ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, April 09, 2007

ಅಗತ್ಯವಾಗಿ ಇರಬೇಕಾದ ಆಶಾವಾದ: ಭಾಗ ೪

[ಈ ಲೇಖನ ಡಾ ಯು.ಆರ್.ಅನಂತಮೂರ್ತಿಗಳ ಉದಯವಾಣಿಯ ಋಜುವಾತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದ ಅನೇಕ ತುಣುಕಗಳ ಒಟ್ಟು-ಲೇಖನ ರೂಪ. ಈ ಅವಕಾಶಕ್ಕಾಗಿ ಡಾ ಯು.ಆರ್.ಅನಂತಮೂರ್ತಿಗಳಿಗೆ, ಪತ್ರಕರ್ತರಾದ ಇಸ್ಮಾಯಿಲರಿಗೆ, ಉದಯವಾಣ್ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ. ಡಾ ಅನಂತಮೂರ್ತಿಗಳ ಋಜುವಾತು ಪುಸ್ತಕದಲ್ಲಿ ಒಂದು ಪ್ರತಿಕ್ರಿಯೆಯಾಗಿ ಈ ಲೇಖನ ಪ್ರಕಟವಾಗಿದೆ. ಅದಕ್ಕಾಗಿ ಮೇಲ್ಕಂಡ ಎಲ್ಲರಿಗೂ ಅಂಕಿತ ಪ್ರಕಾಶನದ ಕಂಭತ್ತಳ್ಳಿ ದಂಪತಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ಭಾಗಗಳಲ್ಲಿ ಈ ಲೇಖನವನ್ನು ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ]

ಈ ಆತಂಕಗಳ ನಡುವೆಯೇ ನಾವು ಕೆಲ ವಾಸ್ತವಗಳನ್ನು ಒಪ್ಪಬೇಕಿದೆ - ಹಿಂದೂ-ಕನ್ನಡ -ಭಾರತೀಯ ಐಡೆಂಟಿಟಿಗಳ ಉದಯಕ್ಕೆ ಐತಿಹಾಸಿಕ ಅವಕಾಶ ರೂಪುಗೊಂಡದ್ದು, ಸಮಾಜ ಆ ಅವಕಾಶವನ್ನು ಮನಗಂಡದ್ದು, ಅವಶ್ಯಕತೆಯಾಗಿ ಗ್ರಹಿಸಿದ್ದು ಮತ್ತು ಈ ಪ್ರಕ್ರಿಯೆಯನ್ನು ಒಪ್ಪುವವರು, ಒಪ್ಪಲಾರದವರೂ, ತಟಸ್ಥರೂ ಎಲ್ಲರೂ ಇದರ ವಾಸ್ತವವನ್ನು ಗುರುತಿಸಿ ನಿಭಾಯಿಸಬೇಕಾದ ಅನಿವಾರ್ಯತೆಯಿರುವುದು. ಈ ಮೂರೂ ಐಡೆಂಟಿಟಿಗಳ ಕಲ್ಪಿತವಾದ ಇತ್ಯಾತ್ಮಕ ಸಾಧ್ಯತೆಗಳನ್ನು ಇನ್ನೂ ವಾಸ್ತವಗೊಳಿಸಲಾಗಿಲ್ಲವಾದ್ದರಿಂದ ಮತ್ತು ಆ ಸಾಧ್ಯತೆಗಳಿನ್ನೂ ಉಳಿದಿವೆಯಾದ್ದರಿಂದ - ಅವುಗಳಿನ್ನೂ ವಿಸರ್ಜನೆಗೊಳ್ಳದೇ ಅಸ್ತಿತ್ವದಲ್ಲಿವೆ. ಆ ಕಾರಣಕ್ಕೇ ಈ ಐಡೆಂಟಿಟಿಗಳು ಉಂಟುಮಾಡುವ ಅಪಾಯಗಳು ಅಷ್ಟು ಸುಲಭವಾಗಿ ಅರಿವಿಗೆ ಬರುವುದಿಲ್ಲ. ಈ ನೇತ್ಯಾತ್ಮಕ ಸಾಧ್ಯತೆಗಳನ್ನು ಬಳಸಿಕೊಳ್ಳುವವರಿಗೂ ಕೊನೆಯಿರುವುದಿಲ್ಲ. ಭಾರತೀಯ ಐಡೆಂಟಿಟಿ ಯಾವ ರೀತಿಯಲ್ಲಿ ಪ್ರಾದೇಶಿಕ ಐಡೆಂಟಿಟಿಗಳಿಗೆ ಅಪಾಯ ತಂದೊಡ್ಡಿದೆ ಎನ್ನುವುದನ್ನು ನಾವು ಅರಿತಷ್ಟು ಸರಿಯಾಗಿ ಹಿಂದೂ ಐಡೆಂಟಿಟಿಯಿಂದ ಉಂಟಾಗುವ ಅಪಾಯಗಳನ್ನು ಅರಿತಿಲ್ಲ. ಇದು ಸಮುದ್ರ ಮಥನದಂತೆ. ಅಮೃತಕ್ಕಾಗಿ ಮಥಿಸಿದರೂ ಮೊದಲು ವಿಷವೇ ಹುಟ್ಟುವುದು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವಿಷ ನುಂಗಬಲ್ಲ ವಿಷಕಂಠರಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ.

