ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Friday, April 14, 2006

ಪಾಸೋಲಿನಿ: ಕಾವ್ಯಾತ್ಮಕ ಸಿನೆಮಾ: ಭಾಗ ೨ಪ್ರತಿಯೊಂದು ಭಾಷೆಯೂ ತನ್ನದೇ ಪ್ರದೇಶ, ಪರಿಸರಗಳ ಸಂಜ್ಞಾವ್ಯವಸ್ಥೆಯ ಪದಕೋಶದ ಮೂಲಕ ತನ್ನ ಅಸ್ತಿತ್ವದ ಒಂದಂಶವನ್ನು ದಾಖಲಿಸುತ್ತದೆ. ಇದು ಪರಿಪೂರ್ಣವಲ್ಲದಿದ್ದರೂ ಖಚಿತವಾದ ದಾಖಲೆಯಂತೂ ಹೌದು. ಬರಹಗಾರನಾದರೋ ಇಂತಹ ಕೋಶದಿಂದ ಪದಗಳನ್ನಾಯ್ದು, ಸಾಂದರ್ಭಿಕ ಪ್ರಯೋಗದಿಂದ ಅವನ್ನು ಬೆಳೆಸುತ್ತಾನೆ. ಪ್ರಯೋಗದ ಸಾಂದರ್ಭಿಕ ವ್ಯೆಶಿಷ್ಟ್ಯ, ಭಾಷಿಕ,ಸಾಹಿತ್ಯಕ ಚರಿತ್ರೆಯಿಂದ ರೂಪುಗೊಂಡ ಪದಾರ್ಥ ಮತ್ತು ಸಂದರ್ಭಕ್ಕೆ ಒದಗುವ ಒಟ್ಟು ಇತಿಹಾಸ - ಇವೆಲ್ಲದರಿಂದ ಆ ಪದ ಜೀವಂತಿಕೆಯಿಂದ ಮುಂದಡಿಯಿಡುತ್ತದೆ. ತನ್ಮೂಲಕ, ಪದಗಳ ಇತಿಹಾಸ ಮತ್ತು ಅರ್ಥಗಳಲ್ಲಿ ಬೆಳೆವಣಿಗೆಯಾಗುತ್ತದೆ. ಪದಕೋಶಗಳಲ್ಲಿ ಅದು ಪ್ರತಿಫಲನಗೊಳ್ಳುತ್ತದೆ. ಮತ್ತೊಂದು ಪ್ರಯೋಗಕ್ಕೆ ಅನುವು ಮಾಡಿಕೊಡುತ್ತದೆ. ಭಾಷಿಕ ಜಗತ್ತು ವಿಸ್ತಾರಗೊಳ್ಳುತ್ತದೆ. ಹೀಗೆ,ಬರಹಗಾರ ಭಾಷೆಯನ್ನು ಕೇವಲ ಭಾಷಿಕ ವ್ಯವಸ್ಥೆಯಾಗೂ, ಸಾಂಸ್ಕೃತಿಕ ಪರಂಪರೆಯಾಗೂ ಬಳಸುತ್ತಾನೆ, ಒಂದು ಮತ್ತೊಂದಕ್ಕಿಂತ ಭಿನ್ನವಿಲ್ಲವೆಂಬಂತೆ. ಹೀಗೆ, ಕೋಶದಲ್ಲಿ ದಾಖಲಾಗಿ ಬಳಕೆಗೆ ಅನುವಾಗಿರುವ ಪದವೊಂದರ ಅರ್ಥ ವಿಸ್ತಾರವಾಗುತ್ತದೆ.

ಸಿನಿಮಾ ಕರ್ತನ ಕ್ರಿಯೆ ಇದೇ ತೆರನಾದರೂ ಇದಕ್ಕಿಂತ ಹೆಚ್ಚು ಸಂಕೀರ್ಣವಾಗುತ್ತದೆ. ಸಾಹಿತ್ಯದ ಭಾಷೆಗಿರುವ ಪದಕೋಶದಂತಹ ಕೋಶ ಸಿನಿಬಿಂಬಗಳಿಲ್ಲ. ಅವುಗಳ ವರ್ಗೀಕರಣವಾಗಿಲ್ಲ, ಬಳಕೆಗೆ ಸಿದ್ದಪಡಿಸಲಾಗಿಲ್ಲ. ನಮಗಿದರ ಅವಶ್ಯಕತೆಯಿದ್ದರೂ, ಲಭ್ಯವಿಲ್ಲದ ಅನಂತವಾದ ಒಂದು ಬಿಂಬ ಕೋಶವನ್ನು ಸದ್ಯಕ್ಕೆ ಕಲ್ಪಿಸಿಕೊಳ್ಳಬೇಕಾಗುತ್ತದೆ, ಅಷ್ಟೇ.

