ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, April 09, 2007

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೩

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]
ನೋಯಿಡಾ ಘಟನೆಗಳನ್ನು ಪ್ರತ್ಯೇಕವಾಗಿ ಗಮನಿಸದೇ ನಮ್ಮ ಕಾಲದ ಪ್ರಕ್ರಿಯೆಗಳ ಒಂದು ವಿಷದ ಬೈಪ್ರಾಡಕ್ಟಾಗಿ ಕಾಣುವುದಕ್ಕೆ ನಮಗೆ ಧೈರ್ಯ ಸಾಲುತ್ತಿಲ್ಲ. ಅದರಿಂದ ಏಳಬಹುದಾದ ಪ್ರಶ್ನೆಗಳನ್ನು ಎದುರಿಸುವುದಕ್ಕೆ ನಾವು ಸಿದ್ಧರಿಲ್ಲ. ನಮ್ಮ ಕಾಲದ ಜೀವನ ವಿಧಾನದ ಯಾವ ಅಂಶಗಳು ಇಂತಹ ವಿಷಯಗಳು ನಮ್ಮೆದುರಿನಲ್ಲೇ ನಡೆಯುತ್ತಿದ್ದರೂ ಕಾಣದ ಹಾಗಾಗಿದೆ ಎನ್ನುವ ಪ್ರಶ್ನೆಯನ್ನು ನಾವು ಎದುರಿಸುತ್ತಿಲ್ಲ. ನಮ್ಮ ಇಕ್ಕಟ್ಟೆಂದರೆ - ಈ ಕುರಿತು ಸಿನಿಕರಂತೆ ಮಾತನಾಡುವುದೂ ಸ್ವಿಫ್ಟ್‌ನಂತೆ ಮಾತನಾಡುವುದೂ ಏಕಕಾಲದಲ್ಲಿ ಲಂಪಟತನವಾಗುತ್ತದೆ. ಮತ್ತೊಂದೆಡೆ, ಸ್ವಿಫ್ಟ್‌ನ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯದಿಂದ ನಾವು ಹೇಸುವುದು ಮತ್ತು ಅದನ್ನು ನಾವು ಸಾಹಿತ್ಯಕವಾಗಿ ಮೆಚ್ಚುತ್ತೇವೆ ಎನ್ನುವುದು - ಒಂದು ದೊಡ್ಡ ನೈತಿಕತೆಯ ಪ್ರಶ್ನೆಯಾಗುತ್ತದೆ. ಯಾವ ಪ್ರತಿಕ್ರಿಯೆ ಅತಿಯಾದರೂ ಒಂದು ವಿಕೃತಿಗೆ ಕಾರಣರಾಗುತ್ತೇವೆ. ಹೀಗಿರುವ ಪಕ್ಷದಲ್ಲಿ ಚರಿತ್ರೆಯ ಕುರಿತು ಬೇಂದ್ರೆ, ಅಡಿಗ, ಬೆಂಜಮಿನ್ನರ ಗಮನ/ಗ್ರಹಿಕೆಗಳನ್ನು ನಾವು ಯಾವ ರೀತಿ ಎದುರಿಸುವುದು? ಚರಿತ್ರೆ ಬಗೆವ ಬಗೆ ಲೇಖನಕ್ಕೆ ಸುದರ್ಶನ್‌ ಪಾಟೀಲ್‌ ಕುಲಕರ್ಣಿಯವರ ಪ್ರತಿಕ್ರಿಯೆ ಕೂಡಾ ಈ ದೃಷ್ಟಿಯಿಂದ ಗಮನಾರ್ಹವಾಗಿದೆ. ಸಾಹಿತ್ಯ ಮತ್ತಿತರ ಎಲ್ಲ ಕಲೆಗಳು, ಕಲಾವಿದರು ಇದನ್ನೆದುರಿಸದೇ ಮುಂದೆ ಹೋಗುವಂತಿಲ್ಲ.

