ವಿನತೆಯ ಮಗ ಪಕ್ಷಿರಾಜ ಗರುಡ
ಒಂದು ದಿನ ಕಶ್ಯಪ ಮಹರ್ಷಿ ಕದ್ರು ವಿನತೆಯರಿಗೆ ವರವೊಂದನ್ನು ದಯಪಾಲಿಸಲು ತೀರ್ಮಾನಿಸಿದನು. 'ಕದ್ರು, ವಿನತೆಯರೇ ನಾನೊಂದು ಯಜ್ಞಕಾರ್ಯಕ್ಕೆ ಮೊದಲಾಗಿದ್ದೇನೆ. ಅದರ ಸತ್ಫಲವಾಗಿ ನಿಮ್ಮಿಬ್ಬರಿಗೆ ಮಕ್ಕಳಾಗುತ್ತಾರೆ' ಎಂದು ಅವರನ್ನು ಕರೆದು ತಿಳಿಸಿದನು. ಕದ್ರು 'ನನಗೆ ಅತಿಶಕ್ತಿಶಾಲಿಗಳಾದ ಸಾವಿರ ಬೃಹತ್ ಸರ್ಪಗಳು ಮಕ್ಕಳಾಗಲಿ' ಎಂದು ಕೇಳಿಕೊಂಡಳು. 'ತಥಾಸ್ತು' ಎಂದ ಕಶ್ಯಪನು ವಿನತೆಯ ಕಡೆಗೆ ನೋಡಿದನು. 'ಪತಿಯೇ. ನನಗಾದರೋ ಇಬ್ಬರು ಮಕ್ಕಳು ಸಾಕು. ಆದರೆ ಅವರು ಈ ಸಾವಿರ ಸರ್ಪಗಳಿಗಿಂತ ಮಿಗಿಲಾದ ಶಕ್ತಿಶಾಲಿಗಳೂ, ಶೂರರೂ ಆಗಿರುವಂತೆ ಕರುಣಿಸು' ಎಂದು ವಿನತೆ ವರವನ್ನು ಬೇಡಿದಳು. ಹೀಗೆ ಅಕ್ಕತಂಗಿಯರಲ್ಲಿ ಸ್ಪರ್ಧೆ ಏರ್ಪಟ್ಟಿತು. 'ತಥಾಸ್ತು' ಎಂದ ಮಹರ್ಷಿ ಯಜ್ಞಕಾರ್ಯದಲ್ಲಿ ವ್ಯಸ್ತನಾದನು.
ದೇವತೆಗಳ ರಾಜನಾದ ಇಂದ್ರ ಕಶ್ಯಪ ಮಹರ್ಷಿಯ ಮಗ. ಅವನು ತಂದೆಯ ಯಜ್ಞಕ್ಕೆ ಹೆಗಲಾಗಿ ನಿಲ್ಲುವುದಕ್ಕೆ ಬಂದನು. ಜೊತೆಗೆ ಮಹಾತಪಸ್ವಿಗಳೂ, ಹೆಬ್ಬೆಟ್ಟಿನಷ್ಟು ಚಿಕ್ಕ ಆಕಾರದವರೂ ಆದ ಅನೇಕ ವಾಲಖಿಲ್ಯ ಮಹರ್ಷಿಗಳನ್ನು ಕರೆತಂದಿದ್ದನು. ಕಷ್ಯಪನಿಗೆ ಸಂತೋಷವಾಯಿತು. ವಾಲಖಿಲ್ಯರನ್ನು ಜೊತೆ ಯಜ್ಞದ ಸಮಿತ್ತಿಗಾಗಿ ಮರಗಳನ್ನು ತೆಗೆದುಕೊಂಡು ಬರುವಂತೆ ಇಂದ್ರನಿಗೆ ಆದೇಶಿಸಿದನು. ಬೃಹತ್ ಆಕಾರದವನೂ, ಮಹಾಶಕ್ತಿಶಾಲಿಯೂ ಆದ ಇಂದ್ರ ಆಕಾಶಮಾರ್ಗವಾಗಿ ಸಂಚರಿಸಬಲ್ಲವನು. ಸುಲಭವಾಗಿ ಬೃಹತ್ ಮರದ ಕಾಂಡವೊಂದನ್ನು ಆಕಾಶದಲ್ಲಿ ಹೊತ್ತು ತರುತ್ತಿದ್ದನು. ಕೆಳಗೆ ಅನೇಕ ವಾಲಖಿಲ್ಯರು ಚಿಕ್ಕದಾದ ಸಮಿತ್ತೊಂದನ್ನು ಕಷ್ಟದಿಂದ ತರುತ್ತಿದ್ದರು. ಕ್ಷಣವೊಂದರಲ್ಲಿ ಇಂದ್ರನು ತನ್ನ ಶಕ್ತಿಯ ಅಹಂಕಾರಕ್ಕೆ ಒಳಗಾದನು. 'ಹೋ' ಎಂದು ಕೂಗುತ್ತಾ ಅವರನ್ನು ಬೀಳಿಸಿ ಒಂದಿಷ್ಟು ಗೋಳುಹೊಯ್ದುಕೊಂಡನು. ವಾಲಖಿಲ್ಯ ಮಹರ್ಷಿಗಳು ಕುಪಿತರಾದರು. ಇಂದ್ರನ ಅಹಂಕಾರವನ್ನು ನಿಗ್ರಹಿಸಿ ಅವನಿಗೆ ಪಾಠಕಲಿಸಬೇಕೆಂದು ತೀರ್ಮಾನಿಸಿದರು.
