ಜಯಂತ್-ಕಾರ್ನಾಡ್-ಬೇಂದ್ರೆ-ನಮಸ್ಕಾರ
ಕೆಲ ತಿಂಗಳುಗಳ ಹಿಂದಿನ ಸಂಗತಿ. ಈ ಬಾರಿಯ 'ಬೇಂದ್ರೆ ಮಾಸ್ತರ್-ಗೆ ನಮಸ್ಕಾರ' ಮಾಲಿಕೆಯಲ್ಲಿ ಗಿರೀಶ್ ಕಾರ್ನಾಡ್-ರನ್ನು ಜಯಂತ್ ಮಾತುಕತೆಯಲ್ಲಿ ತೊಡಗಿಸುತ್ತಾರೆ, ರಂಗಶಂಕರದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಸಂಚಿಕೆಯಲ್ಲಿ ಕಾರ್ನಾಡ್ ಚೆನ್ನಾಗಿ ಮಾತನಾಡಿದ್ದಾರೆ, ಅತ್ಯುತ್ತಮವಾದ ಸಂದರ್ಶನದಲ್ಲಿ ಇದೂ ಒಂದು ಎಂಬಿತ್ಯಾದಿ ಮಾಹಿತಿಗಳಿರುವ ಈ-ಮೈಲ್ ಒಂದನ್ನು ನನ್ನ ಸ್ನೇಹಿತರು ಕಳಿಸಿದ್ದರು. ನೋಡುವ ಅವಕಾಶ ಕಳೆಯಬಾರದು ಎಂದು ನಿರ್ಧರಿಸಿಕೊಂಡಿದ್ದೆ.
ಇದೇ ಸಂದರ್ಭದಲ್ಲಿ ಜಯಂತರ ಮತ್ತು ಈ-ಟಿ.ವಿ.ಯ 'ನಮಸ್ಕಾರ' ಮಾಲಿಕೆಯ ಕುರಿತು ನಾಲ್ಕು ಮಾತು ಹೇಳಲೇಬೇಕು. ಕುವೆಂಪುರವರ ಕುರಿತಾದ ಮಾಲಿಕೆಯಿಂದ ಆರಂಭವಾದ ಕಾರ್ಯಕ್ರಮದ ಕುರಿತು ಮೊದಲು ಯಾವ ನಿರೀಕ್ಷೆಯೂ ಇರಲಿಲ್ಲ, ಭರವಸೆಯ ಬಗ್ಗೆ ತೀವ್ರವಾಗಿ ಯೋಚಿಸಿರಲಿಲ್ಲ, ಕುತೂಹಲ ಖಂಡಿತವಾಗಿ ಇತ್ತು. ಈ ತೆರನಾದ ಕಾರ್ಯಕ್ರಮವೇ ಇದು ಮೊದಲು. ೮೦-ರ ದಶಕದ ಅಂಚಿನಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರತಿ ಭಾನುವಾರ ಭಾರತೀಯ ಚಲನಚಿತ್ರ ರಂಗದ ಪಿತಾಮಹರ ಕುರಿತು ಒಂದು ಮಾಲಿಕೆ ಬರುತ್ತಿತ್ತು, ಇದಕ್ಕಿಂತ ಸ್ವಲ್ಪ ಭಿನ್ನವಾಗಿ. ೯೦-ರ ದಶಕವಂತೂ ಬಂಜರು ಭೂಮಿಯೇ ಸರಿ. ಹೀಗಾಗಿ, ಕುವೆಂಪು ಮಾಲಿಕೆಯನ್ನು ಇಷ್ಟಪಟ್ಟು ನೋಡಿದ್ದು ನಿಜ. ಜಯಂತರ ತಯಾರಿ ಎದ್ದು ಕಾಣುತ್ತಿತ್ತು. ಅನೇಕರು ಚೆನ್ನಾಗಿ ಪ್ರಾಮಾಣಿಕವಾಗಿ ಮಾತನಾಡಿದರು. ಆದರೂ, ದಕ್ಷಿಣ ಕರ್ನಾಟಕದವರಾದ ನಮಗೆ ಕುವೆಂಪು ಮತ್ತು ಮಾಸ್ತಿ, ಕಾರಂತ ಮತ್ತು ಬೇಂದ್ರೆಗಿಂತ ಹೆಚ್ಚು ಪರಿಚಿತರು. ಅದರಲ್ಲೂ ಕುವೆಂಪು ಕುರಿತು ದಾಖಲಾಗಿರುವ ಮಾಹಿತಿ ಬೇಂದ್ರೆಯವರಿಗಿಂತಲೂ ಹೆಚ್ಚು. ಕಾರ್ಯಕ್ರಮ ತನ್ನ ಪರಿಚಿತತೆಯನ್ನು ಮೀರಲಿಲ್ಲ, ಮುಖ್ಯವಾದ ಒಳನೋಟಗಳು ಸಿಗಲಿಲ್ಲವೆನ್ನಿಸಿತು. ಅದಕ್ಕಿಂತ ಹೆಚ್ಚಾಗಿ ಹೇಳಲು ನನ್ನ ಮಟ್ಟಿಗಂತೂ ಏನು ಇಲ್ಲ. ಈ ಮೊದಲು ಜಯಂತ್ ಈ ಟಿ.ವಿ.ಯಲ್ಲಿ ವಾರದ ೫ ದಿನಗಳೂ ಪ್ರಸಾರವಾಗುವ ಸಾಂದರ್ಶನ ಮಾಲಿಕೆಯೊಂದನ್ನು ನಡೆಸಿದ್ದರು. ಅದೂ ಸಹ ಯಶಸ್ವಿ ಎನ್ನುವ ಹಾಗಿಲ್ಲ ಸೋಲು ಎನ್ನುವ ಹಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇನೆ. ಪೂರ್ತಿಯಾಗಿ ಇನ್ನೂ ಸಿಕ್ಕಿಲ್ಲ. ಅರ್ಧದ ಆಲೋಚನೆಗಳು ತಪ್ಪು ವ್ಯಾಖ್ಯಾನಕ್ಕೆ ಎಡೆ ಮಾಡಿಕೊಡುವ ಅಪಾಯದ ಕಾರಣ ಇದನ್ನು ಇಷ್ಟಕ್ಕೇ ನಿಲ್ಲಿಸಿದ್ದೇನೆ. ಆದರೆ ನಿಸ್ಸಂಶಯವಾಗಿ ಈ ಕಾರ್ಯಕ್ರಮವನ್ನು ನಡೆಸಲು ಸಾಂಸ್ಕೃತಿಕವಾಗಿ ಜಯಂತ್ ಸರಿಯಾದ ವ್ಯಕ್ತಿಯಾಗಿದ್ದರು.
ಆದರೆ ನಂತರ ಬಂದ 'ಕಡಲತೀರದ ಭಾರ್ಗವನಿಗೆ ನಮಸ್ಕಾರ' ಇದಕ್ಕೆ ತದ್ವಿರುದ್ಧವಾಗಿ ವಾರದಿಂದ ವಾರಕ್ಕೆ ಬೆಳೆದು ಕಾರಂತರಷ್ಟೇ ಎತ್ತರಕ್ಕೇರುವ ಮಹತ್ವಾಕಾಂಕ್ಷೆ ಪ್ರದರ್ಶಿಸಿತು. ಕೆ.ವಿ.ಸುಬ್ಬಣ್ಣನವರ ಸಂದರ್ಶನದಿಂದ ಆರಂಭಗೊಂದು ಅವರ ಕಾರ್ ಡ್ರೈವರ್ ಆನಂದರವರೆಗೆ ಎಲ್ಲರೂ ಕಾರಂತರ ವ್ಯಕ್ತಿತ್ವದ ಅನೇಕ ತುಣುಕುಗಳನ್ನು ಅವೆಲ್ಲವುಗಳ ಒಟ್ಟು ಮೊತ್ತವಾಗಿ ಅವರಿಡೀ ವ್ಯಕ್ತಿತ್ವವನ್ನು ಅನುಭವಕ್ಕೆ ತಂದುಕೊಳ್ಳಲು ಸಾಧ್ಯವಾಯಿತು. ಒಂದೇ ರಾಗವನ್ನು ಬೇರೆ ಬೇರೆ ನೆಲೆಗಳಿಂದ ಏರುವ ರೀತಿಯಲ್ಲಿ.
