ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Tuesday, May 30, 2006

ಕಾಸರವಳ್ಳಿಯವರ ಚಿತ್ರ ದ್ವೀಪ



ಕಾಸರವಳ್ಳಿಯವರ 'ಮೂರು ದಾರಿಗಳು' ಬಿಟ್ಟು ಮಿಕ್ಕೆಲ್ಲಾ ಚಿತ್ರಗಳನ್ನೂ ನೋಡಿದ್ದೇನೆ. ಅಚ್ಚುಮೆಚ್ಚಿನ ಸಿನೆಮಾವೆಂದರೆ 'ತಾಯಿ ಸಾಹೇಬ'. ಅನೇಕ ಕಾರಣಗಳಿಗೆ 'ಬಣ್ಣದ ವೇಷ' ಮತ್ತು 'ಘಟಶ್ರಾದ್ಧ' ನನಗೆ ಬಹಳ ಇಷ್ಟ. ಆದರೆ ಮೊದಲು ಏನನ್ನಾದರೂ ಬರೆದದ್ದು ಅವರ 'ದ್ವೀಪ' ಚಿತ್ರದ ಬಗ್ಗೆ. ಇದು ಮೊದಲು ಕನ್ನಡಸಾಹಿತ್ಯ.ಕಾಂ-ನಲ್ಲಿ ಪ್ರಕಟವಾಗಿತ್ತು. ಅದನ್ನೇ ಒಂದೆರಡು ಕಡೆ ತಿದ್ದಿದ್ದೇನೆ. ಮುಖ್ಯವಾಗಿ, ಈ ಚಿತ್ರದ ಕುರಿತು ನನ್ನ ವಿಚಾರ ಈಗ ಬದಲಾಗಿದೆ. ಈ ಕೆಳಗೆ ಬರೆದಿರುವುದು ನನಗೇ ಹೆಚ್ಚು ಪೂರ್ವಾಗ್ರಹಪೀಡಿತವಾಗಿ, ಸಿನೆಮಾ ಎನ್ನುವ ಕಲಾಮಾಧ್ಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲದ ಸಾಮಾನ್ಯನೊಬ್ಬನ ಪ್ರತಿಕ್ರಿಯೆಯಾಗಿ ಕಾಣುತ್ತಿದೆ. 'ದ್ವೀಪ'-ದ ಕಾವ್ಯಾತ್ಮಕತೆ ನನ್ನನ್ನು ಅಷ್ಟಾಗಿ ತಲುಪಿಲ್ಲವೆನ್ನಿಸಿತ್ತದೆ. ಸ್ನೇಹಿತರೊಬ್ಬರ ಜೊತೆಗಿನ ಚರ್ಚೆ ದ್ವೀಪದ ಕುರಿತು ಇನ್ನೊಮ್ಮೆ ಬರೆಯುವಂತೆ ಪ್ರೇರೇಪಿಸಿದೆ. ಅದನ್ನು ಮುಂದೆ ಯಾವಾಗಲಾದರೂ ಕೊಡುತ್ತೇನೆ. ಕಾಸರವಳ್ಳಿಯವರು ತಮ್ಮ ಒಂದು ಸಂದರ್ಶನದಲ್ಲಿ 'ಫ್ರೇಮುಗಳನ್ನಷ್ಟೇ ನೋಡಿ ಬರೆಯುವುದು ಒಂದು ವಿಮರ್ಶೆಯಾಗಲಾರದು' ಎಂದಿದ್ದರು. ಆ ಬಗೆಯ ಕೆಲ ತಪ್ಪುಗಳು ಇಲ್ಲೂ ಆಗಿವೆ, ಅಷ್ಟೇ ಅಲ್ಲದೆ ಕೆಲ ತಪ್ಪುಗ್ರಹಿಕೆಗಳೂ ಇವೆ. ಮಳೆಯ ಸಾಂಕೇತಿಕತೆಯನ್ನೇ ನನ್ನೆ ಬರಹ ನಿರ್ಲಕ್ಷಿಸಿದೆ. ಆದರೆ, ಈ ಸದ್ಯಕ್ಕೆ, ದ್ವೀಪವನ್ನು ನೋಡಿದ ಮೊದಲ ದಿನಗಳಲ್ಲಿ, ನನ್ನ ಆಲೋಚನೆ ಹೇಗಿತ್ತು ಎನ್ನುವುದನ್ನು ದಾಖಲಿಸುತ್ತಿದ್ದೇನೆ. ಅಷ್ಟೇ ಅಲ್ಲದೇ, ನನ್ನಂತೆ ಅನೇಕರಿಗೆ ಹೀಗನ್ನಿಸಿದ್ದು ನಿಜ. ಮತ್ತು ಈ ಪೂರ್ವಾಗ್ರಹಪೀಡಿತತೆಗೆ ನಮ್ಮ ವರ್ತಮಾನದ ವಿದ್ಯಮಾನಗಳೂ ಕಾರಣ.

ನಾ. ಡಿಸೋಜರ 'ದ್ವೀಪ' -ದ ಕಥೆಯನ್ನಾಧರಿಸಿದೆ ಈ ಚಿತ್ರ. ಮೂಲ ಕಥೆಯನ್ನು ಓದಿಲ್ಲದ ನನಗೆ ಚಿತ್ರದ ನೋಡಿದ ಬಳಿಕ ಅನ್ನಿಸಿದ್ದಿಷ್ಟು. ಸೀತಾ ಪರ್ವತವೆಂಬ ದ್ವೀಪವೊಂದರಲ್ಲಿ ನಾಗಿ, ಅವಳ ಮಾವ ದುಗ್ಗಜ್ಜ ಮತ್ತು ಗಂಡ ಗಣಪ ವಾಸವಾಗಿದ್ದಾರೆ. ಮೂಲತಃ ಬೇಸಾಯಗಾರರು, ಭೂತದೈವವೊಂದರ ಆರಾಧಕರೂ, ಪೂಜಾರಿಗಳೂ ಕೂಡ. ದ್ವೀಪದ ಒಳಗಿರುವ ಮತ್ತು ಹೊರಗಿರುವ ಜನರ ಪರವಾಗಿ ಭೂತಕ್ಕೆ 'ನೇಮ' ಕಟ್ಟಿ, ಅದನ್ನು ತಮ್ಮೊಳಗೆ ಆಹ್ವಾನಿಸಿ ಜನರ ತೊಂದರೆಗಳನ್ನು ನಿವಾರಿಸುವ ಈ ಕೆಲಸದಲ್ಲಿ ಮನೆಯ ಗಂಡಸರು ತಲೆಮಾರುಗಳಿಂದ ತೊಡಗಿಕೊಂಡು ಬಂದಿದ್ದಾರೆ. ಮುದುಕನಾದ ದುಗ್ಗಜ್ಜನದ್ದು ಸಂಪೂರ್ಣ ಶ್ರದ್ಧೆ. ಮಗ ಗಣಪನಿಗೆ ತಂದೆಯ ಸಂಪೂರ್ಣ ಶ್ರದ್ಧೆಯಿಲ್ಲದಿದ್ದರೂ ಬೇರೆ ಯಾವುದೂ ಬುದ್ಧಿಗೆ ನಿಲುಕದ ಕಾರಣ, ಆಲದ ಮರಕ್ಕೆ ಜೋತು ಬಿದ್ದವ. ದುಗ್ಗಜ್ಜ ಒಮ್ಮೆ ಹೀಗೆಯೇ ಇದ್ದಿರಬಹುದು, ಗಣಪ ಮುಂದೆ ದುಗ್ಗಜ್ಜನಷ್ಟೇ ಶ್ರದ್ಧೆ ಬೆಳೆಸಿಕೊಳ್ಳಬಹುದು ಎನ್ನುವ ಯೋಚನೆ ಪ್ರೇಕ್ಷಕನಿಗೆ ಬರದೇ ಇರುವುದಿಲ್ಲ. ಆದರೆ ನಾಗಿ ಪಟ್ಟಣವನ್ನು ಕಂಡವಳು. ಮದುವೆಯ ನಂತರ ಈ ದ್ವೀಪಕ್ಕೆ ಬಂದವಳು. ಗಂಡ, ಮಾವನಿಗಿಂತ ವಾಸ್ತವಾಂಶಗಳ ಬಗ್ಗೆ ಹೆಚ್ಚು ಕಾಳಜಿಯುಳ್ಳವಳು.

