ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, December 23, 2006

ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೩

[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]

ಮಾಲಿಕೆಯ ಮೊದಲ ಭಾಗ, ಎರಡನೇಯ ಭಾಗ:

ಮಾಲಿಕೆಯ ಕಡೆಯ ಭಾಗವಾದ ಈ ಲೇಖನದಲ್ಲಿ ಈ ವಿವಾದವನ್ನು ನನ್ನ ವೈಯಕ್ತಿಕ ಸಂದರ್ಭಗಳ ಮೂಲಕ ಅಂತರ್ಗತಗೊಳಿಸಿ ಶೋಧಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಈ ತೆರನಾದ ಬಿಕ್ಕಟ್ಟುಗಳನ್ನು ವೈಯಕ್ತಿಕವಾಗಿ ಹಾಗೂ ಸಾಮುದಾಯಿಕವಾಗಿ ಹೇಗೆ ನಿರ್ವಹಿಸಬಹುದು ಎಂದು ಆಲೋಚಿಸಲು ಪ್ರಯತ್ನಿಸಿದ್ದೇನೆ.

ಈ ಶತಮಾನದ ಬಹುಮುಖ್ಯ ಪ್ರಕ್ರಿಯೆ (ಈ ಪ್ರಕ್ರಿಯೆ ಇನ್ನೂ ಒಂದು ಸಮಸ್ಥಿತಿಗೆ ಬಂದಿಲ್ಲವೆನ್ನಿಸುತ್ತದೆ) ರಾಷ್ತ್ರ್‍ಈಯತೆಯಾಗಿದೆ. ಇನ್ನಿತರ ಮನುಷ್ಯಕಾಳಜಿಗಳೆಲ್ಲ ಕಡೆಗೆ ನಿರ್ವಹಿಸಲ್ಪಟ್ಟದ್ದು ಈ ಭಿತ್ತಿಯಲ್ಲೇ. ಇತ್ತೀಚಿನ ದೊಡ್ಡ ವಿದ್ಯಮಾನವೆಂದರೆ ಜಾಗತೀಕರಣ. ಈ ಎರಡೂ ಪ್ರಕ್ರಿಯೆಗಳನ್ನೂ ನಾವಿನ್ನೂ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಈ ದೊಡ್ಡ ಪ್ರಕ್ರಿಯೆಗಳನ್ನು ತಮ್ಮ ತಮ್ಮ ರೀತಿಗಳಲ್ಲಿ ಗ್ರಹಿಸಿದ್ದೇವೆ ಎಂದು ನಂಬಿರುವ ಒಂದು ವರ್ಗ, ಇವುಗಳಾಚೆಯಲ್ಲಿ ಬದುಕುವ ಆದರೆ ಇದರ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗದ ವರ್ಗ - ಇವು ಎರಡು ತುದಿಗಳು. ನಮ್ಮ ಸಮಾಜ ಇದರ ಮಧ್ಯೆ ಬದುಕಿದೆ. ಇದರಲ್ಲಿ, ಈ ಪ್ರಕ್ರಿಯೆಗಳಿಂದುಂಟಾಗಿರುವ ವಿಕಾರ, ಬಿರುಕುಗಳನ್ನು ಎಚ್ಚರದಿಂದ ಗ್ರಹಿಸುವ ಬೌದ್ಧಿಕತೆಯುಳ್ಳ ಸಮಾಜವಿದೆ. ಆದರೆ ಬಿರುಕುಗಳು ವಿಕಾರಗಳು ಮಾತ್ರ ನಿಜ ಮತ್ತು ಎಲ್ಲರ ಪ್ರಯತ್ನಗಳನ್ನೂ ಮೀರಿ, ಕೆಲವೊಮ್ಮೆ ಅಂತ ಪ್ರಯತ್ನಗಳಿಂದಲೇ ಉಳಿದಿವೆ, ಆಗಾಗ್ಗೆ ಬೆಳೆದಿವೆ. ಬೃಹತ್ ಪ್ರಕ್ರಿಯೆಗಳನ್ನು ನಿರ್ವಹಿಸಲೆತ್ನಿಸಿದವರು ಬಲಪಂಥೀಯರಾಗಿ, ಎಡಪಂಥೀಯರಾಗಿ, ಸಮಾಜವಾದಿಗಳಾಗಿ ಒಡೆದಿದ್ದಾರೆ. ಈ ಪ್ರಕ್ರಿಯೆಯನ್ನು ನಿರ್ವಹಿಸಲೆತ್ನಿಸದೇ ತಮ್ಮ ಆವಣಗಳಲ್ಲೇ ಬದುಕುತ್ತಿರುವ, ಆದರೆ ಆ ಪ್ರಕ್ರಿಯೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಆದರೆ ಸಾಧ್ಯವಾಗದಿರುವ ಸಮಾಜವೂ ಇದೆ. (ಒಟ್ಟು ಸಮಾಜವನ್ನು, ಬದುಕನ್ನು ಹೆಚ್ಚು ಆಳದಲ್ಲಿ ಶೋಧಿಸಿರುವುದು ಸಮಾಜವಾದಿಗಳೇ ಎನ್ನುವ ನನ್ನ ನಿಲುವನ್ನು ಸದ್ಯಕ್ಕೆ ಬದಿಗಿರಿಸುತ್ತೇನೆ). ಹೀಗೆ ಬಲಪಂಥೀಯರಾಗಲಿ, ಎಡಪಂಥೀಯರಾಗಲಿ, ಗಾಂಧಿವಾದಿಗಳಾಗಲಿ ಇಡೀ ಸಮಾಜವನ್ನು ಒಳಗೊಳ್ಳಲಾಗದಿದ್ದುದರಿಂದ ತಮ್ಮ ತಮ್ಮ ಕ್ರಿಯೆಗಳಿಂದ ಒಟ್ಟು ಸಮಾಜದ ಕೆಲವರ್ಗಗಳಲ್ಲಿಯಾದರೂ ಆಗಾಗ್ಗೆ ಅಸ್ಥಿರ ಭಾವವನ್ನುಂಟುಮಾಡುತ್ತಿರುತ್ತಾರೆ. ಕೆಲವೊಮ್ಮೆ ತಮ್ಮ ಆಶಯಕ್ಕೆ ವಿರುದ್ಧವಾದ ಪರಿಣಾಮವನ್ನು ಗಳಿಸುತ್ತಾರೆ. ಹಾಗಾದಾಗಲೆಲ್ಲಾ ಈ ಬೃಹತ್ ಪ್ರಕ್ರಿಯೆಗಳನ್ನು ನಿರ್ವಹಿಸದಿರುವ ಜನರೂ ಸಹ ಅದನ್ನು ನಿರ್ವಹಿಸುವ ಅನಿವಾರ್ಯತೆಗೊಳಗಾಗಿ ಎಡಪಂಥೀಯರೋ, ಬಲಪಂಥೀಯರೋ ಆಗುತ್ತಾರೆ. ಮತ್ತು ಅವುಗಳಲ್ಲಿ ಅತಿಗೂ ಇಳಿಯುತ್ತಾರೆ.

ನಮ್ಮೀ ಉದಾಹರಣೆಗೆ ಬರುವುದಾದರೆ, ನಮ್ಮಲ್ಲಿ ಬಲಪಂಥೀಯರು ಸದಾ ಕೇಳುವ ಪ್ರಶ್ನೆಯೊಂದಿದೆ. ಯಾರನ್ನು ಅಳೆಯುವಾಗಲೂ ಒಂದೇ ಮಾನದಂಡವಿರಬೇಕು. ಹಿಂದೂ ರಾಜರ ಅತ್ಯಾಚಾರ ಮತಾಂಧತೆ ಎಂದು ಕರೆಯುವುದಾದರೆ ಮುಸಲ್ಮಾನರ ರಾಜರದ್ದೂ ಹಾಗೆಯೇ ಕರೆಯಬೇಕು. ಮತ್ತು ಅದನ್ನು ಖಂಡಿಸಬೇಕು. ಅದು ಹಾಗಲ್ಲವಾದರೆ ಅದನ್ನು ಅಪಾರವಾದ ಎಚ್ಚರದಿಂದ ವಿವರಿಸಬೇಕು, ನಿರ್ವಹಿಸಬೇಕು. ರಾಷ್ಟ್ರೀಯತೆಯ ಕಾರಣದಿಂದ ನಾವೆಲ್ಲರೂ ಈ ಸಮಸ್ಯೆಗಳನ್ನೆದಿರಿಸುತ್ತಿದ್ದೇವೆ. ಹೆಚ್ಚು ನೇರವಾಗಿ ಹೇಳುವುದಾದರೆ, ಟೀಪೂ ಮಿಕ್ಕೆಲ್ಲ ವಿಷಯಗಳಲ್ಲಿ ಅನೇಕ ರಾಜರಿಗಿಂತ ಆಕರ್ಷಕವಾದ, ಪ್ರಗತಿಪರವಾದ ವ್ಯಕ್ತಿತ್ವವನ್ನು ಹೊಂದಿರುವುದನ್ನು ನಾವು ಹೊಗಳುವಾಗ, ಅವನ ವ್ಯಕ್ತಿತ್ವದ ಓರೆಕೋರೆಗಳನ್ನು ಟೀಕಿಸಲು ಹಿಂಜರೆಯಬೇಕಾದ ಅವಶ್ಯಕತೆಯಿಲ್ಲ. ಆ ಕಾರಣದಿಂದ ಅವನು ಶ್ರೇಷ್ಠ ರಾಜ ಎಂದು ಸಾರಲಾಗದೇ ಹೋದರೆ, ಅದು ಹಾಗೆಯೇ ಸರಿ. ಬಲಪಂಥೀಯರಿಗೆ ಹೆದರಿಕೊಂಡು ಟೀಪೂವಿನ ಅತಿಸಮರ್ಥನೆಗೆ ತೊಡಗಿದರೆ, ನಮ್ಮ ಉದ್ದೇಶಕ್ಕೆ ವ್ಯತಿರಿಕ್ತವಾದ ಪರಿಣಾಮವೇ ಉಂಟಾಗುವುದು. ನಾನು ಹೆಸರಿಸಿದ ಬೃಹತ್ ಪ್ರಕ್ರಿಯೆಗಳ ಹೊರಗಿರುವವರಲ್ಲಿ ಕೂಡಾ ಇದು ಅಸ್ಥಿರ ಭಾವವನ್ನುಂಟುಮಾಡುತ್ತದೆ, ಅಂಥವರು ತತ್ಕ್ಷಣದ ಬಲಪಂಥೀಯರಾಗುತ್ತಾರೆ ಮತ್ತು ಅದಕ್ಕೆ ಎಡಪಂಥೀಯರೇ ದಾರಿಮಾಡಿಕೊಟ್ಟಂತಾಗುತ್ತದೆ.

ಈ ನಿರ್ವಹಣೆಯಲ್ಲಿರುವ ಮತ್ತೊಂದು ಸೂಕ್ಷ್ಮವೆಂದರೆ ತೀವ್ರವಾದವನ್ನು, ಅತಿರೇಕವನ್ನು ಎದುರಿಸುವ ಬಗೆ. ಕನ್ನಡ ಪ್ರೇಮಿ-ವಿರೋಧಿ, ರಾಷ್ಟ್ರಪ್ರೇಮಿ-ರಾಷ್ಟ್ರವಿರೋಧಿ, ಪ್ರಗತಿಪರ-ಪ್ರತಿಗಾಮಿ, ಮತಾಂಧ-ಸೆಕ್ಯುಲರ್ ಮುಂತಾದ ಪರಿಕಲ್ಪನೆಗಳು ಕೂಡ ಬೃಹತ್ ಪ್ರಕ್ರಿಯೆಗಳ ಪರಿಣಾಮವೇ ಆಗಿದೆ. ಒಂದು ಚಿಕ್ಕ ಊರಿನ ಜನರನ್ನು ಈ ವಿಧದಲ್ಲಿ ವಿಂಗಡಿಸುವುದು ಕಷ್ಟ. ಆದ್ದರಿಂದಲೇ, ಬಹುತೇಕರು, ಈ ಪರಿಕಲ್ಪನೆಗಳ ಕುರಿತು ಮತ್ತು ಅದರ ಪರಿಣಾಮವಾಗಿರುವ ವಿವಾದಗಳ ಕುರಿತು ಒಂದು ಖಚಿತವಾದ ನಿಲುವು ತಳೆದಿರುವುದಿಲ್ಲ. ಅವರಿಗೆ ಮೊದಲಾಗಿ ಈ ವಿಷಯದಲ್ಲಿ ಆಸಕ್ತಿಯೇ ಇರುವುದಿಲ್ಲ. ಶಂಕರಮೂರ್ತಿ ಏನೋ ಹೇಳಿಕೆ ಕೊಡುತ್ತಿದ್ದರೆ ಸುಮ್ಮನಿದ್ದುಬಿಡುತ್ತಾರೆ. ಆದರೆ ಕಾರ್ನಾಡರು ಕಣಕ್ಕಿಳಿದ ತಕ್ಷಣ ಒಹೋ ಎನ್ನುತ್ತಾರೆ. ಮತ್ತೆ ಚಿಮೂ, ಇತಿಹಾಸ ತಜ್ಞರು ಬಂದ ಮೇಲೆ ಎದ್ದು ನಿಲ್ಲುತ್ತಾರೆ. ಯಾಕೆಂದರೆ ಈ ಸಾರ್ವಜನಿಕ ಚರ್ಚೆಗಳು ಅವರ ಆವರಣದ ಮತ್ಯಾವುದೋ ಅಸ್ಥಿರಭಾವದ ಜೊತೆ ಸಂಬಂಧ ಕಲ್ಪಿಸುತ್ತದೆ. ಯಾರ ವಾದ ಯಾವ ಅಸ್ಥಿರಭಾವಗಳಿಗೆ ನೀರೆರೆಯುತ್ತದೆ ಎನ್ನುವುದರ ಮೇಲೆ ಯಾವ ಬೃಹತ್ ಪ್ರಕ್ರಿಯೆಯ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಎನ್ನುವುದು ನಿಂತಿರುತ್ತದೆ.

