ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, June 17, 2006

ಗಿರೀಶ್ ಕಾಸರವಳ್ಳಿಯವರ 'ಮನೆ': ನೆಲೆಯ ಹುಡುಕಾಟ: ಭಾಗ ೨



ಹಿಂದಿನ ಭಾಗದ ಲಿಂಕ್: http://jeevishivu.blogspot.com/2006/06/blog-post.html

ಪೋಲೀಸರು ಬರುತ್ತಾರೆ. ಶೆಡ್ಡಿನಲ್ಲಿರುವವರನ್ನು ಹೆದರಿಸಿ ಹೊರಕರೆಯುತ್ತಾರೆ. ಮೊದಲ ಬಾರಿಗೆ ಅವರ ಮುಖ ಕ್ಯಾಮರಾದಲ್ಲಿ ಕಾಣುತ್ತದೆ. ಈವರೆಗೆ ಮುಸುಕುಧಾರಿಗಳಾದ ವಿಲನ್‍ಗಳಂತಿದ್ದ ಅವರೆಲ್ಲಾ ಕೂಲಿಯವರು, ಬಡ ಕಾರ್ಮಿಕರು. ರಾಜಶೇಖರ ಮತ್ತು ಗೀತ ಅವರನ್ನೆಲ್ಲಾ ರಾಕ್ಷಸಂತೆ ಕಲ್ಪಿಸಿಕೊಂಡಿರುತ್ತಾರೆ. ಆದರೆ ಅವರು ನಿಸ್ಸಹಾಯಕರು. ಕೆಲ ಗಂಡಸರನ್ನು ಪೋಲೀಸರು ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಾರ್‍ಎ. ಹೊಸದೊಂದು ಮುಖದ ದರ್ಶನವಾಗುತ್ತದೆ ಇಬ್ಬರಿಗೂ. ಗೀತಳಿಗೆ ಸಹ್ಯವೆನ್ನಿಸುವುದಿಲ್ಲ. ಅಪರಾಧೀ ಭಾವ ಕಾಡುತ್ತದೆ. ಒಬ್ಬನ ಹೆಂಡತಿ ಗೀತ-ರಾಜಶೇಖರನಿಗೆ ಶಾಪ ಹಾಕುತ್ತಾಳೆ. ವಠಾರದ ಜನೂ ಕಾರ್ಮಿಕರಿಗೆ ಅನುಕಂಪ ತೋರಿಸುತ್ತಾರ್‍ಎ. ಶೆಡ್-ನ ಕೆಲಸ ಅಂದಿಗೆ ನಿಲ್ಲುತ್ತದೆ. ಸಂಜೆಯ ಮೇಲೆ ಆ ಶೆಡ್-ನಲ್ಲಿ ಮಗುವೊಂದು ಕಾಣುತ್ತದೆ. ಜೈಲಿಗೆ ಹೋದವನ ಮಗುವಿರಬೇಕು. ಗೀತಳ ಮುಖದಲ್ಲಿ ವಿಷಾದ ಭರಿತ ಆಶ್ಚರ್ಯ ಕಾಣುತ್ತದೆ. ಆ ಷೆಡ್ಡನ್ನು ಗ್ರಹಿಸುವಲ್ಲಿ ಅಲ್ಲಿ ಮಗುವೊಂದಿರಬಹುದಾದ, ಜೀವನ ನಡೆದಿರಬಹುದಾದ ಸಾಧ್ಯತೆಯೇ ಅವರಿಗೆ ಹೊಳೆದಿರುವುದಿಲ್ಲ.

ಆ ರಾತ್ರಿ ರಾಜಶೇಖರ ನಿಶ್ಯಬ್ದತೆಯನ್ನು ತೀವ್ರವಾಗಿ ಅನುಭವಿಸಲು ಪ್ರಯತ್ನಿಸುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ, ಬೋರಾಗುತ್ತಿದೆ ಶಬ್ದ ಬೇಕೆನ್ನುತ್ತಾನೆ. ಹಳ್ಳಿಯಲ್ಲೂ ಮನೆಯವರ ಮೂಗು ತೂರಿಸುವಿಕೆ, ಸಿಟಿಯಲ್ಲಿ ಶೆಡ್-ನ ತೊಂದರೆ ಇವುಗಳಿಂದ ನಿಶ್ಯಬ್ದತೆ, ಮೌನವನ್ನೇ ಕಾಣದ ರಾಜಶೇಖರ ಮೊದಲ ಬಾರಿಗೆ ಅದು ಸಿಕ್ಕಾಗ ಹೆಚ್ಚು ಹೊತ್ತು ಅನುಭವಿಸುವ ಪಕ್ವತೆ ಗಳಿಸಿಕೊಂಡಿಲ್ಲ, ಮೌನವನ್ನು ಸಾಧಿಸಲಾಗುವುದಿಲ್ಲ. ಆದರೆ ಗೀತಳಿಗೆ ಬೇರೆಯ ಕಾರಣಕ್ಕೆ ಈ ನಿಶ್ಯಬ್ದ ಅಸಹನೀಯವಾಗಿದೆ. ಅದನ್ನು ಸರಿಯಾದ ಮಾರ್ಗದಿಂದ ಗಳಿಸಿಕೊಂಡಿಲ್ಲ ಎಂದು. ಬೋರ್ ನಿವಾರಣೆಗೆ ಕಾಮಕ್ಕೆ ಯತ್ನಿಸುವ ರಾಜಶೇಖರನಿಗೆ, ಅದಕ್ಕೆ ಸಿದ್ಧಳಿಲ್ಲದ ಗೀತಳಿಂದ ಮೌನ ನಿರಾಕರಣೆ. ರಾಜಶೇಖರನಿಗೆ ಅದೊಂದು ಎಲ್ಲೂ ಆಗಬಹುದಾದ ಕ್ರಿಯೆ. ಆದರೆ ಗೀತಳಿಗೆ ಅದು ತಾನು ದಕ್ಕಿಸಿಕೊಂಡ ಜಾಗದಲ್ಲಿ ಮಾತ್ರ ಸಾಧ್ಯಾವಾಗಬಹುದಾದ್ದು. ಇವೆಲ್ಲಾ ಸೇರಿ ಗೀತಳಿಗೆ ಒಂಟಿತನ ಕಾಡಿದರೆ, ರಾಜಶೇಖರನಿಗೆ ಶಬ್ದ ಬೇಕು ಎನ್ನಿಸುವ ಹಾಗಾಗುತ್ತದೆ. ಬೋರ್ ನೀಗಿಸಲು ರಾಜಶೇಖರ ಕೆಟ್ಟ ಜೋಕುಗಳ ಮೊರೆ ಹೋಗುತ್ತಾನೆ, ಆಗುವುದಿಲ್ಲ. ಜಾಗ ಸಾಂಸ್ಕೃತಿಕವಾಗಿ ತಮ್ಮದಾಗಿಲ್ಲ, ಇದನ್ನು ನೈತಿಕ ಶ್ರಮದಿಂದ ಗಳಿಸಿಲ್ಲ. ಇಲ್ಲಿ ಯಾವುದೂ ಸಾಧ್ಯವಾಗುವುದಿಲ್ಲ.

ಕೆಲ ದಿನಗಳ ನಂತರ ಮತ್ತೆ ಶೆಡ್ಡಿನಲ್ಲಿ ಸ್ವಲ್ಪವೇ ಶಬ್ದ ಕೇಳುತ್ತದೆ. ರಾಜಶೇಖರ ಶೆಡ್ಡಿನೊಳಗೆ ಹೋಗಿ ನೋಡುತ್ತಾನೆ. ಶೆಡ್-ನ ಬಾಗಿಲು ಹಾಕಿಕೊಂಡು ರಾತ್ರಿ ಕೆಲಸ ಮಾಡುತ್ತಿರುತ್ತಾರೆ. ಕೆಲಸಗಾರ್‍ಅರೆಲ್ಲಾ ರಾಕ್ಷಸರಂತೆ ಕಾಣುತ್ತಾರ್‍ಎ ಅವನಿಗೆ. ಹೆದರಿ ವಾಪಸ್ಸು ಬಂದವನೆ ಮಾರನೇಯ ದಿವಸ ಹೆಂಡತಿಗೆ ಇನ್ಸ್‍ಪೆಕ್ಟರನ್ನು ಕಂಡು ವಿಷಯ ತಿಳಿಸುವಂತೆ ಹೇಳುತ್ತಾನೆ, ಗೀತಳಿಗೆ ಇಷ್ಟವಿಲ್ಲದಿದ್ದರೂ. ರಾಜಶೇಖರನಿಗೆ ಗೊತ್ತು ಜೊಲ್ಲುಸುರಿಸುವ ಇನ್ಸ್‍ಪೆಕ್ಟರ್ ಗೀತಳ ಮಾತನ್ನು, ಚಿಕ್ಕಮ್ಮನ ಮಾತನ್ನು ಕೇಳುತ್ತಾನೆ ಎಂದು. ರಾಜಶೇಖರ ಚಿಕ್ಕಮ್ಮ, ಇನ್ಸ್‍ಪೆಕ್ಟರ್-ರ ಸಹಾಯ ಕೇಳಬಾರದ ಸಂವೇದನೆಗಳನ್ನು ಕಳೆದಿದ್ದಾನೆ.

ನಿರೀಕ್ಷಿಸಿದ್ದಂತೆ ಇನ್ಸ್‍ಪೆಕ್ಟರ್ ಅವರನ್ನು ಗಂಟು ಮೂಟೆ ಕಟ್ಟುವಂತೆ ಮಾಡುತ್ತಾನೆ. ವಠಾರದವರೆಲ್ಲಾ ಗಂಡ ಹೆಂಡಿರನ್ನು ಬಯ್ಯುತ್ತಾರೆ. ಅತ್ತೂ ಕರೆದು ರಂಪ ಮಾಡಿ ಕಾರ್ಮಿಕರು ಹೊರಹೋಗುತ್ತಾರೆ. ಗೀತಳಿಗೆ 'ನಾವು ಪಡಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚೇನೋ' ಅನ್ನಿಸುತ್ತದೆ. ವಠಾರದವರೆಲ್ಲಾ ವಿಷಯ ಮರೆತರೂ ಅವಳಿಗೆ ಸಾಧ್ಯವಾಗಲ್ಲ. ಪಾಟಿಯ ಮನೆಯಲ್ಲಾಗುವ ಒಂದು ಶುಭ ಸಮಾಚಾರವನ್ನು ಅನುಭವಿಸುವುದಕ್ಕೂ ಸಾಧ್ಯವಾಗುವುದಿಲ್ಲ.

ಇದಕ್ಕೆಲ್ಲಾ ಕಳಶವಿಟ್ಟಂತೆ ಇನ್ಸ್ಪೆಕ್ಟರ್ ಅದೇ ಜಾಗವನ್ನು ತನ್ನ ಅಳಿಯನಿಗೆ, ಒಂದು 'ಕಂಪ್ಯೂಟರ್ ಗೇಮ್ ಪಾರ್ಲರ್' ನಡೆಸುವುದಕ್ಕಾಗಿ ಕೊಡಿಸಿರುತ್ತಾನೆ. ಇದನ್ನರಿತ ಗಂಡ-ಹೆಂಡಿರು ಶಾಕ್ ಆಗುತ್ತಾರ್‍ಎ. ಮನೆಯ ಮಾಲೀಕ ಬೀಗುತ್ತಾನೆ. ಉದ್ಘಾಟನಾ ಸಮಾರಂಭದಲ್ಲಿ ಕಾಣುವ ಇಂಗ್ಲೀಷ್, ನ್ಯೂಯಾರ್ಕ್, ಸ್ಟೇಚೂ ಆಫ಼್ ಲಿಬರ್ಟಿ -ಯ ಪ್ರತಿಮೆಗಳು ಬಲಿಷ್ಟವಾದ, ಪರಕೀಯ ತೊಂದರೆಗಳು ದೇಶೀಯವಾದ ತೊಂದರೆಗಳ ಜಾಗದಲ್ಲಿ ಬಂದು ಕೂರುವುದನ್ನು ತೋರಿಸುತ್ತದೆ. ರಾಜಶೇಖರನ ಕ್ರಿಯೆಯ ನಿಷ್ಪ್ರಯೋಜಕತನವನ್ನು ಪ್ರತಿನಿಧಿಸುತ್ತದೆ. ತಮಾಷೆಯೆಂದರೆ, ರಾಜಶೇಖರನಿಗೆ ಪಾರ್ಲರ್ ಇಷ್ಟವಾಗದಿದ್ದರೂ ಗೀತಳಿಗೆ ಇಷ್ಟವಾಗುತ್ತದೆ. ಒಂದೆರಡು ಬಾರಿ ರಾಜಶೇಖರ ಮನೆಗೆ ಫೋನ್ ಮಾಡಿದಾಗ ಗೀತ ಇರುವುದಿಲ್ಲ, ಚಿಕ್ಕಮ್ಮನ ಜೊತೆ ಹೋಗಿರುತ್ತಾಳೆ. ರಾಜಶೇಖರನಿಗೆ ಸಹ್ಯವಾಗುವುದಿಲ್ಲ. ಗಂಡ ಹೆಂಡಿರ ನಡುವೆ ವಿರಸ ತರುತ್ತದೆ. ಶೆಡ್ ಇದ್ದಾಗ ಕೇವಲ ಕಿರಿ ಕಿರಿಯಿತ್ತು ಆದರೆ ಈಗ ವಿರಸ ಮೂಡಿರುತ್ತದೆ.

