ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Friday, January 04, 2019

ಪ್ರದ್ಯುಮ್ನ ಮತ್ತು ಮಾಯಾವತಿ

ತಪೋನಿರತನಾಗಿದ್ದ ಶಿವನನ್ನು ಕಾಮದೇವ ಪುಷ್ಪಬಾಣದಿಂದ ಎಬ್ಬಿಸಿದ ಕಥೆ ಎಲ್ಲರಿಗು ತಿಳಿದೇ ಇದೆ. ಕ್ರೋಧಾವಿಷ್ಟನಾದ ಶಿವ ಇದು ಮದನಕಾಮನ ಕೆಲಸ ಎಂದು ಅರಿತವನೇ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಸುಟ್ಟು ಬೂದಿ ಮಾಡಿದ. ಶೋಕತಪ್ತಳಾದ ರತಿಗೆ ತಿಳಿಯದೆ ಹೋದದ್ದೆಂದರೆ ಕಾಮದೇವ ಭೂಮಿಯಲ್ಲಿ ಪ್ರದ್ಯುಮ್ನನಾಗಿ ಶ್ರೀಕೃಷ್ಣ ಮತ್ತು ರುಕ್ಮಿಣಿಯ ಮಗನಾಗಿ ಜನ್ಮ ತಳೆದದ್ದು. ದ್ವಾರಕೆಯ ಜನತೆ ಹರ್ಷದಿಂದ ಸಂಭ್ರಮಿಸಿದರು. 

ರುಕ್ಮಿಣಿಗೆ ತನ್ನ ಮಗ ತನ್ನ ಆರೈಕೆಯಲ್ಲಿ ತಂದೆಯಂತೆಯೇ ಅತುಲ ಪರಾಕ್ರಮಿಯಾಗಬೇಕೆಂಬ ಬಯಕೆ. ಆದರೆ ಶ್ರೀಕೃಷ್ಣನ ಮಗನೆಂದ ಮೇಲೆ ವಿಧಿಲೀಲೆ ವೈಪರೀತ್ಯಗಳನ್ನು ಎದುರಿಸಲೇಬೇಕಲ್ಲವೇ. ಅದೇ ಕಾಲಕ್ಕೆ ಶಂಬರಾಸುರನೆಂಬ ರಾಕ್ಷಸನಿದ್ದ. ಅವನಿಗೊಂದು ಘೋರವಾದ ಕನಸಾಯಿತು. "ಶಂಬರ ಎಚ್ಚರಿಕೆ, ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನ ನಿನ್ನನ್ನು ಕೊಲ್ಲಲಿದ್ದಾನೆ " ಎಂದು. ಶಂಬರನೇನೂ ವಿಚಲಿತನಾಗಲಿಲ್ಲ. "ಅವನು ಬೆಳೆದು ದೊಡ್ಡವನಾದ ಮೇಲಲ್ಲವೇ ಆ ಮಾತು. ಅದಕ್ಕೂ ಮೊದಲೇ ಅವನನ್ನು ನಿವಾರಿಸಿದರಾಯಿತು" ಎಂದು ನಿರ್ಧರಿಸಿದ. ಅದೃಶ್ಯನಾದವನೇ ಆಕಾಶ ಮಾರ್ಗವಾಗಿ ನೇರ ದ್ವಾರಕೆಯನ್ನು ತಲುಪಿದ. ಅರಮನೆಯನ್ನು ಪ್ರವೇಶಿಸಿ ತೊಟ್ಟಿಲಿನಿಂದ ಮಗುವನ್ನು ಕೈಗೆ ತೆಗೆದುಕೊಂಡವನೇ "ನೀನೆಯೋ ಆ ಮಗು, ಶಂಬರಾಸುರನನ್ನು ಕೊಲ್ಲುವವನು" ಎಂದು ಕೊಂಕು ಮಾತಾಡುತ್ತ ಮರಳಿ ಹಾರಿ ಹೋದ.