ಇದಕ್ಕೆ ನನ್ನ ವೈಯಕ್ತಿಕ ಅನುಭವದಿಂದ ಒಂದು ನಿದರ್ಶನ ಕೊಡುತ್ತೇನೆ. ಈ ಹಿಂದೆ ನಮ್ಮ ಸಂಬಂಧಿಗಳೊಬ್ಬರು ಮಾತು-ಮಾತಿಗೆ ಬಂದು ವಿ.ಪಿ.ಸಿಂಘ್ ಮತ್ತಿತರರನ್ನು ಜರೆದು ಅವರನ್ನೆಲ್ಲಾ ಸೂಡೋ-ಸೆಕ್ಯುಲರಿಸ್ಟ್ ಎಂದು ಟೀಕಿಸಿದರು. ನೆರೆದಿದ್ದವರು ಅವರ ಜೊತೆ ತಲೆಯಾಡಿಸಿದರು. ಏಕೆಂದರೆ ಮಿಕ್ಕವರ ಯಾವುದೋ ಅಸ್ಥಿರ ಭಾವಕ್ಕೆ ಆ ಮನುಷ್ಯ ನೀರೆರೆದಿದ್ದರು. ನಾನು ತಣ್ಣಗೆ ಯಾಕೆ ವಿ.ಪಿ.ಸಿಂಘ್ ಮತ್ತಿತರರು ಸಮರ್ಥನೀಯರೆಂದು ನನ್ನ ಅಭಿಪ್ರಾಯಗಳನ್ನು ಮುಂದಿಟ್ಟಾಗ ಮಿಕ್ಕವರೆಲ್ಲರೂ ಇರಬಹುದು ಎಂದರು. ಮಾತಿಗೆ ಮೊದಲು ತೊಡಗಿದ್ದ ನನ್ನ ಸಂಬಂಧಿಯನ್ನು ನಾನು ಬದಲಾಯಿಸಲಾಗಲಿಲ್ಲ. ಮಿಕ್ಕವರು ಮಾತ್ರ ನನ್ನ ವಾದವನ್ನು ಅರ್ಥಮಾಡಿಕೊಂಡರು. ಆದರೆ ನಾನೇದರೂ ಆ ನನ್ನ ಸಂಬಂಧಿಯನ್ನು ಕೋಪದಿಂದ ಎದುರಾಗಿದ್ದರೆ ನನ್ನ ಮಿಕ್ಕ ಸಂಬಂಧಿಗಳು ಅವರತ್ತಲೇ ವಾಲುತ್ತಿದ್ದುದು ಖಚಿತ. ಏಕೆಂದರೆ ನನ್ನ ಕೋಪ ಅವರ ಅಸ್ಥಿರ ಭಾವವನ್ನು ಹೆಚ್ಚಿಸುತ್ತಿದ್ದಿತು.

ಇದೇ ಬಗೆಯ, ನಾನೆಂದಿಗೂ ಮರೆಯಲಾಗದ ಮತ್ತೊಂದು ನಿದರ್ಶನ ಕೊಡುತ್ತೇನೆ. ಹೈಸ್ಕೂಲಿನ ಮೊದಲನೇಯ ವರ್ಷದಲ್ಲಿ ನಾನೊಂದು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ವಿಷಯದ ಕಡೆಯಲ್ಲಿ ಸಂದರ್ಭಕ್ಕೆ ಪೂರಕ ಎಂಬ ನನ್ನ ಮುಗ್ಧ-ಹುಂಬ ಹುಮ್ಮಸ್ಸಿನಲ್ಲಿ 'ನಾವೆಲ್ಲ ಹಿಂದು ನಾವೆಲ್ಲ ಒಂದು ನಾವೆಲ್ಲ ಬಂಧು' ಎನ್ನುವ ಸ್ಲೋಗನ್ನೊಂದನ್ನು ಸ್ವಲ್ಪ ತಣ್ಣನೆಯ ಧ್ವನಿಯಲ್ಲಿಯೇ ಹೇಳಿ ಮಾತುಗಳನ್ನು ಮುಗಿಸಿದ್ದೆ. ಫಲಿತಾಂಶ ಹೊರಬಿದ್ದಾಗ ನನಗೆ ಎರಡನೇಯ ಬಹುಮಾನ ದೊರೆತಿತ್ತು. ತೀರ್ಪುಗಾರರ ಪರವಾಗಿ ಮಾತನಾಡಿದ ಎಳೆಯ ವಯಸ್ಸಿನವರೊಬ್ಬರು (ಇವರು ಅಲ್ಲಿನ ಪ್ರಗತಿಪರ ವಿಚಾರಧಾರೆಯ ಸಂಘಟನೆಯೊಂದರ ನೇತಾರರಾಗಿದ್ದರು) ನನ್ನ ಮಾತುಗಳನ್ನು ಮೆಚ್ಚುತ್ತಾ ನನ್ನ ಸ್ಲೋಗನ್ನು ತೀವ್ರವಾಗಿ ಟೀಕಿಸಿ ಈ ದೇಶದಲ್ಲಿ ಹಿಂದೂಗಳಲ್ಲದವರೂ ಬದುಕಿದ್ದಾರೆ ಎನ್ನುವುದನ್ನು ಮರೆಯಲಾಗದು ಎಂದರು. ೧೮ ವರ್ಷಗಳ ನಂತರವೂ ನನಗೀ ಮಾತುಗಳನ್ನು ಮರೆಯಲಾಗಿಲ್ಲ. ಆ ಹೊತ್ತು ನಾನು ಆ ಸ್ಲೋಗನ್ನನ್ನು ಏಕೆ ಬಳಸಿದೆನೆಂಬುದಕ್ಕೆ ವಿಶೇಷವಾದ ಕಾರಣವಿರಲಿಲ್ಲ. ಅದಿಲ್ಲದಿದ್ದರೂ ಆ ವಯಸ್ಸಿಗೆ ನನ್ನ ಮಾತುಗಾರಿಕೆ ಚೆನ್ನಾಗಿತ್ತು ಎಂದೆನ್ನಿಸುತ್ತದೆ. ಅಲ್ಲದೆ, ಆ ತೀವ್ರವಾದಕ್ಕೆ ನನಗೇನೂ ದೀಕ್ಷೆಯಾಗಿರಲಿಲ್ಲ. ವ್ಯವಸ್ಥೆ ಗಾಳಿಯಲ್ಲಿ ತೂರಿಬಿಡುವ ವಿಚಾರಗಳನ್ನು ಮುಗ್ಧಮನಸ್ಸುಗಳು ಗೊತ್ತಿಲ್ಲದಂತೆ ಉಸಿರಾಡುತ್ತಿರುತ್ತವೆ. ಆದರೆ ಇಲ್ಲಿ ಮುಖ್ಯವೆಂದರೆ, ನನ್ನ ಸ್ಲೋಗನ್ನನ್ನು ಟೀಕಿಸಿದ ವ್ಯಕ್ತಿ ನನ್ನ ಮಾತುಗಾರಿಕೆಯ ಇನ್ನಿತರ ಅಂಶಗಳನ್ನು ಮೆಚ್ಚಿ ನನಗೆ ಬಹುಮಾನ ಕೊಡುವುದರಲ್ಲಿ ಹಿಂದೆ ಮುಂದೆ ನೋಡದೇ ಇದ್ದದ್ದು. ಈ ಸೌಮ್ಯವಾದ ನನ್ನನ್ನು ಈ ಕುರಿತು ಆಲೋಚಿಸುವಂತೆ ಪ್ರೇರೇಪಿಸಿತು. ಹಾಗಾಗದೇ ಅದೇ ಕಾರಣಕ್ಕೆ ನನಗೆ ಬಹುಮಾನ ದೊರೆಯದೇ ಹೋಗಿದ್ದ ಪಕ್ಷದಲ್ಲಿ ನಾನು ತೀವ್ರಪಂಥದ ಹಾದಿಯಲ್ಲೇನಾದರೂ ಮುನ್ನಡೆಯುತ್ತಿದ್ದೇನೆ? ಇದಕ್ಕೆ ನನ್ನಲ್ಲಿ ಉತ್ತರವಿಲ್ಲವಾದರೂ, ಅಪಾಯವಂತೂ ಇದ್ದೇ ಇತ್ತು.

ಹೀಗೆ ಚಿಕ್ಕದಾದ ರೀತಿಗಳಲ್ಲಿ ಯಾವ ದೊಡ್ಡ ಪ್ರತಿಭಟನೆಗೂ ಇಳಿಯದೇ ನಮ್ಮ ನಮ್ಮ ವಲಯಗಳಲ್ಲಿ ಪ್ರಾಮಾಣಿಕ ಮಾತುಗಳಿಂದ, ಪ್ರೀತಿಯಿಂದ ಪ್ರಭಾವ ಬೀರುತ್ತಿದ್ದೇವೆ (ಎನ್ನುವ ಕನಿಷ್ಠ ಭ್ರಮೆಯಲ್ಲಾದರೂ ಬದುಕಿದ್ದ) ನನ್ನಂಥವರ ಪರಿಸ್ಥಿತಿ ಈಗ ಕಷ್ಟವಾಗಿದೆ. ಮೇಲೆ ಹೇಳಿದ ನನ್ನ ಸಂಬಂಧಿಗಳು 'ನೋಡಿದೆಯಾ ಹೇಗೆ ನಮ್ಮ ಭೈರಪ್ಪನವರು ನಿಮ್ಮ ಕಾರ್ನಾಡರ ನೀರಿಳಿಸಿದರು, ನಾಡಿಗರ ಲೇಖನ, ಶತಾವಧಾನಿಗಳು ಏನು ಬರೆದಿದ್ದಾರೆ, ಗೊತ್ತಾಯಿತೇ?' ಎಂದರು. ಮಿಕ್ಕವರು 'ಬೇಜಾರು ಮಾಡ್ಕೋಬೇಡಪ್ಪ, ಆದರೆ ಇವರೆಲ್ಲಾ ಬರೆದಿರೋದನ್ನು ನೋಡಿದರೆ ಭೈರಪ್ಪನವರು ಹೇಳುತ್ತಿರುವುದು ಸರಿ ಎನ್ನಿಸುತ್ತೆ' ಎಂದರು. ನನಗೆ ಮಾತೇ ಹೊರಡಲಿಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು. ನನ್ನ ಯಾವ ವಿವರಣೆಗಳಿಗೂ ನನ್ನ ಸಂಬಂಧಿಯಲ್ಲಿ ಕಾರ್ನಾಡ್ ಮತ್ತಿರರು ಎಸಗಿದ ಪ್ರಮಾದಗಳನ್ನಾಧರಿಸಿದ ಮೂದಲಿಕೆ ತಯಾರಾಗಿತ್ತು.

