಷ್ಟೂ ಚ್ಯುತಿ ಬರದ ಹಾಗೆ ದಯವಿಟ್ಟು ಕೈಹಿಡಿದು ನಡೆಸು' ಎಂದು ಕೇಳಿಕೊಂಡನು. ಭಗವಂತನು 'ಕರ್ದಮನೇ, ನೀನು ಸಂಸಾರಿಯಾಗುವ ಬಯಕೆಯಿಂದ ತಪಸ್ಸು ಮಾಡಿದೆ. ಆದರೆ ಈಗ ನಿನಗೆ ಭಕ್ತಿ ಮಿಗಿಲಾಗಿದೆ. ನಿನ್ನ ತಪಸ್ಸನ್ನು ಮೆಚ್ಚಿದ್ದೇನೆ. ನೀನು ಸೃಷ್ಟಿಕಾರ್ಯ ಮಾಡುವುದು ಅವಶ್ಯಕ. ನಿನಗೆ ಅನುರೂಪಳಾದ ವಧುವಿನ ಸೃಷ್ಟಿಯಾಗಿದೆ. ಸ್ವಾಯಭುವ ಮನುವಿನ ಮಗಳಾದ ದೇವಹೂತಿಯನ್ನು ಮದುವೆಯಾಗು, ನಿನ್ನ ಸಕಲ ಇಷ್ಟಾರ್ಧಗಳು ಪೂರೈಕೆಯಾಗುವುದು. ಸ್ವತಃ ಸ್ವಾಯಂಭುವ ಮನುವೇ ನಿನ್ನ ಆಶ್ರಮಕ್ಕೆ ಬಂದು ವಿವಾಹಪ್ರಸ್ತಾವಕ್ಕೆ ಮೊದಲಾಗುತ್ತಾನೆ. ದೇವಹೂತಿಯಿಂದ ನಿನಗೆ ಅನೇಕ ಮಕ್ಕಳಾಗುತ್ತಾರೆ, ಸ್ವತಃ ನಾನೇ ಒಂದಂಶದಿಂದ ಬಂದು ನಿನ್ನ ಮಗನಾಗಿ ಲೋಕಕಲ್ಯಾಣಕ್ಕೆ ಮೊದಲಾಗುತ್ತೇನೆ' ಎಂದು ಅಂತರ್ಧಾನನಾದನು.

ಅದರಂತೆ ಮರುದಿನ ಸ್ವಾಯಂಭುವ ಮನುವಿನ ರಾಜಪರಿವಾರ ಕರ್ದ್ಮನ ಆಶ್ರಮಕ್ಕ್ಕೆ ಬಂದಿಳಿಯಿತು. ಕರ್ದಮನ ಆಶ್ರಮದ ಸೌಂದರ್ಯಕ್ಕೆ ಸ್ವತಃ ಮನುವೇ ಮನಸೂರೆಗೊಂಡನು. ಕರ್ದಮನ ಭಕ್ತಿಗೆ ಮೆಚ್ಚಿದ ಮಹಾವಿಷ್ಣುವೇ ಆನಂದಬಾಷ್ಪ ಸುರಿಸಲು ಅದರ ಒಂದು ಬಿಂದುವಿನಿಂದ ಆಶ್ರಮದ ಎದುರು ಸುಂದರವಾದ 'ಬಿಂದುಸರೋವರ' ಉಂಟಾಗಿತ್ತು. ಮನೋಹರವಾದ ಮರ, ಗಿಡ, ಹೂಗಳಿಂದ ತುಂಬಿದ್ದ ಆಶ್ರಮದಲ್ಲಿ ಎಲೆಗಳಿಂದ ನಿರ್ಮಿತವಾದ ಕರ್ದಮನ ಮನೆಯಿತ್ತು. ಅದೇ ತಾನೆ ವೈದಿಕ ಕಾರ್ಯಗಳನ್ನು ಪೂರೈಸಿಕೊಂಡು ಬಂದ ಕರ್ದಮನ ದೈವೀಕ ತೇಜಸ್ಸನ್ನು ನೋಡಿ ಮನುವಿಗೆ ಗೌರವವುಂಟಾಯಿತು. ಕರ್ದಮನು ರಾಜಪರಿವಾರಕ್ಕೆ ಉಚಿತವಾದ ಸತ್ಕಾರ ಮಾಡಿ ಬರಮಾಡಿಕೊಂಡನು. ಭಗವಂತನ ಅಪ್ಪಣೆಯನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡನಾದರೂ ಗಾಂಭೀರ್ಯದಿಂದ 'ರಾಜನ್, ಸಕಲ ಭೂಮಂಡಲದ ದುಷ್ಟಶಿಷ್ಟ ರಕ್ಷಣದ ಹೊಣೆ ಹೊತ್ತಿರುವ ನೀನು ಪರಿವಾರ ಸಮೇತನಾಗಿ ಬಂದಿರುವೆಯೆಂದರೆ ಮಿಗಿಲಾದ ಲೋಕಕಲ್ಯಾಣ ಕಾರ್ಯವೇ ಇರಬೇಕು. ಅದೇನೆಂದು ಅರುಹು' ಎಂದು ಕೇಳಿಕೊಂಡನು.

