ಜೀವಸಂಶಯ

ಓದು-ಬರಹಕ್ಕೆ ಮನಸೋತು ಏನೆಲ್ಲದರ ಬಗ್ಗೆ ಆಸಕ್ತಿಯಿರುವಂತಿರುವ ನಾನು ಯಾವುದರಲ್ಲಿ ಭದ್ರವಾದ ನೆಲೆ ಹೊಂದಿದ್ದೇನೆ ಎನ್ನುವುದು ಬಗೆಹರಿಯದಿರುವುದರಿಂದ ಈ ತಾಣಕ್ಕೆ ಜೀವಸಂಶಯ ಎಂದು ಹೆಸರಿಟ್ಟಿದ್ದೇನೆ.

Saturday, March 22, 2008

ಭಾರತೀಯನಿಗೇ ವಿಶಿಷ್ಟವಾದ ಆಧುನಿಕತೆಯ ಶೋಧವಿರುವ 'ನವಿಲುಗಳು' ಕತೆ


ಈ ಲೇಖನವನ್ನು ಬರೆದದ್ದು ನನ್ನ ಸ್ನೇಹಿತನೊಬ್ಬನ ಪ್ರಶ್ನೆಯೊಂದಕ್ಕೆ ಉತ್ತರವಾಗಿ. ಡಾ ಅನಂತಮೂರ್ತಿಗಳ ನವಿಲುಗಳು ಕಥೆಯ ಕುರಿತು ನಾಲ್ಕು ಸಾಲುಗಳಲ್ಲಿ ಬರೆ ಎಂದಿದ್ದ. ನನ್ನ ಜಾಯಮಾನದಲ್ಲೇ ನಾಲ್ಕು ಸಾಲುಗಳಲ್ಲಿ ಬರೆಯುವುದು ಬರೆದಿಲ್ಲ. ಮನಸ್ಸಿನಲ್ಲಿ ಮೂಡುವ ಎಲ್ಲವನ್ನೂ ಮಂಡಿಸಲೇಬೇಕು ಎನ್ನುವ ಹಠ ಅದಕ್ಕೆ ಅಡ್ಡಿಯಾಗುತ್ತದೆ. ಇಷ್ಟಾಗಿಯೂ ಬರೆದೆ. ನನ್ನ ಬಹಳವಾಗಿ ಕಾಡಿದ ಈ ಕಥೆಯ ಕುರಿತಾಗಿ ನನಗೆ ಕನ್ನಡ ವಿಮರ್ಶೆಯಲ್ಲಿ ಇರುವ ಅಭಿಪ್ರಾಯಗಳಿಗಿಂತ ಭಿನ್ನವಾದ ನಿಲುವು ಇದೆ ಎಂದೆನ್ನಿಸಿದ ಕಾರಣ ಇದನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ.

ನನ್ನ ಗ್ರಹಿಕೆಯ ಕ್ರಮದಲ್ಲಿ ಮೂಡಿದ ಕಥಾ ಸ್ವಾರಸ್ಯ ಇಷ್ಟು. ಸಾರ್ವತ್ರಿಕ ಕಳಕಳಿಯ ಅಂಶಗಳನ್ನೊಳಗೊಂಡೂ ಭಾರತೀಯನಿಗೇ ವಿಶಿಷ್ಟವಾದ ಭಿತ್ತಿಯೊಂದನ್ನು ಮೂಡಿಸುವ ಈ ಕಥೆ ನಾಲ್ಕು ನೆಲೆಗಳಲ್ಲಿ ಹರಡಿಕೊಂಡಿದೆ: ಒಂದು - ಬಾಲ್ಯದ ಮುಗ್ಧತೆ ಮತ್ತು ಮಧ್ಯವಯಸ್ಕ ಪ್ರೌಢಿಮೆ, ಎರಡು - ಆಧುನಿಕತೆ ಮತ್ತು ಪರಂಪರೆ, ಮೂರು - ಅತಿಬೌದ್ಧಿಕತೆ ಮತ್ತು ವ್ಯಕ್ತಿತ್ವ ಸಹಜತೆ, ನಾಲ್ಕು - ಚೌಕಟ್ಟು, ಪರಿಮಿತಿ, ಬಂಧನ ಮತ್ತು ಸ್ವಾತಂತ್ರ್ಯ.


ಇಲ್ಲಿನ ಕಥಾನಾಯಕ ಒಬ್ಬ ವಿಶಿಷ್ಟ ಆಧುನಿಕ ಭಾರತೀಯ. ಭಾರತದಲ್ಲಿ ಆಧುನಿಕತೆಯ ಬೃಹತ್ ಪ್ರಕ್ರಿಯೆಯ ವಿಶಿಷ್ಟ ಕೂಸು. ಈ ಪ್ರಕ್ರಿಯೆಯ ಒಂದು ವಿಶಿಷ್ಟ ಹಂತದಲ್ಲಿ ಸ್ಟಾಕ್ ಟೇಕಿಂಗ್-ಗೆ ತೊಡಗುತ್ತಾನೆ. ತನ್ನ ಜೀವಿತಾವಧಿಯಲ್ಲಿ ತನ್ನ ಜೀವನರೀತಿಯ ವೈಶಿಷ್ಟ್ಯದಿಂದ ಪಡೆದುಕೊಂಡದ್ದೇನು ಎನ್ನುವ ಸಿಂಹಾವಲೋಕನಕ್ಕೆ, ಆತ್ಮಾವಲೋಕನಕ್ಕೆ ತೊಡಗುತ್ತಾನೆ. ಭೂತ, ವರ್ತಮಾನಗಳ ಒತ್ತಡವೊಂದು ಕಾಲದ ಬಿಂದುವೊಂದರಲ್ಲಿ ಸೃಷ್ಟಿಸಿರುವ ಈ ಆತ್ಮಾವಲೋಕನವನ್ನು ನಿರ್ದೇಶಿಸುತ್ತಿರುವುದು ಆಧುನಿಕತೆಯೋ ಪರಂಪರೆಯೋ ಎನ್ನುವುದು ಬಹುಮುಖ್ಯವಾದ ಪ್ರಶ್ನೆ.

o---------------o------------------o------------------o-----------------o-----------------o

