ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Friday, November 16, 2018

ವಿನತೆಯ ಮಗ ಪಕ್ಷಿರಾಜ ಗರುಡ

ಕಶ್ಯಪ ಋಷಿ ಚತುರ್ಮುಖ ಬ್ರಹ್ಮನ ಮಗ. ಅವನು ದಕ್ಶ ಪ್ರಜಾಪತಿಯ ಹದಿಮೂರು ಪುತ್ರಿಯರನ್ನು ಮದುವೆಯಾಗಿದ್ದನು. ದಿತಿಯಿಂದ ದೈತ್ಯರು ಅದಿತಿಯಿಂದ ಆದಿತ್ಯರು - ಅಂದರೆ ದೇವತೆಗಳು ಅವನ ಮಕ್ಕಳಾಗಿದ್ದರು. ರಾಕ್ಷಸರು, ದಾನವರು, ಯಕ್ಷ ಗಂಧರ್ವರು, ಪ್ರಾಣಿಗಳು ಹೀಗೆ ಸಕಲ ಜೀವಸಂಪತ್ತು ಅವನ ಮಕ್ಕಳಾಗಿದ್ದರು. ಅವನ ಪತ್ನಿಯರಲ್ಲಿ ಇಬ್ಬರು ಸದಾ ಒಟ್ಟಿಗೆ ಇರುತ್ತಿದ್ದ ಕದ್ರು ಮತ್ತು ವಿನತೆಯರು.

ಒಂದು ದಿನ ಕಶ್ಯಪ ಮಹರ್ಷಿ ಕದ್ರು ವಿನತೆಯರಿಗೆ ವರವೊಂದನ್ನು ದಯಪಾಲಿಸಲು ತೀರ್ಮಾನಿಸಿದನು. 'ಕದ್ರು, ವಿನತೆಯರೇ ನಾನೊಂದು ಯಜ್ಞಕಾರ್ಯಕ್ಕೆ ಮೊದಲಾಗಿದ್ದೇನೆ. ಅದರ ಸತ್ಫಲವಾಗಿ ನಿಮ್ಮಿಬ್ಬರಿಗೆ ಮಕ್ಕಳಾಗುತ್ತಾರೆ' ಎಂದು ಅವರನ್ನು ಕರೆದು ತಿಳಿಸಿದನು. ಕದ್ರು 'ನನಗೆ ಅತಿಶಕ್ತಿಶಾಲಿಗಳಾದ ಸಾವಿರ ಬೃಹತ್ ಸರ್ಪಗಳು ಮಕ್ಕಳಾಗಲಿ' ಎಂದು ಕೇಳಿಕೊಂಡಳು. 'ತಥಾಸ್ತು' ಎಂದ ಕಶ್ಯಪನು ವಿನತೆಯ ಕಡೆಗೆ ನೋಡಿದನು. 'ಪತಿಯೇ. ನನಗಾದರೋ ಇಬ್ಬರು ಮಕ್ಕಳು ಸಾಕು. ಆದರೆ ಅವರು ಈ ಸಾವಿರ ಸರ್ಪಗಳಿಗಿಂತ ಮಿಗಿಲಾದ ಶಕ್ತಿಶಾಲಿಗಳೂ, ಶೂರರೂ ಆಗಿರುವಂತೆ ಕರುಣಿಸು' ಎಂದು ವಿನತೆ ವರವನ್ನು ಬೇಡಿದಳು. ಹೀಗೆ ಅಕ್ಕತಂಗಿಯರಲ್ಲಿ ಸ್ಪರ್ಧೆ ಏರ್ಪಟ್ಟಿತು. 'ತಥಾಸ್ತು' ಎಂದ ಮಹರ್ಷಿ ಯಜ್ಞಕಾರ್ಯದಲ್ಲಿ ವ್ಯಸ್ತನಾದನು.

ದೇವತೆಗಳ ರಾಜನಾದ ಇಂದ್ರ ಕಶ್ಯಪ ಮಹರ್ಷಿಯ ಮಗ. ಅವನು ತಂದೆಯ ಯಜ್ಞಕ್ಕೆ ಹೆಗಲಾಗಿ ನಿಲ್ಲುವುದಕ್ಕೆ ಬಂದನು. ಜೊತೆಗೆ ಮಹಾತಪಸ್ವಿಗಳೂ, ಹೆಬ್ಬೆಟ್ಟಿನಷ್ಟು ಚಿಕ್ಕ ಆಕಾರದವರೂ ಆದ ಅನೇಕ ವಾಲಖಿಲ್ಯ ಮಹರ್ಷಿಗಳನ್ನು ಕರೆತಂದಿದ್ದನು. ಕಷ್ಯಪನಿಗೆ ಸಂತೋಷವಾಯಿತು. ವಾಲಖಿಲ್ಯರನ್ನು ಜೊತೆ ಯಜ್ಞದ ಸಮಿತ್ತಿಗಾಗಿ ಮರಗಳನ್ನು ತೆಗೆದುಕೊಂಡು ಬರುವಂತೆ ಇಂದ್ರನಿಗೆ ಆದೇಶಿಸಿದನು. ಬೃಹತ್ ಆಕಾರದವನೂ, ಮಹಾಶಕ್ತಿಶಾಲಿಯೂ ಆದ ಇಂದ್ರ ಆಕಾಶಮಾರ್ಗವಾಗಿ ಸಂಚರಿಸಬಲ್ಲವನು. ಸುಲಭವಾಗಿ ಬೃಹತ್ ಮರದ ಕಾಂಡವೊಂದನ್ನು ಆಕಾಶದಲ್ಲಿ ಹೊತ್ತು ತರುತ್ತಿದ್ದನು. ಕೆಳಗೆ ಅನೇಕ ವಾಲಖಿಲ್ಯರು ಚಿಕ್ಕದಾದ ಸಮಿತ್ತೊಂದನ್ನು ಕಷ್ಟದಿಂದ ತರುತ್ತಿದ್ದರು. ಕ್ಷಣವೊಂದರಲ್ಲಿ ಇಂದ್ರನು ತನ್ನ ಶಕ್ತಿಯ ಅಹಂಕಾರಕ್ಕೆ ಒಳಗಾದನು. 'ಹೋ' ಎಂದು ಕೂಗುತ್ತಾ ಅವರನ್ನು ಬೀಳಿಸಿ ಒಂದಿಷ್ಟು ಗೋಳುಹೊಯ್ದುಕೊಂಡನು. ವಾಲಖಿಲ್ಯ ಮಹರ್ಷಿಗಳು ಕುಪಿತರಾದರು. ಇಂದ್ರನ ಅಹಂಕಾರವನ್ನು ನಿಗ್ರಹಿಸಿ ಅವನಿಗೆ ಪಾಠಕಲಿಸಬೇಕೆಂದು ತೀರ್ಮಾನಿಸಿದರು.

ಯಜ್ಞ ಮೊದಲಾಯಿತು. ವಾಲಖಿಲ್ಯ ಮಹರ್ಷಿಗಳು ಯಜ್ಞಕ್ಕೆ ಮಂತ್ರಗಳನ್ನು ಹೇಳುತ್ತಾ ಹವಿಸ್ಸನ್ನು ಸಮರ್ಪಿಸುತ್ತಿದ್ದರು. ಆದರೆ ಮೆಲುದನಿಯಲ್ಲಿ 'ಇಂದ್ರನಿಗೆ ಮಿಗಿಲಾದ ಒಬ್ಬನ ಜನನವಾಗಲಿ. ಬ್ರಹ್ಮಾಂಡದಲ್ಲಿ ಎಲ್ಲಿಬೇಕಾದರೂ ಸಂಚರಿಸಬಲ್ಲವನಾಗಲಿ, ಯಾವ ಆಕಾರವನ್ನು ಬೇಕಾದರೂ ಧರಿಸಬಲ್ಲವನಾಗಲಿ, ಎಷ್ಟು ಶಕ್ತಿಯನ್ನಾದರೂ ಸಂಚಯಿಸಬಲ್ಲವನಾಗಲಿ. ಅವನ ಸಂಕಲ್ಪಶಕ್ತಿಗೆ ಮಿತಿಯೇ ಇಲ್ಲವಾಗಲಿ. ಅಂಥವನೊಬ್ಬನ ಜನನವಾಗಲಿ' ಎಂದು ಹವಿಸ್ಸನ್ನು ಸಮರ್ಪಿಸುತ್ತಿದ್ದರು. ತಮ್ಮ ಸಕಲ ತಪಸ್ಸನ್ನು ಅದಕ್ಕೆ ಧಾರೆಯೆರೆಯುತ್ತಿದ್ದರು. ಆದರೆ ಇಂದ್ರನ ಗಮನಕ್ಕೆ ಇದುಬಾರದೇ ಇರಲಿಲ್ಲ. ತಕ್ಷಣವೇ ಪಶ್ಚಾತ್ತಾಪದಿಂದ 'ತಂದೆಯೇ, ಋಷಿಗಳ ಕೋಪದಿಂದ ನೀನೇ ನನ್ನನ್ನು ರಕ್ಷಿಸಬೇಕು' ಎಂದು ದುಃಖದಿಂದ ಕೇಳಿಕೊಂಡನು. ಸಕಲವನ್ನೂ ಕೇಳಿತಿಳಿದ ಕಷ್ಯಪ ವಾಲಖಿಲ್ಯರಲ್ಲಿ ಬೇಡಿಕೊಂಡನು. 'ಮಹಾತ್ಮರೇ, ಇಂದ್ರನು ಬ್ರಹ್ಮನಿಂದಲೇ ನಿಯೋಜಿತನಾದ ದೇವತೆಗಳ ರಾಜ. ಅವನಿಗಿಂತ ಮಿಗಿಲಾದವರೂ ಸ್ವರ್ಗದಲ್ಲಿ ಇರುವಹಾಗಿಲ್ಲ. ನಿಮ್ಮ ತಪಸ್ಸಿನ ಫಲದಿಂದ ಹುಟ್ಟುವ ಧೀರ ಪಕ್ಷಿಗಳ ರಾಜನಾಗಲಿ. ಪಶ್ಚಾತ್ತಾಪದಿಂದ ಬಳಲಿ ಕ್ಷಮೆಬೇಡುತ್ತಿರುವ ಇಂದ್ರನ ಮೇಲೆ ದಯೆತೋರಿ' ಎಂದು ಕೇಳಿಕೊಂಡನು. ದಯಾಪರರಾದ ವಾಲಖಿಲ್ಯರು 'ಹಾಗೆಯೇ ಆಗಲಿ. ನಮ್ಮ ತಪಸ್ಸಿನ ಆ ಶಕ್ತಿಶಾಲಿ ಮಗು ಯಜ್ಞದ ಫಲವಾಗಿ ನಿನ್ನ ಮಗನೇ ಆಗಿ ಜನಿಸುತ್ತಾನೆ' ಎಂದು ಆಶೀರ್ವದಿಸಿ ತೆರಳಿದರು. ಯಜ್ಞದ ನಂತರ ಕಶ್ಯಪ ಕದ್ರು ವಿನತೆಯರ ಅರಮನೆಗೆ ಬಂದನು. ಯಜ್ಞದ ಫಲವಾಗಿ ಅವರಿಗೆ ಅತಿಶೀಘ್ರದಲ್ಲಿ ಪುತ್ರರ ಜನನವಾಗುತ್ತದೆಯೆಂದು ತಿಳಿಸಿದನು. ಮುಂದಿನ ತಪಸ್ಸಿಗಾಗಿ ಕಾಡಿಗೆ ತೆರಳಿದನು.

ಕೆಲವು ತಿಂಗಳುಗಳಲ್ಲಿ ವಿನತೆಗೆ ಎರಡು ಬೃಹದಾಕಾರದ ಮೊಟ್ಟೆಗಳು ಜನಿಸಿದವು. ಕದ್ರುವಿಗೆ ಸಾವಿರ ಚಿಕ್ಕ ಮೊಟ್ಟೆಗಳು ಜನಿಸಿದವು. ಅವುಗಳನ್ನು ಮಡಕೆಗಳಲ್ಲಿ ಬೆಚ್ಚಗೆ ಜೋಪಾನ ಮಾಡಿದರು. ಅನೇಕ ದಿನಗಳ ನಂತರ ಕದ್ರುವಿನ ಮೊಟ್ಟೆಗಳೆಲ್ಲ ಒಡೆದು ಸಾವಿರ ಶಕ್ತಿಶಾಲಿ ಸರ್ಪಗಳು ಹೊರಬಂದವು. ಕದ್ರುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿನತೆಯಾದರೋ ಅವಸರ ಮತ್ತು ಅಸೂಯೆಗೆ ಪಾತ್ರಳಾದಳು. ತಡೆಯಲಾರದೇ ತನ್ನ ಎರಡು ಮೊಟ್ಟೆಗಳಲ್ಲಿ ಒಂದನ್ನು ಕಾಲವಾಗುವ ಮುನ್ನವೇ ಒಡೆದುಬಿಟ್ಟಳು. ಒಡನೆಯೇ ಅದರಿಂದ ಪುತ್ರನೊಬ್ಬನೇನೋ ಹೊರಬಂದ - ಆದರೆ ಅವನ ಕಾಲುಗಳು ಇನ್ನೂ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಆದ್ದರಿಂದ ಅವನ ಸೊಂಟದ ಕೆಳಭಾಗ ಕೇವಲ ಮಾಂಸದ ಮುದ್ದೆಯಾಗಿತ್ತು. ತನ್ನ ತಪ್ಪಿಗಾಗಿ ವಿನತೆ ಅತಿಯಾಗಿ ನೊಂದು ಪಶ್ಚಾತ್ತಾಪ ಪಟ್ಟಳು. ಆದರೆ ಕಾಲ ಮಿಂಚಿಹೋಗಿತ್ತು. ಹೊರಬಂದ ಪುತ್ರನು ಕೋಪಾವಿಷ್ಟನಾದನು. 'ತಾಯಿಯೇ, ತಾಳ್ಮೆ ತಪ್ಪಿ ನೀನು ಅವಸರದಿಂದ ತಪ್ಪು ಮಾಡಿದೆ. ಅದಕ್ಕೆ ನೀನು ಬೆಲೆತೆರಲೇಬೇಕಾಗುತ್ತದೆ. ಶೀಘ್ರದಲ್ಲಿ ನೀನು ಮತ್ತೊಬ್ಬರ ದಾಸಿಯಾಗುವೆ. ಆದರೆ ಭಯಪಡುವಾಗತ್ಯವಿಲ್ಲ. ಮತ್ತೊಂದು ಮೊಟ್ಟೆಯಿಂದ ನನ್ನ ತಮ್ಮ ಹುಟ್ಟುತ್ತಾನೆ. ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತಾನೆ. ಆದರೆ ಅವಸರ ಮಾತ್ರ ಪಡಬೇಡ' ಎಂದು ನುಡಿದನು. ಕ್ಷಣವೊಂದರಲ್ಲಿ ಆಕಾಶಕ್ಕೆ ಹಾರಿದನು. 'ಅರುಣ' ಎನ್ನುವ ಹೆಸರಿನಿಂದ ಸೂರ್ಯನ ಸಾರಥಿಯಾದನು. ವಿನತೆ ಪುತ್ರನ ಅಗಲಿಕೆಯಿಂದ ಶೋಕಕ್ಕೆ ಒಳಗಾದಳು.