ಹೀಗಿರುವಾಗ ಒಮ್ಮೆ ಚಿಕ್ಕಮ್ಮ ಮತ್ತು ಇನ್ಸ್‍ಪೆಕ್ಟರ್ ಬರುತ್ತಾರೆ, ಯಾವುದೋ ಒಂದು ಹುಟ್ಟು ಹಬ್ಬದ ಸಮಾರಂಭಕ್ಕೆ ಕರೆದೊಯ್ಯಲು. ರಾಜಶೇಖರನಿಗೆ ಇಷ್ಟವಾಗುವುದಿಲ್ಲ. ಚಿಕ್ಕಮ್ಮನಿಗೆ ಗಂಡ ಹೆಂಡಿರ ಮಧ್ಯೆ ಮೂಡಿರುವ ವಿರಸ ಅನುಭವಕ್ಕೆ ಬರುತ್ತದೆ. ಗೀತಳನ್ನು ಕಳಿಸಿಕೊಡು ಎಂದಾಗ ಅವಳಿಗೆ ಇಷ್ಟವಿದ್ದರೆ ಹೋಗಲಿ ಎನ್ನುತ್ತಾನೆ. ಗೀತ ಬರಲು ಒಪ್ಪುವುದಿಲ್ಲ. ಸೋತಂತಾಗುವ ಚಿಕ್ಕಮ್ಮ ಮತ್ತೆ ತನ್ನ ಕಥೆ, ತನ್ನ ಅದೃಶ್ಟವನ್ನು ಹಳಿಯುತ್ತಾಳೆ. ಅಂತರಪಿಶಾಚಿಯಾದಂತೆ ಅನ್ನಿಸುತ್ತದೆ ಎನ್ನುತ್ತಾಳೆ. ಕರುಣೆಯಿಂದ ಗೀತ ಅವಳ ಜೊತೆ ಹೋಗಲು ಒಪ್ಪುತ್ತಾಳೆ. ತೀವ್ರವಾದ ಈ ದ್ರ್‍ಇಶ್ಯದಲ್ಲಿ ಚಿಕ್ಕಮ್ಮನ ಮಾತುಗಳಿಂದ, ಇನ್ಸ್‍ಪೆಕ್ಟರನ ಪ್ರತಿಕ್ರಿಯೆಯಿಂದ ಇಬ್ಬರೂ ನೆಲೆಗೋಸ್ಕರ ತಡಕಾಡುತ್ತಿರುವವರು ಎನ್ನುವುದು ಅನುಭವಕ್ಕೆ ಬರುತ್ತದೆ.

ಸಮಾರಂಭದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದ ಚಿಕ್ಕಮ್ಮ, ಉಪಾಯವಾಗಿ ಗೀತಳನ್ನು ಪಕ್ಕದ ಕ್ರೈಸ್ತರ ಸ್ಮಶಾನಕ್ಕೆ ಕರೆದೊಯ್ಯುತ್ತಾಳೆ. ಮತ್ತೆ ತನ್ನ ಕಥೆಯನ್ನೆಲ್ಲಾ ಹೇಳುತ್ತಾಳೆ, ಗೀತಳಿಂದ ಅನುಕಂಪ ನಿರೀಕ್ಷಿಸುತ್ತಾಳೆ. ಗೀತಳ ಸಂಪೂರ್ಣ ಅನುಕಂಪ ಸಿಗದಾದಾಗ ಅವಳನ್ನೆ ಹಂಗಿಸುವಂತೆ 'ನಿನಗಾದರೂ ಒಂದು ಮನೆ ಎಲ್ಲಿದೆ ಅದು ರಾಜಶೇಖರನ ಮನೆ, ನನಗೆ ಒಳ್ಳೆಯದೊ ಕೆಟ್ಟದೋ ನನ್ನದಾದ ಮನೆ' ಎಂದು ಗೆಲ್ಲಲು ಪ್ರಯತ್ನಿಸುತ್ತಾಳೆ. ಚಿಕ್ಕಮ್ಮನ ಮನಸ್ಥಿತಿಯ ಅತ್ಯುತ್ತಮ ಚಿತ್ರಣ ಇಲ್ಲಿ ಕಾಣುತ್ತೇವೆ. ಗೀತಳಿಗೆ ಸಿಟ್ಟು ಬಂದು ವಾಪಸ್ಸು ಹೋದರೂ ಅವಳಿಗೆ ಅದು ಸ್ವಲ್ಪ ಮಟ್ಟಿಗೆ ನಿಜ ಎನ್ನಿಸಿರುತ್ತದೆ.

ಈ ನಡುವೆ ಬರುವ ಒಂದು ದೃಶ್ಯ ಬದಲಾವಣೆಯನ್ನು ಸಿನಿಮೀಯವಾಗಿ ಹಿಡಿಯುತ್ತದೆ. ಗೋಡಿಗಳಲ್ಲಿ ಇರುವೆಯನ್ನು ಕಾಣುವ ರಾಜಶೇಖರ ಅದನ್ನು ನಿವಾರಿಸಲು ಗೋಡೆಗೆಲ್ಲಾ ಅರಿಶಿನದ ಪೇಸ್ಟನ್ನು ಬಳೆಯುತ್ತಾನೆ. ಇಲ್ಲಿಯವರೆಗೆ ಮಸುಕಾದ ಬಿಳಿಯ ಹಿನ್ನೆಲೆ ಈಗ ಅರಿಶಿನದ ಬಣ್ಣಕ್ಕೆ ತಿರುಗಿ ಪರಿಸ್ಥಿತಿಯ ತೀವ್ರತೆಯನ್ನು ಅತ್ಯುತ್ತಮವಾಗಿ ಸೆರೆ ಹಿಡಿಯುತ್ತದೆ. ರಾಜಶೇಖರ ಈ ಹಿನ್ನೆಲೆಯಲ್ಲಿ ಒಬ್ಬನೇ ಕೂತಿರುವ ದೃಶ್ಯ ಚಿತ್ರದ ಸಾರ್ಥಕ ಕ್ಷಣಗಳಲ್ಲೊಂದು.

ರಾಜಶೇಖರನ ಮಾನಸಿಕ ಕ್ಷೋಭೆ ಜಾಸ್ತಿಯಾಗುತ್ತದೆ. ರಜೆ ಕೇಳಲು ಹೋದಾಗ ಬಾಸ್ 'ನಿಮ್ಮ ತೊಂದರೆ ಏನೆಂದರೆ ಪಟ್ಟಣದ ಕಂಫ಼ರ್ಟ್ಸ್ ಹಳ್ಳಿಯ ಸುಖ, ಎರಡೂ ಬೇಕು ನಿಮಗೆ' ಎನ್ನುತ್ತಾನೆ. ಗಂಡ ಹೆಂಡಿರ ವಿರಸ ಮುಂದುವರೆಯುತ್ತದೆ. ಮನೆಯ ಮಹಡಿಯ ಮೇಲೆ ಗಂಡ ಹೆಂಡಿರಿಗೆ ಮಾತು ಕತೆಯಾಗುತ್ತದೆ. ರಾಜಶೇಖರ ತನ್ನ ಕೀಳರಿಮೆ ಪ್ರದರ್ಶಿಸುತ್ತಾನೆ. ಗೀತ 'ನಂಬಿಕೆ ಮುಖ್ಯ, ಸಂಬಂಧಗಳನ್ನು ಪೂರ್ತಿಯಾಗಿ ಉಳಿಸಿಕೊಳ್ಳುವುದು ಮುಖ್ಯ. ನಿಮಗೆ ಎಲ್ಲವೂ ಕೇವಲ ಲಾಭಕ್ಕೆ ಮುಖ್ಯ' ಎನ್ನುತ್ತಾಳೆ. ಚಿಕ್ಕಮ್ಮನನ್ನು ಅನುಕಂಪದಿಂದ ಕಂಡು ಅವಳಿಗೆ ಸ್ನೇಹ ತೋರುವಂತೆ ನಾಟಕವಾಡುತ್ತಾ ಗೀತ ತನಗೆ ತಾನೆ ಮೋಸ ಮಾಡಿಕೊಂಡಿರುತ್ತಾಳೆ. ಆದರೆ ರಾಜಶೇಖರನಿಗೆ ಅವಳು ನಾಟಕವಾಡುತ್ತಿರುವುದು ತನ್ನ ಜೊತೆ ಎನ್ನಿಸುತ್ತದೆ. ಪರಿಸ್ಥಿತಿಯ ಗೋಜಲನ್ನು, ಬದಲಾದ ಬದುಕನ್ನು ದಕ್ಕಿಸಿಕೊಳ್ಳಲಾರದೆ ತೊಳಲಾಡುವುದನ್ನು ಈ ದೃಶ್ಯ ಹೇಳುತ್ತದೆ. ಮಹಡಿಯಲ್ಲಿನ ಪ್ರಖರ ಬೆಳಕಲ್ಲಿ, ವ್ಯಾಯಾಮದ ಸಲಕರಣೆಗಳ ಮಧ್ಯದಲ್ಲಿ ನಡೆಯುತ್ತದೆ ಈ ಮಾತುಕತೆ. ಪರಿಸ್ಥಿತಿಯನ್ನು ನೇರವಾಗಿ ಮುಖಾ ಮುಖಿಯಾಗುವುದಕ್ಕೆ ಬೆಳಕು ಮತ್ತು ಸಲಕರಣೆಗಳು ಪ್ರತಿಮೆಯಾಗುತ್ತವೆ. ಗೀತ ಬೆಳಕಲ್ಲಿ ನಿಲ್ಲುತ್ತಾಳೆ. ರಾಜಶೇಖರ ಮಾತ್ರ ನಿಲ್ಲಲಾರದೆ ಹೋಗುತ್ತಾನೆ. ಗೀತಳಿಗೆ ಈಗ ಹಳ್ಳಿಯ ಮನೆಯ ನೆನಪಾಗುತ್ತದೆ. ಇಬ್ಬರಿಗೂ ತಮ್ಮ ಬಗೆಗೆ ಸ್ವಲ್ಪ ಸ್ಪಷ್ಟವಾಗುತ್ತದೆ.

ರಾಜಶೇಖರ 'ಇನ್ಸ್~ಪೆಕ್ಟರ್ ಮತ್ತು ಚಿಕ್ಕಮ್ಮ ಇವರ ನೆರ್‍ಅಳು' ಇರುವ ಯಾವ ಕಡೆಯಲ್ಲೂ ನಾನು ಇರುವುದಿಲ್ಲ ಎನ್ನುವ ಸ್ಪಷ್ಟ ನಿಲುವು ತಳೆಯುತ್ತಾನೆ. ಚಿತ್ರ ಅಂತಿಮ ಹಂತ ತಲುಪುತ್ತದೆ. ಮನೆಯ ಮಾಲೀಕನನ್ನು ಎಲ್ಲರಿಗೂ ಆಶ್ಚರ್ಯವಾಗುವಂತೆ 'ಶೆಡ್-ನವರ ವಿಳಾಸ' ಕೇಳುತ್ತಾನೆ. ಶೆಡ್ ನವರ ಜೊತಿಗೆ ಗಲಾಟೆಯ ಸಂದರ್ಭದಲ್ಲಿ ಅವರು 'ನಿಮಗೆ ಬೇರೆ ಮನೆ ಬೇಕಾದರೆ ಹುಡುಕಿಸಿ ಕೊಡುತ್ತೇವೆ' ಎಂದು ಅವರಂದ ಮಾತು ರಾಜಶೇಖರನಿಗೆ ಜ್ಞಾಪಕಕ್ಕೆ ಬರುತ್ತದೆ. ಗೀತ ಹೇಳುವ ಹಾಗೆ ಎಲ್ಲರನ್ನೂ ಬಳಸಿಕೊಳ್ಳುವ ರಾಜಶೇಖರ ಇಲ್ಲಿ ಶೆಡ್-ನರವನ್ನು ಸಹಾಯ ಕೇಳಲು ಹಿಂಜರಿಯುವುದಿಲ್ಲ. ಹಾಗೆಯೇ ಜೀವನದ ಸಂಕೀರ್ಣತೆಯ ಅನುಭವವಾಗುತ್ತದೆ. ಯಾರು ತನಗೊಮ್ಮೆ ಬೇಡವಾಗಿದ್ದರೋ ಅವರ ಸಹಾಯವೇ ಇಂದು ಬೇಕಾಗಿದೆ. ಯಾರ ಸಹಾಯವೂ ಇಲ್ಲದೆ ಬದುಕುತ್ತೇವೆ ಎನ್ನುವ (ಆಧುನಿಕ?) ಅಹಂಕಾರವನ್ನೂ ಇಲ್ಲಿ ನಿರ್ದೇಶಕ ವಿಡಂಬನೆಗೆ ಗುರಿ ಮಾಡುತ್ತಿದ್ದಾನೆಯೇ? ಕನಿಷ್ಟ ಪಕ್ಷ ನಾವು ನಮ್ಮ ಅವಲಂಬನೆಗಳನ್ನು ಗುರುತಿಸುತ್ತಿದ್ದೇವೆಯೇ? ಹಾಗಿದ್ದರೆ ಮಾತ್ರ ಮಾನವೀಯ ಬಾಳು ಸಾಧ್ಯ ಎಂದು ನಿರ್ದೇಶಕ ಹೇಳುತ್ತಿದ್ದಾನೆಯೇ?

