ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, April 09, 2007

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೪

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಈ ಆತಂಕಗಳ ನಡುವೆಯೇ ನಾವು ಕೆಲ ವಾಸ್ತವಗಳನ್ನು ಒಪ್ಪಬೇಕಿದೆ - ಹಿಂದೂ-ಕನ್ನಡ -ಭಾರತೀಯ ಐಡೆಂಟಿಟಿಗಳ ಉದಯಕ್ಕೆ ಐತಿಹಾಸಿಕ ಅವಕಾಶ ರೂಪುಗೊಂಡದ್ದು, ಸಮಾಜ ಆ ಅವಕಾಶವನ್ನು ಮನಗಂಡದ್ದು, ಅವಶ್ಯಕತೆಯಾಗಿ ಗ್ರಹಿಸಿದ್ದು ಮತ್ತು ಈ ಪ್ರಕ್ರಿಯೆಯನ್ನು ಒಪ್ಪುವವರು, ಒಪ್ಪಲಾರದವರೂ, ತಟಸ್ಥರೂ ಎಲ್ಲರೂ ಇದರ ವಾಸ್ತವವನ್ನು ಗುರುತಿಸಿ ನಿಭಾಯಿಸಬೇಕಾದ ಅನಿವಾರ್ಯತೆಯಿರುವುದು. ಈ ಮೂರೂ ಐಡೆಂಟಿಟಿಗಳ ಕಲ್ಪಿತವಾದ ಇತ್ಯಾತ್ಮಕ ಸಾಧ್ಯತೆಗಳನ್ನು ಇನ್ನೂ ವಾಸ್ತವಗೊಳಿಸಲಾಗಿಲ್ಲವಾದ್ದರಿಂದ ಮತ್ತು ಆ ಸಾಧ್ಯತೆಗಳಿನ್ನೂ ಉಳಿದಿವೆಯಾದ್ದರಿಂದ - ಅವುಗಳಿನ್ನೂ ವಿಸರ್ಜನೆಗೊಳ್ಳದೇ ಅಸ್ತಿತ್ವದಲ್ಲಿವೆ. ಆ ಕಾರಣಕ್ಕೇ ಈ ಐಡೆಂಟಿಟಿಗಳು ಉಂಟುಮಾಡುವ ಅಪಾಯಗಳು ಅಷ್ಟು ಸುಲಭವಾಗಿ ಅರಿವಿಗೆ ಬರುವುದಿಲ್ಲ. ಈ ನೇತ್ಯಾತ್ಮಕ ಸಾಧ್ಯತೆಗಳನ್ನು ಬಳಸಿಕೊಳ್ಳುವವರಿಗೂ ಕೊನೆಯಿರುವುದಿಲ್ಲ. ಭಾರತೀಯ ಐಡೆಂಟಿಟಿ ಯಾವ ರೀತಿಯಲ್ಲಿ ಪ್ರಾದೇಶಿಕ ಐಡೆಂಟಿಟಿಗಳಿಗೆ ಅಪಾಯ ತಂದೊಡ್ಡಿದೆ ಎನ್ನುವುದನ್ನು ನಾವು ಅರಿತಷ್ಟು ಸರಿಯಾಗಿ ಹಿಂದೂ ಐಡೆಂಟಿಟಿಯಿಂದ ಉಂಟಾಗುವ ಅಪಾಯಗಳನ್ನು ಅರಿತಿಲ್ಲ. ಇದು ಸಮುದ್ರ ಮಥನದಂತೆ. ಅಮೃತಕ್ಕಾಗಿ ಮಥಿಸಿದರೂ ಮೊದಲು ವಿಷವೇ ಹುಟ್ಟುವುದು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವಿಷ ನುಂಗಬಲ್ಲ ವಿಷಕಂಠರಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ.

ಇಲ್ಲಿನ ಕಷ್ಟವೆಂದರೆ - ಹಿಂದೂ ಐಡೆಂಟಿಟಿಯನ್ನು ನಿರಾಕರಿಸುವುದು ಅತ್ಯಂತ ಅಪಾಯಕಾರಿಯಾದ ನಿಲುವಾಗುತ್ತದೆ. ಇದರಿಂದ ಹಿಂದೂ ಮೂಲಭೂತವಾದಿಗಳಿಗೆ ಬಲಬರುತ್ತದೆ. ಅದನ್ನು ಒಪ್ಪಿಕೊಳ್ಳುವುದೆಂದರೆ ಅಲ್ಪಸಂಖ್ಯಾತರಿಗಾಗುವ ಸಹಜವಾದ ಅಸ್ಥಿರ ಭಾವವನ್ನು ಎದುರಾಗಬೇಕಾಗುತ್ತದೆ. ಹಿಂದೂ ಐಡೆಂಟಿಟಿಯನ್ನು ಅತಿಯಾಗಿ ಮೈಮೇಲೆ ಆರೋಪಿಸಿಕೊಳ್ಳುವವರನ್ನು ಮಾತ್ರ ಗಮನಿಸಿ ತಲ್ಲಣಿಸುವವರು ವಾಲ್ಟರ್‌ ಬೆಂಜಮಿನ್ನನ ಪರಂಪರೆಗೆ ಸೇರಬಹುದು. ಮೌನವಾಗಿರುವವರನ್ನು ಗಮನಿಸುವವರು ಸ್ವಲ್ಪ ಹೆಚ್ಚು-ಕಡಿಮೆ ವ್ಯತ್ಯಾಸದಲ್ಲಿ ಬೇಂದ್ರೆ/ಅಡಿಗ ಪರಂಪರೆಗೆ ಸೇರಬಹುದು. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನಮ್ಮ ಹಿರಿಯರು ಇದನ್ನು ಚೆನ್ನಾಗಿ ನಿಭಾಯಿಸಿದ್ದರೇನೋ. ಈಗ ನಾವು ಹದಗೆಟ್ಟ ಪರಿಸ್ಥಿತಿಯಲ್ಲಿ ಇದನ್ನು ನಿಭಾಯಿಸಬೇಕಿದೆ. ಹಿಂದೂ ಐಡೆಂಟಿಟಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಿಗಿಂತ ಸುಮ್ಮನಿದ್ದೂ ತಮ್ಮ ಮೌನದಲ್ಲಿ ಅರಿವಿಲ್ಲದಂತೆ ಅದರ ಇತ್ಯಾತ್ಮಕ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವವರಲ್ಲಿ ನಾವು ಹಿಂದೂ ಐಡೆಂಟಿಟಿಯ ಇತ್ಯಾತ್ಮಕ ಸಾಧ್ಯತೆಗಳನ್ನು ಹುಡುಕಬೇಕಿರುವುದು ಸರಿಯಾದ ಮತ್ತು ಅವಶ್ಯವಾದ ವಿಷಯವಾಗಿದೆ. ಈ ಇಕ್ಕಟ್ಟು ಡಾ ಅನಂತಮೂರ್ತಿಗಳ ಲೇಖನದಲ್ಲಿ ಧ್ವನಿತವಾಗಿದೆ. ಅಭಿಮಾನ, ಅವಶ್ಯಕತೆ, ಅಸ್ಥಿರಭಾವಗಳಲ್ಲಿ ಯಾವುದು ನಮ್ಮನ್ನು ಆವರಿಸುತ್ತದೆ ಮತ್ತು ಯಾವುದನ್ನು ನಾವು ಆಯುತ್ತೇವೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.

ಒಟ್ಟಿನಲ್ಲಿ ಅಮೃತದ ಗಳಿಕೆಗಾಗಿ ಅದೆಷ್ಟು ವಿಷವನ್ನು ನಾವು ತಯಾರಿಸಿ ಅನುಭವಿಸಬೇಕಾಗಿದೆಯೋ? ಈ ಅಮೃತದ ಸ್ವರೂಪ-ಸಾಧ್ಯತೆಗಳನ್ನು ಸಹ ನಾವು ಸ್ಪಷ್ಟವಾಗಿ ಸೃಷ್ಟಿಸಿಕೊಳ್ಳಲಾಗಿಲ್ಲ, ಅದು ಬದಲಾಗುತ್ತಲೇ ಇದೆ ಎನ್ನುವುದೂ ಸಹ ನಮಗೆ ಆತಂಕವನ್ನುಂಟುಮಾಡಬಹುದು.

***

ಇಷ್ಟೆಲ್ಲ ಪ್ರಜಾಪ್ರಭುತ್ವದೊಳಗೇ ನಡೆಯುತ್ತಿದೆ ಎನ್ನುವುದರಿಂದ ಆರ್ಟೆಗಾನ ಚಿಂತನೆ ಮುಖ್ಯವಾಗುತ್ತದೆ. ಹೀಗೆ ಪ್ರಜಾತಂತ್ರದ ಸವಲತ್ತುಗಳನ್ನೇ ಬಳಸಿಕೊಂಡು ಪ್ರಜಾತಂತ್ರವನ್ನೇ ನಾಶಮಾಡುವ ನಮ್ಮ ವಿನಾಶಕಾರಿ ಪ್ರವೃತ್ತಿಯ ಮೂಲದ ಕುರಿತಾದ ಆತಂಕಭರಿತ ಶೋಧ ಮುಖ್ಯವಾಗುತ್ತದೆ. ಮನುಷ್ಯನ ಸೃಜನಶೀಲತೆಯನ್ನು ಆದಷ್ಟೂ ಪೋಷಿಸಿ, ಮನುಷ್ಯನ ಸ್ವಾತಂತ್ರ್ಯವನ್ನು ಆದಷ್ಟೂ ನಾಶಮಾಡದೆ ಇರುವಂಥದ್ದು ಒಳ್ಳೆಯ ವ್ಯವಸ್ಥೆ. ಪ್ರಜಾಪ್ರಭುತ್ವ ಇದಕ್ಕೆ ಹೇಗೆ ಪೂರಕವಾಗಿದೆ, ಪ್ರಜಾಪ್ರಭುತ್ವದ ಮೂಲಕ ನಾವಿದನ್ನು ಹೇಗೆ ಸಾಧಿಸಬಯಸುತ್ತೇವೆ ಎನ್ನುವ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಆದರೆ ನಮ್ಮ ಸೃಜನಶೀಲ ಅಭಿವ್ಯಕ್ತಿಯಲ್ಲೇ ಅದರ ಸೆಲೆಯನ್ನೂ ಬತ್ತಿಸುವ ಸಾಧ್ಯತೆ ಇದೆ. ಒಬ್ಬನ ಸೃಜನಶೀಲ ಅಭಿವ್ಯಕ್ತಿ ಮತ್ತೊಬ್ಬನ ಸ್ವಾತಂತ್ರ್ಯವನ್ನು ನಾಶಮಾಡಬಹುದು. ಈ ಅರಿವು-ಎಚ್ಚರಗಳಿಂದ ನಾವು ಮೇಲ್ನೋಟದ ಪ್ರಜಾಪ್ರಭುತ್ವ ರೀತ್ಯಾ ಸಮಾಜವನ್ನು ಅಧೋಗತಿಯಲ್ಲಿ ನಡೆಸಿಕೊಂಡು ಹೋಗದೇ, ಸಮತೋಲನದಲ್ಲಿ ಸಾಗಿಸುವ ರೀತಿಯನ್ನು ಶೋಧಿಸಿಯೇವು, ಸ್ವಾತಂತ್ರ್ಯದ ಜೊತೆ ಸಾಮರಸ್ಯ ಮತ್ತು ಸಮಾನತೆ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಮನಗಾಣಿಸೀತು, ಗಾಂಧೀಜಿ ಮತ್ತು ಅಂಬೇಡ್ಕರ್‌ ಇಬ್ಬರನ್ನೂ ಒಟ್ಟಿಗೇ ನಮ್ಮ ನಾಯಕರನ್ನಾಗಿಸೀತು. ಆದರೆ ಸ್ವಾತಂತ್ರ್ಯದ ಪರಿಕಲ್ಪನೆ ಪ್ರಜಾಪ್ರಭುತ್ವದಿಂದ ಮೇಲ್ನೋಟಕ್ಕೇ ದಕ್ಕುವುದಾದರೂ, ಸಮಾನತೆ/ಸಾಮರಸ್ಯ ಪರಿಕಲ್ಪನೆಗಳ ಪ್ರಾಮುಖ್ಯತೆ ಸುಲಭಕ್ಕೆ ಸಿಗದೇಹೋಗುವುದು ದುರದೃಷ್ಟಕರ. ಸಮಸ್ಯೆಯೆಂದರೆ ಸಮಾನತೆ/ಸಾಮರಸ್ಯಗಳ ಆಳವಾದ ಅರಿವಿಲ್ಲದೆ ಪ್ರಜಾಪ್ರಭುತ್ವ ಸುಸ್ಥಿರವಾಗಿರಲಾರದು. ಪ್ರಜಾಪ್ರಭುತ್ವದಿಂದ ನಮಗೆ ಲಭ್ಯವಾಗುವ ದಾರಿಗಳಲ್ಲಿ ನಮ್ಮ ಆಯ್ಕೆ ಪ್ರಜಾಪ್ರಭುತ್ವದ ಧಾರಣಶಕ್ತಿಯನ್ನು ಹೆಚ್ಚಿಸಲಾಗದಿದ್ದರೂ ಕೊಲ್ಲಬಾರದು. ಮನುಷ್ಯನ ಸ್ವಾತಂತ್ರ, ಸೃಜನಶೀಲ ಅಭಿವ್ಯಕ್ತಿಯ ಸಾಧ್ಯತೆ ಇವೆಲ್ಲವೂ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಮೂಲಭೂತವಾದ ವಿಷಯಗಳು, ಮೌಲ್ಯಗಳು. ಆದ್ದರಿಂದ ಪ್ರಜಾಪ್ರಭುತ್ವದ ಕುರಿತಾದ ನಮ್ಮ ಬದ್ಧತೆ ಯಾವ ಕಾರಣಕ್ಕೆ ಮತ್ತು ಪ್ರಜಾಪ್ರಭುತ್ವದ ಮೇಲಣ ವಿಮರ್ಶೆ ಯಾವ ಕಾರಣಕ್ಕೆ ಎನ್ನುವುದನ್ನು ನಾವು ಸದಾ ಶೋಧಿಸುತ್ತಲೇ ಇರಬೇಕಾಗುತ್ತದೆ. ಪ್ರಜಾಪ್ರಭುತ್ವದ ಈ ಕಷ್ಟದ ಹಾದಿಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯ ದಾರಿತಪ್ಪಿದ ಮನುಷ್ಯ ಎನ್ನಿಸುತ್ತದೆ. ಇದನ್ನು ಕಾಲಾತೀತವಾಗಿ ಗ್ರಹಿಸಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದೇನೆ. ಪ್ರಾಯಶಃ, ಯಾವುದೇ ಕಾಲದ ಯಾವುದೇ ಸೃಜನಶೀಲ ಪರಿಕಲ್ಪನೆಯ, ಸಾಧ್ಯತೆಯ ಹುಟ್ಟಿಗೆ ಪೋಷಕ ಮತ್ತ್ತು ಮಾರಕ ಕಾರಣಗಳಿರುತ್ತವೆ. ಅಮೃತದ ಶೋಧನೆಗೆ ದೇವ-ದಾನವರು ಒಟ್ಟಾಗಿಯೇ ತೊಡಗಿದರು. ಅಮೃತ ಸೃಷ್ಟಿಯ ನಂತರ ಅದನ್ನು ದಕ್ಕಿಸಿಕೊಳ್ಳುವುದು ದೇವತೆಗಳೋ, ದಾನವರೋ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ. ಮನುಷ್ಯನ ಸಾರ್ವಕಾಲಿಕ ಪ್ರವೃತ್ತಿಯಾದ ಸಾಮರ್ಥ್ಯದ ಹುಡುಕಾಟ, ಮತ್ತು ಅದರ ಇವತ್ತಿನ ರೂಪಗಳಾದ ತಾಂತ್ರಿಕತೆ ಮತ್ತು ಅತಿರಾಷ್ಟ್ರೀಯತೆಗಳ ಹಿನ್ನೆಲೆಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯನ ಹುಟ್ಟಿನ ಸಾಧ್ಯತೆ ಸಹಜವಾಗೇ ಇದೆ. ನಮ್ಮ ಹಿರಿಯರು ಇಂಥದ್ದನ್ನು ಮನಗಂಡಿದ್ದರೆಂದು ಕಾಣುತ್ತದೆ. ವಾಣಿಜ್ಯದ ಭರದಲ್ಲಿರುವಂತಿರುವ ಇವತ್ತಿನ ಚೀನದ ಉದಾಹರಣೆ ಓದುವಾಗ, ಖಾಸಗೀಕರಣ/ಜಾಗತೀಕರಣದ ಅನೇಕ ನಡೆಗಳು ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ನಡೆಯುತ್ತಿವೆ. ಇವು ಸ್ವಾತಂತ್ರ್ಯದ ಧಾರಣಶಕ್ತಿಯನ್ನೇ ಕೊಲ್ಲುವಂತಹ ನಡೆಗಳಾಗಿವೆಯೇ ಎನ್ನುವ ಕುರಿತು ನಾವು ಒಂದು ದೇಶವಾಗಿ ಆಳದಲ್ಲಿ ಆಲೋಚಿಸಿಲ್ಲವೆಂದೆನ್ನಿಸುತ್ತದೆ. ಕಣ್ಣಿಗೆ ಕಾಣುವ ಪ್ರಗತಿ ಸಂವೇದನಾಶೀಲ ಮನಸ್ಸು ಮಾತ್ರವೇ ಗ್ರಹಿಸಬಹುದಾದ ಆಂತರಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವಂತೆ ಮಾಡಬಹುದಾದ ಸಾಧ್ಯತೆಯನ್ನು ಚರ್ಚೆಯ ಮುನ್ನೆಲೆಗೆ ನಾವಿನ್ನೂ ತರಲಾಗಿಲ್ಲ.