ಇದರ ಪರಿಣಾಮವಾಗಿ ಮುಂದಿನ ಕಾರ್ಯಕ್ರಮಗಳಿಗೆ ಒಂದು ಬೆಂಚ್-ಮಾರ್ಕ್ ಸ್ಥಾಪಿತವಾಗಿಬಿಟ್ಟಿತು. ನನ್ನ ಮಟ್ಟಿಗಂತೂ ಬೇಂದ್ರೆ ಮಾಸ್ತರ್ ಕುರಿತ ಕಾರ್ಯಕ್ರಮದ ವಿಷಯ ಕೇಳಿ ಖುಷಿ, ಆತಂಕ ಎಲ್ಲವೂ ಆಗಲಿಕ್ಕೆ ಆರಂಭವಾಗಿತ್ತು. ಖುಷಿ ಸಹಜವೇ, ಇದೇನಾದರೂ ನಿರೀಕ್ಷೆಯ ಮಟ್ಟಕ್ಕೆ ತಲುಪದಿದ್ದರೆ ಏನು ಗತಿ ಎನ್ನುವ ಆತಂಕವಿತ್ತು. ಆದರೆ ಈವರೆಗೆ ಬಂದಿರುವ ಸಂದರ್ಶನಗಳಲ್ಲಿ ಯಾವುದೂ ತೀರಾ ತೋಪಾಗಲಿಲ್ಲ. ಎನ್.ಕೆ.ಯವರ ಸಂದರ್ಶನವಂತೂ ಅತ್ಯುತ್ತಮ ಶ್ರದ್ಧಾಂಜಲಿಯಾಗಿತ್ತು ಬೇಂದ್ರೆ-ಗೆ. ಈಗ ಅದರ ನೆನಪು ಎನ್.ಕೆ.ಯವರಿಗೆ ಶ್ರದ್ಧಾಂಜಲಿ. ಕಡೆಗೆ ಎನ್.ಕೆ. 'ನಾನೇನೋ ಮಾತಾಡಿದೆ ಜಯಂತ್, ನೀನೇ ಎಲ್ಲಾ ನೋಡ್ಕೊಂಡು ಕಾರ್ಯಕ್ರಮ ಚೆನ್ನಾಗಿ ಬರೋ ಹಾಗೆ ಮಾಡಪ್ಪ' ಎಂದದ್ದು ನೋಡಿ ನನಗೆ 'ಜಯಂತರು ಈ ದೃಶ್ಯವನ್ನೇನಾದರೂ ಎಡಿಟ್ ಮಾಡಿಬಿಟ್ಟಿದ್ದರೆ ಅವರಿಗೆ ಖಂಡಿತಾ ರೌರವ ನರಕ ಪ್ರಾಪ್ತಿಯಾಗುತ್ತಿತ್ತು' ಎಂದು ಅವರ ಮೇಲೆ ಮೆಚ್ಚುಗೆ ಮೂಡಿತು. ಸುಬ್ಬಣ್ಣ ಒಂದು ಕಡೆ 'ಮನುಷ್ಯತ್ವವನ್ನೇ ತಟ್ಟಿ ಮಾತನಾಡಿಸುವ' ಎಂದಿದ್ದಾರೆ ಬೆನೆವಿಟ್ಜ಼್ ಬಗ್ಗೆ. ನಾಣಿ ಕಾಕಾರ ಧ್ವನಿಯಲ್ಲಿ ಅಂತಹ ಕಳಕಳಿಯಿತ್ತು. ರಾಘವೇಂದ್ರ ರಾಯರು, ಜಿ.ಎಸ್.ಅಮೂರ್, ಮತ್ತಿನ್ನೂ ಅನೇಕರು, ಅಷ್ಟೇಕೆ, ಸ್ವತಃ ವಾಮನ ಬೇಂದ್ರೆ, ಸಮಾಜಪುಸ್ತಕಾಲಯದ ಸ್ಥಾಪಕರು ಎಲ್ಲರೂ ಅತ್ಯಂತ ಸಹಜವಾಗಿ, ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.
ಹೀಗಿರುತ್ತಲ್ಲಿ, ಕಾರ್ನಾಡ್ ಬಂದರೆ ಖುಷಿಯಾಗದಿರುತ್ತದೆಯೇ. ಕಾರ್ಯಕ್ರಮದ ಕುರಿತಾಗಿ ಮತ್ತು ನೆಪವಾಗಿ ನನ್ನಲ್ಲಿ ಮೂಡಿದ ಕೆಲ ವಿಚಾರಗಳನ್ನು ಈ ಕೆಳಗೆ ಕೊಟ್ಟಿದ್ದೇನೆ. ಈ ಎಲ್ಲವನ್ನೂ ಹಿಂದೆ ಸ್ನೇಹಿತರಿಗಾಗಿ ಬರೆದದ್ದು.
ಮಾಲಿಕೆಯನ್ನು ರೂಪಿಸಿರುವ ಜಯಂತರು ಮತ್ತು ಹಿರಿಯರಾದ ಕಾರ್ನಾಡರು
ಕಾರ್ಯಕ್ರಮ ಗಮನಾರ್ಹವಾಗಿತ್ತು ಎನ್ನುವುದು ವಿಶೇಷವೇನಲ್ಲ. ಸಾಮಾನ್ಯ ವಿಶೇಷಗಳನ್ನು ಮೀರಿದ ಕೆಲ ವಿಶೇಷಗಳಿದ್ದವು. ಕಾರ್ನಾಡ್, ಜಯಂತ್ ಇಬ್ಬರೂ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ ಮೆಚ್ಚುವಂತಿತ್ತು. ನಮ್ಮ ಸಾಹಿತಿಗಳಲ್ಲೆಲ್ಲಾ ಕಾರ್ನಾಡರಿಗೆ ಒಂದು ಸ್ಟಾರ್ ವಾಲ್ಯೂ ಇದೆ. ಕಾರ್ಯಕ್ರಮದ ಟಿ.ಆರ್.ಪಿ. ಯಶಸ್ಸಿಗೆ ಇದು ಮುಖ್ಯವಾಗಬಹುದಾದರೂ, ಇದರ ಅಪಾಯಗಳು ನಮಗೆ ಗೊತ್ತಿಲ್ಲದ್ದೇನಲ್ಲ. ಸ್ವತಃ ಕಾರ್ನಾಡರೇ ಇದನ್ನು ಬಲ್ಲರು. [೭೦ರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂಕಿರಣವೊಂಡರಲ್ಲಿ ಲಂಕೇಶ್ ಇದೇ ಅಪಾಯವನ್ನು ಪ್ರಸ್ತಾಪಿಸುತ್ತಾ ಸುರೇಶ್ ಅವಸ್ಥಿಯವರ ಜೊತೆಗಿನ ಸಂವಾದದಲ್ಲಿ ಕಾರ್ನಾಡರು ಇದನ್ನು ನಿರ್ವಹಿಸುವ ರೀತಿಯನ್ನು ಮೆಚ್ಚಿದ್ದಾರೆ. ಕಾರ್ನಾಡ್ ತಮ್ಮನ್ನು ತಾವೇ ಸ್ಟಾರ್ ಎಂದುಕೊಂಡಿಲ್ಲ ಎಂದು ಹೇಳಿದ್ದಾರೆ.] ಗಮನ ತಮ್ಮೆಡೆಗೆ ಹೆಚ್ಚು ಸೆಳೆಯದಂತೆ ನಿರ್ವಹಿಸಿದರು. ತಮ್ಮ ಕವಿತೆಗಳ ಕುರಿತು ಮಾತು ಬಂದಾಗ ತೇಲಿಸಿಬಿಟ್ಟರು. ಕುವೆಂಪು ಕುರಿತಾದ ಮಾಲಿಕೆಯಲ್ಲಿ ಮೊದಲ ಮಾತುಕತೆಯಾದ್ದು ಕಾರ್ನಾಡರ ಜೊತೆಯಲ್ಲೇ ಎನ್ನುವುದು ಕೂಡಾ ಅವರ ಸ್ಟಾರ್ ವಾಲ್ಯೂ-ಗೆ ನಿದರ್ಶನ. ಅಲ್ಲೂ ಕೂಡ ಕಾರ್ನಾಡ್ ತಮ್ಮ ಎಚ್ಚರ ಮೆರೆದರು. ಲಂಕೇಶ್ ಹೇಳುವಂತೆ ತಮಗಿರುವ ಸ್ಟಾರ್ ವಾಲ್ಯು-ನ ಅರಿವಿದ್ದೂ ತಮ್ಮನ್ನು ತಾವು ಸ್ಟಾರ್ ಎಂದು ಕಾರ್ನಾಡ್ ಸೀರಿಯಸ್ಸಾಗಿ ಅಂದುಕೊಂಡಿಲ್ಲ. ತುಂಬಾ ಬುದ್ಧಿವಂತರು. [ನನ್ನ ಪ್ರಕಾರ ಇಲ್ಲಿ ಬುದ್ಧಿವಂತರೆಂದರೆ ಸ್ಟಾರ್ ವಾಲ್ಯೂ ತಮ್ಮ ಬೆಳವಣಿಗೆಗೆ ಮಾರಕ ಎನ್ನುವ ಅರಿವು.]
ಇಷ್ಟೆಲ್ಲಾ ಹೇಳಿದ ಮೇಲೆ ಕಾರ್ನಾಡ್ ತುಂಬ ಇಮೇಜ್ ಕಾನ್ಸ್-ಷಿಯರ್ ಎಂದು ನನಗೆ ಯಾವಾಗಲೂ ಅನ್ನಿಸಿರುವುದನ್ನು ಹೇಳದಿರುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ತೋರುವ ಬಿಗು, ಟರ್ನಿಂಗ್ ಪಾಯಿಂಟ್-ನಲ್ಲಿ ಅವರು ಮೆರೆದ ರೀತಿ, ರಂಗಶಂಕರದ ಪ್ರಾರಂಭ ಸಮಾರಂಭದಲ್ಲಿ ಮಾತನಾಡಿದ ರೀತಿ, ದೇಶಕಾಲದ ಬಿಡುಗಡೆ, ಟಿ.ವಿ./ಪತ್ರಿಕೆ ಸಂದರ್ಶನ ಇತ್ಯಾದಿ ಇತ್ಯಾದಿಗಳೆಲ್ಲ ಅವರು ಒಂದು ಲೆಕ್ಕಾಚಾರದ ವ್ಯಕ್ತಿತ್ವ ಪ್ರದರ್ಶಿಸುತ್ತಾರೆ. ಇದು ಹೀಗಿರಬೇಕು ಎಂದು ನಿರ್ಧರಿಸಿದರೆ ಅದನ್ನು ಮೀರುವ ಪ್ರಕ್ರಿಯೆಗಳಿಗೆ ಕಡಿವಾಣ ಹಾಕುವ ಅವರ ಪ್ರಯತ್ನ ಯಾವಾಗಲೂ ಕಂಡುಬರುತ್ತದೆ. ಅವರ ಸಾರ್ವಜನಿಕ ಸಂಕೋಚ, ವಿನಯಗಳಲ್ಲೂ ಒಂದು ಬಗೆಯ ಕಾಸ್ಮೊಪಾಲಿಟನ್ ಗತ್ತು, ಅಹಂ ಇರುತ್ತದೆ. [ಇದ್ಯಾವುದನ್ನೂ ನೇತ್ಯಾತ್ಮಕವಾಗಿ ನಾನು ಹೇಳುತ್ತಿಲ್ಲ.]
