ಟೀಪೂ ವಿವಾದದ ಒಳಸುಳಿಗಳಲ್ಲಿ: ಭಾಗ ೨
[ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ. ಆದರೆ, ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ. ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ. ಲೇಖನ-ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ. ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು, ಸಂಘಸಂಸ್ಥೆಗಳ ಹೇಳಿಕೆಗಳನ್ನು, ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ. ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ. ಎರಡನೇಯ ಲೇಖನ, ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ. ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ. ಈ ಲೇಖನ-ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ.]
ಲೇಖನದ ಮೊದಲ ಭಾಗ ಇಲ್ಲಿದೆ.
ಈ ಲೇಖನವನ್ನು ಇಷ್ಟು ದಿನಗಳ ನಂತರ, ವಿವಾದ ತಣ್ಣಗಾಗಿದೆ ಎಂದೆನ್ನಿಸುವ ನಂತರ, ಏಕೆ ಬರೆಯುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಈ ವಿವಾದ ಒಂದು ವಿರಾಟ್-ಪ್ರಕ್ರಿಯೆಯ ಚಿಕ್ಕ ಬೈ-ಪ್ರಾಡಕ್ಟ್ ಅಷ್ಟೆ. ಇದು ಆಗಾಗ ಬೇರೆ ಬೇರೆ ಸ್ವರೂಪಗಳನ್ನು ಪಡೆಯುವುದು ಖಂಡಿತ, ಒಂದು. ಇದನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ಕೆಲ ಮೂಲಭೂತವಾದ ಅಂಶಗಳತ್ತ ಓದುಗರ ಗಮನ ಸೆಳೆಯುವುದು ಮತ್ತೊಂದು. ಮಾಲಿಕೆಯ ಈ ಎರಡನೇಯ ಲೇಖನದಲ್ಲಿ ವಿವಾದದ ಕೆಲ ಅಂಶಗಳನ್ನು ಕೇಂದ್ರದಲ್ಲಿಟ್ಟು ಒಟ್ಟು ವಿವಾದವನ್ನು ನನ್ನ ರೀತಿಯಲ್ಲಿ ಗ್ರಹಿಸಿ ನನ್ನ ಅಭಿಪ್ರಾಯಗಳನ್ನು ಮಂಡಿಸಿದ್ದೇನೆ.
ಟೀಪುವಿನ್ನು ಟೀಕಿಸಿ ಶಂಕರಮೂರ್ತಿಗಳು ಶಾಲಾ ಮಕ್ಕಳ ವೇದಿಕೆಯಲ್ಲಿ ತಾವಾಡಿದಂತಹ ಮಾತುಗಳನ್ನಾಡಬೇಕು ಎಂದು ತಯಾರಿ ನಡೆಸಿದ್ದರೋ ಇಲ್ಲವೋ ಹೇಳಲಾಗದು. ನಡೆಸಿದ್ದರೆ ಆಶ್ಚರ್ಯವಿಲ್ಲ, ಅಲ್ಲದೇ ಅವರ ಹಿನ್ನೆಲೆ ಮತ್ತು ಸದ್ಯಗಳು ಅವರನ್ನು ಈ ಕುರಿತು ಸದಾ ತಯಾರಾಗಿರುವಂತೆ ರೂಪಿಸಿದೆ. ಆದರೆ ಅವರಿಗೆ ನಿರ್ದಿಷ್ಟವಾದ ಗುರಿಯಿತ್ತೆಂದೆನ್ನಿಸುವುದಿಲ್ಲ. ಮಕ್ಕಳಿಗೆ ಅವರ ಮಾತುಗಳು ಅರ್ಥವಾಗಿತ್ತೋ ಇಲ್ಲವೋ. ಪತ್ರಿಕೆಗಳಲ್ಲಿ ಬರದೇ ಹೋಗಿದ್ದರೆ ಯಾವುದೂ ಏನೂ ಆಗುತ್ತಿರುಲಿಲ್ಲವೇನೋ. ಕತ್ತಲಲ್ಲೊಂದು ಬಾಣ ಬಿಟ್ಟಿದ್ದರು ಎಲ್ಲಿಗಾದರೂ ತಾಗಲಿ ಎಂದು. ನಮ್ಮ ಜನ ಮೌನವಾಗಿ ಇದನ್ನು ನಿರ್ಲಕ್ಷಿಸಿ ಯಥಾಪ್ರಕಾರ ಟೀಪುವನ್ನು ಎದೆಯಲ್ಲಿಟ್ಟುಕೊಂಡೆ ಇರುತ್ತಿದ್ದರೇ?
