ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, February 16, 2008

ಹೊಸ ಸಂವಹನಕ್ಕೆ ಹೊಸ ಭಾಷೆಯ ಕನಸು

ಈ ಲೇಖನ ರೂಪುಗೊಂಡದ್ದು ಆವರಣ ಕಾದಂಬರಿಗೆ ಬಂದ ಪ್ರತಿಕ್ರಿಯೆಗಗಳ ಸಂದರ್ಭವಾದರೂ, ಲೇಖನದ ಒಟ್ಟು ವಿಚಾರ ಬಗಳ ದಿನಗಳಿಂದ ರೂಪೂಗೊಳ್ಳತ್ತಲಿತ್ತು. ವರ್ತಮಾನದ ಪ್ರಕ್ರಿಯೆಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದು ಪ್ರತಿಯೊಬ್ಬ ಮನುಷ್ಯನಿಗೆ ಸಹಜವಾದ ವಿಚಾರ. ಅಭಿವ್ಯಕ್ತಿ ಮಾರ್ಗಗಳು ಬೇರೆ ಅಷ್ಟೆ. ನನ್ನದು ಈ ಲೇಖನದ ಮೂಲಕ ಪ್ರತಿಕ್ರಿಸುವ ಪ್ರಯತ್ನ.

ಇವತ್ತಿನ ನಮ್ಮ ಪರಿಸ್ಥಿತಿ

ಇಂದು 'ಜಾಗತೀಕರಣ' ಮತ್ತು 'ಮತೀಯತೆ' ನಮ್ಮ ಕಾಲದ ಎರಡು ಪ್ರಮುಖ ಆತಂಕಗಳೆಂದು ಪರಿಗಣಿತವಾಗಿವೆ. 'ಜಾಗತೀಕರಣದ' ಲಾಭ ಪಡೆದವರಲ್ಲಿ ಒಬ್ಬನಾದ ನಾನೂ ಸಹ ಇದನ್ನು ಒಪ್ಪುತ್ತೇನೆ. ಭಿನ್ನಧಾರೆಗಳಾಗಿಯೇ ಆತಂಕ ಸೃಷ್ಟಿಸಿರುವ ಇವೆರಡು ಒಂದೊಮ್ಮೆ ಸಂಗಮಿಸುವುದಾದರೆ? ಈ ಮಿಲನ-ಸಾಧ್ಯತೆ ಸಹಜವಾಗಿಯೇ ನಮ್ಮ ಆತಂಕವನ್ನು ಹೆಚ್ಚಿಸುವಂತಹದ್ದು. ಆದರೆ ಕೆಲವೊಮ್ಮೆ ಈ ಸಾಧ್ಯತೆಯನ್ನು ರಾವಿನಲ್ಲಿ ಗುರುತಿಸುವುದೂ ಅಪಾಯಕಾರಿಯಾದ ವಿಷಯ. ಜಾಗತೀಕರಣವನ್ನು ಪ್ರತಿನಿಧಿಸುವವರು ಮತ್ತು ಮತೀಯವಾದಿಗಳೆಂದು ಪರಿಗಣಿತರಾಗಿರುವವರ ಸಾಂದರ್ಭಿಕ ಸ್ನೇಹವನ್ನಾಗಲೀ, ಭೇಟಿಗಳನ್ನಾಗಲೀ ಆ ಧಾರೆಗಳ ಸಂಗಮವೆಂದು ಪರಿಗಣಿಸುವುದರ ಹಿಂದೆಯೂ ಅಪಾಯವಿದೆ. ಬಿಡಿಬಿಡಿಯಾದ ಸಂಗತಿಗಳು ಈ ಧಾರೆಗಳ ಮಿಲ ಸಾಧ್ಯತೆಯನ್ನು ಸೂಚಿಸುತ್ತಿರುವಂತೆ, ಇದಕ್ಕೆ ವಿರುದ್ಧವಾದ ವಾಸ್ತವಗಳನ್ನೂ ತನ್ನೊಡಲಲ್ಲಿರಿಸಿಕೊಂಡಿರುತ್ತದೆ. ಇವೆರಡರಲ್ಲಿ ಯಾವುದನ್ನೂ ಮರೆಯುವುದೂ ಅನಾಹುತಕಾರಿಯಾಗುತ್ತದೆ. ಸ್ವಲ್ಪ ತಾತ್ವೀಕರಿಸಿ ಹೇಳುವುದಾದರೆ, ಸಾಧ್ಯತೆ ಮತ್ತು ಸಾಧ್ಯತೆಯನ್ನು ಸೂಚಿಸುತ್ತಿರುವ ವಾಸ್ತವದ ಮತ್ತೊಂದು ಮುಖ್ಯ ಇವೆರಡಕ್ಕೂ ನ್ಯಾಯಸಲ್ಲಿಸಿ ತೂಗಿಸಿಕೊಂಡು ಹೋಗುವ ಸವಾಲು ನಮ್ಮೆದುರಿದೆ. ಈ ರೀತಿಯಾಗಿ ನಡೆಯುತ್ತಿರುವುದೇ ಸಮಾಜದಲ್ಲಿ ಒಂದು ತೀವ್ರತರವಾದ ಸನ್ನಿವೇಷ ಸೃಷ್ಟಿಯಾಗಿರುವುದನ್ನು ಸೂಚಿಸುತ್ತಿದೆ.

ಇದನ್ನು ಸ್ವಲ್ಪ 'ಅತಿ'-ಯಲ್ಲಿ ಗ್ರಹಿಸಿ ಮಂಡಿಸಲಿಚ್ಛಿಸುತ್ತೇನೆ. ಪ್ರಾಯಶಃ ಈಗ್ಗೆ ೩-೪ ದಶಕಗಳ ಹಿಂದೆ ಭಿನ್ನ ವಿಚಾರಧಾರೆಗಳನ್ನು ಪ್ರತಿನಿಧಿಸುತ್ತಿದ್ದ ಕನ್ನಡದ ಇಬ್ಬರು ಸಾಹಿತಿಗಳ ನಡುವೆ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಹಂಚಿಕೊಳ್ಳುವಷ್ಟು ಸಂಬಂಧವಿತ್ತು. ಇಂದು ಈ ಸಂಬಂಧವಿಲ್ಲದಿರುವಂತಿದೆ. ಇದು ನಮ್ಮ ಕಾಲದ ಮುಖ್ಯವಾದ ಸಾಂಸ್ಕೃತಿಕ ಪ್ರಕ್ರಿಯೆಗೆ - ಭಾರತದ ಸಾಂಸ್ಕೃತಿಕ, ವೈಚಾರಿಕ ಪರಂಪರೆಯನ್ನು, ಚಿಂತನೆಗಳನ್ನು ಬೇರೆ ಬೇರೆ ರೀತಿಗಳಲ್ಲಿ ಗ್ರಹಿಸುತ್ತಿರುವ ಎರಡು ಸಮೂಹಗಳ ಮಧ್ಯೆ ಸಂವಾದವಿಲ್ಲದಿರುವುದಕ್ಕೆ - ರೂಪಕದಂತಿದೆ.

ಭೈರಪ್ಪನವರು ಮತ್ತು ಆವರಣ

ಇಂತಹ ಒಂದು ಸಮೂಹದಲ್ಲಿ ನಾವು ಡಾ ಎಸ್. ಎಲ್. ಭೈರಪ್ಪನವರನ್ನು ಕಾಣಬಹುದು. ಹಿರಿಯಾ ಸಾಹಿತಿಯಾದ ಭೈರಪ್ಪನವರು ಕನ್ನಡದ ಉತ್ತಮ ಕಾದಂಬರಿಕಾರರಲ್ಲಿ ಒಬ್ಬರೆನ್ನುವುದು ನನ್ನ ಪಾಲಿಗೆ ನಿಸ್ಸಂಶಯ. ಹೀಗಿದ್ದಾಗ್ಯೂ ಕನ್ನಡ ವಿಮರ್ಶೆಯಲ್ಲಿ ಒಂದು ಸಂಪ್ರದಾಯ ಬೆಳೆದಿದೆ. ಭೈರಪ್ಪನವರ ಕಾದಂಬರಿಗಳನ್ನು (ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಿಂದ ಗ್ರಹಿತವಾಗಿರುವ) ಅವರ ವ್ಯಕ್ತಿತ್ವದ ಹಿನ್ನೆಲೆಯಲ್ಲಿ, ಅವರ ಸಾರ್ವಜನಿಕ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಓದುವುದೇ ಒಂದು ಅಭ್ಯಾಸವಾಗಿದೆ. (ಇದರಿಂದಾದ ನಷ್ಟವೆಂದರೆ, ಆವರಣವೂ ಸೇರಿದಂತೆ ಭೈರಪ್ಪನವರ ಇನ್ನಿತರ ಕಾದಂಬರಿಗಳಿಗೆ ಕೃತಿನಿಷ್ಠ ವಿಮರ್ಶೆ ನಡೆಯುತ್ತಿಲ್ಲ.) ದೌರ್ಭಾಗ್ಯಕರವಾದರೂ ಇದಕ್ಕೆ ಭೈರಪ್ಪನವರೇ ದಾರಿಮಾಡಿಕೊಟ್ಟಿದ್ದಾರೆ, ಆದ್ದರಿಂದ ತೀವ್ರವಾಗಿ ಆಕ್ಷೇಪಿಸುವಂತೆಯೂ ಇಲ್ಲ. ಉದಾಹರಣೆಗೆ ಆವರಣದ ಮುನ್ನುಡಿಯನ್ನೂ, ಕಾರ್ನಾಡರಿಗೆ ಅವರು ಬರೆದ ಪತ್ರವನ್ನೂ ತೆಗೆದುಕೊಳ್ಳಿ. ಮತ್ತಷ್ಟು ಅಗೆದರೆ ಇನ್ನೂ ಉದಾಹರಣೆಗಳು ಸಿಗುತ್ತವೆ. ಈ ಮುಖೇನ ಭೈರಪ್ಪನವರೇ ತಮ್ಮ ಕೃತಿಗಳಿಗೆ ಸಾಹಿತ್ಯೇತರ ಮಾರ್ಗಗಳನ್ನು ಕಲ್ಪಿಸಿದ್ದಾರೆ. ಅಷ್ಟಲ್ಲದೇ, ಕೃತಿಗಳನ್ನು ರೂಪಿಸಿರಬಹುದಾದ ಭೈರಪ್ಪನವರ ಆಲೋಚನಾ ಕ್ರಮಗಳ ಹಿನ್ನೆಲೆಯಲ್ಲಿಯೂ ಅವರ ಕೃತಿಗಳನ್ನು ವಿಮರ್ಶಿಸುವುದು ತಪ್ಪು ಎಂದು ಹೇಳಲಾರೆ. ಇವತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ಮತ್ತು ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಅದು ಅನಗತ್ಯ ಎಂದು ಹೇಳಲಾಗುವುದಿಲ್ಲ. ಆದರೆ ಕೃತಿನಿಷ್ಠ ವಿಮರ್ಶೆಯಲ್ಲಿ ದಕ್ಕುವುದೇನು ಎನ್ನುವುದನ್ನು ಅರಿಯುವ ಪ್ರಯತ್ನವೇ ಮಾಡದಿರುವುದು ಎಂದರೆ ಅದು ಸಾಹಿತ್ಯಕವಾಗಿಯಲ್ಲದೇ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಸ್ಥಿತಿ ಅಲ್ಲ. ನನಗೆ ಕೆಲವೊಮ್ಮೆ ಅನ್ನಿಸುವುದು - ಭೈರಪ್ಪನವರು ತಮ್ಮ ಅಭಿಪ್ರಾಯಗಳನ್ನು ಮೀರುವಂತೆ ಬರೆಯುವುದಿಲ್ಲವೋ ಅಥವಾ ಭೈರಪ್ಪನವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಬಲ್ಲ (ಅಥವಾ ಒಂದು ಬಗೆಯಲ್ಲಿ ಗ್ರಹಿಸಿರುವ) ಜನರು ಅವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಮೀರಿ ಅವರ ಕಾದಂಬರಿಗಳನ್ನು ಓದುವುದಿಲ್ಲವೋ ಎಂದು. ಇದನ್ನು ಮೀರಬೇಕಿದೆ. ಭೈರಪ್ಪನವರನ್ನು ಒಪ್ಪದವರದ್ದು ಈ ತೆರವಾದರೆ, ಅವರನ್ನು ಒಪ್ಪುವವರದ್ದು ಇದಕ್ಕೆ ತದ್ವಿರುದ್ಧವಾದ ಆರಾಧಕ ಮನೋಭಾವವಾವಿದೆ. ನಷ್ಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ.

