ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Sunday, July 02, 2006

ಪ್ರತಿಕ್ರಿಯೆಗಳ ಪ್ರಪಂಚದಲ್ಲಿ: ಚೆಲ್ಲಾ ಪಿಲ್ಲಿ ಆಲೋಚನೆಗಳು


ಕನ್ನಡದ ಸುಪ್ರಸಿದ್ಧ ಸಾಹಿತಿಯೊಬ್ಬರಿದ್ದಾರೆ. ಅವರ ಬರವಣಿಗೆಯ ಮಿಂಚು, ಹೊಳಹು, ಜೀವ, ಅರ್ಥಸಂಪತ್ತು ಎಲ್ಲವೂ ನನಗೆ ಇಷ್ಟ. ಅವರ ಅನೇಕ ನಿಲುವುಗಳು ನನ್ನ ವೈಯಕ್ತಿಕ ರಾಜಕೀಯ ನಿಲುವುಗಳಿಗೆ ಹತ್ತಿರವಾಗಿದೆ. ಒಂದು ಬಗೆಯಲ್ಲಿ ಕ್ರಾಂತಿಕಾರಿಗಳೂ ಸಹ. ಈ ಕ್ರಾಂತಿಯೇ ಕಾರಣವಾಗಿ ನಮ್ಮ ಮನೆಗಳಲ್ಲಿ ಅವರನ್ನು ಕಂಡರೆ ಮೂಗು ಮುರಿಯುವವರು ಬಹಳ. ಆ ಸಂದರ್ಭಗಳಲ್ಲೆಲ್ಲಾ ನಾನು ತಾಳ್ಮೆಯಿಂದ ಅವರನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಅದೇ ಆಫೀಸಿನಲ್ಲಿ ಯಾರಾದರೂ ಅವರನ್ನು ಹೀಯಾಳಿಸಿದರೆ ದೊಡ್ಡ ಇಂಟಲೆಕ್ಚುಯಲ್ ಪೋಸು ಕೊಡುತ್ತಾ ಅವರ ಮಟ್ಟಕ್ಕೆ ನೀವೆಲ್ಲ ಅಲ್ಲ ಎನ್ನುವ ಅರ್ಥದಲ್ಲಿ, ನಿಮ್ಮ ಈ ನಿಲುವುಗಳಿಗೆ ನಿಮ್ಮ ಸ್ವಾರ್ಥ ಮತ್ತು ಕೂಪಮಂಡೂಕತನ ಕಾರಣ ಎಂಬಂತೆ ಆಡುತ್ತೇನೆ. ಅವರ ಬೌದ್ಧಿಕ ಪ್ರಭೆಯ ಕುರಿತು ಯಾವುದಾದರೂ ಒಂದು ನಿದರ್ಶನವನ್ನು ನೀಡುತ್ತೇನೆ. ಅದರೆ, ಸಾಹಿತ್ಯ ವಲಯದ ನನ್ನ ಸ್ನೇಹಿತರು ಟೀಕಿಸಿದರೆ ಗಮನವಿಟ್ಟು ಕೇಳಿಸಿಕೊಳ್ಳುತ್ತೇನೆ. ಸಾಹಿತ್ಯಕ ಕಾರ್ಯಕ್ರಮದಲ್ಲಿ ಯಾರಾದರೂ ಟೀಕಿಸಿದರೆ ಟೀಕಿಸುತ್ತಿರುವವರು ಯಾರು ಮತ್ತು ಅದು ಯಾವ ಕಾರ್ಯಕ್ರಮ ಎನ್ನುವ ಹಿನ್ನೆಲೆಯಲ್ಲಿ ಟೀಕೆಯನ್ನು ಅರ್ಥೈಸಲು ಪ್ರಯತ್ನಿಸುತ್ತೇನೆ. ಕನಸಿನಲ್ಲೂ ವಾಸ್ತವದಲ್ಲೂ ಅವರನ್ನು ಮೆಚ್ಚುತ್ತೇನೆ. ಖಾಸಗೀ ಮೌನದಲ್ಲಿ ಅವರ ಕುರಿತ ಟೀಕೆಯನ್ನು ನನ್ನದೇ ಆತ್ಮಶೋಧನೆಗೆ ದುಡಿಸಿಕೊಳ್ಳುತ್ತೇನೆ.

ಕನ್ನಡದ ಮತ್ತೊಬ್ಬ ಹಿರಿಯ ಸಾಹಿತಿಯೊಬ್ಬರಿದ್ದಾರೆ. ಚಿಕ್ಕಂದಿನಲ್ಲಿ ನಾನು ಅವರ 'ಫ್ಯಾನ್' ಆಗಿದ್ದ, ಏನೆಲ್ಲ ಕಾರಣಗಳಿಗೆ ಎಂದು ವಿವರಿಸುವುದು ಕಷ್ಟ, ಅಷ್ಟೊಂದು ಪ್ರಭಾವಿತನಾಗಿದ್ದೆ. ಈಗ ಅರ್ಧ ಭ್ರಮನಿರಸನವಾಗಿದೆ. ಅನೇಕ ರೀತಿಗಳಲ್ಲಿ ಅವರೂ ಕ್ರಾಂತಿಕಾರಿಗಳೇ ಸರಿ. ಅವರು ಕನ್ನಡದಲ್ಲೇ ಮಾತನಾಡಲಿ ಅಥವಾ ಇಂಗ್ಲೀಷಿನಲ್ಲೇ ಮಾತನಾಡಲಿ ಆಕರ್ಷಕವಾಗಿರುತ್ತಿತ್ತು. (ಈಗ ಅವರು ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಹೃದಯಕ್ಕೆ ತಟ್ಟುತ್ತದೆ). ಅವರನ್ನು ಮನೆಯಲ್ಲಿ ಯಾರಾದರೂ ಅನುಮಾನಿಸಿದರೆ ಸುಮ್ಮನಿದ್ದುಬಿಡುತ್ತೇನೆ. ಕಛೇರಿಯಲ್ಲಿ ಯಾರಾದರೂ ಹೊಗಳಿದರೂ ಸುಮ್ಮನಿದ್ದುಬಿಡುತ್ತೇನೆ, ಒಂದು ಸಣ್ಣ ಅನುಮಾನವನ್ನು ತೇಲಿಬಿಡುತ್ತೇನೆ. ಯಾರಾದರೂ ತೆಗಳಿದರೆ ಒಳಗೊಳಗೇ ಖುಷಿ ಪಡುತ್ತೇನೆ. ಎರಡನ್ನೂ ಅರ್ಧ ಅನುಮೋದಿಸುತ್ತೇನೆ, ಇನ್ನರ್ಧ ನಿರಾಕರಿಸುತ್ತೇನೆ. ಸಾಹಿತ್ಯಕ ವಲಯಗಳಲ್ಲಿ ಅವರನ್ಯಾರಾದರೂ ಟೀಕಿಸಿದರೆ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ, ಯಾವುದಾದರೂ ಕಾರ್ಯಕ್ರಮದಲ್ಲಿ ಅವರನ್ನು ಟೀಕಿಸಲು ಸಾಧ್ಯವೇ ಎಂದು ಕಾಯುತ್ತಿರುತ್ತೇನೆ. ಕನಸಿನಲ್ಲಿ ಮಾತ್ರ ಇವರನ್ನು ಮೆಚ್ಚುತ್ತೇನೆ. ನಿಸ್ಸಂಶಯವಾಗಿ, ನನ್ನ ರಾಜಕೀಯ ನಿಲುವುಗಳಲ್ಲಿ ಇವರ ಜೊತೆ ಅಲ್ಪವಾದ ಹೊಂದಾಣಿಕೆ ಇದೆ. ಖಾಸಗೀ ಮೌನದಲ್ಲಿ ನನ್ನ ಬಾಲ್ಯಕಾಲದ ಹೀರೋಗಳಾದ ಇವರ ನಿಲುವುಗಳನ್ನು ತೀವ್ರವಾಗಿ ಟೀಕಿಸುವ ಸ್ಥಿತಿ ಬಂದಿತಲ್ಲಾ ಎಂದು ಶೋಕಿಸುತ್ತೇನೆ. ಅವರನ್ನು ಅಖಂಡವಾಗಿ ಒಪ್ಪಿಕೊಳ್ಳುವ ಕಾಲ ಬರಬಹುದೇ ಎಂದು ತವಕಿಸುತ್ತೇನೆ.

ಹೀಗೆ, ನಾನು ಒಂದು ವ್ಯಕ್ತಿ-ವಿಷಯಕ್ಕೆ ಯಾವ ರೀತಿಯ ಪ್ರಕ್ತಿಕ್ರಿಯೆ ನೀಡುತ್ತೇನೆನ್ನುವುದು ವ್ಯಕ್ತಿ, ಪರಿಸರ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿದೆ. ಈ ಯಾವುದಾದರೂ ಒಂದನ್ನು ಮಾತ್ರ ಗಮನಿಸಿದ ಮನುಷ್ಯನಿಗೆ ಸತ್ಯದ ಹತ್ತಿರವೂ ಸುಳಿದಾಡಲು ಸಾಧ್ಯವಾಗಿರುವುದಿಲ್ಲ. ಸೂಕ್ಷ್ಮನಾದ ಮನುಷ್ಯ ಅದನ್ನು ತಿಳಿದಿರುತ್ತಾನೆ. ಇದೆಲ್ಲವನ್ನೂ ಗಮನಿಸಿರಬಹುದಾದ ಮನುಷ್ಯ, ನನ್ನ ನಿಜವಾದ ನಿಲುವೇನು ಎಂದು ಅರ್ಥೈಸಲು ಪ್ರಯತ್ನಿಸಿದರೆ ಗೊಂದಲದಲ್ಲಿ ಬೀಳಬಹುದು. ಇದು ಹಾಗಿರಲಿ, ನನ್ನಲ್ಲೇ ಗೊಂದಲವೊಂದಿದೆ. ಈ ಯಾವ ರಾಜಕೀಯವೂ ಸೋಂಕದೇ ಇರುವಂತಹ ಹತ್ತಿರದವರು ಯಾರಾದರೂ ನನಗಿದ್ದರೆ ಅವರ ಜೊತೆ ಇವರಿಬ್ಬರನ್ನೂ ಹೇಗೆ ವಿವರಿಸುತ್ತಿದ್ದೆ ಎಂದರೆ 'ಇವರಿಬ್ಬರ ಬಗೆಗೆ ಮಾತನಾಡುತ್ತಲೇ ಇರುತ್ತಿರಲಿಲ್ಲವೇನೋ' ಎನ್ನುವ ಭಯದ ಉತ್ತರ ನನ್ನಲ್ಲಿ ಮೂಡುತ್ತಿದೆ. ಹಾಗಿದ್ದರೆ ಇವರಿಬ್ಬರಿಗೂ ನಾನು ಕಲ್ಪಿಸಿರುವ ಸಾಂಸ್ಕೃತಿಕ ಪ್ರಾಮುಖ್ಯತೆ ಸಾರ್ವತ್ರಿಕವಲ್ಲ ಎಂದೇ? ಇದೆಲ್ಲದರ ನಡುವೆ ಈ ಈರ್ವರ ಕುರಿತು ನನಗೇ ಒಂದು ಅಖಂಡವಾದ ನಿಲುವಿದೆಯೇ ಎಂದರೆ, ಉತ್ತರಿಸುವುದು ಕಷ್ಟವಾಗುತ್ತಿದೆ, ನನಗೇ ತಿಳಿದಿಲ್ಲವೆನ್ನಬೇಕಾಗುತ್ತದೆ.

ಇಷ್ಟೆಲ್ಲಾ ಸಂಕೀರ್ಣತೆಯಿರುವಾಗ, ನಾವು ಯಾವ ವ್ಯಕ್ತಿ-ವಿಷಯಕ್ಕೆ ಯಾವ ರೀತಿ ಪ್ರತಿಕ್ರಯಿಸಬೇಕು? ಇನ್ನಿತರರ ಪ್ರತಿಕ್ರಿಯೆಗಳನ್ನು ಹೇಗೆ ಗಮನಿಸಬೇಕು? ಆ ಕುರಿತು ನಮ್ಮ ಮತ್ತು ಇತರರ ಪ್ರಾಮಾಣಿಕತೆಯನ್ನು, ಅನುಭವಕ್ಕೆ ಅಧಿಕೃತತೆಯನ್ನು, ರಾಜಕೀಯವನ್ನು ಹೇಗೆ ಗಮನಿಸಬೇಕು? ಎನ್ನುವುದು ನನಗಿನ್ನೂ ಗೊಂದಲದ ಸಂಗತಿಯಾಗೇ ಉಳಿದಿದೆ.

