ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, March 26, 2006

ಡಾ|| ಅನಂತಮೂರ್ತಿಯವರಿಗೆ ಬಹಿರಂಗ ಪತ್ರ



ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ನಿಮ್ಮ ಅಭಿಮಾನಿಯೆಂದು ಪರಿಚಯಿಸಿಕೊಳ್ಳೋಣವೆಂದುಕೊಂಡೆ. ಆದರೆ ನಮ್ಮ ಮುಖ್ಯವಾಹಿನಿ ಸಿನೆಮಾ ಪ್ರಪಂಚ ಈ ಪದವನ್ನು ನಮ್ಮಿಂದು ಕಸಿದುಕೊಂಡು ಎಂದೆಂದೂ ಬಳಸಲಾರದ ಪರಿಸ್ಥಿತಿಗೆ ತಂದೊಡ್ಡಿದೆ. ನಿಮ್ಮ ಸಾಹಿತ್ಯವನ್ನು ಆಸಕ್ತಿಯಿಂದ ಓದುವವನು, ನಿಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಇಷ್ಟ ಪಡುವವನು, ನಿಮ್ಮ ಕೆಲ ಅಭಿಪ್ರಾಯಗಳನ್ನು ಸಮರ್ಥಿಸುವವನು, ನಿಮ್ಮ ಬೌದ್ಧಿಕ ಧೀಮಂತಿಕೆಗೆ ಬೆರಗಾದವನೂ ಎಂದರೆ ಸಾಕೆನ್ನಿಸುತ್ತೆ.

ಈ ಪತ್ರ ಬರೆದಿರುವುದಕ್ಕೆ ಕಾರಣವನ್ನು ನೀವಷ್ಟೇ ಅಲ್ಲ, ಸ್ವಲ್ಪ ರಾಜಕೀಯ, ಸಾಂಸ್ಕೃತಿಕ ಪ್ರಜ್ಞೆಯುಳ್ಳ ಯಾವುದೇ ವ್ಯಕ್ತಿಗೂ ಅರಿಯುವುದು ಕಷ್ಟವಲ್ಲ. ರಾಜ್ಯಸಭೆಯ ಚುನಾವಣೆಗೆ ನಿಂತಿದ್ದೀರಿ. ನಿಮಗೆ ಶುಭಾಶಯಗಳು. ಇಳಿವಯಸ್ಸಿನಲ್ಲಿ ಈ ಬಗೆಯ ಕ್ರಿಯಾಶೀಲತೆ ತೋರಿಸುತ್ತಿರುವುದಕ್ಕೆ ಅಭಿನಂದನೆಗಳು. ನಿಮ್ಮ ಗೆಲುವು ಸೋಲನ್ನು ನನ್ನ ವೈಯಕ್ತಿಕ ಸೋಲು, ಗೆಲುವು ಎಂದುಕೊಂಡಿದ್ದೇನೆ ಎಂದರೆ ಅತಿಶಯೋಕ್ತಿಯೆಂದು ತಾವು ನಿಕೃಷ್ಟಮಾಡಬಾರದು.

೧೦-೧೨ ದಿನಗಳ ಹಿಂದೆ ಉದ್ಯಮಿ ರಾಜೀವ್ ಚಂದ್ರಶೇಖರ್ ಭಾಜಪಾ ಮತ್ತು ದಳ (ಎಸ್) ಪರವಾಗಿ ರಾಜ್ಯಸಭೆಗೆ ನಿಲ್ಲುತ್ತಾರೆನ್ನುವುದನ್ನು ಓದಿದಾಗ ಮನಸ್ಸಿನಲ್ಲಿ ಏನೇನೋ ವಿಚಾರಗಳು ಮೂಡಿಬಂದವು. ಇವರು ಮೂಲತಃ ಭಾಜಪಾನೋ ಅಥವಾ ದಳಾವೋ? ದಳಕ್ಕೆ ಈಗ ಐಟಿ ಸ್ನೇಹಿತ ಎಂದೆನ್ನಿಸಿಕೊಳ್ಳುವ ಆಶೆಯೇ? ಅಥವಾ ಇದು ಮತ್ತೊಂದು ಕಾಂಚಾಣಮಹಿಮೆ ಪ್ರಹಸನವೋ? ರಾಜೀವರಿಗೆ ಸಾರ್ವಜನಿಕವಾದ ಒಂದು ವ್ಯಕ್ತಿತ್ವವಿದೆಯೇ? ಎಂದು ಮುಂತಾದ ಪ್ರಶ್ನೆಗಳೆದ್ದವು. ಎಲ್ಲದಕ್ಕೂ ಒಂದು ಮೆಚ್ಚಬಲ್ಲದ್ದಾದ, ಟೀಕಿಸಿಬಲ್ಲದ್ದಾದೆ ಮುಖವಿದ್ದೇ ಇರುತ್ತದೆ ಎಂದು ಅವುಗಳ ಅನ್ವೇಷಣಾ ಲೋಲುಪತೆಯಲ್ಲಿ ಒಂದಿಷ್ಟು ಕಾಲವ್ಯಯಿಸಿದೆ.

ದಿಢೀರನೆ ತಾವು ಕಣಕ್ಕಿಳಿದಾಗ ಆಶ್ಚರ್ಯವಾಯಿತು. ಆಶ್ಚರ್ಯವನ್ನು ನಂತರ ವಿವರಿಸುತ್ತೇನೆ. ನಿಮ್ಮ ಅರ್ಹತೆ, ಯೋಗ್ಯತೆಗಳ ಕುರಿತು ಪೂರ್ವಗ್ರಹಪೀಡಿತರಲ್ಲದ ಯಾರಿಗೂ ಅನುಮಾನವಿರುವುದಿಲ್ಲ. ವೈಯಕ್ತಿಕ ಅರ್ಹತೆಯಷ್ಟೇ ಅಲ್ಲದೆ, ಕನ್ನಡ ನಾಡು-ನುಡಿಯನ್ನು ಪ್ರತಿನಿಧಿಸಬಲ್ಲ ತಮ್ಮ ವ್ಯಕ್ತಿತ್ವ, ತಾತ್ವಿಕ ರಾಜಕಾರಣದ ತಮಗಿರುವ ಸಂಬಂಧ, ಒಟ್ಟು ಭಾರತದ, ಕರ್ನಾಟಕದ ರಾಜಕೀಯ ಇತಿಹಾಸ-ಪರಂಪರೆಗಳ ಜೊತೆಗಿನ ತಮ್ಮ ಅನುಭಂದ ಇವೆಲ್ಲವೂ ನನ್ನಂಥವರಿಗೆ ಮೆಚ್ಚುಗೆಯ ವಿಷಯಗಳೇ.

ತಾವು ಕೊಟ್ಟ ಕಾರಣಗಳು ಆ ಕ್ಷಣಕ್ಕೆ ಸರಿಯಾಗಿತ್ತು. ಸಾರ್ವಜನಿಕ ಕ್ಷೇತ್ರದ ಜೊತೆಗೆ ಯಾವುದೇ ಸಂಬಂಧವಿಲ್ಲದಿರುವವರನ್ನು ತಾತ್ವಿಕವಾಗಿ ಒಪ್ಪಲಾಗದ ಕಾರಣಗಳಿಗಾಗಿ ರಾಜ್ಯಸಭೆಗೆ ಆಯ್ಕೆ ಮಾಡಿಕಳಿಸುವುದು ೨-೩ ದಶಕಗಳಿಂದ ಶುರುವಾಗಿರುವ ಕೆಟ್ಟ ರಾಜಕೀಯ ಪರಂಪರೆ. ಅದನ್ನು ಕೇವಲ ಬಾಯ್ಮಾತಿನಲ್ಲಿ ವಿರೋಧಿಸುವುದಷ್ಟೇ ಅಲ್ಲದೇ, ಆ ಕುರಿತು ಕ್ರಿಯಾಶೀಲರಾಗುವುದು ಧೀಮಂತಿಕೆಯೇ ಸರಿ. ಕನ್ನಡ ನಾಡಿನಲ್ಲೇ ಇದ್ದು ಕನ್ನಡಸಂಸ್ಕೃತಿಯ ಗಂಧಗಾಳಿಯಿಲ್ಲದವರನ್ನು, ಕನ್ನಡ ಸಂಸ್ಕೃತಿಯ ಜೊತೆಗೆ ಯಾವುದೇ ಸಂಬಂಧ ಹೊಂದಬಯಸದವರನ್ನು ಆಯ್ಕೆಮಾಡುವುದೂ ಮತ್ತೂ ನಾಚಿಕೆಗೇಡಿನ ವಿಷಯ. ಹೋಗಲಿ, ಹಾಗೆ ಆಯ್ಕೆಯಾದವರು ನಮ್ಮ ನಾಡು-ನುಡಿಗೆ ಒಂದಿಷ್ಟು ಕೃತಜ್ಞತೆ ಸಲ್ಲಿಸದೇ ರಾಜ್ಯಸಭೆಗೆ ಕಳಿಸಿದ್ದಷ್ಟೇ ಭಾಗ್ಯವಾದ ಪ್ರಸಂಗಗಳನ್ನು ವಿರೋಧಿಸದೇ ಇರುವುದೂ ಸಹ ಅಷ್ಟೇ ನಾಚಿಕೆಗೇಡಿನ ಕ್ರಮ. ವಿಜಯ್ ಮಲ್ಯ, ರಾಮಜೇಠ್ಮಲಾನಿ, ಎಂ.ಎ.ಎಂ.ರಾಮ್ಸಾಮಿ, ವೆಂಕಯ್ಯ ನಾಯ್ಡುರವರಿಂದ ನಮಗಾದ ಲಾಭವೇನು ಎಂದು ನೆನೆದರೆ ಮನಸ್ಸು ಕುದಿಯದೇ ಇರದು. ಸೋನಿಯಾ ಗಾಂಧಿಯವರೂ ಸಹ ಕರ್ನಾಟಕದ ಜೊತೆ ಒಂದು ಸಂಬಂಧ ಬೆಳೆಸಿಕೊಳ್ಳುವುದು ಮುಖ್ಯವೆಂದು ಪರಿಗಣಿಸಲಿಲ್ಲವೆನ್ನುವುದು ದುಃಖದ ವಿಷಯ. ಇದ್ದುದರಲ್ಲಿ ಲೋಕಸಭಾ ಸ್ಪರ್ಧೆಯಲ್ಲಿ ಸೋತ ಸುಷ್ಮಾ ಸ್ವರಾಜ್ ಕರ್ನಾಟಕದ ಜೊತೆಗೆ ಒಂದು ವಿಧವಾದ ಸಂಬಂಧವನ್ನು ಮುಂದುವರೆಸಿದರೆನ್ನುವುದು ಒಂದಿಷ್ಟು ಆತಂಕಭರಿತ ಮೆಚ್ಚುಗೆಯಿಂದ ಗಮನಿಸಿದ್ದೇನೆ. ಈ ಎಲ್ಲಾ ಅಂಶಗಳನ್ನೂ ಪಕ್ಕಕ್ಕಿಟ್ಟರೂ, ರಾಜ್ಯಸಭೆಗೆ ನಿಂತಿರುವ ಎಲ್ಲಾ ಮಹನೀಯರುಗಳನ್ನು ಗಮನಿಸಿದರೂ ತಮ್ಮ ಸದಸ್ಯತ್ವವೇ ಹೆಚ್ಚು ಪ್ರಾತಿನಿಧಿಕವಾಗಿರುವುದು, ಅರ್ಥಪೂರ್ಣವಾಗಿರುವುದು ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ನನಗೆ ಆಶ್ಚರ್ಯವಾಗಿದ್ದು ಎರಡು ವಿಷಯಗಳಿಂದ. ಒಂದು, ಇಳಿ ವಯಸ್ಸಿನಲ್ಲಿ ಈ ಕಷ್ಟದ ಕೆಲಸಕ್ಕೆ ಮೊದಲಾದುದು. ೧೫ ವರ್ಷಗಳ ಹಿಂದೆಯಾದರೆ ತಮಗೆ ಕಸುವಿತ್ತು. ಇಂತಹ ಯಾವುದೇ ಕೆಲಸಕ್ಕೆ ಹಿತೈಷಿಗಳ ಸಹಾಯದ ಅಗತ್ಯವಿರುತ್ತೆ. ಆ ಹಿತೈಷಿಗಳ ಸಹಾಯವನ್ನು ಅತಿ ಕಡಿಮೆ ಪಡೆದಷ್ಟೂ ಉತ್ತಮ. ಆದರೆ, ಈ ವಯಸ್ಸಿನಲ್ಲಿ ತಾವು ಹೆಚ್ಚಾಗಿ ಇತರರನ್ನು ಅವಲಂಬಿಸಬೇಕಾಗುತ್ತೆ. ಇದೆಲ್ಲಾ, ಇಕ್ಕಟ್ಟಿಗೆ ತಳ್ಳುವಂತಹ ವಿಷಯಗಳು. ಇರಲಿ, ನಿಮಗೆ ನಾಡಿನಾದ್ಯಂತ ಹಿತೈಷಿಗಳಿದ್ದಾರೆ ಮತ್ತು ಅವರು ಯಾರೂ ನಿಮ್ಮನ್ನು ಮುಜುಗರಗೊಳಿಸುವ ದಾರಿಗೆ ತಳ್ಳುವುದಿಲ್ಲ ಎಂದೇ ಇಟ್ಟುಕೊಳ್ಳೋಣ.

ಎರಡು, ನಿಮ್ಮ ಪತ್ರಿಕಾ ಹೇಳಿಕೆಗಳನ್ನು ಓದಿಯೇ ರಾಜೀವ್ ಚಂದ್ರಶೇಖರ್ ಹೊರರಾಜ್ಯದ ಉದ್ಯಮಿಯಿರಬಹುದಾದ ಸಾಧ್ಯತೆ ಗಮನಕ್ಕೆ ಬಂದದ್ದು. ಕನ್ನಡ ನಾಡಿನಲ್ಲೇ ಇದ್ದರೂ ಕನ್ನಡಸಂಸ್ಕೃತಿಯ ಪರಿಚಯವನ್ನೂ ತಿರಸ್ಕರಿಸಿ ಬದುಕುವ ವಿಕೃತಮನಸ್ಸಿನವರಿರುವಾಗ, ಹೊರರಾಜ್ಯದವರೊಬ್ಬರು ನಾಡಿನ ಪರಿಚಯವಿಲ್ಲದೆಯೇ ಇಲ್ಲಿಂದ ಆಯ್ಕೆಗೆ ಪ್ರಯತ್ನಿಸುತ್ತಾರೆನ್ನುವುದು ಮತ್ತೂ ಅಹಂಕಾರದ ವಿಷಯ. ಈ ಬಗೆಯ ಪ್ರಯತ್ನಗಳೇ ನನಗೆ ಆಶ್ಚರ್ಯ ಮತ್ತು ದುಃಖವನ್ನುಂಟುಮಾಡುತ್ತದೆ. ರಾಮ್ಸಾಮಿಯವರ ಆಯ್ಕೆಯಷ್ಟೇ ಇದೂ ತುಚ್ಛೀಕರಿಸುವುದಕ್ಕೆ ಯೋಗ್ಯವಾದುದು. ಅಖಾಡಕ್ಕೆ ತಾವಿಳಿದಿರುವುದಕ್ಕೆ ಮತ್ತೂ ಹೆಚ್ಚಿನ ಅರ್ಥವಿದೆ ಎಂದು ನೆಮ್ಮದಿಯೇ ಆಯ್ತು. ಒಟ್ಟು, ತಮ್ಮ ಹೋರಾಟ ಕನ್ನಡ-ಪರವಾದ ಮತ್ತು ಕೆಟ್ಟ ಪರಂಪರೆಯ ವಿರುದ್ಧವಾದ್ದು ಎನ್ನುವುದು, ಇಡೀ ಚುನಾವಣೆಯಲ್ಲಿ ಏಕಮೇವ ತಾತ್ವಿಕವಾದ ಹೋರಾಟವಾಗಿದ್ದು ಅರ್ಥಪೂರ್ಣವೆಂದೆನ್ನಿಸಿತ್ತು.

