ತ್ರಿಪುರ ದಹನ, ತ್ರಿಪುರಾಂತಕ ಶಿವ
ದೇವತೆಗಳನ್ನೆದುರಿಸಲು ತಾರಕಾಕ್ಷ ತನ್ನ ಚಿನ್ನದ ನಗರಿಯಿಂದ ಹಾರಿದನು ಸೇನೆಯೊಡನೆ ಹೊರಬಂದನು. ಮತ್ತೊಂದೆಡೆ ಶಿವನ ಸೇವಕನಾದ ನಂದಿ ಶಿವಗಣಗಳ ಜೊತೆಯಲ್ಲಿ ವಿದ್ಯುನ್ಮಾಲಿಯನ್ನೆದುರಾದನು. ಭೀಕರ ಯುದ್ಧದಲ್ಲಿ ವಿದ್ಯುನ್ಮಾಲಿ ಹತನಾದನು. ಇದನ್ನು ಗಮನಿಸಿದ ಮಾಯಾಸುರ "ಇದೇಕೋ ನಮಗೆ ವಿಪರೀತವಾಗುತ್ತಿದೆ" ಎಂದವನೇ ಅಸುರೀ ಮಾಯೆಗೆ ತೊಡಗಿದ. ಭೀಕರವಾದ ಅಗ್ನಿಯನ್ನು ಸೃಷ್ಟಿಸಿ ದೇವತೆಗಳನ್ನು ಅಡ್ಡಿಪಡಿಸಿದ. ಅವರ ಮೇಲೆ ಕ್ರೂರಪ್ರಾಣಿಗಳನ್ನು ಆಕಾಶದಿಂದ ಬೀಳಿಸಿದ. ಈ ಧಾಳಿಯಿಂದ ದೇವತೆಗಳು ಹಿಮ್ಮೆಟ್ಟಿದರು. ಅಸುರರೂ ಸಹ ಹಿಂದಿರುಗಿ ತ್ರಿಪುರಾನಗರಿಯನ್ನು ಸೇರಿ ಕೋಟೆಯ ಬಾಗಿಲನ್ನು ಭದ್ರಪಡಿಸಿದರು.
ವಿದ್ಯುನ್ಮಾಲಿಯ ಸಾವಿನಿಂದ ತಾರಕಾಕ್ಷ ಬಹಳ ನೊಂದ, ಚಿಂತಿತನಾದ. "ಹೆದರದಿರು ತಾರಕಾಕ್ಷ, ನಾನು ಸೃಷ್ಟಿಸಿರುವ ಆ ಕೊಳದ ನೀರಿನಿಂದ ಸತ್ತವರನ್ನು ಬದುಕಿಸಬಹುದಾಗಿದೆ." ಎಂದನು ಮಾಯಾಸುರ. ತಕ್ಷಣವೇ ವಿದ್ಯುನ್ಮಾಲಿ ಮತ್ತಿತರ ರಾಕ್ಷಸರನ್ನು ಹೊತ್ತು ತಂದು ಬದುಕಿಸಿದರು. "ನಾನೆಲ್ಲಿದ್ದೇನೆ, ಆ ಗೋಲಿಯೆಲ್ಲಿದೆ, ಅದನ್ನು ಈಗಲೇ ಸಂಹರಿಸುತ್ತೇನೆ" ಎಂದು ವಿದ್ಯುನ್ಮಾಲಿ ಅಬ್ಬರಿಸಿದನು. ಪ್ರೀತಿಯ ತಮ್ಮನು ಜೀವಿತನಾದ್ದರಿಂದ ತಾರಕಾಕ್ಷ ಆನಂದ ತುಂದಿಲನಾದನು. "ರಾಕ್ಷಸರೇ, ನಮ್ಮ ಮಾಯಾಸುರ ಮತ್ತು ಈ ಕೊಳ ಇರುವಾತನಕ ನಾವು ಜೀವಭಯ ಪಡಬೇಕಾದ್ದಿಲ್ಲ" ಎಂದು ರಾಕ್ಷಸರನ್ನು ಹುರಿದುಂಬಿಸಿದನು. ಹೊಸಹುರುಪಿನಿಂದ ದೇವತೆಗಳ ಮೇಲೆ ದಾಳಿಗೆ ತಯಾರಾದರು.