ಕಥಾನಾಯಕ ತನ್ನ ಅಪ್ಪ ಅಮ್ಮಂದಿರನ್ನು, ಚಿಕ್ಕಂದಿನಲ್ಲಿ ತಾನು ಅವರನ್ನು ಗ್ರಹಿಸಿದ ಬಗೆಯನ್ನು ನೆನೆಯುತ್ತಾನೆ. (ಒಂದು ಬಗೆಯಲ್ಲಿ ಇದನ್ನು ಆತ್ಮಾವಲೋಕನಕ್ಕೆ ಹಿನ್ನೆಲೆಯೆಂದಾಗಿಯೂ ಪರಿಗಣಿಸಬಹುದು). ಅವನ ಕಣ್ಣಿನಲ್ಲಿ ತನ್ನ ಅಪ್ಪ ಪರಂಪರೆಯ ಪ್ರತಿನಿಧಿ. ಅಪ್ಪ ತನ್ನ ಸಹಜವಾದ ಸ್ವಾತಂತ್ರ್ಯವನ್ನು ಸಾಮಾಜಿಕ ಕಟ್ಟುಗಳಿಗೆ ಅಡವಿಡುವುದಕ್ಕೆ ಒಪ್ಪವುದಿಲ್ಲ. ಅದೇ ಕಾರಣಕ್ಕೆ ತನ್ನ ಕುಟುಂಬದ ಶ್ರೇಯಸ್ಸನ್ನು ಕಾಪಾಡಲಾಗದೇ ಹೋಗಿದ್ದಾನೆ. ಇದಕ್ಕೆ ಕಾರಣಗಳು ಸ್ಪಷ್ಟವಿಲ್ಲ. ಆಧುನಿಕ ವ್ಯವಸ್ಥೆಗಳು ಸಮಾಜವನ್ನು ಬೇಧಿಸಿ ಒಳನುಸುಳುತ್ತಿರುವ ಸಂದರ್ಭವದು. ಅದಕ್ಕೆ ಹೊಂದಿಕೊಳ್ಳಲಾಗದೇ ಅಪ್ಪ ಈ ರೀತಿಯಾಗಿದ್ದಿರಬಹುದು. ಆದರೆ, ಕಥಾನಾಯಕನ (ಬುದ್ಧಿಗೆ ಹೊಳೆದಿರಬಹುದಾದ?) ಮನಸ್ಸಿಗೆ ಈ ಯಾವ ವಿವರಣೆಗಳೂ, ಕಾರಣಗಳೂ ತಟ್ಟಿಲ್ಲ. ಅಪ್ಪನ ವರ್ತನೆಯ ಫಲವಷ್ಟೇ ಮನದುಂಬಿದೆ. ಅಪ್ಪನ ನಡೆ, ನಿಲುವುಗಳಿಂದಲೇ ಉಂಟಾದ ತನ್ನ ತಾಯಿಯ ಮತ್ತು ತನ್ನ ಪರಿಸ್ಥಿತಿ ಅಪ್ಪನಿಗೆ ತಟ್ಟಲಿಲ್ಲ ಎಂದೇ ಕಥಾನಾಯಕನ ಗ್ರಹಿಕೆ. ಅಷ್ಟೇ ಅಲ್ಲದೆ, ಕಥಾನಾಯಕನಿಗೆ ಇದು ಪರಂಪರೆಯ ಕುರಿತೇ ಮಹತ್ವದ ವಿಷಯವಾಗಿ ಕಾಣುತ್ತದೆ. ಅಪ್ಪನ ನೆರಳಲ್ಲಿರುವವರೆಗೆ ಪರಂಪರೆ ಚೌಕಟ್ಟೆನ್ನಿಸದೇ (ತನ್ನ ತಾಯಿಗೂ, ತನಗೂ?) ಬಂಧನವೆನ್ನಿಸುತ್ತದೆ. ಸಮಸ್ಯೆಗಳಿಗೆ ಪರಿಹಾರವಿಲ್ಲವೆಂದೆನ್ನಿಸುತ್ತದೆ.


ಇದೇ ಪ್ರೇರಣೆಯಾಗಿ ಆಧುನಿಕತೆಯ ಪ್ರಮುಖ ಸಂಗತಿಯಾದ ವೈಯಕ್ತಿಕತೆಯನ್ನು ಮೈಗೂಡಿಸಿಕೊಂಡಿರುವ ನಾಯಕ ಈ ಹೊಸ ಚೌಕಟ್ಟಿನಲ್ಲಿ ಅಂತಿಮವಾಗಿ ಗಳಿಸಿರುವುದು ಕೌಟುಂಬಿಕ ಸ್ವಾತಂತ್ರ್ಯ, ವಂಶಾಭಿವೃದ್ಧಿ, ಜೀವನಸ್ಥಿರತೆ ಮತ್ತು ಪ್ರಾಯಶಃ ತನಗೆ ಬೇಕಾದ ಜೀವನಸಂಗಾತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುವ ಅಹಂ.

o---------------o------------------o------------------o-----------------o-----------------o

ಈ ಇಂತಹ ಪರಿಸ್ಥಿತಿಯಲ್ಲಿ ಆತ್ಮಾವಲೋಕನಕ್ಕೆ ತೊಡಗಿರುವ ಕಥಾಯಕನಿಗೆ ಈಗೀಗ ಅವನಿಗೆ ತನ್ನ ಆಧುನಿಕ ಜೀವನವೂ ಬಂಧನವೆನ್ನಿಸತೊಡಗಿದೆ. ಕಥಾನಾಯಕನ ಜೀವನರೀತಿಯ ಯಶಸ್ಸನ್ನು ತನ್ನ ಅಸ್ತಿತ್ವದಿಂದಲೇ ಬಹುಮುಖ್ಯವಾಗಿ ಧ್ವನಿಸುವ ಜೀವನಸಂಗಾತಿಯೊಡನೆ ಈಗೀಗ ಘರ್ಷಣೆಯಿದೆ, ಅತೃಪ್ತಿಯಿದೆ. ಅದು ವರ್ತಮಾನದ ಸ್ಥಿತಿ. ಈ ವರ್ತಮಾನ ಕಥಾನಾಯಕನ ಭೂತದ ಕಾಲದ ಪರಿಕಲ್ಪನೆಯನ್ನೂ ಬದಲಾಯಿಸುತ್ತಿದೆ. ತಾನು ಅಪ್ಪನಲ್ಲಿ ದ್ವೇಷಿಸುತ್ತಿದ್ದ ಸ್ವಾತಂತ್ರ್ಯಪ್ರಿಯತೆ ಈಗ ಅವರ ವ್ಯಕ್ತಿತ್ವದ ಬಹುಮುಖ್ಯ ಸಂಗತಿಯಾಗಿ ಆಕರ್ಷಿಸುತ್ತಿದೆ. ತನ್ನ ಜೀವನದಲ್ಲಿ ಅದರ ಕೊರತೆ ಎದ್ದು ಕಾಣುತ್ತಿದೆ. ತನ್ನ ಜೀವನ ರೀತಿಯ ಮಹತ್ತರ ಪ್ರತಿನಿಧಿಗಳು ಈಗ ಕಥಾನಾಯಕನಿಗೆ ತನ್ನ ಜೀವನವನ್ನು ಬಂಧಿಸುತ್ತಿವೆ ಎಂದೆನ್ನಿಸುತ್ತಿದೆ. ಈ ತನ್ನ ಪ್ರತಿನಿಧಿಗಳ ಸಮಕ್ಷಮದಲ್ಲೇ ಪರಂಪರೆಯನ್ನು ಮೆಚ್ಚುವ, ಪ್ರತಿನಿಧಿಗಳನ್ನು ಚುಚ್ಚುವ ಮನಸ್ಸಾಗುತ್ತಿದೆ. ತನ್ಮೂಲಕ ಮತ್ತೆ ಹೊಸಮನುಷ್ಯನಾಗುತ್ತಿದ್ದೇನೆನ್ನುವ ತೃಪ್ತಿಗೆ ಕಥಾನಾಯಕ ಹಾತೊರೆಯುತ್ತಿದ್ದಾನೆ.