***

ಜಾಗತಿಕ ವಾಣಿಜ್ಯವೆನ್ನುವುದು ಇಂಗ್ಲೀಷ್‌ಗೆ ಯಜಮಾನಿಕೆಯನ್ನೂ, ಲಯಕಾರನ ತಾಂಡವ ಶಕ್ತಿಯನ್ನೂ ಕೊಟ್ಟಿದೆ. ಬೇರೆ ಬೇರೆ ನಡೆಗಳು ತಮ್ಮದೇ ಕಾರಣಕ್ಕೆ ಸೃಜನಶೀಲವಾದವುಗಳಾದರೂ ಜಾಗತೀಕರಣದ ಅತಂಕವನ್ನು ಅವುಗಳಲ್ಲಿ ಕೆಲವು ಮಾತ್ರ ಎದುರಿಸಬಲ್ಲವು. ಅವುಗಳನ್ನು ನಾವು ಆಯಬೇಕಿದೆ. ಚಲಿಸುವ ಭಾಷೆಯ ಸೃಜನಶೀಲತೆ ಮತ್ತು ಅದರ ಮೇಲೆ ನಮಗಿರಬೇಕಾದ ಆತ್ಮವಿಶ್ವಾಸ, ಬಡ-ಶ್ರೀಮಂತ ಮಕ್ಕಳು ಒಂದೇ ಶಾಲೆಯಲ್ಲಿ ಓದುವುದರಿಂದ ನಾವು ಸಾಧಿಸಬಹುದಾಗಿದ್ದ ಸಾಂಸ್ಕೃತಿಕ ಶ್ರೀಮಂತಿಕೆ, ಇಂಗ್ಲೀಷ್‌ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕಾಗಿರುವುದು- ಇವೆಲ್ಲ ನಿಸ್ಸಂಶಯವಾಗಿ ಮುಖ್ಯವಾದ ವಿಷಯಗಳೇ ಸರಿ. ನಿತ್ಯ-ಸದ್ಯಗಳ ಉತ್ತಮ ಮಿಶ್ರಣವಾಗಿರುವ ಡಾ ಅನಂತಮೂರ್ತಿಗಳ ಕನ್ನಡ ಚಿಂತನೆಯಲ್ಲಿ ಇದರಾಚೆಗೂ ಮುಖ್ಯವಾದ ಮಹತ್ವದ ಪರಿಕಲ್ಪನೆಗಳು, ಶಕ್ತವಾದ ವಿಚಾರಗಳಿದ್ದು ಇನ್ನಷ್ಟು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ.