***

ಇಷ್ಟಾದರೂ ನಮಗೆ ಅತ್ಯಗತ್ಯವಾಗಿ ಬೇಕಾದ ಆಶಾವಾದ, ಬೇಂದ್ರೆಯವರ ಮೊದಲಗಿತ್ತಿ ಕವನದ ಆಶಯದ ಜೊತೆ ಹೊಂದಿಕೊಳ್ಳುವಂಥದ್ದು, ಡಾ ಅನಂತಮೂರ್ತಿಗಳ ಟಾಯ್ನ್‌ಬೀ ಕುರಿತಾದ ಲೇಖನದಲ್ಲಿದೆ. ಗಾಂಧೀಜಿಯ ಉದಾಹರಣೆಯನ್ನು ಡಾ ಅನಂತಮೂರ್ತಿಗಳು ತರುತ್ತಿರುವ ರೀತಿ ಮುಖ್ಯವಾಗಿದೆ. ಈ ತೆರನಾದ ಸೃಜನಶೀಲ ಗುಂಪು ತನ್ನ ಮೇಲಾಗುವ ಆಕ್ರಮಣವನ್ನು, ಆಕ್ರಮಣಕಾರರನ್ನು ಸರಿಯಾದ ಕ್ರಮದಲ್ಲಿ ಗುರುತಿಸಲು ಸಾಧ್ಯವಾಗುವುದು ತನ್ನ ಆಂತರ್ಯದಲ್ಲೇ ಇರುವ ಸೃಜನಶೀಲವಾದ ಸ್ವದೇಶೀ ಬದುಕಿನ ವಿವೇಕದ ಜೊತೆಗೇ ಅಲ್ಲಿರುವ ಆಕ್ರಮಣಶೀಲ ಸಾಧ್ಯತೆಯನ್ನು ಸರಿಯಾಗಿ ಗುರುತಿಸಿದಾಗ. ಅವನತಿ ನಂತರದ ಮರುಹುಟ್ಟಿನ ಸಾಧ್ಯತೆ ಮಾತ್ರ ದೇಶೀಯವಾದ್ದು, ಪ್ರಾಂತೀಯವಾದ್ದು ಮತ್ತು ಮರುಹುಟ್ಟು ಸಹಜವೇ ಎನ್ನುವುದು ಕನ್ನಡದಂತಹ ಭಾಷೆಯ ಭವಿಷ್ಯದ ಕುರಿತಾಗಿಯೂ ಹೇಳಿದ ಆಶಾವಾದವಿರಬಹುದೇ ಎನ್ನುವುದು ನನ್ನ ಆಶಾವಾದ. ಜೊತೆಗೆ ಎಚ್ಚರಿಕೆಯೂ ಸಹ. ಸ್ವದೇಶೀ ಬದುಕಿನ ವಿವೇಕ ಬೇಡವಾಗಿರುವ ಇವತ್ತಿನ ನಮ್ಮ ಇಂಗ್ಲೀಷಿನ ಸ್ಥಿತಿ ಮತ್ತು ಜೀವಂತವಾಗಬೇಕಾದರೆ ಬೇಕಾಗುವ ಕನ್ನಡದಂತಹ ಭಾಷೆಯ ಸಂಬಂಧಗಳಿಗೂ ಈ ಪರಿಕಲ್ಪನೆಗಳನ್ನು ಒಗ್ಗಿಸಬಹುದಾಗಿದೆ. ಜೊತೆಗೆ, ಸಾಂಸ್ಕೃತಿಕ ದಣಿವು ಪರಿಕಲ್ಪನೆ ಕೂಡಾ ಅವನತಿ ಮತ್ತು ಮರುಹುಟ್ಟು ಪರಿಕಲ್ಪನೆಗಳ ಸಂಧಿ-ಬಿಂದುವೆಂದೆನ್ನಿಸುತ್ತದೆ.

ನಿಜದಲ್ಲಿ ಸಾಂಸ್ಕೃತಿಕ ದಣಿವಿನ ಸಾಧ್ಯತೆಯನ್ನು ನಂಬಿ ಕಾಣಲು, ತಮ್ಮ ಪಿಸುಮಾತುಗಳಲ್ಲಿ ಜನರು ಬದುಕುತ್ತಿರುವರೆನ್ನುವುದನ್ನು ನಂಬಲು ಒಂದು ಬಗೆಯ ಆತ್ಮವಿಶ್ವಾಸದ, ಧೈರ್ಯದ ಅಗತ್ಯವಿದೆಯೆಂದು ನನ್ನ ನಂಬಿಕೆ. ನನ್ನಂಥವರು ಬೌದ್ಧಿಕವಾಗಿ ಗ್ರಹಿಸುವ ಈ ಸಾಧ್ಯತೆ ಆಂತರ್ಯದ ಸಂವೇದನೆಯಾಗಬೇಕಾದರೆ ಈ ಆತ್ಮವಿಶ್ವಾಸ ಅದೆಷ್ಟು ಮುಖ್ಯ ಎಂದು ನೆನೆದಾಗ ಅಳುಕುಂಟಾಗುವುದೂ ಇದೆ. ನನ್ನಂಥವರು ಒಮ್ಮೊಮ್ಮೆ ಬೆಂಜಮಿನ್ನನ ಸ್ಥಿತಿಗೆ ಹತ್ತಿರವಿರುವಂತೆ ಅನ್ನಿಸುತ್ತದೆ. ಮರುಕ್ಷಣ ಬೇಂದ್ರೆಯ ಬೆಳಕಿನಿಂದ ಒಂದೆರಡು ಆಶಾಕಿರಣ ನಮ್ಮ ಮೇಲೆ ಬೀಳುತ್ತದೆ. ಹೀಗೆ ಒಂದು ದ್ವಂದ್ವದ ದಾರಿಯಲ್ಲಿ ಸಾಗುತ್ತಿದ್ದೇವೆ.

***

ಈ ನಡುವೆ-ಆಧುನಿಕತೆ, ಕೈಗಾರಿಕೀಕರಣ, ವಸಾಹತುಶಾಹಿ, ರಾಷ್ಟ್ರೀಯತೆ, ಪ್ರಾದೇಶಿಕತೆ, ಪ್ರಗತಿ ಮುಂತಾದ ಸಂಕೀರ್ಣ ಪ್ರಕ್ರಿಯೆಗಳ ಒಟ್ಟು ಮೊತ್ತದಂತಿರುವ ಕಾವೇರಿ ವಿವಾದ, ನನ್ನಂಥವರ ವಿಚಾರಗಳ ಕ್ರಿಯಾಶೀಲ ಸಾಧ್ಯತೆಗೆ ಆಮಂತ್ರಣವೋ ಎಂಬಂತೆ ಸವಾಲಾಗಿ ನಿಂತಿದ್ದು, ಇದು ನೀರಿನಂತಹ ಮೂಲಭೂತ ವಸ್ತುವಿನ ಕುರಿತಾಗಿರುವುದು ನನಗೆ ವಿಚಿತ್ರ ಪ್ರತಿಮೆಯಾಗಿ ಕಾಣುತ್ತಿದೆ. ಯಾವುದರ ಇತ್ಯಾತ್ಮಕ ಸಾಧ್ಯತೆಯನ್ನೂ ಕೊಲ್ಲದೇ, ಬೃಹತ್‌ ಭಿತ್ತಿಗಳ ಹಿನ್ನೆಲೆಯಲ್ಲಿ ಮನುಷ್ಯತ್ವವನ್ನೂ ಮರೆಯದಂತಹ ಪ್ರತಿಕ್ರಿಯೆಯನ್ನು ನೀಡುವುದು ನನ್ನಂಥವರಿಗೆ ಸಾಧ್ಯವಾಗುತ್ತಿಲ್ಲ.

ಆದರೆ, ಈ ಕಠಿಣವಾದ ಹಾದಿಗಳಲ್ಲಿ ಕ್ರಮಿಸಲು ಬೇಕಾದ ಆತ್ಮವಿಶ್ವಾಸದ ಸಾಧ್ಯತೆಯನ್ನು ಡಾ ಅನಂತಮೂರ್ತಿಗಳ ಸುಬ್ಬಣ್ಣನವರ ಲೇಖನ ತೋರಿಸುತ್ತಿದೆ. ಇದನ್ನು, ಇವೆಲ್ಲವನ್ನೂ ಏಕಕಾಲದಲ್ಲಿ ಮತ್ತು ಸದಾ ನೆನೆಯುತ್ತಾ ನಾವು ಮುಂದಡಿಯಿಡಬೇಕಿದೆ.