ಆತಂಕಕ್ಕೆ ಕಾರಣವಿರಲಿಲ್ಲವೆಂದಲ್ಲ. ಕನ್ನಡ ಸಾಂಸ್ಕೃತಿಕ ಪ್ರಪಂಚದಲ್ಲಿ ತಮ್ಮನ್ನು ಕಂಡರಾಗದಿರುವುವರಿರುವುದು ನಾಡಿಗೇ ಗೊತ್ತಿರುವ ವಿಷಯ. ಅಲ್ಲದೇ, ಇವತ್ತಿನ ಕಾಲದಲ್ಲಿ ಪಕ್ಷೇತರರಾಗಿ, ಹೇಗೇ ಕಾರ್ಯವಹಿಸಿದರೂ ಪಕ್ಷ ರಾಜಕಾರಣದ ವಿಕಾರಗಳಿಂದ ದೂರವುರುವುದಕ್ಕೆ ಒಂದು ಬಗೆಯ ಚಾಣಾಕ್ಷತೆಯೂ ಬೇಕಾಗಿರುವುದು ಒಂದು ವಿಪರ್ಯಾಸ. ಕೇವಲ ಆಂತರ್ಯವನ್ನವಲಂಬಿಸಿ ರಾಜಕಾರಣ ಮಾಡುವವರು ಚಾತುರ್ಯವನ್ನವಲಂಬಿಸುವವರನ್ನು ಎದುರುಹಾಕಿಕೊಂಡು ಧೂಳೀಪಟವಾಗದೇ ಇರುವುದು ಕಷ್ಟ.

ಆದರೆ, ಆ ಮುಂದೆ ನಡೆದ, ಗೊತ್ತಾದ ವಿಷಯಗಳು ನನ್ನು ಅತೀವ ಖಿನ್ನನಾಗಿಸಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಎರಡು ಅಂಶಗಳನ್ನು ಹೇಳುವುದು. ಒಂದು, ತಮ್ಮನ್ನು ಸ್ವಲ್ಪ ಮಟ್ಟಿಗಾದರೂ ದಾರಿತಪ್ಪಿಸಲಾಗಿದೆ. ಎರಡು, ತಾವು ವಿಷಯಕ್ಕೆ ಬೇಕಾದ ಎಚ್ಚರಿಕೆ, ತಯಾರಿ ಹೊಂದಿಲ್ಲದಿರುವುದು.

ರಾಜೀವ್ ಚಂದ್ರಶೇಖರ್ ಕಳೆದ ೨೫ ವರ್ಷಗಳಿಂದ ಕರ್ನಾಟಕದಲ್ಲೇ ಇರುವುದಾಗಿ ಪತ್ರಿಕೆಗಳಿಂದ ತಿಳಿದುಬಂದಿದೆ. ಇದನ್ನು ಸದ್ಯಕ್ಕೆ ನಿಜವೆಂದುಕೊಳ್ಳೋಣ. ಯಾವ ರೀತಿಯ ಮೋಸವೂ ಇಲ್ಲವೆಂದುಕೊಳ್ಳೋಣ. ಹೀಗಾದ ಪಕ್ಷದಲ್ಲಿ ಅವರು ಆಂಧ್ರದಿಂದಲೇ ಬಂದಿದ್ದರೂ ಹೊರರಾಜ್ಯದವರಾಗುವುದಿಲ್ಲ. ಇದನ್ನು ತಾವೂ ಸಹ ಒಪ್ಪುತ್ತೀರೆಂದುಕೊಳ್ಳುತ್ತೇನೆ. ತಮಗಾದರೋ, ಯಾರು ಯಾವ ರಾಜ್ಯದವರೆನ್ನುವ ವಿಷಯವನ್ನು ಕಲೆಹಾಕುವ ವ್ಯವಧಾನವಿರಲಾರದು. ಹಾಗಿದ್ದರೆ ಈ ವಿಷಯವನ್ನು ತಮ್ಮ ಗಮನಕ್ಕೆ ತಂದವರ್ಯಾರು? ಅದರ ಹಿನ್ನೆಲೆಯನ್ನು ತಾವು ಸರಿಯಾಗಿ ವಿಚಾರಿಸಿದಿರೇ? ಎಂದು ಮುಂತಾದ ಪ್ರಶ್ನೆಗಳೇಳುತ್ತವೆ. ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದಲ್ಲಿ ಈ ಪ್ರಸಂಗವೇಳುತ್ತಿರಲಿಲ್ಲ. ಕನ್ನಡ ಸಂಸ್ಕೃತಿಯ ಪರಿಚಯವಿಲ್ಲದಿರುವವರನ್ನು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ದುಡಿಯದೇ ಇರುವವರನ್ನು, ಒಟ್ಟೂ ಕನ್ನಡ ನಾಡನ್ನು ಪ್ರತಿನಿಧಿಸುವಷ್ಟು ಸಾಂಸ್ಕೃತಿಕರಲ್ಲದ ವ್ಯಕ್ತಿಗಳನ್ನು ರಾಜ್ಯಸಭೆಗೆ ನಿಲ್ಲುವುಸುದರ ವಿರುದ್ಧ ತಮ್ಮ ಹೋರಾಟ ಎಂದುಬಿಟ್ಟಿದ್ದರೆ ಸಾಕಿತ್ತು. ವಿಜಯ್ ಮಲ್ಯರೂ ಖಂಡಿತಕ್ಕೆ ಇದೇ ಸಾಲಿನಲ್ಲಿ ನಿಲ್ಲುವವರು. ಆದರೆ, ತಾವು 'ಹೊರ ರಾಜ್ಯದ ಉದ್ಯಮಿ' ಎಂದಾಗ ತಮ್ಮ ಇತರ ಸರಿಯಾದ ನಿಲುವುಗಳಿಗೂ ಸಂಚಕಾರ ಬಂದೊದಗುತ್ತದೆ ಎನ್ನುವುದು ನನ್ನ ದುಃಖ.

ಎರಡು, ತಾವೆಷ್ಟೇ ಪಕ್ಷೇತರರಿರಲಿ. ದಳದ ಒಂದು ಗುಂಪು ತಮ್ಮ ಪರವಾದ ನಿಲುವು ತೆಗೆದುಕೊಂಡಿರುವುದೂ ಪರವಾಗಿಲ್ಲ. ಆದರೆ, ಆ ಗುಂಪು ಪರೋಕ್ಷ್ಯವಾಗಿ ತಮ್ಮನ್ನು ಅವರ ಅಭ್ಯರ್ಥಿ ಎಂದು ಬಿಂಬಿಸುವುದು ಮತ್ತು, ತಮ್ಮದೇ ಆದ ರಾಜಕೀಯ ಹೋರಾಟಕ್ಕೆ ತಮ್ಮ ಹೋರಾಟವನ್ನು ಬಳಸಿಕೊಳ್ಳದೇ ಇರುವಂತೆ ಮಾಡಲು ತಾವು ತೆಗೆದುಕೊಂಡಿರುವ ಎಚ್ಚರಿಕೆಯ ಕ್ರಮಗಳು ಸಾಕಾಗೋಲ್ಲ ಎನ್ನುವುದು ನನ್ನ ಅಭಿಪ್ರಾಯ. ಈಗ ಕಾಂಗ್ರೆಸ್ ಕೂಡಾ ತಮ್ಮ ಸದಸ್ಯತ್ವವನ್ನು ಅನುಮೋದಿಸಿರುವುದು ಒಳ್ಳೆಯ ಬೆಳವಣಿಗೆ. ಇಲ್ಲದೇ ಹೋಗಿದ್ದಲ್ಲಿ ಈ ಅಪಾಯ ಹೆಚ್ಚಿರುತ್ತಿತ್ತು.

ಮೂರು, ಒಟ್ಟು ಸಾಂಸ್ಕೃತಿಕ ಪ್ರಪಂಚದಲ್ಲಿ ತಮಗಿರುವ ವಿರೋಧಿಗಳು ಗೊತ್ತೇ ಇದೆ. ಕೆಲವರು, ತಾತ್ವಿಕವಾಗಿ ವಿರೋಧಿಗಳಾಗಿದ್ದಾರೆ, ಪರವಾಗಿಲ್ಲ. ಸ್ವತಃ ತಾವೇ, ತಾತ್ವಿಕವಾಗಿ ವಿರೋಧಿಗಳಾಗಿದ್ದರೂ ರಾಮಾಜೋಯಿಸರನ್ನು ಬೆಂಬಲಿಸುತ್ತಿದ್ದೆ ಎಂದಿರುವುದು ನನಗೆ ಅತೀವ ಸಂತಸ ತಂದಿದೆ. ಅನೇಕರು, ಮುಗ್ಧವಾಗಿ ತಮ್ಮ ಬಗ್ಗೆ ಹೆಚ್ಚೇನೂ ತಿಳಿದಿರದಿದ್ದರೂ ಒಟ್ಟೂ ಸಾರ್ವಜನಿಕ ವಲಯದಲ್ಲಿರುವ ಬೇಜವಾಬ್ದಾರಿ ಅಭಿಪ್ರಾಯಗಳಿಂದ ಪ್ರಭಾವಿತರಾಗಿ ತಮ್ಮ ವಿರೋಧಿಗಳಾಗಿದ್ದಾರೆ. ಅದೂ, ಹೋಗಲಿ, ಎನ್ನಬಹುದು. ಅನೇಕರಿಗೆ, ತಮ್ಮ ಬಗ್ಗೆ ಸ್ವಲ್ಪ ವೈಯಕ್ತಿಕವಾದ ವಿರೋಧವೂ ಇದ್ದಂತಿದೆ. ಹೀಗಿರುವಾಗ, ರಾಜ್ಯಸಭಾ ಚುನಾವಣೆಗೆ ಒಂದು ವೈಯಕ್ತಿಕವಾದ ಕಾರಣವಲ್ಲದೇ, ನಾಡು-ನುಡಿಯ ಕಾಳಜಿಗಳಿಂದ ಪ್ರೇರಿತರಾಗಿ, ರಾಜಕೀಯವಾಗಿ ಒಂದು ಅತ್ಯಗತ್ಯವಾಗಿರುವ ತಾತ್ವಿಕ ನಿಲುವೊಂದಕ್ಕೆ ಕನಿಷ್ಠ ನೈತಿಕವಾದ ಜಯವನ್ನು ತರಲು ಹೋರಾಟ ಮಾಡುತ್ತಿರುವ ನೀವು, ಅದಕ್ಕೆ ಅಗತ್ಯವಾದ ಎಚ್ಚರಿಕೆಯನ್ನು ಹೊಂದಿರಲೇಬೇಕಲ್ಲವೇ?

ವಿಷಯವನ್ನು ಮತ್ತಷ್ಟು ವಿವರಿಸುತ್ತೇನೆ. ನೀವು ಕಣಕ್ಕಿಳದ ಕೂಡಲೇ ನಿಮ್ಮ ಪರಿಚಯವೇ ಇಲ್ಲದ ನಾನು, ಈಗ ಚಂಪಾ ಮತ್ತು ದೇಜಗೌ ಏನು ಹೇಳುತ್ತಾರೆ ಎಂದುಕೊಂಡು ನಗುತ್ತಿದ್ದೆನಾದರೂ, ಸ್ವಲ್ಪ ಆತಂಕಗೊಡ್ಡಿದ್ದೆನೂ ಕೂಡಾ. (ಲಂಕೇಶ್-ರನ್ನೂ ಸ್ಮರಿಸಿದೆ ಎನ್ನುವುದು ನಿಜ). ಇಷ್ಟು ಯೋಚಿಸುವುದಕ್ಕೆ, ಯಾವ ಚಾಣಕ್ಯ ನೀತಿಯೂ ಬೇಡ, ಸ್ವಲ್ಪ ಸಾರ್ವಜನಿಕವಾದ ಆಸಕ್ತಿಗಳುಳ್ಳ ಯಾರಿಗೇ ಆದರೂ ಇದು ಹೊಳೆದಿರುತ್ತದೆ. ಅಂಥದ್ದರಲ್ಲಿ, ತಮಗೆ ಇದರ ಕುರಿತು ಕಾಳಜಿಯಿರಬೇಕಾಗಿದ್ದುದು ತಮಗೆ ವೈಯಕ್ತಿಕವಾಗಿ ಅಲ್ಲದಿದ್ದರೂ ತಮ್ಮ ಸಾಂಸ್ಕೃತಿಕ ಹೋರಾಟಕ್ಕೆ ಅಗತ್ಯವಾಗಿತ್ತು. ಅವರೇನೆಂದರೂ, ಈ ಸದ್ಯಕ್ಕೆ ಸುಮ್ಮನಿದ್ದುಬಿಡೋಣ ಎಂದುಕೊಂಡಿರಬಹುದಾಗಿತ್ತು. ಈ ಹಿಂದೆ ಕೂಡಾ ನೀವು ಇಷ್ಟು ಸಂಯಮವನ್ನು ಅನೇಕ ವೇಳೆ ತೋರಿಸಿದ್ದೀರಿ. ಅಂಥದ್ದರಲ್ಲಿ, ಚಂಪಾರನ್ನು ಚೇಳಿಗೆ ಹೋಳಿಸಿ, ದೇಜಗೌ-ರ ವ್ಯಾಧಿಯನ್ನು ನಾಡಿನ ಗಮನಕ್ಕೆ ತರಬೇಕಾದ ಅಗತ್ಯವೇನಿತ್ತು. 'ಈ ಕ್ಷಣದಲ್ಲಿ ನನಗೆ ಒಟ್ಟು ಕನ್ನಡ ನಾಡಿನ ಸಹಕಾರದ ಅಗತ್ಯವಿದೆ. ಆದ್ದರಿಂದ, ಚಂಪಾರನ್ನು ಮತ್ತು ದೇಜಗೌ-ರನ್ನೂ ಸಹಕರಿಸಲು ಪ್ರಾರ್ಥಿಸುತ್ತೇನೆ' ಎಂದುಬಿಟ್ಟಿದ್ದರೆ ನಿಮ್ಮನ್ನು ಸರಿಯಾಗಿ ಅರಿತಿರದ ಸಾಮಾನ್ಯರ ಕಣ್ಣಲ್ಲೂ ದೊಡ್ಡವರಾಗಿಬಿಡುತ್ತಿದ್ದಿರಿ. ದೇಜಗೌ-ರಿಗೂ, ಚಂಪಾರಿಗೂ ನಿಮ್ಮನ್ನು ವಿರೋಧಿಸುವುದು ಕಷ್ಟವಾಗುತ್ತಿತ್ತು. ನಿಮ್ಮನ್ನು ವಿರೋಧಿಸುವ ಯಾರೂ ಸಹ ಈಹೊತ್ತು ನೀವು ತೆಗೆದುಕೊಂಡಿರುವ ನಿಲುವನ್ನು ಸದ್ಯಕ್ಕಾದರೂ ಒಪ್ಪುವಷ್ಟು ಸಾಂಸ್ಕೃತಿಕರು. ಅದನ್ನು ನೀವು ಇತ್ಯಾತ್ಮಕವಾಗಿ ಬಳಸಿಕೊಳ್ಳಬಹುದಿತ್ತು. ಸ್ವಾರ್ಥಕ್ಕಾಗಿಯಲ್ಲ, ನೀವೀಗ ಒಂದು ತತ್ವಕ್ಕೋಸ್ಕರ ನಿಂತಿದ್ದೀರಿ, ಅದರ ಸಲುವಾಗಿಯಾದರೂ.