ಆದರೆ ಕಾರ್ನಾಡ್ ಕಾರ್ಯಕ್ರಮದಲ್ಲಿ ಅಲ್ಲಲ್ಲಿ ಸ್ವತಃ ಅದನ್ನು ಮೀರಿದರು. ಅವರು ವಿವರಿಸಬೇಕಾದ ಪ್ರಸಂಗಗಳು ಅದನ್ನು ಅವರಿಗೆ ಅನಿವಾರ್ಯವಾಗಿಸಿಬಿಟ್ಟವು. ಬೇಂದ್ರೆಯವರ ವ್ಯಕ್ತಿತ್ವ, ಜಯಂತರ ಸಹೃದಯತೆ, ವಿಶ್ವಾಸ ಕಾರ್ನಾಡರು ತಮ್ಮ ಎಚ್ಚರದ ನಡುವೆ ಭಿನ್ನ ಅವಸ್ಥೆಗಳನ್ನು ಮುಟ್ಟುವಂತಾಯ್ತು. ಆದ್ದರಿಂದ ಮೂವರಿಗೂ ನಮಸ್ಕಾರ. ಅಲ್ಲದೇ, ಕನ್ನಡದಲ್ಲಿ ಮಾತನಾಡುವಾಗಲೆಲ್ಲಾ ಕಾರ್ನಾಡ್ ಹೆಚ್ಚು ಅಪ್ಯಾಯಮಾನರಾಗಿ ಸ್ನೇಹಜೀವಿಗಳಾಗಿ ಕಾಣುತ್ತಾರೆ, ಇಂಗ್ಲೀಷ್-ನಲ್ಲಿ ಮಾತನಾಡಿದಾಗ ಮಾತ್ರ ಅವರು ಬೇರೆಯದೇ ವ್ಯತ್ಕಿಯೇನೋ, ಇವರಿಗೂ ನಮಗೂ ಸಂಬಂಧವೇ ಇಲ್ಲವೇನೋ ಎನ್ನುವ ಹೆದರಿಕೆಯಾಗುತ್ತದೆ. ಇದೂ ಕೂಡಾ ಕಾರ್ಯಕ್ರಮದಲ್ಲಿ ಅನುಭವಕ್ಕೆ ಬರುವಂತಿತ್ತು.
ಕಾರ್ಯಕ್ರಮದ ಅತಿ ಮುಖ್ಯ ಅಂಶವೆಂದರೆ ಕಾರ್ನಾಡ್ ಬೇಂದ್ರೆಯ ವಿವಿಧ ಮುಖಗಳನ್ನು ವಿವರಿಸಿ, ವಿವಾದಾಸ್ಪದವಾಗಬಹುದಾದ್ದನ್ನು ಹೇಳುವಲ್ಲಿ ಹಿಂಜರಿಯದೇ, ವಿವಾದವಾಗುವಷ್ಟು ಎಳೇಯದೇ ಅವುಗಳನ್ನು ನಿರ್ವಹಿಸಿದ್ದು. ಭಿನ್ನಾಭಿಪ್ರಾಯಗಳನ್ನು ಮಂಡಿಸಿದ ರೀತಿಯನ್ನೂ ಮೆಚ್ಚಿದೆ. ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸಲಿಲ್ಲ. ಅನೇಕ ಒಳನೋಟಗಳನ್ನು ಕೊಟ್ಟರು. ಅಂತಹ ಸಮಯದಲ್ಲೂ ಬೌದ್ಧಿಕ ಅಹಂಕಾರವನ್ನು ತೋರ್ಪಡಿಸದೇ ಇರುವಲ್ಲಿ ಯಶಸ್ವಿಯಾದರು.
ಕಾರ್ಯಕ್ರಮಕ್ಕೆ ಅರ್ಧ ಘಂಟೆ ಏನೇನೂ ಸಾಲದೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತಾದರೂ, ಇವಿಷ್ಟರಲ್ಲಿ ಇಬ್ಬರೂ ಬೇಂದ್ರೆಯನ್ನು ದಟ್ಟವಾಗಿ ಮನಮುಟ್ಟುವಂತೆ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾದರು. ಇಲ್ಲಿ ಜಯಂತರು ಮತ್ತು ಅವರ ನಿರ್ವಹಣೆಯ ಕುರಿತು ಎರಡು ಮಾತು ಹೇಳಬೇಕಾದ್ದು ಅತ್ಯಗತ್ಯ.
ಈ-ಟಿ.ವಿ-ಯ ತಮ್ಮ ಮೊದಲ ಸಂದರ್ಶನ ಕಾರ್ಯಕ್ರಮ ಅಷ್ಟೇನೂ ಯಶಸ್ವಿಯಾಗದಿದ್ದರೂ, ಜಯಂತ್ ಅದರಿಂದ ಬಹಳ ಬೇಗ ಕಲಿತರು ಎನ್ನುವುದು ಮುಖ್ಯ ಅಂಶ. ಅಲ್ಲಿನ ಕೊರತೆಗಳನ್ನು ಇಲ್ಲಿ ಬೆಳೆಸಹೋಗುವುದಿಲ್ಲ. ನಮಸ್ಕಾರ ಮಾಲಿಕೆಯಲ್ಲಿ ಅದನ್ನೆಲ್ಲಾ ತಿದ್ದಿಕೊಂಡಿದ್ದಾರೆ. ಅತಿಥಿಗಳಿಗೆ ಜಾಸ್ತಿ ಮಾತನಾಡುವ ಅವಕಾಶ, ಕಡಿಮೆ ಮಧ್ಯಪ್ರವೇಶ ಇತ್ಯಾದಿ ಪ್ರಾಥಮಿಕ ನಿಯಮಗಳನ್ನೆಲ್ಲಾ ಚೆನ್ನಾಗಿ ಪಾಲಿಸುತ್ತಾರೆ ಎನ್ನುವುದಷ್ಟೇ ಈ ಮಾಲಿಕೆಯ ಯಶಸ್ಸಿಗೆ ಕಾರಣವಲ್ಲ. ಜಯಂತ್-ಗಿರುವ ಎದ್ದು ಕಾಣುವ ಪ್ರಾಮಾಣಿಕ ಸಹೃದಯತೆ, ಕನ್ನಡತನದ ವೈಶಿಷ್ಟ್ಯವಾದ ಒಳಗೊಳ್ಳುವಿಕೆ, ಕನ್ನಡ ಸಂಸ್ಕೃತಿ ಮತ್ತು ವ್ಯಕ್ತಿಗಳ ಜೊತೆಗಿನ ಆಳವಾದ ಸಾಂಸ್ಕೃತಿಕ ಪರಿಚಯ ಇವೆಲ್ಲ ಇಂತಹ ಮಹತ್ತರ ಮಾಲಿಕೆಯನ್ನು ಪ್ರಜ್ಞೆಯ ಮಟ್ಟದಲ್ಲಿ ನಿರ್ವಹಿಸಬಲ್ಲ ಅಪರೂಪದ, ಬೆರಳೆಣಿಕೆಯ ಜನರಲ್ಲಿ ಅವರನ್ನು ಒಬ್ಬರನ್ನಾಗಿಸಿದೆ. ಈ ಸದ್ಯಕ್ಕೆ ಬೇರೆಯವರು ನನ್ನ ಜ್ಞಾಪಕಕ್ಕೆ ಬರುತ್ತಿಲ್ಲ. ಕರಿಯರಿಸ್ಟ್-ಸಂದರ್ಶಕರು ನಮ್ಮಲ್ಲಿ ಅನೇಕರಿದ್ದಾರೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಬೇಕಾದ ಸಾಂಸ್ಕೃತಿಕ ಪ್ರಜ್ಞೆ ಜಯಂತರಿಗೆ ವಿಶೇಷವಾದ್ದು. ಅಲ್ಲದೇ ಅವರೊಬ್ಬ ಸೃಜನಶೀಲ ಲೇಖಕರು ಎನ್ನುವುದೂ ಸಹ ಇಲ್ಲಿ ಪಾತ್ರವಹಿಸಿದೆ, ಮಾಲಿಕೆ ನಮ್ಮ ಅನುಭವಕ್ಕೆ ಬರುವುದು ಈ ಎಲ್ಲಾ ಕಾರಣಗಳಿಂದ.
ಈ ಮಾಲಿಕೆಯನ್ನು ಮುಂದುವರೆಸಿ ಮಾಸ್ತಿ, ಗೋಕಾಕ್ ಅಲ್ಲದೇ ನಮಗಿನ್ನೂ ಸರಿಯಾಗಿ ದಕ್ಕಿಲ್ಲದ ಅನೇಕ ನವೋದಯ ಕಾರಣ ಪುರುಷರನ್ನು ಪರಿಚಯಿಸಬಹುದಾಗಿದೆ. ಜಯಂತ್ ಈ ನಿಟ್ಟಿನಲ್ಲಿ ಆಲೋಚಿಸುತ್ತಾರೆ ಎನ್ನುವುದು ನನ್ನ ಆಶಾವಾದ. ಕಾರ್ಯಕ್ರಮ ಯಶಸ್ವಿಯಾಗಿ ಒಂದು ಮಟ್ಟದ ಹೆಸರು ಬಂದಿರುವುದರಿಂದ ಅಷ್ಟೇನೂ ಹೆಸರುವಾಸಿಯಾಗಿರದ ಆದರೆ ಸಾಂಸ್ಕೃತಿಕವಾಗಿ ಮುಖ್ಯರಾದ ವ್ಯಕ್ತಿಗಳೆಡೆಗೆ ನಮ್ಮ ಗಮನ ಸೆಳೆಯಬಹುದಾಗಿದೆ. ಇದೆಲ್ಲ ನಮ್ಮ ಸಾಮುದಾಯಿಕ ಸ್ಮೃತಿಯ ಮರುಗಳಿಕೆಯಾಗಬಹುದಾಗಿದೆ.
ಈ ಎಲ್ಲಾ ಕಾರಣಗಳಿಗಾಗಿ ಜಯಂತ್ ಹಾಗೂ ಈ-ಟಿ.ವಿ.-ಗೆ ನಮಸ್ಕಾರ.
ಸಂದರ್ಶನ ನನ್ನಲ್ಲುಳಿದ ಬಗೆ
ಕಾರ್ಯಕ್ರಮ ನನ್ನಲ್ಲಿ ಉಳಿದದ್ದನ್ನು ಈ ಕೆಳಗೆ ಕೊಟ್ಟಿದ್ದೇನೆ. ಇದರ ಗೊತ್ತು ಗುರಿಯನ್ನು ಆಲೋಚಿಸಲು ಹೋಗಿಲ್ಲ. ಜನರಿಗೇನನ್ನಿಸುವುದೋ ನೋಡಬೇಕಿದೆ.