ಭೈರಪ್ಪನವರು ಮಹತ್ವದ ಕಾದಂಬರಿಕಾರರೋ ಅಲ್ಲವೋ ಮತ್ತು ಕಾದಂಬರಿಕಾರರಾಗಿ ಅವರು ಓದುಗರನ್ನು ಯಾವ ರೀತಿ ಪರಿಭಾವಿಸಿ ಬರೆಯುತ್ತಾರೆ ಎನ್ನುವ ಚರ್ಚೆ ಮುಖ್ಯವಾದ್ದೇ. ಆದರೆ ಚರ್ಚೆ ವ್ಯಕ್ತಿ ಕೇಂದ್ರಿತವಾಗದಂತೆ, ವಿಚಾರ ಕೇಂದ್ರಿತವಾಗಿಯೇ ಸಾಗುವಂತೆ ಮುನ್ನಡೆಸಬೇಕಾದ ಕಠಿಣ ಜವಾಬ್ದಾರಿ ಇವತ್ತಿನ ತುರ್ತಾಗಿದೆ. ಆವರಣವೂ ಸೇರಿದಂತೆ ಭೈರಪ್ಪನವರ ಕೆಲ ಕಾದಂಬರಿಗಳು ಅಪಾಯಕಾರಿಯಾದರೆ, ಕೃತಿನಿಷ್ಠವಾದ ಟೀಕೆ ಮಾತ್ರ ಆವರಣದ ಅಪಾಯವನ್ನು ಮೀರುವ ದಾರಿ. ಮಿಕ್ಕ ಎಲ್ಲ ರೀತಿಯ ಟೀಕೆಗಳು ಸಾರ್ವಜನಿಕವಾಗಿ ಅಪಾರ್ಥಕ್ಕೀಡಾಗುವಂಥದ್ದೇ.

ನನಗಂತೂ ಅವರ ಅನೇಕ ಕೃತಿಗಳಲ್ಲಿ ಬಹಳ ಮೆಚ್ಚಬಹುದಾದ್ದು ಕಂಡಿದೆ. ಮಹತ್ವದ್ದೂ ಎಂದೆನ್ನಿಸಿದೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳಲ್ಲಿ ನನಗೆ ಕಂಡಿರುವ ಆಕೃತಿಯೇ ಬೇರೆ. ಅವುಗಳಲ್ಲಿ, ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ್ದಾರೋ ಇಲ್ಲವೋ ಹೇಳಲಾರೆ. ಆದರೆ ಆಧುನಿಕತೆಯನ್ನು ಒಳಗೊಳ್ಳುತ್ತಾ ಪಯಣಿಸುತ್ತಿರುವ ಭಾರತದ ಒಂದು ವಿಶಿಷ್ಟ ಆಕೃತಿ ಈ ಕಾದಂಬರಿಗಳಲ್ಲಿ ಮೂಡುತ್ತದೆ (ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಮೀರಿ), ಒಬ್ಬ ಡಿಮೇಟರ್ ಆಗಿದ್ದಾಗ್ಯೂ. ಕಾವ್ಯಗುಣವೆನ್ನುವುದು ಅವರ ಕಾದಂಬರಿಗಳಲ್ಲಿ ಮೂಡಿರುವ ಬಗೆ ಬೇರೆ. ಈ ಕುರಿತು ನನ್ನ ಬ್ಲಾಗಿನಲ್ಲಿ ಬರೆಯುವ ಉದ್ದೇಶವಿದೆ. ಆವರಣ ಕಾದಂಬರಿಯಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿರುವ ದೃಶ್ಯವೊಂದರಲ್ಲೂ ನನಗೆ ಇವತ್ತಿನ ಸನ್ನಿವೇಶವನ್ನು ಕಾವ್ಯಾತ್ಮಕವಾಗಿ ಧ್ವನಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಹಿಂದೂ ಹೆಂಡತಿ ಮತ್ತು ಮುಸ್ಲಿಂ ಗಂಡ ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದರೂ ಕಡೆಗೆ ಅವರ ಹಾಸಿಗೆಯಲ್ಲೂ ಸಹ ಇತಿಹಾಸ, ಮತಧರ್ಮಗಳು ನುಸುಳಿ ಸಂಬಂಧವನ್ನು ಕ್ಷುದ್ರಗೊಳಿಸಿಬಿಡಬಲ್ಲ, ನಾಶಮಾಡುವ ಸಾಧ್ಯತೆಯಿದೆ - ಎಂದು ಹೇಳುತ್ತಿದೆಯೇ? ಹಾಗಾಗುವತ್ತ ನಾವು ಸಾಗುತ್ತಿದ್ದೇವೆಯೇ? ಭೈರಪ್ಪನವರು ಇದನ್ನು ಅನುಮೋದಿಸುತ್ತಾರೋ ಇಲ್ಲವೋ ಅದು ಬೇರೆಯ ಮಾತು. ಆದರೆ ವಾತಾವರಣ ಹಾಗಾಗುತ್ತಿರಬಹುದು. ಸ್ವಲ್ಪ ತಾತ್ವೀಕರಿಸುತ್ತೇನೆ. ದೃಶ್ಯವೊಂದು ವಾಸ್ತವದ ಪ್ರತಿನಿಧಿಯಾಗಿರದೇ, ವಾಸ್ತವದ ಸಾಧ್ಯತೆಯಾಗಿದ್ದು ಮತ್ತೇನನ್ನೋ ಪ್ರತಿನಿಧಿಸುವುದಾದರೆ ಅದೊಂದು ಪರಿಗಣಿಸಬೇಕಾದ ರೂಪಕಸಾಧ್ಯತೆ ಎಂದು ನನ್ನ ತಿಳುವಳಿಕೆ.

ನನ್ನ ಗ್ರಹಿಕೆಯಲ್ಲಿ, ಭೈರಪ್ಪನವರು ತೀವ್ರವಾದಿ ನಿಜ. ಕೋಮುವಾದಿ ಎನ್ನುವುದಕ್ಕೆ ನನಗೆ ಅರ್ಹತೆಯಿಲ್ಲ. ಆದರೆ ಅಸ್ಥಿರಭಾವ ಕಾಡಿರುವಂತಹ ಹಿಂದು ಎನ್ನುವುದು ನಿಜ. ಅವರಿಗೆ ಆಂಶಿಕ ಸತ್ಯಗಳು ಕಾಣುತ್ತಿವೆ. ಸೀಮಿತವಾದ ಒಳನೋಟದಿಂದ ಅವುಗಳ ಅಪಾಯಕಾರಿ ಹೆಣಿಗೆಯಲ್ಲಿ ತೊಡಗಿದ್ದಾರೆ. ಇದೊಂದು ದುರಂತ. ಕಮ್ಯುನಿಷ್ಟರ ತಪ್ಪು ಗ್ರಹಿಕೆಗಳನ್ನು, ನಮ್ಮ ಎಡಪಂಥೀಯರೆಂದೆನ್ನಿಸಿಕೊಂಡಿರುವವರ ವಕ್ರಗಳನ್ನು ತೀವ್ರವಾಗಿ ಪರಿಗಣಿಸಿದ್ದಾರೆ.

ಇದೇ ಕಳಕಳಿಯಿಂದ ಕಾದಂಬರಿಗಳನ್ನು ಬರೆದಿರಲೂಬಹುದು. ಆದರೆ ಅವರ ಹಲವಾರು ಕೃತಿಗಳಾದರೂ ಇವುಗಳನ್ನು ಮೀರಿದ ಸಾಹಿತ್ಯಕೃತಿಗಳಾಗಿವೆ.

ರೂಪಕ ವ್ಯಸನತೆ

ವರ್ತಮಾನದ ಆತಂಕಗಳು ವ್ಯಕ್ತಿಗಳನ್ನು (ಉದಾಹರೆಣೆಗೆ ಡಾ ಭೈರಪ್ಪ) ಸೀಮಿತವಾಗಿ ಗ್ರಹಿಸುವಂತೆ ಮತ್ತೂ ಅನೇಕ ವಾಸ್ತವಗಳನ್ನು ಅತಿಯಲ್ಲಿ, ರೂಪಕದಲ್ಲಿ ಗ್ರಹಿಸುವಂತೆ ಪ್ರೇರೇಪಿಸುತ್ತಿದೆ.

ಸಾಫ್ಟ್‍ವೇರ್ ಕೈಗಾರಿಕೋದ್ಯಮಿಯಾದ ನಾರಾಯಣಮೂರ್ತಿಗಳು ಇಂದು ದೇಶದಲ್ಲಿ ಅತಿಹೆಚ್ಚು ಪ್ರಚಾರ ಪಡೆದಿರುವ ಕೈಗಾರಿಕೋದ್ಯಮಿ. ಸಹಜವಾಗಿ, ಅವರನ್ನು ಮೆಚ್ಚುವುದಕ್ಕೆಂತೋ ಅಂತೆಯೇ ಟೀಕಿಸುವುದಕ್ಕೆ ಸಾಕಷ್ಟು ವಿಷಯಗಳಿವೆ. ಸಾರ್ವಜನಿಕ ವ್ಯಕ್ತಿಗಳೆಲ್ಲರಲ್ಲಿ ಅಷ್ಟರಮಟ್ಟಿಗಿನ ಹುಳುಕು ಸಾರ್ವಜನಿಕವಾಗಿ ಕಂಡೇ ಕಾಣುತ್ತದೆ. ಆದರೆ, ಭಾರತದ ಕೈಗಾರಿಕಾಪ್ರಪಂಚದಲ್ಲಿ ಕೆಲ ಒಳ್ಳೆಯ ಬದಲಾವಣೆಗಳು ಅವರಿಂದಲೇ ಆದದ್ದು (ಅದು ಕನ್ನಡ ಸಂಸ್ಕೃತಿಯ ಪ್ರಭಾವ ಎಂದೇ ನಾನು ಪರಿಗಣಿಸಿದ್ದೇನೆ). ದುರಂತವೆಂದರೆ, ಒಂದೆಡೆ, ಈವರೆಗೆ ನಾರಾಯಣಮೂರ್ತಿಗಳ ಬಗ್ಗೆ ಒಂದೂ ಮೆಚ್ಚುಗೆಯ ಮಾತನ್ನಾಡದವರು ಸಾರ್ವಜನಿಕವಾಗಿ ಅವರನ್ನು ಟೀಕಿಸುತ್ತಾರೆ. ಮತ್ತೊಂದೆಡೆ, ಅವರ ಅಭಿಮಾನಿಗಳ ಕಾಳಜಿ ಅವರ ಭಜನೆಗಷ್ಟೇ ಸೀಮಿತ. ಹೀಗಿರುವಾಗ ನಷ್ಟ ದೇಶಕ್ಕೆ, ಸ್ವತಃ ಮೂರ್ತಿಗಳಿಗೆ. ಎಲ್ಲಾ ಟೀಕೆಗಳೂ ಪೂರ್ವಾಗ್ರಹದಂತೆ ಕಾಣುತ್ತದೆ. ಎಲ್ಲಾ ಮೆಚ್ಚುಗೆಯೂ ಚಮಚಾಗಿರಿಯಂತೆ ಕಾಣುತ್ತದೆ. ಒಟ್ಟಿನಲ್ಲಿ ಒಬ್ಬರ ಪ್ರತಿಕ್ರಿಯೆ ಮತ್ತೊಬ್ಬರನ್ನು ಕೆರಳಿಸುತ್ತದೆಯೇ ಹೊರತು, ಚಿಂತನೆಯ, ಆತ್ಮವಿಮರ್ಶೆಯ ಸಾಧ್ಯತೆ ಸೊನ್ನೆಯಾಗುತ್ತದೆ. ಧಾರೆಗಳ ನಡುವಣ ಸಂವಾದ ಸೊನ್ನೆ. ಇದಕ್ಕೆ ಮುಖ್ಯವಾದ ಕಾರಣ ಜಾಗತೀಕರಣದ ಹಿನ್ನೆಲೆಯಲ್ಲಿ ಅವರನ್ನು ಅತಿಯಾಗಿ ಗ್ರಹಿಸುವುದು.

