ವಸುಧೇಂದ್ರ ಮತ್ತು ಛಂದ ಪ್ರಕಾಶನ
ಲೇಖನದ ತಲೆ ಬರಹವೇ ಈ ಬಾರಿಯ ಬ್ಲಾಗ್-ಬರಹದ ವಸ್ತುವನ್ನು ಬಿಟ್ಟುಕೊಡುತ್ತಿದೆ.
ಎರಡು ದಿನಗಳ ಹಿಂದೆಯೇ ವಸುಧೇಂದ್ರರಿಂದ ಒಂದು ಆಮಂತ್ರಣ ಪತ್ರ ಬಂದಿತ್ತು, ತಮ್ಮ 'ಛಂದ' ಪ್ರಕಾಶನದಿಂದ ಈ ವರ್ಷದ ಪುಸ್ತಕ ಸ್ವಾಗತ ಕಾರ್ಯಕ್ರಮಕ್ಕೆ ಒಂದು ಆಮಂತ್ರಣ ಪತ್ರ. ಇದೇನು ನಾನು ಇಷ್ಟೊಂದು ಫೇಮಸ್ಸೇ?
ವಸುಧೇಂದ್ರರ ಪರಿಚಯವೇ ನನಗಿಲ್ಲವಲ್ಲ? ನಾನು ಸಾಹಿತ್ಯಾಸಕ್ತ ಎನ್ನುವುದು ಪ್ರಪಂಚಕ್ಕೇ ತಿಳಿದುಹೋಗಿದೆಯೇ ಎಂದು ಬೀಗುತ್ತಿದ್ದ ನನ್ನ ಬಲೂನನ್ನು ಠುಸ್ಸೆನ್ನಿಸಿದವರು ಸುದರ್ಶನ್. ಒಬ್ಬ ಪ್ರಕಾಶಕರ ಹತ್ತಿರ ಒಮ್ಮೆ ಸಾಹಿತ್ಯಾಸಕ್ತ ಎಂದು ಗುರುತಿಸಿಕೊಂಡರೆ ಮಿಕ್ಕವರಿಗೆ ಅದು ಗೊತ್ತಾಗಿಯೇ ಆಗುತ್ತೆ ಎಂದು ತಿಳಿದು ಬಲೂನು ಠುಸ್ಸಾದರೂ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಅನ್ನಿಸಿತು. ಬಿಡುಗಡೆ ಸಮಾರಂಭಕ್ಕೆ ಹೋಗುವುದಂತೂ
ನಿಸ್ಸಂಶಯವಾಗಿತ್ತು.
ಕಾರ್ಯಕ್ರಮಕ್ಕೆ ಹೋದವನಿಗೆ ಅದೇ ಪರಿಚಯದ (ಅಂದರೆ ವೈಯಕ್ತಿಕ ಪರಿಚಯವಲ್ಲ ಸಾಂಸ್ಕೃತಿಕ ಪರಿಚಯ) ಮುಖಗಳೇ ಕಾಣಿಸಿದುದರಲ್ಲಿ ಹೆಚ್ಚೇನೂ ವಿಶೇಷವಿಲ್ಲ. ಜಯಂತ್, ವಿವೇಕ್, ಉಮಾ ರಾವ್, ಎಸ್. ದಿವಾಕರ್, ಜಿ.ಎಸ್. ಭಾಸ್ಕರ್ ಮುಂತಾದವರೆಲ್ಲಾ ಇದ್ದರು. ಕಾರ್ಯಕ್ರಮದ ನಿರೂಪಣೆ ಕಳೆದ ಬಾರಿ ಛಂದ ಪ್ರಕಾಶನದಿಂದ ಪುಸ್ತಕ ಬಿಡುಗಡೆಯ ಭಾಗ್ಯ ಪಡೆದುಕೊಂಡಿದ್ದ ಸುಮಂಗಲಾರವರಿಂದ. ಜಯಂತ್, ವಿವೇಕ್, ಸುಮಂಗಲಾ ಮುಂತಾದವರ ಮುಖದಲ್ಲಿನ ಕಾಳಜಿ ನೋಡಿದರೆ ಇದು ತಮ್ಮದೇ ಕಾರ್ಯಕ್ರಮವೇನೋ ಎನ್ನುವಂತಿತ್ತು. ಒಟ್ಟು ಸಾಮಾನ್ಯವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್