ಇದರಿಂದ ಕಾರ್ನಾಡರ ಪ್ರತಿಷ್ಠೆ ಹಾಳಾಗುತ್ತದೆಯೋ ಇಲ್ಲವೋ ಮುಖ್ಯವಲ್ಲ. ಆದರೆ ಬಹುಕಾರಣಗಳಿಂದ ಅಸ್ಥಿರಭಾವವನ್ನೆದಿರುಸುತ್ತಿರುವ ಜನರ ವಿಷಯದಲ್ಲಿ ಇದು ದುಷ್ಪರಿಣಾಮವನ್ನುಂಟು ಮಾಡುತ್ತದೆ. ಅವರಿಗೆ ಭೈರಪ್ಪ, ಚಿಮೂರ ತಣ್ಣನೆಯ ಅಕ್ಯಾಡಮಿಕ್ ವಿವರಗಳು ಕಾರ್ನಾಡರ ಪ್ರಕೋಪಕ್ಕಿಂತ ಹೆಚ್ಚು ತಟ್ಟುತ್ತವೆ. ಈ ಮೊದಲು ಯಾವುದೇ ತೀವ್ರವಾದ ನಂಬಿಕೆಗಳಿಲ್ಲದವರು ಈಗೀಗ ಹೆಚ್ಚು ತೀವ್ರವಾದ ನಿಲುವುಗಳತ್ತ ಸಾಗುವುದನ್ನು ನೋಡಿದ್ದೇನೆ. ಈ ಪ್ರಕ್ರಿಯೆಗೆ ಕಾರ್ನಾಡರ ಇಂತಹ ಪ್ರತಿಕ್ರಿಯೆಗಳು ಹೆಚ್ಚು ಚಾಲನೆ ನೀಡುತ್ತದೆ. ಬಲಪಂಥೀಯರಿಗೆ ಎಚ್ಚರದ ಅವಶ್ಯಕತೆ ಚೆನ್ನಾಗಿ ಮನಗಂಡಿದೆ. ಅದನ್ನು ವಿರೋಧಿಸುವವರಿಗೆ ಅದಿಲ್ಲವಾಗಿದೆ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತಾಗಿದೆ ಕಾರ್ನಾಡರ ಸ್ಥಿತಿ, ನಮ್ಮನ್ನೂ ಬೀಳಿಸುತ್ತಿದ್ದಾರೆ.

ನಮ್ಮ ಪ್ರಗತಿಪರರಿಗೆ ಕೆಲವು ಎಚ್ಚರಗಳು, ಆಶಾವಾದ ಇರಬೇಕಾಗುತ್ತದೆ. ನಿದರ್ಶನವಾಗಿ ಈ ಪ್ರಸಂಗ. ನಮ್ಮ ಪರಿಚಯದ ಮನೆಯೊಬ್ಬರಲ್ಲಿ ಹೀಗಾಯಿತು. ಮನೆಯೊಡತಿ ತರಕಾರಿ ಹೆಚ್ಚುತ್ತಾ, ದೇವರನಾಮಗಳನ್ನು ಹೇಳುತ್ತಾ ಮಗ್ನರಾಗಿದ್ದರು. ಮನೆಯ ಯಜಮಾನರು ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಾ, ವೃತ್ತಪತ್ರಿಕೆಗಳನ್ನೋದುತ್ತಿದ್ದರು. ಸಂಸಾರದ ಸ್ನೇಹಿತರೊಬ್ಬರ ಪ್ರವೇಶವಾಯಿತು. ಉಭಯಕುಶಲೋಪರಿಯಾದ ನಂತರ ಚರ್ಚೆಯ ವ್ಯಸನದಲ್ಲಿ ಇದ್ದಕ್ಕಿದ್ದಂತೆ ಸುಭಾಶ್ ಚಂದ್ರ ಬೋಸ್, ನೆಹರೂರತ್ತ ಮಾತು ತಿರುಗಿತು. ಸ್ನೇಹಿತರು ನೆಹರೂರನ್ನು ವಾಚಾಮಗೋಚರವಾಗಿ ಬಯ್ಯುತ್ತಾ ಅವರಿಂದಲೇ ದೇಶ ಹಾಳಾದದ್ದು, ಸುಭಾಷ್ ಚಂದ್ರ ಬೋಸ್-ರ ಸಾವಿನ ರಹಸ್ಯ ಅವರಿಗೆ ತಿಳಿದಿರುವುದು ಇತ್ಯಾದಿ ಆರೋಪಗಳನ್ನು ಅವ್ಯಾಹತವಾಗಿ ಮಾಡತೊಡಗಿದರು. ಮನೆಯ ಯಜಮಾನರು 'ಹೌದು, ಅಲ್ಲವೆ' ಎನ್ನುತ್ತಾ ಅವರಿಗೆ ಸಾಥಿ ನೀಡುತ್ತಿದ್ದರು. ಇಷ್ಟುದ್ದ ಭಾಷಣದ ನಂತರ ಅನುಮೋದನೆಗಾಗಿ ಮನೆಯೊಡತಿಯತ್ತ ನೋಡಿದ ಸ್ನೇಹಿತರಿಗೆ ಒಡತಿ 'ಮೊಮ್ಮಕ್ಕಳೆಲ್ಲ ಹೇಗಿದ್ದಾರೆ?' ಎಂದು ಮುಗ್ಧವಾಗಿ ಒಂದಿಷ್ಟೂ ರಾಜಕೀಯವಿಲ್ಲದೆ, ದೇವರನಾಮದ ನಡುವೆ ತರಕಾರಿ ಹೆಚ್ಚುತ್ತಿರುವಂತೆಯೇ ವಿಚಾರಿಸಿಕೊಂದರು. ಅಪ್ರತಿಭರಾದ ಸ್ನೇಹಿತರು ೫-೬ ಕ್ಷಣಗಳ ದಿಗ್ಭ್ರಮೆಪೂರಿತ ಮೌನದ ನಂತರ 'ಎಲ್ಲಾ ಆರೋಗ್ಯ' ಎಂದರು. ಮಾತು ಮತ್ತೆ ನೆಹರೂ, ಬೋಸ್-ರತ್ತ ಚಲಿಸಲಿಲ್ಲ. ನಮ್ಮ ಜನರ ಈ ತೆರನಾದ ಶಕ್ತಿಯನ್ನು ಕಡೆಗಣಿಸಲಾಗದು. ಇದನ್ನು ಮರೆತು ಅತಿರೇಕಕ್ಕಿಳಿದರೆ, ನಮ್ಮ ಆಶಯಕ್ಕೆ ವ್ಯತಿರಿಕ್ತವಾಗಿ ಇಂತಹ ಮನೆಯೊಡತಿಯರೂ ಬದಲಾಗುತ್ತಾರೆ.

ನಾವು ಚಿಕ್ಕವರಾಗಿದ್ದಾಗ ನಮ್ಮ ಹತ್ತಿರದವರೊಬ್ಬರು ತೀವ್ರವಾದಿ ಸಂಘಟನೆಯೊಂದು ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದರು. ಭಾರತದ ಭೂಪಟದ ಹಿನ್ನೆಲೆಯಲ್ಲಿ ಭಾರತಮಾತೆಯ ಚಿತ್ರವಿರುವ ಫೋಟೋ. ಜೊತೆಗೆ ಸಂಘಟನೆಯ ಹೆಸರು ಕೂಡಾ ಎದ್ದುಕಾಣುವಂತೆ ಮುದ್ರಿತವಾಗಿತ್ತು. ಅದೀಗಲೂ ಅವರಿಗೆ ಹೆಮ್ಮೆಯ ಗಳಿಕೆಯಾಗಿದೆ. ದಿನವೂ ಪೂಜಿಸುತ್ತಾರೆ. ಆಗಸ್ಟ್ ೧೫, ಜನವರಿ ೨೬-ಕ್ಕೂ ಅದಕ್ಕೆ ಪೂಜೆ. ಕನ್ನಡ ರಾಜ್ಯೋತ್ಸವಕ್ಕೂ ಅದಕ್ಕೇ ಪೂಜೆ. ಕೇಳಿದರೆ 'ಕನ್ನಡಾಂಬೆ, ಭಾರತಾಂಬೆ, ಎರಡೂ ಒಂದೆ ಅಲ್ಲವೇನೋ' ಎನ್ನುವ ಉತ್ತರ. ಇದೇನು ಜಾರಿಕೊಳ್ಳುವ ಉತ್ತರವೋ, ಸೌಮ್ಯವಾದಿಗಳ ನಿಜತಾತ್ವಿಕ ಹೊಳಹೋ ಗೊತ್ತಾಗುವುದಿಲ್ಲ. ಆ ಸಂಘಟನೆಯ ಯಾವ ತೀವ್ರವಾದ ನಿಲುವೂ ಇವರಿಗೆ ಅರ್ಥವಾಗಿಲ್ಲ. ಆ ಕುರಿತು ತಲೆ ಕೆಡೆಸಿಕೊಂಡೇ ಇಲ್ಲ. ಅವರ ಮನೆಗೆ ಆಗಾಗ್ಗೆ ಹೋಗಬೇಕಾದ ಪ್ರಸಂಗ ಬರುತ್ತದೆಯಾದ್ದರಿಂದ ಆ ಫೋಟೋ ನೋಡಿದಾಗಲೆಲ್ಲಾ ನನಗೆ ಮುಜುಗರ. ಭಾರತಾಂಬೆಯಿರುವ ಬೇರೆ ಫೋಟೋ ತರುತ್ತೇನೆಯೆಂದರೂ ಅವರಿಗಾಗುವುದಿಲ್ಲ. ವಿಪರ್ಯಾಸವೆಂದರೆ, ನನ್ನೆಲ್ಲಾ ವಿಚಾರಗಳ ನಡುವೆ ನನಗೆ ಅವರ ರಂಗೋಲಿ ಸ್ಪರ್ಧೆಯ ಗಳಿಕೆಯ ಮಹತ್ವ ತಟ್ಟುತ್ತಿಲ್ಲ. ಅವರಿಗೆ ಮಾತ್ರ ಫೋಟೋ ಇಟ್ಟುಕೊಂಡೂ ಸಹ ಸಂಘಟನೆಯ ತೀವ್ರತೆ ತಟ್ಟಿಲ್ಲ. ಈ ಸಂದರ್ಭದಲ್ಲಿ ನನಗೆ ಎಸ್ ಮಂಜುನಾಥರ ಕವಿತೆಯೊಂದು ನೆನಪಾಗುತ್ತಿದೆ. ಆತಂಕಕಾರಿ ರಥವೊಂದು ಹಳ್ಳಿಯ ವಯಸ್ಸಾದ ಮುದುಕಿಯನ್ನು ತನ್ನೆಡೆಗೆ ಸೆಳೆದುಕೊಂಡುಬಿಡುತ್ತದೆಯೇನೋ ಎನ್ನುವ ಕಸಿವಿಸಿಯಲ್ಲಿರುವ ಕವಿ, ಮುದುಕಿ ಅದನ್ನು ನಿರ್ಲಕ್ಷಿಸಿ ತನ್ನ ಕಾರ್ಯದಲ್ಲಿ ಮಗ್ನವಾಗುವುದನ್ನೂ, ರಥ ಮುಂದೆ ಚಲಿಸಿದ್ದನ್ನೂ ಕಂಡು ನಿರುಮ್ಮಳನಾಗುತ್ತಾನೆ. ಈ ಆತ್ಮವಿಶ್ವಾಸದ ಅವಶ್ಯಕತೆಯೂ ನಮಗಿದೆ.

ನಮ್ಮ ಜನರ ಮೇಲಣ ಆತ್ಮವಿಶ್ವಾಸ ಒಂದು ಕಡೆಯಾದರೆ, ಈ ಕ್ಷಣಕ್ಕೆ ಮತ್ತೊಂದು ಆಯಾಮವಾಗಿ ನನಗೆ ರಾಜಾರಾಮ ಹೆಗಡೆಯವರ 'ಗತಕಥನ' ಪುಸ್ತಕ, ಇತಿಹಾಸವನ್ನು ವಿವರಿಸುವ ಅದರ ಮಾದರಿ ಹೆಚ್ಚು ಪ್ರಸ್ತುತ, ಅವಶ್ಯವೆನ್ನಿಸುತ್ತಿದೆ. ನಮ್ಮಲ್ಲಿ ಇತಿಹಾಸಗಳು ಬೆಳೆದು ಬಂದ ಬಗೆ ಅದಕ್ಕಿದ್ದ ತುರ್ತುಗಳು, ಅದಕ್ಕೆ ಒದಗಿದ ದ್ರವ್ಯಗಳು, ಅದರಿಂದಾದ ಪರಿಣಾಮ ಇವುಗಳನ್ನೆಲ್ಲಾ ಹೆಗಡೆಯವರು ವಿವರವಾಗಿ ಬಿಚ್ಚಿಟ್ಟಿದ್ದಾರೆ. 'ಗತಕಥನ' ಸಾಹಿತ್ಯದಲ್ಲಿ ಒಲವಿರುವ ಇತಿಹಾಸ ತಜ್ಞರಿಂದ ನಿರೀಕ್ಷಿಸಬಹುದಾದ ಒಂದು ಪುಸ್ತಕವಾಗಿದೆ. ಬ್ರಿಟಿಷರು, ಹಿಂದೂ ಬಲಪಂಥೀಯರು, ಮುಸಲ್ಮಾನ ಬಲಪಂಥೀಯರು, ಎಡಪಂಥೀಯರು - ಅವರಲ್ಲಿ ಕಮ್ಯುನಿಷ್ಟರು, ಹಿಂದುಳಿದ-ದಲಿತ ವರ್ಗಗಳು ಹೀಗೆ ಇವರೆಲ್ಲರ 'ಸದ್ಯ'ಗಳು ಯಾವ ರೀತಿಯಲ್ಲಿ ಇತಿಹಾಸಗಳ ನಿರ್ಮಾಣಕ್ಕೆ ದಾರಿಮಾಡಿಕೊಟ್ಟಿತು ಎನ್ನುವ ವಿವರಣೆಯಲ್ಲಿ, ಓದುಗನಿಗೆ ಇದೆಲ್ಲವನ್ನೂ ಮೀರಬೇಕಾದ ಅವಶ್ಯಕತೆ ಧ್ವನಿಸುತ್ತದೆ.

