ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, February 05, 2006

ಮಣ್ಣ ಮನೆ ಕಲ್ಲು ಗುಡಿ




ಈ ಬಾರಿಯ ನಾನು ಗದ್ಯದಲ್ಲಿ ಏನೊಂದನ್ನೂ ಬರೆಯದೇ ಕೇವಲ ಪದ್ಯದಲ್ಲಿ ಪ್ರಸಕತಕ್ಕೆ ಪ್ರತಿಕ್ರಯಿಸಲು ತೀರ್ಮಾನಿಸಿದ್ದೇನೆ.

ಮಣ್ಣ ನೆಲವ ಉತ್ತು ಬಿತ್ತು
ತೋಡಿ ಪಡೆದು ನೀರು ಅನ್ನ
ಹಳ್ಳ ಕಡೆದು ಪಾಯ ಮಾಡಿ
ಬಗೆದು ಗೋಡೆ ಸೂರು ಕಟ್ಟಿ
ಸಗಣಿ ಬಳಿದು ಸ್ವಚ್ಛಗೊಳಿಸಿ
ಬರಿಗಾಲಿನ ನಡಿಗೆಯಲ್ಲೆ
ನೆಲವ ಊರಿ ರಸವ ಹೀರಿ
ಬೆಳೆದ ನೀವು ಮಣ್ಣ ಮಕ್ಕಳು
ಕಲ್ಲು-ಕೋಟೆ ಗರ್ಭ-ಗುಡಿ
ಬಂಡೆ ಕೆಳಗೆ ಹೂತ ಒಡವೆ
ನಿಮಗೆ ಅದನ ಧರಿಸುವಾಸೆ
ತಪ್ಪಲಿಲ್ಲ, ಸಹಜ ಬಿಡಿ
ಮನೆಗೆ ಚಿನ್ನ-ಸಿಂಗಾರ ಬೇಕು
ಗುಡಿಯ ಕಲ್ಲು ಮಂತ್ರದಿಂದ
ಅಥವ ಕಲ್ಲಿನಿಂದ ಸರಿಯೆ
ಮನೆಯ ಕೆಡವಬಲ್ಲನೆಂಬ
ಭಯವು ಸುಳ್ಳು ಅಲ್ಲವಲ್ಲ

ಒಡವೆಯಾಸೆ ಕಾಲುದಾರಿ
ಸುಲಭವಲ್ಲ, ಮನೆಯ ನೆಲವ
ಸಗಣಿಯಿಂದ ಸಾರಿಸಿಲ್ಲ
ಅಂಗಳದ ಗಿಡಗಳ್ಗಂತು
ನೀರನುಣಿಸಲಿಲ್ಲವಲ್ಲ
ನೀರು ಬಿಟ್ಟ ಮನೆಯು ಕಡೆಗೆ
ಕಣ ಕಣ ಗಟ್ಟಿಯಾಗಿ
ಬಂಡೆಮನೆಯ ಕೋಟೆ ಕೊನೆಗೆ

ಪೂಜೆಕೋಣೆಯಲ್ಲಿ ಕುಂಬಾರ
ಕೊಟ್ಟ ಮನೆಯ ದೇವ ಮೂರ್ತಿ
ಭಿನ್ನವಡೆದು ಗಮನವಿಲ್ಲ
ಮನೆಯೊಳಗೆ ಮಣ್ಣೊಡೆಯನಿಲ್ಲ
ಗುರಿಯೆ ಮುಖ್ಯ ಹಾದಿಯಲ್ಲಿ
ಮನೆಯ ಮಗು, ಜಾಣ ಕುರುಡೋ
ದೂರದೊಡವೆ ಕಲ್ಲುದಾರಿ
ಬಿಟ್ಟು ಏನು ಕಾಣದವಗೆ

ಗರ್ಭಗುಡಿಯ ಆಸೆ ಬೀಜ
ಹಾದರದ ಕುಣಿತ ಕುಣಿತ
ವಿಷದ ಗಿಡ ಬೇರನೂರಿ
ಕಲ್ಲು ಬಂಡೆ ಹೂವು ಚಿಗುರಿ
ಬಂಡೆಯೆಲ್ಲಾ ದೇವರಾಗಿ
ಕಾಣತೊಡಗಿ ಮಂಪರಾಗಿ
ಗರ್ಭಬುಡಿಯ ಒಳಗೆಪೋಗಲ್
ಕಲ್ಲಿನುರುಳು ಬಂಡೆಯುರುಳು
ವಿಷದ ಹೂವು ತಾನೆ ಗರ್ಭ
ಗುಡಿಯ ದೇವರಾಗಬಯಸು
ವುದನ ನೆಲವನೂರಿನಿಂತ
ಸುತಗೆ ತಿಳಿಯಲಿಲ್ಲವಲ್ಲ

ಗಾಳಿಬೆಳಕು ನೀರು ಇರುವ
ಮನೆಯ ಒಳಗೆ ಊರಿನಿಂತ
ಗುಡಿಯ ಮನೆಯ ತೇವದಾರಿ
ಯಿಂದ ಸವೆಸ ಸಂಕಲ್ಪಬಲದ
ಮಕ್ಕಳ್ ನಿಜಕ್ಕೂ ಯಾರು ಇಲ್ಲ
ಇರಲೆ ಇಲ್ಲ ಎಂದಿಗೂನು
ಕಲ್ಲ ದೇವನಾದರಿಹನೆ
ಗೊತ್ತಿಲ್ಲ, ದೇವರಂತು ಅಲ್ಲ

ಮನೆಯೊಳಗೆ ಮಣ್ಣೊಡೆಯನಿಲ್ಲ
ಎಲ್ಲೂ ಅವನ ಮಕ್ಕಳಿಲ್ಲ
ಗರ್ಭಗುಡಿಯ ದೇವರಿಲ್ಲ
ಕಲ್ಲು ಹೂವು, ವಿಷದ ಬೀಜ
ವಿಷದ ಒಡವೆ ಗಟ್ಟಿ ಹಾದಿ
ಅಷ್ಟೆ ಸದ್ಯ ನಮಗೆ ಇರುವುದು

ಆದರೂನೂ ಚಿಂತೆಯಿಲ್ಲ
ಕಾಲ ದೇಶ ವರ್ತಮಾನ
ಯಾವಾಗಲೂ ಹೀಗೆ ಏನೋ
ಮಳೆಯು ಸುರಿಯೆ ಕಾಯುತಿರುವೆ
ಕುಂಬಾರನನ್ನು ಹುಡುಕುತಿರುವೆ
ಎರೆಯ ಹುಳುವ ಕರೆಯುತಿರುವೆ
ಗಿಡದ ಪಾತಿ ಮಾಡುತಿರುವೆ
ಗಿಡಗಳಿಗೆ ಕೈಮುಗಿದೆ ಇರುವೆ
ಹೂ-ಹಣ್ಣು ಹಂಬಲಿಸುತಿರುವೆ
ಸಗಣಿ ರಂಗೋಲಿ ಕೇಳುತಿರುವೆ
ಮನದಿ ಪ್ರಾರ್ಥಿಸುತ್ತಲಿರುವೆ

1 Comments:

At 9:27 AM, Blogger Saamaanya Jeevi said...

Dear Mr. Nadig,

Please go ahead provide a link to my blog in planet.sampada.net

regards
jeevishivu

 

Post a Comment

<< Home