ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಈವರೆಗೆ 'ಮುಂಗಾರು ಮಳೆ' - ಎಂದರೆ ಅನೇಕರಿಗೆ ಅನೇಕ ರೀತಿಯಲ್ಲಿ ಭಾವವುಂಟಾಗುತ್ತಿತ್ತು. ರೈತರಿಗೆ ಕರುಣೆ ತೋರಬೇಕಾದ ದೈವ. ಪ್ರೇಮಿಗಳಿಗೆ ಪ್ರಾಯಶಃ ಸುಂದರ ಪರಿಸರದಲ್ಲಿ ಮೂಡಬಹುದಾದ ಕನಸುಗಳು. ಮುಂಬೈ ದ್ವೀಪದಲ್ಲಿ ಬದುಕುವ ಜನರಿಗೆ ದೈನಿಕವನ್ನು ಅಸ್ತವ್ಯಸ್ತಗೊಳಿಸಬಹುದಾದ ಭಯ - ಹೀಗೆ. ಆದರೆ ಕರ್ನಾಟಕದ ಜನತೆಗೆ ಈಗ ಮೊದಲೇ ಇದ್ದಿರಬಹುದಾದ ಅರ್ಥವೊಂದು ಹೊಸರೂಪದಲ್ಲಿ ಪರಿಷ್ಕೃತಗೊಂಡು ಮುಂದೆಬಂದಿದೆ. ಇನ್ನುಮುಂದೆ ಮುಂಗಾರು ಮಳೆಯೆಂದರೆ - ಬರಡಾಗುತ್ತಿದೆಯೇನೋ ಎನ್ನುವ ಭೂಮಿಯನ್ನು ಮತ್ತೆ ಚಿಗೊರೆಡೆಸುವಂತಹ, ಪರಂಪರೆಯೊಂದನ್ನು ಮುನ್ನಡೆಸುವಂತಹ ತಂಪಾದ ಹಿತಕರವಾದ ಪುಷ್ಪವೃಷ್ಟಿ. ೨೦ ವರ್ಷಗಳ ಹಿಂದಿನ ಸಿನೆಮಾ 'ಪ್ರೇಮಲೋಕ' ಜನತೆಯನ್ನು ತನ್ನತ್ತ ಸೆಳೆದುಕೊಂಡಂತಹ ಇತಿಹಾಸವನ್ನು ಇದು ಮರುನಿರ್ಮಿಸಿದೆ. ಮಿಕ್ಕೆಲ್ಲೆಡೆ ಮೃದುಭಾವನೆ ಮಾತ್ರ ಸಂಕೇತಿಸುವ ಈ ಸಿನೆಮಾ ಬಾಕ್ಸಾಫೀಸಿನಲ್ಲಿ ಮಾತ್ರ ಎಲ್ಲಾ ದಾಖಲೆಗಳನ್ನೂ ಮುರಿದು ಆರ್ಭಟಿಸಿದೆ. ೮-ರಿಂದ ೮೦-ರವೆರೆಗಿನ ಜನರೆಲ್ಲರಿಗೂ ಇಷ್ಟವಾಗುವಂತಹದ್ದೇನನ್ನೋ ತನ್ನೊಡಲಲ್ಲಿಟ್ಟುಕೊಂಡಿದೆ. ಕನ್ನಡಿಗರ ಒಂದು ವಿಶಿಷ್ಟ ದಾಹವನ್ನು ತಣಿಸಿದೆ. ನಗರಪ್ರದೇಶದ ಕನ್ನಡಿಗರ ಕೀಳರಿಮೆ ಕಳೆದಿದೆ. ಒತ್ತಾಯಕ್ಕೆ ಮಣಿಯುವುದು ಇಷ್ಟವಿಲ್ಲದೆ, ಕನ್ನಡ ಸಂಸ್ಕೃತಿಯ ಜೊತೆ ತಮಗೆ ಸಹಜವಾಗಿ ಸಾಧ್ಯವಾಗುವ ಪ್ರವೇಶವೊಂದಿಲ್ಲದೇ ಕಷ್ಟಪಡುತ್ತಿದ್ದ, ಕನ್ನಡವನ್ನು ಪ್ರೀತಿಸುವುದಕ್ಕೆ ಕಾರಣವನ್ನು ಕಾಯುತ್ತಿದ್ದ ಕನ್ನಡೇತರರಿಗೆ ದಿಢೀರನೆ ತೆರೆದ ಬಾಗಿಲಾಗಿದೆ. ಈ ಸಿನೆಮಾದ ಹೆಸರು 'ಮುಂಗಾರು ಮಳೆ'-ಯಾಗಿರುವುದು ಅರ್ಥಗರ್ಭಿತವಾಗಿದೆ. ಈ ಸದ್ಯಕ್ಕೆ ನಮಗೆ ಇನ್ನೂ ಅನ್ನಿಸಿರಲಾರದ ಐತಿಹಾಸಿಕ ಮಹತ್ವವೂ ಈ ಸಿನೆಮಾಕ್ಕೆ ಇನ್ನೊಂದೈದು ವರ್ಷಗಳಲ್ಲಿ ಪ್ರಾಪ್ತವಾಗಲಿದೆ.
ಸಿನೆಮಾದ ಈ ಬಗೆಯ ಯಶಸ್ಸಿಗೆ ಕಾರಣವಾದರೂ ಏನು ಎನ್ನುವ ಪ್ರಶ್ನೆಯನ್ನು ಕನ್ನಡಚಿತ್ರಪ್ರೇಮಿ ಯೋಚಿಸುವುದಕ್ಕೆ ತೊಡಗುವುದಿಲ್ಲ. ಯಶಸ್ವೀ ಸಿನೆಮಾವೊಂದರ ಮಹತ್ವವನ್ನು ಬರಹದಲ್ಲಿ ಮುಖ್ಯವಾಗಿ ಶೋಧಿಸಬೇಕು ಎನ್ನುವುದು ನಮಲ್ಲಿ ಅಷ್ಟಾಗಿ ಇಲ್ಲದ ಸಂಪ್ರದಾಯ. ಕೆಲವೊಮ್ಮೆ 'ಹಲೋ ಯಮ'-ದಂತಹ ಚಿತ್ರಗಳು ಯಶಸ್ವಿಯಾಗಿಬಿಡುತ್ತವೆ ಎನ್ನುವ ಕಾರಣದಿಂದಲೂ ಈ ಬಗೆಯ ತಾತ್ಸಾರವಿರುತ್ತದೆ. ಯಶಸ್ವಿಯಾಗದ ಉತ್ತಮ ಚಿತ್ರಗಳ ಬಗ್ಗೆ ನಮಗೆ ಹೆಚ್ಚು ವಿಶ್ಲೇಷಿಸಬೇಕೆನ್ನಿಸುತ್ತದೆ. ಉದಾಹರಣೆಗೆ, ಯೋಗರಾಜಭಟ್ಟರ 'ಮಣಿ' ಚಿತ್ರ.