ಮೊದಲಾಗಿ, ಭಾಷೆ ಉಳಿಸುವವರು ಮತ್ತು ಭಾಷೆ ಬೆಳೆಸುವವರು ಎನ್ನುವ ಪರಿಕಲ್ಪನೆಗಳು. ನಮ್ಮ ಒಟ್ಟು ಭವಿಷ್ಯ ಪ್ರಾಯಶಃ ಈ ಗ್ರಹಿಕೆಯನ್ನು ನಾವು ಯಾವ ರೀತಿ ಸ್ವೀಕರಿಸಿ, ಚರ್ಚಿಸಿ, ಮುಂದುವರೆಸುತ್ತೇವೆ ಎನ್ನುವುದರ ಮೇಲೆ ನಿಂತಿದೆಯೆನ್ನಿಸುತ್ತದೆ. ಯಾಕೆಂದರೆ ಹೀಗೆ ನಾವು ‘ಕನ್ನಡ ಮಾತ್ರ ಬಲ್ಲಂತಹ'ವರು ಇನ್ನು ಮುಂದೆ ಇರುವುದು ನ್ಯಾಯವಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಮುಟ್ಟಿದ್ದೇವೆ. ಪ್ರತಿಯೊಬ್ಬರಿಗೂ ಇಂಗ್ಲೀಷ್‌ ಕಲಿಸಲೇಬೇಕಾದ ಚಾರಿತ್ರಿಕ ಘಟ್ಟದಲ್ಲಿದ್ದೇವೆ. ಕನ್ನಡ ಮಾತ್ರ ಬಲ್ಲವರು ಮಾತ್ರ ಭಾಷೆ ಉಳಿಸಬಲ್ಲರು ಎನ್ನುವುದನ್ನು ಒಪ್ಪಿಕೊಂಡರೆ, ನಮ್ಮ ಕನ್ನಡ ಸಂಘಟನೆಗಳು ಮತ್ತೂ ಹೆಚ್ಚು ಮೂಲಭೂತವಾದೆಡೆಗೆ ಸಾಗುತ್ತಾವೇನೋ. ಇನ್ನೊಂದೆಡೆ, ಸ್ವೀಡಿಷ್‌-ಇಂಗ್ಲೀಷ್‌ಗೆ ಸಾಧ್ಯವಾಗಿರುವ ಆರ್ಥಿಕ-ಸಾಂಸ್ಕೃತಿಕ ಸಮಸಮದ ಸಂಬಂಧ ನಮಗೂ ಸಾಧ್ಯವಿರಬಹುದು ಎನ್ನುವುದೊಂದು ಆಶಾವಾದವೇ ಸರಿ. ಆದರೆ, ಪ್ರೊಫೆಸರ ರಾದಾ ಅವರ ಈ ವಾದ ಚರಿತ್ರೆಯ ಒಂದು ಬಿಂದುವಿನ ಕುರಿತಾಗಿದೆ. ಯಾವ ಚಾರಿತ್ರಿಕ ಚಲನೆ ಸ್ವೀಡನ್ನಿಗೆ ಇದನ್ನು ಸಾಧ್ಯವಾಗಿಸಿತು? ಇವತ್ತಿನ ಜಾಗತಿಕ ಚಾರಿತ್ರಿಕ ಚಲನೆಯೆನ್ನುವುದು ಯಾವ ದಿಕ್ಕಿನಲ್ಲಿದೆ? ಇಡಿಯ ಯುರೋಪು ಯಾವ ದಿಕ್ಕಿನಲ್ಲಿದೆ? ಸ್ಕ್ಯಾಂಡಿನೇವಿಯಾದ ದೇಶಗಳು ಯಾವ ದಿಕ್ಕಿನಲ್ಲಿವೆ? ಭಾರತ ಸದ್ಯದ ಸವಾಲುಗಳು ಯಾವ ಚಾರಿತ್ರಿಕ ಚಲನೆಯ ಪರಿಣಾಮ ಮತ್ತು ಯಾವ ಚಾರಿತ್ರಿಕ ಚಲನೆಯನ್ನೆದುರಿಸಿ ಗೆಲ್ಲಬೇಕಿದೆ? ಎನ್ನುವ ಪ್ರಶ್ನೆಗಳನ್ನು ನಾವು ಎದುರಿಸಬೇಕಿದೆ. ಸ್ವೀಡಿಷ್‌ ಭಾಷೆಯ ಕುರಿತು ಆತಂಕ ಇದ್ದಿರಲಾರದ ಒಂದು ಶಾಂತಿ ಕಾಲದಲ್ಲಿ ಇಂಗ್ಲೀಷ್‌-ಸ್ವೀಡಿಷ್‌ ಸಮತ್ವ ಸಾಧ್ಯವಾಗಿದೆ. ಭಾರತ ಆತಂಕದಲ್ಲಿ, ಘರ್ಷಣೆಯಲ್ಲಿ ಇದನ್ನು ಸಾಧಿಸಿಕೊಳ್ಳಬೇಕಿದೆ. ಸ್ವೀಡನ್‌ನ ಉದಾಹರಣೆ ನಮಗೆ ಸಹಾಯ ಮಾಡುತ್ತದೆಯೇ ಎನ್ನುವ ಕಳಕಳಿ ನನ್ನದು. ಆಸ್ಟ್ರೇಲಿಯಾದ ಬುಡಕಟ್ಟಿನ ಲೇಖಕನ ಮಾತುಗಳು ಕೂಡಾ ನನ್ನಲ್ಲಿ ಅಪಾರವಾದ ಆಶೆ ಮೂಡಿಸಿದೆ. ಆದರೆ ಇದು ಮಾರಣಹೋಮದ ನಂತರವೂ ಉಳಿಯುವ ಭರವಸೆ. ಇದನ್ನು ಗಮನದಲ್ಲಿಟ್ಟುಕೊಂಡೂ ಸದ್ಯ ಮಾರಣಹೋಮವಾಗದ ರೀತಿಗಳ ಬಗ್ಗೆ ಮಾತ್ರ ಗಮನಿಸಲು ಇಚ್ಛಿಸುತ್ತೇನೆ.