ಆದರೆ, ಇದ್ದ ಒಂದು ಸುವರ್ಣಾವಕಾಶವನ್ನೂ ಸಹ ಈ ಒಂದು ಸುವರ್ಣ ಮಹೋತ್ಸವದ ವರ್ಷದಲ್ಲಿ ಕಳೆದಿರಿ. ನಿಮ್ಮ ಕಾವ್ಯಾತ್ಮಕವಾದ ಆರೋಪವೇ ನೆಪವಾಗಿ, ಚಂಪಾ, ದೇಜಗೌರಷ್ಟೇ ಅಲ್ಲದೆ ಸುಮ್ಮನಿರಬಹುದಾಗಿದ್ದ ಮತ್ತೆಲ್ಲರೂ ತಮ್ಮ ವಿರುದ್ಧ ಹರಿಹಾಯುವಂತೆ ಮಾಡಿಕೊಂಡಿರಿ. ಕೇವಲ ವೈಯಕ್ತಿಕವಾಗಿ ನಿಮಗಷ್ಟೇ ನಷ್ಟವಾಗಿದ್ದರೂ ನಮಗೆ ದುಃಖವಾಗುತ್ತಿತ್ತು. ಅಂಥದ್ದರಲ್ಲಿ, ಪ್ರಮುಖವಾದ ಕಾರಣವೊಂದಕ್ಕೆ ನಿಂತಿದ್ದು ಆ ಕಾರಣಕ್ಕೂ ಮೋಸವಾಯಿತಲ್ಲ ಎನ್ನುವುದು ನನ್ನಂಥವರ ಅಳಲು.

ಇಷ್ಟಲ್ಲದೆ, ವಚನಗಳು, ಕುವೆಂಪು ಕುರಿತ ತಮ್ಮ ಮಾತಿನಲ್ಲಿ ಹೆಂಡ ಮತ್ತು ಬೈಪ್ರಾಡಕ್ಟ್-ಗಳ ಪ್ರತಿಮೆಯನ್ನು ಬಳಸಿದಾಗ ತಾವು ರಾಜ್ಯಸಭೆಯ ಚುನಾವಣೆಗೆ ನಿಂತಿದ್ದೀರೆನ್ನುವುದೂ, ಆ ಪ್ರತಿಮೆಗಳನ್ನು ಸ್ವಲ್ಪ out of context ಬಳಸಿದರೂ ಅನಾಹುತಕಾರಿಯಾದ ರೀತಿಯಲ್ಲಿ ತಮ್ಮ ವಿರೋಧಿಗಳಿಗೆ ಜಯವಾಗಬಹುದಾದ ಸಾಧ್ಯತೆಯಿರುವುದೂ ತಮ್ಮ ಗಮನಕ್ಕೆ ಬರಲಿಲ್ಲವೇ ಎನ್ನುವುದು ನನಗೆ ಅತ್ಯಾಶ್ಚರ್ಯ ತಂದಿದೆ. ಪ್ರಜಾವಾಣಿಗೆ ಈ ಕುರಿತು ತಾವು ವಿವರಣೆ ಕೊಟ್ಟು ಪತ್ರ ಬರೆದಿರುವುದು ಕಂಡು ನನಗೆ ಸ್ವಲ್ಪ ಸಮಾಧಾನವಾಯಿತು. ಹೀಗೆ ವಿವರಿಸುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದು ತಾವೆಲ್ಲಿ ಸುಮ್ಮನಿದ್ದುಬಿಡುತ್ತೀರೋ ಎಂದುಕೊಂಡಿದ್ದೆ. ಪುಣ್ಯಕ್ಕೆ, ಸ್ಪಷ್ಟನೆ ಕೊಟ್ಟಿದ್ದೀರಿ. ಅದರಲ್ಲಿ, 'ಮಾತಿನ ಉಲ್ಲಾಸಕ್ಕಾಗಿ' ಹೀಗೆ ಹೇಳಿದಿರೆಂದಿದ್ದೀರಿ. ತಾವು ದೊಡ್ಡವರು. ಇನ್ನೊಂದು ಹತ್ತು ವರ್ಷಕ್ಕೆ ಹಿರಿಯರಾಗಿದ್ದರೆ, ತಾವು ನನ್ನ ತಾತನ ವಯಸ್ಸಿನವರೇ. ಅಂಥದ್ದರಲ್ಲಿ ತಮ್ಮನ್ನು ಟೀಕಿಸುವುದಕ್ಕೆ ಬೇಜಾರಾಗುತ್ತೆ. ಆದರೆ, ತಾವು ಯಾವುದನ್ನು 'ಮಾತಿನ ಉಲ್ಲಾಸ' ಎಂದಿದ್ದೀರೋ, ಅದನ್ನು 'ಮಾತಿನ ಚಟ' ಎನ್ನಬಹುದಲ್ಲವೇ?

ನಿಮ್ಮ ನಿರ್ಧಾರದಿಂದ ಶಾಸಕರು ಸ್ವಲ್ಪವಾದರೂ ವಿಚಲಿತರಾಗುವುದು ಸಾಧ್ಯವಿತ್ತು. ನೈತಿಕವಾಗಿ ವಿಚಲಿತರಾಗದೇ ಹೋಗಿದ್ದರೂ, ತಮ್ಮ ವಿರುದ್ಧವಾಗಿ ಮತ ಚಲಾಯಿಸಿದರೆ ಕನಿಷ್ಠ ಸಾರ್ವಜನಿಕವಾಗಿಯಾದರೂ ಅದನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗಬಹುದಾದ ಸಾಧ್ಯತೆಯಿತ್ತು. ಆದರೆ, ಒಟ್ಟು ಸಾಂಸ್ಕೃತಿಕ ಪ್ರಪಂಚದಲ್ಲಿರುವ ವಿಕೃತಿಯಿಂದಾಗಿ ಶಾಸಕರಿಗೆ ತಮ್ಮ ವಿರುದ್ಧವಾಗುವುದು ಸುಲಭವಾಗಿಬಿಟ್ಟಿತು. ಎಂ.ಪಿ.ಪ್ರಕಾಶ್ ಕೂಡಾ ತಮ್ಮನ್ನು ಬೆಂಬಲಿಸದೇ ಪಾರಾಗುವುದು ಸಾಧ್ಯವಾಯಿತು. ನೀವು ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಿದ್ದರೆ ತಮ್ಮ ಸೋಲೂ ಕೂಡಾ ಒಂದು ಗೆಲುವಾಗಿ ಪರಿವರ್ತಿಸುವುದು ಸಾಧ್ಯವಾಗುತ್ತಿತ್ತು.

ಈಗ ಎಲ್ಲವೂ ರಾಡಿಯಾಗಿ ಹೋಗಿದೆ. ರಾಜೀವ್ ಚಂದ್ರಶೇಖರ್-ರನ್ನು 'ಹೊರ ರಾಜ್ಯದವರು' ಎಂದಿರುವುದು ತಮಗೆ ಮುಂದಿನ ದಿನಗಳಲ್ಲಿ ಸಮರ್ಥಿಸುವುದು ಕಷ್ಟವಾಗಬಹುದು. ತಮ್ಮ ಗೆಲುವಂತೂ ಕಷ್ಟದ ವಿಷಯವೇ ಸರಿ. ತಾವು ರಾಜಕೀಯ ಗುಂಪೊಂದರ ಪ್ರಚೋದನೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎನ್ನುವ ಮಿಥ್ಯಾರೋಪವೂ ಮುಂದೆ ತಮ್ಮನ್ನು ಕಾಡಲಿದೆ. ಕಾಂಗ್ರೆಸ್ ತಮಗೆ ಬೆಂಬಲ ಕೊಟ್ಟಿರುವುದು ಸದ್ಯಕ್ಕೆ consolation ಅಷ್ಟೆ.

ಪರಭಾಷಾ ಚಿತ್ರಗಳ ವಿರುದ್ಧವಾದ ಹೋರಾಟದಲ್ಲಿ ಇದೇ ತೆರನಾದ ಅತಿಗೆ ಬಿದ್ದು ಹೋರಾಟಕ್ಕೆ ಸಾಧ್ಯವಾಗಬಹುದಾದ ನೈತಿಕ ಜಯವೂ ಇಲ್ಲದೇ ಹೋಯಿತು. ಎಂ.ಎಸ್.ಸತ್ಯು ಕೂಡಾ ೭೦, ೮೦-ರ ದಶಕದ ರಾಜ್ ಗುಂಪಿನ ವಿರುದ್ಧ ಮಾತನಾಡಿದಾಗ ಇದೇ ಅತಿಗೆ ಹೋಗಿ ಇದ್ದ ಒಂದು ಅವಕಾಶವನ್ನು ಕಳೆದಂತಾಯಿತು. ಈಗ ತಮ್ಮ ಹೋರಾಟ ಅವುಗಳಿಗಿಂತ ಹೆಚ್ಚು ಜೀವಂತವಾಗಿರುವುದಾದರೂ, ಅದೇ ತೆರನಾದ ಅಪಾಯಗಳಿಂದ ಸಂಪೂರ್ಣವಾಗಿ ಕಳಚಿಕೊಳ್ಳಲಾಗಲಿಲ್ಲವೆನ್ನುವುದು ಖೇದದ ಸಂಗತಿ.

ಈಗ ತಮ್ಮ ಸೋಲು ಹೆಚ್ಚು ನಿಶ್ಚಿತ. ನೈತಿಕವಾದ ಗೆಲುವನ್ನೂ ಈಗ claim ಮಾಡುವುದು ಕಷ್ಟ. ಈಗೇನಿದ್ದರೂ ರಾಜೀವ್ ಚಂದ್ರಶೇಖರ್ ಕನ್ನಡ ಸಂಸ್ಕೃತಿಯ ಋಣ ತೀರಿಸುವರೇ ಎನ್ನುವುದನ್ನು ಗಮನಿಸಬೇಕಾಗಿದೆ.

ಒಂದು ಒಳ್ಳೆಯ ಅವಕಾಶ ಕೈತಪ್ಪಿದಂತಾಗಿದೆ.

ಇಷ್ಟಾಗಿ ತಾವು ಗೆದ್ದುಬಿಟ್ಟರೆ, ಎನ್ನುವ ಆಶಾವಾದ ಮನಸ್ಸಿನಲ್ಲಿ ಸದಾ ಇದ್ದೇ ಇರುತ್ತದೆ.

ನಮಸ್ಕಾರಗಳು

(ಕರ್ನಾಟಕದ ಯಾವನೇ ಆದರೂ ಈ ಪತ್ರ ಬರೆಯುವ ಸಾಧ್ಯತೆ ಇರುವುದರಿಂದ ನನ್ನ ಹೆಸರನ್ನೇ ಹಾಕುವುದು ಇಷ್ಟವಿಲ್ಲ)

Saturday, March 11, 2006

ಸಿನೆಮಾ, ಪಾಸೋಲಿನಿ, ನಾನು ಮತ್ತು ನನ್ನ ಸ್ನೇಹಿತರು



ಸ್ನೇಹಿತನಾದ ರಾಘವೇಂದ್ರ ಉಡುಪ ಸಿನೆಮಾ ಮತ್ತು ಕಾವ್ಯಾತ್ಮಕತೆಯ ಕುರಿತ ಲೇಖನವನ್ನು ಅನುವಾದಿಸುವುದಕ್ಕೆ ಪ್ರೇರೇಪಿಸಲು ತೊಡಗಿದ್ದು ಒಂದೆರಡು ವರ್ಷಗಳ ಹಿಂದೆಯೇ ಇರಬಹುದು. ಈ ಸದ್ಯಕ್ಕೆ 'ಅಲ್ಟಿಮೇಟಂ' ಎನ್ನುವ ರೀತಿಯಲ್ಲಿ ನೆನಪಿಸಿದ್ದರಿಂದ ಎದ್ದೆನೋ ಬಿದ್ದೆನೋ ಎಂದು ಅನುವಾದಕ್ಕೆ ತೊಡಗಿದ್ದೇನೆ.

ಒಂದು ವರ್ಷದಿಂದಲೂ ಈ ಬರಹವನ್ನು ಓದುತ್ತಿದ್ದರೂ ಎಲ್ಲಾ ಕಡೆಯಲ್ಲೂ ನನಗೆ ಸ್ಪಷ್ಟವಾಗಿ ಒದಗಿಬಂದಿಲ್ಲ. ಆದರೂ ನಾನು ಮತ್ತು ನನ್ನ ಸ್ನೇಹಿತರು ಬಹುವಾಗಿ ಇಷ್ಟಪಟ್ಟು ಚರ್ಚಿಸಿದ ಲೇಖನವಿದು. ಆ ಚರ್ಚೆಗಳನ್ನೂ ಬ್ಲಾಗ್-ನಲ್ಲಿ ಹಾಕುವುದಕ್ಕಾದರೆ ಚೆನ್ನಾಗಿರುತ್ತದೆ. ಆದರೆ, ಅನುವಾದಕ್ಕಂತೂ ಒಳ್ಳೆಯ ಒಳ-ಪ್ರೋತ್ಸಾಹವಿತ್ತು ನನಗೆ, ಎನ್ನುವುದಕ್ಕೆ ಇಷ್ಟೆಲ್ಲಾ.