ಆದರೆ 'ಮುಂಗಾರು ಮಳೆ' ಚಿತ್ರದಲ್ಲಿ ನನಗೆ ಮುಖ್ಯವೆಂದು ಕಂಡತಹ ಬಹಳ ಅಂಶಗಳಿವೆ. ಯಶಸ್ಸಿಗೆ ಪೂರಕವಾದ ಚಲನಚಿತ್ರೇತರ ಅಂಶಗಳಿವೆ. ಚಲನಚಿತ್ರದ ಯಶಸ್ಸಿಗೆ ಮುಖ್ಯವಾಗಿಲ್ಲದೆಯೂ ಸಾಂಸ್ಕೃತಿಕ ಕಾರಣಕ್ಕೆ ಮುಖ್ಯವಾದ ಮತ್ತಷ್ಟು ಅಂಶಗಳಿವೆ. ಈ ಲೇಖನ ಅದನ್ನು ಪಟ್ಟಿ ಮಾಡುವುದಕ್ಕಷ್ಟೇ ಮೀಸಲು.
೧. ಮೊದಲಿಗೆ, ಒಂದಷ್ಟು ಸರಳವಾದ ವಿಷಯಗಳು. ಚಿತ್ರ ಅಸಂಗತವಾದ ಸನ್ನಿವೇಶವೊಂದನ್ನು ಯಾವುದೇ ನೈತಿಕತೆಯ ಭಾರವನ್ನು ಹೇರಿಕೊಳ್ಳದೇ, ವೀಕ್ಷಕನ ಮೇಲೂ ಹಾಏಅದೇ ಪ್ರಸ್ತುತಪಡಿಸುತ್ತದೆ. ಚಲನಚಿತ್ರಕ್ಕಾಗಿ ದುಡಿದಿರಬಹುದಾದ ಯಾವುದೇ ತಾಂತ್ರಿಕತೆ ತನ್ನನ್ನು ತಾನೇ ವಿಜೃಂಭಿಸಿಕೊಳ್ಳಲೆತ್ನಿಸದೇ ಚಿತ್ರನಿರ್ಮಿತಿಯಲ್ಲಿ ಸೃಜನಶೀಲವಾಗಿ ತೊಡಗಿಕೊಂಡು, ತೆರೆಯ ಮೇಲೆ ಹೊಂದಿಕೊಂಡು ತಮ್ಮ ಪಾಲಿನ ಕೆಲಸವನ್ನಷ್ಟೇ ಮಾಡಿದೆ. ಹೀಗಿದ್ದೂ ಚಿತ್ರದ ಯಾವುದೇ ತಾಂತ್ರಿಕ ಅಂಶ ಕಡಿಮೆಯಾಗಿದ್ದಲ್ಲಿ ಚಿತ್ರ ಸೊರಗುತ್ತಿತ್ತು ಎನ್ನಿಸುವಂತೆ ಬಳಕೆಯಾಗಿದೆ. ಇದೇ ಮಾತನ್ನು ನಮ್ಮ ಚಲನಚಿತ್ರ ಸಂಸ್ಕೃತಿಯ ಬಹುಮುಖ್ಯ ಅಂಶವಾದ ಸಂಗೀತ, ಹಾಡು, ನೃತ್ಯ, ಛಾಯಾಗ್ರಹಣಗಳಿಗೂ ಹೇಳಬಹುದಾಗಿದೆ. ಒಂದೆರಡು ದೃಶ್ಯಗಳನ್ನು ಪ್ರೇಕ್ಷಕ 'ಇದು ಹೀಗಿರುವುದು ಅಸಹಜ, ಹಾಗಿರಬೇಕಿತ್ತು' ಎಂದೋ ಮತ್ತೊಂದೋ ಟೀಕಿಸಬಹುದೇ ಹೊರತು, ಚಿತ್ರದಲ್ಲಿ ರೇಜಿಗೆ ಹುಟ್ಟಿಸುವ ಒಂದೇ ಒಂದು ದೃಶ್ಯವಿಲ್ಲ. ಎಲ್ಲಾ ವಯಸ್ಕರಿಗೂ ಇಷ್ಟವಾಗುವ ಏನಾದರೊಂದು ಈ ಚಿತ್ರದಲ್ಲಿದೆ. ಕಥೆಯಲ್ಲಿ ಎಲ್ಲಾ ಪಾತ್ರಗಳ ಕುರಿತೂ ಒಂದು ಸಹಜ ಕರುಣೆ, ಮಾನವೀಯ ಕಳಕಳಿಯಿದೆ. ಚಿತ್ರದ ಒಂದು ಅತಿಶಯವಾಗಬಹುದಾಗಿದ್ದ ಮೊಲ 'ದೇವದಾಸ'-ನನ್ನು ಒಂದು ಸಂಕೇತವಾಗಿಸುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮತ್ತೊಂದು ಅತಿಶಯವಾಗಬಹುದಾಗಿದ್ದ ನಾಯಕ-ನಾಯಕಿಯ ಪ್ರೇಮಪಕರಣವೇ ಚಿತ್ರದ ಪ್ರಮುಖ ಅಂಶವಾಗಿದ್ದು, ಒಟ್ಟು ಪ್ರಕರಣ ನಡೆಯುವ ಪರಿಸರ, ಪಾತ್ರಗಳನ್ನು ಚಿತ್ರಿಸಿರುವ ರೀತಿ - ಇವುಗಳ ಮೂಲಕ ಅತಿಶಯವೆಂದು ಪ್ರೇಕ್ಷಕನಿಗೆ ಅನ್ನಿಸದ ರೀತಿಯಲ್ಲಿ, ಅತಿಶಯವನ್ನೇ ವಿಶೇಷ ಅನುಭವವೆನ್ನುವಂತೆ, ಇದೊಂದು ಅಸಂಗತವಾದ ಪ್ರಕರಣವೆನ್ನುವಂತೆ ನಿರ್ದೇಶಕರು ಎಚ್ಚರವಹಿಸಿದ್ದಾರೆ.