ಇಲ್ಲಿನ ಕಷ್ಟವೆಂದರೆ - ಹಿಂದೂ ಐಡೆಂಟಿಟಿಯನ್ನು ನಿರಾಕರಿಸುವುದು ಅತ್ಯಂತ ಅಪಾಯಕಾರಿಯಾದ ನಿಲುವಾಗುತ್ತದೆ. ಇದರಿಂದ ಹಿಂದೂ ಮೂಲಭೂತವಾದಿಗಳಿಗೆ ಬಲಬರುತ್ತದೆ. ಅದನ್ನು ಒಪ್ಪಿಕೊಳ್ಳುವುದೆಂದರೆ ಅಲ್ಪಸಂಖ್ಯಾತರಿಗಾಗುವ ಸಹಜವಾದ ಅಸ್ಥಿರ ಭಾವವನ್ನು ಎದುರಾಗಬೇಕಾಗುತ್ತದೆ. ಹಿಂದೂ ಐಡೆಂಟಿಟಿಯನ್ನು ಅತಿಯಾಗಿ ಮೈಮೇಲೆ ಆರೋಪಿಸಿಕೊಳ್ಳುವವರನ್ನು ಮಾತ್ರ ಗಮನಿಸಿ ತಲ್ಲಣಿಸುವವರು ವಾಲ್ಟರ್‌ ಬೆಂಜಮಿನ್ನನ ಪರಂಪರೆಗೆ ಸೇರಬಹುದು. ಮೌನವಾಗಿರುವವರನ್ನು ಗಮನಿಸುವವರು ಸ್ವಲ್ಪ ಹೆಚ್ಚು-ಕಡಿಮೆ ವ್ಯತ್ಯಾಸದಲ್ಲಿ ಬೇಂದ್ರೆ/ಅಡಿಗ ಪರಂಪರೆಗೆ ಸೇರಬಹುದು. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನಮ್ಮ ಹಿರಿಯರು ಇದನ್ನು ಚೆನ್ನಾಗಿ ನಿಭಾಯಿಸಿದ್ದರೇನೋ. ಈಗ ನಾವು ಹದಗೆಟ್ಟ ಪರಿಸ್ಥಿತಿಯಲ್ಲಿ ಇದನ್ನು ನಿಭಾಯಿಸಬೇಕಿದೆ. ಹಿಂದೂ ಐಡೆಂಟಿಟಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಿಗಿಂತ ಸುಮ್ಮನಿದ್ದೂ ತಮ್ಮ ಮೌನದಲ್ಲಿ ಅರಿವಿಲ್ಲದಂತೆ ಅದರ ಇತ್ಯಾತ್ಮಕ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವವರಲ್ಲಿ ನಾವು ಹಿಂದೂ ಐಡೆಂಟಿಟಿಯ ಇತ್ಯಾತ್ಮಕ ಸಾಧ್ಯತೆಗಳನ್ನು ಹುಡುಕಬೇಕಿರುವುದು ಸರಿಯಾದ ಮತ್ತು ಅವಶ್ಯವಾದ ವಿಷಯವಾಗಿದೆ. ಈ ಇಕ್ಕಟ್ಟು ಡಾ ಅನಂತಮೂರ್ತಿಗಳ ಲೇಖನದಲ್ಲಿ ಧ್ವನಿತವಾಗಿದೆ. ಅಭಿಮಾನ, ಅವಶ್ಯಕತೆ, ಅಸ್ಥಿರಭಾವಗಳಲ್ಲಿ ಯಾವುದು ನಮ್ಮನ್ನು ಆವರಿಸುತ್ತದೆ ಮತ್ತು ಯಾವುದನ್ನು ನಾವು ಆಯುತ್ತೇವೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.

