ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Tuesday, May 30, 2006

ಕಾಸರವಳ್ಳಿಯವರ ಚಿತ್ರ ದ್ವೀಪ



ಕಾಸರವಳ್ಳಿಯವರ 'ಮೂರು ದಾರಿಗಳು' ಬಿಟ್ಟು ಮಿಕ್ಕೆಲ್ಲಾ ಚಿತ್ರಗಳನ್ನೂ ನೋಡಿದ್ದೇನೆ. ಅಚ್ಚುಮೆಚ್ಚಿನ ಸಿನೆಮಾವೆಂದರೆ 'ತಾಯಿ ಸಾಹೇಬ'. ಅನೇಕ ಕಾರಣಗಳಿಗೆ 'ಬಣ್ಣದ ವೇಷ' ಮತ್ತು 'ಘಟಶ್ರಾದ್ಧ' ನನಗೆ ಬಹಳ ಇಷ್ಟ. ಆದರೆ ಮೊದಲು ಏನನ್ನಾದರೂ ಬರೆದದ್ದು ಅವರ 'ದ್ವೀಪ' ಚಿತ್ರದ ಬಗ್ಗೆ. ಇದು ಮೊದಲು ಕನ್ನಡಸಾಹಿತ್ಯ.ಕಾಂ-ನಲ್ಲಿ ಪ್ರಕಟವಾಗಿತ್ತು. ಅದನ್ನೇ ಒಂದೆರಡು ಕಡೆ ತಿದ್ದಿದ್ದೇನೆ. ಮುಖ್ಯವಾಗಿ, ಈ ಚಿತ್ರದ ಕುರಿತು ನನ್ನ ವಿಚಾರ ಈಗ ಬದಲಾಗಿದೆ. ಈ ಕೆಳಗೆ ಬರೆದಿರುವುದು ನನಗೇ ಹೆಚ್ಚು ಪೂರ್ವಾಗ್ರಹಪೀಡಿತವಾಗಿ, ಸಿನೆಮಾ ಎನ್ನುವ ಕಲಾಮಾಧ್ಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲದ ಸಾಮಾನ್ಯನೊಬ್ಬನ ಪ್ರತಿಕ್ರಿಯೆಯಾಗಿ ಕಾಣುತ್ತಿದೆ. 'ದ್ವೀಪ'-ದ ಕಾವ್ಯಾತ್ಮಕತೆ ನನ್ನನ್ನು ಅಷ್ಟಾಗಿ ತಲುಪಿಲ್ಲವೆನ್ನಿಸಿತ್ತದೆ. ಸ್ನೇಹಿತರೊಬ್ಬರ ಜೊತೆಗಿನ ಚರ್ಚೆ ದ್ವೀಪದ ಕುರಿತು ಇನ್ನೊಮ್ಮೆ ಬರೆಯುವಂತೆ ಪ್ರೇರೇಪಿಸಿದೆ. ಅದನ್ನು ಮುಂದೆ ಯಾವಾಗಲಾದರೂ ಕೊಡುತ್ತೇನೆ. ಕಾಸರವಳ್ಳಿಯವರು ತಮ್ಮ ಒಂದು ಸಂದರ್ಶನದಲ್ಲಿ 'ಫ್ರೇಮುಗಳನ್ನಷ್ಟೇ ನೋಡಿ ಬರೆಯುವುದು ಒಂದು ವಿಮರ್ಶೆಯಾಗಲಾರದು' ಎಂದಿದ್ದರು. ಆ ಬಗೆಯ ಕೆಲ ತಪ್ಪುಗಳು ಇಲ್ಲೂ ಆಗಿವೆ, ಅಷ್ಟೇ ಅಲ್ಲದೆ ಕೆಲ ತಪ್ಪುಗ್ರಹಿಕೆಗಳೂ ಇವೆ. ಮಳೆಯ ಸಾಂಕೇತಿಕತೆಯನ್ನೇ ನನ್ನೆ ಬರಹ ನಿರ್ಲಕ್ಷಿಸಿದೆ. ಆದರೆ, ಈ ಸದ್ಯಕ್ಕೆ, ದ್ವೀಪವನ್ನು ನೋಡಿದ ಮೊದಲ ದಿನಗಳಲ್ಲಿ, ನನ್ನ ಆಲೋಚನೆ ಹೇಗಿತ್ತು ಎನ್ನುವುದನ್ನು ದಾಖಲಿಸುತ್ತಿದ್ದೇನೆ. ಅಷ್ಟೇ ಅಲ್ಲದೇ, ನನ್ನಂತೆ ಅನೇಕರಿಗೆ ಹೀಗನ್ನಿಸಿದ್ದು ನಿಜ. ಮತ್ತು ಈ ಪೂರ್ವಾಗ್ರಹಪೀಡಿತತೆಗೆ ನಮ್ಮ ವರ್ತಮಾನದ ವಿದ್ಯಮಾನಗಳೂ ಕಾರಣ.

ನಾ. ಡಿಸೋಜರ 'ದ್ವೀಪ' -ದ ಕಥೆಯನ್ನಾಧರಿಸಿದೆ ಈ ಚಿತ್ರ. ಮೂಲ ಕಥೆಯನ್ನು ಓದಿಲ್ಲದ ನನಗೆ ಚಿತ್ರದ ನೋಡಿದ ಬಳಿಕ ಅನ್ನಿಸಿದ್ದಿಷ್ಟು. ಸೀತಾ ಪರ್ವತವೆಂಬ ದ್ವೀಪವೊಂದರಲ್ಲಿ ನಾಗಿ, ಅವಳ ಮಾವ ದುಗ್ಗಜ್ಜ ಮತ್ತು ಗಂಡ ಗಣಪ ವಾಸವಾಗಿದ್ದಾರೆ. ಮೂಲತಃ ಬೇಸಾಯಗಾರರು, ಭೂತದೈವವೊಂದರ ಆರಾಧಕರೂ, ಪೂಜಾರಿಗಳೂ ಕೂಡ. ದ್ವೀಪದ ಒಳಗಿರುವ ಮತ್ತು ಹೊರಗಿರುವ ಜನರ ಪರವಾಗಿ ಭೂತಕ್ಕೆ 'ನೇಮ' ಕಟ್ಟಿ, ಅದನ್ನು ತಮ್ಮೊಳಗೆ ಆಹ್ವಾನಿಸಿ ಜನರ ತೊಂದರೆಗಳನ್ನು ನಿವಾರಿಸುವ ಈ ಕೆಲಸದಲ್ಲಿ ಮನೆಯ ಗಂಡಸರು ತಲೆಮಾರುಗಳಿಂದ ತೊಡಗಿಕೊಂಡು ಬಂದಿದ್ದಾರೆ. ಮುದುಕನಾದ ದುಗ್ಗಜ್ಜನದ್ದು ಸಂಪೂರ್ಣ ಶ್ರದ್ಧೆ. ಮಗ ಗಣಪನಿಗೆ ತಂದೆಯ ಸಂಪೂರ್ಣ ಶ್ರದ್ಧೆಯಿಲ್ಲದಿದ್ದರೂ ಬೇರೆ ಯಾವುದೂ ಬುದ್ಧಿಗೆ ನಿಲುಕದ ಕಾರಣ, ಆಲದ ಮರಕ್ಕೆ ಜೋತು ಬಿದ್ದವ. ದುಗ್ಗಜ್ಜ ಒಮ್ಮೆ ಹೀಗೆಯೇ ಇದ್ದಿರಬಹುದು, ಗಣಪ ಮುಂದೆ ದುಗ್ಗಜ್ಜನಷ್ಟೇ ಶ್ರದ್ಧೆ ಬೆಳೆಸಿಕೊಳ್ಳಬಹುದು ಎನ್ನುವ ಯೋಚನೆ ಪ್ರೇಕ್ಷಕನಿಗೆ ಬರದೇ ಇರುವುದಿಲ್ಲ. ಆದರೆ ನಾಗಿ ಪಟ್ಟಣವನ್ನು ಕಂಡವಳು. ಮದುವೆಯ ನಂತರ ಈ ದ್ವೀಪಕ್ಕೆ ಬಂದವಳು. ಗಂಡ, ಮಾವನಿಗಿಂತ ವಾಸ್ತವಾಂಶಗಳ ಬಗ್ಗೆ ಹೆಚ್ಚು ಕಾಳಜಿಯುಳ್ಳವಳು.

ಕಳೆದ ಕೆಲವು ವರ್ಷಗಳಿಂದ ಅಣೆಕಟ್ಟೊಂದು ಇವರ ಜೀವನವನ್ನು ಪ್ರವೇಶಿಸಿದೆ. ಅದರಲ್ಲಿ ಪೂರ್ತಿ ನೀರು ತುಂಬಿದಾಗ ಸೀತ ಪರ್ವತ ಮುಳುಗಿಹೋಗಬಹುದು ಎನ್ನುವ ಭಯವಿದೆ. ಪುರಾಣ ಪ್ರಸಿದ್ಧ, ಭೂತದೇವರಿರುವ ಆ ಜಾಗ ಮುಳುಗಿಹೋಗಬಹುದು ಎನ್ನುವುದೇ ದುಜ್ಜನಿಗೆ ಹಾಸ್ಯಾಸ್ಪದ. ಗಣಪನಿಗೆ ಇದಕ್ಕಿಂತ ಹೆಚ್ಚು ಯೋಚಿಸಲು ಬಾರದು. ಆದರೆ ನಾಗಿಗೆ ಮಾತ್ರ ನವಿರಾದ ಆತಂಕ. ಈ ಹಿನ್ನಲೆಯಲ್ಲಿ ಚಿತ್ರ ಆರಂಭವಾಗುತ್ತದೆ.

ನಾಗಿಯ ಆತಂಕ ಗಣಪನಿಗೆ ತಟ್ಟದಿದ್ದರೂ ಸೀತ ಪರ್ವತವನ್ನು ಬಿಟ್ಟು ಹೋಗಬೇಕೆಂಬ ಸರ್ಕಾರದ ಆದೇಶ ಅವನನ್ನು ಇಷ್ಟವಿಲ್ಲದಿದ್ದರೂ ಸರ್ಕಾರಿ ಅಧಿಕಾರಿಯನ್ನು ಕಾಣುವ ಹಾಗೆ ಮಾಡುತ್ತದೆ. ಆದರೆ ಗಣಪನ ಯಾವ ವಾದಕ್ಕೂ ಸರ್ಕಾರದಲ್ಲಿ ಬೆಲೆಯಿಲ್ಲ. ಭೂತ, ನೇಮಕ್ಕೆ ಸರ್ಕಾರದಲ್ಲಿ ಬೆಲೆಯಿಲ್ಲ. ಇವರ ಸಾಂಸ್ಕೃತಿಕ ಪರಿಸರವನ್ನು, ಗೌರವವನ್ನೂ ಉಳಿಸಿಕೊಳ್ಳುವಂತಹ ಪುನರ್ವಸತಿ ನಿರ್ಮಾಣದಕುರಿತು ಸರ್ಕಾರಕ್ಕೆ ಅಸಡ್ಡೆ. ಗಣಪ ಕಡೆಗೂ ಅಧಿಕಾರಿಯನ್ನು ಮತ್ತೊಮ್ಮೆ ಸಮೀಕ್ಷೆ ನಡೆಸಲು ಒಪ್ಪಿಸುತ್ತಾನೆ.

ಆದರೆ ತಮ್ಮ ಜೀವನ-ಪರಿಸರದ ಬಗೆಗಿನ ದುಗ್ಗಜ್ಜನ ಶ್ರದ್ಧಾಪೂರಿತ ವಿವರಣೆಗೆ ಸರ್ಕಾರಿ ಅಧಿಕಾರಿಗಳ ಅಸಡ್ಡೆ, ಕುಚೋದ್ಯಗಳೇ ಉತ್ತರವಾಗುತ್ತವೆ. ಮೇಲಾಗಿ ಅವರು ಜೀವನ ನಡೆಸುತ್ತಿರುವ ಭೂಮಿಯೇ ಅವರದ್ದೆಂದು ಹೇಳಲು ಯಾವ ದಾಖಲೆಯೂ ಇಲ್ಲ. ಅವರ ಸಾಂಸ್ಕೃತಿಕ ಜೀವನದ ಪುನರ್ನಿರ್ಮಾಣವಿರಲಿ, ಅವರ ಭೌತಿಕ-ಜೀವನ ಮಟ್ಟ ಕಾಯ್ದುಕೊಳ್ಳಬಲ್ಲ ಪರಿಹಾರ ಸಿಗುವುದೇ ಕಷ್ಟವಾಗುತ್ತದೆ. ಸರ್ಕಾರಿ ಅಧಿಕಾರಿಗಳನ್ನು ಎದಿರು ಹಾಕಿಕೊಳ್ಳಬಾರದೆಂಬ ಪ್ರಜ್ಞೆ ಗಣಪನಿಗಿದ್ದರೂ, ದುಗ್ಗಜ್ಜ ಮಾತ್ರ ಇವರ ಕುಚೋದ್ಯದಿಂದ ತುಂಬಾ ನೊಂದುಕೊಳ್ಳುತ್ತಾನೆ. ಸರ್ಕಾರದ ವಿರುದ್ಧ ಅವನ ಧಿಕ್ಕಾರ ಹೆಚ್ಚುತ್ತದೆ. ಈ ನಡುವೆ ಒಬ್ಬೊಬ್ಬರೇ ದ್ವೀಪವನ್ನು ಬಿಡುತ್ತಾ, ತಮಗೆ ಸಿಕ್ಕ ಪರಿಹಾರದಿಂದ ಹೊಸ ಜೀವನವನ್ನು ಆರಂಭಿಸಲು ತೊಡಗುತ್ತಾರೆ. ಕಡೆಗೆ, ಭೂತದ ಅತಿ ಮುಖ್ಯ ಭಕ್ತರಾದ ಹೇರಂಭ ಹೆಗ್ಗಡೆ ಇತ್ಯಾದಿಗಳೂ ಸೀತಾ ಪರ್ವತವನ್ನು ಬಿಟ್ಟಾಗ ನಾಗಿಯನ್ನು ಒಂಟಿತನ ಕಾಡಲಾರಂಭಿಸುತ್ತದೆ. ಗಂಡ, ಮತ್ತು ಮಾವನ ಹಠದ ಮುಂದೆ ನಾಗಿ ಏನೂ ಮಾಡಲಾರದವಳಾಗುತ್ತಾಳೆ.

ಕಡೆಗೊಮ್ಮೆ, ಪೊಲೀಸರು ದಂಡ-ಭೇದದಿಂದ ಇವರನ್ನು ಬಲವಂತವಾಗಿ ದ್ವೀಪದಿಂದ ಹೊರಗಟ್ಟುತ್ತಾರೆ. ಬೇರೆ ದಾರಿಯಿಲ್ಲದೆ ನಾಗಿಯ ತವರು ಮನೆಯಲ್ಲಿ ಇವರು ಕೆಲದಿನಗಳ ಮಟ್ಟಿಗೆ ಬಿಡಾರ ಹೂಡುತ್ತಾರೆ. ಹೆಗ್ಗಡೆ ದ್ವಯರು ಗಣಪನಿಗೆ ಪಟ್ಟಣದಲ್ಲಿ ಒಂದು ಅಂಗಡಿ ಹಾಕಿಕೊಳ್ಳುವಂತೆ ಪರಿಹಾರ ಸೂಚಿಸುತ್ತಾರೆ. ಆದರೆ ಬೀಗರ ಮನೆಯಲ್ಲಿರಬೇಕಾದ ಪರಿಸ್ಥಿತಿಯನ್ನು ತಾಳಲಾರದ, ತನ್ನ ಸಾಂಸ್ಕೃತಿಕ ಪರಿಸರವನ್ನು ಬಿಡಲಿಚ್ಛಿಸದ ದುಗ್ಗಜ್ಜ ಹೇಳದೆ ಕೇಳದೆ, ಮಳೆಯನ್ನೂ ಲೆಕ್ಕಿಸದೆ ಸೀತಾ ಪರ್ವತಕ್ಕೆ ಹೊರಟುಬಿಡುತ್ತಾನೆ. ವಿಧಿಯಿಲ್ಲದೆ ಗಣಪ, ಅವನ ಹಿಂದೆ ನಾಗಿ ಹೊರಡಬೇಕಾಗುತ್ತದೆ. ದ್ವೀಪದಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿಯಿಂದ ವಿಚಲಿತಳಾದ ನಾಗಿಯ ತಾಯಿ ಇವರಿಗೆ ಕಷ್ಟದಲ್ಲಿ ಜೊತೆಯಾಗಲಿ ಎಂದು, ಮುಂಬೈ-ಯಲ್ಲಿ ವ್ಯವಹಾರ ಹಾಗೂ ಪ್ರೇಮಗಳಲ್ಲಿ ಸೋತು ವಿಷ ಕುಡಿದು ಸಾಯಲು ಬಯಸಿದ್ದ ಹಿನ್ನೆಲೆಯಿರುವ ಕೃಷ್ಣನನ್ನು ಇವರ ಜೊತೆ ಕಳಿಸಲು ನಿರ್ಧರಿಸುತ್ತಾಳೆ. ಯಾವಾಗಲೂ ಜೋಕಾಗಿ ಮಾತನಾಡುವ ಕೃಷ್ಣ ಬರುವುದಾದರೆ ಒಳ್ಳೆಯದೆ ಎಂದು ನಾಗಿ ಸಂತೋಷ ಪಡುತ್ತಾಳೆ. ಇಲ್ಲಿಂದ ಚಿತ್ರದ ಎರಡನೇಯ ಅಧ್ಯಾಯ ಶುರುವಾಗುತ್ತದೆ.