ಕನ್ನಡದ ಕುರಿತು ಆಶಾವಾದದಿಂದಿರಲು ನನ್ನ ಮನಸ್ಸಿನಲ್ಲೊಂದು ವಾದವಿದೆ, ಇದನ್ನು ಬೆಳೆಸಬೇಕಾಗಿದೆ. ಅದೇನೆಂದರೆ, ನಮ್ಮಲ್ಲಿ ಇಂಗ್ಲೀಷನ್ನು ದಕ್ಷವಾಗಿ ಬಳಸಬಲ್ಲವರ ಇಂಗ್ಲೀಷ್‌ ಕೂಡಾ ಸಾಂಸ್ಕೃತಿಕವಾಗಿ ದರಿದ್ರವಾಗಿರುತ್ತದೆ. ತಮ್ಮ ಇಂಗ್ಲೀಷ್‌ಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕಾದರೆ ಕನ್ನಡದಂತಹ ದೇಶೀಯ ಭಾಷೆಗಳ ಜೊತೆ ಸೃಜನಶೀಲ ಸಂಬಂಧ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ರಾಜಾರಾಯರು. ಇಲ್ಲದಿದ್ದರೆ ಇವರ ಇಂಗ್ಲೀಷ್‌ ಎಂದೆಂದಿಗೂ ಗುಲಾಮವಾಗುತ್ತದೆ. ಅವರು ಔದ್ಯೋಗಿಕವಾಗಿ ಮುಂದುವರೆಯಬಹುದು. ಆದರೆ ಸಾಂಸ್ಕೃತಿಕವಾಗಿ ಮುಂದುವರೆಯಲಾರರು. ಸಂಸ್ಕೃತಿ ನಿರ್ಮಾಪಕರಿಗೆ ಗತದ ಜೊತೆಗೆ ಆಳವಾದ ಸಂಬಂಧ ಇರಲೇಬೇಕಾಗುತ್ತದೆ. ಆದರೆ ಕನ್ನಡವನ್ನು ಅಡುಗೆಮನೆ ಭಾಷೆಯಾಗಿ ಬಳಸುವವರಿಗೆ ಇದು ಸಾಧ್ಯವಾಗುವುದಿಲ್ಲ. ಈ ವಾದದ ಸತ್ಯಾಸತ್ಯತೆ ಒಂದಾದರೆ, ಮತ್ತೊಂದು- ಈ ವಾದ ಫಲನೀಡಬೇಕಾದರೆ, ಸಂಸ್ಕೃತ ಕನ್ನಡಕ್ಕೆ ದಾರಿ ಮಾಡಿಕೊಟ್ಟಂತೆ ಇವತ್ತು ಇಂಗ್ಲೀಷ್‌ ಕನ್ನಡಕ್ಕೆ ದಾರಿ ಮಾಡಿಕೊಡಬೇಕಾದರೆ, ನಮ್ಮಲ್ಲಿ ಸಾಂಸ್ಕೃತಿಕ ದಣಿವು ವ್ಯಾಪಕವಾಗಿ ಮತ್ತು ಆಳವಾಗಿ ಎಲ್ಲರಿಗೂ ಅನುಭವವಾಗಬೇಕು. ಮತ್ತು ಅದೇ ಕಾಲದಲ್ಲಿ ದಾರ್ಶನಿಕರು ಹುಟ್ಟಬೇಕು. ಹಾಗೇನಾದರೂ ಆಗಬಹುದು ಎನ್ನುವ ಒಂದು ಆಶಾವಾದ ನನ್ನಲ್ಲಿದೆ.