ಒಂದಿಷ್ಟು ಕಾಲ ಕಳೆಯಿತು. ಒಂದು ಸಂಜೆ ಕದ್ರು ವಿನತೆಯರು ನದೀವಿಹಾರ ಮಾಡುತ್ತಿದ್ದರು. ಆಗ ಇಂದ್ರನ ಕುದುರೆಯಾದ ಉಚ್ಛ್ಹೈಶ್ರವಸ್ಸು ವೇಗವಾಗಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿತ್ತು. ಒಂದು ಕ್ಷಣ ಮಾತ್ರವೇ ಇಬ್ಬರಿಗೂ ಗೋಚರಿಸಿತು. ಸ್ಪರ್ಧಾಗುಣದಿಂದ ಕದ್ರು 'ವಿನತಾ, ಅದರ ಬಾಲದ ಬಣ್ಣವೇನು ಹೇಳುವೆಯಾ' ಎಂದಳು. ಆತ್ಮವಿಶ್ವಾಸದಿಂದ ವಿನತೆ 'ಅದರ ಇಡಿಯ ದೇಹ ಬಿಳಿಯ ಬಣ್ಣ. ಅದರ ಬಾಲವೂ ಬಿಳಿಯದೇ' ಎಂದಳು. ಮಾತುಮಾತಿಗೆ ಮೊದಲಾಗಿ ಕದ್ರು ಅದರ ಬಾಲ ಕಪ್ಪು ಎಂದೂ, ವಿನತೆ ಬಿಳಿ ಎಂದೂ ಪಟ್ಟುಹಿಡಿದರು. ಸ್ಪರ್ಧೆ ಮಿತಿಮೀರಿತು. ಯಾರ ಮಾತು ಸುಳ್ಳಾಗುವುದೋ ಅವರು ಮತ್ತೊಬ್ಬರ ದಾಸಿಯಾಗುವುದೆಂದು ತೀರ್ಮಾನವಾಯಿತು. ಮರುದಿನ ಪರೀಕ್ಷಿಸುವುದು ಎಂದೂ ತೀರ್ಮಾನವಾಯಿತು. ಆದರೆ ಅರಮನೆಗೆ ಬಂದ ನಂತರ ಕದ್ರುವಿಗೆ ಅನುಮಾನ ಶುರುವಾಯಿತು. ಅದು ಸಂಪೂರ್ಣ ಬಿಳಿಯೇ ಇರಬೇಕೆಂದು ಭಯವಾಯಿತು. ಹೇಗಾದರೂ ಅದನ್ನು ಕಪ್ಪಾಗಿಸಬೇಕೆಂದು ತೀರ್ಮಾನಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆಸಿದಳು. ಕುದುರೆಯ ಬಾಲವನ್ನು ಕಚ್ಚಿ ಕಪ್ಪಾಗಿಸಬೇಕೆಂದು ಆಜ್ಞೆಮಾಡಿದಳು. ಸರ್ಪಗಳಾದರೋ ಇದು ಅಧರ್ಮವೆಂದು ಅಧೀರರಾದರು. ಆದರೂ ತಾಯಿಯ ಶಾಪದ ಭಯದಿಂದ ಒಪ್ಪಿಕೊಂಡರು. ಕುದುರೆಯ ಬಾಲವನ್ನು ವಿಷದಿಂದ ಕಡಿದು ಕೆಲವು ದಿನಗಳ ಮಟ್ಟಿಗೆ ಕಪ್ಪಾಗಿಸಿದರು. ಮರುದಿನ ಸಂಜೆ ವಿಹಾರದಲ್ಲಿ ಕಾದಿದ್ದರು ಕದ್ರುವಿನತೆಯರು. ಒಂದು ಕ್ಷಣಮಾತ್ರ ಗೋಚರಿಸಿದ ಕುದುರೆಯ ಬಾಲ ಕಪ್ಪಾಗಿ ಕಂಡಿತು. ವಿನತೆ ಸಿಡಿಲುಬಡಿದಂತಾದಳು. ಇದರಲ್ಲಿ ಏನೋ ಮರ್ಮವಿದೆ ಎಂದು ವಿನತೆಗೆ ಅನ್ನಿಸಿತು. ಆದರೇನೂ ಮಾಡುವಂತಿರಲಿಲ್ಲ. ಅವಳಿಗೆ ದಾಸಿಯಾಗದೇ ಬೇರೆ ದಾರಿಯಿರಲಿಲ್ಲ.

ವಿನತೆಯ ಅದೃಷ್ಟಕ್ಕೆ ಎರಡನೇಯ ಮೊಟ್ಟೆ ತಾನೇ ಒಡೆಯುವ ಕಾಲ ಸನ್ನಿಹಿತವಾಗಿತ್ತು. ಅವಳಿಗೆ ಪುತ್ರನೊಬ್ಬನ ಜನನವಾಯಿತು. ವಾಲಖಿಲ್ಯರ ವರದಂತೆ ಪುತ್ರನಿಗೆ ಪಕ್ಷಿಗಳಂತೆ ಕೊಕ್ಕು ಮತ್ತು ರೆಕ್ಕೆಗಳಿತ್ತು. ಹುಟ್ಟುತ್ತಲೇ ಬೃಹದಾಕಾರ ತಳೆದನು. ಆಕಾಶಕ್ಕೆ ಹಾರಿ ಇಡಿಯ ಸಮುದ್ರಗಳನ್ನೆಲ್ಲ ಒಂದು ಸುತ್ತು ವಿಹರಿಸಿ ತಾಯ ಬಳಿಗೆ ಬಂದನು. ವಿನತೆಯ ಹರ್ಷಕ್ಕೆ ಪಾರವೇ ಇರಲಿಲ್ಲ. ಆನಂದಬಾಷ್ಪಸುರಿಸಿದಳು. 'ಈ ಮಗನಿಂದ ನನ್ನ ದಾಸ್ಯ ತೊರೆಯುತ್ತದೆ' ಎಂದು ಧೈರ್ಯಧರಿಸಿದಳು. ಹೀಗಿರುವಾಗ ಒಂದು ದಿನ ವಿನತೆಯನ್ನು ನೋಡಲು ಕದ್ರು ಅಲ್ಲಿಗೆ ಬಂದಳು. 'ನಾವು ನಾಗದ್ವೀಪಕ್ಕೆ ವಿಹರಿಸಲು ಹೋಗಬೇಕು. ನಮ್ಮನ್ನು ಹೆಗಲಮೇಲೆ ಕೂರಿಸಿಕೊಂಡು ನಡೆ' ಎಂದು ದಾಸಿಯಾಗಿದ್ದ ವಿನತೆಗೆ ಕದ್ರು ಆಜ್ಞೆ ಮಾಡಿದಳು. ವಿಧಿಯಿಲ್ಲದೇ ಕದ್ರುವನ್ನು ಬೆನ್ನಿನಮೇಲೇರಿಸಿಕೊಂಡಳು ವಿನತೆ. 'ಪುತ್ರನೇ, ಸರ್ಪಗಳನ್ನೆಲ್ಲ ಕೂರಿಸಿಕೊಂಡು ಬಾ' ಎಂದು ವಿನತೆ ಆದೇಶಿಸಿದಳು. 'ನಾವೇನು ಅವರಿಗೆ ದಾಸರೇ' ಎಂದು ಪುತ್ರನು ಆಶ್ಚರ್ಯಚಕಿತನಾದನು. ಆದರೆ ತಾಯಿಯ ಆದೇಶದಂತೆ ನಡೆದುಕೊಂಡನು. ಬೃಹದಾಕಾರ ತಾಳಿ ಸರ್ಪಗಳನ್ನೆಲ್ಲ ಹೇರಿಕೊಂಡನು. ಕೋಪದಿಂದ ಛಂಗನೆ ನೇರವಾಗಿ ಸೂರ್ಯನ ಕಡೆಗೆ ಹಾರಿದನು. ಸ್ವಲ್ಪ ಹೊತ್ತಿಗೆ ಸೂರ್ಯನ ತಾಪ ತಾಳಲಾರದೇ ಸರ್ಪಗಳು ಸಮುದ್ರಕ್ಕೆ ಬೀಳತೊಡಗಿದವು. ಆತಂಕದಿಂದ ಕದ್ರು ಮಕ್ಕಳನ್ನು ಸಂರಕ್ಷಿಸುವಂತೆ ದೇವೇಂದ್ರನಲ್ಲಿ ಬೇಡಿಕೊಂಡಳು. ಇಂದ್ರನು ಮಳೆಯನ್ನು ಸುರಿಸಿ ಸರ್ಪಗಳನ್ನು ಸೂರ್ಯನ ತಾಪದಿಂದ ರಕ್ಷಿಸಿದನು. ಇದನ್ನು ಗಮನಿಸಿದ ಪುತ್ರನು ಇಂದ್ರನಿಗೆ ಎದಿರಾಗುವ ಸಮಯಕ್ಕಾಗಿ ಕಾದನು. ಎಲ್ಲರೂ ನಾಗದ್ವೀಪವನ್ನು ಸೇರಿದರು. ನಂತರ ಪುತ್ರನು ವಿನತೆಯನ್ನು "ನಾವೇಕೆ ಅವರಿಗೆ ದಾಸರಾಗಿದ್ದೇವೆ" ಎಂದು ಕೇಳಿದನು. ವಿನತೆ ಸಕಲ ವೃತ್ತಾಂತವನ್ನೂ ತಿಳಿಸಿದಳು. ವಾಪಸಾದ ನಂತರ ವಿನತೆಯ ಪುತ್ರನು ನೇರವಾಗಿ ಸರ್ಪಗಳ ಬಳಿಗೆ ತೆರಳಿದನು. 'ಹೇಳಿ, ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕೆ ನಾವೇನು ಬೆಲೆ ತೆರಬೇಕು' ಎಂದು ಕೇಳಿದನು. ಸರ್ಪಗಳು ಒಂದು ಕ್ಷಣ ಯೋಚಿಸಿದವು. 'ನಮಗೆ ಅಮೃತವನ್ನು ತಂದುಕೊಡಬೇಕು' ಎಂದು ಧಾರ್ಷ್ಟ್ಯದಿಂದ ನುಡಿದವು. ದೇವತೆಗಳಿಂದ ರಕ್ಷಿತವಾದ ಅಮೃತವನ್ನು ತರುವುದು ಸುಲಭವಲ್ಲ ಎನ್ನುವುದು ಸರ್ಪಗಳಿಗೆ ಗೊತ್ತು. ಆದರೆ ಈ ಶಕ್ತಿಶಾಲಿಯಾದ ವಿನತೆಯ ಪುತ್ರ ಅದನ್ನು ತರಬಹುದು, ತಾವು ಅಮರರಾಗಬಹುದು ಎನ್ನುವುದು ಅವರ ಆಸೆಯಾಗಿತ್ತು.

ವಿನತೆಯ ಪುತ್ರ ವಾಪಸಾಗಿ ತಾಯಿಗೆ ಎಲ್ಲವನ್ನೂ ತಿಳಿಸಿದನು. ವಿನತೆ ಮನದುಂಬಿ 'ಯಶಸ್ವಿಯಾಗಿ ಹಿಂದಿರುಗು' ಎಂದು ಆಶೀರ್ವದಿಸಿದಳು. ಬೃಹದಾಕಾರವಾಗಿ ಬೆಳೆದು ರೆಕ್ಕೆಗಳನ್ನು ಬಿಚ್ಚಿದನು ವಿನತೆಯ ಪುತ್ರ. ಆಕಾಶಕ್ಕೆ ಹಾರಿ ದೇವತೆಗಳ ವಾಸವಾದ ಇಂದ್ರಲೋಕದೆಡೆಗೆ ತೆರಳಿದನು. ಹಿಮಾಲಯಪರ್ವತಗಳ ಮಾರ್ಗವಾಗಿ ತೆರಳುತ್ತಿದ್ದಾಗ ಕೆಳಗೆ ಕಶ್ಯಪ ಮಹರ್ಷಿ ಕಂಡನು. ಪರ್ವತವೊಂದರ ಮೇಲೆ ತಪಸ್ಸಾನಾಚರಿಸುತ್ತಿದ್ದನು. ಪುತ್ರನನ್ನು ನೋಡಿ ಅವನನ್ನೂ, ವಿನತೆಯನ್ನೂ ವಿಚಾರಿಸಿಕೊಂಡನು. ಪುತ್ರನು ಸಕಲವೃತ್ತಾಂತವನ್ನೂ ಅರುಹಿದನು. ದೀರ್ಘಸಂಚಾರಕ್ಕೆ ಶಕ್ತಿಒದಗಿಸಬಲ್ಲ ಆಹಾರವೆಲ್ಲಿ ಸಿಗುವುದು ಎಂದು ಕೇಳಿದನು. ಕಶ್ಯಪನು ಕೆಳಗೆ ಒಂದು ಸರೋವರವನ್ನು ತೋರಿಸಿದನು. "ಅಲ್ಲಿ ಆಮೆಯೊಂದು, ಆನೆಯೊಂದೂ ಪರಸ್ಪರರನ್ನು ಕೊಲ್ಲಲು ಹೋರಾಡುತ್ತಿವೆ. ಅವುಗಳನ್ನು ತಿಂದು ನೀನು ಸಂಚಾರ ಮುಂದುವರೆಸು" ಎಂದು ಆಶೀರ್ವದಿಸಿ ಕಳುಹಿಸಿದನು. ಅದರಂತೆಯೇ ಒಂದು ಕೈಯಲ್ಲಿ ಆಮೆ ಮತ್ತೊಂದು ಕೈಯಲ್ಲಿ ಆನೆಯನ್ನು ಹಿಡಿದುಕೊಂಡು ಹಾರಿದನು ವಿನತೆಯ ಪುತ್ರ. ಮಾರ್ಗಮಧ್ಯದಲ್ಲೊಂದು ದೊಡ್ಡ ಆಲದ ಮರ ಅವನನ್ನು ಆಹ್ವಾನಿಸಿತು. 'ಪಕ್ಷಿರಾಜನೇ, ನನ್ನೀ ಶಕ್ತಿಯುತವಾದ ಮರದಟೊಂಗೆಯ ಮೇಲೆ ಕುಳಿತು ನಿನ್ನ ಆಹಾರವನ್ನು ಸೇವಿಸು' ಎಂದು ಕೇಳಿಕೊಂಡಿತು. ಪಕ್ಷಿರಾಜನೇನೋ ಕುಳಿತ. ಆದರೆ ಅವನ ಬೃಹದಾಕಾರಕ್ಕೆ ಹೆದರಿದ ಮಿಕ್ಕ ಪಕ್ಷಿಗಳೆಲ್ಲ ಹಾರಿಹೋದವು. ಮರದ ಟೊಂಗೆಯೂ ಸಹ ಅವನ ಭಾರತಾಳಲಾರದೇ ಮುರಿದು ಬೀಳಲಾರಂಭಿಸಿತು. ಅದಕ್ಕೂ ಮುಖ್ಯವಾಗಿ ಆ ಮರದ ಟೊಂಗೆಗೆ ನಾಲ್ಕು ಋಷಿಗಳು ತಮ್ಮ ಕಾಲುಗಳನ್ನು ಕಟ್ಟಿಕೊಂಟು ತಲೆಕೆಳಗಾಗಿ ತಪಸ್ಸುಮಾಡುತ್ತಿದ್ದರು. ಟೊಂಗೆ ನೆಲಕ್ಕೆ ಬೀಳುವುದರಲ್ಲಿತ್ತು. ಸ್ವಲ್ಪದರಲ್ಲಿ ತನ್ನ ಕೊಕ್ಕಿನಿಂದ ಅದನ್ನು ರಕ್ಷಿಸಿದ ವಿನತೆಯ ಪುತ್ರ ನಿಟ್ಟುಸಿರು ಬಿಟ್ಟನು. ಹೀಗೆ ಒಂದು ಕೈಯಲ್ಲಿ ಬೃಹತ್ ಆಮೆ, ಮತ್ತೊಂದರಲ್ಲಿ ಶಕ್ತಿಶಾಲಿಯಾದ ಆನೆ, ಕೊಕ್ಕಿನಲ್ಲಿ ಭಾರವಾದ ಮರದ ಕಾಂಡ - ಇವುಗಳೆಲ್ಲದರ ಜೊತೆಗೆ ಲೀಲಾಜಾಲವಾಗಿ ಹಾರುತ್ತಿದ್ದ ಪಕ್ಷಿರಾಜ. ಇದನ್ನು ತಲೆಗೆಳಗಾಗಿ ನೋಡುತ್ತಿದ್ದ ಆ ನಾಲ್ಕು ಋಷಿಗಳು ಅವನ ಶಕ್ತಿಗೆ ಆಶ್ಚರ್ಯಚಕಿತರಾದರು. ಆಕ್ಷಣವೇ ಆ ವಿನತೆಯ ಪುತ್ರನಿಗೆ 'ಗರುಡ' ಎಂದು ನಾಮಕರಣ ಮಾಡಿದರು. ಸಕಲಲೋಕಗಳಲ್ಲಿಯೂ ಇವನ ಕೀರ್ತಿ ಹರಡಲಿ ಎಂದು ಆಶೀರ್ವದಿಸಿದರು.

ಈ ಋಷಿಗಳನ್ನು ಅವರ ತಪಸ್ಸಿಗೆ ತೊಂದರೆಯಾಗದಂತೆ ಎಲ್ಲಿ ಇಳಿಸುವುದು ಎಂದು ಗರುಡ ಆಲೋಚನೆಗೊಳಗಾದನು. ಕಡೆಗೆ ಗಂಧಮಾದನ ಪರ್ವತಗಳು ಕಂಡವು. ಅದೇ ಸರಿಯೆನ್ನುತ್ತಾ ಪರ್ವಗಳ ತುತ್ತತುದಿಗೆ ಬಂದು ಅವರನ್ನು ಇಳಿಸಿದನು. ನಂತರ ಯಾರೂ ಕಾಣದ ಒಂದು ಕಣಿವೆಯಲ್ಲಿ, ಯಾರಿಗೂ ತೊಂದರೆಯಾಗದಂತೆ ಮರದ ಕಾಂಡವನ್ನು ಎಸೆದನು. ಮತ್ತೊಂದು ಪರ್ವತದ ಮೇಲೆ ಇಳಿದು ಆಮೆ ಮತ್ತು ಆನೆಗಳನ್ನು ಸೇವಿಸಿದನು. ದೇಹಕ್ಕೆ ಶಕ್ತಿಸಂಚಯವಾದ ನಂತರ ಮತ್ತೂ ವೇಗದಿಂದ ಇಂದ್ರಲೋಕಕ್ಕೆ ಹಾರಿದನು ಪಕ್ಷಿರಾಜನಾದ ಗರುಡ.           