ಹೀಗೆ ನಾಗಿಯ ಸಂಸಾರ ಆತಂಕದಲ್ಲಿರುವಾಗಲೇ, ಕೃಷ್ಣನ ಆಗಮನವಾಗುತ್ತದೆ, ಹೊಸತರಲ್ಲಿ ಎಲ್ಲರಿಗೂ ಖುಷಿಯಾಗುತ್ತದೆ. ಮಳೆಯ ರಭಸ ಹೆಚ್ಚುತ್ತದೆ. ಇನ್ನೇನು ಮನೆ ಮುಳುಗಿಹೋಗುವ ಭಯ ಇದಿರಾದಾಗ, ಕೃಷ್ಣ ದುಗ್ಗಜ್ಜನನ್ನು ಬಲವಂತದಿಂದ ಒಪ್ಪಿಸಿ. ಎಲ್ಲರೂ ಸ್ವಲ್ಪ ಎತ್ತರದ ಪ್ರದೇಶದ ಹೇರಂಭ ಹೆಗ್ಗಡೆಯ ಮನೆಯ ಒಂದು ಭಾಗಕ್ಕೆ ಬಂದು ಸೇರುತ್ತಾರೆ. ದುಗ್ಗಜ್ಜ ಇನ್ನೂ ಭೂತ, ಸೀತ ಪರ್ವತ ಮುಳುಗುವುದಿಲ್ಲ ಎನ್ನುವ ನಂಬಿಕೆ ಕಳೆದುಕೊಳ್ಳುವಿದಿಲ್ಲ. ಕೃಷ್ಣನ ಅಧಿಕಪ್ರಸಂಗತನ ಕ್ರಮೇಣ ಜಾಸ್ತಿಯಾಗುತ್ತದೆ. ಈ ಮಧ್ಯೆ, ಮನುಷ್ಯ ಸಂಪರ್ಕವಿಲ್ಲದೇ ಬೇಸತ್ತ ಕಾರಣಕ್ಕೆ ನಾಗಿ ಕೃಷ್ಣನ ಜೊತೆ ಹೆಚ್ಚು ಕಾಲ ಕಳೆಯ ತೊಡಗುತ್ತಾಳೆ. ನಾಗಿ-ಗಣಪರಲ್ಲಿ ವಿರಸ ಮೂಡುತ್ತದೆ. ಕಡೆಗೊಮ್ಮೆ, ಕೃಷ್ಣನಿಗಿಂತಾ ನಾನೆ ಹೆಚ್ಚು ಎಂದು ಸಾಬೀತು ಪಡಿಸಲು, ಗಣಪ ಕೃಷ್ಣನನ್ನು ಹಸು-ಕರುವನ್ನು ಉಕ್ಕಿಹರಿಯುತ್ತಿರುವ ನದಿಯಲ್ಲಿ ಈಜಿ ಹೊಡೆದುಕೊಂಡು ಬರುವ ಪಂಥಕ್ಕೆ ಆಹ್ವಾನಿಸುತ್ತಾನೆ. ಒಪ್ಪಿಕೊಂಡ ಕೃಷ್ಣ ಪಂಥದಲ್ಲಿ ಸೋತರೂ ನಾಗಿಯ ಅನುಕಂಪಕ್ಕೆ ಗುರಿಯಾಗುತ್ತಾನೆ. ನಾಗಿಯ ಮಾತೃವಾತ್ಸಲ್ಯಕ್ಕೆ ಹೇಗೆ ವರ್ತಿಸಬೇಕೆಂದು ತಿಳಿಯದೆ ಪೆದ್ದನಂತೆ ವರ್ತಿಸುತ್ತಾನೆ. ಗಣಪ-ನಾಗಿಯ ಸಂಬಂಧ ಮತ್ತಷ್ಟು ಕೆಡುತ್ತದೆ. ಈ ಮಧ್ಯೆ ಭೂತದೇವರ ಸ್ಥಾನ ಹಾಗೂ ಹಳೆಯ ಮನೆ ಭಾಗಶಹ ಮುಳುಗಿಹೋಗುತ್ತದೆ. ದುಗ್ಗಜ್ಜನ ನಂಬಿಕೆ ಸುಳ್ಳಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದ ನೊಂದ ದುಗ್ಗಜ್ಜ ಭೂತದೇವರಿಗೆ 'ನೇಮ' ಕಟ್ಟಿ ತನ್ನ ದಾರಿಯನ್ನು ಕಂಡುಕೊಳ್ಳಲೆತ್ನಿಸಿ ಪ್ರಾಣ ಕಳೆದುಕೊಳ್ಳುತ್ತಾನೆ.

ಸರ್ಕಾರ ಇವರನ್ನು ಸಂಪೂರ್ಣವಾಗಿ ಕೈಬಿಡುತ್ತದೆ. ೫೦,೦೦೦ ಮಾತ್ರ ಪರಿಹಾರ ಸಿಗುತ್ತದೆ. ಇನ್ನೇನೂ ದಾರಿ ಕಾಣದೆ ಗಣಪ ಅದನ್ನು ತೆಗೆದುಕೊಂದರೂ, ಸಂಪೂರ್ಣವಾಗಿ ನಿಯಂತ್ರಣ ತಪ್ಪುತ್ತಾನೆ. ತನ್ನ ಮೇಲೆ ತನ್ನ ಮತ್ತು ನಾಗಿಯ ಸಂಬಂಧದ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾನೆ. ನಾಗಿ ಬದುಕಲು ಹವಣಿಸುತ್ತಲೇ, ಶಕ್ತಿ ಕಳೆದುಕೊಳ್ಳುತ್ತಲೇ ಹೋರಾಟ ನಡೆಸುತ್ತಾಳೆ. ಗಂಡನ ಅಪನಂಬಿಕೆ ತಾಳಲಾರದೆ ಕಡೆಗೆ ತಮ್ಮಿಬ್ಬರ ಮಾತನ್ನು ಕದ್ದು ಕೇಳಿಸಿಕೊಂಡ ನೆಪವೊಡ್ಡಿ ಕೃಷ್ಣನನ್ನು ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಇದ್ದ ಒಂದು ಆಸರೆಯನ್ನು ಕಳೆದುಕೊಳ್ಳಲು ಇಷ್ಟಪಡದ ಕೃಷ್ಣ ಪರಿ-ಪರಿಯಾಗಿ ಬೇಡಿಕೊಂಡರೂ ಕೇಳುವುದಿಲ್ಲ. ಹತಾಶನಾದ ಕೃಷ್ಣ, ಇದ್ದ ಒಂದೇ ದೋಣಿಯನ್ನು ತೆಗೆದುಕೊಂಡು ಹೋಗಿ, ನಾಗಿಯ ಕಡೆಯ ಆಸರೆಯನ್ನೂ ಇಲ್ಲದಂತೆ ಮಾಡುತ್ತಾನೆ. ಕ್ರಮೇಣ ಹೋರಾಟದ ಶಕ್ತಿಯನ್ನು ಗಣಪ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ನಾಗಿ ಮಾತ್ರ ಏನೇ ಆದರೂ ಹತಾಶಳಾಗುವುದಿಲ್ಲ. ಕಡೆಗೊಮ್ಮೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಹರಿದರೂ ಹೇರಂಭ ಹೆಗ್ಗಡೆಯ ಮನೆ ಮುಳುಗುವುದಿಲ್ಲ. ನಾಗಿ ಇನ್ನು ಮುಂದೆ ಆತಂಕವಿಲ್ಲವೆಂದು ಸಂತೋಷದಿಂದ, ಗಣಪನನ್ನು ಕರೆದು ತೋರಿಸಿದಾಗ, ಗಣಪ ಎಲ್ಲಕ್ಕೂ ಭೂತ ಕಾರಣನೆಂದು ನಾಗಿಯ ಹೋರಾಟಕ್ಕೆ ಯಾವ ಬೆಲೆಯಿಲ್ಲದಂತೆ ಮಾಡುತ್ತಾನೆ. ಇಲ್ಲಿಗೆ ಚಿತ್ರ ಮುಗಿಯುತ್ತದೆ.

ಚಿತ್ರದಲ್ಲಿ ಮೂರು ಮುಖ್ಯ ಧಾರೆಗಳಿವೆ. ಮೊದಲನೇಯದು, ಆಧುನಿಕ ಸಮಾಜದ ಅಭಿವೃದ್ಧಿಯ ಪ್ರಜ್ಞೆಯನ್ನು ಸಂಕೇತಿಸುವ ಅಣೆಕಟ್ಟು ಜೀವನದಲ್ಲಿ ಉಂಟುಮಾಡಬಹುದಾದ ತರಂಗಗಳಿಗೆ, ಪರಂಪರೆಯನ್ನು ಶ್ರದ್ಧೆಯಿಂದ ಬದುಕುವ, ಅದನ್ನು ಸಂಕೇತಿಸುವ, ಆಧುನಿಕತೆಯನ್ನು ಎಳ್ಳಷ್ಟು ಜೀರ್ಣಿಸಿಕೊಳ್ಳಲಾಗದ ದುಗ್ಗಜ್ಜ ಹೇಗೆ ಪ್ರತಿಕ್ರಯಿಸುತ್ತಾನೆ ಎನ್ನುವುದು. ಎರಡನೇಯದು ಪರಂಪರೆಯ ಅರಿವುಳ್ಳ, ಅದರ ಬಗ್ಗೆ ಗೌರವವಿರುವ, ಆಧುನಿಕ ಪ್ರಪಂಚದ ಅರಿವಿರುವ, ಅದಕ್ಕೆ ಹೊಂದಿಕೊಳ್ಳ ಬಯಸುವ ನಾಗಿಯ ಪ್ರತಿಕ್ರಯೆ. ಮೂರನೇಯದು ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಸರಿಯಾಗಿ ಬದುಕಲಾರದ ಗಣಪನ ಪ್ರತಿಕಿಯೆ. ಇವು ಮುಖ್ಯ ಧಾರೆಗಳಾದರೆ, ಅತ್ಯಂತ ವ್ಯಕ್ತಿಗತ ಹಿನ್ನೆಲೆಯಲ್ಲಿ ಈ ಅಣೆಕಟ್ಟು (ತನ್ಮೂಲಕ ಬರುವ ಕೃಷ್ಣ) ಗಣಪ-ನಾಗಿಯರ ಸಂಬಂಧದಲ್ಲಿ ಮೂಡಿಸುವ ಬಿರುಕು, ಪರಂಪರೆಯೇ ಮುಖ್ಯವಾದ ಈ ಸಮಾಜದಲ್ಲಿ ಹೆಣ್ಣಿನ ಸ್ಥಾನ ಚಿತ್ರದಲ್ಲಿ ಸಣ್ಣ ಝರಿಗಳಾಗಿ ಚಿತ್ರದುದ್ದಕ್ಕೂ ಹರಿಯುತ್ತವೆ. ಇವುಗಳಲ್ಲಿ ನನಗೆ ಅತಿ ಮುಖ್ಯವೆನಿಸುವುದು ನಾಗಿ ಮತ್ತು ದುಗ್ಗಜ್ಜರ ಹೋರಾಟ ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರ.

ದುಗ್ಗಜ್ಜನಿಗೆ ಪರಂಪರೆಯಲ್ಲಿ, ಅದರ ಶಕ್ತಿಯಲ್ಲಿ, ತನ್ನ ನಂಬಿಕೆಗಳಲ್ಲಿ ಸಂಪೂರ್ಣವಾದ ಶ್ರದ್ಧೆ. ಸೀತ ಪರ್ವತ, ಭೂತದೇವರು ಮುಳುಗುವುದಕ್ಕೆ ಸಾಧ್ಯವಿಲ್ಲ ಎನ್ನುವುಡೆ ಆತನ ನಂಬಿಕೆ. ಅದಕ್ಕೆ ವಿರುದ್ಧವಾಗಿ, ಹಂತ ಹಂತವಾಗಿ ರೂಪುಗೊಳ್ಳುವ ಘಟನೆಗಳು, ಎಚ್ಚರಿಕೆಗಳು ಇವು ಯಾವುವೂ ಅವನಿಗೆ ಅರ್ಥವಾಗುವುದಿಲ್ಲ. ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಅವನ ಹತಾಶೆ. ಪರಂಪರೆಯನ್ನು ಬಿಟ್ಟರೆ ಅವನಿಗೆ ಬದುಕಲು ಆಧಾರವೇ ಇಲ್ಲ. ಕಡೆಯ ಪಕ್ಷ ಪರಂಪರೆಯ ಯಾವುದಾದರೂ ಒಂದು ಅಂಶವನ್ನು ಉಳಿಸಿಕೊಳ್ಳಬಹುದಾದ ಪರಿಹಾರಕ್ಕೆ ಅವನ ಸಮ್ಮತಿಯಿದೆ. ಆದರೆ ಸರ್ಕಾರ ಭೂತ ದೇವರ ಸ್ಥಳಾಂತರಕ್ಕೆ ಒಪ್ಪುವುದಿಲ್ಲ. ಸೀತಾ ಪರ್ವತದ ಯಾವ ದೃಷ್ಟಾಂತಕ್ಕೂ ಯಾರೂ ಬೆಲೆ ಕೊಡುವುದಿಲ್ಲ. ಪರಂಪರೆಗೆ ಬೆಲೆಯೇ ಇಲ್ಲದ ಸಮಾಜ ಅವನ ಮುಂದೆ ನಿಲ್ಲುತ್ತದೆ. ಆದರೂ ಅನಾಹುತ ಸಂಭವಿಸಲಾರದು ಎನ್ನುವ ಆಶಯ. ಇದು ಅವನಿಗೂ ತಿಳಿದಿದೆ. ಕಡೆಗೆ ಅವನ ನಂಬಿಕೆ ಸಂಪೂರ್ಣ ಸುಳ್ಳಾದಾಗ, ನಿಜಕ್ಕೂ ಹೊಸ ಆಧಾರಗಳನ್ನು ಹುಡುಕುವ ದುಗ್ಗಜ್ಜ, ದಿಕ್ಕುಗಾಣದೆ 'ನೇಮ'ದ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿ ಪ್ರಾಣ ಕಳೆದುಕೊಳ್ಳುತ್ತಾನೆ.

