ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Monday, November 05, 2018

ನರಕಾಸುರ

ಮಕ್ಕಳೆ - ನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು. ಕರ್ನಾಟಕದಲ್ಲಿ ಚತುರ್ದಶಿಯ ದಿನ ದೀಪಾವಳಿ ಹಬ್ಬದ ಮೊದಲನೇ ದಿನ. ಉತ್ತರ ಭಾರತದಲ್ಲಿ ಇದಕ್ಕಿಂತ ಒಂದು ದಿನ ಮುಂಚೆ ಧನ್ ತೇರಸ್ ಅನ್ನುವ ಹಬ್ಬ ಮಾಡ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಚತುರ್ದಶಿಯೇ ಮೊದಲನೇ ದಿನ. ಇವತ್ತಿನ ದಿನಕ್ಕೆ ಎರಡು ಪ್ರಾಮುಖ್ಯತೆ ಇದೆ. ಮೊದಲನೇಯದು ಇವತ್ತಿನ ದಿನ ಶ್ರೀರಾಮ ರಾವಣನನ್ನು ಕೊಂದ ನಂತರ ಅಯೋಧ್ಯಾನಗರಿಯನ್ನು ತಲುಪುವ ದಿನ. ಮಾರನೇಯ ದಿನ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬ ನಡೆಯೋದು ಶ್ರೀರಾಮ ಹಿಂತಿರುಗಿದ್ದರ ನೆನಪಿಗಾಗಿ. ಅದೇ ರೀತಿ ಮಹಾಭಾರತ ಕಾಲದಲ್ಲಿ ಇವತ್ತಿನ ದಿನವೇ ಶ್ರೀಕೃಷ್ಣ ನರಕಾಸುರ ಅನ್ನುವ ರಾಕ್ಷಸನನ್ನ ಸಂಹರಿಸಿದ್ದು, ಅದರ ನೆನಪಿಗಾಗಿ ಈ ದಿನಕ್ಕೆ ನರಕ ಚತುರ್ದಶಿ ಅನ್ನುವ ಹೆಸರು ಬಂದಿದೆ. ಈ ಕತೆ ತುಂಬಾ ರೋಚಕವಾಗಿದೆ. ಅದನ್ನ ಕೇಳೋಣ್ವೆ.


ಸಾವಿರಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ ಅನ್ನೋದು ನಿಮಗೆ ಗೊತ್ತಿರಬಹುದು. ಅವನು ಇಡೀ ಭೂಮಿಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ ಹಿರಣ್ಯಾಕ್ಷನನ್ನು ನೀರಿನಲ್ಲೇ ದ್ವಂದ್ವಯುದ್ಧ - ಅಂದರೆ ಒಂದು ತರಹದ ಕುಸ್ತಿಯನ್ನು ಮಾಡಿ - ಕೊಂದು ಭೂದೇವಿಯನ್ನು ಸಂರಕ್ಷಿಸಿದ, ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ -  ಅನ್ನೋ ಕಥೆ ನಿಮಗೆ ಗೊತ್ತಿರಬಹುದು. ಮಹಾವಿಷ್ಣುವಿನ ಮೂರನೇಯ ಮುಖ್ಯ ಅವತಾರವಾದ ವರಾಹನಿಗೆ ಎಷ್ಟು ಶಕ್ತಿಯಿತ್ತು ಅಂದರೆ ಹಿರಣ್ಯಾಕ್ಷನನ್ನು ಹೂವೆತ್ತಿದ ಹಾಗೆ ಹಗುರವಾಗಿ, ಸುಲಭವಾಗಿ ಕೊಂದುಬಿಟ್ಟನಂತೆ. ಆದರೆ ಅದೆಲ್ಲೋ ಒಂದು ಕಡೆ ಒಂದು ಹನಿ ಬೆವರು ವರಾಹನ ಮೈಯಿಂದ ಕೆಳಗೆ ಬಿದ್ದೇ ಬಿಟ್ಟಿತಂತೆ. ವರಾಹ ಅವತಾರ ಪುರುಷ ಅಂದ ಮೇಲೆ ಕೇಳಬೇಕೆ. ಆ ಬೆವರಿನಿಂದ ಒಬ್ಬ ಶಕ್ತಿವಂತನಾದ ಯುವಕ ಹುಟ್ಟಿಬಿಟ್ಟಿನಂತೆ. ಅವನ ಹೆಸರೇ ನರಕ. ತಂದೆ ವರಾಹ, ತಾಯಿ ಭೂದೇವಿ.