ಬೆಳಗಾಗುತ್ತಲೇ ತೊಟ್ಟಿಲನ್ನು ನೋಡಿದ ರುಕ್ಮಿಣಿ ದಿಗ್ಭ್ರಾಮ್ತಳಾದಳು. ಅವಳ ಪ್ರಲಾಪವನ್ನು ಕೇಳಿದ ಅರಮನೆಯ ಸೇವಕಿಯರೆಲ್ಲ ಓಡಿಬಂದರು. ಪ್ರದ್ಯುಮ್ನ ಕಾಣೆಯಾಗಿರುವುದನ್ನು ಮನಗಂಡವರೇ ವಿಹ್ವಲರಾಗಿ ಶ್ರೀಕೃಷ್ಣನಿಗೆ ವಿಷಯ ತಿಳಿಸುವುದಕ್ಕೆ ಓಡಿದರು. "ಚಿಮ್ತಿಸಬೇಡಿ, ಮಗುವನ್ನು ಹುಡುಕುವುದಕ್ಕೆ ಸೇನೆಯ ತುಕಡಿಯನ್ನು ಕಳಿಸೋಣ" ಎಂದು ಶ್ರೀಕೃಷ್ಣ ಸಮಾಧಾನಪಡಿಸಿದನು. ಆದರೆ ಹುಡುಕಲು ಹೊರಟ ಎಲ್ಲಾ ತುಕಡಿಗಳೂ ಸೋತು ವಾಪಸಾಗಿ ತಲೆತಗ್ಗಿಸಿದವು. ಸಕಲವನ್ನೂ ತಿಳಿದಿದ್ದ ಶ್ರೀಕೃಷ್ಣ ಪುತ್ರಶೋಕದಿಂದ ತಪ್ತಳಾಗಿದ್ದ ರುಕ್ಮಿಣಿಯನ್ನು ಸಮಾಧಾನ ಪಡಿಸಿ ಅವಳನ್ನು ವಿಶೇಷವಾಗಿ ನೋಡಿಕೊಂಡನು.

ಇತ್ತ ಶಂಬರಾಸುರ ಮಗುವನ್ನು ಹೊತ್ತವನೇ ದ್ವಾರಕೆಯಿಂದ ಬಹುದೂರ ಸಮುದ್ರದತ್ತ ಹೋದನು. "ಎಲವೋ ನನ್ನನ್ನು ಕೊಲ್ಲುವ ಪ್ರದ್ಯುಮ್ನ ಮಗುವೇ, ನೋಡು ನಿನಗ್ಯಾವ ದುರ್ಗತಿ" ಎಂದವನೇ ಮಗುವನ್ನು ಆಳವಾಗಿರುವ ನಡು ಸಮುದ್ರದಲ್ಲಿ ಚೆಲ್ಲಿ "ಇನ್ನು ನಾನು ನೆಮ್ಮದಿಯಾಗಿ ನಿದ್ರಿಸಬಹುದು" ಎಂದು ವಾಪಸಾದನು.  ಆದರೆ ಸುದೈವದಿಂದ ಪ್ರದ್ಯುಮ್ನ ಸಾಯಲಿಲ್ಲ. ದೊಡ್ಡದಾದ ಮೀನೊಂದು ಪ್ರದ್ಯುಮ್ನನನ್ನು ನುಂಗಿಬಿಟ್ಟಿತು. ಮೀನುಗಾರ ಗುಂಪೊಮ್ದು ಆಳ ಸಮುದ್ರದಲ್ಲಿ ಮೀನು ಹುಡುಕುತ್ತಾ  ಈ ದೊಡ್ಡ ಮೀನನ್ನು ಬಲೆಗೆ ಚೆಲ್ಲಿಕೊಂಡರು. "ಇಂತಹ ದೊಡ್ಡ ಮೀನು ಶಂಬರಾಸುರನಿಗೆ ತಕ್ಕುದು ನಮಗೆ ಒಳ್ಳೆಯ ಬಹುಮಾನ ಕೊಟ್ಟಾನು" ಎಂದು ಮೀನುಗಾರರು ವಿಮರ್ಶಿಸಿದರು. ಮೀನನ್ನು ಅರಮನೆಯ ಅಡುಗೆಮನೆಗೆ ಕಲಿಸಲು ತೀರ್ಮಾನಿಸಿದರು.  