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೩

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]
ನೋಯಿಡಾ ಘಟನೆಗಳನ್ನು ಪ್ರತ್ಯೇಕವಾಗಿ ಗಮನಿಸದೇ ನಮ್ಮ ಕಾಲದ ಪ್ರಕ್ರಿಯೆಗಳ ಒಂದು ವಿಷದ ಬೈಪ್ರಾಡಕ್ಟಾಗಿ ಕಾಣುವುದಕ್ಕೆ ನಮಗೆ ಧೈರ್ಯ ಸಾಲುತ್ತಿಲ್ಲ. ಅದರಿಂದ ಏಳಬಹುದಾದ ಪ್ರಶ್ನೆಗಳನ್ನು ಎದುರಿಸುವುದಕ್ಕೆ ನಾವು ಸಿದ್ಧರಿಲ್ಲ. ನಮ್ಮ ಕಾಲದ ಜೀವನ ವಿಧಾನದ ಯಾವ ಅಂಶಗಳು ಇಂತಹ ವಿಷಯಗಳು ನಮ್ಮೆದುರಿನಲ್ಲೇ ನಡೆಯುತ್ತಿದ್ದರೂ ಕಾಣದ ಹಾಗಾಗಿದೆ ಎನ್ನುವ ಪ್ರಶ್ನೆಯನ್ನು ನಾವು ಎದುರಿಸುತ್ತಿಲ್ಲ. ನಮ್ಮ ಇಕ್ಕಟ್ಟೆಂದರೆ - ಈ ಕುರಿತು ಸಿನಿಕರಂತೆ ಮಾತನಾಡುವುದೂ ಸ್ವಿಫ್ಟ್‌ನಂತೆ ಮಾತನಾಡುವುದೂ ಏಕಕಾಲದಲ್ಲಿ ಲಂಪಟತನವಾಗುತ್ತದೆ. ಮತ್ತೊಂದೆಡೆ, ಸ್ವಿಫ್ಟ್‌ನ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯದಿಂದ ನಾವು ಹೇಸುವುದು ಮತ್ತು ಅದನ್ನು ನಾವು ಸಾಹಿತ್ಯಕವಾಗಿ ಮೆಚ್ಚುತ್ತೇವೆ ಎನ್ನುವುದು - ಒಂದು ದೊಡ್ಡ ನೈತಿಕತೆಯ ಪ್ರಶ್ನೆಯಾಗುತ್ತದೆ. ಯಾವ ಪ್ರತಿಕ್ರಿಯೆ ಅತಿಯಾದರೂ ಒಂದು ವಿಕೃತಿಗೆ ಕಾರಣರಾಗುತ್ತೇವೆ. ಹೀಗಿರುವ ಪಕ್ಷದಲ್ಲಿ ಚರಿತ್ರೆಯ ಕುರಿತು ಬೇಂದ್ರೆ, ಅಡಿಗ, ಬೆಂಜಮಿನ್ನರ ಗಮನ/ಗ್ರಹಿಕೆಗಳನ್ನು ನಾವು ಯಾವ ರೀತಿ ಎದುರಿಸುವುದು? ಚರಿತ್ರೆ ಬಗೆವ ಬಗೆ ಲೇಖನಕ್ಕೆ ಸುದರ್ಶನ್‌ ಪಾಟೀಲ್‌ ಕುಲಕರ್ಣಿಯವರ ಪ್ರತಿಕ್ರಿಯೆ ಕೂಡಾ ಈ ದೃಷ್ಟಿಯಿಂದ ಗಮನಾರ್ಹವಾಗಿದೆ. ಸಾಹಿತ್ಯ ಮತ್ತಿತರ ಎಲ್ಲ ಕಲೆಗಳು, ಕಲಾವಿದರು ಇದನ್ನೆದುರಿಸದೇ ಮುಂದೆ ಹೋಗುವಂತಿಲ್ಲ.

***

ಜಾಗತಿಕ ವಾಣಿಜ್ಯವೆನ್ನುವುದು ಇಂಗ್ಲೀಷ್‌ಗೆ ಯಜಮಾನಿಕೆಯನ್ನೂ, ಲಯಕಾರನ ತಾಂಡವ ಶಕ್ತಿಯನ್ನೂ ಕೊಟ್ಟಿದೆ. ಬೇರೆ ಬೇರೆ ನಡೆಗಳು ತಮ್ಮದೇ ಕಾರಣಕ್ಕೆ ಸೃಜನಶೀಲವಾದವುಗಳಾದರೂ ಜಾಗತೀಕರಣದ ಅತಂಕವನ್ನು ಅವುಗಳಲ್ಲಿ ಕೆಲವು ಮಾತ್ರ ಎದುರಿಸಬಲ್ಲವು. ಅವುಗಳನ್ನು ನಾವು ಆಯಬೇಕಿದೆ. ಚಲಿಸುವ ಭಾಷೆಯ ಸೃಜನಶೀಲತೆ ಮತ್ತು ಅದರ ಮೇಲೆ ನಮಗಿರಬೇಕಾದ ಆತ್ಮವಿಶ್ವಾಸ, ಬಡ-ಶ್ರೀಮಂತ ಮಕ್ಕಳು ಒಂದೇ ಶಾಲೆಯಲ್ಲಿ ಓದುವುದರಿಂದ ನಾವು ಸಾಧಿಸಬಹುದಾಗಿದ್ದ ಸಾಂಸ್ಕೃತಿಕ ಶ್ರೀಮಂತಿಕೆ, ಇಂಗ್ಲೀಷ್‌ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕಾಗಿರುವುದು- ಇವೆಲ್ಲ ನಿಸ್ಸಂಶಯವಾಗಿ ಮುಖ್ಯವಾದ ವಿಷಯಗಳೇ ಸರಿ. ನಿತ್ಯ-ಸದ್ಯಗಳ ಉತ್ತಮ ಮಿಶ್ರಣವಾಗಿರುವ ಡಾ ಅನಂತಮೂರ್ತಿಗಳ ಕನ್ನಡ ಚಿಂತನೆಯಲ್ಲಿ ಇದರಾಚೆಗೂ ಮುಖ್ಯವಾದ ಮಹತ್ವದ ಪರಿಕಲ್ಪನೆಗಳು, ಶಕ್ತವಾದ ವಿಚಾರಗಳಿದ್ದು ಇನ್ನಷ್ಟು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ.

ಮೊದಲಾಗಿ, ಭಾಷೆ ಉಳಿಸುವವರು ಮತ್ತು ಭಾಷೆ ಬೆಳೆಸುವವರು ಎನ್ನುವ ಪರಿಕಲ್ಪನೆಗಳು. ನಮ್ಮ ಒಟ್ಟು ಭವಿಷ್ಯ ಪ್ರಾಯಶಃ ಈ ಗ್ರಹಿಕೆಯನ್ನು ನಾವು ಯಾವ ರೀತಿ ಸ್ವೀಕರಿಸಿ, ಚರ್ಚಿಸಿ, ಮುಂದುವರೆಸುತ್ತೇವೆ ಎನ್ನುವುದರ ಮೇಲೆ ನಿಂತಿದೆಯೆನ್ನಿಸುತ್ತದೆ. ಯಾಕೆಂದರೆ ಹೀಗೆ ನಾವು ‘ಕನ್ನಡ ಮಾತ್ರ ಬಲ್ಲಂತಹ'ವರು ಇನ್ನು ಮುಂದೆ ಇರುವುದು ನ್ಯಾಯವಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಮುಟ್ಟಿದ್ದೇವೆ. ಪ್ರತಿಯೊಬ್ಬರಿಗೂ ಇಂಗ್ಲೀಷ್‌ ಕಲಿಸಲೇಬೇಕಾದ ಚಾರಿತ್ರಿಕ ಘಟ್ಟದಲ್ಲಿದ್ದೇವೆ. ಕನ್ನಡ ಮಾತ್ರ ಬಲ್ಲವರು ಮಾತ್ರ ಭಾಷೆ ಉಳಿಸಬಲ್ಲರು ಎನ್ನುವುದನ್ನು ಒಪ್ಪಿಕೊಂಡರೆ, ನಮ್ಮ ಕನ್ನಡ ಸಂಘಟನೆಗಳು ಮತ್ತೂ ಹೆಚ್ಚು ಮೂಲಭೂತವಾದೆಡೆಗೆ ಸಾಗುತ್ತಾವೇನೋ. ಇನ್ನೊಂದೆಡೆ, ಸ್ವೀಡಿಷ್‌-ಇಂಗ್ಲೀಷ್‌ಗೆ ಸಾಧ್ಯವಾಗಿರುವ ಆರ್ಥಿಕ-ಸಾಂಸ್ಕೃತಿಕ ಸಮಸಮದ ಸಂಬಂಧ ನಮಗೂ ಸಾಧ್ಯವಿರಬಹುದು ಎನ್ನುವುದೊಂದು ಆಶಾವಾದವೇ ಸರಿ. ಆದರೆ, ಪ್ರೊಫೆಸರ ರಾದಾ ಅವರ ಈ ವಾದ ಚರಿತ್ರೆಯ ಒಂದು ಬಿಂದುವಿನ ಕುರಿತಾಗಿದೆ. ಯಾವ ಚಾರಿತ್ರಿಕ ಚಲನೆ ಸ್ವೀಡನ್ನಿಗೆ ಇದನ್ನು ಸಾಧ್ಯವಾಗಿಸಿತು? ಇವತ್ತಿನ ಜಾಗತಿಕ ಚಾರಿತ್ರಿಕ ಚಲನೆಯೆನ್ನುವುದು ಯಾವ ದಿಕ್ಕಿನಲ್ಲಿದೆ? ಇಡಿಯ ಯುರೋಪು ಯಾವ ದಿಕ್ಕಿನಲ್ಲಿದೆ? ಸ್ಕ್ಯಾಂಡಿನೇವಿಯಾದ ದೇಶಗಳು ಯಾವ ದಿಕ್ಕಿನಲ್ಲಿವೆ? ಭಾರತ ಸದ್ಯದ ಸವಾಲುಗಳು ಯಾವ ಚಾರಿತ್ರಿಕ ಚಲನೆಯ ಪರಿಣಾಮ ಮತ್ತು ಯಾವ ಚಾರಿತ್ರಿಕ ಚಲನೆಯನ್ನೆದುರಿಸಿ ಗೆಲ್ಲಬೇಕಿದೆ? ಎನ್ನುವ ಪ್ರಶ್ನೆಗಳನ್ನು ನಾವು ಎದುರಿಸಬೇಕಿದೆ. ಸ್ವೀಡಿಷ್‌ ಭಾಷೆಯ ಕುರಿತು ಆತಂಕ ಇದ್ದಿರಲಾರದ ಒಂದು ಶಾಂತಿ ಕಾಲದಲ್ಲಿ ಇಂಗ್ಲೀಷ್‌-ಸ್ವೀಡಿಷ್‌ ಸಮತ್ವ ಸಾಧ್ಯವಾಗಿದೆ. ಭಾರತ ಆತಂಕದಲ್ಲಿ, ಘರ್ಷಣೆಯಲ್ಲಿ ಇದನ್ನು ಸಾಧಿಸಿಕೊಳ್ಳಬೇಕಿದೆ. ಸ್ವೀಡನ್‌ನ ಉದಾಹರಣೆ ನಮಗೆ ಸಹಾಯ ಮಾಡುತ್ತದೆಯೇ ಎನ್ನುವ ಕಳಕಳಿ ನನ್ನದು. ಆಸ್ಟ್ರೇಲಿಯಾದ ಬುಡಕಟ್ಟಿನ ಲೇಖಕನ ಮಾತುಗಳು ಕೂಡಾ ನನ್ನಲ್ಲಿ ಅಪಾರವಾದ ಆಶೆ ಮೂಡಿಸಿದೆ. ಆದರೆ ಇದು ಮಾರಣಹೋಮದ ನಂತರವೂ ಉಳಿಯುವ ಭರವಸೆ. ಇದನ್ನು ಗಮನದಲ್ಲಿಟ್ಟುಕೊಂಡೂ ಸದ್ಯ ಮಾರಣಹೋಮವಾಗದ ರೀತಿಗಳ ಬಗ್ಗೆ ಮಾತ್ರ ಗಮನಿಸಲು ಇಚ್ಛಿಸುತ್ತೇನೆ.