ಯಜ್ಞ ಮೊದಲಾಯಿತು. ವಾಲಖಿಲ್ಯ ಮಹರ್ಷಿಗಳು ಯಜ್ಞಕ್ಕೆ ಮಂತ್ರಗಳನ್ನು ಹೇಳುತ್ತಾ ಹವಿಸ್ಸನ್ನು ಸಮರ್ಪಿಸುತ್ತಿದ್ದರು. ಆದರೆ ಮೆಲುದನಿಯಲ್ಲಿ 'ಇಂದ್ರನಿಗೆ ಮಿಗಿಲಾದ ಒಬ್ಬನ ಜನನವಾಗಲಿ. ಬ್ರಹ್ಮಾಂಡದಲ್ಲಿ ಎಲ್ಲಿಬೇಕಾದರೂ ಸಂಚರಿಸಬಲ್ಲವನಾಗಲಿ, ಯಾವ ಆಕಾರವನ್ನು ಬೇಕಾದರೂ ಧರಿಸಬಲ್ಲವನಾಗಲಿ, ಎಷ್ಟು ಶಕ್ತಿಯನ್ನಾದರೂ ಸಂಚಯಿಸಬಲ್ಲವನಾಗಲಿ. ಅವನ ಸಂಕಲ್ಪಶಕ್ತಿಗೆ ಮಿತಿಯೇ ಇಲ್ಲವಾಗಲಿ. ಅಂಥವನೊಬ್ಬನ ಜನನವಾಗಲಿ' ಎಂದು ಹವಿಸ್ಸನ್ನು ಸಮರ್ಪಿಸುತ್ತಿದ್ದರು. ತಮ್ಮ ಸಕಲ ತಪಸ್ಸನ್ನು ಅದಕ್ಕೆ ಧಾರೆಯೆರೆಯುತ್ತಿದ್ದರು. ಆದರೆ ಇಂದ್ರನ ಗಮನಕ್ಕೆ ಇದುಬಾರದೇ ಇರಲಿಲ್ಲ. ತಕ್ಷಣವೇ ಪಶ್ಚಾತ್ತಾಪದಿಂದ 'ತಂದೆಯೇ, ಋಷಿಗಳ ಕೋಪದಿಂದ ನೀನೇ ನನ್ನನ್ನು ರಕ್ಷಿಸಬೇಕು' ಎಂದು ದುಃಖದಿಂದ ಕೇಳಿಕೊಂಡನು. ಸಕಲವನ್ನೂ ಕೇಳಿತಿಳಿದ ಕಷ್ಯಪ ವಾಲಖಿಲ್ಯರಲ್ಲಿ ಬೇಡಿಕೊಂಡನು. 'ಮಹಾತ್ಮರೇ, ಇಂದ್ರನು ಬ್ರಹ್ಮನಿಂದಲೇ ನಿಯೋಜಿತನಾದ ದೇವತೆಗಳ ರಾಜ. ಅವನಿಗಿಂತ ಮಿಗಿಲಾದವರೂ ಸ್ವರ್ಗದಲ್ಲಿ ಇರುವಹಾಗಿಲ್ಲ. ನಿಮ್ಮ ತಪಸ್ಸಿನ ಫಲದಿಂದ ಹುಟ್ಟುವ ಧೀರ ಪಕ್ಷಿಗಳ ರಾಜನಾಗಲಿ. ಪಶ್ಚಾತ್ತಾಪದಿಂದ ಬಳಲಿ ಕ್ಷಮೆಬೇಡುತ್ತಿರುವ ಇಂದ್ರನ ಮೇಲೆ ದಯೆತೋರಿ' ಎಂದು ಕೇಳಿಕೊಂಡನು. ದಯಾಪರರಾದ ವಾಲಖಿಲ್ಯರು 'ಹಾಗೆಯೇ ಆಗಲಿ. ನಮ್ಮ ತಪಸ್ಸಿನ ಆ ಶಕ್ತಿಶಾಲಿ ಮಗು ಯಜ್ಞದ ಫಲವಾಗಿ ನಿನ್ನ ಮಗನೇ ಆಗಿ ಜನಿಸುತ್ತಾನೆ' ಎಂದು ಆಶೀರ್ವದಿಸಿ ತೆರಳಿದರು. ಯಜ್ಞದ ನಂತರ ಕಶ್ಯಪ ಕದ್ರು ವಿನತೆಯರ ಅರಮನೆಗೆ ಬಂದನು. ಯಜ್ಞದ ಫಲವಾಗಿ ಅವರಿಗೆ ಅತಿಶೀಘ್ರದಲ್ಲಿ ಪುತ್ರರ ಜನನವಾಗುತ್ತದೆಯೆಂದು ತಿಳಿಸಿದನು. ಮುಂದಿನ ತಪಸ್ಸಿಗಾಗಿ ಕಾಡಿಗೆ ತೆರಳಿದನು.
ಕೆಲವು ತಿಂಗಳುಗಳಲ್ಲಿ ವಿನತೆಗೆ ಎರಡು ಬೃಹದಾಕಾರದ ಮೊಟ್ಟೆಗಳು ಜನಿಸಿದವು. ಕದ್ರುವಿಗೆ ಸಾವಿರ ಚಿಕ್ಕ ಮೊಟ್ಟೆಗಳು ಜನಿಸಿದವು. ಅವುಗಳನ್ನು ಮಡಕೆಗಳಲ್ಲಿ ಬೆಚ್ಚಗೆ ಜೋಪಾನ ಮಾಡಿದರು. ಅನೇಕ ದಿನಗಳ ನಂತರ ಕದ್ರುವಿನ ಮೊಟ್ಟೆಗಳೆಲ್ಲ ಒಡೆದು ಸಾವಿರ ಶಕ್ತಿಶಾಲಿ ಸರ್ಪಗಳು ಹೊರಬಂದವು. ಕದ್ರುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿನತೆಯಾದರೋ ಅವಸರ ಮತ್ತು ಅಸೂಯೆಗೆ ಪಾತ್ರಳಾದಳು. ತಡೆಯಲಾರದೇ ತನ್ನ ಎರಡು ಮೊಟ್ಟೆಗಳಲ್ಲಿ ಒಂದನ್ನು ಕಾಲವಾಗುವ ಮುನ್ನವೇ ಒಡೆದುಬಿಟ್ಟಳು. ಒಡನೆಯೇ ಅದರಿಂದ ಪುತ್ರನೊಬ್ಬನೇನೋ ಹೊರಬಂದ - ಆದರೆ ಅವನ ಕಾಲುಗಳು ಇನ್ನೂ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಆದ್ದರಿಂದ ಅವನ ಸೊಂಟದ ಕೆಳಭಾಗ ಕೇವಲ ಮಾಂಸದ ಮುದ್ದೆಯಾಗಿತ್ತು. ತನ್ನ ತಪ್ಪಿಗಾಗಿ ವಿನತೆ ಅತಿಯಾಗಿ ನೊಂದು ಪಶ್ಚಾತ್ತಾಪ ಪಟ್ಟಳು. ಆದರೆ ಕಾಲ ಮಿಂಚಿಹೋಗಿತ್ತು. ಹೊರಬಂದ ಪುತ್ರನು ಕೋಪಾವಿಷ್ಟನಾದನು. 'ತಾಯಿಯೇ, ತಾಳ್ಮೆ ತಪ್ಪಿ ನೀನು ಅವಸರದಿಂದ ತಪ್ಪು ಮಾಡಿದೆ. ಅದಕ್ಕೆ ನೀನು ಬೆಲೆತೆರಲೇಬೇಕಾಗುತ್ತದೆ. ಶೀಘ್ರದಲ್ಲಿ ನೀನು ಮತ್ತೊಬ್ಬರ ದಾಸಿಯಾಗುವೆ. ಆದರೆ ಭಯಪಡುವಾಗತ್ಯವಿಲ್ಲ. ಮತ್ತೊಂದು ಮೊಟ್ಟೆಯಿಂದ ನನ್ನ ತಮ್ಮ ಹುಟ್ಟುತ್ತಾನೆ. ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತಾನೆ. ಆದರೆ ಅವಸರ ಮಾತ್ರ ಪಡಬೇಡ' ಎಂದು ನುಡಿದನು. ಕ್ಷಣವೊಂದರಲ್ಲಿ ಆಕಾಶಕ್ಕೆ ಹಾರಿದನು. 'ಅರುಣ' ಎನ್ನುವ ಹೆಸರಿನಿಂದ ಸೂರ್ಯನ ಸಾರಥಿಯಾದನು. ವಿನತೆ ಪುತ್ರನ ಅಗಲಿಕೆಯಿಂದ ಶೋಕಕ್ಕೆ ಒಳಗಾದಳು.
