ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, February 11, 2006

ಕತೆ, ಕತೆಗಾರ ಮತ್ತು ಓದುಗ



ವಿವೇಕ್ ಶಾನುಭಾಗರ ಹೊಸ ಕಥೆ ಶರವಣ ಸರ್ವಿಸಸ್ ನನ್ನಲ್ಲಿ ಹುಟ್ಟಿಸಿದ ಆಲೋಚನೆಗಳನ್ನು ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.

ಅವರ "ಮತ್ತೊಬ್ಬನ ಸಂಸಾರ" ಕಥಾಸಂಕಲನದಲ್ಲಿನ "ಶರವಣ ಸರ್ವಿಸಸ್" ಕತೆ ಈ ಹಿಂದೆ ದೇಶಕಾಲ ಪತ್ರಿಕೆಯಲ್ಲೂ ಓದಿದ್ದೆ. ಈ ಕಥೆಯಾಗಲೀ ಅಥವಾ ಅದೇ ಸಂಕಲನದ ಇತರ ಕಥೆಗಳಾಗಲೀ ಮೊದಲ ಓದಿನ ತತ್ಕ್ಷಣಗಳಲ್ಲಿ ಯಾವುದೇ ತೀವ್ರವಾದ ಪರಿಣಾಮವನ್ನುಂಟು ಮಾಡಿರಲಿಲ್ಲ. ಅನೇಕ ವೇಳೆ ಇದು ಸಹಜವೇ ಆದರೂ ಅವರ "ಹುಲಿ ಸವಾರಿ" ಕಥಾಸಂಕಲನದ ವಿಷಯದಲ್ಲಿ ಹೀಗಾಗಿರಲಿಲ್ಲ. ಅದರ ಓದಿನ ಅನುಭವ ನನ್ನಲ್ಲಿ ಇವತ್ತಿಗೂ ಜೀವಂತವಾಗಿದೆ.

ಸ್ವಲ್ಪ ದಿನ ಸುಮ್ಮನಿದ್ದು ಮತ್ತೆ ಶರವಣ ಸರ್ವಿಸಸ್ ಓದಿದಾಗ ಆಸಕ್ತಿ ಕೆರಳಿ ನಿಂತು, ಅನೇಕ ವಿಷಯಗಳು ಹೊಳೆಯುತ್ತಾ ಬಂದವು. ಅವರ "ಹುಲಿ ಸವಾರಿ" ಸಂಕಲನದ ಗುಂಗಿನಲ್ಲೇ "ಮತ್ತೊಬ್ಬನ ಸಂಸಾರ" ಓದಿದ್ದು ಪ್ರಾಯಶಃ ಅಸಮರ್ಪಕ. ಹೊಸ ಪುಸ್ತಕ ಮುಕ್ತವಾದ ಓದನ್ನು ಬೇಡುತ್ತದೆ, ಯಾವಾಗಲೂ. ಈ ಲೇಖನದ ಉದ್ದೇಶ ಹಾಗೆ ಹೊಳೆದು ಅನ್ನಿಸಿದ್ದನ್ನು ಹಂಚಿಕೊಳ್ಳುವುದು.

ನನ್ನೀ ಬರಹದ ಕೆಲ ಅಪಾಯಗಳನ್ನೂ ಸಹ ಮೊದಲೇ ಸೂಚಿಸಿಬಿಡುವುದು ಒಳಿತೇನೋ. ಸದ್ಯದ ಆತಂಕಗಳನ್ನು ಮೈಮೇಲೆಳೆದುಕೊಂಡು ಎಲ್ಲವನ್ನೂ ಅವುಗಳ ಮೂಲಕವೇ ಪ್ರವೇಶಿಸುತ್ತಿರುವ ನಮಗೆ ಈ ಕನ್ನಡಕವಿಲ್ಲದೇ ತೆರೆದ ಮನಸ್ಸಿನಿಂದ ನೋಡುವುದು ಕಷ್ಟವಾಗಿದೆ. ಆದ್ದರಿಂದ ಈ ಲೇಖನದ ನನ್ನ ಅನಿಸಿಕೆಗಳು ಸ್ವಲ್ಪ ಅತಿ ಅನ್ನಿಸಬಹುದು. ಕಥೆಗಾರರಾದ ಮನಸ್ಸಿನಲ್ಲಿಲ್ಲದ್ದಂತೂ ಓದುಗರ ಅನಿಸಿಕೆಗಳಲ್ಲಿ ಇದ್ದೇ ಇರುತ್ತದೆ. ಆದರೆ ಕತೆಗಾರರ ಆಶಯಕ್ಕೆ ಹೊರತಾದ ಅನಿಸಿಕೆಗಳೂ ಇರಬಹುದಾದ ಸಾಧ್ಯತೆಗಳಿವೆ ಈ ಪ್ರತಿಕ್ರಿಯೆಯಲ್ಲಿ. ಅಥವಾ, ಅವರ ಕಥೆಯಲ್ಲಿ ಕಲಾತ್ಮಕವಾಗಿ ಸೂಚ್ಯವಾಗಿರುವುದು, ಈ ಪ್ರತಿಕ್ರಿಯೆಯಲ್ಲಿ ಕಸಿವಿಸಿಪಡುವಷ್ಟು ಅತಿವಾಚ್ಯತೆಯನ್ನು ಪಡೆದುಕೊಂಡುಬಿಟ್ಟಿರಬಹುದು. ಕಥೆಯ ಮುಕ್ತವಾದ ಪ್ರವೇಶಕ್ಕೆ, ವಿವಿಧ ಅನುಭವಗಳ ದರ್ಶನಕ್ಕೆ ಇಂತಹ ಬರಹಗಳು ಕಾಲಿಗೆ ತೊಡರೊಡ್ಡುತ್ತವೆ ಎಂದೆನ್ನಿಸಬಹುದು. ಪ್ರಾಮಾಣಿಕ ಕ್ಷಮೆಯನ್ನಷ್ಟೇ ಕೇಳಬಯಸುತ್ತೇನೆ, ಸದ್ಯಕ್ಕೆ.

ಮತ್ತೊಬ್ಬನ ಸಂಸಾರ ಪುಸ್ತಕದ ಹಿಂಬದಿಯಲ್ಲಿರುವ ಅಕ್ಷರರ ಕೆಲ ಮಾತುಗಳು ನನ್ನ ಒಟ್ಟು ವಿಚಾರಲಹರಿಯ ಮೂಲಪ್ರೇರಣೆಯಾದರೂ, ಸಿಕ್ಕ ಸಿಕ್ಕ ದಿಕ್ಕಿನಲ್ಲೆಲ್ಲಾ ಅರ್ಥಕ್ಕಾಗಿ ಕೈಚಾಚಿ ದಕ್ಕಿತು ಎಂದೆನ್ನಿಸಿದ್ದನ್ನೆಲ್ಲಾ ಇಲ್ಲಿ ಬರೆದಿದ್ದೇನೆ.

ವಿವೇಕ್ ಶಾನಭಾಗರ ಹೊಸ ಕಥೆ ಶರವಣ ಸರ್ವಿಸಸ್

ವಿವೇಕರ ಈ ಕಥೆಯಲ್ಲಿ ವಾಸ್ತವದ ಒಂದು ತುಣುಕಿನ ಮೂಲಕ, ವ್ಯವಸ್ಥೆ ಸೃಷ್ಟಿಸುವ ಗೋಡೆಗಳನ್ನು ಮೀರಿ ಬೆಳೆಯುವ ಇಬ್ಬರ ನಡುವಿನ ಸಂಬಂಧದ ಮೂಲಕ ಭಾರತ ಮತ್ತು ಆಧುನಿಕತೆಯ ಸಂಬಂಧ ಶೋಧಿಸುತ್ತಿರುವಂತಿದೆ. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಇದೇನೂ ಹೊಸತಲ್ಲ. ಆದರೆ, ಈ ಚಿಕ್ಕ ಕಥೆಯಲ್ಲಿ ತೋರುತ್ತಿರುವ ವಸ್ತುಚಿತ್ರಣದ ಸಮಗ್ರತೆ ಆಶ್ಚರ್ಯ ಹುಟ್ಟಿಸುವಂತಿದೆ. ಕಥೆಯ ಶಿಲ್ಪವೇ ಇಲ್ಲಿ ಮೌಲ್ಯವೊಂದನ್ನು, ಮೆಲುದನಿಯ ಆದರೆ ಗಟ್ಟಿಯಾದ ನಿಲುವೊಂದನ್ನು ತೆಗೆದುಕೊಂಡಂತಿದೆ.