ನಮಸ್ಕಾರ ಎಂದು ಜಯಂತ್ ಆರಂಭಿಸಿ ಧಾರವಾಡದ ಮಾಯಗಾರನ ಕುರಿತು ಮತ್ತೊಬ್ಬ ಧಾರವಾಡದ ಮಾಯಗಾರನ ಮಾತುಗಳು ಎಂದು ಗಿರೀಶರನ್ನು ಸ್ವಾಗತಿಸಿದರು, ಶಂಕರ್ ನಾಗ್ ನೆನಪಿನ ರಂಗಶಂಕರದ ಆವರಣದಲ್ಲಿ. [ಉತ್ತರ ಕನ್ನಡದ ಶಂಕರ್ ಟಿ.ವಿ.ಯಲ್ಲಿ ಅದ್ವಿತೀಯವಾದ ಮಾಲ್ಗುಡಿ ಡೇಸ್ ಮಾಡಿದ್ದಷ್ಟೇ ಪ್ರಮುಖವಾದ ಕಾರ್ಯ ನಮ್ಮ ಜಯಂತರದ್ದು, ಮತ್ತವರದ್ದು ಅದೇ ಹಿನ್ನೆಲೆ. ಶಂಕರ್ ಬದುಕಿದ್ದರೆ ಜಯಂತರ ಒಂದು ಕಥೆಯನ್ನೇನಾದರೂ ಸಿನೆಮಾವೋ, ಧಾರಾವಾಹಿಯಾಗಿಯೋ ಮಾಡಿಬಿಡುತ್ತಿದ್ದರು ಎನ್ನುವ ಆಲೋಚನೆ ವಿನಾಕಾರಣ ಸುಳಿದು ಒಂದಿಷ್ಟು ದುಃಖ ಕೊಟ್ಟಿತು.]
'ಬೇಂದ್ರೆ ಎಂದರೇನು' ಎನ್ನುವ ಪ್ರಶ್ನೆಯಿಂದ ಜಯಂತ್ ಶುರುಮಾಡಿದರು. 'ಇದೇನು, ಹೊಗಳಿಕೆಯ ಹೊನ್ನಶೂಲವೋ, ಆದರೂ ಕಾರ್ನಾಡ್ ಇದ್ದಾರಲ್ಲ ಬಿಡು' ಎಂದುಕೊಂಡೆ. ಕಾರ್ನಾಡ್ ಉತ್ತರಿಸುತ್ತಾ ಧಾರವಾಡದ ಮೂರು ಜಾಗಗಳು ಮನೋಹರಗ್ರಂಥಮಾಲ, [ಮತ್ತೊಂದು] ಮತ್ತು ಬೇಂದ್ರೆ, ಅಂದರೆ ಅವರ ಮನೆ, ಸಾಹಿತ್ಯ ಪ್ರೇಮಿಗಳಿಗೆ ಪ್ರಿಯವಾದ ತಾಣಗಳಾಗಿದ್ದವು. ಅದರಲ್ಲೂ ಬೇಂದ್ರೆಯವರ ಮನೆ ಎಲ್ಲರಿಗೂ ತೆರೆದಿತ್ತು ಎಂದು ವಿವರಿಸಿದರು. ಧಾರವಾಡದ ಇಡೀ ಭೂಗೋಳ, ಭೂಪಟವನ್ನೇ ಅವರು ತಮ್ಮ ಕವಿತೆಗಳಲ್ಲಿ ಒಳಗೊಂಡಿದ್ದು, ಒಂದು ರೀತಿಯಲ್ಲಿ ಧಾರವಾಡದ ಸಂಸ್ಕೃತಿಯ ನಿರ್ಮಾತೃವಾಗಿದ್ದರು ಎಂದರು.
ಮಾತು ಮಹಾಕಾವ್ಯಗಳತ್ತ ತಿರುಗಿದವು. ಇಂತಿದ್ದ ಬೇಂದ್ರೆ ಮಹಾಕಾವ್ಯ ರಚಿಸದಿದ್ದರೂ ಅವರ ಒಟ್ಟೂ ಕವಿತೆಗಳನ್ನು ಮಹಾಕಾವ್ಯ ಎಂದು ಖಂಡಿತ ಪರಿಗಣಿಸಬಹುದು ಎನ್ನುವುದರಲ್ಲಿ ಇಬ್ಬರ ಸಹಮತವಿತ್ತು. [ಅಖಿಲಕರ್ನಾಟಕದ ಮಹಾಜನತೆಯ ಸಹಮತವಿರುತ್ತೆ - ಲೇಖಕ]. ಬೇಂದ್ರೆಯವರೂ ಇದನ್ನೇ ಸೂಚಿಸಿದ್ದರು ಎಂದು ಜಯಂತ್ ನೆನೆದರು. ಕಾರ್ನಾಡ್ ಇಲ್ಲಿ ಮಹಾಕಾವ್ಯ ರಚಿಸುವ ಇತರರಂತೆ ಬೇಂದ್ರೆ ಸಹಜ ವಾತಾವರಣದಿಂದ ಬೇರ್ಪಟ್ಟು ದೂರದ ಪರ್ಣಕುಟಿಯಲ್ಲೆಲ್ಲೋ ರಚಿಸಲಿಲ್ಲ, ಜೀವನದಿಂದ ಅವರೆಂದೂ ವಿಮುಖರಾಗಲಿಲ್ಲ ಎಂದು ಗಮನಿಸಿದರು. [ಕಾರ್ನಾಡ್ ಪ್ರಾಯಶಃ ವಾಲ್ಮೀಕಿ ಪರಂಪರೆಯ ಕುರಿತು ಈ ಮಾತು ಹೇಳಿದರೇನೋ. ನಾನು ಸೂಚಿಸುತ್ತಿರುವುದು ಓದುಗರಿಗೆ ಅರ್ಥವಾಗುತ್ತೆ. ಆದರೆ ಅವರ ಧ್ವನಿಯಲ್ಲಿ ಮ್ಯಾಟರ್-ಆಫ಼್-ಫ್ಯಾಕ್ಟ್ ಅಂಶವಿತ್ತೇ ಹೊರತು ಒಂದಿನಿತೂ ವ್ಯಂಗ್ಯವಿರಲಿಲ್ಲ ಎನ್ನುವುದು ನನಗೆ ಮೆಚ್ಚುಗೆಯಾಗಿತ್ತು.]
ಬೇಂದ್ರೆಯವರ ಜೀವನಪ್ರೇಮದ ಕುರಿತು ಮಾತು-ಹೊರಳಿ, ತಾವು ವಾಕಿಂಗ್ ಹೊರಟ ಸಂದರ್ಭದಲ್ಲಿ ಗಂಡ-ಹೆಂಡಿರ ಜಗಳಾವೊಂದು ಬೀದಿಗೆ ಬಂದಿದ್ದಾಗ ಅದರ ಪರಿಹಾರಕ್ಕೆ ಸ್ವತಃ ಬೇಂದ್ರೆಯವರೇ ನಿಂತದ್ದು, ಸಾರ್ವಜನಿಕವಾಗಿಬಿಟ್ಟಿದ್ದ ವೈಯಕ್ತಿಕ ಜಗಳವೊಂದರ ಪರಿಹಾರಾರ್ಥ ತಮ್ಮ ಮಧ್ಯಸ್ತಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಮಾತುಕತೆಯಲ್ಲಿ ಬಂತು. ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಯಾರೋ ಒಬ್ಬ ಮಾಸ್ತರು ಇವರಿಗೆ ಇನಾಮು ಬಂದಿದೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದಾಗ ಬೇಂದ್ರೆ ಸಿಟ್ಟಿನಿಂದ ಇನಾಮಿಗೂ ಪ್ರಶಸ್ತಿಗೂ ಇರುವ ವ್ಯತ್ಯಾಸ ವಿವರಿಸಿದ್ದು - ಇತ್ಯಾದಿ ಸರಳ-ಸಾಮಾನ್ಯ ವಿಷಯಗಳ ಜೊತೆಗೆ ಅವರಿಗಿದ್ದ ನಿಕಟ ಬಾಂಧವ್ಯದ ಪ್ರಸ್ತಾಪವಾಯಿತು.
ಬೇಂದ್ರೆಯವರ ಜೊತೆಗೆ ಗಿರೀಶರ ಸಂಬಂಧಕ್ಕೆ ಮಾತುಕತೆ ಸಹಜವಾಗಿಯೇ ಹೊರಳಿಕೊಂಡಾಗ ಗಿರೀಶರು ಆಕ್ಸ್ಫರ್ಡಿನಲ್ಲಿ ಬೇಂದ್ರೆಯವರ ಕವಿತೆಯೊಂದನ್ನು ಅನುವಾದಿಸಿ ಓದಿದ ಪ್ರಸಂಗದ ಪ್ರಸ್ತಾಪವಾಯಿತು. ಕಾರ್ನಾಡರು ಹೆಚ್ಚಿನ ಬೇಂದ್ರೆ ಪದ್ಯಗಳನ್ನು ಅನುವಾದಿಸಲಾಗುವುದಿಲ್ಲ. ಆಡ್ದರಿಂದ ಹುಡುಕಿ ಹುಡುಕಿ 'ಬೀದಿನಾಯಿ......' ಪದ್ಯವನ್ನು ಆರಿಸಿ ಓದಿದೆ ಎಂದು ಅದರ ಅನುವಾದವನ್ನು ನೆನಪಿನಿಂದ ಓದಿ ತಮಗಿನ್ನೂ ನೆನಪಿರುವುದನ್ನು ಅನುಭವಿಸಿ ಖುಷಿಪಟ್ಟರು.