ಆದರೆ ಮೇಲಿನ ನಿಲುವಿಗೂ ಸುಲಭವಾಗಿ ಬರಲಾಗದು. ನಮ್ಮ ಕಾಲದಲ್ಲಿ ಮೌನಕ್ಕೆ ಬೆಲೆಯಿದೆ ಎನ್ನುವುದರ ಬಗ್ಗೆಯೇ ಕೆಲವೊಮ್ಮೆ ನಂಬಿಕೆ ಹೋಗಿಬಿಟ್ಟಿರುವಂತಿದೆ. ಹೀಗಾಗಿ ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸದೇ ಇರುವುದು ಕೂಡಾ ಸಂದಿಗ್ಧದ ವಿಷಯವೇ ಸರಿ. ಅಂತೆಯೇ ನನ್ನ ಹಿಂದಿನ ಲೇಖನದಲ್ಲಿ ಪಟ್ಟಿ ಮಾಡಿರುವ ಬಹುತೇಕ ಪ್ರತಿಕ್ರಿಯೆಗಳನ್ನು, ಅದರ ಸ್ವರೂಪವನ್ನು ನಾನು ನಿರೀಕ್ಷಿಸಿದ್ದೆ. ಆದರೆ ಕಾರ್ನಾಡ್, ಮರುಳಸಿದ್ದಪ್ಪ ಮುಂತಾದ ಹಿರಿಯರ ಪ್ರತಿಕ್ರಿಯೆಯನ್ನು ಗಮನಿಸಿದ ಮೇಲೆ ನನಗೆ ಇವರು - ಎತ್ತಲೋ ಬಿಟ್ಟು, ಎತ್ತಲೋ ಹೋಗಿ ಬೀಳುತ್ತಿದ್ದ ಬಾಣವನ್ನು ವೀರಾವೇಶದಿಂದ ಅಟ್ಟಿಸಿಕೊಂಡು ಹೋಗಿ ಎದೆಯೊಡ್ಡಿದ್ದಲ್ಲದೇ ಜನರನ್ನೂ ಎದೆಯೊಡ್ಡಿ ಎಂದು ಪ್ರಚೋದಿಸುತ್ತಿದ್ದಾರೆ - ಎಂದೆನ್ನಿಸಿತು.
ಇಷ್ಟೆಲ್ಲ ಜನರ ಮಧ್ಯೆ ಕಾರ್ನಾಡರ ಹೇಳಿಕೆಯನ್ನೇ ಆಯ್ದು ತೆಗೆದುಕೊಂಡಿರುವುದಕ್ಕೆ ಕಾರಣವಿದೆ. ಸಾರ್ವಜನಿಕವಾಗಿ ಹೆಚ್ಚು ಮಾತನಾಡದೆಯೂ ಅವರಿಗಿರುವಷ್ಟು ಸಾರ್ವಜನಿಕತೆ ಅನೇಕ ಹಿರಿಯರಿಗಿಲ್ಲ. ಅವರ ಮಾತಿಗೆ ದೇಶಾದ್ಯಂತ ಒಂದು ಬೆಲೆಯಿದೆ. ಕನ್ನಡ/ಇಂಗ್ಲೀಷ್ ಪತ್ರಿಕೆಗಳಾದಿಯಾಗಿ ಅವರು ಹೇಳಿದ್ದನ್ನು ಯಥಾವತ್ತಾಗಿ ಪ್ರಕಟಿಸಿಬಿಡುತ್ತವೆ. ಈ ಕಾರಣಕ್ಕೆ, ಅವರಾಡುವ ಮಾತುಗಳ ಪರಿಣಾಮ ತೀವ್ರಸ್ವರೂಪದ್ದಾಗಿರುತ್ತದೆ. ಈ ಜವಾಬ್ದಾರಿಯನ್ನು ಅವರು ಹೊರದೇ ಗತ್ಯಂತರವಿಲ್ಲ. ನನ್ನಿಡೀ ಲೇಖನದಲ್ಲಿ 'ಕೋಮುವಾದದ ವಿರುದ್ಧದ ಒಂದು ಬಗೆಯ ಪ್ರತಿಭಟನೆ'-ಗೆ ಕಾರ್ನಾಡರನ್ನು ಪ್ರತಿನಿಧಿಯಾಗಿಸಿ ಬರೆಯುತ್ತಿದ್ದೇನೆ. ಸಾಮಾನ್ಯವಾಗಿ ಕಾರ್ನಾಡರು ಕೋಮುವಾದದ ವಿಷಯವೊಂದನ್ನು ಹೊರತುಪಡಿಸಿ ಮಿಕ್ಕವಕ್ಕೆ ಪ್ರತಿಕ್ರಿಯಿಸುವುದಿಲ್ಲ. (ಶಂಕರಮೂರ್ತಿಗಳು ಟೀಪೂವನ್ನು ಕನ್ನಡವಿರೋಧಿ ಎಂದಿದ್ದರೇ ಹೊರತು ಮತಾಂಧನೆಂದು ಹೇಳಿರಲಿಲ್ಲ, ಪ್ರಾಯಶಃ ಹೆಚ್ಚು ಎಚ್ಚರಿಕೆ ವಹಿಸಿದ್ದರು ಅನ್ನಿಸುತ್ತೆ.) ಆದರೆ, ಈ ಹಿಂದೆ ಕಾರ್ನಾಡರು ಸಾರ್ವಜನಿಕವಾಗಿ ತಮ್ಮ ಟೀಪೂ ಪ್ರೇಮ ಮೆರೆದಿದ್ದಿದ್ದರಿಂದ ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಟೀಪೂವನ್ನು ಕಾರ್ನಾಡರು 'ಕರ್ನಾಟಕದ ಅತ್ಯಂತ ಶ್ರೇಷ್ಠ ಪುತ್ರ, ಮಹಾರಾಷ್ಟ್ರದಲ್ಲಿ ಟಿಳಕರಿಗೆ ಸಮಾನವಾಗಿ ಕರ್ನಾಟಕದಲ್ಲಿ ಅವನ ಸ್ಥಾನ' ಇತ್ಯಾದಿಯಾಗಿ ಹಿಂದೆ ಹೊಗಳಿದ್ದರು. ಲೇಖಕಿ ಶಶಿ ದೇಶಪಾಂಡೆಯವರಂತೂ ಪುಳಕಿತರಾಗಿ 'ಕಾರ್ನಾಡರು ಏಕಕಾಲದಲ್ಲಿ ಕನ್ನಡ ರಾಷ್ಟ್ರೀಯತೆ ಹೋರಾಟಗಾರರನ್ನೂ, ಮತೀಯವಾದಿಗಳನ್ನೂ ಎದುರುಹಾಕಿಕೊಂಡಿದ್ದಾರೆ' ಎಂದು ಸಂಭ್ರಮಿಸಿದ್ದರು. ನನಗೆ ಏಕಕಾಲಕ್ಕೆ ತಮಾಷೆ ಮತ್ತು ದುಃಖವೆನ್ನಿಸಿದ್ದು ಕಾರ್ನಾಡರು ತಮ್ಮ ಟೀಪು ನಾಟಕದ ಗ್ರಂಥಸೂಚಿಯಲ್ಲಿ ಹಯವದನರಾಯರ ಪುಸ್ತಕವನ್ನೂ ಆಧರಿಸಿದ್ದನ್ನು ಹೆಸರಿಸಿ, ಅದರ ಜೊತೆಯಲ್ಲೇ ಬ್ರಿಟಿಷರ ಮೂಗಿನ ನೇರಕ್ಕೆ ಬರೆದ ಇತಿಹಾಸ ಎಂದು ಗಮನಿಸಿರುವುದು. ಕಾರ್ನಾಡರಂತಹ ಧೀಮಂತರಿಗೂ ಹಾಗೆ ವಿವರಿಸಬೇಕಾದ ಅಗತ್ಯ ಕಂಡಿತೇ! ಇರಲಿ.
ಈ ಹಿಂದೆ ಚಿಮೂಗಳು ಟೀಪೂ ಕುರಿತು ಏನೋ ಹೇಳಿಕೆ ನೀಡಿದ್ದಾಗ, ಎಚ್ಚರದಿಂದ ಕಾರ್ನಾಡರು ಪ್ರಜಾವಾಣಿ ವಾಚಕರ ವಾಣಿಗೆ ಒಂದು ಪತ್ರ ಬರೆದಿದ್ದರು. ಇದರಿಂದ ಚರ್ಚೆ ಬೀದಿಗೆ ಬಂದಿರಲಿಲ್ಲ. ಈಗಲೂ ಅದೇ ಆಗಿದ್ದಿದ್ದರೆ ಚೆನ್ನಿತ್ತು. ಆದರೆ ಸಮರದ ಮನಸ್ಥಿತಿಯಲ್ಲಿದ್ದ ಕಾರ್ನಾಡರು, ಮರುಳಸಿದ್ದಪ್ಪನವರು ಪ್ರೆಸ್ ಕಾನ್ಫರೆನ್ಸ್-ಗಿಳಿದರು. ಹತ್ತು ಪತ್ರಿಕೆಗಳಲ್ಲಿ ಹತ್ತು ರೀತಿಯಲ್ಲಿ ಪ್ರಕಟವಾಯಿತು. ಅತಿರೇಕದ ಮಾತುಗಳೆಲ್ಲವೂ ಆದವು. ಎಚ್ಚರದ ಮನಸ್ಥಿತಿ ಜಾರಿ ಮುಂದೆ ತಹಬದಿಗೆ ಬರುವುದಕ್ಕೆ ಸಾಧ್ಯವೇ ಆಗದೆ ವಿವಾದ ರಾಡಿಯಾಯಿತು.
