ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Tuesday, January 17, 2006

ಬರೆಯುವುದಕ್ಕೆ ತೊಡಗುವ ಮುನ್ನ

ಸ್ವಂತವಾದ ಒಂದು ಬ್ಲಾಗ್ ಶುರುಮಾಡಬೇಕೆನ್ನಿಸಿ ಅನೇಕ ದಿನಗಳಾದರೂ, ಇದು ಏಕೆ ಬೇಕು ಎನ್ನುವುದು ಇತ್ಯರ್ಥ-ಗೊಳ್ಳದೆ ಹಾಗೆಯೇ ಉಳಿದಿತ್ತು. ಈಗಲಾದರೂ ಇದು ಹೇಗೆ ಮುಂದುವರೆಯುತ್ತದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಮನಸ್ಸಿಗೆ ಬಂದದ್ದನ್ನೆಲ್ಲಾ ಹಾಕಿಕೊಳ್ಳುತ್ತಾ ಇದು ಹೇಗೆ ಬೆಳೆಯಬಹುದು ಎಂದು ಆಸಕ್ತಿಕರವಾಗಿ ನೋಡುವುದೇ ಸದ್ಯಕ್ಕೆ ನನ್ನಿಂದ ಸಾಧ್ಯ. ಓದಿದುದರ ಬಗ್ಗೆ, ಕೇಳಿದುದರ ಬಗ್ಗೆ, ಬೇಕೆನ್ನಿಸಿದುದರ ಬಗ್ಗೆ, ಬೇಡವಾದುದರ ಬಗ್ಗೆ, ನಾನೊಬ್ಬನಿದ್ದೇನೆ ಎನ್ನುವ ಅಹಂಕಾರದ ನೆಲೆಯಲ್ಲಿನ ಅನಿಸಿಕೆಗಳು ಇವೇ ಮುಂತಾದ ಅನೇಕವನ್ನು ಈ ತಾಣದಲ್ಲಿ ಹಾಕಿಕೊಳ್ಳೋಣವೆಂದುಕೊಂಡಿದ್ದೇನೆ.

ಇದಕ್ಕೆ ನಾನು ಸೂಚಿಸಿರುವ ಹೆಸರಾದರೂ ತುಂಬಾ ತಿಕ್ಕಲು ಎಂದೆನ್ನಿಸದೇ ಇರದು. ಆದರೂ, ಸ್ವಲ್ಪ ಪ್ರಾಮಾಣಿಕವಾಗೇ ಈ ಹೆಸರನ್ನು ಸೂಚಿಸಿದ್ದೇನೆ. ನಿಜಕ್ಕೂ, ನಾನಿಲ್ಲಿ ಬರೆಯಬಹುದಾದ್ದು ಮೇಲ್ನೋಟಕ್ಕೆ ಅನಿಸಿಕೆಗಳೆಂದೆನ್ನಿಸಿದರೂ, ಅವೆಲ್ಲವೂ ನನ್ನ ಅನುಮಾನಗಳೇ ಆಗಿರುತ್ತವೆ. ಈ ಸದ್ಯದ ಸ್ಥಾಯೀ ಭಾವ ಅನುಮಾನ ಮತ್ತು ವಿಷಾದಗಳೇ ಎನ್ನುವುದು ನನ್ನ ಅನುಮಾನ. ಈ ಇಂತಹ ಅನುಮಾನಗಳ ಬಗ್ಗೆ ನಮ್ಮ ಖಚಿತವಾದ, ಕಾಲದ ಅನುಮೋದನೆ ಇರುವ ಅಭಿಪ್ರಾಯಗಳಷ್ಟೇ ಭರವಸೆ ತಾಳುವುದು ಕೆಲ ಹಿರಿಯರಿಂದ ಸಾಧ್ಯವಾಗಿದೆ. ಅವರಿಗೆ ಈ ನನ್ನ ಬ್ಲಾಗ್ ಸಮರ್ಪಿತವಾಗಿದೆ. ಅಂತಹ ಹಿರಿಯರನ್ನು ನೆನೆಯತ್ತಾ ಈ ಒಂದು ಪದ್ಯ....