ಒಟ್ಟಿನಲ್ಲಿ ಅಮೃತದ ಗಳಿಕೆಗಾಗಿ ಅದೆಷ್ಟು ವಿಷವನ್ನು ನಾವು ತಯಾರಿಸಿ ಅನುಭವಿಸಬೇಕಾಗಿದೆಯೋ? ಈ ಅಮೃತದ ಸ್ವರೂಪ-ಸಾಧ್ಯತೆಗಳನ್ನು ಸಹ ನಾವು ಸ್ಪಷ್ಟವಾಗಿ ಸೃಷ್ಟಿಸಿಕೊಳ್ಳಲಾಗಿಲ್ಲ, ಅದು ಬದಲಾಗುತ್ತಲೇ ಇದೆ ಎನ್ನುವುದೂ ಸಹ ನಮಗೆ ಆತಂಕವನ್ನುಂಟುಮಾಡಬಹುದು.

***

ಇಷ್ಟೆಲ್ಲ ಪ್ರಜಾಪ್ರಭುತ್ವದೊಳಗೇ ನಡೆಯುತ್ತಿದೆ ಎನ್ನುವುದರಿಂದ ಆರ್ಟೆಗಾನ ಚಿಂತನೆ ಮುಖ್ಯವಾಗುತ್ತದೆ. ಹೀಗೆ ಪ್ರಜಾತಂತ್ರದ ಸವಲತ್ತುಗಳನ್ನೇ ಬಳಸಿಕೊಂಡು ಪ್ರಜಾತಂತ್ರವನ್ನೇ ನಾಶಮಾಡುವ ನಮ್ಮ ವಿನಾಶಕಾರಿ ಪ್ರವೃತ್ತಿಯ ಮೂಲದ ಕುರಿತಾದ ಆತಂಕಭರಿತ ಶೋಧ ಮುಖ್ಯವಾಗುತ್ತದೆ. ಮನುಷ್ಯನ ಸೃಜನಶೀಲತೆಯನ್ನು ಆದಷ್ಟೂ ಪೋಷಿಸಿ, ಮನುಷ್ಯನ ಸ್ವಾತಂತ್ರ್ಯವನ್ನು ಆದಷ್ಟೂ ನಾಶಮಾಡದೆ ಇರುವಂಥದ್ದು ಒಳ್ಳೆಯ ವ್ಯವಸ್ಥೆ. ಪ್ರಜಾಪ್ರಭುತ್ವ ಇದಕ್ಕೆ ಹೇಗೆ ಪೂರಕವಾಗಿದೆ, ಪ್ರಜಾಪ್ರಭುತ್ವದ ಮೂಲಕ ನಾವಿದನ್ನು ಹೇಗೆ ಸಾಧಿಸಬಯಸುತ್ತೇವೆ ಎನ್ನುವ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಆದರೆ ನಮ್ಮ ಸೃಜನಶೀಲ ಅಭಿವ್ಯಕ್ತಿಯಲ್ಲೇ ಅದರ ಸೆಲೆಯನ್ನೂ ಬತ್ತಿಸುವ ಸಾಧ್ಯತೆ ಇದೆ. ಒಬ್ಬನ ಸೃಜನಶೀಲ ಅಭಿವ್ಯಕ್ತಿ ಮತ್ತೊಬ್ಬನ ಸ್ವಾತಂತ್ರ್ಯವನ್ನು ನಾಶಮಾಡಬಹುದು. ಈ ಅರಿವು-ಎಚ್ಚರಗಳಿಂದ ನಾವು ಮೇಲ್ನೋಟದ ಪ್ರಜಾಪ್ರಭುತ್ವ ರೀತ್ಯಾ ಸಮಾಜವನ್ನು ಅಧೋಗತಿಯಲ್ಲಿ ನಡೆಸಿಕೊಂಡು ಹೋಗದೇ, ಸಮತೋಲನದಲ್ಲಿ ಸಾಗಿಸುವ ರೀತಿಯನ್ನು ಶೋಧಿಸಿಯೇವು, ಸ್ವಾತಂತ್ರ್ಯದ ಜೊತೆ ಸಾಮರಸ್ಯ ಮತ್ತು ಸಮಾನತೆ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಮನಗಾಣಿಸೀತು, ಗಾಂಧೀಜಿ ಮತ್ತು ಅಂಬೇಡ್ಕರ್‌ ಇಬ್ಬರನ್ನೂ ಒಟ್ಟಿಗೇ ನಮ್ಮ ನಾಯಕರನ್ನಾಗಿಸೀತು. ಆದರೆ ಸ್ವಾತಂತ್ರ್ಯದ ಪರಿಕಲ್ಪನೆ ಪ್ರಜಾಪ್ರಭುತ್ವದಿಂದ ಮೇಲ್ನೋಟಕ್ಕೇ ದಕ್ಕುವುದಾದರೂ, ಸಮಾನತೆ/ಸಾಮರಸ್ಯ ಪರಿಕಲ್ಪನೆಗಳ ಪ್ರಾಮುಖ್ಯತೆ ಸುಲಭಕ್ಕೆ ಸಿಗದೇಹೋಗುವುದು ದುರದೃಷ್ಟಕರ. ಸಮಸ್ಯೆಯೆಂದರೆ ಸಮಾನತೆ/ಸಾಮರಸ್ಯಗಳ ಆಳವಾದ ಅರಿವಿಲ್ಲದೆ ಪ್ರಜಾಪ್ರಭುತ್ವ ಸುಸ್ಥಿರವಾಗಿರಲಾರದು. ಪ್ರಜಾಪ್ರಭುತ್ವದಿಂದ ನಮಗೆ ಲಭ್ಯವಾಗುವ ದಾರಿಗಳಲ್ಲಿ ನಮ್ಮ ಆಯ್ಕೆ ಪ್ರಜಾಪ್ರಭುತ್ವದ ಧಾರಣಶಕ್ತಿಯನ್ನು ಹೆಚ್ಚಿಸಲಾಗದಿದ್ದರೂ ಕೊಲ್ಲಬಾರದು. ಮನುಷ್ಯನ ಸ್ವಾತಂತ್ರ, ಸೃಜನಶೀಲ ಅಭಿವ್ಯಕ್ತಿಯ ಸಾಧ್ಯತೆ ಇವೆಲ್ಲವೂ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಮೂಲಭೂತವಾದ ವಿಷಯಗಳು, ಮೌಲ್ಯಗಳು. ಆದ್ದರಿಂದ ಪ್ರಜಾಪ್ರಭುತ್ವದ ಕುರಿತಾದ ನಮ್ಮ ಬದ್ಧತೆ ಯಾವ ಕಾರಣಕ್ಕೆ ಮತ್ತು ಪ್ರಜಾಪ್ರಭುತ್ವದ ಮೇಲಣ ವಿಮರ್ಶೆ ಯಾವ ಕಾರಣಕ್ಕೆ ಎನ್ನುವುದನ್ನು ನಾವು ಸದಾ ಶೋಧಿಸುತ್ತಲೇ ಇರಬೇಕಾಗುತ್ತದೆ. ಪ್ರಜಾಪ್ರಭುತ್ವದ ಈ ಕಷ್ಟದ ಹಾದಿಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯ ದಾರಿತಪ್ಪಿದ ಮನುಷ್ಯ ಎನ್ನಿಸುತ್ತದೆ. ಇದನ್ನು ಕಾಲಾತೀತವಾಗಿ ಗ್ರಹಿಸಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದೇನೆ. ಪ್ರಾಯಶಃ, ಯಾವುದೇ ಕಾಲದ ಯಾವುದೇ ಸೃಜನಶೀಲ ಪರಿಕಲ್ಪನೆಯ, ಸಾಧ್ಯತೆಯ ಹುಟ್ಟಿಗೆ ಪೋಷಕ ಮತ್ತ್ತು ಮಾರಕ ಕಾರಣಗಳಿರುತ್ತವೆ. ಅಮೃತದ ಶೋಧನೆಗೆ ದೇವ-ದಾನವರು ಒಟ್ಟಾಗಿಯೇ ತೊಡಗಿದರು. ಅಮೃತ ಸೃಷ್ಟಿಯ ನಂತರ ಅದನ್ನು ದಕ್ಕಿಸಿಕೊಳ್ಳುವುದು ದೇವತೆಗಳೋ, ದಾನವರೋ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ. ಮನುಷ್ಯನ ಸಾರ್ವಕಾಲಿಕ ಪ್ರವೃತ್ತಿಯಾದ ಸಾಮರ್ಥ್ಯದ ಹುಡುಕಾಟ, ಮತ್ತು ಅದರ ಇವತ್ತಿನ ರೂಪಗಳಾದ ತಾಂತ್ರಿಕತೆ ಮತ್ತು ಅತಿರಾಷ್ಟ್ರೀಯತೆಗಳ ಹಿನ್ನೆಲೆಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯನ ಹುಟ್ಟಿನ ಸಾಧ್ಯತೆ ಸಹಜವಾಗೇ ಇದೆ. ನಮ್ಮ ಹಿರಿಯರು ಇಂಥದ್ದನ್ನು ಮನಗಂಡಿದ್ದರೆಂದು ಕಾಣುತ್ತದೆ. ವಾಣಿಜ್ಯದ ಭರದಲ್ಲಿರುವಂತಿರುವ ಇವತ್ತಿನ ಚೀನದ ಉದಾಹರಣೆ ಓದುವಾಗ, ಖಾಸಗೀಕರಣ/ಜಾಗತೀಕರಣದ ಅನೇಕ ನಡೆಗಳು ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ನಡೆಯುತ್ತಿವೆ. ಇವು ಸ್ವಾತಂತ್ರ್ಯದ ಧಾರಣಶಕ್ತಿಯನ್ನೇ ಕೊಲ್ಲುವಂತಹ ನಡೆಗಳಾಗಿವೆಯೇ ಎನ್ನುವ ಕುರಿತು ನಾವು ಒಂದು ದೇಶವಾಗಿ ಆಳದಲ್ಲಿ ಆಲೋಚಿಸಿಲ್ಲವೆಂದೆನ್ನಿಸುತ್ತದೆ. ಕಣ್ಣಿಗೆ ಕಾಣುವ ಪ್ರಗತಿ ಸಂವೇದನಾಶೀಲ ಮನಸ್ಸು ಮಾತ್ರವೇ ಗ್ರಹಿಸಬಹುದಾದ ಆಂತರಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವಂತೆ ಮಾಡಬಹುದಾದ ಸಾಧ್ಯತೆಯನ್ನು ಚರ್ಚೆಯ ಮುನ್ನೆಲೆಗೆ ನಾವಿನ್ನೂ ತರಲಾಗಿಲ್ಲ.