ಭೂದೇವಿಗೆ ತನ್ನ ಮಗ ನರಕನ ಮೇಲೆ ಮಹಾಪ್ರೀತಿ. ತನ್ನ ಮಗ ಸದಾ ಜಯಶಾಲಿಯಾಗಿರಬೇಕು, ಯಾರೂ ಸೋಲಿಸಬಾರದು ಎಂದು ವರ ಬೇಡಿದಳಂತೆ.ವರಾಹ ತನ್ನ ಒಂದು ದಂತವನ್ನು ಕೊಟ್ಟು 'ನೋಡು ಮಗನೆ, ಇದು ತುಂಬಾ ಶಕ್ತಿಶಾಲಿಯಾದ ಆಯುಧ, ಇದನ್ನ ನೀನು ನಿನಗೆ ಅಪಾಯವಾದಾಗ ಅಥವಾ ಧರ್ಮವನ್ನು ಉಳಿಸೋದಕ್ಕೆ ಮಾತ್ರ ಬಳಸಬೇಕು. ವಿನಾ ಕಾರಣ ಮತ್ತು ಅಮಾಯಕರ ಮೇಲೆ ಬಳಸಬಾರದು' ಎಂದು ಕಟ್ಟಪ್ಪಣೆ ಮಾಡಿದನಂತೆ. ಭೂದೇವಿಗೆ ತನ್ನ ಮಗ ಮೂರು ಲೋಕಗಳಲ್ಲಿ ಮಹಾ ಶಕ್ತಿವಂತ ಅಂತ ಸಂತೋಷ. ಆದರೆ ವರಾಹ ಮಾತ್ರ 'ನೋಡೋಣ ಅವನು ಒಳ್ಳೇದಕ್ಕಾಗಿ ಶಕ್ತಿ ಬಳಸುತ್ತಾನೋ ಅಥವಾ ಸ್ವಾರ್ಥಕ್ಕೋಸ್ಕರ ಬಳಸುತ್ತಾನೋ' ಎಂದು ಹೇಳಿ ಮಾಯವಾದನು.

ಮೊದಮೊದಲು ಸರಿಯಾಗಿದ್ದ ನರಕ ನಂತರ ಬಾಣಾಸುರ ಅನ್ನುವ ರಾಕ್ಷಸನ ಜೊತೆ ಸೇರಿ ತಾನೂ ರಾಕ್ಷಸನಾದ. ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು 'ನನ್ನ ತಾಯಿಯಿಂದ ಮಾತ್ರ ನನಗೆ ಸಾವು' ಎನ್ನುವ ವರ ಪಡೆದ. ವಿಪರೀತ ಬಲಶಾಲಿಯಾದ ಆದರೆ ಮಹಾ ಅಧರ್ಮಿಯಾದ. ಪ್ರಾಗ್ಜ್ಯೋತಿಷಪುರ - ಅಂದರೆ ಇವತ್ತಿನ ಗುವಹಾಟಿಯಲ್ಲಿ ತನ್ನ ರಾಜ್ಯ ಸ್ಥಾಪಿಸಿಕೊಂಡಿದ್ದ. ಒಳ್ಳೆಯವರಿಗೆ ತೊಂದರೆ ಕೊಟ್ಟು, ಕೆಟ್ಟರಾಕ್ಷಸರ ರಾಜ್ಯ ಬೆಳೆಸಿದ. ಹದಿನಾರು ಸಾವಿರ ಸ್ತ್ರೀಯರನ್ನ ತನ್ನ ಅರಮನೆಯಲ್ಲಿ ಬಂದಿಸಿಟ್ಟಿದ್ದ. ಸ್ವರ್ಗಕ್ಕೆ ಹೋಗಿ ಇಂದ್ರನನ್ನೇ ಸೋಲಿಸಿ ಎಲ್ಲಾ ದೇವತೆಗಳನ್ನು ತನ್ನ ಕೈವಶ ಮಾಡಿಕೊಂಡಿದ್ದ. ದೇವತೆಗಳೆಲ್ಲ ವಿಷ್ಣುವಿನ ಹತ್ತಿರ ಹೋಗಿ ನರಕನಿಂದ ನಮ್ಮನ್ನು ರಕ್ಶಿಸು ಎಂದು ಕೇಳಿಕೊಂಡರು. ಅವರೆಲ್ಲರ ಕಷ್ಟವನ್ನ ಶಾಂತನಾಗಿ ಆಲಿಸಿದ ವಿಷ್ಣು 'ಶ್ರೀಕೃಷ್ಣಾವತಾರಕ್ಕಾಗಿ ನೀವು ಕಾಯಬೇಕು' ಅಂತ ಹೇಳಿ ಅವರನ್ನ ಕಳಿಸಿದ.