ಕಳೆದ ಕೆಲವು ವರ್ಷಗಳಿಂದ ಅಣೆಕಟ್ಟೊಂದು ಇವರ ಜೀವನವನ್ನು ಪ್ರವೇಶಿಸಿದೆ. ಅದರಲ್ಲಿ ಪೂರ್ತಿ ನೀರು ತುಂಬಿದಾಗ ಸೀತ ಪರ್ವತ ಮುಳುಗಿಹೋಗಬಹುದು ಎನ್ನುವ ಭಯವಿದೆ. ಪುರಾಣ ಪ್ರಸಿದ್ಧ, ಭೂತದೇವರಿರುವ ಆ ಜಾಗ ಮುಳುಗಿಹೋಗಬಹುದು ಎನ್ನುವುದೇ ದುಜ್ಜನಿಗೆ ಹಾಸ್ಯಾಸ್ಪದ. ಗಣಪನಿಗೆ ಇದಕ್ಕಿಂತ ಹೆಚ್ಚು ಯೋಚಿಸಲು ಬಾರದು. ಆದರೆ ನಾಗಿಗೆ ಮಾತ್ರ ನವಿರಾದ ಆತಂಕ. ಈ ಹಿನ್ನಲೆಯಲ್ಲಿ ಚಿತ್ರ ಆರಂಭವಾಗುತ್ತದೆ.

ನಾಗಿಯ ಆತಂಕ ಗಣಪನಿಗೆ ತಟ್ಟದಿದ್ದರೂ ಸೀತ ಪರ್ವತವನ್ನು ಬಿಟ್ಟು ಹೋಗಬೇಕೆಂಬ ಸರ್ಕಾರದ ಆದೇಶ ಅವನನ್ನು ಇಷ್ಟವಿಲ್ಲದಿದ್ದರೂ ಸರ್ಕಾರಿ ಅಧಿಕಾರಿಯನ್ನು ಕಾಣುವ ಹಾಗೆ ಮಾಡುತ್ತದೆ. ಆದರೆ ಗಣಪನ ಯಾವ ವಾದಕ್ಕೂ ಸರ್ಕಾರದಲ್ಲಿ ಬೆಲೆಯಿಲ್ಲ. ಭೂತ, ನೇಮಕ್ಕೆ ಸರ್ಕಾರದಲ್ಲಿ ಬೆಲೆಯಿಲ್ಲ. ಇವರ ಸಾಂಸ್ಕೃತಿಕ ಪರಿಸರವನ್ನು, ಗೌರವವನ್ನೂ ಉಳಿಸಿಕೊಳ್ಳುವಂತಹ ಪುನರ್ವಸತಿ ನಿರ್ಮಾಣದಕುರಿತು ಸರ್ಕಾರಕ್ಕೆ ಅಸಡ್ಡೆ. ಗಣಪ ಕಡೆಗೂ ಅಧಿಕಾರಿಯನ್ನು ಮತ್ತೊಮ್ಮೆ ಸಮೀಕ್ಷೆ ನಡೆಸಲು ಒಪ್ಪಿಸುತ್ತಾನೆ.

ಆದರೆ ತಮ್ಮ ಜೀವನ-ಪರಿಸರದ ಬಗೆಗಿನ ದುಗ್ಗಜ್ಜನ ಶ್ರದ್ಧಾಪೂರಿತ ವಿವರಣೆಗೆ ಸರ್ಕಾರಿ ಅಧಿಕಾರಿಗಳ ಅಸಡ್ಡೆ, ಕುಚೋದ್ಯಗಳೇ ಉತ್ತರವಾಗುತ್ತವೆ. ಮೇಲಾಗಿ ಅವರು ಜೀವನ ನಡೆಸುತ್ತಿರುವ ಭೂಮಿಯೇ ಅವರದ್ದೆಂದು ಹೇಳಲು ಯಾವ ದಾಖಲೆಯೂ ಇಲ್ಲ. ಅವರ ಸಾಂಸ್ಕೃತಿಕ ಜೀವನದ ಪುನರ್ನಿರ್ಮಾಣವಿರಲಿ, ಅವರ ಭೌತಿಕ-ಜೀವನ ಮಟ್ಟ ಕಾಯ್ದುಕೊಳ್ಳಬಲ್ಲ ಪರಿಹಾರ ಸಿಗುವುದೇ ಕಷ್ಟವಾಗುತ್ತದೆ. ಸರ್ಕಾರಿ ಅಧಿಕಾರಿಗಳನ್ನು ಎದಿರು ಹಾಕಿಕೊಳ್ಳಬಾರದೆಂಬ ಪ್ರಜ್ಞೆ ಗಣಪನಿಗಿದ್ದರೂ, ದುಗ್ಗಜ್ಜ ಮಾತ್ರ ಇವರ ಕುಚೋದ್ಯದಿಂದ ತುಂಬಾ ನೊಂದುಕೊಳ್ಳುತ್ತಾನೆ. ಸರ್ಕಾರದ ವಿರುದ್ಧ ಅವನ ಧಿಕ್ಕಾರ ಹೆಚ್ಚುತ್ತದೆ. ಈ ನಡುವೆ ಒಬ್ಬೊಬ್ಬರೇ ದ್ವೀಪವನ್ನು ಬಿಡುತ್ತಾ, ತಮಗೆ ಸಿಕ್ಕ ಪರಿಹಾರದಿಂದ ಹೊಸ ಜೀವನವನ್ನು ಆರಂಭಿಸಲು ತೊಡಗುತ್ತಾರೆ. ಕಡೆಗೆ, ಭೂತದ ಅತಿ ಮುಖ್ಯ ಭಕ್ತರಾದ ಹೇರಂಭ ಹೆಗ್ಗಡೆ ಇತ್ಯಾದಿಗಳೂ ಸೀತಾ ಪರ್ವತವನ್ನು ಬಿಟ್ಟಾಗ ನಾಗಿಯನ್ನು ಒಂಟಿತನ ಕಾಡಲಾರಂಭಿಸುತ್ತದೆ. ಗಂಡ, ಮತ್ತು ಮಾವನ ಹಠದ ಮುಂದೆ ನಾಗಿ ಏನೂ ಮಾಡಲಾರದವಳಾಗುತ್ತಾಳೆ.

ಕಡೆಗೊಮ್ಮೆ, ಪೊಲೀಸರು ದಂಡ-ಭೇದದಿಂದ ಇವರನ್ನು ಬಲವಂತವಾಗಿ ದ್ವೀಪದಿಂದ ಹೊರಗಟ್ಟುತ್ತಾರೆ. ಬೇರೆ ದಾರಿಯಿಲ್ಲದೆ ನಾಗಿಯ ತವರು ಮನೆಯಲ್ಲಿ ಇವರು ಕೆಲದಿನಗಳ ಮಟ್ಟಿಗೆ ಬಿಡಾರ ಹೂಡುತ್ತಾರೆ. ಹೆಗ್ಗಡೆ ದ್ವಯರು ಗಣಪನಿಗೆ ಪಟ್ಟಣದಲ್ಲಿ ಒಂದು ಅಂಗಡಿ ಹಾಕಿಕೊಳ್ಳುವಂತೆ ಪರಿಹಾರ ಸೂಚಿಸುತ್ತಾರೆ. ಆದರೆ ಬೀಗರ ಮನೆಯಲ್ಲಿರಬೇಕಾದ ಪರಿಸ್ಥಿತಿಯನ್ನು ತಾಳಲಾರದ, ತನ್ನ ಸಾಂಸ್ಕೃತಿಕ ಪರಿಸರವನ್ನು ಬಿಡಲಿಚ್ಛಿಸದ ದುಗ್ಗಜ್ಜ ಹೇಳದೆ ಕೇಳದೆ, ಮಳೆಯನ್ನೂ ಲೆಕ್ಕಿಸದೆ ಸೀತಾ ಪರ್ವತಕ್ಕೆ ಹೊರಟುಬಿಡುತ್ತಾನೆ. ವಿಧಿಯಿಲ್ಲದೆ ಗಣಪ, ಅವನ ಹಿಂದೆ ನಾಗಿ ಹೊರಡಬೇಕಾಗುತ್ತದೆ. ದ್ವೀಪದಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿಯಿಂದ ವಿಚಲಿತಳಾದ ನಾಗಿಯ ತಾಯಿ ಇವರಿಗೆ ಕಷ್ಟದಲ್ಲಿ ಜೊತೆಯಾಗಲಿ ಎಂದು, ಮುಂಬೈ-ಯಲ್ಲಿ ವ್ಯವಹಾರ ಹಾಗೂ ಪ್ರೇಮಗಳಲ್ಲಿ ಸೋತು ವಿಷ ಕುಡಿದು ಸಾಯಲು ಬಯಸಿದ್ದ ಹಿನ್ನೆಲೆಯಿರುವ ಕೃಷ್ಣನನ್ನು ಇವರ ಜೊತೆ ಕಳಿಸಲು ನಿರ್ಧರಿಸುತ್ತಾಳೆ. ಯಾವಾಗಲೂ ಜೋಕಾಗಿ ಮಾತನಾಡುವ ಕೃಷ್ಣ ಬರುವುದಾದರೆ ಒಳ್ಳೆಯದೆ ಎಂದು ನಾಗಿ ಸಂತೋಷ ಪಡುತ್ತಾಳೆ. ಇಲ್ಲಿಂದ ಚಿತ್ರದ ಎರಡನೇಯ ಅಧ್ಯಾಯ ಶುರುವಾಗುತ್ತದೆ.