ಈಗ ಕೈಗಾರಿಕೋದ್ಯಮಿಯೊಬ್ಬರು ಮೋದಿಯವರನ್ನು ದಕ್ಷತೆಗೆ ಮೆಚ್ಚುವುದಾದರೆ? ಕೈಗಾರಿಕೆಗಳಲ್ಲಿರುವವರಿಗೆ ದಕ್ಷತೆಯ ಬಗ್ಗೆ ಸಹಜವಾದ ಆಕರ್ಷಣೆಯಿರುತ್ತದೆ. ಮಿಕ್ಕೆಲ್ಲಕ್ಕೂ ಕುರುಡಾಗುವುದು ಸಾಧ್ಯವಿದೆ. ಆದರೆ ಅತಿರೇಕಗಳನ್ನು ಅನುಮೋದಿಸಬಹುದು ಎನ್ನುವ ಅರ್ಥದ ಮಾತುಗಳು ವರ್ತಮಾನದ ಅತಿ-ಗ್ರಹಿಕೆ. ಅಂತೆಯೇ, ಕೈಗಾರಿಕೋದ್ಯಮಿಯೊಬ್ಬರು ಭೈರಪ್ಪನವರ ಸಾಹಿತ್ಯವನ್ನು ಶ್ರದ್ಧೆಯಿಂದ ಓದುವುದು ಅವರಿಬ್ಬರೂ ಪ್ರತಿನಿಧಿಸುವ ಧಾರಾ-ಮಿಲನದ ಅನಾಹುತಕಾರಿ ಸಾಧ್ಯತೆಯಾಗಿ ಕಾಣುವುದು ಸರಿ. ಅಂತಹ ಸಾಧ್ಯತೆ ರೂಪಕಗಳೈ ಸಾಹಿತ್ಯದಲ್ಲಿ ಮೂಡಿಬರುವುದು ಸರಿ. ಆದರೆ ಆ ಸಾಧ್ಯತೆ ವಾಸ್ತವ-ಸತ್ಯವೆಂದು ಗ್ರಹಿತವಾಗುವುದು ದೌರ್ಭಾಗ್ಯಕರ. ಸಾರ್ವಜನಿಕ ಸಭೆಯಲ್ಲಿ ಇಂತಹ ರೂಪಕದ ಉಲ್ಲೇಖವಾದರೆ, ರೂಪಕವನ್ನು ನಿರ್ಮಿಸುವ ವಾಸ್ತವದ ದ್ರವ್ಯಗಳಿಗೆ ಅನ್ಯಾಯ ಮಾಡಿದ ಹಾಗಾಗುವ ಸಾಧ್ಯತೆ ಇದೆ. ಜೊತೆಗೆ ಇದು ಯಾವುದೇ ಸಂವಾದಕ್ಕೆ ಪ್ರೇರೇಪಿಸದೇ ಸಮಾಜದ ಬಿರುಕನ್ನು ಮತ್ತಷ್ಟು ತೀವ್ರಗೊಳಿಸುವಂತಹ ಸಾಧ್ಯತೆಯೇ ಹೆಚ್ಚು.

ಮತ್ತೆ ತಾತ್ವೀಕರಿಸಬಯಸುತ್ತೇನೆ. ರೂಪಕವೆನ್ನುವುದು ಸಾಮುದಾಯಿಕ ಸತ್ಯ. ಅದನ್ನು ನಿರ್ಮಿಸುವ ದೇಶ-ಕಾಲದ ವಾಸ್ತವದ ದ್ರವ್ಯಗಳ ವಿಷಯದಲ್ಲಿ ಅದು ಸಾಧ್ಯತೆ ಮಾತ್ರ. ಅದು ಸತ್ಯವೋ ಅರೆಸತ್ಯವೋ ಸುಳ್ಳೋ ಆಗಿರಬಹುದು. ಹೀಗಿದ್ದರೂ ರೂಪಕ ಮಾತ್ರ ಸತ್ಯವಾಗಿರಲೂಬಹುದು. ರೂಪಕವು ವಾಸ್ತವದ ಮೇಲೆ ಬೀರುವ ಪರಿಣಾಮದ ಹೊಣೆ ರೂಪಕವನ್ನು ಗ್ರಹಿಸುವ ಅಥವಾ ಸೃಷ್ಟಿಸುವವನ ಮೇಲಿದ್ದೇ ಇರುತ್ತದೆ. ಎಚ್ಚರ ತಪ್ಪಿ, ಪುರಾವೆ ಸಾಲದೇ ಹೊರಬರುವ ಮಾತು ಆ ರೂಪಕದ ವಾಸ್ತವ-ಸಾಧ್ಯತೆಗಿಂತಲೂ ಹೆಚ್ಚಿನ ಅಪಾಯ ಸೃಷ್ಟಿಸೀತು.

ನನ್ನನ್ನು ತಲ್ಲಣಗೊಳಿಸುತ್ತಿರುವ ವಿಷಯವೆಂದರೆ, ನವಭಾರತದ ನವಗುಜರಾತ್ ಈ ಬಗೆಯ ಅತಿಗ್ರಹಿಕೆಗೆ ನಮ್ಮನ್ನು ಅಣಿಗೊಳಿಸುತ್ತಿದೆಯೆನ್ನುವುದು. ಮತೀಯತೆಯ ಕರಾಳತೆಗೆ ಗುಜರಾತಿನ ಪ್ರಕ್ರಿಯೆ ಒಂದು ರೂಪಕ ನಿಜ. ಮಿಕ್ಕೆಡೆ ಅದರ ಸಾಧ್ಯತೆಯೂ ನಿಜ. ಆದರೆ ಕರ್ನಾಟಕದಲ್ಲಿ ಗುಜರಾತನ್ನು ಸೃಷ್ಟಿಸುವ ಪ್ರಯತ್ನ ಎನ್ನುವುದು ಒಂದು ಅತಿರೇಕದ ಗ್ರಹಿಕೆ. ಅದು ನಿಜವೋ ಸುಳ್ಳೊ ಹೇಳುವುದು ಕಷ್ಟ. ನಾಲ್ಕು ವರ್ಷ ಗುಜರಾತಿನಲ್ಲಿ ಕಳೆದವನಾಗಿ, ಸೂರತ್ತಿನ ಕೋಮುಹಿಂಸೆಯ ತೀರತೆಯಲ್ಲಿ ಅಲ್ಲಿದ್ದವನಾಗಿ ನನಗೆ ಈ ಚರ್ಚೆ ಕೇವಲ ಅಮೂರ್ತ ವಿಚಾರಗಳ ಜೊತೆಗಿನ ಗುದ್ದಾಟವಾಗದೇ, ಜೀವವವನ್ನು ಹಿಡಿದಲ್ಲಾಡಿಸುವ ವಿಷಯವಾಗಿದೆ.

ಭಾರತೀಯ ಸಂಸ್ಕೃತಿ, ಕೋಮುವಾದ ಮತ್ತು ಜಾಗತೀಕರಣ

ಈ ಎಲ್ಲದರ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿಯೆನ್ನುವುದಿದೆ. ನಮ್ಮ ಎಲ್ಲಾ ಧಾರೆಗಳೂ ಸಹ ಇದೇ ಪದವನ್ನುಚ್ಛರಿಸಿದರೂ, ಗ್ರಹಿಸಿರುವ ರೀತಿ ಮಾತ್ರ ಬೇರೆ. ಸಂಘಪರಿವಾರ, ಗಾಂಧಿವಾದಿಗಳು, ಹಳೆಯ ಎಡಪಂಥೀಯರು, ನವ ಎಡಪಂಥೀಯರು, ಸೆಕ್ಯುಲರ್-ವಾದಿಗಳೂ, ಸಂಪೂರ್ಣವಾಗಿ ಪಾಶ್ಚಾತ್ಯರಾಗಿವವರು, ಸಂಘಪರಿವಾರಿಗಳಲ್ಲದೆ ಪರಂಪರೆಯನ್ನು ಪ್ರತಿನಿಧಿಸುತ್ತೇವೆನ್ನುವವರು, ಸಮಾಜವಾದಿಗಳು - ಹೀಗೆ ಭಾರತೀಯ ಸಂಸ್ಕೃತಿಯನ್ನುವುದರ ಕುರಿತು ಎಲ್ಲರಿಗೂ ಅವರದ್ದೇ ಆದ ಪರಿಕಲ್ಪನೆಯಿದೆ. ಕಾಲಕಾಲಾಂತರದಲ್ಲಿ ಅದು ಬದಲಾವಣೆಯೂ ಆಗಿದೆ. ತಮಾಷೆಯೆಂದರೆ, ಪ್ರತಿಯೊಂದು ಧಾರೆಯೂ ಮತ್ತೊಂದು ಧಾರೆ ಯಾವ ರೀತಿಯಲ್ಲಿ ಭಾರತೀಯ ಸಂಶ್ಕೃತಿಯನ್ನು ಗ್ರಹಿಸುತ್ತಿದೆ ಎನ್ನುವುದರ ಕುರಿತು ಸರಿಯಾದ ಮತ್ತು ತಪ್ಪು ಕಲ್ಪನೆಗಳನ್ನೂ ಹಿಂದಿದೆ. ಪ್ರತಿಯೊಂದು ಧಾರೆಗೂ ಭಾರತೀಯ ಸಂಸ್ಕೃತಿಯನ್ನು ತಮ್ಮ ಇವತ್ತಿನ ಆಲೋಚನೆಗಳಿಗನುಗುಣವಾಗಿ ಪುನರ್ನಿರ್ಮಿಸಿಕೊಳ್ಳುವ ತವಕವಿದೆ. ಭಾರತೀಯ ಸಂಸ್ಕೃತಿಯ ಕುರಿತು ಅಕ್ಷೆಪವೂ ಇದೆ, ಆ ಆಕ್ಷೆಪಣೆಗಳನ್ನು ಭಾರತೀಯ ಸಂಸ್ಕೃತಿಯಲ್ಲೇ ನಿವಾರಿಸಿಕೊಳ್ಳುವ ತವಕವೂ ಇದೆ. ಎಲ್ಲರೂ ತಮ್ಮದೇ ಇತಿಹಾಸ ನಿರ್ಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇದು ಪರ್ಯವಸಾನವಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ತಮ್ಮ ಸಮಾನಧರ್ಮಿಗಳನ್ನೂ, ತಮ್ಮ ವೈರಿಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ.

ಇಂದು ಸಂಘಪರಿವಾರ ಭಾರತೀಯ ಸಂಸ್ಕೃತಿಯನ್ನು ಗ್ರಹಿಸುತ್ತಿರುವ ರೀತಿ ಅನೇಕರಿಗೆ ಆತಂಕ ತಂದಿದೆ. ನನ್ನಂಥವರು ಗ್ರಹಿಸುತ್ತಿರುವ ರೀತಿಗೆ ಸಾಕಷ್ಟು ವ್ಯತಿರಿಕ್ತವೂ ಆಗಿದೆ. ಸಂಘಪರಿವಾರಕ್ಕೆ 'ಕಳೆದುಹೋಗುತ್ತಿದೆ' ಎಂದೆನ್ನಿಸುವ ಅಂಶಗಳನ್ನು 'ರಕ್ಷಿಸಬೇಕು' ಎಂದೆನ್ನಿಸುವ ವಿಚಾರಗಳ ರಕ್ಷಿಸುವ ಭರದಲ್ಲಿ, 'ನನ್ನಂಥವರಿಗೆ ಮುಖ್ಯವಾಗುವ' ಭಾರತೀಯ ಸಂಸ್ಕೃತಿಯ ನಾಶದ ಬೀಜವಿದೆ. ಈ ಕುರಿತು ಆತಂಕ ಸಹಜ. ನನ್ನ ಆಕ್ಷೇಪಣೆಯಿರುವುದು ಈ ಆತಂಕವನ್ನ್ನು ಗ್ರಹಿಸುವ ಮತ್ತು ವಿರೋಧಿಸುವ ರೀತಿ. ಇದು 'ಭಾರತೀಯ ಸಂಸ್ಕೃತಿಯ ಮುಖೀಯತೆಯನ್ನು ನಾಶಪಡಿಸುವ ಹುನ್ನಾರ' ಎಂದು ಬಣ್ಣಿಸುವ ಅನೇಕ ಚಿಂತಕರು, 'ಹುನ್ನಾರ' ಎನ್ನುವ ಪದಬಳಕೆಯ ಅನರ್ಥಕತೆಯನ್ನು, ಅಪಾಯವನ್ನೂ ಗ್ರಹಿಸಿದಂತಿಲ್ಲ. ಆ ಪದಬಳಕೆ ಸತ್ಯವನ್ನು ಪ್ರತಿನಿಧಿಸುತ್ತದೆಯೋ ಇಲ್ಲವೋ ಒಂದೆಡೆಯಾದರೆ, ಅದು ಜನರಿಗೆ ಅರ್ಥವಾಗುವುದೇ ಇಲ್ಲ ಎನ್ನುವುದು ನನ್ನ ಹೆಚ್ಚಿನ ಕಳಕಳಿ. ತಮಗರಿವಿಲ್ಲದಂತೆ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ ಎಂದರೆ ಸ್ವಲ್ಪವಾದರೂ ಅರ್ಥವಾದೀತು. ಈ ರೀತಿಯ ಅಭಿಪ್ರಾಯ ಮಂಡನೆಗಳು ಕಂದಕವನ್ನು ಹೆಚ್ಚಿಸುತ್ತಿವೆ ಎನ್ನುವುದನ್ನು ನಾನು ನನ್ನ ಬ್ಲಾಗಿನಲ್ಲಿ ಅನೇಕ ವೇಳೆ ಬರೆದಿದ್ದೇನೆ. ಆದರೆ ಇದನ್ನು ನಾನು ಇಷ್ಟಪಡುವವರಿಗೆ ಮುಟ್ಟಿಸಲು ವಿಫಲನಾಗಿದ್ದೇನೆನ್ನಿಸುತ್ತದೆ.

ಜಾಗತೀಕರಣದ ಕುರಿತಾಗಿಯೂ 'ಹುನ್ನಾರ' ಪದಬಳಕೆ ಇದೇ ರೀತಿಯಾಗುತ್ತಿದೆ. ಜಾಗತೀಕರಣವೆನ್ನುವುದು ನಮ್ಮ ದೇಶದಲ್ಲಿ ಆರಂಭವಾದುದಾದರೂ ಹೇಗೆ ಎನ್ನುವುದನ್ನು ನಾವಿನ್ನೂ ಪ್ರಶ್ನಿಸಿ ಉತ್ತರಿಸಿಲ್ಲ. ನಮ್ಮ ಸರಕಾರಗಳ ಯಾವ ವೈಫಲ್ಯದಿಂದ ಜಾಗತೀಕರಣ ಆರಂಭವಾಗುವುದು ಸಾಧ್ಯವಾಯಿತು ಎನ್ನುವ ಪ್ರಶ್ನೆ ಅದೇಕೋ ನಾವು ಕೇಳಿಕೊಳ್ಳುವುದೇ ಇಲ್ಲ. ಆದ್ದರಿಂದ 'ಹುನ್ನಾರ' ಪದಬಳಕೆ ಸರಿಯಲ್ಲವೆಂದೆನ್ನಿಸುತ್ತದೆ.

ಈ ಎರಡರ ಹಿನ್ನೆಲೆಯಲ್ಲೂ ಜಾಗತಿಕವಾದ ಪ್ರಕ್ರಿಯೆಗಳಿವೆ. ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಗ್ರಹಿಸುವ, ನಿರ್ಮಿಸುವ ಅನಿವಾರ್ಯತೆಗಳೂ ಸಹ ಇದರಿಂದಲೇ ಪ್ರಾಯಶಃ ಸೃಷ್ಟಿಯಾಗಿದೆ. ಈ ಜಾಗತಿಕ ಪ್ರಕ್ರಿಯೆಗಳನ್ನು ಎದುರಿಸುವ ಪ್ರತಿಭೆ ನಮಗೆ ಸಾಲದೇ ಹೋಯಿತೇನೋ.
ಸೆಕ್ಯುಲರಿಸಂ-ನ ಮತೀಯತೆ

ಕೈಗಾರೀಕರಣ, ಆಧುನಿಕತೆ, ರಾಷ್ಟ್ರೀಯತೆ ಮುಂತಾದ ಬೃಹತ್ ಪ್ರಕ್ರಿಯೆ, ಭಿತ್ತಿಗಳನ್ನೆದುರಿಸುತ್ತಿರುವ ನಮ್ಮ ದೇಶ ಮತ್ತು ಸಂಸ್ಕೃತಿ ಅನೇಕ ರೀತಿಗಳಲ್ಲಿ ಬದಲಾಗುತ್ತಿದೆ. ಈ ಬೃಹತ್ ಪ್ರಕ್ರಿಯೆಗಳು ಸಮುದಾಯಗಳನ್ನು ಒಡೆದು ಮಾಸ್-ಸೊಸೈಟಿಯನ್ನು ಸೃಷ್ಟಿಸುತ್ತಿದೆ. ಈ ಪ್ರಕ್ರಿಯೆಗಳು ಮೂಡಿಸುತ್ತಿರುವ ಬಿರುಕು ಅನೇಕ ತೀವ್ರವಾದವನ್ನೂ ಸೃಷ್ಟಿಸುತ್ತಿವೆ.

ಜಾಗತೀಕರಣ, ಮತೀಯತೆಗಳು ಒಂದು ಬಗೆ ತೀವ್ರವಾದವಾಗಿ ಗ್ರಹಿಸಲಾಗಿದೆ. ಆದರೆ, ಇವುಗಳನ್ನು ಸರಿದೂಗಿಸುತ್ತಿದೆ ಎಂದು ನಂಬಲಾಗಿರುವ ಸೆಕ್ಯುಲರಿಸಂ ಕೂಡಾ ಒಂದು ತೀವ್ರವಾದವೇ ಎಂದು ನನಗೆ ಅನೇಕ ವೇಳೆ ಅನ್ನಿಸಿದೆ. ನಮ್ಮ ದೇಶದಲ್ಲಿ ಸೆಕ್ಯುಲರಿಸಂ ಕೂಡಾ ಮತೀಯವಾದದ ಸ್ವರೂಪದಲ್ಲೇ, ತೀವ್ರತೆಯಲ್ಲೇ, ಅಸಹನೆಯಲ್ಲೇ ಮುನ್ನಡೆಸಿಕೊಂಡು ಬರಲಾಗಿದೆ ಅನ್ನಿಸುತ್ತದೆ. ಈಗ ಭೈರಪ್ಪನವರ ವಿಜಯಕರ್ನಾಟಕದ ಪತ್ರಕ್ಕೆ ಕಾರ್ನಾಡರು ಬರೆದ ಪತ್ರವನ್ನೇ ನೋಡಿ. ಅಥವಾ ಎನ್.ಎಸ್.ಶಂಕರರ ಆವರಣ ಅನಾವರಣ ಪುಸ್ತಕದ ಧ್ವನಿಯನ್ನೇ ನೋಡಿ. ಅವುಗಳ ಹಿಂದಿರುವ ಅಸಹನೆ ಮಾನವೀಯ ಕಳಕಳಿ ಎಂದು ನನಗನ್ನಿಸುತ್ತಿಲ್ಲ. ಬದಲಾಗಿ ಸೆಕ್ಯುಲರಿಸಂ ಎನ್ನುವ ಮತದ ಅಸಹನೆ ಎಂದೆನ್ನಿಸುತ್ತಿದೆ. ಸೆಕ್ಯುಲರಿಸಂ-ನಲ್ಲೂ ಒಂದು ಬಗೆಯ ಮೇಲ್ಮೆಯ ಅಹಂಕಾರವೇ ನನಗೆ ಕಾಣುತ್ತಿದೆ. ರಾಷ್ಟ್ರೀಯತೆ, ಕೈಗಾರೀಕರಣದ ಕಾರಣಗಳಿಗೋಸ್ಕರವಾಗಿ ನಮ್ಮ ದೇಶದಲ್ಲಿ ಉಂಟಾಗಿರುವ ಅಸಹಜ ವ್ಯವಸ್ಥೆಗಳಲ್ಲಿ ಸೆಕ್ಯುಲರಿಸಂ ಕೂಡಾ ಒಂದಾಗಿರಬಹುದಲ್ಲವೇ? ಯಾವುದನ್ನು ಸೆಕ್ಯುಲರಿಸಂ ವಿರೋಧಿಸುತ್ತದೆಯೂ ಅದರ ಗುಣ-ಸ್ವರೂಪಗಳನ್ನೂ ಅರಿಯದೇ ಆವಾಹಿಸಿಕೊಂಡುಬಿಟ್ಟಿದೆಯೇ?

ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ತಾತ್ವಿಕತೆಗಳಿಂದ ದೂರವಿರುವ ಸಾಮಾಜಿಕ-ಸಾಂಸಾರಿಕನನ್ನು ನಮ್ಮ ಸೆಕ್ಯುಲರಿಸ್ಟರು ತಲುಪಲಾಗಿಲ್ಲವಲ್ಲ. ಸೆಕ್ಯುಲರಿಸ್ಟರ ಪರಿಭಾಷೆ 'ಕಮ್ಯುನಲ್'-ಆದವರನ್ನಿರಲಿ, ಇದರಿಂದ ದೂರವಿರುವ ಮನುಷ್ಯನನ್ನೂ ಸಂವಾದದಲ್ಲಿ ತೊಡಗಿಸುವುದೇ ಇಲ್ಲ ಕೇವಲ ಕೆರಳಿಸುತ್ತದೆ. 'ಆವರಣ' ತಲುಪಿದಷ್ಟು ಜನರನ್ನು ಸೆಕ್ಯುಲರಿಸ್ಟರು ತಲುಪಲಾಗುತ್ತಿಲ್ಲವೆಂದರೆ ತನ್ನ ಸಂವಹನ ಮತ್ತು ಆಲೋಚಾನಾ ಕ್ರಮಗಳನ್ನು ಮರುವಿಮರ್ಶೆಪಡಿಸಿಕೊಳ್ಳುವ ಅವಶ್ಯಕತೆಯನ್ನು ಸೆಕ್ಯುಲರಿಸಂ ಮನಗಾಣಬೇಕಿದೆ.

ಜಾಗತೀಕರಣ, ರಾಷ್ಟ್ರೀಯತೆಗಳು ಭಾರತಕ್ಕೆ ಅಂತಹ ಹೊಸತೇನೂ ಅಲ್ಲವೆನ್ನಬಹುದು. ಆದರೆ ಸೆಕ್ಯುಲರಿಸಂ ಮಾತ್ರ ಹೊಸ ತಾತ್ವಿಕತೆಯಾಗಿದೆ. ಅದನ್ನು ಭಾರತೀಯ ಸಂಸ್ಕೃತಿ ನಿರ್ವಹಿಸುವ ರೀತಿಯೇ ನಾಳೆ ನಮ್ಮ ಭವಿಷ್ಯವನ್ನು ನಿರ್ಧರಿಸಲಿದೆಯೇನೋ ಎನ್ನುವ ನನ್ನೀ ಆತಂಕಕ್ಕೆ ಕಾರಣವಿದೆ.
ಇವತ್ತಿನ ನಮ್ಮ ಪರಿಭಾಷೆಯ ಸಮಸ್ಯೆ: ಸೆಕ್ಯುಲರ್ ಇಲ್ಲವೇ ಕಮ್ಯುನಲ್

ಇವತ್ತಿನ ನಮ್ಮ ಸೆಕ್ಯುಲರಿಸಮ್ಮಿನ ಒಂದು ವಿಶಿಷ್ಟತೆಯೆಂದರೆ, ಸೆಕ್ಯುಲರಿಸ್ಟರು 'ಒಂದೋ ನೀವು ಸೆಕ್ಯುಲರ್ ಇಲ್ಲವೋ ನೀವು ಕಮ್ಯುನಲ್' ಎನ್ನುವ ಅರ್ಥದಲ್ಲಿ ಮಾತನಾಡುತ್ತಾರೆ. ಇದು ಸೆಕ್ಯುಲರಿಸಮ್ಮಿನ ಮೂಲದಲ್ಲೇ ಇದೆಯೋ ಅಥವಾ ನಿವಾರಿಸಿಕೊಳ್ಳಬಹುದಾದ ಇವತ್ತಿನ ವಿಕೃತಿಯೋ ಸ್ಪಷ್ಟವಿಲ್ಲ. ಒಟ್ಟಿನಲ್ಲಿ, ಇದು ವಾಸ್ತವವನ್ನು ಎರಡು ದಿಕ್ಕಿನಲ್ಲಿ ಒಡೆದು ನೋಡುವ ಕ್ರಮ. ಅಮೇರಿಕದ ಅಧ್ಯಕ್ಷ ಬುಷ್ 'ಒಂದೋ ನೀವು ನಮ್ಮ ಪರವಿದ್ದೀರಿ, ಇಲ್ಲವೋ ನಮ್ಮ ವಿರುದ್ಧ' ಎಂದು ಹೇಳಿದ್ದನ್ನು ಸೆಕ್ಯುಲರಿಸ್ಟರು, ಪ್ರಜ್ಞಾವಂತರು ಟೀಕಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಿರುತ್ತ, ನಮ್ಮ ದೇಶದ ಸೆಕ್ಯುಲರಿಸ್ಟರು ಈ ಬಗೆಯ ಅವಿಮರ್ಶಾತ್ಮಕವಾದ, ಅವೈಚಾರಿಕವಾದ ನಿಲುವನ್ನು ತಳೆದಿರುವುದು ಆತಂಕಕಾರಿಯಾದ ವಿಷಯ. ಇದು ಕಮ್ಯುನಲ್ ಅಲ್ಲದವರನ್ನು ಕಮ್ಯುನಲ್ ಮಾಡುವ ಅಭಿವ್ಯಕ್ತಿ ಕ್ರಮ. ವಿರುದ್ಧವಾಗಿ, ಹಿಂದೂಗಳಲ್ಲಿ ಜವಾಬ್ದಾರಿಯುತರಾದವರು ಮುಸಲ್ಮಾನರಲ್ಲಿ ಸೌಮ್ಯವಾದಿಗಳ ಕೈಬಲಪಡಿಸಬೇಕಾದ ರೀತಿಯ ಅಭಿವ್ಯಕ್ತಿಕ್ರಮವನ್ನು ನಾವು ಸಾಧಿಸಿಕೊಳ್ಳಬೇಕಾದ್ದು ಇಂದಿನ ತುರ್ತು. ತೀವ್ರವಾದಿಗಳನ್ನು ಟೀಕಿಸುವ ಭರದಲ್ಲಿ ಸೌಮ್ಯವಾದಿಗಳ ಕೈಸೋಲಾಗುವಂತೆ ಮಾಡಿದರೇನು ಫಲ ಎನ್ನುವ ವಾದವನ್ನು ಹಿಂದು-ಮುಸಲ್ಮಾನರಿಬ್ಬರ ಜೊತೆಗಿನ ಸಂವಾದದಲ್ಲೂ ಬಯಸುತ್ತೇನೆ. ಆದರೆ, ಹಿಂದೂಗಳ ವಿಷಯದಲ್ಲಿ ಇವತ್ತಿನ ನಮ್ಮ ಸೆಕ್ಯುಲರಿಸ್ಟರ ಅಭಿವ್ಯಕ್ತಿ ಕ್ರಮ ನನಗೆ ನಿರಾಶೆ ತಂದಿದೆ.