ರಾಜಶೇಖರ ಆ ವಿಳಾಸವನ್ನು ಹುಡುಕುತ್ತಾ ಹಿರಡುತ್ತಾನೆ. ದಾರಿಯಲ್ಲಿ ಒಬ್ಬ ಒಂದು ಬಂಡಿಯ ಮೇಲೆ ಒಂದೇ ಒಂದು ಹಳದಿ ಬಣ್ಣದ ಡ್ರಮ್ ಹೇರಿಕೊಂಡು, ಕಷ್ಟದಿಂದ ಗಾಡಿಯನ್ನು ನಿಯಂತ್ರಿಸುತ್ತಾ ಬರುತ್ತಾನೆ. ಹಿಂದೆ ಇದೇ ತೆರನಾದ ಬಂಡಿಯೊಂದು ಇದೇ ಬಣ್ಣದ ಅನೇಕ ಡ್ರಮ್-ಗಳನ್ನು ಹೇರಿಕೊಂಡು ರಾಜಶೇಖರನನ್ನು ರಾಕ್ಷಸ ರೀತಿಯಲ್ಲಿ ಬೆಚ್ಚಿ ಬೀಳಿಸಿರುತ್ತದೆ, ಆ ಶಬ್ದವನ್ನು ತಡೆಯದಾಗುತ್ತಾನೆ. ಆದರೆ ಇಂದು ಅದೇ ಬಂಡಿಯನ್ನು ಎಳೆಯುವವ ನಿಸ್ಸಹಾಯಕನಂತೆ ಕಾಣುತ್ತಾನೆ. ಗಾಡಿಯವನ ಕಷ್ಟ ಅರಿವಿಗೆ ಬಂದಿರುತ್ತದೆ. ಅದರ ಶಬ್ದ ರಾಜಶೇಖರನನ್ನು ಹಿಂಸಿಸುವುದಿಲ್ಲ. ರಾಜಶೇಖರನಿಗೆ ಅದು ತನ್ನದಾಯಿತೆ ಅಥವ ಅದಕ್ಕಿಂತ ದೊಡ್ಡದಾದ ತೊಂದರೆಯೊಂದನ್ನು ಅನುಭವಿಸುತ್ತಿರುವುದರಿಂದ ಅದು ಚಿಕ್ಕದಾಯಿತೆ? ನಮ್ಮದೇ ಆದ ಭೌತಿಕವಾದ ತೊಂದರೆಯೊಂದನ್ನು ನಿವಾರಿಸಲು ಹೋಗಿ, ಹೊರಗಿನಿಂದ ಮತ್ತೊಂದು ಭೌತಿಕವಾದ ಹಾಗೂ ಸಾಂಸ್ಕೃತಿಕ ತೊಂದರೆ ಆಹ್ವಾನಿಸಿಕೊಂಡೆವೆ? ಮನೆಯ ಚಿಕ್ಕ ಭೂತವನ್ನೋಡಿಸಲು ಹೊರಗಿನಿಂದ ದೊಡ್ಡ ಭೂತವನ್ನು ಆಹ್ವಾನಿಸಿದೆವೆ? ನಾವು ಯಾವುದನ್ನು ಅಭಿವೃದ್ಧಿ ಎಂದು ಇಂದು ಕರೆಯುತ್ತೇವೋ ಅದರ ಬಗ್ಗೆ ನಿರ್ದೇಶಕ ಇಲ್ಲಿ ಅಣಕಿಸುತ್ತಿದ್ದಾನೆಯೇ? ಈ ಎಲ್ಲಾ ಆಲೋಚನೆಗಳಿಗೆ ಪ್ರತಿಮೆಯಾಗಿ ಚಿತ್ರ ಇಲ್ಲಿ ನಿಲ್ಲುತ್ತದೆ. ಗಾಢವಾದ ಸಿನಿಮೀಯ ಅನುಭವವನ್ನು ಚಿತ್ರ ಇಲ್ಲಿ ಕೊಡುತ್ತದೆ.

ಆ ಶೆಡ್ ನಲ್ಲಿನ ಜನರ ವಿಳಾಸ ಒಂದು ಸ್ಲಮ್-ನದ್ದು ಎಂದು ತಿಳಿದು ರಾಜಶೇಖರ ಮತ್ತಷ್ಟು ಆಶ್ಚರ್ಯಚಕಿತನಾಗುತ್ತಾನೆ. ಸ್ಲಮ್-ಗೆ ಹೋದಾಗ ಅವನಿಗೆ ಮತ್ತೊಂದು ವಿಶ್ವರೂಪ ದರ್ಶನವಾಗುತ್ತದೆ. ಶೆಡ್-ನವರು ವಾಸವಾಗಿರುವ ಸ್ಲಮ್, ಬುಲ್ಡೋಜ಼ರ್ ಒಂದರ ಅಡಿಗೆ ಸಿಕ್ಕು ನಿರ್ನಾಮವಾಗುತ್ತಿರುತ್ತದೆ. ಆಘಾತಗೊಂಡ ರಾಜಶೇಖರ ಅಲ್ಲೇ ನಿಂತು ನೋಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಹಳದಿ ಬಣ್ಣದ ಆ ಬುಲ್ಡೋಜ಼ರ್ ಹತ್ತಿರ ಬರುತ್ತದೆ. ಅದು ಅವನದ್ದೇ ಕಂಪನಿಯಿಂದ ತಯಾರಾದ ಬುಲ್ಡೋಜ಼ರ್ ಆಗಿರುತ್ತದೆ. ಈ ಒಂದು ಆಯಾಮದ ಕುರಿತು ಯೋಚಿಸಿಯೇ ಇರದ ರಾಜಶೇಖರನಿಗೆ ಭಯಂಕರ ಆಘಾತವಾಗುತ್ತದೆ. ತನ್ನ ಕೆಲಸದ ಬಗ್ಗೆ ಮಿತವಾದ ಹೆಮ್ಮೆಯಿರುವ ರಾಜಶೇಖರನಿಗೆ ಅದರ ಧ್ವಂಸಾತ್ಮಕ ಆಯಾಮದ ಅಲೋಚನೆಯೇ ಇರುವುದಿಲ್ಲ. ಹಳದಿ ಬಣ್ಣದ ಬುಲ್ಡೋಜ಼ರ್ ಡ್ರಮ್-ಗಳಿಗಿಂತಾ ಹೆಚ್ಚು ಶಕ್ತಿಶಾಲಿ. ನಾವೆಲ್ಲಾ ನಡೆಸುವ ಕ್ರಿಯೆಗೆ ಅದೆಷ್ಟು ಲಯದ ಶಕ್ತಿ ಇರುತ್ತದೆ ಎನ್ನುವುದನ್ನು ನಾವು ಗಮನಿಸುವುದಿಲ್ಲ ಎನ್ನುವುದನ್ನು ಇಲ್ಲಿನ ದೃಶ್ಯ ತೀವ್ರವಾಗಿ ಬಿಂಬಿಸುತ್ತದೆ. ಯಾರನ್ನು ನಾವು ಕ್ರಿಮಿನಲ್ಲುಗಳಂತೆ ನೋಡುತ್ತೇವೋ ಅವರು ನಿಜಕ್ಕೂ ನಿಸ್ಸಹಾಯರಾಗಿದ್ದು, ಅದಕ್ಕಿಂತ ಕ್ರಿಮಿನಲ್ ಶಕ್ತಿಗಳು ನಮ್ಮ ಕಣ್ಣಿಗೆ ಕಾಣದೆ ನಮ್ಮನ್ನೇ ಬಳಸಿ ಕಾರ್‍ಯ ಸಾಧಿಸುತ್ತಿದ್ದಾವೋ, ಇಂತಹ ಅದೆಷ್ಟು ಪರಕೀಯ ಶಕ್ತಿಗಳು ಈಗ ನಮ್ಮಲ್ಲಿ ಪ್ರವೇಶ ಪಡೆಯುತ್ತಿದ್ದಾವೋ? ಜಾಗತೀಕರಣದ ನೇರ ಪ್ರಯೋಜನ ಪಡೆಯುತ್ತಿರುವವರನ್ನು ಈ ದೃಶ್ಯ ಹಂಗಿಸುವಲ್ಲಿ, ದಶಕಕ್ಕಿಂತಲೂ ಹಿಂದೆ ನಿರ್ಮಿತವಾದ ಈ ಚಿತ್ರ ಇಂದಿಗೆ ಕೂಡ ಪ್ರಸ್ತುತವಾಗಿಬಿಡುತ್ತದೆ. ನಿರ್ದೇಶಕ ಕೇವಲ ದೃಶ್ಯಗಳ ಸಹಾಯದಿಂದ ಈ ಎಲ್ಲ ಪ್ರಶ್ನೆಗಳನ್ನೇಳಿಸುವಲ್ಲಿ ಗೆದ್ದಿದ್ದಾರೆ, ಕಲಾತ್ಮಕತೆ ಮೆರೆದಿದ್ದಾರ್‍ಎ. ಕಡೆಯ ಈ ಕೆಲ ಕ್ಷಣಗಳು ತಮ್ಮ ತೀವ್ರತೆಯಿಂದ ರಾಜಶೇಖರನನ್ನು ಹಾಗೂ ವೀಕ್ಷಕನನ್ನು ಆವರಿಸಿಕೊಳ್ಳುತ್ತವೆ.

ಈ ದುರಂತವನ್ನನುಭವಿಸುವ ರಾಜಶೇಖರ ನಿಜ ಮನುಷ್ಯನಾಗುವ ಸಾಧ್ಯತೆಯಿದೆ, ಎನ್ನುವಲ್ಲಿಗೆ ಚಿತ್ರ ಮುಗಿಯುತ್ತದೆ.

ಚಿತ್ರದ ನಿಜವಾದ ಶಕ್ತಿ ಅದರ ಚಿತ್ರಕತೆ. ಅದಕ್ಕೆ ಛಾಯಾಗ್ರಹಣ ಮತ್ತು ಸಂಕಲನ ಪೂರಕವಾಗಿ ಕೆಲಸ ಮಾಡಿದೆ. ಆಶಯ, ಅದಕ್ಕೆ ಪೂರಕವಾದ ಪ್ರತಿಮೆಗಳ ಕಲ್ಪನೆ, ಅದರ ಅನುಕ್ರಮಣವಾದ ಜೋಡಿಕೆ, ಪಾತ್ರಗಳ ಪರಿಕಲ್ಪನೆ, ಯಾರು ಯಾವುದನ್ನು ಪ್ರತಿನಿಧಿಸುತ್ತಾರೆ, ದೃಶ್ಯಗಳು ಎಲ್ಲಿ ರಭಸವಾಗಿರಬೇಕು, ತೀವ್ರವಾಗಿರಬೇಕು, ಚಿತ್ರದ ವೆಗ ಏಶ್ಟಿರಬೇಕು ಇವೆಲ್ಲವನ್ನೂ ಅತಿಯದ ಅಚ್ಚುಕಟ್ಟುತನದಿಂದ ನಿರ್ವಹಿಸಲಾಗಿದೆ. ಚಿತ್ರದಲ್ಲಿ ಮಂಚ ಒಂದು ಪಾತ್ರವೇ ಆಗಿ ಚಿತ್ರದ ಕಲಾತ್ಮಕತೆಯನ್ನು ಹೆಚ್ಚಿಸುತ್ತದೆ.

ಈ ಹಿಂದೆ ಪ್ರಸ್ತಾಪಿಸಿದ ಮಂಚ ತೆರೆಯ ಮೇಲೆ ಬರುವಾಗಿನ ದೃಶ್ಯಗಳು ಚಿತ್ರಕಥೆಯ ಆಶಯವನ್ನು ಸಂಪೂರ್ಣವಾಗಿ ಬಿಂಬಿಸುತ್ತವೆ. ತಮ್ಮ ಮನೆಯ ಜೀವನವನ್ನು ರಾಜಶೇಖರ ಅನುಭವಿಸುವುದು ಮಂಚದ ಮೇಲೆಯೇ. ತಮ್ಮ ಸುಖ-ದುಃಖ, ಅಪನಂಬಿಕೆ, ಸರಸ-ವಿರಸ, ಕಿರಿ ಕಿರಿ, ಸಮಾಧಾನ, ಕಾಮ, ಹಿಂಸೆ, ನಾಚಿಕೆ, ಅವಮಾನ - ಏನಾದರೂ ಅವರು ಅದನ್ನು ತೀವ್ರವಾಗಿ ಅನುಭವಿಸುವುದು ಆ ಮಂಚದ ಮೇಲೆ. ಅಲ್ಲಿನ ಎಲ್ಲಾ ದೃಶ್ಯಗಳು ತುಂಬಾ ಆಳವಾಗಿ ಆಲೋಚಿತವಾಗಿದ್ದು, ಕ್ಯಾಮರಾದ ಕೋನ, ಬೆಳಕು, ಅವರು ಕುಳಿತ ಅಥವಾ ಮಲಿಗಿರುವ ಭಂಗಿಗಳು ಚಿತ್ರದ ಆ ಹಂತದ ಆಶಯವನ್ನು ಸಂಪೂರ್ಣವಾಗಿ ಬಿಂಬಿಸುತ್ತವೆ. ಚಿತ್ರದೆಲ್ಲೆಡೆ ಕ್ಯಾಮರಾ ಚಿತ್ರದ ಒಂದು ಪಾತ್ರವೇನೋ ಎನ್ನುವಷ್ಟರ ಮಟ್ಟಿಗೆ ಸಂದರ್ಭದ ಒಳಗಡೆ ನಿಂತು ಕೆಲಸ ಮಾಡುತ್ತದೆ. ದೃಶ್ಯಗಳು ತೀವ್ರವಾಗಿ ನಮಗೆ ಅನುಭವವಾಗುವಂತೆ ಮಾಡುತ್ತದೆ. ಅರಿಶಿನದ ಗೋಡೆಯ ಹಿನ್ನೆಲೆಯಲ್ಲಿ ರಾಜಶೇಖರನ ದೃಶ್ಯವಂತೂ ರಾಮಚಂದ್ರರ/ಗಿರೀಶರ ಅತ್ಯುತ್ತಮ ಕೆಲಸಗಳಲ್ಲೊಂದು ಎನ್ನಬಹುದು.