೨. ಚಲನಚಿತ್ರೇತರ ಕಾರಣಗಳಲ್ಲಿ ಬಹುಮುಖ್ಯ ಅಂಶವೆಂದರೆ ನಾಯಕ ಗಣೇಶ್-ಗೆ ಈಗಾಗಲೇ ಕಾಮಿಡಿ ಟೈಮಿನಿಂದ ದಕ್ಕಿದ್ದ ಖ್ಯಾತಿ ಮತ್ತು 'ಚೆಲ್ಲಾಟ' ಚಿತ್ರದಲ್ಲಿ ಗಣೇಶ್ ನಾಯಕನಾಗಬಹುದಾದ ಸಾಧ್ಯತೆಯನ್ನು ಮನಗಂಡಿದ್ದ ಕನ್ನಡ ಪ್ರೇಕ್ಷಕ. ಸಾಮಾನ್ಯವಾಗಿ ಚಲನಚಿತ್ರ ತಾರೆಯರ ಜೊತೆಗಿನ ಫೋನಿನ್ ಕಾರ್ಯಕ್ರಮಗಳಲ್ಲಿ ತಾರೆಯರ ಜೊತೆಗೆ ಮಾತನಾಡುವಾಗ ಜನರು ಅತಿಭಾವುಕತೆಯಲ್ಲಿರುತ್ತಾರೆ. ಆದರೆ ಕಾಮಿಡಿ ಟೈಮಿನಲ್ಲಿ ಜನರು ಗಣೇಶ್-ರನ್ನು 'ನೀವು ನಮ್ಮ ಮನೆಯಲ್ಲಿದ್ದಿದ್ದರೆ ಚೆನ್ನಿತ್ತು' ಎನ್ನುವ ಭಾವದಲ್ಲಿ ಮಾತನಾಡಿಸುತ್ತಾರೆ. ಇದರಿಂದ ಗಣೇಶರ ಚಿತ್ರಗಳನ್ನು ನೋಡಲೇಬೇಕಾದ ತುರ್ತಿರುವ, ಗಣೇಶರನ್ನು ಆರಾಧ್ಯ ದೈವವಾಗಿ ಕಾಣಬೇಕಾದ ಅನಿವಾರ್ಯತೆಯಿಲ್ಲದ, ಹೊಸಪ್ರೇಕ್ಷಕವರ್ಗವೊಂದು ಸೃಷ್ಟಿಗೊಂಡಿದೆಯೇನೋ. 'ಮುಂಗಾರು ಮಳೆ'-ಯ ನಂತರ ಗಣೇಶ್ ಅನೇಕರಿಗೆ ಆರಾಧ್ಯ-ದೈವವಾಗಿರಬಹುದು. ಹುಡುಗಿಯರು ಮದುವೆಯಾಗು ಎಂದು ಕಾಟಕೊಡುತ್ತಿರಬಹುದು. ಆದರೆ ಅಂತಹ ಅತಿರೇಕಗಳಿಲ್ಲದ, ಗಣೇಶರ ಮನುಷ್ಯಸಹಜ ಹುಡುಗಾಟಗಳಿಂದಲೇ ಅವರನ್ನು ಪ್ರೀತಿಸುವ ಮನೆಮಂದಿಯಿರುವ ಒಂದು ಪ್ರೇಕ್ಷಕ ವರ್ಗವಿದೆ ಎಂದು ನನ್ನ ಅನಿಸಿಕೆ. ಇದು ಹೀಗೇ ಉಳಿಯುತ್ತದೆಯೋ ಅಥವಾ ಕಳೆದ ಐವತ್ತು ವರ್ಷಗಳಲ್ಲಿ ನಾವು ಕಂಡಿರುವ ಸೂಪರ್-ಸ್ಟಾರ್ ಸಂಸ್ಕೃತಿಯಲ್ಲಿ ಕೊಚ್ಚಿಕೊಂಡು ಹೋಗುವುದೋ ಕಾದು ನೋಡಬೇಕಿದೆ.