ಹೆಗಡೆಯವರು ತಮ್ಮ ಪುಸ್ತಕದಲ್ಲಿ ದೇವಚಂದ್ರನ ರಾಜಾವಳಿ ಕಥೆಯ ಕುರಿತು ಒಂದು ಸುದೀರ್ಘ ಪ್ರಬಂಧವನ್ನು ಬರೆದಿದ್ದಾರೆ. (ಹಂಪಿ ವಿಶ್ವವಿದ್ಯಾಲಯ ರಾಜಾವಳಿ ಕಥೆಯ ಬಗ್ಗೆ ಭಿನ್ನ ಚಿಂತಕರ ಬರಹಗಳಿರುವ ಒಂದು ಪುಸ್ತಕ ಪ್ರಕಟಿಸಿದೆ). ೧೮೨೦-ರ ಸುಮಾರು ಬರೆಯಲಾದ ರಾಜಾವಳಿ ಕಥೆಯ ಒಂದು ಅಚ್ಚರಿಯ ಅಂಶ ಹೀಗಿದೆ. ದೇವಚಂದ್ರನಿಗೆ ತನ್ನ ಕಾಲದ ತುರ್ತೆನ್ನುವುದು ಜೈನ ಮತಪ್ರಚಾರ ಮತ್ತು ಅದರ ಎದುರಾಳಿಗಳಾದ ವೈದಿಕ, ವೀರಶೈವ ಮತಗಳ ಖಂಡನೆ. ಆ ಕಾರಣಕ್ಕೆ ಮುಸಲ್ಮಾನರು ಅವನಿಗೆ ಮತ್ತೊಂದು ಜಾತಿ. ಅವನು ಸೃಷ್ಟಿಸಿರುವ ಇತಿಹಾಸ ಈ ಅಂಶವನ್ನೊಳಗೊಂಡಿದೆಯೇ ಹೊರತು ಹಿಂದೂ-ಮುಸಲ್ಮಾನ ಎನ್ನುವ ರಾಷ್ಟ್ರೀಯ ಚಳುವಳಿ ಕಾಲದ ಸಮಸ್ಯೆ ಅವನನ್ನು ಕಾಡಿಯೇ ಇಲ್ಲ. ಇದು ನಮ್ಮನ್ನು ಗಟ್ಟಿಯಾದ, ಏಕರೂಪಿಯಾದ, ಏಕಮುಖಿಯಾದ ಇತಿಹಾಸದ ಲೊಳಲೊಟ್ಟೆಯನ್ನು ಅರ್ಥಮಾಡಿಸುತ್ತದೆ. ಟೀಪೂ ಇತಿಹಾಸದ ಕುರಿತು ಬಲಪಂಥೀಯರು, ಎಡಪಂಥೀಯರೆಲ್ಲರೂ ಈ ಹಿನ್ನೆಲೆಯಲ್ಲಿ ಚಿಂತಿಸಬೇಕಿದೆ.

ಇದರ ಹಿನ್ನೆಲೆಯಲ್ಲಿ ಟೀಪು ಇತಿಹಾಸದ ಮರುಸೃಷ್ಟಿಯಾಗಬೇಕಿದೆ. ಟೀಪೂವನ್ನು ರಾಷ್ಟ್ರವೀರನನ್ನಾಗಿ ಎತ್ತಿಹಿಡಿದ ಇತಿಹಾಸ ಸೃಷ್ಟಿಯಾದ ಬಗೆ, ಅವನನ್ನು ಮತಾಂಧನೆಂದು ಜರೆದು ಅಂಚಿಗೆ ತಳ್ಳಬಯಸುವ ಇತಿಹಾಸ ನಿರ್ಮಾಣಕ್ಕೆ ಇರುವ ತುರ್ತು - ಇವುಗಳನ್ನು ತಣ್ಣನೆಯ ಧ್ವನಿಯಲ್ಲಿ, ಎಲ್ಲ ವಿವರಗಳಿಂದ ಬಿಚ್ಚಿಡಬೇಕಿದೆ. ನಮ್ಮ ಯಾವ ಸದ್ಯಗಳು ಟೀಪುವನ್ನು ನಿರ್ಮಿಸುತ್ತಿವೆ ಎನ್ನುವುದರ ಶೋಧನೆಯ ಮಾರ್ಗದಲ್ಲೇ, ಮತ್ಯಾವ ಸದ್ಯಗಳು ಟೀಪುವನ್ನು ನಮಗೆ ಆರೋಗ್ಯಕರವಾಗಿ ಕಟ್ಟಿಕೊಡಬಹುದು ಎನ್ನುವುದರ ಶೋಧದತ್ತ ನಡೆಯಬೇಕಾದ ಅವಶ್ಯಕತೆಯಿದೆ. ಇದೇ ಕಾರಣಗಳಿಗೆ ಎಸ್ ಚಂದ್ರಶೇಖರ್-ರ 'ಗಾಂಧಿ ಮತ್ತು ಅಂಬೇಡ್ಕರ್' ಪುಸ್ತಕಕ್ಕೆ ಕೆವಿಸುಬ್ಬಣ್ಣನವರ ಮುನ್ನುಡಿ ಕೂಡಾ ಇಲ್ಲಿ ಪ್ರಸ್ತುತವಾಗಿದೆ.

ಇದೀಗ ನಮ್ಮ ಇತಿಹಾಸತಜ್ಞರಾದ ರಾಜಾರಾಮ ಹೆಗಡೆ, ಚಂದ್ರಶೇಖರ್, ಶೆಟ್ಟರ್ ಮುಂತಾದವರು, ಹಂಪಿ ವಿಶ್ವವಿದ್ಯಾಲಯ - ಇವರೆಲ್ಲರೂ ಮಾಡಬಹುದಾದ ಒಂದು ಪ್ರಮುಖವಾದ ಕೆಲಸವಿದೆ. ಆಳವಾದ ತಯಾರಿಯಿಂದ ಯೋಜಿತವಾದ ಒಂದು ಸಂವಾದವನ್ನು ಟೀಪು ಕುರಿತು ಏರ್ಪಡಿಸಬೇಕಾಗಿದೆ. ಇದರಲ್ಲಿ ನಾಡಿನ ಎಲ್ಲ ಬಗೆಯ ಚಿಂತಕರು, ಎಡಪಂಥೀಯರು, ಬಲಪಂಥೀಯರು, ಇತಿಹಾಸ-ತಜ್ಞರು, ಜಾನಪದರು - ಹೀಗೆ ಅಪಾರ ವೈವಿಧ್ಯತೆಯಿಂದ ಕೂಡಿದ ತಜ್ಞ, ಚಿಂತಕ, ವಿದ್ವಾಂಸರಿಂದ ಟೀಪೂ ಕುರಿತು ಒಂದು ಸಂಕಿರಣವನ್ನೇರ್ಪಡಿಸಿ ಅದರ ಮುದ್ರಿತ ಆವೃತ್ತಿಯನ್ನು ಪ್ರಕಟಿಸಬೇಕಿದೆ. ಕನ್ನಡ ವಿಶ್ವವಿದ್ಯಾಲಯ ಈಗಾಗಲೇ ಈ ಮಾದರಿಯಲ್ಲಿ ಪ್ರವೃತ್ತವಾಗಿದೆ. ಅನೇಕ ಸಾಂಸ್ಕೃತಿಕ ಮುಖಾಮುಖಿ ಪುಸ್ತಕಗಳನ್ನು ಪ್ರಕಟಿಸಿದೆ. ಅದಕ್ಕೆ ಟೀಪೂ ಸೇರ್ಪಡೆಯಾಗಬೇಕಿದೆ. ಬಸವಣ್ಣನ ಕುರಿತಾದ ತಮ್ಮ ಒಂದು ಲೇಖನದಲ್ಲಿ ರಾಜೇಂದ್ರ ಚೆನ್ನಿಯವರು 'ಬಸವಣ್ಣ ಮತ್ತು ಟೀಪು' ಇವರಿಬ್ಬರ ಸಾವು ಕನ್ನಡಿಗರನ್ನು ಕಾಡಿದಷ್ಟು ಬೇರಾರ ಸಾವೂ ಕಾಡಿಲ್ಲ ಎಂದು ಗಮನಿಸಿದ್ದಾರೆ. ಇದು ಎಷ್ಟು ತಲಸ್ಪರ್ಶಿಯಾದ ಹೇಳಿಕೆ. ಈ ವಸ್ತುವನ್ನಿಟ್ಟುಕೊಂಡೇ ಚಿಂತಕರು ಮಹತ್ತರವಾದ ಪುಸ್ತಕ ತರಬಹುದು. ಅದರ ಬದಲು, ಬಿಕೆ ಚಂದ್ರಶೇಖರರು ಇತ್ತೀಚೆಗೆ ಪ್ರಜಾವಾಣಿಯಲ್ಲಿ ಬರೆದಿರುವಂತೆ ಅಳುಮುಂಜಿಯ ತೆರನಾದ ಡಿಫೆನ್ಸ್-ಗೆ ಇಳಿಯಬಾರದು. ಅದರಿಂದ ಸ್ವಲ್ಪವಷ್ಟೇ ಲಾಭವಾಗಲಿದೆ. ನಿಜ, ಭೈರಪ್ಪನವರು ಮತ್ತಿತರ ವಾದದಲ್ಲಿ ಅನೇಕ ತಪ್ಪುಗಳಿವೆ. ಕೆಲವು ವೈಚಾರಿಕ ತಪ್ಪುಗಳನ್ನು ಎತ್ತಿತೋರಿಸುವ ತೀವ್ರತೆ ನನ್ನಲ್ಲಿತ್ತಾದರೂ ಅದನ್ನು ಪ್ರಯತ್ನಪೂರ್ವಕ ತಡೆಹಿಡಿದಿದ್ದೇನೆ. (ಕಾರ್ನಾಡರ ವಾದದಲ್ಲಿಯೂ ಅನೇಕ ತಪ್ಪುಗಳಿದ್ದು ಮೂಲಭೂತ ಎಂದೆನ್ನಿಸಿದ್ದಷ್ಟನ್ನೇ ಇಲ್ಲಿ ತಂದಿದ್ದೇನೆ.) ಆ ದಾರಿ ಮಾತ್ರವೇ ಆದರೆ ಅನೇಕ ಅಪಾಯಗಳಿವೆ. ಆ ರೀತಿಗಳನ್ನು, ವಿವರಗಳನ್ನರಗಿಸಿಕೊಂಡು ಹೊಸ ರೀತಿಗಳನ್ನು ಹುಡುಕಬೇಕಿದೆ. ಪೌರಾಣಿಕ ಪ್ರಜ್ಞೇಯೇ ಮುಖ್ಯವಾಗಿದ್ದ ಭಾರತೀಯರಾದ ನಾವು, ಮನುಕುಲದ ಈ ಒಂದು ಘಟ್ಟದಲ್ಲಿ ಇತಿಹಾಸ ಪ್ರಜ್ಞೆಯನ್ನು ಎದುರಿಸಿ ಅರಗಿಸಿಕೊಳ್ಳಲೇಬೇಕಾದ ಸವಾಲಿದೆ. ಸದ್ಯಕ್ಕೆ ಸಿದ್ಧ-ಮಾದರಿಗಳಲ್ಲಿ ನಡೆದಿರುವ ನಾವು, ಹೊಸಮಾದರಿಗಳತ್ತ ನಡೆದು, ಟೀಪುವಿನ ಇತಿಹಾಸವನ್ನು ರಚಿಸಬೇಕಿದೆ. ಇದು ಟೀಪೂ ಇತಿಹಾಸವಷ್ಟೇ ಅಲ್ಲದೇ, ನಮ್ಮ ಇತಿಹಾಸ ಪ್ರಜ್ಞೆಯನ್ನೇ ಪರಿಷ್ಕರಿಸುವಂತೆ ಇರಬೇಕಾಗಿರುವುದು, ಹೊಸಪ್ರಜ್ಞೆಯ ಗಳಿಕೆಯತ್ತ ಸಾಗಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ. 'ಗತಕಥನ'-ದಂತಹ ಪುಸ್ತಕಗಳು ಈ ದಿಸೆಯಲ್ಲಿ ಒಂದು ಪ್ರಯತ್ನವೆನ್ನಬಹುದು.