ಕೆಲವೇ ದೃಶ್ಯಗಳಲ್ಲಿ ಬರುವ ರೋಹಿಣಿ ತುಂಬಾ ಗಮನ ಸೆಳೆಯುತ್ತಾರೆ. ಪ್ರೇಕ್ಷಕರ ಅನುಕಂಪಕ್ಕೆ ನೇರವಾಗಿ ಸಿಗುವ ಪಾತ್ರ ಇದು. ಸಿಟ್ಟು, ನಿಸ್ಸಹಾಯಕತೆ, ಛಲ, ಜಿದ್ದು, ಕಪಟ, ಅಸೂಯೆ, ಪ್ರೀತಿ ಎಲ್ಲವನ್ನೂ ಅಚ್ಚುಕಟ್ಟಾಗಿ, ನಿಯಂತ್ರಣದಿಂದ ನಿರ್ವಹಿಸಿದ್ದಾರ್‍ಎ. ತೀವ್ರತೆಯಿದೆ. ದೇವಸ್ಥಾನದಲ್ಲಿ ಚಿಕ್ಕಮ್ಮ ಅನುಭವಿಸುವ ದುಃಖದಲ್ಲಿನ ಅವರ ಅಭಿನಯ ಕನ್ನಡ ಚಿತ್ರಗಳಲ್ಲಿನ ಅತ್ಯುತ್ತಮ ಕ್ಷಣಗಳಲ್ಲಿ ಕೆಲವು.

ರಾಜಶೇಖರನ(ನಾಸೀರ್) ಪಾತ್ರಕ್ಕಿಂತಾ ಆಳವಾದ ಕಷ್ಟವಾದ ಪಾತ್ರ ಗೀತಾಳದ್ದು (ದೀಪ್ತಿ). ನಾಸೀರ್-ರ ಪಾತ್ರ ಕಡೆಯ ತನಕ ಒಂದು ಹಾದಿಯಲ್ಲಿ ಹೋಗಿ ಕಡೆಯಲ್ಲಿ ನಿಜವಾದ ಬೆಳವಣಿಗೆಯನ್ನು ಕಾಣುತ್ತದೆ. ಕಡೆಯ ಕ್ಷಣಗಳು ಮಾತ್ರ ನಾಸೀರ್-ರ ಅಭಿನಯಕ್ಕೆ ಸವಾಲಾಗುತ್ತವೆ. ಇಡೀ ಚಿತ್ರದಲ್ಲಿ ಒಮ್ಮೆಯೂ ನಾಸೀರ್ ಅನಗತ್ಯವಾದ ಒಂದು ನಡೆ ನಡೆದಿಲ್ಲ. ಆದರೆ, ನಾಸೀರ್-ರ ಧ್ವನಿ-ಗೆ ಒಗ್ಗಿಹೋಗಿರುವ ನಾವು, ರಾಮಕೃಷ್ಣರ ಧ್ವನಿಯಲ್ಲಿ ನಾಸೀರ್-ರನ್ನು ಹುಡುಕುವುದು ಸ್ವಲ್ಪ ಕಿರಿ-ಕಿರಿ ಉಂಟು ಮಾಡುತ್ತದೆ.

ಗೀತಾಳ (ದೀಪ್ತಿ) ಪಾತ್ರ ಅನೇಕ ಏರಿಳಿತ ಕಾಣುತ್ತದೆ. ಪ್ರಬುದ್ಧತೆ, ನಿಸ್ಸಹಾಯಕತೆ, ಸಂವೇದನಾಶೀಲತೆ, ಗಟ್ಟಿಯಾದ ಬೇರಿನ ಸಾಂಸ್ಕೃತಿಕ ಪ್ರಜ್ಞ್ನೆ, ಮುಗ್ಧತೆ, ಅವಮಾನ, ತಾಯ್ತನ - ಎಲ್ಲವನ್ನೂ ಅನುಭವಿಸುವ ಪಾತ್ರ ಇದು. ದೀಪ್ತಿ ಅಚ್ಚುಕಟ್ಟಾಗಿ ನಿರ್ವಹಿಸಿ ಚಿತ್ರದ ಅತ್ಯುತ್ತಮ ನಟರಾಗಿ ಹೊರಹೊಮ್ಮುತ್ತಾರೆ. ಆದರೆ, ಮತ್ತೆ, ಇವರ ಧ್ವನಿಗೆ ಪರಿಚಿತರಾದ ನಮಗೆ ವೈಶಾಲಿಯ ಧ್ವನಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.

ಚಿತ್ರದ ಮತ್ತೊಬ್ಬ ಹೀರೋ ಹಿನ್ನೆಲೆ ಸಂಗೀತ. ಅತಿಯಾಗಿ ನಮ್ಮ ಗಮನ ಸೆಳೆಯದೆ, ಚಿತ್ರದ ಆಶಯಕ್ಕೂ ಧಕ್ಕೆಯೂ ಬಾರದಂತೆ, ದೃಶ್ಯಗಳು ಹೇಳದಿರುವುದನ್ನು ತಾನೂ ಹೇಳದೆ, ಚಲನ ಚಿತ್ರದಲ್ಲಿ ಹಿನ್ನೆಲೆ ಸಂಗೀತದ ಪಾತ್ರವೇನು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದೆ. ಆದರೆ, ಟೈಟಲ್ ಕಾರ್ಡ್ ಜೊತೆ ಬರುವ ಸಂಗೀತ ಮಾತ್ರ ನನ್ನನ್ನು ದಿಕ್ಕುತಪ್ಪಿಸಿತು. ಆದರೆ ಚಿತ್ರದಾದ್ಯಂತ ಕೇಳಿಬರುವ ಹಿನ್ನೆಲೆ ಸಂಗೀತದ ಬಗ್ಗೆ ಹಾಗೆ ಹೇಳುವಂತಿಲ್ಲ.

ಕೆಲವೇ ಕೆಲವೆಡೆ, ಮಾತುಗಳು ಚಿತ್ರದ ಆಶಯವನ್ನು ಅಗತ್ಯಕ್ಕಿಂತಾ ಜಾಸ್ತಿ ಒತ್ತಿ, ದೃಷ್ಯದ ತೀವ್ರತೆಯನ್ನನುಭವಿಸಲು ಅಡ್ಡಿಯಾಗುತ್ತದೆ, ಕಲಾತ್ಮಕತೆಯನ್ನು ಕಡಿಮೆಯಾಗಿಸುತ್ತದೆ.

ಚಿತ್ರದ ಮೂಲ ಆಶಯ ಮನುಷ್ಯನ 'ನೆಲೆ ಕಂಡುಕೊಳ್ಳುವ' ಪ್ರಯತ್ನದ ವಿಶ್ಲೇಷಣೆಯಿರಬಹುದೇ? ಇದನ್ನು ಮೂಲವಾಗಿಟ್ಟುಕೊಂಡು ಮನುಷ್ಯನ ಚಲನಶೀಲತೆ, ದುರಾಸೆ, ಸ್ವಾತಂತ್ರ್ಯದ ತುಡಿತ, ಅದರ ಕುರಿತಾದ ಸ್ಪಷ್ಟವಾದ ಪರಿಕಲ್ಪನೆಯ ಅಭಾವ, ಹುಡುಕಾಟ, ಅದಕ್ಕೆ ತೆರಬೇಕಾದ ಬೆಲೆ, ಸಾಂಸ್ಕ್ರ್‍ಇತಿಕ ಆಘಾತಗಳು, ರಾಜಕೀಯ, ಸಮಯಸಾಧಕತನ, ಗಟ್ಟಿಯಾದ ಬೇರಿನ ಅವಶ್ಯಕತೆ, ಕ್ರಿಯಾಶೀಲತೆಯ ಅರ್ಥವಂತಿಕೆ ಹಾಗೂ ಅರ್ಥಹೀನತೆ-ಧ್ವಂಸಾತ್ಮಕ ಗುಣ, ಮೇಲ್ನೋಟಕ್ಕೆ ಒಂದೇ ಮುಖ ಕಾಣುವ ಪರಿಸ್ಥಿತಿಯಲ್ಲೇ ಅನೇಕ ಮುಖಗಳಿರುವುದು, ಇವುಗಳೆಲ್ಲದರ ವಿರೋಧಾಭಾಸ, ಇವೆಲ್ಲಾ ಸೇರಿ ಉಂಟಾಗುವ ಗೋಜಲುಗಳು, ಬೆಳವಣಿಗೆ, ಸಂಕೀರ್ಣವಾದ ಮನುಷ್ಯ ಸಂಬಂಧಗಳು, ಜೀವನ - ಇವೆಲ್ಲವುದರ ಕಲಾತ್ಮಕ ಚಿತ್ರಣವನ್ನು ನಿರ್ದೇಶಕ ಕೊಡುತ್ತಾ ಜೊತೆಗೆ ಈ ಮೊದಲೇ ವಿವರಿಸಿರುವಂತೆ ಕೆಲವು ಪ್ರಶ್ನೆಗಳನ್ನೇಳುವಂತೆ ಮಾಡಿ, ಸೂಚ್ಯವಾಗಿ ಅವುಗಳ ಕುರಿತಾದ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯನ ಬಗೆಗೆ ಒಳನೋಟಗಳನ್ನು ಕೊಡುತ್ತಲೇ, ಕೆಲವು ಮುಖ್ಯವಾದ ಸಾಮಾಜಿಕ ವಿಚಾರಗಳನ್ನೆತ್ತುತ್ತಾರೆ. ಅವು ಯಾವುವೂ ಕಲಾತ್ಮಕತೆಗೆ ಒಂದಿಷ್ಟೂ ಭಂಗ ತರದಿರುವುದರಿಂದ, ಕಾಲಾಂತರದಲ್ಲಿ ಹೊಸ ಪ್ರಶ್ನೆಗಳನ್ನೇಳಿಸುವ ಸೃಷ್ಟಿಶೀಲತೆಯಿರುವುದರಿಂದ ಚಿತ್ರ ಒಂದು ಅಪರಪೂಪದ ಕಲಾಕೃತಿಯಾಗಿ ನಿಲ್ಲುತ್ತದೆ.

ಗಿರೀಶ್ ಕಾಸರವಳ್ಳಿಯ 'ಮನೆ': ನೆಲೆಯ ಹುಡುಕಾಟ: ಭಾಗ ೧



ಈ ಲೇಖನವನ್ನು ದಿನಾಮ್ಕ ೨೧-೧೨-೨೦೦೩ ರಲ್ಲಿ ಬರೆದದ್ದು.

'ಮನೆ' ಚಿತ್ರವನ್ನು ೧೨ ವರ್ಷಗಳ ಮೊದಲು ನೋಡಿದ್ದೆನಾದರೂ ಆಗ ಹೇಗೆ ಪ್ರತಿಕ್ರಯಿಸಿದ್ದೆ ಎನ್ನುವುದನ್ನು ಈಗ ಹೇಳುವುದು ಕಷ್ಟ. ಈವತ್ತಿನ ಪ್ರಕ್ರಿಯೆಗಳನ್ನು ಈಗಿನಷ್ಟಿನ ತೀವ್ರತೆಯಲ್ಲಿ ಆಗ ಗಮನಿಸುವುದು ಸಾಧ್ಯವಿರಲಿಲ್ಲ. 'ಮನೆ'ಯಂತಹ ಚಿತ್ರಗಳ ಕುರಿತು ಕಾಲ ಕಾಲದಲ್ಲಿ ಬರೆಯಬೇಕಾದ ಅವಶ್ಯಕತೆಯಿದೆ. ೯೦-ರ ನಂತರ ಬಂದ ಗಿರೀಶರ ಚಿತ್ರಗಳಲ್ಲಿನ ನಿಲುವುಗಳನ್ನು, ಅವರು ಸಾರ್ವಜನಿಕವಾಗಿ ಪ್ರತಿಪಾದಿಸಿದ ನಿಲುವುಗಳನ್ನು ಇಲ್ಲಿ ಪ್ರಯತ್ನಪೂರ್ವಕವಾಗಿ ಹುಡುಕಲು ಹೋಗುವುದು ತರವಲ್ಲ (ಅದರಿಂದ ಪೂರ್ತಿ ಬಿಡಿಸಿಕೊಳ್ಳುವುದ ಸಾಧ್ಯವಿಲ್ಲವಾದರೂ). ಆದರೆ ಅವುಗಳ ಬೇರೇನಾದರೂ ಇಲ್ಲಿವೆಯೆ ಎಂದು ಹುಡುಕಬಹುದು. ಇವತ್ತನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, 'ಮನೆ' ದಶಕದಷ್ಟು ಮುಂಗಾಣ್ಕೆಯಿರುವ ಚಿತ್ರ. ಚಿತ್ರದ ಕಥೆಯನ್ನು ದೃಶ್ಯಗಳ ಗಮನದ ಮೂಲಕವೇ ವಿವರಿಸುತ್ತಾ, ಪಡೆದಷ್ಟನ್ನು ಬರೆಯುತ್ತಾ ಸಾಗುವುದು ಈ ಲೇಖನದ ಉದ್ದೇಶ.