ಹೀಗಾಗಿ ಸಿನಿಕರ್ತನಿಗೆ ಬಿಂಬಕೋಶದ ಪರಿಕರವಿಲ್ಲ. ಆದರೆ ಅನಂತ ಸಾಧ್ಯತೆಗಳ ವಾಸ್ತವವಿದೆ. ಸಿನಿಕರ್ತ ಆಯುವ ಬಿಂಬ-ಸಂಜ್ಞೆಗಳು ಒಂದು ಬಗೆಯ ಅವ್ಯವಸ್ಥೆಯಿಂದ ಘನೀಭವಿಸುತ್ತದೆ. ಅದಕ್ಕಿರುವ ಸಿದ್ಧವಾದ ಅರ್ಥ ಆಯ್ದ ನಂತರ ರೂಪುಗೊಂಡಿರುತ್ತದೆ. ಸಿನಿಕರ್ತ ಎರಡು ಹಂತಗಳಲ್ಲಿ ಕ್ರಿಯಾಶೀಲನಾಗಬೇಕಾಗುತ್ತದೆ. ಅವ್ಯವಸ್ಥೆಯಿಂದ ಬಿಂಬಸಂಜ್ಞೆಗಳನ್ನಾಯ್ದು, ಅರ್ಧಜೀವ ತುಂಬಿ, ಅಂತಹ ಬಿಂಬಸಂಜ್ಞಾ ಕೋಶವನ್ನು ಸೃಷ್ಟಿಸುವ ಮೂಲಕ ಅವುಗಳ ವರ್ಗೀಕರಣ ಸಾಧಿಸಬೇಕಾಗುತ್ತದೆ. ನಂತರ ಬರಹಗಾರನಿಗೆ ಸಮನಾದ ಕೆಲಸ ಮಾಡಬೇಕಾಗುತ್ತದೆ. ಬಿಂಬ ಸಂಜ್ಞೆಗಳ ವೈಯಕ್ತಿಕ, ಸಾಂದರ್ಭಿಕ ಪ್ರಯೋಗದಿಂದ ಪದಕೋಶದ ಚಾರಿತ್ರಿಕ, ಭಾಷಿಕ ವಿಸ್ತಾರದ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಹೀಗೆ, ಬರಹಗಾರನದ್ದು ಸಂಪೂರ್ಣವಾಗಿ ಕಲಾತ್ಮಕ ಆವಿಷ್ಕಾರವಾದರೆ,ಸಿನಿಕರ್ತನದ್ದು ಮೊದಲು ಭಾಷಿಕ ಆವಿಷ್ಕಾರ, ನಂತರ ಕಲಾತ್ಮಕ ಆವಿಷ್ಕಾರ.

೫೦ ವರ್ಷಗಳ ಕಾಲದ ಇತಿಹಾಸವೆನ್ನುವುದು ಸಿನಿಮಾಕ್ಕೆ ಪ್ರಾಪ್ತವಾಗಿದೆಯಾಗಿ, ಒಂದು ಬಗೆಯ ಸಿನಿಕೋಶ ಸ್ಥಾಪಿತವಾಗಿದೆಯಾದರೂ, ಅಥವಾ, ಅಂತಹ ಕಳಕಳಿಯುಳ್ಳ ಒಂದು ರೂಢಿ ವ್ಯವಸ್ಥೆ ಸ್ಥಾಪನೆಗೊಂಡಿದೆಯಾದರೂ, ಈ ಕೋಶ ವ್ಯಾಕರಣಕಿಂತ, ಕಲಾತ್ಮಕ ಶೈಲಿಗೇ ಹೆಚ್ಚು ಸಮೀಪವಾಗಿದೆ.