ಈ ಬಾರಿ ರಾಕ್ಷಸರ ಧಾಳಿ ಹೇಗಿತ್ತೆಂದರೆ ಭೂಮಿ ತನ್ನ ಆಯತಪ್ಪಿ ಕೆಳಬೀಳತೊಡಗಿತು. ಬ್ರಹ್ಮದೇವನಿಗೆ ಭೂಮಿಯನ್ನು ನಿಯಂತ್ರಿಸುವುದಕ್ಕೆ ಅಸಾಧ್ಯವಾಯಿತು. ಆಗ ಮಹಾವಿಷ್ಣು ಒಂದು ಗೂಳಿಯ ವೇಷಧರಿಸಿ ಭೂಮಿಯನ್ನು ರಕ್ಷಿಸಿ ಯಥಾಸ್ಥಿತಿಗೆ ತಂದನು. ಬ್ರಹ್ಮದೇವ ನಿಟ್ಟುಸಿರುಬಿಟ್ಟನು. ಮತ್ತು ವೇಗವಾಗಿ ಮುನ್ನುಗ್ಗಿದ ಗೂಳಿ ಕೋಟೆಯನ್ನು ಪ್ರವೇಶಿಸಿತು. ರಾಕ್ಷಸರ ರಕ್ಷಣೆಯನ್ನು ಮೀರಿ ಮಾಯಾಸುರ ನಿರ್ಮಿಸಿದ್ದ ಕೊಳದೊಳಗಿಳಿದು ನೀರನ್ನೆಲ್ಲ ಕುಡಿದುಬಿಟ್ಟಿತು. ನಂತರ ರಾಕ್ಷಸರ ಮೇಲೆ ಧಾಳಿ ಮಾಡಿ ಅವರನ್ನು ಚೆಲ್ಲಾಪಿಲ್ಲಿಯಾಗಿಸಿತು. ಈ ಅಂತರದಲ್ಲಿ ದೇವತೆಗಳು ಉಕ್ಕಿನ ನಗರಿಯನ್ನು ಪ್ರವೇಶಿಸಿದರು. ಮತ್ತೆ ಯುದ್ಧ ಭೂಮಿಗಿಳಿದ ತಾರಕಾಕ್ಷ ಭೀಕರವಾಗಿ ಧಾಳಿಮಾಡಿದನು. ದೇವತೆಗಳನ್ನು ಮತ್ತೆ ಹಿಮ್ಮೆಟ್ಟಿಸಿದನು. ಇನ್ನೊಂದೆಡೆ ಮಾಯಾಸುರ ಮತ್ತು ವಿದ್ಯುನ್ಮಾಲಿ ಮಾಯಾಯುದ್ಧದಿಂದ ದೇವತೆಗಳ ಮೇಲೆ ಪ್ರಹಾರ ಮಾಡಿದರು. ದೇವತೆಗಳು ಪೂರ್ತಿಯಾಗಿ ಹಿಂದಿರುಗಿದರು. ರಾತ್ರಿ ರಾಕ್ಷಸರೆಲ್ಲ ಕೋಟೆ ಸೇರಿದರು.
