ಇವತ್ತಿನ ಕನ್ನಡ ನಾಟಕ - ಒಂದು ಪುಟ್ಟ ಟಿಪ್ಪಣಿ
ಈ ಲೇಖನದ ಉದ್ದೇಶ ನಾಟಕ ವಿಮರ್ಶೆಯಲ್ಲ ಎನ್ನುವುದನ್ನು ನಮ್ರತೆಯಿಂದ ಹೇಳುತ್ತಾ ಶುರು ಮಾಡಬಯಸುತ್ತೇನೆ. ನನ್ನ ಓದು, ಅನುಭವ, ಯೋಗ್ಯತೆ ಮೀರಿ ಮಾತುಗಳಿರಬಹುದುಎನ್ನುವ ಭಯವಿದ್ದರೂ, ತೀವ್ರವಾಗಿ ಅನ್ನಿಸುತ್ತಿರುವುದರಿಂದ ಹೇಳದೇ ಇರಲಾರೆ.
ಇತ್ತೀಚೆಗೆ ನೋಡಿದ ಒಂದು ಕನ್ನಡ ರಂಗ್ರಪಸ್ತತಿ ಈ ಲೇಖನದ ತತ್ಕ್ಷಣದ ಪ್ರೇರಣೆಯಾದರೂ ಅದೇ ತೆರನಾದ ಅನೇಕ ಪ್ರಸ್ತುತಿಗಳನ್ನು ನೋಡಿದಾಗ ಅನ್ನಿಸಿದುದು ತತ್ಕ್ಷಣದ ತೀವ್ರತೆಗೂ ಕಾರಣವಾಗಿದೆ.
ಇತ್ತೀಚೆಗೆ ಕನ್ನಡ ನಾಟಕಗಳನ್ನು ನೋಡುವವರು ಹೆಚ್ಚಾಗಿದ್ದಾರೆ ಮತ್ತು ಕನ್ನಡ ರಂಗಭೂಮಿ ಮತ್ತೆ ಜೀವ ಪಡೆಯುವ, ಪ್ರೇಕ್ಷಕರನ್ನು ಒಳಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ ಎನ್ನುವ ಭಾವ ಮೂಡತೊಡಗಿದೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆಯೇ.ಅನುಮಾನವಿಲ್ಲ. ಇವತ್ತಿನ ನಮ್ಮ ನಟರು, ಕೆಲವಾದರೂ ನಿರ್ದೇಶಕರು, ಬಹಳಷ್ಟು ತಂತ್ರಜ್ಞರು ಖಂಡಿತಾ ಪ್ರತಿಭಾವಂತರಾಗಿದ್ದಾರೆ. ಇವರೆಲ್ಲರನ್ನೂ ಪ್ರೋತ್ಸಾಹಿಸಬೇಕಿದೆ,
ಮತ್ತಷ್ಟು ತೀವ್ರವಾಗಿ ಹುರಿದುಂಬಿಸಬೇಕಿದೆ. ಇವುಗಳಲ್ಲಿ ನೀನಾಸಂ, ರಂಗಾಯಣದಂತಃ ರೆಪರ್ಟರಿಗಳಿದ್ದರೆ, ಮಿಕ್ಕವು ಹಾವ್ಯಾಸಿ ರಂಗತಂಡಗಳಾಗಿವೆ.
ರೆಪರ್ಟರಿಗಳಿಗೊಂದಿಷ್ಟು ಸಾಧ್ಯತೆಗಳಿವೆ, ಹವ್ಯಾಸಿಗಳಿಗಿಲ್ಲದ್ದು. ನಾಟಕದ ಪೂರ್ವಾಭ್ಯಾಸ, ಆಯ್ಕೆ ಕುರಿತಾದ, ಪ್ರಯೋಗಗಳ ಕುರಿತಾದ ಆಳವಾದ ಚಿಂತನೆ ಇತ್ಯಾದಿಗಳು. ಮತ್ತು ಸಮರ್ಥರಾದ ನಿರ್ದೇಶಕರು, ಸಂಘಟಕರು, ಮಾರ್ಗದರ್ಶಕರಿರುವುದರಿಂದ ನೀನಾಸಂ, ರಂಗಾಯಣ, ಸಾಣೇಹಳ್ಳಿ ಶಿವಸಂಚಾರ ತಂಡಗಳು ಪ್ರೇಕ್ಷಕನಿಗೆ ಆಳವಾದ ಅನುಭವದ ಕೊಡುವಂತಃ ಪ್ರಯೋಗಗಳನ್ನು ಮಾಡುವಲ್ಲಿ ಯಶಸ್ವಿಯಾಗಿವೆ.
