ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೧
[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]
ಇವತ್ತಿನ ನಮ್ಮ ಆತಂಕಗಳೆಂದರೆ - ಸಾಮಾಜಿಕ ಸ್ತರದಲ್ಲಿ ಮತೀಯತೆ ಮತ್ತು ಜಾಗತೀಕರಣ, ವೈಯಕ್ತಿಕ ಸ್ತರದಲ್ಲಿ ಯಾವುದೂ ಆಳವಾಗಿ ಅನುಭವಕ್ಕೆ ವಿಶ್ಲೇಷಣೆಗೆ ಸಿಗುತ್ತಿಲ್ಲವೇನೋ ಎನ್ನುವ ಸ್ಥಿತಿ. ಬೇರು ಸತ್ತ ಮರವನ್ನೆತ್ತಿ ಹಿಡಿದು ಬಲ್ಬುಗಳನ್ನು ಜೋಡಿಸುವುದು, ಜೀವಂತ ಮರವಾಗಲಿ, ಸತ್ತ ಮರವಾಗಲಿ ತಮಗೆ ಅನುಕೂಲವೆಂದಾದರೆ ಬಲ್ಬುಗಳನ್ನು ಜೋಡಿಸಿಯೇ ತೀರುವುದು, ಮಾರುವುದು ತೀವ್ರ ವೇಗ ಪಡೆದಿವೆ. ಇವೆರಡರ ಮಿಲನಕ್ರಿಯೆಯಲ್ಲಿ ಹುಟ್ಟುತ್ತಿರುವ ಪೀಳಿಗೆ ಇವೆರಡನ್ನೂ ಹುಟ್ಟುಕುರುಡಿನ, ಕುರುಡಿನ ಅರಿವಿರದ ತೀವ್ರತೆಯಲ್ಲಿ ಮುಂದುವರೆಸುತ್ತಿದೆ. ಈ ಬಲ್ಬಿನ ಪ್ರಖರತೆಯಲ್ಲಿ ಜೀವಂತವಿರುವ ಮರಗಳೂ ಬೇಗನೆ ಸಾಯುತ್ತಿವೆ. ಮತ್ತೊಂದು ಕಡೆಯಲ್ಲಿ ಬಲ್ಬುಗಳ ಸಹಾಯವಿಲ್ಲದೆ ಯಾವ ಮರವನ್ನೂ ಅನುಭವಿಸುವುದು, ಪುಷ್ಟಿಕರ, ರುಚಿಕರ ಹಣ್ಣು ಕಾಣುವುದು ಸಾಧ್ಯವಾಗದ ಕುರುಡಿದೆ. ಮರದ ನೆರಳಿನ ತಂಪಿನಲ್ಲಿ ವಿಶ್ರಮಿಸಬಹುದು, ನೆಮ್ಮದಿಯ ನಿದ್ರೆ ಅನುಭವಿಸಬಹುದು ಎನ್ನುವುದು ಮರೆತಿದೆ. ಸುಂದರವಾದ ಬಲ್ಬಿನ ಕೆಳಗೆ ವಿಷಪೂರಿತ ಹಣ್ಣಿದ್ದರೂ ತಿನ್ನುವುದಕ್ಕೆ ಸಿದ್ಧವಿದೆ. ಒಟ್ಟು ಪ್ರಕ್ರಿಯೆ ಆದಷ್ಟೂ ಮರಗಳನ್ನು ಸಾಯಿಸಿ, ಆದಷ್ಟೂ ಬಲ್ಬುಗಳನ್ನು ಉತ್ಪಾದಿಸಿ, ಜೀವಂತ ಮರಗಳನ್ನು ಸ್ಮೃತಿಯಿಂದಲೇ ಕಳೆದುಕೊಳ್ಳುವ ನಾಗಾಲೋಟವಾಗಿದೆ.
