ಕೃತಯುಗದ ಆದಿಕಾಲದಲ್ಲಿ ಮೂರುಲೋಕಗಳ ಒಡೆತನಕ್ಕಾಗಿ ದೇವಾಸುರರ ಮಧ್ಯೆ ಆಗಾಗ್ಗೆ ಭೀಕರ ಯುದ್ಧವಾಗುತ್ತಿತ್ತು. ದೇವತೆಗಳ ಕುಲಗುರುಗಳು ಬೃಹಸ್ಪತಿಗಳು. ರಾಕ್ಷಸರ ಕುಲಗುರು ಶುಕ್ರಾಚಾರ್ಯರು. ಬೃಹಸ್ಪತಿಗಳು ಘೋರ ಅಂಗೀರಸ ಮಹರ್ಷಿಗಳ ಪುತ್ರರಾಗಿದ್ದರೆ ಶುಕ್ರಾಚಾರ್ಯರು ಅದೇ ಅಂಗೀರಸರ ಅಚ್ಚುಮೆಚ್ಚಿನ ಶಿಷ್ಯ. ಬೃಹಸ್ಪತ್ಯಾಚಾರರ ಸಲಹೆ ಶುಕ್ರಾಚಾರ್ಯರ ರಕ್ಷಣೆಯಿಂದ ಇಬ್ಬರ ಬಲ ಸಮವಾಗಿತ್ತು. ಬೃಹಸ್ಪತಿಗಳು ಇಂದ್ರನ ಜೊತೆ ಅವನ ರಾಜಧಾನಿಯಾದ ಅಮರಾವತಿಯಲ್ಲಿದ್ದರೆ ಶುಕ್ರಾಚಾರ್ಯರು ರಾಕ್ಷಸ ರಾಜನಾದ ವೃಷಪರ್ವನ ರಾಜಧಾನಿಯಲ್ಲಿದ್ದರು.
ಇಷ್ಟಿದ್ದರೂ, ಇವರಿಬ್ಬರ ನಡುವೆ ಕೇವಲ ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಒಂದು ವಿದ್ಯೆಯಿತ್ತು - ಅದೇ ಮೃತಸಂಜೀವಿನಿ ವಿದ್ಯೆ. ಇದರಿಂದ ಶುಕ್ರಾಚಾರ್ಯರು ಸತ್ತವರನ್ನು ಬದುಕಿಸಬಲ್ಲವರಾಗಿದ್ದರು. ವೃಷಪರ್ವನಿಗೆ ಅದೊಂದು ಧೈರ್ಯ "ಶುಕ್ರಾಚಾರ್ಯರಿರುವವರಿಗೆ ನಮ್ಮ ಸಂಖ್ಯೆ ಕ್ಷೀಣಿಸುವುದಿಲ್ಲವೆಂದು". ದೇವತೆಗಳು ಶೌರ್ಯದಿಂದ ವಧಿಸಿದ ರಾಕ್ಷಸರೆಲ್ಲರೂ ಮತ್ತೊಂದು ಯುದ್ಧದಲ್ಲಿ ಮತ್ತೆ ಹಾಜರಾಗುತ್ತಿದ್ದರು. ದೇವತೆಗಳು ಇದರಿಂದ ಕ್ರುದ್ಧರಾದರು. ದಾರಿತಿಳಿಯದಾಗಿ ಕಡೆಗೆ ಬೃಹಸ್ಪತಿಗಳ ಮಗನಾದ ಕಚನ ಬಳಿಗೆ ಬಂದರು. "ಕಚ, ಶುಕ್ರಾಚಾರ್ಯರ ಮೃತಸಂಜೀವಿನಿ ವಿದ್ಯೆಯಿಂದ ಮೃತ ರಾಕ್ಷಸರು ಮತ್ತೆ ಜೀವಂತರಾಗುತ್ತಿದ್ದಾರೆ. ನಮ್ಮ ಬಳಿ ಆ ವಿದ್ಯೆಯಿಲ್ಲ. ದಯವಿಟ್ಟು ಶುಕ್ರಾಚಾರ್ಯರಿಂದ ಆ ವಿದ್ಯೆಯನ್ನು ಕಲಿತು ಬಾ. ಹಾಗಿದ್ದರೆ ಮಾತ್ರ ನಾವು ರಾಕ್ಷಸರನ್ನು ಹೆಡೆಮುರಿಗಟ್ಟಲು ಸಾಧ್ಯ" ಎಂದು ನುಡಿದರು.
ಕಚ ಮಹಾಧಾರ್ಮಿಕನು, ವಿಧೇಯನೂ, ಕರ್ತವ್ಯಪಾರನು ಆದ ಯುವಕ. ದೇವತೆಗಳ ಮಾತಿಗೆ ಒಪ್ಪಿ ತಕ್ಷಣವೇ ಶುಕ್ರಾಚಾರ್ಯರ ಬಳಿಗೆ ತೆರಳಿದನು. ಆದರೆ "ಅಲ್ಲೇನು ಕಾದಿದೆಯೋ" ಎಂದು ಆತಂಕದಿಂದ ಮನಸ್ಸಿನಲ್ಲಿ ತಲ್ಲಣಗೊಂಡಿದ್ದನು. ಶುಕ್ರಾಚಾರ್ಯರನ್ನು ಭೇಟಿಯಾಗಿ "ಆಚಾರ್ಯರೇ, ನಾನು ಕಚ. ಬೃಹಸ್ಪತಿಗಳ ಮಗ. ನಿಮ್ಮ ಬಳಿ ಶಿಷ್ಯವೃತ್ತಿಯನ್ನು ಬಯಸಿ ಬಂದಿದ್ದೇನೆ. ದಯವಿಟ್ಟು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ. ವಿಧೇಯನಾಗಿ ನಿಮ್ಮ ಸೇವೆ ಮಾಡುತ್ತೇನೆ" ಎಂದನು. ಶುಕ್ರಾಚಾರ್ಯರು ಸಂಪ್ರೀತರಾದರು. "ಕಚನೇ, ಬೃಹಸ್ಪತಿಗಳ ಮಗನಾದ ಮೇಲೆ ನೀನು ನನ್ನ ಶಿಷ್ಯನಾಗುವುದಕ್ಕೆ ಅರ್ಹನಾಗಿದ್ದೀಯೆ. ನಿನ್ನನ್ನು ಸಂತೋಷದಿಂದ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ" ಎಂದರು ಶುಕ್ರಾಚಾರ್ಯರು.