====================================================================

ಈ ಮಧ್ಯದಲ್ಲಿ ದೇವೇಂದ್ರನ ಸ್ವರ್ಗಲೋಕದಲ್ಲಿ ಹಿಂದೆಂದೂ ಕಾಣದ ಅಪಶಕುನಗಳು ಉಂಟಾಗತೊಡಗಿದವು. ಈ ಹಿಂದಿನ ದೇವಾಸುರರ ಯುದ್ಧದಲ್ಲೂ ಅಂತಹ ಅಪಶಕುನಗಳು ಕಾಣಿಸಿರಲಿಲ್ಲ. ಸಹಜವಾಗೇ ಗಾಬರಿಗೊಳಗಾದ ದೇವೇಂದ್ರ ತನ್ನ ಗುರುವಾದ ಬೃಹಸ್ಪತಿಗಳ ಬಳಿಗೆ ತೆರಳಿದನು. "ನೋಡು ದೇವೇಂದ್ರ - ಕಶ್ಯಪ ಋಷಿ ಮತ್ತು ವಿನತೆಯ ಮಗನಾದ ಗರುಡ ನಿನ್ನಲ್ಲಿರುವ ಅಮೃತವನ್ನು ಹೊತ್ತೊಯ್ಯಲು ಬರುತ್ತಿದ್ದಾನೆ. ಮಹಾಶಕ್ತಿಶಾಲಿಯಾದ ಗರುಡನಿಗೆ ಇದೇನು ದುಸ್ಸಾಸಧ್ಯವಲ್ಲ" ಎಂದು ಎಚ್ಚರಿಸಿದನು. ದೇವೇಂದ್ರನು ಆ ಕ್ಷಣವೇ ಅಮೃತವನ್ನು ರಕ್ಷಿಸುತ್ತಿದ್ದ ದೇವತೆಗಳನ್ನು ಕರೆದನು. "ಅಮೃತವನ್ನು ಕದ್ದೊಯ್ಯುದಕ್ಕೋಸ್ಕರ ಮಹಾಪರಾಕ್ರಮಿ, ಮಹಾಶಕ್ತಿಶಾಲಿಯಾದ ಬೃಹತ್ ಪಕ್ಷಿಯೊಂದು ಬರುತ್ತಿದೆ. ಅದನ್ನು ತಡೆಯುವುದಕ್ಕೆ ತಯಾರಾಗಿ" ಎಂದು ಎಚ್ಚರಿಸಿದನು. ಅಮೃತವನ್ನು ರಕ್ಷಿಸಲು ವಿಶೇಷವಾದ ವ್ಯೂಹವೊಂದನ್ನು ರಚಿಸಿದರು. ಬೃಹತ್ತಾದ ಚಕ್ರವೊಂದರ ಮಧ್ಯೆ ಅಮೃತವನ್ನಿರಿಸಿದ್ದರು. ಅದಕ್ಕೆರಡು ಬೃಹತ್ತಾದ ಮತ್ತು ಭೀಕರವಾದ ಸರ್ಪಗಳು ಕಾವಲಾಗಿದ್ದವು. ಅದರ ಸುತ್ತಲೂ ಅಗ್ನಿಯಿಂದ ರಚಿತವಾದ ಸುಡುಬೆಂಕಿಯ ಕಾವಲು. ನಂತರದಲ್ಲಿ    ಬೃಹತ್ ಸಂಖ್ಯೆಯ, ದಿವ್ಯಾಸ್ತ್ರಗಳಿಂದ ಶೋಭಿತವಾದ  ದೇವತಾ ಸೇನೆ.

ಇನ್ನೇನು ಎನ್ನುವಷ್ಟರಲ್ಲಿ ಬಿರುಗಾಳಿಯನ್ನೆಬ್ಬಿಸುತ್ತ, ಬೃಹತ್ ರೆಕ್ಕೆಗಳನ್ನು ಅತಿರಭಸದಲ್ಲಿ ಬಡಿಯುತ್ತ ಗರುಡನು ಬಂದೇಬಿಟ್ಟನು. ಆ ಬಿರುಗಾಳಿಯಿಂದೆದ್ದ ಧೂಳಿಗೆ ದೇವತೆಗಳ ಕಣ್ಣೇ ಕಾಣದಂತಾಯಿತು. ದೇವತೆಗಳ ಮನೋಬಲಕ್ಕೆ ಪೆಟ್ಟಾದುದನ್ನರಿತ ದೇವೇಂದ್ರ ಅವರನ್ನು ಹುರಿದುಂಬಿಸಲು ಶುರು ಮಾಡಿದನು. ಇದು ವಿಪರೀತಕ್ಕೆ ಹೋಗುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ ವಾಯುದೇವನನ್ನು ಕರೆದು ಈ ಧೂಳಿನಿಂದ ದೇವತೆಗಳನ್ನು ರಕ್ಷಿಸಲು ಆದೇಶವನ್ನಿತ್ತನು. ವಾಯುದೇವನು ಕೇವಲ ಒಂದೇ ಉಸಿರಿಗೆ ಧೂಳನ್ನು ಊದಿ ಇಲ್ಲವಾಗಿಸಿದನು. ಈಗ ಮಹಾಪಕ್ಷಿಯಾದ ಗರುಡ  ಸ್ಪಷ್ಟವಾಗಿ ಕಂಡನು.

ಈಗ ಭೀಕರವಾದ ಯುದ್ಧ ಶುರುವಾಯಿತು. ದೇವತೆಗಳು ತಮ್ಮೆಲ್ಲ ದಿವ್ಯಾಸ್ತ್ರಗಳಿಂದ ಗರುಡನ ಮೇಲೆ ಪ್ರಹಾರ ಮಾಡಲು ಶುರುಮಾಡಿದರು. ಒಂದಿಷ್ಟು ಹೊತ್ತು ಗರುಡನು ಆಟವಾಡುತ್ತ ಆ ಅಸ್ತ್ರಗಳನ್ನೆಲ್ಲ ತನ್ನ ಮೈಮುಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟನು. ಆ ಅಸ್ತ್ರವಳಾದರೋ ಗರುಡನ ಕೂದಲನ್ನು ಕೊಂಕಿಸಲಿಲ್ಲ. ಇದನ್ನು ನೋಡಿ ದೇವತೆಗಳ ಜಂಘಾಬಲವೇ ಉಡುಗಿಹೋಯಿತು. ಇದೆಂಥ ಪಕ್ಷಿ, ಅದೇನು ಶಕ್ತಿ ಎಂದು ಅಚ್ಚರಿಪಟ್ಟರು. ಇನ್ನು ಆಟ ಸಾಕು ಎಂದವನೇ ಗರುಡ ಒಮ್ಮೆ ಭೀಕರವಾಗಿ ಕೂಗಿದನು. ದೇವತೆಗಳ ಮೇಲೆ ಧಾಳಿ ಮಾಡಿದನು. ಅವನ ಕೊಕ್ಕು, ರೆಕ್ಕೆ, ಕಾಲುಗಳ ಹೊಡೆತಕ್ಕೆ ಸಿಕ್ಕ ದೇವತೆಗಳು ಜರ್ಜರಿತರಾದರು. ದಿಕ್ಕಾಪಾಲಾಗಿ ಎಲ್ಲೆಂದರಲ್ಲಿ  ಓಡಲು ತೊಡಗಿದರು. ಯುದ್ಧ ಭೂಮಿ ರಕ್ತದ ಮಡುವಾಯಿತು.

ದೇವತಾ ಸೇನೆಯನ್ನು ಮೀರಿ ಮುಂದೆ ಗರುಡನಿಗೆ ಅಗ್ನಿಯ ಕಾವಲು ಎದುರಾಯಿತು. "ಇದೇನಿದು - ಸೂರ್ಯನನ್ನೇ ಸುಡಬಹುದಾದಂತಹ ಅಗ್ನಿಯಿದು " ಎಂದು ಅಚ್ಚರಿಪಟ್ಟನು. ತನಗೆ ಬೇಕಾದ ಆಕೃತಿಯನ್ನು ಧರಿಸಬಲ್ಲವನಾದ ಗರುಡ ಸಾವಿರಾರು ತಲೆಗಳುಳ್ಳ ಬೃಹತ್ತಾದ ಆಕಾರ ತಳೆದನು. ಒಂದೊಂದು ಕೊಕ್ಕಿನಲ್ಲೂ ಒಂದು ನದಿಯಷ್ಟು  ನೀರನ್ನು ತುಂಬಿಕೊಂಡನು. ಒಮ್ಮೆಗೆ ಅಷ್ಟೂ ನೀರನ್ನು ಉರಿಯುತ್ತಿದ್ದ ಅಗ್ನಿಯ ಮೇಲೆ ಸುರಿಸಿ ಒಂದೇ ಬಾರಿಗೆ ಅದನ್ನು ನಿವಾರಿಸಿದನು. ಅದರಿಂದ ಉಂಟಾದ ಹೊಗೆಯನ್ನು ಒಂದು ಹಾರಿನಲ್ಲೇ ದಾಟಿದನು. ಸುತ್ತುತ್ತಿದ್ದ ಚಕ್ರದ ಮಧ್ಯೆಯಿದ್ದ ಅಮೃತದ ಬೃಹತ್ ಬಟ್ಟಲು ಈಗ ಸ್ಪಷ್ಟವಾಗಿ ಕಂಡಿತು. ಹಾಗೆ ದಿಟ್ಟಿಸುತ್ತಾ ನೋಡುತ್ತಿದ್ದ ಗರುಡನಿಗೆ ಆ ಎರಡು ಭೀಕರ ಸರ್ಪಗಳೂ ಕಂಡವು.

ಬೃಹತ್ತಾದ ಗರುಡ ಒಂದು ಚೂರೂ ವಿಚಲಿತನಾಗಲಿಲ್ಲ. ತಕ್ಷಣವೇ ಅತಿ ಚಿಕ್ಕದಾದ ಆಕಾರ ತಳೆದನು. ಸುತ್ತುತ್ತಿದ್ದ ಚಕ್ರದ ಕೆಳಗೆ ಸುಲಭವಾಗಿ ನುಸುಳಿದನು. ಮತ್ತೆ ತನ್ನ ಶಕ್ತಿಶಾಲಿಯಾದ ರೆಕ್ಕೆಗಳನ್ನು ಬಡಿಯುತ್ತ ದೊಡ್ಡದಾದ ಧೂಳನ್ನೆಬ್ಬಿಸಿದನು. ಅದರಿಂದ ಕಣ್ಣು ಕಾಣದಂತಾದ ಸರ್ಪಗಳನ್ನು ಸುಲಭವಾಗಿ ಹಿಡಿದು ತನ್ನ ಕೊಕ್ಕುಗಳಿಂದ ಕುಕ್ಕಿ ನಿರ್ನಾಮ ಮಾಡಿದನು. ಚಕ್ರದ ಮಧ್ಯದಲ್ಲಿ ಅಮೃತದಿಂದ ತುಂಬಿದ್ದ ಸುವರ್ಣದ ಬಟ್ಟಲನ್ನು ಕೈಗೆ ತೆಗೆದೆಕೊಂಡನು. ತನ್ನ ಚಿಕ್ಕ ಆಕಾರದಿಂದ ಇದ್ದಕ್ಕಿದ್ದ ಹಾಗೆ ಬೃಹತ್ತಾಗಿ ಬೆಳೆಯುವುದಕ್ಕೆ ಶುರುಮಾಡಿದನು. ಅವನ ಆಕೃತಿ ಚಕ್ರಕ್ಕಿಂತ ಮಿಗಿಲಾಗುತ್ತಿದ್ದಂತೆ ಚಕ್ರ ಒಡೆದು ಚೂರುಚೂರಾಯಿತು. ವಿಜೃಂಭಣೆಯಿಂದ ಕೂಗುತ್ತ ಗರುಡ ಆಕಾಶದಲ್ಲಿ ಎತ್ತರಕ್ಕೆ ಹರಿದನು. ವಿನತೆಯನ್ನು ದಾಸ್ಯದಿಂದ ಬಿಡಿಸುವುದಕ್ಕೆ ವೇಗವಾಗಿ ಸಾಗಿದನು.

ಘನ ಗಾಂಭೀರ್ಯದಲ್ಲಿ ಹಾರುತ್ತ ಸಾಗುತ್ತಿದ್ದ ಪಕ್ಷಿರಾಜನನ್ನು ಮಹಾವಿಷ್ಣು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಿದನು. "ಕೈಯಲ್ಲಿ ಯಾರಿಗೂ ಸಿಗಲಾರದಂತಹ ಅಮೃತವಿದೆ. ಆದರೂ ಒಂದಿಷ್ಟು ವಿಚಲಿತನಾಗದೆ ನಿರ್ಲಿಪ್ತತೆಯಿಂದ ಹಾರುತ್ತಿರುವ ಈ ಗರುಡ ಪಕ್ಷಿ ಮಹಾತ್ಮನೇ ಸರಿ. ಒಂದು ಹನಿಯಷ್ಟು ಅಮೃತಕ್ಕೂ ಅಸೆ ಪಡುತ್ತಿಲ್ಲವಲ್ಲ ಇವನು. ಎದುರಿಗೆ ಅಮೃತವಿದ್ದರೆ, ದೇವತೆಗಳಿಗೂ ಇಂತಹ ನಿರ್ಲಿಪ್ತತೆ ಸಾಧ್ಯವಿಲ್ಲ. ಕೇವಲ ತನ್ನ ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡುವುದೇ ಅವನ ಧ್ಯೇಯವಾಗಿದೆ" ಎಂದು ಬಹುವಾಗಿ ಹೋಗಳಿದನು. ಗರುಡನನ್ನು ಕೂಗಿ ಕರೆದನು. "ಮಹಾಪಕ್ಷಿಯೇ, ನಿನ್ನ ವರ್ತನೆಯಿಂದ ನಾನು ಸಂಪ್ರೀತನಾಗಿದ್ದೇನೆ. ನಿನಗೆ ಎರಡು ವರಗಳನ್ನು ಕೊಡುತ್ತೇನೆ - ಕೇಳಿಕೊ" ಎಂದನು ಮಹಾವಿಷ್ಣು. ಗರುಡನು ವಿನಯದಿಂದ "ಶ್ರೀಹರಿ, ನಿನ್ನ ವರಗಳಿಂದ ನಾನು ಧನ್ಯನಾದೆ. ಒಂದು ವಾರದಲ್ಲಿ ನನಗೆ ಅಮರತ್ವವನ್ನು ಮತ್ತು ರೋಗಗಳಿಂದ ಮುಕ್ತಿಯನ್ನೂ ಕರುಣಿಸು. ಇನ್ನೊಂದು ವರದಲ್ಲಿ ನಾನು ಎಂದಿಗೂ ನಿನಗಿಂತ ಮೇಲಿನ ಸ್ಥಾನವನ್ನು ದಯಪಾಲಿಸು" ಎಂದನು. ಮಹಾವಿಷ್ಣು ಮುಗುಳ್ನಕ್ಕನು.
"ತಥಾಸ್ತು, ನೀನು ನನ್ನೀ ಧ್ವಜಸ್ಥಮ್ಭದ ಮೇಲೆ ಸದಾ ವಿರಾಜಮಾನನಾಗಿರು. ನನ್ನ ಆಸನದಿಂದ ಸದಾ ಮೇಲಿರುವ ಈ ಸ್ಥಮ್ಭಕ್ಕೆ   ಗರುಡಗಂಭ ಎಂದು ಹೆಸರಾಗಲಿ" ಆಶೀರ್ವದಿಸಿದನು. ಧ್ವಜಸ್ತಮಭದ ಮೇಲೆ ಆಸೀನನಾದ ಗರುಡ ಸುಪ್ರೀತನಾದನು. "ಮಹಾಮಹಿಮನವ ವಿಷ್ಣುವೇ, ನಿನ್ನ ವರಗಳಿಂದ ನಾನು ಧನ್ಯನಾದೆ. ಇದಕ್ಕೆ ಪ್ರತಿಯಾಗಿ ನಾನೂ ಸಹ ನಿನಗೊಂದು ವರವನ್ನು ಕೊಡುತ್ತೇನೆ." ಎಂದನು. ತಕ್ಷಣವೇ ವಿಷ್ಣು 'ನನ್ನ ವಾಹನವಾಗಿ ನಾನು ಕರೆದ ತಕ್ಷಣ ಬರಬೇಕು' ಎಂದು ಕೇಳಿಕೊಂಡನು. ಇದಕ್ಕೊಪ್ಪಿದ ಗರುಡನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತಳನ್ನಾಗಿಸಿದ ನಂತರ ಬರುತ್ತೇನೆ ಎಂದು ಬೀಳ್ಕೊಟ್ಟನು.