ಆಫ಼್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯುವ ಯಾವುದೇ ಕನ್ನಡ ಕಾರ್ಯಕ್ರಮದ ಸ್ನೇಹದ ವಾತಾವರಣ, ತಿಂಡಿ, ಕಾಫ಼ಿ ಇತ್ಯಾದಿಗಳೆಲ್ಲಾ ಇದ್ದವು. ಪರಿಚಯದವರನ್ನು ಮಾತನಾಡಿಸಿ ಒಂದು ಮೂಲೆಯಲ್ಲಿ ನಿಂತಿದ್ದವನನ್ನು
ನೋಡಿ ವಸುಧೇಂದ್ರ ಹತ್ತಿರ ಬಂದು 'ತಿಂಡಿ, ಕಾಫ಼ಿ ಆಯಿತೇ' ಎಂದು ಉಪಚರಿಸಿ 'ತಮ್ಮ ಪರಿಚಯವಾಗಲಿಲ್ಲ' ಎಂದರು. ನಾನು ಪರಿಚಯ ಮಾಡಿಕೊಂಡು, ನಮ್ಮಿಬ್ಬರಿಗೆ ಕೊಂಡಿಯಾಗಲು ಸಾಧ್ಯವಾಗಬಹುದಾದ ಒಂದು ಸಣ್ಣ ಎಳೆಯನ್ನು
ಅವರಿಗೆ ಜ್ಞಾಪಿಸಿದಾಗ 'ಓಹೋ, ಗೊತ್ತಾಯಿತು. ನೀವು ಬಂದಿದ್ದು ಸಂತೋಷ' ಎಂದು ಸ್ನೇಹದಿಂದ ನುಡಿದು ಮತ್ತಿತರನ್ನು ಉಪಚರಿಸಲು ತೆರಳಿದರು. ಮನಸ್ಸಿನಲ್ಲುಳಿದದ್ದು ಅವರ ನಗು ಮುಖ, ಸರಳತನ, ಸಜ್ಜನಿಕೆ, ಸ್ನೇಹ. ನಿಜಕ್ಕೂ ಅವರು ನನ್ನನ್ನು ಉಪಚರಿಸಬೇಕಾದ ಅಗತ್ಯವೇ ಇರಲಿಲ್ಲ.
ಇಂದು ಬಿಡುಗಡೆಯಾಗಿದ್ದು ಅಲಕಾ ತೀರ್ಥಹಳ್ಳಿಯವರ ಕಥಾಸಂಕಲನ 'ಈ ಕತೆಗಳ ಸಹವಾಸವೇ ಸಾಕು'. ಇವರು ಗಂಡಸರು ಎಂದು ಗೊತ್ತಾಗಿ ಚಕಿತರಾದವರಲ್ಲಿ ನಾನೂ ಒಬ್ಬ. ಆದರೆ ಅದೆಲ್ಲಾ ಇಲ್ಲಿ ಸದ್ಯಕ್ಕೆ ಅನವಶ್ಯ. ಇವರು ಇಂಗ್ಲೀಷ್ ಎಂ.ಎ. ಮತ್ತು ಉಪನ್ಯಾಸಕರು, ಮಧ್ಯವಯಸ್ಸನ್ನು ದಾಟಿದವರಂತಿದ್ದರೂ ಇದು ಇವರ ಮೊದಲನೇ ಕಥಾಸಂಕಲನ, 'ಛಂದ' ಪ್ರಕಾಶನ ಆಹ್ವಾನಿಸಿದ್ದ ಯಾವುದೇ ಲೇಖಕರ ಮೊದಲನೇ ಕಥಾಸಂಕಲನ ಸ್ಪರ್ಧೆಯಲ್ಲಿ ಇವರ ಸಂಕಲನ