ಹೀಗೆ ನಾಗಿಯ ಸಂಸಾರ ಆತಂಕದಲ್ಲಿರುವಾಗಲೇ, ಕೃಷ್ಣನ ಆಗಮನವಾಗುತ್ತದೆ, ಹೊಸತರಲ್ಲಿ ಎಲ್ಲರಿಗೂ ಖುಷಿಯಾಗುತ್ತದೆ. ಮಳೆಯ ರಭಸ ಹೆಚ್ಚುತ್ತದೆ. ಇನ್ನೇನು ಮನೆ ಮುಳುಗಿಹೋಗುವ ಭಯ ಇದಿರಾದಾಗ, ಕೃಷ್ಣ ದುಗ್ಗಜ್ಜನನ್ನು ಬಲವಂತದಿಂದ ಒಪ್ಪಿಸಿ. ಎಲ್ಲರೂ ಸ್ವಲ್ಪ ಎತ್ತರದ ಪ್ರದೇಶದ ಹೇರಂಭ ಹೆಗ್ಗಡೆಯ ಮನೆಯ ಒಂದು ಭಾಗಕ್ಕೆ ಬಂದು ಸೇರುತ್ತಾರೆ. ದುಗ್ಗಜ್ಜ ಇನ್ನೂ ಭೂತ, ಸೀತ ಪರ್ವತ ಮುಳುಗುವುದಿಲ್ಲ ಎನ್ನುವ ನಂಬಿಕೆ ಕಳೆದುಕೊಳ್ಳುವಿದಿಲ್ಲ. ಕೃಷ್ಣನ ಅಧಿಕಪ್ರಸಂಗತನ ಕ್ರಮೇಣ ಜಾಸ್ತಿಯಾಗುತ್ತದೆ. ಈ ಮಧ್ಯೆ, ಮನುಷ್ಯ ಸಂಪರ್ಕವಿಲ್ಲದೇ ಬೇಸತ್ತ ಕಾರಣಕ್ಕೆ ನಾಗಿ ಕೃಷ್ಣನ ಜೊತೆ ಹೆಚ್ಚು ಕಾಲ ಕಳೆಯ ತೊಡಗುತ್ತಾಳೆ. ನಾಗಿ-ಗಣಪರಲ್ಲಿ ವಿರಸ ಮೂಡುತ್ತದೆ. ಕಡೆಗೊಮ್ಮೆ, ಕೃಷ್ಣನಿಗಿಂತಾ ನಾನೆ ಹೆಚ್ಚು ಎಂದು ಸಾಬೀತು ಪಡಿಸಲು, ಗಣಪ ಕೃಷ್ಣನನ್ನು ಹಸು-ಕರುವನ್ನು ಉಕ್ಕಿಹರಿಯುತ್ತಿರುವ ನದಿಯಲ್ಲಿ ಈಜಿ ಹೊಡೆದುಕೊಂಡು ಬರುವ ಪಂಥಕ್ಕೆ ಆಹ್ವಾನಿಸುತ್ತಾನೆ. ಒಪ್ಪಿಕೊಂಡ ಕೃಷ್ಣ ಪಂಥದಲ್ಲಿ ಸೋತರೂ ನಾಗಿಯ ಅನುಕಂಪಕ್ಕೆ ಗುರಿಯಾಗುತ್ತಾನೆ. ನಾಗಿಯ ಮಾತೃವಾತ್ಸಲ್ಯಕ್ಕೆ ಹೇಗೆ ವರ್ತಿಸಬೇಕೆಂದು ತಿಳಿಯದೆ ಪೆದ್ದನಂತೆ ವರ್ತಿಸುತ್ತಾನೆ. ಗಣಪ-ನಾಗಿಯ ಸಂಬಂಧ ಮತ್ತಷ್ಟು ಕೆಡುತ್ತದೆ. ಈ ಮಧ್ಯೆ ಭೂತದೇವರ ಸ್ಥಾನ ಹಾಗೂ ಹಳೆಯ ಮನೆ ಭಾಗಶಹ ಮುಳುಗಿಹೋಗುತ್ತದೆ. ದುಗ್ಗಜ್ಜನ ನಂಬಿಕೆ ಸುಳ್ಳಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದ ನೊಂದ ದುಗ್ಗಜ್ಜ ಭೂತದೇವರಿಗೆ 'ನೇಮ' ಕಟ್ಟಿ ತನ್ನ ದಾರಿಯನ್ನು ಕಂಡುಕೊಳ್ಳಲೆತ್ನಿಸಿ ಪ್ರಾಣ ಕಳೆದುಕೊಳ್ಳುತ್ತಾನೆ.

ಸರ್ಕಾರ ಇವರನ್ನು ಸಂಪೂರ್ಣವಾಗಿ ಕೈಬಿಡುತ್ತದೆ. ೫೦,೦೦೦ ಮಾತ್ರ ಪರಿಹಾರ ಸಿಗುತ್ತದೆ. ಇನ್ನೇನೂ ದಾರಿ ಕಾಣದೆ ಗಣಪ ಅದನ್ನು ತೆಗೆದುಕೊಂದರೂ, ಸಂಪೂರ್ಣವಾಗಿ ನಿಯಂತ್ರಣ ತಪ್ಪುತ್ತಾನೆ. ತನ್ನ ಮೇಲೆ ತನ್ನ ಮತ್ತು ನಾಗಿಯ ಸಂಬಂಧದ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾನೆ. ನಾಗಿ ಬದುಕಲು ಹವಣಿಸುತ್ತಲೇ, ಶಕ್ತಿ ಕಳೆದುಕೊಳ್ಳುತ್ತಲೇ ಹೋರಾಟ ನಡೆಸುತ್ತಾಳೆ. ಗಂಡನ ಅಪನಂಬಿಕೆ ತಾಳಲಾರದೆ ಕಡೆಗೆ ತಮ್ಮಿಬ್ಬರ ಮಾತನ್ನು ಕದ್ದು ಕೇಳಿಸಿಕೊಂಡ ನೆಪವೊಡ್ಡಿ ಕೃಷ್ಣನನ್ನು ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಇದ್ದ ಒಂದು ಆಸರೆಯನ್ನು ಕಳೆದುಕೊಳ್ಳಲು ಇಷ್ಟಪಡದ ಕೃಷ್ಣ ಪರಿ-ಪರಿಯಾಗಿ ಬೇಡಿಕೊಂಡರೂ ಕೇಳುವುದಿಲ್ಲ. ಹತಾಶನಾದ ಕೃಷ್ಣ, ಇದ್ದ ಒಂದೇ ದೋಣಿಯನ್ನು ತೆಗೆದುಕೊಂಡು ಹೋಗಿ, ನಾಗಿಯ ಕಡೆಯ ಆಸರೆಯನ್ನೂ ಇಲ್ಲದಂತೆ ಮಾಡುತ್ತಾನೆ. ಕ್ರಮೇಣ ಹೋರಾಟದ ಶಕ್ತಿಯನ್ನು ಗಣಪ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ನಾಗಿ ಮಾತ್ರ ಏನೇ ಆದರೂ ಹತಾಶಳಾಗುವುದಿಲ್ಲ. ಕಡೆಗೊಮ್ಮೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಹರಿದರೂ ಹೇರಂಭ ಹೆಗ್ಗಡೆಯ ಮನೆ ಮುಳುಗುವುದಿಲ್ಲ. ನಾಗಿ ಇನ್ನು ಮುಂದೆ ಆತಂಕವಿಲ್ಲವೆಂದು ಸಂತೋಷದಿಂದ, ಗಣಪನನ್ನು ಕರೆದು ತೋರಿಸಿದಾಗ, ಗಣಪ ಎಲ್ಲಕ್ಕೂ ಭೂತ ಕಾರಣನೆಂದು ನಾಗಿಯ ಹೋರಾಟಕ್ಕೆ ಯಾವ ಬೆಲೆಯಿಲ್ಲದಂತೆ ಮಾಡುತ್ತಾನೆ. ಇಲ್ಲಿಗೆ ಚಿತ್ರ ಮುಗಿಯುತ್ತದೆ.