ಇವುಗಳ ವರ್ತಮಾನವನ್ನು ಗ್ರಹಿಸುವುದಕ್ಕೆ, ಆ ಭೂತದಿಂದ ಈ ವರ್ತಮಾನಕ್ಕೆ ತಲುಪಿದ ಬಗೆ, ನಡೆದು ಬಂದ ದಾರಿಯಲ್ಲಿ ಅನುಭವಿಸಿದ ಆತಂಕಗಳು, ಸವಾಲುಗಳು, ಅವುಗಳನ್ನು ನಿರ್ವಹಿಸಲು ತುಳಿದ ಹಾದಿಗಳು, ಅದರ ಪರಿಣಾಮ- ಇವೆಲ್ಲದರ ಕುರಿತ ಚಿಂತನೆ ಅತ್ಯವಶ್ಯ. ಡಾ. ಯು. ಆರ್. ಅನಂತಮೂರ್ತಿಗಳ ಋಜುವಾತು ಲೇಖನಗಳು- ಎಂದಿಗೂ ಸಲ್ಲುವಂತೆ ತಾತ್ವಿಕ ಗ್ರಹಿಕೆಯಿಂದ ಇಂದನ್ನು ಮರೆಸದ ರೀತಿಯಲ್ಲಿ-ಈ ಚಿಂತನೆಯನ್ನು ನಡೆಸುತ್ತಿವೆ, ನನ್ನಂಥವನನ್ನು ಚಿಂತನೆಗೆ ಪ್ರೇರೇಪಿಸಿವೆ. ನಾನು ಇತಿಹಾಸ, ಸಂಸ್ಕೃತಿ, ವರ್ತಮಾನ ಮುಂತಾದುವುಗಳ ಹವ್ಯಾಸೀ ವಿದ್ಯಾರ್ಥಿಯಷ್ಟೇ. ಆದ್ದರಿಂದ ನನ್ನೀ ಪ್ರತಿಕ್ರಿಯೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆ, ಅನುಮಾನ, ಇಬ್ಬಂದಿತನಗಳ ಮೂಲಕ ರೂಪಿಸಲೆತ್ನಿಸಿದ್ದೇನೆ. ಋಜುವಾತು ಅಂಕಣವಲ್ಲದೇ ಅವರ ಹಿಂದಿನ ಲೇಖನಗಳ ಜೊತೆಗೂ ಸಂವಾದಕ್ಕೆ ತೊಡಗಲೆತ್ನಿಸಿದ್ದೇನೆ. ಆದಷ್ಟೂ ಪ್ರತೀಕಗಳ ಮೂಲಕ ತಾತ್ವಿಕವಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ ಸಹಜವಾಗಿ ಒಂದು ಬಗೆಯ ಅತಿರೇಕವಿದೆ.
***
ಈ ಅಂಕಣದ ಕೇಂದ್ರದಂತಿರುವ - ಚರಿತ್ರೆಯನ್ನು ಬಗೆವ ಮೂರು ಪ್ರಾತಿನಿಧಿಕ ರೀತಿಗಳಾಗಿ ಬೇಂದ್ರೆ, ವಾಲ್ಟರ್ ಬೆಂಜಮಿನ್, ಅಡಿಗರನ್ನು ಗುರುತಿಸಿ ವಿಮರ್ಶಿಸುವ - ಲೇಖನದ ಒಟ್ಟು ಚಿಂತನೆ ನನ್ನ ಮನಸ್ಸಿನಲ್ಲಿ ಕೆಲ ಪಾತ್ರಗಳಾಗಿ ಪ್ರತಿಫಲನಗೊಂಡಿವೆ.