ಕನ್ನಡದ ಕುರಿತು ಆಶಾವಾದದಿಂದಿರಲು ನನ್ನ ಮನಸ್ಸಿನಲ್ಲೊಂದು ವಾದವಿದೆ, ಇದನ್ನು ಬೆಳೆಸಬೇಕಾಗಿದೆ. ಅದೇನೆಂದರೆ, ನಮ್ಮಲ್ಲಿ ಇಂಗ್ಲೀಷನ್ನು ದಕ್ಷವಾಗಿ ಬಳಸಬಲ್ಲವರ ಇಂಗ್ಲೀಷ್‌ ಕೂಡಾ ಸಾಂಸ್ಕೃತಿಕವಾಗಿ ದರಿದ್ರವಾಗಿರುತ್ತದೆ. ತಮ್ಮ ಇಂಗ್ಲೀಷ್‌ಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕಾದರೆ ಕನ್ನಡದಂತಹ ದೇಶೀಯ ಭಾಷೆಗಳ ಜೊತೆ ಸೃಜನಶೀಲ ಸಂಬಂಧ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ರಾಜಾರಾಯರು. ಇಲ್ಲದಿದ್ದರೆ ಇವರ ಇಂಗ್ಲೀಷ್‌ ಎಂದೆಂದಿಗೂ ಗುಲಾಮವಾಗುತ್ತದೆ. ಅವರು ಔದ್ಯೋಗಿಕವಾಗಿ ಮುಂದುವರೆಯಬಹುದು. ಆದರೆ ಸಾಂಸ್ಕೃತಿಕವಾಗಿ ಮುಂದುವರೆಯಲಾರರು. ಸಂಸ್ಕೃತಿ ನಿರ್ಮಾಪಕರಿಗೆ ಗತದ ಜೊತೆಗೆ ಆಳವಾದ ಸಂಬಂಧ ಇರಲೇಬೇಕಾಗುತ್ತದೆ. ಆದರೆ ಕನ್ನಡವನ್ನು ಅಡುಗೆಮನೆ ಭಾಷೆಯಾಗಿ ಬಳಸುವವರಿಗೆ ಇದು ಸಾಧ್ಯವಾಗುವುದಿಲ್ಲ. ಈ ವಾದದ ಸತ್ಯಾಸತ್ಯತೆ ಒಂದಾದರೆ, ಮತ್ತೊಂದು- ಈ ವಾದ ಫಲನೀಡಬೇಕಾದರೆ, ಸಂಸ್ಕೃತ ಕನ್ನಡಕ್ಕೆ ದಾರಿ ಮಾಡಿಕೊಟ್ಟಂತೆ ಇವತ್ತು ಇಂಗ್ಲೀಷ್‌ ಕನ್ನಡಕ್ಕೆ ದಾರಿ ಮಾಡಿಕೊಡಬೇಕಾದರೆ, ನಮ್ಮಲ್ಲಿ ಸಾಂಸ್ಕೃತಿಕ ದಣಿವು ವ್ಯಾಪಕವಾಗಿ ಮತ್ತು ಆಳವಾಗಿ ಎಲ್ಲರಿಗೂ ಅನುಭವವಾಗಬೇಕು. ಮತ್ತು ಅದೇ ಕಾಲದಲ್ಲಿ ದಾರ್ಶನಿಕರು ಹುಟ್ಟಬೇಕು. ಹಾಗೇನಾದರೂ ಆಗಬಹುದು ಎನ್ನುವ ಒಂದು ಆಶಾವಾದ ನನ್ನಲ್ಲಿದೆ.

ಎರಡನೆಯದಾಗಿ, ಒಂದು ಭಾಷೆಯಲ್ಲೇ ಜ್ಞಾನದ ಸೃಷ್ಟಿಯಾಗುವುದು ಮತ್ತು ಭಾಷೆಯ ಉಳಿವು ಅದರ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎನ್ನುವುದು. ಇದು ನಿಜವಾದರೂ, ಹೀಗೆ ಹುಟ್ಟುವ ಜ್ಞಾನಕ್ಕೆ ಆರ್ಥಿಕ ಆಯಾಮಗಳಿರಬೇಕಾಗುತ್ತದೆ. ಅಥವ ಮತ್ತಿನ್ಯಾವ ಕಾರಣಕ್ಕಾದರೂ ಇಂಗ್ಲೀಷ್‌ಗಿಂತ ಮೇಲು ಎನ್ನುವ ಹಣೆಪಟ್ಟಿ ಪಡೆಯಬೇಕಾಗುತ್ತದೆ. ಅತ್ಯುತ್ತಮ ಸಾಹಿತ್ಯ ಸೃಷ್ಟಿ ಕೂಡ ಜ್ಞಾನದ ಒಂದು ಭಾಗವಾದರೂ ಇದಕ್ಕೆ ನಾವು ಆರ್ಥಿಕ/ಔದ್ಯೋಗಿಕ ಆಯಾಮ ಕಲ್ಪಿಸಲು ಸಾಧ್ಯವಿಲ್ಲದಿರುವುದನ್ನು ಗಮನಿಸಿದರೆ, ನಮ್ಮ ಮುಂದಿರುವ ಸವಾಲು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಇವತ್ತಿನ ವಾಣಿಜ್ಯವನ್ನು ನೇರವಾಗಿ ಎದುರಾಗಲೇಬೇಕಾಗುತ್ತದೆ. ವಾಣಿಜ್ಯ ಸೃಷ್ಟಿಸುವ ಆತಂಕಗಳ ವಿಷಯದಲ್ಲಿ ವಾಣಿಜ್ಯೋದ್ಯಮಿಗಳಿಗೆ ಹುನ್ನಾರಗಳಿರುತ್ತವೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಅವರ ಗಮನವೆಲ್ಲವೂ ಸಾಮಾರ್ಥ್ಯದ ಸೃಷ್ಟಿ, ಗಳಿಕೆ, ಹಣದ ಹರಿಯುವಿಕೆಯತ್ತ ಇರುತ್ತದೆ. ಒಳ್ಳೆಯದಾದರೂ, ಕೆಟ್ಟದಾದರೂ ಈ ಪ್ರಕ್ರಿಯೆಯ ಬೈಪ್ರಾಡಕ್ಟಾಗಿ ಆಗುತ್ತದೆ. ಈ ವ್ಯತ್ಯಾಸವನ್ನೇಕೆ ಗಮನಿಸುತ್ತಿದ್ದೇನೆಂದರೆ, ಕೆಲವರನ್ನು ಬಿಟ್ಟು ವಾಣಿಜ್ಯದ ಬಹುತೇಕರಿಗೆ ಒಳನೋಟದ ಕೊರತೆಯಿರುತ್ತದೆ, ವಾಣಿಜ್ಯೇತರ ವಿಷಯಗಳ ಕುರಿತಾದ ಇಂಡಿಫರೆನ್ಸ್‌ ಇರುತ್ತದೆ. ಇನ್ನು ಮಿಕ್ಕವರಿಗೆ ಮನುಷ್ಯತ್ವವನ್ನು ಮೀರಿದ ಮಹತ್ವಾಕಾಂಕ್ಷೆಗಳಿರುತ್ತದೆ. ನಾವು ಎರಡನೆಯವರನ್ನು ಟೀಕಿಸುವ ಭರದಲ್ಲಿ ಮೊದಲನೆಯವರನ್ನು ಕಳೆದುಕೊಳ್ಳುತ್ತೇವೆ. ಅಥವಾ ಈ ಎರಡನ್ನೂ ಬೇರೆ ಬೇರೆ ರೀತಿಗಳಲ್ಲಿ ಟೀಕಿಸಬೇಕಾಗುತ್ತದೆ. ಇದೊಂದು ದಿಕ್ಕಾದರೆ, ಮತ್ತೊಂದು ದಿಕ್ಕಿನಲ್ಲಿರಬೇಕಾದ ಎಚ್ಚರವೆಂದರೆ ಬೆಂಗಳೂರು ಕ್ಲಬ್‌ನಂತಹ ಘಟನೆಗಳನ್ನು ಪ್ರಜ್ಞಾವಂತರು ಟೀಕಿಸದೇ ಹೋದರೆ ಒಂದೋ ಕನ್ನಡ ಸಂಘಟನೆಗಳು ಇಲ್ಲವೋ ಬಲಪಂಥೀಯರು ಅದನ್ನೂ ಹೈಜಾಕ್‌ ಮಾಡುತ್ತಾರೆ.

ಇದನ್ನೆಲ್ಲಾ ಮುಂದುವರೆಸುವುದಾದರೆ, ಬೇಂದ್ರೆಯವರ ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು; ಕನ್ನಡವು ಹೊಸಬಾಳನ್ನು ಕನ್ನಡಿಸಬೇಕು' ಕವಿವಾಣಿಯನ್ನು ಒಟ್ಟು ಕನ್ನಡ ನಾಡು ಅರ್ಥೈಸಲು ಪ್ರಯತ್ನಿಸಬೇಕಿದೆ. ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವುದು ಹೊಸಬಾಳನ್ನು ಕನ್ನಡಿಸಬೇಕು ಎನ್ನುವದರ ಭಾಗವೇ ಆದರೂ, ಇದಕ್ಕಿರುವ ಇತರ ಆಯಾಮಗಳ ಚರ್ಚೆಯಾಗಬೇಕಿದೆ. ಈ ಆವರಣದೊಳಗೇ ಮಧ್ಯಮ ವರ್ಗಕ್ಕೆ ಕನ್ನಡದ ಮೇಲೆ ಮತ್ತಷ್ಟು ವಿಶ್ವಾಸ ಮೂಡಿಸುವ ಬಗೆ, ಕನ್ನಡ ಅತ್ಯುತ್ತಮವಾಗಿ ಬಲ್ಲ, ಇಂಗ್ಲೀಷ್‌ ಓದಿ-ಬರೆಯಲು ಬಲ್ಲ, ಮಾತನಾಡಲು ಮಾತ್ರ ಬಾರದ ಕನ್ನಡ ಮಕ್ಕಳಲ್ಲಿ ನಾವು ಆತ್ಮವಿಶ್ವಾಸ ತುಂಬುವ ಬಗೆ, ಕನ್ನಡದಿಂದ ಇಂಗ್ಲೀಷ್‌ ಕಲಿಯುವುದು ಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗುವ ಬಗೆ, ತಮ್ಮ ಸೃಜನಶೀಲತೆಗೆ ಎರವಾಗದ ಸ್ಥಿತಿಯ ನಿರ್ಮಾಣದ ಬಗೆ ಇವೆಲ್ಲವೂ ಚರ್ಚೆಯಾಗಬೇಕಿದೆ.

***

ಭಾಷಾಂತರದ ಪತ್ರಿಕೋದ್ಯಮ ಮಾತ್ರ ಕಷ್ಟದ ವಿಚಾರವಾಗಿದೆ. ವಿಷಯ ಜಟಿಲವಾಗಿರುವುದರಿಂದ ಅನುಮಾನಗಳ ಮೂಲಕವೇ ನನ್ನ ಪ್ರತಿಕ್ರಿಯೆ. ಅನುವಾದ ಪದವನ್ನು ಅನುವು+ಆದ ಎಂದು ಬಿಡಿಸಿಕೊಂಡರೆ, ಮತ್ತೊಂದು ಭಾಷೆಯಲ್ಲಿ ಅನುವು - ಎಂದರೆ ಮತ್ತೊಂದು ಭಾಷೆಯಲ್ಲಿ ತಯಾರಾದ, ಮರುಸೃಷ್ಟಿಯಾದ - ಎನ್ನುವ ಅರ್ಥವನ್ನೂ ಸೇರಿಸಬಹುದೆನ್ನಿಸುತ್ತದೆ. ಈ ಅರ್ಥವನ್ನು ಡಾ ಅನಂತಮೂರ್ತಿಗಳ ಲೇಖನದಲ್ಲಿನ 'ಅನುವಾಗು' ಪದ - ಮತ್ತೊಂದು ಭಾಷೆಯಲ್ಲಿ 'ಅನುವಾಗು' - ಧ್ವನಿಸುತ್ತದೆನ್ನಿಸುತ್ತದೆ. ಹೀಗಾದರೆ ‘ತನ್ನ ಭಾಷೆಯಲ್ಲಿ ಮೂಲಕ್ಕೆ ಆದಷ್ಟೂ ಹತ್ತಿರವಾಗು' ಎಂದು ಹೇಳಬಹುದೇ ಎಂದು ಯೋಚಿಸುತ್ತಿದ್ದೇನೆ. ಈ ಸಂಕೀರ್ಣತೆ ನನಗಿನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ.

ಬೇಂದ್ರೆಯವರ ಕವಿವಾಣಿಯಂತೆ ಹಿರಿಯರಿಗೆ ಇಂಗ್ಲೀಷು ಕನ್ನಡವನ್ನು ಹಸನುಗೊಳಿಸುವ ಸಾಧನವಾಯಿತು. ಇಂಗ್ಲೀಷನ್ನು ನೋಡಿದಷ್ಟೂ ಕನ್ನಡದ್ದೇ ಹೊಸ ಸಾಧ್ಯತೆಗಳ ಶೋಧನೆ ಸಾಧ್ಯವಾಯಿತು. ಆದರೆ ಇವತ್ತಿನ ಪ್ರಕ್ರಿಯೆಯನ್ನು ಸ್ವಲ್ಪ ಅತಿರೇಕದಲ್ಲಿ ಹೀಗೆ ವಿವರಿಸಬಹುದೇನೋ - ಕನ್ನಡಾಂಬೆಯಲ್ಲಿ ಸ್ವಸ್ಥವಾಗಿರುವ ಅಂಗಗಳನ್ನು ಕಿತ್ತು ಇಂಗ್ಲೀಷಿನ ಅಂಗಾಂಗಗಳನ್ನು ವಾಮಾಚಾರದಿಂದ ನಕಲು ಸೃಷ್ಟಿಮಾಡಿ ಕನ್ನಡಾಂಬೆಗೆ ಕಸಿ ಮಾಡುವುದು. ಈ ಕುರಿತು ಕನ್ನಡಿಗರಿಗೆ ಹೇಸಿಗೆಯಾಗಬೇಕು, ಆದರೆ ಹಾಗಾಗುವುದಿಲ್ಲ. (ನಮ್ಮ ಜನ ಅಷ್ಟರಮಟ್ಟಿಗೆ ಬದಲಾಗಿದ್ದಾರೆ, ಅಥವಾ ಈ ಮೊದಲೂ ಹಾಗೇ ಇದ್ದರು.) ಬೇರಿನ್ನಾವ ಪ್ರತಿಭಟನೆಯೂ ಈ ಬೆಳವಣಿಗೆಯನ್ನು ತಡೆಯುವುದಿಲ್ಲ. ಆದರೆ ಇದನ್ನು ಮೀರುವುದಕ್ಕೆ ನಮಗೆ ಎರಡು ಸಾಧ್ಯತೆಗಳಿವೆ. ಹೀಗೆ ಭಾಷಾಂತರಿಸುವವರು ಕನ್ನಡಾಂಬೆಯ ಅಂಗಾಂಗಗಳನ್ನು ಕಸಿ ಮಾಡದೇ, ತಮ್ಮ ಪರಿಮಿತ ನೆಲೆಯಲ್ಲೂ ಬೇಂದ್ರೆಯ ಕವಿವಾಣಿಗೆ ಓಗೊಡುತ್ತಾರೆಯೇ? ಈ ಹಿಂದೆ ಅನೇಕ ವಿಕೃತಿಗಳೇ ಮುಂದೆ ಸೃಜನಾತ್ಮಕ ಬೆಳವಣಿಗೆಗಳಿಗೆ ದಾರಿಯಾದ ಉದಾಹರಣೆಗಳಿವೆ. ಆದರೆ, ಇದೂ ಕೂಡಾ ಕಷ್ಟ ಸಾಧ್ಯವೇ. ಅಂಗಾಂಗ ಕಸಿಗೆ ಮಾತ್ರ ಸಂಬಳ ನೀಡಲಾಗುತ್ತದೆ. ಬೇರಿನ್ನೆಲ್ಲ ಪ್ರಕ್ರಿಯೆಗಳನ್ನು ಕೊಲ್ಲಲಾಗುತ್ತದೆ.