ಹವ್ಯಾಸಿ ತಂಡಗಳ ಕುರಿತು ಮಾತಿಗೆ ಮೊದಲಾದಾಗ ಇದೇ ಮಾತನ್ನು ಸಾಮಾನ್ಯವಾಗಿ ಹೇಳುವುದು ಕಷ್ಟವಾಗುತ್ತದೆ. ಇವರೆಲ್ಲರೂ ಬೇರೆಡೆ ಉದ್ಯೋಗದಲ್ಲಿರುವವರು. ರಂಗದ ಕುರಿತಾಗಿನ ಅಪರಿಮಿತ ಪ್ರೀತಿ, ವೈಯಕ್ತಿಕ ತುಡಿತ, ಕಳಕಳಿ, ಮಾಧ್ಯಮದ ಸಾಧ್ಯತೆಯ ಕುರಿತ ವಿಶ್ವಾಸ, ಸಾಮಾಜಿಕ, ಕಲಾತ್ಮಕ ಬದ್ಧತೆ ಇತ್ಯಾದಿಗಳಿರುವುದರಿಂದಲೇ ಈ ಜನರು ತಮ್ಮ ಅನೇಕ ಕಷ್ಟಗಳನ್ನು ಮೀರಿ ರಂಗಪ್ರಯೋಗಗಳಿಗೆ ತೊಡಗುತ್ತಾರೆ. ಇವರಲ್ಲಿ ಅನೇಕರು ಬಹಳಷ್ಟು ವರ್ಷಗಳಿಂದ ಸಾಧನೆ ಮಾಡಿದವರಾಗಿ ಪ್ರಯೋಗಗಳ ಕಲಾತ್ಮಕತೆಗೂ ಹೆಸರುವಾಸಿಯಾಗಿದ್ದಾರೆ. ಇವೆಲ್ಲಾ ನಿರ್ವಿವಾದವಾಗಿ ಶ್ಲಾಘನೀಯವಾದ್ದು.
ಆದರೆ ಈ ಸದ್ಯಕ್ಕೆ ನಮ್ಮ ಮುಂದೆ ಒಂದು ಬಿಕ್ಕಟ್ಟಿದೆ. ಹವ್ಯಾಸಿಗಳ ಹೆಚ್ಚಿನ
ಪ್ರಯೋಗಗಳು ೭೦-ರ ದಶಕ ಅಥವ ಅದರ ಹಿಂದೆ ರಚಿತವಾದ ನಾಟಕಗಳಾಗಿವೆ. ಆ ಸಮಯದಲ್ಲಿ ಬರೆದ ನಾಟಕಕಾರನಿಗೆ ತನ್ನ ಕಾಲದ ವೈಯಕ್ತಿಕ ತುರ್ತು ಮತ್ತು ಒಂದು ವಿಶಿಷ್ಟವಾದ ಐತಿಹಾಸಿಕ, ಸಾಂಸ್ಕೃತಿಕ ಸ್ಮೃತಿ - ಇವೆರಡು ವಿಶೇಷವಾದ ರೀತಿಯಲ್ಲಿ ಸಂಗಮವಾಗಿ ಒಂದು ಹೊಸ ನಾಟಕದ ಸೃಷ್ಟಿಗೆ ಕಾರಣವಾಗಿದ್ದವು. ಅದೇ ರೀತಿ ಅಂದಿನ ನಟ, ನಿರ್ದೇಶಕರೂ ಸಹ ೭೦-ರ ದಶಕದ ಒಂದು ವಿಶೇಷವಾದ ಸಾಮಾಜಿಕ ಪರಿಸರದ ಪ್ರಭಾವದಿಂದ ಈ ನಾಟಕಗಳನ್ನು ನಾಟಕಕಾರನ ಆಶಯಕ್ಕೆ ತಕ್ಕುದಾದ ರೀತಿಯಲ್ಲೇ ಬಳಸಿಕೊಂಡು ಅನೇಕ ವರ್ಷಗಳು ಯಾರೂ ಮರೆಯಲಾರದಂತಹ ರಂಗಪ್ರಯೋಗ ಮಾದರಿಗಳನ್ನು ಸೃಷ್ಟಿಸಿದರು. ಆ ಪ್ರಯೋಗಗಳ ಯಶಸ್ಸು ಎಷ್ಟಿತ್ತೆಂದರೆ ಪ್ರಾಯಶಃ ಇವತ್ತು ಅದೇ ಒಂದು ದೊಡ್ಡ ತಡೆಗೋಡೆಯಾಗಿಬಿಟ್ಟಿದೆಯೇನೋ ಇಂದಿನ ಹವ್ಯಾಸಿಗಳ ಬೆಳವಣಿಗೆಗೆ.