ಇದಕ್ಕೆ ತತ್ಕ್ಷಣದ ಒಂದು ಉದಾಹರಣೆ ಕೊಡುತ್ತೇನೆ. ಬಾಬಾಬುಡನ್-ಗಿರಿಯಲ್ಲಿ ಮೊನ್ನೆ ಡಿಸಿ ಒಂದು ಆದೇಶ ನೀಡಿದರು. ಅದು ಸಂಘ ಪರಿವಾರದ ಯಾವುದೋ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸುವಂಥದ್ದಾಗಿತ್ತು. ಅದಕ್ಕೆ ಸೆಕ್ಯುಲರಿಸ್ಟರೊಬ್ಬರ ಪ್ರತಿಕ್ರಿಯೆ ಹೀಗಿತ್ತು: 'ಇದು ಕೋಮು ಸೌಹಾರ್ದ ವೇದಿಕೆಯ ಹೋರಾಟಕ್ಕೆ ಸಂದ ಜಯ'. ಆತಂಕಕಾರಿಯಾದ ವಿಷಯವೆಂದರೆ, ಇದು ಯುದ್ಧದ ಪರಿಭಾಷೆ. ವಿಷಾದಪೂರ್ಣವಾಗಿ ಬರಬೇಕಾಗಿದ್ದ ಅಭಿವ್ಯಕ್ತಿ ಯುದ್ಧದ ಪರಿಭಾಷೆಯಲ್ಲಿ, ಸಂಘ ಪರಿವಾರವನ್ನು ಕೆಣಕುವ, ಕೆರಳಿಸುವ ರೀತಿಯಲ್ಲಿದೆ. ಇದು ನನಗೆ ಆತ್ಮಹತ್ಯಾತ್ಮಕವೆನಿಸಿದೆ.

ಗ್ರಹಿಕೆಯ ಭಾಷೆ, ಸಂವಹನದ ಭಾಷೆ ಮತ್ತು ಎಡಪಂಥೀಯ ನಿಲುವುಗಳು

ನಮ್ಮ ಪರಿಭಾಷೆಯ ಈ ಸಮಸ್ಯೆಯನ್ನು ಇದನ್ನೊಂದಿಷ್ಟು ತಾತ್ವೀಕರಿಸಿ ಮುಂದುವರೆಯುತ್ತೇನೆ.
ಸೆಕ್ಯುಲರಿಸ್ಟರ ಪರಿಭಾಷೆ ಒಂದು ಅಕ್ಯಾಡಮಿಕ್ ಐಡಿಯಾಲಜಿಯ ಗ್ರಹಿಕೆಯ ಭಾಷೆ. ಈ ಗ್ರಹಿಕೆಯ ಭಾಷೆ ಎಂದಿಗೂ ಸಂವಹನಭಾಷೆಯಾಗಿ ಪರಿಣಾಮಕಾರಿ, ಯಶಸ್ವಿಯಾಗಲಾರದು. ಇದು ತನಗೆ ತಾನೇ ಹೇಳಿಕೊಳ್ಳುವ, ತನ್ನಲ್ಲೇ ವಿಜೃಂಭಿಸುವ ಪರಿಭಾಷೆಯಾಗಿ ನನಗೆ ದುರಂತವಾಗಿ ಕಾಣುತ್ತಿದೆ. ವಸ್ತುವೊಂದನ್ನು ನಾವು ಕಾಣುವ ಕ್ರಮದಲ್ಲಿ ಅಭಿವ್ಯಕ್ತಿಸಬೇಕು ಎನ್ನುವ ಹಠ. ನಮ್ಮ ಕ್ರಮ ಪರಿಪೂರ್ಣ ಎನ್ನ್ನುವ ಅತಿಯಾದ ಆತ್ಮವಿಶ್ವಾಸ. ಅಲ್ಲದೇ, ಈ ರೀತಿಯಾದ position ತೆಗೆದುಕೊಳ್ಳುವುದು ಇಂದಿನ ಐತಿಹಾಸಿಕ ಅಗತ್ಯವೆನ್ನುವ ನಿಲುವು ಸಾಮಾನ್ಯವಾಗಿ ಎಡಪಂಥೀಯರಲ್ಲಿದೆ. ಈ ಪೊಸಿಷನ್ ಗಳಿಂದ ಏನು ಉಪಯೋಗವಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಅನೇಕ ಸಲ ನನಗೆ ಇದು False sense of satisfaction ಕೊಡುತ್ತದೆಯೇನೋ ಎನ್ನುವ ಅನುಮಾನವಿದೆ. ಅಲ್ಲದೆ, ಗ್ರಹಿಕೆಯೇ ಅಸಮರ್ಪಕವಾಗಿದೆ ಎಂದೆನ್ನಿಸಿದಾಗ position ಮತ್ತೂ ಕಷ್ಟವಾಗುತ್ತದೆ.
ನಮ್ಮಲ್ಲಿ ಕೋಮುವಾದಿಗಳೆಂದು ಕರೆಯಿಸಿಕೊಳ್ಳಲಾಗುತ್ತಿರುವ ಬಹುತೇಕರು ನನ್ನ ಪ್ರಕಾರ ಕೋಮುವಾದಿಗಳಲ್ಲ. ಅವರನ್ನು ಸರಿಯಾದ ಬಗೆಯಲ್ಲಿ ಗ್ರಹಿಸುವುದು ಮೊದಲು. position ನಂತರವಲ್ಲವೇ. ಈ position ಪದವೂ ಯುದ್ಧದ ಪರಿಭಾಷೆಯಾಗಿರುವುದು ನನಗೆ ದಿಗ್ಭ್ರಮೆಗೊಳಿಸುವ ವಿಷಯವಾಗಿದೆ. ಎಡಪಂಥೀಯರಿಗೆ ಹಿಂದೂ-ಮುಸಲ್ಮಾನರಲ್ಲಿ liberals ಆಗಿರುವವರು minority ಎನ್ನುವ ಪರಿಕಲ್ಪನೆಯಿದೆ. ಇದು ಮತ್ತೊಂದು ತಾತ್ವಿಕವಾಗಿ ಅಸಮರ್ಪಕವಾದ ಪರಿಕಲ್ಪನೆ. ಇಲ್ಲಿ ಬಹುತೇಕರು ಸೆಕ್ಯುಲರಿಸ್ಟರು ಅಂದುಕೊಳ್ಳುವ ರೀತಿಯಲ್ಲಿ ಪೂರ್ತಿಯಾಗಿ ಕೋಮುವಾದಿಗಳಲ್ಲ. ಈ ಅಸಮರ್ಪಕ ಗ್ರಹಿಕೆ ಒಂದು ಬಗೆಯ ಅನಗತ್ಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಆತಂಕದಿಂದ ಹುಟ್ಟುತ್ತಿರುವ ಭಾಷೆ ಯಾವ ಆತಂಕದ ಸ್ಥಿತಿಯನ್ನು ನಿರ್ಮೂಲ ಮಾಡಬಯಸುತ್ತದೆಯೋ ಅದನ್ನೇ ಪರೋಕ್ಷ್ಯವಾಗಿ ಪೋಷಿಸುತ್ತಿದೆ.

ಎಡಪಂಥೀಯರ ಈ ಬಗೆಯ ಗ್ರಹಿಕೆಯ ಸ್ವರೂಪ ಮತ್ತೊಂದು ಬಗೆಯ ಅಪಾಯಕ್ಕೆ ವಿಕೃತಿಗೆ ಕಾರಣವಾಗುತ್ತಿದೆ. ಎಡಪಂಥೀಯ ನಿಲುವುಗಳಿಗೆ ವಿರುದ್ಧವಾದ ಇತಿಹಾಸ ಪಠ್ಯಗಳನ್ನು ಪ್ರಸ್ತುತ ಪಡಿಸಿದಾಗ ಸೆಕ್ಯುಲರಿಸ್ಟರು ಒಂದೋ ಮೌನ ತಳೆಯುತ್ತಾರೆ, ಇಲ್ಲವೋ 'ಈ ವಿಷಯಗಳಲ್ಲಿ ನಮಗೆ ಇತಿಹಾಸದ ಅಗತ್ಯವಿಲ್ಲ. ಸ್ಮೃತಿಯೇ ಸಾಕು' ಎನ್ನುತ್ತಾರೆ. ನನ್ನ ಪ್ರಕಾರ ಇದು ಅರ್ಧಸತ್ಯವಷ್ಟೇ. ಹೀಗೆ ನಂಬುವ ಯಾರೂ JNU-ನ ಇತಿಹಾಸ ವಿಭಾಗವನ್ನು ಮುಚ್ಚುವಂತೆ ಕೋರಿಲ್ಲ. ಹಾಗಿದ್ದ ಪಕ್ಷದಲ್ಲಿ ಎಡಪಂಥೀಯ ಇತಿಹಾಸಕಾರರ ಕೃತಿಗಳಿಗೆ, ಗ್ರಹಿಕೆಗಳಿಗೆ ವಿರುದ್ಧವಾದ ಅರ್ಥಪೂರ್ಣವಾದ ಐತಿಹಾಸಿಕ ಅಧ್ಯಯನಗಳಿದ್ದರೆ ಅವುಗಳನ್ನು ಗಮನಿಸದೇ ಗತ್ಯಂತರವಿಲ್ಲ. ಇತ್ತೀಚೆಗೆ ನಾನು ಓದಿದ ಮಹತ್ವದ ಬರಹ ಧರಮಪಾಲರ ಸಮಗ್ರ ಸಂಪುಟ. ಇದರಲ್ಲಿನ ಬಹುತೇಕ ವಿಷಯಗಳು ನನಗೆ ಅರ್ಧಂಬರ್ಧ ಗೊತ್ತಿದ್ದವೇ ಆದರೂ, ನನ್ನ ಗೊತ್ತಿರದಿದ್ದ ೧೦-೧೫ ಮಹತ್ವದ ವಿಷಯಗಳಲೂ ಇದ್ದವು. ಅದರಲ್ಲಿ ಒಂದು, ಭಾರತದಲ್ಲಿ 'Feudalistic Society' ಎನ್ನುವುದು ಬ್ರಿಟಿಷ್ ಪೂರ್ವ ಕಾಲದಲ್ಲಿ ಇದ್ದಿರಬಹುದಾದ ಸಾಧ್ಯತೆ ಬಹಳ ಕಡಿಮೆ ಎಂದು ಧರಂಪಾಲರು ವಾದಿಸುತ್ತಾರೆ. ನನ್ನ ಸ್ಮೃತಿಯಲ್ಲಂತೂ ಅದಿಲ್ಲ. ಧರಮಪಾಲರನ್ನು ಕುರಿತು ಮತ್ತೊಮ್ಮೆ ದೀರ್ಘವಾಗಿ ಬರೆಯುತ್ತೇನೆ. ಆದರೆ ಎಡಪಂಥೀಯರು ಇಂತಹ ನಿದರ್ಶನಗಳನ್ನು ಪರಿಗಣಿಸಿದ್ದಾರೆಯೇ, ಚರ್ಚಿಸಿದ್ದಾರೆಯೇ? ತಮ್ಮ ತತ್ವಕ್ಕನುಗುಣವಾದ ಇತಿಹಾಸ ನಿರ್ಮಿಸಿಕೊಳ್ಳುವ ಭರದಲ್ಲಿ ಇವರ ಕಣ್ಣಿಗೆ ಬಿದ್ದರೂ ಬಿದ್ದಂತಿರದ ಈ ವಸ್ತುಗಳು ಬಲಪಂಥೀಯರಿಗೆ ಆಹಾರವಾಗಿರುವುದು, ಈ ಎಲ್ಲದರ ಹೊರತಾಗಿರುವ ಜನರಿಗೆ ಸೆಕ್ಯುಲರಿಸ್ಟರಿಂದ ದೂರವಾಗುವುದಕ್ಕೂ ಸಾಕಷ್ಟು ಸಹಾಯಕವಾಗಿರುವುದು ಸಹಜವಾಗಿದೆ.