ಇತ್ತೀಚೆಗೆ ಎಸ್. ದಿವಾಕರ್ ಪ್ರಜಾವಾಣಿಯಲ್ಲಿ ಸಮಕಾಲೀನ ವಿದ್ಯಮಾನಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಕಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿದರೆ ದಿವಾಕರ್ ಯಾವ ವಿಷಯಗಳಿಗೆ ಗಮನ ಸೆಳೆಯಬೇಕೆಂದಿದ್ದರೋ ಅದಕ್ಕೆ ಹೊರತಾದ ಉದ್ದೇಶವುಳ್ಳ ಪ್ರತಿಕ್ರಿಯೆಗಳೂ ಬಂದವು. ಅದಕ್ಕಿಂತ ಬರೆದವರು ಯಾವ ವರ್ಗ, ಗುಂಪಿನವರು, ಟೀಕಿಸಿಕೊಂಡವರು ಯಾರು ಎನ್ನುವುದೇ ಮುಖ್ಯವಾಯಿತು. ದಿವಾಕರ್ ಕೂಡಾ ಸ್ಪಷ್ಟವಾಗಿ ತಮ್ಮ ಅಸಹನೆಯನ್ನು ದಾಖಲಿಸದೇ ಗೊಂದಲಮಯವಾಗಿ ಬರೆದರು. (ತಾವು ಗ್ರಹಿಸಿದಂತೆ) ಸಿದ್ಧತೆಯಿಲ್ಲದೇ ವಾಕ್‍ಸ್ವಾತಂತ್ರ್ಯವನ್ನು, ಬೌದ್ಧಿಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು, ಪೂರ್ವಾಗ್ರಹಪೀಡಿತರಾಗಿ ಬೇಜವಾಬ್ದಾರಿಯಾಗಿ ಮಾತನಾಡುವುದನ್ನು ಟೀಕಿಸುವ ಭರದಲ್ಲಿ, ತಾವೇ ಬೀಳಬಹುದಾದ ಅನೇಕ ಗುಂಡಿಗಳನ್ನು ತೋಡಿಕೊಂಡರು. 'ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಕಡಿವಾಣ ಬೇಕು' ಎಂದು ತಪ್ಪಾಗಿಯಾದರೂ ಅರ್ಥೈಸಬಹುದಾದ್ದನ್ನು ಅವರೇಕೆ ಬರೆದರು ಎಂದು ನನಗೆ ಆಶ್ಚರ್ಯವಾಗುತ್ತದೆ. ಅವರ ಅದೆಷ್ಟು ಬರಹಗಳನ್ನು ಓದಿ ಆನಂದಿಸಿದ್ದ ನನಗೆ ಈ ವಿಷಯದಲ್ಲಿ ಭಾಷೆ ಹೇಗೆ ಇವರ ಕೈಕೊಟ್ಟಿತು ಎಂದು ದಿಗ್ಭ್ರಮೆಯಾಗುತ್ತಿದೆ. ಯಾರು ಏನೇ ಅಮೌಲಿಕವಾದ್ದನ್ನು ಹೇಳಲಿ (ಹೇಳಿಯೇ ಹೇಳುತ್ತಾರೆ, ತಡೆಯುವುದು ಅಸಾಧ್ಯ ಮತ್ತು ತಪ್ಪು). ಅದಕ್ಕೆ ಪ್ರತಿಯಾಗಿ ಮೌಲಿಕವಾದ್ದು ಸೃಷ್ಟಿಯಾಗಿ ಜನರಿಗೆ ಅದನ್ನು ತಲುಪಿಸುವ ಕುರಿತು ಪ್ರಯತ್ನಿಸುವುದಷ್ಟೇ ನಾವು ಮಾಡಲು ಸಾಧ್ಯ ಎನ್ನುವ ಪಕ್ಷದಲ್ಲಿ ದಿವಾಕರರ ಆತಂಕಕ್ಕೆ ಅರ್ಥವಿಲ್ಲ. ಆದರೆ, ದಿವಾಕರರ ಆತಂಕವನ್ನು ಈ ದಿಶೆಯಲ್ಲಿ ಒಂದು ಪ್ರಯತ್ನ ಎಂದು ಗಮನಿಸಿದ ಪಕ್ಷದಲ್ಲಿ, ಪ್ರತಿಕ್ರಿಯೆಗಳನ್ನು ಗಮನಿಸಬೇಕಾದ ರೀತಿ, ಅವುಗಳ ಪ್ರಾಮುಖ್ಯತೆ ಮನಗಾಣುತ್ತದೆ. ಉದಾಹರಣೆಗೆ, ಇದೆಲ್ಲದರಿಂದ ನನಗಾದ ಲಾಭ ನೋಡಿ. ಬಹುದಿನಗಳಿಂದ ತಂದಿಟ್ಟುಕೊಂಡು ಓದದೇ ಇದ್ದ ಪುತಿನನರವರ ಸಮಗ್ರ ಗದ್ಯ ಓದಲು ತೊಡಗಿದ್ದೇನೆ. ಅದರಲ್ಲವರು ಮಾಸ್ತಿಯವರ, ಕುವೆಂಪುರವರ ಕುರಿತು ಬರೆದಿರುವ ಲೇಖನಗಳು, ಪುಣ್ಯಕೋಟಿ ಕಥನ ಕವನ ಕುರಿತಾದ ಲೇಖನ ಎಲ್ಲವನ್ನೂ ಓದುತ್ತಾ ಪ್ರಯೋಜನ ಪಡೆಯುತ್ತಿದ್ದೇನೆ. ದಿವಾಕರ್ ಮತ್ತು ಕೃಷ್ಣಮೂರ್ತಿಯವರಿಗೆ ಋಣಿಯಾಗಿದ್ದೇನೆ. ಇವತ್ತಿನ ಪ್ರಜಾವಾಣಿಯಲ್ಲಿ ಕೃಷ್ಣಮೂರ್ತಿಯವರ ಪ್ರತಿಕ್ರಿಯೆಯನ್ನೋದಿದರೆ, ದಿವಾಕರರಿಗೆ ಕೊಂಚವಾದರೂ ತಪ್ಪುಗ್ರಹಿಕೆಯಾಗಿರುವುದು ಗೊತ್ತಾಗುತ್ತದೆ. ಆದರೆ, ಮತ್ತೆ ನಾಳೆ ದಿವಾಕರ್ ಏನಾದರೂ ಪ್ರತಿಕ್ರಯಿಸಿದರೆ ಅವರೇ ಸರಿಯೇನೋ ಅನ್ನಿಸಬಹುದು. ಅರ್ಥಾತ್, ಈ ಸರಣಿಯನ್ನು ಮತ್ತಷ್ಟು ಎಳೆದರೆ ನಮಗೇನಾದರೂ ದೊರೆತೀತೇ?

ಕಳೆದ ಅನೇಕ ದಿನಗಳಿಂದ ಅದೆಷ್ಟು ಪ್ರತಿಕ್ರಿಯೆ, ದೋಷಾರೋಪಣೆ, ಟೀಕೆ, ಅವಾಂತರ, ಕೊಚ್ಚೆ, ರಾಡಿಗಳನ್ನು ಗಮನಿಸಿದ್ದೇವೆ. ದೂರದಲ್ಲಿ ನಿಂತ ನನಗೆ ಇದರಲ್ಲಿ ಬಹುತೇಕ ಅನಗತ್ಯವಾಗಿತ್ತು ಎಂದೇ ಅನ್ನಿಸುತ್ತಿದೆ. ವಿಚಾರಕ್ಕಷ್ಟೇ ನಮ್ಮ ಬದ್ಧತೆಯಾಗಿದ್ದಲ್ಲಿ ಇದು ಸಾಧ್ಯವಾಗುತ್ತಿತ್ತೇನೋ. ಆದರೆ, ವ್ಯಕ್ತಿಗಳನ್ನು ಮರೆತು ನಾವು ವಿಚಾರಗಳ ಕುರಿತು ಬರೆಯಲಾಗದೇ ಹೋಗುವುದರಿಂದ ವ್ಯಂಗ್ಯ ಬಳಸದೇ ಇರಲಾರೆವು. ಅಗತ್ಯವಾದಲ್ಲೂ, ಬರವಣಿಗೆಗೆ ಹೆಚ್ಚು ಖಚಿತತೆಯನ್ನು ತರಲಾರೆವು. ನಮ್ಮ ಮಿತಿಗಳನ್ನು ನೋಡಿದರೆ ಅದೇಕೋ ಭಯವಾಗುತ್ತದೆ.