ಸ್ವಾಯಂಭುವ ಮನುವು ಮಾರ್ಮಿಕವಾಗಿ ನುಡಿದನು. 'ಎಲೈ ಮುನಿಪುಂಗವನೇ, ಚತುರ್ಮುಖ ಬ್ರಹ್ಮನಾದರೋ ನಮ್ಮನ್ನು ಸೃಷ್ಟಿಸಿರುವುದು ಪ್ರಜಾಹಿತರಕ್ಷಣೆಗಾಗಿ. ಆದರೆ ನಿಮ್ಮನ್ನು ಸೃಷ್ಟಿಸುರುವುದು ವೇದಸ್ವರೂಪಿಯಾದ ತನ್ನನ್ನೇ ರಕ್ಶಿಸಿಕೊಳ್ಳುವುದಕ್ಕಾಕೆ. ಇದೀಗ ನಾನು ಬಂದಿರುವುದು ನಿಮ್ಮ ಲೋಕಕಲ್ಯಾಣದ ಧರ್ಮಾನುಸಾರಕ್ಕೆ ನನ್ನ ಕಾಣಿಕೆ ಸಲ್ಲಿಸಲು. ಈಕೆ ನನ್ನ ಮಗಳಾದ ದೇವಹೂತಿ. ಅವಳು ತನಗೆ ಅನುರೂಪನಾದ ಪತಿಯನ್ನು ಬಯಸುತ್ತಿದ್ದಾಳೆ. ಇತ್ತೀಚೆಗೆ ನಾರದ ಮಹರ್ಷಿಯಿಂದ ನಿಮ್ಮ ವಿದ್ಯೆ, ರೂಪ, ಗುಣ, ಸದಾಚಾರಗಳನ್ನು ಕೇಳಿ ನಿಮ್ಮನ್ನು ಮನಸಾ ವರಿಸಿದ್ದಾಳೆ. ನಿನಗೆ ಅನುರೂಪಳಾದ ದೇವಹೂತಿಯನ್ನು ವರಿಸಿ ನನ್ನನು ಕೃತಾರ್ಥನನ್ನಾಗಿ ಮಾಡು" ಎಂದನು. ಕರ್ದ್ಮನಿ 'ಮಹಾರಾಜ, ನಿನ್ನ ಮಗಳಾದ ದೇವಹೂತಿಯನ್ನು ವರಿಸುವುದಕ್ಕೆ ನೀನು ಇಷ್ಟಾಗಿ ಕೇಳಿಕೊಳ್ಳುವ ಅವಶ್ಯಕತೆಯಿಲ್ಲ. ದೇವಹೂತಿಯ ಬಗ್ಗೆ ನಾನು ಮಿಗಿಲಾದ ವಿಚಾರವನ್ನೇ ಕೇಳಿದ್ದೇನೆ. ಅವಳ ಲಾವಣ್ಯದ ಒಂದು ಕುಡಿನೋಟಕ್ಕೆ ಗಂಧರ್ವರಾಜನಾದ ವಿಶ್ವಾವಸು ಮೂರ್ಛೆಹೋದನಂತೆ. ದೇವಹೂತಿಯ ರೂಪ, ಗುಣ, ವಿದ್ಯೆ ತಿಳಿದಿರುವ ಯಾರೂ ಸಹ ಮೋಹಗೊಳ್ಳದೆ ಇರುವುದಿಲ್ಲ. ಅವಳನ್ನು ಸಂತೋಷದಿಂದ ವರಿಸುತ್ತೇನೆ. ಆದರೆ ನನ್ನ ಗೃಹಶ್ಥ ಧರ್ಮ ಸೃಷ್ಟಿಕಾರ್ಯಕ್ಕೆ ಮಾತ್ರ ಸೀಮಿತ. ನನ್ನ ಸೃಷ್ಟಿಕಾರ್ಯ ಮುಗಿದ ನಂತರ ನಾನು ಸನ್ಯಾಸಯಾಗಿ ಭಗವಂತ ನಾಮಸ್ಮರಣೆಯಲ್ಲಿ ಕಾಲಕಳೆಯುತ್ತೇನೆ. ಒಪ್ಪಿಗೆಯೇ' ಎಂದನು.

ದೇವಹೂತಿಗೆ ಕರ್ದಮನ ಧಾರ್ಮಿಕತೆ, ವೈರಾಗ್ಯ, ತೇಜಸ್ಸು ಎಲ್ಲದರಿಂದ ಅನುರಾಗ ಮತ್ತೂ ಸ್ಥಿರವಾಯಿತು. ಚತುರ್ಮುಖ ಬ್ರಹ್ಮನ ಸೃಷ್ಟಿಕಾರ್ಯ ಶುರುಮಾಡಿದ ನಂತರದಲ್ಲಿ ಮೊಟ್ಟಮೊದಲ ಸಕಲ ವೇದೋಕ್ತವಾಡ ವಿವಾಹ ಕರ್ದಮ ದೇವಹೂತಿಯರದ್ದು. ವೈಭವದ ವಿವಾಹದ ನಂತರ ಸ್ವಾಯಂಭುವ ಮನು ಮತ್ತು ಶತರೂಪೆಯರು ಭಾರದ ಮನದಿಂದ ಮಗಳನ್ನು ಒಪ್ಪಿಸಿ ರಾಜಧಾನಿಗೆ ಹಿಂದಿರುಗಿದರು.

