ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, January 01, 2017

ಬೆಂಗಳೂರಿನ ಪದ್ಯಗಳು

ಟ್ರಾಫಿಕ್ಕು

ಸಿಗ್ನಲ್ಲಿಗೆ ಸಿಲುಕುವುದಿಲ್ಲ
ಹಸಿರಿಗೆ ಕಾಯುವುದಿಲ್ಲ
ಕೊಚ್ಚಿ ಹರಿಯುವುದೇ ನಿಜದ ರೀತಿ
ಹೆದ್ದಾರಿಗಳಲ್ಲಿ ಪ್ರಚಂಡ ಪ್ರವಾಹ 
ಸಂದಿಗೊಂದಿಗಳಲ್ಲಿ ನುಗ್ಗಿ ತುಳುಕಿ
ನಿಂತರೂ ಹರಿಯುತ್ತಿರುವ ಭಾಸ
ಮನೆಯಲ್ಲಿದ್ದರೂ ಮನಹೊಕ್ಕು
ವಿಶ್ರಾಂತರನ್ನು ವಿಚಲಿಸಿ ಚಲಿಸಿ
ಬೆದಬೆದರಿ ಹರಿದು ಭಯ ಮೂಡಿಸುತ್ತಾ
ನಿಲ್ಲಬಾರದೆಂಬ ಕಪ್ಪು ಪ್ರವಾಹವಿದು
ಈ ಭಯದ ಕಾಲುವೆಗಳಲ್ಲಿ 
ಮುಳುಗೇಳುತ್ತಲಿದೆ
ಬೆಂಗಳೂರು