ಚಿತ್ರದಲ್ಲಿ ಮೂರು ಮುಖ್ಯ ಧಾರೆಗಳಿವೆ. ಮೊದಲನೇಯದು, ಆಧುನಿಕ ಸಮಾಜದ ಅಭಿವೃದ್ಧಿಯ ಪ್ರಜ್ಞೆಯನ್ನು ಸಂಕೇತಿಸುವ ಅಣೆಕಟ್ಟು ಜೀವನದಲ್ಲಿ ಉಂಟುಮಾಡಬಹುದಾದ ತರಂಗಗಳಿಗೆ, ಪರಂಪರೆಯನ್ನು ಶ್ರದ್ಧೆಯಿಂದ ಬದುಕುವ, ಅದನ್ನು ಸಂಕೇತಿಸುವ, ಆಧುನಿಕತೆಯನ್ನು ಎಳ್ಳಷ್ಟು ಜೀರ್ಣಿಸಿಕೊಳ್ಳಲಾಗದ ದುಗ್ಗಜ್ಜ ಹೇಗೆ ಪ್ರತಿಕ್ರಯಿಸುತ್ತಾನೆ ಎನ್ನುವುದು. ಎರಡನೇಯದು ಪರಂಪರೆಯ ಅರಿವುಳ್ಳ, ಅದರ ಬಗ್ಗೆ ಗೌರವವಿರುವ, ಆಧುನಿಕ ಪ್ರಪಂಚದ ಅರಿವಿರುವ, ಅದಕ್ಕೆ ಹೊಂದಿಕೊಳ್ಳ ಬಯಸುವ ನಾಗಿಯ ಪ್ರತಿಕ್ರಯೆ. ಮೂರನೇಯದು ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಸರಿಯಾಗಿ ಬದುಕಲಾರದ ಗಣಪನ ಪ್ರತಿಕಿಯೆ. ಇವು ಮುಖ್ಯ ಧಾರೆಗಳಾದರೆ, ಅತ್ಯಂತ ವ್ಯಕ್ತಿಗತ ಹಿನ್ನೆಲೆಯಲ್ಲಿ ಈ ಅಣೆಕಟ್ಟು (ತನ್ಮೂಲಕ ಬರುವ ಕೃಷ್ಣ) ಗಣಪ-ನಾಗಿಯರ ಸಂಬಂಧದಲ್ಲಿ ಮೂಡಿಸುವ ಬಿರುಕು, ಪರಂಪರೆಯೇ ಮುಖ್ಯವಾದ ಈ ಸಮಾಜದಲ್ಲಿ ಹೆಣ್ಣಿನ ಸ್ಥಾನ ಚಿತ್ರದಲ್ಲಿ ಸಣ್ಣ ಝರಿಗಳಾಗಿ ಚಿತ್ರದುದ್ದಕ್ಕೂ ಹರಿಯುತ್ತವೆ. ಇವುಗಳಲ್ಲಿ ನನಗೆ ಅತಿ ಮುಖ್ಯವೆನಿಸುವುದು ನಾಗಿ ಮತ್ತು ದುಗ್ಗಜ್ಜರ ಹೋರಾಟ ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರ.

ದುಗ್ಗಜ್ಜನಿಗೆ ಪರಂಪರೆಯಲ್ಲಿ, ಅದರ ಶಕ್ತಿಯಲ್ಲಿ, ತನ್ನ ನಂಬಿಕೆಗಳಲ್ಲಿ ಸಂಪೂರ್ಣವಾದ ಶ್ರದ್ಧೆ. ಸೀತ ಪರ್ವತ, ಭೂತದೇವರು ಮುಳುಗುವುದಕ್ಕೆ ಸಾಧ್ಯವಿಲ್ಲ ಎನ್ನುವುಡೆ ಆತನ ನಂಬಿಕೆ. ಅದಕ್ಕೆ ವಿರುದ್ಧವಾಗಿ, ಹಂತ ಹಂತವಾಗಿ ರೂಪುಗೊಳ್ಳುವ ಘಟನೆಗಳು, ಎಚ್ಚರಿಕೆಗಳು ಇವು ಯಾವುವೂ ಅವನಿಗೆ ಅರ್ಥವಾಗುವುದಿಲ್ಲ. ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಅವನ ಹತಾಶೆ. ಪರಂಪರೆಯನ್ನು ಬಿಟ್ಟರೆ ಅವನಿಗೆ ಬದುಕಲು ಆಧಾರವೇ ಇಲ್ಲ. ಕಡೆಯ ಪಕ್ಷ ಪರಂಪರೆಯ ಯಾವುದಾದರೂ ಒಂದು ಅಂಶವನ್ನು ಉಳಿಸಿಕೊಳ್ಳಬಹುದಾದ ಪರಿಹಾರಕ್ಕೆ ಅವನ ಸಮ್ಮತಿಯಿದೆ. ಆದರೆ ಸರ್ಕಾರ ಭೂತ ದೇವರ ಸ್ಥಳಾಂತರಕ್ಕೆ ಒಪ್ಪುವುದಿಲ್ಲ. ಸೀತಾ ಪರ್ವತದ ಯಾವ ದೃಷ್ಟಾಂತಕ್ಕೂ ಯಾರೂ ಬೆಲೆ ಕೊಡುವುದಿಲ್ಲ. ಪರಂಪರೆಗೆ ಬೆಲೆಯೇ ಇಲ್ಲದ ಸಮಾಜ ಅವನ ಮುಂದೆ ನಿಲ್ಲುತ್ತದೆ. ಆದರೂ ಅನಾಹುತ ಸಂಭವಿಸಲಾರದು ಎನ್ನುವ ಆಶಯ. ಇದು ಅವನಿಗೂ ತಿಳಿದಿದೆ. ಕಡೆಗೆ ಅವನ ನಂಬಿಕೆ ಸಂಪೂರ್ಣ ಸುಳ್ಳಾದಾಗ, ನಿಜಕ್ಕೂ ಹೊಸ ಆಧಾರಗಳನ್ನು ಹುಡುಕುವ ದುಗ್ಗಜ್ಜ, ದಿಕ್ಕುಗಾಣದೆ 'ನೇಮ'ದ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿ ಪ್ರಾಣ ಕಳೆದುಕೊಳ್ಳುತ್ತಾನೆ.