ಇಷ್ಟರಲ್ಲಿ ಅಮೃತವನ್ನು ಕಳೆದುಕೊಂಡು ದುಃಖತಪ್ತನಾಗಿದ್ದ ಇಂದ್ರ ಆಕಾಶದಲ್ಲಿ ಹಾರುತ್ತಿದ್ದ ಗರುಡನನ್ನು ನೋಡಿದನು. ಕೋಪದಿಂದ ತನ್ನ ವಜ್ರಾಯುಧದಿಂದ ಪ್ರಹಾರ ಮಾಡಿದನು. ಆದರೆ ಅದು ಗರುಡನ ರೆಕ್ಕೆಯ ಒಂದು ಪುಕ್ಕವನ್ನು ಕೊಂಕಿಸಲಿಲ್ಲ. ಇಂದ್ರನು ಸ್ಥಮ್ಭೀಭೂತನಾದನು. ಒಂದು ಘಳಿಗೆಯಲ್ಲಿ ಸುಧಾರಿಸಿಕೊಳ್ಳುತ್ತ "ಪಕ್ಷಿಗಳಲ್ಲಿ ಶ್ರೇಷ್ಠನಾದ ಗರುಡ ಪಕ್ಷಿಯೇ, ನಿನ್ನ ಶಕ್ತಿಯ ಮಿತಿಯನ್ನು ಪರೀಕ್ಷಿಸುವುದಕ್ಕೋಸ್ಕರ ವಜ್ರಾಯುಧವನ್ನು ಪ್ರಯೋಗಿಸಿದೆ. ನಿನ್ನ ಅಪರಿಮಿತ ಶಕ್ತಿಗೆ ಮಿಗಿಲೆ ಇಲ್ಲ. ನನಗೆ ಸದಾ ಕಾಲ ನಿನ್ನ ಸ್ನೇಹವನ್ನು ದಯಪಾಲಿಸು." ಎಂದು ಕೇಳಿಕೊಂಡನು. "ಹಾಗೆ ಆಗಲಿ ಇಂದ್ರನೇ. ನೀನೀಗ ನನ್ನ ಶಕ್ತಿಯನ್ನು ನೋಡಿರುವೆ. ನನ್ನ ಸ್ನೇಹಿತನಾಗಿರುವೆ. ಆದ್ದರಿಂದ ಹೇಳುತ್ತೇನೆ ಕೇಳು. ನನ್ನ ರೆಕ್ಕೆಯ ಪುಕ್ಕವೊಂದು ಪರ್ವತ, ನದಿ, ಸಮುದ್ರ ಸಮೇತವಾದ ಭೂಮಿ ಮತ್ತು  ನಿನ್ನ ಭಾರ - ಎರಡನ್ನು ಒಟ್ಟಿಗೆ ತಾಳಬಲ್ಲದು. ನನ್ನ ಶಕ್ತಿಎಷ್ಟಿದೆಯೆಂದರೆ ಸಕಲ ಲೋಕಗಳನ್ನು ಒಟ್ಟಿಗೆ ಒಂದೇ ಬಾರಿಗೆ ಹೊತ್ತೊಯ್ಯಬಲ್ಲೆನು." ಎಂದನು. ಇಂದ್ರನು "ನನ್ನ ಸ್ನೇಹವನ್ನು ಸ್ವೀಕರಿಸಿದ್ದರಿಂದ ನಾನು ಧನ್ಯನಾದೆ. ಗರುಡ ಪಕ್ಷಿಯೇ ನೀನಾಗಲೇ ವಿಷ್ಣುವಿನ ವರದಿಂದ ಅಮರನಾಗಿರುವೆ. ನಿನಗೆ ಈ ಅಮೃತದಿಂದ ಉಪಯೋಗವಿಲ್ಲ. ಇನ್ನು ನೀನು ಕೊಡಬೇಕೆಂದಿರುವ ಸರ್ಪಗಳ ನಿನ್ನ ಶತ್ರು, ದೇವಲೋಕಕ್ಕೂ ಹನಿ ತರಬಲ್ಲರು. ಆದ್ದರಿಂದ ದಯವಿಟ್ಟು ಅಮೃತವನ್ನು ಹಿಂದಿರುಗಿಸು" ಎಂದು ಕೇಳಿಕೊಂಡನು.  ಆದರೆ ಗರುಡನು ಇದಕ್ಕೊಪ್ಪಲಿಲ್ಲ. ಆದರೆ ಸರ್ಪಗಳಿಂದ ಇದನ್ನು ಕಿತ್ತುಕೊಳ್ಳಲು ಒಂದು ಉಪಾಯವನ್ನು ಹೇಳಿಕೊಟ್ಟನು. ಸುಪ್ರೀತನಾದ ಇಂದ್ರ ವರವೊಂದನ್ನು ಕೇಳಿಕೊಳ್ಳುವಂತೆ ಆದೇಶಿಸಿದನು. "ಸರ್ಪಗಳ ಮೋಸದಿಂದ ತನ್ನ ತಾಯಿ ದಾಸಿಯಾಗಬೇಕಾಯಿತು. ಆದ್ದರಿಂದ ಸರ್ಪಗಳು ಇನ್ನು ಮುಂದೆ ನನ್ನ ಆಹಾರವಾಗುವಂತೆ ವರವನ್ನು ಕೊಡು" ಎಂದು ಕೇಳಿಕೊಂಡನು. "ತಥಾಸ್ತು" ಎಂದ ಇಂದ್ರ ಅಂತರ್ಧಾನನಾದನು.

ಇತ್ತ ವಾಪಸು ಬಂದ ಗರುಡ ಸರ್ಪಗಳಿಗೆ ಅಮೃತವನ್ನು ತೋರಿಸಿದನು. "ನೋಡಿ, ಕುಶದ ಹುಲ್ಲುಹಾಸಿನ ಮೇಲೆ ಇದನ್ನು ಇರಿಸುತ್ತೇನೆ. ನೀವು ಹೋಗಿ ಸ್ನಾನಾದಿ ಕರ್ಮಗಳನ್ನು ಮಾಡಿ ಬನ್ನಿ ನಂತರ ಇದರ ರುಚಿಯನ್ನು ನೋಡಿ" ಎಂದು ಸಲಹೆ ಕೊಟ್ಟನು. "ಈಕ್ಷಣ ನಾನು ಅಮೃತವನ್ನು ಕೊಟ್ಟಿರುವುದರಿಂದ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮುಕ್ತಳನ್ನಾಗಿ ಮಾಡಿ" ಎಂದನು ಗರುಡ. "ಹಾಗೆ ಆಗಲಿ - ಇಕ್ಷಣದಿಂದ ವಿನತೆ ಸ್ವತಂತ್ರಳು" ಎಂದವು ಸರ್ಪಗಳು. ಸ್ನಾನಾದಿ ಅರ್ಘ್ಯ ಕರ್ಮಗಳನ್ನು ಮಾಡುವುದಕ್ಕೆ ತೆರಳಿದವು. ಇದೆ ಸಮಯಕ್ಕೆ ಇಂದ್ರನು ಬಂದು ಅಮೃತದ ಬಟ್ಟಲನ್ನು ಟೆಕೆದುಕೊಂಡು ಸ್ವರ್ಗಲೋಕಕ್ಕೆ ಹಾರಿದನು. ವಿನತೆ ಮುಕ್ತಳಾದಳು. 

     

          

Saturday, November 10, 2018

kardama devahuti

ಕೃತಯುಗದಲ್ಲಿ ಮತ್ಸ್ಯಾವತಾರದ ನಂತರ ಸ್ವಾಯಂಭುವ ಮನು ಮತ್ತು ಅವನ ಪತ್ನಿ ಶತರೂಪಾ ಹೊಸಮನ್ವತಂರದ ಸ್ಥಾಪನೆಯಲ್ಲಿ ನಿರತರಾದರು. ಸ್ವಾಯಂಭುವ ಮನುವಿಗೆ ಮೂರು ಮಕ್ಕಳು - ಪ್ರಿಯವ್ರತ, ಉತ್ತಾನಪಾದ ಮತ್ತು ದೇವಹೂತಿ. ಪ್ರಿಯವ್ರತ ಮತ್ತು ಉತ್ತಾನಪಾದರು ಧರ್ಮಸಂಸ್ಥಾಪಕರಾದ ರಾಜರಾಗಿ ಇಡಿಯ ಭೂಮಂಡಲವನ್ನು ಪರಿಪಾಲಿಸುತ್ತಿದ್ದರು. ಸ್ವಾಯಂಭುವ ಮನುವಿಗೆ ತನ್ನ ಮಗಳಾದ ದೇವಹೂತಿಯ ಮೇಲೆ ವಿಶೇಷ ಮಮಕಾರ. ಅವಳಿಗೆ ಅನುರೂಪನಾದ ವರನನ್ನು ಹುಡುಕುತ್ತಿದ್ದನು. ಮಹಾತ್ಮನಾದ ಕರ್ದಮನೇ ದೇವಹೂತಿಗೆ ತಕ್ಕ ವರ ಎನ್ನುವುದು ಸ್ವಾಯಂಭುವ ಮನುವಿನ ಎಣಿಕೆ. ಚತುರ್ಮುಖ ಬ್ರಹ್ಮನ ಮಗನಾದ ಕರ್ದಮ ಪ್ರಜಾಪತಿಗೆ ತಂದೆಯು ಜಗತ್ತಿನ ಸೃಷ್ಟಿ ಕಾರ್ಯಕೈಗೊಳ್ಳುವಂತೆ ಆಜ್ಞೆ ಮಾಡಿದ್ದನು. ಸೃಷ್ಟಿಕಾರ್ಯ ಕೈಗೊಳ್ಳುವ ಮುಂಚೆ ಸರಸ್ವತೀ ತೀರದಲ್ಲಿ ಕಠಿಣವಾದ ತಪಸ್ಸಿಗೆ ಮೊದಲಾಗಿದ್ದನು ಕರ್ದಮ ಪ್ರಜಾಪತಿ.

ಅನೇಕ ವರ್ಷಗಳ ತಪಸ್ಸಿನ ನಂತರ ಮಹಾವಿಷ್ಣು ಶಬ್ದಬ್ರಹ್ಮದ ಮೂಲಕ ಅವನಿಗೆ ಪ್ರಕಟವಾದನು. ಕರ್ದಮನಿಗೆ ತಪಸ್ಸಿನ ಸಾಕ್ಷಾತ್ಕಾರದ ಸಂತೋಷದಿಂದ ಮತ್ತೇನೂ ಬೇಡವಾಯಿತು. ಆದರೆ ತನಗಿರುವ ಜವಾಬ್ದಾರಿಯಾದ ಸೃಷ್ಟಿಕಾರ್ಯದಿಂದ ಹಿಂದೆ ಸರಿಯುವಂತಿಲ್ಲ. 'ಮಹಾವಿಷ್ಣುವೇ, ಸೃಷ್ಟಿಕಾರ್ಯ ನಡೆಸುವುದಕ್ಕಾಗಿ ನನಗೆ ತಂದೆ ಬ್ರಹ್ಮನ ಆಜ್ಞೆಯಾಗಿದೆ. ಆದರೆ ನಿನ್ನ ಮೇಲಣ ಭಕ್ತಿ ಅದಕ್ಕೆ ಮಿಗಿಲಾಗಿದೆ. ನಾನು ಸಂಸಾರಿಯಾಗಿಯೂ ನಿನ್ನ ಭಕ್ತಿಗೆ ಒಂದಿಷ್ಟೂ ಚ್ಯುತಿ ಬರದ ಹಾಗೆ ದಯವಿಟ್ಟು ಕೈಹಿಡಿದು ನಡೆಸು' ಎಂದು ಕೇಳಿಕೊಂಡನು. ಭಗವಂತನು 'ಕರ್ದಮನೇ, ನೀನು ಸಂಸಾರಿಯಾಗುವ ಬಯಕೆಯಿಂದ ತಪಸ್ಸು ಮಾಡಿದೆ. ಆದರೆ ಈಗ ನಿನಗೆ ಭಕ್ತಿ ಮಿಗಿಲಾಗಿದೆ. ನಿನ್ನ ತಪಸ್ಸನ್ನು ಮೆಚ್ಚಿದ್ದೇನೆ. ನೀನು ಸೃಷ್ಟಿಕಾರ್ಯ ಮಾಡುವುದು ಅವಶ್ಯಕ. ನಿನಗೆ ಅನುರೂಪಳಾದ ವಧುವಿನ ಸೃಷ್ಟಿಯಾಗಿದೆ. ಸ್ವಾಯಭುವ ಮನುವಿನ ಮಗಳಾದ ದೇವಹೂತಿಯನ್ನು ಮದುವೆಯಾಗು, ನಿನ್ನ ಸಕಲ ಇಷ್ಟಾರ್ಧಗಳು ಪೂರೈಕೆಯಾಗುವುದು. ಸ್ವತಃ ಸ್ವಾಯಂಭುವ ಮನುವೇ ನಿನ್ನ ಆಶ್ರಮಕ್ಕೆ ಬಂದು ವಿವಾಹಪ್ರಸ್ತಾವಕ್ಕೆ ಮೊದಲಾಗುತ್ತಾನೆ. ದೇವಹೂತಿಯಿಂದ ನಿನಗೆ ಅನೇಕ ಮಕ್ಕಳಾಗುತ್ತಾರೆ, ಸ್ವತಃ ನಾನೇ ಒಂದಂಶದಿಂದ ಬಂದು ನಿನ್ನ ಮಗನಾಗಿ ಲೋಕಕಲ್ಯಾಣಕ್ಕೆ ಮೊದಲಾಗುತ್ತೇನೆ' ಎಂದು ಅಂತರ್ಧಾನನಾದನು.

ಅದರಂತೆ ಮರುದಿನ ಸ್ವಾಯಂಭುವ ಮನುವಿನ ರಾಜಪರಿವಾರ ಕರ್ದ್ಮನ ಆಶ್ರಮಕ್ಕ್ಕೆ ಬಂದಿಳಿಯಿತು. ಕರ್ದಮನ ಆಶ್ರಮದ ಸೌಂದರ್ಯಕ್ಕೆ ಸ್ವತಃ ಮನುವೇ ಮನಸೂರೆಗೊಂಡನು. ಕರ್ದಮನ ಭಕ್ತಿಗೆ ಮೆಚ್ಚಿದ ಮಹಾವಿಷ್ಣುವೇ ಆನಂದಬಾಷ್ಪ ಸುರಿಸಲು ಅದರ ಒಂದು ಬಿಂದುವಿನಿಂದ ಆಶ್ರಮದ ಎದುರು ಸುಂದರವಾದ 'ಬಿಂದುಸರೋವರ' ಉಂಟಾಗಿತ್ತು. ಮನೋಹರವಾದ ಮರ, ಗಿಡ, ಹೂಗಳಿಂದ ತುಂಬಿದ್ದ ಆಶ್ರಮದಲ್ಲಿ ಎಲೆಗಳಿಂದ ನಿರ್ಮಿತವಾದ ಕರ್ದಮನ ಮನೆಯಿತ್ತು. ಅದೇ ತಾನೆ ವೈದಿಕ ಕಾರ್ಯಗಳನ್ನು ಪೂರೈಸಿಕೊಂಡು ಬಂದ ಕರ್ದಮನ ದೈವೀಕ ತೇಜಸ್ಸನ್ನು ನೋಡಿ ಮನುವಿಗೆ ಗೌರವವುಂಟಾಯಿತು. ಕರ್ದಮನು ರಾಜಪರಿವಾರಕ್ಕೆ ಉಚಿತವಾದ ಸತ್ಕಾರ ಮಾಡಿ ಬರಮಾಡಿಕೊಂಡನು. ಭಗವಂತನ ಅಪ್ಪಣೆಯನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡನಾದರೂ ಗಾಂಭೀರ್ಯದಿಂದ 'ರಾಜನ್, ಸಕಲ ಭೂಮಂಡಲದ ದುಷ್ಟಶಿಷ್ಟ ರಕ್ಷಣದ ಹೊಣೆ ಹೊತ್ತಿರುವ ನೀನು ಪರಿವಾರ ಸಮೇತನಾಗಿ ಬಂದಿರುವೆಯೆಂದರೆ ಮಿಗಿಲಾದ ಲೋಕಕಲ್ಯಾಣ ಕಾರ್ಯವೇ ಇರಬೇಕು. ಅದೇನೆಂದು ಅರುಹು' ಎಂದು ಕೇಳಿಕೊಂಡನು.