ಇತ್ತ ಮಾಯಾಸುರ ಆತಂಕಗೊಂಡಿದದ್ದನು. ಮಾರನೆಯ ದಿನ ಪುಷ್ಯ ನಕ್ಷತ್ರ ಚಂದ್ರನನ್ನು ಸೇರುವ ದಿನ. ಸಾವಿರ ವರ್ಷಕ್ಕೊಮ್ಮೆ ಬರುವ ಆ ದಿನ ಮೂರು ನಗರಗಳು ಒಂದು ಅರೆಘಳಿಗೆ ಒಂದೇ ರೇಖೆಗೆ ಬರುವ ದಿನ. ಮಾರನೆಯ ದಿನ ಶಿವನೇ ಯುದ್ಧಕ್ಕಿಳಿದರೆ? ಆ ಒಂದು ಘಳಿಗೆಯಲ್ಲಿ ಶಿವನು ಬಾಣವನ್ನು ಬಿಡುವುದು ಅಸಾಧ್ಯವಾದರೆ ಮತ್ತೆ ಸಾವಿರ ವರ್ಷಗಳು ಯಾವುದೇ ಭಯವಿಲ್ಲವೆಂದು ಮಾಯಾಸುರ ಲೆಕ್ಕಾಚಾರವೂ ನಡೆಸಿದ್ದನು. ಎಲ್ಲಾ ರಾಕ್ಷಸರು ರಾತ್ರಿಯಲ್ಲಿ ಮೋಜುಮಾಡುತ್ತಿದ್ದರೂ ಮಾಯಾಸುರ ಮಾತ್ರ ಯಾವುದೇ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದ್ದ. ಮನದಾಳದಲ್ಲಿ ಅಂತ್ಯ ಸನ್ನಿಹಿತವಾಗುತ್ತಿದೆ ಎನ್ನುವ ಭಾವ ಮಾಯಾಸುರನಿಗೆ. ಆದರೆ ಏನಾದರು ಆಗಲಿ ಕಡೆಯವರೆಗೂ ಹೊರಡಲೇಬೇಕು ನಗರವನ್ನುಳಿಸುವ ಪ್ರಯತ್ನ ಮಾಡಲೇಬೇಕು ಎಂದು ಶಪಥಮಾಡಿದನು.
ಮಾರನೆಯ ದಿನ ಕಟ್ಟಕಡೆಯ ಯುದ್ಧ ಆರಂಭಗೊಂಡಿತು. ಯುದ್ಧ ಭೀಕರವಾಗುತ್ತಿದ್ದ ಹಾಗೆ ಮೂರೂ ನಗರಗಳು ಹತ್ತಿರವಾಗುತ್ತಾ ಒಂದು ರೇಖೆಗೆ ಬರತೊಡಗಿದವು. ಪುಷ್ಯಯೋಗ ಹತ್ತಿರವಾಗುತ್ತಿರುವುದನ್ನು ನೋಡಿದ ಶಿವನೇ ತನ್ನ ರಥದೊಡನೆ ಅಂದು ಯುದ್ಧಕ್ಕಿಳಿದನು. ಧನಸ್ಸನ್ನೊಮ್ಮೆ ಠೇಮ್ಕರಿಸಿದನು. ವಿದ್ಯುನ್ಮಾಲಿ ಶಿವನೊಡನೆ ಯುದ್ಧಕ್ಕೆ ಹೊರತನಾದರೂ ನಂದಿ ಅವನನ್ನು ಅಡ್ಡಿಪಡಿಸಿದನು. ಕುಪಿತನಾದ ವಿದ್ಯುನ್ಮಾಲಿ ಒಂದು ಬಾಣದಿಂದ ನಂದಿಯ ಎದೆಗೆ ಮರ್ಮಾಘಾತ ಮಾಡಿದನು. ವಿದ್ಯುನ್ಮಾಲಿಯ ಬಾಣಗಳೆಲ್ಲವನ್ನು ಸಹಿಸಿಕೊಂಡ ನಂದಿ ಅವನ ಕಡೆಗೆ ದಾಪುಗಾಲಿಡುತ್ತಾ ಹೋದನು. ನಂದಿಯ ಎದೆಗೆ ಈಟಿಯನ್ನು ಚುಚ್ಚಿದನು. ಅದೇ ಸಮಯಕ್ಕೆ ಶಿವ ಬಾಣದಿಂದ ಸನ್ನದ್ಧನಾದ್ದನ್ನು ನೋಡಿದ ವಿದ್ಯುನ್ಮಾಲಿ ಶಿವನನ್ನು ಅಡ್ಡಿಪಡಿಸುವುದಕ್ಕೆ ಧಾವಿಸಿದನು. ಅದೇ ಸಮಯಕ್ಕೆ ನಂದಿ ಎದೆಗೆ ಚುಚ್ಚಿದ್ದ ಈಟಿಯನ್ನು ಕಿತ್ತಿ ವಿದ್ಯುನ್ಮಾಲಿಯನ್ನು ಸಂಹರಿಸಿಬಿಟ್ಟನು.