ಮತ್ತೊಂದು, ಕನ್ನಡದಲ್ಲಿ ಜ್ಞಾನ ಸೃಷ್ಟಿಯ ವಿಷಯ. ಇಲ್ಲೂ ಸಹ ನಾವು ಇವತ್ತು ಇಂಗ್ಲೀಷ್‌ ಸೃಷ್ಟಿಸುತ್ತಿರುವ ಜ್ಞಾನದ ಜೊತೆಗೆ ಸ್ಪರ್ಧಿಸಿದರೆ ಗೆಲುವು ಕಷ್ಟವೇ ಸರಿ. ಇಂಗ್ಲೀಷ್‌ ಸೃಷ್ಟಿಸುತ್ತಿಲ್ಲದ ವಿಷಯ-ವಸ್ತುಗಳತ್ತ ಇನ್ನಿತರ ಭಾಷೆಗಳು ಗಮನ ಹರಿಸುವುದು ಸಾಧ್ಯವೇ ಎನ್ನುವುದು ಒಂದು ಪ್ರಶ್ನೆ. ಇದಕ್ಕೊಂದು ನಿದರ್ಶನವನ್ನು ಅನಂತಮೂರ್ತಿಗಳ ಒಂದು ಲೇಖನದಲ್ಲಿ ಪ್ರಸ್ತಾಪವಾದ ವಿಷಯದ ಮೂಲಕ ಕೊಡಬಯಸುತ್ತೇನೆ. ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿನ ‘ಸಂಪ್ರದಾಯ, ಆಧುನಿಕತೆ ಮತ್ತು ಪರ್ಯಾಯ ಸಂಸ್ಕೃತಿ' ಲೇಖನದಲ್ಲಿ ಒಂದು ಪ್ರಸ್ತಾಪವಿದೆ. ನೆಲದಲ್ಲಿ ಬೇರೂರಿರುವುದು ಮತ್ತು ವೈಚಾರಿಕರಾಗಿರುವುದು ಏಕಕಾಲದಲ್ಲಿ ಎರಡೂ ಆಗಿರುವುದು ಮುಖ್ಯ. ಬಹುತೇಕ ಭಾರತೀಯ ಭಾಷೆಗಳ ವಿಷಯದಲ್ಲಿ ಇದು ಸಾಧ್ಯವಾಗಿದೆ ಎನ್ನುವ ಅರ್ಥದ ಸಾಲುಗಳು (ಪುಟ 9 ಪ್ಯಾರಾ 1). ಇದನ್ನು ನಾವು ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವ ಅರ್ಥದಲ್ಲಿ ಗ್ರಹಿಸಲು ಸಾಧ್ಯವಿಲ್ಲವೆ, ಮತ್ತು ಇದನ್ನು ವಿಸ್ತರಿಸಬಲ್ಲವೆ. ತಂತ್ರಜ್ಞಾನ, ವಾಣಿಜ್ಯಗಳನ್ನು ಬಿಟ್ಟು ಮನುಷ್ಯನಿಗೆ ಮುಖ್ಯವಾದ ಅನೇಕ ವಿಷಯಗಳು ನಮ್ಮ ಜೀವನಕ್ಕೆ ನಿಜದಲ್ಲಿ ಹತ್ತಿರವಾಗಿರುವಂತೆ ಇಂಗ್ಲೀಷಿನಲ್ಲಿ ಸಿಗುವುದು ಸಾಧ್ಯವಿಲ್ಲ, ಕನ್ನಡದಲ್ಲಿ ಮತ್ತು ಇನ್ನಿತರ ಭಾಷೆಗಳಲ್ಲಿ ಸಿಗುವುದು ಸಾಧ್ಯವಿದೆ ಎನ್ನುವುದನ್ನು ಜ್ಞಾನದ ಸೃಷ್ಟಿ ಎಂದು ಗ್ರಹಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿದ್ದೇನೆ. ಈ ಬಗೆಯ ಸಾಧ್ಯತೆಯನ್ನೂ ‘ಭಾಷಾಂತರದ ಗಂಡಾಂತರ' ಕೊಲ್ಲುವುದೇನೋ ಎನ್ನುವುದು ಡಾಅನಂತಮೂರ್ತಿಗಳ ಮುಖ್ಯ ಕಾಳಜಿ ಇರಬಹುದೇ ಎಂದೂ ಯೋಚಿಸುತ್ತಿದ್ದೇನೆ.

ನಿಜಕ್ಕೂ ಜನರಲ್ಲಿ ಜಾಗೃತಿಯಾದೀತು ಎನ್ನುವುದನ್ನು ನಂಬಲು ಸಿದ್ಧರಿಲ್ಲದ ನನ್ನಂಥವರು ಕಡೆಗೆ ದಣಿವಿಗೇ ಕಾದು ಕೂರಬೇಕೇನೋ.
ಮುಂದುವರೆಯುವುದು...

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೨

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಚರಿತ್ರೆ, ಆಧುನಿಕತೆಗಳ ಸೃಷ್ಟಿಗೆ ಕಾರಣ ಎಂದೆನ್ನಿಸಿಕೊಂಡಿರುವ - ಈ ಹಿನ್ನೆಲೆಯಲ್ಲಿ ನಮ್ಮ ಯಾವತ್ತಿನ ಅವಶ್ಯಕತೆಯಾಗಿರುವ - ಯೂರೋಪನ್ನು ಕುರಿತ ಡಾ. ಅನಂತಮೂರ್ತಿಗಳ ಚಿಂತನೆಯಲ್ಲಿ ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು ಎನ್ನುವ ಮಾತು ಅತಿ ಮುಖ್ಯ ಗ್ರಹಿಕೆ. ಇದಕ್ಕೆ ಸ್ಫೂರ್ತಿಯಾಗಿ ಟ್ಯಾಗೋರ್‌ ಮತ್ತು ಗಾಂಧಿಯಿದ್ದಾರೆ ಎಂದುಕೊಂಡಿದ್ದೇನೆ. ಈ ಕುರಿತ ನನ್ನ ಅನುಮಾನಗಳು - ಕೈಗಾರಿಕಾ ಕ್ರಾಂತಿ, ಆಧುನಿಕತೆ, ಕಮ್ಯುನಿಸಂ, ಬಂಡವಾಳಶಾಹಿ, ಮತೀಯತೆ, ಫ್ಯಾಸಿಸಂ-ಗಳೆಲ್ಲವನ್ನೂ ಸರಣಿಯಾಗಿಯೂ ಮತ್ತು ಒಂದೇ ಪ್ರಕ್ರಿಯೆಯ ಫಲವೆನ್ನುವಂತೆಯೂ ಕಂಡಿರುವ ಯೂರೋಪು, ಕಡೆಗೆ ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನಾಯುವಂತಹ ಅನಿವಾರ್ಯತೆಗೆ ಏಕೆ ತಲುಪಿತು? ಯಂತ್ರಗಳ ಸಾಧ್ಯತೆಯನ್ನು ಎಡವಿಬಿಟ್ಟ ಯೂರೋಪು, ಆ ಕಾರಣಕ್ಕೇ ಬಂಡವಾಳಶಾಹಿಯ ಹಿಡಿತದಲ್ಲಿ ಅನಾಮತ್ತಾಗಿ ಕೈಗಾರಿಕೀಕರಣಕ್ಕೊಳಗಾಗಿ, ನಂತರ ಅದನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿಂದ ಬೃಹತ್‌ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಾ, ಆದ್ದರಿಂದಲೇ ರಾಷ್ಟ್ರೀಯತೆಯನ್ನು ಆವಾಹಿಸಿಕೊಂಡು, ರಾಷ್ಟ್ರಿಯತೆ ಸಾಧಿಸಲು ಒಂದೋ ಪ್ರಗತಿ ಇಲ್ಲವೋ ಮತೀಯತೆಯಯನ್ನು ನವಮೌಲ್ಯಗಳನ್ನಾಗಿ ರೂಪಿಸಲು ತೊಡಗಿತೇ? ಇದು ಅಮಾನುಷತೆಯ ಹಾದಿಯಲ್ಲಿ ಸಾಗುವಂತಾಗಿದೆಯೆಂದರೆ ಮೌಲ್ಯವೊಂದು ಸಮಾಜದಲ್ಲಿ ರೂಪುಗೊಳ್ಳುವ ಬಗೆಯ ಕುರಿತು ಇದು ವಿಶೇಷವಾದ್ದೇನಾದರೂ ಹೇಳುತ್ತಿದೆಯೇ? ಮತ್ತೆ ಮೊದಲಿಗೆ ಬರುವುದಾದರೆ, ಯಂತ್ರಗಳ ಆವಿಷ್ಕಾರದ ನಂತರ ಆಯ್ಕೆಗಳು ಸೀಮಿತವಾದ್ದರಿಂದಲೇ ಹೀಗಾಯಿತೇ?