೩. ಮತ್ತೊಂದು ಚಲನಚಿತ್ರೇತರ ಕಾರಣವೆಂದರೆ ಹಸಿದು ಬಸವಳಿದಿದ್ದ ಕನ್ನಡ ಪ್ರೇಕ್ಷಕ. ಹಾಗೆಂದು ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬಂದೇ ಇಲ್ಲವೆಂದು ನಾನು ನಂಬಿಲ್ಲ. ಎಲ್ಲಾ ಭಾಷೆಗಳಲ್ಲಿ ಹೇಗೋ ಹಾಗೆ ವರ್ಷಕ್ಕೆ ಒಳ್ಳೆಯದು ಎನ್ನಿಸುವ ೮-೧೦ ಚಿತ್ರಗಳಿದ್ದೇ ಇದ್ದಾವೆ. ಆದರೆ, ಬಹುತೇಕರಿಗೆ ಇಷ್ಟವಾಗುವ ಚಿತ್ರವೊಂದು ಬಂದಿರಲಿಲ್ಲ. ಕನ್ನಡೇತರರು ಭಾಗಿಯಾಗಬಹುದಾದಂತಹ ಚಿತ್ರವೊಂದಿರಲಿಲ್ಲ. ಒಂದು ಕಮರ್ಷಿಯಲ್ ಚಿತ್ರದ ಕಾರಣಕ್ಕೆ ಕನ್ನಡೇತರರ ಮುಂದೆ ತಲೆಯೆತ್ತು ನಿಲ್ಲಬಹುದು ಎಂದು ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಓದಿ ವರ್ಷಗಳ ನಂತರ ಕನ್ನಡ ಪ್ರಜ್ಞೆಯ ಅವಶ್ಯಕತೆಯನ್ನು ಅನುಭವಿಸಿ, ಅವಕಾಶವಿಲ್ಲದೇ ನಾಚಿಕೆಯಿಂದ ತಲೆತಗ್ಗಿಸಿದ್ದ, ಕನ್ನಡ ಸಂಸ್ಕೃತಿಯ ಜೊತೆ ಗಟ್ಟಿಸಂಬಂಧ ಕಳೆದುಕೊಂಡಿದ್ದ ಬೆಂಗಳೂರಿನ ಕನ್ನಡಿಗನಿಗೆ ಮುಂಗಾರು ಮಳೆ ಈ ಎಲ್ಲಾ ಕಾರಣಕ್ಕೆ ವರವಾಗಿ ಪರಿಣಮಿಸಿದೆ. ಅವರಿಗೆ ಕನ್ನಡಕ್ಕೆ ಒಂದು ಪ್ರವೇಶ ದೊರಕಿಸಿದೆ. ಏಕಕಾಲದಲ್ಲಿ ಕನ್ನಡೇತರರು, ಕನ್ನಡಿಗರು ಮಾತನಾಡಬಹುದಾದ ಕನ್ನಡದ ವಿಷಯವೊಂದೆಂದರೆ 'ಮುಂಗಾರು ಮಳೆ'. ಆದ್ದರಿಂದಲೇ ಇದು ಪಿವಿಆರ್-ನಲ್ಲಿ ಇನ್ನೂ ನಾಲ್ಕು ಆಟಗಳನ್ನು ಕಾಣುತ್ತಿದೆ. ಹೀಗೆ ಬೆಂಗಳೂರಿನ ಕನ್ನಡಿಗನಿಗೇ ಕನ್ನಡಕ್ಕೆ ದೊರೆತಿರುವ ಈ ಪ್ರವೇಶ ಸಾಂಸ್ಕೃತಿಕವಾಗಿಯೂ ಶಕ್ತವಾಗಿದ್ದು ಅದರ ಕೆಲವು ಅಂಶಗಳನ್ನು ನಂತರ ಪ್ರಸ್ತಾಪಿಸುತ್ತೇನೆ.
೪. ಕನ್ನಡಸಂಸ್ಕೃತಿಯಲ್ಲಿ ಸ್ತ್ರೀಗುಣ, ಮಾತೃತ್ವದ ಗುಣ ಪ್ರಮುಖವಾದ ಅಂಶ. ಆದ್ದರಿಂದಲೇ ಇಲ್ಲಿ ಮೈಸೂರು ಅರಸರಂಥವರಾದರು. ಕನ್ನಡ ಚಲನಚಿತ್ರವಷ್ಟೇ ಅಲ್ಲದೇ ಕನ್ನಡಕ್ಕೇ ಬಹುಮುಖ್ಯ ನಾಯಕರಾದ ಡಾ ರಾಜ್‍ಕುಮಾರ್-ರಲ್ಲಿ ಆ ಗುಣವಿತ್ತು. ನಮ್ಮಲ್ಲಿ ಹೆಚ್ಚುಹೆಚ್ಚು ಪ್ರೇಕ್ಷಕವರ್ಗವನ್ನು ಪಡೆದ ಸಿನೆನಾಯಕರೆಲ್ಲರಲ್ಲೂ ಈ ಅಶವಿದೆ. ವಿಷ್ಣುವರ್ಧನ್, ಅಂಬರೀಶ್ ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ನಾಯಕರಾದದ್ದು ಇದೇ ಪ್ರಕ್ರಿಯೆಯ ಮುಖ್ಯ ಅಂಶ. 