ಅವನ ಸಾವು ಪರಂಪರೆಯ ದುರಂತವನ್ನು ಸಂಕೇತಿಸುತ್ತದೆ. ಅಭಿವೃದ್ಧಿ ಎನ್ನುವುದು ಜನರ ಜೀವನದಲ್ಲಿ ಆಡಬಹುದಾದ ಆಟಗಳನ್ನು ಸಂಕೇತಿಸುತ್ತದೆ. 'ಚೋಮನ ದುಡಿ'-ಯ ನಂತರ ತಮ್ಮ ಜೀವನದ ಅತಿ ಮುಖ್ಯ ಪಾತ್ರದಲ್ಲಿ ವಾಸುದೇವ ರಾವ್, ಪೂರ್ಣ ನ್ಯಾಯ ಒದಗಿಸಿ ನಟಿಸಿದ್ದಾರೆ. ಚಿತ್ರದ ಅತ್ಯುತ್ತಮ ನಟನೆ ಅವರದ್ದು. ರಾಷ್ಟ್ರ ಪ್ರಶಸ್ತಿ ಪಡೆದ ಬೇರೆ ಚಿತ್ರಗಳನ್ನು ನೋಡಿಲ್ಲವಾದ್ದರಿಂದ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, ಅವರಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಬರಬಹುದಿತ್ತು. ಈ ಪಾತ್ರ ಹೆಚ್ಚು ಬೆಳವಣಿಗೆಯನ್ನು ಕಾಣುವುದಿಲ್ಲ, ಹೆಚ್ಚು ಏರಿಳಿತಗಳನ್ನು ಕಾಣುವುದಿಲ್ಲ. ಸಿನಿಕತನದಿಂದ ಶುರುವಾಗು ಪಾತ್ರ, ಸಿಟ್ಟು, ನೋವು, ಹತಾಶೆ ಅನುಭವಿಸುತ್ತಾ ಕಡೆಗೆ ದುರಂತ ಕಾಣುತ್ತದೆ. ಪ್ರತಿ ಹಂತದಲ್ಲೂ ರಾವ್ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ನಾಗಿ ಈ ತೆರನಾದ ಅಭಿವೃದ್ಧಿಯನ್ನು ಅರಗಿಸಿಕೊಳ್ಳಲು ತಯಾರಾಗಿದ್ದಾಳೆ. ತನ್ನ ಯಾವುದೇ ಇಚ್ಛೆಯಿಲ್ಲದೆ ಇಂತಹ ಒಂದು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಅದರಿಂದ ತಪ್ಪಿಸಿಕೊಳ್ಳುವುದು ಮಾತ್ರ ಅವಳ ಮುಖ್ಯ ಉದ್ದೇಶ. ಅದಕ ಪೂರಕವಾಗಬಹುದಾದ ಪರಂಪರೆಯನ್ನು ಉಳಿಸಿಕೊಳ್ಳಲು ತಯಾರು. ಬಿಡಬೇಕಾದ್ದುದನ್ನು ಬಿಡಲು ತಯಾರು. ಆದರೆ ಅವಳ ಅಭಿಪ್ರಾಯಕ್ಕೆ ಪರಂಪರೆಯಲ್ಲಿ ಬೆಲೆಯಿಲ್ಲ. ನಾಗಿ ತನ್ನ ಬದುಕಿಗೆ ಬೇಕಾದ ಆಧಾರಗಳನ್ನು ಸೃಷ್ಟಿಸಲು ತಾನೆ ತಯಾರಾಗುತ್ತಾಳೆ. ಚಿತ್ರದ ಅತ್ಯಂತ ಜೀವಂತ ಪಾತ್ರ ನಾಗಿಯದು. ಪ್ರತಿ ಹಂತದಲ್ಲೂ ಹೋರಾಡುತ್ತಾಳೆ. ಒಂಟಿತನ ತುಂಬಿದ ದ್ವೀಪದಲ್ಲಿ ಕೃಷ್ಣನನ್ನು ಬರಮಾಡುತ್ತಾಳೆ. ಸಂಸಾರದಲ್ಲಿ ಬಿರುಕುಂಟಾದಾಗ ಕೃಷ್ಣನನ್ನು ಹೊರಗಟ್ಟುತ್ತಾಳೆ. ಹತಾಶೆಗೊಂಡ ಗಂಡನಲ್ಲಿ ಸ್ಫೂರ್ತಿ ತುಂಬುತ್ತಾಳೆ. ಅನೇಕ ಏರಿಳಿತಗಳನ್ನು ಕಾಣುವ ಪಾತ್ರ ಇದು. ಆತಂಕದಿಂದ ಶುರು ಆಗುವ ಈ ಪಾತ್ರ, ಆಸೆ, ನಿರಾಸೆ, ದಾಂಪತ್ಯ ಸಂಕಷ್ಟ, ಒಂಟಿತನ, ಬೆಲೆಯಿಲ್ಲದಿರುವಿಕೆ ಎಲ್ಲವನ್ನೂ ತಿರು-ತಿರುಗಿ ಅನಿಭವಿಸಿ ಕಡೆಗೆ ಗೆದ್ದೂ ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಸೋಲುತ್ತಾಳೆ. ಚಿತ್ರದ ಅತ್ಯಂತ ಕಠಿಣ ಪಾತ್ರ ಇದು. ಸೌಂದರ್ಯ ಸಾಕಷ್ಟು ನ್ಯಾಯ ಒದಗಿಸಿದ್ದಾರೆ ಎಂದೇ ಹೇಳಬೇಕು. ಆಕೆ ಒಬ್ಬ ಸೂಕ್ಷ್ಮ ಹಾಗೂ ಬುದ್ಧಿವಂತ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವೇ ಕೆಲವೆಡೆ ಪಟ್ಟಣದ ಮ್ಯಾನರಿಸಂ ಬಿಡಲು ಅವರಿಗೆ ಸಾಧ್ಯವಾಗಿಲ್ಲ. ಅಷ್ಟಾಗಿಯೂ ಅದು ಎಲ್ಲೂ ಘಾಸಿಗೊಳಿಸಿಲ್ಲ ಎನ್ನುವುದು ಆಕೆಗೆ ಕ್ರೇಡಿಟ್.

ಸಂಪೂರ್ಣವಾಗಿ ಐಡೆಂಟಿಟಿ ಕ್ರೈಸಿಸ್ ಅನುಭವಿಸುವ ಪಾತ್ರ ಗಣಪನದ್ದು. ಪರಂಪರೆಯನ್ನು ಸಿಕ್ಕಾಪಟ್ಟೆ ನಂಬಿಲ್ಲ. ಆದರೆ ಅದಿಲ್ಲದೆ ಬದುಕಿಲ್ಲ. ಆಧುನಿಕತೆಯನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾರ. ಪರಿಸ್ಥಿತಿ ತಂದೊಡ್ಡುವ ದಾಂಪತ್ಯ ಕಲಹವನ್ನು ನಿವಾರಿಸಿಕೊಳ್ಳುವ ಚೈತನ್ಯವಿಲ್ಲ. ನಿಷ್ಕ್ರಿಯತೆಯೇ ಅವನ ಪ್ರತಿಭಟನೆಯಾಗುತ್ತದೆ. ಕಡೆಗೆ ಸಂಪೂರ್ಣ ಹತಾಶೆಗೊಂಡು, ನಿರ್ಜೀವಿಯಂತಾಗಿ, ಹೆಂಡತಿಯ ಹೋರಾಟದಿಂದ ಮತ್ತೆ ಜೀವಂತನಾಗುವ ಗಣಪ, ಕಡೆಗೆ ಎಲ್ಲಾವನ್ನೂ ಭೂತದಯೆ ಎಂದು ಪರಿಗಣಿಸಿ, ಹೆಂಡತಿಗೆ ಸಲ್ಲಿಸಬೇಕಾದುದನ್ನು ಸಲ್ಲಿಸದೆ, ತನ್ನ ಕೀಳರಿಮೆಯನ್ನು ಪ್ರದರ್ಶಿಸುತ್ತಾನೆ. ತುಂಬಾ ಸೂಕ್ಷ್ಮವಾದ ಈ ಪಾತ್ರದಲ್ಲಿ ಅವಿನಾಶ್ ಕಷ್ಟಪಟ್ಟು ಅಭಿನಯಿಸಿದ್ದಾರೆ. 'ಮತದಾನದ' ಪಾತ್ರಕ್ಕಿಂತಾ ಕಷ್ಟದ್ದು, ಅಲ್ಲಿ ದ್ವಂದ್ವ ಇರಲಿಲ್ಲ, ಇಲ್ಲಿ ಪಾತ್ರ ಅತಿ ಹೆಚ್ಚು ಕ್ರೈಸಿಸ್ ಕಾಣುತ್ತದೆ. ಅತೀವ ಕೀಳರಿಮೆಯಿಂದ ನರಳುತ್ತದೆ. ಮನಃಶಾಸ್ತ್ರ ಹಾಗೂ ಥಿಯರಿಟಿಕಲ್ ಕಾರಣಕ್ಕಾಗಿ ತುಂಬಾ ಆಸಕ್ತಿಕರ ಪಾತ್ರ. ದುಗ್ಗಜ್ಜ ಹಾಗೂ ನಾಗಿಯರ ನಡುವಿನ ಪರಿಸ್ಥಿತಿಯನ್ನು ಪ್ರತಿನಿಧಿಸುವ ಪಾತ್ರ.

ಕೃಷ್ಣನ ಪಾತ್ರ ಚಿತ್ರದ ಆಶಯದ ಚೌಕಟ್ಟಿಗಿಂತ ಹೆಚ್ಚು ಸಂಗತಿಗಳನ್ನೊಳಗೊಂಡ, ಅದೇ ಕಾರಣಕ್ಕೆ ಚಿತ್ರದ ಫ಼ೋಕಸ್-ಅನ್ನು ಕೆಡಿಸುವ ಪಾತ್ರ. ಹರೀಶ್ ರಾಜು ಸಮರ್ಪಕವಾಗೆ ನಿರ್ವಹಿಸಿದ್ದಾರೆ. ಈ ಪಾತ್ರ ಚಿತ್ರದಲ್ಲಿ ಅನೇಕ (ಕೆಲವು ಅನವಶ್ಯ) ವೈವಿಧ್ಯತೆಯನ್ನು ತರುತ್ತದೆ. ಪಟ್ಟಣದ ಸಂಕೇತವಾಗಿ ಬರುವ ಈ ಪಾತ್ರ, ಅದನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತದೆ. ದುಗ್ಗಜ್ಜನ್ನು ಕುತಂತ್ರದಿಂದ ಹೇರಂಭ ಹೆಗ್ಗಡೆಯ ಮನೆಗೆ ಹೋಗಲು ಒಪ್ಪಿಸುವ ದೃಶ್ಯ ಅದಕ್ಕೊಂದು ಉದಾಹರಣೆ. ಅಣೆಕಟ್ಟಿನ ಬೈ-ಪ್ರಾಡಕ್ಟ್-ಅನ್ನು ಪ್ರತಿನಿಧಿಸುವ ಕೃಷ್ಣ ಮೊದಲು ಬರುವುದು ಇವರ ಜೊತೆಯಾಗಿರಲು. ಮಳೆಯಿಂದ ಏನೂ ಮಾಡಲಾಗದೆ ಬೋರ್ ಹೋಡೆದಿರುವಾಗ ಪಾತ್ರೆಗಳ ಜೊತೆ ಆಟವಾಡುವ ದೃಶ್ಯ ಅದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಆದರೆ, ಕ್ರಮೇಣ ಗಣಪ-ನಾಗಿಯರ ಜೀವನದಲ್ಲಿ ಬಿರುಕು ಮೂಡಲು ಈ ಪಾತ್ರ ಕಾರಣವಾಗುತ್ತದೆ. ಕಡೆಗೆ ಅವರಿಬ್ಬರಿಗೂ ಬೇರೆ ಯಾವ ಆಧಾರವೂ ಇಲ್ಲದಂತೆ ಮಾಡಿ, ನಡು-ನೀರಿನಲ್ಲಿ ಕೈಬಿಟ್ಟು ಹೊರಡುತ್ತದೆ. ಅಷ್ಟರ ಮಟ್ಟಿಗೆ ಪಾತ್ರ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಆದರೆ ಈ ಪಾತ್ರದ ವೈಯಕ್ತಿಕ ತೊಂದರೆಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರದ ಫ಼ೋಕಸ್ ಕೆಡಿಸುತ್ತದೆ. ಅಷ್ಟಲ್ಲದೆ, ಕೃಷ್ಣ ಮತ್ತು ನಾಗಿಯರ ಸಂಬಂಧವನ್ನು ಸಹಿಸಲಾಗದೆ, ಸರ್ಕಾರದಿಂದ ಪರಿಹಾರ ಸ್ವೀಕರಿಸಿ ದ್ವೀಪ ಬಿಟ್ಟರೆ ಕೃಷ್ಣನ ಕಾಟ ತಪ್ಪುತ್ತದೆ ಎನ್ನುವ ನಿರ್ಧಾರಕ್ಕೆ ಗಣಪ ಬರುತ್ತಾನೆ. ಅಲ್ಲಿಗೆ ವೈಯಕ್ತಿಕ ಸಮಸ್ಯೆಯೊಂದು ಚಿತ್ರದಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಚಿತ್ರದಲ್ಲಿ ಬರುವ ಮಿಕ್ಕೆಲ್ಲಾ ಸಂಕೇತಗಳ ಜೊತೆ ಇದು ಹೊಂದುವುದೇ ಇಲ್ಲ.

ಕೃಷ್ಣನ ಮೂಲಕ ಗಣಪ-ನಾಗಿಯ ನಡುವಿನ ವಿರಸ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದನ್ನು ಮರೆಯುವುದಾದರೆ, ಕೆಲವು ದೃಶ್ಯಗಳು ಮೇಲ್ಸ್ತರದ್ದವು. ಶೀತವಾಗಿದ್ದ ಕೃಷ್ಣನಿಗೆ ಮುಲಾಮು ಹಚ್ಚುವಾಗ ನಾಗಿಯ ಮಾತೃವಾತ್ಸಲ್ಯ ಮತ್ತು ಅದಕ್ಕೆ ಕೃಷ್ಣ ಒಂದು ಆಸರೆ ಸಿಕ್ಕಂತೆ ಉತ್ಸಾಹಿತನಾಗುವುದು ಅದಕ್ಕೊಂದು ಉದಾಹರಣೆ. ಇಲ್ಲಿ ಸೌಂದರ್ಯ ಹಾಗೂ ಹರೀಶ್ ರಾಜು ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಕೃಷ್ಣನ ಮುಳುಗಡೆ ಮೇಲೆ ಹೇಳಿರುವ ದೃಶ್ಯಕ್ಕೆ ಪೂರಕ. ಗಣಪನ ಕೀಳರಿಮೆಯಿಂದ ಸಿದ್ಧಪಡಿಸಿದ ಈ ನಾಟಕದಲ್ಲಿ ಕೃಷ್ಣನ ಮುಳುಗಡೆಯಿಂದ ಗಣಪ ಖುಶಿ ಪಡುವುದು ಪಾತ್ರದ ಬೆಳವಣಿಗೆಯಲ್ಲಿ ಸರಿಯಾದರೂ, ಚಿತ್ರದ ಆಶಯದ ದೃಷ್ಟಿಯಿಂದ ಅಗತ್ಯಕ್ಕಿಂತ ಹೆಚ್ಚು ಜಾಗ ಪಡೆದುಕೊಂಡಿದೆ. ಹಾಗೆಯೆ, ನಾಗಿ-ಕೃಷ್ಣ ಪಗಡೆ ಆಡುತ್ತಿದ್ದಾಗ, ಗಣಪನ ನೆರ್‍ಅಳು ಅವನ ಬರುವನ್ನು ತಿಳಿಸುವುದು ಒಂದು ಒಳ್ಳೆಯ ದೃಶ್ಯ. ನಾಗಿಗೆ ಅದು ತಿಳಿಯದಿರುವುದೂ ಕೃಷ್ಣನಿಗೆ ತಿಳಿಯುವುದೂ ಒಳ್ಳೆಯ ಸಂಯೋಜನೆ. ತಮ್ಮ ಮಾತುಗಳನ್ನು ಕದ್ದು ಕೇಳಿಸಿಕೊಂಡ ಕೃಷ್ಣನನ್ನು ಹೊಡೆಯುವ ನಾಗಿ ಆ ಕ್ಷಣದಲ್ಲಿ ಅನುಭವಿಸುವ ದ್ವಂದ್ವ, ಹೊಡೆದ ನಂತರ ತನ್ನ ಅತಿಯಾದ ಪ್ರತಿಕ್ರಿಯೆಯಿಂದ ದುಃಖಗೊಳ್ಳುವುದು - ಇಲ್ಲಿ ಸೌಂದರ್ಯರ ಸೂಕ್ಷ್ಮವಾಗಿ ನಟಿಸಿದ್ದಾರೆ.