ಶುಕ್ರಾಚಾರ್ಯರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ದೇವಯಾನಿ. ಮಗಳ ಮೇಲೆ ಶುಕ್ರಾಚಾರ್ಯರು ಪ್ರಾಣವನ್ನೇ ಇಟ್ಟಿದ್ದರು. ಶುಕ್ರಾಚಾರ್ಯರು ಇನ್ನೇನನ್ನಾದರೂ ಸಹಿಸಬಲ್ಲರು ಆದರೆ ದೇವಯಾನಿ ನೊಂದುಕೊಂಡರೆ ಅವರು ಸಹಿಸುತ್ತಿರಲಿಲ್ಲ. "ದೇವಯಾನಿ, ನೋಡು ಬಾ. ಶ್ರೇಷ್ಠನಾದ ಕಚ ನನ್ನ ಬಳಿ ಶಿಷ್ಯನಾಗಿ ಬಂದಿದ್ದಾನೆ. ಅವನ ವಿದ್ಯೆ ಮುಗಿಯುವವರಿಗೆ ಅವನು ನಮ್ಮಲಿಯೇ ಇರುತ್ತಾನೆ" ಎಂದು ಪರಿಚಯಿಸಿದರು. ತನ್ನ ಮಾತಿನಂತೆಯೇ ಕಚ ಶುಕ್ರಾಚಾರ್ಯರ ಸೇವೆಯನ್ನು ಭಕ್ತಿ, ಶ್ರದ್ಧೆಗಳಿಂದ ಮಾಡಿದ. ಆದರೆ ಶುಕ್ರಾಚಾರ್ಯರು ಹೆಚ್ಚಿನ ಹೊತ್ತು ವೃಷಪರ್ವ ರಾಜನ ಆಸ್ಥಾನದಲ್ಲಿ ಕಳೆಯುತ್ತಿದ್ದರು. ಇಲ್ಲವಾದರೆ ಧ್ಯಾನ, ತಪಸ್ಸುಗಳಲ್ಲಿ ತಲ್ಲೀನರಾಗುತ್ತಿದ್ದರು. ನಿರ್ವಾಹವಿಲ್ಲದೆ ಕಚ ಹೆಚ್ಚಿನ ಹೊತ್ತು ದೇವಯಾನಿಯ ಜೊತೆಯಲ್ಲೇ ಕಳೆಯುತ್ತಿದ್ದ. ಅವಳ ದೈನಿಕ ವ್ಯವಹಾರಗಳಲ್ಲಿ ಸಹಾಯ ಮಾಡುತ್ತಿದ್ದ. ಬಾವಿಯಿಂದ ನೀರು ಸೇದುವುದು, ಗಿಡದಿಂದ ಹೂವು ಬಿಡಿಸುವುದು ಮುಂತಾದ ಕೆಲಸಗಳಲ್ಲಿ ದೇವಯಾನಿಯ ಜೊತೆಯಾಗುತ್ತಿದ್ದ. ಕ್ರಮೇಣ ಇಬ್ಬರ ಪರಿಚಯ ಗಾಢ ಸ್ನೇಹಕ್ಕೆ ತಿರುಗಿತು. ಕಚ ಸಂಗೀತ, ನೃತ್ಯಗಳಲ್ಲಿ ಪರಿಣತನಾಗಿದ್ದರಿಂದ ದೇವಯಾನಿಗೆ ತನ್ನ ಅಭಿರುಚಿಗೆ ತಕ್ಕವನಾದ ಸ್ನೇಹಿತ ಸಿಕ್ಕಂತಾಗಿತ್ತು. ಕಚನ ಸಂಗೀತ, ಅವನ ಮಾತಿನ ಹಿತ, ಅವನ ವ್ಯಕ್ತಿತ್ವದಲ್ಲಿನ ತಾಳ್ಮೆ, ಶಾಂತ ಗುಣ ಇವುಗಳಿಂದ ಆಕರ್ಷಿತಳಾದ ದೇವಯಾನಿ ಅವನನ್ನು ತೀವ್ರವಾಗಿ ಹಚ್ಚಿಕೊಂಡಳು. ಕಚನೇನಾದರೂ ಬರುವುದು ತಡವಾದರೆ ಕೋಪಗೊಳ್ಳುವಳಾದರು ಆ ಕೋಪವನ್ನು ಹೆಚ್ಚಿನ ಹೊತ್ತು ಧರಿಸಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಗುರುಗಳಿಗೆ ಕಚನನ್ನು ನೋಡಬೇಕಾದರೆ ಕರೆದುಕೊಂಡು ಬರುವವಳು ದೇವಯಾನಿಯಾಗಿರುತ್ತಿದ್ದಳು. ಹೀಗೆ ಮನೆಮಗನಾಗಿ ಕಚ ಶುಕ್ರಾಚಾರ್ಯರಲ್ಲಿ ಶಿಷ್ಯವೃತ್ತಿ ನಡೆಸಿದ್ದ. ನಿಧಾನವಾಗಿಯಾದರೂ ಸಧೃಢವಾಗಿ ಕಚನ ಅಧ್ಯಯನ ಮುಂದೆ ಸಾಗಿತ್ತು.
ಆದರೆ ರಾಕ್ಷಸರಿಗೆ ಕಚನ ಮೇಲೆ ಮೊದಲಿಂದಲೂ ಅನುಮಾನವಿತ್ತು. ದೇವತೆಗಳ ಗುರುವಾದ ಬೃಹಸ್ಪತಿಗಳ ಮಗ ಕಚ. ಶುಕ್ರಾಚಾರ್ಯರಲ್ಲಿ ಅವನೇಕೆ ಶಿಷ್ಯವೃತ್ತಿಯನ್ನು ಯಾಚಿಸಬೇಕು. ಇದರಲ್ಲೇನೋ ಮೋಸವಿದೆ. ಬಹುಶಃ ಮೃತಸಂಜೀವಿನಿ ವಿದ್ಯೆಯ ರಹಸ್ಯವನ್ನರಿಯಲು ಕಚ ಇಲ್ಲಿಗೆ ಬಂದಿರಬೇಕು - ಎನ್ನುವುದು ಅವರ ಲೆಕ್ಕಾಚಾರ. ಇದು ಸಾಧ್ಯವಾಗಲು ಬಿಡಬಾರದು. ಕಚನನ್ನು ಕೊಳ್ಳದೆ ವಿಧಿಯಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಆದರೆ ಅವರಿಗೆ ಶುಕ್ರಾಚಾರ್ಯರ ಭಯ. ರಾಕ್ಷಸರ ಒಟ್ಟು ಜೀವನ ಶುಕ್ರಾಚಾರ್ಯರ ರಕ್ಷಣೆಯ ಮೇಲೆ ನಿಂತಿತ್ತು. ಅಚಾಚಾರ್ಯರಿಗೂ ಕಚನೆಂದರೆ ಮಹಾಪ್ರೀತಿ. ಇನ್ನು ಅವನ ಸಾವಿಗೆ ಅನುಕೂಲಮಾಡಿಕೊಟ್ಟರೋ? ರಾಕ್ಷಸರ ಇಂಗಿತ ತಿಳಿದರೆ ಶಾಪವನ್ನೇ ಕೊಟ್ಟಾರು. ಆದ್ದರಿಂದ ವೃಷಪರ್ವ ಸಾವಧಾನದಿಂದ ಕೆಲಸ ಮಾಡಬೇಕೆಂದು ತೀರ್ಮಾನಿಸಿದ.
ರಾಕ್ಷಸರು ಸಾಕಷ್ಟು ದಿನ ಕಾದರು. ಅನುಕೂಲವಾದ ಗಳಿಗೆ ಬಂದೆ ಬಂತು. ಕಚ ಒಂದು ದಿನ ದನಕರುಗಳನ್ನು ಕರೆದುಕೊಂಡು ಕಾಡಿಗೆ ಮೇಯಿಸಲು ಹೊರಟಿದ್ದ. ಅವನು ದಟ್ಟ ಕಾಡಿನ ಮಧ್ಯೆ ಬರುವವರಿಗೂ ಕಾದ ರಾಕ್ಷಸರು ಹಠಾತ್ತನೆ ಧಾಳಿ ಮಾಡಿ ಸಾಯಿಸಿದರು. ಅವನ ದೇಹ ಸಿಗಲೇಬಾರದೆಂದು ಅದನ್ನು ನಾಯಿನರಿಗಳಿಗೆ ಹಾಕಿ ವಾಪಸಾದರು. ಇತ್ತ ದೇವಯಾನಿ ಇಷ್ಟು ಹೊತ್ತಾದರೆ ಕಚ ಬಾರದ್ದನ್ನು ನೋಡಿ ಆತಂಕಗೊಂಡಳು. ಸ್ವಲ್ಪ ಹೊತ್ತಿನಲ್ಲೇ ಅಕಲುಗಳೆಲ್ಲ ಹಿಂದಿರುಗಿದವು ಆದರೆ ಕಚ ಮಾತ್ರ ಬರಲಿಲ್ಲ. ದುಃಖದಿಂದ ತಂದೆಯ ಬಳಿಗೆ ಓಡಿ "ಕಚನಿಗೆ ಏನೋ ಅಪಾಯ ಬಂದಿರುವ ಸಾಧ್ಯತೆಯಿಂದ ದಯವಿಟ್ಟು ಅವನನ್ನು ರಕ್ಷಿಸಿ. ಅವನೇನಾದರೂ ಮೃತನಾಗಿದ್ದರೆ ನಾನೂ ಸಹ ಜೀವಂತವಾಗಿರುವುದಿಲ್ಲ" ಎಂದು ದುಃಖತಪ್ತಳಾದಳು. ಶುಕ್ರಾಚಾರ್ಯರು "ಮಗಳೇ, ದುಃಖ ಪಡದಿರು. ಸಹಸ್ರಾರು ರಾಕ್ಷಸರನ್ನು ಜೀವಂತವಾಗಿಸಿದ ನಿನ್ನ ತಂದೆ, ನಿನಗೋಸ್ಕರ ಅಷ್ಟು ಮಾಡಲಾರನೇ? ನನ್ನ ಶಕ್ತಿಯಿಂದ ಕಚನಿಗೆ ಏನೇ ಅಪಾಯವಾಗಿದ್ದರು ಅವನನ್ನು ಪಾರು ಮಾಡುತ್ತೇನೆ." ಎಂದು ವಚನವಿತ್ತನು. ಅಂತೆಯೇ ಮೃತಸಂಜೀವಿನಿಯಿಂದ ಕಚನನ್ನು ಬದುಕಿಸಿದರು. ದೇವಯಾನಿ ಸಂತುಷ್ಟಳಾದಳು. "ಕಾಚ, ನಿನಗೇನಾಗಿತ್ತು? ಅದೆಲ್ಲಿ ಮಾಯವಾಗಿದ್ದೆ?" ಎಂದು ವಿಚಾರಿಸಿದಳು. "ಅಸುರರು ನನ್ನ ಮೇಲೆ ಕಾಡಿನ ಮಧ್ಯೆ ಧಾಳಿ ಮಾಡಿ ಸಾಯಿಸಿದರು. ಆದರೆ ಇಲ್ಲಿಗೆ ಹೇಗೆ ಬಂದೆನೋ ಕಾಣೆ." ಎಂದನು ಕಚ. ಇದನ್ನು ಇಲ್ಲಿಗೆ ಬಿಟ್ಟರಾಯಿತು ಎಂದು ಆಚಾರ್ಯರು, ದೇವಯಾನಿಯು, ಕಚನು ಸುಮ್ಮನಾದರು.