ಆದರೆ ಅದೂ ಕೂಡಾ ಹುಸಿಯೆನ್ನುವಂತಿದೆ. ಮತ್ತೆ ಹೊಸಮನುಷ್ಯನಾಗುವ ಪ್ರಕ್ರಿಯೆಗೆ ತೊಡಗಿಕೊಳ್ಳುವ ಸ್ಥೈರ್ಯವಾಗಲೀ, ನಿಜಾಕಾಂಕ್ಷೆಯಾಗಲೀ ಕಥಾನಾಯಕನಿಗೆ ಇದ್ದಂತಿಲ್ಲ. ಅದು ಕೂಡಾ ತೋರಿಕೆಯದ್ದಾಗಿದೆ, ಕೇವಲ ಬೌದ್ಧಿಕವಾಗಿದೆ. ಆತ್ಮವಂಚನೆಯಾಗಿದೆ. (ಈ ಹಂತದಲ್ಲಿ ನನಗೆ ಕಥೆ ಆಧುನಿಕತೆಯ ಬಹುದೊಡ್ಡ ಸಮಸ್ಯೆಯನ್ನು ಧ್ವನಿಸುತ್ತಿದೆ ಎಂದೆನ್ನಿಸಿತು. ಆಧುನಿಕತೆಯ ಕ್ರಮದಲ್ಲಿ ಮಹತ್ವದ್ದರ ಅರಿವಾಗುತ್ತದೆ. ಆದರೆ ಆ ಅರಿವು ಕ್ರಿಯಾಶೀಲವಾಗುವಷ್ಟು ಶಕ್ತವಾಗಿರುವುದಿಲ್ಲ. ಈ ಬರಿಯ ಬೌದ್ದಿಕತೆ ನಮ್ಮನ್ನು ಅತಂತ್ರವಾಗಿಸುತ್ತದೆಯೇ?)

ಕಥಾನಾಯಕ ತನ್ನ ಆಧುನಿಕ ಕ್ರಮದಲ್ಲೇ ಆತ್ಮಾವಲೋಕನದಲ್ಲಿ ಮತ್ತಷ್ಟು ಮುಂದುವರೆದು ಪಡೆಯುವ ಸ್ಪಷ್ಟತೆಯಿಷ್ಟು. ಎಷ್ಟೆಲ್ಲ ಹೀಗೆ ಬದಲಾಯಿಸಿಯೂ ಆಧುನಿಕತೆ ಒಂದಿಷ್ಟು ಮುಖ್ಯವಾದ ಅರಿವಿಗೇ ಬೇಕಾಗುವಷ್ಟು (ಪಾರಂಪರಿಕ?) ಸತ್ವವನ್ನು ಉಳಿಸಿದೆ. ಆದರೆ ಮತ್ತಷ್ಟು ಅನೇಕ ವಿಷಯಗಳಿಗೆ access ಅಸ್ಪಷ್ಟಗೊಳಿಸುತ್ತದೆ. ಪರಂಪರೆಯಿರಲಿ ಬಾಲ್ಯವನ್ನೇ inaccessible ಮಾಡುತ್ತದೆ. ಬಾಲ್ಯ, ಪರಂಪರೆಗಳ ಅನುಭವದ ಸೌಂದರ್ಯವನ್ನು, ಅದರ ಅಸ್ತಿತ್ವವನ್ನೇ ಅನುಮಾನಿಸುವಂತೆ ಮಾಡುತ್ತದೆ. ಇವತ್ತನ್ನು ಮಾತ್ರ ನಂಬುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಜೀವನವನ್ನು ನಿಸ್ಸಾರಗೊಳಿಸುತ್ತದೆ. ಕಥಾನಾಯಕನಲ್ಲಿ ಈ ಅರಿವಿನಿಂದುಂಟಾಗುವ ಸಿಟ್ಟು ಕೂಡಾ ಎಷ್ಟು ಸ್ವಕೇಂದ್ರಿತವಾಗಿಬಿಟ್ಟಿದೆಯೆಂದರೆ: ತನ್ನ ಜೀವನರೀತಿಯ ಬಹುದೊಡ್ಡ ಪ್ರತಿನಿಧಿಯಾದ ತನ್ನ ಹೆಂಡತಿ ಕೂಡಾ ಇದೇ ಪ್ರಕ್ರಿಯೆಯಲ್ಲಿ ತನ್ನ ತರಹ ಆಗಿದ್ದಾಳೆ ಎನ್ನುವುದರ ಅರಿವು ಕೂಡಾ ಕಥಾನಾಯಕನಿಗೆ ಕಷ್ಟವಾಗಿದೆ. ಈ ಅರಿವು, ಬಂಡಾಯಗಳು ಆತ್ಮಹಿಂಸೆಗಷ್ಟೇ ಅನುವುಮಾಡಿಕೊಡುತ್ತಿದೆ, ಮರುಹುಟ್ಟಿಗಲ್ಲ. (ಇದು ಕೂಡಾ ಆಧುನಿಕತೆಯ ವೈಶಿಷ್ಟ್ಯವೇ?)