ದೇವಹೂತಿ ಅರಮನೆಯ ವೈಭವದಿಂದ ಆಶ್ರಮದ ಸಾತ್ವಿಕ ಜೀವನಕ್ಕೆ ಬಹುಬೇಗ ಹೊಂದಿಕೊಂಡಳು. ಅವಳ ಅವಿರತ ದುಡಿಮೆ, ಆಶ್ರಮ ನಿರ್ವಹಣೆಯನ್ನು ಕರ್ದಮನಿಗೆ ಅವಳ ಮೇಲೆ ಅಪಾರ ಗೌರವ, ಆದರ, ಪ್ರೇಮವುಂಟಾಯಿತು. ಒಂದು ದಿನ ಕರ್ದಮ "ದೇವಿ, ನಿನ್ನಂತಹ ಪತ್ನಿಯನ್ನು ಪಡೆದು ನಾನು ಧನ್ಯನಾದೆ. ನಿನ್ನ ಆಶ್ರಮದ ಸೇವೆಯಲ್ಲಿ ನಿನ್ನ ದೇಹವೇ ಕುಂದುತ್ತಿರುವುದನ್ನು ನೀನು ಗಮನಿಸಿದಂತಿಲ್ಲ. ತಪಶ್ಯಕ್ತಿಯಿಂದ ನನ್ನಲ್ಲಿ ದೈವೀಕವಾದ ಸಿದ್ಧಿಗಳು ವಶವಾಗಿವೆ. ನಿನ್ನೀ ಸೇವೆಯಿಂದ ನೀನೂ ಸಹ ಅವುಗಳಿಗೆ ಅಧಿಕಾರಸ್ಥಳಾಗಿರುವೆ. ನಿನಗೆ ಬೇಕಾದ ಸುಖವೇನು ಕೇಳಿಕೋ. ಅಲ್ಪದ್ದಕ್ಕೆ ಆಸೆ ಪಡಬೇಕಾದ ಅವಶ್ಯಕತೆಯಿಲ್ಲ. ಸಾಮಾನ್ಯರಿಗೆ ಎಟುಕಲಾರದ ಸಕಲಭೋಗಗಳನ್ನೂ ನೀನು ತೃಪ್ತಿಯಾಗುವಷ್ಟು ಅನುಭವಿಸಬಹುದು" ಎಂದನು. ದೇವಹೂತಿ ತನ್ನ ಮನದ ಅಪೇಕ್ಷೆಯನ್ನು ಹೇಗೆ ಹೇಳುವುದು ಎಂದು ಯೋಚಿಸುತ್ತಾ "ಮಹರ್ಷಿ, ನಿನಗೆ ತಿಳಿಯದುದೇನಿದೆ? ಸಂಸಾರಸುಖದಲ್ಲಿ ಸಂತಾನಸುಖ ಹಿರಿದಾದುದು. ಸುಂದರಾಂಗರಾದ ನಿಮ್ಮ ಅಂಗಸಂಗದಿಂದ ನಾನು ಸಂತಾನವನ್ನು ಬಯಸುತ್ತೇನೆ. ಈ ಕಾಮಸುಖಕ್ಕೆ ಅನುಗುಣವಾದ ಮಂದಿರವನ್ನೂ, ಭೋಗಸಾಮಗ್ರಿಗಳನ್ನೂ ಸೃಷ್ಟಿಮಾಡಬೇಕೆಂದು ನನ್ನಾಸೆ" ಎಂದಳು. ಕರ್ದಮನಿಗೆ ಚತುರ್ಮುಖಬ್ರಹ್ಮನ ಆಜ್ಞೆ ಜ್ಞಾಪಕಕ್ಕೆ ಬಂತು.

ಅದರಂತೆ ಕರ್ದಮನು ಒಂದು ದಿವ್ಯವಾದ ವಿಮಾನವನ್ನು ನಿರ್ಮಿಸಿ ಅದರಲ್ಲಿ ದೇವಹೂತಿಗೆ ಪ್ರಿಯವಾದ ಸಕಲ ಸಂಪತ್ತುಗಳನ್ನೂ ತುಂಬಿದನು. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನ ಪತಿ-ಪತ್ನಿಯರ ಆಂತರ್ಯ ವಿಹಾರಕ್ಕೆ ಸಕಲಮನೋಹರವಾಗಿತ್ತು. ಕರ್ದಮನಿಗೇ ತನ್ನ ಸೃಷ್ಟಿಕಾರ್ಯದ ಸೊಬಗಿಗೆ ಆಶ್ಚರ್ಯವಾಯಿಗು. ಕರ್ದಮನ ಆದೇಶದಂತೆ ದೇವಹೂತಿ ಬಿಂದುಸರೋವರದಲ್ಲಿ ಮಿಂದು ವಿಮಾನವನ್ನೇರಿದಳು. ಅವಳ ಸಕಲ ಇಷ್ಟಾರ್ಧಗಳೂ ನೆರೆವೇರುವಷ್ಟು ದಿನ ಅವರಿಬ್ಬರೂ ವಿಮಾನದಲ್ಲಿ ವಿಹರಿಸಿದರು. ಕರ್ದಮನು ಅವಳಿಗೆ ಸಕಲ ಲೋಕಗಳು, ಸೃಷ್ಟಿಯ ಸಕಲಸೊಬಗುಗಳನ್ನೂ ಪರಿಚಯಮಾಡಿಕೊಟ್ಟನು. ಅನೇಕವರ್ಷಗಳು ಕ್ಷಣವೆನ್ನುವಂತೆ ಕಳೆದುಹೋದವು. ದೇವಹೂತಿಯ ಬಯಕೆ ಸಿದ್ಧಿಸಿತು. ಅವಳಿಗೆ ಪರಮಸುಂದರಿಯರಾದ ಒಂಭತ್ತು ಹೆಣ್ಣು ಮಕ್ಕಳು ಜನಿಸಿದರು.