ಸ್ವಾಯಂಭುವ ಮನುವು ಮಾರ್ಮಿಕವಾಗಿ ನುಡಿದನು. 'ಎಲೈ ಮುನಿಪುಂಗವನೇ, ಚತುರ್ಮುಖ ಬ್ರಹ್ಮನಾದರೋ ನಮ್ಮನ್ನು ಸೃಷ್ಟಿಸಿರುವುದು ಪ್ರಜಾಹಿತರಕ್ಷಣೆಗಾಗಿ. ಆದರೆ ನಿಮ್ಮನ್ನು ಸೃಷ್ಟಿಸುರುವುದು ವೇದಸ್ವರೂಪಿಯಾದ ತನ್ನನ್ನೇ ರಕ್ಶಿಸಿಕೊಳ್ಳುವುದಕ್ಕಾಕೆ. ಇದೀಗ ನಾನು ಬಂದಿರುವುದು ನಿಮ್ಮ ಲೋಕಕಲ್ಯಾಣದ ಧರ್ಮಾನುಸಾರಕ್ಕೆ ನನ್ನ ಕಾಣಿಕೆ ಸಲ್ಲಿಸಲು. ಈಕೆ ನನ್ನ ಮಗಳಾದ ದೇವಹೂತಿ. ಅವಳು ತನಗೆ ಅನುರೂಪನಾದ ಪತಿಯನ್ನು ಬಯಸುತ್ತಿದ್ದಾಳೆ. ಇತ್ತೀಚೆಗೆ ನಾರದ ಮಹರ್ಷಿಯಿಂದ ನಿಮ್ಮ ವಿದ್ಯೆ, ರೂಪ, ಗುಣ, ಸದಾಚಾರಗಳನ್ನು ಕೇಳಿ ನಿಮ್ಮನ್ನು ಮನಸಾ ವರಿಸಿದ್ದಾಳೆ. ನಿನಗೆ ಅನುರೂಪಳಾದ ದೇವಹೂತಿಯನ್ನು ವರಿಸಿ ನನ್ನನು ಕೃತಾರ್ಥನನ್ನಾಗಿ ಮಾಡು" ಎಂದನು. ಕರ್ದ್ಮನಿ 'ಮಹಾರಾಜ, ನಿನ್ನ ಮಗಳಾದ ದೇವಹೂತಿಯನ್ನು ವರಿಸುವುದಕ್ಕೆ ನೀನು ಇಷ್ಟಾಗಿ ಕೇಳಿಕೊಳ್ಳುವ ಅವಶ್ಯಕತೆಯಿಲ್ಲ. ದೇವಹೂತಿಯ ಬಗ್ಗೆ ನಾನು ಮಿಗಿಲಾದ ವಿಚಾರವನ್ನೇ ಕೇಳಿದ್ದೇನೆ. ಅವಳ ಲಾವಣ್ಯದ ಒಂದು ಕುಡಿನೋಟಕ್ಕೆ ಗಂಧರ್ವರಾಜನಾದ ವಿಶ್ವಾವಸು ಮೂರ್ಛೆಹೋದನಂತೆ. ದೇವಹೂತಿಯ ರೂಪ, ಗುಣ, ವಿದ್ಯೆ ತಿಳಿದಿರುವ ಯಾರೂ ಸಹ ಮೋಹಗೊಳ್ಳದೆ ಇರುವುದಿಲ್ಲ. ಅವಳನ್ನು ಸಂತೋಷದಿಂದ ವರಿಸುತ್ತೇನೆ. ಆದರೆ ನನ್ನ ಗೃಹಶ್ಥ ಧರ್ಮ ಸೃಷ್ಟಿಕಾರ್ಯಕ್ಕೆ ಮಾತ್ರ ಸೀಮಿತ. ನನ್ನ ಸೃಷ್ಟಿಕಾರ್ಯ ಮುಗಿದ ನಂತರ ನಾನು ಸನ್ಯಾಸಯಾಗಿ ಭಗವಂತ ನಾಮಸ್ಮರಣೆಯಲ್ಲಿ ಕಾಲಕಳೆಯುತ್ತೇನೆ. ಒಪ್ಪಿಗೆಯೇ' ಎಂದನು.

ದೇವಹೂತಿಗೆ ಕರ್ದಮನ ಧಾರ್ಮಿಕತೆ, ವೈರಾಗ್ಯ, ತೇಜಸ್ಸು ಎಲ್ಲದರಿಂದ ಅನುರಾಗ ಮತ್ತೂ ಸ್ಥಿರವಾಯಿತು. ಚತುರ್ಮುಖ ಬ್ರಹ್ಮನ ಸೃಷ್ಟಿಕಾರ್ಯ ಶುರುಮಾಡಿದ ನಂತರದಲ್ಲಿ ಮೊಟ್ಟಮೊದಲ ಸಕಲ ವೇದೋಕ್ತವಾಡ ವಿವಾಹ ಕರ್ದಮ ದೇವಹೂತಿಯರದ್ದು. ವೈಭವದ ವಿವಾಹದ ನಂತರ ಸ್ವಾಯಂಭುವ ಮನು ಮತ್ತು ಶತರೂಪೆಯರು ಭಾರದ ಮನದಿಂದ ಮಗಳನ್ನು ಒಪ್ಪಿಸಿ ರಾಜಧಾನಿಗೆ ಹಿಂದಿರುಗಿದರು.

ದೇವಹೂತಿ ಅರಮನೆಯ ವೈಭವದಿಂದ ಆಶ್ರಮದ ಸಾತ್ವಿಕ ಜೀವನಕ್ಕೆ ಬಹುಬೇಗ ಹೊಂದಿಕೊಂಡಳು. ಅವಳ ಅವಿರತ ದುಡಿಮೆ, ಆಶ್ರಮ ನಿರ್ವಹಣೆಯನ್ನು ಕರ್ದಮನಿಗೆ ಅವಳ ಮೇಲೆ ಅಪಾರ ಗೌರವ, ಆದರ, ಪ್ರೇಮವುಂಟಾಯಿತು. ಒಂದು ದಿನ ಕರ್ದಮ "ದೇವಿ, ನಿನ್ನಂತಹ ಪತ್ನಿಯನ್ನು ಪಡೆದು ನಾನು ಧನ್ಯನಾದೆ. ನಿನ್ನ ಆಶ್ರಮದ ಸೇವೆಯಲ್ಲಿ ನಿನ್ನ ದೇಹವೇ ಕುಂದುತ್ತಿರುವುದನ್ನು ನೀನು ಗಮನಿಸಿದಂತಿಲ್ಲ. ತಪಶ್ಯಕ್ತಿಯಿಂದ ನನ್ನಲ್ಲಿ ದೈವೀಕವಾದ ಸಿದ್ಧಿಗಳು ವಶವಾಗಿವೆ. ನಿನ್ನೀ ಸೇವೆಯಿಂದ ನೀನೂ ಸಹ ಅವುಗಳಿಗೆ ಅಧಿಕಾರಸ್ಥಳಾಗಿರುವೆ. ನಿನಗೆ ಬೇಕಾದ ಸುಖವೇನು ಕೇಳಿಕೋ. ಅಲ್ಪದ್ದಕ್ಕೆ ಆಸೆ ಪಡಬೇಕಾದ ಅವಶ್ಯಕತೆಯಿಲ್ಲ. ಸಾಮಾನ್ಯರಿಗೆ ಎಟುಕಲಾರದ ಸಕಲಭೋಗಗಳನ್ನೂ ನೀನು ತೃಪ್ತಿಯಾಗುವಷ್ಟು ಅನುಭವಿಸಬಹುದು" ಎಂದನು. ದೇವಹೂತಿ ತನ್ನ ಮನದ ಅಪೇಕ್ಷೆಯನ್ನು ಹೇಗೆ ಹೇಳುವುದು ಎಂದು ಯೋಚಿಸುತ್ತಾ "ಮಹರ್ಷಿ, ನಿನಗೆ ತಿಳಿಯದುದೇನಿದೆ? ಸಂಸಾರಸುಖದಲ್ಲಿ ಸಂತಾನಸುಖ ಹಿರಿದಾದುದು. ಸುಂದರಾಂಗರಾದ ನಿಮ್ಮ ಅಂಗಸಂಗದಿಂದ ನಾನು ಸಂತಾನವನ್ನು ಬಯಸುತ್ತೇನೆ. ಈ ಕಾಮಸುಖಕ್ಕೆ ಅನುಗುಣವಾದ ಮಂದಿರವನ್ನೂ, ಭೋಗಸಾಮಗ್ರಿಗಳನ್ನೂ ಸೃಷ್ಟಿಮಾಡಬೇಕೆಂದು ನನ್ನಾಸೆ" ಎಂದಳು. ಕರ್ದಮನಿಗೆ ಚತುರ್ಮುಖಬ್ರಹ್ಮನ ಆಜ್ಞೆ ಜ್ಞಾಪಕಕ್ಕೆ ಬಂತು.

ಅದರಂತೆ ಕರ್ದಮನು ಒಂದು ದಿವ್ಯವಾದ ವಿಮಾನವನ್ನು ನಿರ್ಮಿಸಿ ಅದರಲ್ಲಿ ದೇವಹೂತಿಗೆ ಪ್ರಿಯವಾದ ಸಕಲ ಸಂಪತ್ತುಗಳನ್ನೂ ತುಂಬಿದನು. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನ ಪತಿ-ಪತ್ನಿಯರ ಆಂತರ್ಯ ವಿಹಾರಕ್ಕೆ ಸಕಲಮನೋಹರವಾಗಿತ್ತು. ಕರ್ದಮನಿಗೇ ತನ್ನ ಸೃಷ್ಟಿಕಾರ್ಯದ ಸೊಬಗಿಗೆ ಆಶ್ಚರ್ಯವಾಯಿಗು. ಕರ್ದಮನ ಆದೇಶದಂತೆ ದೇವಹೂತಿ ಬಿಂದುಸರೋವರದಲ್ಲಿ ಮಿಂದು ವಿಮಾನವನ್ನೇರಿದಳು. ಅವಳ ಸಕಲ ಇಷ್ಟಾರ್ಧಗಳೂ ನೆರೆವೇರುವಷ್ಟು ದಿನ ಅವರಿಬ್ಬರೂ ವಿಮಾನದಲ್ಲಿ ವಿಹರಿಸಿದರು. ಕರ್ದಮನು ಅವಳಿಗೆ ಸಕಲ ಲೋಕಗಳು, ಸೃಷ್ಟಿಯ ಸಕಲಸೊಬಗುಗಳನ್ನೂ ಪರಿಚಯಮಾಡಿಕೊಟ್ಟನು. ಅನೇಕವರ್ಷಗಳು ಕ್ಷಣವೆನ್ನುವಂತೆ ಕಳೆದುಹೋದವು. ದೇವಹೂತಿಯ ಬಯಕೆ ಸಿದ್ಧಿಸಿತು. ಅವಳಿಗೆ ಪರಮಸುಂದರಿಯರಾದ ಒಂಭತ್ತು ಹೆಣ್ಣು ಮಕ್ಕಳು ಜನಿಸಿದರು.

ತಾನು ಕೊಟ್ಟ ಮಾತಿನಂತೆ ಕರ್ದಮನು ಸಂತಾನಭಾಗ್ಯವಾದ ನಂತರ ಸನ್ಯಾಸ ಜೀವನ ಸ್ವೀಕರಿಸುತ್ತಾನೆ ಎಂದು ದೇವಹೂತಿಗೆ ಅರಿವಿತ್ತು. ಅವನ ಅಗಲಿಕೆಯನ್ನು ತಾಳಲಾರದಾದಳು. ಸ್ವತಃ ತಾನೇ ವಿಷಯವನ್ನು ಪ್ರಸ್ತಾಪಿಸಿ "ಪತಿಯೇ, ನನಗೆ ಸಂತಾನಭಾಗ್ಯವನ್ನೇನೋ ಕಲ್ಪಿಸಿದರಿ. ಆದರೆ ನಿಮ್ಮ ಪುತ್ರಿಯರಿನ್ನೂ ಚಿಕ್ಕ ಮಕ್ಕಳು. ಅವರಿಗೆ ಅನುರೂಪರಾಡ ವರರನ್ನು ಅನ್ವೇಷಿಸಿ ವಿವಾಹ ಮಾಡುವುದೂ ತಮ್ಮ ಜವಾಬ್ದಾರಿಯಲ್ಲವೇ? ನೀವೀಗಲೇ ಸನ್ಯಾಸಿಗಳಾದರೆ ನನಗೆ ಅತಿಯಾದ ದುಃಖವಾಗುವುದು. ನನಗೆ ಸಕಲಭೋಗವನ್ನೂ ಕಲ್ಪಿಸಿದ್ದೀರಿ. ಆದರೆ ನಾನು ನಿಮ್ಮಿಂದ ವೈರಾಗ್ಯವನ್ನೂ, ಮುಕ್ತಿಮಾರ್ಗವನ್ನೂ ಇನ್ನೂ ಪಡೆದಿಲ್ಲ. ನನಗೆ ಅಂತಹ ಮಾರ್ಗವನ್ನು ಬೋಧಿಸಬಲ್ಲಂತಹ ಒಬ್ಬ ಮಗನನ್ನು ಕರುಣಿಸಿ - ಅದಲ್ಲದೆ ನನಗೆ ಮತ್ತೊಂದರ ಆಸೆಯಿಲ್ಲ" ಎಂದಳು.

ಕರ್ದಮನಿಗೆ ಮಹಾವಿಷ್ಣು ಪ್ರತ್ಯಕ್ಷನಾಗಿದ್ದಾಗ ಕೊಟ್ಟ ವರ ನೆನಪಾಯಿತು. ಸ್ವತಃ ತಾನೇ ಲೋಕೋದ್ಧಾರಕ್ಕಾಗಿ ನನ್ನ ಮಗನಾಗಿ ಜನ್ಮತಾಳುವೆನೆಂದು ಹೇಳಿದ್ದನಲ್ಲವೇ. ಆ ಘಳಿಗೆ ಬಂದುದಾಗಿದೆ. ಕರ್ದಮನು "ದೇವಹೂತಿ, ನಿನ್ನ ಭಾಗ್ಯ ಮಿಗಿಲಾದುದು. ಸ್ವತಃ ಶ್ರೀಹರಿಯೇ ನಿನ್ನ ಉದರದಲ್ಲಿ ಜನಿಸುವನು. ಇಂದಿನಿಂದ ಕಠಿಣವ್ರತಾಧಾರಿಯಾಗಿ ತಪಸ್ಸನ್ನಾಚರಿಸು. ಶ್ರೀಹರಿಯೇ ನಿನಗೆ ಪರಮಾರ್ಧ ಜ್ಞಾನವನ್ನು ಕರುಣಿಸುತ್ತಾನೆ" ಎಂದು ಅನುಗ್ರಹಿಸಿದನು. ಅದರಂತೆ ದೇವಹೂತಿ ದೀರ್ಘ ತಪಸ್ಸಾನಚರಿಸಿದಳು. ಶುಭಘಳಿಗೆಯೊಂದರಲ್ಲಿ ಅವಳಿಗೆ ಪುತ್ರನೊಬ್ಬನ ಜನನವಾಯಿತು. ಸಕಲಲೋಕಗಳಲ್ಲಿ ಶುಭಶಕುನಗಳಾದವು. ದೇವದುಂದಿಭಿಗಳು ಮೊಳಗಿದವು.ಸ್ವತಃ ಚತುರ್ಮುಖ ಬ್ರಹ್ಮನ ಧರೆಗಿಳಿದು ಬಂದು ದೇವಹೂತಿ-ಕರ್ದಮರನ್ನು ಅಭಿನಂದಿಸಿ ಆಶೀರ್ವದಿಸಿದನು. ಮಗುವಿಗೆ ಬ್ರಹ್ಮನೇ 'ಕಪಿಲ'ನೆಂದು ನಾಮಕರಣ ಮಾಡಿದನು.