'ನಾಗರಹಾವು'-ನಂತಹ ಸಿನೆಮಾದಲ್ಲಿ ರಾಮಾಚಾರಿಯಲ್ಲಿ ಸ್ತ್ರೀಗುಣವಿದೆ. ೮೦-ರವರೆಗೆ ಹೀಗಿದ್ದ ಚಿತ್ರರಂಗ ನಂತರ ಬದಲಾಗಿ ಮತ್ತೊಂದೆಡೆ ಸುದೀಪ್, ದರ್ಶನ್, ಉಪೇಂದ್ರರನ್ನು ಕಂಡರೂ ಅವರೆಲ್ಲರಿಗೂ ಒಂದು ಸೀಮಿತವಾದ ಪ್ರೇಕ್ಷಕವರ್ಗವಿದ್ದು ಈ ಸುಳಿಯಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಪುಣ್ಯಕ್ಕೆ ಗಣೇಶ್-ರಲ್ಲಿ ಈ ಸ್ತ್ರೀಗುಣವಿರುವುದಷ್ಟೇ ಅಲ್ಲದೆ ಆ ಸುಳಿಯಲ್ಲಿ ಅವರು ಸಿಕ್ಕಿಬಿದ್ದಿಲ್ಲ. ಮುಂಗಾರುಮಳೆ ಸಿನೆಮಾದ ನಾಯಕನ ಬಗ್ಗೆಯೂ ಮಾತನ್ನು ಹೇಳಬಹುದಾಗಿದೆ. ಅದಕ್ಕೆ ಅತ್ಯುತ್ತಮ ನಿದರ್ಶನವೆಂದು ಚಿತ್ರದಲ್ಲೇ ಇದೆ. ಚಿತ್ರದ ಮೊದಲಲ್ಲಿ ನಾಯಕನಿಗೂ ನಾಯಕಿಯನ್ನು ಹುಚ್ಚನಂತೆ ಪ್ರೇಮಿಸುತ್ತಿರುವ ಮತ್ತೊಬ್ಬನಿಗೂ ಹೊಡೆದಾಟವಾಗುತ್ತದೆ. ನಾಯಕ ಗೆಲ್ಲುತ್ತಾನೆ. ಚಿತ್ರದ ಕಡೆಯಲ್ಲಿ ನಾಯಕಿಯನ್ನು ಕಳೆದುಕೊಂಡಿರುವ ನಾಯಕನಿಗೂ, ಅವಳನ್ನು ಇನ್ನೂ ಪಡೆಯಲು ಯತ್ನಿಸುತ್ತಿರುವ ಅದೇ ಹುಚ್ಚುಪ್ರೇಮಿಗೂ ಮತ್ತೆ ಹೊಡೆದಾಟವಾಗುತ್ತದೆ. ಆದರೆ, ಈ ಬಾರಿ ನಾಯಕ ಅವನನ್ನು ಸೋಲಿಸಿದರೂ ಅವನ ಮನಸ್ಥಿತಿ ತನಗೆ ಅರ್ಥವಾಗುತ್ತದೆ ಎಂಬಂತೆ ಆರ್ದ್ರತೆಯಿಂದ ಮಾತನಾಡುತ್ತಾನೆ. ಈ ಬಗೆಯ ಆಸ್ಥೆಯನ್ನು ಯಾರಿಂದಲೂ ಕಂಡಿರದ ಹುಚ್ಚುಪ್ರೇಮಿ ತೀವ್ರವಾಗಿ ಅಳಲು ತೊಡಗುತ್ತಾ, ಬದಲಾಗಬಹುದಾದ ಮನುಷ್ಯನಂತೆ ಕಾಣುತ್ತಾನೆ. ಇದು ನನಗೆ ಕನ್ನಡ ಸಂಸ್ಕೃತಿ, ಪರಂಪರೆಯ ಜೊತೆಗೆ ಹೊಸದೊಂದು ಸಾತತ್ಯವನ್ನು ಗಳಿಸುವತ್ತ ಒಂದು ಹೆಜ್ಜೆಯಾಗಿ ಕಾಣುತ್ತಿದೆ. (ಸೂರಿಯವರ 'ದುನಿಯಾ'-ದಲ್ಲಿ ನಾಯಕನಿಗೆ ಇದೇ ಬಗೆಯ ಸ್ತ್ರೀಗುಣ, ಮಾತೃತ್ವದ ಗುಣವಿರುವುದರಿಂದಲೇ ಅದು ಉಪೇಂದ್ರ, ದರ್ಶನ್, ಸುದೀಪರ ಚಲನಚಿತ್ರಗಳಿಗಿಂತ ಭಿನ್ನವಾಗಿದೆ. ಇದು ಎಲ್ಲರೂ ನೋಡಬೇಕಾದ, ನನಗಂತೂ ಬರೆದು ಶೋಧಿಸಬೇಕಿರುವ ಸಿನೆಮಾ). ತೀವ್ರವಾದವನ್ನು ಎದುರಾಗಬೇಕಾದ ಬಗೆಯ ಬಗ್ಗೆಯೂ, ಅಂತಹ ಅವಕಾಶ ಸೃಷ್ಟಿಯಾಗಬಹುದಾದ ಸಾಧ್ಯತೆಯ ಬಗ್ಗೆಯೂ ಇದೊಂದು ಸಂಕೇತದಂತೆ ನನಗೆ ಕಾಣುತ್ತಿದೆ.
೫. ಹೃತಿಕ್ ರೋಶನ್ ನರ್ತಿಸಿದರೆ ಅದು ಆಕರ್ಷಕವಾಗಿರುವುದು ನಿಜ. ಆದರೆ ಹೃತಿಕ್-ನ ನೃತ್ಯ ನಮ್ಮ ಸಂಪೂರ್ಣ ಗಮನವನ್ನು ಹಠ ಹಿಡಿದು ದಕ್ಕಿಸಿಕೊಳ್ಳುತ್ತದೆ. ಹೃತಿಕ್-ನ ಪರಿಶ್ರಮ ಎದ್ದು ಕಾಣುತ್ತದೆ. ಅದರ ನೋಡುಗನಿಗೂ ಒಂದು ಶ್ರಮವಿದೆ. ಆದರೆ ಗಣೇಶ್ ಒಂದು ಹೊಸ ನೃತ್ಯ ಶೈಲಿಯನ್ನು ಆರಂಭಿಸಿದ್ದಾರೆ, ಇದರ ಶ್ರೇಯಸ್ಸು ನೃತ್ಯ ನಿರ್ದೇಶಕರಿಗೂ ಇರಲಿ. ಇದು ಮನಸ್ಸಿಗೆ ಮುದ ನೀಡುವುದಲ್ಲದೇ, ಇದು ನಮ್ಮ ಮನೆಯಲ್ಲಾಗಬಹುದು, ನಾವೂ ಸಹ ಹೀಗೆ ನರ್ತಿಸಬಹುದು ಎನ್ನುವ ಭ್ರಮೆಯನ್ನುಂಟುಮಾಡುತ್ತದೆ, ನಮ್ಮನ್ನು ಒಳಗೊಳ್ಳುತ್ತದೆ. ಸಹಜ ನಡಿಗೆ, ಆಟದ ಗುಣ ಈ ನರ್ತನದಲ್ಲಿದೆ, ಮತ್ತು ಈ ಕಾಲದ ಹುಡುಗರಿಗೆ ಇದು ನಮ್ಮದೇ ಕಾಲದ್ದು ಎಂದೂ ಅನ್ನಿಸುತ್ತದೆ.