ಜಯಂತ್ ಈ ಹಂತದಲ್ಲಿ ಜಿ.ಬಿ.ಜೋಷಿಯವರ ಕುರಿತು ಪ್ರಸ್ತಾಪಿಸಿದರು. ಅವರ ಮತ್ತು ಬೇಂದ್ರೆಯವರ ನಡುವಿನ ಗುರು-ಶಿಷ್ಯ ಸಂಬಂಧವನ್ನು ಇಬ್ಬರೂ ಚರ್ಚಿಸಿದರು. ಗೆಳೆಯರ ಬಳಗ, ಕೀರ್ತಿನಾಥ ಕುರ್ತಕೋಟಿ ಮತ್ತು ಬೇಂದ್ರೆಯವರ ಸಂಬಂಧಗಳನ್ನು ನೆನೆದರು. ಕಾರ್ನಾಡ್ ತಾವು ಬೇಂದ್ರೆಯವರ ಬಗ್ಗೆ ತಯಾರಿಸಿದ ಸಾಕ್ಷ್ಯಚಿತ್ರದಲ್ಲಿ ಬೇಂದ್ರೆ ಕಡೆಗೆ ಒಂದು ಸಂದೇಶ ಓದಿದ್ದನ್ನು ನೆನಪಿಸಿ, ಅದನ್ನು ನಿಜವಾಗಿ ಬರೆದದ್ದು ಕುರ್ತಕೋಟಿ ಎನ್ನುವುದರೆಡೆಗೆ ಗಮನ ಸೆಳೆದರು. ಕೀರ್ತಿ ಬರೆದದ್ದನ್ನು ಬೇಂದ್ರೆ ಒಪ್ಪುತ್ತಿದ್ದರು ಎಂದರು. ಜಯಂತ್ ಸವೇಳೆಯಲ್ಲಿ ರಾಮಾನುಜನ್ ಹೇಳುತ್ತಿದ್ದಂತೆ ಬೇಂದ್ರೆಯವರು ಬರೆದ ಹಾಗೂ ಬರೆಯದ ಕವಿತೆಗಳೂ ಕುರ್ತಕೋಟಿಯವರಿಗೆ ತಿಳಿದಿರುತ್ತಿತ್ತು ಎಂದು ಆಶ್ಚರ್ಯಿಸಿದ್ದನ್ನು ಪ್ರಸ್ತಾಪಿಸಿದರು. ಅಷ್ಟೇ ಅಲ್ಲದೆ ಮಳೆ, ಕೊಡೆ, ಬೇಂದ್ರೆ, ಕುರ್ತಕೋಟಿ ಈ ಪ್ರತಿಮೆಗಳಿರುವ ಸಂಕೀರ್ಣ-ಪ್ರತಿಮೆಯೊಂದರ ಕುರಿತು ಏನೋ ಹೇಳಿದರು. ಕಾರ್ನಾಡ್ ಜಾಸ್ತಿ ಗಮನ ಕೊಡದೇ ಸ್ವಲ್ಪವೇ ನಕ್ಕು ಮುಂದಿನ ಮಾತಿಗೆ ಮುಂದುವರೆದದ್ದು ಕಂಡಿತು. ಆಗ ಮನೆಯಲ್ಲಿ ಮಕ್ಕಳು, ಸ್ವಲ್ಪ ಗಲಾಟೆ ಮಾಡಿದ್ದರಿಂದ ಆ ಕೆಲ ಕ್ಷಣಗಳು ಗಮನ ಮಕ್ಕಳೆಡೆಗೆ ಹರಿದು ಅವರನ್ನು ಸುಮ್ಮನಾಗಿಸಿದೆ. 'ನೋಡಿ ಅಲ್ಲಿ ಗಿರೀಶ್ ಕಾರ್ನಾಡ್ ಮಾತಾಡುತ್ತಿದ್ದಾರೆ' ಎಂದು ಅವರನ್ನೂ ಎಳೆದು ಕೂರಿಸಿದೆ.
ವಿವರಣೆ, ವಿಶ್ಲೇಷಣೆಯೆಂದಾಗ ಬೇಂದ್ರೆಯವರ 'ಪಾತರಗಿತ್ತಿ ಪಕ್ಕ' ಕವಿತೆಯ ಕಡೆಗೆ ಮಾತು ಚಿಮ್ಮಿತು. ಜಯಂತ್ ಮೈಸೂರಿನ ಜನ ಅದನ್ನು 'ಸ್ತ್ರೀ, ಸೂಳೆ' ಯೊಬ್ಬಳ ಕುರಿತಾದ್ದು ಎಂದು ಗಮನಿಸಿದ್ದು, ಆದರೆ ಬೇಂದ್ರೆ/ಕುರ್ತಕೋಟಿ ಮತ್ತು ಧಾರವಾಡದ ಇತರ ಕಡೆ ಅದು ಚಿಟ್ಟೆಗೆ ಸಂಬಂಧಿಸಿದ್ದು ಎಂದು ಹಠ ಹಿಡಿದದ್ದು, ಅದೊಂದು ಸಣ್ಣ ವಿವಾದವಾದ್ದೆಲ್ಲವನ್ನೂ ನೆನೆದರು. ಕಾರ್ನಾಡ್ ಈ ಸಂದರ್ಭದಲ್ಲಿ ಬೇಂದ್ರೆಯವರಲ್ಲಿದ್ದ ತುಂಟತನದ ಸ್ವಭಾವದ ಕಡೆಗೆ ಗಮನ ಸೆಳೆದರು. ತಮಗಂತೂ ಬೇಂದ್ರೆ ಅದನ್ನು 'ಸ್ತ್ರೀ, ಸೂಳೆ' ಕುರಿತಾಗಿ ಬರೆದದ್ದೆಂದೇ ಈಗಲೂ ಅನ್ನಿಸಿದೆ. ಕವಿತೆಯ ಧ್ವನಿ, ಬಳಸಿರುವ ಪದಗಳು, ಕವಿತೆ ಬೆಳೆಯುವ ರೀತಿ ನೋಡಿ ಎಂದರು. [ನನಗಂತೂ ಇದನ್ನು ಕೇಳಿ ಸಿಕ್ಕಾಪಟ್ಟೆ ರಿಲೀಫ್ ಆಯಿತು. ಈ ವಿವಾದ ನನ್ನನ್ನು ಬಹಳ ಕೀಳರಿಮೆಯಿಂದ ಬಳಲುವಂತೆ ಮಾಡಿತ್ತು, ಕಾವ್ಯದ ವಿಷಯದಲ್ಲಿ. ಕವಿತೆಗಳು ನನಗೆ ಗ್ರಹಿಕೆಗೆ ಸಿಗೋಲ್ಲ ಎನ್ನುವ ಭಯಕ್ಕೆ ಬಿದ್ದಿದ್ದೆ.] ಬೇಂದ್ರೆ ತುಂಬಾ ಸೆನ್ಸ್-ಷುಅಸ್ ಆದ ಕವಿ. ಆ ತೆರನಾದ್ದು ಕಂಬಾರರಲ್ಲಿ ಮಾತ್ರ ಈಗ ಕಾಣುತ್ತೇವೆ ಎಂದರು. [ಕಾರ್ನಾಡ್ ಸಮಕಾಲೀನರಿಗೆ ಅಂಜಲಿ ಅರ್ಪಿಸುವ ರೀತಿ ನೋಡಿ. ಅಲ್ಲದೇ ಕಂಬಾರ ಮತ್ತು ಬೇಂದ್ರೆ ಇಬ್ಬರಲ್ಲೂ ಗ್ರಾಮೀಣ, ಜಾನಪದದ ಪ್ರಭಾವ ಅಪಾರ ಎನ್ನುವುದೂ ಗಮನಾರ್ಹ.] ಬೇಂದ್ರೆಯವರ ಸ್ಫುರದ್ರೂಪಿತನವೂ ಪ್ರಾಸಂಗಿಕವಾಗಿ ಪ್ರಸ್ತಾಪವಾಯಿತು. ಮುಂದುವರೆದ ಕಾರ್ನಾಡ್ ಬೇಂದ್ರೆ 'ಸ್ತ್ರೀ'ಯ ವಿವಿಧ ಪ್ರತಿಮೆಗಳನ್ನು ಅನನ್ಯ ಎಂಬಂತೆ ತಮ್ಮ ಕವಿತೆಗಳಲ್ಲಿ ಚಿತ್ರಿಸಿದ್ದಾರೆ ಎಂಡರು. ವಿಷಯ ತಮಾಷೆಗೆ ಹೊರಳಿ, ಬೇಂದ್ರೆ 'ಪ್ರತಿದಿನವೂ ಸೂಳೆಯರ ಸಾಲೊಂದು, ಬ್ರಾಹ್ಮಣರ ಸ್ತ್ರೀ-ಯರ ಸಾಲೊಂದು ಧಾರವಾಡದಲ್ಲಿ ನಿಲ್ಲುತ್ತದೆ. ಸೂಳೆಯರು ಯಾವಯಾವ ಬ್ರಾಹ್ಮಣ ಗಂಡಸು ಯಾವ ಯಾವ ಸೂಳೆಯ ಮನೆಗೆ ಇಂದು ಹೋಗುತ್ತಾರೆ ಎಂದು ಲೆಕ್ಕ ಹಾಕುತ್ತಾರೆ. ಅಂತೆಯೇ ಬ್ರಾಹ್ಮಣ ಸ್ತ್ರೀಯರು ಯಾವ ಯಾವ ಮನೆಯ ಗಂಡಸು ಇಂದು ಯಾವ ಸೂಳೆಯ ಮನಗೆ ಹೋಗಬಹುದು ಎಂದು ಲೆಕ್ಕ ಹಾಕುತ್ತಾರೆ' ಎನ್ನುತ್ತಿದ್ದುದನ್ನು ಪ್ರಸ್ತಾಪಿಸಿದರು. ಇಬ್ಬರೂ ನಕ್ಕು ಮುಂದಿನ ವಿಷಯಗಳತ್ತ ನಡೆದರು.
ಈ ಎಲ್ಲಾ ವಿವರಗಳು ಸ್ವಾಭಾವಿಕವಾಗಿ ಬೇಂದ್ರೆಯವರ ಜೀವನಾಸಕ್ತಿಯನ್ನು ಮಧ್ಯಕ್ಕೆ ತಂದಿತು. ಅದಕ್ಕೆ ನಿದರ್ಶನವಾಗಿ ಕಾರ್ನಾಡ್ 'ಕಲ್ಪವೃಕ್ಷ ವೃಂದಾವನ...' ಪದ್ಯವನ್ನು ಓದಿ ಏನೆಲ್ಲ ವಿಷಯಗಳು ಪದ್ಯದಲ್ಲಿ ಬಂದಿವೆ ಎಂದು ಆಶ್ಚರ್ಯ ಪಟ್ಟು ಹರ್ಷಿಸಿದರು.