ಇದೆಲ್ಲವೂ ಆಧುನಿಕತೆಯ ಕುರಿತು ಥಿಯರೈಸ್ ಮಾಡುವಂತೆ ಪ್ರೇರೇಪಿಸುತ್ತದೆ. ಆಧುನಿಕತೆ ಹೊಸ ಚೌಕಟ್ಟು ತನ್ಮೂಲಕ ಹೊಸದಾದ ಜೀವನ ಸುಭದ್ರತೆ, ಸುರಕ್ಷಿತತೆಗಳ ಆಶ್ವಾಸನೆ ಕೊಡುತ್ತದೆ. ಆದರೆ ಅದರ ಗಳಿಕೆಯ ಹಾದಿ ಮತ್ತು ಕಡೆಗೆ ನಮ್ಮನ್ನು ತಲುಪಿಸುವ ನೆಲೆ, ಸ್ಥಿತಿಗಳಲ್ಲಿ ಇರುವ ಜೀವನಾನುಭವದ ಮಿತಿ ನಮ್ಮನ್ನು ಕೊಳೆಸುತ್ತದೆ. ಚೌಕಟ್ಟು ಮತ್ತೆ ಬಂಧನವೆನ್ನಿಸುತ್ತದೆ. ಸ್ವಾತಂತ್ರ್ಯವಿರಲಿ, ಸ್ವಚ್ಛಂದವನ್ನು ಬಯಸುವಂತಾಗುತ್ತದೆ.

o---------------o------------------o------------------o-----------------o-----------------o

ಈ ಹಂತದಲ್ಲಿ ಕಥೆ ಚಿಕ್ಕದಾಗಿ ಸಾರ್ವತ್ರಿಕ ನೆಲೆಗಳಿಗೆ ಹಾರುತ್ತದೆ. ಎಲ್ಲಾ ಕಾಲದಲ್ಲಿಯೂ ಸ್ವಚ್ಛಂದತೆಯ ಬಯಕೆ ಇದ್ದೇ ಇದೆ. ಅದು ಅಪಾಯಕ್ಕೆ ದಾರಿಸಿದ್ಧಪಡಿಸಿಯೇ ಇರುತ್ತದೆಯಾಗಿ ಅದರಲ್ಲಿ ವಿಹರಿಸಬಯಸುವ ಮನುಷ್ಯ ಸುರಕ್ಷಿತತೆಯತ್ತ ಗಮನವಿತ್ತೇ ಇರುತ್ತಾನೆ. ಆದರೆ ತಮ್ಮ ಸುರಕ್ಷಿತತೆಯನ್ನು ಮತ್ತೊಬ್ಬರ ಸ್ವಾತಂತ್ರ್ಯ-ಹರಣದಲ್ಲಿ ಮನುಷ್ಯರು ಗಳಿಸಿದರೂ ಅದು ಗಮನಕ್ಕೆ ಬರುವುದಿಲ್ಲ. ತಮಗಾಗುವ ಸ್ವಾತಂತ್ರ್ಯಹರಣ ಮಾತ್ರ ಅನುಭವಕ್ಕೆ ಬರುತ್ತದೆ. ಸ್ವಾತಂತ್ರ್ಯದ ಹಾದಿಯಲ್ಲಿ ಚೌಕಟ್ಟು, ಬಂಧನದಲ್ಲಿದ್ದಾಗ ಸ್ವಚ್ಛಂದ - ಇದು ಎಂದೆಂದಿಗೂ ಮುಗಿಯದ ಕತೆಯಾಗಿಬಿಡುತ್ತದೆ.

ಸಂದರ್ಭಕ್ಕೆ ವಾಪಾಸು ಬರುವ ಕಥೆ ಕಥಾನಾಯಕನ ಆತ್ಮಾವಲೋಕನವನ್ನು ಮುಂದುವರೆಸುತ್ತದೆ. ಗಮನ ಆಧುನಿಕತೆಯ ಮಾರ್ಗದಿಂದ ಆಧುನಿಕ ಬೌದ್ಧಿಕತೆಯ ಸ್ವರೂಪದತ್ತ ಹರಿಯುತ್ತದೆ. ಆಧುನಿಕ ಬೌದ್ಧಿಕತೆಯ ಸಮಸ್ಯೆಯೆಂದರೆ ಮತ್ತೊಬ್ಬರಲ್ಲಿ ಕಾಣುವ ಜೀವಂತಿಕೆಯ ಸೆಲೆಯನ್ನು ಕಾಣುವಷ್ಟು ಶಕ್ತಿ ಉಳಿಸಿರುತ್ತದೆ. ಬೌದ್ಧಿಕತೆಯನ್ನು ಮೀರಿದ ಅನುಭವವನ್ನು ಧರಿಸುವ ಶಕ್ತಿಯಿದ್ದ ಕಾಲವನ್ನು ಜ್ಞಾಪಿಸುತ್ತದೆ. ಆದರೆ ಅವೆರಡನ್ನೂ ಸಹ ನಿಜವೋ ಸುಳ್ಳೋ ಅನುಮಾನಿಸುವಂತೆ ಮಾಡುತ್ತದೆ. ಇದರಿಂದ ಸಾಧ್ಯವಾಗಿರುವ 'ಸ್ಥಿತಿಯ ಅರಿವಿಗೆ' ಮರುಹುಟ್ಟನ್ನು ಸಾಧ್ಯವಾಗಿಸುವುದಕ್ಕಿಂತ ವ್ಯಕ್ತಿತ್ವದ ಹುಸಿಯನ್ನು ಹೆಚ್ಚಾಗಿಸುವುದೇ ಸಹಜವಿರುವಂತಿದೆ. ಆಧುನಿಕ ಬೌದ್ಧಿಕತೆ ವ್ಯಾವಹಾರಿಕ ಏಳ್ಗೆಯೇ ಉದ್ದಿಶ್ಯವಾಗಿರಿಸಿಕೊಂಡಂಥದ್ದು. ಅದಕ್ಕಿಂತ ಹೆಚ್ಚಿನ ಜೀವನಾನುಭವವನ್ನು ವಂಚಿಸುತ್ತದೆ. ಆದರೆ ಅದರ ಮಂಪರಿನ ಅರಿವನ್ನು ಮಾತ್ರ ಉಳಿಸಿರುತ್ತದೆ.

o---------------o------------------o------------------o-----------------o-----------------o