ಪತ್ನಿಗೆ ಕೊಟ್ಟ ಮಾತಿನಂತೆ ಕರ್ದಮನು ಪುತ್ರಿಯರಕ್ಕೆ ವಿವಾಹಕ್ಕೆ ಮೊದಲಾದನು. ಮರೀಚಿ ಮಹರ್ಷಿ ಕಲಾದೇವಿಯನ್ನೂ, ಅತ್ರಿಮುನಿ ಅನಸೂಯೆಯನ್ನೂ, ಆಂಗಿರಸ ಮಹರ್ಷಿ ಶ್ರದ್ಧಾದೇವಿಯನ್ನೂ, ಪುಲಸ್ತ್ಯನು ಹವಿರ್ಭೂದೇವಿಯನ್ನೂ, ಪುಲಹನು ಗತಿಯನ್ನೂ, ಕ್ರತು ಕ್ರಿಯಾದೇವಿಯನ್ನೂ, ಭೃಗು ಖ್ಯಾತಿಯನ್ನೂ, ವಸಿಷ್ಟನು ಅರುಂಧತಿಯನ್ನೂ, ಅಥರ್ವನು ಶಾಂತಿದೇವಿಯನ್ನೂ ಮದುವೆಯಾದರು. ತದನಂತರ ಕರ್ದಮನು ಪತ್ನಿ, ಪುತ್ರರನ್ನು ಬೇಳ್ಕೊಟ್ಟು ವಿರಕ್ತಪುರುಷನಾಗಿ ಕಠಿಣ ತಪಸ್ಸಾನಚರಿಸಿ ಮೋಕ್ಷಪಡೆದನು.       


Monday, November 05, 2018

ನರಕಾಸುರ

ಮಕ್ಕಳೆ - ನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು. ಕರ್ನಾಟಕದಲ್ಲಿ ಚತುರ್ದಶಿಯ ದಿನ ದೀಪಾವಳಿ ಹಬ್ಬದ ಮೊದಲನೇ ದಿನ. ಉತ್ತರ ಭಾರತದಲ್ಲಿ ಇದಕ್ಕಿಂತ ಒಂದು ದಿನ ಮುಂಚೆ ಧನ್ ತೇರಸ್ ಅನ್ನುವ ಹಬ್ಬ ಮಾಡ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಚತುರ್ದಶಿಯೇ ಮೊದಲನೇ ದಿನ. ಇವತ್ತಿನ ದಿನಕ್ಕೆ ಎರಡು ಪ್ರಾಮುಖ್ಯತೆ ಇದೆ. ಮೊದಲನೇಯದು ಇವತ್ತಿನ ದಿನ ಶ್ರೀರಾಮ ರಾವಣನನ್ನು ಕೊಂದ ನಂತರ ಅಯೋಧ್ಯಾನಗರಿಯನ್ನು ತಲುಪುವ ದಿನ. ಮಾರನೇಯ ದಿನ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬ ನಡೆಯೋದು ಶ್ರೀರಾಮ ಹಿಂತಿರುಗಿದ್ದರ ನೆನಪಿಗಾಗಿ. ಅದೇ ರೀತಿ ಮಹಾಭಾರತ ಕಾಲದಲ್ಲಿ ಇವತ್ತಿನ ದಿನವೇ ಶ್ರೀಕೃಷ್ಣ ನರಕಾಸುರ ಅನ್ನುವ ರಾಕ್ಷಸನನ್ನ ಸಂಹರಿಸಿದ್ದು, ಅದರ ನೆನಪಿಗಾಗಿ ಈ ದಿನಕ್ಕೆ ನರಕ ಚತುರ್ದಶಿ ಅನ್ನುವ ಹೆಸರು ಬಂದಿದೆ. ಈ ಕತೆ ತುಂಬಾ ರೋಚಕವಾಗಿದೆ. ಅದನ್ನ ಕೇಳೋಣ್ವೆ.


ಸಾವಿರಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ ಅನ್ನೋದು ನಿಮಗೆ ಗೊತ್ತಿರಬಹುದು. ಅವನು ಇಡೀ ಭೂಮಿಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ ಹಿರಣ್ಯಾಕ್ಷನನ್ನು ನೀರಿನಲ್ಲೇ ದ್ವಂದ್ವಯುದ್ಧ - ಅಂದರೆ ಒಂದು ತರಹದ ಕುಸ್ತಿಯನ್ನು ಮಾಡಿ - ಕೊಂದು ಭೂದೇವಿಯನ್ನು ಸಂರಕ್ಷಿಸಿದ, ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ -  ಅನ್ನೋ ಕಥೆ ನಿಮಗೆ ಗೊತ್ತಿರಬಹುದು. ಮಹಾವಿಷ್ಣುವಿನ ಮೂರನೇಯ ಮುಖ್ಯ ಅವತಾರವಾದ ವರಾಹನಿಗೆ ಎಷ್ಟು ಶಕ್ತಿಯಿತ್ತು ಅಂದರೆ ಹಿರಣ್ಯಾಕ್ಷನನ್ನು ಹೂವೆತ್ತಿದ ಹಾಗೆ ಹಗುರವಾಗಿ, ಸುಲಭವಾಗಿ ಕೊಂದುಬಿಟ್ಟನಂತೆ. ಆದರೆ ಅದೆಲ್ಲೋ ಒಂದು ಕಡೆ ಒಂದು ಹನಿ ಬೆವರು ವರಾಹನ ಮೈಯಿಂದ ಕೆಳಗೆ ಬಿದ್ದೇ ಬಿಟ್ಟಿತಂತೆ. ವರಾಹ ಅವತಾರ ಪುರುಷ ಅಂದ ಮೇಲೆ ಕೇಳಬೇಕೆ. ಆ ಬೆವರಿನಿಂದ ಒಬ್ಬ ಶಕ್ತಿವಂತನಾದ ಯುವಕ ಹುಟ್ಟಿಬಿಟ್ಟಿನಂತೆ. ಅವನ ಹೆಸರೇ ನರಕ. ತಂದೆ ವರಾಹ, ತಾಯಿ ಭೂದೇವಿ.

ಭೂದೇವಿಗೆ ತನ್ನ ಮಗ ನರಕನ ಮೇಲೆ ಮಹಾಪ್ರೀತಿ. ತನ್ನ ಮಗ ಸದಾ ಜಯಶಾಲಿಯಾಗಿರಬೇಕು, ಯಾರೂ ಸೋಲಿಸಬಾರದು ಎಂದು ವರ ಬೇಡಿದಳಂತೆ.ವರಾಹ ತನ್ನ ಒಂದು ದಂತವನ್ನು ಕೊಟ್ಟು 'ನೋಡು ಮಗನೆ, ಇದು ತುಂಬಾ ಶಕ್ತಿಶಾಲಿಯಾದ ಆಯುಧ, ಇದನ್ನ ನೀನು ನಿನಗೆ ಅಪಾಯವಾದಾಗ ಅಥವಾ ಧರ್ಮವನ್ನು ಉಳಿಸೋದಕ್ಕೆ ಮಾತ್ರ ಬಳಸಬೇಕು. ವಿನಾ ಕಾರಣ ಮತ್ತು ಅಮಾಯಕರ ಮೇಲೆ ಬಳಸಬಾರದು' ಎಂದು ಕಟ್ಟಪ್ಪಣೆ ಮಾಡಿದನಂತೆ. ಭೂದೇವಿಗೆ ತನ್ನ ಮಗ ಮೂರು ಲೋಕಗಳಲ್ಲಿ ಮಹಾ ಶಕ್ತಿವಂತ ಅಂತ ಸಂತೋಷ. ಆದರೆ ವರಾಹ ಮಾತ್ರ 'ನೋಡೋಣ ಅವನು ಒಳ್ಳೇದಕ್ಕಾಗಿ ಶಕ್ತಿ ಬಳಸುತ್ತಾನೋ ಅಥವಾ ಸ್ವಾರ್ಥಕ್ಕೋಸ್ಕರ ಬಳಸುತ್ತಾನೋ' ಎಂದು ಹೇಳಿ ಮಾಯವಾದನು.

ಮೊದಮೊದಲು ಸರಿಯಾಗಿದ್ದ ನರಕ ನಂತರ ಬಾಣಾಸುರ ಅನ್ನುವ ರಾಕ್ಷಸನ ಜೊತೆ ಸೇರಿ ತಾನೂ ರಾಕ್ಷಸನಾದ. ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು 'ನನ್ನ ತಾಯಿಯಿಂದ ಮಾತ್ರ ನನಗೆ ಸಾವು' ಎನ್ನುವ ವರ ಪಡೆದ. ವಿಪರೀತ ಬಲಶಾಲಿಯಾದ ಆದರೆ ಮಹಾ ಅಧರ್ಮಿಯಾದ. ಪ್ರಾಗ್ಜ್ಯೋತಿಷಪುರ - ಅಂದರೆ ಇವತ್ತಿನ ಗುವಹಾಟಿಯಲ್ಲಿ ತನ್ನ ರಾಜ್ಯ ಸ್ಥಾಪಿಸಿಕೊಂಡಿದ್ದ. ಒಳ್ಳೆಯವರಿಗೆ ತೊಂದರೆ ಕೊಟ್ಟು, ಕೆಟ್ಟರಾಕ್ಷಸರ ರಾಜ್ಯ ಬೆಳೆಸಿದ. ಹದಿನಾರು ಸಾವಿರ ಸ್ತ್ರೀಯರನ್ನ ತನ್ನ ಅರಮನೆಯಲ್ಲಿ ಬಂದಿಸಿಟ್ಟಿದ್ದ. ಸ್ವರ್ಗಕ್ಕೆ ಹೋಗಿ ಇಂದ್ರನನ್ನೇ ಸೋಲಿಸಿ ಎಲ್ಲಾ ದೇವತೆಗಳನ್ನು ತನ್ನ ಕೈವಶ ಮಾಡಿಕೊಂಡಿದ್ದ. ದೇವತೆಗಳೆಲ್ಲ ವಿಷ್ಣುವಿನ ಹತ್ತಿರ ಹೋಗಿ ನರಕನಿಂದ ನಮ್ಮನ್ನು ರಕ್ಶಿಸು ಎಂದು ಕೇಳಿಕೊಂಡರು. ಅವರೆಲ್ಲರ ಕಷ್ಟವನ್ನ ಶಾಂತನಾಗಿ ಆಲಿಸಿದ ವಿಷ್ಣು 'ಶ್ರೀಕೃಷ್ಣಾವತಾರಕ್ಕಾಗಿ ನೀವು ಕಾಯಬೇಕು' ಅಂತ ಹೇಳಿ ಅವರನ್ನ ಕಳಿಸಿದ.

ಕೃತಯುಗವಾದ ನಂತರ ತ್ರೇತಾ ಯುಗ ಬಂದಿತು. ಅದಾದ ಮೇಲೆ ದ್ವಾಪರಯುಗ ಬಂತು. ದ್ವಾಪರದಲ್ಲಿ ಮಹಾವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತಾರ ಎತ್ತಿ ಭೂಮಿಗೆ ಬಂದ. ಮಹಾ ಅಧರ್ಮಿ, ಕ್ರೂರಿಯಾದ ಕಂಸ ಮುಂತಾದ ಅನೇಕ ರಾಕ್ಷಸರನ್ನ ಕೊಂದ. ಆದರೆ ನರಕ ಮಾತ್ರ ಇನ್ನೂ ಬಲಶಾಲಿಯಾಗೇ ಇದ್ದ. ಇಂದ್ರನ ತಾಯಿ ಅದಿತೀದೇವಿಯ ಕಿವಿಯೋಲೆಯನ್ನ ಕಿತ್ತು ತಂದಿದ್ದ. ಈ ಸಮಯದಲ್ಲಿ ಇಂದ್ರ ಶ್ರೀಕೃಷ್ಣನ ಸಹಾಯ ಬೇಡಿದ. 'ನೋಡು ಶ್ರೀಕೃಷ್ಣ ನನ್ನ ತಾಯಿಯ ಕಿವಿಯೋಲೆನೇ ಕಿತ್ತುಕೊಂಡಿದ್ದಾನೆ, ದಯವಿಟ್ಟು ಅವನ ಅಹಂಕಾರದ ಹುಟ್ಟಡಗಿಸು' ಅಂತ. ಕೃಷ್ಣನ ಹೆಂಡತಿ ಸತ್ಯಭಾಮೆಗೆ ಇದನ್ನ ಕೇಳಿ ಮಹಾದುಃಖವಾಯಿತು. ಪ್ರಪಂಚಕ್ಕೇ ತಾಯಿಯಾದ ಅದಿತೀದೇವಿಗೆ ಈ ರೀತಿ ಅವಮಾನ ಮಾಡಿದ ನರಕಾಸುರನನ್ನ ಸುಮ್ಮನೆ ಬಿಡಬಾರದು ಅಂತ ಶ್ರಿಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು.

ಸತ್ಯಭಾಮಗೆ ಶ್ರೀಕೃಷ್ಣ ಎಂದೂ ನಿರಾಸೆ ಮಾಡಿರಲಿಲ್ಲ. ಅಲ್ಲದೇ ನರಕಾಸುರ ಮಹಾಪಾಪಿ. ಒಂದು ಅವಕಾಶಕ್ಕಾಗಿ ಕೃಷ್ಣ ಕಾಯುತ್ತಿದ್ದ ಅಷ್ಟೆ. 'ಸರಿ' ಎಂದು ತಕ್ಷ್ಣಣವೇ ಮಹಾಗರುಡ ಪಕ್ಷಿಯನ್ನ ಮನದಲ್ಲಿ ನೆನೆದ. ವಿಷ್ಣುವಿನ ವಾಹನವಾದ ಗರುಡ ವಿಷ್ಣುವಿನ ಅವತಾರಿಯಾದ ಕೃಷ್ಣ ಕರೆದ ತಕ್ಷಣ ಬಂದ. ಕೃಷ್ಣ ತನ್ನ ಆಯುಧವಾದ ಸುದರ್ಶನ ಚಕ್ರ ಮತ್ತು ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಗರುಡಪಕ್ಷಿಯನ್ನೇರಿ ಕೂತ. ಸತ್ಯಭಾಮೆ ನಾನೂ ಬರುತ್ತೇನೆ ಎಂದು ಹಠ ಹಿಡಿದಳು. ಸರಿ ಎಂದು ಶ್ರೀಕೃಷ್ಣ ಸತ್ಯಭಾಮಾಸಮೇತನಾಗಿ ಪ್ರಾಗ್ಜ್ಯೋತಿಷಪುರಕ್ಕೇ ಹೊರಟೇಬಿಟ್ಟ.

ನರಕಾಸುರ ಕ್ರೂರಿಯಷ್ಟೆ ಅಲ್ಲ ಮಹಾಬುದ್ಧಿವಂತ. ತನ್ನ ನಗರಕ್ಕೇ ನಾಲ್ಕು ರೀತಿಯ ರಕ್ಷಣೆ ನಿರ್ಮಿಸಿಕೊಂಡಿದ್ದ. ಮೊದಲನೇಯ ರಕ್ಷಣೆ ಬಂಡೆಗಳಿಂದ ಕೂಡಿದ ಪರ್ವತಗಳದ್ದು. ಅದನ್ನು ಗರುಡ ತನ್ನ ಕೊಕ್ಕಿನಿಂದ ಜೋರಾಗಿ  ಕುಕ್ಕಿ ಪುಡಿಪುಡಿ ಮಾಡಿದ. ಎರಡಾನೇಯದಾಗಿ ಬೆಂಕಿಯಿಂದ ಮಾಡಿದ ಉಂಗುರದ ರೀತಿಯ ಒಂದು ಸುತ್ತುಬೇಲಿಯ ದಾಟಬೇಕಾಗಿತ್ತು. ಅದನ್ನು ಕೂಡ ಶ್ರೀಕೃಷ್ಣ ವರುಣಾಸ್ತ್ರದಿಂದ ನೀರು ಚಿಮ್ಮಿಸಿ ಆರಿಸಿ ಪ್ರಾಗ್ಜ್ಯೋತಿಷಪುರದ ಬಾಗಿಲ ಹತ್ತಿರ ಬಂದೇಬಿಟ್ಟ. ತನ್ನ ಶಂಖ ಪಾಂಚಜನ್ಯವನ್ನ ಒಮ್ಮೆ ಜೋರಾಗಿ ಊದಿದ. ಆ ಹೆಬ್ಬಾಗಿಲನ್ನು 'ಮುರ' ಎನ್ನುವ ರಾಕ್ಷಸ - ನರಕಾಸುರನಿಗೆ ಅತ್ಯಂತ ಪ್ರಿಯನಾದ ರಾಕ್ಷಸ - ಅವನು ನೋಡಿಕೊಂಡಿದ್ದ. ಪರ್ವತ, ಬೆಂಕಿಯ ಬೇಲಿ ಅವುಗಳನ್ನೆಲ್ಲ ಮೀರಿ ಇಲ್ಲಿಯವರೆಗೇ ಯಾರು ಕೂಡಾ ಬರಲು ಸಾಧ್ಯವಿಲ್ಲ ಎಂದುಕೊಂಡು ನೀರಿನಾಳದಲ್ಲಿ ವಿಹರಿಸುತ್ತಿದ್ದ ಮುರ. ಆದರೆ ಬಂಡೆಗಳು ಚೂರಾಗಿದ್ದು, ನೀರಿನ ಜೋರು ಶಬ್ದ ಮತ್ತು ಕೃಷ್ಣನ ಶಂಖನಾದದಿಂದ ಮುರನಿಗೆ ಗಾಬರಿಯಾಗಿ ಹೊರಬಂದ. ಅವರಿಬ್ಬರ ಮಧ್ಯೆ ಮಹಾಯುದ್ಧವಾಯಿತು. ಆದರೆ ಕಡೆಗೆ ಶ್ರೀಕೃಷ್ಣನಿಗೆ ಜಯವಾಗಿ ಮುರ ಸಾವನ್ನಪ್ಪಿದ. ಮುರನಂತಹ ಬಲಶಾಲಿಯಾದ ಕ್ರೂರಿ ರಾಕ್ಷಸನನ್ನು ಕೊಂದಕಾರಣ ಶ್ರೀಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.