ಇನ್ನು ಕೆಲವೊಮ್ಮೆ ಯಾರು ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದರಿಂದ ವಿಷಯಗಳ ಪ್ರಾಮುಖ್ಯತೆಯನ್ನೇನಾದರೂ ಅಳೆಯಹೋದರೆ ನಾವು ಬೀಳಬಹುದಾದ ಬಾವಿಯಿಂದೀಚೆ ಬರುವುದು ಕಷ್ಟ. ಕೆಲ ವರ್ಷಗಳ ಹಿಂದೆ ಪಂಡಿತ್ ರವಿಶಂಕರರಿಗೆ ಭಾರತ ರತ್ನ ಪ್ರಶಸ್ತಿ ಬಂದಿತು. ಅಸಹನೆಗೆ ಅದೇನು ಇತಿಹಾಸವಿತ್ತೋ, ಪಂಡಿತ್ ಜಸರಾಜರು ರವಿಶಂಕರರ ಮೇಲೆ ಹರಿಹಾಯ್ದರು. ಅದನ್ನು ನೋಡಿ ನಿಜಕ್ಕೂ ಮೋಜೆನ್ನಿಸಿತ್ತು, ದುಃಖವೂ ಸಹ. ದಿಗ್ಭ್ರಮೆಯಾದದ್ದು, ಗಿರೀಶ್ ಕಾರ್ನಾಡರಿಗೆ ಈ ವಿಷಯದಲ್ಲಿ ಪ್ರತಿಕ್ರಯಿಸಬೇಕು ಎನ್ನಿಸಿದ್ದಕ್ಕೆ. ಡೆಕ್ಕನ್ ಹೆರಾಳ್ಡಿನಲ್ಲಿ ಅವರದ್ದೊಂದು ಪತ್ರ ದಾಖಲಾಗಿತ್ತು, ಜಸರಾಜರನ್ನು ಖಂಡಿಸಿ ರವಿಶಂಕರರನ್ನು ಮೆಚ್ಚುತ್ತಾ ಅವರು ಪಾಶ್ಚಾತ್ಯರೊಂದಿಗೆ ಮುಖಾಮುಖಿಯಾದ ರೀತಿಯನ್ನು ಪ್ರಸ್ತಾಪಿಸಿದ್ದರು. ಕೆಲ ದಿನಗಳ ನಂತರ ಭಕ್ತವತ್ಸಲರು ಪ್ರತಿಕ್ರಯಿಸಿ ಕಾರ್ನಾಡರನ್ನು ಟೀಕಿಸಿದ್ದು ನನಗೆ ಸರಿಯೆನ್ನಿಸಿತ್ತು. ಇತ್ತೀಚೆಗೆ ಸಂಗೀತ ನಾಟಕ ಅಕ್ಯಾಡಮಿಯ ಅಧ್ಯಕ್ಷೆ ಸೋನಾಲ್ ಮಾನ್‍ಸಿಂಘ್ ಮತ್ತು ಇತರ ಸದಸ್ಯರ ನಡುವಣ ದೋಷಾರೋಪಣೆ ಆರಂಭವಾಗಿತ್ತು. ಆಂತರಿಕ ಭಿನ್ನಾಭಿಪ್ರಾಯವನ್ನು ಸದಸ್ಯರೇ ಸೇರಿ ಸರಿಪಡಿಸಿಕೊಳ್ಳಬೇಕಾದ್ದು ಸರಿಯಾದ ನಡವಳಿಕೆ ಎಂದು ನನ್ನ ಅಭಿಪ್ರಾಯ. ಅತ್ಯಾಶ್ಚರ್ಯಕರ ರೀತಿಯಲ್ಲಿ ಕಾರ್ನಾಡ್ ಪ್ರತಿಕ್ರಯಿಸಿ 'ಒಮ್ಮೊಮ್ಮೆ ಅಧ್ಯಕ್ಷರಿಗೆ ಪರಮಾಧಿಕಾರ ಇರಬೇಕಾಗುವುದು ಅಗತ್ಯ' ಎನ್ನುವ ರೀತಿಯ ಹೇಳಿಕೆ ಕೊಟ್ಟು, ಪರೋಕ್ಷ್ಯವಾಗಿ ಸೋನಾಲ್-ರಿಗೆ ಬೆಂಬಲ ಸಿಗುವ ಹಾಗೆ ಮಾಡಿಬಿಟ್ಟರು. ಹೆವಿವೈಟ್-ಆದ ಕಾರ್ನಾಡರು ಹೀಗೆಂದ ತಕ್ಷಣವೇ ಪ್ರಕರಣ ತನ್ನ ಸಹಜ ಗತಿಯಿಂದ ಅಸಹಜ ಗತಿ ಪಡೆದುಬಿಟ್ಟಿತು, ಪರಿಹಾರ ಜನಹಿತವನ್ನು ಒಳಗೊಂಡಿತೋ ಇಲ್ಲವೋ ಹೇಳಲಿಕ್ಕಾಗದೇ ಹೋಯಿತು. ಈ ಎರಡು ವಿಷಯಗಳಲ್ಲೂ ಪ್ರತಿಕ್ರಿಯೆ ಕೊಡುವುದು ಕಾರ್ನಾಡರ ವೈಯಕ್ತಿಕ ಹಕ್ಕು. ಆದರೆ, ವೈಯಕ್ತಿಕ ಕಾರಣಗಳಿಂದ ಹೊರಹೊಮ್ಮಿರಬಹುದಾದ ಈ ಪ್ರತಿಕ್ರಿಯೆಗಳು ಪತ್ರಿಕೆಗಳಲ್ಲಿ ಬಂದಕೂಡಲೆ ಸಾರ್ವಜನಿಕ ಆಯಾಮವನ್ನು ಪಡೆದುಕೊಳ್ಳುತ್ತವೆ. ಆ ನಂತರ ಸಾಮಾನ್ಯರಾದ ನಾವು ಅದನ್ನು ಹೇಗೆ ಪರಿಗಣಿಸಬೇಕು? ಅದರ ಅಗತ್ಯ, ಮೌಲ್ಯ, ಪ್ರಾಮುಖ್ಯತೆಗಳ ಕುರಿತು ನಮ್ಮದೇ ಆದ ನಿಲುವುಗಳನ್ನು ಹೊಂದಲೇಬೇಕಾಗುತ್ತದೆ. ಒಂದು ಅಮುಖ್ಯವಾದ ವಿಚಾರಕ್ಕೆ ದೊಡ್ಡವರು ಪ್ರತಿಕ್ರಯಿಸಿ ನಮಗೆ ಮುಖ್ಯ ಎನ್ನಿಸಿದ ವಿಚಾರಗಳಿಗೆ ಅವರಿಂದ ಪ್ರತಿಕ್ರಿಯೆಯೇ ಇಲ್ಲದಿದ್ದರೆ, ಮೋಜೆನ್ನಿಸದಿರದು, ವಿಷಾದ ಮೂಡದೇ ಇರುವುದಿಲ್ಲ.

ಎರಡು ವಾರದ ಹಿಂದೆ ಮ್ಯಾಕ್ಸ್ ಮುಲ್ಲರ್ ಭವನದಲ್ಲೊಂದು ಚರ್ಚೆಯಿತ್ತು, ಬೆಂಗಳೂರಿನ ಕುರಿತಾಗಿ, ಜರ್ಮನ್ ಸಾಹಿತಿಯೊಬ್ಬರು ಬೆಂಗಳೂರಿನಲ್ಲಿ ಕೆಲ ವಾರಗಳನ್ನು ಕಳೆದು ತಮ್ಮ ಅನುಭವವನ್ನು ದಾಖಲಿಸಿ ಹಿಂದಿರುಗುತ್ತಿದ್ದ ಪ್ರಯುಕ್ತ. ಸಾಹಿತಿ ಕಾರ್ನಾಡ್, ಆರ್ಕಿಟೆಕ್ಟ್ ದಂಪತಿಗಳಾದ ದಿಲೀಪ್ ಡಾಕುನ್ಹ, ಅನುರಾಧಾ ಮಾಥುರ್, ಪತ್ರಕರ್ತೆ ಸಿಕೆಮೀನ ಪ್ಯಾನಲ್ ಸದಸ್ಯರಾಗಿದ್ದರು. ಮತ್ತೊಬ್ಬ ಪತ್ರಕರ್ತೆ ನೂಪುರ್ ಬಾಸು ಸೂತ್ರಧಾರಿಣಿಯಾಗಿದ್ದರು. ಜರ್ಮನ್ ಸಾಹಿತಿಯೂ ಇದ್ದರು. ಅನಂತಮೂರ್ತಿಗಳೂ ಇರಬೇಕಿತ್ತು. (ನಮ್ಮ) ದುರದೃಷ್ಟ, ಅರೋಗ್ಯ ಸರಿಯಿಲ್ಲದ ಕಾರಣ ಬಂದಿರಲಿಲ್ಲ.