ಉದಾಹರಣೆಗೆ, ತಾನುಗುಳುವ ಹೊಗೆಯಿಂದಲೇ ಸೃಷ್ಟಿಯಾದ ಮೋಡವನ್ನು ತಾನೇ ಸೀಳುತ್ತ ಕಂಬಿಗಳ ಮೂಲಕ ಚಲಿಸುತ್ತ ಬರುವ ಟ್ರೈನ್ ನ ಬಿಂಬ-ಸಮೂಹವನ್ನೇ ಗಮನಕ್ಕೆ ತಂದುಕೊಳ್ಳಿ. ಇದನ್ನು ವ್ಯಾಕರಣಾಂಶವೆಂದಷ್ಟೇ ಪರಿಗಣಿಸುವುದು ಕಷ್ಟ. ಇದು ಕಲಾತ್ಮಕ ಅಭಿವ್ಯಕ್ತಿಯೂ ಹೌದು. ಆದ್ದರಿಂದ, ಸಿನಿಮಾಕ್ಕೆ ಕಲಾತ್ಮಕ ಶೈಲಿಯ ಗಂಧದಿಂದ ಸಂಪೂರ್ಣವಾಗಿ ಬಿಡಿಸಲ್ಪಟ್ಟಿರುವ ಭಾಷಿಕ ವ್ಯಾಕರಣ ವ್ಯವಸ್ಥೆ ಸಾಧ್ಯವಿಲ್ಲವೆನ್ನಿಸುತ್ತದೆ, ಸಿನಿಮಾಕ್ಕೆ ಕಲಾತ್ಮಕವಾದ ಭಾಷಿಕ ವ್ಯಾಕರಣ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಹೊಕ್ಕು ಸೂಕ್ತ. ಹೀಗೆ ಸೃಷ್ಟಿಗೊಂಡ ಸಿನಿಕೋಶದಲ್ಲಿನ ಕಲಾತ್ಮಕ ಅಭಿವ್ಯಕ್ತಿ, ಸಿನಿಕರ್ತನ ತದನಂತರದ ಸಾಂದರ್ಭಿಕ ಪ್ರಯೋಗದಿಂದ ಹೆಚ್ಚು ವಿಕಾಸ ಹೊಂದುತ್ತದೆ.

ಇವೆಲ್ಲಾ ಸಿನಿಕರ್ತನಿಗಿರುವ ಸವಾಲುಗಳು. ಈ ಎಲ್ಲದರ ಪರಿಣಾಮವಾಗಿರುವ ಅನುಕೂಲವೆಂದರೆ, ಸಿನಿಕರ್ತ ನೂರಾರು ವರ್ಷ ಇತಿಹಾಸವಿರುವ ಕಲಾಶೈಲಿಗಳ ಜೊತೆಗೆ ಹೊಡೆದಾಡಬೇಕಾಗಿಲ್ಲ ಯಾವ ಸಿದ್ಧ ಮಾದರಿಯನ್ನೂ ಒಡೆದು ರಾದ್ಧಾಂತವನ್ನೆದುರಿಸಬೇಕಾದ ಪ್ರಮೇಯವಿಲ್ಲ. ಸಿನಿಬಿಂಬಗಳು ಸಿನೆಕರ್ತನಿಂದ ಇತಿಹಾಸ ಸಂಋದ್ಧಿಯನ್ನು ಪಡೆದರೂ ಅದು ಅಷ್ಟೇನೂ ದೀರ್ಘವಲ್ಲ. ವೇಗವಾಗಿ ಬದಲಾಗುತ್ತಿರುವ ಕಾಲ ಇದಕ್ಕೆ ಕಾರಣ. ಆದ್ದರಿಂದಲೇ ಸಿನಿಮಾಕ್ಕೆ ಒಂದು ಬಗೆಯ ಅಸ್ಥಿರತೆ ಎನ್ನುವುದು ಪ್ರಾಪ್ತವಾಗುತ್ತದೆ. ಅದರ ವ್ಯಾಕರಣಾಂಶಗಳಾದ ಬಿಂಬ-ಸಂಜ್ಞೆಗಳು ಜೀವಂತವಿರುವ ಪ್ರಪಂಚವೇ ಕಾಲದಲ್ಲಿ ನಾಶಹೊಂದುತ್ತದೆ. ೩೦ರ ಉಡುಗೆ ತೊಡುಗೆ, ೪೦ರ ಕಾರುಗಳು-ಹೀಗೆ ಉದಾಹರಣೆಗೆ ತೆಗೆದುಕೊಳ್ಳುತ್ತದೆ.