ಅವನ ಸಾವು ಪರಂಪರೆಯ ದುರಂತವನ್ನು ಸಂಕೇತಿಸುತ್ತದೆ. ಅಭಿವೃದ್ಧಿ ಎನ್ನುವುದು ಜನರ ಜೀವನದಲ್ಲಿ ಆಡಬಹುದಾದ ಆಟಗಳನ್ನು ಸಂಕೇತಿಸುತ್ತದೆ. 'ಚೋಮನ ದುಡಿ'-ಯ ನಂತರ ತಮ್ಮ ಜೀವನದ ಅತಿ ಮುಖ್ಯ ಪಾತ್ರದಲ್ಲಿ ವಾಸುದೇವ ರಾವ್, ಪೂರ್ಣ ನ್ಯಾಯ ಒದಗಿಸಿ ನಟಿಸಿದ್ದಾರೆ. ಚಿತ್ರದ ಅತ್ಯುತ್ತಮ ನಟನೆ ಅವರದ್ದು. ರಾಷ್ಟ್ರ ಪ್ರಶಸ್ತಿ ಪಡೆದ ಬೇರೆ ಚಿತ್ರಗಳನ್ನು ನೋಡಿಲ್ಲವಾದ್ದರಿಂದ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, ಅವರಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಬರಬಹುದಿತ್ತು. ಈ ಪಾತ್ರ ಹೆಚ್ಚು ಬೆಳವಣಿಗೆಯನ್ನು ಕಾಣುವುದಿಲ್ಲ, ಹೆಚ್ಚು ಏರಿಳಿತಗಳನ್ನು ಕಾಣುವುದಿಲ್ಲ. ಸಿನಿಕತನದಿಂದ ಶುರುವಾಗು ಪಾತ್ರ, ಸಿಟ್ಟು, ನೋವು, ಹತಾಶೆ ಅನುಭವಿಸುತ್ತಾ ಕಡೆಗೆ ದುರಂತ ಕಾಣುತ್ತದೆ. ಪ್ರತಿ ಹಂತದಲ್ಲೂ ರಾವ್ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ನಾಗಿ ಈ ತೆರನಾದ ಅಭಿವೃದ್ಧಿಯನ್ನು ಅರಗಿಸಿಕೊಳ್ಳಲು ತಯಾರಾಗಿದ್ದಾಳೆ. ತನ್ನ ಯಾವುದೇ ಇಚ್ಛೆಯಿಲ್ಲದೆ ಇಂತಹ ಒಂದು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಅದರಿಂದ ತಪ್ಪಿಸಿಕೊಳ್ಳುವುದು ಮಾತ್ರ ಅವಳ ಮುಖ್ಯ ಉದ್ದೇಶ. ಅದಕ ಪೂರಕವಾಗಬಹುದಾದ ಪರಂಪರೆಯನ್ನು ಉಳಿಸಿಕೊಳ್ಳಲು ತಯಾರು. ಬಿಡಬೇಕಾದ್ದುದನ್ನು ಬಿಡಲು ತಯಾರು. ಆದರೆ ಅವಳ ಅಭಿಪ್ರಾಯಕ್ಕೆ ಪರಂಪರೆಯಲ್ಲಿ ಬೆಲೆಯಿಲ್ಲ. ನಾಗಿ ತನ್ನ ಬದುಕಿಗೆ ಬೇಕಾದ ಆಧಾರಗಳನ್ನು ಸೃಷ್ಟಿಸಲು ತಾನೆ ತಯಾರಾಗುತ್ತಾಳೆ. ಚಿತ್ರದ ಅತ್ಯಂತ ಜೀವಂತ ಪಾತ್ರ ನಾಗಿಯದು. ಪ್ರತಿ ಹಂತದಲ್ಲೂ ಹೋರಾಡುತ್ತಾಳೆ. ಒಂಟಿತನ ತುಂಬಿದ ದ್ವೀಪದಲ್ಲಿ ಕೃಷ್ಣನನ್ನು ಬರಮಾಡುತ್ತಾಳೆ. ಸಂಸಾರದಲ್ಲಿ ಬಿರುಕುಂಟಾದಾಗ ಕೃಷ್ಣನನ್ನು ಹೊರಗಟ್ಟುತ್ತಾಳೆ. ಹತಾಶೆಗೊಂಡ ಗಂಡನಲ್ಲಿ ಸ್ಫೂರ್ತಿ ತುಂಬುತ್ತಾಳೆ. ಅನೇಕ ಏರಿಳಿತಗಳನ್ನು ಕಾಣುವ ಪಾತ್ರ ಇದು. ಆತಂಕದಿಂದ ಶುರು ಆಗುವ ಈ ಪಾತ್ರ, ಆಸೆ, ನಿರಾಸೆ, ದಾಂಪತ್ಯ ಸಂಕಷ್ಟ, ಒಂಟಿತನ, ಬೆಲೆಯಿಲ್ಲದಿರುವಿಕೆ ಎಲ್ಲವನ್ನೂ ತಿರು-ತಿರುಗಿ ಅನಿಭವಿಸಿ ಕಡೆಗೆ ಗೆದ್ದೂ ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಸೋಲುತ್ತಾಳೆ. ಚಿತ್ರದ ಅತ್ಯಂತ ಕಠಿಣ ಪಾತ್ರ ಇದು. ಸೌಂದರ್ಯ ಸಾಕಷ್ಟು ನ್ಯಾಯ ಒದಗಿಸಿದ್ದಾರೆ ಎಂದೇ ಹೇಳಬೇಕು. ಆಕೆ ಒಬ್ಬ ಸೂಕ್ಷ್ಮ ಹಾಗೂ ಬುದ್ಧಿವಂತ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವೇ ಕೆಲವೆಡೆ ಪಟ್ಟಣದ ಮ್ಯಾನರಿಸಂ ಬಿಡಲು ಅವರಿಗೆ ಸಾಧ್ಯವಾಗಿಲ್ಲ. ಅಷ್ಟಾಗಿಯೂ ಅದು ಎಲ್ಲೂ ಘಾಸಿಗೊಳಿಸಿಲ್ಲ ಎನ್ನುವುದು ಆಕೆಗೆ ಕ್ರೇಡಿಟ್.

ಸಂಪೂರ್ಣವಾಗಿ ಐಡೆಂಟಿಟಿ ಕ್ರೈಸಿಸ್ ಅನುಭವಿಸುವ ಪಾತ್ರ ಗಣಪನದ್ದು. ಪರಂಪರೆಯನ್ನು ಸಿಕ್ಕಾಪಟ್ಟೆ ನಂಬಿಲ್ಲ. ಆದರೆ ಅದಿಲ್ಲದೆ ಬದುಕಿಲ್ಲ. ಆಧುನಿಕತೆಯನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾರ. ಪರಿಸ್ಥಿತಿ ತಂದೊಡ್ಡುವ ದಾಂಪತ್ಯ ಕಲಹವನ್ನು ನಿವಾರಿಸಿಕೊಳ್ಳುವ ಚೈತನ್ಯವಿಲ್ಲ. ನಿಷ್ಕ್ರಿಯತೆಯೇ ಅವನ ಪ್ರತಿಭಟನೆಯಾಗುತ್ತದೆ. ಕಡೆಗೆ ಸಂಪೂರ್ಣ ಹತಾಶೆಗೊಂಡು, ನಿರ್ಜೀವಿಯಂತಾಗಿ, ಹೆಂಡತಿಯ ಹೋರಾಟದಿಂದ ಮತ್ತೆ ಜೀವಂತನಾಗುವ ಗಣಪ, ಕಡೆಗೆ ಎಲ್ಲಾವನ್ನೂ ಭೂತದಯೆ ಎಂದು ಪರಿಗಣಿಸಿ, ಹೆಂಡತಿಗೆ ಸಲ್ಲಿಸಬೇಕಾದುದನ್ನು ಸಲ್ಲಿಸದೆ, ತನ್ನ ಕೀಳರಿಮೆಯನ್ನು ಪ್ರದರ್ಶಿಸುತ್ತಾನೆ. ತುಂಬಾ ಸೂಕ್ಷ್ಮವಾದ ಈ ಪಾತ್ರದಲ್ಲಿ ಅವಿನಾಶ್ ಕಷ್ಟಪಟ್ಟು ಅಭಿನಯಿಸಿದ್ದಾರೆ. 'ಮತದಾನದ' ಪಾತ್ರಕ್ಕಿಂತಾ ಕಷ್ಟದ್ದು, ಅಲ್ಲಿ ದ್ವಂದ್ವ ಇರಲಿಲ್ಲ, ಇಲ್ಲಿ ಪಾತ್ರ ಅತಿ ಹೆಚ್ಚು ಕ್ರೈಸಿಸ್ ಕಾಣುತ್ತದೆ. ಅತೀವ ಕೀಳರಿಮೆಯಿಂದ ನರಳುತ್ತದೆ. ಮನಃಶಾಸ್ತ್ರ ಹಾಗೂ ಥಿಯರಿಟಿಕಲ್ ಕಾರಣಕ್ಕಾಗಿ ತುಂಬಾ ಆಸಕ್ತಿಕರ ಪಾತ್ರ. ದುಗ್ಗಜ್ಜ ಹಾಗೂ ನಾಗಿಯರ ನಡುವಿನ ಪರಿಸ್ಥಿತಿಯನ್ನು ಪ್ರತಿನಿಧಿಸುವ ಪಾತ್ರ.

ಕೃಷ್ಣನ ಪಾತ್ರ ಚಿತ್ರದ ಆಶಯದ ಚೌಕಟ್ಟಿಗಿಂತ ಹೆಚ್ಚು ಸಂಗತಿಗಳನ್ನೊಳಗೊಂಡ, ಅದೇ ಕಾರಣಕ್ಕೆ ಚಿತ್ರದ ಫ಼ೋಕಸ್-ಅನ್ನು ಕೆಡಿಸುವ ಪಾತ್ರ. ಹರೀಶ್ ರಾಜು ಸಮರ್ಪಕವಾಗೆ ನಿರ್ವಹಿಸಿದ್ದಾರೆ. ಈ ಪಾತ್ರ ಚಿತ್ರದಲ್ಲಿ ಅನೇಕ (ಕೆಲವು ಅನವಶ್ಯ) ವೈವಿಧ್ಯತೆಯನ್ನು ತರುತ್ತದೆ. ಪಟ್ಟಣದ ಸಂಕೇತವಾಗಿ ಬರುವ ಈ ಪಾತ್ರ, ಅದನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತದೆ. ದುಗ್ಗಜ್ಜನ್ನು ಕುತಂತ್ರದಿಂದ ಹೇರಂಭ ಹೆಗ್ಗಡೆಯ ಮನೆಗೆ ಹೋಗಲು ಒಪ್ಪಿಸುವ ದೃಶ್ಯ ಅದಕ್ಕೊಂದು ಉದಾಹರಣೆ. ಅಣೆಕಟ್ಟಿನ ಬೈ-ಪ್ರಾಡಕ್ಟ್-ಅನ್ನು ಪ್ರತಿನಿಧಿಸುವ ಕೃಷ್ಣ ಮೊದಲು ಬರುವುದು ಇವರ ಜೊತೆಯಾಗಿರಲು. ಮಳೆಯಿಂದ ಏನೂ ಮಾಡಲಾಗದೆ ಬೋರ್ ಹೋಡೆದಿರುವಾಗ ಪಾತ್ರೆಗಳ ಜೊತೆ ಆಟವಾಡುವ ದೃಶ್ಯ ಅದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಆದರೆ, ಕ್ರಮೇಣ ಗಣಪ-ನಾಗಿಯರ ಜೀವನದಲ್ಲಿ ಬಿರುಕು ಮೂಡಲು ಈ ಪಾತ್ರ ಕಾರಣವಾಗುತ್ತದೆ. ಕಡೆಗೆ ಅವರಿಬ್ಬರಿಗೂ ಬೇರೆ ಯಾವ ಆಧಾರವೂ ಇಲ್ಲದಂತೆ ಮಾಡಿ, ನಡು-ನೀರಿನಲ್ಲಿ ಕೈಬಿಟ್ಟು ಹೊರಡುತ್ತದೆ. ಅಷ್ಟರ ಮಟ್ಟಿಗೆ ಪಾತ್ರ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಆದರೆ ಈ ಪಾತ್ರದ ವೈಯಕ್ತಿಕ ತೊಂದರೆಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರದ ಫ಼ೋಕಸ್ ಕೆಡಿಸುತ್ತದೆ. ಅಷ್ಟಲ್ಲದೆ, ಕೃಷ್ಣ ಮತ್ತು ನಾಗಿಯರ ಸಂಬಂಧವನ್ನು ಸಹಿಸಲಾಗದೆ, ಸರ್ಕಾರದಿಂದ ಪರಿಹಾರ ಸ್ವೀಕರಿಸಿ ದ್ವೀಪ ಬಿಟ್ಟರೆ ಕೃಷ್ಣನ ಕಾಟ ತಪ್ಪುತ್ತದೆ ಎನ್ನುವ ನಿರ್ಧಾರಕ್ಕೆ ಗಣಪ ಬರುತ್ತಾನೆ. ಅಲ್ಲಿಗೆ ವೈಯಕ್ತಿಕ ಸಮಸ್ಯೆಯೊಂದು ಚಿತ್ರದಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಚಿತ್ರದಲ್ಲಿ ಬರುವ ಮಿಕ್ಕೆಲ್ಲಾ ಸಂಕೇತಗಳ ಜೊತೆ ಇದು ಹೊಂದುವುದೇ ಇಲ್ಲ.

ಕೃಷ್ಣನ ಮೂಲಕ ಗಣಪ-ನಾಗಿಯ ನಡುವಿನ ವಿರಸ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದನ್ನು ಮರೆಯುವುದಾದರೆ, ಕೆಲವು ದೃಶ್ಯಗಳು ಮೇಲ್ಸ್ತರದ್ದವು. ಶೀತವಾಗಿದ್ದ ಕೃಷ್ಣನಿಗೆ ಮುಲಾಮು ಹಚ್ಚುವಾಗ ನಾಗಿಯ ಮಾತೃವಾತ್ಸಲ್ಯ ಮತ್ತು ಅದಕ್ಕೆ ಕೃಷ್ಣ ಒಂದು ಆಸರೆ ಸಿಕ್ಕಂತೆ ಉತ್ಸಾಹಿತನಾಗುವುದು ಅದಕ್ಕೊಂದು ಉದಾಹರಣೆ. ಇಲ್ಲಿ ಸೌಂದರ್ಯ ಹಾಗೂ ಹರೀಶ್ ರಾಜು ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಕೃಷ್ಣನ ಮುಳುಗಡೆ ಮೇಲೆ ಹೇಳಿರುವ ದೃಶ್ಯಕ್ಕೆ ಪೂರಕ. ಗಣಪನ ಕೀಳರಿಮೆಯಿಂದ ಸಿದ್ಧಪಡಿಸಿದ ಈ ನಾಟಕದಲ್ಲಿ ಕೃಷ್ಣನ ಮುಳುಗಡೆಯಿಂದ ಗಣಪ ಖುಶಿ ಪಡುವುದು ಪಾತ್ರದ ಬೆಳವಣಿಗೆಯಲ್ಲಿ ಸರಿಯಾದರೂ, ಚಿತ್ರದ ಆಶಯದ ದೃಷ್ಟಿಯಿಂದ ಅಗತ್ಯಕ್ಕಿಂತ ಹೆಚ್ಚು ಜಾಗ ಪಡೆದುಕೊಂಡಿದೆ. ಹಾಗೆಯೆ, ನಾಗಿ-ಕೃಷ್ಣ ಪಗಡೆ ಆಡುತ್ತಿದ್ದಾಗ, ಗಣಪನ ನೆರ್‍ಅಳು ಅವನ ಬರುವನ್ನು ತಿಳಿಸುವುದು ಒಂದು ಒಳ್ಳೆಯ ದೃಶ್ಯ. ನಾಗಿಗೆ ಅದು ತಿಳಿಯದಿರುವುದೂ ಕೃಷ್ಣನಿಗೆ ತಿಳಿಯುವುದೂ ಒಳ್ಳೆಯ ಸಂಯೋಜನೆ. ತಮ್ಮ ಮಾತುಗಳನ್ನು ಕದ್ದು ಕೇಳಿಸಿಕೊಂಡ ಕೃಷ್ಣನನ್ನು ಹೊಡೆಯುವ ನಾಗಿ ಆ ಕ್ಷಣದಲ್ಲಿ ಅನುಭವಿಸುವ ದ್ವಂದ್ವ, ಹೊಡೆದ ನಂತರ ತನ್ನ ಅತಿಯಾದ ಪ್ರತಿಕ್ರಿಯೆಯಿಂದ ದುಃಖಗೊಳ್ಳುವುದು - ಇಲ್ಲಿ ಸೌಂದರ್ಯರ ಸೂಕ್ಷ್ಮವಾಗಿ ನಟಿಸಿದ್ದಾರೆ.