ಸುಮಾರು ೩ ದಶಕಗಳ ನಂತರ ಕೂಡಾ ಅದೇ ಮಾದರಿಯನ್ನಿಟ್ಟುಕೊಂಡು (ಕೆಲವು ವೇಳೆ ಹಿಂದಿನ ನಿರ್ದೇಶಕರ ಹೆಸರನ್ನೇ ನಮ್ರತೆಯಿಂದ ಮುಂದುವರೆಸುತ್ತಾ) ಇವತ್ತು ನಡೆಯುತ್ತಿರುವ ರಂಗಪ್ರಯೋಗಗಳ ವಸ್ತುಸ್ಥಿತಿ ಏನು ಎಂದು ಪ್ರಶ್ನಿಸಿಕೊಂಡಾಗಲೆಲ್ಲಾ ಇದೇನು ಹೀಗಾಗುತ್ತಿದೆ ಎನ್ನಿಸುತ್ತಿದೆ. ನಟ/ನಿರ್ದೇಶಕ/ತಂಡಗಳ ಪ್ರಾಮಾಣಿಕತೆಯಂತೂ ನನ್ನ ಮಟ್ಟಿಗೆ ಖಚಿತ. ಅನುಮಾನವಿಲ್ಲ. ಆದರೆ, ಒಂದು ನಾಟಕದ ರಂಗಪ್ರಸ್ತುತಿಗೆ ಪೂರ್ವಭಾವಿಯಾಗಿ ನಡೆಯಬೇಕಾದ ಪ್ರಕ್ರಿಯೆಗಳೇನು, ಅದರಲ್ಲೂ ಪ್ರಯೋಗದ ಯಶಸ್ವೀ ಮಾದರಿಗಳು
ನಮ್ಮ ಮುಂದೆ ದುತ್ತನೆ ಬೃಹಾದಾಕಾರ ತಳೆದು ನಿಂತು ಕಾಡುತ್ತಿರುವಾಗ (ನಮ್ಮ ಸೃಜನಶೀಲತೆಯನ್ನೇ ಪ್ರಶ್ನಿಸುವಂತೆ)? ಒಂದು ನಾಟಕವನ್ನು ನಾವೇಕೆ ರಂಗಪ್ರಸ್ತುತಿ ಪಡಿಸಬೇಕು?