ನಮ್ಮ ಎಡಪಂಥೀಯ ಸೆಕ್ಯುಲರಿಸ್ಟರ ಗ್ರಹಿಕೆಯ ಕುರಿತು ಮತ್ತೊಂದು ವಿಷಾದನೀಯ ಉದಾಹರಣೆ ಕೊಡುತ್ತೇನೆ. ಈಗ ನಮ್ಮ ದೇಶದ ಒಂದು ರಾಜ್ಯದಲ್ಲಿ ಬಲಪಂಥೀಯರ ಮೇಲುಗೈ ಮತ್ತು ಗೆಲುವಿನ ವಿಚಾರವನ್ನೇ ತೆಗೆದುಕೊಳ್ಳಿ. ನಮ್ಮ ಎಡಪಂಥೀಯರು ಒಟ್ಟಿಡೀ ಚುನಾವಣೆ ಕೋಮುವಾದದ platform ನಲ್ಲಿ ಮಾತ್ರ ನಡೆಯುತ್ತಿದೆ ಎಂದು ತಿಳಿದಂತಿದೆ. ಪ್ರತಿಯೊಂದು ಚುನಾವಣೆಯಲ್ಲಿ ಅನೇಕ ಪ್ರಾದೇಶಿಕವಾದ (ಜಿಲ್ಲ್ಲೆ, ತಾಲೋಕು) ಸತ್ಯಗಳು, ವೈರುಧ್ಯಗಳು ಹೆಚ್ಚು ಕೆಲಸ ಮಾಡುತ್ತವೆ. ಕೋಮು ವೈಷಮ್ಯ ಅದರಲ್ಲೊಂದಾಗಿರುತ್ತದೆ. ಮಿಕ್ಕ ವಿಷಯಗಳ ಕುರಿತು ಸೆಕ್ಯುಲರ್ ರಾಜಕೀಯ ಪಕ್ಷಗಳೇ ಆಗಲಿ, ಎಡಪಂಥೀಯರೇ ಆಗಲಿ ಸ್ವಲ್ಪವಾದರೂ ಗಮನ ಹರಿಸಿದಂತಿಲ್ಲ. ಇದು ನಿಸ್ಸಂಶಯವಾಗಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವ ಕ್ರಮವಾಗಿದೆ. ಇನ್ನು ಮಾತಿನ ರೀತಿಯಂತೂ ದೇವರಿಗೇ ಪ್ರೀತಿ. ನಮ್ಮ ಪ್ರಮುಖ ಪಕ್ಷವೊಂದರ ನೇತಾರರು ಆ ರಾಜ್ಯದ ಮುಖ್ಯಮಂತ್ರಿಯೊಬ್ಬರ ಕುರಿತು ಆಡಿದ ತೀವ್ರತರ ಮಾತು ವಿಕೋಪಕ್ಕೆ ತಿರುಗಿ ಎಲೆಕ್ಷನ್ ಕಮಿಷನ್‍ವರೆಗೆ ಹೋಯಿತು. ಇಷ್ಟು ಅವಮಾನ ಸಾಲದೆನ್ನುವಂತೆ, ನೇತಾರರು ನಿರೀಕ್ಷಿಸಿದ ಪರಿಣಾಮಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಮುಖ್ಯಮಂತ್ರಿಗಳು ಅದನ್ನು ತಮಗೆ ಅನುಕೂಲವಾಗುವಂತೆಯೇ ಬಳಸಿಕೊಂಡರೇನೋ ಎಂದೆನ್ನಿಸುವಷ್ಟರ ಮಟ್ಟಿಗೆ - Blunder of the Decade ಆಗಿ ಇತಿಹಾಸದಲ್ಲಿ ದಾಖಲಾಗಬಹುದು. ನನ್ನ ಅಭಿಪ್ರಾಯದಲ್ಲಿ ಒಂದು ೧೫-೨೦ ಸೀಟುಗಳನ್ನಾದರೂ ಈ ಕಾರಣದಿಂದ ಮುಖ್ಯಮಂತ್ರಿಗಳು ಗೆದ್ದಿರುತ್ತಾರೆ. ಇನ್ನು ಚುನಾವಣ ವಿಷಯಗಳ ವೈವಿಧ್ಯತೆಯ ಅವಜ್ಞೆಯಿಂದ ಮತ್ತಷ್ಟು ಸೀಟುಗಳು ಕಳೆದಿವೆ. ಈ ಎಲ್ಲ ಅಂಶಗಳ ಮೇಲೆ ಕೋಮು ವೈಷಮ್ಯ ತನ್ನ ಕೆಲಸ ಸಾಧಿಸುತ್ತದೆಯೇ ಹೊರತು, ಅದು ಮಾತ್ರವೇ ಎಲ್ಲವೂ ಆಗಿರುವುದಿಲ್ಲ. ಇವತ್ತಿನ ಪ್ರಕ್ರಿಯೆಗಳ ಬಿರುಕುಗಳಲ್ಲಿ ಕೋಮುವಾದ ವಿಜೃಭಿಸುತ್ತದೆ.

ಕೋಮುವಾದವನ್ನು ವಿರೋಧಿಸುವವರು ಆ ಬಿರುಕನ್ನು ಮುಚ್ಚುವುದಕ್ಕೆ ಅಶಕ್ತರಾಗಿರುವುದಷ್ಟೇ ಅಲ್ಲದೆ, ತಮಗೆ ಗೊತ್ತಿಲ್ಲದಂತೆ ಅವೇ ಬಿರುಕುಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ ಎನ್ನುವುದು ದುರಂತ.

ನಮ್ಮ ದೇಶದಲ್ಲಿ ಸೆಕ್ಯುಲರಿಸಂ-ನ ಪರಿಕಲ್ಪನೆ

ಇವತ್ತಿನ ವಾಸ್ತವದಲ್ಲಿ ನಾವು ಸೆಕ್ಯುಲರಿಸಮ್ಮನ್ನು ಗ್ರಹಿಸುವಂತೆ ಅದರ ಐತಿಹಾಸಿಕತೆಯಲ್ಲೂ ಗ್ರಹಿಸಬೇಕಿದೆ. ಅಂತೆಯೇ ಅದರ ಜೊತೆಗೇ ಬಳಸಲ್ಪಡುವ ಪರಿಕಲ್ಪನೆಗಳೂ ಸಹ.

ಸೆಕ್ಯುಲರಿಸಂ ಮತ್ತು ಲಿಬರಲಿಸಂ ಎರಡೂ ಪದಗಳಿಗೆ ಐತಿಹಾಸಿಕತೆಯಿದೆ, ಸಂಬಂಧಗಳಿವೆ. ಆದರೂ, ಭಾಷಿಕವಾಗಿ ಮತ್ತು ಇಂದು ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ಸ್ವರೂಪಗಳ ಹಿನ್ನೆಲೆಯಲ್ಲಿ ಹೇಳುವುದಾದರೆ - ಅವೆರಡೂ 'ಒಂದೇ' ಅಲ್ಲ. ಮೂಲಭೂತವಾಗಿ ಯೂರೋಪಿನ ರಿಲಿಜಿಯಸ್ ಸಮಾಜಗಳ ಸಂದರ್ಭದಲ್ಲಿ ಈ ಪರಿಕಲ್ಪನೆ ಹುಟ್ಟಿದ್ದರೂ, ಅದು ನಮ್ಮಲ್ಲಿ ಬೇರೆ ಬೇರೆ ರೀತಿಗಳಲ್ಲಿ ಬಳಕೆಯಾಗುತ್ತಿದೆ. ಅವುಗಳಲ್ಲಿ ಕೆಲವು ಹೀಗಿವೆ.

೧. ಧರ್ಮನಿರಪೇಕ್ಷತೆ (ರಿಲಿಜನ್ ಪದಕ್ಕೆ ಧರ್ಮ ಪದವನ್ನು ಉಪಯೋಗಿಸುವುದು ನನಗೆ ಹಿಂಸೆಯ ವಿಷಯ).

೨. ಜಾತ್ಯತೀತತೆ

೩. ಕೋಮು‍ಅಸಹನೆ ಉಳ್ಳದವನು (ಕೋಮುವಾದಿಯಲ್ಲದವನು)

೪. ಲಿಬರಲ್

೫. ಎಲ್ಲಾ ಮತಗಳನ್ನೂ ಸಮಾನವಾಗಿ ಕಾಣುವವನು.

೬. ಮತೀಯತೆಯನ್ನು ಒಪ್ಪದವನು

ಸೆಕ್ಯುಲರಿಸಂ ಯೂರೋಪಿನ ಸಂದರ್ಭದಲ್ಲಿ, ದೇಶವ್ಯಾಪಾರದ ನಿರ್ವಹಣೆಯಿಂದ ಚರ್ಚನ್ನು ದೂರವಿಡುವ ಅವಶ್ಯಕತೆಯಿಂದಾಗಿ, ಹುಟ್ಟಿದ ಪರಿಕಲ್ಪನೆ. ಅದನ್ನು ನಮ್ಮಲ್ಲಿ ಇನ್ನೂ ಸರಿಯಾದ ಅನುವಾದವನ್ನು ಮಾಡಿಕೊಳ್ಳಲಾಗಿಲ್ಲವೆನ್ನುವುದು ನನ್ನ ಅಲ್ಪ ತಿಳಿವಳಿಕೆ, ಇನ್ನೂ ಹೆಣಗುತ್ತಿದ್ದೇವೆ. ಕೆಲವೊಮ್ಮೆ ಇದು ವೈಯಕ್ತಿಕವಾದ ಒಂದು 'ಆಧುನಿಕ ಆಧ್ಯಾತ್ಮಿಕ ಅವಶ್ಯಕತೆ' ಎನ್ನುವ ಸೂಕ್ಷ್ಮದಲ್ಲೂ ಬಳಕೆಯಾಗುತ್ತಿದೆ ಎನ್ನುವುದು ನನ್ನ ಅನುಮಾನ.

ಸೆಕ್ಯುಲರ್ ಜನರು ಯಾರನ್ನು ಕೋಮುವಾದಿಗಳು ಎನ್ನುತ್ತಾರೋ ಅವರುಗಳು ಮೇಲೆ ಹೇಳಿರುವ ೩,೪,೫,೬-ಗಳನ್ನು ಒಪ್ಪುತ್ತಾರೆ (ಆದರೆ ಸೆಕ್ಯುಲರ್ ಜನರಿಗೆ ಹಾಗೆನ್ನಿಸುವುದಿಲ್ಲ). ಮತ್ತು ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆದುಕೊಳ್ಳುವುದಕ್ಕೆ ಒಪ್ಪುವುದೂ ಇಲ್ಲ. ಈ ಬಿರುಕನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ ಅಷ್ಟೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅನೇಕ ಗಾಂಧಿವಾದಿಗಳು ತಮ್ಮನ್ನು ತಾವು ಸೆಕ್ಯುಲರ್ ಎಂದು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಬಹುತೇಕರು ಕೋಮುವೈಷಮ್ಯದಿಂದ ನರಳುತ್ತಿಲ್ಲ.