ಒಂದಿಷ್ಟು ಕಾಲ ಕಳೆಯಿತು. ಒಂದು ಸಂಜೆ ಕದ್ರು ವಿನತೆಯರು ನದೀವಿಹಾರ ಮಾಡುತ್ತಿದ್ದರು. ಆಗ ಇಂದ್ರನ ಕುದುರೆಯಾದ ಉಚ್ಛ್ಹೈಶ್ರವಸ್ಸು ವೇಗವಾಗಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿತ್ತು. ಒಂದು ಕ್ಷಣ ಮಾತ್ರವೇ ಇಬ್ಬರಿಗೂ ಗೋಚರಿಸಿತು. ಸ್ಪರ್ಧಾಗುಣದಿಂದ ಕದ್ರು 'ವಿನತಾ, ಅದರ ಬಾಲದ ಬಣ್ಣವೇನು ಹೇಳುವೆಯಾ' ಎಂದಳು. ಆತ್ಮವಿಶ್ವಾಸದಿಂದ ವಿನತೆ 'ಅದರ ಇಡಿಯ ದೇಹ ಬಿಳಿಯ ಬಣ್ಣ. ಅದರ ಬಾಲವೂ ಬಿಳಿಯದೇ' ಎಂದಳು. ಮಾತುಮಾತಿಗೆ ಮೊದಲಾಗಿ ಕದ್ರು ಅದರ ಬಾಲ ಕಪ್ಪು ಎಂದೂ, ವಿನತೆ ಬಿಳಿ ಎಂದೂ ಪಟ್ಟುಹಿಡಿದರು. ಸ್ಪರ್ಧೆ ಮಿತಿಮೀರಿತು. ಯಾರ ಮಾತು ಸುಳ್ಳಾಗುವುದೋ ಅವರು ಮತ್ತೊಬ್ಬರ ದಾಸಿಯಾಗುವುದೆಂದು ತೀರ್ಮಾನವಾಯಿತು. ಮರುದಿನ ಪರೀಕ್ಷಿಸುವುದು ಎಂದೂ ತೀರ್ಮಾನವಾಯಿತು. ಆದರೆ ಅರಮನೆಗೆ ಬಂದ ನಂತರ ಕದ್ರುವಿಗೆ ಅನುಮಾನ ಶುರುವಾಯಿತು. ಅದು ಸಂಪೂರ್ಣ ಬಿಳಿಯೇ ಇರಬೇಕೆಂದು ಭಯವಾಯಿತು. ಹೇಗಾದರೂ ಅದನ್ನು ಕಪ್ಪಾಗಿಸಬೇಕೆಂದು ತೀರ್ಮಾನಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆಸಿದಳು. ಕುದುರೆಯ ಬಾಲವನ್ನು ಕಚ್ಚಿ ಕಪ್ಪಾಗಿಸಬೇಕೆಂದು ಆಜ್ಞೆಮಾಡಿದಳು. ಸರ್ಪಗಳಾದರೋ ಇದು ಅಧರ್ಮವೆಂದು ಅಧೀರರಾದರು. ಆದರೂ ತಾಯಿಯ ಶಾಪದ ಭಯದಿಂದ ಒಪ್ಪಿಕೊಂಡರು. ಕುದುರೆಯ ಬಾಲವನ್ನು ವಿಷದಿಂದ ಕಡಿದು ಕೆಲವು ದಿನಗಳ ಮಟ್ಟಿಗೆ ಕಪ್ಪಾಗಿಸಿದರು. ಮರುದಿನ ಸಂಜೆ ವಿಹಾರದಲ್ಲಿ ಕಾದಿದ್ದರು ಕದ್ರುವಿನತೆಯರು. ಒಂದು ಕ್ಷಣಮಾತ್ರ ಗೋಚರಿಸಿದ ಕುದುರೆಯ ಬಾಲ ಕಪ್ಪಾಗಿ ಕಂಡಿತು. ವಿನತೆ ಸಿಡಿಲುಬಡಿದಂತಾದಳು. ಇದರಲ್ಲಿ ಏನೋ ಮರ್ಮವಿದೆ ಎಂದು ವಿನತೆಗೆ ಅನ್ನಿಸಿತು. ಆದರೇನೂ ಮಾಡುವಂತಿರಲಿಲ್ಲ. ಅವಳಿಗೆ ದಾಸಿಯಾಗದೇ ಬೇರೆ ದಾರಿಯಿರಲಿಲ್ಲ.
ವಿನತೆಯ ಅದೃಷ್ಟಕ್ಕೆ ಎರಡನೇಯ ಮೊಟ್ಟೆ ತಾನೇ ಒಡೆಯುವ ಕಾಲ ಸನ್ನಿಹಿತವಾಗಿತ್ತು. ಅವಳಿಗೆ ಪುತ್ರನೊಬ್ಬನ ಜನನವಾಯಿತು. ವಾಲಖಿಲ್ಯರ ವರದಂತೆ ಪುತ್ರನಿಗೆ ಪಕ್ಷಿಗಳಂತೆ ಕೊಕ್ಕು ಮತ್ತು ರೆಕ್ಕೆಗಳಿತ್ತು. ಹುಟ್ಟುತ್ತಲೇ ಬೃಹದಾಕಾರ ತಳೆದನು. ಆಕಾಶಕ್ಕೆ ಹಾರಿ ಇಡಿಯ ಸಮುದ್ರಗಳನ್ನೆಲ್ಲ ಒಂದು ಸುತ್ತು ವಿಹರಿಸಿ ತಾಯ ಬಳಿಗೆ ಬಂದನು. ವಿನತೆಯ ಹರ್ಷಕ್ಕೆ ಪಾರವೇ ಇರಲಿಲ್ಲ. ಆನಂದಬಾಷ್ಪಸುರಿಸಿದಳು. 'ಈ ಮಗನಿಂದ ನನ್ನ ದಾಸ್ಯ ತೊರೆಯುತ್ತದೆ' ಎಂದು ಧೈರ್ಯಧರಿಸಿದಳು. ಹೀಗಿರುವಾಗ ಒಂದು ದಿನ ವಿನತೆಯನ್ನು ನೋಡಲು ಕದ್ರು ಅಲ್ಲಿಗೆ ಬಂದಳು. 'ನಾವು ನಾಗದ್ವೀಪಕ್ಕೆ ವಿಹರಿಸಲು ಹೋಗಬೇಕು. ನಮ್ಮನ್ನು ಹೆಗಲಮೇಲೆ ಕೂರಿಸಿಕೊಂಡು ನಡೆ' ಎಂದು ದಾಸಿಯಾಗಿದ್ದ ವಿನತೆಗೆ ಕದ್ರು ಆಜ್ಞೆ ಮಾಡಿದಳು. ವಿಧಿಯಿಲ್ಲದೇ ಕದ್ರುವನ್ನು ಬೆನ್ನಿನಮೇಲೇರಿಸಿಕೊಂಡಳು ವಿನತೆ. 'ಪುತ್ರನೇ, ಸರ್ಪಗಳನ್ನೆಲ್ಲ ಕೂರಿಸಿಕೊಂಡು ಬಾ' ಎಂದು ವಿನತೆ ಆದೇಶಿಸಿದಳು. 