ಮಾತು ಬೇಡಬೇಡವೆಂದರೂ 'ಬೆಂಗಳೂರು ಮತ್ತು ಬ್ಯಾಂಗಲೋರ್' ಕಡೆಗೇ ಹರಿಯಿತು. ಕಂಟೋನ್ಮೆಂಟ್-ನವರಾದ ದಿಲೀಪ್ ಇದರಿಂದ ವ್ಯಸ್ತರಾದಂತೆ ಕಂಡಿತ್ತು. ಬೆಂಗಳೂರಿನ ಬಹುಮುಖೀ ಹುಟ್ಟು-ಬೆಳವಣಿಗೆಗಳನ್ನು ವಿವರಿಸುತ್ತಾ, ಇದಕ್ಕೆ ಏಕಮುಖವಾದ 'ಬೆಂಗಳೂರನ್ನು' ತೊಡಿಸುವುದು ಅಸಹಜ ಎಂದರು. ಹೆಚ್ಚು ಕಡಿಮೆ ಅವರ ಎಲ್ಲಾ ವಾದಗಳಿಗೂ ಕಾರ್ನಾಡ್ ತಮ್ಮ ಒಪ್ಪಿಗೆಯನ್ನಿತ್ತರು. ಮುಂದುವರೆದ ಕಾರ್ನಾಡರು, ನಮ್ಮ ಅನೇಕ ಇಮೇಜ್-ಗಳು ಅದೆಷ್ಟು ಸಿಂಥೆಟಿಕ್-ಆಗಿವೆ, ಅವುಗಳಿಗೆ ಐತಿಹಾಸಿಕ ಅಧಿಕೃತತೆಯಿಲ್ಲವೆಂದರು (ಯಾವ ಇಮೇಜ್-ಗೆ ಐತಿಹಾಸಿಕ ಅಧಿಕೃತತೆಯಿದೆ ಎಂದು ಕೇಳಬೇಕೆನ್ನಿಸುತ್ತಿತ್ತು). ನನಗೆ ದಿಲೀಪರ ಪ್ರಾಮಾಣಿಕತೆಯಲ್ಲಿ ಅಷ್ಟೇನೂ ಅನುಮಾನವಿಲ್ಲ. ಅವರು ಅಂತಃಕರಣದಿಂದ ಮಾತನಾಡಿದ ಹಾಗೆ, ಬುದ್ಧಿಯನ್ನು ಅತಿಯಾಗಿ ಅವಲಂಬಿಸದೇ ಮಾತನಾಡಿದ ಹಾಗೇ ತೋರಿತು. ಅವರ ಮತ್ತು ಕಾರ್ನಾಡರ ಅಭಿಪ್ರಾಯಗಳಿಗೆ ನನ್ನ ಸಹಮತವಿಲ್ಲ, ಅಷ್ಟೆ.

ನನ್ನ ವಾದ ಇಷ್ಟು. ಬ್ರಿಟಿಷರು ಮೈಸೂರನ್ನು ಆಳುವ ಸಲುವಾಗಿಯೇ ಕಂಟೊನ್ಮೆಂಟನ್ನು ಬಲಪಡಿಸಿದರು. ಅದೇ ಕಾರಣಕ್ಕಾಗಿ, ಕಂಟೋನ್ಮೆಂಟಿನಲ್ಲಿ 'ಮೈಸೂರು ರಾಜ್ಯ ಮತ್ತು ಸಂಸ್ಕೃತಿಗಳಿಂತ ಮೇಲು' ಎನ್ನುವ ಭಾವ ಆಳದಲ್ಲಿ ಗಟ್ಟಿಯಾಗಿರುವ ವರ್ಗವನ್ನು ಸೃಷ್ಟಿಸುವ ಅವಶ್ಯಕತೆ ಅವರಿಗಿದ್ದಿತ್ತು. ಬ್ರಿಟಿಷರ ಈ ಅಭಿವ್ಯಕ್ತಿಯೇ ಕಂಟೋನ್ಮೆಂಟ್. ಈ ಪ್ರಕ್ರಿಯೆ ಆಳವಾಗಿ ಇನ್ನೂ ಅಲ್ಲಿ ಬೇರೂರಿದೆ ಎನ್ನುವುದು ನನ್ನ ಅಭಿಪ್ರಾಯ. ಸುಮಾರು ೨೦೦ ವರ್ಷ ತನ್ನ ಸುತ್ತಮುತ್ತಣ ಕನ್ನಡ ಸಂಸ್ಕೃತಿಯನ್ನು ಸಹಜವಾದ ಮಾನವೀಯ ಆಸಕ್ತಿಯಿಂದ ಗಮನಿಸುವುದೇ ಕಂಟೊನ್ಮೆಂಟಿಗೆ ಸಾಧ್ಯವಾಗಲಿಲ್ಲ. ಈ ಅಸಹಜತೆಯ ಪರಿಣಾಮ ಬ್ಯಾಂಗಲೋರ್‍-ಗೆ ಬೆಂಗಳೂರನ್ನು ಒಳಗೊಳ್ಳುವುದು ಸಾಧ್ಯವೇ ಆಗಲಿಲ್ಲ (ಇವತ್ತಿಗೂ ಕನ್ಟೋನ್ಮೆಂಟ್-ಅನ್ನು ಜೀವಂತವಾಗಿ ಗಮನಿಸುವ ಬಸವನಗುಡಿ, ಮಲ್ಲೇಶ್ವರ, ಹನುಮಂತನಗರಗಳಿವೆ. ಆದರೆ, ಕನ್ಟೋನ್ಮೆಂಟ್ ಇವುಗಳ ಬಗ್ಗೆ ಯಾವ ಧೋರಣೆಯನ್ನು ಹೊಂದಿದೆ). ೧೯೫೬-ರ ನಂತರ ಅಖಿಲಕರ್ನಾಟಕಕ್ಕೆ (ಇದಕ್ಕೆ ರಾಷ್ಟ್ರೀಯತೆಯ ಅಧಿಕೃತತೆಯಿದೆ) ರಾಜಧಾನಿಯಾದ ಕಾರಣ - ಬೆಂಗಳೂರು-ಬ್ಯಾಂಗಲೋರ್ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನವೀಯತೆಯಿಂದ ಅಖಿಲಕರ್ನಾಟಕಕ್ಕೆ ಒದಗಬೇಕು ಎನ್ನುವುದನ್ನು ಬ್ಯಾಂಗಲೋರ್ ಒಪ್ಪಿಕೊಳ್ಳಲಿಲ್ಲ. ಬೆಂಗಳೂರು ಒಪ್ಪಿಕೊಂಡಿತಷ್ಟೇ ಅಲ್ಲ ನಿರ್ವಹಿಸಿತು. ಇವತ್ತಿನ ವಲಸೆಯೆಂದರೆ ಆರ್ಥಿಕ ಕಾರಣಕ್ಕಾಗಿ ಬರುವ ಹೊರರಾಜ್ಯದವರು ಮತ್ತು ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರಣಕ್ಕಾಗಿ ಬರುವ ಬೆಂಗಳೂರಿನಾಚೆಯ ಕನ್ನಡದವರು. ಬೆಂಗಳೂರಿನ ಮೃದುವಾದಿಗಳ ಕೈಬಲಪಡಿಸದೇ ಬ್ಯಾಂಗಲೋರ್ ಪರೋಕ್ಷ್ಯವಾಗಿ ಬೆಂಗಳೂರಿನ ತೀವ್ರವಾದಿಗಳನ್ನು ಆಹ್ವಾನಿಸಿಬಿಟ್ಟಿತು. ಬೆಂಗಳೂರಿನ ಮೆದುವಾದಿಗಳ ಕೈಕಟ್ಟಿ ಹೋಯಿತು. ನಂತರದಲ್ಲೂ ಬ್ಯಾಂಗಲೋರ್ ತನ್ನ ರೀತಿ-ನೀತಿಗಳನ್ನು ಸರಿಪಡಿಸಿಕೊಳ್ಳಲಿಲ್ಲ. ಈಗ ಬೆಂಗಳೂರಾಗುವುದಕ್ಕೆ ಕೊರಗುತ್ತಿದೆ (ಅದಿನ್ನೂ ದೂರವಾಗಿರುವ ಪಕ್ಷದಲ್ಲೂ). ಕನ್ನಡ ನಾಡಿನ ಮೂಲೆಯಿಂದ ಬಂದ ಮನುಷ್ಯನೊಬ್ಬ ಕಂಟೋನ್ಮೆಂಟಿನ ಎಲ್ಲೆಡೆ ಓಡಾಡಿ ಯಾವುದೇ ಪರಕೀಯತೆಯನ್ನನುಭಸಿದೇ ಮನೆಗೆ ಮರಳುವುದು ಸಾಧ್ಯವಿಲ್ಲದಿರುವಾಗ ಬ್ಯಾಂಗಲೋರ್-ನ ದುಃಖ ಪರಿಗಣಿಸಲು ನನಗೆ ನೈತಿಕ ಅಧಿಕಾರವೇ ಇಲ್ಲವಾಗಿದೆ. ಅಷ್ಟರವರೆಗೆ ಬ್ಯಾಂಗಲೋರ್-ನ ದುಃಖ ದೊಡ್ಡದು ಎನ್ನುವವರಿಗೆ ನಾಚಿಕೆಯಿಲ್ಲವೆನ್ನಬೇಕಾಗುತ್ತದೆ. ಬೆಂಗಳೂರಿಗೆ ಯಾರ್‍ಯಾರು ಎಲ್ಲೆಲ್ಲಿಂದ ಬಂದರು ಎನ್ನುವುದೆಲ್ಲಾ ಸರಿಯೇ. ಆದರೆ ಇತಿಹಾಸದಲ್ಲಿ ಅದರ ಸ್ಥಾಯೀ ಸಂಬಂಧ ಮಾತ್ರ ಕನ್ನಡ ಸಂಸ್ಕೃತಿಯ ಜೊತೆಗೇ ಇದೆ, ಎನ್ನುವುದನ್ನು ಕನ್ಟೋನ್ಮೆಂಟ್ ಮನಗಾಣಬೇಕಿದೆ. ಲಾಗಾಯ್ತಿನಿಂದಲೂ, ಆತ್ಮಶೋಧನೆ ಎನ್ನುವುದನ್ನು ನಾನು ಕಂಟೊನ್ಮೆಂಟ್ ಮತ್ತವರ ಸ್ನೇಹಿತರಲ್ಲಿ ನೋಡೇ ಇಲ್ಲ.