ನನಗೆ ಟೀಪು ಹೇಗೆ ಕಾಣಿಸುತ್ತಾನೆ ಎನ್ನುವುದನ್ನು ಇಲ್ಲಿ ನನಗೇ ಸ್ಪಷ್ಟಗೊಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ನಾನು ಟೀಪುವನ್ನು ಮೊದಲು ಓದಿದ್ದು ಅಮರ ಚಿತ್ರ ಕಥೆಯಲ್ಲಾದ್ದರಿಂದ ಆ ರಮ್ಯ ಕಲ್ಪನೆಯನ್ನು ಮತ್ಯಾವ ವೈಚಾರಿಕ ವಿವರವೂ ತೊಡೆದುಹಾಕಲಾಗಲಿಲ್ಲ. ಆ ಕಾಲಕ್ಕೆ ಅವನು ನನಗೆ ಸ್ವಾತಂತ್ರ್ಯವೀರ ಮತ್ತು ಅತ್ಯುತ್ತಮ ರಾಜ. ಈ ಕುರಿತಾದ ವಿವಾದಗಳು ನನಗೆ ಮೊದಲ ೨೦ ವರ್ಷಗಳು ತಟ್ಟಲೇ ಇಲ್ಲ, ಅದೇನಿದ್ದರೂ ಕಳೆದ ದಶಕದ ಒಂದು ಬೆಳವಣಿಗೆ, ಆದರೆ ಸಂಜಯ್ ಖಾನನ ಟೀಪು ಧಾರಾವಾಹಿಯಲ್ಲಿ ಮೈಸೂರು ಅರಸನನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದರಿಂದ ಕುಪಿತನಾಗಿದ್ದೆ. ಅದೇನಾದರೂ ಟೀಪುವಿನ ಮೇಲಣ ಪ್ರೀತಿಯನ್ನು ಕಡೆಮೆಯಾಗಿಸಿತೋ ಎಂದು ಒಮ್ಮೊಮ್ಮೆ ಆತಂಕಗೊಂಡಿದ್ದೇನೆ. ಅದು ಸ್ಪಷ್ಟವಿಲ್ಲ. ನಂತರದ ದಿನಗಳಲ್ಲಿ 'ಸ್ವಾತಂತ್ರ್ಯ ವೀರ' ಎನ್ನುವ ತೀವ್ರವಾದ ಕಲ್ಪನೆಯೇ ಸಡಿಲಗೊಂಡದ್ದರಿಂದ, ಕ್ರಮೇಣ ಅದು ಟೀಪುವಿಗೂ ಅನ್ವಯವಾಯಿತು. ಬಲಪಂಥೀಯರು ಕೂಗಿ ಕೂಗಿ ಹೇಳಿರುವ ವಿವರಗಳಿಂದ ಅವನನ್ನು ವಿಲನ್-ನಾಗಿ ನೋಡದೇ ಹೋದರೂ, ಮನುಷ್ಯ ಸಹಜ ದೌರ್ಬಲ್ಯಗಳನೇಕವನ್ನು ಅವನು ಮೀರಲಾಗಲಿಲ್ಲ ಎನ್ನುವ ಅಂಶ ಮನದಟ್ಟಾಗಿ ನನ್ನ ಮೊದಲಿನ ರಮ್ಯ ಕಲ್ಪನೆ ಸ್ವಲ್ಪ ಮಸುಕಾಯಿತು, ಆದರೆ ತೊಡೆದುಹೋಗಲಿಲ್ಲ. ಟೀಪುವನ್ನು ಮತಾಂಧನೆನ್ನಲು ನನಗೆ ನೈತಿಕ ಹಕ್ಕಾದರೂ ಏನು? ನನ್ನ ದೌರ್ಬಲ್ಯದ ಘಳಿಗೆಗಳಲ್ಲಿ ನಾನು ನನ್ನದೇ ಚಿಕ್ಕ ಪ್ರಭಾವ-ವಲಯದಲ್ಲಿ ಮತಾಂಧನಾಗದೇ ಉಳಿದೆನೇ - ಎನ್ನುವ ಪ್ರಶ್ನೆಗೆ ತಲೆಯೆತ್ತಿ ಹೌದು ಎಂದು ಹೇಳುವಷ್ಟು ದನಿಯಿಲ್ಲ. ಹೀಗಿರುವಾಗ, ರಾಜನಾದ ಅವನ ತಪ್ಪು-ಒಪ್ಪುಗಳೆರಡೂ ಸ್ಪಷ್ಟವಾಗಿ ಕಾಣುವುದಂತೂ ದಿಟವೇ. (ಆದ್ದರಿಂದ, ಟೀಪುವಿನ ದೌರ್ಬಲ್ಯದ ಕುರಿತು ಸ್ಪಷ್ಟವಾಗಿ ಮಾತನಾಡದೇ, ಅದನ್ನು ಒಪ್ಪಿಕೊಳ್ಳದೇ ಅವನನ್ನು ಹೊಗಳುವವರನ್ನೂ, ಅವನ ತೇಜಸ್ಸನ್ನು ಹೊಗಳದೇ ಅವನನ್ನು ತೆಗಳುವವರನ್ನೂ ನಾನು ನಂಬುವುದಿಲ್ಲ). ಆದರೆ ತನ್ನ ಸ್ವಪ್ರಯತ್ನದಿಂದಲೋ, ಅದೃಷ್ಟವಶದಿಂದಲೋ ಟೀಪು ಬೇರೆಯ ಅನೇಕ ರಾಜರಿಗಿಂತ ಕೆಲ ಅಂಶಗಳಲ್ಲಿ ದೂರದೃಷ್ಟಿಯುಳ್ಳವನಾಗಿದ್ದ. ಆ ಕಾಲದಲ್ಲಿ ಬೇರೆ ಯಾವ ರಾಜನೂ ಕಾಣದ ರೀತಿಯಲ್ಲಿ ವಸಾಹತುಶಾಹಿಯನ್ನು ಗ್ರಹಿಸಿದ್ದ. ಈ ಕಾಲದಲ್ಲಿ ನಾವು 'ಸುಧಾರಣೆ' ಎನ್ನುವ ಪರಿಕಲ್ಪನೆಯಡಿಯಲ್ಲಿ ಹೇಳುವುದನ್ನು ಟೀಪು ಸಾಧಿಸಿ ತೋರಿದ್ದ. ನಿಸ್ಸಂಶಯವಾಗಿ ಇದರಿಂದ ಮೈಸೂರು ಆರೋಗ್ಯಕರ ಆಧುನಿಕ ಸಮಾಜವಾಗುವತ್ತ ದಾಪುಗಾಲನ್ನಿಟ್ಟಿತು. (ಮೈಸೂರು ಅರಸರು ಕೂಡಾ ಇದಕ್ಕಿತ್ತ ಕಾಣಿಕೆ ಕಡಿಮೆಯಲ್ಲ). ಇದು ಪ್ರತಿಯೊಬ್ಬ ಕನ್ನಡಿಗನೂ ಸಂಭ್ರಮಿಸಬೇಕಾದ ವಿಷಯ. ಅದೇ ಕಾಲಕ್ಕೆ ತನ್ನ ಅಸ್ಥಿರತೆಯ ಕಾಲದಲ್ಲಿ ಮತಾಂಧತೆಯತ್ತ ಟೀಪು ನಡೆದುಬಿಟ್ಟನೇ, ಅಥವಾ ಗೊತ್ತಿಲ್ಲದೇ ಅ ಬಗೆಯ ಪ್ರಮಾದಗಳನ್ನೆಸಗಿಬಿಟ್ಟನೇ ಎಂದು ಪ್ರತಿಯೊಬ್ಬ ಕನ್ನಡಿಗನೂ ದುಃಖಿಸಬೇಕಾಗುತ್ತದೆ. ಅದಕ್ಕೆ ಜವಾಬ್ದಾರಿಯನ್ನು ಕೇವಲ ಟೀಪುವಿನ ಮೇಲೆ ಎತ್ತಿಹಾಕದೇ, ಸ್ವತಃ ತಾನೇ ಅದನ್ನು ಹೊರಬೇಕಾಗುತ್ತದೆ. ನಾನೇನೂ ಇತಿಹಾಸಕಾರನಲ್ಲ, ಜೀವಂತ ಮನುಷ್ಯನಾದ ನನಗೆ ಗೊತ್ತಿರುವ ವಿವರಗಳಿಂದ ನಾನು ಕಟ್ಟಿಕೊಂಡಿರುವ ಕಲ್ಪನೆಯಿದು. ವರ್ತಮಾನವನ್ನು ನಿರ್ವಹಿಸಲಿಕ್ಕೆ ನನಗಿಷ್ಟು ಸದ್ಯಕ್ಕೆ ಸಾಕು.

ಈ ಲೇಖನದಲ್ಲಿ ನನಗೆ ಗೊತ್ತೇ ಇಲ್ಲದಿರುವ ಕಾರ್ನಾಡರನ್ನು, ಬಿಕೆ ಚಂದ್ರಶೇಖರ್-ರನ್ನು ತೀವ್ರವಾಗಿ ಟೀಕಿಸಿದ್ದೇನೆ. ಕ್ಷಮೆಯಿರಲಿ ಎಂದು ಹೇಳಿದರೂ, ಪ್ರೀತಿ, ನಿರೀಕ್ಷೆ ಇರುವಲ್ಲಿ ಇಂಥದ್ದು ಸಹಜ ಎನ್ನ್ನುವುದು ಅನುಭವಸ್ಥರಾದ ಅವರಿಗೆ ತಿಳಿದೇ ಇರುತ್ತದೆ.

7 Comments:

At 4:55 AM, Blogger Sudarshan said...

ನಿಮ್ಮ ಈ ಲೇಖನಮಾಲೆ `ಟಿಪ್ಪು ವಿವಾದದ' ಮೂಲಕ ಇತಿಹಾಸದ ಸಂಗತಿಯೊಂದನ್ನು ಸಮಾಧಾನಕರವಾಗಿ ಆಳವಾಗಿ, ವಿಸ್ತಾರವಾಗಿ ಹೇಗೆ ಗ್ರಹಿಸಬೇಕೆಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ನಮ್ಮ ನಿಮ್ಮ ಆವರಣದಲ್ಲೇ ಕಂಡುಬರುವ ಮೇಲ್ನೋಟಕ್ಕೆ ಗೌಣವೆನಿಸುವ ಸಂಗತಿಗಳನ್ನೇ ಎತ್ತಿಕೊಂಡು, ಅವುಗಳ ಬೆಳಕಿನಲ್ಲೇ, ಚಾರಿತ್ರಿಕ ಸಂಗತಿಯೊಂದರ ನಿರೂಪರಣೆಗಳು ಯಾವ ಯಾವ ದಿಕ್ಕಿನಿಂದ ಬರುತ್ತಿವೆ ಎಂಬುದನ್ನು ಅವಲೋಕಿಸುತ್ತಾ ಎಡ-ಬಲ-ಪ್ರಗತಿಪರ ಪಂಥಗಳ ತಾರತಮ್ಯವಿಲ್ಲದೇ ವಿಮರ್ಶಿಸಿದ್ದೀರಿ (ಆದರೂ ನಿಮ್ಮ ಒಲವು ನಾವು-ನೀವುಗಳು ಹುಡುಕುತ್ತಿರುವ ತಡಕಾಡುತ್ತಿರುವ ಒಂದು ಬಗೆಯ ಸೌಹಾರ್ದಯುತ, ಸಾಮರಸ್ಯಪರ 'ಸಮಾಜವಾದೀ' ಕಲ್ಪನೆಯತ್ತ ಇದೆ ಎಂಬುದು ಲೇಖನದುದ್ದಕ್ಕೂ ವ್ಯಕ್ತವಾಗುತ್ತದೆ). ಅದೇ ರೀತಿ ಈ ಲೇಖನ ಇವೊತ್ತಿನ `ಜಾಗತೀಕರಣದ ಸಂದರ್ಭದಲ್ಲಿ ರಾಷ್ಟ್ರೀಯತೆ' ಎಂಬ ಸಂಕೀರ್ಣ ವಿಷಯವನ್ನು ಪರಿಶೀಲಿಸಲು ಯತ್ನಿಸುವ ಮೊದಲ ಹೆಜ್ಜೆಯೂ ಆಗಿದೆ. ಈ ಬುನಾದಿಯ ಮೇಲೆ ನಿಮ್ಮ ಇನ್ನಷ್ಟು ಭದ್ರವಾದ ಚಿಂತನೆಗಳ ಕಟ್ಟಡ ಕಟ್ಟುವಂತಾಗಲಿ.