ಕಥೆಯ ಪ್ರಮುಖ ಪಾತ್ರಧಾರಿಗಳು ನಿರೂಪಕ ಮತ್ತು ಶರವಣ. ಆಧುನಿಕತೆಯತ್ತ ಪಯಣಿಸುತ್ತಿರುವ ಭರತದ ಎರಡು ಪ್ರ್‍ಅತಿನಿಧಿಕ ಚಲನ-ಬಿಂದುಗಳಾಗಿ ಇವರು ಚಿತ್ರಣಗೊಂಡಿದ್ದಾರೆ. ನಿರೂಪಕ ಇಂದು ಭಾರತದಲ್ಲಿ ಪ್ರತಿಷ್ಠೆಯನ್ನು ಗಳಿಸಿರುವ ಹೆಚ್ಚು ಜೀವನ ಭದ್ರತೆ ಪಡೆದಿರುವ, ಆಧುನಿಕತೆ ಭಾರತಕ್ಕೆ ಬಂದಮೇಲೆ ಏನೆಲ್ಲಾ ಲೌಕಿಕ ಸವಲತ್ತು ಪಡೆದಿರುವವರ ಪ್ರತಿನಿಧಿಯಾದರೆ, ಶರವಣ ಆ ಚಲನೆಯಲ್ಲಿ ಹಿಂದೆ ಬಿದ್ದಿರುವವನು, ಆದರೆ ಆ ಚಲನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತನ್ನ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವನು. ಬಹುಜನ ಭಾರತದ ಜೀವನ ಮೌಲ್ಯ, ರೀತಿ-ಗಳಿಂದ ನಿರೂಪಕ ಬಿಡಿಸಿಕೊಂಡಂತಿದ್ದಾನೆ, ಆ ಕುರಿತ ಅವನ ಸಂಬಂಧ ಅವಕಾಶವಾದದಿಂದ ಬಂದದ್ದು. ಆದರೆ ಶರವಣ ಬಹುಜನ ಸಮಾಜದದೊಂದಿಗೆ ಹೆಚ್ಚು ಸಂಬಂಧವಿರುವ, ಸಂಬಂಧ ಸಾಧ್ಯತೆಯಿರುವ ಮನುಷ್ಯ. [ಕಥೆಯ ಓದಿನ ಸಂದರ್ಭದಲ್ಲಿ ನನಗೆ ಕನ್ನಡದ ಅತ್ಯುತ್ತಮ ಕಥೆಯಾದ 'ಸೂರ್ಯನ ಕುದುರೆ' ಜ್ಞಾಪಕಕ್ಕೆ ಬರುತ್ತಿತ್ತು. ಆದರೆ ಮೇಲಿನ ನನ್ನ ವಿವರಣೆ ಈ ಕಥೆ ಅದಕ್ಕಿಂತಾ ಹೇಗೆ ಭಿನ್ನ ಎನ್ನುವುದನ್ನು ಸೂಚ್ಯವಾಗಿ ಹೇಳುತ್ತದೆ ಎಂದು ನಂಬಿದ್ದೇನೆ, ಸದ್ಯಕ್ಕೆ 'ಸೂರ್ಯನ ಕುದುರೆ'-ಯೊಡನಿನ ಸಂಬಂಧವನ್ನು ಇಷ್ಟಕ್ಕೆ ನಿಲ್ಲಿಸಿ ಮುಂದುವರೆಯುತ್ತೇನೆ, ಮುಂದೆಂದಾದರೂ ಈ ವ್ಯತ್ಯಾಸದ ಕುರಿತೇ ಒಂದು ಲೇಖನಕ್ಕೆ ತೊಡಗಬಹುದು]. ಒಂದು ರೀತಿಯಿಂದ ನೋಡಿದಲ್ಲಿ, ಈ ಚಲನೆಯಲ್ಲಿ ಶರವಣ ಒಂದು ಅಂಚಿನಲ್ಲಿದ್ದಾನೆ ಎನ್ನಬಹುದು. ಈ ರೀತಿಯಾದ ಪಾತ್ರ ಪರಿಕಲ್ಪನೆ, ಕಥೆಯ ಶಿಲ್ಪದೊಂದಿಗೆ, ಕಥೆಯ ವಸ್ತುವಿನೊಂದಿಗೆ ಜೀವಂತ ಸಂಬಂಧ ಪಡೆದುಕೊಂಡು ಕಥೆ ಕಲಾತ್ಮಕವಾಗಿರುವಂತಿದೆ. ಪ್ರಗತಿ ಪರ ಚಿಂತನೆ ಎನ್ನುವುದು ಇದರೊಳಗೆ (ಹುಡುಕಿ ತೆಗೆದರೆ ಸ್ವಾರಸ್ಯ ಹಾಳಾಗುವಷ್ಟು) ಸಂಪೂರ್ಣವಾಗಿ ಕರಗಿಹೋಗಿದೆ. ಈ ಬರಹದಲ್ಲಿ ಮುಂದೆ ನಿರೂಪಕ ಮತ್ತು ಶರವಣ-ರನ್ನು ಉಲ್ಲೇಖಿಸಿದಾಗಲೆಲ್ಲಾ ಈ ಮೇಲಿನ ವಿವರಣೆಯ ಹಿನ್ನೆಲೆಯಲ್ಲೇ ಓದಬೇಕಾಗಿ ಕೋರಿಕೆ. ಬೇಕೆಂದೇ 'ಆಧುನಿಕ', 'ಅರೆ-ಆಧುನಿಕ' ಮುಂತಾದ ಪದಗಳ ಬಳಕೆಯ ವ್ಯಾಮೋಹವನ್ನು ಬಿಟ್ಟೇ ಬರೆದಿದ್ದೆನೆ, ಓದಿಗೆ ತ್ರಾಸವಾಗಬಾರದೆಂದು.