ಈ ಅನುವಾದವನ್ನು ಒಂದು ಕ್ರಮದಿಂದ ಸೃಷ್ಟಿಸಿಲ್ಲ. ಆದಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡುತ್ತಾ ಅರ್ಥವಾದದ್ದನ್ನು ಬರಹಕ್ಕಿಳಿಸಿದ್ದೇನೆ. ಎಲ್ಲಿಯಾದರೂ ಏನಾದರೂ ಅರ್ಥವಾಗಲಿಲ್ಲವೆಂದರೆ ಅದನ್ನು ಈ ಸದ್ಯಕ್ಕೆ ಕೈಬಿಟ್ಟಿದ್ದೇನೆ. ಒಟ್ಟು ಲೇಖನ ಉದ್ದವಾದ್ದರಿಂದ ಅದನ್ನು ೪-೫ ಸರಣಿಯಲ್ಲಿ ಧಾರಾವಾಹಿಯಂತೆ ವಾರಕ್ಕೊಂದರಂತೆ ಕೊಡುವ ಆಶೆಯಿದೆ. ಲೇಖನದ ಶೇಕಡ ೨೫-ರಷ್ಟು ಇನ್ನಿತರ ಯೂರೋಪಿನ ಮಹತ್ತರ ಚಿತ್ರಗಳನ್ನಾಧರಿಸಿದ ವಾದವಿದೆ, ತನ್ನ ಒಟ್ಟೂ ನಿಲುವುಗಳನ್ನು ಸಮರ್ಥಿಸುವುದಕ್ಕೆ ಪೂರಕವಾಗಿ ಪಾಸೋಲಿನಿ ಬಳಸಿಕೊಂಡಿದ್ದಾನೆ. ಆ ಚಿತ್ರಗಳನ್ನು ನೋಡಿಲ್ಲವಾದ್ದರಿಂದ, ಹಾಗೆ ನೋಡದೇ ಇರುವುದರಿಂದ ಓದಿ-ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವಾದ್ದರಿಂದ ಅದನ್ನು ಬಿಟ್ಟೇ ಒಟ್ಟು ಲೇಖನದ ಅನುವಾದವನ್ನು ಕೊಡಲು ತೀರ್ಮಾನಿಸಿದ್ದೇನೆ.

ಇದೆಲ್ಲಿ ತಲುಪುತ್ತದೆಯೋ ಎನ್ನುವ ತವಕವಿದೆ. ರಾಘವೇಂದ್ರನಿಗೆ ಮತ್ತು ಪಾಸೋಲಿನಿಗೆ ನಮಸ್ಕಾರಗಳು.

'ಸ್ಟ್ರಕ್ಚರಲಿಸಂ ಮತ್ತು ಸೆಮಯಾಲಜಿ' ಪುಸ್ತಕದಲ್ಲಿನ ಪಾಸೋಲಿನಿಯ 'ಕಾವ್ಯಾತ್ಮಕ ಸಿನೆಮಾ' ಲೇಖನಕ್ಕೆ ಇರುವ ಬ್ಲರ್ಬ್


ಈ ಬರಹದಲ್ಲಿನ ಪಾಸೋಲಿನಿಯ ನಿಲುವುಗಳು ಮೆಟ್ಜ಼್-ನ ಆಲೋಚನೆಗಳಿಗಿಂತಾ ಬೇರೆ ರೀತಿಯದ್ದಾಗಿವೆ. ಇವು ಭಾಷೆಯ ಶಿಲ್ಪವನ್ನು ವಿವರಿಸಬಲ್ಲ ವ್ಯಾಕರಣ ಮತ್ತದರ ಅಂಗಗಳ ಭವ್ಯವಾದ ಸೌಧವನ್ನು ನಿರ್ಮಿಸುವುದಕ್ಕಿಂತಾ ಭಿನ್ನವಾಗಿದೆ. ಹೊರತಾಗಿ, ಕಾವ್ಯಾತ್ಮಕ ಸಿನೆಮಾವನ್ನು ಸಾಧಿಸುವುದಕ್ಕೆ ಪೂರಕವಾದ ಕಲಾತ್ಮ್ಕ ಶೈಲಿಗಳು, ಅವುಗಳನ್ನು ಅನಾವರಣಗೊಳಿಸಬಲ್ಲ ಕೌಶಲ-ನೀತಿಗಳು, ಇವುಗಳ ಹಿಂದೆ ಒಂದು ಕ್ರಮಶಾಸ್ತ್ರವೇನಾದರೂ ಇದೆಯೇ ಹುಡುಕಾಟ - ಪಾಸೋಲಿನಿಯ ಬರಹದ ಮುಖ್ಯಾಂಶಗಳಾಗಿವೆ ಇವು. ಕ್ರಿಸ್ಛಿಯನ್ ಮೆಟ್ಜ಼್-ನ 'ಸ್ಕ್ರೀನ್' ಮತ್ತು ಸ್ಟೆಫ಼ನ್ ಹೆಥ್-ನ 'ಸಂಜ್ಞಾಶಾಸ್ತ್ರ' ಕುರಿತ ಆಲೋಚನೆಗಳಲ್ಲಿ ಪಾಸೋಲಿನಿಯ ಕ್ರಮ-ಕೌಶಲ-ನೀತಿಗಳ ಒಂದು ವಿವರವಾದ ವಿಮರ್ಶೆ ದೊರೆಯುತ್ತದೆ.

ಪಾಸೋಲಿನಿಯ 'ಅಭಿವ್ಯಕ್ತಿ ಗುಣ'-ದ ಕುರಿತ ಪರಿಕಲ್ಪನೆಗಳು ಸಿನೆಮಾ ಮತ್ತು ವಾಸ್ತವದ ನದುವಣ ಭೇದವನ್ನು ಅಸ್ಪಷ್ಟಗೊಳಿಸಿರುವುದು, ಹೆಥ್-ನನ್ನು ಬಲವಾಗಿ ಕಾಡಿವೆ. ಪಾಸೋಲಿನಿಯ ಪ್ರಕಾರ "ಸಿನೆಮಾದ ಸಂಜ್ಞಾ-ವ್ಯ್ವಸ್ಥೆಯನ್ನು ವಿವರಿಸುವ ಸಂಜ್ಞಾಶಾಸ್ತ್ರ ಪ್ರಾಯಶಃ ವಾಸ್ತವದ ಸಂಜ್ಞಾವ್ಯವಸ್ಥೆಯನ್ನು ವಿವರಿಸುವ ಸಂಜ್ಞಾಶಾಸ್ತ್ರಕ್ಕೆ ಅನುರೂಪವಾಗಿದೆ". ಆದರೆ, ವಾಸ್ತವನ್ನು ಸಿನೆಮಾಕ್ಕೆ ಸಮೀಕರಿಸುವುದಕ್ಕೂ, ಅವಗಳ ಸಂಜ್ಞಾ-ವ್ಯವಸ್ಥೆಗಳನ್ನು ಸಮೀಕರಿಸುವುದಕ್ಕೂ ವ್ಯತ್ಯಾಸವಿದೆ. ಸಿನೆಮಾವನ್ನು ಮನುಷ್ಯನ ಆಳದ ಅಸ್ತಿತ್ವದ ನೆನಪು ಮತ್ತು ಕನಸುಗಳಿಗೆ ಹೋಲಿಸುತ್ತಾ, ತಾನು ಪರಿಗಣಿಸುತ್ತಿರುವ ವಾಸ್ತವದ ಹರಹನ್ನು ಪಾಸೋಲಿನಿ ಸೂಚಿಸುತ್ತಿದ್ದಾನೆ. ಪ್ರಜ್ಞೆಯ ಮೂಲಭೂತ ಪ್ರಕ್ರಿಯೆಗಳು, ಮನಸ್ಸಿನ ಜೀವಂತವದ ಮುಲಭೂತ ತುಣುಕು, ಒಟ್ಟು ಪ್ರಕೃತಿಕ ಸಂಬಂಧಗಳ ನೀತಿ-ನಿಯಮಗಳು ಇವುಗಳ ಗುಣಗಳು ಸಿನೆಮಾದ ಸಂವಹನಕ್ರಮದಲ್ಲಿ ಇವೆ ಎಂದು ಪಾಸೋಲಿನಿ ಸೂಚಿಸುತ್ತಿರುವಂತಿದೆ. ಈ ಸಂಬಹನಕ್ರಮ, ಪ್ರಕ್ರಿಯೆಗಳ ನಡುವಣ ಹೋಲಿಕೆಯನ್ನು ವಸ್ತುವಿಶೇಷಗಳಿಂದ ಹೊರಹೊಮ್ಮಿರುವಂಥದ್ದು ಎಂದೆ ತಿಳಿಯಬೇಕಿಲ್ಲ. ಸಂಜ್ಞಾಶಾಸ್ತ್ರವನ್ನು, ಬಜ಼ಿನ್-ನನ್ನು ನೆನಪಿಸಿಕೊಳ್ಳುವುದಾದರೆ, 'ವಾಸ್ತವಬದ್ಧ (ಸಂಕೇತ ಮತ್ತು ಸಂಕೇತಿಸಲ್ಪಟ್ಟ ವಸ್ತು ಒಂದೇ ಆಗಿರುವುದು)'-ತೆಯ ಮಟ್ಟಕ್ಕೆ ಪಾಸೋಲಿನಿ ಇಳಿಸುತ್ತಿಲ್ಲ. ಹೊರತಾಗಿ, ಭಾಷಾಶಿಲ್ಪಶಾಸ್ತ್ರದಿಂದ ಪ್ರೇರಿತವಾದ ಸಂಜ್ಞಾಶಾಸ್ತ್ರ ಮಾದರಿಯ ತಳಹದಿಯ ಮೇಲೆ ಸಿನೆಮಾದ ಸಂವಹನ ಮಾದರಿಯನ್ನು ನಿರ್ಮಿಸಲಾಗುವುದಿಲ್ಲ ಎಂದು ಪಾಸೋಲಿನಿ ಸೂಚಿಸುತ್ತಿರುವಂತಿದೆ. ಸಂವಹನವನ್ನು ಏಕಕಾಲದಲ್ಲಿ ಇಡಿಯಾಗಿ ಮತ್ತು ಅನೇಕಗಳ ಸಮೂಹವಾಗಿ ಚಿಂತಿಸಬಲ್ಲಂತಹ, ಏನೆಲ್ಲವನ್ನೂ ಒಳಗೊಂಡಂತಹ 'ಸಂಜ್ಞಾಶಾಸ್ತ್ರವೊಂದರ ಆಧಾರ ಸಿನೆಮಾದ ಸಂವಹನಕ್ರಮವನ್ನು ವಿವರಿಸಲು ಅವಶ್ಯವಿದೆ, ಎನ್ನುವುದು ಪ್ರಾಯಶಃ ಪಾಸೋಲಿನಿಯ ಚಿಂತನೆ.

ಕಾವ್ಯಾತ್ಮಕ ಸಿನೆಮಾ - ಪಾಸೋಲಿನಿ

ಇನ್ನು ಮುಂದೆ ಭಾಷಾ ಮಾಧ್ಯಮವಾಗಿ ಸಿನೆಮಾ ಎನ್ನುವ ಪರಿಕಲ್ಪನೆಯ ಕುರಿತ ಯಾವುದೇ ಚರ್ಚೆಯನ್ನು ಸಂಜ್ಞಾಶಾಶ್ತ್ರಸಂಬಂಧತ ಪರಿಕರಗಳನ್ನು ನಿರ್ಲಕ್ಷಿಸಿ ನಡೆಸುವುದು ಕಷ್ಟಸಾಧ್ಯವೇ ಸರಿ. ಈ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ: ಸಾಹಿತ್ಯಕ ಭಾಷೆಗಳು ತಮ್ಮ ಕಾವ್ಯಾತ್ಮಕ ಆವಿಷ್ಕಾರಗಳನ್ನು ಸಮಾಜದಲ್ಲಿ ಸಾಂಸ್ಥೀಕರಣಗೊಂಡಿರುವ, ಭಾಷಿಕ ಸಮುದಾಯಕ್ಕೆ ಸಮಾನವಾಗಿರುವ, ಭಾಶಾ ಸಾಧನದ ಆಧರದ ಮೇಲೆ ನಿರ್ಮಿಸಿಕೊಳ್ಳುತ್ತವೆ. ಆದರೆ, ಸಿನಿಭಾಶೆಗಳು ಈ ತೆರನಾದ ಯಾವುದೇ ಆಧಾರದ ಮೇಲೆ ನಿರ್ಮಿತವಾದಂತೆ ತೋರುವುದಿಲ್ಲ. ಒಂದು ವಾಸ್ತವವಾದ ತಳಹದಿಯಾಗಿ ಸಂವಹನವೇ ಪ್ರಮುಖವಗಿರುವ ಭಾಷೆಯೊಂದು ಸಿನೆಮಾಕ್ಕೆ ಇಲ್ಲವೇ ಇಲ್ಲವೆನ್ನಬಹುದು. ಅಂತೆಯೇ, ಸಾಹಿತ್ಯಕ ಭಾಷೆಗಳು ಹಾಗು ಅವುಗಳ ತಳಹದಿಯಾದ ಸಾಂಸ್ಥಿಕ-ಸಮುದಾಯ ಭಾಷೆಗಳು, ಇವುಗಳ ನಡುವಣ ವ್ಯತ್ಯಾಸ ಮೇಲ್ನೋಟಕ್ಕೆ ನಮಗೆ ದೊರಕುತ್ತದೆ. ಆದರೆ, ಸಿನೆಮಾಮ ಮೂಲಕವಾದ ಸಂವಹನವು ಕ್ರಮವಿಲ್ಲದಂತೆಯೂ, ದಿಕ್ಕು-ದೆಸೆಯ ಸ್ಪಷ್ಟತೆ ಇಲ್ಲದಂತೆಯೂ, ಸಾಮಾನ್ಯವಾಗಿ ಬಳಕೆಯಲ್ಲಿರುವ ಯಾವುದೇ ಸಾಧನ ತಳಹದಿ ಇಲ್ಲದಂತೆಯೂ ತೋರುತ್ತದೆ.

ಮಾನವಪ್ರಾಣಿ ಪದಗಳ ಮೂಲಕ ಸಂವಹನ ನಡೆಸುತ್ತದೆ, ಬಿಂಬ-ದೃಷ್ಯಗಳ ಮೂಲಕವಲ್ಲ. ಈ ಕಾರಣದಿಂದಲೇ, ಬಿಂಬಗಳದ್ದೇ ಆದ ಒಂದು ಭಾಷೆ ಎನ್ನುವುದು ತೀರಾ ಕೃತಕವಾದ ಪರಿಶುದ್ಧ ಅಮೂರ್ತತೆ ಎನ್ನುವ ಪರಿಕಲ್ಪನೆ ಎಂದೆನ್ನಿಸುತ್ತದೆ.