ಇತ್ತ ಪತಿಯನ್ನು ಕಳೆದುಕೊಂಡ ರತಿ ದುಃಖ ತಡೆಯದೆ ಅಗ್ನಿಪ್ರವೇಶಕ್ಕೆ ಮನಸ್ಸು ಮಾಡಿದಳು. ಆಗ ಅಶರೀರ ವಾಣಿಯೊಂದು ಮೊಳಗಿ "ಕಾಮದೇವ ನಿನಗೆ ಮತ್ತೆ ದೊರೆಯುತ್ತಾನೆ ಚಿಮತಿಸದಿರು" ಎಂದು ತಡೆಯಿತು. "ಶಂಬರಾಸುರನ ಆಸ್ಥಾನಕ್ಕೆ ಒಬ್ಬ ಸೇವಕಿಯ ರೂಪದಲ್ಲಿ ಹೋಗಿ ಅವನ ಅಡುಗೆ ಕೊನೆಯಲ್ಲಿ ಕಾರ್ಯನಿರ್ವಹಿಸಿಕೊಂಡಿರು, ನಿನಗೆ ಒಳ್ಳೆಯದಾಗುವುದು" ಎಂದು ಆದೇಶಿಸಿತು. ಅಂತೆಯೇ ರತಿ ಒಬ್ಬ ಸೇವಕಿಯ ವೇಷಧರಿಸಿ ಶಂಬರಾಸುರನ ಅರಮನೆಗೆ ಹಾರಿಹೋದಳು. ತನ್ನನು ಮಾಯಾವತಿ ಎಂದು ಪರಿಚಯಿಸಿಕೊಂಡ ರತಿ ಕೆಲಸ ಬೇಡಿದಳು. ಅದೇ ಕಾಲಕ್ಕೆ ಅಲ್ಲಿನ ಪ್ರಧಾನ ಸೇವಕಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮಾಯಾವತಿಗೆ ಕೆಲಸ ಸಿಕ್ಕಿತು. ತಾಳ್ಮೆಯಿಂದ ರತಿ ಕಾರ್ಯನಿರ್ವಹಿಸುತ್ತಾ ಒಳ್ಳೆಯ ದಿನಕ್ಕಾಗಿ ಕಾದಳು.

ಒಂದು ದಿನ ಅಡುಗೆ ಕೊನೆಗೆ ಆ ದೊಡ್ಡ ಮೀನನ್ನು ಮೀನುಗಾರರು ಹೊತ್ತು ತಂದರು. ಆ ರಾತ್ರಿಗೆ ಇದೆ ವಿಶೇಷ ಅಡುಗೆ ಎಂದು ಪ್ರಧಾನ ಭಟ್ಟನು ಅದನ್ನು ಕೊಯ್ದವನೇ ಒಳಗೆ ಮಗುವನ್ನು ಕಂಡು ಸ್ಥಮಭೀಭೂತನಾದನು. ಇನ್ನೂ ಬದುಕಿದ್ದ ಸುಂದರವಾದ ಆ ಮಗುವನ್ನು ಬೇರೆ ದಾರಿಗಾಣದೆ ಮಾಯಾವತಿಗೆ ಅದನ್ನು ಬೆಳೆಸುವಂತೆ ಕೇಳಿಕೊಂಡನು. ಮಾಯಾವತಿ ಅದನ್ನು ತನ್ನ ಮನೆಗೆ ಕರೆದೊಯ್ದ ದಿನವೇ ಅತ್ತ ನಾರದ ಮಹರ್ಷಿಗಳು ದಯಮಾಡಿಸಿದರು. ನಾರದರು ಇದು ಮತ್ತಾರೂ ಅಲ್ಲದೆ ಅವಳ ಪತಿಯಾದ ಕಾಮದೇವ ಮನ್ಮಥ ಎಂದು ತಿಳಿಸಿದರು. ಗೊಂದಲಕ್ಕೊಳಗಾದ ರತಿಗೆ ನಾರದರು ಶಿವನು ಮದನನ್ನು ಸುಟ್ಟಾಗ ಮದನ ಮುಂದೆ ಶ್ರೀಕೃಷ್ಣನ ಮಗನಾಗಿ ಹುಟ್ಟುವ ಅವಕಾಶವನ್ನು ಬೇಡಿದ್ದನ್ನು ತಿಳಿಸಿದರು. ಮತ್ತು ಮುಂದೆ ನಡೆದದ್ದೆಲ್ಲವನ್ನೂ ತಿಳಿಸಿದರು. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಮಗು ಯುವಕನಾದ ಮೇಲೆ ಅವನಿಗೆ ಸತ್ಯವನ್ನು ತಿಳಿಸಬೇಕಾಗೂ ಆದೇಶಿಸಿದರು.