ಆ ನಂತರದ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಅವುಗಳಲ್ಲಿ ಈ ವಿಷಯಕ್ಕೇ ನೇರವಾಗಿ ಸಂಬಂಧಿಸಿರದೇ ಇದ್ದರೂ ಮುಖ್ಯವಾದ್ದೊಂದಿದೆ. ಪ್ರಜಾವಾಣಿ ಮತ್ತು ವಿಜಯಕರ್ನಾಟಕಗಳಲ್ಲಿ ಚಿ.ಮೂ. ಹೇಳಿಕೆಯ ಎರಡು ಆವೃತ್ತಿಗಳು ಪ್ರಕಟವಾಗಿವೆ. ಪ್ರಜಾವಾಣಿಯಲ್ಲಿ ಟೀಪುವನ್ನು ಕನ್ನಡವಿರೋಧಿ ಎಂದು ಕರೆಯಲಾಗದು, ಅವನ ಕಾಲದಲ್ಲಿ ಕನ್ನಡದ ಅಭಿವೃದ್ಧಿಯಾಗಲಿಲ್ಲ ಎನ್ನುವುದು ನಿಜ ಎಂದಿದೆ. ಆದರೆ ವಿಜಯಕರ್ನಾಟಕದಲ್ಲಿ ಇದು ತೀವ್ರವಾಗಿ ಪ್ರಕಟವಾಗಿವೆ. ಆ ನಂತರದ ಅವರ ನಿಲುವುಗಳು ವಿಜಯಕರ್ನಾಟಕದ ಮೊದಲ ಹೇಳಿಕೆಗಳಿಗೆ ಹೆಚ್ಚು ಹತ್ತಿರವಾಗಿದೆ. ವಿವಾದದಲ್ಲಿ ನನ್ನನ್ನು ಅಧೀರನಾಗಿಸಿದ ಮತ್ತೊಂದು ಸಂಗತಿ ಇದೇ - ಹೀಗೆ ಪತ್ರಿಕಾಹೇಳಿಕೆಗಳಲ್ಲಿರುವ ವ್ಯತ್ಯಾಸ, ಅದನ್ನು ಪ್ರತಿಭಟಿಸಲಾಗದಿರುವ ನಮ್ಮ ಪರಿಸ್ಥಿತಿ, ಇದರಿಂದುಂಟಾಗಬಹುದಾದ ಪ್ರಮಾದಗಳು.
ಭೈರಪ್ಪನವರ ಪ್ರವೇಶವಾದನಂತರ ಎರಡು ಮುಖ್ಯವಾದ ಪರಸ್ಪರ ವೈರುಧ್ಯದ ಪರಿಣಾಮಗಳಾದವು. ಅವರು ತಾತ್ವಿಕವಾಗಿ ಬಹುಮುಖ್ಯವಾದ ಪ್ರಶ್ನೆಯೆಂದನ್ನೆತ್ತಿದರು. ಅದೇ ಸಮಯಕ್ಕೆ ಚರ್ಚೆ ವೈಯಕ್ತಿಕವಾಗಿಬಿಟ್ಟಿತು. ಎರಡಕ್ಕೂ ಅವರೇ ಕಾರಣವೆನ್ನಬಹುದು. ಭೈರಪ್ಪನವರು ತಮ್ಮ ಲೇಖನದಲ್ಲಿ ತುಘಲಕ್-ನನ್ನು ಎಳೆದು ತರಬಾರದಿತ್ತು ಎಂದು ನನಗೆ ಮೊದಲು ಅನ್ನಿಸಿದ್ದು ನಿಜ. ವಿವಾದ ಟೀಪುವಿನ ಕುರಿತಾಗಿದ್ದಿದ್ದರಿಂದ ಅದೇ ಆವರಣದಲ್ಲೇ ತಮ್ಮ ವಾದವನ್ನು ಮಂಡಿಸಬಹುದಿತ್ತು. ಹೋಗಲಿ, ಅವರು ಕಾರ್ನಾಡರನ್ನು ವಿಶೇಷವಾಗಿ ಚರ್ಚೆಗೆ ಆಹ್ವಾನಿಸಿದ್ದರಿಂದ ತಮ್ಮ ವಿಷಯಮಂಡನೆಯ ಹೆಚ್ಚಿನ ಸಮರ್ಥನೆಗೆ ತುಘಲಕ್-ನನ್ನು ಮಧ್ಯಕ್ಕೆಳೆತಂದರು ಎನ್ನೋಣವೆಂದರೆ, ಕಾರ್ನಾಡರಿಗೆ ಚರ್ಚೆಯನ್ನು ಬೇರೆಯೆಡೆಗೆ ತಿರುಗಿಸಲು ಇದು ಸಾಕಾದದ್ದೊಂದು ದುರಂತ. ತಾತ್ವಿಕವಾದ ಚರ್ಚೆಯೊಂದನ್ನು ನಡೆಸಿ ವಿವಾದವನ್ನು ಕ್ಷುದ್ರತ್ವದಿಂದ ಮುಕ್ತಗೊಳಿಸುವುದಕ್ಕೆ ಸಿಕ್ಕ ಅವಕಾಶವನ್ನು ಕಾರ್ನಾಡರು ಬಳಸಿಕೊಳ್ಳಲಿಲ್ಲ. ಅದಕ್ಕೆ ಪ್ರತಿಯಾಗಿ ಕಾರ್ನಾಡರು ತುಘಲಕ್ ನಾಟಕದ ಅನೈತಿಹಾಸಿಕತೆಯನ್ನು