ಯಂತ್ರಾಧಾರಿತ ಆರ್ಥಿಕತೆಗೆ ಬೇಕಾದ ಬೃಹತ್‌ ವ್ಯವಸ್ಥೆ ಫ್ಯಾಸಿಸಂನಂತಹ ವಿಕೃತಿಗಳನ್ನು ಸೃಷ್ಟಿಸಿ ಬೆಳೆಸುತ್ತಿದ್ದ ಕಾಲದಲ್ಲಿ ಅದನ್ನೆದುರಿಸುವ ಏಕಮಾತ್ರ ಆಯ್ಕೆಯಾಗಿ, ಅನಿವಾರ್ಯವಾಗಿ ರೂಪುಗೊಂಡಿರಬಹುದಾದ ಕಮ್ಯುನಿಸಂ, ಕಡೆಗೆ ಸ್ಟಾಲಿನ್‌ರಂಥವರನ್ನು ರೂಪಿಸಿತು. ಅಂದರೆ ವಿರೋಧ ಮಾತ್ರವೇ ಮುಖ್ಯವಾದ ಹಾದಿಯಲ್ಲಿ ವಿರೋಧಿಯ ಎಲ್ಲ ಗುಣಗಳನ್ನೂ ತನ್ನಲ್ಲೇ ಆವಾಹಿಸಿಕೊಂಡಿತೇ? ಹಿಟ್ಲರ್‌ ಪ್ರಕ್ರಿಯೆಯನ್ನೂ ಹೀಗೇ ಗ್ರಹಿಸಬಹುದೇ? ಇಷರ್ವುಡ್‌, ಸ್ಪೆಂಡರ್‌, ಆಡೆನ್‌ ಮಹನೀಯರುಗಳು ಕಮ್ಯುನಿಸಂ ಹಾದಿಯಲ್ಲೇ ಬೆಳೆದು ಮನುಷ್ಯನ ಆಧ್ಯಾತ್ಮಿಕ ಹಸಿವನ್ನು ಇಂಗಿಸಲಾರದ್ದರಿಂದ ಇವರುಗಳು ಬೆಳೆಯುವುದಕ್ಕೆ ಬೇರೆಯೇ ಹಾದಿ ಹಿಡಿದಿರುವಂತಿದ್ದರೂ ಕಮ್ಯುನಿಸಮನ್ನು ಅರಗಿಸಿಕೊಂಡ ನಂತರ ಮುನ್ನಡೆದರು ಎನ್ನುವುದು ಮುಖ್ಯ. ಕಮ್ಯುನಿಸಮನ್ನು ಮೀರಬೇಕಾದ ನೆಲೆಗಳ ಬಗ್ಗೆಯೂ ಇದು ದಾರಿತೋರಿಸುವಂತಿದೆ. ಆದರೆ ಒಳಗಿದ್ದೇ ಆ ಆಧ್ಯಾತ್ಮಿಕ ಹಸಿವಿನ ದಾರಿಯನ್ನು ತುಳಿಯಲಾಗದಾಯಿತೇ? ಜಾರ್ಜ್‌ ಥಾಂಸನ್‌ರಂಥವರೂ ಮಾವೋ, ಸ್ಟಾಲಿನ್‌ರನ್ನು ಮೆಚ್ಚುತ್ತಲೇ ಹೋದ ಅಂಶ ಕಮ್ಯುನಿಸ್ಟ್‌ ಸಿದ್ಧಾಂತದಲ್ಲೇ ಕಲ್ಟಿಸಂ ಅನ್ನು ಗುರುತಿಸಲಾಗದ ಅಂಧತೆ ತಂದೊಡ್ಡುವ ಅವಕಾಶವಿರುವುದನ್ನು ಸೂಚಿಸುತ್ತಿದೆಯೇ? ಈ ಅವಕಾಶವನ್ನು ಸ್ಪಷ್ಟವಾಗಿ ಗುರುತಿಸುವುದಕ್ಕೆ ಸಾಧ್ಯವಿದೆಯೇ? (ವ್ಯಕ್ತಿಯಾಗಿ ನೋಡಿದಾಗ ದೊಡ್ಡದಾಗಿ ಕಾಣುವ ನ್ಯೂನತೆ ಸಿದ್ಧಾಂತದಲ್ಲಿ ನೋಡಿದಾಗ ಚಿಕ್ಕದಾಗಿ ಕಂಡು, ಅದಕ್ಕೆ ನಾವು ಕುರುಡರಾಗುತ್ತೇವೆಯೇ? ಟಿಪ್ಪು ವಿಷಯದಲ್ಲಿ ನಮ್ಮ ಎಡಪಂಥೀಯರಿಗಾಗಿರುವುದು ಇದೇನೇ? ಕೃಷ್ಣದೇವರಾಯನಲ್ಲಿ ನಮ್ಮ ಬಲಪಂಥೀಯರಿಗಾಗಿರುವುದು ಇದೇನೇ? ಕಷ್ಟಕಾಲದಲ್ಲಿ ಆಪದ್ಬಾಂಧವನಾದವನ ವೈಯಕ್ತಿಕ ತೀಟೆಗಳು ನಮಗೆ ಕಾಣುವುದಿಲ್ಲವಲ್ಲವೇ?) ಮಿಕ್ಕ ಕಮ್ಯುನಿಸ್ಟರು ಒಂದೋ ಆರ್ಥಿಕತೆ ಮತ್ತು ಸಾಮಾಜಿಕತೆಗೆ ಮಿತಿಗೊಂಡ ಸಮಾನತೆಯ ರೊಮ್ಯಾಂಟಿಕ್‌ ಆಕರ್ಷಣೆ ಮಾತ್ರ ಮೀರಲಾರದವರು. ಅಥವಾ ಕಮ್ಯುನಿಸಂನ ಒಳಗಡೆಯೇ ಇರುವ ಬಿರುಕಿನಲ್ಲಿ ತಮ್ಮ ವೈಯಕ್ತಿಕ ತೀಟೆಗಳನ್ನು ತೀರಿಸಿಕೊಳ್ಳುವ ಅವಕಾಶ ಕಂಡುಕೊಂಡವರು. ಇದಕ್ಕೂ ಮಿಗಿಲಾದ ಕಮ್ಯುನಿಸಂ ಸಿದ್ಧಾ­ಂತವನ್ನಿನ್ನೂ ಅಪ್ಪಿರುವ ಕಮ್ಯುನಿಸ್ಟರಿದ್ದಾರೆಯೇ? ಅದನ್ನು ಗ್ರಹಿಸುವ ಬಗೆ ಹೇಗೆ? ಸಮಾನತೆಯ ಹಸಿವಿನಲ್ಲಿ ಬೃಹತ್‌ ವ್ಯವಸ್ಥೆಗಳತ್ತ ಗಮನ ಹರಿಸಿರುವ ಕಮ್ಯುನಿಸಂ ಒಳಗಿನಿಂದಲೇ ನಮ್ಮನ್ನು ಗುರುತಿಸಿಕೊಳ್ಳುವ ಕ್ರಮಗಳನ್ನು ಇಲ್ಲವಾಗಿಸಿದೆಯೇ? ಕಡೆಗೆ ಸಮಾನತೆಯನ್ನೂ ಸಾಧಿಸಲಾರದೇ ಕೇವಲ ರಾಷ್ಟ್ರೀಯತೆಯನ್ನಷ್ಟೇ ಸಾಧಿಸಿ, ಬಂಡವಾಳಶಾಹಿಯ ಉದ್ದೇಶವನ್ನೇ ಈಡೇರಿಸಿತೇ?

ಈ ಎಲ್ಲವನ್ನೂ ಗ್ರಹಿಸಲು ಡಾ ಅನಂತಮೂರ್ತಿಗಳು ಅಪ್ವರ್ಡ್‌ರನ್ನು ಕೇಂದ್ರದಲ್ಲಿಟ್ಟು ನಡೆಸಿರುವ ಪ್ರಯತ್ನ ಅರ್ಥಪೂರ್ಣವಾಗಿದೆ. ಅಪ್ವರ್ಡ್‌ ಕಮ್ಯುನಿಸಂ ಒಳಗಡೆಯೇ ಇರಬಹುದಾದ ಅತ್ಯುತ್ತಮ ಸಾಧ್ಯತೆಯಂತಿದ್ದಾರೆ ಎಂದರೆ ನಮಗೆ ಕಮ್ಯುನಿಸಂನೊಳಗಿನ ನಿಜದ ಸಾಧ್ಯ-ಅಸಾಧ್ಯಗಳು ಅರ್ಥವಾಗುತ್ತವೆ. ಹೀಗಿದ್ದರೂ ಕಮ್ಯುನಿಸಂ ಮೇಲಣ ಅಪ್ವರ್ಡ್‌ರ ಗಟ್ಟಿ ನಂಬಿಕೆಗೆ ಕಾರಣಗಳಾದರೂ ಏನು? ಸಮಾನತೆಯ ಹಸಿವೇ? ಬೇರಿನ್ನಾವ ಸಿದ್ದಾಂತವೂ ಸಮಾನತೆಯನ್ನು ಈ ಬಗೆಯಲ್ಲಿ ಚರ್ಚಿಸಲಾರದ್ದರಿಂದಲೇ? ಈ ಮಧ್ಯೆ ಅಪ್ವರ್ಡರ ಸಾಧ್ಯತೆ ಇಷರ್ವುಡ್‌ ಗೆ ಗೊತ್ತಿತ್ತು ಎನ್ನುವುದು ಆಧ್ಯಾತ್ಮಿಕ ಹಸಿವಿಗೇ ಸಾಧ್ಯವಾಗುವ ಒಳನೋಟವೆನ್ನಿಸುತ್ತದೆ. (ಅಪ್ವರ್ಡ್‌ರ ಹೆಚ್ಚು ಕಮ್ಯುನಿಸ್ಟರಾದ ಮಿತ್ರರಿಗೆ ಆ ಸಾಧ್ಯತೆ ಕಂಡಿತ್ತೇ?) ಆಧ್ಯಾತ್ಮಿಕ ಹಸಿವು ಮಿಗಿಲಾದ ಯೇಟ್ಸ್‌, ಎಲಿಯಟ್‌, ಪೌಂಡ್‌ ಮುಂತಾದವರು ಹಿಟ್ಲರ್‌, ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ? ಹಿಗ್ಗಿಸಿ ಗ್ರಹಿಸಲು ಪ್ರಯತ್ನಿಸುವುದಾದರೆ - ಆಧ್ಯಾತ್ಮಿಕ ಹಸಿವು ಸಮಾನತೆಯ ಹಸಿವಿನ ಅಭಾವದಿಂದ ಕೇವಲ ಬಲಪಂಥೀಯತೆಯಲ್ಲಿ ಮತ್ತು ಬಲಪಂಥೀಯತೆಯ ವಿರೋಧ ಆಧ್ಯಾತ್ಮಿಕ ಹಸಿವಿನ ಅಭಾವದಿಂದ ಕೇವಲ ಎಡಪಂಥೀಯವಾಗಿ ಭ್ರಮನಿರಸನಗಳಲ್ಲಿ ಪರ್ಯವಸಾನವಾದವೇ?

'ಉತ್ತಮ ಪ್ರಭುತ್ವ ಲೊಳಲೊಟ್ಟೆ'-ಯೆನ್ನುವುದು ಆಧ್ಯಾತ್ಮಿಕ ಹಸಿವಿನ ವ್ಯಕ್ತಿಗಳಿಗೆ ದಾರ್ಶನಿಕ ಒಳನೋಟ. ಮಾನವ ವ್ಯವಸ್ಥೆಗಳನ್ನು ನಿರ್ಮಿಸುವ ಆಕಾಂಕ್ಷೆಯಿರುವ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡೂ ಪ್ರಭುತ್ವದಲ್ಲಿ ನಂಬಿಕೆಯಿಟ್ಟಂಥವು. ಅಂದರೆ ವ್ಯವಸ್ಥೆಯೊಂದನ್ನು ನಂಬುವ ಯಾರಿಗಾದರೂ ಈ ಲೊಳಲೊಟ್ಟೆ ಕಾಣ್ಕೆ ಸಾಧ್ಯವಿಲ್ಲವೇ? ಅಥವಾ ಬ್ಯಾಂಕ್‌ ಅಕೌಂಟ್‌ ಮಾತ್ರ ಬೇಕಾದ್ದಕ್ಕೆ ನಾವು ಬೃಹತ್‌ ವ್ಯವಸ್ಥೆಗಳನ್ನು ನಿರ್ಮಿಸಹೋಗಿ ಮೂಲೋದ್ದೇಶವನ್ನೇ ಮರೆಯುವುದೇ? 19 ಮತ್ತು 20ನೇ ಶತಮಾನಗಳ ಪ್ರಕ್ರಿಯೆಗಳು ಮನುಷ್ಯನನ್ನು ತನ್ನ ನೆಲೆಯಿಂದ ಬೌದ್ಧಿ­ಕವಾಗಿ, ಮಾನಸಿಕವಾಗಿ, ಭೌತಿವಾಗಿಯೂ ಕೂಡ ಉಚ್ಚಾಟಿಸಿಬಿಟ್ಟವು. ಈ ಉಚ್ಚಾಟನೆಗೆ ಪ್ರತಿಕ್ರಿಯೆಯಾಗಿ ಚಿಂತಕರು ತಮ್ಮದೇ ಆದ ಜಿಗಿತಗಳ ಮೂಲಕ ಹಲವು ವಿಕಲ್ಪಗಳನ್ನು ಕಾಣುತ್ತಾ ಮತ್ತೆಲ್ಲಿಯೋ ನೆಲೆಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ಯಶಸ್ಸು, ಸೋಲು ಎನ್ನುವ ಪರಿಕಲ್ಪನೆಗಳಿಂದ ಇದನ್ನು ಗ್ರಹಿಸಲಾಗುವುದಿಲ್ಲ. ಆದರೆ, ಅಪ್ವರ್ಡ್‌ ಈ ಜಿಗಿತದಲ್ಲಿ ತಮ್ಮತನಕ್ಕೆ ಎರವಾದರು. ಇದು ಪ್ರಕ್ರಿಯೆಗಳ ತೀವ್ರತೆಗೆ ನಿದರ್ಶನ.

ಅನೇಕ ಆಯಾಮಗಳಿರುವ ಈ ಚರ್ಚೆಯಲ್ಲಿ ಸಮಯೋಚಿತವಾಗಿದ್ದ - ಭಾರತ ಈ ಎಲ್ಲ ಆಧುನಿಕ ಪ್ರಕ್ರಿಯೆಗಳನ್ನು ತನ್ನ ಪ್ರಥಮ ಘಟ್ಟದಲ್ಲಿ ಬಹುಮುಖೀಯತೆಯಿಂದ ನಿರ್ವಹಿಸಿತ್ತೇ, ಇಲ್ಲವೇ? ಗಾಂಧಿ, ಟ್ಯಾಗೋರ್‌, ನೆಹರೂ, ಲೋಹಿಯಾ ಈ ಐರೋಪ್ಯ ಅಪಾಯಗಳಿಂದ ನಮ್ಮನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಗೆ ಇತ್ತ ಕಾಣಿಕೆಯೇನು? - ಎನ್ನುವ ಚಿಂತನೆ ಲೋಹಿಯಾರ ಚಿಕ್ಕ ಪ್ರಸ್ತಾಪದಲ್ಲೇ ಮುಗಿದುಹೋಗಿರುವುದು ನಿರಾಸೆಗೊಳಿಸುತ್ತದೆ. ಮತ್ತೊಂದು ದಿಕ್ಕಿನಲ್ಲಿ, ಯಾವ ವೈವಿಧ್ಯತೆಯಲ್ಲಿ ಈ ಚಿಂತನೆಗಳು ಎಡಪಂಥೀಯತೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆಯೋ, ಅದೇ ಸಾಂದ್ರದಲ್ಲಿ ಬಂಡವಾಳಶಾಹಿಯನ್ನು ಗ್ರಹಿಸುವುದಕ್ಕೆ ನಮಗಿನ್ನೂ ಸಾಧ್ಯವಿಲ್ಲವಾಗಿದೆಯಲ್ಲ! ಅದನ್ನು ಏಕರೂಪಿಯಾಗಿಯೇ ಇಂದಿಗೂ ಗ್ರಹಿಸುತ್ತೇವೆ. ಬಂಡವಾಳಶಾಹಿಯ ಸಾಧ್ಯತೆಯನ್ನು ಸಮಾನತೆ ಸಾಧಿಸುವ ಕ್ರಮವಾಗಿ, ಸಮೃದ್ಧಿ­ಯನ್ನೂ ಸಾಮರಸ್ಯವನ್ನೂ ಸಾಧಿಸುವ ಸಾಧನವಾಗಿ (ಮುಗ್ಧವಾಗಿ) ನಂಬಿರುವ, ಮತ್ತನೇಕ ಬಗೆಗಳಲ್ಲಿ ಆಳವಾಗಿ ಆಲೋಚಿಸಬಲ್ಲ ಜನರೂ ಇದ್ದಾರೆ. ತಮ್ಮತನಕ್ಕೇ ಎರವಾದವರೂ ಇದ್ದಾರೆ. ಅಂಥವರ ಮೂಲಕ ಬಂಡವಾಳಶಾಹಿಯನ್ನು ಗ್ರಹಿಸಲು ನಮಗಿನ್ನೂ ಸಾಧ್ಯವಾಗಿಲ್ಲ!