ಆಯ್ಕೆಗೊಂಡು ಪ್ರಕಾಶನದ ಸ್ವಾಗತ ಅನುಭವಿಸುತ್ತಿದೆ ಎನ್ನುವುದಷ್ಟೇ ಇಲ್ಲಿ ಮುಖ್ಯ. ಎಂ.ಆರ್.ದತ್ತಾತ್ರಿಯವರ
'ಪೂರ್ವ ಪಶ್ಚಿಮ' ಮತ್ತು ದಟ್ಸ್ಕನ್ನಡ.ಕಾಮ್ ಮತ್ತು ಹಾಯ್ ಬೆಂಗಳೂರುಗಳಲ್ಲಿ ಬರುತ್ತಿದ್ದ 'ಜಾನಕಿ ಕಾಲಂ' ಅಂಕಣ ಬರಹಗಳು ಕೂಡಾ ಇವುಗಳ ಜೊತೆ ಬಿಡುಗಡೆಯಾದವು. ಈ ಪುಸ್ತಕಗಳ ಕುರಿತು ಸೊಂಡೂರಿನಿಂದ ಬಂದಿದ್ದ ಕವಿ, ವಿಮರ್ಶಕ ವಿಕ್ರಮ ವಿಸಾಜಿ, ಕಥೆಗಾರ ಅಶೋಕ್ ಹೆಗಡೆ ಮತ್ತು ವಿಮರ್ಶಕ ಡಾ|| ಜಿ.ಬಿ.ಹರೀಶ್ ಮಾತನಾಡಿ ತಮ್ಮ ಅನಿಸಿಕೆಗಳಿಂದ ಪುಸ್ತಕಕ್ಕೆ ಕೆಲವು ಬಗೆಯ ಪ್ರವೇಶಗಳನ್ನು ಕಲ್ಪಿಸಿದರು. ಜಯಂತ್ ಕೂಡಾ ಕಡೆಗೆ ಮಾತನಾಡಿದರು. ಕಡೆಗೆ ವಸುಧೇಂದ್ರ ಮಾತನಾಡಿ ಬರಹ, ಪ್ರಕಾಶನ, ಸ್ಪರ್ಧೆ, ಸಾಹಿತ್ಯಾಸಕ್ತರ ಒಡನಾಟ ಮುಂತಾದುವುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಪ್ರಕಾಶನದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿದರು. ಇಡೀ ಕಾರ್ಯಕ್ರಮದಲ್ಲಿ ವಸುಧೇಂದ್ರ ಅಷ್ಟೊಂದೇನೂ ಆವರಿಸಿಕೊಂಡಂತೆ ಕಾಣಲಿಲ್ಲ. ಸದ್ದಿಲ್ಲದೇ ತಮ್ಮ ಕೆಲಸ
ಮಾಡುತ್ತಿದ್ದರು. ಚೊಕ್ಕವಾಗಿ ಕಾರ್ಯಕ್ರಮ ಮುಗಿಯಿತು, ಪುಸ್ತಕಗಳನ್ನೆಲ್ಲಾ ತೆಗೆದುಕೊಂಡು ಬೀಳ್ಕೊಟ್ಟೆವು.
ಈ ನನ್ನ ಲೇಖನದ ಉದ್ದೇಶ ಕಾರ್ಯಕ್ರಮದ ವರದಿಯಂತೂ ಖಂಡಿತಾ ಅಲ್ಲ. ಒಂದು ಪುಸ್ತಕ ಬಿಡುಗಡೆಯ ಸಮಾರಂಭವನ್ನು ವರದಿ ಮಾಡುವುದು, ಅದರಲ್ಲಿನ ಸ್ವಾರಸ್ಯದ ಅಂಶಗಳನ್ನು ಹೆಕ್ಕುವುದು ಸ್ವಲ್ಪ ಕಷ್ಟದ ವಿಷಯವೇ.
