ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, March 26, 2006

ಡಾ|| ಅನಂತಮೂರ್ತಿಯವರಿಗೆ ಬಹಿರಂಗ ಪತ್ರ



ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ನಿಮ್ಮ ಅಭಿಮಾನಿಯೆಂದು ಪರಿಚಯಿಸಿಕೊಳ್ಳೋಣವೆಂದುಕೊಂಡೆ. ಆದರೆ ನಮ್ಮ ಮುಖ್ಯವಾಹಿನಿ ಸಿನೆಮಾ ಪ್ರಪಂಚ ಈ ಪದವನ್ನು ನಮ್ಮಿಂದು ಕಸಿದುಕೊಂಡು ಎಂದೆಂದೂ ಬಳಸಲಾರದ ಪರಿಸ್ಥಿತಿಗೆ ತಂದೊಡ್ಡಿದೆ. ನಿಮ್ಮ ಸಾಹಿತ್ಯವನ್ನು ಆಸಕ್ತಿಯಿಂದ ಓದುವವನು, ನಿಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಇಷ್ಟ ಪಡುವವನು, ನಿಮ್ಮ ಕೆಲ ಅಭಿಪ್ರಾಯಗಳನ್ನು ಸಮರ್ಥಿಸುವವನು, ನಿಮ್ಮ ಬೌದ್ಧಿಕ ಧೀಮಂತಿಕೆಗೆ ಬೆರಗಾದವನೂ ಎಂದರೆ ಸಾಕೆನ್ನಿಸುತ್ತೆ.

ಈ ಪತ್ರ ಬರೆದಿರುವುದಕ್ಕೆ ಕಾರಣವನ್ನು ನೀವಷ್ಟೇ ಅಲ್ಲ, ಸ್ವಲ್ಪ ರಾಜಕೀಯ, ಸಾಂಸ್ಕೃತಿಕ ಪ್ರಜ್ಞೆಯುಳ್ಳ ಯಾವುದೇ ವ್ಯಕ್ತಿಗೂ ಅರಿಯುವುದು ಕಷ್ಟವಲ್ಲ. ರಾಜ್ಯಸಭೆಯ ಚುನಾವಣೆಗೆ ನಿಂತಿದ್ದೀರಿ. ನಿಮಗೆ ಶುಭಾಶಯಗಳು. ಇಳಿವಯಸ್ಸಿನಲ್ಲಿ ಈ ಬಗೆಯ ಕ್ರಿಯಾಶೀಲತೆ ತೋರಿಸುತ್ತಿರುವುದಕ್ಕೆ ಅಭಿನಂದನೆಗಳು. ನಿಮ್ಮ ಗೆಲುವು ಸೋಲನ್ನು ನನ್ನ ವೈಯಕ್ತಿಕ ಸೋಲು, ಗೆಲುವು ಎಂದುಕೊಂಡಿದ್ದೇನೆ ಎಂದರೆ ಅತಿಶಯೋಕ್ತಿಯೆಂದು ತಾವು ನಿಕೃಷ್ಟಮಾಡಬಾರದು.

೧೦-೧೨ ದಿನಗಳ ಹಿಂದೆ ಉದ್ಯಮಿ ರಾಜೀವ್ ಚಂದ್ರಶೇಖರ್ ಭಾಜಪಾ ಮತ್ತು ದಳ (ಎಸ್) ಪರವಾಗಿ ರಾಜ್ಯಸಭೆಗೆ ನಿಲ್ಲುತ್ತಾರೆನ್ನುವುದನ್ನು ಓದಿದಾಗ ಮನಸ್ಸಿನಲ್ಲಿ ಏನೇನೋ ವಿಚಾರಗಳು ಮೂಡಿಬಂದವು. ಇವರು ಮೂಲತಃ ಭಾಜಪಾನೋ ಅಥವಾ ದಳಾವೋ? ದಳಕ್ಕೆ ಈಗ ಐಟಿ ಸ್ನೇಹಿತ ಎಂದೆನ್ನಿಸಿಕೊಳ್ಳುವ ಆಶೆಯೇ? ಅಥವಾ ಇದು ಮತ್ತೊಂದು ಕಾಂಚಾಣಮಹಿಮೆ ಪ್ರಹಸನವೋ? ರಾಜೀವರಿಗೆ ಸಾರ್ವಜನಿಕವಾದ ಒಂದು ವ್ಯಕ್ತಿತ್ವವಿದೆಯೇ? ಎಂದು ಮುಂತಾದ ಪ್ರಶ್ನೆಗಳೆದ್ದವು. ಎಲ್ಲದಕ್ಕೂ ಒಂದು ಮೆಚ್ಚಬಲ್ಲದ್ದಾದ, ಟೀಕಿಸಿಬಲ್ಲದ್ದಾದೆ ಮುಖವಿದ್ದೇ ಇರುತ್ತದೆ ಎಂದು ಅವುಗಳ ಅನ್ವೇಷಣಾ ಲೋಲುಪತೆಯಲ್ಲಿ ಒಂದಿಷ್ಟು ಕಾಲವ್ಯಯಿಸಿದೆ.