ಮೇಲ್ನೋಟಕ್ಕೆ ಚಿತ್ರ ನಗರೀಕರಣದ ತೊಂದರೆಗಳ ಕುರಿತಾದ ಚಿತ್ರವಾಗುವ ಅಪಾಯವಿದೆ. ಆದರೆ ಚಿತ್ರ ಅದನ್ನು ಹಿನ್ನೆಲೆಯಾಗಿಟ್ಟುಕೊಂಡು ಅನೇಕ ವಿಷಯಗಳನ್ನು ಹೇಳುತ್ತದೆ. (ಬಹಳ ವರ್ಷಗಳ ಹಿಂದೆ ವೃತ್ತ ಪತ್ರಿಕೆಯೊಂದರಲ್ಲಿ ಇದೊಂದು 'ಶಬ್ದ ಮಾಲಿನ್ಯದ' ಕುರಿತಾದ ಚಿತ್ರ ಎಂದು ಬರೆದಿದ್ದು ಜ್ಞಾಪಕವಾಗಿ ತುಂಬಾ ನಗು ಬರುತ್ತಿದೆ.). ಇದಕ್ಕಿಂತ ಮಿಗಿಲಾಗಿ ನಾವು ಚಿತ್ರವೊಂದನ್ನು ನಮ್ಮದಾಗಿಸಿಕೊಳ್ಳುವುದರಲ್ಲಿ ನಮ್ಮ ಜೀವನಾನುಭವ ಮತ್ತು ಭೂತ-ಭವಿಷ್ಯದ್-ವರ್ತಮಾನಗಳ ನಮ್ಮ ಗ್ರಹಿಕೆ ಹೇಗೆ ಕೆಲಸ ಮಾಡುತ್ತದೆ, ಎನ್ನುವುದು ಒಂದು ಆಸಕ್ತಿಕರ ಹುಡುಕಾಟವಾಗಬಹುದು.

ರಾಜಶೇಖರ ಎನ್ನುವ ವ್ಯಕ್ತಿ ಮನೆ ಹುಡುಕುತ್ತಾ ಮನೆ ಮಾಲೀಕರೊಬ್ಬರನ್ನು ಭೇಟಿಯಾಗುವುದರೊಂದಿಗೆ ಚಿತ್ರ ಮೊದಲಾಗುತ್ತದೆ. ಆರಂಭದಲ್ಲೆ ನಾಯಕ ತಾನು ಕೆಲಸ ಮಾಡುತ್ತಿರುವ ಕಂಪನಿ 'ಮಲ್ಟಿನ್ಯಾಶನಲ್' ಎಂದು ಹೇಳುತ್ತಾ ಬೀಗುತ್ತಾನೆ. 'ಹಳ್ಳಿಲೇನಿದೆ ಎಂದು ಸಿಟಿ-ಗೆ ಬಂದೆವು' ಎಂದು ಹೇಳುತ್ತಾನೆ. ಆ ಮೊದಲ ದೃಶ್ಯಗಳಲ್ಲೇ ರಾಜಶೇಖರ 'ಇಲ್ಲಿಯವನಲ್ಲ ಹೊರಗಿನವನು' ಎನ್ನುವುದನ್ನು ಅವನ ದೇಹದ ಭಂಗಿಗಳು, ಅವನು ಗಮನ ಹರಿಸದೆ ಕೆಳಗೆ ಬೀಳಿಸುವ ತಟ್ಟೆ ಇವುಗಳು ಹೇಳುತ್ತವೆ. ಇಲ್ಲಿ ಕ್ಯಾಮರ ಇವನ್ನೆಲ್ಲಾ ತುಂಬಾ ದಟ್ಟವಾಗಿ, ತಾನೆ ಅನುಭವಿಸಿದಂತೆ ಸೆರೆ ಹಿಡಿಯುತ್ತದೆ. ಆದರೆ, 'ಮಲ್ಟಿನ್ಯಾಶನಲ್' ಎಂದು ಬೀಗುವ ರಾಜಶೇಖರ ಕೆಲಸ ಮಾಡುತ್ತಿರುವ ಕಂಪನಿ ಒಂದು ಬುಲ್ಲ್ಡೋಜ಼ರ್ ತಯಾರಿಸುವ ಕಂಪನಿ. ರಾಜಶೇಖರನಿಗೆ ಮಲ್ಟಿನಾಶನಲ್ ಎನ್ನುವುದರ ಬಗೆ ಹೆಮ್ಮೆಯಿದೆಯೆ ಹೊರತು, ತಾನು ಮಾಡುತ್ತಿರುವ ಕೆಲಸದ ಬಗೆಗಿನ ಪರಿಣಾಮದ ಕುರಿತಾದ ಆಲೋಚನೆಯಿಲ್ಲ.

ರಾಜಶೇಖರನ ಮಾತುಗಳನ್ನು ತಾಳ್ಮೆಯಿಂದ ಕೇಳುವ ವಯಸ್ಸಾದ ಮನೆಯ ಮಾಲೀಕ, ಅವನ 'ಮಲ್ಟಿನ್ಯಾಷನಲ್' ಪರಿಚಯದ ತಕ್ಷಣ, ಮನೆಯೆಂದರೇನು ಎಂದು ವ್ಯಾಖ್ಯಾನಿಸುತ್ತಾ 'ಮನೆ ನಿಮ್ಮಂಥವರಿಗೆ ಸುಲಭದಲ್ಲಿ ಸಿಗೋಲ್ಲ' ಎನ್ನುತ್ತಾನೆ. ಅಂದರೆ ರಾಜಷೇಖರನ ಹುಡುಕಾಟ ವಿರೋಧಾಭಾಸಗಳಿಂದ ಕೂಡಿದೆ. ಮೊದಲ ದೃಶ್ಯದಲ್ಲೇ ಚಿತ್ರದ ವಸ್ತುವನ್ನು, ಉದ್ದೇಶವನ್ನು ಅರ್ಧ ಹೇಳಿಬಿಟ್ಟಿದ್ದಾರೆ ಗಿರೀಶ್. ಮಿಕ್ಕದ್ದು ವಿವರಗಳು ಹಾಗು ಉದ್ದೇಶದೆಡೆಗೆ ನಿಧಾನ ಪಯಣ.

ಮನೆಯ ಮಾಲೀಕನಿಗೆ ಇವನ ಮೇಲೆ ನಂಬಿಕೆಯಿಲ್ಲ, ಯಾವ ಕಾರಣವನ್ನೂ ಸ್ಪಷ್ಟವಾಗಿ ಕೊಡದೆ, ನಿಮ್ಮ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಮನೆ ಕೊಡಲು ನಿರಾಕರಿಸುತ್ತಾನೆ. ಆದರೆ, ಇದರ ಮುಂದಿನ ದ್ರ್‍ಇಶ್ಯದಲ್ಲಿ ರಾಜಶೇಖರ ಮತ್ತವನ ಹೆಂಡತಿ ಇಬ್ಬರೂ ಅದೇ ಮಾಲೀಕನ ಬಾಡಿಗೆಗಿರುವ ಮನೆಯೊಳಗಡೆ ಇರುತ್ತಾರೆ. ಹೇಗೆಂದರೆ - ಚಿಕ್ಕಸಿಟಿಯಲ್ಲಿ ಇವರ ಚಿಕ್ಕಮ್ಮ ಒಬ್ಬಳಿದ್ದಾಳೆ. ತಕ್ಕಮಟ್ಟಿಗೆ ಸ್ಥಿತಿವಂತೆ, ಬೇಕಾದುದನ್ನು ದಕ್ಕಿಸಿಕೊಳ್ಳುವಷ್ಟು ಜನಸಂಪರ್ಕವಿದೆ. ಅವಳ ಜೀವನಕ್ರಮದ ಬಗ್ಗೆ ಸಂಬಂಧಿಕರಲ್ಲಿ ಅಸಮಾಧಾನವಿದೆ. ಅಷ್ಟಾಗಿ ಅವಳ ಸಂಪರ್ಕವನ್ನು ಯಾರೂ ಇಷ್ಟಪಡುವುದಿಲ್ಲ. ರಾಜಶೇಖರ ಕೂಡ. ಅವಳ ಸಹವಾಸ ಬೇಡ ಎನ್ನುತ್ತಲೆ, ಮನೆಯ ಮಾಲೀಕರ ಮೇಲೆ ಒತ್ತಡ ಹೇರಲು ಅವಳ ಸಹಾಯ ಬಳಸಿ, ಯಶಸ್ವಿಯಾಗುತ್ತಾನೆ. ಇಷ್ಟೆಲ್ಲಾ, ಒಂದು ಚಿಕ್ಕ ದೃಶ್ಯದಲ್ಲಿ, ಚಿಕ್ಕಮ್ಮನ 'ನೇರಪ್ರವೇಶ'ವಾಗದೆ ಕೆಲವೆ ಮಾತುಗಳಲ್ಲಿ ಚೊಕ್ಕವಾಗಿ ಮೂಡಿಬರುತ್ತದೆ.

ಮನೆಯ ಸಾಮಾನುಗಳನ್ನೆಲ್ಲ ಗಂಡ ಹೆಂಡಿರು ಅವಲೋಕಿಸತೊಡಗುತ್ತಾರೆ. ಮನೆಯಲ್ಲಿ ಹಳೆಯದಾದ ಮಂಚವೊಂದಿದೆ. ಬದುಕಿನಲ್ಲಿ ತಾನು ಬಳಸುವ ವಸ್ತುಗಳೆಲ್ಲವೂ ಪ್ರಜ್ಞಾಪೂರ್ವಕವಾಗಿ ತನ್ನದಾಗಬೇಕೆನ್ನುವ, ಸಂಬಂಧಗಳ ಅವಶ್ಯಕತೆಯಿರುವ ರಾಜಶೇಖರನ ಹೆಂಡತಿ ಗೀತ, ಮಂಚದ ಮೇಲೆ ಮೃದುವಾಗಿ ಕೈಯಾಡಿಸುತ್ತಾಳೆ. ಆ ನಂತರದಲ್ಲಿ ಆ ಮಂಚ ಚಿತ್ರದ ಒಂದು ಪಾತ್ರವೇ ಆಗುತ್ತದೆ.

ಅದೇ ವಠಾರದಲ್ಲಿ ಒಂದು ಒಂಟಿಯಾದ ತಮಿಳು ಅಜ್ಜಿಯಿದೆ (ಪಾಟಿ). ಅಜ್ಜಿಯನ್ನು ರಾಜಶೇಖರ ಮತ್ತು ಗೀತ ನೋಡುವ ರೀತಿಯಲ್ಲೂ ಅದೇ ವ್ಯತ್ಯಾಸವಿದೆ. ಮನೆಯಲ್ಲಿರುವ ಕಿಟಕಿಯೊಂದನ್ನು ತೆರೆದರು ಅಜ್ಜಿ ಸದಾ ಕಾಣುತ್ತಿರುತ್ತಾಳೆ. ಕಿಟಕಿಯನ್ನು ರಾಜಶೇಖರ ಮುಚ್ಚಿದರೆ, ಗೀತ ಕಿಟಕಿ ತೆರೆದು ಅಜ್ಜಿಯನ್ನೊಮ್ಮೆ ನೋಡಿ ಅಜ್ಜಿಯ ದುರಂತವನ್ನು ಅನುಭವಿಸುತ್ತಾಳೆ, ನೆಲದಲ್ಲಿ ಗಟ್ಟಿಯಾಗಿ ಊರುತ್ತಾಳೆ. ಚಿತ್ರದಲ್ಲಿ ಅನೇಕ ಸಲ ರಾಜಶೇಖರ ಕಿಟಕಿ ಮುಚ್ಚುತ್ತಾನೆ, ಗೀತ ಕಿಟಕಿ ತೆರೆಯುತ್ತಾಳೆ. ರಾಜಶೇಖರ 'ನಾವಿಬ್ಬರೂ ಹಾಗೂ ಈ ಮನೆ, ಇಷ್ಟೆ ನಮ್ಮ ಪ್ರಪಂಚ' ಎನ್ನುತ್ತಾನೆ. ಗೀತ ಕಿಟಕಿ ತೆರೆದು ಹೊರಗಿನ ಬೆಕ್ಕು, ಪಾಟಿ ಹಾಗೂ ಮನೆಯ ಪಕ್ಕದಲ್ಲೆ ವ್ಯಸ್ತವಾಗಿರುವ ಒಂದು ಶೇಡ್ಡು ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಮನೆಯನ್ನು ಮತ್ತು, ನೆರೆ-ಹೊರೆ ಹಾಗೂ ಪರಿಸರವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಒಟ್ಟು ರಾಜಶೇಖರ-ನ ಮನೆಯ ಕುರಿತಾದ ಆಲೋಚನೆಗಳು, ಮನುಶ್ಯರ ಜೊತೆಗಿನ ಸಂಬಂಧಗಳ ಕುರಿತಾದ ಅಳೊಚನೆಗಳು ಹೆಚ್ಚು ಸ್ವಾರ್ಥದಿಂದ ಕೂಡಿವೆ. ಸಂಬಂಧಗಳ ಕುರಿತಾದ ಅವನ ಮುತುವರ್ಜಿ ಕಡಿಮೆ. ಅವನ ಐಹಿಕ ಅವಶ್ಯಕತೆಗಳಿಗೆ ಸಂಬಂಧಗಳ ಕನಿಷ್ಠ ಅವಶ್ಯಕತೆಯಿದೆ. ಗೀತ ಇದಕ್ಕೆ ವ್ಯತಿರಿಕ್ತ. ಸಂಬಂಧಗಳು ಇದ್ದಾಗ ಮಾತ್ರ ಮನೆ ಮನೆಯಾಗುತ್ತದೆ ಎನ್ನುವುದನ್ನು ಗೀತ ಇನ್ನೂ ನಂಬಿದ್ದಾಳೆ. ಇದಕ್ಕೆ ಪೂರಕವಾಗು, ಅವರು ಮನೆಯನ್ನು ಸ್ವಚ್ಚಗೊಳಿಸುವಾಗಿನ ಒಂದು ದ್ರ್‍ಇಶ್ಯ ಮಾರ್‍ಮಿಕವಾಗಿದೆ. ರಾಜಶೇಖರ ಟೀವಿಗೆ ಜಾಗ ಹುಡುಕುತ್ತಾ ಬೀಗುತ್ತಿದ್ದರೆ, ಗೀತ ಮಂಗಳಾರತಿ ಮಾಡುತ್ತಾಳೆ. ಯಾರಿಗೆ ಮನೆ, ಏಕೆ ಮುಖ್ಯ ಎನ್ನುವುದನ್ನು ಸೆಕೆಂಡುಗಳ ಈ ದೃಶ್ಯ ಹೇಳುತ್ತದೆ.