ಕೃತಯುಗವಾದ ನಂತರ ತ್ರೇತಾ ಯುಗ ಬಂದಿತು. ಅದಾದ ಮೇಲೆ ದ್ವಾಪರಯುಗ ಬಂತು. ದ್ವಾಪರದಲ್ಲಿ ಮಹಾವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತಾರ ಎತ್ತಿ ಭೂಮಿಗೆ ಬಂದ. ಮಹಾ ಅಧರ್ಮಿ, ಕ್ರೂರಿಯಾದ ಕಂಸ ಮುಂತಾದ ಅನೇಕ ರಾಕ್ಷಸರನ್ನ ಕೊಂದ. ಆದರೆ ನರಕ ಮಾತ್ರ ಇನ್ನೂ ಬಲಶಾಲಿಯಾಗೇ ಇದ್ದ. ಇಂದ್ರನ ತಾಯಿ ಅದಿತೀದೇವಿಯ ಕಿವಿಯೋಲೆಯನ್ನ ಕಿತ್ತು ತಂದಿದ್ದ. ಈ ಸಮಯದಲ್ಲಿ ಇಂದ್ರ ಶ್ರೀಕೃಷ್ಣನ ಸಹಾಯ ಬೇಡಿದ. 'ನೋಡು ಶ್ರೀಕೃಷ್ಣ ನನ್ನ ತಾಯಿಯ ಕಿವಿಯೋಲೆನೇ ಕಿತ್ತುಕೊಂಡಿದ್ದಾನೆ, ದಯವಿಟ್ಟು ಅವನ ಅಹಂಕಾರದ ಹುಟ್ಟಡಗಿಸು' ಅಂತ. ಕೃಷ್ಣನ ಹೆಂಡತಿ ಸತ್ಯಭಾಮೆಗೆ ಇದನ್ನ ಕೇಳಿ ಮಹಾದುಃಖವಾಯಿತು. ಪ್ರಪಂಚಕ್ಕೇ ತಾಯಿಯಾದ ಅದಿತೀದೇವಿಗೆ ಈ ರೀತಿ ಅವಮಾನ ಮಾಡಿದ ನರಕಾಸುರನನ್ನ ಸುಮ್ಮನೆ ಬಿಡಬಾರದು ಅಂತ ಶ್ರಿಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು.

ಸತ್ಯಭಾಮಗೆ ಶ್ರೀಕೃಷ್ಣ ಎಂದೂ ನಿರಾಸೆ ಮಾಡಿರಲಿಲ್ಲ. ಅಲ್ಲದೇ ನರಕಾಸುರ ಮಹಾಪಾಪಿ. ಒಂದು ಅವಕಾಶಕ್ಕಾಗಿ ಕೃಷ್ಣ ಕಾಯುತ್ತಿದ್ದ ಅಷ್ಟೆ. 'ಸರಿ' ಎಂದು ತಕ್ಷ್ಣಣವೇ ಮಹಾಗರುಡ ಪಕ್ಷಿಯನ್ನ ಮನದಲ್ಲಿ ನೆನೆದ. ವಿಷ್ಣುವಿನ ವಾಹನವಾದ ಗರುಡ ವಿಷ್ಣುವಿನ ಅವತಾರಿಯಾದ ಕೃಷ್ಣ ಕರೆದ ತಕ್ಷಣ ಬಂದ. ಕೃಷ್ಣ ತನ್ನ ಆಯುಧವಾದ ಸುದರ್ಶನ ಚಕ್ರ ಮತ್ತು ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಗರುಡಪಕ್ಷಿಯನ್ನೇರಿ ಕೂತ. ಸತ್ಯಭಾಮೆ ನಾನೂ ಬರುತ್ತೇನೆ ಎಂದು ಹಠ ಹಿಡಿದಳು. ಸರಿ ಎಂದು ಶ್ರೀಕೃಷ್ಣ ಸತ್ಯಭಾಮಾಸಮೇತನಾಗಿ ಪ್ರಾಗ್ಜ್ಯೋತಿಷಪುರಕ್ಕೇ ಹೊರಟೇಬಿಟ್ಟ.