ಗಣಪ ಸರ್ಕಾರಿ ಅಧಿಕಾರಿಯಲ್ಲಿ ಹೋಗಿ ಕಡೆಗೆ 'ಫ಼ಾರಮ್ ಕೊಡಿ' ಎಂದು ಕೇಳುವಾಗ ಅವನು ಅನುಭವಿಸುವ ದ್ವಂದ್ವ ಇನ್ನಷ್ಟು ತೀವ್ರವಾಗಿ ಬರಬೇಕಿತ್ತು. ಬೆಟ್ಟದಲ್ಲಿ ಗಣಪ ಮತ್ತು ನಾಗಿಯರು ಮತ್ತೆ ಒಂದಾಗುವ ದೃಶ್ಯದಲ್ಲಿ ಒಂದು ಲಾಂಗ್ ಶಾಟ್ ಅವಶ್ಯಕತೆಯಿತ್ತು. ಹೆಗ್ಗಡೆಯವರು ಹೊರಟಾಗ ನಾಗಿ ಓಡಿ ಬಂದು ಅವರಿಗೆ ವಿದಾಯ ಕೋರುವ ದೃಶ್ಯದಲ್ಲೂ ಒಂದು ಲಾಂಗ್ ಶಾಟ್ ಅವಳ ಒಂಟಿತನವನ್ನು ಪ್ರತಿನಿಧಿಸಲು ಸಹಾಯವಾಗುತ್ತಿತ್ತು. ಈ ಮಾತನ್ನು ಪ್ರತಿಯೊಬ್ಬರ ದೃಷ್ಟಿಯಿಂದಲೂ ಹೇಳಬಹುದು, ಪ್ರತಿಯೊಬ್ಬರೂ ದ್ವೀಪವಾಗುವುದನ್ನು ಲಾಂಗ್ ಶಾಟ್-ಗಳು (ಅದರಲ್ಲೂ ಬೆಟ್ಟವನ್ನು ಹಿನ್ನೆಲೆಯಾಗುಳ್ಳ ದೃಶ್ಯಗಳು) ಹೆಚ್ಚು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದವು.

ಚಿತ್ರದಲ್ಲಿ ಅನೇಕ ಕಡೆ ದೃಶ್ಯಗಳು ಸೂಚಿಸಬೇಕಾಗಿದ್ದುದನ್ನು ಮಾತುಗಳು ಹೇಳುತ್ತವೆ. ದುಗ್ಗಜ್ಜನ ನಂಬಿಕೆ ಸುಳ್ಳಾದಾಗ ದುಗ್ಗಜ್ಜ 'ನನ್ನ ನಂಬಿಕೆ ಸುಳ್ಳಾಯಿತಲ್ಲ' ಎಂದು ಆಶ್ಚರ್ಯ-ದುಃಖ ಪಡುವುದು, ದುಗ್ಗಜ್ಜನ ಸಾವಿಗೆ ತಾನೇ ಕಾರಣವೇನೋ ಎಂದು ನಾಗಿ ಅನುಮಾನದಿಂದ ದುಃಖಿಸುತ್ತಿದ್ದಾಗ ಆ ಮಾತನ್ನು ಕೃಷ್ಣನ ಬಾಯಲ್ಲಿ ಹೇಳಿಸುವುದು, ಕೃಷ್ಣನ ಸ್ವಾರ್ಥವನ್ನು ನಾಗಿ ಅದೇ ಮಾತಲ್ಲಿ ಹಲುಬುವುದು, ಅಧಿಕಾರಿಯ ಮುಂದೆ 'ಒಬ್ಬನನ್ನು ಮುಗಿಸಿ ಇನ್ನೊಬ್ಬನನ್ನು ಉದ್ಧಾರ ಮಾಡೋದು ಯಾವ ನ್ಯಾಯ' ಎಂದು ಗಣಪ ಹಲುಬುವುದು (ಚಿತ್ರದ ಮೂಲ ಆಶಯ ಇದೇ ಇರಬಹುದೇ ಎಂದು ಪ್ರೇಕ್ಷಕನಿಗೆ ಅನುಮಾನ ಬರಬಹುದು), 'ದ್ವೀಪ' ಪದದ ಅತಿ ಬಳಕೆ, ಪಾತ್ರಗಳು ಕೆಲವೆಡೆ ತಮ್ಮ ಬುದ್ಧಿ ಮೀರಿದ ಮಾತಾಡುವುದು ಇವೆಲ್ಲಾ ದೃಶ್ಯಗಳ ತೀವ್ರತೆಯನ್ನು ಕಡಿಮೆ ಮಾಡುತ್ತವೆ.

ಆದರೆ ಚಿತ್ರದ ನಿಲುವನ್ನು ಗ್ರಹಿಸುವಲ್ಲಿ ಪ್ರೇಕ್ಷಕ ಸ್ವಲ್ಪ ಪರದಾಡಬೇಕಾಗುತ್ತದೆ. ಸಮಾಜದ ಯಾವುದೇ ಧೋರಣೆಯಿಂದ ಕಟ್ಟ ಕಡೆಯ ಮನುಷ್ಯನ ಮೇಲಾಗುವ ಪರಿಣಾಮ ದಾಖಲಿಸಬೇಕು ಎನ್ನುವ ಸಮಾಜವಾದೀ ಪ್ರಜ್ಞೆಯಿಂದ ಈ ಚಿತ್ರ ಬಂದಿರುವುದು ಸರಿಯೆ. ಆದರೆ ಏನನ್ನು ಮುಖ್ಯವಾಗಿ ಪ್ರತಿನಿಧಿಸುತ್ತದೆ ಎನ್ನುವುದು ಪ್ರೇಕ್ಷಕನನ್ನು ಮುಖ್ಯವಾಗಿ ಕಾಡಿ ಉತ್ತರ ಸಿಗದಂತೆ ಮಾಡುತ್ತದೆ. ನರ್ಮದಾ ಬಚಾವೊ ಆಂದೋಲನದ ಹಿನ್ನೆಲೆಯಲ್ಲಿ, ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಣೆಕಟ್ಟು ವಿರೋಧಿ ಪರಿಸರವಾದದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮುಖ್ಯವಾಗುತ್ತದೆ. ಅಣೆಕಟ್ಟು ಪ್ರತಿನಿಧಿಸುವ ಅಭಿವೃದ್ಧಿ ಎಂಬ ಪೆಡಂಭೂತ ಒಂದು ಜೀವನ ಶೈಲಿಯನ್ನು ಹೇಗೆ ನಾಶಪಡಿಸುತ್ತದೆ ಎನ್ನುವುದು ಮುಖ್ಯವಾದರೆ, ದುಗ್ಗಜ್ಜ ಮುಖ್ಯನಾಗುತ್ತಾನೆ. ಮಧ್ಯದಲ್ಲೇ ನೇಮದ (ಪರಂಪರೆ) ಮೂಲಕ ಪ್ರತಿಭಟಿಸಿ ಸಾಯುತ್ತಾನೆ. ದುಗ್ಗಜ್ಜನ ಜೊತೆ ಅವನ ಹಳೆಯ ಮನೆ, ಭೂತ ದೇವರು ಎಲ್ಲಾ ಮುಳುಗಿವೆ. ಆದರೆ ಅವನ ಸಾವಿನ ತೀವ್ರತೆಯನ್ನು ತಿಳಿಗೊಳಿಸುವಂತೆ ನಾಗಿ ಹೋರಾಟ ನಡೆಸಿ ಗಂಡನ ಜೊತೆ ಮುನ್ನಡೆದೂ ಬಿಡುತ್ತಾಳೆ. ಅವನ ದುರಂತಕ್ಕೆ ಬೆಲೆ ಕಡಿಮೆಯಾಗುತ್ತದೆ. ದುಗ್ಗಜ್ಜನ ಕುರಿತಾದ ಸಿಂಪತಿ-ಯೇ ಚಿತ್ರದ ಮೂಲ ಆಶಯವಾಗಿದ್ದಲ್ಲಿ ಹೀಗಾಗುತ್ತಿರಲಿಲ್ಲ, ಇದ್ದೂ ಹೀಗಾಗಿದ್ದರೆ ಅದು ಚಿತ್ರದ ಸೋಲೇ ಸರಿ. ಇನ್ನು ನಿರ್ದೇಶಕ ಒಬ್ಬ ಪರಿಸರವಾದಿಯಾದ ಹೊರಾಟಗಾರನಾಗಿದ್ದರೆ ದುಗ್ಗಜ್ಜನ ಸಾವು ಮತ್ತು ಗಣಪ-ನಾಗಿಯರ ಸ್ಥಳಾಂತರ ಅಥವಾ ಅವರಿಬ್ಬರ ದುರಂತದಲ್ಲಿ ಚಿತ್ರ ಮುಗಿದಿರಬಹುದಿತ್ತು. ಅಣೆಕಟ್ಟಿನ ರಾಜಕೀಯ ಹೇರಂಭ ಹೆಗ್ಗಡೆ ಮುಂತಾದವರ ಸೂಕ್ಷ್ಮ ಸಂಕೇತಗಳಿಗಿಂತಾ ಹೆಚ್ಚಾಗಿ ನೇರವಾಗಿ ಚಿತ್ರದಲ್ಲಿ ಬರುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ದುಗ್ಗಜ್ಜ ಹಾಗೊ ಅವನು ಪ್ರತಿನಿಧಿಸುವ ಪರಂಪರೆಯ ನಾಶ ಜೀವನದ ದುರಂತಗಳಲ್ಲೊಂದು ಎಂದಷ್ಟೆ ಹೇಳಿ ನಿರ್ದೇಶಕ ಮುಂದುವರೆಯುತ್ತಾನೆ ಎಂದುಕೊಂಡರೆ ಚಿತ್ರವನ್ನು ಗ್ರಹಿಸುವುದು ಹೆಚ್ಚು ಸುಲಭವಾಗುತ್ತದೆ. ಇದು ಕೇವಲ ದಾಖಲೆಕಾರನ ದೃಷ್ಟಿ. ನಾಗಿಯ ಹೋರಾಟ ಚಿತ್ರದಲ್ಲಿ ಗಣಪ-ದುಗ್ಗಜ್ಜರಿಗೆ ಪ್ಯಾರಲ್ಲಲ್ ಆಗಿ ಬಂದಿರುವುದು, ಕಡೆಗೆ ಅವಳಿಗೆ ಜಯ ಸಿಗುವುದು ಆಧುನಿಕ ಸತ್ಯಗಳಿಗೆ ಹೊಂದಿಕೊಳ್ಳುವ ಜೀವನಪ್ರ್‍ಏಮವನ್ನು, ಜೀವನದ ಮುನ್ನಡೆಯನ್ನು ಸಂಕೇತಿಸುತ್ತದೆ. ಇಲ್ಲೆಲ್ಲಾ ದಾಖಲೆಕಾರನ ಡಿಟಾಚ್ಮೆಂಟ್-ಅನ್ನು ನಿರ್ದೇಶಕನಲ್ಲಿ ಕಾಣಬಹುದು. ಆದರೆ ಕಾಸರವಳ್ಳಿಯವರ ನಿಲುವು ಇದಾಗಿತ್ತೇ?

ಇವೆಲ್ಲಾ ಏನೇ ಇದ್ದರೂ, ಸೂಕ್ಷ್ಮವಾಗಿರಬೇಕಿದ್ದ ಎರಡು ಅಂಶಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರಕ್ಕೆ ಅಪರಿಪೂರ್ಣತೆಯ ತಂದೊಡ್ಡಿವೆ, ಅವು ಗಣಪ-ನಾಗಿಯರ ಬಿರುಕು ಹಾಗೂ ವಾಮನವಾಗಿರಬೇಕಿದ್ದ ಕೃಷ್ಣನ ಪಾತ್ರ ತ್ರಿವಿಕ್ರಮನಾಗುವುದು. ಅಲ್ಲದೆ ಚಿತ್ರದುದ್ದಕ್ಕೂ ಸ್ತ್ರೀಯೊಬ್ಬಳ ಅಭಿಪ್ರಾಯಗಳಿಗೆ ಹೆಚ್ಚು ಬೆಲೆ ಸಿಗದಿರುವುದು ಸೂಕ್ಷ್ಮವಾಗಿ ಬಂದಿದ್ದರೂ, ಕ್ಲೈಮಾಕ್ಸ್ ದೃಶ್ಯದಲ್ಲಿ ಅದೇ ಮುಖ್ಯವಾಗಿಬಿಡುವುದು ಪ್ರೇಕ್ಷಕನಲ್ಲಿ 'ಇದೇ ಚಿತ್ರದ ಮುಖ್ಯ ಹೇಳಿಕೆಯೇ' ಎಂಬ ಪ್ರಶ್ನೆ ಹುಟ್ಟಿಸಿ ಗೊಂದಲಕ್ಕೆ ದೂಡುತ್ತದೆ. ಚಿತ್ರದ ಆಶಯದ ಬಗೆಗಿನ ಗೊಂದಲ ಮತ್ತು ಚಿತ್ರದ ಶಿಲ್ಪ ಆಶಯಕ್ಕೆ ಸಂಪೂರ್ಣವಾಗಿ ಪೂರಕವಾಗಿರದಿರುವುದು ನಿರಾಶೆ ಉಂಟು ಮಾಡುತ್ತದೆ.

ಹೀಗೆ, ಅನೇಕ ಉತ್ತಮ ಅಂಶಗಳನ್ನೊಳಗೊಂಡ ಈ ಚಿತ್ರ, ಕೆಲವು ಸಾಧ್ಯತೆಗಳನ್ನು ತಪ್ಪಿಸಿಕೊಂಡರೂ ಒಂದು ಉತ್ತಮ ಕಲಾಕೃತಿಯಾಗಿದೆ.

Saturday, May 13, 2006

ಪಾಸೋಲಿನಿ ೩: ಕಾವ್ಯಾತ್ಮಕ ಸಿನೆಮಾ: (...ಮುಂದುವರಿಕೆ)



ಹಿಂದಿನ ಭಾಗಕ್ಕೆ ಲಿಂಕ್: http://jeevishivu.blogspot.com/2006/04/blog-post.html

ಇತಿಹಾಸವನ್ನು ಗಮನಿಸಿದರೆ, ಇದಕ್ಕೆ ತದ್ವಿರುದ್ಧವಾಗಿ, ಅನೇಕ ಹಿನ್ನಡೆ-ಮುನ್ನಡೆಗಳ ನಂತರ ಸಿನೆಮಾ ಕಡೆಗೂ ಕಾವ್ಯಾತ್ಮ್ಕಕ ಮಾಧ್ಯಮಕ್ಕಿಂತ ಹೆಚ್ಚಾಗಿ ಕಥಾನಕ ಗದ್ಯ ಮಾಧ್ಯಮವಾಗಿಯೇ ಹೆಚ್ಚು ವ್ಯವಸ್ಥಿತಗೊಂಡಿದೆ.