ಜೋರು ಧ್ವನಿಯಲ್ಲಿ ಪ್ರತಿಪಾದಿಸಿತ್ತಾ, ಸ್ವಲ್ಪ ಟಿಟ್ ಫಾರ್ ಟ್ಯಾಟ್ ಎನ್ನುವಂತೆ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆಗಳನ್ನು ಉಲ್ಲೇಖಿಸಿ ಭೈರಪ್ಪನವರನ್ನು ಜರೆಯಲು ಪ್ರಯತ್ನಿಸಿದ್ದು ಮಾತ್ರ ನಾಚಿಕೆಗೇಡಿನ ವಿಷಯ. ಕನಿಷ್ಠ ಭೈರಪ್ಪನವರಿಗೆ ತುಘಲಕ್, ಟೀಪುಗಳನ್ನು ಈ ಪ್ರಸ್ತುತ ವಿವಾದದ ವಿವರಣೆಗೆ ದುಡಿಸಿಕೊಳ್ಳುವುದು ಮುಖ್ಯವಾಗಿತ್ತು. ಆದರೆ ಕಾರ್ನಾಡರಿಗೆ ಭೈರಪ್ಪನವರ ವೈಯಕ್ತಿಕ ನಿಲುವುಗಳನ್ನು ಮೀರಿ ಅವರ ಕಾದಂಬರಿಗಳನ್ನು ಗ್ರಹಿಸಲಾಗದೇ ಹೋದದ್ದು, ತೀರಾ ಕಳಪೆಮಟ್ಟದಲ್ಲಿ ಅವುಗಳನ್ನು ಭೈರಪ್ಪನವರನ್ನು ಜರೆಯಲು ಉಪಯೋಗಿಸಿಕೊಂಡದ್ದು ಮಾತ್ರ ಶೋಚನೀಯ, ದುರಂತ ಎನ್ನದೇ ವಿಧಿಯಿಲ್ಲ. ಬಲಪಂಥೀಯರೆಂದೆನ್ನಿಸಿರುವ ಭೈರಪ್ಪನವರ ಸಂಯಮದ ಪತ್ರಕ್ಕೆ ಉದಾರವಾದಿ ಎಡಪಂಥೀಯರೆಂದೆನ್ನಿಸಿರುವ ಕಾರ್ನಾಡರ ಅಸಹನೆ, ಅಸಹ್ಯದ ಉತ್ತರಗಳು ನನ್ನನ್ನು ದಿಗ್ಭ್ರಾಂತನನ್ನಾಗಿಸಿತು. ಸಾಮಾನ್ಯವಾಗಿ, ನಾವು ಇದಕ್ಕೆ ತದ್ವಿರುದ್ಧವಾದ್ದನ್ನು ನಿರೀಕ್ಷಿಸಿರುತ್ತೇವೆ. ಬಹುತೇಕ ಎಚ್ಚರದ ಮನುಷ್ಯರಾದ ಕಾರ್ನಾಡರು ಪತ್ರಿಕಾಗೋಷ್ಠಿಯ ಅವಿವೇಕತನದಿಂದ ಕಂಗೆಟ್ಟು ಮತ್ತೊಂದು ತಪ್ಪನ್ನೆಸಗಿದರು. ಜಾರಿಬಿದ್ದ ಜಾಣರಾದರು. ತಮ್ಮ ಕಾದಂಬರಿಗಳ ಚಲನಚಿತ್ರಾವೃತ್ತಿಗಳಲ್ಲಿ ತಮ್ಮ ವಿಚಾರಧಾರೆಗೆ ಭಿನ್ನವಾದ ವ್ಯಾಖ್ಯಾನಗಳನ್ನು ಒಪ್ಪುವ ಭೈರಪ್ಪನವರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ಮುಖ್ಯರೋ, ತಮ್ಮ ಕೃತಿಗಳ ಒಂದು ಎಳೆಯನ್ನು ಎಳೆದದ್ದಕ್ಕೇ ಅತ್ತು, ಚೀರಾಡಿ, ರಂಪ ಮಾಡುತ್ತಿರುವ ಕಾರ್ನಾಡರು ಪ್ರಜಾಪ್ರಭುತ್ವದಲ್ಲಿ ಮಾದರಿಯೋ - ಎಂದು ಗಾಬರಿಯಾಗುತ್ತದೆ. ಈಗಲೂ ಇದನ್ನೇ ಮುಂದುವರೆಸಿರುವ ಭೈರಪ್ಪನವರು, ತಮ್ಮ ಕೃತಿಗಳ ಬೇರೆಯದೇ ತೆರನಾದ ವ್ಯಾಖ್ಯಾನಗಳಿಗೆ ಕಾಸರವಳ್ಳಿಯವರಿಗೆ ಅವಕಾಶವಿತ್ತಿದ್ದಾರೆ. ಹೀಗೆ ವ್ಯಾಖ್ಯಾನಿಸುವುದನ್ನು ಮುಂದುವರೆಸಿರುವ ಕಾಸರವಳ್ಳಿಯವರೂ ಅಭಿನಂದನಾರ್ಹರು. ಅವರಾದರೂ ಮುಂದೆ ತಮ್ಮ ಕೃತಿಗಳನ್ನು ಈ ಕಾರಣಕ್ಕೆ ನಿರಾಕರಿಸದಿರಲಿ.