'ನಾವೇನು ಅವರಿಗೆ ದಾಸರೇ' ಎಂದು ಪುತ್ರನು ಆಶ್ಚರ್ಯಚಕಿತನಾದನು. ಆದರೆ ತಾಯಿಯ ಆದೇಶದಂತೆ ನಡೆದುಕೊಂಡನು. ಬೃಹದಾಕಾರ ತಾಳಿ ಸರ್ಪಗಳನ್ನೆಲ್ಲ ಹೇರಿಕೊಂಡನು. ಕೋಪದಿಂದ ಛಂಗನೆ ನೇರವಾಗಿ ಸೂರ್ಯನ ಕಡೆಗೆ ಹಾರಿದನು. ಸ್ವಲ್ಪ ಹೊತ್ತಿಗೆ ಸೂರ್ಯನ ತಾಪ ತಾಳಲಾರದೇ ಸರ್ಪಗಳು ಸಮುದ್ರಕ್ಕೆ ಬೀಳತೊಡಗಿದವು. ಆತಂಕದಿಂದ ಕದ್ರು ಮಕ್ಕಳನ್ನು ಸಂರಕ್ಷಿಸುವಂತೆ ದೇವೇಂದ್ರನಲ್ಲಿ ಬೇಡಿಕೊಂಡಳು. ಇಂದ್ರನು ಮಳೆಯನ್ನು ಸುರಿಸಿ ಸರ್ಪಗಳನ್ನು ಸೂರ್ಯನ ತಾಪದಿಂದ ರಕ್ಷಿಸಿದನು. ಇದನ್ನು ಗಮನಿಸಿದ ಪುತ್ರನು ಇಂದ್ರನಿಗೆ ಎದಿರಾಗುವ ಸಮಯಕ್ಕಾಗಿ ಕಾದನು. ಎಲ್ಲರೂ ನಾಗದ್ವೀಪವನ್ನು ಸೇರಿದರು. ನಂತರ ಪುತ್ರನು ವಿನತೆಯನ್ನು "ನಾವೇಕೆ ಅವರಿಗೆ ದಾಸರಾಗಿದ್ದೇವೆ" ಎಂದು ಕೇಳಿದನು. ವಿನತೆ ಸಕಲ ವೃತ್ತಾಂತವನ್ನೂ ತಿಳಿಸಿದಳು. ವಾಪಸಾದ ನಂತರ ವಿನತೆಯ ಪುತ್ರನು ನೇರವಾಗಿ ಸರ್ಪಗಳ ಬಳಿಗೆ ತೆರಳಿದನು. 'ಹೇಳಿ, ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕೆ ನಾವೇನು ಬೆಲೆ ತೆರಬೇಕು' ಎಂದು ಕೇಳಿದನು. ಸರ್ಪಗಳು ಒಂದು ಕ್ಷಣ ಯೋಚಿಸಿದವು. 'ನಮಗೆ ಅಮೃತವನ್ನು ತಂದುಕೊಡಬೇಕು' ಎಂದು ಧಾರ್ಷ್ಟ್ಯದಿಂದ ನುಡಿದವು. ದೇವತೆಗಳಿಂದ ರಕ್ಷಿತವಾದ ಅಮೃತವನ್ನು ತರುವುದು ಸುಲಭವಲ್ಲ ಎನ್ನುವುದು ಸರ್ಪಗಳಿಗೆ ಗೊತ್ತು. ಆದರೆ ಈ ಶಕ್ತಿಶಾಲಿಯಾದ ವಿನತೆಯ ಪುತ್ರ ಅದನ್ನು ತರಬಹುದು, ತಾವು ಅಮರರಾಗಬಹುದು ಎನ್ನುವುದು ಅವರ ಆಸೆಯಾಗಿತ್ತು.
ವಿನತೆಯ ಪುತ್ರ ವಾಪಸಾಗಿ ತಾಯಿಗೆ ಎಲ್ಲವನ್ನೂ ತಿಳಿಸಿದನು. ವಿನತೆ ಮನದುಂಬಿ 'ಯಶಸ್ವಿಯಾಗಿ ಹಿಂದಿರುಗು' ಎಂದು ಆಶೀರ್ವದಿಸಿದಳು. ಬೃಹದಾಕಾರವಾಗಿ ಬೆಳೆದು ರೆಕ್ಕೆಗಳನ್ನು ಬಿಚ್ಚಿದನು ವಿನತೆಯ ಪುತ್ರ. ಆಕಾಶಕ್ಕೆ ಹಾರಿ ದೇವತೆಗಳ ವಾಸವಾದ ಇಂದ್ರಲೋಕದೆಡೆಗೆ ತೆರಳಿದನು. ಹಿಮಾಲಯಪರ್ವತಗಳ ಮಾರ್ಗವಾಗಿ ತೆರಳುತ್ತಿದ್ದಾಗ ಕೆಳಗೆ ಕಶ್ಯಪ ಮಹರ್ಷಿ ಕಂಡನು. ಪರ್ವತವೊಂದರ ಮೇಲೆ ತಪಸ್ಸಾನಾಚರಿಸುತ್ತಿದ್ದನು. ಪುತ್ರನನ್ನು ನೋಡಿ ಅವನನ್ನೂ, ವಿನತೆಯನ್ನೂ ವಿಚಾರಿಸಿಕೊಂಡನು. ಪುತ್ರನು ಸಕಲವೃತ್ತಾಂತವನ್ನೂ ಅರುಹಿದನು. ದೀರ್ಘಸಂಚಾರಕ್ಕೆ ಶಕ್ತಿಒದಗಿಸಬಲ್ಲ ಆಹಾರವೆಲ್ಲಿ ಸಿಗುವುದು ಎಂದು ಕೇಳಿದನು. ಕಶ್ಯಪನು ಕೆಳಗೆ ಒಂದು ಸರೋವರವನ್ನು ತೋರಿಸಿದನು. "ಅಲ್ಲಿ ಆಮೆಯೊಂದು, ಆನೆಯೊಂದೂ ಪರಸ್ಪರರನ್ನು ಕೊಲ್ಲಲು ಹೋರಾಡುತ್ತಿವೆ. ಅವುಗಳನ್ನು ತಿಂದು ನೀನು ಸಂಚಾರ ಮುಂದುವರೆಸು" ಎಂದು ಆಶೀರ್ವದಿಸಿ ಕಳುಹಿಸಿದನು. ಅದರಂತೆಯೇ ಒಂದು ಕೈಯಲ್ಲಿ ಆಮೆ ಮತ್ತೊಂದು ಕೈಯಲ್ಲಿ ಆನೆಯನ್ನು ಹಿಡಿದುಕೊಂಡು ಹಾರಿದನು ವಿನತೆಯ ಪುತ್ರ. ಮಾರ್ಗಮಧ್ಯದಲ್ಲೊಂದು ದೊಡ್ಡ ಆಲದ ಮರ ಅವನನ್ನು ಆಹ್ವಾನಿಸಿತು. 