ಇಷ್ಟಾದರೂ ಸಂವಾದದಲ್ಲಿ ಕಾರ್ನಾಡರ ತೆಗೆದುಕೊಂಡ ನಿಲುವುಗಳು ನನಗೆ ಕನ್ನಡ ಸಂಸ್ಕೃತಿ ತನ್ನ ಒಳಿತಿಗಾಗಿ ತಾನೇ ರೂಪಿಸಿಕೊಂಡ ಒಳದನಿಯಾಗಿ, ಎಚ್ಚರಿಕೆಯ ಗಂಟೆಯಾಗಿ ಮುಖ್ಯವೆಂದೇ ಎನ್ನಿಸಿದೆ. ಯಾವುದು ಏನೇ ಇರಲಿ, ನಿಧಾನವಾಗಿಯಾದರೂ ಕಂಟೋನ್ಮೆಂಟ್ ಕನ್ನಡ ಸಂಸ್ಕೃತಿಯ ಆಳವಾದ ಪ್ರಭಾವಕ್ಕೊಳಗಾಗಲೇ ಬೇಕಾಗುತ್ತದೆ. ಅದೊಂದು ಪ್ರವಾಹವಾಗಿ ಕಂಟೋನ್ಮೆಂಟ್ ಎನ್ನುವ ಅಸಹಜ ಸಾಂಸ್ಕೃತಿಕ ದ್ವೀಪವನ್ನು ಕೊಚ್ಚಿಹಾಕದೇ ಇತಿಹಾಸವನ್ನು ಮಾನವೀಯವಾಗಿ ಗಮನಿಸುವಂತಾಗಲು ಅವರ ಧ್ವನಿ ಸಹಾಯಕವಾಗುತ್ತದೆ. ಕನ್ನಡ ಸಂಸ್ಕೃತಿ ರೂಪಿಸಿರುವ ಈ ಎಚ್ಚರಿಕೆಯ ಗಂಟೆ, ಅದೇ ಕಾಲದಲ್ಲಿ ಕಂಟೋನ್ಮೆಂಟಿಗೆ ಸ್ವಲ್ಪ ಸಾಲದ ರೂಪದಲ್ಲಿ ಒದಗುವುದಾದರೆ ಒಳಿತು. ಕಂಟೋನ್ಮೆಂಟ್ ಬಚ್ಚಿಟ್ಟುಕೊಂಡಿರುವ ಉಗುರುಗಳು, ಮತ್ತು ಮಧ್ಯೆ ಮಧ್ಯೆ ಅದನ್ನು ಪ್ರಯೋಗಿಸುವ ಬಗೆಗೂ ಕಾರ್ನಾಡರು ಮಾತನಾಡುವ ಕಾಲ ಬರಬಹುದೆನ್ನುವ ಆಶಾಭಾವನೆ ನನಗಂತೂ ಇದೆ, ನೋಡೋಣ.

ಯಾರು ಏನು ಹೇಳುತ್ತಾರೆ ಎನ್ನುವುದು ಒಂದು ಕಾಲಕ್ಕೆ ತುಂಬಾ ಮುಖ್ಯವೆನ್ನಿಸುತ್ತಿತ್ತು. ಆದರೀಗ, ಮಿಕ್ಕವರು ಹೇಳಿರುವುದನ್ನು ಗಮನಿಸುವ, ಅರ್ಥೈಸುವ ರೀತಿ, ಅವುಗಳಿಂದ ನಮಗಾಗುವ ಪ್ರಯೋಜನ ಇದಷ್ಟೇ ಮುಖ್ಯವೆನ್ನಿಸುತ್ತೆ. ವ್ಯಕ್ತಿಗಳನ್ನು ಮರೆಯುವುದೇ ಲೇಸು. ಸಹಸ್ರ ಸಹಸ್ರ ಅವತಾರಗಳಲ್ಲಿ ಬದುಕುತ್ತಿರುವ ವ್ಯಕ್ತಿಗಳ ಮೂಲಕವೇ ಸಾರ್ವಜನಿಕ ವಿಚಾರಗಳನ್ನು ಗಮನಿಸುವುದಾದರೆ ನಮಗೆ ದುರಂತ ಕಾದಿದೆ. ಆದರೆ ಚಿಕ್ಕವಯಸ್ಸಿನಿಂದಲೂ ವ್ಯಕ್ತಿ-ಚಿತ್ರಣಗಳನ್ನೇ ಹೆಚ್ಚಾಗಿ ಪ್ರೀತಿಸಿದ ನನ್ನಂಥವರಿಗೆ ಇದು ಕಷ್ಟ ಸಾಧ್ಯವಾದ ಸಂಗತಿ.