೬. ಇದಕ್ಕೆ ಸಂಗೀತ ನೀಡಿರುವ ಮನೋಮೂರ್ತಿ ಕನ್ನಡದವರೇ ಆಗಿದ್ದು ದಶಕಗಳಿಂದ ಅಮೇರಿಕದಲ್ಲಿರುವವರು. ಇವರ ಬಳಿಯಲ್ಲಿ ಇದ್ದ ನೂರಾರು ಟ್ಯೂನ್‍ಗಳಲ್ಲಿ ಭಟ್ಟರು ಈ ಕೆಲವನ್ನು ಆಯ್ದಿರುವರೆಂದರೆ ಭಟ್ಟರು ನಿರ್ದೇಶಕರೇ ಸರಿ. ಕರ್ನಾಟಕ-ಅಮೇರಿಕ ಹಿನ್ನೆಲೆಯುಳ್ಳ ಚಿತ್ರಗಳಿಗೆ ಸಂಗೀತ ದಿಗ್ದರ್ಶಿಸಿ ಆಧುನಿಕ ಹಾಡುಗಳನ್ನೂ, ಪರಂಪರೆಯನ್ನು ನೆನೆಪಿಸುವ ಮೆಲಡಿಯನ್ನೂ ಸರಿಸಮನಾಗಿ ಕೊಟ್ಟು ಸೈ ಎನ್ನಿಸಿರುವ ಮನೋಮೂರ್ತಿ - ಇಲ್ಲಿ ದುಪ್ಪಟ್ಟು ಯಶಸ್ಸು ಗಳಿಸಿರುವುದು ಸಂಗೀತವನ್ನು ಚಿತ್ರಕ್ಕೆ ಮತ್ತು ಪಾತ್ರಗಳಿಗೆ ಸಾವಯವವೆಂಬಂತೆ ಸಂಯೋಜಿಸಿರುವುದು (ಉದಾಹರಣೆಗೆ, 'ಒಂದೇ ಒಂದು ಸಾರಿ...' ಹಾಡಿನ ಆರಂಭ ನಾಯಕನ ಆ ಕ್ಷಣದ ಮನಸ್ಥಿತಿ ಮತ್ತು ಹೊಸ ಅನುಭವದಿಂದ ಅವನೇರುವ ಮತ್ತೊಂದು ಸ್ಥಿತಿಯನ್ನು ಪರಿಣಾಮಕಾರಿಯಾಗಿ ಹಿಡಿದಿದೆ). ಕನ್ನಡ ಸಂಸ್ಕೃತಿ ಎಂದಿಗೂ ಅನ್ಯಸಂಸ್ಕೃತಿಗಳ ಜೊತೆಗಿನ ಅನುಸಂಧಾನಕ್ಕೆ ತೆರೆದುಕೊಂಡೇ, ಅವಕಾಶ ಸೃಷ್ಟಿಸುತ್ತಲೇ ಇರುವಂಥದ್ದು. ನಮ್ಮೀ ಕನ್ನಡದ ಸಂಗೀತ ನಿರ್ದೇಶಕ ಚಿತ್ರದ ಬಹುತೇಕ ಹಾಡುಗಳಿಗೆ ಪರಭಾಷಾ ಗಾಯಕರಾದ ಸೋನು ನಿಗಂ, ಉದಿತ್ ನಾರಾಯಣ್-ರಿಂದ ಹಾಡಿಸಿ ಅದು ಸಕಾರಣವೆನ್ನುವುದನ್ನು ಸಾಬೀತು ಮಾಡಿದ್ದಾರೆ. ಇವನ್ನು ಕನ್ನಡ ಗಾಯಕರು ರಾಜೇಶ್ ಕೃಷ್ಣನ್ ಮೊದಲಾದವರು ಹಾಡಿದ್ದರೂ ಚೆನ್ನಾಗಿಯೇ ಮೂಡಿಬರುತ್ತಿತ್ತು ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ, ಕನ್ನಡಕ್ಕೆ ಸಂಬಂಧವಿಲ್ಲದಂತಿರುವ ಪಂಜಾಬಿ ಭಾಂಗ್ರಾ ನೃತ್ಯದಿಂದ ಪ್ರೇರಿತವಾದ ಹಾಡೊಂದನ್ನು ಪರಭಾಷಾ ಗಾಯಕರಿಂದ ಸಮರ್ಥವಾಗಿ ಹಾಡಲಾಗದೇ ಕನ್ನಡದ ಗಾಯಕನೊಬ್ಬನಿಂದಲೇ ಹಾಡಿಸಬೇಕಾದ್ದು ನನಗೆ ಮಹತ್ತರವಾಗಿ ಕಾಣಿಸುತ್ತಿದೆ. ಮೊದಲಿಗೆ ಮುಖ್ಯವಾದ ವಿಷಯ ಕನ್ನಡ ಸಂಸ್ಕೃತಿ ಹೀಗೆ ಮತ್ತೊಂದು ಸಂಸ್ಕೃತಿಯ ಜೀವಕುಡಿಯನ್ನು ತನ್ನದಾಗಿಸಿಕೊಳ್ಳಲು ನಿರ್ಮಿಸಿಕೊಳ್ಳುವ ಅವಕಾಶ ಬಗೆ. ಎರಡನೆಯದು, ತನ್ನದಾಗಿಸಿಕೊಳ್ಳುವಾಗಿನ ರೂಪಾಂತರದ ರೀತಿ. ಅಪ್ಪಟ ಕನ್ನಡದ ಆಟ-ಹಾಡು-ನೃತ್ಯದಂತೆ ಭಾಸಗೊಳಿಸುತ್ತಾ, ನಗರ-ಹಳ್ಳಿಗಳೆನ್ನದೇ ಎಲ್ಲ ಬಗೆಯ, ಎಲ್ಲಾ ವಯಸ್ಕರನ್ನೂ ಆಕರ್ಷಿಸಿರುವ ಈ ಹಾಡು. ಹಳ್ಳಿಯ ಸರಳತೆ, ನಗರದ ಶೈಲಿ ಎರಡನ್ನೂ ಈ ಹಾಡಿನ ನೃತ್ಯದಲ್ಲಿ ಕಾಣಬಹುದಾಗಿದೆ. ಈ ಎಲ್ಲವೂ ಕನ್ನಡ ಮಾತಿನಿಂದ ಹೊಸಸ್ಪರ್ಷ ಪಡೆದಿರುವ ಕಾರಣ ಅದು ಪರಭಾಷಾಗಾಯಕರಿಂದ ಸಾಧ್ಯವಾಗದೇ ಕನ್ನಡದ ಗಾಯಕನಿಂದ ಮಾತ್ರ ಸಾಧ್ಯವಾದದ್ದು ನನಗೆ ಹೊಸದೊಂದು ಪ್ರಕ್ರಿಯೆಯ ಸಂಕೇತವಾಗಿ ಕಾಣಿಸುತ್ತಿದೆ.