ನೋಡುವದಕ್ಕೆ ಶ್ರೀಕೃಷ್ಣನಂತೆಯೇ ಇದ್ದ ಪ್ರದ್ಯುಮ್ನ ಅರಮನೆಯ ಅಡುಗೆ ಮನೆಯಲ್ಲಿ ಎಲ್ಲರ ಮುದ್ದಿನ ಮಗುವಾಗಿ ಬೆಳೆದನು. ನೋಡನೋಡುತ್ತಿದ್ದಂತೆಯೇ ಬೆಳೆದು ಸ್ಪುರದ್ರೂಪಿಯಾದ ಯುವಕನಾದನು. ಅಲ್ಲಿನ ಸೇವಕಿಯರೆಲ್ಲರೂ ಅವನ ರೂಪಕ್ಕೆ ಮನಸೋತು ಅವನ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದರು. ಅವನಿಗೋಸ್ಕರ ವಿಶೇಷ ತಿಂಡಿತಿನಿಸು ತರುತ್ತಿದ್ದರು. ಇದೆಲ್ಲವನ್ನು ನೋಡಿದ ಮಾಯಾವತಿಗೆ ಆತಂಕವಾಗುತ್ತಿತ್ತು. ಆದಷ್ಟು ಬೇಗ ಅವನಿಗೆ ಸತ್ಯವನ್ನು ತಿಳಿಸಬೇಕೆಂದು ತುದಿಗಾಲಮೇಲೆ ನಿಂತಿದ್ದಳು. ಒಂದು ದಿನ ಅವನೊಡನೆ ಏಕಾಂತ ಸಮಯ ಸಿಕ್ಕಿತ್ತು. ಆಗ ಮಾಯಾವತಿ ಪ್ರದ್ಯುಮ್ನ ಜನನದ ನಂತರದ ಕಥೆಯನ್ನೆಲ್ಲ ತಿಳಿಸಿದಳು. ಅವನ ನಿಜನಾಮಧೇಯ ಪ್ರದ್ಯುಮ್ನ ಎಂದು ತಿಳಿಸಿದಳು. ಅವನ ತಾಯಿ ರುಕ್ಮಿಣಿ ಈಗಲೂ ಪುತ್ರಶೋಕದಿಂದ ವ್ಯಾಕುಲಳಾಗಿದ್ದಾಳೆ ಎಂದು ಎಚ್ಚರಿಸಿದಳು. ಪ್ರದ್ಯುಮ್ನನಿಗೆ ತಾನು ಶ್ರೀಕೃಷ್ಣರುಕ್ಮಿಣಿಯರ ಮಗನೆಂದು ತಿಳಿದು ಆಶ್ಚರ್ಯ, ಸಂತೋಷಗಳಾದವು. ಆತ್ಮವಿಶ್ವಾಸ ಮೂಡಿತು. ಆದರೆ ಇಷ್ಟು ವರ್ಷ ತನಗೆ ಅವರ ಸಾನ್ನಿಧ್ಯ ತಪ್ಪಿತಲ್ಲ ಎಂದು ಕ್ರುದ್ಧನಾದನು.  ಮಿಗಿಲಾಗಿ ತಾಯಿಯಾದ ರುಕ್ಮಿಣಿಯ ಶೋಕ ಅವನನ್ನು ಕೋಪವನ್ನು ಇಮ್ಮಡಿಗೊಳಿಸಿತು. 'ಹಾಗಿದ್ದರೆ ಇನ್ನೇನು ಈ ತಕ್ಷಣವೇ ಶಂಬರನಿಗೆ ಗತಿಕಾಣಿಸೋಣ" ಎಂದು ಪ್ರದ್ಯುಮ್ನ ಸನ್ನದ್ಧನಾದನು. ಆದರೆ ಮಾಯಾವತಿ ತಾಳ್ಮೆಯನ್ನು ಬೋಧಿಸಿದಳು. ಶಂಬರಾಸುರ ರಾಕ್ಷಸ, ಮಾಯಾವಿದ್ಯೆಯಲ್ಲಿ ನಿಪುಣ. ನಾನು ನಿನಗೆ ಒಂದಿಷ್ಟು ಮಾಯಾವಿದ್ಯೆ ಕಲಿಸುತ್ತೇನೆ ನಂತರ ನೀನು ಶಂಬರನನ್ನು ಎದುರಾಗು ಎಂದು ಸಮಾಧಾನ ಪಡಿಸಿದಳು. ಒಂದಿಷ್ಟು ಕಾಲದ ನಂತರ ಪ್ರದ್ಯುಮ್ನ ಶಂಬರನ್ನು ಎದುರಿಸುವಷ್ಟು ವಿದ್ಯೆಯನ್ನು ಸಿದ್ಧಿಸಿಕೊಂಡನು. ಮಾಯಾವತಿ ತನ್ನ ದೈವೀಕ ಶಕ್ತಿಯಿಂದ ಪ್ರದ್ಯುಮ್ನನಿಗೆ ರಥವನ್ನು ಸಿದ್ಧಪಡಿಸಿದಳು.