***

ಇಷ್ಟಾದರೂ ನಮಗೆ ಅತ್ಯಗತ್ಯವಾಗಿ ಬೇಕಾದ ಆಶಾವಾದ, ಬೇಂದ್ರೆಯವರ ಮೊದಲಗಿತ್ತಿ ಕವನದ ಆಶಯದ ಜೊತೆ ಹೊಂದಿಕೊಳ್ಳುವಂಥದ್ದು, ಡಾ ಅನಂತಮೂರ್ತಿಗಳ ಟಾಯ್ನ್‌ಬೀ ಕುರಿತಾದ ಲೇಖನದಲ್ಲಿದೆ. ಗಾಂಧೀಜಿಯ ಉದಾಹರಣೆಯನ್ನು ಡಾ ಅನಂತಮೂರ್ತಿಗಳು ತರುತ್ತಿರುವ ರೀತಿ ಮುಖ್ಯವಾಗಿದೆ. ಈ ತೆರನಾದ ಸೃಜನಶೀಲ ಗುಂಪು ತನ್ನ ಮೇಲಾಗುವ ಆಕ್ರಮಣವನ್ನು, ಆಕ್ರಮಣಕಾರರನ್ನು ಸರಿಯಾದ ಕ್ರಮದಲ್ಲಿ ಗುರುತಿಸಲು ಸಾಧ್ಯವಾಗುವುದು ತನ್ನ ಆಂತರ್ಯದಲ್ಲೇ ಇರುವ ಸೃಜನಶೀಲವಾದ ಸ್ವದೇಶೀ ಬದುಕಿನ ವಿವೇಕದ ಜೊತೆಗೇ ಅಲ್ಲಿರುವ ಆಕ್ರಮಣಶೀಲ ಸಾಧ್ಯತೆಯನ್ನು ಸರಿಯಾಗಿ ಗುರುತಿಸಿದಾಗ. ಅವನತಿ ನಂತರದ ಮರುಹುಟ್ಟಿನ ಸಾಧ್ಯತೆ ಮಾತ್ರ ದೇಶೀಯವಾದ್ದು, ಪ್ರಾಂತೀಯವಾದ್ದು ಮತ್ತು ಮರುಹುಟ್ಟು ಸಹಜವೇ ಎನ್ನುವುದು ಕನ್ನಡದಂತಹ ಭಾಷೆಯ ಭವಿಷ್ಯದ ಕುರಿತಾಗಿಯೂ ಹೇಳಿದ ಆಶಾವಾದವಿರಬಹುದೇ ಎನ್ನುವುದು ನನ್ನ ಆಶಾವಾದ. ಜೊತೆಗೆ ಎಚ್ಚರಿಕೆಯೂ ಸಹ. ಸ್ವದೇಶೀ ಬದುಕಿನ ವಿವೇಕ ಬೇಡವಾಗಿರುವ ಇವತ್ತಿನ ನಮ್ಮ ಇಂಗ್ಲೀಷಿನ ಸ್ಥಿತಿ ಮತ್ತು ಜೀವಂತವಾಗಬೇಕಾದರೆ ಬೇಕಾಗುವ ಕನ್ನಡದಂತಹ ಭಾಷೆಯ ಸಂಬಂಧಗಳಿಗೂ ಈ ಪರಿಕಲ್ಪನೆಗಳನ್ನು ಒಗ್ಗಿಸಬಹುದಾಗಿದೆ. ಜೊತೆಗೆ, ಸಾಂಸ್ಕೃತಿಕ ದಣಿವು ಪರಿಕಲ್ಪನೆ ಕೂಡಾ ಅವನತಿ ಮತ್ತು ಮರುಹುಟ್ಟು ಪರಿಕಲ್ಪನೆಗಳ ಸಂಧಿ-ಬಿಂದುವೆಂದೆನ್ನಿಸುತ್ತದೆ.