ದಿಢೀರನೆ ತಾವು ಕಣಕ್ಕಿಳಿದಾಗ ಆಶ್ಚರ್ಯವಾಯಿತು. ಆಶ್ಚರ್ಯವನ್ನು ನಂತರ ವಿವರಿಸುತ್ತೇನೆ. ನಿಮ್ಮ ಅರ್ಹತೆ, ಯೋಗ್ಯತೆಗಳ ಕುರಿತು ಪೂರ್ವಗ್ರಹಪೀಡಿತರಲ್ಲದ ಯಾರಿಗೂ ಅನುಮಾನವಿರುವುದಿಲ್ಲ. ವೈಯಕ್ತಿಕ ಅರ್ಹತೆಯಷ್ಟೇ ಅಲ್ಲದೆ, ಕನ್ನಡ ನಾಡು-ನುಡಿಯನ್ನು ಪ್ರತಿನಿಧಿಸಬಲ್ಲ ತಮ್ಮ ವ್ಯಕ್ತಿತ್ವ, ತಾತ್ವಿಕ ರಾಜಕಾರಣದ ತಮಗಿರುವ ಸಂಬಂಧ, ಒಟ್ಟು ಭಾರತದ, ಕರ್ನಾಟಕದ ರಾಜಕೀಯ ಇತಿಹಾಸ-ಪರಂಪರೆಗಳ ಜೊತೆಗಿನ ತಮ್ಮ ಅನುಭಂದ ಇವೆಲ್ಲವೂ ನನ್ನಂಥವರಿಗೆ ಮೆಚ್ಚುಗೆಯ ವಿಷಯಗಳೇ.

ತಾವು ಕೊಟ್ಟ ಕಾರಣಗಳು ಆ ಕ್ಷಣಕ್ಕೆ ಸರಿಯಾಗಿತ್ತು. ಸಾರ್ವಜನಿಕ ಕ್ಷೇತ್ರದ ಜೊತೆಗೆ ಯಾವುದೇ ಸಂಬಂಧವಿಲ್ಲದಿರುವವರನ್ನು ತಾತ್ವಿಕವಾಗಿ ಒಪ್ಪಲಾಗದ ಕಾರಣಗಳಿಗಾಗಿ ರಾಜ್ಯಸಭೆಗೆ ಆಯ್ಕೆ ಮಾಡಿಕಳಿಸುವುದು ೨-೩ ದಶಕಗಳಿಂದ ಶುರುವಾಗಿರುವ ಕೆಟ್ಟ ರಾಜಕೀಯ ಪರಂಪರೆ. ಅದನ್ನು ಕೇವಲ ಬಾಯ್ಮಾತಿನಲ್ಲಿ ವಿರೋಧಿಸುವುದಷ್ಟೇ ಅಲ್ಲದೇ, ಆ ಕುರಿತು ಕ್ರಿಯಾಶೀಲರಾಗುವುದು ಧೀಮಂತಿಕೆಯೇ ಸರಿ. ಕನ್ನಡ ನಾಡಿನಲ್ಲೇ ಇದ್ದು ಕನ್ನಡಸಂಸ್ಕೃತಿಯ ಗಂಧಗಾಳಿಯಿಲ್ಲದವರನ್ನು, ಕನ್ನಡ ಸಂಸ್ಕೃತಿಯ ಜೊತೆಗೆ ಯಾವುದೇ ಸಂಬಂಧ ಹೊಂದಬಯಸದವರನ್ನು ಆಯ್ಕೆಮಾಡುವುದೂ ಮತ್ತೂ ನಾಚಿಕೆಗೇಡಿನ ವಿಷಯ. ಹೋಗಲಿ, ಹಾಗೆ ಆಯ್ಕೆಯಾದವರು ನಮ್ಮ ನಾಡು-ನುಡಿಗೆ ಒಂದಿಷ್ಟು ಕೃತಜ್ಞತೆ ಸಲ್ಲಿಸದೇ ರಾಜ್ಯಸಭೆಗೆ ಕಳಿಸಿದ್ದಷ್ಟೇ ಭಾಗ್ಯವಾದ ಪ್ರಸಂಗಗಳನ್ನು ವಿರೋಧಿಸದೇ ಇರುವುದೂ ಸಹ ಅಷ್ಟೇ ನಾಚಿಕೆಗೇಡಿನ ಕ್ರಮ. ವಿಜಯ್ ಮಲ್ಯ, ರಾಮಜೇಠ್ಮಲಾನಿ, ಎಂ.ಎ.ಎಂ.ರಾಮ್ಸಾಮಿ, ವೆಂಕಯ್ಯ ನಾಯ್ಡುರವರಿಂದ ನಮಗಾದ ಲಾಭವೇನು ಎಂದು ನೆನೆದರೆ ಮನಸ್ಸು ಕುದಿಯದೇ ಇರದು. ಸೋನಿಯಾ ಗಾಂಧಿಯವರೂ ಸಹ ಕರ್ನಾಟಕದ ಜೊತೆ ಒಂದು ಸಂಬಂಧ ಬೆಳೆಸಿಕೊಳ್ಳುವುದು ಮುಖ್ಯವೆಂದು ಪರಿಗಣಿಸಲಿಲ್ಲವೆನ್ನುವುದು ದುಃಖದ ವಿಷಯ. ಇದ್ದುದರಲ್ಲಿ ಲೋಕಸಭಾ ಸ್ಪರ್ಧೆಯಲ್ಲಿ ಸೋತ ಸುಷ್ಮಾ ಸ್ವರಾಜ್ ಕರ್ನಾಟಕದ ಜೊತೆಗೆ ಒಂದು ವಿಧವಾದ ಸಂಬಂಧವನ್ನು ಮುಂದುವರೆಸಿದರೆನ್ನುವುದು ಒಂದಿಷ್ಟು ಆತಂಕಭರಿತ ಮೆಚ್ಚುಗೆಯಿಂದ ಗಮನಿಸಿದ್ದೇನೆ. ಈ ಎಲ್ಲಾ ಅಂಶಗಳನ್ನೂ ಪಕ್ಕಕ್ಕಿಟ್ಟರೂ, ರಾಜ್ಯಸಭೆಗೆ ನಿಂತಿರುವ ಎಲ್ಲಾ ಮಹನೀಯರುಗಳನ್ನು ಗಮನಿಸಿದರೂ ತಮ್ಮ ಸದಸ್ಯತ್ವವೇ ಹೆಚ್ಚು ಪ್ರಾತಿನಿಧಿಕವಾಗಿರುವುದು, ಅರ್ಥಪೂರ್ಣವಾಗಿರುವುದು ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ನನಗೆ ಆಶ್ಚರ್ಯವಾಗಿದ್ದು ಎರಡು ವಿಷಯಗಳಿಂದ. ಒಂದು, ಇಳಿ ವಯಸ್ಸಿನಲ್ಲಿ ಈ ಕಷ್ಟದ ಕೆಲಸಕ್ಕೆ ಮೊದಲಾದುದು. ೧೫ ವರ್ಷಗಳ ಹಿಂದೆಯಾದರೆ ತಮಗೆ ಕಸುವಿತ್ತು. ಇಂತಹ ಯಾವುದೇ ಕೆಲಸಕ್ಕೆ ಹಿತೈಷಿಗಳ ಸಹಾಯದ ಅಗತ್ಯವಿರುತ್ತೆ. ಆ ಹಿತೈಷಿಗಳ ಸಹಾಯವನ್ನು ಅತಿ ಕಡಿಮೆ ಪಡೆದಷ್ಟೂ ಉತ್ತಮ. ಆದರೆ, ಈ ವಯಸ್ಸಿನಲ್ಲಿ ತಾವು ಹೆಚ್ಚಾಗಿ ಇತರರನ್ನು ಅವಲಂಬಿಸಬೇಕಾಗುತ್ತೆ. ಇದೆಲ್ಲಾ, ಇಕ್ಕಟ್ಟಿಗೆ ತಳ್ಳುವಂತಹ ವಿಷಯಗಳು. ಇರಲಿ, ನಿಮಗೆ ನಾಡಿನಾದ್ಯಂತ ಹಿತೈಷಿಗಳಿದ್ದಾರೆ ಮತ್ತು ಅವರು ಯಾರೂ ನಿಮ್ಮನ್ನು ಮುಜುಗರಗೊಳಿಸುವ ದಾರಿಗೆ ತಳ್ಳುವುದಿಲ್ಲ ಎಂದೇ ಇಟ್ಟುಕೊಳ್ಳೋಣ.