ಆದರೆ ಈ ಕಥಾನಕ ಗದ್ಯದಲ್ಲಿಯೂ ನಿವಾರಿಸಲಾಗದ ವೈಚಿತ್ರ್ಯವಿದೆ, ಅನಿಶ್ಚಿತತೆಯಿದೆ. ಸಿನೆಮಾಕ್ಕೆ ಸಹಜವಾದ ವೈಚಾರಿಕತೆಯನ್ನು ಮೀರಿದ ಗುಣದಿಂದ ಕಥಾನಕ ಗದ್ಯ ಸಿನೆಮಾ ಕೂಡಾ ಮುಕ್ತವಾಗಿಲ್ಲ. ಹೊಸ ಕಲಾ ತಂತ್ರ, ಹೊಸ ಅಭಿವ್ಯಕ್ತಿ ಮಾಧ್ಯಮವಾಗಿ ಸಿನೆಮಾ ಖಚಿತವಾದ ಸಮಯದಲ್ಲೇ, ಜನಪ್ರಿಯ ಮನರಂಜನೆಯ ಹೊಸ ಕಲಾ ತಂತ್ರ ಅಥವಾ ಹೊಸ ಅಭಿವ್ಯಕ್ತಿ ಮಾಧ್ಯಮವಾಗಿಯೂ ರೂಪುಗೊಳ್ಳಲಾರಂಭಿಸಿತು. ಬೇರಿನ್ನಾವ ಅಭಿವ್ಯಕ್ತಿ ಮಾಧ್ಯಮವೂ ತಲುಪಲಾರದಷ್ಟು ಗ್ರಾಹಕರನ್ನು ತಲುಪಿತು. ಅಂದರೆ, ಸಿನೆಮಾ ಅಭಿವ್ಯಕ್ತಿ ಮಾಧ್ಯಮದ ಈ ಭ್ರಷ್ಟತೆ ಅನಿವಾರ್ಯವೂ, ಹೆಚ್ಚು ಊಹಿಸಬಲ್ಲದ್ದೂ ಆಗಿತ್ತು. ಸಿನೆಮಾಕ್ಕೆ ಕಾವ್ಯಾತ್ಮಕತೆಯ ಅಂಶವನ್ನು ಗಳಿಸಿಕೊಟ್ಟ ವಸ್ತುಗಳೇ ಜನಪ್ರಿಯ ಸಿನೆಮಾದಲ್ಲಿ ಭಯಾಶ್ಚರ್ಯ, ಅತಿಭವ್ಯತೆಗಳ ಮೂಲಕ ಹಿಪ್ನಾಟಿಸಂ ಆಧಾರದ ಹೊಸ ಕಥಾನಕ ಮಾರ್ಗದಲ್ಲಿ ಪರ್ಯವಸಾನವಾಯಿತು.

ಮುಂದುವರೆದು, ಈ ಸಿನಿಕಥಾನಕ ಮಾಧ್ಯಮ ತಪ್ಪು ತಪ್ಪಾಗಿ ನಾಟಕ ಮತ್ತು ಕಾದಂಬರಿ ಪ್ರಕಾರಗಳ ಜೊತೆಗೂ ತನ್ನನ್ನು ತಾನೇ ಹೋಲಿಸಿಕೊಳ್ಳುತ್ತದೆ. ಸಿನಿಕಥಾನಕ ಮಾಧ್ಯಮ ಗದ್ಯಸಾಹಿತ್ಯದ ಜೊತೆಗೆ, ವಿವರಣೆ ಮತ್ತು ತಾರ್ಕಿಕ ರೀತಿ-ನೀತಿಗಳಿಗಷ್ಟೇ ಸೀಮಿತವಾದ, ಮೇಲ್ಮೈ ಸಂಬಂಧವನ್ನಷ್ಟೇ ಹೊಂದಿದೆ. ಗದ್ಯಸಾಹಿತ್ಯಕ್ಕಿರುವ ವೈಚಾರಿಕ ಆಯಾಮ ಸಿನಿಕಥಾನಕ ಮಾಧ್ಯಮಕ್ಕಿಲ್ಲ. ಸಿನಿಕಥಾನಕ ಮಾರ್ಗದಿಂದ ರೂಪಿತವಾದ ಸಿನೆಮಾ ಕೂಡಾ ಒಂದು ವೈಚಾರಿಕತೆಯನ್ನು ಮೀರಿದ ಆಯಾಮವನ್ನು ಪಡೆದುಕೊಂಡೇ ಇರುತ್ತದೆ ಮತ್ತು ಎಂತಹ ಸಿನೆಮಾದಲ್ಲೂ ಅದನ್ನು ಅನಾವರಣಗೊಳಿಸಬಹುದಾಗಿದೆ.

ಆದರೆ, ಕಲಾತ್ಮಕ ಎಂದು ಕರೆಸಿಕೊಳ್ಳುವ ಸಿನೆಮಾ ಸಹ ವಿಶೇಷ ಅಭಿವ್ಯಕ್ತಿಯನ್ನು ನಿರಾಕರಿಸಲಿಚ್ಛಿಸುವ 'ಸಿನಿಕಥಾನಕ ಗದ್ಯ' ಭಾಷೆಯನ್ನೇ ಹೆಚ್ಚು ಅವಲಂಬಿಸಿದೆ. ಮುಂದುವರೆಯುತ್ತಿರುವ ಸಿನಿಭಾಷಾ ಪರಂಪರೆ ವಾಸ್ತವತೆ, ಸಹಜತೆ, ವಸ್ತುನಿಷ್ಠತೆಯತ್ತಲೇ ಹೆಚ್ಚುವಾಲುತ್ತಿದೆ. ಈ ವಿರೋಧಾಭಾಸ ಆಳವಾದ ಅಧ್ಯಯನಕ್ಕೆ ಅರ್ಹವಾದುದಾಗಿದೆ.

ಸದ್ಯಕ್ಕೆ, ನೆನಪು-ಕನಸುಗಳ ಬಿಂಬಗಳೇ ಸಿನಿಬಿಂಬ ಸಂಜ್ಞೆಗಳ ಮೂಲಮಾದರಿಗಳೆಂದು ತಳೆದು, ಮುಂದುವರೆಯಬಹುದಾಗಿದೆ. ಅಂತರಿಕ ಸಂವಹನವೇ ಪ್ರಾಥಮಿಕವಾದ, ಬಾಹ್ಯ ಸಂವಹನ ನಂತರದ್ದಾದ ಸಂವಹನ-ಬಿಂಬಗಳಿವು. ಅಂತೆಯೇ, ಈ ಮೂಲಮಾದರಿಗಳು ಸಿನಿಬಿಂಬ ಸಂಜ್ಞೆಗಳಿಗೆ ಕಾವ್ಯಾತ್ಮಕತೆಗೆ ಪ್ರಾಥಮಿಕವಾದ ವ್ಯಕ್ತಿನಿಷ್ಠತೆಯನ್ನು ದಯಪಾಲಿಸುತ್ತವೆ. ಆದ್ದರಿಂದ, ಅಭಿವ್ಯಕ್ತಿಯ ರೀತಿಯಲ್ಲಿ ಸಿನಿಭಾಷೆಯ ಸಹಜತೆ ವ್ಯಕ್ತಿನಿಷ್ಠತೆ ಮತ್ತು ಭಾವಗೀತಾತ್ಮಕತೆಗೆ ಹತ್ತಿರವಾಗುತ್ತದೆ. ತದ್ವಿರುದ್ಧವಾಗಿ, ಈಗಾಗಲೇ ಉಲ್ಲೇಖಿಸಿರುವ ಹಾಗೆ, ಸಿನಿಬಿಂಬ ಸಂಜ್ಞೆಗಳಿಗೆ ತೀವ್ರ ವಸ್ತುನಿಷ್ಠತೆಯೇ ಪ್ರಮುಖವಾದ ಮತ್ತೊಂದು ಬಗೆಯ ಮೂಲಮಾದರಿಗಳೂ ಇವೆ. ಇದು ಬಾಹ್ಯ ಸಂವಹನವೇ ಪ್ರಾಥಮಿಕವಾದ, ಬಹುಜನರಿಗೆ ಏಕರೂಪವಾದ ಸಂವಹನ-ವಸ್ತುವಾಗಿರುವ ಮೂಲಮಾದರಿಗಳಾಗಿವೆ. ಇದರ ಪರಿಣಾಮವಾಗಿ, ಸಿನಿಬಿಂಬಳ ಅಸ್ತುನಿಷ್ಠ ಮಾಹಿತಿ-ಸಾಂವಹನವಷ್ಟೇ ಇದರಿಂದ ಸಾಧ್ಯ.

ಒಟ್ಟಾರೆ, ಸಿನಿಬಿಂಬ ಸಂಜ್ಞೆಗಳ ಭಾಷೆ ದ್ವಿರೂಪಿಯಾಗಿದೆ. ಏಕಕಾಲದಲ್ಲೇ ಅದು ತೀವ್ರವಾಗಿ ವ್ಯಕ್ತಿನಿಷ್ಠವೂ, ವಸ್ತುನಿಷ್ಠವೂ ಆಗಿದೆ. ( ಈ ವಸ್ತುನಿಷ್ಠತೆ ಅತಿವಾಸ್ತವತೆ, ಸಹಜತೆಯ ವಿಶೇಷ ಪ್ರವೃತ್ತಿಯಾಗಿದೆ). ಅಧ್ಯಯನ, ವಿಶ್ಲೇಷಣೆಗಳ ಕಾರಣಕ್ಕೂ ಬೇರ್ಪಡಿಸಲಾಗಂತೆ ಇವೆರಡೂ ಒಂದಕ್ಕೊಂದು ಬೆಸೆದುಕೊಂಡಿದೆ. ಸಾಹಿತ್ಯದಕ್ಕೂ ಎರಡು ಮುಖಗಳಿವೆ. ಆದರೆ, ಅವೆರಡನ್ನೂ ನಿರ್ದಿಷ್ಟವಾಗಿ ಪ್ರತ್ಯೇಕಿಸುವಷ್ಟು ವ್ಯತ್ಯಾಸವಿದೆ, ಪ್ರತ್ಯೇಕವಾದ ಬೆಳವಣಿಗೆ, ಇತಿಹಾಸಗಳಿವೆ. ಪದಗಳ ಜೊತೆಗಿನ ಎರಡು ಭಿನ್ನವಾದ ಪಯಣದಲ್ಲಿ ಪದ್ಯವನ್ನೂ, ಗದ್ಯವನ್ನೂ ಸಾಕ್ಷಾತ್ಕರಿಸಬಹುದಾಗಿದೆ. ಆದರೆ, ಬಿಂಬಗಳ ಮೂಲಕ ಕೇವಲ 'ಸಿನೆಮಾ' ಮಾತ್ರ ಸೃಷ್ಟಿಸಬಹುದಾಗಿದೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಅದು ಹೆಚ್ಚು ಕಾವ್ಯಾತ್ಮಕವೋ, ಹೆಚ್ಚು ಸಿನಿಕಥನವೋ ಎನ್ನುವುದು ಸಿನೆಮಾದಲ್ಲಿರುವ ಅನೇಕ ಸುಕ್ಷ್ಮಗಳಿಗೆ ಸಂಬಂಧಿಸಿದ್ದು. ಆದರೆ ನಿಜದಲ್ಲಿ, 'ಸಿನಿಕಥನ ಭಾಷಾ ಪರಂಪರೆ' ಎನ್ನುವುದು ಇತಿಹಾಸದಲ್ಲಿ ಹೆಚ್ಚು ತ್ವರಿತವಾಗಿಯೂ, ಖಚಿತವಾಗಿಯೂ ವ್ಯವಸ್ಥಿತಗೊಂಡಿದೆ. ಅಂತೆಯೇ, 'ಅಂಡಾಲೂಶಿಯನ್ ಡಾಗ್'-ನಂತಹ ಸಿನೆಮಾಗಳಲ್ಲಿ ಸಿನೆಮಾದ ಕಾವ್ಯಾತ್ಮಕ ಗುಣ ಸಹಜವಾಗಿಯೇ ತಿಳಿಯುತ್ತದೆ.

ಹಿಂದೆಯೇ ಹೇಳಿದಹಾಗೆ, ತಾತ್ವಿಕ ಕೋಶಸಂಪತ್ತಿನ ಅಭಾವದ ಕಾರಣವಾಗಿ ಸಿನೆಮಾ ಹೆಚ್ಚು ಸಾಂಕೇತಿಕವಾಗಿದೆ, ಕಾವ್ಯಾತ್ಮಕವಾಗಿದೆ. ಆದರೆ ಪ್ರತಿ ಸಂಕೇತಕ್ಕೂ ಒಂದು ರೂಕ್ಷ್ಮವಾದ ವಸ್ತುನಿಷ್ಠತೆಯಿದೆ. ಆದ್ದರಿಂದ, ಅಪಾರ ಸೂಕ್ಷ್ಮ ಗ್ರಹಿಕೆಯಲ್ಲಿ ಸಿಗುವ 'ಅಪ್ಪಟ ಸಂಕೇತ' ಎನ್ನಿಸುವಂತಹದ್ದು ಸಿನೆಮಾದಲ್ಲಿ ಬಹುತೇಕ ಅಸಾಧ್ಯ. ಅತ್ಯಂತ ಕಾವ್ಯಾತ್ಮಕವಾದ ಸಿನಿಸಂಕೇತ ತನ್ನ ಮತ್ತೊಂದು ರೂಪವಾದ ಬಾಹ್ಯ ಸಂವಹ್ನವೇ ಪ್ರಾಥಮಿಕವಾದ ರೂಕ್ಷ್ಮ ವಸ್ತುನಿಷ್ಠತೆಯ ಜೊತೆ ತಳುಕುಹಾಕಿಕೊಂಡೇ ಇರುತ್ತದೆ. ಸಿನೆಮಾ ಇತಿಹಾಸವೇ ಇದಕ್ಕೆ ಸಾಕ್ಷಿಯಾಗಿದೆ. ಈ ಮೂಲಕವೇ ಕಲಾತ್ಮಕ ಎನ್ನಿಸುವಂತಹ ಸಿನೆಮಾಗಳು, ಜನಪ್ರಿಯ ಸಿನೆಮಾಗಳು, ಶ್ರೇಷ್ಠ ಕಲಾಕೃತಿಗಳು, ಸಾಹಸ ಪ್ರಧಾನ ಸಿನೆಮಾಗಳು - ಎಲ್ಲವೂ ಸೃಷ್ಟಿಯಾಗಿವೆ.

ಮುಂದುವರೆಯುವುದು...

Monday, May 01, 2006

ಹಣತೆಯ ದೀಪವಾದ ಕನ್ನಡ ಸೂರ್ಯ



ನೈಸರ್ಗಿಕ ನಿಯಮಾನುಸಾರವಾಗಿ ಈ ದಿನ ಬರುತ್ತದೆನ್ನುವ ಪ್ರಾಥಮಿಕ ಸತ್ಯವನ್ನೇ ಕನ್ನಡ ಭಾವಲೋಕ ಕಡೆಗಣಿಸಿಬಿಟ್ಟಿತ್ತು ಎನ್ನಿಸುತ್ತದೆ. ಡಾ|| ರಾಜ್ ತೀರಿಹೋದರು ಎನ್ನುವುದು ಅವರ ಅಮರತ್ವವನ್ನು ಸ್ಥಾಪಿಸಿಕೊಂಡಿದ್ದ ಭಾವಲೋಕಕ್ಕೆ ಕ್ಷಣದ ಸಿಡಿಲಿನ ಏಟೇ ಸರಿ. ಡಾ|| ರಾಜ್-ರ ಹೆಸರಿನ ಹಿಂದೆ ದಿವಂಗತ ಎನ್ನುವ ಪದ ಇಷ್ಟು ದಿನಗಳ ನಂತರವೂ ನನಗೆ ಅಸಂಗತವಾಗೇ ಕಾಣಿಸುತ್ತಿದೆ. ಅವರ ಭೌತಿಕ ಅಂತ್ಯದ ಹೊಡೆತವನ್ನು ಮೀರಿ ಕನ್ನಡ ಅವರ ಅಮರತ್ವನ್ನು ಕಾಯ್ದುಕೊಳ್ಳುವತ್ತ, ಅನೇಕ ವಿಧಗಳಲ್ಲಿ ಮರುಸೃಷ್ಟಿಸುವತ್ತ ನಿಧಾನವಾಗಿ ಮುಂದಡಿಯಿಡುತ್ತಿದೆಯೇನೋ. ಹೀಗೆ, ಒಟ್ಟೊಟ್ಟಿಗೆ ೫೦ ವರ್ಷಗಳ (ವೈಯಕ್ತಿಕವಾದ, ಸಾಮೂಹಿಕವಾದ, ನನ್ನದಾದ, ನನ್ನದಲ್ಲದ) ನೆನಪು ಒತ್ತರಿಸಿ ಬರುತ್ತಿರುವಾಗ ಸಾಂಸ್ಕೃತಿಕ ಲೋಕದಲ್ಲಿ ಮಹತ್ತರವಾದ್ದೇನಾದರೂ ಸಂಭವಿಸಬಹುದು ಎನ್ನಿಸುತ್ತದೆ.

ನನ್ನೆಲ್ಲಾ ಬುದ್ಧಿಯನ್ನು ಮನಸ್ಸು-ಹೃದಯಗಳಲ್ಲಿ ಕರಗಿಸಿ ಭಯ-ಭಕ್ತಿಯಿಂದ ಈ ಬಾರಿಯ ಲೇಖನದಲ್ಲಿ ತೊಡಗಿದ್ದೇನೆ. ಅನೇಕ ಕನ್ನಡಿಗರಂತೆ ನಾನು ನೋಡಿದ್ದ ಮೊದಲನೇ ಸಿನೆಮಾ ರಾಜ್-ರದ್ದು, 'ಹುಲಿಯ ಹಾಲಿನ ಮೇವು'. ನನಗಾಗ ೩ ವರ್ಷ. ಸಿನೆಮಾ ನೋಡಿದ್ದು ನೆನಪಿರುವುದು ಮುಖ್ಯವಲ್ಲ, ರಾಜ್-ರ ಯಾವ ಸಿನೆಮಾವನ್ನೂ ಮರೆಯುವುದು ಸಾಧ್ಯವಿಲ್ಲ. ಆದರೆ, ಆ ಸಿನೆಮಾ ನೋಡುವುದಕ್ಕೆ ಹೋಗುವಾಗಲೇ ನನಗೆ ರಾಜ್ ಗೊತ್ತಿದ್ದಂತಿತ್ತು ಎನ್ನುವುದು ಮುಖ್ಯ. ಮನೆ ಮಂದಿ, ನೆರೆಹೊರೆ, ಒಟ್ಟಿಡೀ ಸಮಾಜ ರಾಜ್-ರನ್ನು ಜನಪದ-ಸತ್ಯದಂತೆ ಭಾವಿಸಿ ನೆನೆಯುವಾಗ ಆ ಮಾತುಗಳು ನನ್ನ ಕಿವಿಗೆ ತಾಗಿ, ತಾಗಿ ಒಟ್ಟು ರಾಜ್ ಆಗಲೇ ಮನಸ್ಸಿನಲ್ಲಿ ಮನೆಮಾಡಿದ್ದರು ಎನ್ನಿಸುತ್ತದೆ. ಆ ಕಾಲಕ್ಕಿನ್ನೂ ಟಿವಿ ಬಂದಿರಲಿಲ್ಲವೆನ್ನುವುದು ಮುಖ್ಯ. ನಂತರದ ವರ್ಷಗಳಲ್ಲಿ ಬಂದ ಅನೇಕ ರಾಜ್ ಸಿನೆಮಾಗಳನ್ನು ಮನೆ ಮಂದಿಯೆಲ್ಲಾ 'ನಾವೆಲ್ಲರೂ ಒಟ್ಟಿಗೆ ನಡೆಸಬೇಕಿರುವ ಉತ್ಸವ'-ದಂತೆ ನೋಡುತ್ತಿದ್ದೆವು. ಒಟ್ಟು, ನಾನು ಆ ಕಾಲಕ್ಕೂ, ಯಾವ ಕಾಲಕ್ಕೂ ರಾಜ್-ರ ಭಕ್ತ.

ಸಾರ್ವಜನಿಕ ವ್ಯಕ್ತಿಯಾಗಿ ರಾಜ್

ರಾಜ್-ರ ಹಿಂದಿನ ಸಿನೆಮಾಗಳ ಕುರಿತು ಕೇಳಿದ್ದೆವೇ ಹೊರತು, ಅವುಗಳನ್ನೆಲ್ಲಾ ನೋಡ ತೊಡಗಿದ್ದು, ಆ ದಿನಗಳ ಕುರಿತು ಅರಿಯತೊಡಗಿದ್ದು ನಿಧಾನವಾಗಿ. ಅದೆಲ್ಲಾ ನಟನಾಗಿ, ನಾಯಕರಾಗಿ, ಸಹೃದಯರಾಗಿ, ಸಾಮಾಜಿಕ ವ್ಯಕ್ತಿಯಾಗಿ, ನಾವೆಲ್ಲರೂ ಪ್ರೀತಿಸಬಹುದಾಗಿದ್ದ ಮನೆ-ಮಗನಾಗಿ, ರಾಜ್ ರೂಪುಗೊಂಡ ನೆಲೆಗಳನ್ನು, ಕಾರಣಗಳನ್ನು ಪರಿಚಯಿಸಿತು. ರಾಜ್-ರ ಮೊದಲ ಇಪ್ಪತ್ತು ವರ್ಷಗಳು ಅವರಿಗೆ ಕಲಾವಿದರಾಗಿ ಗಟ್ಟಿಯಾಗಿ ತಮ್ಮನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟವು. ಈ ಸಮಯದಲ್ಲಿನ ರಾಜ್-ರ ನಟನೆಯ ಆಳವನ್ನು ನಮ್ಮಲ್ಲಿ ಯಾರೂ ಸರಿಯಾಗಿ ಅಧ್ಯಯನ ಮಾಡಿಲ್ಲ. ನಂತರದ ಹತ್ತು ವರ್ಷಗಳು ಸಮುದಾಯದ ಅಗತ್ಯವೊಂದನ್ನು ಪೂರೈಸುವುದಕ್ಕಾಗಿ ತಮ್ಮನ್ನು ತಾವೇ ಒಡ್ಡಿಕೊಳ್ಳಬೇಕಾಗಿ ಬಂದು, ಅದನ್ನು ರಾಜ್ ನಿರ್ವಹಿಸಿದ ರೀತಿ ನಮ್ಮ ಕಾಲಕ್ಕಂತೂ ಅನನ್ಯ. ಬೊಟ್ಟು ಮಾಡಿ ತೋರಿಸುವುದಕ್ಕೆ ಏನಾದರೂ ಸಿಕ್ಕೇ ಸಿಗುತ್ತದೆ, ಆದರೆ ಅವರ ಕೊಡುಗೆ ಅಂತಹವುಗಳನ್ನು ಮೀರಿಸಿದ್ದೇ ಸರಿ. ಅವರನ್ನು ಸೂಪರ್-ಸ್ಟಾರ್ ಆಗಿಸಿದ ಜನತೆ ಅವರಿಂದ ಅವರು ಅಪಾರವಾಗಿ ಪ್ರೀತಿಸುತ್ತಿದ್ದಿರಬಹುದಾದ ಪ್ರೈವಸಿಯನ್ನು ಕಿತ್ತುಕೊಂಡುಬಿಟ್ಟಿತು. (ತಮ್ಮ ೪೦-ರ ವಯಸ್ಸಿನ ಸಿನೆಮಾದ್ದಲ್ಲದ ಫೋಟೋಗಳಲ್ಲಿ ರಾಜ್ ನನಗೆ ಯಾವತ್ತೂ ಎಲ್ಲರಿಗೂ ಗೊತ್ತಿದ್ದಕ್ಕಿಂತ ಹೆಚ್ಚು ಸಂಕೀರ್ಣವಾದ ವ್ಯಕ್ತಿಯಾಗಿ ಕಾಣಿಸುತ್ತಿದ್ದರು.) ಅವರು ಹೆಚ್ಚು ಸೂಕ್ಷ್ಮವಾದ ಪಾತ್ರಗಳಲ್ಲಿ ತೊಡಗಿಕೊಳ್ಳದಂತಾಯ್ತು, ಲಕ್ಷ್ಮೀನಾರಾಯಣ್-ರಂತಹವರ ಸಿನೆಮಾಗಳಲ್ಲಿ ಮಾಡುವುದು ಇನ್ನು ಮುಂದೆ ಕಷ್ಟವಾಗಿಬಿಟ್ಟಿತು. ವಯಸ್ಸಾದವರ ಪಾತ್ರಗಳಲ್ಲಿ (ಅದೇ ಕಣ್ಣು, ತ್ರಿಮೂರ್ತಿ, ಜೀವನ ಚೈತ್ರ, ದೇವತಾ ಮನುಷ್ಯ) ಅದ್ಭುತವಾಗಿ ನಟಿಸುತ್ತಿದ್ದ ರಾಜ್ ಅಂತಹ ಪಾತ್ರಗಳನ್ನು ಹೆಚ್ಚಾಗಿ ಮಾಡಲಾಗಲಿಲ್ಲ. ಅವರೊಂದು ಸಂಸ್ಥೆಯಾದ ನಂತರ, ಒಂದು ಸಂಸ್ಥೆಗೆ ಬರಬಹುದಾದ ವೈಪರೀತ್ಯಗಳನ್ನೆಲ್ಲಾ 'ದೇವರೇ' ಎನ್ನುವ ನಿರ್ಲಿಪ್ತತೆಯಲ್ಲಿ ಎದುರುಗೊಂಡರು.

ಆದರೆ, ಅದೆಲ್ಲವನ್ನೂ ಹಸನ್ಮುಖಿಯಾಗಿ ಒಂದು ದಿವ್ಯ-ಗಾಂಭೀರ್ಯ ಮೌನದಿಂದ ನಡೆಸಿದರು. ಸೂಪರ್-ಸ್ಟಾರ್-ಗಿರಿಗೆ ಜೀವಂತಿಕೆ, ಮನುಷ್ಯತ್ವಗಳಿಂದ ಬರುವ ಪ್ರೀತಿ-ಗೌರವಗಳನ್ನು ತಂದುಕೊಟ್ಟರು. ಸೂಪರ್-ಸ್ಟಾರ್-ಗೆ ಹೇಳಿ ಮಾಡಿಸಿದ ಪಾತ್ರಗಳನ್ನೂ ತಮ್ಮ ವ್ಯಕ್ತಿತ್ವ ವಿಶೇಷದಿಂದ ಮಣ್ಣಿಗೆ ಹತ್ತಿರವಾಗಿಸಿದರು. ಸಾಧ್ಯವಿದ್ದೆಡೆಗಳಲ್ಲೆಲ್ಲಾ ತಮ್ಮ ಕಲಾನೈಪುಣ್ಯವನ್ನು ಮೆರೆದರು. ಕ್ರಮೇಣ ತೆರೆಯಿಂದ ಮರೆಯಾದರೂ, ಕನ್ನಡ ಭಾವಲೋಕವನ್ನು ಅದಾವ ಬಗೆಯಲ್ಲಿ ಶ್ರೀಮಂತಗೊಳಿಸಿದ್ದರೆಂದರೆ, ನನ್ನಂಥವರು ಪ್ರತಿದಿನವೂ ಯಾವುದಾದರೂ ಕಾರಣ, ಯಾವುದೇ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೇ, ರಾಜ್-ರ ನೆನಪು ತಂದುಕೊಳ್ಳದೇ ಇರಲು ಅಸಾಧ್ಯ ಎನ್ನುವ ರೀತಿಯಲ್ಲಿ ಬದುಕಿದ್ದರು.

ನಟರಾಗಿ, ಕಲಾವಿದರಾಗಿ ಕನ್ನಡ ನಾಡಿಗೆ ರಾಜ್-ರ ಕೊಡುಗೆಯೇನೆಂಬುದು ನಾಡಿಗೇ ಗೊತ್ತಿದೆ. ಜವಾಬ್ದಾರಿಯುತ ಸಾಮಾಜಿಕರಾಗಿ, ಗೋಕಾಕ್ ಚಳುವಳಿಯ ಮೂಲಕ ನಾವೆಲ್ಲರೂ ಉಸಿರಾಡುವಂತೆ ಮಾಡಿದ್ದಾರೆ. ಅವುಗಳಿಗೆ ಕಲಶವಿಟ್ಟಂತೆ ಅವರ ಮತ್ತೆರಡು ಪ್ರಮುಖ ಕೊಡುಗೆಗಳಿವೆ. ಒಂದು, ಎಷ್ಟೆಲ್ಲಾ ಆಮಿಷ, ಒತ್ತಡದ ನಡುವೆಯೂ ಅವರು ರಾಜಕೀಯಕ್ಕೆ ಬರದೇ ಕಲಾವಿದರಾಗೇ ಇದ್ದದ್ದು. ತಮ್ಮ ಕ್ಷೇತ್ರ ಯಾವುದು, ಯಾವುದು ಉಚಿತ ಎನ್ನುವುದರ ಚಿಂತನೆಯಲ್ಲಿ, ಒಂದು ಅಗ್ನಿ ಪರೀಕ್ಷೆಯಲ್ಲಿ ರಾಜ್ ಗೆದ್ದರು. [ಅದಕ್ಕೆ ಪ್ರತಿಯಾಗಿ ನೋಡಿ, ಇಂದು ಯಾವನೇ ಒಬ್ಬ ಕೈಗಾರಿಕೋದ್ಯಮಿ ತನ್ನ ಕ್ಷೇತ್ರದಲ್ಲಿ ಹಣ ಮಾಡುವಲ್ಲಿ ಯಶಸ್ವಿಯಾದನೆಂದರೆ, ತನಗೆ ಸಂಬಂಧವಿಲ್ಲದ ಮಂಡಳಿಗಳ ಸದಸ್ಯನಾಗುವುದಕ್ಕೆ ಹಿಂಜರೆಯುವುದಿಲ್ಲ]. ರಾಜ್ಯವನ್ನೂ ಗೆಲ್ಲಿಸಿದರು. ಎರಡನೇಯದು, ಅವರು ಮಿಸ್ ವರ್ಲ್ಡ್ ಕಾಂಟೆಸ್ಟ್-ನ ಅಧ್ಯಕ್ಷತೆ ವಹಿಸದೇ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿದದ್ದು. ಇವುಗಳನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲವೆನ್ನಿಸುತ್ತದೆ.

ಪರೋಕ್ಶ್ಯವಾಗಿ ಅವರಿಂದಾದ ಒಳ್ಳೆಯದನ್ನು ನಾವ್ಯಾರೂ ಲೆಕ್ಕವಿಡಲು ಸಾಧ್ಯವಿಲ್ಲ. ತಮ್ಮ ೧೫-ನೇ ವಯಸ್ಸಿನಲ್ಲಿ ಗಂಧದ ಗುಡಿ ಸಿನೆಮಾ ನೋಡಿ ಪ್ರಭಾವಿತರಾಗಿ ಅರಣ್ಯ ಇಲಾಖೆಯನ್ನು ಸೇರಿದ ೪ ಜನರನ್ನು ನಾನೇ ಭೇಟಿಯಾಗಿದ್ದೇನೆ.

ಕನ್ನಡ ನಾಡಿಗೆ ರಾಜ್-ರ ಕೊಡುಗೆ

ಕಲಾವಿದರಾಗಿ, ಸಾಮಾಜಿಕರಾಗಿ, ಇತಿಹಾಸ ಪುರುಷರಾಗಿ ಅವರ ಮಹತ್ವ, ವೈಶಿಷ್ಟ್ಯಗಳೇನು, ಹೇಗೆ ರಾಜ್ ಪರಂಪರೆ, ಆಧುನಿಕತೆಗಳ ಒಂದು ಪ್ರಮುಖವಾದ ಕೊಂಡಿಯಾದರು ಎನ್ನುವುದನ್ನು ನಮ್ಮ ಹಿರಿಯ ಚಿಂತಕರಾದ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ ಸಮಗ್ರವಾಗಿ ಕೊಟ್ಟಿದ್ದಾರೆ. ನನಗೆ ಅಸ್ಪಷ್ಟವೆನ್ನಿಸಿದ್ದು ಹಿರಿಯರ ಮಾತುಗಳಲ್ಲಿ ತಿಳಿನೀರಿನ ಸ್ಪಷ್ಟತೆ ಪಡೆದುಕೊಂಡಿದೆಯಾದ್ದರಿಂದ, ಅವುಗಳನ್ನು ಯಥಾವಾತ್ತಾಗಿ ಇಲ್ಲಿ ಕೊಟ್ಟಿದ್ದೇನೆ.