ಎರಡನೆಯದಾಗಿ, ಒಂದು ಭಾಷೆಯಲ್ಲೇ ಜ್ಞಾನದ ಸೃಷ್ಟಿಯಾಗುವುದು ಮತ್ತು ಭಾಷೆಯ ಉಳಿವು ಅದರ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎನ್ನುವುದು. ಇದು ನಿಜವಾದರೂ, ಹೀಗೆ ಹುಟ್ಟುವ ಜ್ಞಾನಕ್ಕೆ ಆರ್ಥಿಕ ಆಯಾಮಗಳಿರಬೇಕಾಗುತ್ತದೆ. ಅಥವ ಮತ್ತಿನ್ಯಾವ ಕಾರಣಕ್ಕಾದರೂ ಇಂಗ್ಲೀಷ್‌ಗಿಂತ ಮೇಲು ಎನ್ನುವ ಹಣೆಪಟ್ಟಿ ಪಡೆಯಬೇಕಾಗುತ್ತದೆ. ಅತ್ಯುತ್ತಮ ಸಾಹಿತ್ಯ ಸೃಷ್ಟಿ ಕೂಡ ಜ್ಞಾನದ ಒಂದು ಭಾಗವಾದರೂ ಇದಕ್ಕೆ ನಾವು ಆರ್ಥಿಕ/ಔದ್ಯೋಗಿಕ ಆಯಾಮ ಕಲ್ಪಿಸಲು ಸಾಧ್ಯವಿಲ್ಲದಿರುವುದನ್ನು ಗಮನಿಸಿದರೆ, ನಮ್ಮ ಮುಂದಿರುವ ಸವಾಲು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಇವತ್ತಿನ ವಾಣಿಜ್ಯವನ್ನು ನೇರವಾಗಿ ಎದುರಾಗಲೇಬೇಕಾಗುತ್ತದೆ. ವಾಣಿಜ್ಯ ಸೃಷ್ಟಿಸುವ ಆತಂಕಗಳ ವಿಷಯದಲ್ಲಿ ವಾಣಿಜ್ಯೋದ್ಯಮಿಗಳಿಗೆ ಹುನ್ನಾರಗಳಿರುತ್ತವೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಅವರ ಗಮನವೆಲ್ಲವೂ ಸಾಮಾರ್ಥ್ಯದ ಸೃಷ್ಟಿ, ಗಳಿಕೆ, ಹಣದ ಹರಿಯುವಿಕೆಯತ್ತ ಇರುತ್ತದೆ. ಒಳ್ಳೆಯದಾದರೂ, ಕೆಟ್ಟದಾದರೂ ಈ ಪ್ರಕ್ರಿಯೆಯ ಬೈಪ್ರಾಡಕ್ಟಾಗಿ ಆಗುತ್ತದೆ. ಈ ವ್ಯತ್ಯಾಸವನ್ನೇಕೆ ಗಮನಿಸುತ್ತಿದ್ದೇನೆಂದರೆ, ಕೆಲವರನ್ನು ಬಿಟ್ಟು ವಾಣಿಜ್ಯದ ಬಹುತೇಕರಿಗೆ ಒಳನೋಟದ ಕೊರತೆಯಿರುತ್ತದೆ, ವಾಣಿಜ್ಯೇತರ ವಿಷಯಗಳ ಕುರಿತಾದ ಇಂಡಿಫರೆನ್ಸ್‌ ಇರುತ್ತದೆ. ಇನ್ನು ಮಿಕ್ಕವರಿಗೆ ಮನುಷ್ಯತ್ವವನ್ನು ಮೀರಿದ ಮಹತ್ವಾಕಾಂಕ್ಷೆಗಳಿರುತ್ತದೆ. ನಾವು ಎರಡನೆಯವರನ್ನು ಟೀಕಿಸುವ ಭರದಲ್ಲಿ ಮೊದಲನೆಯವರನ್ನು ಕಳೆದುಕೊಳ್ಳುತ್ತೇವೆ. ಅಥವಾ ಈ ಎರಡನ್ನೂ ಬೇರೆ ಬೇರೆ ರೀತಿಗಳಲ್ಲಿ ಟೀಕಿಸಬೇಕಾಗುತ್ತದೆ. ಇದೊಂದು ದಿಕ್ಕಾದರೆ, ಮತ್ತೊಂದು ದಿಕ್ಕಿನಲ್ಲಿರಬೇಕಾದ ಎಚ್ಚರವೆಂದರೆ ಬೆಂಗಳೂರು ಕ್ಲಬ್‌ನಂತಹ ಘಟನೆಗಳನ್ನು ಪ್ರಜ್ಞಾವಂತರು ಟೀಕಿಸದೇ ಹೋದರೆ ಒಂದೋ ಕನ್ನಡ ಸಂಘಟನೆಗಳು ಇಲ್ಲವೋ ಬಲಪಂಥೀಯರು ಅದನ್ನೂ ಹೈಜಾಕ್‌ ಮಾಡುತ್ತಾರೆ.