ಕಟ್ಟ ಕಡೆಯದಾಗಿ ನರಕಾಸುರನ ಹನ್ನೊಂದು ಅಕ್ಷೌಹಿಣಿ ಸೇನೆ ಶ್ರೀಕೃಷ್ಣನಿಗೆ ಎದುರಾಯಿತು. ಆದರೆ ಅದು ಕೃಷ್ಣನಿಗೆ ಲೆಕ್ಕವೇ ಇಲ್ಲವಾಯಿತು. ಸುಲಭವಾಗಿ ಇಡಿಯ ಸೈನ್ಯವೇ ನಾಶವಾಯಿತು. ಕಡೆಗೆ ವಿಧಿಯಿಲ್ಲದೇ ನರಕಾಸುರನೇ ಬರಬೇಕಾಯಿತು. ಅವರಿಬ್ಬರ ಮಧ್ಯೆ ಅನೇಕ ದಿನಗಳ ಕಾಲ ದೀರ್ಘವಾದ ಯುದ್ದವಾಯಿತು. ನರಕಾಸುರನ ಎಲ್ಲ ಅಸ್ತ್ರಗಳನ್ನೂ ಶ್ರೀಕೃಷ್ಣ ಸೋಲಿಸಿಬಿಟ್ಟ. ಕಡೆಗೆ ಅವನಲ್ಲಿ ವರಾಹ ಕೊಟ್ಟಿದ್ದ ದಂತದಿಂದ ಮಾಡಿದ ತ್ರಿಶೂಲದಂತಹ ಒಂದು ಆಯುಧ ಮಾತ್ರ ಉಳಿದಿತ್ತು. ಇಂತಹ ಸಂಕಷ್ಟದ ಕಾಲಕ್ಕೇ ಅದನ್ನ ಇಟ್ಟುಕೊಂಡಿದ್ದ, ಆದರೆ ಈಗ ಅದನ್ನ ಅಧರ್ಮದ ಕಾರಣಕ್ಕೆ ಬಳಸುತ್ತಾ ಇದ್ದ. ಆದ್ದರಿಂದ ಶ್ರೀಕೃಷ್ಣ ಮತ್ತು ಸತ್ಯಭಾಮರ ಮುಂದೆ ಈ ತ್ರಿಶೂಲವೂ ನಡೆಯಲಿಲ್ಲ. ನರಕಾಸುರನಿಗೆ ಗಾಬರಿಯಾಯಿತು. ವರಾಹದ ದಂತವೇ ಸೋತಿದೆ ಎಂದರೆ ನನ್ನ ಅಂತ್ಯ ಕಾಲ ಬಂದಿರಬೇಕು ಅನ್ನಿಸಿತು. ಅದೇ ಸಮಯಕ್ಕೆ ನರಕಾಸುರನಿಗೆ ತನಗಿರುವ ವರದ ಜ್ಞಾಪಕ ಬಂತು. ತನ್ನ ತಾಯಿಯಿಂದ ಮಾತ್ರ ತನಗೆ ಸಾವು ಅಂದ ಮೇಲೆ ಸತ್ಯಭಾಮೆಯೇ ತನ್ನ ಹಿಂದಿನ ಜನ್ಮದಲ್ಲಿ ತಾಯಿ ಮತ್ತ್ರು ಶ್ರೀಕೃಷ್ಣ ವರಾಹನಲ್ಲದೇ ಬೇರೆ ಯಾರೂ ಅಲ್ಲ ಎಂದು ಅವನಿಗೆ ಅರಿವಾಯಿತು. ಕೃಷ್ಣ ಮತ್ತು ಸತ್ಯಭಾಮೆಯರ ಬಾಣದಿಂದ ನರಕಾಸುರ ನೆಲಕ್ಕುರುಳಿದ.

ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನ ಒಂದು ವರ ಕೇಳಿದ. 'ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ದಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ಸಾವನ್ನ್ನು ಆಚರಿಸಿಲಿ' ಎಂದು ವರವನ್ನು ಬೇಡಿದ. ಭೂದೇವಿಯಾದ ಸತ್ಯಭಾಮೆ ಮನಕರಗಿ ವರವನ್ನು ಕೊಟ್ಟಳು. ನರಕಾಸುರ ಕಡೆಗೆ ಸತ್ತ. ಶ್ರೀಕೃಷ್ಣ ನರಕನು ಬಂಧಿಸಿದ್ದ ಹದಿನಾರು ಸಾವಿರ ಸ್ತ್ರೀಯರನ್ನ ಬಿಡುಗಡೆ ಮಾಡಿದ, ನರಕಾಸುರನ ಮಗ ಭಗದತ್ತನನ್ನ ರಾಜನನ್ನಾಗಿ ಮಾಡಿದ. ಮತ್ತು ತಕ್ಷಣವೇ ಸತ್ಯಭಾಮೆಯ ಸಮೇತ ಗರುಡನ ಮೇಲೇರಿ ಸ್ವರ್ಗದಲ್ಲಿರುವ ಇಂದ್ರನಿಗೆ ಅದಿತಿದೇವಿಯ ಓಲೆಗಳನ್ನು ಗೌರವದಿಂದ ಅರ್ಪಿಸಿ ದ್ವಾರಕೆಗೆ ಹಿಂದಿರುಗಿದ. 

Thursday, November 01, 2018

ಸಾವಿತ್ರಿ


ಸಾವಿತ್ರಿ - ಭಾಗ ಎರಡು

ತಂದೆ ಅಶ್ವಪತಿ ಅರಮನೆಗೆ ಹಿಂದಿರುಗಿದ ನಂತರ ಸಾವಿತ್ರಿ ಆಶ್ರಮ ನಿವಾಸಿಯಾದಳು. ರಾಜಕುಮಾರಿಯಂತೆ ಬೆಳೆದ ಸಾವಿತ್ರಿಯನ್ನು ಅತಿಸರಳ ವೇಷದಲ್ಲಿ ನೋಡಿ ನೊಂದ ಸತ್ಯವಾನ ಸಾವಿತ್ರಿಗೆ ಉಂಗುರವೊಂದನ್ನು ಕೊಟ್ಟನು. ಅದರ ಹೊಳಪಿನಲ್ಲಿ ಅವಳ ಸೌಂದರ್ಯದ ಸೊಬಗನ್ನು ಕನ್ನಡಿಯಂತೆ ನೋಡಿಕೊಳ್ಳುವಂತೆ ಹೇಳಿದನು. ನಕ್ಕಳು ಸಾವಿತ್ರಿ. ಹೀಗೆ ಕಣ್ಮುಚ್ಚಿ ತೆರೆಯುವುದರಲ್ಲಿ ಹೀಗೆ ಅನೇಕ ದಿನಗಳು ಕಳೆದವು. ಆಶ್ರಮ ಜೀವನದ ಸೌಂದರ್ಯದಲ್ಲಿ ಸಾವಿತ್ರಿ ಮುಂದೆ ಬರಲಿರುವ ದುರಂತವನ್ನು ಸ್ವಲ್ಪ ಮರೆತಳು.

ಸ್ವಲ್ಪ ಕಾಲಾನಂತರ ಸಾವಿತ್ರಿ ಎಚ್ಚೆತ್ತಳು. ಸತ್ಯವಾನನ ಆಯಸ್ಸು ಮುಗಿಯುವುದಕ್ಕೆ ಕೇವಲ ಮೂರೇ ತಿಂಗಳುಗಳಿದ್ದವು. ಸಾವಿತ್ರಿಯ ಎದೆಬಡಿತ ದಿನದಿನಕ್ಕೆ ಏರುತ್ತಿದ್ದರು ವಿಧಿಸಂಕಲ್ಪದ ವಿರುದ್ಧ ಮಾಡುವುದೇನು ಎನ್ನುವುದು ಸಾವಿತ್ರಿಗೂ ಸ್ಪಷ್ಟವಿರಲಿಲ್ಲ. ಆದರೆ ಅವಳ ತಪಸ್ಸು, ಉಪವಾಸ, ಧ್ಯಾನ, ಪೂಜೆಗಳು ಹೆಚ್ಚುತ್ತಾ ಹೋದವು. ಅತ್ತೆ, ಮಾವ ಮತ್ತು ಪತಿ ಅವಳ ಕಠಿಣ ಜೀವನ ರೀತಿಗೆ ಗಾಬರಿಗೊಂಡರೂ ಸಾವಿತ್ರಿ ಮಾತ್ರ ತನ್ನ ದೈನಿಕ ನಿಷ್ಠೆಯನ್ನ್ನು ಸಡಿಲಿಸಲಿಲ್ಲ. ಕಟ್ಟಕಡೆಗೆ ಆದಿನ ಬಂದೇಬಂದಿತು. ಸತ್ಯವಾನನ ಆಯಸ್ಸಿಗೆ ಇನ್ನೊಂದೇ ರಾತ್ರಿಯಿತ್ತು. ಮರುದಿನ ಪೂರ್ತಿ ಸತ್ಯವಾನನ ಜೊತೆಗೇ ಕಳೆಯುವುದೆಂದು ತೀರ್ಮಾನಿಸಿದಳು.

ಮರುದಿನ - ತನ್ನ ಬೆಳಗಿನ ದೈನಿಕಗಳನ್ನು ಬಿಟ್ಟು ಇಂದು ಸಾವಿತ್ರಿ ತನ್ನ ಜೊತೆ ಕಾಡಿಗೆ ಬರಬೇಕೆಂದು ಹಠ ಹಿಡಿದದ್ದು ನೋಡಿ ಸತ್ಯವಾನನಿಗೆ ಆಶ್ಚರ್ಯ. ಸಾವಿತ್ರಿಗೋ ಮುಖ್ದದಲ್ಲಿ ಮಂದಹಾಸ ಎದೆಯಲ್ಲಿ ಡಮರುಗ . ಅವಳ ಜೊತೆ ಕಾಡಿನಲ್ಲಿ ಏಕಾಂತ ದೊರೆಯುವುದೆಂದು, ಕಾಡಿನಲ್ಲಿ ಅವಳ ಕಾಲ್ಗೆಜ್ಜೆಯ ಸಪ್ಪಳ ಮಧುರವಾಗಿರುತ್ತದೆ ಸತ್ಯವಾನನಿಗೆ ಸಂತೋಷ. ಹೆಜ್ಜೆ ಹೆಜ್ಜೆಗೂ ಏರುತ್ತಿರುವ ಆತಂಕದೊಂದಿಗೆ ಭಾರದ ಹೆಜ್ಜೆಯೊಂದಿಗೆ ಸಾವಿತ್ರಿ ನಡೆದಳು. ಕಾಡಿನ ಸೌಂದರ್ಯವನ್ನು ಸವಿಯುತ್ತಾ, ಎಲ್ಲದರ ನಶ್ವರತೆ ಬಗ್ಗೆ ದುಃಖಿಸುತ್ತಾ ಮುನ್ನಡೆದಳು. ಮಧ್ಯೆಮಧ್ಯೆ ಸತ್ಯವಾನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಳು. ಒಂದೆಡೆ ಸತ್ಯವಾನ ಕಟ್ಟಿಗೆ ಕಡಿಯುತ್ತಿರುವಾಗ ಆ ಕ್ಷಣ ಬಂದೇ ಬಿಟ್ಟಿತು. 'ಸಾವಿತ್ರಿ' ಎಂದು ಜೀವಬಿರಿಯುವ ಧ್ವನಿಯಲ್ಲಿ ಸತ್ಯವಾನ ಚೀರಿದನು.'ಸಾವಿತ್ರಿ ನನಗೆ ಎಲ್ಲೆಡೆ ಶಕ್ತಿ ಕುಸಿಯುತ್ತಿದೆ, ಸ್ವಲ್ಪ ಮಲುಗುತ್ತೇನೆ' ಎಂದು ಭೂಮಿಗೊರಗಿದ ಸತ್ಯವಾನ ಮತ್ತೆ ಮೇಲೇಳಲಿಲ್ಲ. ಕ್ರಮೇಣ ಅವನ ದೇಹ ನಿಶ್ಚಲವಾಯಿತು. 'ಇನ್ನೇನು' ಎಂದೆನ್ನುವಷ್ಟರಲ್ಲಿ ಮತ್ತೆ ವಾತಾವರಣ ಬದಲಾಯಿತು. ಕಾಡಿನಲ್ಲಿ ಕತ್ತ್ತಲೆಯಾವರಿಸಿತು. ಎಲ್ಲೆಡೆ ಭಾರವಾದ ಭಾವ ನೆಲೆಯಾಯಿತು. ತಲೆಯೆತ್ತಿ ನೋಡಿದ ಸಾವಿತ್ರಿಗೆ ದೂರದಲ್ಲಿ ಕಡುಗತ್ತಲಿನ ಒಂದು ಆಕಾರ ಕಂಡಿತು, ತಲೆಯ ಮೇಲೆ ವಿಚಿತ್ರ ಕಿರೀಟವೊಂದು ಮೆರೆಯುತ್ತಿತ್ತು. ಕ್ರಮೇಣ ಆಕಾರ ಹತ್ತಿರ ಬಂದಿತು.

ಹೆದರದ ಸಾವಿತ್ರಿ 'ಯಾರು ನೀವು' ಎಂದು ಕೇಳಿದಳು. ಆಕಾರ ನಕ್ಕಿತು. 'ಏನು, ನನ್ನ ಗುರುತು ಸಿಗಲಿಲ್ಲವೇ ನಿನಗೆ? ನಾನೇ ಯಮಧರ್ಮರಾಜ - ಮೃತ್ಯುದೇವತೆ. ಗೊತ್ತಲ್ಲವೇ ನಿನಗೆ ಸತ್ಯವಾನನ ಆಯಸ್ಸು ಮುಗಿಯಿತೆಂದು. ಅವನ ಜೀವವನ್ನು ನನ್ನಜೊತೆ ಕೊಂಡೊಯ್ಯುವುದಕ್ಕೆ ಬಂದಿದ್ದೇನೆ' ಎಂದನು. ಇಷ್ಟು ಹೊತ್ತಿಗೆ ಕೋಣನ ಮೇಲೆ ಕೂತಿರುವ ಯಮಧರ್ಮ ಸ್ಪಷ್ಟವಾಗಿ ಗೋಚರಿಸುತ್ತಿದ್ದನು. ಸವಲ್ಪ ಸಾವರಿಸಿಕೊಂಡ ಸಾವಿತ್ರಿಗೆ ಎಲ್ಲವನ್ನೂ ನಿಧಾನಗೊಳಿಸುವ ಆಸೆ. 'ಯಮಧರ್ಮ, ಸಾಮಾನ್ಯವಾಗಿ ಈ ಕೆಲಸ ನಿನ್ನ ದೂತರದ್ದಲ್ಲವೇ, ನೀನೇ ಬಂದೆಯೇಕೆ?' ಎಂದು ಪ್ರಶ್ನಿಸಿದಳು. ಅವಸರದಲ್ಲಿದ್ದ ಯಮಧರ್ಮ 'ನಿಷ್ಕಲ್ಮಷನಾದ ಸತ್ಯವಾನ ಸಾಮಾನ್ಯನಲ್ಲವಾದ್ದರಿಂದ ನಾನೇ ಬರಬೇಕಾಯಿತು' ಎಂದನು. ಸ್ವಲ್ಪವೂ ಸಮಯಕಳೆಯದೇ ತನ್ನ ಪಾಶದಿಂದ ಸತ್ಯವಾನನ ಜೀವವನ್ನು ಹೀರಿ ಹಿಂದಿರುಗತೊಡಗಿದನು. ಸತ್ಯವಾನನ ಜೀವರಹಿತ ಮುಖನೋಡಿದ ಸಾವಿತ್ರಿಗೆ ಎಲ್ಲವೂ ವ್ಯರ್ಥವೆಂದೆನ್ನಿಸಿ ಮರುಕ್ಷಣವೇ ಸತ್ಯವಾನನ ಜೀವವಿರುವ ಯಮಧರ್ಮನನ್ನೇ ಹಿಂಬಾಲುಸುವ ಮನಸ್ಸ್ಯಾಯಿತು.