೭. ಈ ಸಿನೆಮಾದ ಎಲ್ಲಾ ಹಾಡುಗಳೂ ಯಶಸ್ವಿಯಾಗಿವೆ. ಆದರೆ ಈ ಯಶಸ್ಸಿನ ಉತ್ಕರ್ಷದಲ್ಲಿ ಮುಳುಗಿಹೋಗಿರುವ ಮತ್ತೊಂದು ಯಶಸ್ಸು ಸಿನೆಮಾದ 'ಒಂದೇ ಒಂದು ಸಾರಿ ಕಣ್ಮುಂದೆ ಬಾರೆ' ಹಾಡನಲ್ಲಿದೆ. ಅದರಲ್ಲಿ ಒಂದೇ ಒಂದು ಆಂಗ್ಲ ಶಬ್ದವಿಲ್ಲ. 'ಇಹೆನು' ಎನ್ನುವಂತಹ ಅಪ್ಪಟ ಹಳೆಯ ಮಾತುಗಳೂ ಇವೆ. ಆದರೂ ಅದು ಒಂದು Techy Song ಎನ್ನಿಸಿಕೊಂಡಿದೆ. ಚಿತ್ರದ ನಾಯಕ ತಂತ್ರಜ್ಞಾನದ ತೀವ್ರತೆಯ ಕಾಲದಲ್ಲಿ ಹುಟ್ಟಿರುವ ಮನುಷ್ಯ. ಯಾವ ಜವಾವ್ದಾರಿಯೂ ಇಲ್ಲದ, ಸಂಪ್ರದಾಯದ ಗಂಧ-ಗಾಳಿಯಿಲ್ಲದ, ಕನ್ನಡ ಮಾತನಾಡುತ್ತಿದ್ದರೂ ಅದರ ಕುರಿತು ಒಲವೇ ಇರದಿರಬಹುದಾದ ಒಬ್ಬ ವ್ಯಕ್ತಿಯಂತೆ ಇವನನ್ನು ಊಹಿಸಿಕೊಳ್ಳಬಹುದು. ಅಂತಹವನಲ್ಲಿ ವಯೋಸಹಜವಾದ ಆಕರ್ಷಣೆಯಿಂದ ಆಗುವ ಬದಲಾವಣೆಯನ್ನು ಈ ಹಾಡು ಕನ್ನಡದಲ್ಲಿ ಅದೆಷ್ಟು ಚೆನ್ನಾಗಿ ಹಿಡಿದಿಡುತ್ತದೆಯೆಂದರೆ ಆಶ್ಚರ್ಯವಾಗುತ್ತದೆ. ನನಗೆ ಈ ಹಾಡು ಇತ್ತೀಚಿನ ದಿನಗಳಲ್ಲಿ ಒಂದು ಮಹತ್ತರ ಸಾಧನೆಯೆನ್ನಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ - ಸಂಗೀತ ಮತ್ತು ಚಿತ್ರೀಕರಣ ಈ ಪದಗಳಿಗೆ ಈ ಹೊಸ ಮನುಷ್ಯನ, ಹೊಸ ಅಭಿವ್ಯಕ್ತಿಯನ್ನು ಹಿಡಿದಿಡುವ ಶಕ್ತಿಯನ್ನು ದಯಪಾಲಿಸುತ್ತಿದೆ. ಯಾವ ವ್ಯಕ್ತಿ ಕನ್ನಡವೆಂದರೆ ಮೂಗು ಮುರಿಯಬಲ್ಲವನಾಗಿರಬಹುದಾದ ಸಾಧ್ಯತೆಯಿದೆಯೋ, ಅದೇ ವ್ಯಕ್ತಿಯ ಬಹುವಿಶಿಷ್ಟವಾದ ಅಭಿವ್ಯಕ್ತಿ ಕನ್ನಡದಲ್ಲಿ ಆಗುವಂತೆ ಸಂಗೀತ ಮತ್ತು ಚಿತ್ರೀಕರಣ ಸಾಧ್ಯ ಮಾಡಿದೆ. ಅದೇ ಕಾರಣಕ್ಕೆ ಕನ್ನಡ-ಕನ್ನಡೇತರೆಲ್ಲರಿಗೂ ಈ ಹಾಡು (ಮತ್ತು ಸಿನೆಮಾ) ಇಷ್ಟವಾಗಿದೆ. ಡಾ ಅನಂತಮೂರ್ತಿಗಳು ಕನ್ನಡದ ವಿಶಿಷ್ಟ ಬಗೆಯ ಸಾತತ್ಯವನ್ನು ಕುರಿತು ಮಾತನಾಡುತ್ತಾ - ೧೨ ಶತಮಾನದ ವಚನಸಾಹಿತ್ಯವನ್ನು ಇಂದಿಗೂ ನಾವು ಈ ಕಾಲದ್ದೇ ಎನ್ನುವಂತೆ ಓದಬಹುದಾಗಿದೆ - ಎಂದಿದ್ದನ್ನು ನೆನೆಪಿಸಿಕೊಂಡು ನನಗೆ ಇದೂ ಸಹ ಅದೇ ಪ್ರಕ್ರಿಯೆಯ ಭಾಗವಾಗಿರಬಹುದೇ ಎನ್ನಿಸುತ್ತಿದೆ.