ಈ ನಡುವೆ, ವ್ಯಕ್ತಿಗಳ ಬಿರುಕು ನನಗೆ ಹೆಚ್ಚು ಕಾಣುವುದು ಇಂಗ್ಲೀಷ್ ಮತ್ತು ಕನ್ನಡ ಮಾತನಾಡುವಾಗ. ಕನ್ನಡ ಮಾತನಾಡುವಾಗ ಹೆಚ್ಚು ನಿಜವಾಗಿಯೂ, ಆಪ್ಯಾಯಮಾನರಾಗಿಯೂ ಕಂಡವರು, ಇಂಗ್ಲೀಷ್ ಮಾತನಾಡುವಾಗ ಇದ್ಯಾರೋ ಬೇರೆಯ ವ್ಯಕ್ತಿ ಎನ್ನಿಸುತ್ತದೆಯಲ್ಲ, ಆ ಧ್ವನಿ ಮತ್ತದರ ವಿಚಾರ ಸುಳ್ಳು ಎಂದೆನ್ನಿಸುತ್ತದೆಯಲ್ಲ. ನಮ್ಮ ದೇಶದಲ್ಲಿ ಇವತ್ತಿರುವ ಇಂಗ್ಲೀಷ್ ಮತ್ತು ನಾವು ಇಂಗ್ಲೀಷ್ ಕಲಿಯುತ್ತಿರುವ ರೀತಿಯಲ್ಲೇ ಈ ದೋಷವಿದೆಯೇ ಎಂದು ನನಗೆ ಅನೇಕ ವೇಳೆ ಅನುಮಾನ ಬಂದದ್ದಿದೆ. ಇದು ನನಗಂತೂ ಆತಂಕಕಾರಿಯಾದ ವಿಷಯ. ೯೦-ರ ದಶಕದ ನಂತರದ ನಮ್ಮ ದೇಶದ ಇಂಗ್ಲೀಷ್-ನಲ್ಲಿ ಮಾನವೀಯ ಸಂವೇದನೆಗಳು ಕಡಿಮೆ ಎಂದೆನ್ನಿಸುತ್ತದೆ. ಟಿವಿಯಲ್ಲಿ ಎಷ್ಟೆಲ್ಲ ಇಂಗ್ಲೀಷ್ ಚ್ಯಾನಲ್‍ಗಳಿದ್ದರೂ, ರೇಡಿಯೋ ವಾರ್ತೆಗಳಿಗೆ ಹಾತೊರೆಯುವಂತಾಗಿದೆ. ೯೦-ರ ದಶಕದ ಇಂಗ್ಲೀಷ್ ನ್ಯೂಸ್ ಕೇಳಬೇಕೆನ್ನಿಸುತ್ತದೆ. ಪುಣ್ಯಕ್ಕೆ, ನಿನ್ನೆ ತಾನೇ ಎನ್‍ಡಿಟಿವಿಯಲ್ಲಿ ಪಿ ಸಾಯಿನಾಥರ ಸಂದರ್ಶನ ನೋಡಿದೆ. ಇಲ್ಲಿ ಇಂಗ್ಲೀಷ್ ಜೀವಂತವಾಗಿದೆ ಎನ್ನಿಸಿತು. ಮೂರ್ತಿರಾಯರು ಇಂಗ್ಲೀಷ್ ಮಾತನಾಡಿದಾಗ ಹಾಗೆನ್ನಿಸುತ್ತಿತ್ತು. ನವೋದಯ ಕಾಲದ ಯಾರೇ ಮಾತನಾಡಿದರೂ ಹಾಗೆನ್ನಿಸುತ್ತಿತ್ತು. ಈಗ ಅಂತಹ ಇಂಗ್ಲೀಷ್-ಗೆ ಹಾತೊರೆಯುವಂತಾಗಿದೆ. ಜಾಗತೀಕರಣದ ಈ ಕಾಲದಲ್ಲಿ ಇಂಗ್ಲೀಷ್ ಅತ್ಯಗತ್ಯವಾಗಿರುವಾಗ ನಮ್ಮೆದುರಿಗಿನ ಇಂಗ್ಲೀಷ್-ಅನ್ನು ಪ್ರೀತಿಸಲಾಗದಂತಾಗುತ್ತಿದೆಯೆಲ್ಲಾ ಎನ್ನುವುದು ಆತಂಕದ ಸಂಗತಿಯೇ. ಬೇರೆಯವರ ವಿಷಯವೇಕೆ, ಎಲ್‍ಕೆ‍ಜಿಯಿಂದ ಇಂಗ್ಲೀಷ್ ಮಾಧ್ಯಮದಲ್ಲೇ ಓದಿದ ನನಗೂ ಸಹ ಇಂಗ್ಲೀಷ್-ನಲ್ಲಿ ಪ್ರಾಮಾಣಿಕ ಎಂದೆನ್ನಿಸುವ ಧ್ವನಿ ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ನಾನು ಪ್ರೀತಿಸಬಹುದಾದ್ದು ಕನ್ನಡವನ್ನು ಮಾತ್ರ. ಹೊಸದಾಗಿ ನಾನು ಇಂಗ್ಲೀಷ್ ಕಲಿಯುವ ಬಗೆ ಹೇಗೆ, ಅದನ್ನು ಪ್ರೀತಿಸುವ ಬಗೆ ಹೇಗೆ?

ನಾವು ಪ್ರೀತಿಸಬಹುದಾದ ಕನ್ನಡ ಎಂದ ತಕ್ಷಣ, ಜಯಂತ ಕಾಯ್ಕಿಣಿ ನೆನಪಾಗುತ್ತಾರೆ. ಎರಡು ವಾರಗಳ ಹಿಂದೆ, ಅವರ ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಎಂ ಎಸ್ ಶ್ರೀರಾಂ 'ಮಾನವೀಯ ಆಸಕ್ತಿ ಮತ್ತು ಸಾಹಿತ್ಯ' ಎನ್ನುವ ದೊಡ್ಡದೆನಿಸುವ ವಿಷಯವನ್ನು ಚೊಕ್ಕವಾಗಿ ಜಯಂತರ ಸಾಹಿತ್ಯದತ್ತ ತಿರುಗಿಸಿದರು. ಕಾರ್ಯಕ್ರಮದ ವಿಶೇಷಗಳಲ್ಲಿ ಜಯಂತರು ಹೇಳಿದ ಎರಡು ಘಟನೆಗಳು ಮುಖ್ಯವಾದ್ದು (ಮತ್ತೊಂದು ವಿಶೇಷವನ್ನು ನಂತರ ಹೇಳುತ್ತೇನೆ). ಒಂದು, ಆಗುಂಬೆಯ ಸೂರ್ಯಾಸ್ತ ನೋಡಿ ಜನ ಚಪ್ಪಾಳೆ ಹೊಡೆದದ್ದು - ಅಷ್ಟರ ಮಟ್ಟಿಗೆ ನಮ್ಮ ಸಂವೇದನೆಗಳು ಬದಲಾಗುತ್ತಿವೆಯೇ ಅನ್ನಿಸದಿರದು. ಎರಡನೇಯದು, ೫೦ ಪೈಸೆಗೆ ಸಿಕ್ಕಷ್ಟರಲ್ಲಿ ಬದುಕಬಯಸುವ ಮನುಷ್ಯನಿಗೆ ನಮ್ಮ ಸಮಾಜ ಭಿಕ್ಷೆ ಬೇಡುವುದನ್ನೇ ಅನಿವಾರ್ಯವಾಗಿಸುವುದು. ಇದು ಇವತ್ತಿನ ನಮ್ಮ ಸಮಾಜದ ಸ್ಥಿತಿಯನ್ನು ಪ್ರತಿಬಿಂಬಿಸುವ ಪ್ರತೀಕ. ಇದನ್ನು ತೇಳುತ್ತಿದ್ದ ನನಗೆ ಇದ್ದಕ್ಕಿದ್ದ ಹಾಗೆ, ಮ್ಯಾಕ್ಸ್ ಮುಲರ್ ಭವನದ ಚರ್ಚೆಯಲ್ಲಿ, ಕಾರ್ನಾಡರತ್ತ ಒಂದು ಪ್ರಶ್ನೆ ತೂರಿಬಂದದ್ದು ನೆನಪಿಗೆ ಬಂತು. ಇವತ್ತಿನ ಸಮಾಜ ತುಂಬ ಪ್ಲಾಸ್ಟಿಕ್ ಎನ್ನಿಸುವುದಿಲ್ಲವೇ ಎಂದು ಯುವತಿಯೊಬ್ಬಳು ಕೇಳಿದಳು. (ಈ ಪ್ರಶ್ನೆಗೆ ಸಿದ್ಧನಾಗೇ ಇದ್ದೇನೆ ಎನ್ನುವ ಧ್ವನಿಯಲ್ಲಿ) ತಮಗೇನೂ ಹಾಗೆನ್ನಿಸುವುದಿಲ್ಲವೆಂದ ಕಾರ್ನಾಡರು ಯುವಕರಿಗೆ 'ಬೆಟರ್ ಐಡಿಯಾಸ್' ಇವೆ ಎಂದರು. ಈ 'ಬೆಟರ್ ಐಡಿಯಾಸ್' ಇರುವ ನಮ್ಮ ಹುಡುಗರು ಸೂರ್ಯಾಸ್ತಕ್ಕೆ ಚಪ್ಪಾಳೆ ಹೊಡೆದಿರಬಹುದಲ್ಲವೆ ಎನ್ನುವ ಆಲೋಚನೆಯನ್ನು ನನ್ನಿಂದ ಇನ್ನೂ ತಳ್ಳಿಹಾಕಲು ಸಾಧ್ಯವಾಗಿಲ್ಲ.