ಒಂದು ಶುಭದಿನ ಪ್ರದ್ಯುಮ್ನ ಶಂಬರನ್ನು ಯುದ್ಧಕ್ಕೆ ಆಹ್ವಾನಿಸಿದನು. "ಒಂದು ಮಗುವನ್ನು ತಾಯಿಯ ಮಡಿಲಿನಿಂದ ಹೇಡಿಯಂತೆ ಕದ್ದೊಯ್ದ ಶಂಬರಾಸುರನೆ, ನನ್ನೊಡನೆ ಯುದ್ಧಕ್ಕೆ ಬಾ" ಎಂದು ಕೂಗಿ ಕರೆದನು. ಇದನ್ನು ಕೇಳಿದ ಶಂಬರಾಸುರ ನಖಶಿಖಾಂತ ಉರಿದು ಹೋದನು. ಈ ನನ್ನ ರಹಸ್ಯವನ್ನು ಅದಾವನು ತಿಳಿದವನು ಎಂದು ಕೋಪದಿಂದ ದ್ವಂದ್ವ ಯುದ್ಧಕ್ಕೆ ಅಬ್ಬರಿಸಿ ಬಂದನು. ಅವರಿಬ್ಬರ ನಡುವೆ ಭೀಕರವಾದ ಯುದ್ಧವಾಯಿತು. ಮೊದಮೊದಲು ನೇರವಾದ ಯುದ್ಧ ನಡೆಯಿತು. ಆದರೆ ಯಾವಾಗ ತನ್ನ ಕೈ ಸೋಲುತ್ತಿದೆ ಎಂದು ಅನ್ನಿಸಿತೋ ಶಂಬರಾಸುರ ಮಾಯಾಯುದ್ಧಕ್ಕೆ ಶುರುವಿಟ್ಟುಕೊಂಡನು. ಮಾಯಾವತಿಯಿಂದ ಕಲಿತ ವಿದ್ಯೆ ಪ್ರದ್ಯುಮ್ನನ ಸಹಾಯಕ್ಕೆ ಬಂದಿತು. ಶಂಬರನ ಎಲ್ಲ ಮಾಯೆಗಳನ್ನು ಮೀರಿದ ಪ್ರದ್ಯುಮ್ನ ತನ್ನ ಮಾಯೆಯಿಂದಲೇ ಅವನನ್ನು ವಿಚಲಿತಗೊಳಿಸಿದ. ಕಡೆಗೆ ಖಡ್ಗದಿಂದ ಶಂಬರನ ಕತ್ತನ್ನು ಕತ್ತರಿಸಿದ. ಮಯಾವತಿಯ ಬಳಿಗೆ ಓಡಿದ.