ತಾನು ಕೊಟ್ಟ ಮಾತಿನಂತೆ ಕರ್ದಮನು ಸಂತಾನಭಾಗ್ಯವಾದ ನಂತರ ಸನ್ಯಾಸ ಜೀವನ ಸ್ವೀಕರಿಸುತ್ತಾನೆ ಎಂದು ದೇವಹೂತಿಗೆ ಅರಿವಿತ್ತು. ಅವನ ಅಗಲಿಕೆಯನ್ನು ತಾಳಲಾರದಾದಳು. ಸ್ವತಃ ತಾನೇ ವಿಷಯವನ್ನು ಪ್ರಸ್ತಾಪಿಸಿ "ಪತಿಯೇ, ನನಗೆ ಸಂತಾನಭಾಗ್ಯವನ್ನೇನೋ ಕಲ್ಪಿಸಿದರಿ. ಆದರೆ ನಿಮ್ಮ ಪುತ್ರಿಯರಿನ್ನೂ ಚಿಕ್ಕ ಮಕ್ಕಳು. ಅವರಿಗೆ ಅನುರೂಪರಾಡ ವರರನ್ನು ಅನ್ವೇಷಿಸಿ ವಿವಾಹ ಮಾಡುವುದೂ ತಮ್ಮ ಜವಾಬ್ದಾರಿಯಲ್ಲವೇ? ನೀವೀಗಲೇ ಸನ್ಯಾಸಿಗಳಾದರೆ ನನಗೆ ಅತಿಯಾದ ದುಃಖವಾಗುವುದು. ನನಗೆ ಸಕಲಭೋಗವನ್ನೂ ಕಲ್ಪಿಸಿದ್ದೀರಿ. ಆದರೆ ನಾನು ನಿಮ್ಮಿಂದ ವೈರಾಗ್ಯವನ್ನೂ, ಮುಕ್ತಿಮಾರ್ಗವನ್ನೂ ಇನ್ನೂ ಪಡೆದಿಲ್ಲ. ನನಗೆ ಅಂತಹ ಮಾರ್ಗವನ್ನು ಬೋಧಿಸಬಲ್ಲಂತಹ ಒಬ್ಬ ಮಗನನ್ನು ಕರುಣಿಸಿ - ಅದಲ್ಲದೆ ನನಗೆ ಮತ್ತೊಂದರ ಆಸೆಯಿಲ್ಲ" ಎಂದಳು.

ಕರ್ದಮನಿಗೆ ಮಹಾವಿಷ್ಣು ಪ್ರತ್ಯಕ್ಷನಾಗಿದ್ದಾಗ ಕೊಟ್ಟ ವರ ನೆನಪಾಯಿತು. ಸ್ವತಃ ತಾನೇ ಲೋಕೋದ್ಧಾರಕ್ಕಾಗಿ ನನ್ನ ಮಗನಾಗಿ ಜನ್ಮತಾಳುವೆನೆಂದು ಹೇಳಿದ್ದನಲ್ಲವೇ. ಆ ಘಳಿಗೆ ಬಂದುದಾಗಿದೆ. ಕರ್ದಮನು "ದೇವಹೂತಿ, ನಿನ್ನ ಭಾಗ್ಯ ಮಿಗಿಲಾದುದು. ಸ್ವತಃ ಶ್ರೀಹರಿಯೇ ನಿನ್ನ ಉದರದಲ್ಲಿ ಜನಿಸುವನು. ಇಂದಿನಿಂದ ಕಠಿಣವ್ರತಾಧಾರಿಯಾಗಿ ತಪಸ್ಸನ್ನಾಚರಿಸು. ಶ್ರೀಹರಿಯೇ ನಿನಗೆ ಪರಮಾರ್ಧ ಜ್ಞಾನವನ್ನು ಕರುಣಿಸುತ್ತಾನೆ" ಎಂದು ಅನುಗ್ರಹಿಸಿದನು. ಅದರಂತೆ ದೇವಹೂತಿ ದೀರ್ಘ ತಪಸ್ಸಾನಚರಿಸಿದಳು. ಶುಭಘಳಿಗೆಯೊಂದರಲ್ಲಿ ಅವಳಿಗೆ ಪುತ್ರನೊಬ್ಬನ ಜನನವಾಯಿತು. ಸಕಲಲೋಕಗಳಲ್ಲಿ ಶುಭಶಕುನಗಳಾದವು. ದೇವದುಂದಿಭಿಗಳು ಮೊಳಗಿದವು.ಸ್ವತಃ ಚತುರ್ಮುಖ ಬ್ರಹ್ಮನ ಧರೆಗಿಳಿದು ಬಂದು ದೇವಹೂತಿ-ಕರ್ದಮರನ್ನು ಅಭಿನಂದಿಸಿ ಆಶೀರ್ವದಿಸಿದನು. ಮಗುವಿಗೆ ಬ್ರಹ್ಮನೇ 'ಕಪಿಲ'ನೆಂದು ನಾಮಕರಣ ಮಾಡಿದನು.

ಪತ್ನಿಗೆ ಕೊಟ್ಟ ಮಾತಿನಂತೆ ಕರ್ದಮನು ಪುತ್ರಿಯರಕ್ಕೆ ವಿವಾಹಕ್ಕೆ ಮೊದಲಾದನು. ಮರೀಚಿ ಮಹರ್ಷಿ ಕಲಾದೇವಿಯನ್ನೂ, ಅತ್ರಿಮುನಿ ಅನಸೂಯೆಯನ್ನೂ, ಆಂಗಿರಸ ಮಹರ್ಷಿ ಶ್ರದ್ಧಾದೇವಿಯನ್ನೂ, ಪುಲಸ್ತ್ಯನು ಹವಿರ್ಭೂದೇವಿಯನ್ನೂ, ಪುಲಹನು ಗತಿಯನ್ನೂ, ಕ್ರತು ಕ್ರಿಯಾದೇವಿಯನ್ನೂ, ಭೃಗು ಖ್ಯಾತಿಯನ್ನೂ, ವಸಿಷ್ಟನು ಅರುಂಧತಿಯನ್ನೂ, ಅಥರ್ವನು ಶಾಂತಿದೇವಿಯನ್ನೂ ಮದುವೆಯಾದರು. ತದನಂತರ ಕರ್ದಮನು ಪತ್ನಿ, ಪುತ್ರರನ್ನು ಬೇಳ್ಕೊಟ್ಟು ವಿರಕ್ತಪುರುಷನಾಗಿ ಕಠಿಣ ತಪಸ್ಸಾನಚರಿಸಿ ಮೋಕ್ಷಪಡೆದನು.       