ನನ್ನ ಸ್ನೇಹಿತರೊಬ್ಬರಿದ್ದಾರೆ. ನಾವೆಲ್ಲಾ ಸಾರ್ವಜನಿಕವಾದ ವಿಷಯಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ, ಇದೆಲ್ಲವನ್ನೂ ನಾವೇ ಸರಿಪಡಿಸಬಹುದು ಎನ್ನುವ ಅಹಂಕಾರದಲ್ಲಿ ಮುಳುಗಿಹೋಗಿದ್ದಾಗಲೂ, ಅವುಗಳ ಕುರಿತು ತಮಾಷೆ ಮಾಡುತ್ತಾರೆ. ಕೀಟಲೆ ಮಾಡುತ್ತಾರೆ. ಅವರಿಗೆ ಇದು ಮುಖ್ಯವೋ ಅಲ್ಲವೋ ಎನ್ನುವುದು ತಕ್ಷಣ ನೋಡಿದವರಿಗೆ ಗೊತ್ತೇ ಆಗುವುದಿಲ್ಲ. ಇದಕ್ಕಿದ್ದಂತೆ ಗಂಭೀರವಾದ ಮಾತೊಂದನ್ನಾಡಿ ಮತ್ತೆ ಮೌನವಾಗಿಬಿಡುತ್ತಾರೆ. ಮನೆಗೆಲಸದಲ್ಲಿ ತೊಡಗುತ್ತಾರೆ. ಮೂರ್ತಿರಾಯರ ಯಾವುದೋ ಪ್ರಬಂಧವನ್ನೋ, ಯಾವುದೇ ಇಂಗ್ಲೀಷ್ ನಾಟಕದ ಮತ್ತೊಂದು ಸನ್ನಿವೇಶವನ್ನೋ, ಪುತಿನರವರ ಪ್ರಬಂಧವೊಂದನ್ನೋ, ಬೇಂದ್ರೆಯವರ ಕವನವನ್ನೋ ಜ್ಞಾಪಿಸಿಕೊಳ್ಳುತ್ತಾರೆ. ಅನೇಕವೇಳೆ, ನಮಗೆ ಅವರ ಮೇಲೆ ಸಿಟ್ಟುಬಂದದ್ದಿದೆ. ಇವರಿಗೆ ಸೀರಿಯಸ್ನೆಸ್ ಕಡಿಮೆ ಎನ್ನಿಸಿದ್ದಿದೆ. ಆದರೆ, ಇವತ್ತಿನ ಪ್ರತಿಕ್ರಿಯೆಗಳು ಮತ್ತು ಅವುಗಳ ಅವಾಂತರಗಳನ್ನು ಗಮನಿಸಿದರೆ, ನಮ್ಮೀ ಸ್ನೇಹಿತರೇ ಸರಿಯೇನೋ ಅನ್ನಿಸುತ್ತದೆ. ಮನೆಗೆಲಸ, ಒಂದು ಕವನ, ಒಂದಿಷ್ಟು ಸಂಗೀತ ಇದೇ ಬಹಳವೆನ್ನಿಸುತ್ತದೆ.

ಸಾರ್ವಜನಿಕ ವಿಷಯಗಳನ್ನು ಗಮನಿಸಬೇಕದ ರೀತಿಯೇನು? ಸಾರ್ವಜನಿಕ ವ್ಯಕ್ತಿಗಳ ಶೋಧ ಎಷ್ಟರಮಟ್ಟಿಗೆ ಮುಖ್ಯ? ನಿಜವಾಗಿಯೂ ಈ ಬಗೆಯ ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ಮುಖ್ಯವೆ? ಅದರಿಂದ ನಮಗೆ ಹುಸಿ ಹೆಚ್ಚುಗಾರಿಕೆ ದೊರೆಯುತ್ತಿದೆಯೇ? ಪ್ರತಿಕ್ರಿಯೆ, ಆಲೋಚನೆ, ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧಿಸುವ ಬಗೆಯೇನು? ಇವಕ್ಕೆಲ್ಲಾ ನನ್ನಲ್ಲಿ ಉತ್ತರವಿಲ್ಲ. ಆದರೆ ಊರಿನ ವಿದ್ಯಮಾನಗಳಿಗೆ ತೀವ್ರವಾಗಿ ಪ್ರತಿಕ್ರಯಿಸಬೇಕಾದರೆ, ಕಾಡಿನ ಒಂಟಿತನದಲ್ಲೂ ಸತ್ಯವೆನ್ನಿಸುವಂಥದ್ದನ್ನು ಮಾತ್ರ ತೀವ್ರವಾಗಿ ಪರಿಗಣಿಸಿದರೆ ಉಚಿತವೆನ್ನಿಸುತ್ತದೆ.

ಸಂಗೀತವೆಂದ ತಕ್ಷಣ ಈ ಕೆಳಗಿನ ಮಾತುಗಳನ್ನು ಹೇಳಿ ಈ ಬಾರಿಯ ಪ್ರಬಂಧ ಮುಗಿಸುತ್ತೇನೆ. ಜಯಂತರ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಅಮೃತಾ ರಾವ್ ಎನ್ನುವ ಚಿಕ್ಕ ವಯಸ್ಸಿನವರೊಬ್ಬರು ಎರಡು ಹಾಡುಗಳನ್ನು ಹಾಡಿದರು. ಮೊದಲನೇಯದ್ದು ಒಂದು ಭಾವಗೀತೆ ನೆನಪಿಗೆ ಬರುತ್ತಿಲ್ಲ. ಎರಡನೇಯದ್ದು ಕನಕದಾಸರ 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ'. ಮುಖ್ಯವಾದದ್ದು, ಕೃತಿಗಳ ಸಾಹಿತ್ಯಕ್ಕೆ ಹೊಂದಿಕೊಡಿದ್ದ ಸಂಗೀತ ಮತ್ತು ಅಮೃತಾ ರಾವ್-ರ ಹಾಡುಗಾರಿಕೆ. ಸಾಹಿತ್ಯ ಈಗ ಜ್ಞಾಪಕ ಬರುತ್ತಿಲ್ಲ. ಆದರೆ, ಸಂಗೀತದ ಅನುಭವ ಮಾತ್ರ ಅಚ್ಚಳಿಯದೇ ಉಳಿದಿದೆ, ನೆನಪಿನಲ್ಲಿ, ಮನದಾಳದಲ್ಲಿ. ಇದು ಬುದ್ಧಿಯನ್ನು ಮೀರಿದ ಮಾನವೀಯ ಪ್ರತಿಕ್ರಿಯೆ. ಮನುಷ್ಯನಿಗೆ ಇದೇ ಹೆಚ್ಚು ಪ್ರಯೋಜನಕಾರಿಯೆಂದೆನ್ನಿಸುತ್ತದೆ. ಮಿಕ್ಕ ಎಲ್ಲಾ ಬೌದ್ಧಿಕ ವಿಷಯಗಳು ಮರೆತ ನಂತರವೂ ಇಂತಹ ಅನುಭವ ಉಳಿದೇ ಇರುತ್ತದೆ.

ಮೂರ್ತಿರಾಯರ ಪ್ರಬಂಧಗಳನ್ನೋದುವಾಗ ಇಂತಹ ಅನುಭವವಾಗುತ್ತದೆ, ಅದೇಕೆ?