ಪಕ್ಕನೆ ವಿಷಯ ಹೊರಳಿ ಬೇಂದ್ರೆಯವರ ಪ್ರಭಾವದ ಪರಿಣಾಮಗಳೆಡೆ ಹೊರಟಿತು. ಜಯಂತ್ ಈ ಕುರಿತು ಪ್ರಸ್ತಾಪಿಸಿದರು. ಕಾರ್ನಾಡ್ ಸ್ಪಷ್ಟವಾಗಿ ಗೆಳೆಯರ ಬಳಾಗದ ಅನೇಕ ಕವಿಗಳ ಮೇಲೆ ಬೇಂದ್ರೆ ಪ್ರಭಾವ ಪ್ರತಿಕೂಲ/ಅಪಾಯಕಾರಿ ಪರಿಣಾಮ ಬೀರಿತು. ಬೇಂದ್ರೆಯವರ ಮುಂದೆ ಭಿನ್ನಾಭಿಪ್ರಾಯ ಬೆಳೆಸಿಕೊಳ್ಳಲಾಗದೇ ಹೋದವರು, ಹೆಚ್ಚು ಬೆಳೆಯದೇ ನಾಶವಾದರು. ಬೇಂದ್ರೆಯವರ ಒಂದು ಬಗೆಯ ಡಿಕ್ಟೇಟರ್ ಸ್ವಭಾವ ಮಿಕ್ಕವರನ್ನು ಅವನ್ನು ಅನುಕರಿಸಲು ಪ್ರೇರೇಪಿಸಿಬಿಟ್ಟಿತು ಎಂದರು. [ಈ ಹಂತದಲ್ಲಿ ನನಗೆ ಶಂ.ಬಾ. ಜ್ಞಾಪಕ ಬಂದು, ಅವರು ತಮ್ಮ ಬೆಳವಣಿಗೆಗೆ ಬೇಂದ್ರೆಯವರೊಡನೆ ಅಂತಹ ವಿರೋಧ ಸ್ಥಾಪಿಸಿಕೊಂಡರೋ ಅನ್ನಿಸಿತು. ಹಾಗೆಯೇ ಯಾವ ಗುಂಪಿಗೂ ಸೇರದೇ ಕಾರ್ನಾಡ್ ಒಬ್ಬಂಟಿಯಾಗಿ ನಿಂತದ್ದು ಕೂಡಾ ಜ್ಞಾಪಕ ಬಂತು. ಅದೆಲ್ಲಕ್ಕಿಂತಲೂ, ದಕ್ಷಿಣ ಕರ್ನಾಟಕದಲ್ಲಿ ಬಿ.ಎಮ್.ಶ್ರೀ ಆಗಲೀ, ಮಾಸ್ತಿಯವರಾಗಲೀ, ಟಿ.ಎಸ್.ವೆಂಕಣ್ಣಯ್ಯನವರಾಗಲೀ ಅಗಾಧ ಪ್ರತಿಭೆಗಳಾಗಿದ್ದೂ ತಮ್ಮ ಅಡಿಯಲ್ಲಿ ಮಿಕ್ಕವರು ನಾಶವಾಗದ ಹಾಗೆ ಬದುಕಿದ್ದು ಕೂಡಾ ಗಮನಾರ್ಹ ಅನ್ನಿಸಿದೆ.]
ಇದೇ ಸಂದರ್ಭದಲ್ಲಿ ಕಾರ್ನಾಡ್ ಬೇಂದ್ರೆಯವರಲ್ಲಿದ್ದ ತುಂಟತನ/ಕುಚೋದ್ಯವನ್ನು ಮತ್ತೆ ನೆನೆದು, ಅದು ತಮ್ಮ ಮೇಲೂ ಪ್ರಯೋಗವಾದ್ದನ್ನು ಪ್ರಸ್ತಾಪಿಸಿದರು. ಕಾರ್ನಾಡ್ ೧೬-ನೇ ವಯಸ್ಸಿನಲ್ಲಿ ತಮ್ಮ ಕವನವೊಂದನ್ನು ಬೇಂದ್ರೆಗೆ ತೋರಿಸಲು ಹೋದರಂತೆ. ಅದರ ತುಂಬಾ ಎಕ್ಸಿಸ್ಟೆನ್ಶಿಯಲಿಸಂ ಮುಂತಾದ ತತ್ವಜ್ಞಾನವೇ ತುಂಬಿತ್ತಂತೆ. ಅದನ್ನು ಓದಿ ಬೇಂದ್ರೆ ನಸುನಗುತ್ತಾ ಭಾಗವೊಂದನ್ನು ತೋರಿಸಿ 'ಇದನ್ನು ದಪ್ಪಕ್ಷರದಾಗೆ ಪ್ರಕಟಿಸು' ಎಂದಿದ್ದರಂತೆ. 'ಸದ್ಯ ನನಗೆ ಸ್ವಲ್ಪ ಬುದ್ಧಿಯಿತ್ತು ಹಾಗೆ ಮಾಡಲಿಲ್ಲ' ಎಂದು ಕಾರ್ನಾಡ್ ನಿರಾಳವಾಗಿ ನಕ್ಕರು. ಜಯಂತ್ ನಂತರ ಎಚ್ಚರ ತಪ್ಪಿ (ಅಥವಾ ಅತಿಯಾದ ಎಚ್ಚರದಿಂದ) 'ಆ ಮುಂದೆ ನೀವು ಪದ್ಯಗಳನ್ನೇ ಬರೆಯಲಿಲ್ಲ' ಎಂದರು. ಕಾರ್ನಾಡ್ 'ಅದಕ್ಕೆ ಬೇರೆ ಕಾರಣಗಳಾಯಿತು' ಎಂದು ಆ ಮಾತನ್ನು ಅಲ್ಲಿಗೇ ಮೊಟಕುಗೊಳಿಸಿ, ನಗುತ್ತಾ ಆ ಮಾತೇ ಬರಲಿಲ್ಲವೆಂಬಂತೆ 'ಮುಂದಿನ ವಿಷಯ' ಎಂದು ನಸು ನಕ್ಕು ನಾಚಿ ಕೂತರು. ಬೇಂದ್ರೆಯವರ ಕುಚೋದ್ಯದ ವಿಷಯಗಳು ಮುಂದುವರೆದು, ಅವರು ಕುಚೋದ್ಯದಿಂದ ಹಾಸ್ಯ ಮಾಡಿ ಬರೆದದ್ದನ್ನು ಕೆಲ ಸಾಹಿತಿಗಳು 'ಆಶೀರ್ವಾದ' ಎನ್ನುವಂತೆ ತಮ್ಮ ಪುಸ್ತಕದ ಮುನ್ನುಡಿಗಳಾಗಿ ಅಳಾವಡಿಸಿಕೊಂಡು ಪ್ರಕಟಿಸಿದ್ದನ್ನು ಕಾರ್ನಾಡ್ ನೆನೆದರು.
ಬೇಂದ್ರೆಯವರು ಪದಗಳನ್ನು ತಮ್ಮ ಕವಿತೆಗಳಲ್ಲಿ ಬಳಸುತ್ತಿದ್ದ ರೀತಿ ಪ್ರಸ್ತಾಪವಾಗಿ ಜಯಂತ್ 'ತುಂತುಂತುಂತುಂ...ಶರಣ' ದಲ್ಲಿನ ನಾಟಕೀಯ ಪ್ರಜ್ಞೆಯ ಕುರಿತು ಆಶ್ಚರ್ಯ ಪಟ್ಟರು. ಕಾರ್ನಾಡ್ ಅಗ 'ತಲೆದಂಡ' ಎನ್ನುವ ನಾಟಕವೊಂದನ್ನು ಬೇಂದ್ರೆ ಬರೆಯಲು ಬಯಸಿದ್ದರಂತೆ. ಅದಕ್ಕೋಸ್ಕರವೇ ಈ ಕವಿತೆ ಬರೆದಿದ್ದರಂತೆ ಎಂದು ಹೇಳಿ ತಮ್ಮ ನಾಟಕದ ಮೂಲ ಸ್ಫೂರ್ತಿ ಇಲ್ಲೇ ಸಿಕ್ಕಿದ್ದು ಎಂದು ಹೇಳಿದರು. ಮತ್ತೊಮ್ಮೆ ಬೇಂದ್ರೆಯವರನ್ನು 'ಒಳ್ಳೆಯ ನಟ' ಎಂದರು. ಜಯಂತ್ ಅವರ 'ಆಶುನಾಟಕ' ಪ್ರತಿಭೆಯನ್ನು ಪ್ರಸ್ತಾಪಿಸಿ ಅದರ ಕೆಲವು ನಿದರ್ಶನಗಳನ್ನು ವಿಷಯಕ್ಕೆ ತಂದರು. ಕಾರ್ನಾಡ್ ಹೆಚ್ಚು ವಿಷಯ ಬೆಳೆಸಲಿಲ್ಲ. ಜಯಂತ್ ಬೇಂದ್ರೆಯ 'ಟೂ' ಕವನ ಪ್ರಸ್ತಾಪಿಸಿ ಅವರ ಕವನಗಳಲ್ಲಿನ ನಾಟಕೀಯ ಅಂಶಗಳತ್ತೆ ಮತ್ತೆ ಹೊರಳಿದರು. ಆ ಕವನದಲ್ಲಿ ಭಾಷಾಪ್ರಯೋಗದ ನಾಟಕೀಯತೆ ಕುರಿತು ಇಬ್ಬರೂ ಒಂದೆರಡು ಮಾತಾಡಿದರು. ಈ ಹಂತದಲ್ಲಿ ಜಯಂತ್ 'ನಾಟಕಕಾರರಾಗಿ ಬೇಂದ್ರೆ' ಎಂಬ ವಿಷಯಕ್ಕೆ ಬಂದು ನಿಂತರು. ಕಾರ್ನಾಡ್ ಮತ್ತೆ ಸ್ಪಷ್ಟವಾಗಿ 'ಅವರು ಒಳ್ಳೆಯ ನಟರಿದ್ದರು. ಆದರೆ ಅವರರು ಒಳ್ಳೆಯ ನಾಟಕಕಾರರು ಎಂದು ನನಗನ್ನಿಸುವುದಿಲ್ಲ. ಕೆ.ವಿ.ಅಕ್ಷರ ಮುಂತಾದವರೆಲ್ಲಾ ಈ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಆದರೆ ನನಗೆ ಹಾಗನ್ನಿಸೋಲ್ಲ' ಎಂದರು.