ಇವೆಲ್ಲವನ್ನೂ ಹಿನ್ನೆಲೆಯಲ್ಲಿಟ್ಟೇ ನಾವು ನೋಯಿಡಾ ನರಹತ್ಯೆಯಂತಹ ಬರ್ಬರ ಕೃತ್ಯಗಳಿಗೂ , ಕನ್ನಡದಂತಹ ಭಾಷೆಯ ಮುಂದಿರುವ ಒಟ್ಟು ದೌರ್ಭಾಗ್ಯಕರ ಆತಂಕಗಳಿಗೂ, ಭಾಷಾಂತರ ಪತ್ರಿಕೋದ್ಯಮದಂತಹ ಸೂಕ್ಷ್ಮ ಕ್ರೌರ್ಯಗಳಿಗೂ ಪ್ರತಿಕ್ರಿಯಿಸಬೇಕಿದೆ.

ಮುಂದುವರೆಯುವುದು...

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೧

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಇವತ್ತಿನ ನಮ್ಮ ಆತಂಕಗಳೆಂದರೆ - ಸಾಮಾಜಿಕ ಸ್ತರದಲ್ಲಿ ಮತೀಯತೆ ಮತ್ತು ಜಾಗತೀಕರಣ, ವೈಯಕ್ತಿಕ ಸ್ತರದಲ್ಲಿ ಯಾವುದೂ ಆಳವಾಗಿ ಅನುಭವಕ್ಕೆ ವಿಶ್ಲೇಷಣೆಗೆ ಸಿಗುತ್ತಿಲ್ಲವೇನೋ ಎನ್ನುವ ಸ್ಥಿತಿ. ಬೇರು ಸತ್ತ ಮರವನ್ನೆತ್ತಿ ಹಿಡಿದು ಬಲ್ಬುಗಳನ್ನು ಜೋಡಿಸುವುದು, ಜೀವಂತ ಮರವಾಗಲಿ, ಸತ್ತ ಮರವಾಗಲಿ ತಮಗೆ ಅನುಕೂಲವೆಂದಾದರೆ ಬಲ್ಬುಗಳನ್ನು ಜೋಡಿಸಿಯೇ ತೀರುವುದು, ಮಾರುವುದು ತೀವ್ರ ವೇಗ ಪಡೆದಿವೆ. ಇವೆರಡರ ಮಿಲನಕ್ರಿಯೆಯಲ್ಲಿ ಹುಟ್ಟುತ್ತಿರುವ ಪೀಳಿಗೆ ಇವೆರಡನ್ನೂ ಹುಟ್ಟುಕುರುಡಿನ, ಕುರುಡಿನ ಅರಿವಿರದ ತೀವ್ರತೆಯಲ್ಲಿ ಮುಂದುವರೆಸುತ್ತಿದೆ. ಈ ಬಲ್ಬಿನ ಪ್ರಖರತೆಯಲ್ಲಿ ಜೀವಂತವಿರುವ ಮರಗಳೂ ಬೇಗನೆ ಸಾಯುತ್ತಿವೆ. ಮತ್ತೊಂದು ಕಡೆಯಲ್ಲಿ ಬಲ್ಬುಗಳ ಸಹಾಯವಿಲ್ಲದೆ ಯಾವ ಮರವನ್ನೂ ಅನುಭವಿಸುವುದು, ಪುಷ್ಟಿಕರ, ರುಚಿಕರ ಹಣ್ಣು ಕಾಣುವುದು ಸಾಧ್ಯವಾಗದ ಕುರುಡಿದೆ. ಮರದ ನೆರಳಿನ ತಂಪಿನಲ್ಲಿ ವಿಶ್ರಮಿಸಬಹುದು, ನೆಮ್ಮದಿಯ ನಿದ್ರೆ ಅನುಭವಿಸಬಹುದು ಎನ್ನುವುದು ಮರೆತಿದೆ. ಸುಂದರವಾದ ಬಲ್ಬಿನ ಕೆಳಗೆ ವಿಷಪೂರಿತ ಹಣ್ಣಿದ್ದರೂ ತಿನ್ನುವುದಕ್ಕೆ ಸಿದ್ಧವಿದೆ. ಒಟ್ಟು ಪ್ರಕ್ರಿಯೆ ಆದಷ್ಟೂ ಮರಗಳನ್ನು ಸಾಯಿಸಿ, ಆದಷ್ಟೂ ಬಲ್ಬುಗಳನ್ನು ಉತ್ಪಾದಿಸಿ, ಜೀವಂತ ಮರಗಳನ್ನು ಸ್ಮೃತಿಯಿಂದಲೇ ಕಳೆದುಕೊಳ್ಳುವ ನಾಗಾಲೋಟವಾಗಿದೆ.

ಇವುಗಳ ವರ್ತಮಾನವನ್ನು ಗ್ರಹಿಸುವುದಕ್ಕೆ, ಆ ಭೂತದಿಂದ ಈ ವರ್ತಮಾನಕ್ಕೆ ತಲುಪಿದ ಬಗೆ, ನಡೆದು ಬಂದ ದಾರಿಯಲ್ಲಿ ಅನುಭವಿಸಿದ ಆತಂಕಗಳು, ಸವಾಲುಗಳು, ಅವುಗಳನ್ನು ನಿರ್ವಹಿಸಲು ತುಳಿದ ಹಾದಿಗಳು, ಅದರ ಪರಿಣಾಮ- ಇವೆಲ್ಲದರ ಕುರಿತ ಚಿಂತನೆ ಅತ್ಯವಶ್ಯ. ಡಾ. ಯು. ಆರ್‌. ಅನಂತಮೂರ್ತಿಗಳ ಋಜುವಾತು ಲೇಖನಗಳು- ಎಂದಿಗೂ ಸಲ್ಲುವಂತೆ ತಾತ್ವಿಕ ಗ್ರಹಿಕೆಯಿಂದ ಇಂದನ್ನು ಮರೆಸದ ರೀತಿಯಲ್ಲಿ-ಈ ಚಿಂತನೆಯನ್ನು ನಡೆಸುತ್ತಿವೆ, ನನ್ನಂಥವನನ್ನು ಚಿಂತನೆಗೆ ಪ್ರೇರೇಪಿಸಿವೆ. ನಾನು ಇತಿಹಾಸ, ಸಂಸ್ಕೃತಿ, ವರ್ತಮಾನ ಮುಂತಾದುವುಗಳ ಹವ್ಯಾಸೀ ವಿದ್ಯಾರ್ಥಿಯಷ್ಟೇ. ಆದ್ದರಿಂದ ನನ್ನೀ ಪ್ರತಿಕ್ರಿಯೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆ, ಅನುಮಾನ, ಇಬ್ಬಂದಿತನಗಳ ಮೂಲಕ ರೂಪಿಸಲೆತ್ನಿಸಿದ್ದೇನೆ. ಋಜುವಾತು ಅಂಕಣವಲ್ಲದೇ ಅವರ ಹಿಂದಿನ ಲೇಖನಗಳ ಜೊತೆಗೂ ಸಂವಾದಕ್ಕೆ ತೊಡಗಲೆತ್ನಿಸಿದ್ದೇನೆ. ಆದಷ್ಟೂ ಪ್ರತೀಕಗಳ ಮೂಲಕ ತಾತ್ವಿಕವಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ ಸಹಜವಾಗಿ ಒಂದು ಬಗೆಯ ಅತಿರೇಕವಿದೆ.

***

ಈ ಅಂಕಣದ ಕೇಂದ್ರದಂತಿರುವ - ಚರಿತ್ರೆಯನ್ನು ಬಗೆವ ಮೂರು ಪ್ರಾತಿನಿಧಿಕ ರೀತಿಗಳಾಗಿ ಬೇಂದ್ರೆ, ವಾಲ್ಟರ್‌ ಬೆಂಜಮಿನ್‌, ಅಡಿಗರನ್ನು ಗುರುತಿಸಿ ವಿಮರ್ಶಿಸುವ - ಲೇಖನದ ಒಟ್ಟು ಚಿಂತನೆ ನನ್ನ ಮನಸ್ಸಿನಲ್ಲಿ ಕೆಲ ಪಾತ್ರಗಳಾಗಿ ಪ್ರತಿಫಲನಗೊಂಡಿವೆ.

ಒಬ್ಬ ತಾಯಿ, ಒಬ್ಬ ಮಗ. ತಾಯಿ ಪರಂಪರೆಯ ಸೃಜನಶೀಲತೆಯ ಉತ್ತಮ ಪ್ರತಿನಿಧಿ. ದೇವರಲ್ಲಿ ಶರಣಾಗತಿ, ಕಾಲದ ನಿರಂತರತೆ, ಗಾಢವಾದ ಭಕ್ತಿ-ಶ್ರದೆ­ಗಳಲ್ಲಿ ಎಲ್ಲವನ್ನೂ ಮೀರುವುದು - ಆಕೆಗೆ ಸಹಜ. ಇತಿಹಾಸ ಗೊತ್ತಿಲ್ಲ, ಪುರಾಣ ಗೊತ್ತು. ಇತಿಹಾಸ ಅವಳಲ್ಲೇನೂ ಬಿಟ್ಟಿಲ್ಲ. ಆದರೆ, ಆಕೆಗೆ ಆ ಆಕ್ರಮಣದ ಅರಿವಿಲ್ಲ. ಅಥವಾ ಅದೊಂದು ನಾಟಕ. ಆಕೆ ಕೇಡಿಗೆ, ಕೊಳಕಿಗೆ ಮುಖ ತಿರುಗಿಸಿಲ್ಲ. ಅವಳಷ್ಟು ಅದೃಷ್ಟವಂತರಲ್ಲದ ಅವಳ ಹತ್ತಿರದ ಸಂಬಂಧಿಕರನೇಕರ ಅಪಾರ ಸಂಕಷ್ಟಗಳಿಗೆ, ದುರ್ಭರ ನೋವಿಗೆ ಸಹಜ ಸಂಬಂಧದ ಕಾರಣವಾಗಿಯೂ, ಮಾನವೀಯವಾಗಿಯೂ ಈಕೆ ಮಿಡಿಯುತ್ತಾಳೆ. ಆದರೆ ಈ ಅನುಭವ ಈಕೆಯ ಸೃಜನಶೀಲತೆಯನ್ನು ಕಡಿಮೆಯಾಗಿಸಿಲ್ಲ. ಶರಣಾಗತಿ, ಭಕ್ತಿಗಳೇ ಅದಕ್ಕೆ ಕಾರಣ. ಕ್ರೂರಿಗಳಲ್ಲದಿದ್ದರೂ ಪುರುಷ ಪ್ರಧಾನ ಸಮಾಜವನ್ನು ಮೀರುವ ಪ್ರತಿಭೆಯಿಲ್ಲದ ತನ್ನ ಗಂಡ, ಮಕ್ಕಳಿಂದಾಗುವ ಪರೋಕ್ಷ ಅನ್ಯಾಯಗಳನ್ನೂ ಸಹ ಈಕೆ ಅದೇ ರೀತಿಯಲ್ಲಿ ಮೀರುತ್ತಾಳೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಮ್ಮ ಸಂಬಂಧಿಕರನ್ನೂ ಜೀವಂತವಾಗಿ ಕಾಣಬಲ್ಲ, ಅವರ ಜೊತೆ ಮನುಷ್ಯರಂತೆ ವರ್ತಿಸಬಲ್ಲ, ಆ ಕಾರಣಕ್ಕಾಗೇ ಅವರಲ್ಲಿ ಜೀವ ಚಿಮ್ಮಿಸಬಲ್ಲ, ಕ್ಷಣಕ್ಕಾದರೂ ಅವರಿಗೆ ಸಾಂತ್ವನ ತರಬಲ್ಲ ಶಕ್ತಿಯಿದೆ. ದುಃಖವಾದಾಗ ತೀವ್ರವಾಗಿ ಅತ್ತು, ಮರು ಕ್ಷಣದಲ್ಲಿ ಒಂದೆರಡು ದೇವರ ನಾಮಗಳನ್ನು, ಪದಗಳನ್ನು ಹೇಳಿಕೊಂಡು, ದೇವರಿಗೆ ದೀಪ ಹಚ್ಚಿ, ಧ್ಯಾನ ಮಾಡಿ ಅದನ್ನು ಮೀರಬಲ್ಲಳು. ಪಕ್ಕದ ಮನೆಯ ಮುಸ್ಲಿಮರನ್ನು ಗಣಪತಿ ಪೂಜೆಗೆ ಆಹ್ವಾನಿಸಬಲ್ಲಳಾದರೂ, ಅವರ ರಮ್ಜಾನಿಗೆ ಹೋಗುವುದಿಲ್ಲ. ಅರಬ್‌ ಮುಸ್ಲಿಮರಿಂದ ಬಂದ ಕಾಫಿ ಈಕೆಗೆ ಉಪವಾಸದ ದಿವಸದ ಮಡಿ ಆಹಾರ. ಆದರೆ ಇದು ಅರಬ್‌ ಮುಸ್ಲಿಮರಿಂದ ಬಂತು ಎನ್ನುವುದನ್ನು ಎಂದಿಗೂ ಒಪ್ಪುವುದಿಲ್ಲ. ಇವಳೊಂದಿಗೆ ವಾದ ಸಾಧ್ಯವಿಲ್ಲ. ಕೋಪಬಂತೆಂದರೆ ಅಪಾರವಾದ ಕೊಂಕುಗಳಿಂದ ಎದುರಿರುವರ ಮನಸ್ಥೈರ್ಯವನ್ನು ನಾಶ ಮಾಡಿ, ಅವರನ್ನು ರಾಕ್ಷಸತ್ವಕ್ಕೆ ತಳ್ಳಬಲ್ಲಳು. ತಾನು ಮಾತ್ರ ರಾಕ್ಷಸಿಯಾಗುವುದಿಲ್ಲ. ಮರುಕ್ಷಣ ಅದನ್ನು ಮರೆತು, ಮೊದಲಿನಂತಾಗಬಲ್ಲಳು. ಪ್ರೀತಿಸಬಲ್ಲಳು. ತನ್ನ ಪ್ರೀತಿಯಲ್ಲಿ ಮಿಕ್ಕವರನ್ನು ಉಸಿರುಗಟ್ಟಿಸುವ, ತಾನೇ ನಡೆಸುವ ಆಕ್ರಮಣಗಳು ಇವಳ ಅರಿವಿಗೆ ಇನ್ನೂ ಬಂದಿಲ್ಲ. ವೈಚಾರಿಕವಾಗಿ ಯಾವುದನ್ನೂ ಗ್ರಹಿಸಲಾರಳು. ಅವಳಲ್ಲಿ ತನ್ನ ತಪ್ಪಿಗೆ ಅಪರಾಧಿಭಾವ ಸುಳಿವುದೇ ಇಲ್ಲ. ಪಶ್ಚಾತ್ತಾಪದಲ್ಲಿ ಅದನ್ನು ಸುಟ್ಟು ಮುನ್ನಡೆವವಳು. ತನ್ನ ಪರಂಪರೆಯ ಪ್ರತೀಕಗಳ ಮೂಲಕವೇ ಇವಳ ವ್ಯವಹಾರ. ಈ ತಾಯಿ ಪ್ರಾಯಶಃ ಭೂಮಿ. ಬೇಂದ್ರೆ ಪರಂಪರೆಯ ಪೂರ್ವಜಳೂ ಸಹ. ಏಕೆಂದರೆ ಇವಳು ಆಧುನಿಕತೆಯನ್ನು ಅರಗಿಸಿಕೊಂಡವಳಲ್ಲ, ಪ್ರಯತ್ನಿಸಿದವಳಲ್ಲ.