-ಸುದರ್ಶನ

 
At 7:45 AM, Blogger Kesari said...

ನಿಮ್ಮ ಬರವಣಿಗೆ ಚೆನ್ನಾಗಿದೆ. ಆದರೆ ಮೊದಲು ಟಿಪ್ಪು ಕುರಿತ ಸತ್ಯಾಸತ್ಯತೆಗಳನ್ನು ವಿವರಿಸಿ ಆಮೇಲೆ ಅದರ ಬಗ್ಗೆ ವಿವಾದದಲ್ಲಿ ಭಾಗವಹಿಸಿರುವವರ ಬಗ್ಗೆ ವಿಮರ್ಶಿಸಿದ್ದರೆ ಒಳ್ಳೆಯದಿತ್ತು ಎಂಬುದು ನನ್ನ ಅನಿಸಿಕೆ. (ಅಂದ ಹಾಗೆ ನಿಮ್ಮ ಬರಹದ ಓದುಗರು ಕೂಡ fence sitters ಆಗಬಹುದಲ್ಲವೇ? fence sitters ಗಳ ಅಭಿಪ್ರಾಯ ತಪ್ಪು ಆಗಿರುವ ಸಾಧ್ಯತೆಗಳ ಜೊತೆಗೆ ಸತ್ಯ ಆಗಿರುವ ಸಾಧ್ಯತೆ ಉಂಟು?)
--
ಯಾವುದೇ ವಿಷಯವನ್ನು ಯಾರೇ ಹೇಳಲಿ ಅದರ ಸತ್ಯಾಸತ್ಯತೆಯನ್ನು ಮೊದಲ ನೋಡಬೇಕಾಗುತ್ತದೆ. ನಂತರ ಅದನ್ನು ಹೇಳುವವರು, ವಿರೋಧಿಸುವವರು ಎಡಪಂಥೀಯರೆ, ಬಲಪಂಥೀಯರೆ, ಸತ್ಯವಂತರೆ, ದುರುದ್ದೇಶವನ್ನಿಟ್ಟುಕೊಂಡವರೆ ಎಂದು ವಿಮರ್ಶಿಸಬೇಕು. ಆದರೆ ಟಿಪ್ಪು ವಿಷಯದಲ್ಲಿ ಟಿಪ್ಪುಗಿಂತ ಎಡ, ಬಲವೇ ಮುಖ್ಯವಾಗಿ ಹೋಗಿದೆ.

ಟಿಪ್ಪುವನ್ನು ಗೋಡ್ಸೆಯ ಉದಾಹರಣೆಯೊಂದಿಗೆ ನಾನು ಹೋಲಿಕೆ ಮಾಡಬಹುದು.
ಗೋಡ್ಸೆ ಕೂಡ ಬ್ರಿಟೀಷರ ವಿರುದ್ಧ ಹೋರಾಡಿದವ, ದೇಶಪ್ರೇಮಿ. ಆದರೆ ಗಾಂಧೀಜಿ ಅವರನ್ನು ಕೊಂದ ಕಾರಣಕ್ಕೆ ದೇಶದ್ರೋಹಿ ಎನಿಸಿಕೊಂಡ. ಕೆಲವರು ಗೋಡ್ಸೆಗೆ ಇದ್ದ ಕಾರಣಗಳನ್ನು ಸಮರ್ಥಿಸಿಕೊಳ್ಳಬಹುದು ಆದರೆ ಪ್ರಜ್ಞಾವಂತರಾರೂ ಹತ್ಯೆಯನ್ನು ಸಮರ್ಥಿಸಿಕೊಳ್ಳಲಾರರು. (ಬಲಪಂಥೀಯರಲ್ಲದ ರವಿ ಬೆಳೆಗೆರೆ ಅವರು ಬರೆದ ಪುಸ್ತಕದ ಬಗ್ಗೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಾ. ಸೋಮೇಶ್ವರ ಪರಿಚಯಿಸಿದರು. ಅದರಲ್ಲಿ ಬೆಳೆಗೆರೆ ಅವರು ಗಾಂಧೀಜಿ ಅವರಿಂದಾದ ಕೆಲವು ತಪ್ಪುಗಳನ್ನು ಮತ್ತು ಗೋಡ್ಸೆಗೆ ಕೊಲೆಯ ಕಾರಣಗಳನ್ನು ತಿಳಿಸಿದ್ದಾರೆ.)

ಟಿಪ್ಪು ಕೂಡ ಬ್ರಿಟೀಷರ ವಿರುದ್ಧ ಹೋರಾಡಿದವನೇ ಆದರೂ ಅವನ ಮತಾಂಧ ಕೃತ್ಯಗಳು ಅವನನ್ನು ಕೆಟ್ಟ ಮನುಷ್ಯನನ್ನಾಗಿ ಮಾಡುತ್ತವೆ. ಈ ಅಂಶಗಳನ್ನು ಮುಚ್ಚಿಟ್ಟು ಅವನೊಬ್ಬ ಘನವೆತ್ತ ಅರಸ ಎಂದು ತೋರಿಸುವುದೇ ಎಡಪಂಥೀಯರ ಉದ್ದೇಶ. ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಎಡಬಿಡಂಗಿ ಬರಹಗಳೇ ಇದನ್ನು ತೋರಿಸುತ್ತದೆ. ಬಲಪಂಥೀಯರು ಟಿಪ್ಪುವಿನ ಒಂದೂ ಒಳ್ಳೆಯ ಗುಣಗಳನ್ನು ಬರೆಯಲಾರರು. ಏಕೆಂದರೆ ಟಿಪ್ಪುವಿನ ಬಗ್ಗೆ ಈ ಮೊದಲೇ ಜನರಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಅವನ್ನೇ ಪುನಃ ಬರೆಯುವುದಕ್ಕಿಂತ ಗೊತ್ತಿಲ್ಲದನ್ನು ಅವರು ಹೇಳಬಯಸುತ್ತಾರೆ. ಆದರೆ ಪಠ್ಯಪುಸ್ತಕಗಳನ್ನು ಬರೆಯುವಾಗ ಎರಡೂ ಮಗ್ಗಲುಗಳನ್ನು ಪಕ್ಷಾತೀತವಾಗಿ ವಿವರಿಸಬೇಕು.

"One may say why dwell upon unpleasant facts. True, but can we develop the character of a nation without facing the realities of life, however unpleasant they may be? Can we develop the maturity of thought that comes with the sense of suffering and the sense of responsibility? The purpose of knowing these facts is not to heap vengeance, but to strengthen our national character, to avoid the weaknesses that were responsible for the plight of our ancestors. The Muslims of present day India are also part of this character building because they must know that their ancestors also suffered, that as far as the past is concerned all Indians were in the same boat and that there were no victors and no losers in that great human tragedy. Knowing thus, perhaps they would develop proper wisdom and understanding and right attitude towards other communities."

ಸತ್ಯಮೇವ ಜಯತೇ.
must visit: www.hinduwisdom.info

 
At 8:10 AM, Blogger Saamaanya Jeevi said...

ಕೇಸರಿಯವರೇ,

ನನ್ನ ಲೇಖನದಲ್ಲಿ ಕೆಲವು ತಪ್ಪಿದ್ದರಿಂದ ಅದನ್ನು ಇನ್ನಷ್ಟು ತಿದ್ದಿದ್ದೇನೆ. ಸ್ವಲ್ಪ ಹಳೆಯ ವರ್ಷನ್ ಲೇಖನವನ್ನು ಮೊದಲು ಅಪ್ಲೋಡ್ ಮಾಡಿಬಿಟ್ಟಿದ್ದೆ.

ಮಿಕ್ಕಂತೆ ನಿಮ್ಮ ಪ್ರತಿಕ್ರಿಯೆಗೆ ನಂತರ ಉತ್ತರಿಸುತ್ತೇನೆ.

ಶಿವು

 
At 12:11 AM, Blogger Kesari said...

ಟಿಪ್ಪು ಕುರಿತು ಪಾಕಿಸ್ತಾನದ ವೆಬ್ ಸೈಟ್ ನ ಪ್ರತಿಪಾದನೆಗೂ ನಮ್ಮ "ಎಡಪಂಥೀಯ"ರ ಪ್ರತಿಪಾದನೆಗೂ ಏನಾದರೂ ವ್ಯತ್ಯಾಸ ಇದೆಯೇ ನೋಡಿ.

http://www.storyofpakistan.com/person.asp?perid=P073

ಅಂದ ಹಾಗೆ ನಾವೆಲ್ಲ ಮಾಡುವ ತಪ್ಪೊಂದಿದೆ. ಈ JNU ಇತಿಹಾಸಕಾರರನ್ನು, so-called ಎಡಪಂಥೀಯರನ್ನೆಲ್ಲ marxst ಎಂದು ಕರೆಯುತ್ತೇವೆ.ಆದರೆ ಇವರು ನಿಜವಾದ marxist ಅಲ್ಲ.

ರಷ್ಯಾದ ಕಮ್ಯುನಿಸ್ಟರು ಆರ್ಯರ ಆಕ್ರಮಣ ಸಿದ್ಧಾಂತವನ್ನು ಎಂದೂ ಒಪ್ಪಲಿಲ್ಲ. ಆದರೆ ಭಾರತೀಯ ಕಮ್ಯುನಿಸ್ಟರಿಗೆ ಆರ್ಯರ ಆಕ್ರಮಣ ಎಂಬುದು ಪವಿತ್ರ ಸಿದ್ಧಾಂತ

There is a vast difference that exists between what the so-called Indian 'Marxist' historians say and what Karl Marx and his followers in the Soviet Union wrote. Indian 'Marxists' are not Marxists at all; that is true about the members of the CPI(M) as well. Romila Thaper said very clearly that she is not a Marxist, but follows the method of Marx. Irfan Habib is a member of the Muslim religious organization, Babri Maszid Action Committee and thus, cannot be called Marxists. In fact, there are great similarities between the opinion of the Indian 'Marxists' historians and the Pakistani historians. Thus, it is better to call these Indian historians as pro-Pakistani and Pro-British historians rather than 'Marxists' historians, which they are not.

--
ರಷ್ಯಾದ ಕಮ್ಯುನಿಸ್ಟರು ಪೂರ್ವದ ಸಂಸ್ಕೃತಿಯನ್ನು ಶ್ರೇಷ್ಠವೆಂದು ಪರಿಗಣಿಸಿದ್ದರು ಮತ್ತು opium ಎಂದು ಜರಿದಿದ್ದಿಲ್ಲ.

ಆದರೆ ಚೀನಾದ ಕಮ್ಯುನಿಸ್ಟರು ಪೂರ್ವದ ಸಂಸ್ಕೃತಿಯಾದ ಬೌದ್ಧ ಮತವನ್ನೆ ದ್ವೇಷಿಸುತ್ತಾರೆ. ಪೋಪ್ ಅವರಿಗೆ ಸ್ವಾಗತ ನೀಡದೆ ಸತಾಯಿಸುವ ಇವರು ಹಿಂದೂ ಧರ್ಮದ ಕಂಚಿ ಶಂಕರಾಚಾರ್ಯರಿಗೆ ಆಮಂತ್ರಣ ನೀಡುತ್ತಾರೆ.

ಮತ್ತೆ ಭಾರತಕ್ಕೆ ಬಂದರೆ ಇಲ್ಲಿನ ಕಮ್ಯನಿಸ್ಟರು ಬೌದ್ಧ ಧರ್ಮವನ್ನು ಹೊಗಳಿ ಹಿಂದೂ ಧರ್ಮವನ್ನು ತೆಗಳುತ್ತಾರೆ. ಒಟ್ಟಿನಲ್ಲಿ ಇವರು "ಕನ್ ಫ್ಯೂಜನಿಸ್ಟ"ರು.

 
At 1:01 AM, Blogger Unknown said...

ನಿಮ್ಮ ಚಿಂತನೆಗಳು, ಕಾಳಜಿಗಳು ನಿಜವಾಗಿಯೂ ಮೆಚ್ಚಬೇಕಾದವುಗಳು. ನಿಮ್ಮ ಅಸ್ಥಿರ ಭಾವದ ಸಿದ್ಧಾಂತವನ್ನು ಯಾರಾದರೂ ಒಪ್ಪಿಕೊಳ್ಳಲೇ ಬೇಕು.