ಮುಂದೆ 'ತುಘಲಕ್' ಕುರಿತು ಮಾತು ನಡೆಯಿತು. 'ತುಘಲಕ್' ಉದ್ಘಾಟನೆ ಧಾರವಾಡದಲ್ಲಿ ನಡೆದಾಗ ತುಂಬ ಪ್ರೀತಿಯಿಂದಲೇ ಬೇಂದ್ರೆ ಬಂದಿದ್ದರು. ಈ ಒಂದು ವಿಷಯದಲ್ಲಿ ಕಾರ್ನಾಡ್ ತಮ್ಮನ್ನು ಅದೃಷ್ಟಶಾಲಿ ಎಂದರು. ನವಿರಾದ ಹೆಮ್ಮೆ ಗಮನಕ್ಕೆ ಬರುತ್ತಿತ್ತು. ತುಘಲಕ್ ಓದಿದ್ದ ಬೇಂದ್ರೆ ಅದನ್ನು ತುಂಬಾ ಮೆಚ್ಚಿಕೊಂಡು ಹೊಗಳಿದ್ದರು. ಕಾರ್ನಾಡರನ್ನು ಮನಗೆ ಕರೆಸಿ ಹರಸಿದ್ದರು. ಈ ತೆರನಾಗಿ ಅವರು ಹೊಗಳಿ, ಮನೆಗೆ ಕರೆಸಿದ್ದು ಇಬ್ಬರನ್ನೇ ಒಬ್ಬರು ಕಾರ್ನಾಡ್ ಮತ್ತೊಬ್ಬರು ಪುಣೇಕರ್. ಪುಣೇಕರರ 'ಗಂಗವ್ವ ಗಂಗಾಮಾಯಿ' ಅವರಿಗೆ ತುಂಬಾ ಇಷ್ಟವಾಗಿತ್ತು ಎಂದರು.
ತುಘಲಕ್ ಬಿಡುಗಡೆ ಸಮಾರಭದಲ್ಲಿ ಧಾರವಾಡದಲ್ಲಿ ಒಂದು ಸಣ್ಣ ವಿವಾದವೂ ಆಗಿತ್ತು. ಗೋಕಾಕ್ 'ಮನೋಹರ ಗ್ರಂಥಮಾಲೆಗೆ' ಒಂದು ಪತ್ರ ಬರೆದಿದ್ದರು. ಅದಕ್ಕೆ ಉತ್ತರವನ್ನು ರಾಮ್ ಜೋಶಿ ಬರೆದಿದ್ದರು. ಆಗಿನ್ನೂ ಚಿಕ್ಕವರಾಗಿದ್ದ ರಾಮ್ ಜೋಷಿ ಪತ್ರ ಬರೆದರೆಂದು ಗೋಕಾಕ್ ಸಿಡಿಮಿಡಿಗೊಂಡಿದ್ದರು. ಉದ್ಘಾಟನೆಗೆ ಬರುವುದಿಲ್ಲವೆಂದಿದ್ದರು. ಇದು ಬೇಂದ್ರೆಯವರಿಗೆ ಅರ್ಧ ತಿಳಿದು [ಗೋಕಾಕ್-ಗೆ ಏನೋ ಅವಮಾನವಾಗಿದೆ ಎನ್ನ್ನು ರೀತಿಯಲ್ಲಿ] ತಾವೂ ಬರುವುದಿಲ್ಲವೆಂದು ಕೂತುಬಿಟ್ಟರು. ನಂತರ ಕುರ್ತಕೋಟಿಯವರ ಸಹಾಯದಿಂದ ಬೇಂದ್ರೆಯವರನ್ನು ಕಂಡು 'ಮೊದಲು ಪತ್ರ ಬರೆದದ್ದು ಗೋಕಾಕರೇ' ಎಂದಾಗ 'ಹೌದಾ, ಗೋಕಾಕ್-ನೇ ಮೊದಲು ಬರೆದದ್ದಾ, ಹಾಗಿದ್ರೆ ಬರತೇನೆ' ಎಂದು ತಕ್ಷಣ ತಯಾರಾದರು ಎಂದು ಕಾರ್ನಾಡ್ ವಿವರಿಸಿದರು. ಬೇಂದ್ರೆಯವರನ್ನು ಅನುಕರಿಸಿ ಕಾರ್ನಾಡ್ ಮಾತನಾಡಿದ ರೀತಿಯಲ್ಲಿ ತಮ್ಮ ಬಿಗುವನ್ನು ಸ್ವಲ್ಪ ಸಡಿಲಿಸಿದ್ದು ಗಮನಿಸದೇ ಇರುವಂತಿರಲಿಲ್ಲ. ಇದೇ ಸಂದರ್ಭದಲ್ಲಿ ಬೇಂದ್ರೆ ಪುಸ್ತಕಗಳ ಸಾಲಿನಲ್ಲಿ 'ತುಘಲಕ್'-ನ ಬಗ್ಗಿ ಬಗ್ಗಿ ಹುಡುಕುತ್ತಿದ್ದ ರೀತಿಯನ್ನೂ ಅಭಿನಯಿಸಿ ತೋರಿದ ಕಾರ್ನಾಡ್ ಒಂದರೆಘಳಿಗೆ ಮಗುವಾದರು.
ಮುಂದುವರೆದ ಕಾರ್ನಾಡ್ 'ಬೇಂದ್ರೆಯವರಿಗೆ ಬಹಳ ಬೇಗ ನೋವಾಗುತ್ತಿತ್ತು, ಆದ್ದರಿಂದ ಜಗಳಕ್ಕೆ ನಿಲ್ಲುತ್ತಿದ್ದರು' ಎಂದರು. ಸಾಮಾನ್ಯವಾಗಿ 'ಬೇಂದ್ರೆಯವರ ಜಗಳಗಂಟತನ ಕರ್ನಾಟಕದಲ್ಲಿ ವಿಶ್ವಪ್ರಸಿದ್ಧವಾಗಿದೆ. ಎಲ್ಲರೂ ಅದೊಂದು ಬಗೆಯ ಅವರ ಮೂಲಭೂತ ಸ್ವಭಾವ ಎನ್ನುವ ವಿಶ್ಲೇಷಣೆ ಅಥವಾ ಕಾಮ್ಪ್ರೊಮೈಸ್-ಗಷ್ಟೇ ಸೀಮಿತಗೊಂಡಿದ್ದರೆ, ಕಾರ್ನಾಡ್ ಸ್ವಲ್ಪ ಆಳಕ್ಕಿಳಿದು 'ಅವರಿಗೆ ನೋವಾಗುತ್ತಿತ್ತು' [ಯಾವ ಕಾರಣಕ್ಕಾಗಿಯಾದರೂ ಸರಿಯೇ] ಎಂದಿದ್ದು ನನಗೆ ತುಂಬಾ ಮೆಚ್ಚಿಗೆಯಾಯಿತು. ಕಾರ್ನಾಡ್ ಯಾಕೆ ನಮ್ಮ ಅತ್ಯುತ್ತಮ ನಾಟಕಕಾರರಾಗಿದ್ದಾರೆ ಎಂಬುದಕ್ಕೊಂದು ನಿದರ್ಶನ ಅಥವಾ ಒಳನೋಟ ಸಿಗುತ್ತದೆ ಇಲ್ಲಿ. [ಇದೇ ಸಂದರ್ಭದಲ್ಲಿ ಅನಂತಮೂರ್ತಿಗಳು ತಮ್ಮ ಒಂದು ಪ್ರಬಂಧದಲ್ಲಿ ವರ್ತಕರೊಬ್ಬರ ತುಂಬಾ ಸಹಜವಾದ ಮಾತಿನಿಂದ ನೊಂದ ಬೇಂದ್ರೆ ಸಿಡಿಮಿಡಿಗೊಂದು ತುಂಬಾ ರೇಗಾಡಿದ್ದನ್ನು, ಅದನ್ನೆಲ್ಲಾ ಒಂದಿಷ್ಟೂ ಬೇಜಾರಿಲ್ಲದೆ ಕೇಳಿಸಿಕೊಂಡು 'ಅಶೀರ್ವಾದ' ಎಂಬಂತಿದ್ದ ವರ್ತಕರನ್ನು ನೆನೆದು 'ನನಗೆ ತುಂಬಾ ಮೆಚ್ಚುಗೆಯಾದರೂ' ಎಂದು ಅನಂತಮೂರ್ತಿ ಪ್ರಸ್ತಾಪಿಸಿರುವುದು ಜ್ಞಾಪಕಕ್ಕೆ ಬರುತ್ತಿದೆ.]
ತುಂಬಾ ಜವಾಬ್ದಾರಿಯಿಂದ ಕಾರ್ನಾಡ್ ಮತ್ತೊಂದು ಸೂಕ್ಷ್ಮ ವಿಷಯ ಪ್ರಸ್ತಾಪಿಸಿದರು. ಬೇಂದ್ರೆಗೆ ತಾವೆಲ್ಲಿ ಹುಚ್ಚರಾಗಿಬಿಡಬಹುದೋ ಎನ್ನುವ ಆತಂಕವಿತ್ತು, ಮತ್ತು ಅವರ ಜೀನಿಯಸ್-ನ ಅಂಶದ ಮೂಲವೂ ಅದರಲ್ಲೆಲ್ಲೋ ಇತ್ತು, ಹತ್ತಿರದವರಲ್ಲಿ ತಮ್ಮ ಮನೆತನದಲ್ಲಿ ಹುಚ್ಚುತನದ ಎಳೆಯೊಂದಿದ್ದನ್ನು ಹೇಳಿಕೊಂಡಿದ್ದರು ಎನ್ನುವ ಮಾತನ್ನು ಕಾರ್ನಾಡ್ ಪ್ರಸ್ತಾಪಿಸಿದರು. ಇದನ್ನು ಚುಟುಕಾಗಿ ಹೇಳಿ ಹೆಚ್ಚು ಹೊತ್ತು ವಿಷಯದಲ್ಲಿ ನಿಲ್ಲದೇ ಕಾರ್ನಾಡ್ ಚಕ್ಕನೆ ಸಹಜ ಮುಂದುವರಿಕೆಯ ವಿಷಯಗಳತ್ತೆ ನೆಗೆದರು. ಜಯಂತರೂ ಅಷ್ಟೇ ಜವಾಬ್ದಾರಿಯಿಂದ ವಿಷಯವನ್ನು ಎಳೆಯದೇ ಮುಂದುವರೆದರು. [ಎಡಿಟಿಂಗ್ ಕೂಡಾ ಇಲ್ಲಿ ಮೆಚ್ಚಬೇಕಾದ್ದು.]