ಒಬ್ಬ ತಾಯಿ, ಒಬ್ಬ ಮಗ. ತಾಯಿ ಪರಂಪರೆಯ ಸೃಜನಶೀಲತೆಯ ಉತ್ತಮ ಪ್ರತಿನಿಧಿ. ದೇವರಲ್ಲಿ ಶರಣಾಗತಿ, ಕಾಲದ ನಿರಂತರತೆ, ಗಾಢವಾದ ಭಕ್ತಿ-ಶ್ರದೆಗಳಲ್ಲಿ ಎಲ್ಲವನ್ನೂ ಮೀರುವುದು - ಆಕೆಗೆ ಸಹಜ. ಇತಿಹಾಸ ಗೊತ್ತಿಲ್ಲ, ಪುರಾಣ ಗೊತ್ತು. ಇತಿಹಾಸ ಅವಳಲ್ಲೇನೂ ಬಿಟ್ಟಿಲ್ಲ. ಆದರೆ, ಆಕೆಗೆ ಆ ಆಕ್ರಮಣದ ಅರಿವಿಲ್ಲ. ಅಥವಾ ಅದೊಂದು ನಾಟಕ. ಆಕೆ ಕೇಡಿಗೆ, ಕೊಳಕಿಗೆ ಮುಖ ತಿರುಗಿಸಿಲ್ಲ. ಅವಳಷ್ಟು ಅದೃಷ್ಟವಂತರಲ್ಲದ ಅವಳ ಹತ್ತಿರದ ಸಂಬಂಧಿಕರನೇಕರ ಅಪಾರ ಸಂಕಷ್ಟಗಳಿಗೆ, ದುರ್ಭರ ನೋವಿಗೆ ಸಹಜ ಸಂಬಂಧದ ಕಾರಣವಾಗಿಯೂ, ಮಾನವೀಯವಾಗಿಯೂ ಈಕೆ ಮಿಡಿಯುತ್ತಾಳೆ. ಆದರೆ ಈ ಅನುಭವ ಈಕೆಯ ಸೃಜನಶೀಲತೆಯನ್ನು ಕಡಿಮೆಯಾಗಿಸಿಲ್ಲ. ಶರಣಾಗತಿ, ಭಕ್ತಿಗಳೇ ಅದಕ್ಕೆ ಕಾರಣ. ಕ್ರೂರಿಗಳಲ್ಲದಿದ್ದರೂ ಪುರುಷ ಪ್ರಧಾನ ಸಮಾಜವನ್ನು ಮೀರುವ ಪ್ರತಿಭೆಯಿಲ್ಲದ ತನ್ನ ಗಂಡ, ಮಕ್ಕಳಿಂದಾಗುವ ಪರೋಕ್ಷ ಅನ್ಯಾಯಗಳನ್ನೂ ಸಹ ಈಕೆ ಅದೇ ರೀತಿಯಲ್ಲಿ ಮೀರುತ್ತಾಳೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಮ್ಮ ಸಂಬಂಧಿಕರನ್ನೂ ಜೀವಂತವಾಗಿ ಕಾಣಬಲ್ಲ, ಅವರ ಜೊತೆ ಮನುಷ್ಯರಂತೆ ವರ್ತಿಸಬಲ್ಲ, ಆ ಕಾರಣಕ್ಕಾಗೇ ಅವರಲ್ಲಿ ಜೀವ ಚಿಮ್ಮಿಸಬಲ್ಲ, ಕ್ಷಣಕ್ಕಾದರೂ ಅವರಿಗೆ ಸಾಂತ್ವನ ತರಬಲ್ಲ ಶಕ್ತಿಯಿದೆ. ದುಃಖವಾದಾಗ ತೀವ್ರವಾಗಿ ಅತ್ತು, ಮರು ಕ್ಷಣದಲ್ಲಿ ಒಂದೆರಡು ದೇವರ ನಾಮಗಳನ್ನು, ಪದಗಳನ್ನು ಹೇಳಿಕೊಂಡು, ದೇವರಿಗೆ ದೀಪ ಹಚ್ಚಿ, ಧ್ಯಾನ ಮಾಡಿ ಅದನ್ನು ಮೀರಬಲ್ಲಳು. ಪಕ್ಕದ ಮನೆಯ ಮುಸ್ಲಿಮರನ್ನು ಗಣಪತಿ ಪೂಜೆಗೆ ಆಹ್ವಾನಿಸಬಲ್ಲಳಾದರೂ, ಅವರ ರಮ್ಜಾನಿಗೆ ಹೋಗುವುದಿಲ್ಲ. ಅರಬ್ ಮುಸ್ಲಿಮರಿಂದ ಬಂದ ಕಾಫಿ ಈಕೆಗೆ ಉಪವಾಸದ ದಿವಸದ ಮಡಿ ಆಹಾರ. ಆದರೆ ಇದು ಅರಬ್ ಮುಸ್ಲಿಮರಿಂದ ಬಂತು ಎನ್ನುವುದನ್ನು ಎಂದಿಗೂ ಒಪ್ಪುವುದಿಲ್ಲ. ಇವಳೊಂದಿಗೆ ವಾದ ಸಾಧ್ಯವಿಲ್ಲ. ಕೋಪಬಂತೆಂದರೆ ಅಪಾರವಾದ ಕೊಂಕುಗಳಿಂದ ಎದುರಿರುವರ ಮನಸ್ಥೈರ್ಯವನ್ನು ನಾಶ ಮಾಡಿ, ಅವರನ್ನು ರಾಕ್ಷಸತ್ವಕ್ಕೆ ತಳ್ಳಬಲ್ಲಳು. ತಾನು ಮಾತ್ರ ರಾಕ್ಷಸಿಯಾಗುವುದಿಲ್ಲ. ಮರುಕ್ಷಣ ಅದನ್ನು ಮರೆತು, ಮೊದಲಿನಂತಾಗಬಲ್ಲಳು. ಪ್ರೀತಿಸಬಲ್ಲಳು. ತನ್ನ ಪ್ರೀತಿಯಲ್ಲಿ ಮಿಕ್ಕವರನ್ನು ಉಸಿರುಗಟ್ಟಿಸುವ, ತಾನೇ ನಡೆಸುವ ಆಕ್ರಮಣಗಳು ಇವಳ ಅರಿವಿಗೆ ಇನ್ನೂ ಬಂದಿಲ್ಲ. ವೈಚಾರಿಕವಾಗಿ ಯಾವುದನ್ನೂ ಗ್ರಹಿಸಲಾರಳು. ಅವಳಲ್ಲಿ ತನ್ನ ತಪ್ಪಿಗೆ ಅಪರಾಧಿಭಾವ ಸುಳಿವುದೇ ಇಲ್ಲ. ಪಶ್ಚಾತ್ತಾಪದಲ್ಲಿ ಅದನ್ನು ಸುಟ್ಟು ಮುನ್ನಡೆವವಳು. ತನ್ನ ಪರಂಪರೆಯ ಪ್ರತೀಕಗಳ ಮೂಲಕವೇ ಇವಳ ವ್ಯವಹಾರ. ಈ ತಾಯಿ ಪ್ರಾಯಶಃ ಭೂಮಿ. ಬೇಂದ್ರೆ ಪರಂಪರೆಯ ಪೂರ್ವಜಳೂ ಸಹ. ಏಕೆಂದರೆ ಇವಳು ಆಧುನಿಕತೆಯನ್ನು ಅರಗಿಸಿಕೊಂಡವಳಲ್ಲ, ಪ್ರಯತ್ನಿಸಿದವಳಲ್ಲ.
ಈಕೆಯ ಮಗ. ಬಾಲ್ಯದಲ್ಲಿ ತಾಯಿಯ ಪ್ರಪಂಚವನ್ನು ಅನುಭವಿಸಿ ವಿಹರಿಸಿ, ವ್ಯಕ್ತಿತ್ವವನ್ನು ಬೆಳೆಸಿಕೊಂಡವನಾದರೂ, ಅದೇ ಪ್ರಪಂಚದ ನರಕವನ್ನು, ತನ್ನ ತಾಯಿಯ ಉಸಿರುಗಟ್ಟಿಸುವ ಪ್ರೀತಿಯನ್ನು ಕಂಡು ಬಂಡೆದ್ದವನು, ವೈಚಾರಿಕನಾದವನು. ತನ್ನ ವೈಚಾರಿಕತೆಯಿಂದ ತನ್ನ ಸೃಜನಶೀಲತೆಗೆ ಕ್ರಮೇಣ ದೂರವಾಗುತ್ತಾ, ಆಧುನಿಕ ಪ್ರಪಂಚದಲ್ಲಿ alienationಗೆ ಒಳಗಾದವನು. ತಾಯಿಯಿಂದ ಒಂದಿಷ್ಟು ದೂರ ಗಳಿಸಿಕೊಂಡ ನಂತರ ತಾಯಿಯ ಸೃಜನಶೀಲತೆಯನ್ನು ಗ್ರಹಿಸಿದವನು. ವೈಚಾರಿಕತೆಯ ಹಾದಿಯಲ್ಲಿ ದೊಡ್ಡ ದೊಡ್ಡ ಗೋಡೆಗಳನ್ನು ಕಂಡವನು. ಆ ಗೋಡೆಗಳ ಮಧ್ಯೆ ರೌರವ ನರಕಗಳಲ್ಲಿ ಬದುಕುತ್ತಿರುವ ಮನುಷ್ಯರನ್ನು ಕಂಡವನು. ತಾಯಿಯ ಸೃಜನಶೀಲತೆ ಜ್ಞಾಪಕಕ್ಕೆ ತಂದುಕೊಳ್ಳುವವನು. ಆದರೆ, ಅದನ್ನು ತನ್ನಲ್ಲೇ access ಮಾಡುವುದಕ್ಕೆ ಸಾಧ್ಯವಾಗದೇ ತೊಳಲಾಡುತ್ತಿರುವವನು. ಅವಳ ಭಂಗಿ, ಭಂಗಿಗಳಲ್ಲೂ, ಮಾತುಗಳಲ್ಲೂ ಜೀವಂತಿಕೆಯನ್ನು ಹಿಂದೆಂದೂ ಕಾಣದಷ್ಟು ಈಗ ಕಾಣುತ್ತಿರುವವನು. ಅನೇಕ ಬಗೆಯ ಬಿರುಕುಗಳನ್ನು ಅನುಭವಿಸುತ್ತಿರುವವನು. ಆಧುನಿಕ ವೈಚಾರಿಕ ಹಾದಿಯಲ್ಲಿ ಕಂಡ ಮನುಷ್ಯನ ಅಧಃಪತನಕ್ಕೆ ದಿಗ್ಭ್ರಾಂತನಾಗಿ ನಿಂತವನು. ತನ್ನ ಕೈಯಲ್ಲೇನೂ ಸಾಧ್ಯವಾಗದ ಅಸಹಾಯಕತೆಯಿಂದ ಕೀಳರಿಮೆ ಬೆಳೆಸಿಕೊಂಡವನು. ಈತನಿಗೆ ಎಲ್ಲವೂ ಅರ್ಥವಾಗುತ್ತದೆ, ಆದರೆ ಏನೂ ಮಾಡಲಾರ. ಸದಾ ಅಪರಾಧಿಭಾವದಲ್ಲಿ ತೊಳಲಾಡುವವನು. ತಾನು ಕಂಡ ಸತ್ಯಗಳಿಂದ ಇವನ ಜೀವಂತಿಕೆಗೆ ಅದೆಷ್ಟು ಪೆಟ್ಟು ಬಿದ್ದಿದೆಯೆಂದರೆ ಇವನಿಗೆ ಪಶ್ಚಾತ್ತಾಪವೂ ಸಾಧ್ಯವಿಲ್ಲ. ಈತ ವಾಲ್ಟರ ಬೆಂಜಮಿನ್‌ನಂಥವನು.
ಈ ತಾಯಿಯನ್ನು ಒಳಗೊಂಡು, ಆಧುನಿಕತೆಯನ್ನೂ ಅರಗಿಸಿಕೊಳ್ಳುವ ಪ್ರಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡಿದ್ದ ಬೇಂದ್ರೆಗೆ ‘ಮೊದಲಗಿತ್ತಿ' ಪದ್ಯ ಸಾಧ್ಯವಾಗುತ್ತದೆ. ಈಕೆಯ ಮಗ- ವೈಚಾರಿಕತೆ ಮತ್ತು ಪರಂಪರೆಯನ್ನು ನಿರ್ವಹಿಸುವ ಅವನ ಪ್ರಯತ್ನಗಳ ಮೇಲೆ ಮತ್ತು ಅವನ ಜೀವನದ ಅನುಭವಗಳು ಅದೆಷ್ಟು ತೀವ್ರವಾಗಿರುತ್ತವೆ ಎನ್ನುವುದರ ಮೇಲೆ-ಅವನು ಅಡಿಗರ ಪರಂಪರೆಗೆ ಸಲ್ಲುತ್ತಾನೋ, ವಾಲ್ಟರ ಬೆಂಜಮಿನ್‌ನ ಪರಂಪರೆಗೆ ಸಲ್ಲುತ್ತಾನೋ ಎನ್ನುವುದು ಪ್ರಾಯಶಃ ನಿರ್ಧಾರವಾಗುತ್ತದೆ.