ಗಣಪ ಸರ್ಕಾರಿ ಅಧಿಕಾರಿಯಲ್ಲಿ ಹೋಗಿ ಕಡೆಗೆ 'ಫ಼ಾರಮ್ ಕೊಡಿ' ಎಂದು ಕೇಳುವಾಗ ಅವನು ಅನುಭವಿಸುವ ದ್ವಂದ್ವ ಇನ್ನಷ್ಟು ತೀವ್ರವಾಗಿ ಬರಬೇಕಿತ್ತು. ಬೆಟ್ಟದಲ್ಲಿ ಗಣಪ ಮತ್ತು ನಾಗಿಯರು ಮತ್ತೆ ಒಂದಾಗುವ ದೃಶ್ಯದಲ್ಲಿ ಒಂದು ಲಾಂಗ್ ಶಾಟ್ ಅವಶ್ಯಕತೆಯಿತ್ತು. ಹೆಗ್ಗಡೆಯವರು ಹೊರಟಾಗ ನಾಗಿ ಓಡಿ ಬಂದು ಅವರಿಗೆ ವಿದಾಯ ಕೋರುವ ದೃಶ್ಯದಲ್ಲೂ ಒಂದು ಲಾಂಗ್ ಶಾಟ್ ಅವಳ ಒಂಟಿತನವನ್ನು ಪ್ರತಿನಿಧಿಸಲು ಸಹಾಯವಾಗುತ್ತಿತ್ತು. ಈ ಮಾತನ್ನು ಪ್ರತಿಯೊಬ್ಬರ ದೃಷ್ಟಿಯಿಂದಲೂ ಹೇಳಬಹುದು, ಪ್ರತಿಯೊಬ್ಬರೂ ದ್ವೀಪವಾಗುವುದನ್ನು ಲಾಂಗ್ ಶಾಟ್-ಗಳು (ಅದರಲ್ಲೂ ಬೆಟ್ಟವನ್ನು ಹಿನ್ನೆಲೆಯಾಗುಳ್ಳ ದೃಶ್ಯಗಳು) ಹೆಚ್ಚು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದವು.

ಚಿತ್ರದಲ್ಲಿ ಅನೇಕ ಕಡೆ ದೃಶ್ಯಗಳು ಸೂಚಿಸಬೇಕಾಗಿದ್ದುದನ್ನು ಮಾತುಗಳು ಹೇಳುತ್ತವೆ. ದುಗ್ಗಜ್ಜನ ನಂಬಿಕೆ ಸುಳ್ಳಾದಾಗ ದುಗ್ಗಜ್ಜ 'ನನ್ನ ನಂಬಿಕೆ ಸುಳ್ಳಾಯಿತಲ್ಲ' ಎಂದು ಆಶ್ಚರ್ಯ-ದುಃಖ ಪಡುವುದು, ದುಗ್ಗಜ್ಜನ ಸಾವಿಗೆ ತಾನೇ ಕಾರಣವೇನೋ ಎಂದು ನಾಗಿ ಅನುಮಾನದಿಂದ ದುಃಖಿಸುತ್ತಿದ್ದಾಗ ಆ ಮಾತನ್ನು ಕೃಷ್ಣನ ಬಾಯಲ್ಲಿ ಹೇಳಿಸುವುದು, ಕೃಷ್ಣನ ಸ್ವಾರ್ಥವನ್ನು ನಾಗಿ ಅದೇ ಮಾತಲ್ಲಿ ಹಲುಬುವುದು, ಅಧಿಕಾರಿಯ ಮುಂದೆ 'ಒಬ್ಬನನ್ನು ಮುಗಿಸಿ ಇನ್ನೊಬ್ಬನನ್ನು ಉದ್ಧಾರ ಮಾಡೋದು ಯಾವ ನ್ಯಾಯ' ಎಂದು ಗಣಪ ಹಲುಬುವುದು (ಚಿತ್ರದ ಮೂಲ ಆಶಯ ಇದೇ ಇರಬಹುದೇ ಎಂದು ಪ್ರೇಕ್ಷಕನಿಗೆ ಅನುಮಾನ ಬರಬಹುದು), 'ದ್ವೀಪ' ಪದದ ಅತಿ ಬಳಕೆ, ಪಾತ್ರಗಳು ಕೆಲವೆಡೆ ತಮ್ಮ ಬುದ್ಧಿ ಮೀರಿದ ಮಾತಾಡುವುದು ಇವೆಲ್ಲಾ ದೃಶ್ಯಗಳ ತೀವ್ರತೆಯನ್ನು ಕಡಿಮೆ ಮಾಡುತ್ತವೆ.

ಆದರೆ ಚಿತ್ರದ ನಿಲುವನ್ನು ಗ್ರಹಿಸುವಲ್ಲಿ ಪ್ರೇಕ್ಷಕ ಸ್ವಲ್ಪ ಪರದಾಡಬೇಕಾಗುತ್ತದೆ. ಸಮಾಜದ ಯಾವುದೇ ಧೋರಣೆಯಿಂದ ಕಟ್ಟ ಕಡೆಯ ಮನುಷ್ಯನ ಮೇಲಾಗುವ ಪರಿಣಾಮ ದಾಖಲಿಸಬೇಕು ಎನ್ನುವ ಸಮಾಜವಾದೀ ಪ್ರಜ್ಞೆಯಿಂದ ಈ ಚಿತ್ರ ಬಂದಿರುವುದು ಸರಿಯೆ. ಆದರೆ ಏನನ್ನು ಮುಖ್ಯವಾಗಿ ಪ್ರತಿನಿಧಿಸುತ್ತದೆ ಎನ್ನುವುದು ಪ್ರೇಕ್ಷಕನನ್ನು ಮುಖ್ಯವಾಗಿ ಕಾಡಿ ಉತ್ತರ ಸಿಗದಂತೆ ಮಾಡುತ್ತದೆ. ನರ್ಮದಾ ಬಚಾವೊ ಆಂದೋಲನದ ಹಿನ್ನೆಲೆಯಲ್ಲಿ, ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಣೆಕಟ್ಟು ವಿರೋಧಿ ಪರಿಸರವಾದದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮುಖ್ಯವಾಗುತ್ತದೆ. ಅಣೆಕಟ್ಟು ಪ್ರತಿನಿಧಿಸುವ ಅಭಿವೃದ್ಧಿ ಎಂಬ ಪೆಡಂಭೂತ ಒಂದು ಜೀವನ ಶೈಲಿಯನ್ನು ಹೇಗೆ ನಾಶಪಡಿಸುತ್ತದೆ ಎನ್ನುವುದು ಮುಖ್ಯವಾದರೆ, ದುಗ್ಗಜ್ಜ ಮುಖ್ಯನಾಗುತ್ತಾನೆ. ಮಧ್ಯದಲ್ಲೇ ನೇಮದ (ಪರಂಪರೆ) ಮೂಲಕ ಪ್ರತಿಭಟಿಸಿ ಸಾಯುತ್ತಾನೆ. ದುಗ್ಗಜ್ಜನ ಜೊತೆ ಅವನ ಹಳೆಯ ಮನೆ, ಭೂತ ದೇವರು ಎಲ್ಲಾ ಮುಳುಗಿವೆ. ಆದರೆ ಅವನ ಸಾವಿನ ತೀವ್ರತೆಯನ್ನು ತಿಳಿಗೊಳಿಸುವಂತೆ ನಾಗಿ ಹೋರಾಟ ನಡೆಸಿ ಗಂಡನ ಜೊತೆ ಮುನ್ನಡೆದೂ ಬಿಡುತ್ತಾಳೆ. ಅವನ ದುರಂತಕ್ಕೆ ಬೆಲೆ ಕಡಿಮೆಯಾಗುತ್ತದೆ. ದುಗ್ಗಜ್ಜನ ಕುರಿತಾದ ಸಿಂಪತಿ-ಯೇ ಚಿತ್ರದ ಮೂಲ ಆಶಯವಾಗಿದ್ದಲ್ಲಿ ಹೀಗಾಗುತ್ತಿರಲಿಲ್ಲ, ಇದ್ದೂ ಹೀಗಾಗಿದ್ದರೆ ಅದು ಚಿತ್ರದ ಸೋಲೇ ಸರಿ. ಇನ್ನು ನಿರ್ದೇಶಕ ಒಬ್ಬ ಪರಿಸರವಾದಿಯಾದ ಹೊರಾಟಗಾರನಾಗಿದ್ದರೆ ದುಗ್ಗಜ್ಜನ ಸಾವು ಮತ್ತು ಗಣಪ-ನಾಗಿಯರ ಸ್ಥಳಾಂತರ ಅಥವಾ ಅವರಿಬ್ಬರ ದುರಂತದಲ್ಲಿ ಚಿತ್ರ ಮುಗಿದಿರಬಹುದಿತ್ತು. ಅಣೆಕಟ್ಟಿನ ರಾಜಕೀಯ ಹೇರಂಭ ಹೆಗ್ಗಡೆ ಮುಂತಾದವರ ಸೂಕ್ಷ್ಮ ಸಂಕೇತಗಳಿಗಿಂತಾ ಹೆಚ್ಚಾಗಿ ನೇರವಾಗಿ ಚಿತ್ರದಲ್ಲಿ ಬರುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ದುಗ್ಗಜ್ಜ ಹಾಗೊ ಅವನು ಪ್ರತಿನಿಧಿಸುವ ಪರಂಪರೆಯ ನಾಶ ಜೀವನದ ದುರಂತಗಳಲ್ಲೊಂದು ಎಂದಷ್ಟೆ ಹೇಳಿ ನಿರ್ದೇಶಕ ಮುಂದುವರೆಯುತ್ತಾನೆ ಎಂದುಕೊಂಡರೆ ಚಿತ್ರವನ್ನು ಗ್ರಹಿಸುವುದು ಹೆಚ್ಚು ಸುಲಭವಾಗುತ್ತದೆ. ಇದು ಕೇವಲ ದಾಖಲೆಕಾರನ ದೃಷ್ಟಿ. ನಾಗಿಯ ಹೋರಾಟ ಚಿತ್ರದಲ್ಲಿ ಗಣಪ-ದುಗ್ಗಜ್ಜರಿಗೆ ಪ್ಯಾರಲ್ಲಲ್ ಆಗಿ ಬಂದಿರುವುದು, ಕಡೆಗೆ ಅವಳಿಗೆ ಜಯ ಸಿಗುವುದು ಆಧುನಿಕ ಸತ್ಯಗಳಿಗೆ ಹೊಂದಿಕೊಳ್ಳುವ ಜೀವನಪ್ರ್‍ಏಮವನ್ನು, ಜೀವನದ ಮುನ್ನಡೆಯನ್ನು ಸಂಕೇತಿಸುತ್ತದೆ. ಇಲ್ಲೆಲ್ಲಾ ದಾಖಲೆಕಾರನ ಡಿಟಾಚ್ಮೆಂಟ್-ಅನ್ನು ನಿರ್ದೇಶಕನಲ್ಲಿ ಕಾಣಬಹುದು. ಆದರೆ ಕಾಸರವಳ್ಳಿಯವರ ನಿಲುವು ಇದಾಗಿತ್ತೇ?