ನರಕಾಸುರ ಕ್ರೂರಿಯಷ್ಟೆ ಅಲ್ಲ ಮಹಾಬುದ್ಧಿವಂತ. ತನ್ನ ನಗರಕ್ಕೇ ನಾಲ್ಕು ರೀತಿಯ ರಕ್ಷಣೆ ನಿರ್ಮಿಸಿಕೊಂಡಿದ್ದ. ಮೊದಲನೇಯ ರಕ್ಷಣೆ ಬಂಡೆಗಳಿಂದ ಕೂಡಿದ ಪರ್ವತಗಳದ್ದು. ಅದನ್ನು ಗರುಡ ತನ್ನ ಕೊಕ್ಕಿನಿಂದ ಜೋರಾಗಿ  ಕುಕ್ಕಿ ಪುಡಿಪುಡಿ ಮಾಡಿದ. ಎರಡಾನೇಯದಾಗಿ ಬೆಂಕಿಯಿಂದ ಮಾಡಿದ ಉಂಗುರದ ರೀತಿಯ ಒಂದು ಸುತ್ತುಬೇಲಿಯ ದಾಟಬೇಕಾಗಿತ್ತು. ಅದನ್ನು ಕೂಡ ಶ್ರೀಕೃಷ್ಣ ವರುಣಾಸ್ತ್ರದಿಂದ ನೀರು ಚಿಮ್ಮಿಸಿ ಆರಿಸಿ ಪ್ರಾಗ್ಜ್ಯೋತಿಷಪುರದ ಬಾಗಿಲ ಹತ್ತಿರ ಬಂದೇಬಿಟ್ಟ. ತನ್ನ ಶಂಖ ಪಾಂಚಜನ್ಯವನ್ನ ಒಮ್ಮೆ ಜೋರಾಗಿ ಊದಿದ. ಆ ಹೆಬ್ಬಾಗಿಲನ್ನು 'ಮುರ' ಎನ್ನುವ ರಾಕ್ಷಸ - ನರಕಾಸುರನಿಗೆ ಅತ್ಯಂತ ಪ್ರಿಯನಾದ ರಾಕ್ಷಸ - ಅವನು ನೋಡಿಕೊಂಡಿದ್ದ. ಪರ್ವತ, ಬೆಂಕಿಯ ಬೇಲಿ ಅವುಗಳನ್ನೆಲ್ಲ ಮೀರಿ ಇಲ್ಲಿಯವರೆಗೇ ಯಾರು ಕೂಡಾ ಬರಲು ಸಾಧ್ಯವಿಲ್ಲ ಎಂದುಕೊಂಡು ನೀರಿನಾಳದಲ್ಲಿ ವಿಹರಿಸುತ್ತಿದ್ದ ಮುರ. ಆದರೆ ಬಂಡೆಗಳು ಚೂರಾಗಿದ್ದು, ನೀರಿನ ಜೋರು ಶಬ್ದ ಮತ್ತು ಕೃಷ್ಣನ ಶಂಖನಾದದಿಂದ ಮುರನಿಗೆ ಗಾಬರಿಯಾಗಿ ಹೊರಬಂದ. ಅವರಿಬ್ಬರ ಮಧ್ಯೆ ಮಹಾಯುದ್ಧವಾಯಿತು. ಆದರೆ ಕಡೆಗೆ ಶ್ರೀಕೃಷ್ಣನಿಗೆ ಜಯವಾಗಿ ಮುರ ಸಾವನ್ನಪ್ಪಿದ. ಮುರನಂತಹ ಬಲಶಾಲಿಯಾದ ಕ್ರೂರಿ ರಾಕ್ಷಸನನ್ನು ಕೊಂದಕಾರಣ ಶ್ರೀಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.