'ಪ್ರಸ್ತುತ' ಪಡಿಸುವುದೆಂದರೇನು? ಹಿಂದಿನ ನಟ/ನಿರ್ದೇಶಕ/ನಾಟಕಕಾರನ ಸ್ಮೃತಿ-ಯ ರೂಪಾಂತರವಿಲ್ಲದೇ ಇವತ್ತಿನ ರಂಗಪ್ರಸ್ತುತಿ ಸಾಧ್ಯವೇ? ಇವತ್ತಿನ ನಟ/ನಿರ್ದೇಶಕರು ಪರಂಪರೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದ ರೀತಿಯೇನು? ಇದಕ್ಕೆಲ್ಲಾ ಎಷ್ಟರಮಟ್ಟಿಗಿನ ಅಧ್ಯಯನದ ಅವಶ್ಯಕತೆಯಿದೆ? - ಇವೇ ಮೊದಲಾದ ಮುಖ್ಯ ಪ್ರಶ್ನೆಗಳನ್ನು ನಮ್ಮ ಹವ್ಯಾಸಿ ತಂಡಗಳು ಕೇಳಿಕೊಳ್ಳುತ್ತಿವೆಯೇ?
ಕಂಬಾರ, ಕಾರ್ನಾಡ್, ಜಿ.ಬಿ.ಜೋಶಿ ಮುಂತಾದವರ ದೊಡ್ಡ ಹೆಸರುಗಳೆಂದು ಅವರ ನಾಟಕಗಳನ್ನು ನೋಡಲು ಜನ ಬರುತ್ತಾರ್‍ಎ. ಆದರೆ ಅವುಗಳನ್ನು ಸರಿಯಾಗಿ ಅಧ್ಯಯನ ಮಾಡದೇ ಹೋದರೆ, ಇತಿಹಾಸದ ಜ್ಞಾನವಿಲ್ಲದೇ ಹೋದರೆ ರಂಗಪ್ರಯೋಗಗಳು ಉತ್ಸವಗಾಳಾಗುವ ಸಾಧ್ಯತೆ ಇಂದು ನಮ್ಮ ಕಣ್ಣ ಮುಂದಿದೆ. ಇವತ್ತಿನ ಪ್ರೇಕ್ಷಕರಂತೂ ಒಂದು ಚಿಕ್ಕ 'ಕಾಮಿಡಿ' ಎನ್ನಿಸುವ ಸನ್ನಿವೇಶಕ್ಕೂ ಬೃಹತ್-ನಗೆಗಳನ್ನು ತಯಾರಿಸಿ ರಂಗಮಂದಿರವನ್ನು
ತುಂಬಿಬಿಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ತಲ್ಲಣಗೊಳಿಸಬೇಕಾದ, ಆಲೋಚನೆಗೆ ಪ್ರೇರೇಪಿಸಬೇಕಾದ, ಅನುಭವಗಳ ಪರಾಮರ್ಶೆಗೆ ತೊಡಗಿಸಬೇಕಾದ ನಾಟಕಗಳು 'ಮಜ' ಮಾಡುತ್ತಾ ವಿನಾ ಕಾರಣದ ಸಂಭ್ರಮಕ್ಕೆ ಇಳಿದುಬಿಡಲು ಅವಕಾಶ ನೀಡುತ್ತದೆಯೆಂದರೆ ಅದಕ್ಕಿಂತಾ ದುರಂತ ಮತ್ತೊಂದಿಲ್ಲ. ನಾಟಕಗಳಲ್ಲಿ ಹಾಸ್ಯ, ವಿಜೃಂಭಣೆ ಈ ಅಂಶಗಳು ಸಮೃದ್ಧವಾಗಿದ್ದಷ್ಟೂ ಎಲ್ಲಾ ರೀತಿಯ ಅಪಾಯಗಳು ರಂಗಪ್ರಸ್ತುತಿಯನ್ನು ಪೂರ್ವಪಕ್ಷದಲ್ಲೇ ಆವರಿಸಿಕೊಂಡುಬಿಟ್ಟಿರುತ್ತವೆ. ರಂಗಪ್ರಯೋಗ ಯಶಸ್ವಿ ಎನ್ನಿಸುತ್ತಿದೆ ಎನ್ನುವಂತಾದರಂತೂ ಮತ್ತೂ ಎಚ್ಚರಿಕೆಯ ಅವಶ್ಯಕತೆಯಿದೆ.