ಮಾಯಾವತಿ ತನ್ನ ಹರ್ಷೋದ್ಘಾರದ ನಡುವೆಯೂ ಮುಂದಿನ ಕಾರ್ಯವನ್ನು ಮರೆಯಲಿಲ್ಲ. ತಾಯಿಯಾದ ರುಕ್ಮಿಣಿ ಇನ್ನೊಂದು ಕ್ಷಣವೂ ದುಃಖಿಸಬಾರದು ಎಂದವಳೇ ತಕ್ಷಣ ಪ್ರದ್ಯುಮ್ನನನ್ನು ಕರೆದುಕೊಂಡು ದ್ವಾರಕೆಗೆ ಹಾರಿದಳು. ಅದೇ ಸಮಯಕ್ಕೆ ಕೈಲಾಸದಲ್ಲಿ ಶಿವ ಪಾರ್ವತಿಯನ್ನು ವಿವಾಹವಾದನು. ರತಿಗೆ ಮನ್ಮಥನು ಮತ್ತೆ ದೊರೆಯುವ ಗಳಿಗೆ ಕೂಡಿ ಬಂದಿತ್ತು. ದೇವತೆಗಳೆಲ್ಲರೂ ಶಿವನ ಬಳಿಗೆ ಬಂದು ರತಿಗೆ ಮತ್ತೆ ಮನ್ಮಥನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ಪಾರ್ವತಿಯನ್ನು ಒಮ್ಮೆ ನೋಡಿ ನಸುನಕ್ಕ ಶಿವನು "ನಾನೆ ಈಗ ಕಾಮನ ವಶವಾಗಿರುವುದರಿಂದ ರತಿಗೆ ಖಂಡಿತಾ ಕಾಮನು ದೊರೆಯುತ್ತಾನೆ" ಎಂದನು. 

ಶಿವನು ಈ ಮಾತನ್ನಾಡಿದ ಆ ಕ್ಷಣದಲ್ಲಿ ಪ್ರದ್ಯುಮ್ನ ಮತ್ತು ಮಾಯಾವತಿಯರಿಬ್ಬರರೂ ದ್ವಾರಕೆಯಲ್ಲಿ ಶ್ರೀಕೃಷ್ಣನ ಅರಮನೆಯನ್ನು ಪ್ರವೇಶಿಸಿದರು. ಅರಮನೆಯ ಸೇವಕಿಯರು ದೂರದಿಂದ ಅವನನ್ನು ಶ್ರೀಕೃಷ್ಣನೆಂದು ತಪ್ಪಾಗಿ ಭಾವಿಸಿದರು. ಆದರೆ ಅವನ ಜೊತೆಯಿರುವ ಆ ಸುಂದರ ಯುವತಿ ಯಾರು ಎಂದು ಆಶ್ಚರ್ಯದಿಂದ ಮೂಗಿನ   ಮೇಲೆ  ಬೆರಳಿಟ್ಟರು. ಆದರೆ ರುಕ್ಮಿಣಿಗೆ ಮಾತ್ರ ಅವನು ಶ್ರೀಕೃಷ್ಣನಲ್ಲವೆಂದು ತಿಳಿಯಿತು. ಆದರೂ ಅವನಂತೆಯೇ ಇರುವ ಇವನ್ಯಾರು ಎನ್ನುವುದು ಬಗೆಹರಿಯಲಿಲ್ಲ. ಮನದಾಳದಲ್ಲಿ ಮಾತ್ರ "ನನ್ನ ಮಗನೇನಾದರೂ ಜೀವಿದಿಂದಿದ್ದರೆ ಇವನಂತೆಯೇ ಇರುತ್ತಿದ್ದ, ಇಷ್ಟೇ ವಯಸ್ಕನಾಗಿರುತ್ತಿದ್ದ" ಎಂದು ದುಃಖದ ಛಾಯೆಯೊಂದು ಮೂಡಿತು. ಒಂದೊಂದೇ ಅಡಿಯಿಡುತ್ತ ಹತ್ತಿರ ಬರುತ್ತಿದ್ದ ಅವನನ್ನು ನೋಡಿ, ಅವನ ಒಂದೊಂದು ಲಕ್ಷಣವು ಶ್ರೀಕೃಷ್ಣನಂತೆಯೇ ಇರುವುದನ್ನು ನೋಡಿ "ಇವನಿದ್ದರೂ ನನ್ನ ಮಗನೆ ಇರಬಹುದೇ" ಎಂದು ಆಸೆಯೊಂದು ಮೊಳಕೆಮೂಡಿತು.