ಪ್ರಜಾವಾಣಿಯಲ್ಲಿ ಡಾ| ಯು.ಆರ್. ಅನಂತಮೂರ್ತಿ: "ಕನ್ನಡಿಗರು ತಮ್ಮನ್ನು ಕನ್ನಡಿಗರು ಎಂದು ಗುರುತಿಸಿಕೊಳ್ಳುವಂತಾಗಲು, ಯಾವುದೇ ಸಾಹಿತಿಗಿಂತ ಹೆಚ್ಚಿನ ಕೊಡುಗೆ ನೀಡಿದವರು ರಾಜಕುಮಾರ್. ತಮ್ಮ ಚಿತ್ರಗಳಲ್ಲಿ ಅವರು ಪ್ರತಿಪಾದಿಸಿಕೊಂಡು ಬಂದ ಮಧ್ಯಮ ವರ್ಗದ ಆದರ್ಶ ಮೌಲ್ಯಗಳು ಅವರ ಈ ಕೆಲಸದಲ್ಲಿ ನೆರವಾದವೆನುವುದು ಬಹಳ ಮುಖ್ಯ. ಅವರ ಪೌರಾಣಿಕ ಚಿತ್ರಗಳಲ್ಲಿ ಸಾಮಾಜಿಕೆ ನೆಲೆ ಇರುತ್ತಿತ್ತು. ಅದೇ ರೀತಿ ಆರ ಸಾಮಾಜಿಕ ಚಿತ್ರಗಳಲ್ಲಿ ಪೌರಾಣಿಕ ಶೋಭೆ ಇರುತ್ತಿತ್ತು. ಇದು ಕಲಾವಿದನೊಬ್ಬನಲ್ಲಿ ಸಾಮಾನ್ಯವಾಗಿ ಕಾಣಿಸದ ಅಸಾಮಾನ್ಯ ಗುಣ. ರಾಜ್ ಅವರ ಇನ್ನೂ ಹೆಚ್ಚಿನ ಕೊಡುಗೆ ಎಂದರೆ ೨೦ನೇ ಶತಮಾನದ ಒಂದು ಕಾಲಘಟ್ಟದ ಎಲ್ಲ ಅಪೇಕ್ಷೆಗಳನ್ನೂ ಅವರು ಪೂರೈಸಿದರೆನ್ನುವುದು. ನಿಜಜೀವನದಲ್ಲಿ ಮುತ್ತುರಾಜ್ ಆಗಿಯೇ ಉಳಿದ ಒಂದು ಹಿರಿಮೆ ರಾಜ್ ಅವರದು. ಅವರ ಆ ಸರಳತೆಯಲ್ಲೂ ಅವರ ಅಭಿಮಾನಿಗಳು ಆರಾಧ್ಯ ದೈವವನ್ನು ಅವರಲ್ಲಿ ಕಂಡರು. ಪ್ರತಿಯಾಗಿ ಅಭಿಮಾನಿಗಳನ್ನು ದೇವರು ಎಂದೇ ಅವರು ಭಾವಿಸಿದರು. ಇದು ನಿನಯವಂತನಾದವನಿಗೆ ಮಾತ್ರವೇ ಸಿದ್ಧಿಸುವ ಗುಣ". ಇದಲ್ಲದೇ, ಅನಂತಮೂರ್ತಿಗಳು ರಾಜ್ ಅವರು ಕುವೆಂಪು-ಗೆ ಮೊದಲು ಕರ್ನಾಟಕ ರತ್ನ ಬರಬೇಕೆಂದು ಪ್ರತಿಪಾದಿಸಿದ್ದು, ಗ್ರಾಂಥಿಕ ಭಾಷೆ ಮತ್ತು ಉಚ್ಛಾರಗಳಿಂದ ಕೂಡಿದ ಕನ್ನಡವನ್ನು ಕೃತಕವಾಗದ ರೀತಿ ಬಳಸಿದ್ದು ಮುಂತಾದ ಮಹತ್ವಪೂರ್ಣ ವಿಷಯಗಳತ್ತ ನಮ್ಮ ಗಮನ ಸೆಳೆದಿದ್ದಾರೆ.

ಪ್ರಜಾವಾಣಿಯಲ್ಲಿ ಗಿರೀಶ್ ಕಾರ್ನಾಡ್: "ಬೇಡರ ಕಣ್ಣಪ್ಪ ಚಿತ್ರ ಬಂದುದು ಮತ್ತು ಕರ್ನಾಟಕ ಏಕೀಕರಣವಾದುದು ತುಸು ಹೆಚ್ಚು ಕಡಿಮೆ ಎರಡು ಮೂರು ವರ್ಷದ ಅಂತರದಲ್ಲಿ. ಕನ್ನಡದ ಮಹತ್ವದ ಅರಿವಾಗುವುದರ ಜೊತೆಜೊತೆಗೇ ತಮ್ಮ ಚಿತ್ರಗಳ ಮೂಲಕ ಕನ್ನದವನ್ನು ಜನಪ್ರಿಯಗೊಳಿಸಿದ ರಾಜ್ಕುಮಾರ್ ಕಾರ್ಯಕ್ಕೆ ಕಲಾತ್ಮಕ ಮಹತ್ವಕ್ಕಿಂತ ಐತಿಹಾಸಿಕ ಮಹತ್ವವೇ ಹೆಚ್ಚಿನದು. ಶಿಕ್ಷಿತರ ಸಂಖ್ಯೆ ಪ್ರತಿಶತ ೧೫.೨೦ರಷ್ಟಿದ್ದ ಕಾಲದಲ್ಲಿ ಕನ್ನಡ ಭಾಷೆಯನ್ನು ಹಳ್ಳಿಗಳಲ್ಲಿ, ದುಡಿಯುವ ವರ್ಗದಲ್ಲಿ, ಮಹಿಳಾ ಸಮುದಾಯದಲ್ಲಿ ಜನಪ್ರಿಯಗೊಳಿಸಿದ ಅನನ್ಯ ಸಾಧನೆ ಅವರದು. ಕನ್ನಡ ಭಾಷಾ ಸಂಬಂಧವಾಗಿ ನಡೆದ ಪ್ರತಿಯೊಂದು ಚಳುವಳಿಯಲ್ಲೂ ಅವರು 'ಸ್ಟಾರ್' ಆಗಿ ಪಾಲ್ಗೊಳ್ಳದೇ ತಮ್ಮ ಸಕ್ರಿಯ ಪಾತ್ರದಿಂದ 'ನಾಯಕನೇ' ಆದರು ಎನ್ನುವುದು ವಿಶೇಷ. ಹಾಗೆ ನೋಡಿದರೆ ನಮ್ಮ ಬಹುತೇಕ ಪ್ರಮುಖ ಬರಹಗಾರರಿಗಿಂತ ಆಳವಾದ ಕನ್ನಡತನವನ್ನು ರಾಜ್ ಮುಟ್ಟಿದ್ದರು. ಅದು ಅವರ ಚಿತ್ರಗಳಲ್ಲಿ, ಅವರ ವರ್ತನೆಯಲ್ಲಿ ಎದ್ದು ಕಾಣುತ್ತಿತ್ತು". ಇಷ್ಟೇ ಅಲ್ಲದೇ, ರಾಜ್-ಗಿದ್ದಿರಬಹುದಾದ ಕನ್ನಡ ಗ್ರಾಮೀಣ ಸಂಸ್ಕೃತಿಯ ಸಂಋದ್ಧ ಹಿನ್ನೆಲೆಯ ಕುರಿತೂ ಕಾರ್ನಾಡ್ ಬೆಳಕು ಚೆಲ್ಲಿದ್ದಾರೆ. [ಕನ್ನಡ ವಾಣಿಜ್ಯ ಮಂಡಳಿ ರಾಜ್-ಗೆ ಅರ್ಪಿಸಿದ್ದ ನುಡಿನಮನದಲ್ಲಿ ಮಾತನಾಡಿದ ಕಾರ್ನಾಡ್ ಪ್ರಪ್ರಥಮ ಬಾರಿಗೆ ಅಷ್ಟೊಂದು ಚಪ್ಪಾಳೆ ಗಳಿಸಿದರು ಎನ್ನಿಸುತ್ತದೆ. ಅವರಿಗೆ ಹೇಳಲಿಕ್ಕೆ ಮತ್ತಷ್ಟು ಇದೆಯೆನ್ನಿಸಿತ್ತು, ಆದರೆ ಸಮಯದ ಅಭಾವವಿತ್ತು ಅಲ್ಲಿ. ನಾಟಕ ಅಕ್ಯಾಡಮಿಯ ಸಮಾರಂಭದಲ್ಲಾದರೆ ಆ ಅವಕಾಶ ಸಿಗುತ್ತಿತ್ತು].

ಹಾಗೆಯೇ, ಬರಗೂರು ರಾಮಚಂದ್ರಪ್ಪನವರು ಬೆವರಿನ ಮನುಷ್ಯನೇ ಬಂಗಾರದ ಮನುಷ್ಯನಾದ ಪ್ರಕ್ರಿಯೆಯನ್ನು ವಿವರಿಸಿ, ರಾಜ್-ರ ಬೆಳವಣಿಗೆಯ ಏಕಕಾಲದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಹಲವಾರು ಪ್ರಮುಖ ವಿಷಯಗಳನ್ನು ಅಗ್ನಿ ಶ್ರೀಧರ್, ರವಿ ಬೆಳಗೆರೆ, ಬಂಜಗೆರೆ ಜಯಪ್ರಕಾಶ್ ತಮ್ಮ ಶ್ರದ್ಧಾಂಜಲಿಗಳಲ್ಲಿ ಪ್ರತಾಪಿಸಿದ್ದಾರೆ. ಕಥೆಗಾರ ವಸುಧೇಂದ್ರ ರಾಜ್-ರ ಕುರಿತ ತಮ್ಮ ವೈಯಕ್ತಿಕ ಅನುಭವವನ್ನು ಒಂದು ಕಥೆಯಾಗಿಸಿ, ರಾಜ್ ಎಂಬ ಸಾಮಾಜಿಕ ಪ್ರಕ್ರಿಯೆಯ ಒಂದು ಮುಖ್ಯವಾದ ರೂಪಕವನ್ನೂ ಚಿತ್ರಿಸಿದ್ದಾರೆ. ವಿಜಯಕರ್ನಾಟಕದಲ್ಲಿ ಪ್ರಕಟವಾದ ರಾಜ್ ಕುರಿತ ಜಯಂತ ಕಾಯ್ಕಿಣಿಯವರ ಬರಹವನ್ನು ಓದಿಯೇ ಆಸ್ವಾದಿಸಬೇಕು.

ಇದೆಲ್ಲಾ ಇಲ್ಲಿ ಏಕೆ ಕೊಟ್ಟಿದ್ದೇನೆಂದರೆ, ರಾಜ್ ಎನ್ನುವ ಪ್ರಕ್ರಿಯೆಯ ಅನೇಕ ಮಹತ್ವಪೂರ್ಣ ಮಜಲುಗಳು ಇವುಗಳಲ್ಲಿ ಅರ್ಥಪೂರ್ಣವಾಗಿ ಪ್ರತಿಫಲಿತವಾಗಿದೆ ಎನ್ನುವ ಕಾರಣಕ್ಕಾಗಿ.

ರಾಜ್ ಮತ್ತು ಕನ್ನಡತನ

ಅವರನ್ನು ಬಲ್ಲ ಪ್ರತಿಯೊಬ್ಬರಿಗೂ ರಾಜ್-ರ ವ್ಯಕ್ತಿತ್ವ-ವಿಶೇಷದ ಬಗ್ಗೆ ಒಂದು ಚಿಕ್ಕದಾದರೂ ಹೊಸದಾದ ಒಳನೋಟ ಬೀರುವ ಮಾಹಿತಿಯಿದ್ದೀತು. ಈ-ಟಿಇ-ಯಲ್ಲಿ ರಾಜ್ ಆಲೂರು ಎಂಕಟರಾಯರನ್ನು ಭೇಟಿಮಾಡದ್ದನ್ನು ಸುರೇಶ್ ಹೆಬ್ಳೀಕರ್ ವರ್ಣಿಸುವಾಗ ಹಾಗೆನ್ನಿಸಿತು. ನಿಸಾರ್ ಅಹಮದ್, ಜಿ.ವಿ.ಮಾಲತಮ್ಮನವರು ಭಾವಪರವಶರಾದಾಗ ಹಾಗೆನ್ನಿಸಿತ್ತು. ೭-೮ ವರ್ಷದ ದೊಡ್ಡ ಸ್ಟಾರ್ ಎಂದರೇನೆಂದು ಗೊತ್ತಿಲ್ಲದಾಗ ಒಮ್ಮೆ ನಾನು ರಾಜ್-ರನ್ನು ಮಲ್ಲೇಷ್ವರದಲ್ಲಿ ದೂರದಿಂದ ನೋಡಿದ್ದೆ ಕೆಲ ನಿಮಿಷಗಳಷ್ಟೇ. ಅದನ್ನೇಕೆ ಇಂದಿಗೂ ಮರೆಯುವುದಕ್ಕಾಗಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವುದು ಕಷ್ಟ.

ರಾಜ್-ರ ಕುರಿತು ಸ್ನೇಹಿತರ ಜೊತೆ ಚರ್ಚಿಸುತ್ತಿದ್ದಾಗ, ನನ್ನ ಸ್ನೇಹಿತರೊಬ್ಬರಾಡಿದ ಮಾತುಗಳು ಮತ್ತೆ ನನ್ನದೇ ಎನ್ನುವಷ್ಟು ಮನತಟ್ಟಿತು. ಅವರ ಅನುಮತಿಯಂತೆ ಇದನ್ನಿಲ್ಲಿ ದಾಖಲಿಸುತ್ತಿದ್ದೇನೆ. "ರಾಜ್ ಒಂದು ಇಮೇಜ್ ಆಗೇ ನನಗೆ ಗೊತ್ತಿರುವುದು. ಆ ಇಮೇಜ್ ಅವರ ಸಾರ್ವಜನಿಕ ಇಮೇಜ್ ಅಲ್ಲ. ಅದು ನನ್ನ ಭಾವಲೋಕಕ್ಕಷ್ಟೆ ಸೀಮಿತವಾದ ಒಂದು ಖಾಸಗಿ ಇಮೇಜ್. ಅವರ ಸಾರ್ವಜನಿಕ ಇಮೇಜ್-ಗೂ, ನನ್ನ ಮನಸ್ಸಿನಲ್ಲಿರುವ ರಾಜ್‍ಗೂ, ನಿಜವಾದ ರಾಜ್‍ಗೂ ಅಗಾಧ ವ್ಯತ್ಯಾಸಗಳಿದ್ದರೆ ನನಗಂತೂ ಆಶ್ಚರ್ಯವಾಗುವುದಿಲ್ಲ. ನನ್ನ ಭಾವಲೋಕದಲ್ಲಿ, ನೆನಪುಗಳ ಸಂಗ್ರಹದಲ್ಲಿ ಹುದುಗಿರುವ ರಾಜ್ ಎಂಬ ಇಮೇಜ್ ನನ್ನ ಭಾವಲೋಕವನ್ನು ಸಾಕಷ್ಟು ಶ್ರೀಮಂತಗೊಳಿಸಿದೆ ಎಂದು ನಿಸ್ಸಂಕೋಚವಾಗಿ ಹೇಳಬಲ್ಲೆ." ಇದು ನನ್ನನ್ನು ತೀವ್ರವಾಗಿ ಆಲೋಚನೆಗೆ ಈಡು ಮಾಡಿತು.