ಇದರಲ್ಲೆಲ್ಲಾ ಪ್ರೇಕ್ಷಕ ಮಹಾಶಯನ ಅಜ್ಞಾನವೇ ಹೆಚ್ಚಿನ ಪಾತ್ರ ವಹಿಸಿರಬಹುದು. ಅಂತಲ್ಲಿ ರಂಗತಂಡಗಳ ಜವಾಬ್ದಾರಿ ಮತ್ತೂ ಹೆಚ್ಚಿನದ್ದಾಗುತ್ತದೆ. ಹಳೆಯದನ್ನು ಕಷ್ಟಪಟ್ಟು ಮರು-ಸೃಷ್ಟಿಸಿಕೊಂಡರೆ, ಪ್ರೇಕ್ಷಕನಿಗೂ ಸುಲಭದ ದಾರಿಗಳಿರುವುದಿಲ್ಲ. ಇಲ್ಲವಾದರೆ ಜಡ್ಡುಗಟ್ಟಿದ ರಂಗಪ್ರಯೋಗಗಳು ಸಾಂಸ್ಕೃತಿಕವಾಗಿ ಮತ್ತೇನನ್ನೂ ಮಾಡಲಾರವು. ಹೀಗೆಂದ ಮಾತ್ರಕ್ಕೆ ನಾವೀನ್ಯದ ಹೆಸರಲ್ಲಿ ಬೇಜವಾಬ್ದಾರಿತನದಿಂದ ಏನು ಬೇಕಾದರೂ ಮಾಡಬಹುದು ಎಂದೇನೂ ಅಲ್ಲ. ಪುಣ್ಯವಶಾತ್ ಕನ್ನಡ ರಂಗಭೂಮಿಯಲ್ಲಿ ಅಷ್ಟೊಂದು ಬೇಜವಾಬ್ದಾರಿ ಇಲ್ಲವೆಂದೆನ್ನಿಸುತ್ತದೆ. ಆದರೆ ಹಿರಿಯರು ಮಾಡಿದ್ದನ್ನು ಮೀರದೇ ಹೋಗುವ ಮಡಿವಂತಿಕೆಯೂ ಒಳ್ಳೆಯದಲ್ಲ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಮೂರು ರಂಗಪ್ರಯೋಗಗಳೆಂದರೆ
ನೀನಾಸಂ-ನ 'ಪಾತರಗಿತ್ತಿ ಪಕ್ಕ', ಸಾಣೇಹಳ್ಳಿ ಶಿವಸಂಚಾರದವರ 'ಬೆರಳ್-ಗೆ ಕೊರಳ್' ಮತ್ತು ರಂಗಾಯಣದ 'ಮಾಯಾಸೀತ ಪ್ರಸಂಗ'. ಇವೆಲ್ಲಾ ರೆಪರ್ಟರಿಗಳಿಂದಲೇ ಎನ್ನುವುದು ಕಾಕತಾಳೀಯವಲ್ಲ. ಹವ್ಯಾಸಿ ತಂಡಗಳು ಪ್ರಸ್ತುತಪಡಿಸಿದ್ದರಲ್ಲಿ ಚೆನ್ನಾಗಿದ್ದವೆಂದರೆ ಕೃಷ್ಣಮೂರ್ತಿ ಕವತ್ತಾರ್-ರ ಒಂದು ಮಹಾಭಾರತ ಆಧಾರಿತ ಪ್ರಸಂಗ ಹೆಸರು ನೆನಪಿಗೆ ಬರುತ್ತಿಲ್ಲ. ಪ್ರಮೋದ್ ಶಿಗ್ಗಾಂವ್-ರು ಪ್ರಸ್ತುತಪಡಿಸಿದ ಸಂಸರ ನಾಟಕವೊಂದು ಸಹ ಒಳ್ಳೆಯ ಕಲ್ಪನಾಶಕ್ತಿಯುಳ್ಳದ್ದಾಗಿತ್ತು (ಆ ದಿನ ಕಿ.ರಂ.ನಾಗರಾಜ್ ತಮ್ಮ ಮಾತುಗಳಿಂದ ಪ್ರಸ್ತುತಿಯನ್ನು ಮತ್ತಷ್ಟೆತ್ತರಕ್ಕೇರಿಸಿಬಿಟ್ಟರು). ಸಿದ್ಧ ಮಾದರಿಯ ಪ್ರಸ್ತುತಿಯ ನಾಟಕಗಳ ಕುರಿತು ಹೇಳುವುದಾದರೆ ಒಮ್ಮೆ ಮಾತ್ರ 'ಸತ್ತವರ ನೆರಳು' ಸ್ವಲ್ಪ ಪ್ರಭಾವ ಬೀರಿತು, ಅದೂ ಕೂಡಾ ನಾಟಕದ ಹರಿತವಾದ ಸಂಭಾಷಣೆಯಿಂದ.