ವಾದಕ್ಕೆ ಹೀಗೆ ತೋರಿದರೂ ಸಹ, ಒಂದೊಮ್ಮೆ ಇದು ಪೂರ್ತಿ ನಿಜವಾಗಿದ್ದರೆ, ವಾಸ್ತುತಹ ಸಿನೆಮಾ ಎನ್ನುವುದ ಅಸ್ತಿತ್ವದಲ್ಲಿರಲು ಸಾಧ್ಯವೇ ಆಗುತ್ತಿರಲಿಲ್ಲ, ಅಥವಾ ಅದರ ವಾಸ್ತವತೆ ಯಾವುದೇ ಸಾರ್ಥಕತೆಯಿಲ್ಲದ ಸಂಜ್ಞೇಗಳ ಸಾಲಿನಂತಿರುತ್ತಿತ್ತು,ಕೇವಲ ವಿಕಾರಸ್ವರೂಪದ್ದಾಗಿರುತ್ತಿತ್ತು. ಸಂಜ್ಞೆಗಳ ಅಧ್ಯಯನ ಸಂಜ್ಞಾ-ವ್ಯವಸ್ಥೆಗಳನ್ನು ಕಲ್ಪಿಸಿ, ನಿರ್ಮಿಸಿಕೊಳ್ಳುತ್ತದೆ. ಉದಾಹರಣೆಗೆ, ಖಂಡಿತವಾದ ಅಸ್ತಿತ್ವದಲ್ಲಿರುವುದರಿಂದ ಭಾಷಾ ಸಂಜ್ಞೆಗಳ ವ್ಯವಸ್ಥೆಗಳ ಕುರಿತು ಸಂಜ್ಞೆಗಳ ಅಧ್ಯಯನ ಮಾತನಾಡುತ್ತದೆ. ಆದರೆ, ತಾತ್ವಿಕವಾಗಿ ಇನ್ನಿತರ ಸಂಜ್ಞಾ-ವ್ಯವಸ್ಥೆಗಳ ಅಸ್ತಿತ್ವವನ್ನು ಅದು ನಿರಾಕರಿಸುವುದಿಲ್ಲ. ಉದಹರಣೆಗೆ, ಸಾಂಕೇತಿಕ ಸಂಜ್ಞೆಗಳ ವ್ಯವಸ್ಥೆ, ಅದರಲ್ಲೂ ಆಡುಭಾಷೆಗೆ ಪೂರಕವಾಗಿ. ಉಚ್ಛರಿಸಿದ ಪದದ ಸೂಕ್ಷ್ಮಾರ್ಥ ಆಡಿದ ಮನುಷ್ಯನ ಮುಖಚರ್ಯೆಯನ್ನವಲಂಬಿಸಿರುತ್ತದೆ, ಒಮ್ಮೊಮ್ಮೆ ವಿರುದ್ಧಾರ್ಥಕ ಪದಗಳ ಸಾಧ್ಯತೆಯೂ ಇರುತ್ತದೆ.

ಈ ಬಗೆಯ ಸಾಂಕೇತಿಕ-ಸಂಜ್ಞೆಗಳ ವ್ಯವಸ್ಥೆಯನ್ನು ಒಂದು ಸ್ವಾಯತ್ತ ವ್ಯವಸ್ಥೆಯನ್ನಾಗಿ ಪರಿಗಣಿಸಿ ಅದರ ಅಧ್ಯಯನಕ್ಕೆ ತೊಡಗಬಹುದಾಗಿದೆ.

ಕಲ್ಪಿತ ಸಿದ್ಧಾಂತವೊಂದನ್ನು ಮಂಡಿಸುವುದಾದರೆ, ಮಾನವನಿಗೆ ಪೂರಕವಾಗಿ ಒದಗುವ ವಿಶಿಷ್ಟವಾದ ಸಂವಹನ-ಸಾಧನದ ರೂಪದಲ್ಲಿ ಒಂದು ವಿಶಿಷ್ಟವಾದ ಸಾಂಕೇತಿಕ ಸಂಜ್ಞಾ ವ್ಯವಸ್ಥೆಯ ಅಸ್ತಿತ್ವವನ್ನು ಪರಿಗಣಿಸಬಹುದಾಗಿದೆ. ಈ ಬಗೆಯ ಕಲ್ಪಿತ ದೃಷ್ಯ-ಸಂಜ್ಞೆಗಳ ವ್ಯವಸ್ಥೆಯ ಆಧಾರದ ಮೇಲೆ ಸಿನೆಮಾ ಭಾಷೆ ತನ್ನ ತಳಹದಿಯನ್ನು, ಸಹಜ ಸಂವಹನ ಶಕ್ತಿಯಿರುವ ಮೂಲಮಾದರಿಗಳ ಸಾಲುಗಳನ್ನು ಕಲ್ಪಿಸಿಕೊಳ್ಳಬಲ್ಲ ಸಾಧ್ಯತೆಯನ್ನು - ಸೃಷ್ಟಿಸಿಕೊಂಡಿರುತ್ತದೆ.

ಇಷ್ಟಾದರೂ, ಹೆಚ್ಚೇನೂ ಆದಂತಲ್ಲ. ನಮ್ಮ ಚರ್ಚೆಗೆ ಇಲ್ಲಿ ಮುಖ್ಯವಾಗುವುದು, ಈ ಸಿನೆಮೀಯ ಸಾಧ್ಯತೆ ತನ್ನಲ್ಲೇ ದೃಷ್ಯಗಳ ಮೂಲಕ 'ಓದನ್ನು' ಸಾಧ್ಯವಾಗಿಸುವ ಶಕ್ತಿಯನ್ನು ಅಡಗಿಸಿಟ್ಟುಕೊಂಡಿರುತ್ತದೆ. ವಿವರಿಸಿ ಹೇಳುವುದಾದರೆ, ಪ್ರೇಕ್ಷಕನ ಸುತ್ತಲಿನ ವಾಸ್ತವೊಂದನ್ನು ಕಲ್ಪಿಸಿಕೊಳ್ಳಿ. ತನ್ನ ಕ್ರಿಯೆ, ಗುಣ, ಅಭ್ಯಾಸಗಳ ಪ್ರಾಥಮಿಕ, ಸರಳ ಅಭಿವ್ಯಕ್ತಿಗಳಲ್ಲೂ ಅನುಭವಕ್ಕೆ ಬರುವಂತಹ ಸಮೂಹವೊಂದರ ಪ್ರಕೃತಿಯಾಗಿ ಈ ವಾಸ್ತವವನ್ನು ಕಲ್ಪಿಸಿಕೊಳ್ಳಿ. ಇದರ ಜೊತೆಗಿನ ಸಂವದವೊಂದು ದೃಶ್ಯಗಳಾ 'ಓದಿನ' ಮೂಲಕ ಪ್ರೇಕ್ಷಕನಿಗೆ ಸಾಧ್ಯವಗುತ್ತದೆ. ಈಗ ಒಂದೊಮ್ಮೆ ನಮ್ಮ ಕಿವಿಗಳನ್ನು ಮುಚ್ಚಿದ್ದರೂ, ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆಯುವ ಕ್ರಿಯೆ ನಮ್ಮ ಹಾಗೂ ಪರಿಸರದ ನಡುವಣ ಮುಂದುವರೆದ ಸಂವಾದದದಂತಿರುತ್ತದೆ. ಅದು ಆ ಪರಿಸರದಿಂದ ಆಯಬಲ್ಲ ದೃಷ್ಯಗಳ ಮೂಲಕ ಸಂಯೋಜಿಸಲ್ಪಟ್ಟಿರುತ್ತದೆ. ದಾರಿಹೋಕರ ಮುಖಚರ್ಯೆ, ಅವರ ಸಂಕೇತಗಳು, ಸಂಜ್ಞೆಗಳು, ಕ್ರಿಯೆ, ಮೌನಗಳು, ಸಾಮೂಹಿಕ ಪ್ರತಿಕ್ರಿಯೆಗಳು (ಟ್ರಾಫ಼ಿಕ್-ನ ಕೆಂಪು ದೀಪದ ಬಿಡುಗಡೆಗಾಗಿ ಕಾಯುತ್ತಿರುವ ಜನಗಳು, ಒಂದು ರಸ್ತೆ-ಅಪಘಾತವನ್ನು ಸುತ್ತುವರೆದು ನೋಡುತ್ತಿರುವ ಜನ, ಅಥವ ಒಂದು ಪ್ರೇಕ್ಷಣೀಯಸ್ಥಳವನ್ನು ನೋಡುತ್ತಿರುವ ಜನ); ಟ್ರಾಫ಼ಿಕ್ ಸಮ್ಕೇತಗಳು, ಇಂಡಿಕೇಟರ್ಗಳು, ಏನೆಲ್ಲಾ ವಸ್ತುಗಳನ್ನು ಮತ್ತು ಅವುಗಳನ್ನು ಗ್ರಹಿಸುವ ಮನುಷ್ಯರ ರೀತಿ - ತಮ್ಮ ಅಸ್ತಿತ್ವ ಮಾತ್ರದಿಂದಲೇ ಒಂದು ಬಗೆಯ ಮೂಕಮಾತಿಗೆ ತೊಡಗಿರುವ ಮೂಕ ವಸ್ತು-ಮನುಷ್ಯರು - ಹೀಗೆ.

ಆದರೆ ಇಷ್ಟು ಮಾತ್ರವೇ ಅಲ್ಲ. ವಿಸ್ತರಿಸಿ ಹೇಳುವುದಾದರೆ, ಮನುಷ್ಯನ ಅಂತರಾಳದಲ್ಲಿ ಒಂದು ಇಡೀ ಪ್ರಪಂಚವೇ ಸಾರ್ಥಕವಾದ ದೃಷ್ಯ-ಬಿಂಬಗಳ ಮೂಲಕ ಅಭಿವ್ಯಕ್ತಿ ಪಡೆದುಕೊಂಡುದೆ, ಇದನ್ನು ಈ ಕಾರಣದಿಂದ ಇನ್ನು ಮುಂದೆ ಬಿಂಬ-ಸಂಜ್ಞೆಯೆಂದು ಕರೆಯಬಹುದಾಗಿದೆ. ಈ ಪ್ರಪಂಚವೇ ಪ್ರಜ್ಞೆಯ ಮಟ್ಟದ ಮನುಷ್ಯಾಂತರಾಳದ ಕನಸುಗಳು ಮತ್ತು ನೆನಪುಗಳು.

ನೆನಪನ್ನು ತುಂಬಿಕೊಳ್ಳುವ, ನೆನಪು ಮಾಡಿಕೊಳ್ಳುವ ಪ್ರತಿಯೊಂದು ಪ್ರಯತ್ನವೂ ಬಿಂಬ-ಸಂಜ್ಞೇಗಳ ಒಂದು ಸಮೂಹ-ಸರಣಿ. ಇದೊಂದು ರೀತಿಯಲ್ಲಿ ಸಿನೆಮಾದ ದೃಷ್ಯ ಸರಣಿಯಿದ್ದರೆ. ಅಂತೆಯೇ, ಎಲ್ಲಾ ಕನಸುಗಳೂ ಸಹ. ಸಿನೆಮಾದ ರೀತಿಯಲ್ಲಿಯೇ ಇವುಗಳಲ್ಲೂ ಕ್ಲೋಸ್-ಶಾಟ್, ಲಾಂಗ್-ಶಾಟ್ ಗುರುತಿಸಬಹುದಾಗಿದೆ.

ಮೇಲಿನ ಒಟ್ಟು ಚರ್ಚೆಯನ್ನು ಚಿಕ್ಕದಾಗಿ ಹೇಳುವುದಾದರೆ, ಸಂಕೇತಗಳು, ಪರಿಸರದಿಂದ ಒದಗುವ ಎಲ್ಲಾ ಸಮ್ಜ್ಞೆಗಳು, ಮನುಷ್ಯಾಂತರಾಳದ ಕನಸುಗಳು, ನೆನಪುಗಳು ಇವುಗಳಿಂದ ನಿರ್ಮಿತವಾದ ಒಂದು ಸಂಕೀರಣವಾದ ಬಿಂಬ-ಪ್ರಪಂಚವಿದೆ. ಸಿನಿಮೀಯವಾದ ಸಂವಹನಕ್ಕೆ ಸಾಧನ ತಳಹದಿಯಾಗಿ ಇದನ್ನು ಪರಿಗಣಿಸಬಹುದಾಗಿದೆ ಎನ್ನುವುದು ಈ ಬರಹದ ಸಿದ್ಧಾಂತವಾಗಿದೆ.

ಇದೇ ಸಂದರ್ಭದಲ್ಲಿ ಒಂದು ಚಿಕ್ಕ ವ್ಯತ್ಯಾಸವನ್ನೂ ಕಾಣಿಸಬೇಕಿದೆ. ಸಾಹಿತ್ಯಕ ಭಾಶೆಗಳ ಮೂಲಕವಾದ ಕಾವ್ಯತ್ಮಕ ಮತ್ತು ತಾತ್ವಶಾಸ್ತ್ರ ಪರಿಕಲ್ಪನೆಗಳ ಸಂವಹನಕ್ಕೆ ಒಂದು ಇತಿಹಾಸವಿದೆ, ಪ್ರೌಢಾವಸ್ಥೆ ಪಡೆದುಕೊಂಡಿರುವ ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ. ಆದರೆ, ಸಿನೆಮಾಕ್ಕೆ ಆಧಾರವಗಿರುವ ದೃಷ್ಯ ಮಾಧ್ಯಮದ ಮೂಲಕವಾದ ಸಂವಹನ ಈ ಸದ್ಯಕ್ಕೆ ಆ ಪ್ರೌಢಿಮೆಯನ್ನು ಗಳಿಸಿಲ್ಲ. ಸ್ಪಷ್ಟಗಳಿಸಿಲ್ಲ, ತಾರ್ಕಿಕವಾಗಿ ಮಂಡಿಸಲಾಗ ಒಳ-ಅರಿವನ್ನು ಇವು ಅವಲಂಬಿಸಿವೆ. ಮತ್ತೊಂದು ಭಿನ್ನವಾದ ವ್ಯತ್ಯಾಸವೆಂದರೆ, ಸಂಕೇತಗಳು, ಪರಿಸರ, ನೆನಪು, ಕನಸುಗಳ ಪ್ರಕ್ರಿಯೆಗಳು ಮನುಷ್ಯನಿಗಿಂತಾ ಹಳೆಯದಾದವು, ಕನಿಷ್ಠ ಮನುಷ್ಯನಷ್ಟೇ ಹಳೆಯವು. ವ್ಯಾಕರಣ ಮತ್ತು ಸಂಬಂಧಿತ ಪ್ರಕ್ರಿಯೆಗಳಿಗಿಂತ ಹಿಂದಿನವು.

ಆದ್ದರಿಂದ, ಸಿನೆಮಾದ ತಳಹದಿಯಾಗಿ ನಿಂತಿರುವ ಭಾಷಾ-ಸಾಧನ ಒಂದು ಬಗೆಯ ಸುಲಭಕ್ಕೆ ಸಿಗುವ ತರ್ಕ-ಗಣಿತದ ಹೊರಗಿರುವ ರೀತಿಯದ್ದು. ಏಕಕಾಲದಲ್ಲಿ ಸಿನೆಮಾದಲ್ಲಿ ನಮಗೆ ಕಾಣುವ ಕನಸಿನ ಸ್ವರೂಪದ ಅವಾಸ್ತವಿಕತೆ, ಮತ್ತು ಖಚಿತವಾದ/ಅತಿಸಹಜವದ ವಾಸ್ತವಿಕತೆ - ಈ ಎರಡನ್ನು ಮೇಲಿನ ಚರ್ಚೆ ವಿವರಿಸುತ್ತದೆ.