ಮೊದಲ ಭಾಗದಲ್ಲಿ ನಿರೂಪಕನ ಧ್ವನಿಯಲ್ಲಿ ಕಥೆಯ ನಿರೂಪಣೆಯಿದೆ. ದ್ವಿತೀಯಾರ್ಧದಲ್ಲಿ ಶರವಣನ ಧ್ವನಿಯಲ್ಲಿ ನಿರೂಪಿತವಾಗಿದೆಯಾದರೂ, ಅದು ನಿರೂಪಕ ನಿಜಶರವಣನನ್ನು ಗುರುತಿಸಿಕೊಂಡದ್ದರಿಂದಲಾದುದು ಎನ್ನುವುದುದನ್ನು ಗಮನಿಸಿ ಅಲ್ಲಿಯೂ ಕೂಡಾ ಆಳದಲ್ಲಿ ನಿರೂಪಕನದ್ದೇ ಧ್ವನಿಯಿದೆ ಎಂದೆನ್ನಿಸುತ್ತದೆ. ಕಥೆಯ ಪೂರ್ವಾರ್ಧದಲ್ಲಿ ನುಡಿಚಿತ್ರಗಳು ಕಥೆಯನ್ನು ಪ್ರಮುಖವಾಗಿ ಕಟ್ಟಿಕೊಟ್ಟಿದ್ದರೆ, ದ್ವಿತೀಯಾರ್ಧದಲ್ಲಿ ಅಮೂರ್ತವಾದ ಮನುಷ್ಯನ ಆಂತರ್ಯದ ಪಯಣದ ಮೂಲಕ ಕಥೆ ಅನಾವರಣಗೊಳ್ಳುತ್ತದೆ. ಒಟ್ಟು ಕಥೆ ವಿವೇಕರಿಗೆ ವಿಶಿಷ್ಟವಾಗಿರುವ ಮೆಲುದನಿಯಲ್ಲಿದ್ದರೂ ಖಾಚಿತತೆಯ ಧ್ವನಿ (ನಿರೂಪಕನದ್ದು) ಮತ್ತು ದ್ವಿತೀಯಾರ್ಧದ ಜೀವಪರತೆ (ನಿರೂಪಕ ಶರವಣನಲ್ಲಿ ಕಂಡುಕೊಂಡ ಸತ್ಯದಿಂದುಂಟಾದುದು) ಅನುಭವಕ್ಕೆ ಬರದೇ ಇರದು. ಈ ಬಗೆಯ ಶಿಲ್ಪದಿಂದ ವಿವೇಕರು ಒಂದು ಪ್ರಮುಖವಾದ್ದನ್ನು ಸಾಧಿಸಿದ್ದಾರೆ. ಒಟ್ಟು ಕಥೆಗಾರನ ನಿಲುವುಗಳಿಗಿಂತ ವಸ್ತುವಿನ ಶೋಧನೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಪೂರ್ವಾರ್ಧದಲ್ಲಿ ಬರುವ ನಿರೂಪಕ ಪರಂಪರೆಯ ನಂಬಿಕೆಗಳ ಅಗತ್ಯ ಬಿದ್ದಾಗ ಜೋತುಬೀಳಬಲ್ಲ ಅವಕಾಶವಾದಿ ಆಧುನಿಕನೆನ್ನುವ ಸೂಚನೆಯ ಜೊತೆಗೆ, ಜೊತೆಗೇ ಠಕ್ಕತನ, ಸುಳ್ಳುಬುರುಕುತನದ ಮನುಷ್ಯ ಎನ್ನುವ ಸೂಚನೆಯೂ ಇರುವಂತಿದೆ. ಶರವಣನ ಸಾರ್ವಜನಿಕ ವ್ಯಕ್ತಿತ್ವದ ಪರಿಚಯ ಎರಡನೇಯ ಪ್ಯಾರಾದಲ್ಲೇ ಅತ್ಯಂತ ಕಾವ್ಯಾತ್ಮಕವಾಗಿ ಮೂಡಿದೆ. ಅವನ ಅಗತ್ಯ ಮಿಕ್ಕವರಿಗೆ ದಿನವಿಡೀ ಇರುತ್ತದೆ. ಇಷ್ಟದರೂ ಅವನು ಕೆಲಸ ಉಳಿಸಿಕೊಳ್ಳಿಕೊಳ್ಳುವುದಕ್ಕೆ ತೊಟ್ಟಿರುವ ವೇಷವೈವಿಧ್ಯತೆ ಕಾಲಧರ್ಮವನ್ನು ಸೂಚಿಸುತ್ತದೆ. ಆಧುನಿಕ ಜೀವನದ ಎಲ್ಲಾ ವ್ಯಾಪಾರಗಳೂ ತಮ್ಮೆಲ್ಲಾ ವೈರುಧ್ಯಗಳಿಂದ ಶರವಣನ ಜೊತೆಗೆ ಸಂಬಂಧ ಇರಿಸಿಕೊಂಡಿದೆ. ಆದ್ದರಿಂದ ಒಟ್ಟು ಸಮಗ್ರವಾದ ಜೀವನ ದೃಷ್ಟಿ ಪ್ರಾಯಶಃ ಶರವಣನಿಗಷ್ಟೇ ಸಾಧ್ಯ, ಆಧುನಿಕತೆಯ ಮುಂಚೂಣಿಯಲ್ಲಿರುವವನಿಗಲ್ಲ. ಆದರೆ ಇದೇ ಪ್ರಕ್ರಿಯೆ (ಪ್ರಗತಿ, ಅಲೌಕಿಕ ಸಹಾಯ, ವೆಷವೈವಿಧ್ಯತೆ, ಜೀವನ ನಿರ್ವಹಣೆ) ಶರವಣನನ್ನು ಶಕ್ತಿಯನ್ನು ಹೀರಿ ನಿಜವ್ಯಕ್ತಿತ್ವದೊಂದಿಗೆ ಬದುಕಲಾರದಂತೆಯೂ ಮಾಡುತ್ತದೆ (ಅವನ ಮಾತೃಭಾಷೆ ಯಾವುದು ಎಂದೇ ಗೊತ್ತಾಗುವುದಿಲ್ಲ), ತನ್ನ ಬದುಕಿನ ಬಿಡಿಬಿಡಿ ಅನುಭವಗಳನ್ನು ಒಟ್ಟಾಗಿ ನೋಡಿಕೊಳ್ಳುವುದಕ್ಕೆ ಅವಕಾಶವೀಯುವುದಿಲ್ಲ. (ಕಥೆಯಲ್ಲಿ ಉಂಟಾಗುವ ಮುಖಾಮುಖಿ ಪ್ರಾಯಶಃ ಇದನ್ನು ಸಾಧ್ಯವಾಗಿಸುತ್ತದೆ). ಗಾಢವಾದ ಸ್ಮೃತಿಯಿರುವ ಓರೆಕೋರೆಯಿಂದ ತುಂಬಿದ್ದ ಹೆಸರು ಸಪಾಟಾಗಿ ಸರಾಗವಾಗುವುದು ಮಿಕ್ಕವರಿಗೋಸ್ಕರ. ತನಗಾದ ಲಾಭ ಆರ್ಥಿಕ, ಮಿಕ್ಕವರಿಗಾದ ಲಾಭ ಕೇವಲ ಹೆಸರು ಕರೆಯುವುದು ಸುಲಭವಾಗುವುದು. ಈ ಬದಲಾವಣೆಯಿಂದ ಸ್ಮೃತಿಯೇ ದುರ್ಬಲಗೊಳ್ಳುತ್ತಿರಬಹುದೇ. ಈ ಬದಲಾವಣೆಯಿಂದ ಸಾಂಸ್ಕೃತಿಕ ಉಪಯೋಗವೇನೂ ಆಗಿಲ್ಲದೇ ಹೋಗುತ್ತಿದೆಯೇ - ಎನ್ನುವುದರ ಸೂಚನೆ ಇರಬಹುದೇ ಎನ್ನುವುದು ನನ್ನ ಅನುಮಾನ.

ಆದರೆ ಈ ಶರವಣಾ ತೀರ ಅಶಕ್ತನಲ್ಲ. ಆಧುನಿಕ ವಿಕೃತಿಯಾದ ಅಲೌಕಿಕದ ಅತ್ಯಾಕಾಂಕ್ಷೆ/ಅತ್ಯಾಧಾರ ಶರವಣನಿಗೆ ಇನ್ನೊಬ್ಬರ ವಿಷಯದಲ್ಲಿ ಸ್ವಾತಂತ್ರ್ಯ ವಹಿಸಿ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಷ್ಟು ಶಕ್ತಿ ಕೊಟ್ಟಿದೆ. ಸ್ವಲ್ಪ ಪ್ರಜ್ಞಾಪೂರ್ವಕ ಆಧುನಿಕನಾದ ನಿರೂಪಕನಿಗೆ ಮಾತ್ರ ಇದು ಅಸಹ್ಯ. ಇಂತಹ ಸಮಯದಲ್ಲಿ ನೈತಿಕ ವಿವರಣೆಯ ಶಕ್ತಿಯೂ ಶರವಣನಿಗಿದೆ. ಅಂತಹ ಅನೇಕ ವೇಳೆ, ನಿರೂಪಕ ಶರವಣನಿಂದ ಕೌಶಲ್ಯವನ್ನು ನಿರೀಕ್ಷಿರದೇ ಆಶ್ಚರ್ಯಚಕಿತನಾಗುತ್ತಾನೆ ಹೊರತು ಶರವಣನ ಒಳಹೊಕ್ಕು ನೋಡುವ ಪ್ರಯತ್ನ ಮಾಡುವುದಿಲ್ಲ (ನಿಜವಾದ ಮುಖಾಮುಖಿ ಇನ್ನೂ ಆಗಿಲ್ಲ).

ಅಷ್ಟಲ್ಲದೇ, ಶರವಣ ಒಳ್ಳೆಯ ಕಥೆಗಾರ ಕೂಡಾ. ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತನ್ನದಲ್ಲದ್ದನ್ನು ನಂಬಬೇಕಾಗಿದ್ದರೂ ತಯಾರು. ನಿಜವಾಗಿಯೂ ಹಾಗೆ ನಂಬಿದ್ದಾನೋ ಇಲ್ಲವೋ ಗೊತ್ತಾಗುವುದಿಲ್ಲ. ಅವನ ಮಾತುಗಳಲ್ಲಿ ಅವನದ್ದೆಷ್ಟು, ಜೀವನ ನಿರ್ವಹಣೆಯ ಅನಿವಾರ್ಯತೆಯಿಂದ ಬಂದದ್ದೆಷ್ಟು ಗೊತ್ತಾಗುವುದಿಲ್ಲ. ಹಾಗೆ ಅವನು ಮಾತಿನ ಚಟಕ್ಕೆ ಎಂದು ಹೇಳುತ್ತಿರುವ ಕಥೆಗಳಲ್ಲಿ ಕೂಡಾ, ಶಹಾಣೆಯವರ ಕಥೆಯಲ್ಲಿರುವಂತೆ, ಒಂದು ಒಳಕಥೆಯಿರುವಂತಿದ್ದು, ಇಂದು ಸಮಾಜ ಕುರುಡಾಗಿ ಆಪರ್ಚುನಿಟಿಗಳ ಹಿಂದೆ ಬಿದ್ದಿರುವುದನ್ನು ಧ್ವನಿಸುತ್ತಿದೆಯೇ ಎನ್ನುವುದು ನನ್ನ ಅನುಮಾನ. ಇಲ್ಲಿ ವಾಸ್ತು ಎನ್ನುವುದು ಏಕಕಾಲದಲ್ಲಿ ಮೂಢನಂಬಿಕೆಯೂ, ಒಟ್ಟು ಪರಿಸರದ/ಜೀವನದ ಸಮಗ್ರತೆಯನ್ನು ಕಾಪಾಡುವ ಪರಿಕಲ್ಪನೆಯಾಗಿಯೂ ಮೂಡಿಬರುತ್ತಿದೆ ಎಂದೆನ್ನಿಸುತ್ತದೆ. ಸಮಗ್ರತೆಯ ಪರಿಕಲ್ಪನೆಯಿರದ ಚಲನೆಯ ತರುವ ದುರಂತದ ಕಥೆಯಂತೆಯೂ ಇದೆ. ಈ ಪ್ಯಾರಾವನ್ನು ಸ್ವಲ್ಪ ಹೆದರಿಕೆಯಿಂದ ಬರೆಯುತ್ತಿದ್ದೇನೆ, ಕಥೆಗಾರರಿಗೆ ಇದು ಒಪ್ಪಿಗೆಯಾಗದೇ ಅಸಮಾಧಾನ ತರಬಹುದಾದ ಸಾಧ್ಯತೆಯಿರುವುದರಿಂದ.