ಈಗಾಗಲೇ ನಾನು ವಿವೇಕ್ ತಂಡದ ದೇಶಕಾಲ ಮತ್ತು ಜಯಂತರ ತೂಫ಼ಾನ್ ಮೈಲ್ ಪುಸ್ತಕಗಳ ಬಿಡುಗಡೆಯ ಕುರಿತು ಬರೆದಿರುವೆನಾದ್ದರಿಂದ ಮತ್ತೆ ಅದೇ ತೆರನಾದುದದನ್ನು ಬರೆಯಲು ಮನಸ್ಸೂ ಇಲ್ಲ. ಆದರೆ, ಈ ಸದ್ಯಕ್ಕೆ ನನ್ನ
ಮನಸ್ಸನ್ನಾವರಿಸಿರುವುದು ಒಂದು ಒಳ್ಳೆಯ ಸಾಂಸ್ಕೃತಿಕ ಮನಸ್ಸು ಮತ್ತು ಅಂತಹ ಮನಸ್ಸಿನ ಕ್ರಿಯಾಶೀಲ ಅಭಿವ್ಯಕ್ತಿ.
ಈ ಮೊದಲೇ ಹೇಳಿದ ಹಾಗೆ ವಸುಧೇಂದ್ರ ನನಗೆ ಪರಿಚಯವೇ ಇಲ್ಲ. ಅವರ ಬಗ್ಗೆ ನನಗೆ ಗೊತ್ತಿರುವುದು ಕೇವಲ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ. ನಮ್ಮಂತೆ ಅವರು ಕೂಡಾ ಒಬ್ಬ ಸ್ನಾತಕೋತ್ತರ ಎಂಜಿನಿಯರ್, ಒಂದು ಸಾಫ಼್ಟ್ವೇರ್ ಕಂಪನಿಯಲ್ಲಿ ಪ್ರೋಜೆಕ್ಟ್ ಮ್ಯಾನೇಜರ್. (ಐ.ಐ.ಎಸ್.ಸಿ-ಯ ಹಿನ್ನೆಲೆಯಿದೆ ಎಂದಕೂಡಲೇ ಅದೇನೋ ಒಂದು ಬಗೆಯ ಮೆಚ್ಚುಗೆ. ಇದೆಲ್ಲಾ ಅಪಾಯಕಾರಿಯಾದರೂ ಮನಸ್ಸಿನಲ್ಲಿರುವ ದೋಷಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡುಬಿಟ್ಟರೆ ಅವುಗಳನ್ನು ಮೀರುವ ಉಪಾಯಗಳನ್ನು ಹುಡುಕಲು ಹೆಚ್ಚು ಸಹಾಯವಾಗುತ್ತದೆ ಎಂದು ನಂಬಿರುವವನು
ನಾನು.)
ಈ ಹಿನ್ನೆಲೆಯಿರುವವರು ಸಾಹಿತ್ಯಾಸಕ್ತರಾಗಿರುವುದನ್ನು ನಾವು ಸ್ವಲ್ಪವಾದರೂ ಕಂಡಿದ್ದೇವೆ. ಅವರಲ್ಲಿ ಅತ್ಯಲ್ಪ ಸಂಖ್ಯೆಯ ಸಾಹಿತಿಗಳನ್ನೂ ನೋಡಿದ್ದೇವೆ. ಆದರೆ, ಅವರಲ್ಲಿ ಯಾರಾದರೂ ಪ್ರಕಾಶನಕ್ಕೆ ಕೈಯಿಟ್ಟವರನ್ನು ನೋಡಿಲ್ಲ. ವಸುಧೇಂದ್ರ ಇಂತಹ ವಿರಳರಲ್ಲಿ ವಿರಳರಾಗಿದ್ದಾರೆ. ನನ್ನ ಕುತೂಹಲ, ಮೆಚ್ಚುಗೆ, ಕೃತಜ್ಞತೆ, ಈರ್ಷ್ಯೆ ಇತ್ಯಾದಿಗಳೆಲ್ಲಾ ಈ ಕಾರಣದಿಂದ. ಯಾವ ಪ್ರೇರಣೆಯಿಂದ ವಸುಧೇಂದ್ರ ಹೀಗೆ ಕ್ರಿಯಾಶೀಲರಾದರು ಎನ್ನುವುದನ್ನು ಅವರನ್ನೇ ಕೇಳಿ ತಿಳಿದುಕೊಳ್ಳುವುದು ಹೆಚ್ಚು ಸರಿ ಮತ್ತು ಸುಲಭವಾದುದು. ಆದರೆ, ಅವುಗಳ ಕುರಿತ ಚಿಂತನೆಯ ನೆಪದಲ್ಲೇ ನನ್ನ ಲಹರಿಯನ್ನು ಒಂದಿಷ್ಟು ಬರೆದುಕೊಳ್ಳುವುದು ಇಲ್ಲಿನ ನನ್ನ ಸ್ವಾರ್ಥ.