ನನ್ನ ಹಿಂದಿನ ಒಂದು ಲೇಖನದಲ್ಲಿ ನಮ್ಮ ಪ್ರತಿಕ್ರಿಯೆಗಳ ಸಂಕೀರ್ಣತೆಯನ್ನು ಶೋಧಿಸಿಕೊಳ್ಳುತ್ತಾ ವಸ್ತು-ವಿಷಯಕ್ಕಿಂತ ವ್ಯಕ್ತಿಯ ಮೇಲೇ ಅವು ಹೆಚ್ಚು ಅವಲಂಬಿತವಾಗಿರುವುದಕ್ಕೆ ತಲ್ಲಣಿಸಿದ್ದೆ. ಇಲ್ಲಿ ಅಂತಹುದೇ ಮತ್ತೊಂದು ನಿದರ್ಶನವಿದೆ. ಕೆಲ ತಿಂಗಳುಗಳ ಹಿಂದೆ ಕಾರ್ನಾಡರ ಟೀಪು ನಾಟಕದ ಕುರಿತು ಮಾತನಾಡುತ್ತಾ ಸಿ.ಎನ್.ರಾಮಚಂದ್ರನ್-ರವರು ಕಾರ್ನಾಡರ ಟೀಪು ಧೀರೋದಾತ್ತನಂತೆ ಕಂಡುಬರುತ್ತಾನಾದರೂ ನಿಜದಲ್ಲಿ ಅವನು ಮತಾಂಧನಾಗಿದ್ದಿರಬಹುದಾದ ಸಾಧ್ಯತೆಯತ್ತ ಗಮನಸೆಳೆದಿದ್ದರು (ಪತ್ರಿಕೆಗಳಲ್ಲಿ ಪ್ರಕಟವಾದಂತೆ - ರಂಗಶಂಕರದಲ್ಲಿ ಕಾರ್ನಾಡರ ನಾಟಕಗಳ ಕುರಿತಾದ ಸಂವಾದದ ಸಂದರ್ಭ). ಆಗ ವಿವಾದವೇನೂ ಉಂಟಾಗಿರಲಿಲ್ಲ. ಸ್ವತಃ ಕಾರ್ನಾಡರು ಪ್ರತಿಭಟಿಸಿರಲಿಲ್ಲ, ಮರುಳಸಿದ್ದಪ್ಪರು, ಗೋವಿಂದರಾಯರ ಕಿವಿಗೆ ಬಿದ್ದಿರಲಿಲ್ಲವೇನೋ. ಆದರೆ ಶಂಕರಮೂರ್ತಿಗಳು, ಚಿಮೂಗಳು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಮೇಲ್ನೋಟಕ್ಕೆ ಇದೇ ಸರಿ ಅಥವಾ ತಪ್ಪೇನೂ ಇಲ್ಲವೆಂದೆನ್ನಿಸಿದರೂ, ಇದು ಅಷ್ಟೊಂದು ಆರೋಗ್ಯಕರ ವಿಷಯವಲ್ಲ. ಒಂದು ವಿಷಯದ ಕುರಿತಾದ ವಿವಾದ ಯಾರು ಹೇಳಿದರು ಎನ್ನುವ ಕಾರಣಕ್ಕಾದರೆ ಅದು ಪ್ರಜಾಪ್ರಭುತ್ವದ ಪರಿಸರಕ್ಕೆ ಒಳ್ಳೆಯದಲ್ಲ. ಇದೇ ಸಮಯದಲ್ಲಿ ಶಂಕರಮೂರ್ತಿಗಳು ಭಗತ್ ಸಿಂಘ್ ಇತ್ಯಾದಿಗಳನ್ನು ಇತಿಹಾಸದಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎನ್ನುವುದನ್ನು ಪ್ರತಿಭಟಿಸಿ ಹೇಳಿಕೆ ಕೊಟ್ಟಿದ್ದರು. ಟೀಪೂ ಹೇಳಿಕೆಗೆ ಪ್ರತಿಕ್ರಿಯಿಸಿದ ಎಲ್ಲ ಸಾರ್ವಜನಿಕ ಹೋರಾಟಗಾರರು ಇದಕ್ಕೆ ಪ್ರತಿಕ್ರಿಯಿಸಿಬೇಕಾದ ತುರ್ತನ್ನು ಗ್ರಹಿಸಲಿಲ್ಲವೇಕೆ? ತನ್ನ ಆವರಣದಲ್ಲೇ ಬದುಕುವ ಸಾಮ್ಸಾರಿಕನಿಗೆ ಈ ಏಕರೂಪತೆ ತಟ್ಟುತ್ತದೆ, ತನ್ನ ಆವರಣದಲ್ಲೇ ಅಸ್ಥಿರಭಾವವೊಂದರ ಅನುಭವವಾಗುತ್ತದೆ. ಆ ಅಸ್ಥಿರಭಾವವನ್ನು ಗುರುತಿಸುವ ಇನ್ಯಾವುದೇ ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿಯಾದರೂ ಪಾಲ್ಗೊಳ್ಳುತ್ತಾನೆ. ಆ ಪ್ರಕ್ರಿಯೆಯ ತೀವ್ರಸ್ವರೂಪ ಎಷ್ಟೋ ವರ್ಷಗಳ ನಂತರವಷ್ಟೇ ಅನಾವರಣವಾಗುತ್ತದೆ. ಪ್ರಗತಿಪರ ಹೋರಾಟಗಾರರಿಗೆ ಇದೇಕೆ ಅರ್ಥವಾಗುವುದಿಲ್ಲ? ಈ ಪ್ರಶ್ನೆಯೇ ಹಿಂದಿನ ಕಳಕಳಿ ಈ ಸರಣಿಯ ಮುಖ್ಯ ಕಾಳಜಿಯಾಗಿದೆ.
ಭೈರಪ್ಪನವರ ಪತ್ರಕ್ಕೆ ಕಾರ್ನಾಡರ ಉತ್ತರದಲ್ಲಿ ಈ ಅಸಹನೆಯನ್ನು ಕಡೆಗಣಿಸಿಯೂ ಒಂದು ದುರದೃಷ್ಟಕರವಾದ ಅಂಶವಿದೆ. ತುಘಲಕ್ ಒಂದು ಮನರಂಜಾನಾತ್ಮಕ ನಾಟಕವಾಗಿದ್ದು, ತುಘಲಕನ ಐತಿಹಾಸಿಕತೆಯಲ್ಲಿ ತಮಗೆ ಯಾವುದೇ ಆಸಕ್ತಿಯಿಲ್ಲ ಎಂದಿದ್ದಾರೆ. ಆದರೆ ಇದು ಹೀಗೆ ಸಾರಾಸಗಟಾಗಿ ತಿರಸ್ಕರಿಸಬಹುದಾದ ಪ್ರಶ್ನೆಯಲ್ಲವೆಂದೆನ್ನಿಸುತ್ತದೆ. ಭೈರಪ್ಪನವರು ತಾತ್ವಿಕವಾದ ಪ್ರಶ್ನೆಯೊಂದನ್ನೆತ್ತಿದ್ದಾರೆ. ಇತಿಹಾಸದಿಂದ ದ್ರವ್ಯಗಳನ್ನು ಬಳಸಿಕೊಳ್ಳುವಾಗ, ಕಲಾವಿದನಿಗೆ ಇತಿಹಾಸದ ಕುರಿತು ಯಾವ ನಿಷ್ಠೆಯಿರಬೇಕು? - ಎನ್ನುವುದೇ ಆ ಪ್ರಶ್ನೆ. ಇದೊಂದು ಸಂದಿಗ್ಧತೆಯ ಪ್ರಶ್ನೆ. ಎತ್ತಿರುವವರು ಸಮರ್ಥ ಕಾದಂಬರಿಕಾರರು. ಅದಕ್ಕೊಂದು ತಾತ್ವಿಕವಾದ ಉತ್ತರದ ಅವಶ್ಯಕತೆಯಿದೆ. ಅಂತಹ ಪ್ರಶ್ನೆಯೊಂದನ್ನು ಸಮರ್ಥವಾಗಿ ಎದುರಿಸುವ ಅಪೂರ್ವ ಅವಕಾಶವನ್ನು ಕಾರ್ನಾಡರು ಕಳೆದಿದ್ದಾರೆ. ಇತಿಹಾಸದ ಕುರಿತು ಹಂಗಿಲ್ಲದೇ ಬರೆಯುವುದು ಕಲಾವಿದನ ಸ್ವಾತಂತ್ರ್ಯವಾದರೆ ಅದು ಯಾವ ಕಾರಣಕ್ಕೆ ಲಭಿಸುತ್ತದೆ, ಅದರ ಇತಿ-ಮಿತಿಗಳೇನು, ಸಾಧಕ-ಬಾಧಕಗಳೇನು, ಜವಾಬ್ದಾರಿಗಳೇನು - ಎನ್ನುವ ಪ್ರಶ್ನೆಗಳನ್ನೆಲ್ಲಾ ಕಾರ್ನಾಡಾರು ಎತ್ತಿಕೊಂಡು ವಿವರಿಸಬಹುದಿತ್ತು. (ಅವರ ಅಕ್ಯಾಡಮಿಕ್ ಎನ್ನಿಸಬಹುದಾದ ಕಾಕನಕೋಟೆ ವಿಮರ್ಶೆಯನ್ನು ಓದಿರುವ ನನಗೆ ಇಂತಹ ಸವಾಲಿಗೆ ತಮ್ಮನ್ನೊಡ್ಡಿಕೊಳ್ಳುತ್ತಾರೆ ಎಂದೆನ್ನಿಸಿತ್ತು). ದುರಾದೃಷ್ಟವಶಾತ್ ಎಲ್.