ಎರಡು, ನಿಮ್ಮ ಪತ್ರಿಕಾ ಹೇಳಿಕೆಗಳನ್ನು ಓದಿಯೇ ರಾಜೀವ್ ಚಂದ್ರಶೇಖರ್ ಹೊರರಾಜ್ಯದ ಉದ್ಯಮಿಯಿರಬಹುದಾದ ಸಾಧ್ಯತೆ ಗಮನಕ್ಕೆ ಬಂದದ್ದು. ಕನ್ನಡ ನಾಡಿನಲ್ಲೇ ಇದ್ದರೂ ಕನ್ನಡಸಂಸ್ಕೃತಿಯ ಪರಿಚಯವನ್ನೂ ತಿರಸ್ಕರಿಸಿ ಬದುಕುವ ವಿಕೃತಮನಸ್ಸಿನವರಿರುವಾಗ, ಹೊರರಾಜ್ಯದವರೊಬ್ಬರು ನಾಡಿನ ಪರಿಚಯವಿಲ್ಲದೆಯೇ ಇಲ್ಲಿಂದ ಆಯ್ಕೆಗೆ ಪ್ರಯತ್ನಿಸುತ್ತಾರೆನ್ನುವುದು ಮತ್ತೂ ಅಹಂಕಾರದ ವಿಷಯ. ಈ ಬಗೆಯ ಪ್ರಯತ್ನಗಳೇ ನನಗೆ ಆಶ್ಚರ್ಯ ಮತ್ತು ದುಃಖವನ್ನುಂಟುಮಾಡುತ್ತದೆ. ರಾಮ್ಸಾಮಿಯವರ ಆಯ್ಕೆಯಷ್ಟೇ ಇದೂ ತುಚ್ಛೀಕರಿಸುವುದಕ್ಕೆ ಯೋಗ್ಯವಾದುದು. ಅಖಾಡಕ್ಕೆ ತಾವಿಳಿದಿರುವುದಕ್ಕೆ ಮತ್ತೂ ಹೆಚ್ಚಿನ ಅರ್ಥವಿದೆ ಎಂದು ನೆಮ್ಮದಿಯೇ ಆಯ್ತು. ಒಟ್ಟು, ತಮ್ಮ ಹೋರಾಟ ಕನ್ನಡ-ಪರವಾದ ಮತ್ತು ಕೆಟ್ಟ ಪರಂಪರೆಯ ವಿರುದ್ಧವಾದ್ದು ಎನ್ನುವುದು, ಇಡೀ ಚುನಾವಣೆಯಲ್ಲಿ ಏಕಮೇವ ತಾತ್ವಿಕವಾದ ಹೋರಾಟವಾಗಿದ್ದು ಅರ್ಥಪೂರ್ಣವೆಂದೆನ್ನಿಸಿತ್ತು.