ಇದನ್ನೆಲ್ಲಾ ಮುಂದುವರೆಸುವುದಾದರೆ, ಬೇಂದ್ರೆಯವರ ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು; ಕನ್ನಡವು ಹೊಸಬಾಳನ್ನು ಕನ್ನಡಿಸಬೇಕು' ಕವಿವಾಣಿಯನ್ನು ಒಟ್ಟು ಕನ್ನಡ ನಾಡು ಅರ್ಥೈಸಲು ಪ್ರಯತ್ನಿಸಬೇಕಿದೆ. ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವುದು ಹೊಸಬಾಳನ್ನು ಕನ್ನಡಿಸಬೇಕು ಎನ್ನುವದರ ಭಾಗವೇ ಆದರೂ, ಇದಕ್ಕಿರುವ ಇತರ ಆಯಾಮಗಳ ಚರ್ಚೆಯಾಗಬೇಕಿದೆ. ಈ ಆವರಣದೊಳಗೇ ಮಧ್ಯಮ ವರ್ಗಕ್ಕೆ ಕನ್ನಡದ ಮೇಲೆ ಮತ್ತಷ್ಟು ವಿಶ್ವಾಸ ಮೂಡಿಸುವ ಬಗೆ, ಕನ್ನಡ ಅತ್ಯುತ್ತಮವಾಗಿ ಬಲ್ಲ, ಇಂಗ್ಲೀಷ್‌ ಓದಿ-ಬರೆಯಲು ಬಲ್ಲ, ಮಾತನಾಡಲು ಮಾತ್ರ ಬಾರದ ಕನ್ನಡ ಮಕ್ಕಳಲ್ಲಿ ನಾವು ಆತ್ಮವಿಶ್ವಾಸ ತುಂಬುವ ಬಗೆ, ಕನ್ನಡದಿಂದ ಇಂಗ್ಲೀಷ್‌ ಕಲಿಯುವುದು ಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗುವ ಬಗೆ, ತಮ್ಮ ಸೃಜನಶೀಲತೆಗೆ ಎರವಾಗದ ಸ್ಥಿತಿಯ ನಿರ್ಮಾಣದ ಬಗೆ ಇವೆಲ್ಲವೂ ಚರ್ಚೆಯಾಗಬೇಕಿದೆ.

***

ಭಾಷಾಂತರದ ಪತ್ರಿಕೋದ್ಯಮ ಮಾತ್ರ ಕಷ್ಟದ ವಿಚಾರವಾಗಿದೆ. ವಿಷಯ ಜಟಿಲವಾಗಿರುವುದರಿಂದ ಅನುಮಾನಗಳ ಮೂಲಕವೇ ನನ್ನ ಪ್ರತಿಕ್ರಿಯೆ. ಅನುವಾದ ಪದವನ್ನು ಅನುವು+ಆದ ಎಂದು ಬಿಡಿಸಿಕೊಂಡರೆ, ಮತ್ತೊಂದು ಭಾಷೆಯಲ್ಲಿ ಅನುವು - ಎಂದರೆ ಮತ್ತೊಂದು ಭಾಷೆಯಲ್ಲಿ ತಯಾರಾದ, ಮರುಸೃಷ್ಟಿಯಾದ - ಎನ್ನುವ ಅರ್ಥವನ್ನೂ ಸೇರಿಸಬಹುದೆನ್ನಿಸುತ್ತದೆ. ಈ ಅರ್ಥವನ್ನು ಡಾ ಅನಂತಮೂರ್ತಿಗಳ ಲೇಖನದಲ್ಲಿನ 'ಅನುವಾಗು' ಪದ - ಮತ್ತೊಂದು ಭಾಷೆಯಲ್ಲಿ 'ಅನುವಾಗು' - ಧ್ವನಿಸುತ್ತದೆನ್ನಿಸುತ್ತದೆ. ಹೀಗಾದರೆ ‘ತನ್ನ ಭಾಷೆಯಲ್ಲಿ ಮೂಲಕ್ಕೆ ಆದಷ್ಟೂ ಹತ್ತಿರವಾಗು' ಎಂದು ಹೇಳಬಹುದೇ ಎಂದು ಯೋಚಿಸುತ್ತಿದ್ದೇನೆ. ಈ ಸಂಕೀರ್ಣತೆ ನನಗಿನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ.