ನಿಜದಲ್ಲಿ ಸಾಂಸ್ಕೃತಿಕ ದಣಿವಿನ ಸಾಧ್ಯತೆಯನ್ನು ನಂಬಿ ಕಾಣಲು, ತಮ್ಮ ಪಿಸುಮಾತುಗಳಲ್ಲಿ ಜನರು ಬದುಕುತ್ತಿರುವರೆನ್ನುವುದನ್ನು ನಂಬಲು ಒಂದು ಬಗೆಯ ಆತ್ಮವಿಶ್ವಾಸದ, ಧೈರ್ಯದ ಅಗತ್ಯವಿದೆಯೆಂದು ನನ್ನ ನಂಬಿಕೆ. ನನ್ನಂಥವರು ಬೌದ್ಧಿಕವಾಗಿ ಗ್ರಹಿಸುವ ಈ ಸಾಧ್ಯತೆ ಆಂತರ್ಯದ ಸಂವೇದನೆಯಾಗಬೇಕಾದರೆ ಈ ಆತ್ಮವಿಶ್ವಾಸ ಅದೆಷ್ಟು ಮುಖ್ಯ ಎಂದು ನೆನೆದಾಗ ಅಳುಕುಂಟಾಗುವುದೂ ಇದೆ. ನನ್ನಂಥವರು ಒಮ್ಮೊಮ್ಮೆ ಬೆಂಜಮಿನ್ನನ ಸ್ಥಿತಿಗೆ ಹತ್ತಿರವಿರುವಂತೆ ಅನ್ನಿಸುತ್ತದೆ. ಮರುಕ್ಷಣ ಬೇಂದ್ರೆಯ ಬೆಳಕಿನಿಂದ ಒಂದೆರಡು ಆಶಾಕಿರಣ ನಮ್ಮ ಮೇಲೆ ಬೀಳುತ್ತದೆ. ಹೀಗೆ ಒಂದು ದ್ವಂದ್ವದ ದಾರಿಯಲ್ಲಿ ಸಾಗುತ್ತಿದ್ದೇವೆ.

***

ಈ ನಡುವೆ-ಆಧುನಿಕತೆ, ಕೈಗಾರಿಕೀಕರಣ, ವಸಾಹತುಶಾಹಿ, ರಾಷ್ಟ್ರೀಯತೆ, ಪ್ರಾದೇಶಿಕತೆ, ಪ್ರಗತಿ ಮುಂತಾದ ಸಂಕೀರ್ಣ ಪ್ರಕ್ರಿಯೆಗಳ ಒಟ್ಟು ಮೊತ್ತದಂತಿರುವ ಕಾವೇರಿ ವಿವಾದ, ನನ್ನಂಥವರ ವಿಚಾರಗಳ ಕ್ರಿಯಾಶೀಲ ಸಾಧ್ಯತೆಗೆ ಆಮಂತ್ರಣವೋ ಎಂಬಂತೆ ಸವಾಲಾಗಿ ನಿಂತಿದ್ದು, ಇದು ನೀರಿನಂತಹ ಮೂಲಭೂತ ವಸ್ತುವಿನ ಕುರಿತಾಗಿರುವುದು ನನಗೆ ವಿಚಿತ್ರ ಪ್ರತಿಮೆಯಾಗಿ ಕಾಣುತ್ತಿದೆ. ಯಾವುದರ ಇತ್ಯಾತ್ಮಕ ಸಾಧ್ಯತೆಯನ್ನೂ ಕೊಲ್ಲದೇ, ಬೃಹತ್‌ ಭಿತ್ತಿಗಳ ಹಿನ್ನೆಲೆಯಲ್ಲಿ ಮನುಷ್ಯತ್ವವನ್ನೂ ಮರೆಯದಂತಹ ಪ್ರತಿಕ್ರಿಯೆಯನ್ನು ನೀಡುವುದು ನನ್ನಂಥವರಿಗೆ ಸಾಧ್ಯವಾಗುತ್ತಿಲ್ಲ.

ಆದರೆ, ಈ ಕಠಿಣವಾದ ಹಾದಿಗಳಲ್ಲಿ ಕ್ರಮಿಸಲು ಬೇಕಾದ ಆತ್ಮವಿಶ್ವಾಸದ ಸಾಧ್ಯತೆಯನ್ನು ಡಾ ಅನಂತಮೂರ್ತಿಗಳ ಸುಬ್ಬಣ್ಣನವರ ಲೇಖನ ತೋರಿಸುತ್ತಿದೆ. ಇದನ್ನು, ಇವೆಲ್ಲವನ್ನೂ ಏಕಕಾಲದಲ್ಲಿ ಮತ್ತು ಸದಾ ನೆನೆಯುತ್ತಾ ನಾವು ಮುಂದಡಿಯಿಡಬೇಕಿದೆ.

0 Comments:

Post a Comment

<< Home