ಭಾಷಿಕ ಪದಗಳ ವಿಷಯ ಹಾಗಲ್ಲ. ಯಾವುದೇ ಬದಲಾವಣೆ, ವಿಕಾಸದ ಸಂದರ್ಭದಲ್ಲಿ ಬಳಕೆಯಾದ ಪದ ಆ ಕಾರಣಕ್ಕೇ ಪದಾರ್ಥ ವಿಕಾಸ ಪಡೆಯುತ್ತದೆ. ಆದರೆ ವಸ್ತುಗಳಿಗೆ ಅಷ್ಟೊಂದು ಜೀವಂತಿಕೆಯ ಸಾಧ್ಯತೆ, ಅರ್ಥವಿಸ್ತಾರ ಕಷ್ಟ. ಕಾಲ, ಸಂದರ್ಭವೊಂದರಲ್ಲಿ ತನ್ನಷ್ಟಕ್ಕೆ ತಾನೇ ಸಂಪೂರ್ಣವಾದ ಅಭಿವ್ಯಕ್ತಿ ವಸ್ತುಗಳಿಗೆ ಸಾಧ್ಯವಿಲ್ಲ, ಅವುಗಳು ಸ್ವಲ್ಪ ಪರಾವಲಂಬಿ. ಕಾಲ ಕಾಲಾಂತರಕ್ಕೆ ಕೈಚಾಚಿ ಎಲ್ಲಕಾಲಕ್ಕೂ ಸಲ್ಲುವ ಅರ್ಥ ಶ್ರೀಮಂತಿಕೆಯೆನ್ನುವುದು, ಆವಿಷ್ಕರಿಸಲ್ಪಟ್ಟ ಸಿನಿಕೋಶದ ಬಿಂಬ-ಸಂಜ್ಞೆಗಳಿಗೆ ಸಾಧ್ಯವಿಲ್ಲ. ಆದ್ದರಿಂದ, ಸಿನಿಬಿಂಬವಾಗುವ ವಸ್ತುವಿಗೆ ಒಂದು ಬಗೆಯ ಅರ್ಥ ಸ್ಥಿರತೆಯಿದೆ. ಕಾಲಾಂತರದಲ್ಲಿ ಅಭಿವೃದ್ಧಿಯಾಗುವಂತಹ ಭಾಷಿಕ ಪದಕೋಶಕ್ಕೂ, ತಕ್ಷಣಕ್ಕೆ ಸೃಷ್ಟಿಸಲ್ಪಟ್ಟ ಸಿನಿಕೋಶಕ್ಕೂ ಇಷ್ಟು ವ್ಯತ್ಯಾಸವಿರುವುದು ಅತ್ಯಂತ ಸಹಜ. ಈ ಸಿನಿಕೋಶವೆನ್ನುವುದು ಬಿಂಬಗಳಿಂದಲೇ ಸಂವಹಿಸುವ ಕಲ್ಪಿತ ಸಮಾಜದ ಕಲ್ಪಿತ ಕೋಶವಾದ್ದರಿಂದ ಇದು ಸಹಜ.

ಹೀಗೊಂದು ಸಿನಿಕೋಶದ ಆವಿಷ್ಕಾರವನ್ನು ಬದಿಗಿಟ್ಟು, ಸಿನಿಮಾವೊಂದನ್ನು ಬಿಂಬ-ಸಂಜ್ಞೆಗಳ ಕೇವಲಸರಣೆಯಾಗಿ ಕಂಡರೂ ಒಂದು ಅಸ್ಪಷ್ಟವಾದ ಪರಂಪರೆಯೆನ್ನುವುದು ಅದಕ್ಕಿದ್ದೇ ಇರುತ್ತದೆ. ಈಗೊಂದು ಚಲಿಸುವ ವಾಹನವನ್ನೇ ತೆಗೆದುಕೊಳ್ಳಿ. ನಿಸ್ಸಂಶಯವಾಗಿ ನಮ್ಮ ನೆನಪು ಮತ್ತು ಕನಸುಗಳಲ್ಲಿ ಇದಕ್ಕೊಂದು ಸ್ಥಾನವಿದೆ. ಯಾವ ಸ್ಥಳದಲ್ಲಿ ಅದನ್ನು ನೋಡುತ್ತೇವೆನ್ನುವುದರಿಂದ ಒಂದಿಷ್ಟು ಸಂಕೇತಾತ್ಮಕ ಸಂದೇಶಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ಕೇವಲ ವ್ಯಾಕರಣಾಂಶವೆಂದು ಪರಿಗಣಿಸಬಲ್ಲ ಪರಿಶುದ್ಧವಾದ 'ವಸ್ತು' ಇಲ್ಲವೇ ಇಲ್ಲವೆನ್ನಬಹುದು. ವಸ್ತುವೆನ್ನುವುದು ಸಾಂದರ್ಭಿಕ ಸಂಕೇತಾರ್ಥವನ್ನು ಒಳಗಿಟ್ಟುಕೊಂಡೇ ಇರುತ್ತದೆ. ಹೀಗಾಗಿ, ಸಿನಿಕರ್ತ ಸೃಷ್ಟಿಸುವ ತಕ್ಷಣದ ಸಿನಿಕೋಶಕ್ಕೆ ಆವಿಷ್ಕಾರ ಸಂಕೇತಾರ್ಥವಲ್ಲದೇ, ಬಿಂಬ-ಸಂಜ್ಞೆಗಳ ವಸ್ತುಗಳಿಗಿರುವ ಸಂಕೇತಾರ್ಥವೂ ಸೇರಿ, ಕೇವಲ ವ್ಯಾಕರಣಾರ್ಥಕ್ಕಿಂತ ಹೆಚ್ಚು ತೀವ್ರವಾದ, ಆಳವಾದ ಇತಿಹಾಸ ಪ್ರಾಪ್ತವಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಕವಿಯ ಕಲಾತ್ಮಕ ಸ್ವಾತಂತ್ರ್ಯ ಹೇಗೆ ವ್ಯಾಕರಣಾಪೂರ್ವವಾಗಿರುತ್ತದೆಯೋ, ಅಂತೆಯೇ ಸಿನಿಕರ್ತನದ್ದು ಸಹ. ಹಾಗೆಯೇ, ಸಿನಿಕರ್ತನ ಈ ಸಿನಿಕೋಶದ ಆವಿಷ್ಕಾರದಲ್ಲಿ ಪೂರ್ತಿಯಾದ ಅಮೂರ್ತತೆ ಸಾಧ್ಯವಾಗುವುದಿಲ್ಲ.