ಆತಂಕಕ್ಕೆ ಕಾರಣವಿರಲಿಲ್ಲವೆಂದಲ್ಲ. ಕನ್ನಡ ಸಾಂಸ್ಕೃತಿಕ ಪ್ರಪಂಚದಲ್ಲಿ ತಮ್ಮನ್ನು ಕಂಡರಾಗದಿರುವುವರಿರುವುದು ನಾಡಿಗೇ ಗೊತ್ತಿರುವ ವಿಷಯ. ಅಲ್ಲದೇ, ಇವತ್ತಿನ ಕಾಲದಲ್ಲಿ ಪಕ್ಷೇತರರಾಗಿ, ಹೇಗೇ ಕಾರ್ಯವಹಿಸಿದರೂ ಪಕ್ಷ ರಾಜಕಾರಣದ ವಿಕಾರಗಳಿಂದ ದೂರವುರುವುದಕ್ಕೆ ಒಂದು ಬಗೆಯ ಚಾಣಾಕ್ಷತೆಯೂ ಬೇಕಾಗಿರುವುದು ಒಂದು ವಿಪರ್ಯಾಸ. ಕೇವಲ ಆಂತರ್ಯವನ್ನವಲಂಬಿಸಿ ರಾಜಕಾರಣ ಮಾಡುವವರು ಚಾತುರ್ಯವನ್ನವಲಂಬಿಸುವವರನ್ನು ಎದುರುಹಾಕಿಕೊಂಡು ಧೂಳೀಪಟವಾಗದೇ ಇರುವುದು ಕಷ್ಟ.

ಆದರೆ, ಆ ಮುಂದೆ ನಡೆದ, ಗೊತ್ತಾದ ವಿಷಯಗಳು ನನ್ನು ಅತೀವ ಖಿನ್ನನಾಗಿಸಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಎರಡು ಅಂಶಗಳನ್ನು ಹೇಳುವುದು. ಒಂದು, ತಮ್ಮನ್ನು ಸ್ವಲ್ಪ ಮಟ್ಟಿಗಾದರೂ ದಾರಿತಪ್ಪಿಸಲಾಗಿದೆ. ಎರಡು, ತಾವು ವಿಷಯಕ್ಕೆ ಬೇಕಾದ ಎಚ್ಚರಿಕೆ, ತಯಾರಿ ಹೊಂದಿಲ್ಲದಿರುವುದು.

ರಾಜೀವ್ ಚಂದ್ರಶೇಖರ್ ಕಳೆದ ೨೫ ವರ್ಷಗಳಿಂದ ಕರ್ನಾಟಕದಲ್ಲೇ ಇರುವುದಾಗಿ ಪತ್ರಿಕೆಗಳಿಂದ ತಿಳಿದುಬಂದಿದೆ. ಇದನ್ನು ಸದ್ಯಕ್ಕೆ ನಿಜವೆಂದುಕೊಳ್ಳೋಣ. ಯಾವ ರೀತಿಯ ಮೋಸವೂ ಇಲ್ಲವೆಂದುಕೊಳ್ಳೋಣ. ಹೀಗಾದ ಪಕ್ಷದಲ್ಲಿ ಅವರು ಆಂಧ್ರದಿಂದಲೇ ಬಂದಿದ್ದರೂ ಹೊರರಾಜ್ಯದವರಾಗುವುದಿಲ್ಲ. ಇದನ್ನು ತಾವೂ ಸಹ ಒಪ್ಪುತ್ತೀರೆಂದುಕೊಳ್ಳುತ್ತೇನೆ. ತಮಗಾದರೋ, ಯಾರು ಯಾವ ರಾಜ್ಯದವರೆನ್ನುವ ವಿಷಯವನ್ನು ಕಲೆಹಾಕುವ ವ್ಯವಧಾನವಿರಲಾರದು. ಹಾಗಿದ್ದರೆ ಈ ವಿಷಯವನ್ನು ತಮ್ಮ ಗಮನಕ್ಕೆ ತಂದವರ್ಯಾರು? ಅದರ ಹಿನ್ನೆಲೆಯನ್ನು ತಾವು ಸರಿಯಾಗಿ ವಿಚಾರಿಸಿದಿರೇ? ಎಂದು ಮುಂತಾದ ಪ್ರಶ್ನೆಗಳೇಳುತ್ತವೆ. ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದಲ್ಲಿ ಈ ಪ್ರಸಂಗವೇಳುತ್ತಿರಲಿಲ್ಲ. ಕನ್ನಡ ಸಂಸ್ಕೃತಿಯ ಪರಿಚಯವಿಲ್ಲದಿರುವವರನ್ನು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ದುಡಿಯದೇ ಇರುವವರನ್ನು, ಒಟ್ಟೂ ಕನ್ನಡ ನಾಡನ್ನು ಪ್ರತಿನಿಧಿಸುವಷ್ಟು ಸಾಂಸ್ಕೃತಿಕರಲ್ಲದ ವ್ಯಕ್ತಿಗಳನ್ನು ರಾಜ್ಯಸಭೆಗೆ ನಿಲ್ಲುವುಸುದರ ವಿರುದ್ಧ ತಮ್ಮ ಹೋರಾಟ ಎಂದುಬಿಟ್ಟಿದ್ದರೆ ಸಾಕಿತ್ತು. ವಿಜಯ್ ಮಲ್ಯರೂ ಖಂಡಿತಕ್ಕೆ ಇದೇ ಸಾಲಿನಲ್ಲಿ ನಿಲ್ಲುವವರು. ಆದರೆ, ತಾವು 'ಹೊರ ರಾಜ್ಯದ ಉದ್ಯಮಿ' ಎಂದಾಗ ತಮ್ಮ ಇತರ ಸರಿಯಾದ ನಿಲುವುಗಳಿಗೂ ಸಂಚಕಾರ ಬಂದೊದಗುತ್ತದೆ ಎನ್ನುವುದು ನನ್ನ ದುಃಖ.