ಕಥಾನಾಯಕನಿಗೆ ಈ ಸ್ಥಿತಿಯ ಹಿಂಸೆಯಿಂದ (ಪಾರಾಗುವುದಕ್ಕೆ?) ಇತಿಹಾಸಕ್ಕೆ ಹಿಂದಿರುಗಿ ತನ್ನ ಪರಂಪರೆಯ ಜೀವಂತಿಕೆಯನ್ನು ಮರಳಿ ಪಡೆಯಬೇಕೆನ್ನಿಸಿದೆ. ಆದರೆ ಈ ಮರಳುವಿಕೆ ಸುಲಭವಾಗಿಲ್ಲ. ಈ ಕ್ರಮ ಆಧುನಿಕವಾದ್ದರಿಂದ ಅದರ ಇತಿಹಾಸದ ಮುಂಚಲನೆಗೇ ಅದು ಮಹತ್ವ ಕೊಡುತ್ತದೆ. ಆಧುನಿಕತೆಯ ಮುಂಚಲನೆಯ ಪ್ರಕ್ರಿಯೆ ತನ್ನ ಜೀವನದಲ್ಲಿ ನಡೆಸಿದ ಬದಲಾವಣೆಗಳು ಕಥಾನಾಯಕನಿಗೆ ಈ ಮರಳುವಿಕೆ ಅಸಾಧ್ಯವಾಗಿಸುತ್ತದೆ. ತನ್ನದೇ ವೈಯಕ್ತಿಕ ಪಾಡು, ತಾಯಿಯ ಹರಿದ ಬಟ್ಟೆ - ಇವುಗಳು ತಂದೆಯಿಂದ ದೂರವಾಗುವುದಕ್ಕೆ ಪ್ರೇರಣೆ ಕೊಟ್ಟು, ಆಧುನಿಕತೆಯ ಹಾದಿಯನ್ನು ಕ್ರಮಿಸುವಂತೆ ಮಾಡಿದೆ.
ಕಥಾನಾಯಕನ ಆತ್ಮಾವಲೋಕನದ ಕ್ರಮ ಮತ್ತಷ್ಟು ವಿಪರ್ಯಾಸಗಳನ್ನು ಗುರುತಿಸುತ್ತದೆ. ತಾನು ಈ ಆಧುನಿಕತೆಯ ಜೀವನಕ್ರಮ ಹಿಡಿದದ್ದರ ಮುಖ್ಯ ಪ್ರೇರಣೆ ತನ್ನ ತಾಯಿಯ ಪಾಡು. ಅಂತೆಯೇ, ಆಧುನಿಕತೆಯ ಇದೇ ಕ್ರಮ ಇಂದು ತನ್ನ ಜೀವನಸಂಗಾತಿಯನ್ನು ಗಳಿಸಿಕೊಟ್ಟಿದೆ, ಇಂದು ಅವಳೇ ತನ್ನ ಜೀವನ ರೀತಿಯ ಮುಖ್ಯ ಪ್ರತಿನಿಧಿ. ಆದರೆ ಇದೇ ಜೀವನಸಂಗಾತಿಯ ಕಾರಣ, ಅದೇ ತಾಯಿಯಿಂದ ದೂರವಾಗುವಂತಾಗಿದೆ. ಆಧುನಿಕತೆ ನಾವು ಬಯಸಿದಲ್ಲಿ ನಿಲ್ಲುವುದಿಲ್ಲ, ಅದರ ಮೇಲ್ಚಲನೆ ತನ್ನಷ್ಟಕ್ಕೆ ತಾನೇ ಸ್ವತಂತ್ರ. ಇದೆಲ್ಲ ಕಥಾನಾಯಕನಿಗೆ ಆತ್ಮವಿಮರ್ಶೆಯಲ್ಲಿ ಕಾಣಿಸುತ್ತದೆ. ಆದರೆ ಆಧುನಿಕ ಬೌದ್ಧಿಕತೆಯೆನ್ನುವುದು ಆತ್ಮವಿಮರ್ಶೆಯನ್ನೂ ಕ್ಷುದ್ರವಾಗಿಸುವ ಶಕ್ತಿ ಪಡೆದಿದೆ. ಇದು ಕ್ರಿಯಾಶೀಲತೆಯಾಗಿ ಮುಂದುವರೆದಿಲ್ಲ.

o---------------o------------------o------------------o-----------------o-----------------o

ಇಷ್ಟು ನಿರಾಶಾವಾದಿಯಾಗುವ ಅವಶ್ಯಕತೆಯೂ ಇಲ್ಲ. ಆದರೆ ಆಗಾಗ್ಗೆ ಈ ಸುಳಿಯಿಂದ ತಪ್ಪಿಸಿಕೊಂಡು ನಮ್ಮ ಪಾರಂಪಾರಿಕ ಪಾವಿತ್ರ್ಯವನ್ನು ಮತ್ತೆ ಸಾಕ್ಷಾತ್ಕರಿಸಿಕೊಳ್ಳುವ ಹಾದಿಗಳೂ ಇನ್ನೂ ಇವೆಯೆನ್ನಿಸುತ್ತದೆ. ಬೌದ್ಧಿಕತೆಯನ್ನು ಮೀರಿದ ಅನುಭವಕ್ಕೆ ತೆರೆದುಕೊಂಡಾಗ (ಮಧುರವಾದ ಹಾಡೊಂದನ್ನು ಕೇಳಿದಾಗ) ಹೀಗೆನ್ನಿಸುತ್ತದೆ. ಇನ್ನೂ ಬದಲಾಗದ ಕಾಡೊಳಗಿನ ಧೂಳು ರಸ್ತೆಯಲ್ಲಿ ಶರದೃತುವಿನ ಬೋಳು ಮರಗಳು ಇನ್ನೂ ಇವೆ. ಆದರೆ 'ಪರಂಪರೆಯ ಗ್ರಹಿಕೆಯಾಗಿ ಅಪ್ಪ' ಇರುವವರೆಗೆ ನಾವು ಅತ್ತ ಇಣುಕುವುದಿಲ್ಲ. ಕಥಾನಾಯಕನೂ ಸಹ. ಅವರನ್ನು ಕಳೆದುಕೊಂಡ ನಂತರವೇ ಅದರತ್ತ ಪ್ರೇರಣೆ.