ಈಕೆಯ ಮಗ. ಬಾಲ್ಯದಲ್ಲಿ ತಾಯಿಯ ಪ್ರಪಂಚವನ್ನು ಅನುಭವಿಸಿ ವಿಹರಿಸಿ, ವ್ಯಕ್ತಿತ್ವವನ್ನು ಬೆಳೆಸಿಕೊಂಡವನಾದರೂ, ಅದೇ ಪ್ರಪಂಚದ ನರಕವನ್ನು, ತನ್ನ ತಾಯಿಯ ಉಸಿರುಗಟ್ಟಿಸುವ ಪ್ರೀತಿಯನ್ನು ಕಂಡು ಬಂಡೆದ್ದವನು, ವೈಚಾರಿಕನಾದವನು. ತನ್ನ ವೈಚಾರಿಕತೆಯಿಂದ ತನ್ನ ಸೃಜನಶೀಲತೆಗೆ ಕ್ರಮೇಣ ದೂರವಾಗುತ್ತಾ, ಆಧುನಿಕ ಪ್ರಪಂಚದಲ್ಲಿ alienationಗೆ ಒಳಗಾದವನು. ತಾಯಿಯಿಂದ ಒಂದಿಷ್ಟು ದೂರ ಗಳಿಸಿಕೊಂಡ ನಂತರ ತಾಯಿಯ ಸೃಜನಶೀಲತೆಯನ್ನು ಗ್ರಹಿಸಿದವನು. ವೈಚಾರಿಕತೆಯ ಹಾದಿಯಲ್ಲಿ ದೊಡ್ಡ ದೊಡ್ಡ ಗೋಡೆಗಳನ್ನು ಕಂಡವನು. ಆ ಗೋಡೆಗಳ ಮಧ್ಯೆ ರೌರವ ನರಕಗಳಲ್ಲಿ ಬದುಕುತ್ತಿರುವ ಮನುಷ್ಯರನ್ನು ಕಂಡವನು. ತಾಯಿಯ ಸೃಜನಶೀಲತೆ ಜ್ಞಾಪಕಕ್ಕೆ ತಂದುಕೊಳ್ಳುವವನು. ಆದರೆ, ಅದನ್ನು ತನ್ನಲ್ಲೇ access ಮಾಡುವುದಕ್ಕೆ ಸಾಧ್ಯವಾಗದೇ ತೊಳಲಾಡುತ್ತಿರುವವನು. ಅವಳ ಭಂಗಿ, ಭಂಗಿಗಳಲ್ಲೂ, ಮಾತುಗಳಲ್ಲೂ ಜೀವಂತಿಕೆಯನ್ನು ಹಿಂದೆಂದೂ ಕಾಣದಷ್ಟು ಈಗ ಕಾಣುತ್ತಿರುವವನು. ಅನೇಕ ಬಗೆಯ ಬಿರುಕುಗಳನ್ನು ಅನುಭವಿಸುತ್ತಿರುವವನು. ಆಧುನಿಕ ವೈಚಾರಿಕ ಹಾದಿಯಲ್ಲಿ ಕಂಡ ಮನುಷ್ಯನ ಅಧಃಪತನಕ್ಕೆ ದಿಗ್ಭ್ರಾಂತನಾಗಿ ನಿಂತವನು. ತನ್ನ ಕೈಯಲ್ಲೇನೂ ಸಾಧ್ಯವಾಗದ ಅಸಹಾಯಕತೆಯಿಂದ ಕೀಳರಿಮೆ ಬೆಳೆಸಿಕೊಂಡವನು. ಈತನಿಗೆ ಎಲ್ಲವೂ ಅರ್ಥವಾಗುತ್ತದೆ, ಆದರೆ ಏನೂ ಮಾಡಲಾರ. ಸದಾ ಅಪರಾಧಿಭಾವದಲ್ಲಿ ತೊಳಲಾಡುವವನು. ತಾನು ಕಂಡ ಸತ್ಯಗಳಿಂದ ಇವನ ಜೀವಂತಿಕೆಗೆ ಅದೆಷ್ಟು ಪೆಟ್ಟು ಬಿದ್ದಿದೆಯೆಂದರೆ ಇವನಿಗೆ ಪಶ್ಚಾತ್ತಾಪವೂ ಸಾಧ್ಯವಿಲ್ಲ. ಈತ ವಾಲ್ಟರ ಬೆಂಜಮಿನ್‌ನಂಥವನು.

ಈ ತಾಯಿಯನ್ನು ಒಳಗೊಂಡು, ಆಧುನಿಕತೆಯನ್ನೂ ಅರಗಿಸಿಕೊಳ್ಳುವ ಪ್ರಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡಿದ್ದ ಬೇಂದ್ರೆಗೆ ‘ಮೊದಲಗಿತ್ತಿ' ಪದ್ಯ ಸಾಧ್ಯವಾಗುತ್ತದೆ. ಈಕೆಯ ಮಗ- ವೈಚಾರಿಕತೆ ಮತ್ತು ಪರಂಪರೆಯನ್ನು ನಿರ್ವಹಿಸುವ ಅವನ ಪ್ರಯತ್ನಗಳ ಮೇಲೆ ಮತ್ತು ಅವನ ಜೀವನದ ಅನುಭವಗಳು ಅದೆಷ್ಟು ತೀವ್ರವಾಗಿರುತ್ತವೆ ಎನ್ನುವುದರ ಮೇಲೆ-ಅವನು ಅಡಿಗರ ಪರಂಪರೆಗೆ ಸಲ್ಲುತ್ತಾನೋ, ವಾಲ್ಟರ ಬೆಂಜಮಿನ್‌ನ ಪರಂಪರೆಗೆ ಸಲ್ಲುತ್ತಾನೋ ಎನ್ನುವುದು ಪ್ರಾಯಶಃ ನಿರ್ಧಾರವಾಗುತ್ತದೆ.

ಆದರೆ ಈ ತಾಯಿ ಅದೆಷ್ಟು ಕೌಟುಂಬಿಕ ಮತ್ತು ಸಾಮಾಜಿಕ ಒತ್ತಡಗಳನ್ನು ತನ್ನ ಅಭಿಜಾತ ಪ್ರತಿಭೆಯಿಂದಲೇ ಎದುರಿಸಬಲ್ಲಳು ಎನ್ನುವುದನ್ನು ಹೇಳಲಾಗುವುದಿಲ್ಲ. ಅವಳಷ್ಟೆಯೇ ಪ್ರತಿಭಾನ್ವಿತರಾದ ಅವಳ ಸಂಬಂಧಿಕರನೇಕ ಸ್ತ್ರೀಯರ ಜೀವನ ನಿರ್ನಾಮವಾಗಿ ಹೋಗಿದೆ. ಅವಳ ಓರಗೆಯ ಯಾರ ಮನೆಯಲ್ಲೂ ಈ ಮಗನ ಹಾಗೆ ವೈಚಾರಿಕರಿಲ್ಲ. ಅವನ ವೈಚಾರಿಕತೆ ತಾಯಿಯಿಂದ ಪೋಷಿತವಾದ್ದಲ್ಲ, ತಂದೆಯಿಂದ ದೊರೆತ ಸ್ವಾತಂತ್ರ್ಯದ ಪರಿಣಾಮ. ಬೆಂಜಮಿನ್‌ನನ್ನು ಸದಾ ಅನುಭವಿಸುವ ಈತ ತನ್ನ ಆವರಣದಲ್ಲಿ ಬೇಂದ್ರೆ, ಅಡಿಗರನ್ನು ಕಂಡರೆ ಗುರುತಿಸಬಲ್ಲವನು. ಅವಳೆದುರಿಸುತ್ತಿರುವ ಈ ಎಲ್ಲ ಒತ್ತಡಗಳನ್ನೂ, ಸ್ವತಃ ತನ್ನಿಂದಲೇ ನಡೆಯುವ ದೌರ್ಜನ್ಯಗಳನ್ನೂ ತಾಯಿಗಿಂತ ಹೆಚ್ಚಾಗಿ ಶೋಧಿಸಿಕೊಂಡು ಅರಿತಿರುವವನು ಈ ಮಗ. ಆ ಕಾರಣಕ್ಕಾಗೇ ತನ್ನ ಸುತ್ತಣ ಆವರಣದಲ್ಲಿ ಒಂದು ವಿಶಿಷ್ಟ ಪರಿಸರಕ್ಕೆ ಕಾರಣನಾದವನು. ಆದ್ದರಿಂದ ತಾಯಿಯ ಪಾರಂಪರಿಕ ಸೃಜನಶೀಲತೆ ಮಗನ ವೈಚಾರಿಕತೆಯಿಂದಲೇ ಸಂರಕ್ಷಣೆಗೊಂಡು, ಪೋಷಣೆಗೆ ಒಳಪಡುತ್ತಿರುವುದು ಸಾಧ್ಯವಿದೆ.

ಈ ಸಂಕೀರ್ಣ ಪ್ರಕ್ರಿಯೆಯ ಒಂದು ದಿಕ್ಕಿನ ಅತಿರೇಕದ ಹಂತದಲ್ಲಾಗಬಹುದಾದ ವಾಲ್ಟರ ಬೆಂಜಮಿನ್ನನ ಆತ್ಮಹತ್ಯೆಯು- ಮುಂದಣ ಬೇಂದ್ರೆ, ಅಡಿಗರನ್ನು ಸಂರಕ್ಷಿಸುವುದಕ್ಕೆ ಪೂರಕವಾದ ಕ್ರಿಯೆಯಾಗಿ, ಒಂದು ಪ್ರತಿಮೆಯಾಗಿ ನನಗೆ ಕಾಣುತ್ತಿದೆ. ಇದು ಮತ್ತೊಂದು ಬಗೆಯ ಕೆರೆಗೆ ಹಾರ. ಮತ್ತೊಂದು ದಿಕ್ಕಿನಲ್ಲಿ ಇದನ್ನು ವಿಸ್ತರಿಸಿ-ಭೂಮಿ ತಾಯಿಯ ಮೂರು ಮಕ್ಕಳಾಗಿ ಬೇಂದ್ರೆ, ಬೆಂಜಮಿನ್‌ ಮತ್ತು ಅಡಿಗರನ್ನು ಪರಿಗಣಿಸಿ ನೋಡುವುದಾದರೆ-ಬೇಂದ್ರೆಯವರು ಬರೆಯಬಹುದಾದ ಕವನ ಅಥವಾ ಅದೇ ಪ್ರತಿಭೆಯ ಕಥೆಗಾರ ಬರೆಯಬಹುದಾಗಿದ್ದ ಕಥೆ ಯಾವ ತರಹದ್ದು ಎನ್ನುವುದನ್ನು ಕಲ್ಪಿಸಲೆತ್ನಿಸುತ್ತಿದ್ದೇನೆ.
ಮುಂದುವರೆಯುತ್ತದೆ...