ಊರ ಬಸ್ಸ್-ಸ್ಟ್ಯಾಂಡಿನ ಬಳಿ ನಿಂತು
ಸರಿ ಕಂಡವರನ್ನು
'ಬನ್ನಿ, ಬನ್ನಿ
ಈಗ ಬಂದಿರಾ
ಯಾವ ಊರು ಏನು ಎತ್ತ
ಹೇಗೆ ನಿಮ್ಮಲ್ಲಿ ಮಳೆ ಬೆಳೆ
ಊಟವಾಯಿತೆ, ಸೌಕರ್ಯವೇ
ಕೂಡಿ ಮಾತನಾಡೋಣ
ಇದು ನಮ್ಮಲ್ಲಿ ಹೀಗೆ
ನಿಮ್ಮಲ್ಲಿ ಹೇಗೆ?
ಅದೋ ಮುಂದಿನೂರಿಗೆ ದಾರಿ
ಮತ್ತೆ ಬನ್ನಿ ನಮ್ಮೂರಿಗೆ
ಆಗಾಗ ಬರುತ್ತಿರಿ'
ಎಂದು ಇಷ್ಟೆಲ್ಲವನ್ನೂ
ಒಂದು ಮಾತನಾಡದೆಯೇ
ಮೌನದಲ್ಲೇ ಆಡಿದರಲ್ಲಾ!

ಅಲ್ಲೆ ಅಲ್ಲೆ ಇದ್ದರಂತೆ
ಆಗೊಮ್ಮೆ ಈಗೊಮ್ಮೆ ಮಾತ್ರ
ಕಣ್ಣಿಗೆ ಕಂಡರೂ
ಅದ್ಯಾವ ಬಟ್ಟೆ ಉಟ್ಟಿದ್ದರೋ
ಯಾರ ಬಳಿ ಏನೆಂದರೋ
ಏನೋಪ್ಪ ನೆನಪಿಗೇ ಬರುತ್ತಿಲ್ಲ
ಆದರೆ ಸದಾ ಎಲ್ಲೆಡೆ
ಗೋಚರಿಸುತ್ತಲಿದ್ದಿರಲ್ಲಾ

ಮೇಲಿನೇದುಸಿರಂತೆ
ಉಸಿರು ನಿಂತಾಗಲೇ ಗೊತ್ತಾದ್ದು
ಪರವಾಗಿಲ್ಲ ಬಿಡಿ
ಇದ್ದಾಗ ಒಳ ಉಸಿರು ಮಾತ್ರ
ಆಳ ಸರಾಗ
ಇದು ಹಠಯೋಗವಲ್ಲ
ಪ್ರೀತಿ, ಯೋಚನೆ, ಧ್ಯಾನದಿಂದಾದ
ಸಹಜ ಪ್ರಾಣಾಯಾಮ
ಪ್ರತಿ ಉಸಿರಿಗೂ ತಲುಪಿದ್ದು ತಡವಿದ್ದು
ಪ್ರತಿ ಅಣು ಅಣುವನ್ನೂ

ಊರ ಮಣ್ಣಿನಲ್ಲಿ ಗಟ್ಟಿ ಬೇರೂರಿ
ಬೆಳೆದೆ ಅಡಿಕೆ ಮರದ
ವೀಳ್ಯದ ಮೆಲ್ಲುವಿಕೆಯಿಂದ
ಒಳಗಣ್ಣು ಪ್ರಖರ
ನೂರಾರು ವರ್ಷಗಳ ದಿವ್ಯದೃಷ್ಟಿ
ಮಣ್ಣಿನಲಿ ಕಾಲು ಹೂತುಹೋಗದೇ
ಬಿರು-ಸುಂಟರ-ಗಾಳಿಗೂ ಹಾರದೇ
ಸಂಕಲ್ಪಿಸಿದ ಸೃಜಿಸಿದ
ಯಜ್ಞಗಳಂತೂ ವರುಷಾನುಗಟ್ಟಲೆ
ಎಲ್ಲರಿಂದ ಎಲ್ಲರಿಗಾಗಿ ಎಲ್ಲರ ಯಜ್ಞ
ನೆರೆದ ಮುನಿ, ಋಷಿ, ದೇವರು
ದೆವ್ವ, ಭೂತ, ಪಿಷಾಚಿಗಳೂ
ಬಂದದ್ದು ಮಂತ್ರಶಕ್ತಿಯಿಂದಲ್ಲ
ಬೆಳಕಿನೆಡೆ ಮುಖಮಾಡಿ ಪ್ರೀತಿಯಿಂದ
ಕುವೆಂಪು ಮಾಸ್ತಿ ಕಾರಂತ ಬೇಂದ್ರ
ಅಷ್ಟೇ ಅಲ್ಲ
ಯಾರ್ಯಾರನ್ನೋ ನೋಡಲಿಲ್ಲ ಎನ್ನುವ ದುಃಖ
ಸ್ವಲ್ಪವಾದರೂ ಕಡಿಮೆಯಾಯಿತಲ್ಲ