ಆದರೆ ಈ ತಾಯಿ ಅದೆಷ್ಟು ಕೌಟುಂಬಿಕ ಮತ್ತು ಸಾಮಾಜಿಕ ಒತ್ತಡಗಳನ್ನು ತನ್ನ ಅಭಿಜಾತ ಪ್ರತಿಭೆಯಿಂದಲೇ ಎದುರಿಸಬಲ್ಲಳು ಎನ್ನುವುದನ್ನು ಹೇಳಲಾಗುವುದಿಲ್ಲ. ಅವಳಷ್ಟೆಯೇ ಪ್ರತಿಭಾನ್ವಿತರಾದ ಅವಳ ಸಂಬಂಧಿಕರನೇಕ ಸ್ತ್ರೀಯರ ಜೀವನ ನಿರ್ನಾಮವಾಗಿ ಹೋಗಿದೆ. ಅವಳ ಓರಗೆಯ ಯಾರ ಮನೆಯಲ್ಲೂ ಈ ಮಗನ ಹಾಗೆ ವೈಚಾರಿಕರಿಲ್ಲ. ಅವನ ವೈಚಾರಿಕತೆ ತಾಯಿಯಿಂದ ಪೋಷಿತವಾದ್ದಲ್ಲ, ತಂದೆಯಿಂದ ದೊರೆತ ಸ್ವಾತಂತ್ರ್ಯದ ಪರಿಣಾಮ. ಬೆಂಜಮಿನ್‌ನನ್ನು ಸದಾ ಅನುಭವಿಸುವ ಈತ ತನ್ನ ಆವರಣದಲ್ಲಿ ಬೇಂದ್ರೆ, ಅಡಿಗರನ್ನು ಕಂಡರೆ ಗುರುತಿಸಬಲ್ಲವನು. ಅವಳೆದುರಿಸುತ್ತಿರುವ ಈ ಎಲ್ಲ ಒತ್ತಡಗಳನ್ನೂ, ಸ್ವತಃ ತನ್ನಿಂದಲೇ ನಡೆಯುವ ದೌರ್ಜನ್ಯಗಳನ್ನೂ ತಾಯಿಗಿಂತ ಹೆಚ್ಚಾಗಿ ಶೋಧಿಸಿಕೊಂಡು ಅರಿತಿರುವವನು ಈ ಮಗ. ಆ ಕಾರಣಕ್ಕಾಗೇ ತನ್ನ ಸುತ್ತಣ ಆವರಣದಲ್ಲಿ ಒಂದು ವಿಶಿಷ್ಟ ಪರಿಸರಕ್ಕೆ ಕಾರಣನಾದವನು. ಆದ್ದರಿಂದ ತಾಯಿಯ ಪಾರಂಪರಿಕ ಸೃಜನಶೀಲತೆ ಮಗನ ವೈಚಾರಿಕತೆಯಿಂದಲೇ ಸಂರಕ್ಷಣೆಗೊಂಡು, ಪೋಷಣೆಗೆ ಒಳಪಡುತ್ತಿರುವುದು ಸಾಧ್ಯವಿದೆ.
ಈ ಸಂಕೀರ್ಣ ಪ್ರಕ್ರಿಯೆಯ ಒಂದು ದಿಕ್ಕಿನ ಅತಿರೇಕದ ಹಂತದಲ್ಲಾಗಬಹುದಾದ ವಾಲ್ಟರ ಬೆಂಜಮಿನ್ನನ ಆತ್ಮಹತ್ಯೆಯು- ಮುಂದಣ ಬೇಂದ್ರೆ, ಅಡಿಗರನ್ನು ಸಂರಕ್ಷಿಸುವುದಕ್ಕೆ ಪೂರಕವಾದ ಕ್ರಿಯೆಯಾಗಿ, ಒಂದು ಪ್ರತಿಮೆಯಾಗಿ ನನಗೆ ಕಾಣುತ್ತಿದೆ. ಇದು ಮತ್ತೊಂದು ಬಗೆಯ ಕೆರೆಗೆ ಹಾರ. ಮತ್ತೊಂದು ದಿಕ್ಕಿನಲ್ಲಿ ಇದನ್ನು ವಿಸ್ತರಿಸಿ-ಭೂಮಿ ತಾಯಿಯ ಮೂರು ಮಕ್ಕಳಾಗಿ ಬೇಂದ್ರೆ, ಬೆಂಜಮಿನ್ ಮತ್ತು ಅಡಿಗರನ್ನು ಪರಿಗಣಿಸಿ ನೋಡುವುದಾದರೆ-ಬೇಂದ್ರೆಯವರು ಬರೆಯಬಹುದಾದ ಕವನ ಅಥವಾ ಅದೇ ಪ್ರತಿಭೆಯ ಕಥೆಗಾರ ಬರೆಯಬಹುದಾಗಿದ್ದ ಕಥೆ ಯಾವ ತರಹದ್ದು ಎನ್ನುವುದನ್ನು ಕಲ್ಪಿಸಲೆತ್ನಿಸುತ್ತಿದ್ದೇನೆ.

ಮುಂದುವರೆಯುತ್ತದೆ...
0 Comments:
Post a Comment
<< Home