ಸಾಹಿತ್ಯಕ ಕೃತಿಗೂ,ಸಿನಿಕೃತಿಗೂ ಇರುವ ಅತಿ ಮುಖ್ಯ ವ್ಯತ್ಯಾಸವಿದು. ಸಿನಿಕರ್ತನ ಎದುರಿರುವ ಭಾಷಿಕ, ವ್ಯಾಕರಣ ವಿಶ್ವ ಬಿಂಬಗಳಿಂದಷ್ಟೇ ಕೂಡಿವೆ. ಬಿಂಬಗಳಿಗೆ ಎಂದಿಗೂ ಒಂದು ಬಗೆಯ ಖಚಿತತೆಯಿದೆ. ತ್ರಿಕಾಲಜ್ಞಾನಿಯಾದ ಪ್ರತಿಭೆಗಷ್ಟೇ ಪದಗಳಿಗೆ ಸಾಧ್ಯವಾಗುವ ಕಾಲಾಂತರದ ಅರ್ಥ ವಿಸ್ತಾರವನ್ನು ಬಿಂಬಗಳಿಗೆ ಒದಗಿಸುವುದು ಸಾಧ್ಯ. ಸದ್ಯಕ್ಕಿದು ಶಕ್ಯವೆಂದು ತೋರುತ್ತಿಲ್ಲ. ಆದ್ದರಿಂದ ಸಿನಿಮಾ ಇಂದು ಕಲಾತ್ಮಕ ಭಾಷೆಯಾಗಿದೆಯೋ ಹೊರತು ತತ್ವಶಾಸ್ತ್ರದ ಭಾಷೆಯಾಗಿಲ್ಲ. ಆದೊಂದು ದೃಷ್ಟಾಂತವಾಗಬಹುದೇ ಹೊರತು, ಪರಿಕಲ್ಪನೆಗಳ ಅಭಿವ್ಯಕ್ತಿಯಷ್ಟೇ ಅದರಿಂದ ಸಾಧ್ಯವಿಲ್ಲ.

ಮೂಲಭೂತವಾಗಿ ಪ್ರತಿಮಾತ್ಮಕತೆಯನ್ನು, ಅದರ ಅಭಿವ್ಯಕ್ತಿ ಶ್ರೀಮಂತಿಕೆಯನ್ನು, ಕನಸುಗಳನ್ನು ಒಳಗೊಳ್ಳುವ ಸಿನಿಮಾದ ತೀವ್ರವಾದ ಕಲಾತ್ಮಕತೆಯನ್ನು ಇದು ಮತ್ತಷ್ಟು ದೃಢಪಡಿಸುತದೆ.

ಇವೆಲ್ಲವೂ ಸಿನಿಮಾದ ಭಾಷೆ ಪ್ರಾಥಮಿಕವಾಗಿ ಕಾವ್ಯದ ಭಾಷೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.


ಮುಂದುವರೆಯುವುದು........