ಈ ಸದ್ಯಕ್ಕೆ ನೋಡಿ. ನಮ್ಮಲ್ಲಿ ಸಾಂಸ್ಕೃತಿಕವಾಗಿ ಮಹತ್ವಪೂರ್ಣ ಎಂದು ನನಗೆನ್ನಿಸುವುದು ಜಯಂತ ಕಾಯ್ಕಿಣಿ. ತಮ್ಮ ಸಾಹಿತ್ಯಕ ಸೃಜನಶೀಲತೆಯಲ್ಲದೆ ತಮ್ಮ ವ್ಯಕ್ತಿತ್ವ ವಿಶೇಷದಿಂದ ಸಾಂಸ್ಕೃತಿಕ ಪರಿಸರದ ವಿಭಿನ್ನ, ವೈವಿಧ್ಯಗಳನ್ನು ಒಳಗೊಂಡವರಂತೆ ನನಗೆ ತೋರುತ್ತಿದ್ದಾರೆ. ಆ ತಲೆಮಾರಿನಲ್ಲಿ ಅವರಷ್ಟು - ಬೇರೆ ಸಾಹಿತಿಗಳ ಜೊತೆಗಿನ ಒಡನಾಟ, ಅವುಗಳ ಸಾಂಸ್ಕೃತಿಕ ಸಾರವನ್ನು ಸಾಮಾಜಿಕರಿಗೆ ಒದಗಿಸುವುದರಲ್ಲಿ ಆಸಕ್ತಿ, ಅದಕ್ಕೆ ಅತ್ಯಗತ್ಯವಾದ ಚಿಂತನಶೀಲತೆ, ಸೃಜನಶೀಲತೆ ಮತ್ತು ಅದಕ್ಕೆ ತಕ್ಕುದಾದ ಸ್ನೇಹಪೂರಿತ ವ್ಯಕ್ತಿತ್ವ - ಮಿಕ್ಕವರಿಗಿಲ್ಲ ಎಂದುಕೊಳ್ಳುತ್ತೇನೆ. ಕೇವಲ ಸಾಹಿತ್ಯದ ಸಾಂಸ್ಕೃತಿಕ ವಾತಾವರಣದ ಪರೋಕ್ಷ್ಯ ಪರಿಚಯ ಮತ್ತು ಮಾಧ್ಯಮಗಳಿಂದ ಸಂಗ್ರಹವಾಗಿರುವ ಮಾಹಿತಿಗಳಿಂದ ಇಂತಹ ದೊಡ್ಡ ನಿಲುವು ತೆಗೆದುಕೊಳ್ಳುವುದು ಸ್ವಲ್ಪ ಪ್ರಮಾದವೇ. ಆದರೂ ಧೈರ್ಯ ಮಾಡಿದ್ದೇನೆ. ಕನಿಷ್ಠ ನನಗೆ ಕಾಣುವಂತೆ ಆ ಒಂದು ತಲೆಮಾರಿನಲ್ಲಿ ಈ ವಿಷಯದಲ್ಲಿ ಜಯಂತ್ ಪ್ರಮುಖರು. ಇವರಲ್ಲದೇ ಬೇರೆಯವರಿಂದ 'ಕುವೆಂಪು, ಕಾರಂತ್, ಬೇಂದ್ರೆ' ಕುರಿತ ಟೀವಿ ಕಾರ್ಯಕ್ರಮಗಳನ್ನು ನನಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಇದೆಲ್ಲಕ್ಕಿಂತಾ ಮುಖ್ಯವಾಗಿ ಅವರೊಬ್ಬ ಅದ್ಭುತ ಕಥೆಗಾರರು ಎನ್ನುವುದನ್ನು ಮರೆಯದೇ ಇದನ್ನು ಹೇಳುತ್ತಿದ್ದೇನೆ. ಅವರ ಹಿಂದೆ ಕೆ.ವಿ.ಸುಬ್ಬಣ್ಣನವರಿದ್ದರು, ಅದಕ್ಕೂ ಹಿಂದೆ ಮಾಸ್ತಿಯವರಿದ್ದರು (ಬದುಕಿದ್ದಿದ್ದರೆ ಸಿನೆಮಾ ರಂಗದಲ್ಲಿ ಶಂಕರ್ ನಾಗ್ ಇಂತಹದ್ದನ್ನು ಸಾಧಿಸುತ್ತಿದ್ದರೇನೋ,
ನೆನೆಸಿದರೆ ದುಃಖವಾಗುತ್ತದೆ). ತಮ್ಮ ಸಾಹಿತ್ಯಕ ಕೆಲಸವಲ್ಲದೇ, ಅದಕ್ಕೆ ಪೂರಕವಾದ ಕ್ರಿಯಾಶೀಲ ಕೆಲಸಗಳಿಂದ ಒಟ್ಟು ನಾಡಿನ ಸಾಂಸ್ಕೃತಿಕ ಪರಿಸರ ಜೀವಂತವಾಗಿರುವಲ್ಲಿ ಇವರ ಪಾತ್ರ ಅಪಾರ. ಜಯಂತರಂತೂ ನನ್ನ ತಲೆಮಾರಿನವರಿಗೆ
ತೀರ ಅಗತ್ಯವಾಗಿಬಿಟ್ಟಿದ್ದಾರೆ, ಬರುವ ದಿನಗಳಲ್ಲಿ ಅವರಿಂದ ಕನ್ನಡ ಸಂಸ್ಕೃತಿ ಬಹಳಷ್ಟನ್ನು ನಿರೀಕ್ಷಿಸುತ್ತದೆ.
ಈ ಮೇಲಿನ ಪೀಠಿಕೆಗೆ ಕಾರಣ ನಾನು ವಸುಧೇಂದ್ರರನ್ನು ಈ ಪರಂಪರೆಯಲ್ಲಿ ನೋಡಲು ಯತ್ನಿಸುತ್ತಿರುವುದು.
ಸಾಹಿತ್ಯಕವಾಗಿ ಅವರ ಸಂವೇದನೆಗಳ ಬಗ್ಗೆ ನಾನಿಲ್ಲಿ ಬರೆಯಲು ಹೋಗುವುದಿಲ್ಲ. ಅದೇ ಪರಂಪರೆಯಲ್ಲಿ ಇರಬಹುದು (ಯಾರು ತಾನೇ ಮಾಸ್ತಿ, ಜಯಂತರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ), ಅಥವಾ ಮತ್ತೇನೋ ಆಗಿರಬಹುದು.
ಆದರೆ ಒಂದು ಒಳ್ಳೆಯ ಸಾಂಸ್ಕೃತಿಕ ಮನಸ್ಸಾಗಿ ವಸುಧೇಂದ್ರ ಅದೇ ಪರಂಪರೆಯಲ್ಲಿದ್ದಾರೆಯೇ ಎನ್ನುವುದು ಈ ಸದ್ಯದ ನನ್ನ ಆಲೋಚನೆ. ಅಥವಾ ಹಾಗಿರುವುದು ನನಗೆ ಬೇಕಾಗಿದೆ. ಹೀಗಲ್ಲದೇ, ನಲವತ್ತಕ್ಕಿಂತಾ ಕಡಿಮೆಯ ವಯಸ್ಸಿನ ವಸುಧೇಂದ್ರ, ಯಾವುದಕ್ಕೂ ಸಮಯ ಮಾಡಿಕೊಳ್ಳುವುದು ಕಷ್ಟವಾಗಿರುವ ವೃತ್ತಿಯಲ್ಲಿದ್ದುಕೊಂಡು ಇಂತಹ ಮಹತ್ವಪೂರ್ಣ ಸಾಹಸಕ್ಕೆ ಕೈಹಾಕುವುದು ಸಾಧ್ಯವಿಲ್ಲ. ಸ್ವತಃ ತಾವೇ ಬರಹಗಾರರಾಗಿದ್ದುಕೊಂಡು, ಮಿಕ್ಕವರಿಗೆ ಈ ಮಟ್ಟದ ಪ್ರೋತ್ಸಾಹ ನೀಡುವುದು, ಅದನ್ನು ಕ್ರಿಯಾರೂಪಕ್ಕಿಳಿಸುವುದು, ಅದನ್ನು ಒಂದು ಗುಣಮಟ್ಟದ ಅಳತೆಗೋಳನ್ನಿಟ್ಟು ನಿಭಾಯಿಸುವುದು, ಸಹೃದಯರನ್ನು ಒಟ್ಟುಗೂಡಿಸುವುದು, ಅವರ ಒಡನಾಟದಲ್ಲಿ ಹರ್ಷಿಸುವುದು, ಈ ವಯಸ್ಸಿಗೆ ಮೇಲೆ ಹೆಸರಿಸಿದ ವ್ಯಕ್ತಿಗಳ ಪರಿಚಯ ಪಡೆದುಕೊಳ್ಳುವುದು, ಮೇಲ್ಮುಖ-ಕೆಳಮುಖ ಸಂವಹನಕ್ಕೆ ತೊಡಗಿರುವುದು - ಇವೆಲ್ಲಾ ಅಂತಹ ಒಂದು ಸರಿಯಾದ ದಿಕ್ಕಿನಲ್ಲಿ ಬೆಳೆಯುತ್ತಿರುವ ಮನಸ್ಸು ಇದು ಎಂದು ಹೇಳುವುದಕ್ಕೆ ಸಕಾರಣವಾಗಿದೆ ಎಂದು ನನಗನ್ನಿಸುತ್ತಿದೆ.
ಈ ನಮ್ಮ ಕಾಲ ನೋಡಿ. ನನ್ನ ಪರಿಸರದಲ್ಲಂತೂ ನನ್ನ ಸಮಾನ ವಯಸ್ಕರಲ್ಲಿ ಕನ್ನಡ ಮತ್ತು ಸಾಹಿತ್ಯದ ಕುರಿತ ಆಸಕ್ತರನ್ನು ಪ್ರಪಂಚದ ಅತಿದೊಡ್ಡ ದುರ್ಬೀನು ತೆಗೆದು ಹುಡುಕಬೇಕು. ಬೆಂಗಳೂರಿನಲ್ಲಿ ಆ ಬಗೆಯ ಆಸಕ್ತರಾಗಿ ನನಗೆ ಪರಿಚಯವಾದವರಲ್ಲಿ ಶೇಕಡ ೯೫ ತಮ್ಮ ಮೊದಲ ೧೭-೧೮ ವರ್ಷಗಳನ್ನು ಬೆಂಗಳೂರಿನಿಂದ ಹೊರಗೆ ಕಳೆದವರೇ. ವಸುಧೇಂದ್ರ ಕೂಡಾ ಹಾಗೇ ಕಾಣುತ್ತಾರೆ. ಅಂಥವರಲ್ಲೂ ಈ ಸಂಖ್ಯೆ ಕಡಿಮೆಯಿದೆ ಅನ್ನಿಸುತ್ತದೆ. ಬೆಂಗಳೂರಿನಲ್ಲೇ