ಕಾರ್ನಾಡ್ ತಾವು ಬೇಂದ್ರೆ ಮನೆಗೆ ಹೋದಾಗಲೆಲ್ಲಾ ಕುರ್ತಕೋಟಿಯವರನ್ನು ಕರೆದುಕೊಂಡು ಹೋಗುತ್ತಿದ್ದುದನ್ನು ನೆನೆದರು. ಅವರ ಮಾತಿನ ಓಘ ತಡೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಏನಾದರೂ ವಿಷಯ ತೆಗೆದು 'ಇದಕ್ಕೆ ನೀನೇನಂತಿ' ಎಂದುಬಿಟ್ಟರೆ ಕೈಕಾಲಾಡುತ್ತಿರಲಿಲ್ಲ. ಅವರನ್ನು ತಹಬದಿಗೆ ತರಲು ಕುರ್ತಕೋಟಿಗೆ ಮಾತ್ರ ಸಾಧ್ಯವಾಗುತ್ತಿತ್ತು ಎಂದರು. ಇದೆಲ್ಲಾ ಹೇಳುವಾಗ ಕಾರ್ನಾಡ್ ಅನೇಕ ವರ್ಷಗಳ ಹಿಂದಿನವರಂತೆ ಕಾಣುತ್ತಿದ್ದರು.
ಬೇಂದ್ರೆಯವರ ಸ್ವಾಭಿಮಾನ, ಲೌಕಿಕತನಕ್ಕೆ ವಿಷಯ ನಡೆಯಿತು. ಬೇಂದ್ರೆಗೆ ಸರ್ಕಾರ ಮಾಸಾಶನ ಪ್ರಕಟಿಸಿದಾಗ 'ಏನು ಇದು ಬಾಯ್ಮುಚ್ಚಿಕೊಂಡಿರಲಿಕ್ಕೋ ನನಗೆ' ಎಂದು ಕೋಪಗೊಂಡಿದ್ದರಂತೆ. ನಂತರ ಗೋಕಾಕ್ ಎಲ್ಲ ವಿವರಿಸಿ ಅವರನ್ನು ಒಪ್ಪಿಸಿದ್ದಾಯ್ತು. ಅದನ್ನು ತಮ್ಮ ಮಗ ವಾಮನರಿಗೆ 'ನನ್ನ ಪರವಾದ ಮನೆಯ ಎಲ್ಲಾ ಖರ್ಚು ಇದರಲ್ಲೇ ನಡೆಯಬೇಕು' ಎಂದಿದ್ದರಂತೆ.
ನಾನು ತುಂಬಾ ಕಾಯುತ್ತಿದ್ದ ಬೇಂದ್ರೆ ಕತೆ-ದಂತ ಕತೆಗಳೆಡೆಗೆ ಕೊನೆಗೂ ಪಯಣ ಬೆಳೇಯಿತು. ಕುಳ್ಳಗಿದ್ದ ಬೇಂದ್ರೆ ಕಾಣುತ್ತಿದ್ದಿಲ್ಲ, ತಮ್ಮ ದೊಡ್ಡ ದನಿಯಿಂದ ರಸ್ತೆಯಲ್ಲೆಲ್ಲಾ ಕೇಳುತ್ತಿದ್ದರು ಎನ್ನುವ ಮಾತುಗಳು ಬಂತು. ಕಾರ್ನಾಡ್ ಜಯಂತರ ತಂದೆ ಗೌರೀಶರು ಹೇಳುತ್ತಿದ್ದ ಕತೆಯೊಂದನ್ನು ಹೇಳಿದರು. ಉತ್ತರ ಕನ್ನಾಡದ ಹಳ್ಳಿಯೊಂದರಲ್ಲಿ ಗೌರೀಶ್ ಹೋಗುತ್ತಿದ್ದಾಗ ಇಬ್ಬರು ಹಳ್ಳಿಗರು ಬೇಂದ್ರೆಯವರ ಪದ್ಯಗಳ ಕುರಿತು ಗಟ್ಟಿಯಾಗಿ ಮಾತನಾಡುತ್ತಾ ಹೋಗುತ್ತಿದ್ದರು. ಖುಷಿ, ಆಶ್ಚರ್ಯಗಳಿಂದ ಗೌರೀಶರು 'ಪರವಾಗಿಲ್ಲ, ನಮ್ಮ ಹಳ್ಳಿಯವರೇ ಬೇಂದ್ರೆ ಕಾವ್ಯ ಚರ್ಚಿಸುತ್ತಾರೆ' ಎಂದು ಮೆಚ್ಚುಗೆ, ಹೆಮ್ಮೆಗಳಿಂದ ಅವರೆಡೆ ನಡೆದು ಅವರ ಪರಿಚಯ ಕೇಳಲಾಗಿ ಒಬ್ಬರು ಕುರ್ತಕೋಟಿ ಮತ್ತೊಬ್ಬರು ಸ್ವತಃ ಬೇಂದ್ರೆಯವರೇ ಆಗಿದ್ದರಂತೆ.
ಬೇಂದ್ರೆ ಮತ್ತು ನವ್ಯ ಸಾಹಿತ್ಯದ ಕುರಿತ ಪ್ರಸ್ತಾಪವಂತೂ ಆಗಲೇಬೇಕಿತ್ತು. ಅಡಿಗರು ಮತ್ತು ಬೇಂದ್ರೆ ಒಟ್ಟಾಗಿ ನಿಂತು ಒಮ್ಮೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಬಂದಾಗ ಇಬ್ಬರ ಮಧ್ಯೆ ಕೆಲವರಿದ್ದದ್ದನ್ನು ಪ್ರತಿಮೆಯಾಗಿ ಬಳಸಿ ಬೇಂದ್ರೆ ಮತ್ತು ಅಡಿಗರು ಒಬ್ಬರಿಗೊಬ್ಬರು ಹತ್ತಿರವಾಗೇ ಇದ್ದಾರೆ, ಆದರೆ ಇಬ್ಬರ ಮಧ್ಯೆ ಬೇರೆಯವರು ವಿನಾಕಾರಣ ಬಂದು ದೂರವಿದ್ದಾರೆ ಎನ್ನುವ ಭ್ರಮೆ ಹುಟ್ಟಿಸುತ್ತಿದ್ದಾರೆ ಎಂದರಂತೆ ಎಂದು ಜಯಂತ್ ಪ್ರಸ್ತಾಪಿಸಿದರು. ಅದನ್ನು ಬೆಳೆಸಿದ ಕಾರ್ನಾಡ್ ಡಿ.ಆರ್.-ರನ್ನು ಕರೆದುಕೊಂಡು ತಾವು ಬೇಂದ್ರೆ ಮನೆಗೆ ಹೋದದ್ದನ್ನು ನೆನೆದು ಅಲ್ಲಿ ಆಡಿಗರ 'ಭೂಮಿಗೀತ' ಪುಸ್ತಕ ನೋಡಿ ಕುತೂಹಲದಿಂದ ತೆರೆದಾಗ ಅದರಲ್ಲಿ ಅನಂತಮೂರ್ತಿಯವರ ಮುನ್ನುಡಿಯ ಕೆಳಗೆ 'ಇವ ಅನಂತಮೂರ್ತಿಯಲ್ಲ .........' ಎಂದು ಬರೆದಿದ್ದನ್ನು ನೆನೆದರು. ಅದು ಅನಂತಮೂತಿ-ನೋ ಅಥವಾ ಅನಂತ-ಮತಿ-ನೋ ಸರಿಯಾಗಿ ಕೇಳಲಿಲ್ಲ, ಯಾವುದೇ ಆಗಿದ್ದರೂ ಅದು ಹೊಗಳಿಕೆಯೇ ಅನ್ನಿಸುತ್ತದೆ. ಕಾರ್ನಾಡ್ ಮತ್ತೆ ತಮ್ಮ ಬಿಗುವನ್ನು ಕ್ಷಣವೊಂದರಲ್ಲಿ ಬಿಟ್ಟು ಮತ್ತೆ ಪಡೆದು ಯಥಾ ಸ್ಥಿತಿ-ಗೆ ಮರಳಿದ್ದರು.
ಕಾರ್ಯಕ್ರಮದ ಕೊನೆಯ ಹಂತದಲ್ಲಿ ತಮ್ಮನ್ನು ಮತ್ತೆ ಮತ್ತೆ ಸೆಳೆದ ಬೇಂದ್ರೆಯವರ ಪದ್ಯವೊಂದನ್ನು ಓದಿ ಎಂದಾಗ ಕಾರ್ನಾಡರು 'ಊರ ತುದಿ' ಪದ್ಯ ನೆನೆದರು. ಕುರ್ತಕೋಟಿಯವರ ಪುಟಬಂಗಾರ ಒಂದಷ್ಟು ಸಾಲುಗಳನ್ನೋದಿ ನೋಡಿ ನನಗೆ ಇಷ್ಟೆಲ್ಲಾ ಬರೆದಿದ್ದಾರೆ ಎಂದು ಗೊತ್ತಿರಲಿಲ್ಲ, ಹಾಗನ್ನಿಸಲೂ ಇಲ್ಲ. ನನಗೆ ನನ್ನದೇ ಆದ ವಿವರಣೆಗಳಿವೆ ಎಂದು ಹೇಳಿದರು. ಕಾರ್ನಾಡ್ ಪದ್ಯ ಓದಿದ ರೀತಿ ಯಾವತ್ತಿನಂತೆ ಅನನ್ಯವಾಗಿತ್ತು ಎಂದು ಬೇರೆ ಹೇಳಬೇಕಿಲ್ಲ.
'ನಮಸ್ಕಾರ' ಎಂದು ಇಬ್ಬರೂ ಕಾರ್ಯಕ್ರಮ ಮುಗಿಸಿದರು.