Monday, November 05, 2018

ನರಕಾಸುರ

ಮಕ್ಕಳೆ - ನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು. ಕರ್ನಾಟಕದಲ್ಲಿ ಚತುರ್ದಶಿಯ ದಿನ ದೀಪಾವಳಿ ಹಬ್ಬದ ಮೊದಲನೇ ದಿನ. ಉತ್ತರ ಭಾರತದಲ್ಲಿ ಇದಕ್ಕಿಂತ ಒಂದು ದಿನ ಮುಂಚೆ ಧನ್ ತೇರಸ್ ಅನ್ನುವ ಹಬ್ಬ ಮಾಡ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಚತುರ್ದಶಿಯೇ ಮೊದಲನೇ ದಿನ. ಇವತ್ತಿನ ದಿನಕ್ಕೆ ಎರಡು ಪ್ರಾಮುಖ್ಯತೆ ಇದೆ. ಮೊದಲನೇಯದು ಇವತ್ತಿನ ದಿನ ಶ್ರೀರಾಮ ರಾವಣನನ್ನು ಕೊಂದ ನಂತರ ಅಯೋಧ್ಯಾನಗರಿಯನ್ನು ತಲುಪುವ ದಿನ. ಮಾರನೇಯ ದಿನ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬ ನಡೆಯೋದು ಶ್ರೀರಾಮ ಹಿಂತಿರುಗಿದ್ದರ ನೆನಪಿಗಾಗಿ. ಅದೇ ರೀತಿ ಮಹಾಭಾರತ ಕಾಲದಲ್ಲಿ ಇವತ್ತಿನ ದಿನವೇ ಶ್ರೀಕೃಷ್ಣ ನರಕಾಸುರ ಅನ್ನುವ ರಾಕ್ಷಸನನ್ನ ಸಂಹರಿಸಿದ್ದು, ಅದರ ನೆನಪಿಗಾಗಿ ಈ ದಿನಕ್ಕೆ ನರಕ ಚತುರ್ದಶಿ ಅನ್ನುವ ಹೆಸರು ಬಂದಿದೆ. ಈ ಕತೆ ತುಂಬಾ ರೋಚಕವಾಗಿದೆ. ಅದನ್ನ ಕೇಳೋಣ್ವೆ.


ಸಾವಿರಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ ಅನ್ನೋದು ನಿಮಗೆ ಗೊತ್ತಿರಬಹುದು. ಅವನು ಇಡೀ ಭೂಮಿಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ ಹಿರಣ್ಯಾಕ್ಷನನ್ನು ನೀರಿನಲ್ಲೇ ದ್ವಂದ್ವಯುದ್ಧ - ಅಂದರೆ ಒಂದು ತರಹದ ಕುಸ್ತಿಯನ್ನು ಮಾಡಿ - ಕೊಂದು ಭೂದೇವಿಯನ್ನು ಸಂರಕ್ಷಿಸಿದ, ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ -  ಅನ್ನೋ ಕಥೆ ನಿಮಗೆ ಗೊತ್ತಿರಬಹುದು. ಮಹಾವಿಷ್ಣುವಿನ ಮೂರನೇಯ ಮುಖ್ಯ ಅವತಾರವಾದ ವರಾಹನಿಗೆ ಎಷ್ಟು ಶಕ್ತಿಯಿತ್ತು ಅಂದರೆ ಹಿರಣ್ಯಾಕ್ಷನನ್ನು ಹೂವೆತ್ತಿದ ಹಾಗೆ ಹಗುರವಾಗಿ, ಸುಲಭವಾಗಿ ಕೊಂದುಬಿಟ್ಟನಂತೆ. ಆದರೆ ಅದೆಲ್ಲೋ ಒಂದು ಕಡೆ ಒಂದು ಹನಿ ಬೆವರು ವರಾಹನ ಮೈಯಿಂದ ಕೆಳಗೆ ಬಿದ್ದೇ ಬಿಟ್ಟಿತಂತೆ. ವರಾಹ ಅವತಾರ ಪುರುಷ ಅಂದ ಮೇಲೆ ಕೇಳಬೇಕೆ. ಆ ಬೆವರಿನಿಂದ ಒಬ್ಬ ಶಕ್ತಿವಂತನಾದ ಯುವಕ ಹುಟ್ಟಿಬಿಟ್ಟಿನಂತೆ. ಅವನ ಹೆಸರೇ ನರಕ. ತಂದೆ ವರಾಹ, ತಾಯಿ ಭೂದೇವಿ.