ಇತ್ತೀಚಿಗೆ, ರಾಜ್-ರನ್ನು ನೆನೆದಾಗಲೆಲ್ಲಾ ನನಗೆ ಒಂದು ಘಟನೆ ಜ್ಞಾಪಕ ಬರುತ್ತಿರುತ್ತದೆ. ಬಿ.ವಿ.ಕಾರಂತರ ಆತ್ಮಕಥೆಯಾದ (ವೈದೇಹಿ ಸಂಪಾದಿಸಿರುವ) 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಗುಬ್ಬಿ ಕಂಪನಿಯಲ್ಲಿ ರಾಜ್ ಒಮ್ಮೆ ಘಾಸಿಗೊಂಡಿದ್ದ ಅಳಿಲೊಂದನ್ನು ಉಪಚರಿಸಿ ಸಾಕಿದ್ದು, ಇವರು ಊರಲ್ಲಿಲ್ಲದಾಗ ಅದು ಸತ್ತಿದ್ದು, ವಿಷಯ ತಿಳಿದ ರಾಜ್ ಭೋರೆಂದು ಅಳುತ್ತಾ ಬಂದು, ಒಂದು ವಾರ ಅಳುತ್ತಾ ಮಲಿಗಿದ್ದರಂತೆ. ರಾಜ್ ತಮ್ಮ ಕಡೆಯ ಕ್ಷಣದವರೆಗೂ ತಮ್ಮ ಈ 'ಮುತ್ತುರಾಜ್' ಸಂವೇದನೆಗಳನ್ನು ಬಿಟ್ಟುಕೊಡಲೇ ಇಲ್ಲ. ಕನ್ನಡಿಗರ ಮನದಾಳದಲ್ಲಿ ರಾಜ್ ಮನೆಮಾಡಲು ಇದೇ ಎಲ್ಲಕ್ಕಿಂತ ಹೆಚ್ಚು ಕಾರಣ ಎಂದು ನನ್ನ ಗ್ರಹಿಕೆ.

ರಾಜ್ ಬರಿಯ ನಟರಾಗಿದ್ದಿದ್ದರೆ, ಸೂಪರ್ ಸ್ಟಾರ್ ಆಗಿದ್ದರೆ ಅವರನ್ನು ನಾವು ಈ ಬಗೆಗಳಲ್ಲಿ ನೆನೆಯುತ್ತಿರಲಿಲ್ಲ. ರಾಜ್ ಕನ್ನಡ ಸಂಸ್ಕೃತಿಯ ಒಂದು ಮಹತ್ತರವಾದ ಸಾಧ್ಯತೆಯ ಮನುಷ್ಯರೂಪವಾಗಿದ್ದರು. ಬದುಕಿನ ಕಷ್ಟ, ಅಸಂಗತಗಳ ಜೊತೆಗೆ ಅವಿನಾಭಾವ ಸಂಬಂಧವಿದ್ದ ಭಕ್ತಿ-ಶ್ರದ್ಧೆಗಳನ್ನು ರಾಜ್ ಕಾಪಾಡಿಕೊಂಡು ಬಂದಿದ್ದರೆನ್ನಿಸುತ್ತದೆ. ಅವರಿಗೆ ಬೀರಪ್ಪ ದೇವರಿಗೂ, ರಾಮ ಕೃಷ್ಣರಿಗೂ, ಭೂಮಿ ತಾಯಿಗೂ, ಕನ್ನಡ ತಾಯಿಗೂ ನಡುವೆ ವ್ಯತ್ಯಾಸವಿರಲಿಲ್ಲ. ಕನಕದಾಸ, ಕಾಳಿದಾಸ, ರಾಘವೇಂದ್ರ-ಸ್ವಾಮಿ, ಕಣ್ಣಪ್ಪ, ಪುಲಿಕೇಶಿ, ಮಯೂರ, ತುಕಾರಾಂ, ಗೋರಾ, ಹಿರಣ್ಯಕಷಿಪು - ಇವೆಲ್ಲವುಗಳನ್ನು (ತೋರಿಕೆಯಲ್ಲದ, ವ್ಯಾವಹಾರಿಕವಲ್ಲದ) ಏಕರೂಪವಾದ ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸಬಲ್ಲವರಾಗಿದ್ದರು. ಕನ್ನಡ ನಾಡಿನಲ್ಲಿ ಜಾತಿಯ ಕಾರಣಕ್ಕೆ ವಿವಾದಕ್ಕೊಳಗಾಗದ ಕೆಲವೇ ಕೆಲವು ಅಪ್ರತಿಮರಲ್ಲಿ ರಾಜ್ ಒಬ್ಬರಾಗಿದ್ದರು. ಅವರು ಕಂಡ ಕೂಡಲೇ ಮನಸ್ಸಿನಲ್ಲಿ ಒಂದಿಷ್ಟಾದರೂ ಸಾಮಾನ್ಯಕ್ಕಿಂತ ಮಿಗಿಲಾದ ಭಕ್ತಿ-ಗೌರವ ಹುಟ್ಟಿರದೇ ಇದ್ದ ಕನ್ನಡಿಗ ವಿರಳ. ಕನಿಷ್ಠ ತಮ್ಮೆಲ್ಲಾ ನಾಯಕ ಪಾತ್ರಗಳನ್ನು ತಮ್ಮ ವ್ಯಕ್ತಿತ್ವ ವಿಶೇಷವಾದ ತಾಯ್ತನದಿಂದ ನಿರ್ವಹಿಸಿದರು (೫೦-ರ ೬೦-ರ ದಶಕದ ಅವರ ನಾಯಕಿಯರಿಗೆ ರಾಜ್-ರ ಜೊತೆ ನಟಿಸುವಾಗ ಅವರ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ನೆನಪಾಗುತ್ತಿದ್ದರೇ ಎಂದು ಸ್ವಲ್ಪ ಅತಿಶಯವಾಗಿ ನಾನು ಆಗಾಗ ಅಚ್ಚರಿಪಡುತ್ತಿದ್ದುದುಂಟು). ಕನ್ನಡ ಸಂಸ್ಕೃತಿಯಲ್ಲಿ ಸಾಧ್ಯವಾಗಿದ್ದ ಮನುಷ್ಯತ್ವದ ಧಾರೆಗಳ ಆವಾಹನೆಯಿಂದ, ಆ ಪಾತ್ರಗಳೆಲ್ಲವೂ ನಮ್ಮ ಪಕ್ಕದ ಮನೆಯಲ್ಲಿ ಇದ್ದಿರಬಹುದು ಎನ್ನುವಂತೆ ಸಾಧ್ಯವಾಗಿಸಿದರು, ಪಾತ್ರಗಳಿಗೆ ಮಣ್ಣಿನ ಲೇಪನವನ್ನು ಇತ್ತರು. ಸಾಮಾನ್ಯವಾಗಿ ನಮ್ಮ ಹಬ್ಬ-ಹರಿದಿನಾಚರಣೆಗಳಲ್ಲಿ ಗಂಡಸರ ಸ್ವಪ್ರದರ್ಶನದ ಮಂತ್ರಘೋಷಗಳ ನಂತರ, ಹೆಂಗಳೆಯರು ಮನೆವಾರ್ತೆಯಷ್ಟೇ ಸಹಜವಾಗಿ ದೇವರಿಗೆ ಆರತಿಯೆತ್ತಿ ಹಾಡುವ ತೆರದಲ್ಲಿ ರಾಜ್ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಅತಿಶಯೋಕ್ತಿಯೇ ಮುಖ್ಯವಾಗಿದ್ದ, ಆ ಕಾಲದ ಪ್ರಭುತ್ವದ ಜೊತೆಗಿನ ಅನುಸಂಧಾನವೂ ಕಾರಣವಾಗಿ ಸೃಷ್ಟಿಗೊಂಡಿರಬಹುದಾದ ಕಂಪನಿ ನಾಟಕಗಳ ಅಭಿವ್ಯಕ್ತಿ ಮಾರ್ಗವೊಂದಕ್ಕೆ ಭೂಮಿಯ ಸಂಪರ್ಕ ಸಾಧ್ಯವಾಗಿಸಿ ಜೀವಂತಿಕೆಯನ್ನು ತಂದಿಟ್ಟರು. ಆ ಮಾರ್ಗದ ಒಟ್ಟೂ ಸಾಧ್ಯತೆಯನ್ನು ಸೃಷ್ಟಿಸಿದವರಿಗಿಂತಾ ಹೆಚ್ಚಿನ ರೀತಿಯಲ್ಲಿ ಜೀವಿಸಿದರು. ಈ ಎಲ್ಲಾ ಸಂವೇದನೆಗಳಿಂದಲೇ ಗೀತೆಗಳನ್ನು ಹಾಡಿದರು, ಗಾಯನದ ಸಹಜ ಇಂಪಿಗೆ ಮಾತಿನ ಸಂವೇದನೆಗಳನ್ನು ಬೆಸೆದರು. ಒಟ್ಟು ವ್ಯಕ್ತಿತ್ವವನ್ನು ಎಲ್ಲದರಲ್ಲಿ ತೊಡಗಿಸಿಕೊಂಡರು. ಈ ಕಾರಣಕ್ಕೇ ಅವರ ಪಾತ್ರಗಳು ತಂದೆ, ತಾಯಿ, ದೈವಭಕ್ತಿ, ಪ್ರೀತಿ ಎಂದೆಲ್ಲಾ ಮಾತುಗಳನ್ನಾಡಿದರೆ ನಮಗದು ನಿಜವೆನ್ನುವಂತಾಯ್ತು.

ನಮ್ಮ ಕಾಲದಲ್ಲಿ, ಕೆ.ವಿ.ಸುಬ್ಬಣ್ಣನವರು ಎಲ್ಲವೂ ಕಾಣುವಂತಹ ಜಾಗವೊಂದನ್ನು ತಮಗಾಗಿ ಸೃಷ್ಟಿಸಿಕೊಂಡರೆ, ರಾಜ್ ಎಲ್ಲರಿಗೂ ಕಾಣುವಂತಹ ರೀತಿಯಲ್ಲಿ ಬೆಳೆದರು, ಅದಕ್ಕೆ ತಮ್ಮನ್ನು ಒಡ್ಡಿಕೊಂಡರು. ಹೀಗೆ ಎಲ್ಲರೂ ಇವರಲ್ಲಿ ತಮ್ಮವರೊಬ್ಬರ ಗುಣ ಕಾಣುವ ಹಾಗೆ ಬದುಕುವುದು ಸಾಮಾನ್ಯವಾದ ವಿಷಯವಲ್ಲ. ನಮ್ಮ ಕಾಲದಲ್ಲಿ, ಎಲ್ಲರಿಗೂ ದಕ್ಕುವಂತಹ ಶ್ರೇಷ್ಠತೆಯ ಮಾದರಿಯೊಂದನ್ನು ಸೃಷ್ಟಿಸಿದ ಕೆಲವರಲ್ಲಿ ರಾಜ್ ಅಗ್ರಗಣ್ಯರು. ಇಷ್ಟಾದರೂ, ನಮ್ಮ ಸಾಂಸ್ಕೃತಿಕ ಲೋಕದ ಮಿಕ್ಕ ಪ್ರಮುಖ ಧಾರೆಗಳು ರಾಜ್-ರ ಜೊತೆಗೆ ಅಂತಹ ಸಂವಾದಕ್ಕೆ ತೊಡಗದೇ ಹೋದ್ದು ಕನ್ನಡಕ್ಕಾದ ನಷ್ಟವೆನ್ನಬೇಕು. ಮಿಕ್ಕವರು ಹೋಗಲಿ. ಜನಪ್ರಿಯ ಧಾರೆಗಳಲ್ಲಿ ಬದುಕುತ್ತಿದ್ದ ಮಹನೀಯರ ಬಗ್ಗೆ ಕೆ.ವಿ.ಸುಬ್ಬಣ್ಣನವರು ವಿಶೇಷವಾದ ಆಸಕ್ತಿ, ಗೌರವಗಳನ್ನು ಇಟ್ಟುಕೊಂಡಿದ್ದರು. ಅವರಿಗೂ ರಾಜ್ ಜೊತೆಗೆ ಇದು ಸಾಧ್ಯವಾಗದೇ ಹೋದದ್ದು ನಾನು ಎಂದಿಗೂ ದುಃಖಿಸುವ ವಿಷಯ. ಪ್ರಾಯಶಃ ೭೦-ರ ದಶಕದಲ್ಲಿ ರಾಜ್ ಸಮುದಾಯದ ಅಗತ್ಯವಾಗಿದ್ದ ಸೂಪರ್ ಸ್ಟಾರ್ ಆಗದೇ ವರನಟರಾಗಿ ಮಾತ್ರ ಉಳಿದಿದ್ದರೆ ಸಾಧ್ಯವಿತ್ತೇನೋ. ಆದರೆ, ಹೀಗಾಗಿದ್ದರೆ ಕನ್ನಡ ಸಾಂಸ್ಕೃತಿಕ ಲೋಕ ಏನನ್ನು ಗಳಿಸುತ್ತಿತ್ತು ಮತ್ತು ಕಳೆದುಕೊಳ್ಳುತ್ತಿತ್ತು ಎನ್ನುವುದು ಜಟಿಲವಾದ ವಿಚಾರ. ಗೋಕಾಕ್ ಚಳುವಳಿಯ ಯಶಸ್ಸಿಗೆ ರಾಜ್ ಸೂಪರ್ ಸ್ಟಾರ್ ಆಗಿದ್ದುದು ಕೂಡಾ ಒಂದು ಮುಖ್ಯವಾದ ಕಾರಣ ಎನ್ನುವುದನ್ನು ಮರೆಯದಿರೋಣ.

ಮನುಷ್ಯನ ಜೀವನದಲ್ಲಿ ಒಟ್ಟಾಗಿ ಬದುಕುವ ಆಸೆ, ಬೇರೆಯಾಗುವಾಸೆ ಜೊತೆಜೊತೆಯಲ್ಲೇ ಇರುತ್ತದೆ. ಎರಡಕ್ಕೂ ಅರ್ಥಪೂರ್ಣವೆಂದೆನ್ನಿಸುವ ಕಾರಣಗಳು ಬೇಕಿರುತ್ತವೆ. ನಮ್ಮ ಕಾಲದಲ್ಲಿ, ಹೀಗೆ ನಾವೆಲ್ಲರೂ ಯಾವುದಾದರೂ ಒಂದರ ಕುರಿತು ಭಾವುಕರಾಗುವುದರ ಮೂಲಕ ಒಟ್ಟಾಗುವುದಕ್ಕೆ ರಾಜ್ ಕಾರಣರಾಗಿದ್ದಾರೆ. ನನಗಿದು ಮಹತ್ತರವಾದ್ದೆನ್ನಿಸುತ್ತದೆ. ರಾಜ್-ರ ನೆನಪು ಸದಾ ಕಾಲ ಮನಸ್ಸು-ಹೃದಯಗಳನ್ನು ತುಂಬಿಸುತ್ತದೆ, ಕಣ್ಣು ತೇವವಾಗುವುದನ್ನು ತಡೆಯುವುದು ಕಷ್ಟ. ಕನ್ನಡಕ್ಕಂತೂ ರಾಜ್ ಪ್ರಾತಃಸ್ಮರಣೀಯರಲ್ಲಿ ಪ್ರಮುಖರು.

ಕೊನೆಯ (ಕಣ್ಣೀರ) ಹನಿ

ಆದರೆ, ರಾಜ್-ರನ್ನು ಕಳಿಸಿಕೊಟ್ಟ ರೀತಿ ಮಾತ್ರ...ಅವರ ಕ್ಷಮೆ ಕೇಳುವುದಕ್ಕೂ ಸಾಧ್ಯವಿಲ್ಲವಲ್ಲ. ಬೆಂಗಳೂರಿನೆಲ್ಲೆಡೆ ರಾಜ್-ರ ಕಟ್ ಔಟ್ ಗಳ ಕೆಳಗೆ 'ಅಣ್ಣಾ, ಮತ್ತೆ ಹುಟ್ಟಿಬಾ' ಎನ್ನುವ ಪ್ರಾರ್ಥನೆಯಿದೆ. ಆದರೆ, ಆ ನೈತಿಕ ಹಕ್ಕನ್ನೇ ನಾವು ಕಳೆದುಬಿಟ್ಟಿದ್ದೀವೇನೋ ಅನ್ನಿಸುತ್ತಿದೆ. ಅಣ್ಣನಿಗೆ ನಮ್ಮ ಪ್ರಾರ್ಥನೇ ಮುಟ್ಟಲಾರದೇನೋ, ಮುಟ್ಟಿದರೂ ಕಿವಿಗೊಟ್ಟಾರು ಎಂದೇನು ಗ್ಯಾರಂಟೀ. ಆದದ್ದನ್ನು ನೋಡಿದ ಮೇಲಂತೂ, ಜನ್ಮ ಜನ್ಮಾಂತರಕ್ಕೂ ನಾವು ಕ್ಷಮೆಗೆ ಅರ್ಹರಲ್ಲ ಎನ್ನಿಸತೊಡಗಿದೆ.