ಕಾಲ, ಇತಿಹಾಸ ರೂಪಿಸಿರುವ ಇಂತಹ ಪರಿಸ್ಥಿತಿಯನ್ನು ಮೀರಿದ ಕಾಣ್ಕೆ, ಚಲನೆ ಸಾಧ್ಯವಾಗುವ ರೀತಿಯನ್ನು ಬಿಂಬಿಸುವಂತಿರುವ ಪೂರ್ವಾರ್ಧದ ಕೊನೆಯ ಕೆಲಪ್ಯಾರಾಗಳು - ತಮ್ಮ ಕಾವ್ಯಾತ್ಮಕತೆಯಿಂದ ಕಥೆಯ ಅತ್ಯುತ್ತಮ ಭಾಗಗಳಾಗಿವೆ. ನಿರೂಪಕ ಆಧುನಿಕತೆಯ ಅಹಂಕಾರದಲ್ಲಿರುವವನು. ಶರವಣ ಹೇಗೋ ಜೀವನ ನಡೆಸಿಬಿಡುತ್ತೇನೆ ಎನ್ನುವ ಆತ್ಮವಿಶ್ವಾಸವುಳ್ಳವನು. ಇವರಿಬ್ಬರ ನಡುವೆ ಹಾರ್ದಿಕ ಎನ್ನಿಸುವಂತಹ ಒಂದು ಸಂಬಂಧವೇರ್ಪಟ್ಟಿದೆ. ಆಧುನಿಕತೆಯ ಸಂಕೇತವಾಗಿರುವ ರಸ್ತೆಯ ಬಳಿ ಇವರ ಮಾತುಕತೆ. ಅಂತಹ ರಸ್ತೆಗೆ 'ಬೆನ್ನು ಹಾಕಿ' ನಿಂತಿರುವವನು ಶರವಣ. ನಿರೂಪಕ ರಸ್ತೆಗೆ ಮುಖಮಾಡಿದ್ದರೂ ಅವನ ಮಾತುಕತೆ ಶರವಣನೊಂದಿಗೆ ನಡೆಯುತ್ತಿದೆ (ಆದ್ದರಿಂದ 'ರಸ್ತೆ' ಪ್ರತಿನಿಧಿಸುತ್ತಿರುವ ಪ್ರಕ್ರಿಯೆಯಿಂದ ಕ್ಷಣಕ್ಕಾದರೂ ವಿಮುಖವಾಗಿದೆ). ಆಧುನಿಕ ಜೀವನದ ಒಂದು ಮುಖ್ಯ ಸಂಕೇತವಾಗಿರುವ 'ಅತಿವೇಗ'-ದಿಂದ 'ರಸ್ತೆ'ಯ ಬರುತ್ತಿರುವ 'ಬಸ್', 'ನಿಯಂತ್ರಣ' ತಪ್ಪಿ 'ಹಠಾತ್ ಆಕ್ರಮಣ' ನಡೆಸುತ್ತದೆ. ಇದಕ್ಕಿಂತ ಹೆಚ್ಚು ವಿವರಣೆ ಅಗತ್ಯವಿರಲಾರದು ಎಂದುಕೊಳ್ಳುತ್ತೇನೆ. ಒಟ್ಟು ಇವತ್ತಿನ ಪ್ರಕ್ರಿಯೆಯನ್ನು ತನ್ನೆಲ್ಲಾ ವಿವರಗಳೊಂದಿಗೆ ಕಾವ್ಯಾತ್ಮಕವಾಗಿ ನಿರೂಪಿತವಾಗಿದೆ.

ಶರವಣನೊಂದಿಗೆ ಮಾತಿಗಿಳಿದಿರುವ 'ನಿರೂಪಕ'-ನಿಗೆ ಮಾತ್ರ ಇದು ಪ್ರಜ್ಞೆಯಲ್ಲಿ 'ದಾಖಲಾಗುತ್ತದೆ'. ಪ್ರಜ್ಞಾಪೂರ್ವಕವಾದ ಗಮನವಲ್ಲ ಎನ್ನುವುದು ಮುಖ್ಯ. ನಿರೂಪಕನ ತತ್ಕ್ಷಣದ ಕಾರ್ಯಾಚರಣೆಯಿಂದ ಶರವಣ ಬಸ್ಸಿನಿಂದ ಪಾರು. ನಿರೂಪಕನ ಈ ಸಹಾಯ ಪ್ರಜ್ಞಾಪೂರ್ವಕವಾದ ಕ್ರಿಯೆಯಲ್ಲ ಎನ್ನುವುದೂ ಗಮನಾರ್ಹ, ಅವನ ಸಂಕಲ್ಪಶಕ್ತಿಯನ್ನು ಮೀರಿ ನಡೆದದ್ದು ಇದು. ಆ ಕ್ಶಣ ಅವರಿಬ್ಬ ನಡುವೆ ವಿಶೇಷವಾದ ಸಂಬಂಧವೊಂದು ಶುರುವಾಗುತ್ತದೆ. ಬಸ್ಸು ಸ್ಕೂಟರುಗಳನ್ನು (ಆಧುನಿಕತೆಯ ಒಂದು ರೂಪ ಮತ್ತೊಂದನ್ನು) ನಾಶಮಾಡುವುದನ್ನು ಪ್ರತಿನಿಧಿಸಲು ಬಳಸಿರುವ ಪದ 'ಗದ್ದೆಯಲ್ಲಿ ಕೊಯ್ಲು ಮಾಡಿದ ಹಾಗೆ ಚಚ್ಚಿ' ದಿಗ್ಭ್ರಮೆ ಹುಟ್ಟಿಸುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ಯಾವನೇ 'ತೂಕಡಿಸುವ ನಾಯಿ' (ಆಧುನಿಕ ಪ್ರಕ್ರಿಯೆಯೊಂದಿಗೆ ಸಂಬಂಧವಿರಿಸಿಕೊಳ್ಳದೇ ಇರುವವನು) ಖಂಡಿತಾ ನಾಶವಾಗುತ್ತಾನೆ. ಶರವಣ ಬದುಕಿಕೊಂಡದ್ದು ಆಧುನಿಕತೆಯೊಂದಿಗೆ ಅವನ ಒಂದು ಬಗೆಯ ಸಂಬಂಧದಿಂದ, ಅದೂ ಅದೃಷ್ಟದಿಂದ, ಅದಕ್ಕೂ 'ನಿಮಿತ್ತ'ನಾದವನೊಬ್ಬ ಆಧುನಿಕತೆಯ ಮುಂಚೂಣಿಯಲ್ಲಿರುವ ಮನುಷ್ಯ. ಒಟ್ಟು ಚಿಂತಾಜನಕ ಸ್ಥಿತಿಯ ಸತ್ಯ ಇಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಆಧುನಿಕತೆಯ ಪ್ರತಿನಿಧಿಗಳಾಗಿ ಬಸ್, ರಸ್ತೆ, ವೇಗ, ಹಠಾತ್ ಆಕ್ರಮಣ, ನಿರೂಪಕ ಈ ಪ್ಯಾರಾಗಳಲ್ಲಿ ಸಮರ್ಥವಾಗಿ ಪ್ರಕ್ರಿಯೆಯ ಒಟ್ಟು ಚಿತ್ರಣ ಕೊಡುತ್ತಾರೆ. ಈ ಎಲ್ಲಾ ಕ್ರಿಯೆಗಳಿಂದುಂಟಾಗುವ ಪರಿಣಾಮವೂ ಅಷ್ಟೇ ಸಮರ್ಥವಾಗಿದೆ.