'ಪಕ್ಷಿರಾಜನೇ, ನನ್ನೀ ಶಕ್ತಿಯುತವಾದ ಮರದಟೊಂಗೆಯ ಮೇಲೆ ಕುಳಿತು ನಿನ್ನ ಆಹಾರವನ್ನು ಸೇವಿಸು' ಎಂದು ಕೇಳಿಕೊಂಡಿತು. ಪಕ್ಷಿರಾಜನೇನೋ ಕುಳಿತ. ಆದರೆ ಅವನ ಬೃಹದಾಕಾರಕ್ಕೆ ಹೆದರಿದ ಮಿಕ್ಕ ಪಕ್ಷಿಗಳೆಲ್ಲ ಹಾರಿಹೋದವು. ಮರದ ಟೊಂಗೆಯೂ ಸಹ ಅವನ ಭಾರತಾಳಲಾರದೇ ಮುರಿದು ಬೀಳಲಾರಂಭಿಸಿತು. ಅದಕ್ಕೂ ಮುಖ್ಯವಾಗಿ ಆ ಮರದ ಟೊಂಗೆಗೆ ನಾಲ್ಕು ಋಷಿಗಳು ತಮ್ಮ ಕಾಲುಗಳನ್ನು ಕಟ್ಟಿಕೊಂಟು ತಲೆಕೆಳಗಾಗಿ ತಪಸ್ಸುಮಾಡುತ್ತಿದ್ದರು. ಟೊಂಗೆ ನೆಲಕ್ಕೆ ಬೀಳುವುದರಲ್ಲಿತ್ತು. ಸ್ವಲ್ಪದರಲ್ಲಿ ತನ್ನ ಕೊಕ್ಕಿನಿಂದ ಅದನ್ನು ರಕ್ಷಿಸಿದ ವಿನತೆಯ ಪುತ್ರ ನಿಟ್ಟುಸಿರು ಬಿಟ್ಟನು. ಹೀಗೆ ಒಂದು ಕೈಯಲ್ಲಿ ಬೃಹತ್ ಆಮೆ, ಮತ್ತೊಂದರಲ್ಲಿ ಶಕ್ತಿಶಾಲಿಯಾದ ಆನೆ, ಕೊಕ್ಕಿನಲ್ಲಿ ಭಾರವಾದ ಮರದ ಕಾಂಡ - ಇವುಗಳೆಲ್ಲದರ ಜೊತೆಗೆ ಲೀಲಾಜಾಲವಾಗಿ ಹಾರುತ್ತಿದ್ದ ಪಕ್ಷಿರಾಜ. ಇದನ್ನು ತಲೆಗೆಳಗಾಗಿ ನೋಡುತ್ತಿದ್ದ ಆ ನಾಲ್ಕು ಋಷಿಗಳು ಅವನ ಶಕ್ತಿಗೆ ಆಶ್ಚರ್ಯಚಕಿತರಾದರು. ಆಕ್ಷಣವೇ ಆ ವಿನತೆಯ ಪುತ್ರನಿಗೆ 'ಗರುಡ' ಎಂದು ನಾಮಕರಣ ಮಾಡಿದರು. ಸಕಲಲೋಕಗಳಲ್ಲಿಯೂ ಇವನ ಕೀರ್ತಿ ಹರಡಲಿ ಎಂದು ಆಶೀರ್ವದಿಸಿದರು.
ಈ ಋಷಿಗಳನ್ನು ಅವರ ತಪಸ್ಸಿಗೆ ತೊಂದರೆಯಾಗದಂತೆ ಎಲ್ಲಿ ಇಳಿಸುವುದು ಎಂದು ಗರುಡ ಆಲೋಚನೆಗೊಳಗಾದನು. ಕಡೆಗೆ ಗಂಧಮಾದನ ಪರ್ವತಗಳು ಕಂಡವು. ಅದೇ ಸರಿಯೆನ್ನುತ್ತಾ ಪರ್ವಗಳ ತುತ್ತತುದಿಗೆ ಬಂದು ಅವರನ್ನು ಇಳಿಸಿದನು. ನಂತರ ಯಾರೂ ಕಾಣದ ಒಂದು ಕಣಿವೆಯಲ್ಲಿ, ಯಾರಿಗೂ ತೊಂದರೆಯಾಗದಂತೆ ಮರದ ಕಾಂಡವನ್ನು ಎಸೆದನು. ಮತ್ತೊಂದು ಪರ್ವತದ ಮೇಲೆ ಇಳಿದು ಆಮೆ ಮತ್ತು ಆನೆಗಳನ್ನು ಸೇವಿಸಿದನು. ದೇಹಕ್ಕೆ ಶಕ್ತಿಸಂಚಯವಾದ ನಂತರ ಮತ್ತೂ ವೇಗದಿಂದ ಇಂದ್ರಲೋಕಕ್ಕೆ ಹಾರಿದನು ಪಕ್ಷಿರಾಜನಾದ ಗರುಡ.
====================================================================
ಈ ಮಧ್ಯದಲ್ಲಿ ದೇವೇಂದ್ರನ ಸ್ವರ್ಗಲೋಕದಲ್ಲಿ ಹಿಂದೆಂದೂ ಕಾಣದ ಅಪಶಕುನಗಳು ಉಂಟಾಗತೊಡಗಿದವು. ಈ ಹಿಂದಿನ ದೇವಾಸುರರ ಯುದ್ಧದಲ್ಲೂ ಅಂತಹ ಅಪಶಕುನಗಳು ಕಾಣಿಸಿರಲಿಲ್ಲ. ಸಹಜವಾಗೇ ಗಾಬರಿಗೊಳಗಾದ ದೇವೇಂದ್ರ ತನ್ನ ಗುರುವಾದ ಬೃಹಸ್ಪತಿಗಳ ಬಳಿಗೆ ತೆರಳಿದನು. "ನೋಡು ದೇವೇಂದ್ರ - ಕಶ್ಯಪ ಋಷಿ ಮತ್ತು ವಿನತೆಯ ಮಗನಾದ ಗರುಡ ನಿನ್ನಲ್ಲಿರುವ ಅಮೃತವನ್ನು ಹೊತ್ತೊಯ್ಯಲು ಬರುತ್ತಿದ್ದಾನೆ. ಮಹಾಶಕ್ತಿಶಾಲಿಯಾದ ಗರುಡನಿಗೆ ಇದೇನು ದುಸ್ಸಾಸಧ್ಯವಲ್ಲ" ಎಂದು ಎಚ್ಚರಿಸಿದನು. ದೇವೇಂದ್ರನು ಆ ಕ್ಷಣವೇ ಅಮೃತವನ್ನು ರಕ್ಷಿಸುತ್ತಿದ್ದ ದೇವತೆಗಳನ್ನು ಕರೆದನು. "ಅಮೃತವನ್ನು ಕದ್ದೊಯ್ಯುದಕ್ಕೋಸ್ಕರ ಮಹಾಪರಾಕ್ರಮಿ, ಮಹಾಶಕ್ತಿಶಾಲಿಯಾದ ಬೃಹತ್ ಪಕ್ಷಿಯೊಂದು ಬರುತ್ತಿದೆ. ಅದನ್ನು ತಡೆಯುವುದಕ್ಕೆ ತಯಾರಾಗಿ" ಎಂದು ಎಚ್ಚರಿಸಿದನು. ಅಮೃತವನ್ನು ರಕ್ಷಿಸಲು ವಿಶೇಷವಾದ ವ್ಯೂಹವೊಂದನ್ನು ರಚಿಸಿದರು. ಬೃಹತ್ತಾದ ಚಕ್ರವೊಂದರ ಮಧ್ಯೆ ಅಮೃತವನ್ನಿರಿಸಿದ್ದರು. ಅದಕ್ಕೆರಡು ಬೃಹತ್ತಾದ ಮತ್ತು ಭೀಕರವಾದ ಸರ್ಪಗಳು ಕಾವಲಾಗಿದ್ದವು. ಅದರ ಸುತ್ತಲೂ ಅಗ್ನಿಯಿಂದ ರಚಿತವಾದ ಸುಡುಬೆಂಕಿಯ ಕಾವಲು. ನಂತರದಲ್ಲಿ ಬೃಹತ್ ಸಂಖ್ಯೆಯ, ದಿವ್ಯಾಸ್ತ್ರಗಳಿಂದ ಶೋಭಿತವಾದ ದೇವತಾ ಸೇನೆ.