ನಮ್ಮೆಲ್ಲಾ ಹವ್ಯಾಸಿ ತಂಡಗಳು ಈ ಕಡೆಗೆ ಗಮನ ಹರಿಸಬೇಕು. ಏನೇ ಆದರೂ ನಾಟಾಕ ನೋಡಿಯೇ ತೀರುತ್ತೇನೆ ಎನ್ನುವುದರಿಂದ ಬರುವಾ ಸಾಂಸ್ಕೃತಿಕ ಧೈರ್ಯ ನನ್ನಿಂದ ಇದನ್ನು ಬರೆಯಿಸಿದೆ. ಇಷ್ಟೆಲ್ಲಾ ಆದರೂ ಅಂತಹುದೇ ಮತ್ತೊಂದು ನಾಟಕದ ಪ್ರಸ್ತುತಿಯಾದರೆ
ನೋಡುವುದಕ್ಕೆ ಹೋಗಿಯೇ ತೀರುತ್ತೇನೆ ಎನ್ನುವುದರಿಂದಲೂ ಈ ಧೈರ್ಯ ಬರುತ್ತದೆ.
2 Comments:
ಶಿವು
ಸಾಮಾನ್ಯ ಸಾಹಿತ್ಯ ಸೃಷ್ಟಿಗಿಂತ ನಾಟಕದ ಸೃಷ್ಟಿಯ ಸೃಜನಶೀಲ ಪ್ರಕ್ರಿಯ ಭಿನ್ನವಾದದ್ದು ಅಂತ ನನ್ನ ಅನ್ನಿಸಿಕೆ. ಹೀಗಾಗಿ ಬರಹಗಾರರಿಗೆ ಸಹಜವಾಗಿ ಒಗ್ಗುವ ಕಥೆ ಕಾದಂಬರಿ ಕವಿತೆಗಳಂತೆ ನಾಟಕಗಳು ಸಹಜವಾಗಿ ಒಗ್ಗುವುದಿಲ್ಲ. ಕನ್ನಡದಲ್ಲಿ ನಾಟಕಗಳನ್ನು ರಚಿಸಿದವರನ್ನು ನೋಡಿದರೆ ನಿಮಗೆ ಹೆಚ್ಚಿನಂಶ ಕಾಣುವುದು ಮೂಲತಃ ಇನ್ನೇನೊ [ಕಥೆ, ಕಾದಂಬರಿ] ಬರೆಯುವ ಪಾರ್ಟ್ ಟೈಮ್ ನಾಟಕ ಕಾರರು [ಲಂಕೇಶ್, ಮಾಸ್ತಿ, ಜಯಂತ್, ಕುವೆಂಪು]. ಇಲ್ಲವೇ ದೃಶ್ಯ ಮಾಧ್ಯಮದಲ್ಲಿ ಇತರೆ ವಿಭಾಗದಲ್ಲೂ ತೊಡಗಿಸಿಕೊಂಡಿರುವ ಸೃಜನಶೀಲರು [ಕಾರ್ನಾಡ್, ಸುಬ್ಬಣ್ಣ, ಅಕ್ಷರ, ಪ್ರಸನ್ನ]. ಇದ್ದುದರಲ್ಲಿ ನಾಟಕವನ್ನೇ ಗಂಭೀರವಾಗಿ ಬರೆದ ಸಾಹಿತಿ ಅಂದರೆ ಈಚಿನವರಲ್ಲಿ ಶಿವಪ್ರಕಾಶ್ ಮಾತ್ರವಿರಬಹುದು. ಅವರೂ ಕೂಡ ಸಿ.ಜಿ.ಕೆ ಇಲ್ಲದಿದ್ದರೆ ಎಷ್ಟರ ಮಟ್ಟಿಗೆ ಬರೆಯುತ್ತಿದ್ದರು ಅನ್ನುವ ಅನುಮಾನ ನನಗಿದೆ.