ಹೊಸದಾಗಿ ಪ್ರವೇಶಿಸಿದ ಮನೆಯನ್ನೆಲ್ಲಾ ಸರಿ ಮಾಡುತ್ತಾ ಕಡೆಗೆ ಆ 'ಹಳೆಯಕಾಲ'-ದ ದೊಡ್ಡ ಮಂಚವೊಂದು ರಾಜಶೇಖರನಿಗೆ ಬೇಡವಾಗುತ್ತದೆ. ಮೊದಲಲ್ಲೇ ಮಂಚವನ್ನು ತನದಾಗಿಸಿಕೊಳ್ಳಲು ಪ್ರಯತಿನಿಸಿದ್ದ ಗೀತಳನ್ನು ಕರೆದು ಅದನ್ನು ಹೊರಹಾಕಲು ಪ್ರಯತ್ನಿಸುತ್ತಾನೆ. 'ಭಾರ'-ವಾದ ಮಂಚವನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಾನೆ. 'ಸ್ವಲ್ಪ'-ವೇ ನೂಕಲು ಸಾಧ್ಯವಾಗುತ್ತದೆ. ಕಡೆಗೆ 'ಅದು ಮನೆಯ ಬಾಗಿಲಿಗಿಂತಾ ಚಿಕ್ಕದು' ಎಂಬ ಅರಿವಾಗಿ, ಅದನ್ನು ಅದರ ಪಾಡಿಗೆ ಬಿಡುತ್ತಾನೆ. ಇಲ್ಲಿನ ಪ್ರತಿಮೆಗಳನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಹಳೆಯದರೊಂದಿಗೆ ಸಾಧ್ಯವಾದಷ್ಟು ಸಂಪರ್ಕ ಕಡೆದುಕೊಳ್ಳಲು ಪ್ರಯತ್ನಿಸುವ ರಾಜಶೇಖರನಿಗೆ ಹಳೆಯಾದ ಮಂಚವೂ ಬೇಡವಾಗುತ್ತದೆ. ಆದರೆ ಮಂಚ ಭದ್ರವಾಗಿ ಬೇರೂರಿರುತ್ತದೆ. ಚಿತ್ರದಲ್ಲಿ ಇದು ನೆಲದಲ್ಲಿ ಬೇರೂರಿರುವ ಸಂಸ್ಕೃತಿಯ ಪ್ರತೀಕವಾಗಿ ಬೆಳೆಯುತ್ತಾ ಹೋಗುತ್ತದೆ.

ಇಲ್ಲಿಂದಾಚೆಗೆ 'ಮಂಚ' ಒಂದು ಪಾತ್ರವೇ ಆಗುತ್ತದೆ. ಯಾವ್ಯಾವುದೋ ಕಾರಣಗಳಿಗಾಗಿ, ಇಡೀ ಮನೆ ಅಸಹನೀಯವಾದಾಗಲೂ ಇಬ್ಬರಿಗೂ ಸಹ್ಯವಾಗುವ ಒಂದೇ ತಾಣವೆಂದರೆ ಈ ಮಂಚ. ಹೊರಗಿನ ದಬ್ಬಾಳಿಕೆ ಸಹಿಸುವಂತಾಗುವುದು ಮಂಚವನ್ನು ಶರಣಾದಾಗಲೆ. ಇದೇ ಮಂಚದ ಮೇಲೆ ಇಬ್ಬರೂ ನಲಿದು, ಜಗಳವಾಡಿ, ಬೆಳೆಯತೊಡಗುತ್ತಾರೆ. ಬಾಹ್ಯ ಪ್ರಪಂಚ ಕೊಡುವ ತೊಂದರೆಗಳನ್ನೆದುರಿಸಲು, ಅದರ ಜೊತೆ ಬೆಳೆಯಲು ನೆಲದ ಸಂಸ್ಕೃತಿಯ ಅವಶ್ಯಕತೆಯ ಪ್ರತಿಮೆ ಇದು.

ಒಟ್ಟು ವಿದ್ಯಮಾನವೇನೆಂದರೆ, ಹಳ್ಳಿಯಲ್ಲಿ ಇಬ್ಬರಿಗೂ ಬೇಸರ ಬಂದಿರುತ್ತದೆ. ಆಧುನಿಕ ದಾಂಪತ್ಯ ಜೀವನ ಬೇಡುವ ಪ್ರೈವಸಿ ಇರುವುದಿಲ್ಲ. ಸಂಬಂಧಿಕರು ಅತಿಯಾಗಿ ಮೂಗು ತೂರಿಸುತ್ತಾರ್‍ಎ. ಬೇಕೆನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯವಿಲ್ಲ. ಇದೆಲ್ಲದರಿಂದ ಮುಕ್ತಿ ಬೇಕಿದೆ. ಅದಕ್ಕಾಗಿ ಪಟ್ಟಣಕ್ಕೆ ಬಂದಿರುತ್ತಾರೆ. ಸ್ವಾತಂತ್ರಯ ಬೇಕು ಎನ್ನುವಾಗಿನ ದೃಶ್ಯ ರಾಷ್ಟ್ರಧ್ವಜವನ್ನು ಹೋಲುವ ಹಿನ್ನೆಲೆಯಲ್ಲಿ ಇಬ್ಬರೂ ಮಲಗಿರುವಂತೆ ಚಿತ್ರಿಸಿರುವುದು ದಿಗ್ಭ್ರಮೆ ಮೂಡಿಸುತ್ತದೆ.

ಇನ್ನೇನು ಮನೆ ಸಿಕ್ಕಿತು, ಶಾಂತವಾದ ಪರಿಸರ ಸಿಕ್ಕಿತು, ಸ್ವಾತಂತ್ರ್ಯ ಸಿಕ್ಕಿತು ಎಂದು ಇಬ್ಬರಿಗೂ ಅನ್ನಿಸುತ್ತಿರುವಾಗಲೇ, ಪಕ್ಕದ ಶೆಡ್ಡಿಂದ ಶಬ್ದ ಕೇಳುತ್ತದೆ. ಸರಿ ರಾತ್ರಿಯಲ್ಲಿ ಕೆಲವರು ಬಂದಿರುತ್ತಾರೆ. ಅವರಿಗೆ ಶೆಡ್ ಬಾಗಿಲು ತೆರೆಯಲು ರಾಜಶೇಖರನೇ ಸಹಾಯ ಮಾಡುತ್ತಾನೆ. ಆದರೆ ಶೆಡ್-ನಲ್ಲಿ ಜನ ರಾತ್ರಿಯೆಲ್ಲಾ ಅಪಾರವಾಗಿ ಶಬ್ದವಾಗುವ ಕೆಲಸಗಳನ್ನು ಮಾಡಲು ಶುರು ಮಾಡುತ್ತಾರೆ. ಕ್ರಮೇಣ ಇದು ಕಿರಿಕಿರಿಯನ್ನುಂಟು ಮಾಡುತ್ತದೆ. ನಾಲ್ಕು ದಿವಸ ಹೊಂದಿಕೊಂಡರಾಯ್ತು ಎಂದು ಗಂಡ ಹೆಂಡಿರು ಸಮಾಧಾನಕ್ಕೆ ಪ್ರಯತ್ನಿಸುತ್ತಾರೆ. ಇಲ್ಲಿ ಮುಖ್ಯವಾದುದ್ದೆಂದರೆ, ಶೆಡ್-ನಲ್ಲಿ ಕೆಲಸ ಮಾಡುವವರ ಮುಖ ಕಾಣುವುದಿಲ್ಲ. ಅವರು ಯಾರು ಏನು ಎತ್ತ ಎಂದು ರಾಜಶೇಖರ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಆದರೆ ರಾತ್ರಿಯ ಹೊತ್ತಿನ ಕೆಲಸ ಮಾತ್ರ ಮನಸ್ಸಿಗೆ ಕಿರಿ ಮಾಡುತ್ತದೆ. ರಾಜಶೇಖರ ಒಮ್ಮೆಯೂ ಅವರು ಯಾರು ಎಂದು ಕೇಳುವುದಿಲ್ಲ. ಗೀತಳಿಗೆ ಆ ಕುತೂಹಲವಿದೆ. ರಾಜಶೇಖರನ ಮನೆಯ ಸಂಕುಚಿತ ಮನೋಭಾವ, ಗೀತಳ ವಿಶಾಲ ಮನೋಭಾವವನ್ನು ಅವರ ಶೆಡ್ ಕುರಿತಾದ ಪ್ರತಿಕ್ರಿಯೆ ಹೇಳುತ್ತದೆ. ಶೇಡ್ನಲ್ಲಿ ಕೆಲಸ ಮಾಡುವವರು ಅವನಿಗೆ ಮನುಷ್ಯರಲ್ಲ, ಅವನಿಗೆ ಅವರು ಬೇಕಿಲ್ಲ. ಆದ್ದರಿಂದಲೇ ಅವರ ಮುಖ ಕಾಣೋಲ್ಲ.

ಹೀಗೆ, ರಾತ್ರಿಯೆಲ್ಲಾ ಶೆಡ್ ಕಾಟದಿಂದ ತಲೆ ಕೆಟ್ಟು ಬೆಳಗಿನ ಹೊತ್ತು ಒಂದು ದಿನ ಗೀತ ಕುರ್ಚಿಯ ಮೇಲೆ ಮಲಗಿರುವಾಗ, ಅವರ ಚಿಕ್ಕಮ್ಮ ಮನೆಗೆ ಬರುತ್ತಾಳೆ. ಗೀತಳನ್ನೊಮ್ಮೆ ಅಸೂಯೆ ಮಿಶ್ರಿತ ಪ್ರೀತಿಯಿಂದ ನೋಡಿ 'ಅದೆಷ್ಟು ಚೆನ್ನಾಗಿ ಮಲಗಿದ್ದೀಯ' ಎನ್ನುತ್ತಲೆ. ಕಾಸರವಳ್ಳಿ, ಕಥೆಯ ಮುಂದಿನದನ್ನು ಸೂಚಿಸುತ್ತಾರ್‍ಎ. ಚಿಕ್ಕಮ್ಮ ಸುಖವಾಗಿಲ್ಲ. ಗೀತಳಿಗೆ ಮನೆ ಸಿಕ್ಕಿದೆ, ಸುಖವಾದ ನಿದ್ದೆ ಸಿಕ್ಕಿದೆ, ಕನಿಷ್ಟ ಆ ಸಾಧ್ಯತೆಯಿದೆ ಆದರೆ ತನಗಿಲ್ಲ, ತನಗೆ ಅಷ್ಟು ಚೆನ್ನಾಗಿ ಮಲಗಲು ತಾಣ ಸಿಕ್ಕಿಲ್ಲ - ಪಾತ್ರ ಪರಿಚಯದ ಕೇವಲ ಕೆಲವೇ ದೃಶ್ಯಗಳಲ್ಲಿ ತಿಳಿಸಿಬಿಡುತ್ತಾರೆ ನಿರ್ದೇಶಕರು. ರೇಶಿಮೆ ಸೀರೆ ಉಟ್ಟ ಚಿಕ್ಕಮ್ಮ, ಗೀತಳ ಮನೆಯಲ್ಲಿ ಗೀತಳಿಗೆ ಸಿಕ್ಕಿರಬಹುದಾದ ಮನೆಯಲ್ಲಿ ನೆಲದ ಮೇಲೆ ಮಲಗಿ ತನ್ನ ನಿಜವಾದ ಮನೆಯಿದ್ದಿದ್ದಲ್ಲಿ ಸಿಕ್ಕಬಹುದಾದ ಆಸರೆಯನ್ನನುಭವಿಸಲು ಪ್ರಯತ್ನಿಸುತ್ತಾಳೆ. ಬೇಕಾದಷ್ಟು ದುಡ್ಡು ಸಂಪಾದಿಸಿದ್ದ ಚಿಕ್ಕಮ್ಮನಿಗೆ ಅಷ್ಟೊಂದು ಬೆಲೆ ಬಾಳುವ ಸೀರೆಯ ಬೆಲೆ ಮರೆತುಹೋಗಿರುತ್ತದೆ, ಅಪ್ರಸ್ತುತ, ಅನವಶ್ಯವಾಗುತ್ತದೆ. ತನ್ನ ಕನಸುಗಳು ಸಾಕಾರವಾಗದ್ದನ್ನೊಮ್ಮೆ ನೆನೆಸಿ, ಅದನ್ನು ಮರೆಯಲೋ ಎಂಬಂತೆ ಗೀತಳನ್ನು ಹಾಸ್ಯ ಮಾಡುತ್ತಾ 'ರಾಜಶೇಖರನನ್ನು ಸೀರೆ ಕೇಳು, ಅಥವಾ ಅವನಿಗೆ ನೀನು ಸೀರೆ ಉಡದೆ ಇದ್ದರೇ ಚೆಂದವೋ' ಎಂದುಬಿಡುತ್ತಾಳೆ. ಕೆರಳಿದ ಗೀತ ಚಿಕ್ಕಮ್ಮನನ್ನು ಸೋಲಿಸಲೋ ಎಂಬಂತೆ 'ಚಿಕ್ಕಪ್ಪ ಎಲ್ಲಿ' ಎಂದು ಕೆಣಕುತ್ತಾಳೆ. ಜಯಿಸಿಯೂಬಿಡುತ್ತಾಳೆ. ಚಿಕ್ಕಪ್ಪನ ನೆನಪು ಚಿಕ್ಕಮ್ಮನನ್ನು ಕೆರಳಿಸುತ್ತದೆ. ತನ್ನ ಮನೆ ಹೇಗೆ ಮುರಿದುಬಿತ್ತು ಎಂದು ಜ್ಞಾಪಿಸಿಕೊಳ್ಳುತ್ತಾಳೆ. ತನ್ನ ಗಂಡ ನೆಟ್ಟಗೆ ಸಂಸಾರ ಮಾಡಿಕೊಂಡಿದ್ದರೆ, ತಾನಾದರೂ ಬೇರೆಯವರ ಬಾಯಿಗೆ ಆಹಾರವಾಗುವ ಹಾಗೆ ಬದುಕಬೇಕಿತ್ತು ಎಂದು ಶಪಿಸುತ್ತಾಳೆ. ಗೀತಳನ್ನು ದೇವಸ್ಥಾನಕ್ಕೆ ಕರೆಯುವ ಮೂಲಕ ಅವಳ ಆಸರೆ ಬೇಡುತ್ತಾಳೆ. ಚಿಕ್ಕಮ್ಮನ ಸಂಪರ್ಕ ಗಂಡನಿಗೆ ಇಷ್ಟವಿಲ್ಲವೆಂದು ಗೊತ್ತಿದ್ದ ಗೀತ ಬೇಡವೆಂದರೂ, ಕಡೆಗೆ ಅವಳು ಚಿಕ್ಕಮ್ಮನ ಸ್ಥಿತಿಗೆ ಸ್ಪಂದಿಸಿ ಅವಳ ಜೊತೆ ಹೋಗುತ್ತಾಳೆ. ಇಬ್ಬರಿಗೂ ಸದ್ಯ ಉಳಿದಿರುವ ಒಂದೇ ಸಮಾನವಾದ ಬೇರಾದ 'ದೇವಸ್ಥಾನ' ಇಬ್ಬರನ್ನೂ ಹತ್ತಿರ ತರುತ್ತದೆ.