ಇನ್ನೇನು ಎನ್ನುವಷ್ಟರಲ್ಲಿ ಬಿರುಗಾಳಿಯನ್ನೆಬ್ಬಿಸುತ್ತ, ಬೃಹತ್ ರೆಕ್ಕೆಗಳನ್ನು ಅತಿರಭಸದಲ್ಲಿ ಬಡಿಯುತ್ತ ಗರುಡನು ಬಂದೇಬಿಟ್ಟನು. ಆ ಬಿರುಗಾಳಿಯಿಂದೆದ್ದ ಧೂಳಿಗೆ ದೇವತೆಗಳ ಕಣ್ಣೇ ಕಾಣದಂತಾಯಿತು. ದೇವತೆಗಳ ಮನೋಬಲಕ್ಕೆ ಪೆಟ್ಟಾದುದನ್ನರಿತ ದೇವೇಂದ್ರ ಅವರನ್ನು ಹುರಿದುಂಬಿಸಲು ಶುರು ಮಾಡಿದನು. ಇದು ವಿಪರೀತಕ್ಕೆ ಹೋಗುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ ವಾಯುದೇವನನ್ನು ಕರೆದು ಈ ಧೂಳಿನಿಂದ ದೇವತೆಗಳನ್ನು ರಕ್ಷಿಸಲು ಆದೇಶವನ್ನಿತ್ತನು. ವಾಯುದೇವನು ಕೇವಲ ಒಂದೇ ಉಸಿರಿಗೆ ಧೂಳನ್ನು ಊದಿ ಇಲ್ಲವಾಗಿಸಿದನು. ಈಗ ಮಹಾಪಕ್ಷಿಯಾದ ಗರುಡ ಸ್ಪಷ್ಟವಾಗಿ ಕಂಡನು.
ಈಗ ಭೀಕರವಾದ ಯುದ್ಧ ಶುರುವಾಯಿತು. ದೇವತೆಗಳು ತಮ್ಮೆಲ್ಲ ದಿವ್ಯಾಸ್ತ್ರಗಳಿಂದ ಗರುಡನ ಮೇಲೆ ಪ್ರಹಾರ ಮಾಡಲು ಶುರುಮಾಡಿದರು. ಒಂದಿಷ್ಟು ಹೊತ್ತು ಗರುಡನು ಆಟವಾಡುತ್ತ ಆ ಅಸ್ತ್ರಗಳನ್ನೆಲ್ಲ ತನ್ನ ಮೈಮುಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟನು. ಆ ಅಸ್ತ್ರವಳಾದರೋ ಗರುಡನ ಕೂದಲನ್ನು ಕೊಂಕಿಸಲಿಲ್ಲ. ಇದನ್ನು ನೋಡಿ ದೇವತೆಗಳ ಜಂಘಾಬಲವೇ ಉಡುಗಿಹೋಯಿತು. ಇದೆಂಥ ಪಕ್ಷಿ, ಅದೇನು ಶಕ್ತಿ ಎಂದು ಅಚ್ಚರಿಪಟ್ಟರು. ಇನ್ನು ಆಟ ಸಾಕು ಎಂದವನೇ ಗರುಡ ಒಮ್ಮೆ ಭೀಕರವಾಗಿ ಕೂಗಿದನು. ದೇವತೆಗಳ ಮೇಲೆ ಧಾಳಿ ಮಾಡಿದನು. ಅವನ ಕೊಕ್ಕು, ರೆಕ್ಕೆ, ಕಾಲುಗಳ ಹೊಡೆತಕ್ಕೆ ಸಿಕ್ಕ ದೇವತೆಗಳು ಜರ್ಜರಿತರಾದರು. ದಿಕ್ಕಾಪಾಲಾಗಿ ಎಲ್ಲೆಂದರಲ್ಲಿ ಓಡಲು ತೊಡಗಿದರು. ಯುದ್ಧ ಭೂಮಿ ರಕ್ತದ ಮಡುವಾಯಿತು.
ದೇವತಾ ಸೇನೆಯನ್ನು ಮೀರಿ ಮುಂದೆ ಗರುಡನಿಗೆ ಅಗ್ನಿಯ ಕಾವಲು ಎದುರಾಯಿತು. "ಇದೇನಿದು - ಸೂರ್ಯನನ್ನೇ ಸುಡಬಹುದಾದಂತಹ ಅಗ್ನಿಯಿದು " ಎಂದು ಅಚ್ಚರಿಪಟ್ಟನು. ತನಗೆ ಬೇಕಾದ ಆಕೃತಿಯನ್ನು ಧರಿಸಬಲ್ಲವನಾದ ಗರುಡ ಸಾವಿರಾರು ತಲೆಗಳುಳ್ಳ ಬೃಹತ್ತಾದ ಆಕಾರ ತಳೆದನು. ಒಂದೊಂದು ಕೊಕ್ಕಿನಲ್ಲೂ ಒಂದು ನದಿಯಷ್ಟು ನೀರನ್ನು ತುಂಬಿಕೊಂಡನು. ಒಮ್ಮೆಗೆ ಅಷ್ಟೂ ನೀರನ್ನು ಉರಿಯುತ್ತಿದ್ದ ಅಗ್ನಿಯ ಮೇಲೆ ಸುರಿಸಿ ಒಂದೇ ಬಾರಿಗೆ ಅದನ್ನು ನಿವಾರಿಸಿದನು. ಅದರಿಂದ ಉಂಟಾದ ಹೊಗೆಯನ್ನು ಒಂದು ಹಾರಿನಲ್ಲೇ ದಾಟಿದನು. ಸುತ್ತುತ್ತಿದ್ದ ಚಕ್ರದ ಮಧ್ಯೆಯಿದ್ದ ಅಮೃತದ ಬೃಹತ್ ಬಟ್ಟಲು ಈಗ ಸ್ಪಷ್ಟವಾಗಿ ಕಂಡಿತು. ಹಾಗೆ ದಿಟ್ಟಿಸುತ್ತಾ ನೋಡುತ್ತಿದ್ದ ಗರುಡನಿಗೆ ಆ ಎರಡು ಭೀಕರ ಸರ್ಪಗಳೂ ಕಂಡವು.