ಎರಡು, ತಾವೆಷ್ಟೇ ಪಕ್ಷೇತರರಿರಲಿ. ದಳದ ಒಂದು ಗುಂಪು ತಮ್ಮ ಪರವಾದ ನಿಲುವು ತೆಗೆದುಕೊಂಡಿರುವುದೂ ಪರವಾಗಿಲ್ಲ. ಆದರೆ, ಆ ಗುಂಪು ಪರೋಕ್ಷ್ಯವಾಗಿ ತಮ್ಮನ್ನು ಅವರ ಅಭ್ಯರ್ಥಿ ಎಂದು ಬಿಂಬಿಸುವುದು ಮತ್ತು, ತಮ್ಮದೇ ಆದ ರಾಜಕೀಯ ಹೋರಾಟಕ್ಕೆ ತಮ್ಮ ಹೋರಾಟವನ್ನು ಬಳಸಿಕೊಳ್ಳದೇ ಇರುವಂತೆ ಮಾಡಲು ತಾವು ತೆಗೆದುಕೊಂಡಿರುವ ಎಚ್ಚರಿಕೆಯ ಕ್ರಮಗಳು ಸಾಕಾಗೋಲ್ಲ ಎನ್ನುವುದು ನನ್ನ ಅಭಿಪ್ರಾಯ. ಈಗ ಕಾಂಗ್ರೆಸ್ ಕೂಡಾ ತಮ್ಮ ಸದಸ್ಯತ್ವವನ್ನು ಅನುಮೋದಿಸಿರುವುದು ಒಳ್ಳೆಯ ಬೆಳವಣಿಗೆ. ಇಲ್ಲದೇ ಹೋಗಿದ್ದಲ್ಲಿ ಈ ಅಪಾಯ ಹೆಚ್ಚಿರುತ್ತಿತ್ತು.

ಮೂರು, ಒಟ್ಟು ಸಾಂಸ್ಕೃತಿಕ ಪ್ರಪಂಚದಲ್ಲಿ ತಮಗಿರುವ ವಿರೋಧಿಗಳು ಗೊತ್ತೇ ಇದೆ. ಕೆಲವರು, ತಾತ್ವಿಕವಾಗಿ ವಿರೋಧಿಗಳಾಗಿದ್ದಾರೆ, ಪರವಾಗಿಲ್ಲ. ಸ್ವತಃ ತಾವೇ, ತಾತ್ವಿಕವಾಗಿ ವಿರೋಧಿಗಳಾಗಿದ್ದರೂ ರಾಮಾಜೋಯಿಸರನ್ನು ಬೆಂಬಲಿಸುತ್ತಿದ್ದೆ ಎಂದಿರುವುದು ನನಗೆ ಅತೀವ ಸಂತಸ ತಂದಿದೆ. ಅನೇಕರು, ಮುಗ್ಧವಾಗಿ ತಮ್ಮ ಬಗ್ಗೆ ಹೆಚ್ಚೇನೂ ತಿಳಿದಿರದಿದ್ದರೂ ಒಟ್ಟೂ ಸಾರ್ವಜನಿಕ ವಲಯದಲ್ಲಿರುವ ಬೇಜವಾಬ್ದಾರಿ ಅಭಿಪ್ರಾಯಗಳಿಂದ ಪ್ರಭಾವಿತರಾಗಿ ತಮ್ಮ ವಿರೋಧಿಗಳಾಗಿದ್ದಾರೆ. ಅದೂ, ಹೋಗಲಿ, ಎನ್ನಬಹುದು. ಅನೇಕರಿಗೆ, ತಮ್ಮ ಬಗ್ಗೆ ಸ್ವಲ್ಪ ವೈಯಕ್ತಿಕವಾದ ವಿರೋಧವೂ ಇದ್ದಂತಿದೆ. ಹೀಗಿರುವಾಗ, ರಾಜ್ಯಸಭಾ ಚುನಾವಣೆಗೆ ಒಂದು ವೈಯಕ್ತಿಕವಾದ ಕಾರಣವಲ್ಲದೇ, ನಾಡು-ನುಡಿಯ ಕಾಳಜಿಗಳಿಂದ ಪ್ರೇರಿತರಾಗಿ, ರಾಜಕೀಯವಾಗಿ ಒಂದು ಅತ್ಯಗತ್ಯವಾಗಿರುವ ತಾತ್ವಿಕ ನಿಲುವೊಂದಕ್ಕೆ ಕನಿಷ್ಠ ನೈತಿಕವಾದ ಜಯವನ್ನು ತರಲು ಹೋರಾಟ ಮಾಡುತ್ತಿರುವ ನೀವು, ಅದಕ್ಕೆ ಅಗತ್ಯವಾದ ಎಚ್ಚರಿಕೆಯನ್ನು ಹೊಂದಿರಲೇಬೇಕಲ್ಲವೇ?