ಭೂದೇವಿಗೆ ತನ್ನ ಮಗ ನರಕನ ಮೇಲೆ ಮಹಾಪ್ರೀತಿ. ತನ್ನ ಮಗ ಸದಾ ಜಯಶಾಲಿಯಾಗಿರಬೇಕು, ಯಾರೂ ಸೋಲಿಸಬಾರದು ಎಂದು ವರ ಬೇಡಿದಳಂತೆ.ವರಾಹ ತನ್ನ ಒಂದು ದಂತವನ್ನು ಕೊಟ್ಟು 'ನೋಡು ಮಗನೆ, ಇದು ತುಂಬಾ ಶಕ್ತಿಶಾಲಿಯಾದ ಆಯುಧ, ಇದನ್ನ ನೀನು ನಿನಗೆ ಅಪಾಯವಾದಾಗ ಅಥವಾ ಧರ್ಮವನ್ನು ಉಳಿಸೋದಕ್ಕೆ ಮಾತ್ರ ಬಳಸಬೇಕು. ವಿನಾ ಕಾರಣ ಮತ್ತು ಅಮಾಯಕರ ಮೇಲೆ ಬಳಸಬಾರದು' ಎಂದು ಕಟ್ಟಪ್ಪಣೆ ಮಾಡಿದನಂತೆ. ಭೂದೇವಿಗೆ ತನ್ನ ಮಗ ಮೂರು ಲೋಕಗಳಲ್ಲಿ ಮಹಾ ಶಕ್ತಿವಂತ ಅಂತ ಸಂತೋಷ. ಆದರೆ ವರಾಹ ಮಾತ್ರ 'ನೋಡೋಣ ಅವನು ಒಳ್ಳೇದಕ್ಕಾಗಿ ಶಕ್ತಿ ಬಳಸುತ್ತಾನೋ ಅಥವಾ ಸ್ವಾರ್ಥಕ್ಕೋಸ್ಕರ ಬಳಸುತ್ತಾನೋ' ಎಂದು ಹೇಳಿ ಮಾಯವಾದನು.

ಮೊದಮೊದಲು ಸರಿಯಾಗಿದ್ದ ನರಕ ನಂತರ ಬಾಣಾಸುರ ಅನ್ನುವ ರಾಕ್ಷಸನ ಜೊತೆ ಸೇರಿ ತಾನೂ ರಾಕ್ಷಸನಾದ. ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು 'ನನ್ನ ತಾಯಿಯಿಂದ ಮಾತ್ರ ನನಗೆ ಸಾವು' ಎನ್ನುವ ವರ ಪಡೆದ. ವಿಪರೀತ ಬಲಶಾಲಿಯಾದ ಆದರೆ ಮಹಾ ಅಧರ್ಮಿಯಾದ. ಪ್ರಾಗ್ಜ್ಯೋತಿಷಪುರ - ಅಂದರೆ ಇವತ್ತಿನ ಗುವಹಾಟಿಯಲ್ಲಿ ತನ್ನ ರಾಜ್ಯ ಸ್ಥಾಪಿಸಿಕೊಂಡಿದ್ದ. ಒಳ್ಳೆಯವರಿಗೆ ತೊಂದರೆ ಕೊಟ್ಟು, ಕೆಟ್ಟರಾಕ್ಷಸರ ರಾಜ್ಯ ಬೆಳೆಸಿದ. ಹದಿನಾರು ಸಾವಿರ ಸ್ತ್ರೀಯರನ್ನ ತನ್ನ ಅರಮನೆಯಲ್ಲಿ ಬಂದಿಸಿಟ್ಟಿದ್ದ. ಸ್ವರ್ಗಕ್ಕೆ ಹೋಗಿ ಇಂದ್ರನನ್ನೇ ಸೋಲಿಸಿ ಎಲ್ಲಾ ದೇವತೆಗಳನ್ನು ತನ್ನ ಕೈವಶ ಮಾಡಿಕೊಂಡಿದ್ದ. ದೇವತೆಗಳೆಲ್ಲ ವಿಷ್ಣುವಿನ ಹತ್ತಿರ ಹೋಗಿ ನರಕನಿಂದ ನಮ್ಮನ್ನು ರಕ್ಶಿಸು ಎಂದು ಕೇಳಿಕೊಂಡರು. ಅವರೆಲ್ಲರ ಕಷ್ಟವನ್ನ ಶಾಂತನಾಗಿ ಆಲಿಸಿದ ವಿಷ್ಣು 'ಶ್ರೀಕೃಷ್ಣಾವತಾರಕ್ಕಾಗಿ ನೀವು ಕಾಯಬೇಕು' ಅಂತ ಹೇಳಿ ಅವರನ್ನ ಕಳಿಸಿದ.

ಕೃತಯುಗವಾದ ನಂತರ ತ್ರೇತಾ ಯುಗ ಬಂದಿತು. ಅದಾದ ಮೇಲೆ ದ್ವಾಪರಯುಗ ಬಂತು. ದ್ವಾಪರದಲ್ಲಿ ಮಹಾವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತಾರ ಎತ್ತಿ ಭೂಮಿಗೆ ಬಂದ. ಮಹಾ ಅಧರ್ಮಿ, ಕ್ರೂರಿಯಾದ ಕಂಸ ಮುಂತಾದ ಅನೇಕ ರಾಕ್ಷಸರನ್ನ ಕೊಂದ. ಆದರೆ ನರಕ ಮಾತ್ರ ಇನ್ನೂ ಬಲಶಾಲಿಯಾಗೇ ಇದ್ದ. ಇಂದ್ರನ ತಾಯಿ ಅದಿತೀದೇವಿಯ ಕಿವಿಯೋಲೆಯನ್ನ ಕಿತ್ತು ತಂದಿದ್ದ. ಈ ಸಮಯದಲ್ಲಿ ಇಂದ್ರ ಶ್ರೀಕೃಷ್ಣನ ಸಹಾಯ ಬೇಡಿದ. 'ನೋಡು ಶ್ರೀಕೃಷ್ಣ ನನ್ನ ತಾಯಿಯ ಕಿವಿಯೋಲೆನೇ ಕಿತ್ತುಕೊಂಡಿದ್ದಾನೆ, ದಯವಿಟ್ಟು ಅವನ ಅಹಂಕಾರದ ಹುಟ್ಟಡಗಿಸು' ಅಂತ. ಕೃಷ್ಣನ ಹೆಂಡತಿ ಸತ್ಯಭಾಮೆಗೆ ಇದನ್ನ ಕೇಳಿ ಮಹಾದುಃಖವಾಯಿತು. ಪ್ರಪಂಚಕ್ಕೇ ತಾಯಿಯಾದ ಅದಿತೀದೇವಿಗೆ ಈ ರೀತಿ ಅವಮಾನ ಮಾಡಿದ ನರಕಾಸುರನನ್ನ ಸುಮ್ಮನೆ ಬಿಡಬಾರದು ಅಂತ ಶ್ರಿಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು.