ಇಷ್ಟೆಲ್ಲಾ ಆದರೂ ಕಥಾನಾಯಕನಿಗೆ ಪರಂಪರೆಯಲ್ಲೇನೋ ಸಮಸ್ಯೆ ಕಂಡಿದೆ. ಅದನ್ನು ಸಾಂದರ್ಭಿಕ ಮತ್ತು ಸಾರ್ವತ್ರಿಕ ನೆಲೆಗಳಲ್ಲಿ ಶೋಧಿಸುವುದಕ್ಕೆ ತೊಡಗುತ್ತದೆ. ಯಾವ ಚೌಕಟ್ಟು ತನ್ನ ತಂದೆ ತನ್ನ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕೆ, ತನ್ಮೂಲಕ ಒಂದು ಒಳದಾರಿಯನ್ನು ಗಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿಸಿತೋ, ಅದು ತನ್ನ ತಾಯಿಯ ಸ್ವಾಸ್ಸ್ಥ್ಯವನ್ನು, ಸುರಕ್ಷಿತತೆಯನ್ನು ಸಾಧ್ಯವಾಗಿಸಲಿಲ್ಲವಲ್ಲ! ಅಪ್ಪನ ಸ್ವಾತಂತ್ರ್ಯದ ಬಯಕೆ, ಅಮ್ಮನ ಸುಭದ್ರತೆಯ ಬಯಕೆ ಒಂದಕ್ಕೊಂದು ಘರ್ಷಿಸಿವೆ. (ಈ ಘರ್ಷಣೆಯ, ಬಿರುಕಿನ ಮಧ್ಯದಲ್ಲಿ ಆಧುನಿಕತೆ ತನ್ನ ಪ್ರಕ್ರಿಯೆಯನ್ನು ಸಾಧ್ಯವಾಗಿಸಿದೆ.)
ಅಲ್ಲೂ ಸಹ ಸ್ವಾತಂತ್ರ್ಯ-ಚೌಕಟ್ಟುಗಳ ತಿಕ್ಕಾಟದ ಮಧ್ಯದಲ್ಲಿ ತತ್ಪರತೆ (ಮಗನಾದ ಕಥಾನಾಯಕನಿಗೆ) ಆಗಾಗ್ಗೆ ಸಾಧ್ಯವಾಗಿರುವಂತಿದೆ. ಚೌಕಟ್ಟಿನತ್ತಲೇ (ತಾಯಿ) ಮನಸೆಳೆದಿರುವ ಸ್ವಾತಂತ್ರ್ಯವನ್ನು (ತಂದೆ) ಹಿಂಬಾಲಿಸಿತ್ತಲೇ ಸಾಗುವ ಈ ಹಾದಿಯಲ್ಲಿ ಕಥಾನಾಯಕನಿಗೆ ನವಿಲುಗುಡ್ಡ, ನವಿಲುಗರಿ, ತತ್ಪರತೆ, ಒಳದಾರಿಯಿಂದ ಜೀವನಸಾಫಲ್ಯ. ಅಂದೂ, ಇಂದೂ ಆ ಚೌಕಟ್ಟನ್ನು ಮೀರುವ ಕ್ರಮದಲ್ಲೇ ನವಿಲುಗುಡ್ಡ, ನವಿಲುಗರಿ ಗಳಿಕೆ ಸಾಧ್ಯ.

ಸ್ವಲ್ಪ ತಾತ್ವೀಕರಿಸುತ್ತೇನೆ. ಇಷ್ಟಕ್ಕೆ ಕಥೆ ಪ್ರೇರೇಪಿಸುತ್ತದೆ - ತನ್ನೊಳಗೆ ಈ ಆಕೃತಿಯನ್ನು ಸಾಧ್ಯವಾಗಿಸುತ್ತದೆ. ಒಂದು ಜೀವನಕ್ರಮವನ್ನು ಜೀವನ್ಮರಣದ ಪ್ರಶ್ನೆಯೆನ್ನುವಂತೆ ಬದುಕುವ ಮನುಷ್ಯನಿಗೆ (ಕಥಾನಾಯಕನ ಅಪ್ಪ) ಅದರ ಸರಿ-ತಪ್ಪು ಕಾಡುವುದಿಲ್ಲವೆಂದೆನ್ನಿಸುತ್ತದೆ. ಆದರೆ ಅದು inaccessible ಆದ ಮನುಷ್ಯನಿಗೇ (ಕಥಾನಾಯಕ) ಅದು ಹೆಚ್ಚು ಮುಖ್ಯವೆಂದೆನ್ನಿಸುತ್ತದೆ. ಒಳದಾರಿಯೊಂದು ಫಲಿಸಿದಾಗ ನೈತಿಕತೆ, ಬೌದ್ಧಿಕತೆಯ ಸಮಸ್ಯೆ ಅಷ್ಟಾಗಿರುವುದಿಲ್ಲ. ಚೌಕಟ್ಟೊಂದು ಒಳದಾರಿಯೊಂದನ್ನು ಸೃಷ್ಟಿಸಿಕೊಂಡು ಸಾಫಲ್ಯ ಕಂಡುಕೊಂಡ ನಂತರ ಮಿಕ್ಕೆಲ್ಲ ಚೌಕಟ್ಟುಗಳ ಜೊತೆಯೂ ಹೊಂದಾಣಿಕೆಗೆ ಸಿದ್ಧವಿರುತ್ತದೆ, ಘರ್ಷಣೆಯ ಭಯವಿಲ್ಲದೇ. ಒಳದಾರಿ ಕಳೆದ ಮೇಲೂ ಸಹ. ಆದರೆ ತನ್ನ ಚೌಕಟ್ಟಿನ ಅರಿವೂ ಸಹ ಗಾಢವಾಗಿರುತ್ತದೆ. ಇದು ನಮ್ಮ ಜೀವನ ರೀತಿಯೇ? ಆಧುನಿಕತೆಯಲ್ಲಿ ಇಂತಹ ಒಳದಾರಿಗಳು ಸಿಗದಂತಾಗುತ್ತಿದೆಯೇ?

o---------------o------------------o------------------o-----------------o-----------------o

ಕಥಾನಾಯಕ ತನ್ನ ಆಧುನಿಕ ಆತ್ಮಾವಲೋಕನದ ಅಂತಿಮ ಹಂತಕ್ಕೆ ಬಂದಿದ್ದಾನೆ. ಈ ವಯಸ್ಸಿನಲ್ಲಿ ತಾನು (ಸ್ವಾತಂತ್ರ್ಯಾಕಾಂಕ್ಷಿಯಾದ ತನ್ನ ಅಪ್ಪನ ಬದುಕಿಗೂ, ತನಗೂ ಹೊಸ ಚೌಕಟ್ಟೊಂದನ್ನು ಸೃಷ್ಟಿಸಿಕೊಂಡ) ಜಾನಕಮ್ಮನನ್ನು ಹುಡುಕಿಕೊಂಡು ಹೋಗುವುದು ಬಾಲ್ಯದ ತತ್ಪರತೆಯನ್ನೂ, ತಾನು ಕಳೆದುಕೊಂಡಿರುವ ಅಪ್ಪನನ್ನೂ ಗಳಿಸುವ ಕ್ರಮವೇ? ಈ ಹಿಂದೆ ಅಪ್ಪನಿಂದ ಸಿಡಿದೆದ್ದು ಹೊಸ ಚೌಕಟ್ಟೊಂದನ್ನು ಸೃಷ್ಟಿಸಿಕೊಂಡಿದ್ದೇನೆ. ಈಗ ಬಂಧನವಾಗಿರುವ ಆ ಚೌಕಟ್ಟನ್ನು ಮೀರುವುದಕ್ಕೆ ಅಪ್ಪನ ಶ್ರಾದ್ಧದ ನಂತರ ಅಪ್ಪನಿಂದ ಸಿಕ್ಕ ಹೊಸಸ್ವಾತಂತ್ರ್ಯದಿಂದ ಪ್ರೇರೇಪಣೆ ಪ್ರಯತ್ನವೇ? ಆಗಿನಂತೆ ಈಗಲೂ ಜಾನಕಮ್ಮನೇ ನವಿಲುಗುಡ್ಡಕ್ಕೆ ದಾರಿಯೇ? ಚೌಕಟ್ಟಿನ ಜೊತೆಗಿನ ತಿಕ್ಕಾಟವೇ ಮತ್ತೆ ಅದಕ್ಕೆ ಪ್ರೇರಣೆ, ಆಗ ತಾಯಿ ಈಗ ಜಾನಕಮ್ಮ.ಆದರೆ ಈಗ ತನಗೆ ತತ್ಪರನಾಗುವುದು ಸಾಧ್ಯವೇ? 'ಸಿಗರೇಟ್ ಹಚ್ಚಿ ಕಾದು' ನೋಡಾಬೇಕಾದ ಆಧುನಿಕ ಬೌದ್ಧಿಕ ಅನಿವಾರ್ಯತೆಯಿರುವ ಸ್ಥಿತಿಗೆ ತತ್ಪರತೆ ಸಾಧ್ಯವೇ, ಹಿಂದೆ ಸಾಧ್ಯವಿದ್ದ ತತ್ಪರತೆಯನ್ನು ಕನಿಷ್ಠ access ಮಾಡುವುದಾದರೂ ಸಾಧ್ಯವೇ.