ಒಂದಿಷ್ಟು ಕಾಲವಾಯಿತು. ಒಂದು ದಿನ ದೇವಯಾನಿ "ಕಚ, ಬಹಳ ಹಿಂದೆ ಕಾಡಿನ ಮಧ್ಯದಲ್ಲಿ ತಂದೆಯ ಜೊತೆ ವಿಹರಿಸುತ್ತಿದ್ದೆ. ಆಗ ಬಹಳ ಸುಂದರವಾದ ಒಂದಿಷ್ಟು ಹೂವುಗಳನ್ನು ಕಂಡೆ. ಅದರ ಪರಿಮಳ ಈಗಲೂ ನನ್ನ ಮನಸ್ಸಿನಲ್ಲಿದೆ. ಅವು ಈ ಋತುವಿನಲ್ಲಿ ಮಾತ್ರ ಅರಳುತ್ತವೆ. ಅವುಗಳನ್ನು ತಂದುಕೊಡುವೆಯಾ?" ಎಂದು ಕೇಳಿದಳು. ದೇವಯಾನಿಯ ಕೋರಿಕೆಯನ್ನು ತಿರಸ್ಕರಿಸುವುದು ಸಾಧ್ಯವೇ? ಸರಿ ಕಚ ತಕ್ಷಣವೇ ಹೊರಟ. ಇದೆ ಸಮಯಕ್ಕಾಗಿ ಕಾಯುತ್ತಿದ್ದ ಅಸುರರು ಕಾಡಿನ ಮಧ್ಯೆ ಮತ್ತೆ ಧಾಳಿಮಾಡಿ ಕಚನನ್ನು ಮೃತನನ್ನಾಗಿಸಿದರು. ಆದರೆ ಈ ಬಾರಿ ಅವನ ದೇಹವನ್ನು ಅರೆದು ಸಮುದ್ರದಲ್ಲಿ ಕರಗಿಸಿಬಿಟ್ಟರು. ಮತ್ತೆ ಆತಂಕಿತಳಾದ ದೇವಯಾನಿ ತಂದೆಯ ಬಳಿಗೆ ಓಡಿದಳು. ಆದರೆ ಈ ಬಾರಿ ಸ್ವತಃ ಶುಕ್ರಾಚಾರ್ಯರೇ ಆತಂಕಕೊಂಡಿದ್ದರು. "ಇದೇಕೆ ಕಚ ಇಷ್ಟುಹೊತ್ತಾದರೂ ಬರಲಿಲ್ಲ. ಯಾವುದೊ ಕಾರಣಕ್ಕೆ ಅಸುರರು ಅವನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ, ಮತ್ತೆ ಅವರ ಕೈಯಲ್ಲಿ ಹತನಾದನೋ ಹೇಗೆ" ಎಂದು ಎಣಿಕೆ ಮಾಡುತ್ತಿದ್ದರು. ದೇವಯಾನಿ ಬಂದೊಡನೆಯೇ "ಯೋಚನೆ ಮಾಡದಿರು ಮಗಳೇ" ಎಂದು ಸಂತೈಸಿ ಮತ್ತೆ ಮೃತಸಂಜೀವಿನಿಯಿಂದ ಕಚನನ್ನು ಬದುಕಿಸಿದರು.
ಅಸುರರಿಗೆ ಮತ್ತೆ ಕಚ ಜೀವಂತವಾಗಿ ಮರಳಿದ ವಿಷಯ ತಿಳಿಯಿತು. ಅವರಿಗೆ ಬುದ್ಧಿಯೇ ತಿಳಿಯದಂತಾಯ್ತು. ಹೀಗೆ ಪ್ರತಿ ಬಾರಿಯೂ ಶುಕ್ರಾಚಾರ್ಯರು ಕಚನನ್ನ್ನು ಜೀವಂತವಾಗಿಸಿದರೆ ಕಚನನ್ನು ನಾವು ಮರಣಿಸುವುದೆಂತು? ಬಹಳ ವಿಚಾರ ಮಡಿದ ನಂತರ ಅಸುರರಿಗೊಂದು ಉಪಾಯ ಹೊಳೆಯಿತು. ಮಾರನೆಯ ದಿನ ಕಚ ಹಸುಕರುಗಳನ್ನು ಕಾಡಿನಿಂದ ವಾಪಸ್ಸು ಕರೆತರುತ್ತಿದ್ದ ಸಮಯಕ್ಕೆ ಸರಿಯಾಗಿ ಹೊಂಚು ಹಾಕಿ ಕಾದುಕುಳಿತ್ತಿದ್ದರು. ಕಚನನ್ನು ಹಿಂದಿನಿಂದ ದಾಳಿ ಮಾಡಿ ಹೊಡೆದು ಸಾಯಿಸಿದರು. ಈ ಬಾರಿ ಅವನ ದೇಹವನ್ನು ಸುತ್ತು ಬೂದಿಮಾಡಿದರಲ್ಲದೆ ಅಸ್ಥಿಯನ್ನು ಶುಕ್ರಾಚಾರ್ಯರಿಗೆ ಇಷ್ಟವಾದ ಸುರೆಯಲ್ಲಿ ಕರಗಿಸಿಬಿಟ್ಟರು. ಇದ್ಯಾವುದೂ ಅರಿಯದ ಶುಕ್ರಾಚಾರ್ಯರನ್ನು ಭೇಟಿ ಮಾಡಿ ಅವರನ್ನು ಓಲೈಸುವಂತೆ ಸುರೆಯನ್ನು ಸಮರ್ಪಿಸಿದರು. ಸುರೆಎಂದರೆ ಕರಗಿಹೋಗುತ್ತಿದ್ದ ಶುಕ್ರಾಚಾರ್ಯರು ಅದನ್ನು ಸೇವಿಸಿ ಸಂತೃಪ್ತರಾದರು. ಅಸುರರನ್ನು ಮನದುಂಬಿ ಹೋಗಲಿ ಆಶೀರ್ವದಿಸಿದರು.