ವಿಷಯವನ್ನು ಮತ್ತಷ್ಟು ವಿವರಿಸುತ್ತೇನೆ. ನೀವು ಕಣಕ್ಕಿಳದ ಕೂಡಲೇ ನಿಮ್ಮ ಪರಿಚಯವೇ ಇಲ್ಲದ ನಾನು, ಈಗ ಚಂಪಾ ಮತ್ತು ದೇಜಗೌ ಏನು ಹೇಳುತ್ತಾರೆ ಎಂದುಕೊಂಡು ನಗುತ್ತಿದ್ದೆನಾದರೂ, ಸ್ವಲ್ಪ ಆತಂಕಗೊಡ್ಡಿದ್ದೆನೂ ಕೂಡಾ. (ಲಂಕೇಶ್-ರನ್ನೂ ಸ್ಮರಿಸಿದೆ ಎನ್ನುವುದು ನಿಜ). ಇಷ್ಟು ಯೋಚಿಸುವುದಕ್ಕೆ, ಯಾವ ಚಾಣಕ್ಯ ನೀತಿಯೂ ಬೇಡ, ಸ್ವಲ್ಪ ಸಾರ್ವಜನಿಕವಾದ ಆಸಕ್ತಿಗಳುಳ್ಳ ಯಾರಿಗೇ ಆದರೂ ಇದು ಹೊಳೆದಿರುತ್ತದೆ. ಅಂಥದ್ದರಲ್ಲಿ, ತಮಗೆ ಇದರ ಕುರಿತು ಕಾಳಜಿಯಿರಬೇಕಾಗಿದ್ದುದು ತಮಗೆ ವೈಯಕ್ತಿಕವಾಗಿ ಅಲ್ಲದಿದ್ದರೂ ತಮ್ಮ ಸಾಂಸ್ಕೃತಿಕ ಹೋರಾಟಕ್ಕೆ ಅಗತ್ಯವಾಗಿತ್ತು. ಅವರೇನೆಂದರೂ, ಈ ಸದ್ಯಕ್ಕೆ ಸುಮ್ಮನಿದ್ದುಬಿಡೋಣ ಎಂದುಕೊಂಡಿರಬಹುದಾಗಿತ್ತು. ಈ ಹಿಂದೆ ಕೂಡಾ ನೀವು ಇಷ್ಟು ಸಂಯಮವನ್ನು ಅನೇಕ ವೇಳೆ ತೋರಿಸಿದ್ದೀರಿ. ಅಂಥದ್ದರಲ್ಲಿ, ಚಂಪಾರನ್ನು ಚೇಳಿಗೆ ಹೋಳಿಸಿ, ದೇಜಗೌ-ರ ವ್ಯಾಧಿಯನ್ನು ನಾಡಿನ ಗಮನಕ್ಕೆ ತರಬೇಕಾದ ಅಗತ್ಯವೇನಿತ್ತು. 'ಈ ಕ್ಷಣದಲ್ಲಿ ನನಗೆ ಒಟ್ಟು ಕನ್ನಡ ನಾಡಿನ ಸಹಕಾರದ ಅಗತ್ಯವಿದೆ. ಆದ್ದರಿಂದ, ಚಂಪಾರನ್ನು ಮತ್ತು ದೇಜಗೌ-ರನ್ನೂ ಸಹಕರಿಸಲು ಪ್ರಾರ್ಥಿಸುತ್ತೇನೆ' ಎಂದುಬಿಟ್ಟಿದ್ದರೆ ನಿಮ್ಮನ್ನು ಸರಿಯಾಗಿ ಅರಿತಿರದ ಸಾಮಾನ್ಯರ ಕಣ್ಣಲ್ಲೂ ದೊಡ್ಡವರಾಗಿಬಿಡುತ್ತಿದ್ದಿರಿ. ದೇಜಗೌ-ರಿಗೂ, ಚಂಪಾರಿಗೂ ನಿಮ್ಮನ್ನು ವಿರೋಧಿಸುವುದು ಕಷ್ಟವಾಗುತ್ತಿತ್ತು. ನಿಮ್ಮನ್ನು ವಿರೋಧಿಸುವ ಯಾರೂ ಸಹ ಈಹೊತ್ತು ನೀವು ತೆಗೆದುಕೊಂಡಿರುವ ನಿಲುವನ್ನು ಸದ್ಯಕ್ಕಾದರೂ ಒಪ್ಪುವಷ್ಟು ಸಾಂಸ್ಕೃತಿಕರು. ಅದನ್ನು ನೀವು ಇತ್ಯಾತ್ಮಕವಾಗಿ ಬಳಸಿಕೊಳ್ಳಬಹುದಿತ್ತು. ಸ್ವಾರ್ಥಕ್ಕಾಗಿಯಲ್ಲ, ನೀವೀಗ ಒಂದು ತತ್ವಕ್ಕೋಸ್ಕರ ನಿಂತಿದ್ದೀರಿ, ಅದರ ಸಲುವಾಗಿಯಾದರೂ.