ಸಾವಿನ ಸಾಧ್ಯತೆ ಕಂಡ ಶರವಣ ನಿರೂಪಕನ ಕೈಹಿಡಿದು ಸಾಂತ್ವನಗೊಳ್ಳುತ್ತಾನೆ, ಆಧುನಿಕನ ಈ ಕ್ರಿಯೆಯೂ ಅಪ್ರಜ್ಞಾಪೂರ್ವಕವಾದ್ದು ಫ಼್ಲ್ಯಾಶ್-ಬ್ಯಾಕ್-ನಲ್ಲಿ ನಿರೂಪಕ ಇದನ್ನು ಗಮನಿಸಿಕೊಳ್ಳುತ್ತಾನೆ. ಆ ವಿಧ್ವಂಸವನ್ನು ಜನಪದ ಗ್ರಹಿಸಿದ್ದು 'ಅದೃಷ್ಟ'-ದ ಪರಿಕಲ್ಪನೆಯಲ್ಲಿ. ಇಷ್ಟನ್ನು ಬಿಟ್ಟರೆ ನಿರೂಪಕ ಮತ್ತು ಶರವಣ ಇಬ್ಬರದೂ ಈ ಕ್ಷಣಕ್ಕೆ ಒಂದೇ ಸ್ಥಿತಿ. ನಿರೂಪಕನಿಗೆ 'ಜೀವನದ ಕ್ಷಣಭಂಗುರತೆ'-ಯ ದರ್ಶನ. ಶರವಣನಿಗೆ ತನ್ನ ಸಾವಿನ ದರ್ಶನ. ತಮ್ಮ ಕಾಲದ ಜೀವನದ ಎಲ್ಲಾ ಕಿಡಿಸ್ಫೋಟ-ಭೋರ್ಗರೆತ-ಪ್ರವಾಹಗಳು ಕ್ಷಣವೊಂದರಲ್ಲಿ ಸಾಂದ್ರಗೊಂಡು ಇಬ್ಬರಿಗೂ ಸತ್ಯ ದರ್ಶನ ಮಾಡಿಸಿದಾಗ ಇಬ್ಬರಲ್ಲೂ ಒಂದು ಬಗೆಯ ಬದಲಾವಣೆಯುಂಟಾಗುತ್ತದೆ. ನಿಜದಲ್ಲಿ, ಅದು ನಿರಂತರ ಬಾಂಧವ್ಯ ತರುತ್ತದೋ, ಕ್ಷಣಬಾಂಧವರಾಗುತ್ತಾರೋ ಹೇಳಲಾಗದಾದರೂ, ಈ ಕಥೆಯಲ್ಲಿ ಕಾಲದಲ್ಲಿ ಗಟ್ಟಿಯಗಿ ನಿಲ್ಲಬಹುದಾದ ಬಾಂಧವ್ಯ ಸೃಷ್ಟಿಯಾಗುತ್ತದೆ, ಕಥೆಯ ಆಶಯವೂ ಪ್ರಾಯಶಃ ಅದೇ.

ಮುಂದುವರೆದ ಕಥೆಯ ಉತ್ತರಭಾಗದಲ್ಲಿ, ಅವರಿಬ್ಬರ ನಡುವೆ ದೇವರು ಮತ್ತು ಭಕ್ತನ ಒಂದು ಬಾಂಧವ್ಯ, ಸಂಬಂಧವೇರ್ಪಡುತ್ತದೆ. ಇದರ ಪರಿಣಾಮವಾಗಿ ನಿರೂಪಕ ಶರವಣನ ಧ್ವನಿಯಲ್ಲಿ ಪ್ರಾಮಾಣಿಕವಾದ ನಿವೇದನೆಯನ್ನು ಕಂಡುಕೊಳ್ಳುತ್ತಾನೆ, (ಅದು ಶರವಣನ ನಿಜವ್ಯಕ್ತಿತ್ವವಿರಬಹುದೇ ಎಂದು ಓದುಗರಿಗೆ ಅನ್ನಿಸದಿರದು), ನಿರೂಪಕನಿಗೆ ಮತ್ತೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಶ್ರವಣನ ಹಿನ್ನೆಲೆ, ಮೂಲದಿಂದ ಇವತ್ತಿನವರೆಗಿನ ಅವನ ಚಲನ-ಸ್ಥಿತಿಗಳು ಚಲನೆ ಅನಾವರಣಾಗೊಳ್ಳುತ್ತದೆ. ಆ ಚಲನೆಯ ಒಂದು ರೂಪ ಶ್ರವಣ. ಪ್ರಾಯಶಃ ಅದೇ ಬಿಂದುವಿನಿಂದಾರಂಭವಾಗಿ ಮತ್ತೆಲ್ಲೋ ಬಂದುನಿಂತಿದ್ದಾನೆ ನಿರೂಪಕ. ಆತನೆಂದೂ ಅ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಸಾಧ್ಯತೆಯಿಲ್ಲವೆನ್ನಿಸುತ್ತೆ. ಶ್ರವಣನ ಕಥೆಯ ಅನಾವರಣವಣದ ಮೂಲಕ ಅದನ್ನು ಮರುಷ್ಟಿಸಿಕೊಳ್ಳಬೇಕಿರುವುದು ನಿರೂಪಕನ ಸ್ಥಿತಿಯ ವ್ಯಂಗ್ಯ. ಈ ಭಾಗ ಕಥೆಯಲ್ಲಿ ಹೆಚ್ಚು ಬೆಳೆದಿಲ್ಲದಿದ್ದರೂ ಕಥೆ ತನ್ನ ಮೌನದಲ್ಲೇ ಇದನ್ನು ಅಡಗಿಸಿಕೊಂಡಿದೆ.

ಚಿಕ್ಕ ಊರಿನಲ್ಲಿರುವ ಶ್ರವಣನ ತಂದೆ ಸಾಂಸ್ಕೃತಿಕವಾಗಿ ಗಮನಾರ್ಹರಾದ ಸಂಪ್ರದಾಯವಾದಿಗಳು ಅನ್ನಿಸುತ್ತದೆ. ಅವರ ಜ್ಯೋತಿಷ್ಯದಲ್ಲೇನಿದ್ದರೂ 'ಲಕ್ಷಣ' ಮಾತ್ರ ಪ್ರಾಮುಖ್ಯತೆ ಪಡೆಯುತ್ತದೆ, ಅನಿಶ್ಚಿತತೆಗೆ ಅವಕಾಶವಿದೆ, (ಇದನ್ನು ಪೋಷಿಸುತ್ತಿರುವ ಜೀವನದಲ್ಲಿ ಹೆಚ್ಚು ನಿಶ್ಚಿತತೆಯಿದೆ ಎಂದು ಹೇಳಬಹುದೇನೋ). ಇದರ ಮುಂದಿನ ಹಂತವಾದ ಆಧುನಿಕ ಜ್ಯೋತಿಷ್ಯ. ಅದು ಔದ್ಯೋಗಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ ಇತ್ಯಾದಿಗಳು ನಮ್ಮ ಪರಂಪರೆಯ ಜ್ಯೋತಿಷ್ಯದ ಜೊತೆಗೂಡಿದರಿಂದ ಉಂಟಾದ ಒಂದು ಆಧುನಿಕ ವಿಕೃತಿ. ಈ ವಾದಸ್ ಸ್ವಲ್ಪ ಅತಿಯಾದರೂ, ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಖಚಿತವಾದ್ದನ್ನು ಅಪೇಕ್ಷಿಸುತ್ತದೆ, ನಿರೀಕ್ಷಿಸುತ್ತದೆ, ಉದ್ದೀಪಿಸುತ್ತದೆ, ಸ್ಥಾಪಿಸಬಯಸುತ್ತದೆ. ಈ ಹಿನ್ನೆಲೆಯಲ್ಲಿ, ಲಕ್ಷಣ ಜ್ಯೋತಿಷ್ಯದಿಂದ ಫಲಜ್ಯೋತಿಷ್ಯದೆಡೆಗೆ ಶ್ರವಣನ ತಂದೆಯ (ಮತ್ತು ಶ್ರವಣನ) ಪಯಣ ಕುತೂಹಲಕರವಾಗಿದೆ. ಆಧುನಿಕ ಪ್ರಕ್ರಿಯೆಗಳಿಂದ ಪ್ರಭಾವಿತರಿರಬಹುದಾದ ದೇವಸ್ಥಾನದ ಆಡಳಿತಮಂಡಳಿಯೆಂಬ (ಆಧುನಿಕ?) ವ್ಯವಸ್ಥೆಯೊಂದಿಗೆ ಹೆಚ್ಚು ಸಂಪ್ರದಾಯವಾದಿಗಳಾದ ಶ್ರವಣನ ತಂದೆಯ ಜಗಳದಿಂದ ಅವರು ಲಕ್ಷಣ ಹೇಳುವುದನ್ನಷ್ಟೇ ಅಲ್ಲದೇ ಫಲಜ್ಯೋತಿಷ್ಯಕ್ಕೆ ತೊಡಗಬೇಕಾದ್ದು ಇಲ್ಲಿ ಸೂಚಿತವಾಗಿದೆ. ಈ ವಿಕಾರಕ್ಕೆ ಅನಿಶ್ಚಿತತೆ ಬೇಕು ಒಂದೋ ಸೃಷ್ಟಿಸುತ್ತದೆ ಇಲ್ಲವೋ ಅದಿರುವಲ್ಲಿಗೆ ಅದನ್ನು ಹುಡುಕಿಕೊಂಡು ಹೋಗುತ್ತದೆ. ಆದ್ದರಿಂದಲೇ, ಅದು ಸ್ವಲ್ಪ ದೊಡ್ಡದಾದ ಶ್ರೀರಂಗಪಟ್ಟಣದಲ್ಲಿ (ಮುಂದೆ ಬೆಂಗಳೂರಿನಲ್ಲಿ) ಹೆಚ್ಚು ಬೇರೂರುವ ಸಾಧ್ಯತೆ ಇರುವುದು ಕಥೆಯಲ್ಲಿ ಸೂಚಿತವಾಗಿದೆ (ನೇರವಾಗಿ ಶ್ರೀರಂಗಪಟ್ಟಣದಲ್ಲೇ ಶ್ರವಣ-ತಂದೆ ನೆಲೆಸುತ್ತಾರೆ ಎನ್ನುವುದು ಕಥೆಯಲ್ಲಿಲ್ಲ, ಚಲನೆ ಮಾತ್ರ ಅದರೆಡೆ ಇರುವಂತಿದೆ). ಅವರು ಶ್ರೀರಂಗಪಟ್ಟಣದಲ್ಲಿ ನೆಲೆಸುವುದಾದರೆ ಅದು ಆಧುನಿಕತೆಯಿಂದುಂಟಾದ ಚಲನೆಯ ಮೊದಲ ಘಟ್ಟವನ್ನು ಸೂಚಿಸುತ್ತದೆ. ದೊಡ್ಡ ಊರಿನ ಅನಿಶ್ಚಿತತೆಯೂ ಆಧುನಿಕತೆಯ ಪರಿಣಾಮವೇ ಆಗಿದೆ ಎನ್ನುವುದು ಗಮನಾರ್ಹ. ಚಿಕ್ಕ ಊರಿನಲ್ಲಿ ಆಧುನಿಕತೆಯ ಪರಿಣಾಮ ಆಗಿರಬಹುದಾದ ವಿಕೃತಿ ದೊಡ್ಡ ಊರಿನಲ್ಲಿ ಬೇರೂರುವುದು ಕೂಡಾ ದೊಡ್ಡ ಊರಿನಲ್ಲಿ ಆಧುನಿಕತೆ ತಂದಿರುವ ಅನಿಶ್ಚಿತತೆ - ಎನ್ನುವಲ್ಲಿ ನಮ್ಮ ದೇಶದಲ್ಲಿ ಆಧುನಿಕತೆ ಮೊದಲ ಘಟ್ಟದಲ್ಲಿ ತಂದಿರುವ ಚಲನೆಯ ಒಂದು ಮುಖದ ಚಿತ್ರಣವಿದೆ. ಹಳ್ಳಿಯಿಂದ ಚಿಕ್ಕ ಪಟ್ಟಣಕ್ಕೆ ಚಲನೆ. ಗಮನಿಸಬೇಕಾದ ಮತ್ತೊಂದು ವಿಪರ್ಯಾಸವೆಂದರೆ, ಸಾಂಸ್ಕೃತಿಕವಾಗಿ ಹೆಚ್ಚು ಸುಭದ್ರವಿರುವ ಊರಿನಲ್ಲಿ ವಿಶ್ಲೇಷಣೆಯಲ್ಲಿ, ದೃಷ್ಟಿಯಲ್ಲಿ ಅನಿಶ್ಚಿತತೆಗೆ ಅವಕಾಶವಿದೆ ('ಲಕ್ಷಣ ಜ್ಯೋತಿಷ್ಯ'). ಆದರೆ ಅನಿಶ್ಚಿತತೆ ತಾಂಡವವಾಡುತ್ತಿರುವಲ್ಲಿ 'ಫಲ ಜ್ಯೋತಿಷ್ಯ'ದಂತಹ ಖಚಿತತೆಗೆ ಮನುಷ್ಯ ಶರಣಾಗುತ್ತಾನೆ.