ಒಂದಿಷ್ಟು ದೂರದಲ್ಲಿ ಯಮಧರ್ಮನಿಗೆ ಕಾಣದ ಹಾಗೆ ಹಿಂಬಾಲಿಸುತ್ತಾ ನಡೆದಳು. ಅವಳ ಗೆಜ್ಜೆಯ ಸಪ್ಪಳವಿದ್ದರೂ ಗಾಳಿ, ಹುಲ್ಲು, ನೆರೆ-ತೊರೆಗಳು ಇವುಗಳ ಧ್ವನಿಯಲ್ಲಿ ಗೆಜ್ಜೆಯ ಸಪ್ಪಳ ಕರಗಿಹೋಗುತ್ತಿತ್ತು. ಬೆಟ್ಟದ ಕಠಿಣವಾದ ನೆಲದ ಮೂಲಕ ಹಾದುಹೋಗುವಾಗ ಯಮಧರ್ಮನಿಗೆ ಗೆಜ್ಜೆಯ ಸಪ್ಪಳ ಕೇಳಿ ಯಾರೋ ತನ್ನು ಹಿಂಬಾಲಿಸುತ್ತಿರುವ ಭಾಸವಾಯಿತು. ಹಿಂದೆ ತಿರುಗಿ ಸಾವಿತ್ರಿಯನ್ನು ಕಂಡನು. ಜಾಣೆಯಾದ ಸಾವಿತ್ರಿ ಪತಿಯಿರುವೆಡೆ ತಾನೂ ಇರಬಯಸುತ್ತೇನೆಂದೂ, ಅವನಿಲ್ಲದೆ ತಾನು ಹಿಂದಿರುಗುವಿದಿಲ್ಲವೆಂದೂ ನಿಶ್ಚಯದಿಂದ ಹೇಳಿದಳು. ಸಾವಿತ್ರಿಯ ಆಸೆ ಪ್ರಕೃತಿಗೆ ವಿರುದ್ಧವಾದ್ದೆಂದೂ ನೆರೆವೇರುವುದು ಅಸಾಧ್ಯವೆಂದು ಎಷ್ಟು ವಿವರಿಸಿದರೂ ಸಾವಿತ್ರಿ ಜಗ್ಗಲಿಲ್ಲ. ಕಡೆಗೆ ಯಮಧರ್ಮ ಸ್ವಲ್ಪ ತುಂಟತನದಿಂದ 'ನಾನೇಕೆ ನಿನ್ನ ಮಾತನ್ನು ಕೇಳಬೇಕು, ನಾನೇಕೆ ನಿನ ಸಹಾಯ ಮಾಡಬೇಕು' ಎಂದು ಕುಳಿತನು. ಜಾಣೆಯಾದ ಸಾವಿತ್ರಿ ಈ ಅವಕಾಶಕ್ಕಾಗೇ ಕಾಯುತ್ತಿದ್ದಳು. 'ಯಮನೇ, ಏಳು ಹೆಜ್ಜೆಗಳನ್ನು ಯಾರ ಜೊತೆಯಾದರೂ ನಡೆದರೆ ಅವರು ನಮಗೆ ಸ್ನೇಹಿತರೆಂದು ಶಾಸ್ತ್ರ ಹೇಳುತ್ತದೆ. ನಿನ್ನೊಡನೆಯಾದರೋ ಅನೇಕ ಯೋಜನೆಗಳನ್ನೇ ಕಳೆದಿದ್ದೇನೆ. ಕಷ್ಟದಲ್ಲಿರುವ ಸ್ನೇಹತರಿಗೆ ಸಹಾಯ ಮಾಡುವುದು ಸ್ನೇಹಧರ್ಮ' ಎಂದಳು ಸಾವಿತ್ರಿ. ಅವಳ ಬುದ್ಧಿವಂತಿಕೆ, ಜ್ಞಾನವನ್ನು ಮೆಚ್ಚಿದ ಯಮ 'ಸಾವಿತ್ರಿ, ನಿನ್ನನ್ನು ಮೆಚ್ಚಿದೆ. ನಿನ್ನ ಪತಿಯ ಜೀವವೊಂದನ್ನು ಬಿಟ್ಟು ಬೇರೆ ಇನ್ನೇನಾದರೂ ವರವನ್ನು ಬೇಡು' ಎಂದನು. ಹಿಂದೆ ಮುಂದೆ ನೋಡದ ಸಾವಿತ್ರಿ 'ನಮ್ಮ ಮಾವಂದಿರ ದೃಷ್ಟಿ ಮತ್ತು ಎರಡೂ ಅವರಿಗೆ ಮತ್ತೆ ದೊರೆಯುವಂತಾಗಲಿ' ಎಂದು ಬೇಡಿದಳು. ತನನ್ಗಾಗಿ ಅವಳು ಏನನ್ನೂ ಬೇಡದೇ ಇರುವುದು ಯಮನಿಗೆ ಮಹದಾಶ್ಚರ್ಯವಾಯಿತು. 'ಸರಿ, ನೀನಿನ್ನು ಹಿಂದಿರುಗು. ಇಲ್ಲಿಂದ ಮುಂದಿನ ದಾರಿ ದುರ್ಗಮ ಅದು ನಿನಗಲ್ಲ' ಎಂದನು. ಸಾವಿತ್ರಿಗೆ ಮಾತ್ರ ಈ ಸಂಭಾಷಣೆಯಿಂದ ಹೆಚ್ಚಿನ ಸ್ಥರ್ಯ ಬಂಡಿತ್ತು. 'ಬದುಕೋ ಸಾವೋ ಅದು ಸತ್ಯವಾನನ ಜೊತೆಯಲ್ಲೇ ಎಂದು ನಾನು ಎಂದೋ ನಿರ್ಧರಿಸಿಯಾಯಿತು ಯಮಧರ್ಮ' ಎಂದಳು. 'ನೋಡು ಮಗಳೇ ನಿನ್ನ ಪತಿ ಅಲ್ಲಿ ಕಾಡಿನಲ್ಲಿ ನಿರ್ಜೀವವಾಗಿದ್ದಾನೆ. ಅವನ ಅಂತ್ಯಸಂಸ್ಕಾರ ನಡೆಯಬೇಕಲ್ಲವೇ' ಎಂದು ಮನಸ್ಸನು ತಿರುಗಿಸಲು ಪ್ರಯತ್ನಿಸಿದ ಯಮ. 'ಯಮನೇ, ದೇಹಕ್ಕೂ ಜೀವಾತ್ಮನಿಗೂ ವ್ಯತ್ಯಾಸವನ್ನು ನಾನು ನಿನಗೆ ಹೇಳಿಕೊಡಬೇಕೇ' ಎಂದಳು. ಹೀಗೇ ನಡೆದ ಮಾತುಕತೆಯಿಂದ ಕಾಡು ವಿಶೇಷ ಜೀವಪಡೆದಿತ್ತು. ಯಮನಿಗೇ ತನ್ನ ಉಸಿರು ಹೆಚ್ಚು ಹಿತವಾದಂತೆ ಅನ್ನಿಸಿತು. ಮತ್ತೆ ನಿಧಾನದಿಂದ ಮುಂದುವರೆಯುತ್ತಾ 'ನೋಡು ಸಾವಿತ್ರಿ. ನಿನ್ನ ಪತಿಯ ಜೀವ ಇನ್ನು ಮರಳುವುದು ಅಸಾಧ್ಯ. ಆದರೆ ನಿನ್ನ ಶ್ರದ್ಧೆ, ಅಚಲ ಮನಸ್ಸು, ಕಠಿಣ ಪರಿಶ್ರಮ ಮತ್ತು ಅಸಾಧಾರಣ ಬುದ್ಧಿವಂತಿಕೆಗೆ ನಾನು ಮನಸೋತಿದ್ದ್ದೇನೆ. ಇನ್ನೆರಡು ವರಗಳನ್ನು ಬೇಡಿಕೊ' ಎಂದನು. ಸಾವಿತ್ರಿಯ ಮನಸ್ಸು ಸಿದ್ಧವಾಗಿತ್ತು. 'ನಾನು ಮದುವೆಯಾಗಿ ಮತ್ತೊಂದು ರಾಜ್ಯಕ್ಕೆ ಹೋಗುವೆನಾಗಿ ನಮ್ಮ ತಂದೆಯ ರಾಜ್ಯವನ್ನು ಮುಂದುವರೆಸುವುದಕ್ಕೆ ಯಾರೂ ಇಲ್ಲ. ದಯವಿಟ್ಟು ನನ್ನ ತಂದೆಗೆ ಮಕ್ಕಳನ್ನು ಕರುಣಿಸು' ಎಂದಳು. 'ತಥಾಸ್ತು' ಎಂದನು ಯಮ. ಇಷ್ಟು ಹೊತ್ತಿಗೆ ಯಮ ಸಾವಿತ್ರಿಯ ಮಾತಿನ ಮೋಡಿಗೆ ಮರುಳಾಗಿದ್ದನು. ಸಂದರ್ಭ ನೋಡಿದ ಸಾವಿತ್ರಿ 'ಮೂರನೇಯ ವರವಾಗಿ ನನಗೆ ನೂರು ಮಕ್ಕಳನ್ನು ಕರುಣಿಸು' ಎಂದಳು. ಹಿಂದೆ ಮುಂದೆ ನೋಡದ ಯಮ 'ತಥಾಸ್ತು' ಎಂದುಬಿಟ್ಟನು. 'ಧನ್ಯೋಸ್ಮಿ' ಎಂದ ಸಾವಿತ್ರಿ ಮತ್ತೆ ಯಮನ ಜೊತೆ ನಡೆದಳು.

'ಸಾವಿತ್ರಿ, ಆಯಿತಲ್ಲ ಮೂರು ವರಗಳು. ಇನ್ನು ವಾಪಸ್ಸು ನಡೆ' ಎಂದನು. ವಿನೀತಳಾಗಿ ಸಾವಿತ್ರಿ 'ಯಮನೇ, ಪತಿಯಿಲ್ಲದೇ ನಾನು ನೂರು ಮಕ್ಕಳನ್ನು ಹೇಗೆ ಪಡೆಯುವುದು' ಎಂದು ಕೈಮುಗಿದು ಕೇಳಿದಾಗ ಯಮನಿಗೆ ಎಚ್ಚರವಾಯಿತು. ಸಾವಿತ್ರಿಯ ಮಾತಿನ ಮೋಡಿದ ಮರುಳಾದ ಪರಿಣಾಮ ಗೋಚರಿಸಿತು. 'ಎಲಾ ಸಾವಿತ್ರಿ, ಕಡೆಗೂ ನೀನೇ ಗೆದ್ದೆ' ಎಂದು ಮನದಲ್ಲೇ ಮೆಚ್ಚಿಕೊಂಡನು. 'ಸಾವಿತ್ರಿ, ನಿನ್ನ ಅಪರಿಮಿತ ಶ್ರದ್ಧೆ ಮತ್ತು ಏಕಾತ್ಮತೆಗೆ ನಾನು ಮೆಚ್ಚಿದೆ. ಇಗೋ, ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತಿದ್ದೇನೆ, ಹೋಗು' ಎಂದನು. ಸಾವಿತ್ರಿ ಒಂದೇ ಉಸಿರಿಗೆ ಹಿಂದಿರುಗಿ ಓಡಿ ಸತ್ಯವಾನನ ಬಳಿ ಬಂದಳು. ಸತ್ಯವಾನನಿಗೆ ನಿಧಾನವಾಗಿ ಜೀವ ವಾಪಾಸು ಬರುತ್ತಿರುವಂತಿತ್ತು. 'ಇದೇನು ಅದೆಷ್ಟು ಹೊತ್ತು ನಾನು ಮಲಗಿದ್ದೆ' ಎಂದು ಸತ್ಯವಾನ ಏನೂ ಆಗಿಲ್ಲದವನಂತೆ ಎದ್ದನು. ಸಾವಿತ್ರಿ ಅತಿಸಂತೋಷದಿಂದ ಆದರೆ ಮೌನವಾಗಿ ತಲೆಯಾಡಿಸಿ ಸತ್ಯವಾನನ ಜೊತೆ ಹೆಜ್ಜೆ ಹಾಕುತ್ತಾ 'ನೂರು ಮಕ್ಕಳು, ಇದು ಯಮನ ವರ' ಎಂದು ಮೆಲುಕು ಹಾಕುತ್ತಾ ಆಶ್ರಮಕ್ಕೆ ನಡೆದಳು. ನಡೆದದ್ದೊಂದೂ ಸತ್ಯವಾನನಿಗೆ ತಿಳಿಯಲಿಲ್ಲ.

ಇತ್ತ ಆಶ್ರಮದಲ್ಲಿ ದ್ಯುಮತ್ಸೇನನಿಗೆ ದೃಷ್ಟಿ ವಾಪಸಾಗಿ ದಂಪತಿಯರಿಬ್ಬರೂ ಆಶ್ಚರ್ಯಗೊಂಡಿದ್ದರು. ಸಾವಿತ್ರಿ ಸತ್ಯವಾನರು ಏಕಿಷ್ಟು ತಡಮಾಡಿದರು ಎಂದು ಕಾಯುತ್ತಿದ್ದ ಅವರನ್ನು ನೋಡಲು ಅವರ ಸೈನಿಕರು ನೋಡುವುದಕ್ಕೆ ಬಂದರು. ಶತ್ರುಗಳು ಮತ್ತೊಂದು ಯುದ್ಧದಲ್ಲಿ ಸೋತು ಈಗ ಸಾಲ್ವ ರಾಜ್ಯ ಮತ್ತೆ ತಮ್ಮ ವಶವಾದ ಶುಭವಾರ್ತೆ ತಿಳಿಸಿದರು. ಅದೇ ಹೊತ್ತಿನಲ್ಲಿ ಸಾವಿತ್ರಿ ಸತ್ಯವಾನರು ಕಾಡಿನಿಂದ ಹಿಂದಿರುಗಿದರು. ದ್ಯುಮತ್ಸೇನನಿಗೆ ಮಾತ್ರ ಇದೆಲ್ಲದರ ಹಿಂದೆ ಸಾವಿತ್ರಿಯ ಪುಣ್ಯಶಕ್ತಿಯಿರುವ ಹಾಗೆ ಭಾಸವಾಯಿತು. 'ಮಗಳೇ, ನೋಡು ನೀನು ಬಡವನ ಮನೆಗೆ ಸೊಸೆಯಾಗಿ ಬಂದೆ, ಆದರೆ ಈಗ ರಾಣಿಯಾಗಿ ಮುಂದೆ ನಿನ್ನ ಮಕ್ಕಳು ರಾಜಯೋಗ ಪಡೆಯುವರು' ಎಂದು ಮಾರ್ಮಿಕವಾಗಿ ನುಡಿದನು. ಎಲ್ಲರೂ ಸಾಲ್ವ ದೇಶಕ್ಕೆ ಹಿಂದಿರುಗಿ ದ್ಯುಮತ್ಸೇನ ಮತ್ತೆ ರಾಜನಾದನು. ಹೀಗೆ, ಸಾವಿತ್ರಿ ತನ್ನ ಜಾಣ್ಮೆ, ಜ್ಞಾನ, ಧೀಶಕ್ತಿಯಿಂದ ಯಮನನ್ನೇ ಗೆದ್ದಳು.


ಈ ಕಥೆ ಮಹಾಭಾರತದ ವನಪರ್ವದಲ್ಲಿ ಬರುತ್ತದೆ. ದ್ರೌಪದಿಗಿಂತ ಮಿಗಿಲಾದ ಶ್ರದ್ದ್ಯೆ, ತಪಸ್ಸು ಇರುವ ಸ್ತ್ರೀ ಹಿಂದೆ ಯಾರಾದರೂ ಇದ್ದರೆ ಎಂದು ಯುಧಿಷ್ಠಿರನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯ ಮುನಿಗಳು ಸಾವಿತ್ರಿಯ ಕಥೆಯನ್ನು ವಿವರಿಸುತ್ತಾರೆ.