ಸತ್ಯಭಾಮಗೆ ಶ್ರೀಕೃಷ್ಣ ಎಂದೂ ನಿರಾಸೆ ಮಾಡಿರಲಿಲ್ಲ. ಅಲ್ಲದೇ ನರಕಾಸುರ ಮಹಾಪಾಪಿ. ಒಂದು ಅವಕಾಶಕ್ಕಾಗಿ ಕೃಷ್ಣ ಕಾಯುತ್ತಿದ್ದ ಅಷ್ಟೆ. 'ಸರಿ' ಎಂದು ತಕ್ಷ್ಣಣವೇ ಮಹಾಗರುಡ ಪಕ್ಷಿಯನ್ನ ಮನದಲ್ಲಿ ನೆನೆದ. ವಿಷ್ಣುವಿನ ವಾಹನವಾದ ಗರುಡ ವಿಷ್ಣುವಿನ ಅವತಾರಿಯಾದ ಕೃಷ್ಣ ಕರೆದ ತಕ್ಷಣ ಬಂದ. ಕೃಷ್ಣ ತನ್ನ ಆಯುಧವಾದ ಸುದರ್ಶನ ಚಕ್ರ ಮತ್ತು ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಗರುಡಪಕ್ಷಿಯನ್ನೇರಿ ಕೂತ. ಸತ್ಯಭಾಮೆ ನಾನೂ ಬರುತ್ತೇನೆ ಎಂದು ಹಠ ಹಿಡಿದಳು. ಸರಿ ಎಂದು ಶ್ರೀಕೃಷ್ಣ ಸತ್ಯಭಾಮಾಸಮೇತನಾಗಿ ಪ್ರಾಗ್ಜ್ಯೋತಿಷಪುರಕ್ಕೇ ಹೊರಟೇಬಿಟ್ಟ.

ನರಕಾಸುರ ಕ್ರೂರಿಯಷ್ಟೆ ಅಲ್ಲ ಮಹಾಬುದ್ಧಿವಂತ. ತನ್ನ ನಗರಕ್ಕೇ ನಾಲ್ಕು ರೀತಿಯ ರಕ್ಷಣೆ ನಿರ್ಮಿಸಿಕೊಂಡಿದ್ದ. ಮೊದಲನೇಯ ರಕ್ಷಣೆ ಬಂಡೆಗಳಿಂದ ಕೂಡಿದ ಪರ್ವತಗಳದ್ದು. ಅದನ್ನು ಗರುಡ ತನ್ನ ಕೊಕ್ಕಿನಿಂದ ಜೋರಾಗಿ  ಕುಕ್ಕಿ ಪುಡಿಪುಡಿ ಮಾಡಿದ. ಎರಡಾನೇಯದಾಗಿ ಬೆಂಕಿಯಿಂದ ಮಾಡಿದ ಉಂಗುರದ ರೀತಿಯ ಒಂದು ಸುತ್ತುಬೇಲಿಯ ದಾಟಬೇಕಾಗಿತ್ತು. ಅದನ್ನು ಕೂಡ ಶ್ರೀಕೃಷ್ಣ ವರುಣಾಸ್ತ್ರದಿಂದ ನೀರು ಚಿಮ್ಮಿಸಿ ಆರಿಸಿ ಪ್ರಾಗ್ಜ್ಯೋತಿಷಪುರದ ಬಾಗಿಲ ಹತ್ತಿರ ಬಂದೇಬಿಟ್ಟ. ತನ್ನ ಶಂಖ ಪಾಂಚಜನ್ಯವನ್ನ ಒಮ್ಮೆ ಜೋರಾಗಿ ಊದಿದ. ಆ ಹೆಬ್ಬಾಗಿಲನ್ನು 'ಮುರ' ಎನ್ನುವ ರಾಕ್ಷಸ - ನರಕಾಸುರನಿಗೆ ಅತ್ಯಂತ ಪ್ರಿಯನಾದ ರಾಕ್ಷಸ - ಅವನು ನೋಡಿಕೊಂಡಿದ್ದ. ಪರ್ವತ, ಬೆಂಕಿಯ ಬೇಲಿ ಅವುಗಳನ್ನೆಲ್ಲ ಮೀರಿ ಇಲ್ಲಿಯವರೆಗೇ ಯಾರು ಕೂಡಾ ಬರಲು ಸಾಧ್ಯವಿಲ್ಲ ಎಂದುಕೊಂಡು ನೀರಿನಾಳದಲ್ಲಿ ವಿಹರಿಸುತ್ತಿದ್ದ ಮುರ. ಆದರೆ ಬಂಡೆಗಳು ಚೂರಾಗಿದ್ದು, ನೀರಿನ ಜೋರು ಶಬ್ದ ಮತ್ತು ಕೃಷ್ಣನ ಶಂಖನಾದದಿಂದ ಮುರನಿಗೆ ಗಾಬರಿಯಾಗಿ ಹೊರಬಂದ. ಅವರಿಬ್ಬರ ಮಧ್ಯೆ ಮಹಾಯುದ್ಧವಾಯಿತು. ಆದರೆ ಕಡೆಗೆ ಶ್ರೀಕೃಷ್ಣನಿಗೆ ಜಯವಾಗಿ ಮುರ ಸಾವನ್ನಪ್ಪಿದ. ಮುರನಂತಹ ಬಲಶಾಲಿಯಾದ ಕ್ರೂರಿ ರಾಕ್ಷಸನನ್ನು ಕೊಂದಕಾರಣ ಶ್ರೀಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.