ಆದರೆ ಈಗಲೂ ಕನಿಷ್ಠ ಸಾಧ್ಯತೆಯೊಂದಿದೆ. ಮಗಳಿಗೆ ನವಿಲುಗರಿಯನ್ನಾದರೂ ಆಯ್ದು ಹೋಗಬಹುದಾಗಿದೆ. ಭರವಸೆಯೇನಿದ್ದರೂ ಭವಿಷ್ಯದ್ದು ಮಾತ್ರವೇ. ಈ ಜವಾಬ್ದಾರಿಯ ಅರಿವೂ ಇದೆ. ತನ್ನ ಮಗಳಿಗೆ ತತ್ಪರತೆ ಸಾಧ್ಯವಾಗುವ ಸಾಧ್ಯತೆಯಿದೆ ಎನ್ನುವಷ್ಟರಮಟ್ಟಿಗಿನ ಅರಿವು ಆಧುನಿಕ ಕಥಾನಾಯಕನಿಗಿದೆ. ಕಥಾನಾಯಕನಿಗೆ ತನ್ನಿಂದಿನ ಸ್ಥಿತಿಯಲ್ಲೂ ಪಾವಿತ್ರ್ಯದ ಅವಶ್ಯಕತೆ ಅನುಭವಕ್ಕೆ ಬರುತ್ತದೆ. ಅದನ್ನು ನಿರಾಕರಿಸುವಷ್ಟು ಜೀವನ ಕ್ಷುದ್ರವಾಗಿಲ್ಲ. ಇವತ್ತಿನ ಪ್ರತಿ ಅನುಭವವನ್ನೂ ದಿವ್ಯಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಆದರೆ ಆಧುನಿಕ ಬೌದ್ಧಿಕತೆ ಜೀವನಾನುಭವವನ್ನು ದಿವ್ಯಗೊಳಿಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಂತಹ ಅನುಭವವನ್ನು access ಮಾಡುವುದಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಇವತ್ತಿನ ನಿಜವೆಂದರೆ 'ಹೇಳಿಕೊಳ್ಳುವಾಗ ಅಲ್ಲ, ಹೇಳಿಕೊಳ್ಳಲಾರದಂತೆ ನೋಯುತ್ತ, ಕಾರಿನ ಬಾಗಿಲು ತೆಗೆದು ಒಳಗೆ ಕೂರುತ್ತಿದ್ದಾಗ ಅನ್ನಿಸಿತ್ತಲ್ಲ ಆ ಯಾತನೆ' ಇದು ನಿಜ. (ಕಥೆಗೆ ನನಗೆ ಪ್ರವೇಶ ಒದಗಿಸಿದ ವಾಕ್ಯವಿದು). ಹೀಗೆ ಆಧುನಿಕ ಬೌದ್ಧಿಕತೆ ಪಾರಂಪರಿಕವಾಗಿ, ವ್ಯಕ್ತಿತ್ವದ ಸಹಜತೆಯಲ್ಲಿ ನಮಗಾಗುವ ಅರಿವಿನ ಬಗ್ಗೆ ಕೂಡಾ, ನಿಜಕ್ಕೂ ಆಯಿತೋ ಇಲ್ಲವೋ ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತದೆ.

ಆಧುನಿಕತೆಯಿಂದ ನಾವು ಗಳಿಸಿರುವುದರ ಕುರಿತಾಗಿ ದಟ್ಟವಾದ ಅನುಮಾನ ಮತ್ತು ಪರಂಪರೆಯ ಕುರಿತು ಆಧುನಿಕರು ತಳೆದಿರುವ ನಿಲುವುಗಳ ಕುರಿತು ತಮ್ಮದೇ ಕ್ರಮದ ಮೂಲಕ ಉಂಟಾಗುವ ಅನುಮಾನವನ್ನೂ ಈ ಕಥೆ ಅನನ್ಯವೆನ್ನಿಸುವ ನಿರೂಪಣಾಕ್ರಮದಲ್ಲಿ, ಆತ್ಮಾವಲೋಕನದ ಧ್ವನಿಯಲ್ಲಿ ಬಿಂಬಿಸುತ್ತದೆ ಎನ್ನ್ನುವುದು ನನ್ನ ನಿಲುವು. ಸಾಮಾನ್ಯವಾಗಿ ಕಥೆಯೊಂದರಲ್ಲಿ ಆತ್ಮಾವಲೋಕನದ ಕ್ರಮ ಭೂತದ ಸೀಮಿತ ಗ್ರಹಿಕೆಯಾಗುವ ಅಪಾಯ ಯಾವತ್ತಿನದ್ದು. ಆದರೆ ಈ ಕಥೆ ಅದನ್ನೇ ತನ್ನ ವೈಶಿಷ್ಟ್ಯವನ್ನಾಗಿಸಿಕೊಂಡು, ಅಪಾಯವನ್ನು ಮೀರಿಬಿಟ್ಟಿದೆ. ಕಥಾಸಂದರ್ಭ ಮತ್ತು ಕಥೆಯ ವಸ್ತುವೈಶಾಲ್ಯತೆ ಅದನ್ನು ಸಾಧ್ಯವಾಗಿಸಿದೆ. ಆಧುನಿಕತೆಯ ದೊಡ್ಡಮಟ್ಟದ ಟೀಕೆಯಾಗಿ ನಾನು ಈ ಕಥೆಯನ್ನು ಕಂಡಿದ್ದೇನೆ.