ಆದರೆ, ಇದ್ದ ಒಂದು ಸುವರ್ಣಾವಕಾಶವನ್ನೂ ಸಹ ಈ ಒಂದು ಸುವರ್ಣ ಮಹೋತ್ಸವದ ವರ್ಷದಲ್ಲಿ ಕಳೆದಿರಿ. ನಿಮ್ಮ ಕಾವ್ಯಾತ್ಮಕವಾದ ಆರೋಪವೇ ನೆಪವಾಗಿ, ಚಂಪಾ, ದೇಜಗೌರಷ್ಟೇ ಅಲ್ಲದೆ ಸುಮ್ಮನಿರಬಹುದಾಗಿದ್ದ ಮತ್ತೆಲ್ಲರೂ ತಮ್ಮ ವಿರುದ್ಧ ಹರಿಹಾಯುವಂತೆ ಮಾಡಿಕೊಂಡಿರಿ. ಕೇವಲ ವೈಯಕ್ತಿಕವಾಗಿ ನಿಮಗಷ್ಟೇ ನಷ್ಟವಾಗಿದ್ದರೂ ನಮಗೆ ದುಃಖವಾಗುತ್ತಿತ್ತು. ಅಂಥದ್ದರಲ್ಲಿ, ಪ್ರಮುಖವಾದ ಕಾರಣವೊಂದಕ್ಕೆ ನಿಂತಿದ್ದು ಆ ಕಾರಣಕ್ಕೂ ಮೋಸವಾಯಿತಲ್ಲ ಎನ್ನುವುದು ನನ್ನಂಥವರ ಅಳಲು.

ಇಷ್ಟಲ್ಲದೆ, ವಚನಗಳು, ಕುವೆಂಪು ಕುರಿತ ತಮ್ಮ ಮಾತಿನಲ್ಲಿ ಹೆಂಡ ಮತ್ತು ಬೈಪ್ರಾಡಕ್ಟ್-ಗಳ ಪ್ರತಿಮೆಯನ್ನು ಬಳಸಿದಾಗ ತಾವು ರಾಜ್ಯಸಭೆಯ ಚುನಾವಣೆಗೆ ನಿಂತಿದ್ದೀರೆನ್ನುವುದೂ, ಆ ಪ್ರತಿಮೆಗಳನ್ನು ಸ್ವಲ್ಪ out of context ಬಳಸಿದರೂ ಅನಾಹುತಕಾರಿಯಾದ ರೀತಿಯಲ್ಲಿ ತಮ್ಮ ವಿರೋಧಿಗಳಿಗೆ ಜಯವಾಗಬಹುದಾದ ಸಾಧ್ಯತೆಯಿರುವುದೂ ತಮ್ಮ ಗಮನಕ್ಕೆ ಬರಲಿಲ್ಲವೇ ಎನ್ನುವುದು ನನಗೆ ಅತ್ಯಾಶ್ಚರ್ಯ ತಂದಿದೆ. ಪ್ರಜಾವಾಣಿಗೆ ಈ ಕುರಿತು ತಾವು ವಿವರಣೆ ಕೊಟ್ಟು ಪತ್ರ ಬರೆದಿರುವುದು ಕಂಡು ನನಗೆ ಸ್ವಲ್ಪ ಸಮಾಧಾನವಾಯಿತು. ಹೀಗೆ ವಿವರಿಸುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದು ತಾವೆಲ್ಲಿ ಸುಮ್ಮನಿದ್ದುಬಿಡುತ್ತೀರೋ ಎಂದುಕೊಂಡಿದ್ದೆ. ಪುಣ್ಯಕ್ಕೆ, ಸ್ಪಷ್ಟನೆ ಕೊಟ್ಟಿದ್ದೀರಿ. ಅದರಲ್ಲಿ, 'ಮಾತಿನ ಉಲ್ಲಾಸಕ್ಕಾಗಿ' ಹೀಗೆ ಹೇಳಿದಿರೆಂದಿದ್ದೀರಿ. ತಾವು ದೊಡ್ಡವರು. ಇನ್ನೊಂದು ಹತ್ತು ವರ್ಷಕ್ಕೆ ಹಿರಿಯರಾಗಿದ್ದರೆ, ತಾವು ನನ್ನ ತಾತನ ವಯಸ್ಸಿನವರೇ. ಅಂಥದ್ದರಲ್ಲಿ ತಮ್ಮನ್ನು ಟೀಕಿಸುವುದಕ್ಕೆ ಬೇಜಾರಾಗುತ್ತೆ. ಆದರೆ, ತಾವು ಯಾವುದನ್ನು 'ಮಾತಿನ ಉಲ್ಲಾಸ' ಎಂದಿದ್ದೀರೋ, ಅದನ್ನು 'ಮಾತಿನ ಚಟ' ಎನ್ನಬಹುದಲ್ಲವೇ?