ಕಡೆಗೆ ಧೈರ್ಯ ಮಾಡಿ "ಯಾರಪ್ಪಾ ನೀನು? ಈ ಸುಂದರ ಯುವತಿ ಯಾರು" ಎಂದು ಕೇಳಿಯೇ ಬಿಟ್ಟಳು ರುಕ್ಮಿಣಿ. ಆ ತಕ್ಷಣದಲ್ಲಿ ಮಹರ್ಷಿ ನಾರದರು ಸಾಕ್ಷಾತ್ ಶ್ರೀಕೃಷ್ಣನ ಜೊತೆಯಾಗಿ ಪ್ರತ್ಯಕ್ಷರಾದರು. "ರುಕ್ಮಿಣಿ ನಿನ್ನ ದುಃಖ ಇಂದಿಗೆ ಸಂಪೂರ್ಣವಾಯಿತು. ಇವತ್ತಿಗೆ ನಿನ್ನ ತಪಸ್ಸು ಫಲಕೊಟ್ಟಿತು. ಇವನು ಮತ್ತಾರು ಅಲ್ಲ, ವರ್ಷಗಳ ಹಿಂದೆ ಕಳೆದು ಹೋದ ನಿನ್ನ ಸುಪುತ್ರನೇ ಇವನು. ಇವನೇ ಪ್ರದ್ಯುಮ್ನ - ಸಾಕ್ಷಾತ್ ಮನ್ಮಥನೇ ನಿನ್ನ ಮಗನಾಗಿ ಮರುಜನ್ಮವಿತ್ತಿದ್ದಾನೆ. ಶಂಬರಾಸುರನನ್ನು ಕೊಲ್ಲುವುದಕ್ಕೋಸ್ಕರ ಇಷ್ಟು ವರ್ಷ ನಿನ್ನಿಂದ ದೂರವಾಗಿರಬೇಕಾಯಿತು. ಈಕೆ ಸಾಕ್ಷಾತ್ ರತೀದೇವಿ" ಎಂದು ಉದ್ಘೋಷಿಸಿದನು.

ಸ್ವತಃ ಪ್ರದ್ಯುಮ್ನನಿಗೇ ರತಿ-ಮನ್ಮಥರ ಕಥೆಯನ್ನು ಕೇಳಿ ಆಶ್ಚರ್ಯವಾಯಿತು. ಮಾಯಾವತಿಗೆ  "ಇದನ್ನು ನನಗೆ ಹೇಳಲೇ ಇಲ್ಲವಲ್ಲ" ಎಂದು ಮೆದುವಾಗಿ ಆಕ್ಷೇಪಿಸಿದನು. "ನಿನ್ನನ್ನು ರುಕ್ಮಿಣಿಗೆ ಒಪ್ಪಿಸುವ ಮೊದಲು ಈ ಮಾತನ್ನು ತಿಳಿಸುವಂತಿರಲಿಲ್ಲ" ಎಂದಳು ಮಾಯಾವತಿ. ಆ ಕ್ಷಣದಲ್ಲಿ ಅವರನ್ನು ಸತಿಪತಿಯರೆಂದು ಘೋಷಿಸಲಾಯಿತು. ದ್ವಾರಕೆಯ ಜನ ತಮ್ಮ ರಾಜಕುಮಾರ ಮರಳಿ ದೊರೆತದ್ದಕ್ಕೆ ಹಬ್ಬವನ್ನಾಚರಿಸಿದರು.      
     

          

0 Comments:

Post a Comment

<< Home