ದೇವಸ್ಥಾನದಲ್ಲಿ ಚಿಕ್ಕಮ್ಮ ತನ್ನ ಒಳ ಜೀವನದ ಸ್ವಲ್ಪ ಪರಿಚಯ ಕೊಡುತ್ತಾಳೆ. ಅಷ್ಟೆಲ್ಲಾ ಇದ್ದರೂ, ಅವಳ ಮನೆ ಮನೆಯಾಗಿರುವುದಿಲ್ಲ. ದೇವಸ್ಥಾನದಲ್ಲಿ ಮನೆಯನ್ನು ಹುಡುಕುತ್ತಾಳೆ. 'ಈ ನಡುವೆ ಭಯವಾಗುತ್ತದೆ, ಒಳಗೆ ಸಾಯುತ್ತಿರುವಂತನ್ನಿಸುತ್ತಿದೆ, ಆಗ ದೇವಸ್ಥಾನಕ್ಕೆ ಬರಬೇಕಿನ್ನಿಸುತ್ತದೆ' ಎನ್ನುತ್ತಾಳೆ. ಈ ಎಲ್ಲಾ ದೃಶ್ಯಗಳಲ್ಲಿ ರೋಹಿಣಿ ಅತ್ಯಂತ ಸಂಯಮದಿಂದ, ಅನುಭವಿಸಿ, ಆಳವಾದ ನಟನಾ ಕೌಶಲ್ಯ ತೋರಿದ್ದಾರೆ. ತನ್ನ ಜೀವನ ಅರ್ಥಪೂರ್ಣವಾಗಿರದೆ ಸೋಲುತ್ತಿದ್ದರೂ, ಸಂಬಂಧಿಕರ ಆಶ್ರಯದಲ್ಲಿ ಸಿಕ್ಕು ತನ್ನತನ ಕಡೆದುಕೊಳ್ಳಬಾರದು ಎನ್ನುವ ಹಠ ತನ್ನಿಂದ ಏನೇನೆಲ್ಲ ಮಾಡಿಸಿತು, ಈಗ ಆ ಹಟವೂ ಸೋತು ಎಲ್ಲಿ ಅವರ ಆಶ್ರಯ ಬೇಡಿಬಿಡುತ್ತೇನೋ ಎನ್ನುವ ಭಯ ಕಾಡುತ್ತಿದೆ ಎನ್ನುತ್ತಾಳೆ. ಈ ಎಲ್ಲಾ ಪ್ರಕ್ರಿಯೆಯಲ್ಲಿ ಅವಳು ಗೀತಳ ಆಶ್ರಯ ಬೇಡಿಬಿಟ್ಟಿರುತ್ತಾಳೆ ಎನ್ನುವುದು ವೀಕ್ಷಕರಿಗೆ ಅನುಭವಕ್ಕೆ ಬರುತ್ತದೆ. ಎಲ್ಲರ ಸಂಬಂಧವನ್ನು ಧಿಕ್ಕರಿಸಿ ಬಂದ ಚಿಕ್ಕಮ್ಮ, ದೇವಸ್ಥಾನದಲ್ಲಿ ಆಟವಾಡುತ್ತಿರುವ ಯಾರೋ ಮಕ್ಕಳು ದೇವರ ಪ್ರಸಾದವನ್ನು ಬೀಳಿಸಿಬಿಟ್ಟಾಗ, ಅದಕ್ಕೆ ಕೋಪಗೊಳ್ಳದೆ ಮಕ್ಕಳ ಐಸ್ ಕ್ಯಾಂಡಿ ಹಾಳಾದುದಕ್ಕೆ ಚಿಕ್ಕದಾಗಿ ಮರುಗುವುದು - ಅವಳಲ್ಲಾಗಿರುವ ಬದಲಾವಣೆ - ಸುತ್ತ ಮುತ್ತಲಿನ ಜನರನ್ನೊಪ್ಪಿಕೊಳ್ಳಲು ತೊಡಗುತ್ತಿರುವುದನ್ನು ಸಮರ್ಥವಾಗಿ ಹೇಳುತ್ತದೆ. ಆದರೆ, ಗೀತಳಿಗೆ ಚಿಕ್ಕಮ್ಮನ ವರ್ತನೆ ಅರ್ಥವಾಗುವುದಿಲ್ಲ.

ಇತ್ತ, ಮನೆಯಲ್ಲಿ ಶೆಡ್ಡಿನ ಕಾಟ ಜಾಸ್ತಿಯಾಗುತ್ತದೆ. ಕಿಟಕಿ 'ಮುಚ್ಚಿದರೂ' ಸಂದಿಯಿಂದ ಬರುವ ಶಬ್ದ ದಂಪತಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಸಂದಿಗೊಂದಿಗಳಿಗೆಲ್ಲಾ ಬಟ್ಟೆ ತುರುಕತೊಡಗುತ್ತಾನೆ ರಾಜಶೇಖರ. ಶೆಡ್-ನಲ್ಲಾಗುವ ಶಬ್ದಕ್ಕೆ ಅಡುಗೆಮನೆಯ ಪಾತ್ರೆ ಪಗಡೆಗಳು ಅಲ್ಲಾಡುತ್ತವೆ. ಹಿಂಸೆ ಅಸಹನೀಯವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಚಿಕ್ಕಮ್ಮನ ಸಹಾಯ ಕೇಳಿ ಎನ್ನುವ ಗೀತಳ ಸಲಹೆಯನ್ನು ನಿರಾಕರಿಸುತ್ತಲೆ ಅದರತ್ತ ಮಾನಸಿಕವಾಗಿ ಸನ್ನದ್ಧನಾಗುತ್ತಾನೆ ರಾಜಶೇಖರ, ಗೀತಳ ಸಲಹೆಗಾಗಿಯೇ ಕಾಯುತ್ತಿದ್ದನೋ ಎನ್ನುವ ಅನುಮಾನ ಬರುವಂತೆ. ಇಂತಹ ಒಂದು ರಾತ್ರಿ ಇಬ್ಬರೂ ಶೆಡ್-ನ ಕಾಟದಿಂದ ಮುಕ್ತಿ ಪಡೆಯಲು ಹೊರಗಡೆ ಸುತ್ತಾಡಿ ಬರಲು ಹೋಗುತ್ತಾರೆ. ಎಲ್ಲೋ ಪರಿಚಿತವಾದ ಸಂಪಿಗೆ ಮರದ ವಾಸನೆ ಬಡಿದಂತಾಗುತ್ತದೆ. ಸಂಪಿಗೆ ಮರ ಎಲ್ಲಿದೆ ಎಂದು ಹುಡುಕುತ್ತಾರಾದರೂ ಅದು ಸಿಕ್ಕುವುದೇ ಇಲ್ಲ. ಅದು ಕೇವಲ ಅವರ ಭ್ರಮೆಯಾಗಿರುತ್ತದೆ. ಅತಂತ್ರರಾಗಿರುವವರು, ಅಸ್ಥಿರ ಭಾವವನ್ನನುಭವಿಸುತ್ತಿರುವವರು ಪರಿಚಯಸ್ಥ ಬೇರನ್ನು ಇಲ್ಲದ ಕೆಡೆಯಲ್ಲೂ ಭ್ರಮಿಸುವ ಮನಸ್ಥಿತಿಯನ್ನು ದೃಶ್ಯ ಅತ್ಯುತ್ತಮವಾಗಿ ಬಿಂಬಿಸುತ್ತದೆ. ಪಾರ್ಕಿನಲ್ಲಿ ಮೌನ, ಶಾಂತಿಯನ್ನು ಹುಡುಕಲು ಹೊರಡುವ ಅವರಿಗೆ ಅಲ್ಲಿಯೂ ಸಿಗುವುದಿಲ್ಲ. ಇವರಿಬ್ಬರನ್ನೂ ವೇಶ್ಯೆ-ದಳ್ಳಾಳಿಯೆಂದು ಭ್ರಮಿಸುವ ಕುಡುಕ ಶ್ರೀಮಂತನೊಬ್ಬನಿಂದ ಬೇಸತ್ತು ವಾಪಸ್ಸು ಮನೆ-ಶೆಡ್ಡನ್ನು ತಲುಪುತ್ತಾರೆ.

ಈ ಎಲ್ಲದರಿಂದ ಸುಲಭವಾದ ಬಿಡುಗಡೆಯಿಲ್ಲ.

ಇಂತಹದ್ದೆ ದಿನವೊಂದರಲ್ಲಿ ರಾಜಶೇಖರ ರಾತ್ರಿಯೆಲ್ಲಾ ನಿದ್ದೆಗೆಟ್ಟು, ಆಫ಼ೀಸ್-ಗೆ ತಡವಾಗಿ ಬರುವುದಾಗಿ ಫೋನ್ ಮಾಡಲು ಪಬ್ಲಿಕ್ ಬೂತ್-ವೊಂದಕ್ಕೆ ಹೋಗುತ್ತಾನೆ. ಚಿಕ್ಕ ರಸ್ತೆಯಲ್ಲಿ ಬಂಡಿಯೊಂದರಲ್ಲಿ ಕೆಲವು ಡ್ರಂ-ಗಳನ್ನಿಟ್ಟಿಕೊಂಡ ಕೆಲವು ಆಳುಗಳು ತಳ್ಳಿಕೊಂಡು ಬರುತ್ತಿರುತ್ತಾರ್‍ಎ. ತನ್ನತ್ತಲೇ ಬರುತ್ತಿರುವ ಆ ಗಾಡಿ ಮತ್ತು ಅಸಹನೀಯ ಶಬ್ದವನ್ನು ತಾಳಲಾರದೆ ರಾಜಶೇಖರ ಓಡುತ್ತಾನೆ. ಬಂಡಿಯನ್ನು ತಳ್ಳುತ್ತಿರುವವರಿಗೆ ಅದು ಯಾರಿಗೆ ಏನು ತೊಂದರೆ ಮಾಡುತ್ತಿದೆ ಎಂದು ಕಾಣುವುದಿಲ್ಲ. ಅಷ್ಟೆತ್ತರಕ್ಕೆ ಹೇರಿಕೊಂಡ ಡ್ರಮ್-ಗಳು ಅವರ ನೋಟಕ್ಕೆ ನಿಜವಾಗಿ ಅಡ್ಡ ಬರುತ್ತಿದೆ. ಹಳದಿ ಬಣ್ಣದ ಆ ಡ್ರಮ್-ಗಳು ಎದುರಿನಿಂದ ಬರುತ್ತಿರುವವರಿಗೆ ಅದು ಬುಲ್ಡೊಜ಼ರ್-ನಂತೆ ಭಾಸವಾಗುತ್ತದೆ, ತನ್ನೆದುರಿರುವದನ್ನು ನಿಷ್ಕರುಣೆಯಿಂದ ಧ್ವಂಸ ಮಾಡುತ್ತಿರುವಂತೆ ರಾಜಶೇಖರನಿಗೆ ಭಾಸವಾಗಿ, ಅದು ಆ ಶೆಡ್-ನದ್ದೆ ಒಂದು ಭಾಗವಾದಂತೆ ಕಂಡು ಓಡಿ ಮನೆಯನ್ನು ತಲುಪುತ್ತಾನೆ. ಯಥಾ ಪ್ರಕಾರ ಅಲ್ಲಿ ಆಪ್ತವಾಗಿರುವ ಒಂದೇ ಒಂದು ವಸ್ತು 'ಹಳೆಯ ಕಾಲದ ಮಂಚ' ದ ಆಶ್ರಯ ಪಡೆಯುತ್ತಾನೆ. ಇದು ಚಿತ್ರದ ಆಶಯದಿಂದ ಪ್ರಮುಖ ದೃಶ್ಯವಷ್ಟೆ ಅಲ್ಲದೆ ಅತ್ಯುತ್ತಮವಾಗಿ ಚಿತ್ರಿತವಾಗಿರುವ ದೃಶ್ಯ.