ಬೃಹತ್ತಾದ ಗರುಡ ಒಂದು ಚೂರೂ ವಿಚಲಿತನಾಗಲಿಲ್ಲ. ತಕ್ಷಣವೇ ಅತಿ ಚಿಕ್ಕದಾದ ಆಕಾರ ತಳೆದನು. ಸುತ್ತುತ್ತಿದ್ದ ಚಕ್ರದ ಕೆಳಗೆ ಸುಲಭವಾಗಿ ನುಸುಳಿದನು. ಮತ್ತೆ ತನ್ನ ಶಕ್ತಿಶಾಲಿಯಾದ ರೆಕ್ಕೆಗಳನ್ನು ಬಡಿಯುತ್ತ ದೊಡ್ಡದಾದ ಧೂಳನ್ನೆಬ್ಬಿಸಿದನು. ಅದರಿಂದ ಕಣ್ಣು ಕಾಣದಂತಾದ ಸರ್ಪಗಳನ್ನು ಸುಲಭವಾಗಿ ಹಿಡಿದು ತನ್ನ ಕೊಕ್ಕುಗಳಿಂದ ಕುಕ್ಕಿ ನಿರ್ನಾಮ ಮಾಡಿದನು. ಚಕ್ರದ ಮಧ್ಯದಲ್ಲಿ ಅಮೃತದಿಂದ ತುಂಬಿದ್ದ ಸುವರ್ಣದ ಬಟ್ಟಲನ್ನು ಕೈಗೆ ತೆಗೆದೆಕೊಂಡನು. ತನ್ನ ಚಿಕ್ಕ ಆಕಾರದಿಂದ ಇದ್ದಕ್ಕಿದ್ದ ಹಾಗೆ ಬೃಹತ್ತಾಗಿ ಬೆಳೆಯುವುದಕ್ಕೆ ಶುರುಮಾಡಿದನು. ಅವನ ಆಕೃತಿ ಚಕ್ರಕ್ಕಿಂತ ಮಿಗಿಲಾಗುತ್ತಿದ್ದಂತೆ ಚಕ್ರ ಒಡೆದು ಚೂರುಚೂರಾಯಿತು. ವಿಜೃಂಭಣೆಯಿಂದ ಕೂಗುತ್ತ ಗರುಡ ಆಕಾಶದಲ್ಲಿ ಎತ್ತರಕ್ಕೆ ಹರಿದನು. ವಿನತೆಯನ್ನು ದಾಸ್ಯದಿಂದ ಬಿಡಿಸುವುದಕ್ಕೆ ವೇಗವಾಗಿ ಸಾಗಿದನು.
ಘನ ಗಾಂಭೀರ್ಯದಲ್ಲಿ ಹಾರುತ್ತ ಸಾಗುತ್ತಿದ್ದ ಪಕ್ಷಿರಾಜನನ್ನು ಮಹಾವಿಷ್ಣು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಿದನು. "ಕೈಯಲ್ಲಿ ಯಾರಿಗೂ ಸಿಗಲಾರದಂತಹ ಅಮೃತವಿದೆ. ಆದರೂ ಒಂದಿಷ್ಟು ವಿಚಲಿತನಾಗದೆ ನಿರ್ಲಿಪ್ತತೆಯಿಂದ ಹಾರುತ್ತಿರುವ ಈ ಗರುಡ ಪಕ್ಷಿ ಮಹಾತ್ಮನೇ ಸರಿ. ಒಂದು ಹನಿಯಷ್ಟು ಅಮೃತಕ್ಕೂ ಅಸೆ ಪಡುತ್ತಿಲ್ಲವಲ್ಲ ಇವನು. ಎದುರಿಗೆ ಅಮೃತವಿದ್ದರೆ, ದೇವತೆಗಳಿಗೂ ಇಂತಹ ನಿರ್ಲಿಪ್ತತೆ ಸಾಧ್ಯವಿಲ್ಲ. ಕೇವಲ ತನ್ನ ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡುವುದೇ ಅವನ ಧ್ಯೇಯವಾಗಿದೆ" ಎಂದು ಬಹುವಾಗಿ ಹೋಗಳಿದನು. ಗರುಡನನ್ನು ಕೂಗಿ ಕರೆದನು. "ಮಹಾಪಕ್ಷಿಯೇ, ನಿನ್ನ ವರ್ತನೆಯಿಂದ ನಾನು ಸಂಪ್ರೀತನಾಗಿದ್ದೇನೆ. ನಿನಗೆ ಎರಡು ವರಗಳನ್ನು ಕೊಡುತ್ತೇನೆ - ಕೇಳಿಕೊ" ಎಂದನು ಮಹಾವಿಷ್ಣು. ಗರುಡನು ವಿನಯದಿಂದ "ಶ್ರೀಹರಿ, ನಿನ್ನ ವರಗಳಿಂದ ನಾನು ಧನ್ಯನಾದೆ. ಒಂದು ವಾರದಲ್ಲಿ ನನಗೆ ಅಮರತ್ವವನ್ನು ಮತ್ತು ರೋಗಗಳಿಂದ ಮುಕ್ತಿಯನ್ನೂ ಕರುಣಿಸು. ಇನ್ನೊಂದು ವರದಲ್ಲಿ ನಾನು ಎಂದಿಗೂ ನಿನಗಿಂತ ಮೇಲಿನ ಸ್ಥಾನವನ್ನು ದಯಪಾಲಿಸು" ಎಂದನು. ಮಹಾವಿಷ್ಣು ಮುಗುಳ್ನಕ್ಕನು.
"ತಥಾಸ್ತು, ನೀನು ನನ್ನೀ ಧ್ವಜಸ್ಥಮ್ಭದ ಮೇಲೆ ಸದಾ ವಿರಾಜಮಾನನಾಗಿರು. ನನ್ನ ಆಸನದಿಂದ ಸದಾ ಮೇಲಿರುವ ಈ ಸ್ಥಮ್ಭಕ್ಕೆ ಗರುಡಗಂಭ ಎಂದು ಹೆಸರಾಗಲಿ" ಆಶೀರ್ವದಿಸಿದನು. ಧ್ವಜಸ್ತಮಭದ ಮೇಲೆ ಆಸೀನನಾದ ಗರುಡ ಸುಪ್ರೀತನಾದನು. "ಮಹಾಮಹಿಮನವ ವಿಷ್ಣುವೇ, ನಿನ್ನ ವರಗಳಿಂದ ನಾನು ಧನ್ಯನಾದೆ. ಇದಕ್ಕೆ ಪ್ರತಿಯಾಗಿ ನಾನೂ ಸಹ ನಿನಗೊಂದು ವರವನ್ನು ಕೊಡುತ್ತೇನೆ." ಎಂದನು. ತಕ್ಷಣವೇ ವಿಷ್ಣು 'ನನ್ನ ವಾಹನವಾಗಿ ನಾನು ಕರೆದ ತಕ್ಷಣ ಬರಬೇಕು' ಎಂದು ಕೇಳಿಕೊಂಡನು. ಇದಕ್ಕೊಪ್ಪಿದ ಗರುಡನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತಳನ್ನಾಗಿಸಿದ ನಂತರ ಬರುತ್ತೇನೆ ಎಂದು ಬೀಳ್ಕೊಟ್ಟನು.