ಬೇಂದ್ರೆಯವರ ಕವಿವಾಣಿಯಂತೆ ಹಿರಿಯರಿಗೆ ಇಂಗ್ಲೀಷು ಕನ್ನಡವನ್ನು ಹಸನುಗೊಳಿಸುವ ಸಾಧನವಾಯಿತು. ಇಂಗ್ಲೀಷನ್ನು ನೋಡಿದಷ್ಟೂ ಕನ್ನಡದ್ದೇ ಹೊಸ ಸಾಧ್ಯತೆಗಳ ಶೋಧನೆ ಸಾಧ್ಯವಾಯಿತು. ಆದರೆ ಇವತ್ತಿನ ಪ್ರಕ್ರಿಯೆಯನ್ನು ಸ್ವಲ್ಪ ಅತಿರೇಕದಲ್ಲಿ ಹೀಗೆ ವಿವರಿಸಬಹುದೇನೋ - ಕನ್ನಡಾಂಬೆಯಲ್ಲಿ ಸ್ವಸ್ಥವಾಗಿರುವ ಅಂಗಗಳನ್ನು ಕಿತ್ತು ಇಂಗ್ಲೀಷಿನ ಅಂಗಾಂಗಗಳನ್ನು ವಾಮಾಚಾರದಿಂದ ನಕಲು ಸೃಷ್ಟಿಮಾಡಿ ಕನ್ನಡಾಂಬೆಗೆ ಕಸಿ ಮಾಡುವುದು. ಈ ಕುರಿತು ಕನ್ನಡಿಗರಿಗೆ ಹೇಸಿಗೆಯಾಗಬೇಕು, ಆದರೆ ಹಾಗಾಗುವುದಿಲ್ಲ. (ನಮ್ಮ ಜನ ಅಷ್ಟರಮಟ್ಟಿಗೆ ಬದಲಾಗಿದ್ದಾರೆ, ಅಥವಾ ಈ ಮೊದಲೂ ಹಾಗೇ ಇದ್ದರು.) ಬೇರಿನ್ನಾವ ಪ್ರತಿಭಟನೆಯೂ ಈ ಬೆಳವಣಿಗೆಯನ್ನು ತಡೆಯುವುದಿಲ್ಲ. ಆದರೆ ಇದನ್ನು ಮೀರುವುದಕ್ಕೆ ನಮಗೆ ಎರಡು ಸಾಧ್ಯತೆಗಳಿವೆ. ಹೀಗೆ ಭಾಷಾಂತರಿಸುವವರು ಕನ್ನಡಾಂಬೆಯ ಅಂಗಾಂಗಗಳನ್ನು ಕಸಿ ಮಾಡದೇ, ತಮ್ಮ ಪರಿಮಿತ ನೆಲೆಯಲ್ಲೂ ಬೇಂದ್ರೆಯ ಕವಿವಾಣಿಗೆ ಓಗೊಡುತ್ತಾರೆಯೇ? ಈ ಹಿಂದೆ ಅನೇಕ ವಿಕೃತಿಗಳೇ ಮುಂದೆ ಸೃಜನಾತ್ಮಕ ಬೆಳವಣಿಗೆಗಳಿಗೆ ದಾರಿಯಾದ ಉದಾಹರಣೆಗಳಿವೆ. ಆದರೆ, ಇದೂ ಕೂಡಾ ಕಷ್ಟ ಸಾಧ್ಯವೇ. ಅಂಗಾಂಗ ಕಸಿಗೆ ಮಾತ್ರ ಸಂಬಳ ನೀಡಲಾಗುತ್ತದೆ. ಬೇರಿನ್ನೆಲ್ಲ ಪ್ರಕ್ರಿಯೆಗಳನ್ನು ಕೊಲ್ಲಲಾಗುತ್ತದೆ.