ಆದರೆ ಚಲನೆಯ ಈ ಪ್ರಕ್ರಿಯೆಯ ಒಂದು ಬಗೆಯ ಸಂಪೂರ್ಣತೆಯನ್ನು ಅಥವಾ ಸಮಗ್ರತೆಯನ್ನು ಪಡೆದುಕೊಳ್ಳುವ ಮೊದಲೇ ದೊಡ್ಡ ನಗರಗಳ ಬೆಳವಣಿಗೆಯೂ ಸಮಾನಾಂತರದಲ್ಲಿ ನಡೆದಿತ್ತು. ಮತ್ತು ಅದು ಹಳ್ಳಿಗಳನ್ನೂ, ಚಿಕ್ಕ ಊರುಗಳನ್ನೂ ಪ್ರಭಾವಿಸುತ್ತಲೇ ಬಂದಿತ್ತು. ಇದರ ಪ್ರತಿನಿಧಿಯಾದ 'ಲಾವಣ್ಯ' ಶರವಣನಿಗೆ ದೂರದ ಸಂಬಂಧಿಯೇ ಎನ್ನುವುದು ಗಮನಾರ್ಹ. ಅವಳ ಹೆಸರಿನ ಸ್ವಾರಸ್ಯವನ್ನೂ ಕಥೆಯ ಹಿನ್ನೆಲೆಯಲ್ಲಿ ಗಮನಿಸಬೇಕದ್ದು. ಶರವಣ ಅವಳತ್ತ ಆಕರ್ಷಿತನಾಗಿದ್ದಾನೆ. ಅವನ ಮನೆಯವರಿಗಾದರೂ ಈ ಸಂಬಂಧ ಒಪ್ಪಿಗೆಯೆಂದ ಮೇಲೆ ಅವರಿಗೂ ಈ ಕುರಿತ ಆಕರ್ಷಣೆಯಿದೆ. ಇದರ ಕುರಿತು ಕಥೆಗಾರರು (ಅಥವಾ ಶರವಣ) ಏನೂ ಹೇಳದೆ ಒಂದು ದೊಡ್ಡ ಮೌನದಲ್ಲಿ ಸಾಧ್ಯತೆಯನ್ನು ಸೂಚಿಸಿದ್ದಾರೆ. ಚಲನೆಯ ಮೊದಲು ಬಿಂದು ಆಧುನಿಕತೆಯೊಂದಿಗಿನ ಜಗಳದಿಂದಾದರೆ (ದೇವಸ್ಥಾನದ ಆಡಳಿತಮಂಡಳಿ) ಚಲನೆಯ ಎರಡನೇಯ ಬಿಂದು ಆಧುನಿಕತೆಯೊಂದಿಗಿನ ಆಕರ್ಷಣೆ (ಬೆಂಗಳೂರಿನ ಲಾವಣ್ಯ). ಶರವಣ-ಲಾವಣ್ಯರ ಮೊದಲ ಘಟ್ಟದ ಸಂಬಂಧ ಜಾಗತೀಕರಣ ಪೂರ್ವ ಭಾರತವನ್ನು ಧ್ವನಿಸುವಂತಿದೆಯೇನೋ ಎಂದು ಅನುಮಾನ ಬರುತ್ತದೆ. ಭೋರ್ಗರೆತದ ಜಾಗತೀಕರಣದಂತಹ ಯಾವುದೇ ಪ್ರಕ್ರಿಯೆಗೆ ದೇಶ ಸಜ್ಜುಗೊಳ್ಳುತ್ತಿರುವಂತಿದೆ ಇಲ್ಲಿ. ಅದನ್ನು ಸ್ವಾಗಿತಿಸಿ ಮೊದಮೊದಲು ತುಳಿಸಿಕೊಳ್ಳಲು ಬೇಕಾದ ಭೂಮಿಕೆಯೊಂದು ಗುಪ್ತಗಾಮಿನಿಯಾಗಿ ತಯಾರಾಗುತ್ತಿರುವಂತೆ ಇಲ್ಲಿ ಧ್ವನಿತವಾದಂತಿದೆ. ಲಾವಣ್ಯಳೇ ಒಪ್ಪಿಕೊಳ್ಳುತ್ತಿದ್ದಳೋ ಏನೋ, ಆದರೆ ಶರವಣನೇ ಎಲ್ಲವನ್ನೂ ಬದಲಿಸಲು ಹಟ ತೊಟ್ಟವನಂತಿದ್ದ.