Saturday, March 04, 2006

ಅನಾಮಿಕನೊಬ್ಬನ ಅಶ್ರುತರ್ಪಣ



ಈ ಬಾರಿಯ ನನ್ನ ಬರಹ ದಿವಂಗತ ಕೆ.ವಿ.ಸುಬ್ಬಣ್ಣವರ ಕುರಿತಾಗಿ. ಒಂದೂವರೆ ವರ್ಷಗಳ ಹಿಂದೆ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಹೋಗಿ ಬಂದನಂತರ ಹಿರಿಯರೊಬ್ಬರಿಗೆ ಬರೆದ ಪತ್ರದ ಒಂದು ಭಾಗ ಇದು. ಆ ನಂತರದಲ್ಲಿ ಕನ್ನಡ ಸಾಹಿತ್ಯ.ಕಾಂ ಹೊರತಂದ ಸುಬ್ಬಣ್ಣನವರ ನೆನಪಿನ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿತ್ತು.

ನನ್ನ ಪ್ರಕಾರ ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಕೆ.ವಿ.ಸುಬ್ಬಣ್ಣ ಕನ್ನಡದ ಅತ್ಯಂಕ ಪ್ರಮುಖ ಚಿಂತಕರು. ಹಲವರಾದರೂ ಈ ಮಾತನ್ನು ಒಪ್ಪಿಯಾರು. ಸುಬ್ಬಣ್ಣನವರ ಬಗ್ಗೆ ಸಾಂಸ್ಕೃತಿಕ ಪ್ರಪಂಚದಲ್ಲಿ ಹೊಸದಾಗಿ ಹೇಳುವುದೇನಾದರೂ ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ನನಗನ್ನಿಸಿದ್ದರಲ್ಲಿ ಕೆಲವಾದರೂ ಮುಖ್ಯವಾದ ಅಂಶಗಳಿದ್ದು, ಮಿಕ್ಕವರಿಗೂ ಸಹ ಆಸಕ್ತಿಕರ ಎಂದೆನ್ನಿಸಬಹುದೇನೋ ಎಂದು ಆಶಿಸುತ್ತಾ ಈ ಬರಹವನ್ನರ್ಪಿಸುತ್ತಿದ್ದೇನೆ. ಒಂದು ವಿಧದಲ್ಲಿ ಇದು ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ವಿವರಣೆ. ನೀನಾಸಂ ಸಮಾಜ, ಸುಬ್ಬಣ್ಣನವರು ಮತ್ತು ಸಂಬಂಧಿತ ಇತರ ವ್ಯಕ್ತಿಗಳಿಂದ ಬಹಳಷ್ಟು ದೂರದಲ್ಲಿದ್ದೇನೆ. ಅಲ್ಲಿನ ಯಾರ ವೈಯಕ್ತಿಕ ಪರಿಚಯವೂ ನನಗಿಲ್ಲ. ಈ ದೂರವನ್ನು ಮೀರಿ ಸಾಧ್ಯವಾಗಿರುವ ನನ್ನ ಹಲವಾರು ಅಭಿಪ್ರಾಯಗಳು ಪೂರ್ತಿ ನಿಜ ಅಲ್ಲದಿರಬಹುದು. ಆದರೆ ಈ ಅನಿಸಿಕೆಗಳು ಪ್ರಾಮಾಣಿಕವಾದ್ದರಿಂದ, ಅಲ್ಲದೇ ಇಂತಹ ಅಭಿಪ್ರಾಯಗಳು ನನ್ನಂತೆಯೇ ದೂರದ ಮತ್ಯಾರಿಗಾದರೂ ಸಾಧ್ಯವಾಗಬಹುದಾದ್ದರಿಂದ ಇದಕ್ಕೊಂದು ಪ್ರಾತಿನಿಧಿಕ ಗುಣ ಇರಬಹುದು ಎನ್ನುವ ಆಶೆಯಿಂದ ಬರೆದಿದ್ದೇನೆ. ಅಷ್ಟಲ್ಲದೇ, ಬೆಂಗಳೂರಿನಲ್ಲಿ ಸಾಂಸ್ಕೃತಿಕವಾಗಿ ಜೀವಂತವಿರಲು ಸಾಕಷ್ಟು ಕಷ್ಟಪಡಬೇಕಾಗಿರುವ ನನ್ನಂತಹವರಿಗೆ ಹೆಗ್ಗೋಡು/ನೀನಾಸಂ/ಸುಬ್ಬಣ್ಣ ಒಂದು ಸಾಧ್ಯತೆಯಾಗಿಯೇ ತುಂಬಾ ಮುಖ್ಯವೆನ್ನಿಸುತ್ತದೆ. ಇದೆಲ್ಲದರಿಂದ ರೂಪಿತವಾಗಿರುವ ಶ್ರದ್ದಾಂಜಲಿಯಿದು.

ನಾನು ಮೊಟ್ಟ ಮೊದಲ ಬಾರಿಗೆ ನೀನಾಸಂ ಬಗ್ಗೆ ಓದಿದ್ದು ೧೯೯೧-ರಲ್ಲಿ, ಸುಬ್ಬಣ್ಣನವರಿಗೆ ಮ್ಯಾಗ್ಸೇಸೇ ಪ್ರಶಸ್ತಿ ಬಂದಾಗ. ನನಗಾಗ ೧೬ ವರ್ಷ, ಪಿಯೂಸಿ ಓದುತ್ತಿದ್ದೆ. ದೂರದರ್ಶನದಲ್ಲಿ ವಾರ್ತೆ ನೋಡುತ್ತಿದ್ದ ನನಗೆ, ಕನ್ನಡದ ಸುಬ್ಬಣ್ಣನವರಿಗೆ ಮ್ಯಾಗ್ಸೇಸೇ ಪ್ರಶಸ್ತಿ ಬಂದಿದೆ ಎಂದು ಸುದ್ದಿ ಬಿತ್ತರವಾದಾಗ, ಏಕಕಾಲದಲ್ಲಿ ಖುಶಿ ಮತ್ತು ಆಶ್ಚರ್ಯವಾಯಿತು. ಖುಷಿಯನ್ನು ವಿವರಿಸಬೇಕಿಲ್ಲ. ಆಶ್ಚರ್ಯವಾದದ್ದು, ಈವರೆಗೆ ಸುಬ್ಬಣ್ಣನವರ ಹೆಸರನ್ನು ಕೇಳಿಯೇ ಇರಲಿಲ್ಲವಲ್ಲ ಎಂದು. ಕಾರಣ ಇಷ್ಟೇ. ಕನ್ನಡ ಸಾಹಿತ್ಯದ ಆಳವಾದ ಪರಿಚಯ ಇಲ್ಲದಿದ್ದರೂ ಅನಂತಮೂರ್ತಿ, ಭೈರಪ್ಪ, ಶಿವರಾಮಕಾರಂತ, ಕುವೆಂಪು, ಮಾಸ್ತಿ, ಕಾರ್ನಾಡ್, ತೇಜಸ್ವಿ ಇವರ ಕೆಲವು ಕೃತಿಗಳನ್ನು ಓದಿದ್ದೆ. ಆಗಷ್ಟೆ ಲಂಕೇಶ್ ಪತ್ರಿಕೆಗೆ ಸ್ವಲ್ಪ ಪ್ರವೇಶ ದೊರೆತಿತ್ತು. ಅಲ್ಲದೇ, ಕನ್ನಡದ ಉತ್ತಮ ಸಿನೆಮಾಗಳ ಪರಿಚಯವಿತ್ತು, ಹಾಗಾಗಿ ಸಿನೆಮಾದಲ್ಲಿ ನಿರತರಾಗಿದ್ದ ಕನ್ನಡ ಸಾಹಿತಿಗಳ ಹೆಸರು ಗೊತ್ತಿತ್ತು. 'ಸಂಸ್ಕಾರ' ಕಾದಂಬರಿ ಓದಿ, ಸಿನೆಮಾ ನೋಡಿ ಒಂದು ತೀವ್ರವಾದ ಅನುಭವಕ್ಕೆ ತೆರೆದುಕೊಂಡಿದ್ದೆ. ಇಷ್ಟೆಲ್ಲಾ ಇದ್ದರೂ, ಕನ್ನಡ ಪತ್ರಿಕೆಗಳನ್ನೆಲ್ಲಾ ಪ್ರತಿ-ದಿನ ಓದುತ್ತಿದ್ದರೂ - ಸುಬ್ಬಣ್ಣರ ಹೆಸರಾಗಲೀ, ನೀನಾಸಂ-ಆಗಲಿ ಗೊತ್ತೇ ಇರಲಿಲ್ಲ ಎಂದರೆ - ಸ್ಕೂಲ್-ಕಾಲೇಜುಗಳಲ್ಲಿ ಕನ್ನಡ ಬಾವುಟವನ್ನು ಯಾವಾಗಲೂ ಹೊತ್ತಿರುತ್ತಿದ್ದ ನನ್ನ ಜಂಬದ ಬಲೂನು ಟುಸ್ಸೆಂದಿತ್ತು. ಅಲ್ಲದೇ ಬೆಂಗಳೂರಿನಲ್ಲಿದ್ದು ಸಾಧ್ಯವಾಗುವ ಸಾಂಸ್ಕೃತಿಕ ಕೂಪಮಂಡೂಕತನದ ಬಗ್ಗೆ ಎಚ್ಚರ ಮೂಡಿತು.

ಆ ಸಮಯದಲ್ಲಿ ಸುಬ್ಬಣ್ಣನವರು ದೂರದರ್ಶನದಲ್ಲಿ ಮಾತಾಡಿದ ರೀತಿ, ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಹೇಳಿಕೆಗಳು ಇವೆಲ್ಲಾ ನನಗೆ ಇನ್ನೂ ಜ್ಞಾಪಕವಿದೆ. ತುಂಬಾ ಎನ್ನುವ ಪರಿಣಾಮ ಬೀರಿರಲಿಲ್ಲವಾದರೂ - ಎಷ್ಟು ಸರಳವಾದ ವ್ಯಕ್ತಿ, ನಾವೆಲ್ಲಾ ಹೆಮ್ಮೆ ಪಡಬಹುದು ಎಂದಂತೂ ಅನ್ನಿಸಿದ್ದು ದಿಟ. ಪತ್ರಿಕೆಗಳಲ್ಲಿ ಸುಬ್ಬಣ್ಣನವರ ಕುರಿತು ಬಂದ ವರದಿಗಳಿಗಿಂತಾ ಸತ್ಯ ಹೆಚ್ಚಿನದ್ದು, ಆಳದ್ದಾಗಿದೆ ಎಂದು ಏಕೋ ಅನ್ನಿಸ್ಸಿದ್ದ ನೆನಪು.

ಮುಂದೆ ಐದಾರು ವರ್ಷಗಳು ನಾನು ಕರ್ನಾಟಕದಿಂದ ದೂರವಿದ್ದು ಶಿಕ್ಷಣ ಮುಂದುವರೆಸಿದ್ದರಿಂದ ಕನ್ನಡದ ವಾತಾವರಣದಿಂದ ಸಂಪೂರ್ಣ ದೂರವಾಗಿದ್ದೆ. ಟೈಮ್ಸ್ ಆಫ಼್ ಇಂಡಿಯಾ ವರದಿಗಳು, ಆಗೀಗ ಸುಧಾ-ತರಂಗ, ದೂರದರ್ಶನ ವಾರ್ತೆಗಳು ಇವಿಷ್ಟೆ ಕನ್ನಡ-ಕರ್ನಾಟಕದ ಜೊತೆಗಿನ ಸಂಬಂಧ. ಆ ಐದಾರು ವರ್ಷಗಳಲ್ಲಿ ಒಮ್ಮೆಯೂ ಸುಬ್ಬಣ್ಣನವರ ಹೆಸರನ್ನಾಗಲೀ, ನೀನಾಸಮ್ ಹೆಸರಾಗಲೀ ಎಲ್ಲಿಯೂ ಓದಿದ್ದು ಜ್ಞಾಪಕವಿಲ್ಲ. ಅಂತಹ ದಿನಗಳಲ್ಲೂ ನಾನು ನನ್ನ ಬೇರನ್ನು ಗಟ್ಟಿಯಾಗಿಟ್ಟುಕೊಳ್ಳಲು ಮಾಡುತ್ತಿದ್ದ ಪ್ರಯತ್ನಗಳಲ್ಲಿ ಕನ್ನಡದ ಬಗ್ಗೆ ಜಂಭ ಕೊಚ್ಚಿಕೊಳ್ಳುವುದೂ ಒಂದಾಗಿತ್ತು. ಅಂತಹ ಸಂದರ್ಭಗಳಲ್ಲೆಲ್ಲಾ ಕನ್ನಡದ ಜ್ಞಾನಪೀಠ ಪ್ರಶಸ್ತಿಗಳನ್ನು, ಸುಬ್ಬಣ್ಣ-ನೀನಾಸಂ-ಹೆಗ್ಗೋಡುಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿದ್ದೆ. ಒಟ್ಟಿನಲ್ಲಿ, ಹೆಗ್ಗೋಡಿನ ನೆನಪು ಆಗೀಗ ಬರುತ್ತಿದ್ದು, ಆಳದಲ್ಲಿ ಅವ್ಯಕ್ತವಾದ ಒಂದು ಆಸಕ್ತಿಯೂ ಇದ್ದಿತೆಂದೇ ನನಗೆ ತೋರುತ್ತದೆ.

ಮತ್ತೆ ಬೆಂಗಳೂರಿಗೆ ಹಿಂದಿರುಗಿದ ನಂತರ ನಿಧಾನವಾಗಿ ಬೇರಿನ ಜೊತೆಗಿನ ಸಂಬಂಧ ಬಲವಾಗತೊಡಗಿತು (ಅಥವಾ ಭ್ರಮೆಯೆನ್ನಿ). ಆ ನಡುವೆ ಒಮ್ಮೆ ಬಸ್ ಪ್ರಯಾಣ ಮಾಡುತ್ತಿದ್ದಾಗೆ, ಪ್ರಜಾವಾಣಿ ವಿಶೇಷಾಂಕದಲ್ಲಿರಬೇಕು, ಸುಬ್ಬಣ್ಣನವರ 'ಕನ್ನಡವು ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ' ಲೇಖನವನ್ನು ಓದಿದೆ ತುಂಬಾ ಪ್ರಭಾವಿತನಾದೆ. ಬಸ್-ನಲ್ಲೇ ೩-೪ ಬಾರಿ ಓದಿದ ನೆನಪು. ಇಲ್ಲಿಯವರೆಗೆ ಗುಪ್ತಗಾಮಿನಿಯಾಗಿದ್ದ ಅವರ ಬಗೆಗಿನ ಆಸಕ್ತಿ ಈ ಓದಿನ ನಂತರ ಪ್ರಜ್ಞೆಯ ಮುಖ್ಯವಾಹಿನಿಯಲ್ಲಿ ಸೇರಿತು ಎಂದು ನನ್ನ ಅನಿಸಿಕೆ.