ಆ ಸಮಯಕ್ಕೆ ಸಾವಿರ ವರ್ಷಗಳಿಗೆ ಬರುವ ಆ ಅರೆಘಳಿಗೆ ಕೂಡಿಬಂದಿತು. ಮೂರೂ ನಗರಿಗಳೂ ಒಂದು ನೇರರೇಖೆಗೆ ಬಂದವು. ಪರಶಿವನು ಹೆದೆಯೇರಿಸಿ ಬಾಣವನ್ನು ಬಿಟ್ಟೇಬಿಟ್ಟನು. ಆ ಕ್ಷಣಕ್ಕೆ ಶಿವನಿಗೆ ಮಾಯಾಸುರನ ಮೇಲೆ ಒಂದಿಷ್ಟು ಕರುಣೆ ಮೂಡಿತು. "ಎಷ್ಟಿದ್ದರೂ ಮಾಯಾಸುರ ನನ್ನ ಪರಮಭಕ್ತ. ಈ ಸೋದರರಷ್ಟು ಕ್ರೂರಿಯಲ್ಲ. ಅವನು ನನ್ನ ಬಾಣದಿಂದ ಧ್ವಂಸವಾಗುವುದು ಒಳ್ಳೆಯದಲ್ಲ" ಎಂದು ದುಃಖಿಸಿದನು. ಶಿವನ ಮನದಿಂಗಿತವನ್ನು ಅರಿತವನೇ ಮಯನನ್ನು ರಕ್ಷಿಸಬೇಕು ಎಂದು ಸಂಕಲ್ಪ ಮಾಡಿದನು. ಶಿವನ ಬಾಣಕ್ಕಿಂತ ವೇಗವಾಗಿ ಧಾವಿಸಿದವನೇ ಮಾಯಾಸುರನ ಹತ್ತಿರ ಹಾರಿ ಅವನನ್ನು ಎಚ್ಚರಿಸಿದನು. ಶಿವನ ಬಾಣ ಹುಸಿಯಾಗುವುದಿಲ್ಲವೆಂದು ತಿಳಿದಿದ್ದ ಮಾಯಾಸುರ ತ್ರಿಪುರಾನಗರಿಯಿಂದ ಹಾರಿ ತನ್ನನ್ನು ರಕ್ಷಿಸಿಕೊಂಡನು.
ತ್ರಿಪುರಾನಗರಿಗಳು ಒಂದೇ ರೇಖೆಗೆ ಬಂದ ಅದೇ ಘಳಿಗೆಯಲ್ಲಿ ಶಿವನ ಬಾಣ ನಗರಗಳನ್ನು ಭೇದಿಸಿತು. ತ್ರಿಪುರ ನಗರಿಗಳ ಧ್ವಂಸವಾಯಿತು. ಅದರೊಡನೆ ತಾರಕಾಕ್ಷ, ಕಮಲಾಕ್ಷರೊಡನೆ ಸಕಲ ರಾಕ್ಷಸರ ಸಂಹಾರವು ಆಯಿತು. ದೇವತೆಗಳು ನಿಟ್ಟುಸಿರು ಬಿಟ್ಟರು. ಸಕಲ ಲೋಕಗಳಲ್ಲಿ ಶಾಂತಿ ನೆಲೆಸಿತು.