ಇವೆಲ್ಲಾ ಏನೇ ಇದ್ದರೂ, ಸೂಕ್ಷ್ಮವಾಗಿರಬೇಕಿದ್ದ ಎರಡು ಅಂಶಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರಕ್ಕೆ ಅಪರಿಪೂರ್ಣತೆಯ ತಂದೊಡ್ಡಿವೆ, ಅವು ಗಣಪ-ನಾಗಿಯರ ಬಿರುಕು ಹಾಗೂ ವಾಮನವಾಗಿರಬೇಕಿದ್ದ ಕೃಷ್ಣನ ಪಾತ್ರ ತ್ರಿವಿಕ್ರಮನಾಗುವುದು. ಅಲ್ಲದೆ ಚಿತ್ರದುದ್ದಕ್ಕೂ ಸ್ತ್ರೀಯೊಬ್ಬಳ ಅಭಿಪ್ರಾಯಗಳಿಗೆ ಹೆಚ್ಚು ಬೆಲೆ ಸಿಗದಿರುವುದು ಸೂಕ್ಷ್ಮವಾಗಿ ಬಂದಿದ್ದರೂ, ಕ್ಲೈಮಾಕ್ಸ್ ದೃಶ್ಯದಲ್ಲಿ ಅದೇ ಮುಖ್ಯವಾಗಿಬಿಡುವುದು ಪ್ರೇಕ್ಷಕನಲ್ಲಿ 'ಇದೇ ಚಿತ್ರದ ಮುಖ್ಯ ಹೇಳಿಕೆಯೇ' ಎಂಬ ಪ್ರಶ್ನೆ ಹುಟ್ಟಿಸಿ ಗೊಂದಲಕ್ಕೆ ದೂಡುತ್ತದೆ. ಚಿತ್ರದ ಆಶಯದ ಬಗೆಗಿನ ಗೊಂದಲ ಮತ್ತು ಚಿತ್ರದ ಶಿಲ್ಪ ಆಶಯಕ್ಕೆ ಸಂಪೂರ್ಣವಾಗಿ ಪೂರಕವಾಗಿರದಿರುವುದು ನಿರಾಶೆ ಉಂಟು ಮಾಡುತ್ತದೆ.

ಹೀಗೆ, ಅನೇಕ ಉತ್ತಮ ಅಂಶಗಳನ್ನೊಳಗೊಂಡ ಈ ಚಿತ್ರ, ಕೆಲವು ಸಾಧ್ಯತೆಗಳನ್ನು ತಪ್ಪಿಸಿಕೊಂಡರೂ ಒಂದು ಉತ್ತಮ ಕಲಾಕೃತಿಯಾಗಿದೆ.

3 Comments:

At 3:33 PM, Blogger Unknown said...

ಕನ್ನಡ ಚಿತ್ರಗಳ ಬಗ್ಗೆ ವಿಮರ್ಶೆ ಬರೆಯ ಬೇಕೆನ್ನುವುದು ನನ್ನ ಬಹು ದಿನಗಳ ಆಸೆ. ಒಳ್ಳೆಯ ಚಿತ್ರಗಳಿಗೆ ವಿಮರ್ಶೆಯ ಕೊರತೆ ಇದೆ. ನಿಮ್ಮ ಬ್ಲಾಗ್ ನೋಡಿ ಸ್ಪೂರ್ತಿ ಪಡೆದು ನಾನು ಒಂದು ವಿಮರ್ಶೆ ಬರೆದಿದ್ದೇನೆ. ನಾನು ಇತ್ತೀಚಿಗೆ ನೋಡಿದ ಚಿತ್ರ ದ್ವೀಪವೇ ಆಗಿದ್ದು ನಾನು ಅದರ ಬಗ್ಗೆಯೆ ಬರೆಯ ಬೇಕಾಗಿ ಬಂದದ್ದು ಆಕಸ್ಮಿಕ!

ಕನ್ನಡದಲ್ಲಿ ಚಿತ್ರ ವಿಮರ್ಶೆಗೆ ತೊಡಗಿರುವ ನಿಮಗೆ ಧನ್ಯವಾದಗಳು. ಮನೆ ಚಿತ್ರ ನಾನು ನೋಡಿಲ್ಲ. ಸಾಧ್ಯವಾದಗ ನೋಡುತ್ತೇನೆ. vcd ಲಭ್ಯವಿದ್ದರೆ ತಿಳಿಸಿ.

ನಿಮ್ಮ ದ್ವೀಪ ಚಿತ್ರದ ವಿಮರ್ಶೆ ಬಹಳ ಆಳವಾಗಿ ಇದೆ. ನೀವು ಚಿತ್ರದ ಬಗ್ಗೆ ಸಾಕಷ್ಟು ಯೋಚಿಸಿರುವುದು ಸ್ಪಷ್ಟವಾಗುತ್ತದೆ. ಕಲಾತ್ಮಕ ಚಿತ್ರಗಳು ಅದರಲ್ಲಿಯೂ ಕನ್ನಡ ಕಲಾತ್ಮಕ ಚಿತ್ರಗಳನ್ನು ನೋಡುವರ ಸಂಖ್ಯೆಯೆ ಕಡಿಮೆ ಇರುವಾಗ, ಇಷ್ಟು ಆಳವಾಗಿ, ಉದ್ದವಾಗಿ ಬರೆದಿರುವುದು ನಿಜಕ್ಕೂ ಸ್ಪೂರ್ತಿದಾಯಕ. ಧನ್ಯವಾದಗಳು.

 
At 1:24 AM, Blogger Saamaanya Jeevi said...

ಕಲ್ಯಾಣರೆ,

ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು. ತಮ್ಮ ವಿಮರ್ಶೆಯನ್ನು ಓದುವ ಅವಕಾಶ ನಮಗೆ ಸಿಗಲಿ.

'ಮನೆ' ಚಿತ್ರದ ವಿಸಿಡಿ ಖಂಡಿತ ಲಭ್ಯವಿದೆ. ಎಲ್ಲೆಡೆ ಸಿಗುತ್ತದೆ.

ಇಂತಿ
ಶಿವು

 
At 12:49 PM, Blogger Unknown said...

ನಾನು ಬರೆದಿರುವ ವಿಮರ್ಶೆ ಇಲ್ಲಿದೆ.

 

Post a Comment

<< Home