ನಿಮ್ಮ ನಿರ್ಧಾರದಿಂದ ಶಾಸಕರು ಸ್ವಲ್ಪವಾದರೂ ವಿಚಲಿತರಾಗುವುದು ಸಾಧ್ಯವಿತ್ತು. ನೈತಿಕವಾಗಿ ವಿಚಲಿತರಾಗದೇ ಹೋಗಿದ್ದರೂ, ತಮ್ಮ ವಿರುದ್ಧವಾಗಿ ಮತ ಚಲಾಯಿಸಿದರೆ ಕನಿಷ್ಠ ಸಾರ್ವಜನಿಕವಾಗಿಯಾದರೂ ಅದನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗಬಹುದಾದ ಸಾಧ್ಯತೆಯಿತ್ತು. ಆದರೆ, ಒಟ್ಟು ಸಾಂಸ್ಕೃತಿಕ ಪ್ರಪಂಚದಲ್ಲಿರುವ ವಿಕೃತಿಯಿಂದಾಗಿ ಶಾಸಕರಿಗೆ ತಮ್ಮ ವಿರುದ್ಧವಾಗುವುದು ಸುಲಭವಾಗಿಬಿಟ್ಟಿತು. ಎಂ.ಪಿ.ಪ್ರಕಾಶ್ ಕೂಡಾ ತಮ್ಮನ್ನು ಬೆಂಬಲಿಸದೇ ಪಾರಾಗುವುದು ಸಾಧ್ಯವಾಯಿತು. ನೀವು ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಿದ್ದರೆ ತಮ್ಮ ಸೋಲೂ ಕೂಡಾ ಒಂದು ಗೆಲುವಾಗಿ ಪರಿವರ್ತಿಸುವುದು ಸಾಧ್ಯವಾಗುತ್ತಿತ್ತು.

ಈಗ ಎಲ್ಲವೂ ರಾಡಿಯಾಗಿ ಹೋಗಿದೆ. ರಾಜೀವ್ ಚಂದ್ರಶೇಖರ್-ರನ್ನು 'ಹೊರ ರಾಜ್ಯದವರು' ಎಂದಿರುವುದು ತಮಗೆ ಮುಂದಿನ ದಿನಗಳಲ್ಲಿ ಸಮರ್ಥಿಸುವುದು ಕಷ್ಟವಾಗಬಹುದು. ತಮ್ಮ ಗೆಲುವಂತೂ ಕಷ್ಟದ ವಿಷಯವೇ ಸರಿ. ತಾವು ರಾಜಕೀಯ ಗುಂಪೊಂದರ ಪ್ರಚೋದನೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎನ್ನುವ ಮಿಥ್ಯಾರೋಪವೂ ಮುಂದೆ ತಮ್ಮನ್ನು ಕಾಡಲಿದೆ. ಕಾಂಗ್ರೆಸ್ ತಮಗೆ ಬೆಂಬಲ ಕೊಟ್ಟಿರುವುದು ಸದ್ಯಕ್ಕೆ consolation ಅಷ್ಟೆ.

ಪರಭಾಷಾ ಚಿತ್ರಗಳ ವಿರುದ್ಧವಾದ ಹೋರಾಟದಲ್ಲಿ ಇದೇ ತೆರನಾದ ಅತಿಗೆ ಬಿದ್ದು ಹೋರಾಟಕ್ಕೆ ಸಾಧ್ಯವಾಗಬಹುದಾದ ನೈತಿಕ ಜಯವೂ ಇಲ್ಲದೇ ಹೋಯಿತು. ಎಂ.ಎಸ್.ಸತ್ಯು ಕೂಡಾ ೭೦, ೮೦-ರ ದಶಕದ ರಾಜ್ ಗುಂಪಿನ ವಿರುದ್ಧ ಮಾತನಾಡಿದಾಗ ಇದೇ ಅತಿಗೆ ಹೋಗಿ ಇದ್ದ ಒಂದು ಅವಕಾಶವನ್ನು ಕಳೆದಂತಾಯಿತು. ಈಗ ತಮ್ಮ ಹೋರಾಟ ಅವುಗಳಿಗಿಂತ ಹೆಚ್ಚು ಜೀವಂತವಾಗಿರುವುದಾದರೂ, ಅದೇ ತೆರನಾದ ಅಪಾಯಗಳಿಂದ ಸಂಪೂರ್ಣವಾಗಿ ಕಳಚಿಕೊಳ್ಳಲಾಗಲಿಲ್ಲವೆನ್ನುವುದು ಖೇದದ ಸಂಗತಿ.

ಈಗ ತಮ್ಮ ಸೋಲು ಹೆಚ್ಚು ನಿಶ್ಚಿತ. ನೈತಿಕವಾದ ಗೆಲುವನ್ನೂ ಈಗ claim ಮಾಡುವುದು ಕಷ್ಟ. ಈಗೇನಿದ್ದರೂ ರಾಜೀವ್ ಚಂದ್ರಶೇಖರ್ ಕನ್ನಡ ಸಂಸ್ಕೃತಿಯ ಋಣ ತೀರಿಸುವರೇ ಎನ್ನುವುದನ್ನು ಗಮನಿಸಬೇಕಾಗಿದೆ.

ಒಂದು ಒಳ್ಳೆಯ ಅವಕಾಶ ಕೈತಪ್ಪಿದಂತಾಗಿದೆ.

ಇಷ್ಟಾಗಿ ತಾವು ಗೆದ್ದುಬಿಟ್ಟರೆ, ಎನ್ನುವ ಆಶಾವಾದ ಮನಸ್ಸಿನಲ್ಲಿ ಸದಾ ಇದ್ದೇ ಇರುತ್ತದೆ.

ನಮಸ್ಕಾರಗಳು

(ಕರ್ನಾಟಕದ ಯಾವನೇ ಆದರೂ ಈ ಪತ್ರ ಬರೆಯುವ ಸಾಧ್ಯತೆ ಇರುವುದರಿಂದ ನನ್ನ ಹೆಸರನ್ನೇ ಹಾಕುವುದು ಇಷ್ಟವಿಲ್ಲ)

0 Comments:

Post a Comment

<< Home