ಮತ್ತೊಂದು, ಕನ್ನಡದಲ್ಲಿ ಜ್ಞಾನ ಸೃಷ್ಟಿಯ ವಿಷಯ. ಇಲ್ಲೂ ಸಹ ನಾವು ಇವತ್ತು ಇಂಗ್ಲೀಷ್‌ ಸೃಷ್ಟಿಸುತ್ತಿರುವ ಜ್ಞಾನದ ಜೊತೆಗೆ ಸ್ಪರ್ಧಿಸಿದರೆ ಗೆಲುವು ಕಷ್ಟವೇ ಸರಿ. ಇಂಗ್ಲೀಷ್‌ ಸೃಷ್ಟಿಸುತ್ತಿಲ್ಲದ ವಿಷಯ-ವಸ್ತುಗಳತ್ತ ಇನ್ನಿತರ ಭಾಷೆಗಳು ಗಮನ ಹರಿಸುವುದು ಸಾಧ್ಯವೇ ಎನ್ನುವುದು ಒಂದು ಪ್ರಶ್ನೆ. ಇದಕ್ಕೊಂದು ನಿದರ್ಶನವನ್ನು ಅನಂತಮೂರ್ತಿಗಳ ಒಂದು ಲೇಖನದಲ್ಲಿ ಪ್ರಸ್ತಾಪವಾದ ವಿಷಯದ ಮೂಲಕ ಕೊಡಬಯಸುತ್ತೇನೆ. ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿನ ‘ಸಂಪ್ರದಾಯ, ಆಧುನಿಕತೆ ಮತ್ತು ಪರ್ಯಾಯ ಸಂಸ್ಕೃತಿ' ಲೇಖನದಲ್ಲಿ ಒಂದು ಪ್ರಸ್ತಾಪವಿದೆ. ನೆಲದಲ್ಲಿ ಬೇರೂರಿರುವುದು ಮತ್ತು ವೈಚಾರಿಕರಾಗಿರುವುದು ಏಕಕಾಲದಲ್ಲಿ ಎರಡೂ ಆಗಿರುವುದು ಮುಖ್ಯ. ಬಹುತೇಕ ಭಾರತೀಯ ಭಾಷೆಗಳ ವಿಷಯದಲ್ಲಿ ಇದು ಸಾಧ್ಯವಾಗಿದೆ ಎನ್ನುವ ಅರ್ಥದ ಸಾಲುಗಳು (ಪುಟ 9 ಪ್ಯಾರಾ 1). ಇದನ್ನು ನಾವು ಕನ್ನಡದಲ್ಲಿ ಜ್ಞಾನದ ಸೃಷ್ಟಿ ಎನ್ನುವ ಅರ್ಥದಲ್ಲಿ ಗ್ರಹಿಸಲು ಸಾಧ್ಯವಿಲ್ಲವೆ, ಮತ್ತು ಇದನ್ನು ವಿಸ್ತರಿಸಬಲ್ಲವೆ. ತಂತ್ರಜ್ಞಾನ, ವಾಣಿಜ್ಯಗಳನ್ನು ಬಿಟ್ಟು ಮನುಷ್ಯನಿಗೆ ಮುಖ್ಯವಾದ ಅನೇಕ ವಿಷಯಗಳು ನಮ್ಮ ಜೀವನಕ್ಕೆ ನಿಜದಲ್ಲಿ ಹತ್ತಿರವಾಗಿರುವಂತೆ ಇಂಗ್ಲೀಷಿನಲ್ಲಿ ಸಿಗುವುದು ಸಾಧ್ಯವಿಲ್ಲ, ಕನ್ನಡದಲ್ಲಿ ಮತ್ತು ಇನ್ನಿತರ ಭಾಷೆಗಳಲ್ಲಿ ಸಿಗುವುದು ಸಾಧ್ಯವಿದೆ ಎನ್ನುವುದನ್ನು ಜ್ಞಾನದ ಸೃಷ್ಟಿ ಎಂದು ಗ್ರಹಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿದ್ದೇನೆ. ಈ ಬಗೆಯ ಸಾಧ್ಯತೆಯನ್ನೂ ‘ಭಾಷಾಂತರದ ಗಂಡಾಂತರ' ಕೊಲ್ಲುವುದೇನೋ ಎನ್ನುವುದು ಡಾಅನಂತಮೂರ್ತಿಗಳ ಮುಖ್ಯ ಕಾಳಜಿ ಇರಬಹುದೇ ಎಂದೂ ಯೋಚಿಸುತ್ತಿದ್ದೇನೆ.

ನಿಜಕ್ಕೂ ಜನರಲ್ಲಿ ಜಾಗೃತಿಯಾದೀತು ಎನ್ನುವುದನ್ನು ನಂಬಲು ಸಿದ್ಧರಿಲ್ಲದ ನನ್ನಂಥವರು ಕಡೆಗೆ ದಣಿವಿಗೇ ಕಾದು ಕೂರಬೇಕೇನೋ.
ಮುಂದುವರೆಯುವುದು...

0 Comments:

Post a Comment

<< Home