ಇತ್ತ ದೇವಯಾನಿ ಕಚನಿಗೋಸ್ಕರ ಕಾದು ಕಾದು ಸುಸ್ತಾದಳು. ಮತ್ತೆ ಅಸುರರು ಕಚನನ್ನು ಮೃತ್ಯುಗೈದರೊ? ಕಚನಿಗೆ ಇನ್ನೆಷ್ಟು ಮರಣಗಳು ಕಾದಿದೆಯೋ ಅಸುರರಿಂದ? ನಿಜಕ್ಕೂ ನನಗೆ ಕಚ ಸಿಗುವನೇ - ಅವನ ಜೊತೆ ಮದುವೆಯಾಗುವ ಭಾಗ್ಯ ನನಗಿದೆಯೇ - ಎಂದು ದೇವಯಾನಿ ಆತಂಕಕೊಂಡಳು. ಮತ್ತೆ ಹಸುಗಳೆಲ್ಲ ವಾಪಸ್ಸು ಬಂದವು. ಕಚ ಮಾತ್ರ ಬರಲಿಲ್ಲ. "ತಂದೆಯೇ, ಕಚನಿಲ್ಲದೆ ನನಗೆ ಬದುಕಿಲ್ಲ. ದಯವಿಟ್ಟು ಅವನನ್ನು ನನಗೆ ಮರಳಿಸಿ" ಎಂದು ವಿಹ್ವಳಿಸಿದಳು. ಶುಕ್ರಾಚಾರ್ಯರು ಮತ್ತೆ ಧ್ಯಾನಮಗ್ನರಾದರು. ಆದರೆ ಈ ಬಾರಿ ಕಣ್ತೆರೆದ ಮೇಲೆ ಅವರ ಮೊಗದಲ್ಲಿ ನಗುವಿರಲಿಲ್ಲ, ಬದಲಿಗೆ ವಿಚಲಿತರಾಗಿದ್ದರು. ಮಗಳನ್ನು ಸಂತೈಸಲು ಪ್ರಯತ್ನಿಸಿದರೂ. "ಮಗಳೇ, ಅಸುರರಿಗೆ ಕಚನನ್ನು ಕಂಡರಾಗುವುದಿಲ್ಲ. ಅವನನ್ನು ನಾನು ಮತ್ತೆ ಬದುಕಿಸಿ ಫಲವೇನು. ಅಸುರರು ಮತ್ತೆ ಕೊಂದೇ ಕೊಳ್ಳುವರು. ನಿನ್ನಂತಹ ಜ್ಞಾನಿ ಹೀಗೆ ಒಬ್ಬನ ಪ್ರೇಮಪಾಶಕ್ಕೆ ಸಿಲುಕಿ ನರಳುವುದು ತರವಲ್ಲ. ನೀನಿನ್ನೂ ಚಿಕ್ಕವಳು ಮತ್ತು ಸುಂದರವಾದ ಜೀವನ ನಿನಗಾಗಿ ಕಾದಿದೆ" ಎಂದು ಸಂತೈಸಲು ಪ್ರಯತ್ನಿಸಿದರು.
ಆದರೆ ಕಚನ ಮೇಲಿನ ದೇವಯಾನಿಯ ಪ್ರೇಮ ಶುಕ್ರಾಚಾರ್ಯರ ವಿಚಾರವಂತಿಕೆಯನ್ನು ಮೀರಿತ್ತು. "ತಂದೆಯೇ, ಕಚ ನಿಮ್ಮ ಅತ್ಯುತ್ತಮ ಶಿಷ್ಯನಾಗಿದ್ದ. ನಿಮ್ಮ ನಿಷ್ಠಾವಂತ ಸೇವಕನಾಗಿದ್ದ. ನಾನು ಅವನನ್ನು ಅತಿಯಾಗಿ ಪ್ರೇಮಿಸುತ್ತೇನೆ - ನನಗೆ ತಿಳಿದಿರುವ ಸತ್ಯ ಇದಿಷ್ಟೇ. ಅವನೇನಾದರೂ ಸತ್ತು ಮರಳಿ ಬಾರದಿದ್ದರೆ ನನಗು ಜೀವಿಸುವ ಆಸೆಯಿಲ್ಲ - ತಿಳಿಯಿರಿ". ಕಡೆಗೆ, ದೇವಯಾನಿಯ ದುಃಖವನ್ನು ನೋಡಿ ಶುಕ್ರಾಚಾರ್ಯರು ತಡೆಯದಾದರು. ಮೃತಸಂಜೀವಿನಿ ಮಂತ್ರವನ್ನು ಪಠಿಸಿದರು. ಹೊಟ್ಟೆಯೊಳಗಿಂದ ಕಚ ಮಾತನಾಡಿದ. "ಆಚಾರ್ಯರೇ, ಅಸುರರು ಯಥಾ ಪ್ರಕಾರ ನನ್ನನ್ನು ಹೊಡೆದುರುಳಿಸಿದರು ಆದರೆ ನಿಮ್ಮೊಡಲೊಳಗೆ ಹೇಗೆ ಬಂದೆನೋ ಕಾಣೆ" ಎಂದನು. ಅವರು ದೇವಯಾನಿಗೆ ಸತ್ಯವನ್ನು ಹೇಳಲೇಬೇಕಾಯಿತು. "ನೋಡು ಮಗು, ನಿನ್ನ ಕಚ ಈಗ ನನ್ನ ಒಡಲಲ್ಲಿದ್ದಾನೆ. ಅಸುರರು ನನಗೆ ಸುರೆಯ ಅಮಿಷ್ಯವೊಡ್ಡಿದಾಗ ನನಗೆ ತಿಳಿಯಲಿಲ್ಲ. ಸುರೆಯ ಜೊತೆಗೆ ಕಚನ ಆಸ್ತಿಯೂ ನನ್ನೊಡಲನ್ನು ಸೇರಿತು. ನನ್ನೀ ಸುರೆಯ ಆಸೆಗೆ ಧಿಕ್ಕಾರವಿರಲಿ. ಇನ್ನು ಮುಂದೆ ಜ್ಞಾನಾಕಾಂಕ್ಷಿಗಳಾದವರಿಗೆ ಸುರೆಯು ಸಂಪೂರ್ಣ ನಿಷಿದ್ಧವಾಗಿರಲಿ" ಎಂದು ಹಂಬಲಿಸಿದರು. "ಮಗಳೇ, ಕಚ ನನ್ನ ಹೊಟ್ಟೆಯಲ್ಲಿರುವವನಾಗಿ ಅವನು ನನ್ನನ್ನು ಕೊಂದೇ ಹೊರಬರಬೇಕು" ಎಂದು ಅಸಹಾಯಕರಾಗಿ ಹೇಳಿದರು. ದೇವಯಾನಿ ಮನಸ್ಸು ಮಾತ್ರ ಸ್ಪಷ್ಟವಾಗಿತ್ತು. "ತಂದೆಯೇ, ನೀವೇನಾದರೂ ಉಪಾಯ ಮಾಡಿ. ನಿಮ್ಮಿಬ್ಬರಲ್ಲಿ ಯಾರು ಇಲ್ಲವಾದರೂ ನಾನು ಜೀವಂತವಾಗಿರಲಾರೆ" ಎಂದು ನಿಶ್ಚಯದಿಂದ ಹೇಳಿದಳು.
ಶುಕ್ರಾಚಾರ್ಯರಿಗೆ ಒಂದು ಉಪಾಯ ಹೊಳೆಯಿತು. ಇದೀಗ ಅವರಿಗೆ ಕಚ ತಮ್ಮ ಬಳಿ ಶಿಷ್ಯವೃತ್ತಿಯನ್ನು ಅರಸಿ ಬಂದ ಕಾರಣ ಹೊಳೆಯಿತು. "ಕಚ, ನೀನು ನನ್ನ ಬಳಿ ಬಂದ ಕಾರಣ ಇದೀಗ ನನಗೆ ಸ್ಪಷ್ಟವಾಯಿತು. ಅದರಲ್ಲೀಗ ನೀನು ಜಯವನ್ನು ಪಡೆಯುತ್ತೀಯೆ. ನೀನು ನನ್ನೊಡಲೊಳಗಿಂದ ಹೊರವರುವ ಉಪಾಯವೊಂದೇ. ನಾನೀಗ ನಿನಗೆ ಮೃತಸಂಜೀವಿನಿ ವಿದ್ಯೆಯನ್ನು ಹೇಳಿಕೊಡುತ್ತೇನೆ. ನೀನು ನನ್ನೊಡಲನ್ನು ಸೀಳಿ ಹೊರಬಂದ ತಕ್ಷಣ ನಾನು ಮರಣಹೊಂದುತ್ತೇನೆ. ನೀನು ನನ್ನನ್ನು ಬದುಕಿಸಬೇಕು." ಎಂದರು.
ಕಚ ಹೊರಬಂದನು. ಮರಣಿಸಿದ್ದ ಶುಕ್ರಾಚಾರ್ಯರನ್ನು ಅವರಿಂದಲೇ ಕಲಿತ ಮೃತಸಂಜೀವಿನಿ ವಿದ್ಯೆಯಿಂದ ಮತ್ತೆ ಜೀವಂತವಾಗಿಸಿದನು. ಶುಕ್ರಾಚಾರ್ಯರು ಶಿಷ್ಯನ ಶ್ರದ್ಧೆ, ಬುದ್ಧಿವಂತಿಕೆ, ಜ್ಞಾನದಿಂದ ಸಂಪ್ರೀತರಾದರು. ಕೋಪಾವಿಷ್ಟರಾಗಿ ತಕ್ಷಣವೇ ಅಸುರರತ್ತ ತೆರಳಿದರು. "ಮಹಾ ಮೂರ್ಖ ಅಸುರರೇ! ನೋಡಿ ನೀವೇನು ಮಾಡಿದ್ದೀರಿ. ನೀವು ಯಾವುದನ್ನು ಕಚ ಅರಿಯಬಾರದು ಎಂದು ಹಪಹಪಿಸಿದಿರೋ ಅದೀಗ ಅವನಿಗೆ ದೊರೆತಾಗಿದೆ. ಸ್ವತಃ ನೀವೇ ಅವನು ಮೃತಸಂಜೀವಿನಿ ವಿದ್ಯೆ ಕಲಿಯುವುದಕ್ಕೆ ಕಾರಣರಾಗಿದ್ದೀರಿ. ಆದರೆ ಹೆದರದಿರಿ. ನನ್ನ ಮಗಳಾದ ದೇವಯಾನಿ ಕಚನನ್ನು ಬಹುವಾಗಿ ಪ್ರೇಮಿಸಿದ್ದಾಳೆ. ಆದ್ದರಿಂದ ಕಚ ನಮ್ಮ ಬಳಿಯೇ ಇರುತ್ತಾನೆ" ಎಂದು ಅಸುರರನ್ನು ಮೂದಲಿಸಿ ವಾಪಸಾದರು.