ಇದೇ ದಿನಗಳಲ್ಲಿ ಹೆಗ್ಗೋಡಿನಲ್ಲಿ ನಡೆಯುವ 'ಸಾಂಸ್ಕೃತಿ ಶಿಬಿರ' ಹಾಗೂ 'ತಿರುಗಾಟ' ನಾಟಕಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ (ಆದರೆ ಮೊಟ್ಟಮೊದಲು ತಿರುಗಾಟ ನಾಟಕಗಳನ್ನು ನೋಡಿದ್ದು ಹೆಗ್ಗೋಡಿನಲ್ಲಿಯೇ). ಹೋಗಬೇಕೆನ್ನುವ ಆಸೆಯಿತ್ತಾದರೂ ಅದಕ್ಕಿನ್ನೂ ಮನಸ್ಸು ತೀವ್ರವಾಗಿ ಹಸಿದಿರಲಿಲ್ಲ. ಆದರೂ, ಯಾರಾದರೂ ಹೋಗಿ ಬಂದವರಿದ್ದಾರೆಯೇ ಎಂದು ವಿಚಾರಿಸುತ್ತಿದ್ದೆ.

ನಂತರ ಇಂಟರ್ನೆಟ್-ನಲ್ಲಿ ಒಮ್ಮೆ ಸುಬ್ಬಣ್ಣನವರ ಬಗ್ಗೆ ಹುಡುಕುತ್ತಿದ್ದಾಗ, ರಮೋನ್ ಮ್ಯಾಗ್ಸೇಸೇ ಫ಼ೌಂಡೇಶನ್-ರವರು ಪ್ರಕಟಿಸಿರುವ ಸುಬ್ಬಣ್ಣನವರ ಮ್ಯಾಗ್ಸೇಸೇ ಪ್ರಶಸ್ತಿ ಸ್ವೀಕಾರ ಭಾಷಣವನ್ನು ಓದಿದೆ (ಇದರ ಮೂಲ ಕನ್ನಡ ರೂಪವನ್ನು ನಂತರ 'ಅರೆಶತಮಾನದ.......'-ದಲ್ಲಿ ಇತ್ತೀಚೆಗೆ ಓದಿದೆ). ಕಾಲಾಂತರದಲ್ಲಿ ಅವರ ಇನ್ನಿತರ ಲೇಖನಗಳಾದ 'ಅಡಕೆಯ ಮಾನ', 'ನನ್ನ ಕನ್ನಡ ಜಗತ್ತು' - ಇತ್ಯಾದಿಗಳನ್ನು ಓದಿದ ಮೇಲೆ, ತೀವ್ರವಾಗಿ ನನಗನ್ನಿಸಿದ್ದು - ಇವರು ಕನ್ನಡ ಸಾಂಸ್ಕೃತಿಕ ಪ್ರಪಂಚದಲ್ಲಿ ನನಗೆ ಅತ್ಯಂತ ಪ್ರಸ್ತುತರಾದ ವ್ಯಕ್ತಿ, ಇವರ ಊರಿಗೆ, ಆ ಶಿಬಿರಕ್ಕೆ ಖಂಡಿತಾ ಹೋಗಲೇ ಬೇಕು, ಇವರನ್ನು ಕಂಡು ಮಾತಾಡಿಸಿ ಬರಬೇಕು - ಎಂದು. ಹಾಗೆ ನೋಡಿದರೆ ಆಗಲೂ ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ, ಅಷ್ಟೇನೂ ಅವರ ಲೇಖನಗಳನ್ನು ಓದಿರಲೂ ಇಲ್ಲ. ಆದರೂ ಹೀಗೇಕೆ ಅನ್ನಿಸಿತು ಎಂದು ನಾನೇ ಬಹಳಷ್ಟು ಸಾರಿ ಆಲೋಚಿಸಿದ್ದೇನೆ. ಅಂತೂ, ನಮ್ಮಂತಹವರಿಗೆಲ್ಲಾ ಸಾಂಸ್ಕೃತಿಕ-ಹಿರಿಯರ ಅಗತ್ಯ ತುಂಬಾ ಕಾಡುತ್ತಿರುತ್ತದೆಯಾದ್ದರಿಂದ, ಭೇಟಿಯಾಗದೆಯೂ ಸುಬ್ಬಣ್ಣರಂಥವರು ಈ ಅಗತ್ಯವನ್ನು ಪೂರೈಸುತ್ತಿರುತ್ತಾರ್‍ಎ.


ಅಂತೂ ಒಟ್ಟು ಮುಹೂರ್ತ ಕೂಡಿ ಬಂದು ೨೦೦೪-ರ ಹೆಗ್ಗೋಡಿನ ಶಿಬಿರಕ್ಕೆ ಹೋಗುವುದನ್ನು ತೀರ್ಮಾನಿಸಿದೆ. ಇಷ್ಟರಲ್ಲೇ ಸುಬ್ಬಣ್ಣನವರ 'ಅರೆ ಶತಮಾನದ ಅಲೆ ಬರಹಗಳು' ಬಿಡುಗಡೆಯಾಗಿದ್ದರಿಂದ, ಅವರ ಒಟ್ಟು ವಿಚಾರಗಳಿಗೆ ತೆರೆದುಕೊಳ್ಳುವುದಕ್ಕೆ ಅವಕಾಶವಾಯಿತು. ಕನ್ನಡ ಸಾಹಿತ್ಯದ ಓದಿನಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದ ಪುಸ್ತಕಗಳಲ್ಲಿ ಇದೂ ಒಂದು. ಸ್ವಲ್ಪ ದಿನಗಳ ಹಿಂದೆ, ಬೆಂಗಳೂರಿನಲ್ಲಿ ನಡೆದ ಸಂವಾದವೊಂದರಲ್ಲಿ ಹಿರಿಯರೊಬ್ಬರು ತಾವು ಕಂಡಂತೆ 'ರಶೊಮೋನ್' ಚಿತ್ರದ ಕುರಿತ ಅತ್ಯುತ್ತಮ ಲೇಖನ ಸುಬ್ಬಣ್ಣನವರದ್ದು ಎಂದು ಹೇಳಿದ್ದರು. ಆಗ ನನಗೆ ಇವರು ಉತ್ಪ್ರೇಕ್ಷೆ ಮಾಡುತ್ತಿರಬಹುದೇ ಎನ್ನಿಸಿತ್ತು. ಆದರೆ 'ಅರೆ ಶತಮಾನ.......'-ದಲ್ಲಿ ಆ ಲೇಖನ ಓದಿದ ಮೇಲೆ ಇದು ಖಂಡಿತಾ ನಿಜ ಅನ್ನಿಸಿತು. ನನಗೆ ತುಂಬಾ ಹಿಡಿಸಿದ ಇನ್ನಿತರ ಲೇಖನಗಳೆಂದರೆ 'ಕುವೆಂಪುಗೊಂದು ಪುಟ್ಟ ಕನ್ನಡಿ', ವಿಕೇಂದ್ರೀಕರಣ, ಪ್ರಜಾಭುತ್ವ, ಕೈಗಾರಿಕಾ ನೀತಿ, ರೈತ-ದಲಿತ ಚಳುವಳಿಗಳು, 'ಭವ ಕೇರಳ, ಭಾವ ಕೇರಳ', 'ನನ್ನ ಕನ್ನಡ ಜಗತ್ತು', 'ಅನಂತಮೂರ್ತಿಯವರ ತ್ರಿವಳಿ ಕಾದಂಬರಿಗಳು', 'ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೀಗೆ ಬನ್ನಿ', 'ಫ಼್ರಿಟ್ಜ಼್ ಬೆನೆವಿಟ್ಜ಼್' ಮುಂತಾದವು. ಅವರ ಎಲ್ಲಾ ಲೇಖನಗಳ ಕುರಿತಾಗಿ ನನ್ನ ಗಮನಕ್ಕೆ ಬಂದ ಮತ್ತೊಂದು ವಿಷಯದ ಪರೋಕ್ಷ್ಯ ಪ್ರಸ್ತಾಪ ಪುಸ್ತಕದ ಒಂದು ಲೇಖನದಲ್ಲೇ ಇದೆ. ವಿದ್ಯಾರ್ಥಿಗಳಾಗಿದ್ದಾಗ ಸುಬ್ಬಣ್ಣನವರು ತಮ್ಮ ಒಂದು ಬರಹದಲ್ಲಿ 'ಅದ್ಭುತ' ಎನ್ನುವ ಪದವನ್ನು ಬಳಸಿದ ಸಂದರ್ಭದಲ್ಲಿ, ಕುವೆಂಪುರವರು 'ಪದಗಳ ಬಳಕೆಯಲ್ಲಿ ಹುಶಾರಾಗಿರಬೇಕು, ಅಜಾಗರೂಕವಾಗಿರಬಾರದು' ಎಂದು ಹೇಳಿದ್ದನ್ನು, ಸುಬ್ಬಣ್ಣನವರು ತಮ್ಮ 'ಕುವೆಂಪು....' ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ, ತಮ್ಮ ಎಲ್ಲಾ ಲೇಖನಗಳಲ್ಲೂ ಆ ಎಚ್ಚರವನ್ನು ಸುಬ್ಬಣ್ಣನವರು ಪಾಲಿಸಿಕೊಂದು ಬಂದಿದ್ದಾರೆ ಅನ್ನಿಸುತ್ತದೆ. ಒಟ್ಟಿನಲ್ಲಿ, ಸುಬ್ಬಣ್ಣನವರ ವ್ಯಕ್ತಿತ್ವ, ವಿಚಾರಧಾರೆಗಳ ಒಂದು ದಟ್ಟವಾದ ಪರಿಚಯ ನನಗಿಲ್ಲಿ ಸಿಕ್ಕಿತು. ಹಿಂದೊಮ್ಮೆ ಅನ್ನಿಸಿದ್ದ 'ಸಾಂಸ್ಕೃತಿಕವಾಗಿ ಅತ್ಯಂತ ರೆಲೆವೆಂಟ್-ಆದವರು' ಈಗ ನನಗೆ ಬಹಳ ನಿಜ ಅನ್ನಿಸಿತು. ನನ್ನದೇ ಅನುಮಾನಗಳ ಕುರಿತು ಹೆಚ್ಚು ಭರವಸೆಯಿಡುವಂತಾಯ್ತು.

ಇಡಿಯ ಶಿಬಿರದಲ್ಲಿ ನನ್ನ ಮೇಲೆ ಅತ್ಯಂತ ಗಾಢವಾದ ಪರಿಣಾಮ ಬೀರಿದ್ದು ಸುಬ್ಬಣ್ಣನವರ ಪ್ರಾಸ್ತಾವಿಕ ಭಾಷಣ. ಸುಬ್ಬಣ್ಣನವರ 'ಅರೆ ಶತಮಾನದ....' ಓದಿದ ಮೇಲೆ (ಅದರಲ್ಲೂ ನೀನಾಸಂ ಸಮಾಜದ ಮೇಲಿನ ಒಂದು ಲೇಖನವಿದೆ), ಅವರ ಪ್ರಾಸ್ತಾವಿಕ ಭಾಷಣ ಆ ಲೇಖನಗಳ ಒಂದು ಸಾರ ಎಂದು ಹೇಳಿದರೂ ನಡೆದೀತು. ಸದ್ಯಕ್ಕೂ, ಯಾವ ಕಾಲಕ್ಕೂ ಪ್ರಸ್ತುತವೆನಿಸುವ ಮಾತುಗಳೇ ಅವು, ಅರ್ಥವಾಗದಿರುವವರು ಮಾತ್ರ ಕ್ಲೀಷೆ ಎಂದಾರು. ಮುಖ್ಯವಾಗಿ, ಅವರು ಮಾತನಾಡಿದ ರೀತಿ ನನ್ನ ಮನಸ್ಸನ್ನು ಮುಟ್ಟಿತು. ನಾನು ಅನೇಕ ಬಾರಿ ಗಮನಿಸಿದ್ದೇನೆ, ಸಾರ್ವಜನಿಕ ವೇದಿಕೆಗಳಲ್ಲಾಗಲೀ, ಕೆಲವೇ ಜನ ಪರಿಚಿತರ ಸಮ್ಮುಖದಲ್ಲಾಗಲೀ, ಚರ್ಚೆಯಾಗಲೀ, ಭಾಷಣವಾಗಲೀ - ಇನ್ನೊಬ್ಬರನ್ನು ಕನ್ವಿನ್ಸ್ ಮಾಡುವ, ಇಮ್ಪ್ರೆಸ್ ಮಾಡುವ ಧೋರಣೆಯಿಲ್ಲದೇ ಮಾತನಾಡುವುದು ತುಂಬಾ ಕಷ್ಟ, ಎಷ್ಟು ಪ್ರಯತ್ನ ಪಟ್ಟರೂ ನಮ್ಮ ಶಕ್ತಿ ಮೀರಿ ಹೀಗಾಗುತ್ತದೆ. ಕನ್ನಡದವರು ಈ ವಿಷಯದಲ್ಲಿ ಮಿಕ್ಕವರಿಗಿಂತಾ ಮೇಲು, ಆದರೂ ನಮ್ಮ ಎಲ್ಲಾ ಚಿಂತಕರನ್ನು ಗಮನಿಸಿದರೆ, ತಮಗೆ ತಾವೇ ಹೇಳಿಕೊಂಡಂತೆ, ಒಂದು ವಿಶಿಷ್ಟ ವಿನಯದಿಂದ, ಆದರೆ ಆಳವಾಗಿ ಮಾತನಾಡುವುದನ್ನು ಅತ್ಯಂತ ವಿಶೇಷವಾಗಿ ಸುಬ್ಬಣ್ಣನವರು ಗಳಿಸಿಕೊಂಡಿದ್ದಾರೆ ಎಂದು ನನಗನ್ನಿಸುತ್ತದೆ. ಕಾಲಗರ್ಭದ ಒಡಲಾಳದಿಂದೆಂಬತೆ ಹೊರಮೂಡುವ ಅವರ ಮಾತುಗಳು, ಮೌನವನ್ನು ಕದಡದಂತಹವು. ಮಾತಿನ ಮೋಡಿ ವಿಚಾರ ಲಹರಿಯನ್ನು ಮೀರಲು ಯತ್ನಿಸಬಾರದು ಎನ್ನುವ ಕಳಕಳಿ ಇದು ಎಂದು ನನಗನ್ನಿಸಿತು. ಅವರ ಲೇಖನಗಳಲ್ಲಿ ಕಂಡು ಬರುವ ಅವರ ಜೀವನ ದೃಷ್ಟಿ ಅವರ ಮಾತಿನ ಶೈಲಿಯಲ್ಲೂ ನನಗೆ ಕಂಡು ಬಂತು. ಇದೇ ಜೀವನ ದೃಷ್ಟಿ ಅಂತಹ ಒಂದು ಮಾತಿನ ಶೈಲಿಯನ್ನು ಸಹಜವಾಗಿ ರೂಪಿಸಿದೆ (ಬೌದ್ಧಿಕ ಪ್ರಯತ್ನಗಳಿಗಿಂತ ಹೆಚ್ಚಾಗಿ) - ಎಂದು ನಂಬಲು ಇಷ್ಟಪಡುತ್ತೇನೆ. ನಾನು ಕಂಡಿದ್ದ ಮೈಸೂರಿನ ಕೆಲ ಅಜ್ಞಾತ ಹಿರಿಯರು ಈ ರೀತಿಯ ಕಳಕಳಿಯುಳ್ಳ ವ್ಯಕ್ತಿತ್ವ ಹೊಂದಿದ್ದುದು ಶಿಬಿರದ ಪೂರ್ತಿ ನನಗೆ ಜ್ಞಾಪಕ ಬರುತ್ತಿತ್ತು.