ಕೋಮುವಾದಿಯಂತೂ ಅಲ್ಲ, ಸೆಕ್ಯುಲರ್ ಕೂಡಾ ಅಲ್ಲ

ಈ ಅನೇಕ ಕಾರಣಗಳಿಂದ ನಾನು ಸೆಕ್ಯುಲರಿಸ್ಟ್ ಎನ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಣುತ್ತಿಲ್ಲ. ಹಾಗಿದ್ದೂ ನಾನು ಕೋಮುವಾದಿಯಲ್ಲ. ನನ್ನ canvas ಚಿಕ್ಕದು. ನಾನೇನಿದ್ದರೂ ನನ್ನ ಸೀಮಿತವಾದ ಆವರಣದಲ್ಲಿ ಬದುಕುವವನು. ನನ್ನ ಆವರಣದಲ್ಲಿ ಅನೇಕರು ಮುಸಲ್ಮಾನರ ಕುರಿತು ತೀವ್ರವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ನಾನು ಅವರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಅವರನ್ನು ಕೆರಳಿಸುವುದಿಲ್ಲ. ಆದರೆ ಮೌನದಲ್ಲೇ, ತಾಳ್ಮೆಯ ಪ್ರಶ್ನೆಗಳಲ್ಲೇ ಅವರನ್ನು ಆಲೋಚಿಸುವಂತೆ ಮಾಡುತ್ತೇನೆ. ಅವರೆಲ್ಲರಿಗೂ ನನ್ನನ್ನು convince ಮಾಡುವ ಆಸೆ. ಆದರೆ ಅವರಿಗೆ ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಒಂದು ಬಗೆಯ ಹಿಂಜರೆತ ಅವರಿಗೆ. ಆದರೆ ನಾನು ಮಾತ್ರ ಅವರನ್ನು ಅಭಿವ್ಯಕ್ತಿಯಲ್ಲಿ ಹಿಂಸಿಸಿವುದಿಲ್ಲ. ನಾನಾಗಿಯೇ ಅವರು ತೀವ್ರಗಾಮಿಗಳಾಗುವ ಪ್ರಕ್ರಿಯೆಗೆ ಪರೋಕ್ಷ್ಯವಾಗಿ ಕಾರಣನಾಗುವುದಿಲ್ಲ. (ಅವರು ಯಾರೂ ಮುಸಲ್ಮಾನರ ಕುರಿತು ದ್ವೇಷವುಳ್ಳವರಾಗಿ ನನಗೆ ಕಂಡಿಲ್ಲ. ಆದರೆ ತೀವ್ರವಾದ ಭಾವನೆಗಳಿರುವುದು ನಿಜ. ನಮ್ಮ ಸೆಕ್ಯುಲರಿಸ್ಟರನ್ನು ಕುರಿತುಮಾತ್ರ ನನ್ನ ಆವರಣದಲ್ಲಿ ತೀವ್ರ ಅಸಹನೆಯಿದೆ, ಸಿಟ್ಟಿದೆ, ತಿರಸ್ಕಾರವಿದೆ. ಇದು ಸೆಕ್ಯುಲರಿಸ್ಟರನ್ನು ಆತ್ಮವಿಮರ್ಶೆಗೆ ಪ್ರೇರೇಪಿಸದಿರುವುದು ನನಗೆ ಆಶ್ಚರ್ಯ ತಂದಿದೆ.) ಇದಷ್ಟೇ ನಾನು ಮಾಡುವುದು. ಇದಕ್ಕೋಸ್ಕರ ನನಗೆ ಸೆಕ್ಯುಲರಿಸ್ಟ್ ಪರಿಭಾಷೆಯನ್ನು ಒಪ್ಪಬೇಕಾದ್ದು ಅನಿವಾರ್ಯವಾಗಿ ಕಂಡಿಲ್ಲ.
ಇನ್ನೊಂದಿಷ್ಟು ಮುಂದುವರೆದು ಹೇಳುತ್ತೇನೆ. ನನಗೆ ಈ ಪ್ರಕ್ರಿಯೆಯನ್ನು ನಿಭಾಯಿಸಲು ಕೋಮುವಾದಿ, ಕೋಮುವಾದ ಪದಗಳು ಬೇಕಿಲ್ಲವೆಂದೆನ್ನಿಸುತ್ತಿದೆ. ಆ ಪದಗಳ ಬಳಕೆಯಲ್ಲೇ ಒಂದು ಹಿಂಸೆಯಿದೆ. They are very rough abstractions of people but when used as a communicative language it could be horrendous . ನನಗೆ ಕೋಮುವಾದ, ಕೋಮುವಾದಿ ಪದಗಳನ್ನು ನಿರ್ಮಿಸುತ್ತಿರುವ ಪ್ರಕ್ರಿಯೆ, ಗುಣಗಳನ್ನು ಒಂದೊಂದಾಗಿ ಬಿಡಿಬಿಡಿಯಾಗಿ ಗುರುತಿಸುತ್ತಾ ಅವುಗಳೊಡನೆ Situationally ಗುದ್ದಾಡುವುದೇ ಹೆಚ್ಚು ಸರಿಯಾದ ದಾರಿಯೆಂದೆನ್ನಿಸುತ್ತಿದೆ.

ಕೋಮುದ್ವೇಷದ ಮೂಲ

ಇಂದು ನಮ್ಮ ಸೆಕ್ಯುಲರಿಸ್ಟರ ಗ್ರಹಿಕೆಯಲ್ಲಿ 'ನಮ್ಮ ದೇಶದಲ್ಲಿ ವಿನಾಕಾರಣದ ಕೋಮು ದ್ವೇಷ'ವಿದೆ. ನನಗೆ ಹೀಗನ್ನಿಸಿಲ್ಲ. ಇದು ಸಕಾರಣವಾದ ದ್ವೇಷವಂತೂ ಅಲ್ಲವೆನ್ನುವುದು ಖಚಿತ. ದ್ವೇಷ ಎನ್ನುವುದಕ್ಕೇ ಸಕಾರಣ ಕಷ್ಟ, ಅದು ಸಾಧ್ಯವಿಲ್ಲ. ಆದರೆ ವಿನಾಕಾರಣವೆಂದೂ ಅನ್ನಿಸಿಲ್ಲ. ಇವತ್ತಿನ ಕೋಮುದ್ವೇಷಕ್ಕೆ ಹಲವಾರು ಕಾರಣಗಳಿವೆ, ಹಿಂದೂ ಮುಸಲ್ಮಾನರೆನ್ನದೇ ಹುಲುಮಾನವರ ಕೈಮೀರಿದ್ದು. ಇಲ್ಲಿ ಒಂದು ಮೂಲಭೂತವಾದ ಸಮಸ್ಯೆಯಿದೆ. ಒಂದು ಊರು ಎನ್ನುವುದು ಜೀವನದ ಒಂದು ಘಟಕವಾದ್ದಾಗ ಹಿಂದೂ, ಮುಸಲ್ಮಾನರೆಲ್ಲರೂ ಅನೇಕ ಜಾತಿಗಳ ಸ್ವರೂಪದಲ್ಲಿ ಬದುಕುವುದು ಸಾಧ್ಯವಿತ್ತು. ಯಾವುದೂ ಸಹ ಜಗಳವನ್ನು ಮೀರಿದ ದ್ವೇಷವಾಗದೇ ಉಳಿಯುವುದು ಸಾಧ್ಯವಿತ್ತು. ದೇವಚಂದ್ರನ ರಾಜಾವಳಿ ಕಥೆಯಲ್ಲಿ ಮೂಡಿ ಬರುವ ಆಕೃತಿ ಇಂಥದ್ದನ್ನು ಹೇಳುತ್ತದೆ. ಆದರೆ ರಾಷ್ಟ್ರೀಯತೆ, ಅಂತರರಾಷ್ಟ್ರೀಯತೆ, ಆಧುನಿಕ ತಂತ್ರಜ್ಞಾನಗಳು ಒಂದೆಡೆ ಒಂದು ಚಿಕ್ಕ ಊರಿನ ಸಾವಯವ ಸಂಬಂಧವನ್ನು ಕೊಲ್ಲುತ್ತಿದೆ. ದೊಡ್ಡ ಮಟ್ಟದ ಭೌಗೋಳಿಕ ಮತ್ತು ಮಾನಸಿಕ ವಲಸೆಯೆನ್ನುವುದು ತಬ್ಬಲಿತನವನ್ನು ಸೃಷ್ಟಿಸುತ್ತಿದೆ. ತಾವಿದ್ದೆಡೆಯಲ್ಲೇ ತಬ್ಬಲಿಯಂತಾಗುತ್ತಿದ್ದಾರೆ. ತಮ್ಮ ಜೀವನದ ಸೌಂದರ್ಯದ ಬಗ್ಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಜನ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ನಮ್ಮ ಧಾರಣಶಕ್ತಿಯನ್ನು ಮೀರಿದ ಐಡೆಂಟಿಟಿಗಳನ್ನು ಸೃಷ್ಟಿಸುವ ಬೃಹತ್ ಪ್ರಕ್ರಿಯೆ ಅವಿರತವಾಗಿ ಸಾಗುತ್ತಿದೆ. ಆ ಕಾರಣದಿಂದ ಹಿಂದೂಗಳು ಮತ್ತು ಮುಸಲ್ಮಾನರು ಇಬ್ಬರೂ ಸಹ ಅಪಾಯಾಕಾರಿಯಾದ ರೀತಿಯ ಸಂಘಟನೆಯ ಪ್ರಕ್ರಿಯೆಗಳಲ್ಲಿ ನಿರತರಾಗಿದ್ದಾರೆ. ನಮ್ಮೀ ಕೋಮಿನ ಧ್ರುವೀಕರಣ ಇದರ ಪ್ರತಿಫಲವೆನ್ನುವುದು ನನ್ನ ನಿಲುವು. ಈ ಪ್ರಕ್ರಿಯೆಯನ್ನು ನಾವು ನಿರ್ವಹಿಸುತ್ತಿರುವ ರೀತಿ ಮಾತ್ರ ದುರಂತಮಯವಾಗಿದೆ, ಸೆಕ್ಯುಲರಿಸ್ಟರನ್ನೂ ಸೇರಿಸಿ.

ಇದೇ ಸಂದರ್ಭದಲ್ಲಿ ಹಿಂದೂಗಳು ಮರೆಯಬಾರದ ಒಂದು ವಿಷಯವನ್ನು ನೇರವಾಗಿಯೇ ಪ್ರಸ್ತಾಪಿಸಲಿಚ್ಛಿಸುತ್ತೇನೆ. ಇಂದು ನಮ್ಮ ಜೀವನದ ಪ್ರತಿ ಅಣುವಿನಲ್ಲೂ ಇಂಗ್ಲೀಷು ಮತ್ತು ಪಾಶ್ಚೀಮಾತ್ಯ ಪರಿಕಲ್ಪನೆಗಳು ಮನೆಮಾಡಿಕೊಂಡಿವೆ. ಮಕ್ಕಳಿಗೆ ಕನ್ನಡದಂತಹ ದೇಶೀಯ ಭಾಷೆಗಳನ್ನು ಕಲಿಸುವುದು ಕಷ್ಟವಾಗಿದೆ. ನಮ್ಮ ಜೀವನ ಶೈಲಿ ಆಧುನಿಕ ವಾಣಿಜ್ಯದಿಂದ ಪ್ರಭಾವಿತವಾಗಿದೆ. ಇದರ ಪ್ರಭಾವದಿಂದ ನಾವು ಪಡೆದುಕೊಳ್ಳುತ್ತಿರುವುದು ಬಹಳವಾದರೂ ಅದೇ ಕಾರಣದಿಂದ ನಾವು ಭಾರತೀಯ ಸಂಸ್ಕೃತಿಯ ಬಹುಭಾಗವನ್ನು ಕಳೆದುಕೊಳ್ಳುತ್ತಿದ್ದೇವೆ. ಪಾಶ್ಚಾತ್ಯೀಕರಣವು ಭಾರತೀಯ ಸಂಸ್ಕೃತಿಯಿಂದ ನಮ್ಮನ್ನು ದೂರಮಾಡುತ್ತಿರುವಂತೆಯೇ, ಈ ಪ್ರಕ್ರಿಯೆಯಲ್ಲಿ ತನ್ನ ಪಾತ್ರವನ್ನು ತೋರ್ಪಡಿಸಿಕೊಳ್ಳದೇ ಮರೆಮಾಚುವಷ್ಟು ಶಕ್ತವಾಗಿರುವುದು, ನಮ್ಮ ಗಮನವನ್ನೆಲ್ಲಾ ಮುಸಲ್ಮಾನ ಕಾಲದ ವಿಕೃತಿಗಳತ್ತ ಮಾತ್ರ ಇರುವುದಕ್ಕೆ ಕಾರಣವಾಗಿದೆ. ನಮ್ಮ ಸಮಸ್ಯೆ ಸೆಕ್ಯುಲರಿಸಮ್ಮಿಗಿಂತಲೂ, ಮತ್ತಿತರ ಮತಧರ್ಮಗಳ ವಿಷಯಕ್ಕಿಂತಲೂ, ಆಧುನಿಕತೆಯ ಉತ್ಪನ್ನಗಳ ಕುರಿತಾಗಿ ನಮಗಿರುವ ಆಕರ್ಷಣೆಯೇ ಎನ್ನುವುದು ನನ್ನ ಅನುಮಾನ. ಇದನ್ನು ಗಾಂಧೀಜಿಯವರ ಆಲೋಚನಾಕ್ರಮದಲ್ಲೂ ಕಾಣಬಹುದು.