೮. ಈ ಚಿತ್ರದಲ್ಲಿ ನಾಯಕಿ ತನ್ನ ಮದುವೆಯನ್ನು ಮುರಿಯುವ ಹಂತಕ್ಕೆ ಬರುತ್ತಾಳೆ. ಆ ಕ್ಷಣದಲ್ಲಿ ಕೂಡಾ ಚಲನಚಿತ್ರಮಂದಿರದಲ್ಲಿ ಯಾರೂ ಸಹ ಅದರ ನೈತಿಕತೆಯನ್ನು ಪ್ರಶ್ನಿಸುವಂತಹ ಮಾತನ್ನಾಡಲಿಲ್ಲ. ನಂತರವೂ ನಾನು ನೋಡಿದ ಯಾರೂ ಆ ಪ್ರಶ್ನೆಯನ್ನೆತ್ತಲಿಲ್ಲ. ಇದರ ಅರ್ಥವೆಂದರೆ ನಿರ್ದೇಶಕರು ಪಾತ್ರದ ಸ್ಥಿತಿಯನ್ನು ನಮ್ಮ ಮುಂದೆ ಮನಮುಟ್ಟುವಂತೆ ನಿಲ್ಲಿಸುವಲ್ಲಿ ಯಶಸ್ವಿಯಾದರೆಂದು. ಬೇಲಿಯನ್ನು ದಾಟಿ ನಡೆಯುವ ಮನುಷ್ಯನನ್ನು ಕಟ್ಟಿಹಾಕುವುದು ಮನುಷ್ಯನ ಒಂದು ಸಹಜ ನಡವಳಿಕೆಯಾದರೆ ದಾಟಿ ಹೋಗುತ್ತಿರುವವನ ಸ್ಥಿತಿಯನ್ನು ತನ್ನಲ್ಲೇ ನೋಡಿಕೊಳ್ಳುವುದು ಸಾಧ್ಯವಾದಾಗಲೆಲ್ಲಾ ಮನುಷ್ಯ ನೈತಿಕತೆಯನ್ನು ಅಮಾನವೀಯವಾಗಿ ಮುಂದೆ ತರುವುದಿಲ್ಲ. ಆದರೆ, ಚಿತ್ರದಲ್ಲಿ ನಾಯಕಿಯನ್ನು ನಾಯಕ ಸ್ವತಃ ಹಿಮ್ಮೆಟ್ಟುವಂತೆ ಮಾಡುತ್ತಾನೆನ್ನುವುದು ನೈತಿಕತೆಯ ಪ್ರಶ್ನೆಯನ್ನು ಹಿನ್ನೆಲೆಗೆ ಸರಿಸಿರುವ ಸಾಧ್ಯತೆಯೂ ಇದೆ.
ಒಂದು ಸಂದರ್ಶನದಲ್ಲಿ ತೇಜಸ್ವಿ ಹೇಳಿದ್ದರು. ಒಂದು ಉತ್ತಮವಾದ ಕೃತಿಯನ್ನು ಕಲಾವಿದ ರಚಿಸಬಹುದು. ಆದರೆ ಶ್ರೇಷ್ಠವಾಗುವುದಕ್ಕೆ ಇತಿಹಾಸ, ವರ್ತಮಾನಗಳು ಕಾರಣವಾಗುತ್ತವೆ. ಪ್ರಾಯಶಃ ಮುಂಗಾರು ಮಳೆಯ ಕುರಿತು ಈ ಮಾತನ್ನಾಡಬಹುದು. ಕನ್ನಡಕ್ಕೊಬ್ಬ ಗೋಲ್ಡನ್ ಸ್ಟಾರ್-ನನ್ನು ಕೊಟ್ಟಿದೆ. ಕನ್ನಡ ಸಿನೆಮಾದ ಮಾರುಕಟ್ಟೆಯನ್ನು ವಿಸ್ತರಿಸಿದೆ. ನಾಯಕನ ಪರಿಕಲ್ಪನೆಯನ್ನು ಮತ್ತೆ ಕನ್ನಡಸಂಸ್ಕೃತಿಗೆ ಹತ್ತಿರವಾಗಿಸಿದೆ. ಪರಭಾಷಾ ಗಾಯಕರನ್ನು, ನಾಯಕಿಯನ್ನು ಕನ್ನಡದವರೆನ್ನುವಂತಹ ರೀತಿಯಲ್ಲಿ ಪ್ರಸ್ತುತಪಡಿಸಿದೆ. ಎಲ್ಲವೂ ಹೊಚ್ಚಹೊಸತೆನ್ನುವ ಅನುಭವವನ್ನು ನೀಡಿದೆ. ಯೋಗರಾಜ ಭಟ್ಟರಿಗೆ ಹೊಸ ಭವಿಷ್ಯವನ್ನೂ ನಿರ್ಮಿಸಿದೆ. ಜಯಂತ ಕಾಯ್ಕಿಣಿಯವರಿಗೆ ಕನ್ನಡ ಚಲನಚಿತ್ರದಲ್ಲಿ ಭದ್ರವಾಗಿ ತಳವೂರಬಹುದು ಎನ್ನುವ ಆತ್ಮವಿಶ್ವಾಸ ತಂದುಕೊಟ್ಟಿರಲೂಬಹುದು. ಸದಭಿರುಚಿ ಸಿನೆಮಾ ಮಾತ್ರ ಮಾಡುವ ಒತ್ತಡವನ್ನು ಗೊತ್ತಿಲ್ಲದೆಯೇ ತಲೆಯಮೇಲೆ ಹಾಕಿಕೊಂಡಿರುವ ಹೊಸ ನಿರ್ಮಾಪಕನನ್ನು ಕನ್ನಡಕ್ಕೆ ತಂದಿದೆ. ಅಂದುಕೊಂಡಂತೆಯೇ, ಮುಂಗಾರು ಮಳೆ ರಾಜ್ಯಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಇದನ್ನು 'ಮುಂಗಾರು ಮಳೆ'-ಯೆನ್ನದೇ ಮತ್ತೇನೆಂದು ಕರೆದಿದ್ದರೂ ಕಡಿಮೆಯಾಗುತ್ತಿತ್ತು. ಚಿತ್ರದ ಆತ್ಮಗೀತೆ ಹೀಗಿದೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ
ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಮಳೆಯ ಜಡಿಮಳೆಗೆ
ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ
ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ
ತಿಳಿಯದಾಗಿದೆ
ಈ ಹಾಡನ್ನು ಮುಂಗಾರು ಮಳೆ ಚಿತ್ರದ ಬಗ್ಗೆಯೂ ಹೇಳಬಹುದಲ್ಲವೆ?