ಈ ಕತೆಯನ್ನು ನಾನು ಓದಿರುವ ರೀತಿ ಇದು. ಡಾ ಅನಂತಮೂರ್ತಿಗಳೂ ಸೇರಿದಂತೆ ಓದುಗರು, ವಿಮರ್ಶಕರು ಈ ಕುರಿತು ಏನು ಹೇಳಬಹುದು ಎನ್ನುವುದರ ಕುರಿತು ಕುತೂಹಲಿಯಾಗಿದ್ದೇನೆ.

4 Comments:

At 3:07 AM, Blogger Yashaswini Hegde said...

shivu,

(ಈ ಹಂತದಲ್ಲಿ ನನಗೆ ಕಥೆ ಆಧುನಿಕತೆಯ ಬಹುದೊಡ್ಡ ಸಮಸ್ಯೆಯನ್ನು ಧ್ವನಿಸುತ್ತಿದೆ ಎಂದೆನ್ನಿಸಿತು. ಆಧುನಿಕತೆಯ ಕ್ರಮದಲ್ಲಿ ಮಹತ್ವದ್ದರ ಅರಿವಾಗುತ್ತದೆ. ಆದರೆ ಆ ಅರಿವು ಕ್ರಿಯಾಶೀಲವಾಗುವಷ್ಟು ಶಕ್ತವಾಗಿರುವುದಿಲ್ಲ. ಈ ಬರಿಯ ಬೌದ್ದಿಕತೆ ನಮ್ಮನ್ನು ಅತಂತ್ರವಾಗಿಸುತ್ತದೆಯೇ?)

idakkoMdu udaaharaNe koDuviraa?

ಕಥಾನಾಯಕ ತನ್ನ ಆಧುನಿಕ ಕ್ರಮದಲ್ಲೇ ಆತ್ಮಾವಲೋಕನದಲ್ಲಿ
aadhunika kramadalli aatmaavalOkana eMdarEnu?

aatmaavalOkana maaDikoLLalu bhinna bhinnavaada maargagaLiveyE? avugaLalli aadhunikayaavudu? anaadhunika yaavudu?

regards
yashaswini

 
At 7:48 AM, Blogger Saamaanya Jeevi said...

ಯಶಸ್ವಿನಿಯವರೇ,

ನಿಮ್ಮ ಮೊದಲ ಪ್ರಶ್ನೆಗೆ ಉತ್ತರ. ಇದಕ್ಕೆ ಎರಡು ರೀತಿ ಉತ್ತರಿಸಬೇಕಾಗುತ್ತದೆ. ಕಥೆಯಲ್ಲಿ ಏಕೆ ಈ ಧ್ವನಿ ಹೊಮ್ಮುತ್ತದೆ ಎನ್ನುವುದು ಒಂದು. ಆ ಕುರಿತು ನನ್ನಿಡೀ ಲೇಖನದಲ್ಲಿ ತೊಡಗಿರುವುದರಿಂದ ಇಷ್ಟಕ್ಕೇ ಬಿಡುತ್ತೇನೆ.

ಎರಡನೇಯದಾಗಿ, ಅದು ವಾಸ್ತವ ಹೌದೋ ಅಲ್ಲವೋ ಎನ್ನುವುದಕ್ಕೆ ಉದಾಹರಣೆ. ಅದನ್ನು ಈ ಹಿಂದೆ ರುಜುವಾತು ಲೇಖನಗಳಿಗೆ ಬರೆದ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದೇನೆ - ತಾಯಿ-ಮಗ ಪ್ರತಿಮೆಯಲ್ಲಿ.

ಅದಕ್ಕಿಂತ ಹೆಚ್ಚು ಉದಾಹರಣೆ ಕೊಡುವುದಕ್ಕೆ ಹೋದರೆ ವೈಯಕ್ತಿಕ ಜೀವನದಿಂದ ಉದಾಹರಿಸಬೇಕಾಗುತ್ತದೆ. ಆಗ ವಿವರಣೆ ತುಂಬಾ ದೀರ್ಘವಾಗಿಬಿಡುತ್ತದಲ್ಲ. ಅದನ್ನು ಹೇಗೆ ನಿಭಾಯಿಸುವುದು.

ಇಂತಿ
ಶಿವು

 
At 7:52 AM, Blogger Saamaanya Jeevi said...

ಯಶಸ್ವಿನಿಯವರೇ,

ನಿಮ್ಮ ಎರಡನೇಯ ಪ್ರಶ್ನೆಗೆ ಉತ್ತರ.

ಈ ನಿಮ್ಮ ಪ್ರಶ್ನೆ ಹೆಚ್ಚು ಮೂಲಭೂತವಾದ್ದು ಮತ್ತು ನನ್ನ ಪದಪ್ರಯೋಗದ ತಪ್ಪನ್ನು ತೋರಿಸುವಂಥದ್ದು.

ನನಗೆ ಇಷ್ಟು ಹೇಳಬೇಕಾಗಿತ್ತು - ಆತ್ಮಾವಲೋಕನವನ್ನು ಆಧುನಿಕತೆ ಪರೋಕ್ಷ್ಯವಾಗಿ ನಿಯಂತ್ರಿಸುತ್ತದೆ - ಎಂದು. ಆದರೆ 'ಆಧುನಿಕತೆಯ ಕ್ರಮದಲ್ಲೇ ಆತ್ಮಾವಲೋಕನ' ಎನ್ನುವುದು ಅದಕ್ಕಿಂತ ಹೆಚ್ಚು ಮೂಲಭೂತವಾದ್ದು ಎಂದು ಒಪ್ಪುತ್ತೇನೆ. ನಿಜಕ್ಕೂ ಆತ್ಮಾವಲೋಕನದ ಕ್ರಮದಲ್ಲೇ ಆಧುನಿಕ ಕ್ರಮ ಇತ್ಯಾದಿ ಇರುತ್ತದೆಯೋ ಇಲ್ಲವೋ ನನ್ನ ತಿಳಿವಿಗೆ ಮೀರಿದ್ದು. ಪ್ರಾಯಶಃ ಇರಲಾರದು.

ಸಮಸ್ಯೆಯನ್ನು ಮುನ್ನಲೆಗೆ ತಂದಿದ್ದಕ್ಕೆ ಧನ್ಯವಾದಗಳು.

ಇಂತಿ
ಶಿವು

 
At 9:12 PM, Blogger ವಿವೇಕ್ ಶಂಕರ್ said...

namskara jeevasamshaya,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

 

Post a Comment

<< Home