ಕಟ್ಟ ಕಡೆಯದಾಗಿ ನರಕಾಸುರನ ಹನ್ನೊಂದು ಅಕ್ಷೌಹಿಣಿ ಸೇನೆ ಶ್ರೀಕೃಷ್ಣನಿಗೆ ಎದುರಾಯಿತು. ಆದರೆ ಅದು ಕೃಷ್ಣನಿಗೆ ಲೆಕ್ಕವೇ ಇಲ್ಲವಾಯಿತು. ಸುಲಭವಾಗಿ ಇಡಿಯ ಸೈನ್ಯವೇ ನಾಶವಾಯಿತು. ಕಡೆಗೆ ವಿಧಿಯಿಲ್ಲದೇ ನರಕಾಸುರನೇ ಬರಬೇಕಾಯಿತು. ಅವರಿಬ್ಬರ ಮಧ್ಯೆ ಅನೇಕ ದಿನಗಳ ಕಾಲ ದೀರ್ಘವಾದ ಯುದ್ದವಾಯಿತು. ನರಕಾಸುರನ ಎಲ್ಲ ಅಸ್ತ್ರಗಳನ್ನೂ ಶ್ರೀಕೃಷ್ಣ ಸೋಲಿಸಿಬಿಟ್ಟ. ಕಡೆಗೆ ಅವನಲ್ಲಿ ವರಾಹ ಕೊಟ್ಟಿದ್ದ ದಂತದಿಂದ ಮಾಡಿದ ತ್ರಿಶೂಲದಂತಹ ಒಂದು ಆಯುಧ ಮಾತ್ರ ಉಳಿದಿತ್ತು. ಇಂತಹ ಸಂಕಷ್ಟದ ಕಾಲಕ್ಕೇ ಅದನ್ನ ಇಟ್ಟುಕೊಂಡಿದ್ದ, ಆದರೆ ಈಗ ಅದನ್ನ ಅಧರ್ಮದ ಕಾರಣಕ್ಕೆ ಬಳಸುತ್ತಾ ಇದ್ದ. ಆದ್ದರಿಂದ ಶ್ರೀಕೃಷ್ಣ ಮತ್ತು ಸತ್ಯಭಾಮರ ಮುಂದೆ ಈ ತ್ರಿಶೂಲವೂ ನಡೆಯಲಿಲ್ಲ. ನರಕಾಸುರನಿಗೆ ಗಾಬರಿಯಾಯಿತು. ವರಾಹದ ದಂತವೇ ಸೋತಿದೆ ಎಂದರೆ ನನ್ನ ಅಂತ್ಯ ಕಾಲ ಬಂದಿರಬೇಕು ಅನ್ನಿಸಿತು. ಅದೇ ಸಮಯಕ್ಕೆ ನರಕಾಸುರನಿಗೆ ತನಗಿರುವ ವರದ ಜ್ಞಾಪಕ ಬಂತು. ತನ್ನ ತಾಯಿಯಿಂದ ಮಾತ್ರ ತನಗೆ ಸಾವು ಅಂದ ಮೇಲೆ ಸತ್ಯಭಾಮೆಯೇ ತನ್ನ ಹಿಂದಿನ ಜನ್ಮದಲ್ಲಿ ತಾಯಿ ಮತ್ತ್ರು ಶ್ರೀಕೃಷ್ಣ ವರಾಹನಲ್ಲದೇ ಬೇರೆ ಯಾರೂ ಅಲ್ಲ ಎಂದು ಅವನಿಗೆ ಅರಿವಾಯಿತು. ಕೃಷ್ಣ ಮತ್ತು ಸತ್ಯಭಾಮೆಯರ ಬಾಣದಿಂದ ನರಕಾಸುರ ನೆಲಕ್ಕುರುಳಿದ.

ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನ ಒಂದು ವರ ಕೇಳಿದ. 'ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ದಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ಸಾವನ್ನ್ನು ಆಚರಿಸಿಲಿ' ಎಂದು ವರವನ್ನು ಬೇಡಿದ. ಭೂದೇವಿಯಾದ ಸತ್ಯಭಾಮೆ ಮನಕರಗಿ ವರವನ್ನು ಕೊಟ್ಟಳು. ನರಕಾಸುರ ಕಡೆಗೆ ಸತ್ತ. ಶ್ರೀಕೃಷ್ಣ ನರಕನು ಬಂಧಿಸಿದ್ದ ಹದಿನಾರು ಸಾವಿರ ಸ್ತ್ರೀಯರನ್ನ ಬಿಡುಗಡೆ ಮಾಡಿದ, ನರಕಾಸುರನ ಮಗ ಭಗದತ್ತನನ್ನ ರಾಜನನ್ನಾಗಿ ಮಾಡಿದ. ಮತ್ತು ತಕ್ಷಣವೇ ಸತ್ಯಭಾಮೆಯ ಸಮೇತ ಗರುಡನ ಮೇಲೇರಿ ಸ್ವರ್ಗದಲ್ಲಿರುವ ಇಂದ್ರನಿಗೆ ಅದಿತಿದೇವಿಯ ಓಲೆಗಳನ್ನು ಗೌರವದಿಂದ ಅರ್ಪಿಸಿ ದ್ವಾರಕೆಗೆ ಹಿಂದಿರುಗಿದ. 

0 Comments:

Post a Comment

<< Home