ಶ್ರೀಕಾಂತನ (ಎಲ್ಲಾ ಆಧುನಿಕ ವಿಕಾರಗಳನ್ನು ಹಠಾತ್ತಾಗಿ ತರುವವ) ಆಗಮನದಿಂದುಂಟಾಗುವ ಬದಲಾವಣೆಗಳ ಕೇಂದ್ರ ಬಿಂದು ಯಾರೆಂದು ಹೇಳುವುದೇ ಕಷ್ಟವಾಗುತ್ತದೆ ಕಥೆಯಲ್ಲಿ. ಇದು ಜಾಗತೀಕರಣದ ಪ್ರಕ್ರಿಯೆಯ ಸಂಕೀರ್ಣತೆಯನ್ನು ಸರಿಯಾಗಿ ಚಿತ್ರಿಸುತ್ತದೆ. ನಂತರದ ಭಾಗಗಳು, ಇತ್ತೀಚಿನ ವರ್ಷಗಳ ವಿಷಯಗಳನ್ನು ಚಿತ್ರಿಸುತ್ತವೆ. (ಅಲ್ಲಲ್ಲಿ ಮಾಸ್ತಿಯವರ 'ದೋರನ ಕಂಬಳ' ಮತ್ತು ಕೃಷ್ಣ ಆಲನಹಳ್ಳಿಯವರ 'ಪರಸಂಗದ ಗೆಂಡೆ ತಿಮ್ಮ' ಜ್ಞಾಪಕ ಬಂದಿತ್ತು ನನಗೆ, ಏಕೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾರೆ.) 'ಆ ದಿನ ಕೋಣೆಯಲ್ಲಿ ಏನೇನು ನಡೆಯಿತು ಎಂದು ಹೇಳುವುದು ಕಷ್ಟ' ಎನ್ನುವುದು ಕೂಡಾ ಪ್ರಕ್ರಿಯೆಯ ಸಂಕೀರ್ಣತೆಯನ್ನು ಧ್ವನಿಸುತ್ತದೆ. ಬೆಂಗಳೂರಿನ ಲಾವಣ್ಯಳ ಪ್ರೋತ್ಸಾಹವನ್ನು ಶ್ರೀರಂಗಪಟ್ಟಣದ ಶ್ರವಣ ಅಂದುಕೊಂಡುಬಿಟ್ಟಿರುತ್ತಾನೆ. ಅವಳಿಗೆ ಬೇಕಿತ್ತೇ ಇಲ್ಲವೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲವೂ 'ಊರು ಬಿಡುವುದೇ ಮುಖ್ಯ' ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಇಂತಲ್ಲಿ ಕೂಡಾ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳದೇ ಹೋದವರು 'ಲಕ್ಷಣ' ಜ್ಯೋತಿಷ್ಯದ ಹಿನ್ನೆಲೆಯಿದ್ದ ಶ್ರವಣನ ತಂದೆ ಮಾತ್ರ.

ನಂತರದ ಭಾಗಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಶ್ರವಣನ ಹಿನ್ನೆಲೆಯಿರುವ ಜನರು ಪಡುವ ಪಡಿಪಾಟಲುಗಳನ್ನು ಚಿತ್ರಿಸುತ್ತದೆ. ಅದೇ ರೀತಿ ಆ ಪಯಣದಲ್ಲಿ ಸಮಾಜದ ಎಲ್ಲಾ ವರ್ಗಗಳ ಛಾಯೆ ಶ್ರವಣನಂತಹವರಲ್ಲಿ ಮಾತ್ರ ಪಡಿಮೂಡುವುದನ್ನೂ ಕಥೆ ಚಿತ್ರಿಸುತ್ತದೆ. ಆ ಮೂಲಕ ಸಮಾಜದ ಬದಲಾವಣೆ, ಯಾವ ಆಧುನಿಕತೆ, ಯಾವ ಪರಂಪರೆಯ ಜೊತೆಗೆ ಬೆಸೆದುಕೊಳ್ಳುತ್ತಿದೆ ಎನ್ನುವುದೆಲ್ಲಾ ಕಥೆಯಲ್ಲಿ ಬರುತ್ತದೆ. ಅತ್ಯಾಧುನಿಕರಂತಿರುವವರು ಅಗತ್ಯ ಬಿದ್ದಾಗ ಜೋತುಬೀಳುವ ಪಾರಂಪರಿಕ ಸ್ವರೂಪಗಳು ಕೋಮುವಾದೀ ಪ್ರಕ್ರಿಯೆಗೆ ಹೆಚ್ಚಿನ ನೀರೆರೆಯುವಂತಿರುವುದರ ಸೂಚನೆಯೂ ಇದೆ, ಕಥೆಗಾರರಾಗಲಿ, ನಿರೂಪಕ ಶ್ರವಣನಾಗಲಿ, ಘೋಸ್ಟ್-ನಿರೂಪಕ ಆಧುನಿಕನಾಗಲೀ ಇದನ್ನು ನೇರವಾಗಿ ಎಲ್ಲೂ ಹೇಳುವುದಿಲ್ಲ. (ಇಷ್ಟೆಲ್ಲಾ ಆದರೂ, ಈ ಕೆಲ ಭಾಗಗಳಲ್ಲಿ ಶರವಣನ ಮೆಲುದನಿಯ ನಿರೂಪಣೆ ಸಡಿಲವಾಗಿ ಸ್ವಲ್ಪ ಭಾಷಣವಾಗಿಬಿಟ್ಟಿದೆ.) ಒಟ್ಟು ಸ್ವತಃ ನೆಮ್ಮದಿಯನ್ನು ಕಳೆದುಕೊಂಡವ ಇತರರಿಗೆ ನೆಮ್ಮದಿಯನ್ನು ಮಾರುವ ಮನುಷ್ಯನಾಗುವುದು ಮತ್ತೊಂದು ವಿಪರ್ಯಾಸ. ಅಪ್ಪನಿಂದ ಜ್ಯೋತಿಷ್ಯ ಕಲಿಯದೇ ಕೇವಲ ಭಾಷೆಯನ್ನು ಕಲಿಯುವುದು ಜ್ಞಾನದ ಛಿದ್ರವಾದ ಗ್ರಹಿಕೆಯಿಂದ ಉಂಟಾಗುವ ವಿಕೃತಿಯನ್ನು ಸೂಚಿಸುವಂತಿದೆ. ಇದೆಲ್ಲದರ ದುರಂತವಾಗಿ ಶರವಣ ಬೆಂಗಳೂರಿನ ಲಾವಣ್ಯಳನ್ನೂ ಕಳೆದುಕೊಂಡು ಏಕಾಂಗಿಯಾಗುತ್ತಾನೆ. ಆ ನಂತರ ಕಥೆಯಲ್ಲಿ ಲಾವಣ್ಯ ಮತ್ತೆ ಪ್ರತ್ಯಕ್ಷಲಾಗದೇ ಇರುವುದೂ ಒಂದು ವಿಶಿಷ್ಟವಾದ್ದನ್ನು ಧ್ವನಿಸುತ್ತದೆ. ಈ ಎಲ್ಲಾ ತಲೆಮಾರುಗಳ ದುರಂತ ಸಾಂದ್ರವಾಗಿ ಪ್ರತಿಫಲನಗೊಳ್ಳುವುದು ಶ್ರವಣ-ಲಾವಣ್ಯರ ಮಗಳಲ್ಲಿ ಅವಳ ಮೌನ ಧಾರಣೆಯಿಂದ ಎನ್ನುವುದು ನನ್ನಲ್ಲಿ ದಿಗ್ಭ್ರಮೆ ಹುಟ್ಟಿಸುತ್ತದೆ. ಆ ಹುಡುಗಿ ಸಂವೇದನಾಶೀಲಳಾಗದೇ ಹೋಗಿದ್ದರೆ ಹೇಗಿರುತ್ತಿದ್ದಳು ಎನ್ನುವುದಕ್ಕೆ ಕಥೆಯಲ್ಲಿ ಸಮಾನಾಂತರವಾದ ಪಾತ್ರವಿಲ್ಲದ್ದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಆದರೆ ಈ ಹುಡುಗಿ ಸಂವೇದನಾಶೀಲಳಂತಿದ್ದು ಅವಳ ದುರಂತ ಮುಖಕ್ಕೆ ರಾಚುತ್ತದೆ. ಶ್ರವಣ-ಲಾವಣ್ಯರ ಸಂಬಂಧಗಳು ಬಿರುಕುಬಿಡುವ ಭಾಗಗಳ ವರ್ಣನೆಗಳೆಲ್ಲಾ ಅವ್ಯಕ್ತಕ್ಕೆ ಕೈಚಾಚಿದಂತಿದ್ದು, ಅರ್ಥವಾಗದ ಪ್ರಕ್ರಿಯೆಗಳನ್ನು, ನಿಗೂಢವನ್ನು ಧ್ವನಿಸುವಂತಿದ್ದು ಕಥೆಯ ಹೆಚ್ಚುಗಾರಿಕೆಯಾಗಿದೆ.

ಈ ಎಲ್ಲಾ ದುರಂತಗಳು ಹೀಗಿದ್ದೂ, ಇಂತಲ್ಲೇ, ಒಟ್ಟು ಸಮುದಾಯವನ್ನು ಗಮನಿಸಬಲ್ಲ ಮನುಷ್ಯನ ಮಾದರಿಯೊಂದು ಸಿದ್ಧಗೊಳ್ಳುತ್ತಲಿರುವುದೂ ಶ್ರವಣನ ಬದುಕಿನ ಚಲನೆಯ ವಿವರಗಳಲ್ಲಿ ದೊರೆಯುತ್ತದೆ. ಪ್ರಜ್ಞಾಪೂರ್ವಕ ಸಿದ್ಧತೆಯಲ್ಲ ಇದು, ದಾಳಿಯ ನಡುವೆಯೂ ಪ್ರಕೃತಿ ಮನುಷ್ಯನಿಗೋಸ್ಕರ ಗುಟ್ಟಾಗಿ ಬಚ್ಚಿಟ್ಟಿರುವ, ಅಗತ್ಯ ಬಿದ್ದಾಗ ಒದಗಿಸುವ ಕ್ರಮ. ಆದರೆ ಅದನ್ನು ಬಳಸಿಕೊಳ್ಳುವಷ್ಟು ಶರವಣನಲ್ಲಿ ಸದ್ಯಕ್ಕೆ ಶಕ್ತಿಯಿಲ್ಲ.