ಮಾತುಬೆಳ್ಳಿ ಮೌನ ಬಂಗಾರ
ಮೌನದಿಂದಲೇ ಹೊರಟು
ಮೌನಕ್ಕೇ ಹಿಂದಿರುಗಿ
ಒಮ್ಮೆಯಾದರೂ ಮೌನವನ್ನು ಹದಗೆಡಿಸದೇ
ಹಿರಣ್ಯಗರ್ಭದ ಮಡಿಲಾಳದಿಂದೆಂಬಂತೆ
ನೀವಾಡಿದ ಮಾತುಗಳು
ನನ್ನನ್ನು ಮೌನಿಯಾಗಿಸಿದೆ
ಮನೋಬುಧ್ಯಹಂಕಾರ ಚಿತ್ತಗಳಷ್ಟೇ ಅಲ್ಲದೆ
ನಾಲಗೆ, ಹೃದಯ, ಕೈ, ಕಾಲು, ಲೇಖನಿಗಳ
ಕೂಡಿಸುವ ಹೊಸದೊಂದು ಬಳ್ಳಿಯನ್ನು ಸೃಷ್ಟಿಸಿದೆ
ಬರಿ ಆಲೋಚನೆಗಳಷ್ಟೇ ಅಲ್ಲ
ನನ್ನ ಅನುಮಾನಗಳ ಕುರಿತೂ
ಭರವಸೆಯಿಡಬಹುದೆನ್ನುವ
ಆಸೆ ಮೂಡಿದೆ

ದೂರದಿಂದಲೇ ಗುರುವಾದ ನೀವು ದ್ರೋಣರಲ್ಲ!
ಅಲ್ಲವೇ ಅಲ್ಲ
ಸೊರಗಿದ ಬೆರಳುಗಳಿಗೂ ಕಸುವುದುಂಬಿದಿರಲ್ಲ!!
ಹತ್ತುಬೆಟ್ಟಿದ್ದಲ್ಲಿ ಮತ್ತೊಂದನ್ನೂ ಕೊಟ್ಟಿರಲ್ಲ!!!

3 Comments:

At 4:24 AM, Blogger Sudarshan said...

subbaNNa avara low mimetic vyaktitvavannu takkudaada low mimetic dhwaniyalli sariyaagi grahisiddeeri. abhinaMdanegaLu.

 
At 1:57 PM, Blogger Unknown said...

ಇದು ಕೊಂಚ ನಿಧಾನವೇನೋ, ಆದರೂ, ಬ್ಲಾಗ್ ಜಗತ್ತಿಗೆ ಸ್ವಾಗತ.
ನಿಮ್ಮ ಅನಿಸಿಕೆಗಳನ್ನು ಸೃಜನಕನ್ನಡಿಗ ಬ್ಲಾಗಿನಲ್ಲಿ ಕಂಡು ಇಲ್ಲಿಗೆ ಬಂದೆ.

ನನ್ನ ಮನಸ್ಸಿನಲ್ಲಿದ್ದದ್ದನ್ನು ಚಾಚೂತಪ್ಪದೇ ನೀವೇ ಹೇಳಿದಿರಿ ಅಲ್ಲಿ.ನಮ್ಮ ಕಾಲದವರಿಗೆ ೬೦-೭೦ನೇ ದಶಕದ ಸಂವೇದನಗಳು ತೀರಾ ಮುಖ್ಯವೆಂದೇ ನನ್ನ ಅನಿಸಿಕೆ.
ಕೇವಲ ಕಲೆ-ಸಾಹಿತ್ಯಕ್ಕೆ ಸೀಮಿತವಲ್ಲ, ದೈನಂದಿಕ ಜೀವನದ ಆಗುಹೋಗುಗಳನ್ನು ನೋಡುವ ರೀತಿ, ದೇಶದ ಆರ್ಥಿಕಸ್ಥಿತಿ, ಅದರಲ್ಲಿ ನಮ್ಮ ಪಾಲು, ಹೊಣೆ ಇತ್ಯಾದಿಗಳೆಲ್ಲವಕ್ಕೂ ಆಗಿನ ಕಾಲದ ಯೋಚನೆಗಳು ಒಂದು ಹೊಸದೇ ಆಯಾಮ ತರುತ್ತದೆ, ಮತ್ತು ಈ ಆಯಾಮಗಳ ಅರಿವು ದೇಶವನ್ನು ಮುಂದೆಕೊಂಡೊಯ್ಯುವುದಕ್ಕೆ ಅಗತ್ಯ ಅಂತ ನನ್ನ ನಂಬಿಕೆ.. ತುಂಬಾ ಖುಶಿಯಾಯಿತು ನಿಮ್ಮ ಬ್ಲಾಗ್ ನೋಡಿ.

ಶ್ಯಾಮ್ ಕಶ್ಯಪ್

 
At 2:38 PM, Blogger Madhu said...

ಇದು ಹುಡುಕು ನೋಡಿ
http://www.yanthram.com/kn/

 

Post a Comment

<< Home