ಇನ್ನು ಸಾಕು ಅನುಭವಿಸಿದ್ದು, ಕಾರ್ಕೊರೇಶನ್ನಿಗೆ ದೂರಿತ್ತು ಇದನ್ನು ನಿವಾರಿಸಿಕೋಬೇಕು ಎಂದೆನ್ನಿಸಿ, ರಾಜಶೇಖರ ಮೊತ್ತ ಮೊದಲ ಬಾರಿಗೆ ವಠಾರದ ಇನ್ನಿತರರಾದ ಪಾಟಿ, ಮಲ್ಲ ಎಲ್ಲರನ್ನೊ ಒಂದು ಅರ್ಜಿಗೆ ಸಹಿ ಹಾಕುವಂತೆ ಕೋರುತ್ತಾನೆ. ಅವರೆಲ್ಲಾ ಇಲ್ಲಿ ತಮ್ಮದೇ ಆದ ಬೇರನ್ನು ಕಂಡುಕೊಂಡಿದ್ದಾರೆ ಎಂದು ಆಶ್ಚರ್ಯಕರ ರೀತಿಯಲ್ಲಿ, ಅವರು ಸಹಾಯ ಮಾಡಲು ಹೆದರಿಕೆಯಿಂದಲೊ, ಮತ್ಯಾವುದರಿಂದಲೋ ನಿರಾಕರಿಸುತ್ತಾರ್‍ಎ. ಅವರು ಪರಿಸ್ಥಿತಿಗೆ ರಾಜಿ ಮಾಡಿಕೊಂಡಿದ್ದಾರೆ, ಒಂದು ವಿಚಿತ್ರವಾದ ನೆಲೆ ಕಂಡುಕೊಂಡಿದ್ದಾರೆ. ಮನೆಯ ಮಾಲೀಕನಿಗೆ ಶೇಡ್-ನವರು ಬೇಡ, ಆದರೆ ತಾನಾಗಿಯೇ ಅವರ ನಿವಾರಣೆ ಮಾಡುವುದು ಬೇಡ. ರಾಜಶೇಖರನ ಚಿಕ್ಕಮ್ಮನ ಶಕ್ತಿ ಗೊತ್ತಿದ್ದ ಮಾಲೀಕ 'ಇದು ನಿಮ್ಮಿಂದ ಮಾತ್ರ ಸಾಧ್ಯ' ಸೂಚ್ಯವಾಗಿ ತಿಳಿಸುತ್ತಾನೆ, ಕಳೆದುಕೊಳ್ಳುತ್ತಾನೆ. ಈ ಕ್ಷಣಕ್ಕೆ ಒಟ್ಟು ಪ್ರಕ್ರಿಯೆಯಲ್ಲಿ ರಾಜಶೇಖರ ಹರಕೆಯ ಕುರಿಯೇ ಎಂದು ನನಗೆ ಅನುಮಾನವಾಯಿತು.

ಕಡೆಗೆ, ತನ್ನೊಬ್ಬನದೇ ಒಂದು ಪೆಟಿಶನ್ನು ಹಿಡಿದು ಕಾರ್ಪೊರೇಶನ್ನನ್ನು ತಲುಪುತ್ತಾನೆ ರಾಜಶೇಖರ. ಹೊರಗಡೆ ಧರಣಿಯೊಂದು ನಡೆಯುತ್ತಿರುತ್ತದೆ 'ನ್ಯಾಯ ಬೇಕು' ಎಂದು. ಆದರೆ ಒಳಗಡೆ ಕೂತಿರುವ ಕಾರ್ಪೊರೇಶನ್ನಿನ್ನ ಅಧಿಕಾರಿಗಳಿಗೆ ಅದು ಕೇಳಿಸುವುದಿಲ್ಲ ಎನ್ನುವುದನ್ನು ಗಾಜಿನ ಒಳಗಡೆಯಿಂದ ಹೊರಗಿನ ಧರಣಿಯನ್ನು ಶಬ್ದಗಳಿಲ್ಲದೆ ತೋರಿಸಿ, ಗಿರೀಶ್ ಅಧಿಕಾರಿಗಳ ಸ್ಪಂದನೆ ಎಷ್ಟಿರುತ್ತದೆ ಎಂದು ತೋರಿಸುತ್ತಾರ್‍ಎ. ಒಳಗಡೆ ಅಧಿಕಾರಿ ಒಂದು ಉದ್ದದ ಮೇಜಿನ ಒಂದು ತುದಿಯಲ್ಲಿ ಮತ್ತೊಂದು ತುದಿಯಲ್ಲಿ ರಾಜಶೇಖರನನ್ನು ತೋರಿಸಿ, ಇಬ್ಬರನ ನಡುವಿನ ಅಂತರ ಮುಂದೇನಾಗಬಹುದೆನ್ನುವುದನ್ನು ಸೂಚಿಸುತ್ತಾರ್‍ಎ. ಆ ಮೇಜು ಅಧಿಕಾರಶಾಹಿ ಕಾಯ್ದುಕೊಳ್ಳುವ ನಿಷ್ಕ್ರಿಯಯ್ತೆಯ ಅಂತರಕ್ಕೆ ಪ್ರತಿಮೆಯಾಗುತ್ತದೆ. ರೂಲ್ ಪ್ರಕಾರ ಏನೂ ಮಾಡಲಾಗುವುದಿಲ್ಲವೆನ್ನುವೆಂದು ಹೇಳಿ ಅಧಿಕಾರಿ ಅವನನ್ನು ಸಾಗಹಾಕುತ್ತಾನೆ. ಆದರೂ, ಆಶ್ಚರ್ಯಕರವಾಗಿ ಮರುದಿನ ಕಾರ್ಪೊರೇಶನ್ನಿನವರು ಬರುತ್ತಾರೆ. ಆಫ಼ೀಸಿನಲ್ಲೇ ಈ ವಿಷಯ ತಿಳಿದುಕೊಳ್ಳುವ ರಾಜಶೇಖರ ಖುಶಿಯಿಂದ ಮನೆಗೆ ಮರಳುವ ವೇಳೆಗೆ ನಿಜ ಗೊತ್ತಾಗುತ್ತದೆ. ಶೆಡ್-ನವರಿಂದ ಲಂಚ ಕಿತ್ತು ನಡೆದಿರುತ್ತಾರ್‍ಎ. ಮನೆಯ ಮಾಲೀಕನ ನಡವಳಿಕೆಯೂ ಅನುಮಾನಾಸ್ಪದವಾಗಿರುತ್ತದೆ.

ಗಂಡ ಹೆಂಡಿರ ನಡುವೆ ಬಿರುಕು ಮೂಡುತ್ತದೆ. ನಿಸ್ಸಹಾಯಕನಾಗುವ ರಾಜಶೇಖರ ಹೆಂಡತಿಯ 'ನೀವು ಲಂಚ ಕೊಡಿ' ಎನ್ನುವ ಸಲಹೆಗೆ ಸಿಟ್ಟಿಗೆದ್ದು ಹೆಂಗಸರ ಬುದ್ಧಿಯನ್ನೆಲ್ಲಾ ಹೀಯಾಳಿಸಿ ಬಯ್ಯುತ್ತಾನೆ. ಒಂದು ಚಿಕ್ಕ ಜಗಳವಾಗುತ್ತದೆ. ಕಡೆಗೆ ಆಪ್ತವಾದ ಮಂಚದ ಮೇಲೆ ಅವನು ಅವಳನ್ನು ಸಮಾಧಾನಿಸುತ್ತಾನೆ. ಹೊಸದನ್ನು ತಮ್ಮದಾಗಿಸಿಕೊಳ್ಳುವಾಗ ಬರುವ ಸಂಘರ್ಷದ ದುಃಖವನ್ನು ನಿವಾರಿಸಿಕೊಳ್ಳಲು ಬೇರಿನ ಸಹಾಯದ ಅವಶ್ಯಕತೆಯಿರುತ್ತದೆ. ಯಾವ ನೆಲೆಯೂ ಸಿಗದವರಿಗೆ ಅದು ಸಾಧ್ಯವಾಗುವುದಿಲ್ಲ. ಆ ರಾತ್ರಿಯೂ ಶೆಡ್-ನ ಕಾಟ ಇರುತ್ತದೆ. ಕೋಪಗೊಂಡ ರಾಜಶೇಖರ ಶಬ್ದಕ್ಕೆ ಪ್ರತಿ ಶಬ್ದ ಎನ್ನುವಂತೆ 'ರೇಡಿಯೋ' ಜೋರಾಗಿ ಹಾಗಿ ಶೆಡ್-ನವರಿಗೆ ಅದು ಹಿಂಸೆಯಾಗಿ ಕೆಲ ಕಾಲ ತಮ್ಮ ಕೆಲಸ ನಿಲ್ಲಿಸುತ್ತಾರ್‍ಎ. ಗೆಲುವಿನಿಂದ ಬೀಗುವ ರಾಜಶೇಖರ ಒಂದು ನಿರ್ಧಾರಕ್ಕೆ ಬಂದಿರುತ್ತಾನೆ.

ಮರುದಿನ ಇಬ್ಬರೂ ಚಿಕ್ಕಮ್ಮನ ಮನೆಗೆ ಹೋಗುತ್ತಾರ್‍ಎ. ಶೆಡ್-ನಿಂದ ಮುಕ್ತಿ ಬೇಕೆಂದು ಮೊದಲೇ ತಿಳಿಸಿರುತ್ತಾರೆ. ಮನೆಗೆ ಬಂದವರನ್ನು ಖುಶಿಯಿಂದ ಮುತುವರ್ಜಿಯಿಂದ ಸ್ವಾಗತಿಸುತ್ತಾಳೆ ಚಿಕ್ಕಮ್ಮ, 'ಬಂದರು ತನ್ನ ತೆಕ್ಕೆಗೆ' ಎಂದು. ಬಂದವರನ್ನು ಕೆಳಗೆ ಕೂರಿಸಿ ಮೇಲಿನ ಕೋಣೆ-ಗೆ ಹೋಗುತ್ತಾಳೆ. ಸ್ವಲ್ಪ ಆಪ್ತವಾಗಿ ಮಾತನಾಡುವ ಎಂದು ಅವಳ ಹಿಂದೆಯೇ ಹೋಗುವ ಗೀತಳಿಗೆ, ಮೇಲಿನ ಮಲಗುವ ಕೊಣೆಯಲ್ಲಿ ಮತ್ತೊಬ್ಬ ಗಂಡಸನ್ನು ನೋಡಿ ವಿಭ್ರಾಂತಳಾಗಿ ಕೆಳಗೆ ಬಂದು ಗಂಡನಿಗೆ ಹೇಳುತ್ತಾಳೆ. 'ನಾನು ಮೊದಲೇ ಹೇಳಿರಲಿಲ್ಲವಾ' ಎಂದು ಅಸಹನೆ ವ್ಯಕ್ತಪಡಿಸುತ್ತಾನೆ ರಾಜಶೇಖರ. ಮೇಲಿದ್ದವ ಕೆಳಗೆ ಬರುತ್ತಾನೆ, ಚಿಕ್ಕಮ್ಮ ಅವನನ್ನು 'ಇನ್ಸ್‍ಪೆಕ್ಟರ್' ಎಂದು ಪರಿಚಯಿಸುತ್ತಾಳೆ. ಕೆಲಸವಾಗಬೇಕಿರುವುದು ಅವನಿಂದಲೆ. ಕೊಳಕನಾದ ಇನ್ಸ್‍ಪೆಕ್ಟರ್ ಕೆಟ್ಟದಾದ ಜೋಕುಗಳನ್ನು ಹೇಳಿ, ಕೆಲಸದ ಕಷ್ಟ ವಿವರಿಸಿ, 'ಬೆಳಗಿನ ಸಮಯದಲ್ಲಿ ಮಾತ್ರ ಕೆಲಸ ಮಾಡುವಂತೆ ಸಂಜೆಯ ಹೊತ್ತಿಗೆ ಶೆಡ್ ಕೆಲಸ ನಿಂತಿರುವಂತೆ' ವ್ಯವಸ್ಥೆ ಮಾಡುವುದಾಗಿ ಹೇಳುತ್ತಾನೆ. ಹೆಂಡತಿಯ ಮುಖವನ್ನೇ ನೋಡದೆ ರಾಜಶೇಖರ ಒಪ್ಪುತ್ತಾನೆ. ಗೀತಳಿಗಾಗಬಹುದಾದ ತೊಂದರೆಯನ್ನು ಗಮನಕ್ಕೆ ತೆಗೆದುಕೊಳ್ಳುವುದು ಚಿಕ್ಕಮ್ಮ ಮಾತ್ರ ಎನ್ನುವುದು ಗಮನಾರ್ಹ. ಆದರೂ ಗೀತ ಪೆದ್ದಳಂತೆ ಒಪ್ಪುತ್ತಾಳೆ.

ಪರಿಸ್ಥಿತಿಯ ಮತ್ತೊಂದು ಮಗ್ಗಲು ಗೊತ್ತಾಗುವುದು ಈಗಲೆ.

ಮುಂದುವರೆಯುವುದು...