ಶ್ರವಣನ ನಿವೇದನೆಯಲ್ಲಿ ನಿರೂಪಕನಿಗೆ ಒಂದು ಪ್ರಪಂಚದ ಪರಿಚಯವಾಗಿ ಅದರ ಜೊತೆ ಸಂಬಂಧ ಬೆಳೆಯುತ್ತದೆ. ಅದರ ಫಲವಾಗಿ ಶ್ರವಾಣನ ಮನೆಗೆ ಹೋದಾಗ ತನ್ನ ಸಹೋದ್ಯೋಗಿಗೂ, ಯು.ಜಿ. ವಿಚಾರಧಾರೆ, ಕಲ್ಟ್-ಗೂ ಸಂಬಂಧವಿರುವುದು ಗೊತ್ತಾಗುತ್ತದೆ. ಶರವಣನ ಸಂಪರ್ಕವಿರದೇ ಇದ್ದರೆ ಇದು ತಿಳಿಯುವ ಸಾಧ್ಯತೆ ಕಡಿಮೆಯಾಗಿರುತ್ತಿತ್ತು ಎನ್ನುವ ಧ್ವನಿಯಿದೆಯೇ ಇಲ್ಲಿ? ಆಧುನಿಕತೆಯ 'ಅತಿ'-ಯೆನ್ನುವುದು ಪರಂಪರೆಯನ್ನು ಸ್ಪರ್ಷಿಸಿ ಮತ್ತಷ್ಟು ವಿಕೃತಿಯಲ್ಲಿ ಪರ್ಯವಸಾನವಾಗುತ್ತಿದೆ ಎನ್ನುವುದು ಈ ಆಧುನಿಕನ ನಿಲುವೋ? ಈ ಭಾಗದ ಕಥೆಗೆ ನನಗೆ ಇನ್ನೂ ಅಷ್ಟಾಗಿ ದಕ್ಕಿಲ್ಲ.

ಈಗ ಶ್ರವಣನ ಮಗಳ ಜೀವನ ಸಾರ್ಥಕಗೊಳ್ಳಬೇಕಿದೆ. ಶ್ರವಣನ ಜೀವನವೂ. ಹಿಂದಿನ ತಲೆಮಾರಿನ ಶ್ರವಣನ ತಾಯಿಗೆ ನಂಬಿಕೆಯಿರುವುದು ಈ ಎಲ್ಲಾ ಅನುಭವಗಳಿಂದ ಹೆಚ್ಚು ಮಾರ್ದವಗೊಂಡಿರಬಹುದಾದ, ಶ್ರವಣನ ಮನೆಯವರೆಗೂ ಬರುವಷ್ಟು ಸಂಬಂಧ ಬೆಳೆಸಿಕೊಂಡಿರುವ, ಸ್ವಲ ಹೆಚ್ಚು ಪ್ರಾಮಾಣಿಕನಾಗಿರಬಹುದಾದ ಆಧುನಿಕನಾದ ನಿರೂಪಕನಲ್ಲಿ. ದುರಂತಗಳಿಂಡ ಝರ್ಝರಿತಳಾಗಿರುವ ಅತ್ಯಾಧುನಿಕ ಜೀವನದತ್ತ ಮುಖಮಾಡಿರುವ ಶ್ರವಣನ ಮಗಳಿಗೂ ಈ ಇದೇ ಆಧುನಿಕನ ಮೇಲೆ ನಂಬಿಕೆ, ಆಟೋಗ್ರಾಫ಼್ ಕೇಳುತ್ತಾಳೆ. ಹೀಗೆ ಭವಿಷ್ಯದತ್ತ ಮುಖ ಮಾಡಿ ಕಥೆ ಸಾರ್ಥಕವಾಗಿ ಮುಗಿಯುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೂ ಒಂದು ಮಾತನ್ನು ಹೇಳಬೇಕಿದೆ. ಕಥೆಯನ್ನು ಮುಂದಿಟ್ಟುಕೊಂಡು ಅದನ್ನು ಗಳಿಸಲೇಬೇಕೆನ್ನುವ ಹಠದಿಂದ ನನಗೆ ಈ ಬರಹ ಸಾಧ್ಯವಾದದ್ದು. ಹುಲಿಸವಾರಿಯ ಓದಿನ ಅನುಭವದಿಂದ ಪ್ರೇರೇಪಿತನಾಗಿ ನಾನು ಆ ಸಂಕಲನದ ಕಥೆಗಳನ್ನು ಮತ್ತೆ ಮತ್ತೆ ಓದಿ ನನ್ನದಾಗಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಈ ಬರಹ ಅನುಭವದಿಂದ ಹೆಚ್ಚಾಗಿ ಬೌದ್ಧಿಕ ಸಾಧನೆಯಾಗಿದೆಯೆಂದರೆ ಒಂದೋ ಅದು ಕಥೆಯ ಕುರಿತ ಟೀಕೆಯಾಗುತ್ತದೆ ಇಲ್ಲವೋ ನನ್ನ ಸಂವೇದನೆಯ ಅಸಮರ್ಪಕತೆಯ ಕುರಿತ ಮಾತಾಗುತ್ತದೆ. ಎರಡನೇಯದ್ದೇ ಹೆಚ್ಚು ನಿಜವೆನ್ನಿಸುತ್ತದೆ. ಹುಲಿಸವಾರಿಯ ಹೆಚ್ಚಿನ ಕಥೆಗಳಲ್ಲಿ ನುಡಿಚಿತ್ರಗಳಿಂದ ಕಥೆ ನಿರೂಪಿತವಾಗಿರುವುದಕ್ಕೂ, ಈ ಸಂಕಲನದ ಹಾದಿ ಸಂಪೂರ್ಣ ಭಿನ್ನವಾಗಿರುವುದರಿಂದ ಹೀಗಾಗಿರಬಹುದು. ಕಥೆಯಲ್ಲಿ ಸೂಚ್ಯತೆಯೆನ್ನುವುದನ್ನು ಧರ್ಮ ಎನ್ನಿಸುವಷ್ಟು ಜತನದಿಂದ ಕಾಯ್ದುಕೊಳ್ಳಲಾಗಿದೆ. ಕಥೆಗೆ ಇದರಿಂದ ಕಾವ್ಯಾತ್ಮಕತೆ ಪ್ರಾಪ್ತವಾಗಿದೆ ಎಂದೆನ್ನಿಸದಿರದು. ಈವತ್ತಿನ ಯಾವುದೇ ಪ್ರಕ್ರಿಯೆಯನ್ನು ಇದು ಹೀಗೇ ಎನ್ನುವ ಖಚಿತವಾಗಿ ಹೇಳುವುದು ಕಷ್ಟವಾಗಿರುವುದರಿಂದಲೂ ಕಥೆಯ ಈ ಅತಿಸೂಚ್ಯತೆ ವಸ್ತುವಿನೊಂದಿಗೆ ಸಾವಯವ ಸಂಬಂಧ ಹೊಂದಿರುವ ತಂತ್ರ ಎಂದು ವಾದಿಸುವುದಕ್ಕೆ ಅವಕಾಶವಿದೆ. ಅದೇ ಸಮಯದಲ್ಲಿ, ಇದೊಂದು ನೀಳ್ಗತೆಯಾಗಿದ್ದಿದ್ದರೆ (ವಸ್ತು ಅದಕ್ಕೆ ತಕ್ಕುದಾಗಿದೆ ಎಂದೆನ್ನಿಸುತ್ತದೆ) ಅಥವಾ ಕಿರುಕಾದಂಬರಿಯಾಗಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತೇ ಎನ್ನುವ ಆಲೋಚನೆಗಳೂ ನನಗೆ ಬಂದವು. ಈ ಕುರಿತು ಯಾವುದೇ ನಿಲುವಿಗೆ ಬರಲು ಸಾಧ್ಯವಾಗಿಲ್ಲ.

ಇದೆಲ್ಲಾ ಅರ್ಥ-ಅಪಾರ್ಥಗಳ ಸರಣಿಯಂತೆ ಓದುಗರಿಗೆ ಮತ್ತು ಕಥೆಗಾರರಿಗೂ ತೋರಬಹುದು. ಅರ್ಥ-ಅಪಾರ್ಥಗಳ ಪೋಣಿಸಿದ ಮಾಲೆಯೊಂದನ್ನು ಕಥೆಗೆ ತೊಡಿಸುವುದಷ್ಟೇ ನನ್ನ ಉದ್ದೇಶ ಎನ್ನುವುದನ್ನು ವಿನಯದಿಂದ ಹೇಳುವುದಕ್ಕೆ ಬಯಸುತ್ತೇನೆ.

0 Comments:

Post a Comment

<< Home