ಇಷ್ಟರಲ್ಲಿ ಅಮೃತವನ್ನು ಕಳೆದುಕೊಂಡು ದುಃಖತಪ್ತನಾಗಿದ್ದ ಇಂದ್ರ ಆಕಾಶದಲ್ಲಿ ಹಾರುತ್ತಿದ್ದ ಗರುಡನನ್ನು ನೋಡಿದನು. ಕೋಪದಿಂದ ತನ್ನ ವಜ್ರಾಯುಧದಿಂದ ಪ್ರಹಾರ ಮಾಡಿದನು. ಆದರೆ ಅದು ಗರುಡನ ರೆಕ್ಕೆಯ ಒಂದು ಪುಕ್ಕವನ್ನು ಕೊಂಕಿಸಲಿಲ್ಲ. ಇಂದ್ರನು ಸ್ಥಮ್ಭೀಭೂತನಾದನು. ಒಂದು ಘಳಿಗೆಯಲ್ಲಿ ಸುಧಾರಿಸಿಕೊಳ್ಳುತ್ತ "ಪಕ್ಷಿಗಳಲ್ಲಿ ಶ್ರೇಷ್ಠನಾದ ಗರುಡ ಪಕ್ಷಿಯೇ, ನಿನ್ನ ಶಕ್ತಿಯ ಮಿತಿಯನ್ನು ಪರೀಕ್ಷಿಸುವುದಕ್ಕೋಸ್ಕರ ವಜ್ರಾಯುಧವನ್ನು ಪ್ರಯೋಗಿಸಿದೆ. ನಿನ್ನ ಅಪರಿಮಿತ ಶಕ್ತಿಗೆ ಮಿಗಿಲೆ ಇಲ್ಲ. ನನಗೆ ಸದಾ ಕಾಲ ನಿನ್ನ ಸ್ನೇಹವನ್ನು ದಯಪಾಲಿಸು." ಎಂದು ಕೇಳಿಕೊಂಡನು. "ಹಾಗೆ ಆಗಲಿ ಇಂದ್ರನೇ. ನೀನೀಗ ನನ್ನ ಶಕ್ತಿಯನ್ನು ನೋಡಿರುವೆ. ನನ್ನ ಸ್ನೇಹಿತನಾಗಿರುವೆ. ಆದ್ದರಿಂದ ಹೇಳುತ್ತೇನೆ ಕೇಳು. ನನ್ನ ರೆಕ್ಕೆಯ ಪುಕ್ಕವೊಂದು ಪರ್ವತ, ನದಿ, ಸಮುದ್ರ ಸಮೇತವಾದ ಭೂಮಿ ಮತ್ತು ನಿನ್ನ ಭಾರ - ಎರಡನ್ನು ಒಟ್ಟಿಗೆ ತಾಳಬಲ್ಲದು. ನನ್ನ ಶಕ್ತಿಎಷ್ಟಿದೆಯೆಂದರೆ ಸಕಲ ಲೋಕಗಳನ್ನು ಒಟ್ಟಿಗೆ ಒಂದೇ ಬಾರಿಗೆ ಹೊತ್ತೊಯ್ಯಬಲ್ಲೆನು." ಎಂದನು. ಇಂದ್ರನು "ನನ್ನ ಸ್ನೇಹವನ್ನು ಸ್ವೀಕರಿಸಿದ್ದರಿಂದ ನಾನು ಧನ್ಯನಾದೆ. ಗರುಡ ಪಕ್ಷಿಯೇ ನೀನಾಗಲೇ ವಿಷ್ಣುವಿನ ವರದಿಂದ ಅಮರನಾಗಿರುವೆ. ನಿನಗೆ ಈ ಅಮೃತದಿಂದ ಉಪಯೋಗವಿಲ್ಲ. ಇನ್ನು ನೀನು ಕೊಡಬೇಕೆಂದಿರುವ ಸರ್ಪಗಳ ನಿನ್ನ ಶತ್ರು, ದೇವಲೋಕಕ್ಕೂ ಹನಿ ತರಬಲ್ಲರು. ಆದ್ದರಿಂದ ದಯವಿಟ್ಟು ಅಮೃತವನ್ನು ಹಿಂದಿರುಗಿಸು" ಎಂದು ಕೇಳಿಕೊಂಡನು. ಆದರೆ ಗರುಡನು ಇದಕ್ಕೊಪ್ಪಲಿಲ್ಲ. ಆದರೆ ಸರ್ಪಗಳಿಂದ ಇದನ್ನು ಕಿತ್ತುಕೊಳ್ಳಲು ಒಂದು ಉಪಾಯವನ್ನು ಹೇಳಿಕೊಟ್ಟನು. ಸುಪ್ರೀತನಾದ ಇಂದ್ರ ವರವೊಂದನ್ನು ಕೇಳಿಕೊಳ್ಳುವಂತೆ ಆದೇಶಿಸಿದನು. "ಸರ್ಪಗಳ ಮೋಸದಿಂದ ತನ್ನ ತಾಯಿ ದಾಸಿಯಾಗಬೇಕಾಯಿತು. ಆದ್ದರಿಂದ ಸರ್ಪಗಳು ಇನ್ನು ಮುಂದೆ ನನ್ನ ಆಹಾರವಾಗುವಂತೆ ವರವನ್ನು ಕೊಡು" ಎಂದು ಕೇಳಿಕೊಂಡನು. "ತಥಾಸ್ತು" ಎಂದ ಇಂದ್ರ ಅಂತರ್ಧಾನನಾದನು.
ಇತ್ತ ವಾಪಸು ಬಂದ ಗರುಡ ಸರ್ಪಗಳಿಗೆ ಅಮೃತವನ್ನು ತೋರಿಸಿದನು. "ನೋಡಿ, ಕುಶದ ಹುಲ್ಲುಹಾಸಿನ ಮೇಲೆ ಇದನ್ನು ಇರಿಸುತ್ತೇನೆ. ನೀವು ಹೋಗಿ ಸ್ನಾನಾದಿ ಕರ್ಮಗಳನ್ನು ಮಾಡಿ ಬನ್ನಿ ನಂತರ ಇದರ ರುಚಿಯನ್ನು ನೋಡಿ" ಎಂದು ಸಲಹೆ ಕೊಟ್ಟನು. "ಈಕ್ಷಣ ನಾನು ಅಮೃತವನ್ನು ಕೊಟ್ಟಿರುವುದರಿಂದ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮುಕ್ತಳನ್ನಾಗಿ ಮಾಡಿ" ಎಂದನು ಗರುಡ. "ಹಾಗೆ ಆಗಲಿ - ಇಕ್ಷಣದಿಂದ ವಿನತೆ ಸ್ವತಂತ್ರಳು" ಎಂದವು ಸರ್ಪಗಳು. ಸ್ನಾನಾದಿ ಅರ್ಘ್ಯ ಕರ್ಮಗಳನ್ನು ಮಾಡುವುದಕ್ಕೆ ತೆರಳಿದವು. ಇದೆ ಸಮಯಕ್ಕೆ ಇಂದ್ರನು ಬಂದು ಅಮೃತದ ಬಟ್ಟಲನ್ನು ಟೆಕೆದುಕೊಂಡು ಸ್ವರ್ಗಲೋಕಕ್ಕೆ ಹಾರಿದನು. ವಿನತೆ ಮುಕ್ತಳಾದಳು.