ಹೀಗಾಗಿ ನಾಟಕ ಪ್ರಯೋಗಕ್ಕೆ ಕಚ್ಚಾವಸ್ತು ಇಲ್ಲದಾಗಿತ್ತು. ಈಗ ನಾಟಕರಂಗಕ್ಕೆ ಪುನಶ್ಚೇತನ ಬಂದಿದೆ ಅನ್ನುತ್ತಿದ್ದೀರಿ. ಅದು ನಿಜವೇ ಆದರೆ, ಕಚ್ಚಾವಸ್ತು ಬರುತ್ತದೆ. ಹೊಸ ನಾಟಕ ಗಳು ಬರಲು ಪ್ರಯೋಗದ ಗ್ಯಾರೆಂಟಿ ಒಂದು ಆಮಿಷ. ಸ್ವಲ್ಪ ಕಾದಲ್ಲಿ ಹಾಗೂ ಈಗ ಪ್ರಯೋಗ ಮಾಡುತ್ತಿರುವವರು ಹೊಸ ನಾಟಕಗಳನ್ನು ಬರೆಸಬೇಕೆಂದು ಆಸಕ್ತಿ ತೋರಿದಲ್ಲಿ ಇದು ಆಗಬಹುದು. ನೀನಾಸಂನಂತಹ ರೆಪರ್ಟರಿಗಳಿಂದು ಉತ್ತಮ ನಾಟಕಗಳು ಬರುತ್ತಿರುವುದು, ಪ್ರತಿವರ್ಷ ಅವರು ಹೊಸ ನಾಟಕಗಳನ್ನು ಪ್ರಯೋಗ ಮಾಡಬೇಕೆಂಬ ತುರ್ತಿನಿಂದ.
ಒಟ್ಟಾರೆ, ಸಾಹಿತ್ಯ ರಚನೆ ಖಾಸಗೀತನದಲ್ಲಿ ನಡೆವ ಪ್ರಕ್ರಿಯೆ. ನಾಟಕ ರಚನೆ ಮಾತ್ರ ಸ್ವಲ್ಪ ಟೀಂ ವರ್ಕ್. ಜೊತೆಕೆ ನಾಟಕಕ್ಕೆ ಸಾಹಿತ್ಯದಲ್ಲಿ ಇದ್ದಷ್ಟು ಸೃಜನಶೀಲ ಇಮೇಜ್ ಇಲ್ಲ ಅಂತ ನನ್ನ ಅನುಮಾನ. ಇದಕ್ಕೆ ಕಾರಣ ಜನ ನಾಟಕವನ್ನು ಓದುವ ಮಾಧ್ಯಮ ಅಂತ ಭಾವಿಸದೇ ನೋಡುವ ಮಾಧ್ಯಮ ಅಂತ ಭಾವಿಸುವುದೇ ಆಗಿರಬಹುದು. ಆದರೆ, ನಾಟಕ ನೋಡಲು ಜನ ಬರುತ್ತಿದ್ದಾರೆಂದರೆ, ಅದು ಒಳ್ಳೆಯ ಲಕ್ಷಣವೇ. ಅದರಿಂದ ಹೊಸ ನಾಟಕಗಳು ಖಂಡಿತ ಬರುತ್ತವೆ. ಕಾದುನೋಡಿ..
ಈ ಲೇಖನವನ್ನು ಉದಯವಾಣಿ ಪತ್ರಿಕೆಯ ಭಾನುವಾರದ ವಿಶೇಷ ಪುರವಣಿಯಲ್ಲಿ ಪ್ರಕಟಿಸಿದ್ದಾರೆ. ಅವರಿಗೆ ಧನ್ಯವಾದಗಳು.
Post a Comment
<< Home