ಹುಟ್ಟಿಬೆಳೆದ ನಾನು ಈ ವಿಷಯದಲ್ಲಿ ಅನುಭವಿಸಿದ ಒಂಟಿತನ ಅಪಾರ. ಆದ್ದರಿಂದ, ಈ ಬಗೆಯ ಮನಸ್ಸುಗಳನ್ನು
ನೋಡಿದಾಗಲೆಲ್ಲಾ ನನಗೆ ತುಂಬ ಮೆಚ್ಚುಗೆಯಾಗುತ್ತದೆ. ಹಾಗೆಯೇ, ಕನ್ನಡ ಮನಸ್ಸುಗಳಿಗೆ ಕ್ರಿಯಾಶೀಲರಾಗಿ
ಬದುಕುವುದು ಅಷ್ಟೇನೂ ಸುಲಭವಾಗಿಲ್ಲದ ಈ ಕಾಲದಲ್ಲಿ ವಸುಧೇಂದ್ರ ತಮ್ಮ ಕ್ರಿಯಾಶೀಲ ಕ್ಷೇತ್ರಗಳನ್ನು ಗುರುತಿಸಿಕೊಂಡು, ಅದಕ್ಕೆ ಬೇಕಾದ ವಾತಾವರಣ ಕಲ್ಪಿಸಿಕೊಂಡು, ಅಂತಹ ಬೇರುಗಳಿಗೆ ನೀರೆರೆಯುತ್ತಾ, ತನ್ಮಯರಾಗಿದ್ದಾರೇನೋ ಎಂದೆಲ್ಲಾ ನನಗನ್ನಿಸುತ್ತಿರುವುದರಿಂಡ - ಒಂದೆಡೆ ಇಂತಹವರಿರುವುದು ಸಮಾಧಾನ, ಇನ್ನೊಂದು ನಮಗಿಂತಹದು ಇನ್ನೂ ಶಕ್ಯವಾಗಿಲ್ಲವಲ್ಲಾ ಎನ್ನುವ ಕೊರಗು, ಈರ್ಷ್ಯೆ ಒಟ್ಟೊಟ್ಟಿಗೆ ಆಗುತ್ತಿದೆ.
ಇದೆಲ್ಲಾ ಅತಿಶಯೋಕ್ತಿಯಿರಬಹುದು. ಆದರೆ, ನಮ್ಮ ಕಾಲದ ಅತ್ಯುತ್ಸಾಹೀ ತರುಣರಲ್ಲಿ ವಸುಧೇಂದ್ರ ನಿಸ್ಸಂಶಯವಾಗಿ ಅಗ್ರಗಣ್ಯರು. ಪುಸ್ತಕ ಬಿಡುಗಡೆ, ಅತ್ಯುತ್ತಮ ಸಿನೆಮಾ, ವಿಚಾರ ಗೋಷ್ಠಿ, ಸಂವಾದ - ಇಂತಹ ಕಡೆಗಳಲ್ಲೆಲ್ಲಾ ನಾನು ವಸುಧೇಂದ್ರರನ್ನು ನೋಡುತ್ತಲೇ ಇದ್ದೇನೆ. ಈ ಪ್ರಪಂಚದಿಂದಲೂ ಹೊರಗಿರುವ ಸಾಂಸ್ಕೃತಿಕ ಪ್ರಪಂಚವಿದೆ ಮತ್ತು ಅದರ ಒಡನಾಟ ಇಲ್ಲದೇ ಹೋಗಿರುವುದರಿಂದ ನಷ್ಟವಾಗಿರುವುದು ನಮಗೇ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ, ಆ ಪ್ರಪಂಚಕ್ಕೂ ಕಾಲಿಡಬಲ್ಲವರೆಂದರೆ ಪ್ರಾಯಶಃ ವಸುಧೇಂದ್ರ.
ಅವರಿಗೆ ಶುಭವಾಗಲಿ ಮತ್ತು ಈ ನಿಟ್ಟಿನಲ್ಲಿ ಅವರು ಬೆಳೆದು ನಮ್ಮಂತಹವರನ್ನೂ ಬೆಳೆಸಲಿ ಎಂದು ಆಶಿಸುವುದಕ್ಕೆ ಅವಕಾಶವಿದೆ.
0 Comments:
Post a Comment
<< Home