ಇತ್ತ ಕಚನ ವಿದ್ಯಾಭ್ಯಾಸ ಮುಗಿಯಿತು. ದೇವಯಾನಿಯ ಮನಸ್ಸಿನ ಅಭಿಲಾಷೆಯನ್ನು ಪೂರ್ತಿಯಾಗಿ ತಿಳಿಯದಿದ್ದರೂ ದೇವಯಾನಿ ತನ್ನ ಮೇಲೆ ಅತಿಯಾದ ಸ್ನೇಹಹೊಂದಿರುವುದನ್ನು ಕಚ ತಿಳಿದಿದ್ದ. ತಾನಿನ್ನು ಮತ್ತೆ ದೇವಲೋಕಕ್ಕೆ ಮರಳುತ್ತಿರುವುದನ್ನು ದೇವಯಾನಿಗೆ ಹೇಳುವುದಾದರೂ ಹೇಗೆ? ಎಂದು ಕಚ ಚಿಂತಿಸುತ್ತಿದ್ದನು. ಕಡೆಗೆ ಆ ದಿನ ಬಂದೆ ಬಂತು. ಕಚ ಶುಕ್ರಾಚಾರ್ಯರಿಗೆ ನಮಸ್ಕರಿಸಿ "ಗುರುಗಳೇ, ನಿಮ್ಮ ದಯೆಯಿಂದ ನನ್ನ ಯೋಗ್ಯತಾನುಸಾರ ನನ್ನ ವಿದ್ಯೆ ಸಂಪೂರ್ಣವಾಗಿದೆ. ನಾನಿನ್ನು ನನ್ನ ಲೋಕಕ್ಕೆ ಮರಳಬೇಕಾಗಿದೆ. ದಯವಿಟ್ಟು ನನಗೆ ಅನುಮತಿಯನ್ನು ಕೊಡಬೇಕು" ಎಂದು ಪ್ರಾರ್ಥಿಸಿದನು. ಶುಕ್ರಾಚಾರ್ಯರಿಗೆ ಪರಮಾಶ್ಚರ್ಯವಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಅನುಮತಿ ಕೊಟ್ಟರು. "ದೇವಯಾನಿಗೆ, ಕಚನ ನಿರ್ಧಾರ ತಿಳಿದಿದೆಯೋ ಇಲ್ಲವೋ" ಎಂದು ಚಿಂತಿಸಿದರು.
ಕಚ ದೇವಯಾನಿಯತ್ತ ತೆರಳಿದನು. ಕಚನು ಜೀವಂತವಾಗಿ ಮರಳಿದ ನಂತರ ದೇವಯಾನಿ ಅತೀವ ಸಂತಸದಲ್ಲಿದ್ದಳು. ಕಚನ ನಿರ್ಧಾರದ ಇನಿತು ಜ್ಞಾನವೂ ಅವಳಿಗಿರಲಿಲ್ಲ. ಕಚ ತನ್ನತ್ತ ಬರುತ್ತಿರುವುದನ್ನು ನೋಡಿದ ದೇವಯಾನಿ "ಇದೀಗ ಅವನ ವಿದ್ಯಾಭ್ಯಾಸ ಮುಗಿದಿದೆ. ಗೃಹಸ್ಥಾಶ್ರಮ ಪ್ರವೇಶಿಸುವುದಕ್ಕೆ ಅವನಿಗೆ ಅನುಮತಿಯಿದೆ. ನನ್ನನ್ನು ಮದುವೆಯಾಗುವುದಕ್ಕೆ ಯಾವ ತಡೆಯು ಇಲ್ಲವಾಗಿದೆ" ಎಂದು ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು. ಆದರೆ ಅವಳ ಕನಸುಗಳು ಕಣ್ಣೀರಾಗುವುದರಲ್ಲಿತ್ತು. "ದೇವಯಾನಿ, ನಾನು ಆಶ್ರಮವನ್ನು ಬಿಡುವ ಸಮಯ ಬಂದಿದೆ. ನೀನು ನನ್ನ ಅತ್ಯುತ್ತಮ ಗೆಳತಿ. ನಾನು ದೇವಲೋಕಕ್ಕೆ ತೆರಳುವುದಕ್ಕೆ ಅನುಮತಿ ಕೊಡು. ನಾನು ನನ್ನ ಜನರನ್ನು ಸೇರಿ ನನ್ನ ಕರ್ತವ್ಯಗಳನ್ನು ಪೂರೈಸುವ ಕಾಲ ಕೂಡಿಬಂದಿದೆ" ಎಂದು ಮುಗ್ಧನಾಗಿ ಹೇಳಿದನು.
ದಿಗ್ಬ್ರಾಂತಲಾದ ದೇವಯಾನಿಯ ಕಣ್ಣೀರಿನ ಕಟ್ಟೆಯೊಡೆಯಿತು. "ಕಚ, ನಾನು ನಿನ್ನನ್ನು ಬಹುವಾಗಿ ಪ್ರೇಮಿಸುತ್ತಿದ್ದೇನೆ. ನೀನು ವಿದ್ಯಾರ್ಥಿಯಾಗಿದ್ದೆಯಾಗಿ ನಾನು ಮುಕ್ತವಾಗಿ ಇದನ್ನು ತಿಳಿಸಲಾಗಲಿಲ್ಲ. ಇದೀಗ ನೀನು ವಿದ್ಯಾಭ್ಯಾಸ ಮುಗಿಸಿದ್ದೀಯೆ. ಗೃಹಸ್ಥಾಶ್ರಮವನ್ನು ಪ್ರವೇಶಿಸಬಹುದಾಗಿದೆ. ನೀನೀಗ ನನ್ನನ್ನು ಪತ್ನಿಯಾಗಿ ಸ್ವೀಕರಿಸಬಹುದಲ್ಲವೇ? ನಾವು ಸಂತಸದಿಂದ ಕಳೆದ ದಿನಗಳನ್ನು ಅಷ್ಟು ಸುಲಭವಾಗಿ ಮರೆಯುವುದು ಸಾಧ್ಯವೇ? ನಾನೇನು ತಪ್ಪು ಮಾಡಿದ್ದೇನೆ?" ಎಂದು ದುಃಖಿಸಿದಳು. ಕಚನ ಮನಸ್ಸು ಸ್ಪಷ್ಟವಾಗಿತ್ತು. ನಿರ್ಧಾರ ಅಚಲವಾಗಿತ್ತು. ಆದರೆ ದೇವಯಾನಿಯ ಕೈಹಿಡಿದು ಮೃದುವಾಗಿ ಹೇಳಿದನು "ದೇವಯಾನಿ, ನಿನ್ನಂತಹ ಸ್ತ್ರೀ ಈ ಪ್ರಪಂಚದಲ್ಲಿ ಮತ್ತೊಬ್ಬಳು ಇರುವುದು ಕಷ್ಟವೇ ಸರಿ. ನಿನಗೆ ಸಾಟಿಯಿಲ್ಲ. ನಾನು ನಿನ್ನ ತಂದೆಯ ಹೊಟ್ಟೆಯಲ್ಲೇ ಮರುಜನ್ಮ ಪಡೆದವನು ಎನ್ನುವುದನ್ನು ಮರೆಯದಿರು. ಈ ಕಾರಣದಿಂದ ನಾನು ನಿನಗೆ ಸಹೋದರ ಸಮಾನ. ಆದ್ದರಿಂದ ನಾನು ನಿನ್ನನ್ನು ಮದುವೆಯಾಗುವುದು ಅಸಾಧ್ಯದ ಮಾತು. ನಾನೊಬ್ಬನೇ ಹಿಂದಿರುಗಬೇಕು" ಎಂದನು.