ನಿಮ್ಮ ಲೇಖನದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆದಿದ್ದೇನೆ. ಅದನ್ನು ಸ್ವೀಕರಿಸುವುದು ಬಿಡುವುದು ನಿಮಗೆ ಬಿಟ್ಟದ್ದು:)

ನಿಮ್ಮ ಲೇಖನಗಳ ಶೀರ್ಷಿಕೆ "ಟೀಪೂ ವಿವಾದದ ಒಳಸುಳಿಗಳಲ್ಲಿ" ಎಂದಾದರು ಲೇಖನ ಮಾತ್ರ "ಕಾರ್ನಾಡರ ಅವಾಂತರದ ಸುತ್ತ" ಎಂದಂತಾಗಿದೆ! ನೀವು ನಿಷ್ಪಕ್ಷಪಾತಿಯಾಗಿ ಲೇಖನವನ್ನು ಬರಿಯಲು ಯತ್ನಿಸಿದ್ದರೂ, ಕಾರ್ನಾಡರ ಬಗ್ಗೆ ನಿಮಗಿರುವ ಪ್ರೀತಿ, ಅವರ ಸೋಲಿನಿಂದ ನಿಮಗುಂಟಾದ ದುಃಖ ಲೇಖನದುದ್ದಕ್ಕೂ ಎದ್ದು ಕಾಣುತ್ತದೆ! ಅಕಸ್ಮಾತ್ತಾಗಿ ಕಾರ್ನಾಡರೆ ಗೆದ್ದಿದ್ದರೆ ಈ ರೀತಿ ಲೇಖನ ಬರೆಯುತ್ತಿದ್ದಿರಾ?:)

ನಿಮಗೆ ಟಿಪ್ಪುವಿನ ಬಗ್ಗೆ ಸತ್ಯ ಗೊತ್ತಾಗ ಬೇಕೋ ಅಥವಾ ಎಲ್ಲರೂ ಒಪ್ಪುವಂತಹ ಒಂದು ಇತಿಹಾಸ ಸೃಷ್ಟಿಯಾಗ ಬೇಕೋ?

ನಿಮಗೆ ಟಿಪ್ಪುವಿನ ಮೇಲೆ ಏನೂ ಕಾಳಜಿಯಿಲ್ಲ ಎನಿಸುತ್ತದೆ!:) ಇದ್ದಿದ್ದರೆ ನೀವೆ ಸಂಶೋಧನೆ ಮಾಡುತ್ತಿದ್ದಿರಿ! ನನಗೂ ಈ ವಿಷಯದಲ್ಲಿ ಆಸಕ್ತಿ ಹುಟ್ಟಿ ಸ್ವಲ್ಪ ಸಂಶೋಧನೆ ಮಾಡಿದೆ. ಮಾಸ್ತಿಯವರ ಸಣ್ಣಕತೆಗಳಲ್ಲಿ ಟಿಪ್ಪುವಿನ ಮತಾಂಧತೆಯ ಬಗ್ಗೆ ಚಿತ್ರಿಸಿದ್ದಾರೆ. ರಂಗನಾಥನ ವಿಗ್ರಹವೇ ಇಲ್ಲದಿದ್ದರೂ "ಬಿಳಿಗಿರಿ ರಂಗ" ನಾದದ್ದು ಹೇಗೆ ಎನ್ನುವುದಷ್ಟೇ ಸಾಕು. ಇದು ಐತಿಹಾಸಿಕ ಪುರಾವೆ ಅಲ್ಲದಿರಬಹುದು, ಆದರೆ ಇಂದಿನ ವಾಸ್ತವವನ್ನು ವಿವರಿಸುತ್ತದೆ.

"ಇತಿಹಾಸ" ಅಂದರೆ "wasn't it so". ಅದನ್ನು ವಿಜ್ಞಾನದಂತೆ ಎಲ್ಲರೂ ಒಪ್ಪುವಂತೆ ಚಿತ್ರಿಸುತ್ತೇವೆ ಎನ್ನುವುದು ಮೂರ್ಖತನವಾಗುತ್ತದೆ. ಇತಿಹಾಸದ ಬಗ್ಗೆ ಚರ್ಚೆಗಳು ಯಾವಾಗಲೂ ಇರುತ್ತದೆ ಮತ್ತು ಇರಬೇಕು!!

ತೀವ್ರವಾದಿಗಳು ಎಲ್ಲಾ ಪಂಥದಲ್ಲೂ ಇರುತ್ತಾರೆ ಮತ್ತು ಇರಬೇಕು! ಈ ತೀವ್ರಗಾಮಿಗಳು ಪಂಥದ ಸಿದ್ಧಾಂತ ತಮ್ಮ ಸ್ವೊತ್ತು ಎನ್ನುವಂತೆ ಆಡುತ್ತಾರೆ. ಇದು ಅವರ ಅಹಂಕಾರ ವರ್ಧನೆಗೆ ಒಂದು ಮಾರ್ಗ. ಮಾನವ ಸಹಜ ದೌರ್ಬಲ್ಯ. ಇದರಿಂದ ಸಿದ್ಧಾಂತಕ್ಕೂ ಕೆಟ್ಟ ಹೆಸರು. ಮೊದಲಿಂದಲೂ ಬಲಪಂಥೀಯರಲ್ಲಿ ಅಂತಹವರಲ್ಲಿ ಹೆಚ್ಚು. ಈಗ ಎಡಪಂಥಕ್ಕೆ ಕಾರ್ನಾಡರಂತಹವರು ತಮ್ಮ ಕೊಡುಗೆ ನೀಡುತ್ತಿದ್ದಾರೆ.

ತೀವ್ರವಾದಿಗಳು ನಮ್ಮನ್ನು ಎಡ-ಬಲದಿಂದ ಎಳೆದು ನಾವು ನೇರ ಹೋಗುವಂತೆ ಮಾಡುತ್ತಾರೆ! ಇದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕು!:)

ನಿಮ್ಮ "ನಾವೆಲ್ಲಾ ಹಿಂದು..." ಘಟನೆ ನಿಜಕ್ಕೂ ಚೆನ್ನಾಗಿದೆ. ತೀರ್ಪುಗಾರರನ್ನು ಮೆಚ್ಚಬೇಕು. ಆದರೆ ನೀವು ಈ ಸ್ಲೋಗನ್ ಬಗ್ಗೆ ನಿಜವಾಗಿಯೂ ಯೋಚಿಸಿದ್ದೀರಾ? ಇದರ ಮೂಲ? ಇದರ ಅಂತರಾರ್ಥ? "ಹಿಂದು"? ಆ ಯೋಚನೆ, ಸಂಶೋಧನೆಯಿಂದ ನೀವು ಕಂಡು ಕೊಂಡ ಸತ್ಯ ನಿಮಗೆ ತೃಪ್ತಿ ತಂದಿದೆಯೆ? ಹಾಗಿದ್ದರೆ ಸರಿ. ಇಲ್ಲವಾದರೆ ನೀವು ಜೀವಮಾನ ಪೂರ್ತಿ ಸಂಶಯದಿಂದಲೇ ಇರುವಿರಿ:)

ಪರ್ವದಂತಹ ಕಾದಂಬರಿ ಬರೆದು ಸಾಂಪ್ರದಾಯಿಕ ನಂಬಿಕೆಗಳಿಗೆ ಸೆಡ್ಡು ಹೊಡೆದ ಭೈರಪ್ಪನವರನ್ನು ನೀವು ಬಲ ಪಂಥೀಯರನ್ನಾಗಿರಿಸುವುದು ನನಗೆ ಆಶ್ಚರ್ಯವುಂಟು ಮಾಡಿದೆ. ಇರಲಿ. ಸದಾ ಸಾಹಿತ್ಯ ಸೃಷ್ಟಿ, ಸಂಶೋಧನೆಗಳಲ್ಲೇ ತೊಡಗುವ ಭೈರಪ್ಪನವರು ಯಾಕೆ ಹಾಗೆ ಪ್ರತಿಕ್ರಿಯಿಸಿದರು ಎನ್ನುವ ಆಶ್ಚರ್ಯಕರ ಸಂಗತಿ ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ. ಕಾರ್ನಾಡರಂತೂ ಭೈರಪ್ಪನವರು ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ಸಹಾನುಭೂತಿ ತೋರಿದ್ದಾರೆ. ಇದರ ಹಿಂದಿನ ಮರ್ಮ ಸಧ್ಯದಲ್ಲೇ ಅನಾವರಣಗೊಳ್ಳಲಿದೆ!!

 
At 6:07 AM, Blogger Saamaanya Jeevi said...

ಕೇಸರಿಯವರ ಮೊದಲ ಪ್ರತಿಕ್ರಿಯೆಗೆ ಉತ್ತರ:

ಟೀಪುವಿನ ಕುರಿತಾದ ಸತ್ಯಾಸತ್ಯತೆಗಳನ್ನು ಹೆಚ್ಚು ಆಳದಲ್ಲಿ ಹೇಳುವುದು ಇತಿಹಾಸಕಾರರಿಗಷ್ಟೇ ಸಾಧ್ಯ. ಅದನ್ನೂ ಅನುಮಾನಿಸಬೇಕಾಗುತ್ತದೆ. ಆದ್ದರಿಂದಲೇ ಅದನ್ನು ಚಂದ್ರಶೇಖರ್, ಶೆಟ್ಟರ್ ಮತ್ತು ರಾಜಾರಾಮ ಹೆಗಡೆಯಂಥವರಿಗೆ ಬಿಟ್ಟಿದ್ದೇನೆ.

Fence sitters ಗಳು ತಮ್ಮ ಆವರಣದ ಸತ್ಯವನ್ನಷ್ಟೇ ಹೇಳುವಾಗ ಅದು ಸರಿಯಿರುತ್ತದೆ. ವಿಶಾಲವಾದ ಭಿತ್ತಿಯಲ್ಲಿ ಅದನ್ನು extrapolate ಮಾಡುವಾಗ ತೊಂದರೆಯಾಗುತ್ತದೆ. ಅಲ್ಲದೇ, ನಾನು ನನ್ನ fence sitters ಪರಿಕಲ್ಪನೆಯನ್ನು ಬದಲಾಯಿಸಿದ್ದೇನೆ.

ನಿಸ್ಸಂಶಯವಾಗಿ, ಸತ್ಯಾಸತ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನನ್ನ ವಾದವೆಂದರೆ ಇಲ್ಲಿ ಖಚಿತವಾಗಿ ವಾದ ಮಾಡುತ್ತಿರುವ ಎಡ, ಬಲ ಪಂಥೀಯರು ಆಂಶಿಕ ಸತ್ಯಗಳನ್ನು ಪೂರ್ಣ ಸತ್ಯವನ್ನು ಘೋಷಿಸುವ ತಾರಕ ಸ್ವರದಲ್ಲಿ ಹೇಳುತ್ತಿದ್ದಾರೆ. ಆ ರಾಜಕೀಯವನ್ನು ಅರಿಯುವ ಪ್ರಯತ್ನವೇ ಈ ಲೇಖನ.

ನಾನು ಟೀಪುವಿನ ಸ್ವಾತಂತ್ರ್ಯವೀರ ಇಮೇಜನ್ನು ಒಂದಿಷ್ಟು ದ್ರವೀಕರಿಸಿದ್ದೇನೆ ಎಂದುಕೊಂಡಿದ್ದೇನೆ. ಆದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವನ ಮಹತ್ವವನ್ನೂ ವಿವರಿಸಿದ್ದೇನೆ. ಗೋಡ್ಸೆಯೊಂದಿಗಿನ ನಿಮ್ಮ ಸಮೀಕರಣ ನನಗೆ ತಪ್ಪೆನ್ನಿಸುತ್ತಿದೆ. ಗೋಡ್ಸೆಯ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಟೀಪುವಿನ ಕಾಲಕ್ಕಿಂತಲೂ Fashionable. ಅಲ್ಲದೇ ಇನ್ನಿತರ ರಾಜರುಗಳು ಬ್ರಿಟಿಷರನ್ನು ಗ್ರಹಿಸಿದ ರೀತಿ ಟೀಪುವಿನ ಗ್ರಹಿಕೆಗೆ ಹೋಲಿಸಿದರೆ ಕಳಪೆ. ಈ ವಿಚಾರದಲ್ಲಿ Tipu seems to be ahead of his time. ಅಷ್ಟಕ್ಕಾಗಿ ಟೀಪುವನ್ನು ಮೆಚ್ಚುವುದರಲ್ಲಿ ಯಾವ ಬಾಧಕವು ಇಲ್ಲ. ಗಾಂಧಿ-ಗೋಡ್ಸೆ ವಿಚಾರ ಇಲ್ಲಿಗೆ ಹೊರತಾದ್ದರಿಂದ ಅದನ್ನು ವಿಸ್ತರಿಸುವುದಿಲ್ಲ.