ನಂತರದಲ್ಲಿ ದಿನಕ್ಕೊಮ್ಮೆ ಎಂಬಂತೆ ಒಟ್ಟು ೧೫-೨೦ ನಿಮಿಷ ಅವರೊಡನೆ ಶಿಬಿರಾರ್ಥಿಯಾಗಿ ಮಾತನಾಡುವ ಅವಕಾಶ ಸಿಕ್ಕಿತು. ವೇದಿಕೆಯ ಮೇಲಿನ ವ್ಯಕ್ತಿ ಮತ್ತು ನನ್ನ ಪಕ್ಕದಲ್ಲಿ ನಿಂತ ವ್ಯಕ್ತಿಯ ಮಾತಿನಲ್ಲಿ, ಅದರ ಕಳಕಳಿ, ಪ್ರಾಮಾಣಿಕತೆ, ವಿಶ್ವಾಸ, ಜೀವಂತಿಕೆಯಲ್ಲಿ ವ್ಯತ್ಯಾಸ ಕಾಣಲಿಲ್ಲ. ಇದು ಕೂಡ ಕಷ್ಟ ಸಾಧ್ಯವೇ ಸರಿ. ಸಾರ್ವಜನಿಕವಾದ ಎಲ್ಲಾ ಸ್ಥಳಗಳಲ್ಲಿಯೂ ಸುಬ್ಬಣ್ಣ ಸದಾ ಒಂದೇ ರೀತಿಯಾಗಿ ಕಾಣುತ್ತಿರುವುದು ನಿಜವೇ ಆದರೆ, ಸುಬ್ಬಣ್ಣ ಅತ್ಯಂತ ವಿರಳರಲ್ಲಿ ವಿರಳರೇ ಸರಿ.

ಹೆಗ್ಗೋದು, ನಮ್ಮನ್ನು ನಾವೇ ಜೀವಂತವಾಗಿಟ್ಟುಕೊಳ್ಳಲು ಸಾಧ್ಯವಾಗುವ ಸಾಂಸ್ಕೃತಿಕ ತಂಗುದಾಣವಾಗಿ, ನನಗೆ ಕಂಡು ಬಂತು. ಒಂದು ಬಗೆಯಲ್ಲಿ ಹೆಗ್ಗೋಡಿನ ನೆನಪೇ ಅಂತಹ ಒಂದು ತಂಗುದಾಣ (ಈ ನಡುವೆ 'ತಂಗುದಾಣ' ಎನ್ನುವ ಪದಕ್ಕೆ ರೆಸಾರ್ಟ್ ಎನ್ನುವ ಅಪಾರ್ಥ ಬಂದುಬಿಟ್ಟಿದೆಯಾದ್ದರಿಂದ ಹೆದರಿಕೆಯಿಂದಲೇ ಈ ಪದ ಉಪಯೋಗಿಸಿದ್ದೇನೆ. 'ತಂಗುದಾಣ' ಪದವನ್ನು ಅದರ ಮೂಲಾರ್ಥದಲ್ಲಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ). ನಮ್ಮ ಪರಂಪರೆಯನ್ನು ವಿವಿಧ ರೀತಿಗಳಲ್ಲಿ ದಕ್ಕಿಸಿಕೊಳ್ಳಲು, ವರ್ತಮಾನವನ್ನು ತೀವ್ರವಾಗಿ ವಿಮರ್ಶಿಸಲು ಹಾಗೂ ಭವಿಷ್ಯದ ಕುರಿತಾದ ಚಿಂತನೆ ನಡೆಸಲು, ಆದಷ್ಟೂ ಜೀವಂತವಾಗಿರಲು ಪ್ರಚೋದಿಸುವಂತಹ ಸಾಂಸ್ಕೃತಿಕ-ಸ್ಥಳವೊಂದಿದೆ ಅನ್ನಿಸಿತು.

ನಾನು ಇನ್ನೊಂದು ವಿಶೇಷವನ್ನು ಗಮನಿಸಿದೆ. ಶಿಬಿರದಲ್ಲಿ ಎಲ್ಲಾ ತರಹದ ಜನರಿದ್ದರು, ಎಡಪಂಥೀಯ ಧೋರಣೆಯುಳ್ಳವರು, ಎಲ್ಲರ ಮುಂದೆ ತೋರಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಆಳದಲ್ಲಿ ಬಲಪಂಥೀಯರೂ, ಪೆರಿಯಾರ್-ವಾದಿಗಳೂ, ಅತ್ಯಾಧುನಿಕರೂ, ಕೇವಲ ಸುಬ್ಬಣ್ಣನವರ ಮೇಲೆ ಅಭಿಮಾನವಿದ್ದವರು, ಯಾವ ಖಚಿತ ಅಭಿಪ್ರಾಯ ಇಲ್ಲದವರೂ - ಹೀಗೆ. ಎಲ್ಲರೂ ಸುಬ್ಬಣ್ಣನವರ ಜೊತೆ ಗುರುತಿಸಿಕೊಳ್ಳುವುದು ನಿಜಕ್ಕೂ ಆಶ್ಚರ್ಯ ತರುವ ವಿಷಯ. ಬೇರೆ ರಾಜ್ಯಗಳಿಗಿಂತಾ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಹೆಚ್ಚು ಶಕ್ಯ ಎನ್ನುವುದು ನನ್ನ ಗಮನಕ್ಕೆ ಬಂದಿದ್ದರೂ, ನಮ್ಮ ಕಾಲದಲ್ಲಿ ತೀವ್ರವಾದ ರಾಜಿಗಳಿಲ್ಲದೇ, ಯಾವುದೇ ಗುರಿ-ಪ್ರಧಾನವಾದ ವಿಶೇಷ ಪ್ರಯತ್ನವಿಲ್ಲದೇ ಇದು ಸಾಧ್ಯವಾಗುವುದು ಕಷ್ಟವೇ ಸರಿ. ಅವ್ಯಾವುವೂ ಇಲ್ಲದೇ (ಹಾಗೆ ನಂಬಲು ಬಯಸುತ್ತೇನೆ) ಹೆಗ್ಗೋಡಿನಲ್ಲಿ ಇದು ಸಾಧ್ಯವಾಗಿರುವುದು ಸಂತೋಷ ಪಡಬೇಕಾದ ವಿಷಯ.

ಮತ್ತೆ ಮತ್ತೆ ಹೆಗ್ಗೋಡಿಗೆ ಸಂಸ್ಕೃತಿ ಶಿಬಿರಕ್ಕೆ ಹೋಗಿ ಬರುತ್ತೇನಾದರೂ, ಯಾವಾಗಲೂ ಜೀವಂತವಾಗಿ ಉಳಿಯಬಲ್ಲಂತಹ ಅನುಭವವನ್ನು ಹೆಗ್ಗೋಡು/ನೀನಾಸಂ ಈಗಾಗಲೇ ನನಗೆ ಕೊಟ್ಟಿದೆ, ೨೦೦೪-ರ ಶಿಬಿರದ ಮೂಲಕ. ಅದರ ನೆನಪು ಯಾವ ಕಾಲಕ್ಕೂ ಉಸಿರನ್ನು ಸರಾಗವಾಗಿಸುತ್ತದೆ ಎಂದು ನನ್ನ ಅನಿಸಿಕೆ.

ಹೀಗೆಲ್ಲ ಹೇಳುತ್ತಿರುವಾಗಲೇ ಮತ್ತೊಂದು ಆಲೋಚನೆಯೂ ಬರುತ್ತಿದೆ. ಸುಬ್ಬಣ್ಣನವರ ಪುಸ್ತಕದಲ್ಲಿ 'ಕಿರುಸಮುದಾಯ' ಎನ್ನುವ ಪದ ಬಹಳಷ್ಟು ಸಾರಿ ಬರುತ್ತದೆ. ಸುಬ್ಬಣ್ಣನವರು, ಮತ್ತಿತರರು ಈ ನೀನಾಸಂ ಸಮಾಜ ಎಂಬ ಕಿರುಸಮುದಾಯವನ್ನು ಹಾಗೂ ಅದರ ಜೊತೆ ಸಂಬಂಧ ಸಾಧ್ಯವಾಗಿಸಿಕೊಂಡ ಇನ್ನಿತರ ಕಿರುಸಮುದಾಯಗಳನ್ನು ತಮ್ಮ ಅಪಾರ ಪರಿಶ್ರಮದಿಂದ ಗಳಿಸಿಕೊಂಡಿದ್ದಾರೆ. ಆದರೆ ನನ್ನಂತಹವರು ತಮ್ಮ ಕಿರುಸಮುದಾಯವನ್ನು ಪಡೆಯುವುದಾದರೂ ಹೇಗೆ. ನಮಗೆ ಒದಗಬಹುದಾಗಿದ್ದ ಎಲ್ಲಾ ಕಿರುಸಮುದಾಯಗಳಿಂದಲೂ ನಾವು ಉಳಿದೇ ಇಲ್ಲ ಎನ್ನುವಷ್ಟು ಬೇರ್ಪಟ್ಟಿದ್ದೇವೆ. ಕೇವಲ 'ಸಂಬಂಧವೊಂದಿರುವ ಸಾಧ್ಯತೆಯಿತ್ತು, ಆದರೆ ಈಗ ಮರು ಜೀವ ತುಂಬುವುದು ಅಸಾಧ್ಯ' ಎಂದು ನೆನಪಿಸುವ ಅಂಶಗಳಷ್ಟೇ ಉಳಿದುಕೊಂಡಿದೆ. ನಮ್ಮ ನಮ್ಮ ಊರುಗಳ ಜೊತೆ ನಮ್ಮ ಸಂಬಂಧ ಪಳೆಯುಳಿಕೆಗಳಷ್ಟೆ. ನಮ್ಮ ಸಂಬಂಧಿಕರು, ಹಾಗೂ ಜಾತಿಯ ಜೊತೆಗಿನ ಸಂಬಂಧವೂ ಸಾಂಸ್ಕೃತಿಕವಾಗಿ ಉಳಿದಿಲ್ಲ ಕೇವಲ ನೇತ್ಯಾತ್ಮಕ ಅಂಶಗಳಿಗಷ್ಟೆ ಉಳಿದಿವೆ. ನಮಗಿರುವ ಒಂದೇ ಸಾಧ್ಯತೆಯೆಂದರೆ 'ಕನ್ನಡ ಸಮುದಾಯ'-ದ ಜೊತೆಗಿನ ಸಂಬಂಧ. ಅದೂ ಒಂದು ಕಿರುಸಮುದಾಯವಲ್ಲ, ಒಂದು ಸಮುದ್ರವೇ ಸರಿ. ಮಿಕ್ಕಂತೆ ನಾವಿರುವಲ್ಲೆಲ್ಲಾ ಜೀವಂತ 'ಸಮುದಾಯ' ಎನ್ನುವ ಕಲ್ಪನೆ ಅಬ್ಸರ್ಡ್ ಎನ್ನಿಸುವಷ್ಟು ಅಸಾಧ್ಯ, ಒಂದೊಮ್ಮೆ ಸಾಧ್ಯವೆನಿಸಿದರೂ ಕೇವಲ ವ್ಯಾಪಾರದ ಸಾಧ್ಯತೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ಮಾತ್ರ.

ಇಂತಹ ಪರಿಸ್ಥಿತಿಯಲ್ಲಿ ಸುಬ್ಬಣ್ಣ/ಹೆಗ್ಗೋಡು/ನೀನಾಸಮ್-ಸಮಾಜ/ಅಕ್ಷರ-ಪ್ರಕಾಶನ ನಮಗೆ ಎಷ್ಟು ಪ್ರಸ್ತುತ ಎನ್ನುವುದನ್ನು ಎಷ್ಟು ಹೇಳಿದರೂ ಕಡಿಮೆಯೇ.

ತಮಾಶೆಯೆಂದರೆ ಇದನ್ನೆಲ್ಲಾ ನಾನು ಸುಬ್ಬಣ್ಣನವರು ಬದುಕಿದ್ದಾಗ ಅವರಿಗೆ ಮುಖತಃ ಹೇಳಲು ಹೋಗಿದ್ದರೆ ಮುಖ-ಸ್ತುತಿಯಾಗಿ ಸೊರಗುವ ಸಾಧ್ಯತೆಯಿತ್ತು. ಮುಜುಗರದಿಂದ ಅವರು ಸಿಟ್ಟಿಗೆದ್ದುಬಿಡುತ್ತಿದ್ದರೇನೋ. ಅವರಿಗೇ ಅರ್ಪಿಸಿದ ಅಭಿನಂದನಾ ಗ್ರಂಥದ ಸಮಾರಂಭಕ್ಕೇ ಅವರು ಹೋಗಲಿಲ್ಲ. ಇಂತಹ ಅನಿಸಿಕೆಗಳನ್ನು ನನ್ನಲ್ಲೇ ಉಳಿಸಿಕೊಂಡರೆ ಜೀವಂತವಾಗಿರುತ್ತದೆ. ಕನಿಷ್ಠ ಈ ತೆರನಾದ ಬರಹಕ್ಕಿಳಿಸಿದರೆ ಜೀವಕಳೆಯಲಾರದೇನೋ ಎನ್ನುವುದು ನನ್ನ ಆಶಯ. ಇದೆಲ್ಲಾ ಈ ಹೊತ್ತು ನನಗನ್ನಿಸುತ್ತಿರುವುದು. ಮುಂದೆ ಯಾವ ರೀತಿಯಲ್ಲಿ ಬೆಳೆಯುವುದೋ ಎಂದು ನನ್ನಲ್ಲೇ ಒಂದು ಕುತೂಹಲವಿದೆ.

ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವಷ್ಟು ಹಿರಿಯ ಚೇತನರಾಗಿದ್ದು ಸುಬ್ಬಣ್ಣನವರು ಈಗ ನಮ್ಮೊಂದಿಗಿಲ್ಲ. ಅವರ ಸಂಪರ್ಕಕ್ಕೆ ಬಂದ ಯಾರಿಗೇ ಆಗಲಿ, ಅವರನ್ನು ಮರೆಯುವುದಕ್ಕೆ ಸಾಧ್ಯವಾಗುವಿದಿಲ್ಲ. ಮತ್ತು ಸುಬ್ಬಣ್ಣನವರ ಸಾಧ್ಯತೆಯನ್ನು ಸದಾ ಅನ್ವೇಶಿಸುತ್ತಲೇ ಇರುತ್ತಾರೆ.