ಕಟ್ಟ ಕಡೆಯದಾಗಿ ನರಕಾಸುರನ ಹನ್ನೊಂದು ಅಕ್ಷೌಹಿಣಿ ಸೇನೆ ಶ್ರೀಕೃಷ್ಣನಿಗೆ ಎದುರಾಯಿತು. ಆದರೆ ಅದು ಕೃಷ್ಣನಿಗೆ ಲೆಕ್ಕವೇ ಇಲ್ಲವಾಯಿತು. ಸುಲಭವಾಗಿ ಇಡಿಯ ಸೈನ್ಯವೇ ನಾಶವಾಯಿತು. ಕಡೆಗೆ ವಿಧಿಯಿಲ್ಲದೇ ನರಕಾಸುರನೇ ಬರಬೇಕಾಯಿತು. ಅವರಿಬ್ಬರ ಮಧ್ಯೆ ಅನೇಕ ದಿನಗಳ ಕಾಲ ದೀರ್ಘವಾದ ಯುದ್ದವಾಯಿತು. ನರಕಾಸುರನ ಎಲ್ಲ ಅಸ್ತ್ರಗಳನ್ನೂ ಶ್ರೀಕೃಷ್ಣ ಸೋಲಿಸಿಬಿಟ್ಟ. ಕಡೆಗೆ ಅವನಲ್ಲಿ ವರಾಹ ಕೊಟ್ಟಿದ್ದ ದಂತದಿಂದ ಮಾಡಿದ ತ್ರಿಶೂಲದಂತಹ ಒಂದು ಆಯುಧ ಮಾತ್ರ ಉಳಿದಿತ್ತು. ಇಂತಹ ಸಂಕಷ್ಟದ ಕಾಲಕ್ಕೇ ಅದನ್ನ ಇಟ್ಟುಕೊಂಡಿದ್ದ, ಆದರೆ ಈಗ ಅದನ್ನ ಅಧರ್ಮದ ಕಾರಣಕ್ಕೆ ಬಳಸುತ್ತಾ ಇದ್ದ. ಆದ್ದರಿಂದ ಶ್ರೀಕೃಷ್ಣ ಮತ್ತು ಸತ್ಯಭಾಮರ ಮುಂದೆ ಈ ತ್ರಿಶೂಲವೂ ನಡೆಯಲಿಲ್ಲ. ನರಕಾಸುರನಿಗೆ ಗಾಬರಿಯಾಯಿತು. ವರಾಹದ ದಂತವೇ ಸೋತಿದೆ ಎಂದರೆ ನನ್ನ ಅಂತ್ಯ ಕಾಲ ಬಂದಿರಬೇಕು ಅನ್ನಿಸಿತು. ಅದೇ ಸಮಯಕ್ಕೆ ನರಕಾಸುರನಿಗೆ ತನಗಿರುವ ವರದ ಜ್ಞಾಪಕ ಬಂತು. ತನ್ನ ತಾಯಿಯಿಂದ ಮಾತ್ರ ತನಗೆ ಸಾವು ಅಂದ ಮೇಲೆ ಸತ್ಯಭಾಮೆಯೇ ತನ್ನ ಹಿಂದಿನ ಜನ್ಮದಲ್ಲಿ ತಾಯಿ ಮತ್ತ್ರು ಶ್ರೀಕೃಷ್ಣ ವರಾಹನಲ್ಲದೇ ಬೇರೆ ಯಾರೂ ಅಲ್ಲ ಎಂದು ಅವನಿಗೆ ಅರಿವಾಯಿತು. ಕೃಷ್ಣ ಮತ್ತು ಸತ್ಯಭಾಮೆಯರ ಬಾಣದಿಂದ ನರಕಾಸುರ ನೆಲಕ್ಕುರುಳಿದ.

ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನ ಒಂದು ವರ ಕೇಳಿದ. 'ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ದಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ಸಾವನ್ನ್ನು ಆಚರಿಸಿಲಿ' ಎಂದು ವರವನ್ನು ಬೇಡಿದ. ಭೂದೇವಿಯಾದ ಸತ್ಯಭಾಮೆ ಮನಕರಗಿ ವರವನ್ನು ಕೊಟ್ಟಳು. ನರಕಾಸುರ ಕಡೆಗೆ ಸತ್ತ. ಶ್ರೀಕೃಷ್ಣ ನರಕನು ಬಂಧಿಸಿದ್ದ ಹದಿನಾರು ಸಾವಿರ ಸ್ತ್ರೀಯರನ್ನ ಬಿಡುಗಡೆ ಮಾಡಿದ, ನರಕಾಸುರನ ಮಗ ಭಗದತ್ತನನ್ನ ರಾಜನನ್ನಾಗಿ ಮಾಡಿದ. ಮತ್ತು ತಕ್ಷಣವೇ ಸತ್ಯಭಾಮೆಯ ಸಮೇತ ಗರುಡನ ಮೇಲೇರಿ ಸ್ವರ್ಗದಲ್ಲಿರುವ ಇಂದ್ರನಿಗೆ ಅದಿತಿದೇವಿಯ ಓಲೆಗಳನ್ನು ಗೌರವದಿಂದ ಅರ್ಪಿಸಿ ದ್ವಾರಕೆಗೆ ಹಿಂದಿರುಗಿದ.