ಮತಾಂಧತೆಯನ್ನು ನಿಸ್ಸಂಶಯವಾಗಿ ಖಂಡಿಸಲೇಬೇಕು. ಆದರೆ ಟೀಪುವಿನ ವಿಚಾರದಲ್ಲಿ ತುಂಬಾ ದ್ವಂದ್ವಾತ್ಮಕ ದಾಖಲೆಗಳು ಸಿಗುತ್ತವೆ. ಆದ್ದರಿಂದಲೇ ಅವನನ್ನು ಮತಾಂಧ ಹೌದು ಅಥವಾ ಅಲ್ಲ ಎನ್ನುವುದನ್ನು ರತ್ನಖಚಿತವಾಗಿ ಹೇಳುವುದು ಕಷ್ಟ. ಆದರೆ, ಅವನ ಕಾಲದಲ್ಲಿ ಹಿಂಸಾತ್ಮಕ ಮತಾಂತರಗಳು ನಡೆದವೇ ಎಂದರೆ ಹೌದು ಎನ್ನಲೇಬೇಕು. ಈ ತೆರನಾದ ಅನೇಕ ಮತಾಂತರಗಳು ಹಿಂದು ರಾಜರೆನ್ನಿಸಿಕೊಂಡವರ ಕಾಲದಲ್ಲಿ ಮತ್ತು ಹಿಂದೂ ಧಾರ್ಮಿಕರೆನ್ನಿಸಿಕೊಂಡವರ ಕಾಲದಲ್ಲಿ ನಡೆದಿದೆ. ಇದೆಲ್ಲಾ ಆ ಸಂದರ್ಭದ ರಾಜಕೀಯವೋ, ದುರ್ಭರವಾದ ಧಾರ್ಮಿಕ ಮತಾಂಧತೆಯೋ ಹೇಳುವುದು ಸುಲಭವಲ್ಲ. ಬಲಪಂಥೀಯರು ಹೊಸದಾದ ವಿಚಾರವನ್ನು ಮಾತ್ರ ಹೇಳುತ್ತಿದ್ದಾರೆ ಎಂದು ನನಗನ್ನಿಸುತ್ತಿಲ್ಲ. ಹಳೆಯ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಪ್ರತಿಪಾದಿಸುತ್ತಾ ಇದ್ದಾರೆ. ಸಮಸ್ಯೆ ಇರುವುದು ಇಲ್ಲೇ. ಅವರಿಗೆ ಈ ಕುರಿತು ಒಂದು ತಲ್ಲಣವಿಲ್ಲ. ದ್ವಂದ್ವಗಳನ್ನು ಎದುರಿಸುವ ಮನಸ್ಸಿಲ್ಲ. ಪಠ್ಯಗಳನ್ನು ಬರೆಯುವಾಗ ಎರಡೂ ಮಗ್ಗಲುಗಳಿರಬೇಕು, ಅಥವಾ ಯಾವ ತೀವ್ರವಾದ ಅನಿಸಿಕೆಗಳಿರದೇ ಗೊತ್ತಿರುವ ದಾಖಲೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎನ್ನುವುದನ್ನು ಒಪ್ಪುತ್ತೇನೆ.

ನಿಮ್ಮ ಪ್ರತಿಕ್ರಿಯೆಯ ಕಡೆಯ ಇಂಗ್ಲೀಷ್ ಭಾಗದ ಕಳಕಳಿಯನ್ನು ಬಲಪಂಥೀಯರು ಸರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ನನಗನ್ನಿಸುವುದಿಲ್ಲ.

ಇಂತಿ
ಶಿವು

 
At 6:32 AM, Blogger Saamaanya Jeevi said...

ಕಲ್ಯಾಣರ ಪ್ರತಿಕ್ರಿಯೆಗೆ ಉತ್ತರ:

ಈ ಲೇಖನ ಬರೆಯುವುದಕ್ಕೆ ಕಾರ್ನಾಡರ ಪತ್ರ ಒಂದು ಪ್ರಮುಖ ಕಾರಣ ಎನ್ನುವುದನ್ನು ಯಾವ ಸಂಕೋಚವಿಲ್ಲದೇ ಒಪ್ಪಿಕೊಳ್ಳುತ್ತೇನೆ. ಅವರ ಮೇಲಣ ಪ್ರೀತಿ, ಅವರು ಸೋಲಿನ ದುಃಖ ನಿಸ್ಸಂಶಯವಾಗಿ ಒಂದು ಪ್ರಮುಖ ಪ್ರೇರಣೆ. ಇದೇನೂ ಇಲ್ಲದಿದ್ದರೂ ಬರೆಯುತ್ತಿದ್ದೇನೆ, ನಿಸ್ಸಂಶಯವಾಗಿ ಹೌದು. ಅದಕ್ಕೆ ಕಾರಣ ನಾನು ರಾಜಾರಾಮ ಹೆಗಡೆಯವರ ಗತಕಥನ ಪುಸ್ತಕವನ್ನು ಈ ಪ್ರಕರಣಕ್ಕೆ ಎರಡು ತಿಂಗಳ ಮೊದಲೇ ಓದಿದ್ದೆ. ಅದರ ಪ್ರಸ್ತುತತೆಯನ್ನು ಮಂಡಿಸುವುದೂ ನನ್ನ ಒಂದು ಕಳಕಳಿಯಾಗಿತ್ತು. ಲೇಖನಮಾಲೆಯ ಮೂರನೇಯ ಭಾಗವೇ ನನಗೆ ಹೆಚ್ಚು ಮುಖ್ಯ.

ಎಲ್ಲರೂ ಒಪ್ಪುವಂತಹ ಇತಿಹಾಸ ಸೃಷ್ಟಿಯಾಗಬೇಕು ಎಂದು ನಾನೆಲ್ಲಿಯೂ ಹೇಳಿಲ್ಲ. ಹಾಗೆಯೇ ಟೀಪುವಿನ ಕುರಿತ ಸತ್ಯಾಸತ್ಯತೆ ಗೊತ್ತಾಗಬಾರದೂ ಎಂದೂ ಅಲ್ಲ. ಇದೆಲ್ಲದಕ್ಕೂ ಒಂದು ಮಿತಿಯಿದೆ. ರತ್ನಖಚಿತವಾದ ಸತ್ಯವನ್ನು ನೀವು ತಿಳಿಯಲಾರಿರಿ. ಹಾಗಿದ್ದ ಮೇಲೆ, ನಾವು ಸೃಷ್ಟಿಸುವ ಸತ್ಯದ ಹಿಂದಣ ರಾಜಕೀಯವನ್ನು ಅರಿಯುವುದೇ ಹೆಚ್ಚು ಶ್ರೇಯಸ್ಕರವಲ್ಲವೇ? meta-Historyಗಳೂ ನಮಗೆ ಬೇಕು.

ಮಾಸ್ತಿಯವರ ಕಥೆಗಳನ್ನು ಪ್ರಸ್ತಾಪಿಸಿದ್ದೀರಿ. ಬಿಳಿಗಿರಿ ರಂಗನಷ್ಟೇ ಅಲ್ಲ. ಅವರ 'ಡೂಬಾಯಿ ಪಾದ್ರಿಯ ಒಂದು ಪತ್ರ' ಎನ್ನುವ ಕಥೆಯಲ್ಲಿ ಟೀಪುವಿನ ಚಿತ್ರಣ ಮತ್ತಷ್ಟು ಮಸಿಯಾಗಿದೆ. ಆ ಪತ್ರದ ಅಸ್ತಿತ್ವ, ಮಾಸ್ತಿಯವರ ಪ್ರಾಮಾಣಿಕತೆ ಪೂರ್ತಿ ಒಪ್ಪಿಕೊಳ್ಳುತ್ತೇನೆ. ಆದರೂ ಮಾಸ್ತಿಯವರಿಗೆ ಮೈಸೂರಿನ ಲಾವಣಿಗಳಲ್ಲಿ ೧೮೦೩-ರ ಹೊತ್ತಿಗೇ ಟೀಪುವಿನ ಉತ್ತಮ ಚಿತ್ರಣವಿರುವುದು ಯಾಕೆ ಕೌತುಕ ತರಿಸಿಲ್ಲ ಎಂದು ಆಶ್ಚರ್ಯಪಡುತ್ತೇನೆ. ನನಗೆ ಈ ಎರಡೂ ಬದಿಗಳು ಮುಖ್ಯ.

ಅದಕ್ಕೇ ನಾನು ನನ್ನ ಲೇಖನದಲ್ಲಿ "ಆದ್ದರಿಂದ, ಟೀಪುವಿನ ದೌರ್ಬಲ್ಯದ ಕುರಿತು ಸ್ಪಷ್ಟವಾಗಿ ಮಾತನಾಡದೇ, ಅದನ್ನು ಒಪ್ಪಿಕೊಳ್ಳದೇ ಅವನನ್ನು ಹೊಗಳುವವರನ್ನೂ, ಅವನ ತೇಜಸ್ಸನ್ನು ಹೊಗಳದೇ ಅವನನ್ನು ತೆಗಳುವವರನ್ನೂ ನಾನು ನಂಬುವುದಿಲ್ಲ" ಎಂದು ಹೇಳಿದ್ದೇನೆ.

ತೀವ್ರವಾದಿಗಳ ಅಸ್ತಿತ್ವವನ್ನು ನಾವು ನಮ್ಮನ್ನು ನೇರಗೊಳಿಸಿಕೊಳ್ಳಲು ಬಳಸಿಕೊಳ್ಳಬಹುದು. ಆದರೆ ಅದಕ್ಕಾಗಿ ಸಮಾಜ ತೆರಬೇಕಾದ ದಂಡ ದೊಡ್ಡದಿರುತ್ತದೆ. ಅವರ ಅಸ್ತಿತ್ವವಿಲ್ಲದೇ ಸಹ ನಾವು ಎಚ್ಚರದಿಂದ ಮುನ್ನಡೆಯಬಹುದೇನೋ. ಆದರೂ, ತೀವ್ರವಾದಿಗಳಿದ್ದೇ ಇರುತ್ತಾರೆ ಎನ್ನುವುದು ಹೆಚ್ಚು ಸತ್ಯ.

ಮನುಷ್ಯರು ಒಂದಾಗಿರುವುದಕ್ಕೆ ಅನೇಕ ಕಾರಣಗಳನ್ನು ಸೃಷ್ಟಿಸಿಕೊಳ್ಳಬೇಕು. ನೆಲಕ್ಕೆ ಅಂಟಿಕೊಂಡ ಜೀವಕ್ಕೆ ಅಂತಹ ಅನೇಕ ಕಾರಣಗಳು ಸಿಗುತ್ತವೆ. 'ಹಿಂದು' ಆಗುವ ಪ್ರಕ್ರಿಯೆ ಅಂತಹದ್ದರಲ್ಲಿ ಒಂದು ಅಷ್ಟೆ. ಯಾವುದೇ ಒಂದು ಕಾರಣಕ್ಕೆ ಮಾತ್ರ ನಾವು ಒಂದಾಗಬೇಕೆಂದರೆ ಆ ಕಾರಣಕ್ಕೆ ವಿಶಿಷ್ಟ ಬಹುಮುಖೀಯತೆಗಳು ಬೇಕಾಗುತ್ತವೆ. ಅದಿಲ್ಲದೇ ಹೋದರೆ ಹೀಗೆ ಕೋಮುಗಲಭೆಯಾಗುತ್ತದೆ.

ಭೈರಪ್ಪನವರನ್ನು ಬಲಪಂಥೀಯರನ್ನಾಗಿ ವಿವರಿಸಿರುವುದರಕ್ಕೆ ಮುಖ್ಯ ಕಾರಣ ಅವರಿಗೆ ಟೀಪುವಿನ ಇನ್ನಿತರ ವಿಷಯಗಳಿಗಿಂತ ಹೆಚ್ಚಾಗಿ ಅವನ ಮತಾಂತರ ಕಾಡಿರುವುದು. ಇಲ್ಲದಿದ್ದರೆ ಅವರ ಲೇಖನ ಹೆಚ್ಚು ಆರ್ದ್ರವಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ. ಅವರ ಲೇಖನದಲ್ಲಿ ನನಗೆ ಒಪ್ಪಿಗೆಯಾಗಿರುವ ಅಂಶಗಳೂ ಇವೆ. ಸೂಕ್ಷ್ಮವಾಗಿ ಅಂಥದ್ದನ್ನು ಲೇಖನದಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ ಅವರ ಸಾರ್ವಜನಿಕ ನಿಲುವುಗಳನ್ನು ಸೂಕ್ಷಮವಾಗಿ ಗಮನಿಸಿದವರಿಗೆ ಅವರ ಲೇಖನ ಆಶ್ಚರ್ಯ ತರುವುದಿಲ್ಲ.

ತೀವ್ರವಾಗಿ ಸ್ಪಂದಿಸಿದ್ದಕ್ಕಾಗಿ ಕೇಸರಿ ಮತ್ತು ಕಲ್ಯಾಣರಿಗೆ ಧನ್ಯವಾದಗಳು. ಉತ್ತರ ತಡವಾದ್ದಕ್ಕೆ ಕ್ಷಮೆಯಿರಲಿ.

ಇಂತಿ
ಶಿವು

 

Post a Comment

<< Home