ಕೆಣಕಿದ ಫಣಿಯಂತೆ ದೇವಯಾನಿ ಕೋಪವಿಷ್ಟಳಾದಳು. "ಕಚ, ನನ್ನ ಪ್ರೇಮವನ್ನು ತಿರಸ್ಕರಿಸಿದ್ದೀಯೆ. ನಿನಗೆ ಕೇವಲ ಮೃತಸಂಜೀವಿನಿ ವಿದ್ಯೆ ಕಲಿಯುವುದು ಮುಖ್ಯವಾಗಿತ್ತು ಅನ್ನಿಸುತ್ತದೆ. ನನ್ನ ಸ್ನೇಹ ಅಷ್ಟು ಮಾತ್ರಕ್ಕೆ ನಿನಗೆ ಬೇಕಾಗಿತ್ತು. ನನ್ನ ಸ್ನೇಹವನ್ನು ದುರುಪಯೋಗಪಡಿಸಿಕೊಂಡಿದ್ದೀಯೆ. ಆದ್ದರಿಂದ ಕಚ - ಇದೋ ನನ್ನ ಶಾಪ. ಯಾವ ಮೃತಸಂಜೀವಿನಿ ವಿದ್ಯೆಯನ್ನು ಕಲಿಯುವುದಕ್ಕೋಸ್ಕರ ನೀನು ಇಲ್ಲಿಗೆ ಬಂದೆಯೋ ಆ ವಿದ್ಯೆಯನ್ನು ನೀನೆಂದು ಸ್ವತಃ ಬಳಸಲಾರದಂತಾಗಲಿ" ಎಂದು ನೊಂದು ಶಪಿಸಿಬಿಟ್ಟಳು.
ಈಗ ದಿಗ್ಭ್ರಅಂತನಾಗುವ ಸರದಿ ಕಚನದ್ದು. ವರ್ಷಗಳ ತನ್ನ ಪರಿಶ್ರಮ ಹೀಗೆ ಒಂದು ಕ್ಷಣದಲ್ಲಿ ನೀರು ಪಾಲಾದ್ದನ್ನು ನೋಡಿ ಬಹುವಾಗಿ ದುಃಖಿಸಿದನು. ದುಃಖ ಕ್ರಮೇಣ ಕೋಪಕ್ಕೆ ತಿರುಗಿತು. "ದೇವಯಾನಿ, ಹಿಂದೂ ಮುಂದು ನೋಡದೆ ವಿಷಯವನ್ನು ಸರಿಯಾಗಿ ಅರಿಯದೆ ದುಡುಕಿನಿಮ್ದ ನನ್ನನ್ನು ಶಪಿಸಿದ್ದೀಯೆ. ಇದು ಸರಿಯಲ್ಲ. ಈ ನಿನ್ನ ಶಾಪಕ್ಕೆ ಇದೋ ನನ್ನ ಪ್ರತಿಶಾಪ. ಋಷಿಪುತ್ರಿಯಾದ ನಿನ್ನ ಯಾವ ಋಷಿಪುತ್ರನು ಮದುವೆಯಾಗದಿರಲಿ. ನಿನ್ನ ಶಾಪದಿಂದ ನಾನು ಸಂಜೀವಿನಿ ವಿದ್ಯೆಯನ್ನು ಪ್ರಯೋಗಿಸಲಾಗುವುದಿಲ್ಲ. ಆದರೆ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸುವುದು ಇನ್ನು ಮುಂದೆ ನನ್ನ ಜೀವನದ ಗುರಿ" ಎಂದು ಪ್ರತಿಶಾಪವನ್ನು ಕೊಟ್ಟನು. ತಂದೆ, ಮಗಳು ದುಃಖದಿಂದ ಕಚ ದೇವಲೋಕಕ್ಕೆ ಮರಳುವುದನ್ನು ನೋಡಿದರು.
ಕಾಲಕಳೆದಂತೆ ಕ್ರಮೇಣವಾಗಿ ದೇವಯಾನಿ ಕಚನನ್ನು ದುಃಖವನ್ನು ಮರೆತಳು. ಕಡೆಗೆ ಇದೆಲ್ಲವನ್ನು ಸಂಪೂರ್ಣವಾಗಿ ಮನಸ್ಸಿನಿಂದ ಇಲ್ಲವಾಗಿಸಿದಳು. ಅಸುರ ರಾಜನಾದ ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆಯ ಜೀವದ ಗೆಳತಿಯಾಗಿ, ತಂದೆಯ ಮುದ್ದಿನ ಮಗಳಾಗಿ ಬೆಳೆದಳು.