ಕೆ.ಜಿ. ಮಕ್ಕಳು 'ನೀನು ಮಾತ್ರ ಹಾಗೆ ಮಾಡಬಹುದಾ?' ಎಂದು ಕ್ಯಾತೆ ತೆಗೆಯುವ ರೀತಿಯಲ್ಲಿ, ಅಳುಮುಂಜಿಯಂತೆ ವರ್ತಿಸಿ ನಿರಾಸೆಗೊಳಿಸಿದರು. ಮತ್ತೆ ಭೈರಪ್ಪನವರ ಪತ್ರದ ದಾಳಿಗೆ ಸಿಕ್ಕು ಧೂಳೀಪಟವಾದರು. ಇತಿಹಾಸವನ್ನು ಬಳಸಿಕೊಳ್ಳುವಾಗ ಅದರಿಂದ ಇತಿಹಾಸದ ಮೇಲಾಗುವ ಪರಿಣಾಮಗಳಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಕಲಾವಿದ ಅದನ್ನೆದುರಿಸಿಯೇ ತೀರಬೇಕು, ಅದಕ್ಕೆ ಜವಾಬ್ದಾರನಾಗಲೇಬೇಕು. ಆ ಹಂಗೇ ಇಲ್ಲದಿರಬೇಕಾದರೆ ಐತಿಹಾಸಿಕ ತುಘಲಕ್-ನಿಂದ ದ್ರವ್ಯಗಳನ್ನು ತೆಗೆದುಕೊಂಡು, ನಾಟಕದ ಎಲ್ಲಾ ಪಾತ್ರಗಳಿಗೆ ಇತಿಹಾಸಪುರುಷರ ಹೆಸರುಗಳನ್ನಿಡದೇ ಬೇರೆಯ ಹೆಸರಿಟ್ಟುಕೊಳ್ಳಬಹುದಿತ್ತು - ಎನ್ನುವ ಮಾತನ್ನು ವಾದಕ್ಕಾದರೂ ಪರಿಗಣಿಸಬೇಕಾಗುತ್ತದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ - ಇತಿಹಾಸವನ್ನು ಬಳಸಿ ಉತ್ಕೃಷ್ಟವಾದ ಕಲಾಕೃತಿಯೊಂದು ಮೂಡಿದಾಗ ಸಮಾಜ ಸಹೃದಯತೆಯಿಂದ ಕಲಾವಿದನಿಗೆ ಆ ಕ್ಷಣಕ್ಕೆ ಕೊಡುವ ಮಾರ್ಜಿನ್ - ಇಷ್ಟನ್ನು ನಿರೀಕ್ಷಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದೆ ಸದಾ ಬಚ್ಚಿಟ್ಟುಕೊಳ್ಳುವುದು ಕಲಾವಿದನಿಗೆ ಶೋಭಿಸುವುದಿಲ್ಲ. ಆ ಸ್ವಾತಂತ್ರ್ಯವನ್ನು ಸಮಾಜದಿಂದ ಸದಾ ಕೋರುತ್ತಾ, ಜವಾಬ್ದಾರಿಯನ್ನು ಮೆರೆಯಬೇಕಾಗುತ್ತದೆ. ತುಘಲಕ್ ನಾಟಕದಲ್ಲಿ ಕಾರ್ನಾಡರು ಅದನ್ನು ಮೆರೆದಿದ್ದಾರೆ, ಅವರ ಟೀಪು ನಾಟಕದ ಬಗ್ಗೆ ಈ ಮಾತನ್ನು ಹೇಳುವುದಕ್ಕೆ ಸಾಧ್ಯವೇ - ಅದನ್ನಿನ್ನೂ ಶೋಧಿಸುತ್ತಿದ್ದೇನೆ. ಆದರೆ ಇದ್ಯಾವುದೂ, ತಾತ್ವಿಕವಾದ ಪ್ರಶ್ನೆಯನ್ನು ಎದುರಿಸದಿರುವುದಕ್ಕೆ ನೆಪವಾಗಬಾರದು.
ಮುಂದುವರೆಯುವುದು...
0 Comments:
Post a Comment
<< Home