ಇದನ್ನು ನಿರ್ವಹಿಸಲಾಗದ ನಾವು ಸಂಸ್ಕೃತಿಯ ರಕ್ಷಣೆಯ ಭರದಲ್ಲಿ ಕೋಮುವಾದವನ್ನು ಪೋಷಿಸುತ್ತಿದ್ದೇವೇನೋ ಅನ್ನಿಸುತ್ತಿದೆ. ಹಿಂದೂಗಳು ಇದನ್ನು ನಿರ್ವಹಿಸದೇ, ಆತ್ಮವಿಮರ್ಶೆ ಮಾಡಿಕೊಳ್ಳದೇ ಗತ್ಯಂತರವಿಲ್ಲ.

ಮತ್ತೆ ಆವರಣದ ಕುರಿತು

ಈ ಎಲ್ಲದರ ಹಿನ್ನೆಲೆಯಲ್ಲಿ ಶುರುಮಾಡಿದಲ್ಲಿಗೆ ವಾಪಾಸು ಬರುತ್ತೇನೆ. ನನಗೆ ಆವರಣದ ಕುರಿತಾದ ಆಕ್ಷೇಪವಿರುವುದು ಅದರ ಅಭಿವ್ಯಕ್ತಿ ಕ್ರಮದಲ್ಲಿ ಮತ್ತು ಇತಿಹಾಸ ಪ್ರಕರಣ ಮತ್ತು ಧ್ವನಿಯ ಆಯ್ಕೆಯಲ್ಲಿ. ಭೈರಪ್ಪನವರಿಗೆ ಮುಸಲ್ಮಾನರ ಕುರಿತಾದ ದ್ವೇಷವಿದೆ ಎನ್ನುವ ನಿಲುವು ನನ್ನದಲ್ಲ. ಅದನ್ನು ತಿಳಿಯುವ ಕ್ರಮವೂ ಇಲ್ಲ. ಆದರೆ ನನ್ನೆದಿರಿರುವುದು ಆವರಣ ಕೃತಿಯಾದ್ದರಿಂದ, ಅದರ ಪರಿಭಾಷೆ ರಣಕಹಳೆಯದ್ದಾಗಿರುವುದರಿಂದ ಅದೊಂದು ಸಮಸ್ಯೆಯಾಗಿದೆ. ಅದು ಸೆಕ್ಯುಲರಿಸ್ಟರ ವಿರುದ್ಧವಾದ ರಣಕಹಳೆಯಾದರೂ, ಒಟ್ಟು ಸಾಂಸ್ಕೃತಿಕ ಸಂದರ್ಭದಲ್ಲಿ ಅದರ ಪರಿಭಾಷೆ ಹಿಂಸೆಯದ್ದಾಗಿದೆ. ಕೆರಳಿಸುವಂಥದ್ದಾಗಿದೆ. ಮುಸಲ್ಮಾನ ರಾಜರ ಅಥವಾ ಆಳ್ವಿಕೆಯಲ್ಲಿ ನಾಚಿಕೆಪಡುವಂಥದ್ದಾಗಿದೆ ಎಂದಿಟ್ಟುಕೊಂಡರೂ ಮುಸಲ್ಮಾನರೂ ಅದನ್ನು ಓದಿ ಕೆರಳದೇ ಇರುವ ಕ್ರಮದಲ್ಲಿಲ್ಲದೇ ಹೋದರೆ ಅದೊಂದು ಒಳ್ಳೆಯ ಸಾಹಿತ್ಯಕೃತಿಯಾಗಲಾರದು. ಬಿಟ್ಟ ಬಾಣ ಸೆಕ್ಯುಲರಿಸ್ಟರನ್ನು ಮಾತ್ರವಲ್ಲ ಮುಗ್ಧರನ್ನೂ ತಾಗುತ್ತದೆ ಎನ್ನುವುದನ್ನು ನಮ್ಮ ಕಾಲದ ಪ್ರಮುಖ ಸಾಹಿತಿಯೊಬ್ಬರು ಮನಗಾಣದೇ ಹೋದದ್ದು ದುರಂತ. ಬಾಣದಂತೆ ಸಾಹಿತ್ಯವನ್ನು ಬಳಸಬಹುದು ಎಂದು ಅವರೆಂದುಕೊಂಡದ್ದೂ ದುರಂತ.
ಹೀಗಿದ್ದಾಗ್ಯೂ, ಆವರಣದ ನಿಜವಾದ ವಿಮರ್ಶೆಯೆಂದರೆ ಅದರಲ್ಲಿ ಲಕ್ಷ್ಮಿಯ ನಿಲುವುಗಳನ್ನು ಭೈರಪ್ಪನವರು ಅನುಮೋದಿಸುತ್ತಾರೆ ಎನ್ನುವ ಆಲೋಚನೆಯನ್ನು ಬದಿಗಿಟ್ಟು ವಿಮರ್ಶಿಸುವುದು. ಆದರೆ ಆವರಣದ ಕುರಿತು ಈವರೆಗಿನ ಅವಲೋಕನ ಹಾಗಿಲ್ಲದಿರುವುದು ಸಾಹಿತ್ಯವಿಮರ್ಶೆಯ ಘನತೆಗೆ ತಕ್ಕುದಲ್ಲವಾಗಿದೆ. ಇದನ್ನೂ ಮೀರಿದ ಒಂದು ಅಪಾಯವಿದೆ. ಆವರಣದ ಕುರಿತಾದ ಟೀಕೆಗಳು ಹೇಗಿವೆಯೆಂದರೆ ಆವರಣವನ್ನು ಮೆಚ್ಚುವ ಜನರು ಈ ಟೀಕೆಗಳನ್ನು ತಮ್ಮ ಮೇಲಿರುವ ಸಿಟ್ಟು ಅಸಹನೆ ಎಂದು ಪರಿಗಣಿಸುವಷ್ಟು. ಇದರಿಂದ ಸಮಾಜದಲ್ಲಿರುವ ಕಂದಕ ಮತ್ತಷ್ಟಾಗುತ್ತಿದೆ.

ಆದ್ದರಿಂದ, ಟೀಕೆಯ ರೀತಿ, ಅದರ ಭಾಷೆ ಹೊಸತಾಗಬೇಕಿದೆ. ಸ್ವಲ್ಪ ಮಟ್ಟಿಗಿನ ಕೃತಿನಿಷ್ಠ ವಿಮರ್ಶೆ ಎನ್ನುವುದನ್ನು ಇಲ್ಲಿ ಅಭ್ಯಾಸಕ್ಕೆ ತರಬೇಕಿದೆ. ಭೈರಪ್ಪನವರು ಅನುಮೋದಿಸುತ್ತಾರೋ ಇಲ್ಲವೋ ಮುಖ್ಯವಲ್ಲ. ಆದರೆ ವಿಮರ್ಶಕ ಹಾಗಂದುಕೊಳ್ಳಬೇಕಿಲ್ಲ. ಇದರಿಂದ ಎರಡು ಒಳ್ಳೆಯದು ಸಾಧ್ಯವಾಗಬಹುದು. ಕೃತಿಯಲ್ಲಿ ಕೃತಿಕಾರನ ಅಭಿಪ್ರಾಯವನ್ನು ಮೀರಿದ ಆಕೃತಿಗಳನ್ನು ಅನ್ವೇಷಿಸಬಹುದು. ಮತ್ತು ಕೃತಿಗಿರಬಹುದಾದ ನೆಗಟಿವ್ ಅಂಶಗಳಿಂದ ಕೃತಿಯನ್ನು ದೂರತರಬಹುದು. ಈ ಮಾರ್ಗದಲ್ಲೇ ನಾವು ಲಕ್ಷ್ಮಿಯ ಹಿಂದಿರುವ ಭೈರಪ್ಪನವರನ್ನೂ ಅನಾವರಣಗೊಳಿಸಬಹುದು. ಆ ಮೂಲಕ ನಾವು ಯಾವ ಅಪಾಯವನ್ನು ಪರಿಭಾವಿಸುತ್ತಿದ್ದೇವೋ ಆ ಅಪಾಯವನ್ನು ನಿವಾರಿಸಿಕೊಳ್ಳುವ ಕ್ರಮಗಳನ್ನೂ ಗಳಿಸುವುದು. ಇದರಿಂದ ಎಲ್ಲರನ್ನೂ ಒಳಗೊಳ್ಳಬಹುದಾದ ಸಂವಾದವೊಂದು ಸಾಧ್ಯವಾಗುತ್ತದೆ, ಕೋಮುವಾದಿಗಳನ್ನೂ ಸೇರಿಸಿ.

ಆದರೆ..., ನನ್ನ ಕಳಕಳಿ

ಆದರೆ ಇವತ್ತಿನ ಎಲ್ಲಾ ಸಾರ್ವಜನಿಕ ಸಂವಾದ ಈ ಕಂದಕವನ್ನು ಹೆಚ್ಚಿಸುವಂತದ್ದು. ರಾಜಕೀಯದಲ್ಲಿ ಜನರನ್ನು ತಲುಪಬೇಕಾಗಿರುವುದು ಬಹಳ ಮುಖ್ಯ. ಅಂದರೆ ಆ ಸಂವಹನಕ್ಕೆ ತಕ್ಕುದಾದಂತಹ ವಾಹಕಗಳನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಮೆಚ್ಚುವ ಗಾಂಧೀಜಿ ಇದರಲ್ಲಿ ಎತ್ತಿದ ಕೈ. ಆದರೆ ನಾವು ಗಾಂಧೀಜಿಯನ್ನು ತಾತ್ವಿಕವಾಗಿ ಮೆಚ್ಚುತ್ತೇವೇ ವಿನಃ ಸಂವಹನದ ಕುರಿತಾದ ಅವರ ಎಚ್ಚರಿಕೆ, ಅವರು ಕಂಡುಕೊಳ್ಳುತ್ತಿದ್ದ ಸಂವಹನ ಸಾಧನಗಳು ನಮ್ಮನ್ನು ಅಷ್ಟಾಗಿ ಪ್ರಭಾವಿಸಿದಂತಿಲ್ಲ. ರಾಜಕೀಯದಲ್ಲಿ ಆಸಕ್ತಿಯಿರುವವರೆಲ್ಲರೂ ಸಂವಹನ ಸಾಧ್ಯತೆ ಮತ್ತು ಕ್ರಿಯೆಯ ಪರಿಣಾಮದ ಕುರಿತು ಅತೀವ ಜಾಗ್ರತರಾಗಿರುವುದು ಅತ್ಯನಿವಾರ್ಯ.

ಆವರಣದ ಸಂದರ್ಭದಲ್ಲಿ ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕಲೋಕ ಅವಕಾಶವೊಂದನ್ನು ಕಳೆದುಕೊಂಡಿದೆ. ಮತ್ತೊಮ್ಮೆ ಇಂತಹ ಅವಕಾಶವನ್ನು ಹೆಚ್ಚು ಸೃಜನಶೀಲವಾಗಿ ಬಳಸಿಕೊಳ್ಳುವುದಕ್ಕೆ, ಹೊಸಭಾಷೆಯ ಅವಶ್ಯಕತೆಯಿದೆ. ಗ್ರಹಿಕೆ ಮತ್ತು ಅಭಿವ್ಯಕ್ತಿ ಎರಡನ್ನೂ ಒಂದು ಪ್ರಕ್ರಿಯೆಯಾಗಿ ನೋಡುತ್ತಾ, ಅದರಲ್ಲಿ ಸಮ-ಸ್ಥಿತಿಯನ್ನು ಸ್ಥಾಪಿಸಲು ಶ್ರಮಿಸಬೇಕಾದ ಅವಶ್ಯಕತೆ ಕಾಣಿಸುತ್ತಿದೆ. ಅದನ್ನು ಅಪೇಕ್ಷಿಸುವ ಸಾಂಸ್ಕೃತಿಕ ಹಕ್ಕನ್ನು ಮತ್ತೊಬ್ಬ ಪ್ರಜೆಯಾಗಿ ಪ್ರೀತಿಯಿಂದ ಪ್ರತಿಪಾದಿಸುತ್ತೇನೆ. ಆವರಣವನ್ನು ಟೀಕಿಸುವಾಗ ನಾವು ಈ ಹೊಸ ಭಾಷೆಯನ್ನು ಬಳಸಬೇಕಾಗಿರುವುದು ಇವತ್ತಿನ ಸಾಂಸ್ಕೃತಿಕ, ರಾಜಕೀಯ ತುರ್ತು ಅನ್ನಿಸುತ್ತಿದೆ.